Friday, May 17, 2013

ಯಾದಗಿರಿಜಿಲ್ಲೆಯ ಮಣ್ಣಿನ ಕೋಟೆಗಳು

 ಯಾದಗಿರಿ ಜಿಲ್ಲೆಯ ಮಣ್ಣಿನ ಕೋಟೆಗಳು
ಡಾ. ಶಂಭುಲಿಂಗ ಎಸ್. ವಾಣಿ

ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಭಾರತದಲ್ಲಿ ಆಳ್ವಿಕೆ ಮಾಡಿರುವ ಪ್ರತಿಯೊಂದು ರಾಜ ಮನೆತನಗಳು ತಮ್ಮ ರಾಜ್ಯದ ರಾಜಧಾನಿಯ ರಕ್ಷಣೆಗಾಗಿ ಕೋಟೆಗಳನ್ನು ನಿರ್ಮಿಸಿಕೊಂಡಿವೆ. ಕೋಟೆಯ ಮಹತ್ವವನ್ನು ಕುರಿತು ಐತಿಹಾಸಿಕ ಕೃತಿಗಳಲ್ಲಿ ಹೇಳಲಾಗಿದೆ. ಅಪಾರ ಸಂಖ್ಯೆಯ ಸೈನ್ಯ ಮಾಡುವ ಕಾರ್ಯಕ್ಕಿಂತ ಹೆಚ್ಚಿನ ಕಾರ್ಯವನ್ನು ಒಂದು ಕೋಟೆ ಮಾಡುತ್ತದೆ.
ಕ್ರಿ.ಶ.೨೦೧೦ರಲ್ಲಿ ಗುಲಬರ್ಗಾ ಜಿಲ್ಲೆಯಿಂದ ಪ್ರತ್ಯೇಕಗೊಂಡು ಸ್ವತಂತ್ರ ಜಿಲ್ಲೆಯಾಗಿರುವ ಯಾದಗಿರಿ ಜಿಲ್ಲೆಯು ಪ್ರಮುಖವಾಗಿ ಶಹಾಪುರ ಹಾಗೂ ಸುರಪೂರ ತಾಲ್ಲೂಕುಗಳನ್ನು ಒಳಗೊಂಡಿದೆ. ಈ ಜಿಲ್ಲೆಯು ತನ್ನದೆ ಆದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಈ ಭಾಗದಲ್ಲಿ ನಿರ್ಮಾಣಗೊಂಡ ಕೋಟೆಗಳನ್ನು ಕುರಿತು ಅವಲೋಕಿಸುವಾಗ ಕಲ್ಲಿನಲ್ಲಿ, ಕಾಡಿನ ಮಧ್ಯದಲ್ಲಿ, ಬೆಟ್ಟದ ಮೇಲೆ ಹಾಗೂ ಮಣ್ಣಿನಲ್ಲಿ ನಿರ್ಮಿಸಿರುವ ಕೋಟೆಗಳು ಕಂಡುಬರುತ್ತವೆ. ಪ್ರಸ್ತುತ ಲೇಖನದಲ್ಲಿ ಇದುವರೆಗೆ ಬೆಳಕಿಗೆ ಬಾರದೆ ಇರುವ ಮಣ್ಣಿನ ಕೋಟೆಗಳ ರಚನೆ, ವಿನ್ಯಾಸ, ಮಹತ್ವ, ಅವಶ್ಯಕತೆ ಮತ್ತು ತಂತ್ರಜ್ಞಾನವನ್ನು ಕುರಿತು ಹೇಳಲಾಗಿದೆ.
