Sunday, May 5, 2013

ನಗರ್ಲೆಯ ಶಾಸನ ಅಧ್ಯಯನ - ಡಾ. ಎಚ್.ಚಂದ್ರಶೇಖರ್‌


ನಗರ್ಲೆಯ ಶಾಸನಗಳು ಮತ್ತು ದೇಗುಲಗಳು
ಒಂದು ಅಧ್ಯಯನ
ಡಾ. ಹೆಚ್. ಚಂದ್ರಶೇಖರ
ಪೀಠಿಕೆ
ನಗರ್ಲೆಯು, ನಂಜನಗೂಡು (ಮೈಸೂರು ಜಿಲ್ಲೆ) ತಾಲ್ಲೂಕಿನಲ್ಲಿರುವ ಒಂದು ಹಳ್ಳಿ. ಇದು ನಂಜನಗೂಡು-ತಿ. ನರಸೀಪುರ ರಸ್ತೆಯ ಬಳಿ ೧೦ ಕಿ.ಮೀ. ದೂರದಲ್ಲಿದೆ. ಈ ಹಳ್ಳಿಯ ಜನಸಂಖ್ಯೆ ಸುಮಾರು ೩೫೦೦ ಎಂದು ಅಂದಾಜಿಸಲಾಗಿದೆ. ಈ ಹಳ್ಳಿ ಕ್ರಿ.ಶ.೧೦ನೆಯ ಶತಮಾನದಲ್ಲಿ ಒಂದು ಸುಪ್ರಸಿದ್ಧ ವಿದ್ಯಾಕೇಂದ್ರವಾಗಿತ್ತೆಂದು ಶಾಸನಗಳಿಂದ ವ್ಯಕ್ತವಾಗುತ್ತದೆ. ಬಹುಶಃ ಆಗ ಈ ಹಳ್ಳಿ ಒಂದು ದೊಡ್ಡ ಹಳ್ಳಿಯಾಗಿರಬಹುದು. ಹಯವದನರಾಯರ ಗೆಜೆಟಿಯರ್ ಮತ್ತು ಸೂರ್ಯನಾಥ ಕಾಮತರು ಸಂಪಾದಿಸಿರುವ ಮೈಸೂರು ಜಿಲ್ಲೆಯ ಗೆಜೆಟಿಯರ್‌ನಲ್ಲಿ ಕೊಂಚ ವಿವರಣೆಗಳಿವೆ. ಈ ಹಳ್ಳಿಗೆ ಸಂಬಂಧಿಸಿದ ನಾಲ್ಕು ಶಾಸನಗಳು ಎಪಿಗ್ರಾಫಿಯ ಕರ್ನಾಟಿಕ (ಇ.ಸಿ.) (ಸಂ.೩) ದಲ್ಲಿ ಪ್ರಕಟವಾಗಿವೆ. ಈ ಅಧ್ಯಯನ ಮತ್ತು ಸಂಶೋಧನೆಗಾಗಿ ಈ ಆಕರಗಳನ್ನು ಬಳಸಿಕೊಂಡು ಮೂರು ಸಲ ಕ್ಷೇತ್ರಕಾರ್ಯಗಳನ್ನು ಕೈಗೊಂಡಿದ್ದೇನೆ. ೨೦೦೭ರ ಸೆಪ್ಟೆಂಬರ್ ೧೦ರಂದು ಪ್ರಾಥಮಿಕ ಅಧ್ಯಯನವನ್ನು ಇತಿಹಾಸ ಅಕಾಡೆಮಿಯ ಕೆಲ ಸದಸ್ಯರೊಂದಿಗೆ ಅಧ್ಯಯನ ಮಾಡಿದ್ದೇನೆ. ನಂತರ ೨೫-೩-೨೦೧೧ ಹಾಗೂ ೪-೪-೨೦೧೨ರಂದು ಸ್ವತಂತ್ರವಾಗಿ ಕ್ಷೇತ್ರಕಾರ್ಯ ಮಾಡಿದ್ದೇನೆ. ಮೂರು ಸಲವೂ ಹಲವಾರು ಚಿತ್ರಗಳನ್ನು ತೆಗೆದಿದ್ದೇನೆ. ಅವುಗಳಲ್ಲಿ ಆಯ್ದ ಸೂಕ್ತವಾದ ಫೋಟೋಗಳನ್ನು ಈ ಲೇಖನದಲ್ಲಿ ಅಳವಡಿಸಿದ್ದೇನೆ.
ಶಾಸನಗಳ ಅಧ್ಯಯನ ಮತ್ತು ಫಲಿತಾಂಶ
ಆಗಲೇ ಹೇಳಿದಂತೆ ಈ ಊರಿನಲ್ಲಿರುವ ಮಾಳಿಗೇಶ್ವರಿ ಗುಡಿ, ಸೋಮೇಶ್ವರಗುಡಿ (ಇದನ್ನು ಈಗ ನಾಶ ಮಾಡಲಾಗಿದೆ) ಮತ್ತು ಇತ್ತೀಚೆಗೆ ಕಿತ್ತು ಹೊರಗೆಡೆ ಹಾಕಲಾಗಿರುವ ದೀಪಸ್ತಂಭದ ಅಡಿಯಲ್ಲಿ ಸಿಕ್ಕಿರುವ ಒಟ್ಟು ನಾಲ್ಕು ಶಾಸನಗಳು ಮೇಲ್ಕಾಣಿಸಿದ ಇ.ಸಿ. ಸಂಪುಟದಲ್ಲಿ ಪ್ರಕಟವಾಗಿವೆ. ಅವುಗಳ ಸಾರಾಂಶವನ್ನು ಕೆಳಗಿನಂತೆ ಚರ್ಚಿಸಲಾಗಿದೆ.
ಶಾಸನ ಸಂಖ್ಯೆ ೨೩೯: ಈಗ ನೆಲಸಮವಾಗಿರುವ ಸೋಮೇಶ್ವರ ದೇವಸ್ಥಾನದ (ನನ್ನಯನ ದೇಗುಲ) ಬಾಗಿಲಿನ ದಕ್ಷಿಣ ಪಾರ್ಶ್ವದಲ್ಲಿತ್ತು ಈ ಶಾಸನ. ಈ ಶಾಸನದ ಪ್ರಕಾರ ವಿದ್ಯಾಧರನು ಗಂಗರಸ ಪೆರ್ಮಾಡಿಯ ಆಜ್ಞಾನುಸಾರ ಅಲ್ಲಿ ನೆಲೆಸಿದ್ದ ವಿದ್ಯಾರ್ಥಿಗಳಿಗೂ ಸಂನ್ಯಾಸಿಗಳಿಗೂ ಅನ್ನಸಂತರ್ಪಣೆಯ ವ್ಯವಸ್ಥೆಗಾಗಿ ಭೂದಾನ ದತ್ತಿಗಳನ್ನು ನೀಡಿದ್ದ. (ವಿದ್ಯಾಧರನು ಪೆರ್ಮಾಡಿಯ ಒಬ್ಬ ಅಧಿಕಾರಿಯಾಗಿದ್ದನು) ಕ್ರಿ.ಶ.೧೦ನೆಯ ಶತಮಾನದಲ್ಲಿ ಈ ಗ್ರಾಮ ಒಂದು ವಿದ್ಯಾಕೇಂದ್ರವಾಗಿತ್ತೆಂದು ತಿಳಿದುಬರುತ್ತದೆ.
ಶಾಸನಸಂಖ್ಯೆ ೨೪೦: ಈ ಶಾಸನವು ತ್ರುಟಿತಗೊಂಡಿದೆ. ಈ ಶಾಸನದಲ್ಲಿ ವಿದ್ಯಾಧರ ಮತ್ತು ಹನ್ನೆರಡು ಗೌಂಡರುಗಳ ಉಲ್ಲೇಖವಿದೆ. ಗೌಂಡರುಗಳ ಹೆಸರುಗಳನ್ನು ನಮೂದಿಸಿಲ್ಲ. ಅಂದರೆ ಗಂಗರಸನ ಅಧಿಕಾರಿ ವಿದ್ಯಾಧರನು ಈ ಸ್ಥಳದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದನೆಂಬುದು ಸ್ಪಷ್ಟವಾಗುತ್ತದೆ.
ಶಾಸನಸಂಖ್ಯೆ ೨೪೧: ಮಾರೀಚಾವಡಿಯ ಪಶ್ಚಿಮ ಗೋಡೆಗೆ ಕಟ್ಟಿರುವ ಕಲ್ಲಿನಲ್ಲಿ, ಕ್ರಿ.ಶ.೧೦೨೭-೨೮ರಲ್ಲಿ ಮಾಳಿಗೇಶ್ವರಿ ಗುಡಿಮಲ್ಲಿ (?) ಪೂಜೆ ಮಾಡುವರಿಗಾಗಿ (ಆಗ ಬಹುಶಃ ಬ್ರಾಹ್ಮಣರು) ಮತ್ತು ಸಿಂಘ ಪರಿಷೆಯ ಮಠಕ್ಕಾಗಿ ಪ್ರತಿ ವರ್ಷ ೧೦ (ಹತ್ತು) ಕೊಳಗ ಭತ್ತವನ್ನು ದಾನವಾಗಿ ನೀಡಲಾಗಿತ್ತು. ಈಗ ಈ ಗುಡಿಯ ಅರ್ಚಕರು ಲಿಂಗಾಯತ ಧರ್ಮಕ್ಕೆ ಸೇರಿದ ಶ್ರೀ ರಾಜಪ್ಪ ತಮ್ಮಡಿ ಶಾಸನದಲ್ಲಿ ಉಲ್ಲೇಖಿಸಲಾಗಿರುವ ಸಿಂಘ ಪರಿಷೆ ಮಠ ಈಗ ಇಲ್ಲ; ಬೇರೆ ಯಾವ ಮಠವೂ ಇಲ್ಲ.
ಶಾಸನ ಸಂಖ್ಯೆ ೨೪೨: ನನ್ನಯ್ಯಸ್ವಾಮಿ (ನಾರಾಯಣ ಸ್ವಾಮಿ ದೇವಸ್ಥಾನ)ಯ ಎದುರಿಗಿರುವ  ೩.೧ ಮೀ. ಎತ್ತರವಿರುವ ದೀಪಸ್ತಂಭದ ಅಡಿಯಲ್ಲಿ ಈ ಶಾಸನವನ್ನು ಕೆತ್ತಲಾಗಿದೆ. ಈ ಶಾಸನದ ಪ್ರಕಾರ, ಪೆರ್ಮಾಡಿ ಮನೆವಗತಿ ನೀಲಬ್ಬೆಯ ಮಗನಾದ ರಾಚಮ್ಮನು ಧರ್ಮಕ್ಕಾಗಿ ಈ ಕಂಬವನ್ನು ಕ್ರಿ.ಶ.೯೭೦-೭೧ರಲ್ಲಿ ನಿಲ್ಲಿಸಿದನೆಂದು ತಿಳಿದುಬರುತ್ತದೆ.
ಫಲಿತಾಂಶ: ಈ ನಾಲ್ಕು ಶಾಸನಗಳನ್ನು ಒಟ್ಟಾಗಿ ಗ್ರಹಿಸಿದರೆ, ನಗರ್ಲೆಯು (ಕ್ರಿ.ಶ.೧೦ರ ಶಾಸನದಲ್ಲಿ ನಗರ್ಲಾ) ಒಂದು ಸುಪ್ರಸಿದ್ಧ ವಿದ್ಯಾಕೇಂದ್ರವಾಗಿತ್ತು. ಸಿಂಘಿ ಪರಿಷೆ ಮಠ ಮತ್ತು ಪೂಜಾ ಕಾರ್ಯಗಳಿಗಾಗಿ ಪೆರ್ಮಾಡಿ ಅರಸರು ದವಸ ಧಾನ್ಯಗಳನ್ನು ದತ್ತಿಯಾಗಿ ನೀಡುತ್ತಿದ್ದರು. ಗಂಗರ ಕಾಲದಲ್ಲಿ ವೈದಿಕ ಧರ್ಮದ ಕೇಂದ್ರವೂ ಆಗಿತ್ತು. ಬಹುಶಃ ಕ್ರಿ.ಶ.೧೨-೧೩ರಲ್ಲಿ ಲಿಂಗಾಯತ ಧರ್ಮದ ಪ್ರಭಾವ ಬೆಳೆದು ಲಿಂಗಾಯತ ಧರ್ಮದ ತಮ್ಮಡಿ ಶಿವಾರ್ಚಕರಾದರು. ಅವರ ಜೊತೆಯಲ್ಲಿ ಇತರರು (ಶೂದ್ರರು) ಲಿಂಗಾಯತ ಧರ್ಮವನ್ನು ಸ್ವೀಕರಿಸಿದರು. ಈಗ ಈ ಹಳ್ಳಿಯಲ್ಲಿ ಲಿಂಗಾಯತರು, ಬೇಡನಾಯಕರು ಮತ್ತೆ ಕೆಲ ಮುಸ್ಲಿಂ ಕುಟುಂಬಗಳು ವಾಸಿಸುತ್ತವೆ. ಕ್ಷೇತಕಾರ್ಯದ ಸಂದರ್ಭದಲ್ಲಿ ಎಲ್ಲರೂ ಸಾಮರಸ್ಯವಾಗಿ ಜೀವನ ಸಾಗಿಸುತ್ತಾರೆಂದು ತಿಳಿದುಬಂತು. ಇದು ಸಂತಸದ ಸಂಗತಿ.
ದೇಗುಲಗಳು ಮತ್ತು ಪುರಾತತ್ತ್ವ ಅವಶೇಷಗಳು
ಈ ಹಳ್ಳಿಯಲ್ಲಿ ಶಾಸನಗಳ ಪ್ರಕಾರ ನನ್ನಯ್ಯನ ಗುಡಿ ಮತ್ತು ಮಾಳಿಗೇಶ್ವರಿ ಗುಡಿಗಳು ಇರಬೇಕು. ಆದರೆ ಇವುಗಳಲ್ಲದೆ, ಅರ್ಧ ಹಾಳಾಗಿರುವ ಪಾರ್ಶ್ವನಾಥ ಬಸ್ತಿ, ಊರು ಮಾರೆಮ್ಮನಗುಡಿ, ವಿಗ್ರಹ ಇರದ ಸೋಮೇಶ್ವರ ಗುಡಿ, ಇಲ್ಲಿವೆ. ಒಂದು ಲಿಂಗ ಇತ್ತು, (ಇದೇ ನನ್ನಯನಗುಡಿ, ಈಗ ಇದು ನೆಲಸಮವಾಗಿದೆ), ರಾಚಮ್ಮನ ಸ್ಥಳಾಂತರ ಗೊಂಡ ದೀಪಸ್ತಂಭ, ಒಟ್ಟು ಎಂಟು ವೀರಗಲ್ಲುಗಳು (೬+೨), ದಡಲಿಂಗಪ್ಪನ ಗುಡಿ, ಈರಣ್ಣನಗುಡಿ, ವಧಾಸ್ತಂಭ (ಕಲ್ಲು), ಬಸವಣ್ಣನಗುಡಿ (ಅದರೊಳಗೆ ಸ್ಥಳಾಂತರ ಗೊಂಡಿರುವ ಲಿಂಗಗಳನ್ನು, ನಾರಾಯಣಶಿಲ್ಪವನ್ನು ಸ್ಥಾಪಿಸಲಾಗಿದೆ) ಇವೆ. ಇವುಗಳನ್ನು ಒಂದೊಂದಾಗಿ ವಿವರಿಸುತ್ತೇನೆ.
ಪಾರ್ಶ್ವನಾಥ ಬಸದಿ: ಈ ಹಳ್ಳಿಯನ್ನು, ರಸ್ತೆಯಿಂದ ಬಲಕ್ಕೆ ಇಳಿದರೆ, ಪ್ರವೇಶದಲ್ಲಿ ಕೇವಲ ಗರ್ಭಗುಡಿ ಮಾತ್ರ ಉಳಿದಿರುವ ಪಾರ್ಶ್ವನಾಥ ಬಸ್ತಿ ಅಲ್ಲಿದೆ. ಸುಂದರ, ಹೊಯ್ಸಳ ಶೈಲಿಯ ಬಳಪದಕಲ್ಲಿನಲ್ಲಿ ಕಡೆಯಲಾದ ಪಾರ್ಶ್ವನಾಥ ಶಿಲ್ಪ ಅನಾಥವಾಗಿ ನಿಂತಿದೆ. ಪೂಜೆ ಇಲ್ಲ. ನಾನು ೨೦೦೭ರಲ್ಲಿ ಕ್ಷೇತ್ರಕಾರ್ಯಕ್ಕಾಗಿ ಬಂದಾಗ ಪಾರ್ಶ್ವನಾಥ ಶಿಲ್ಪದ ಬದಿಯಲ್ಲಿಯೇ ಸ್ಥಳಾಂತರಗೊಂಡ ಲಿಂಗವನ್ನು ನಿಲ್ಲಿಸಲಾಗಿತ್ತು. ಈಗ ಉಳಿದಿರುವ ಪಾರ್ಶ್ವನಾಥ ಬಸ್ತಿಯ ಛತ್ತಿನ ಮೇಲೆ ಹುಲ್ಲನ್ನು ಸಂಗ್ರಹಿಸಿಡಲಾಗುತ್ತದೆ ಬಸ್ತಿಯ ಉಳಿದ ಭಾಗ ನಾಮಾವಶೇಷವಾಗಿದೆ.
ಊರು ಮಾರೆಮ್ಮನ ಗುಡಿ: ಪಾರ್ಶ್ವನಾಥ ಬಸ್ತಿಯನ್ನು ದಾಟಿ ಮುಂದಕ್ಕೆ ಹೋದರೆ, ಕೊಂಚ ದೂರದಲ್ಲಿ ಬಲಗಡೆ ಊರ ಮಾರೆಮ್ಮನ ಗುಡಿ ಇದೆ. ಇದು ತೀರ ಇತ್ತೀಚಿನ ರಚನೆ; ಬಹುಶಃ ೫೦-೬೦ ವರ್ಷಗಳ ಹಿಂದೆ ಕಟ್ಟಿರಬಹುದು. ಸುಸ್ಥಿತಿಯಲ್ಲಿದೆ. ಚೌಕಾಕಾರದ ರಚನೆ. ಮರದ ಕಂಬಗಳಿವೆ. ಚಾವಣಿಯನ್ನು ಮಂಗಳೂರು ಹೆಂಚಿನಿಂದ ರಚಿಸಲಾಗಿದೆ. ಗರ್ಭಗುಡಿಯಲ್ಲಿ, ಅಚ್ಚರಿಯ ಸಂಗತಿ ಎಂದರೆ ಮಾರೆಮ್ಮನ ವಿಗ್ರಹವಿಲ್ಲ. ಬದಲಾಗಿ ಪೀಠಗಳಿಲ್ಲದ ಎರಡು ಲಿಂಗಗಳಿವೆ. ಒಂದು ಲಿಂಗದ ಎತ್ತರ ೨೨ ಸೆ.ಮೀ. ತಳದ ವ್ಯಾಸ ೮ ಸೆ.ಮೀ. ಇನ್ನೊಂದು ಲಿಂಗದ ಎತ್ತರ ೩೦ ಸೆಂ.ಮೀ. ತಳದ ವ್ಯಾಸ ೧೦ ಸೆ.ಮೀ. ಎಣ್ಣೆ ಬಳಿಯಲಾಗಿದೆ. ಆದ್ದರಿಂದ ಕಪ್ಪಗಿವೆ. ಕುಸುರಿ ಕೆಲಸವಿಲ್ಲದ ತೀರ ಸಾಧಾರಣ ಕಂಬದಂಥ ರಚನೆಗಳಿವು.