ಯಾದಗಿರಿ ಜಿಲ್ಲೆಯ ಈಶಾನ್ಯ ಭಾಗಕ್ಕೆ ೪೦ ಕಿ.ಮೀ. ಅಂತರದಲ್ಲಿ ಬರುವ ಗುರಮಿಠಕಲ್ ಸುತ್ತಮುತ್ತಲಿನಲ್ಲಿ ಬರುವ ಚಂಡ್ರಕಿ, ಕಾಕಲ್‌ವಾರ, ಪುಟಪಕ್, ಇಟಕಲ್, ಗಾಜರಕೋಟ್, ಶಿಲಾರಕೋಟ್ ಕೋಟಗಿರಿ ಹಾಗೂ ಸೇಡಂ ತಾಲೂಕಿನಲ್ಲಿ ಬರುವ ಮುಧೋಳಗಳಲ್ಲಿ ೧೮ನೆಯ ಶತಮಾನದಲ್ಲಿ ನಿರ್ಮಾಣಗೊಂಡ ಮಣ್ಣಿನ ಕೋಟೆಗಳು ಇವೆ. ಇಂತಹ ಕೋಟೆಗಳು ಹೆಚ್ಚಿನ ಅವಧಿಯವರೆಗೆ ಬಾಳುವುದಿಲ್ಲ. ಈ ಕೋಟೆಗಳ ಕುರಿತು ಮಾಹಿತಿಯು ಕೇವಲ ಪುಸ್ತಕಗಳಲ್ಲಿ ಮಾತ್ರ ಲಭ್ಯವಾಗುತ್ತದೆ. ಮೇಲೆ ಹೇಳಿರುವ ಹಲವು ಭಾಗದಲ್ಲಿಯ ಕೋಟೆಗಳು ಸಂಪೂರ್ಣವಾಗಿ ನಾಶ ಹೊಂದಿವೆ. ಅದರಲ್ಲಿ ಚಂಡ್ರಕಿ, ಕಾಕಲ್‌ವಾರ, ಮುಧೋಳದ ಕೋಟೆಗಳು ಮಾತ್ರ ಉಳಿದುಕೊಂಡಿವೆ. ಮುಂದಿನ ಕೆಲವು ದಶಕಗಳಲ್ಲಿ ಇವುಗಳು ಸಹ ನಾಶ ಹೊಂದಬಹುದು.
ಕಾಕಲ್‌ವಾರದಲ್ಲಿ ಎರಡು ಹಂತದ ಕೋಟೆಯಿದೆ. ಗ್ರಾಮದ ಸುತ್ತಲು ಇರುವ ಕೋಟೆ ಹಾಗೂ ದೇಸಾಯಿಗಳ ಅರಮನೆಯ ರಕ್ಷಣೆಗಾಗಿ ನಿರ್ಮಿಸಿರುವ ಮತ್ತೊಂದು ಭದ್ರವಾದ ಕೋಟೆ. ಗ್ರಾಮದ ಸುತ್ತಲೂ ಇರುವ ಕೋಟೆಯು ನಾಶ ಹೊಂದಿದ್ದು ಅದರ ಕೆಲವು ಭಾಗಗಳು ಮಾತ್ರ ಅಲ್ಲಲ್ಲಿ ಕಂಡುಬರುತ್ತವೆ. ಇದು ಮಣ್ಣಿನಲ್ಲಿ ನಿರ್ಮಾಣಗೊಂಡಿರುವ ಕೋಟೆಯಾಗಿರುವುದರಿಂದ ಗ್ರಾಮಸ್ಥರು ಅದೇ ಮಣ್ಣನ್ನು ಬಳಸಿಕೊಂಡು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ನೈಋತ್ಯ ದಿಕ್ಕಿನಲ್ಲಿರುವ ಇದರ ಪ್ರವೇಶದ್ವಾರದ ಎರಡೂ ಬದಿಯಲ್ಲಿರುವ ಕೊತ್ತಳಗಳಲ್ಲಿ ಒಂದು ಮಾತ್ರ ಉಳಿದುಕೊಂಡಿದೆ. ಅದರ ಕೆಳಹಂತದ ರಚನೆಗೆ ಸ್ಥಳೀಯವಾಗಿ ಲಭ್ಯವಾಗುವ ಕಲ್ಲುಗಳನ್ನು ಬಳಸಲಾಗಿದೆ. ಅದರ ಮೇಲ್ಭಾಗದ ರಚನೆಗೆ ಹಾಳು ಮಣ್ಣನ್ನು ಬಳಸಲಾಗಿದೆ. ಬಿಳಿ ವರ್ಣದ ಈ ಮಣ್ಣಿನಲ್ಲಿ ೨ x ೩ ಅಡಿ ಉದ್ದ ಅಗಲದಲ್ಲಿ ಚೌಕಾಕೃತಿ ಅಥವಾ ಆಯತಾಕಾರವನ್ನು ಮೊದಲು ರಚಿಸಿಕೊಂಡು ನಂತರ ಇವುಗಳನ್ನು ಒಂದರ ಮೇಲೊಂದರಂತೆ ಐದು ಹಂತಗಳಲ್ಲಿ ಜೋಡಿಸಿ ಅದರ ಮೇಲೆ ಅರ್ಧವೃತ್ತಾಕಾರದ ಕೋಟೆ ತೆನೆಯನ್ನು ನಿರ್ಮಿಸಲಾಗಿದೆ. ಈ ಮಣ್ಣಿನ ಗೋಡೆಯ ಮಧ್ಯದಲ್ಲಿ ಹಲವು ರಂಧ್ರಗಳನ್ನು ಮಾಡಲಾಗಿದೆ. ಇವುಗಳಲ್ಲಿ ಕೆಲವು ವೀಕ್ಷಣಾ ರಂಧ್ರಗಳಾಗಿವೆ ಮತ್ತೆ ಕೆಲವು ಮಳೆಯ ನೀರು ಹೊರಗೆ ಬರಲು ಬಿಡಲಾಗಿದೆ. ಈ ರೀತಿಯ ಮತ್ತೊಂದು ಕೊತ್ತಳವು ಗ್ರಾಮದ ಪೂರ್ವಭಾಗದಲ್ಲಿದ್ದು ಇದು ಸಹ ಅವನತಿ ಹೊಂದಿದೆ. ಇನ್ನು ಉಳಿದ ಕಡೆ ಮಣ್ಣಿನ ಗೋಡೆ ಸಂಪೂರ್ಣವಾಗಿ ಅವನತಿ ಹೊಂದಿದ್ದು ತಳಭಾಗದಲ್ಲಿರುವ ಕಲ್ಲಿನ ರಚನೆ ಮಾತ್ರ ಉಳಿದುಕೊಂಡಿದೆ. ದೇಸಾಯಿಗಳ ಸಂಸ್ಥಾನದ ಅರಮನೆಯ ಸುತ್ತಲೂ ಕಲ್ಲಿನ ರಕ್ಷಣಾ ಗೋಡೆ ಮತ್ತು ಕಟ್ಟಿಗೆಯಲ್ಲಿ ನಿರ್ಮಿಸಿರುವ ಅರಮನೆಯು ಇನ್ನೂ ಸುಸ್ಥಿತಿಯಲ್ಲಿದೆ.
ಗುರಮಿಠಕಲ್ ನಗರದ ಕೇಂದ್ರ ಭಾಗದಲ್ಲಿ ಸುಮಾರು ೨ ಕಿ.ಮೀ. ಮಣ್ಣಿನ ಕೋಟೆಯಿದೆ. ಇದರ ಸುತ್ತಲಿನ ರಚನೆಗೆ ತಳಭಾಗದಲ್ಲಿ ೫ ರಿಂದ ೧೦ ಅಡಿ ಎತ್ತರದವರೆಗೆ ಸ್ಥಳೀಯವಾಗಿ ಲಭ್ಯವಾಗುವ ಕಲ್ಲುಗಳನ್ನು ಬಳಸಲಾಗಿದ್ದು ಅದರ ಮೇಲ್ಭಾಗದಲ್ಲಿ ೧೦ ರಿಂದ ೧೫ ಅಡಿ ಎತ್ತರದ ಮಣ್ಣಿನ ಗೋಡೆ ಇದೆ. ತಳಭಾಗವು ೮ ರಿಂ ೧೦ ಅಡಿ ಅಗಲವಾಗಿದ್ದು ಮೇಲೆ ಹೋದಂತೆ ಕಿರಿದಾಗುತ್ತದೆ. ಇನ್ನೂ ಕೆಲವೊಂದು ಭಾಗದ ಮಣ್ಣಿನ ಗೋಡೆಯು ೧೫ ರಿಂದ ೨೦ ಅಡಿ ಎತ್ತರವಾಗಿದೆ. ಈ ಕೋಟೆಯ ವಿಶೇಷತೆ ಎಂದರೆ ತೆನೆಗಳ ಹಿಂದೆ ಸೈನಿಕರಿಗೆ ಕಾವಲು ಮಾಡಲು ಯಾವುದೇ ಸ್ಥಳಾವಕಾಶವಿರುವುದಿಲ್ಲ. ಈ ರೀತಿಯ ರಚನೆಯು ಪ್ರಬಲವಾದ ಕೋಟೆಗಳಲ್ಲಿ ಇರುವುದಿಲ್ಲ. ಆದ್ದರಿಂದ ರಕ್ಷಣೆಯ ದೃಷ್ಟಿಯಿಂದ ಇದೊಂದು ಸಾಮಾನ್ಯ ಕೋಟೆಯಂತೆ ಕಂಡುಬರುತ್ತದೆ. ಕೋಟೆಯು ಆದಿಲ್ ಶಾಹಿಗಳ ಕೊನೆಕಾಲದಲ್ಲಿ ರಚನೆಗೊಂಡಿದ್ದು ನಂತರ ಬಂದ ದೇಸಾಯಿಗಳು ಇದನ್ನು ಬಲಪಡಿಸಿ ಸುತ್ತಲು ಮಣ್ಣಿನ ಕೋಟೆಯನ್ನು ನಿರ್ಮಿಸಿದರು. ಪ್ರಸ್ತುತ ಕೋಟೆಯ ದಕ್ಷಿಣ ಭಾಗವು ಅವನತಿಯ ಹಂತದಲ್ಲಿದೆ. ಅಲ್ಲದೆ ಕೇಂದ್ರಭಾಗದಲ್ಲಿರುವ ೩೦ ಅಡಿ ಎತ್ತರದ ಕಾವಲು ಗೋಪುರವನ್ನು ಸಹ ಮಣ್ಣಿನಲ್ಲಿ ನಿರ್ಮಿಸಲಾಗಿದೆ. ಈ ಮಣ್ಣಿನ ರಾಶಿಯನ್ನು ಸ್ಥಳೀಯ ಜನರು ತಮ್ಮ ತಮ್ಮ ಹೊಲಗಳಿಗೆ ಸಾಗಿಸುತ್ತಿದ್ದಾರೆ.
ಗುರುಮಿಠಕಲ್‌ನ ಪೂರ್ವದಿಕ್ಕಿಗೆ ೬ ಕಿ.ಮೀ. ದೂರ ದಲ್ಲಿರುವ ಚಂಡ್ರಕಿ ಗ್ರಾಮದಲ್ಲಿ ಆಕರ್ಷಕವಾದ ಮಣ್ಣಿನ ಕೋಟೆಯಿದೆ. ಗ್ರಾಮ ಪೂರ್ವಕ್ಕೆ ಅರ್ಧ ಕಿ.ಮೀ. ದೂರ ದಲ್ಲಿರುವ ಈ ಕೋಟೆಯು ಸುಮಾರು ೨ ಕಿ.ಮೀ. ಸುತ್ತಳತೆ ಯಲ್ಲಿ ವೃತ್ತಾಕಾರದಲ್ಲಿದೆ. ೧೭ನೆಯ ಶತಮಾನದ ಕೊನೆಯ ಭಾಗದಲ್ಲಿ ಹಾಗೂ ೧೮ನೆಯ ಶತಮಾನದ ಆರಂಭದಲ್ಲಿ ನಿರ್ಮಾಣಗೊಂಡಿರುವ ಈ ಕೋಟೆಯು ಹೈದ್ರಾಬಾದ ನಿಜಾಮನ ಆಳ್ವಿಕೆಗೆ ಒಳಪಟ್ಟಿತು. ನಿಜಾಮನ ಜಾಗೀರದಾರನಿಂದ ಸ್ಥಳೀಯರಾದ ಶ್ರೀ ವಿಠಲರಾವ ಭೀಮಶೇನರಾವ ಕುಲಕರ್ಣಿಯವರು ಖರೀದಿಸಿದರು. ಸುಮಾರು ೨೦೦ ವರ್ಷಗಳಿಂದ ಕೋಟೆಯ ಒಳಗಡೆ ಇರುವ ಭೂಮಿಯನ್ನು (೨೨ ಎಕರೆ ೧೧ ಗುಂಟೆ) ಇದೇ ಮನೆತನದವರು ಸಾಗುವಳಿ ಮಾಡುತ್ತಿದ್ದಾರೆ. ಕಾಕಲವಾರದ ಲಕ್ಷ್ಮಣಪ್ಪ ದೊರೆಗಳ ಅಧೀನದಲ್ಲಿ ಈ ಕೋಟೆಯನ್ನು ಕುಲಕರ್ಣಿಯವರು ಖರೀದಿಸಿದ್ದಾರೆಂದು ಅದೇ ಮನೆತನದ ರಘುನಾಥ ರಾವ ಕುಲಕರ್ಣಿಯವರು ಹೇಳುತ್ತಾರೆ. ೧೯೪೭ರ ಪೂರ್ವದಲ್ಲಿ ಈ ಪ್ರದೇಶ ಸಂಪೂರ್ಣವಾಗಿ ಗಿಡ ಮರಗಳಿಂದ ಆವರಿಸಿಕೊಂಡಿದ್ದು ನಂತರದಲ್ಲಿ ಇದನ್ನು ಸ್ವಚ್ಚಗೊಳಿಸಿ ಸಾಗುವಳಿ ಮಾಡಲಾಯಿತು.