ಮಾಳಿಗೇಶ್ವರಿ ಗುಡಿ: ಈ ಹಳ್ಳಿಯ ಭಕ್ತಿಯ ಕೇಂದ್ರ ಈ ಗುಡಿ. ನಾನು ಮೂರನೇ ಸಲ ಹೋದಾಗ ಮೈಸೂರು ಮತ್ತು ಬೆಂಗಳೂರಿನಿಂದ ೫-೬ ಜನ ಭಕ್ತರು ಬಂದಿದ್ದರು. ಕೆಲವು ವರ್ಷಗಳ ಹಿಂದೆ ಇಲ್ಲಿಂದ ವಲಸೆ ಹೋದ ಈ ಜನರು ಆಗಾಗ ಈ ದೇವರ ಪೂಜೆಗಾಗಿ ಬರುತ್ತಾರೆಂದು ತಿಳಿದುಬಂತು. ಇದು ಪೂರ್ವಾಭಿಮುಖಿಯಾಗಿರುವ ಗುಡಿ. ಚೌಕಾಕಾರದ ರಚನೆ. ಪಶ್ಚಿಮ-ಪೂರ್ವ ದಿಕ್ಕಿನಲ್ಲಿ ೧೩ ಮೀ. ಉದ್ದ ಹಾಗೂ ದಕ್ಷಿಣೋತ್ತರವಾಗಿ ೯ ಮೀ. ಅಗಲವಾಗಿದೆ. ಒಟ್ಟು ೨೦ ಕಲ್ಲಿನ ಕಂಬಗಳಿವೆ. ಕಂಬಗಳು ಗಂಗರ ಶೈಲಿಯಲ್ಲಿವೆ. ಯಾವ ಬಗೆಯ ಕುಸುರಿ ಕೆಲಸವಿಲ್ಲ. ಮುಖಮಂಟಪದ ಹೊರ ಕಂಬಗಳಿಗೆ ಮಾತ್ರ ಸುಣ್ಣ ಬಳಿಯಲಾಗಿದೆ. ಒಳಗಿರುವ ಎಲ್ಲಾ ಕಂಬಗಳಿಗೆ ವಾರ್ನಿಷ್ ಕೆಂಪು ಬಣ್ಣ ಬಳಿಯಲಾಗಿದೆ.
ಮುಖಮಂಟಪದ ಮೇಲೆ ಚಿಕ್ಕ ಮೂರು ಗೋಪುರ ಗಳನ್ನು ಕಟ್ಟಿ ಒಳಗೆ ಸಿಮೆಂಟಿನ ಸ್ತ್ರೀಶಕ್ತಿ ದೇವತೆಗಳ ಸ್ಟುಕೊ ಶಿಲ್ಪಗಳನ್ನು ನೆಡಲಾಗಿದೆ. ಈ ಗೋಪುರಗಳು ಮತ್ತು ಶಕ್ತಿ ಶಿಲ್ಪಗಳು ತೀರ ಇತ್ತೀಚಿನ ರಚನೆಗಳೆಂಬುದು ನೋಡಿದ ತಕ್ಷಣ ಹೊಳೆಯುತ್ತದೆ.
ಗರ್ಭಗುಡಿಯಲ್ಲಿ ಮಧ್ಯದಲ್ಲಿ ನಗರ್ಲೆಯ ಮಾಳಿಗೇಶ್ವರಿ ಸ್ಟುಕೋ ಶಿಲ್ಪ ಇದೆ (ಎತ್ತರ ೧.೬ ಮೀ.), ಉಳಿದ ಆರು ಮಾತೃಕೆಯರ ಶಿಲ್ಪಗಳ ಹೆಸರುಗಳು: ಮೂಗೂರು ತಿಬ್ಬಾದೇವಿ, ಸೋಸಲೆಯ ಹೊನ್ನಾದೇವಿ, ಹದ್ನಾರು ಚೌಡೇಶ್ವರಿ, ಕಳಲೆಯ ಕಲ್ಲಾದೇವಿ, ಅಂಚೆಯ ನಂಚಿಕಾದೇವಿ ಮತ್ತು ಅರಕೋಟೆಯ ಕೋಟಾದೇವಿ. ಆದರೆ ಈ ಸ್ಟುಕೋ ಶಿಲ್ಪಗಳನ್ನು ನೋಡಿದರೆ ಹಳೆಯ ಕಾಲದವುಗಳು ಎನಿಸುವುದಿಲ್ಲ. ಬಹುಶಃ ಕಾಲಕಾಲಕ್ಕೆ ಹೊಸ ಹೊಸ ಮಾತೃಕೆಯರ ಶಿಲ್ಪಗಳನ್ನು ನಿಲ್ಲಿಸಿ ಹಳ್ಳಿಗರು ತಮಗೆ ತೋಚಿದ ಹೆಸರುಗಳಿಂದ ಕರೆದಿದ್ದಾರೆ. ಹೆಸರುಗಳು ಪ್ರಾಸಬದ್ಧವಾಗಿದೆ. ಸಪ್ತಮಾತೃಕೆಯರ ಹೆಸರುಗಳು ಮತ್ತು ಮಾಳಿಗೇಶ್ವರಿ ಗುಡಿಯು ಶಾಸನಗಳಲ್ಲಿ ಉಲ್ಲೇಖಗೊಂಡಿಲ್ಲ ಎಂಬುದನ್ನು ಗಮನಿಸಬೇಕು.
ಸೋಮೇಶ್ವರ ಗುಡಿ: ಈ ಹಳ್ಳಿಯ ಜನರು ಮಾಳಿಗೇಶ್ವರಿ ಗುಡಿಯ ಬಲಗಡೆ ಇರುವ ಹಾಳು ಬಿದ್ದಿರುವ ಹಾಗೂ ವಿಗ್ರಹವಿಲ್ಲದ ಈ ರಚನೆಯನ್ನು ಈಶ್ವರಗುಡಿ ಅಥವಾ ಸೋಮೇಶ್ವರ ಗುಡಿ ಎಂದು ಕರೆಯುತ್ತಾರೆ. ಇದನ್ನು ಶಾಸನೋಕ್ತ ನನ್ನಯ ಎಂಬ ವ್ಯಕ್ತಿಯು (ಶಾಸನ ಸಂ. ೨೩೯) ಬಹುಶಃ ೯-೧೦ನೇ ಶತಮಾನದಲ್ಲಿ ಕಟ್ಟಿಸಿದನೆಂದು ಈ ಶಾಸನದ ಆಧಾರದಿಂದ ತರ್ಕಿಸಬಹುದಾಗಿದೆ. ಈ ದೇವರಿಲ್ಲದ ಗುಡಿಯನ್ನು ಕ್ರಿ.ಶ.೨೦೦೭ರಲ್ಲಿ ಮತ್ತು ೨೦೧೧ರಲ್ಲಿ ನೋಡಿದಂತೆ ಬಣ್ಣಿಸುತ್ತೇನೆ. ಇಟ್ಟಿಗೆಯ ಗೋಡೆಗಳನ್ನು ಗಚ್ಚಿನ ಗಿಲಾವು ಮಾಡಿ ಕಟ್ಟಲಾಗಿದೆ. ಮುಖಮಂಟಪ ಮತ್ತು ರಂಗಮಂಟಪದ ಗೋಡೆಯ ಕೋನಗಳಲ್ಲಿ ನಂದಿ ಶಿಲ್ಪಗಳನ್ನು ಕೂಡಿಸಲಾಗಿದೆ. ಆದ್ದರಿಂದ ನಿಶ್ಚಿತವಾಗಿಯೂ ಈಶ್ವರ ಗುಡಿ. ಆದರೆ ಕಾಮತರು (೧೯೮) ಊಹಿಸುವ ಹಾಗೆ ಇದು ನಾರಾಯಣಸ್ವಾಮಿ ಗುಡಿ ಅಲ್ಲ. ಅದು ಈಶ್ವರ ದೇವಸ್ಥಾನವಾಗಿ ಮಾರ್ಪಾಟು ಆಗಿಲ್ಲ. ಗ್ರ್ಯಾನೈಟ್ ಶಿಲೆಯಲ್ಲಿ ಕಡೆಯಲಾದ ೨೦ ಕಂಬಗಳಿವೆ ಹಾಗೂ ಸೂಕ್ತ ಬೋದಿಗೆಗಳಿವೆ. ಬಾಗಿಲು ಚೌಕಟ್ಟು ಕೂಡ ಗ್ರ್ಯಾನೈಟ್ ಶಿಲೆಯಿಂದ ನಿರ್ಮಿಸಲಾಗಿದೆ. ಆದರೆ, ೨೦೦೨ರಲ್ಲಿ ನಾನು ನೋಡಿದ ದೃಶ್ಯ (ಆಘಾತಕಾರಿಯಾಗಿತ್ತು. ಮಾಳಿಗೇಶ್ವರಿ ಗುಡಿಯ ಬಲಗಡೆ ಇರುವ ದೇವರಿಲ್ಲದ ಸೋಮೇಶ್ವರ ಗುಡಿಯನ್ನು (ನಿಜವಾಗಿಯೂ ನನ್ನಯ್ಯನ ಗುಡಿ) ಈ ಹಳ್ಳಿಯ ಜನರು ನೆಲಸಮಗೊಳಿಸಿದ್ದಾರೆ. ಎಲ್ಲಾ ತೊಲೆಗಳನ್ನು ಕಂಬಗಳನ್ನು ಇಟ್ಟಿಗೆಯ ಚೂರುಗಳನ್ನು ಸುಮಾರು ೨-೩ ಕಿ.ಮೀ. ದೂರದಲ್ಲಿರುವ ಕಪಿಲಾನದಿಯ ದಡದಲ್ಲಿ ಹಾಕಿದ್ದಾರೆ. ಕಾರಣ ಕೇಳಿದರೆ ಇದು ದೇವರಿಲ್ಲದ ಗುಡಿ, ಆದ್ದರಿಂದ ನೆಲಸಮ ಮಾಡಿರುವುದಾಗಿ ಸ್ಥಳೀಯ ಜನರು ಹೇಳಿದರು. ಇದೊಂದು ಬೇಜವಾಬ್ದಾರಿಯ ಕೆಲಸ.
ಊರ್ಧ್ವಲಿಂಗ: ೨೦೦೭ರಲ್ಲಿ ಈ ಸ್ಥಳಕ್ಕೆ ಭೇಟಿ ಕೊಟ್ಟಾಗ ಪಾರ್ಶ್ವನಾಥ ಶಿಲ್ಪದ ಬದಿಯಲ್ಲಿದ್ದ ಶಾಸ್ತ್ರೋಕ್ತವಾಗಿ ಕಡೆಯಲಾದ ೩೬ ಇಂಚು ಎತ್ತರದ, ಅಡಿಯಲ್ಲಿ ೩೫ ಸುತ್ತಳತೆಯ ಬಳಪದ ಕಲ್ಲಿನ ಊರ್ಧ್ವಲಿಂಗ ಶಿಲ್ಪ ಇತ್ತು.  ಇದು ಪುರುಷಲಿಂಗಕ್ಕೆ ತೀರ ಸಮೀಪದ ಹೋಲಿಕೆ ಇತ್ತು. ಈ ಲಿಂಗವನ್ನು ನೋಡಿದಾಗ ಸುಪ್ರಸಿದ್ಧ ಗುಡಿಮಲ್ಲಂ ಲಿಂಗ ನೆನಪಾಯಿತು. ೨೦೧೧ರಲ್ಲಿ ಈ ಲಿಂಗವನ್ನು ಸುರಕ್ಷಿತವಾಗಿ ಸೋಮೇಶ್ವರಗುಡಿಯ ಮುಖಮಂಟಪದಲ್ಲಿ ಯಾರೋ ತಂದಿಟ್ಟಿದ್ದರು. ಬಹುಶಃ ಇದನ್ನು ಇಲ್ಲಿ ಪ್ರತಿಷ್ಠಾಪಿಸುವ ಉದ್ದೇಶವಿತ್ತೆಂಬುದಕ್ಕೆ ಹೊರಗೆ ಬಿದ್ದಿರುವ ಪೀಠವೇ ಸಾಕ್ಷಿ.
ದೀಪಸ್ತಂಭ: ಶಾಸನ ೨೪೨ರಲ್ಲಿ ಹೇಳಿದಂತೆ ರಾಚಮ್ಮನ ಕಂಬ ನನ್ನಯ್ಯನ ಗುಡಿಯ ಮುಂದೆ ನಿಲ್ಲಿಸಲಾಗಿತ್ತು. ನಾನು ಮೊದಲೆರಡು ಸಲ ಭೇಟಿ ಕೊಟ್ಟಾಗ ಈ ಸ್ತಂಭ ಸುರಕ್ಷಿತವಾಗಿತ್ತು. ಈ ಸ್ತಂಭವನ್ನು ಡಾಲೋರೈಟ್ ಶಿಲೆಯಲ್ಲಿ ಕಟೆಯಲಾಗಿದೆ. ಈ ಶಿಲೆಯನ್ನು ಬಹುಶಃ ನಂಜನಗೂಡಿನ ಆಸುಪಾಸಿನ ಪ್ರದೇಶದಿಂದ ತಂದು ಇಲ್ಲಿ ಕಡೆಯಲಾಗಿದೆ. ಈ ಸ್ತಂಭದ ಎತ್ತರ ೩.೧ ಮೀ. ಆಮ್ಲಕದ ಎತ್ತರ ಸುಮಾರು ೦.೫೦ ಮೀ. ೨೦೧೨ರಲ್ಲಿ ಕ್ಷೇತ್ರಕಾರ್ಯಕ್ಕೆ ಹೋದಾಗ ಈ ಸ್ತಂಭವನ್ನು ಕಿತ್ತು ಸೋಮೇಶ್ವರ ಗುಡಿಯ ಕಂಪೌಂಡಿನಿಂದ ಒಂದು ಮರದಲ್ಲಿ ಹಾಕಲಾಗಿದೆ.
ದಡದ ಲಿಂಗಪ್ಪ ಮತ್ತು ಈರಣ್ಣನ ಗುಡಿಗಳು
ಈ ಎರಡು ಗುಡಿಗಳು ಮಾಳಿಗೇಶ್ವರಿ ಗುಡಿಯಿಂದ ಪಶ್ಚಿಮಕ್ಕೆ ಸುಮಾರು ಒಂದು ಕಿ.ಮೀ. ದೂರದಲ್ಲಿವೆ. ಸ್ಥಳೀಯರ ನಂಬಿಕೆಯ ಪ್ರಕಾರ ಈರಣ್ಣ ಮತ್ತು ದಡದ ಲಿಂಗಪ್ಪ ಮಾಳಿಗೇಶ್ವರಿಯ ತಮ್ಮಂದಿರು. ಈ ಗುಡಿಗಳು ತೀರ ಇತ್ತೀಚಿನ ರಚನೆಗಳು ಬಣ್ಣ ಬಳಿಯಲಾಗಿದೆ. ದಡದ ಲಿಂಗಪ್ಪನ ಗುಡಿಯನ್ನು ಮುಚ್ಚಲಾಗಿತ್ತು. ಈರಣ್ಣನ ಗುಡಿಯ ಬಾಗಿಲು ತೆರೆದಿತ್ತು. ಈರಣ್ಣನಗುಡಿಯು ವಾಸ್ತವವಾಗಿ ವೀರಭದ್ರನ ಗುಡಿ ಅಲ್ಲ. ಗುಡಿಯೊಳಗೆ ೬೦ ಸೆ.ಮೀ. ಮತ್ತು ೬೫ ಸೆ.ಮೀ. ಎತ್ತರವಿರುವ ವೀರಗಲ್ಲುಗಳಿವೆ. ಎರಡರ ಶೈಲಿ ಒಂದೇ ಇದೆ. ಬಹುಶಃ ಹೊಯ್ಸಳರ ಕಾಲದ ವೀರಗಲ್ಲುಗಳು. ಪೀಠದಲ್ಲಿ ಮಾತ್ರ ವ್ಯತ್ಯಾಸವಿದೆ. ಈರಣ್ಣನ ಗುಡಿಯ ಮುಂದೆ ಸುಮಾರು ೧ ಮೀ. ಎತ್ತರ ಮತ್ತು ಅದೇ ಅಗಲದ ಗ್ರ್ಯಾನೈಟ್ ಶಿಲೆಯ ಚೂಪಾದ ತುಂಡನ್ನು ನೆಡಲಾಗಿದೆ. ಈ ಶಿಲೆಯ ಮೇಲೆ ಕೋಳಿಗಳ ಮತ್ತು ಕುರಿಗಳ ಕೊರಳುಗಳನಿಟ್ಟು ಈರಣ್ಣನಿಗೆ ದಸರೆಯ ಹಬ್ಬದ ಸುಮಾರಿನಲ್ಲಿ ಬಲಿ ಕೊಡಲಾಗುತ್ತದೆ. ಈ ಬಲಿ ಪೀಠವನ್ನು ದಿನಾಲೂ ಕುಂಕುಮ ಹಚ್ಚಿ ಪೂಜಿಸಲಾಗುತ್ತದೆ.
ಬಸವೇಶ್ವರ ಗುಡಿ: ಈರಣ್ಣನ ಗುಡಿಯಿಂದ ಸುಮಾರು ೫೦೦ ಮೀ. ಮುಂದಕ್ಕೆ ಹೋದರೆ ಸ್ಥಳೀಯರು ಕರೆಯುವ ಬಸವೇಶ್ವರ (ಬಸವಣ್ಣನ ಗುಡಿ) ದೇವಾಲಯವಿದೆ. ಕಾಮತರು ಈ ಗುಡಿಯ ಹೆಸರನ್ನು ಮಾತ್ರ ಉಲ್ಲೇಖಿಸಿದ್ದಾರೆ. ಇದರೊಳಗಿರುವ ಶಿಲ್ಪಗಳು ಕುತೂಹಲಕಾರಿಯಾಗಿವೆ. ಈ ಗುಡಿಯು ಇಲ್ಲಿಯ ಖಾಸಗಿ ವ್ಯಕ್ತಿಯೊಬ್ಬರ ತೋಟದಲ್ಲಿದೆ. ಸುಮಾರು ೧೦ ಮೀ. ಉದ್ದ ಹಾಗೂ ೨.೫ ಮೀ. ಅಗಲವಾಗಿರುವ ಸಾಧಾರಣ ಚೌಕಾಕಾರದ ರಚನೆ. ಒಳ ಹೊರಗಿನ ವಾತಾವರಣ ಸ್ವಚ್ಛವಾಗಿದೆ. ಗರ್ಭಗುಡಿಯಲ್ಲಿ ನಂದಿ ಶಿಲ್ಪ ಇದೆ. ಎಣ್ಣೆ ಮೆತ್ತಿಕೊಂಡಿದೆ. ಗರ್ಭಗುಡಿಯ ಹೊರಗಿನ ಚೌಕದಲ್ಲಿ ಬಲಕ್ಕೆ ಒಂದು ಚಿಕ್ಕ ಲಿಂಗ (ಇದು ಚಿತ್ರದಲ್ಲಿ ಮರೆಯಾಗಿದೆ), ಒಂದು ದೊಡ್ಡ ಲಿಂಗ ಮತ್ತು ನಾರಾಯಣ ಶಿಲ್ಪಗಳಿವೆ. ಎಡಗಡೆಯ ಸಾಲಿನಲ್ಲಿ ಒಂದು ಚಿಕ್ಕ ನಂದಿ ಮತ್ತು ಒಂದು ಆಂಜನೇಯ ಶಿಲ್ಪ ಇದೆ (೧೯). ಮೊದಲೆರಡು ಸಲ ಕಾಡಿದ ಪ್ರಶ್ನೆ ನಾರಾಯಣಗುಡಿ ಮತ್ತು ನಾರಾಯಣ ಶಿಲ್ಪ ಎಲ್ಲಿವೆ ಎಂಬುದಾಗಿತ್ತು. ೨೦೧೨ ಕ್ಷೇತ್ರಕಾರ್ಯವು ಈ ಪ್ರಶ್ನೆಗೆ ಉತ್ತರ ನೀಡಿತು. ಬಸವೇಶ್ವರ ಗುಡಿಯಲ್ಲಿ, ಸ್ಥಳಾಂತರಗೊಂಡು ಸ್ಥಾಪಿಸಲ್ಪಟ್ಟಿರುವ ನಾರಾಯಣ ಮೂರ್ತಿ ಇಲ್ಲಿದೆ. ಇದೊಂದು ಹೊಯ್ಸಳ ಶಿಲ್ಪ. ಬಳಪದ ಕಲ್ಲಿನಲ್ಲಿ ಕಡೆಯಲಾಗಿದೆ. ಈ ಶಿಲ್ಪವನ್ನು ಎಲ್ಲಿಂದ ತಂದು ಸ್ಥಾಪಿಸಿದರೋ ತಿಳಿಯದು. ಯಾರು ಇಲ್ಲಿ ಯಾವಾಗ ತಂದಿಟ್ಟರೆಂಬುದು ತಿಳಿಯದು. ಕಾಮತರು (೧೯೮೮) ನಾರಾಯಣಸ್ವಾಮಿ ಗುಡಿ ಇಲ್ಲಿತ್ತು ಎಂಬರ್ಥದ ಮಾತುಗಳನ್ನು ಹೇಳುತ್ತಾರೆ. ಆದರೆ ಅವರು ಹೇಳುವ ಗುಡಿ ಮೂಲದಲ್ಲಿಯೂ ಈಶ್ವರನ ಗುಡಿಯೇ ಆಗಿದೆ. ಈ ಶಿಲ್ಪದ ಮೂಲವನ್ನು ಮುಂದೆ ಯಾರಾದರೂ ಶೋಧಿಸಬೇಕಾಗಿದೆ. ಈ ಶಿಲ್ಪ ಸದ ಬಸವೇಶ್ವರ ಗುಡಿಯಲ್ಲಿ ಸ್ಥಾಪಿಸಲ್ಪಟ್ಟಿದೆ.
ವೀರಗಲ್ಲುಗಳು: ಈ ಹಳ್ಳಿಯ ಸೋಮೇಶ್ವರ ಗುಡಿ (ನನ್ನಯ್ಯನ ಗುಡಿ)ಯ ಮುಂದೆ ಒಟ್ಟು ಆರು ವೀರಗಲ್ಲುಗಳಿವೆ. ಈ ಎಲ್ಲಾ ವೀರಗಲ್ಲುಗಳನ್ನು ಕಟೆಯಲು ಗ್ರ್ಯಾನೈಟ್ ಚಪ್ಪಡಿಗಳನ್ನು ಬಳಸಲಾಗಿದೆ. ಎಲ್ಲವೂ ಗಂಗರ ಕಾಲದ ಶೈಲಿಯವು ಎಂದು ಭಾವಿಸಿದ್ದೇನೆ. ಯಾವುದರ ಮೇಲೂ ಶಾಸನ ಇಲ್ಲ. ಎಲ್ಲ ವೀರಗಲ್ಲುಗಳು ಶೈವಧರ್ಮಕ್ಕೆ ಸೇರಿದ ವೀರನು ಹೋರಾಡಿ ಸತ್ತಾಗ ಕೈಲಾಸಕ್ಕೆ ಹೋಗುವ ಚಿತ್ರಗಳನ್ನು ಚಿತ್ರಿಸುತ್ತವೆ. ಇವುಗಳಲ್ಲದೆ ಈರಣ್ಣನ ಗುಡಿಯ ಬಳಿ ಎರಡು ನಗ್ನೀಕರಣಗೊಂಡ ವೀರಗಲ್ಲುಗಳಿವೆ.
ಅಧ್ಯಯನದಿಂದ ಹೊಮ್ಮುವ ತೀರ್ಮಾನಗಳು
ಮೇಲೆ ವಿವರಿಸಲಾದ ಶಾಸನಗಳ ಅಧ್ಯಯನ ಮತ್ತು ಪುರಾತತ್ತ್ವ ಅವಶೇಷಗಳ ವಿವರಣೆಗಳನ್ನು ಪರಸ್ಪರ ತಾಳೆ ಹಾಕಿ ಯೋಚಿಸಿದಾಗ ಈ ಕೆಳಗಿನ ತೀರ್ಮಾನಗಳಿಗೆ ತಲುಪಬಹುದಾಗಿದೆ.
೧. ಶಾಸನದಲ್ಲಿ ನಗರ್ಲಾ ಎಂದು ಹೆಸರಿಸಲಾಗಿರುವ ಈ ನಗರ್ಲೆಯು ಕ್ರಿ.ಶ.೧೦ನೇ ಶತಮಾನದಲ್ಲಿ ಗಂಗರ ಅಧೀನದಲ್ಲಿತ್ತು. ಅವರ ಅಧಿಕಾರಿ ವಿದ್ಯಾಧರನು ಈ ಹಳ್ಳಿಯ ಗುಡಿಗಳಿಗೂ, ಮಠಗಳಿಗೂ ದಾನ ದತ್ತಿಗಳನ್ನು ನೀಡುತ್ತಿದ್ದನು.
೨. ಇಲ್ಲಿ ಒಂದು ವಿದ್ಯಾಕೇಂದ್ರವಿತ್ತು. ಇಲ್ಲಿಯ ವಿದ್ಯಾರ್ಥಿಗಳ ಮತ್ತು ಸಂನ್ಯಾಸಿಗಳ ಅವಶ್ಯಕತೆಗಳನ್ನು ವಿದ್ಯಾಧರನು ಪೆರ್ಮಾಡಿಯ ಆಜ್ಞಾನುಸಾರವಾಗಿ ಪೂರೈಸುತ್ತಿದ್ದನು.
೩. ಇಲ್ಲಿ ನನ್ನಯ್ಯನು ಕಟ್ಟಿಸಿದ ಗುಡಿ ಇತ್ತು. ಇದು ಸೋಮೇಶ್ವರ ದೇವಸ್ಥಾನವಾಗಿ ಹೆಸರು ಪಡೆಯಿತು. ತೀರ ಇತ್ತೀಚೆಗೆ ನೆಲಸಮವಾಗಿ ಹೋಗಿದೆ. ಈ ನಿವೇಶನದಲ್ಲಿ ಸುಂದರ ಹೂದೋಟ ಬೆಳೆಸುವುದು ಸೂಕ್ತ.
೪. ಊರ್ಧ್ವಲಿಂಗ ಇಲ್ಲಿಗೆ ಎಲ್ಲಿಂದ ಬಂತು? ಇದಕ್ಕೆ ಸೂಕ್ತವೆನಿಸುವಂತ ದೇವಾಲಯ ಇಲ್ಲಿ ಹಿಂದೆ ಇದ್ದಿರಬಹುದು. ಈಗ ಗುಡಿ ನಾಶವಾಗಿ ಹೋಗಿ ಲಿಂಗ ಮಾತ್ರ ಉಳಿದಿದೆ. ಅದೂ ಕೂಡಾ ಕಪಿಲಾ ನದಿಯ ದಡದ ಮೇಲೆ ಇದೆ ಎಂದು ತಿಳಿದುಬಂತು.
೫. ಮಾರಮ್ಮನ ಗುಡಿಯು ಮಾರೆಮ್ಮನ ಗುಡಿ ಅಲ್ಲ. ವಾಸ್ತವವಾಗಿ ಇದು ಈಶ್ವರ ದೇವರ ಗುಡಿ. ಇಲ್ಲಿಯೇ ಊರ್ಧ್ವಲಿಂಗದ ಗುಡಿ ಹಿಂದೆ ಇತ್ತೆ? ಸದ್ಯಕ್ಕೆ ಈ ಊಹೆಗೆ ಉತ್ತರವಿಲ್ಲ.
೬. ಹಯವದನರಾವ್ ಅವರು (೧೯೩೦) ಉಲ್ಲೇಖಿಸುವ ದುರ್ಗಾ ಪರಮೇಶ್ವರಿ ಗುಡಿ ಈಗ ಇಲ್ಲ.
೭. ಇಲ್ಲಿ ಶಕ್ತಿದೇವತೆಯ ಗುಡಿಗಳನ್ನು ಗಮನಿಸಿದರೆ ಶಕ್ತಿ ಆರಾಧನೆ ಕ್ರಿ.ಶ.೧೦ನೇ ಶತಮಾನದಿಂದಲೂ ಇದೆ. ಇಂದಿಗೂ ನಡೆದುಕೊಂಡು ಬಂದಿದೆ. ಆದರೆ ಶಕ್ತಿದೇವತೆಯ ಬಲಿಗಳನ್ನು ಕೊಂಚ ದೂರದಲ್ಲಿರುವ ಈರಣ್ಣ ದೇವರ ಗುಡಿಯ ಮುಂದೆ ಕಡಿಯಲಾಗುತ್ತದೆ. ಬಹುಶಃ ಮಾಳಿಗೇಶ್ವರಿ ಪೂಜಾರಿಗಳು ಶಿವಾರ್ಚಕರ ತಮ್ಮಡಿಗಳಾದ ನಂತರ ಇಲ್ಲಿ ಬಲಿ ಕಡಿಯುವುದನ್ನು ಕೆಲ ಶತಮಾನಗಳ ಹಿಂದೆ ನಿಲ್ಲಿಸಿರಬಹುದು. ಲಿಂಗಾಯತ ಧರ್ಮ ಬಲಿಯನ್ನು ವಿರೋಧಿಸುತ್ತದೆ. ಆದ್ದರಿಂದ ಈ ಬದಲಾವಣೆಯನ್ನು ತಂದಿರಬಹುದು.
೮. ಹೊಯ್ಸಳರ ಕಾಲದಲ್ಲಿ ಇಲ್ಲಿ ಜೈನಧರ್ಮ ಕಾಲಿಟ್ಟಿರಬಹುದು. ಆದರೆ ಬಹಳ ವರ್ಷಗಳ ಕಾಲ ಬಾಳದೆ ದುರ್ಬಲವಾಗಿ ಈ ಊರಿನಿಂದಾಚೆಗೆ ಹೋಯಿತೆಂದು ಊಹಿಸಬಹುದು. ಈ ಊಹೆಗೆ ಪಾಳಾಗಿರುವ ಪಾರ್ಶ್ವನಾಥ ಬಸ್ತಿಯೇ ಸಾಕ್ಷಿ.
೯. ಈಗ ಕಿತ್ತು ಬಿಸಾಡಿರುವ ಧ್ವಜಸ್ತಂಭವನ್ನು ಸೋಮೇಶ್ವರಗುಡಿಯ (ನನ್ನಯ್ಯಗುಡಿ) ಕಂಬ ಮತ್ತು ತೊಲೆಗಳನ್ನು ಹಾಗೂ ಊರ್ಧ್ವಲಿಂಗವನ್ನು ಸಮೀಪದ ಸುತ್ತೂರಿನಲ್ಲಿರುವ ವಸ್ತುಸಂಗ್ರಹಾಲಯಕ್ಕೆ ಸಾಗಿಸಿ, ಪ್ರದರ್ಶಿಸಬಹುದು.
೧೦. ಹಾಗೆಯೇ ಎಂಟು ವೀರಗಲ್ಲುಗಳನ್ನು ಸುತ್ತೂರಿಗೆ ಸಾಗಿಸಿ, ಸ್ವಚ್ಛಗೊಳಿಸಿ ಅಧ್ಯಯನಕ್ಕೊಳಪಡಿಸಬಹುದು.
[ಕೃತಜ್ಞತೆಗಳು : ನಾನು ಕ್ಷೇತ್ರಕಾರ್ಯ ಕೈಗೊಂಡಾಗ ನನಗೆ ಸುತ್ತೂರಿನಲ್ಲಿ ವಸತಿ ಸೌಕರ್ಯವನ್ನು ಒದಗಿಸಿದ ಸುತ್ತೂರು ಸಂಸ್ಥಾನಕ್ಕೂ, ಆಡಳಿತಾಧಿಕಾರಿಗಳಾದ ಶ್ರೀ ಶೇಖರಗೌಡ ಪಾಟೀಲ, ನಗರ್ಲೆಯ ಡಾ. ಕೆ.ಸಿ. ಮಹಾದೇಶ ಅವರಿಗೂ, ಶ್ರೀ ನಾಗೇಂದ್ರಸ್ವಾಮಿ ಅವರಿಗೂ ನಾನು ಕೃತಜ್ಞನಾಗಿದ್ದೇನೆ. ಊರ್ಧ್ವಲಿಂಗದ ಪರಿಕಲ್ಪನೆಯನ್ನು ನನಗೆ ವಿವರಿಸಿದ ಡಾ. ಎಂ.ಜಿ. ನಾಗರಾಜರಿಗೆ ನಾನು ಕೃತಜ್ಞ.]

? ‘ಸಂಗಮ, ಎಮ್.ಐ.ಜಿ.-೭೭, ೬ನೇ ಕ್ರಾಸ್, ೬ನೆಯ ಮೈನ್, ಕೆ.ಹೆಚ್.ಬಿ. ಕಾಲೋನಿ, ೨ನೇ ಹಂತ, ಬಸವೇಶ್ವರನಗರ, ಬೆಂಗಳೂರು-೭೯.
 
           ಪಾರ್ಶ್ವನಾಥ ಶಿಲ್ಪ




ಈರಣ್ಣನ ಗುಡಿಯೊಳಗಿರುವ ಒಬ್ಬ ವೀರನ ಶಿಲ್ಪ

ಪಾರ್ಶ್ವನಾಥ ಬಸ್ತಿಯಲ್ಲಿದ್ದ ಲಿಂಗ 

ಶಾಸನೋಕ್ತ ರಾಚಮ್ಮನು ನಿಲ್ಲಿಸಿದ ದೀಪಸ್ತಂಭ

ಈರಣ್ಣನ ಗುಡಿಯೊಳಗಿರುವ ಇನ್ನೊಬ್ಬ ವೀರನ ಶಿಲ್ಪ



ಆಧಾರಸೂಚಿ ಮತ್ತು ಟಿಪ್ಪಣಿಗಳು
೧.         ಹಯವದನರಾವ್ (೧೯೩೦), ಮೈಸೂರು ಗ್ಯಾಸೆಟಿಯರ್, ಗಿI Pಚಿಡಿಣ ೧, (ಪುನರ್ ಮುದ್ರಣ ೨೦೧೧, ಪುಟ ೭೮೯).
೨.         ಸೂರ್ಯನಾಥ ಕಾಮತ್ (೧೯೮೮), ಮೈಸೂರು ಜಿಲ್ಲೆಯ ಗ್ಯಾಸೆಟಿಯರ್, ಪುಟ ೯೦೦.
೩.         ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೩, (ಪರಿಷ್ಕೃತ), ಮೈಸೂರು ವಿಶ್ವವಿದ್ಯಾನಿಲಯ, ಪುಟ ೩೭೨೬-೩೨೮, ೧೯೭೪.



No comments:

Post a Comment