ಪ್ರಸ್ತುತ ಈ ಕೋಟೆಯು ಕೇಂದ್ರ ಅಥವಾ ರಾಜ್ಯ ಸರಕಾರದ ಆಧೀನದಲ್ಲಿ ಇರದೆ ಆ ಜಮೀನಿನ ಒಡೆಯರಾದ ಕಿಶನ್‌ರಾವ ಕುಲಕರ್ಣಿಯವರ ಸ್ವತ್ತಾಗಿದೆ. ಇದನ್ನು ಕೋಟೆಯೆಂದು ಪರಿಗಣಿಸದೆ ತಮ್ಮ ಹೊಲಕ್ಕೆ ಇರುವ ಬೇಲಿ ಎಂದು ಪರಿಗಣಿಸಿದ್ದಾರೆ. ಇಂತಹ ಅಪರೂಪದ ಆಕರ್ಷಕ ಕೋಟೆಯು ನಮಗೆ ಈ ಭಾಗದಲ್ಲಿ ಎಲ್ಲಿಯು ಕಂಡುಬರುವುದಿಲ್ಲ.
ಪೂರ್ವ ದಿಕ್ಕಿನಲ್ಲಿ ಇದರ ಪ್ರಮುಖ ಪ್ರವೇಶದ್ವಾರವಿದೆ. ಅದರ ಮುಂಭಾಗದಲ್ಲಿ ಸು. ೯೦% ಪ್ರತಿಶತ ದ್ವಾರವನ್ನು ಕಾಣದಂತೆ ವೃತ್ತಾಕಾರದ ಮಣ್ಣಿನ ತಡೆ ಗೋಡೆಯನ್ನು ರಚಿಸಲಾಗಿದೆ. ಈ ಗೋಡೆಯ ಎರಡೂ ಬದಿಯಲ್ಲಿ ಕಂದಕವನ್ನು ರಚಿಸಿಕೊಂಡಿರುವುದರಿಂದ ಅದು ಸಂಪೂರ್ಣವಾಗಿ ನೀರಿನಲ್ಲಿ ನಿಂತಂತೆ ಕಂಡುಬರುತ್ತದೆ. ದ್ವಾರದ ಮುಂಭಾಗದಲ್ಲಿ ಈ ವಿಶಾಲವಾದ ಸ್ಥಳದಲ್ಲಿ ಕಾವಲುಗಾರರಿಗೆ ರಕ್ಷಣಾತ್ಮಕವಾದ ಸ್ಥಳವಿದೆ. ಕೋಟೆಯ ಒಳಭಾಗದಲ್ಲಿನ ಮಣ್ಣಿನಿಂದ ನಿರ್ಮಿಸಿರುವ ಎಲ್ಲಾ ಕಟ್ಟಡಗಳು ಅವನತಿ ಹೊಂದಿದ್ದರೂ ಕಲ್ಲಿನಲ್ಲಿ ನಿರ್ಮಿಸಿರುವ ಮಲ್ಲಿಕಾರ್ಜುನ ದೇವಾಲಯ ಅತ್ಯಂತ ಸುಭದ್ರ ಸ್ಥಿತಿಯಲ್ಲಿದೆ. ಇದರ ಸುತ್ತಲು ೧೫ ರಿಂದ ೨೦ ಅಡಿ ಎತ್ತರದ ಮಣ್ಣಿನ ರಕ್ಷಣಾಗೋಡೆಯನ್ನು ನಿರ್ಮಿಸಲಾಗಿದೆ. ಕಲಾತ್ಮಕವಾಗಿ ನಿರ್ಮಿಸಿರುವ ಈ ಕೋಟೆಯ ಸುತ್ತಲೂ ೬ ಕಾವಲು ಗೋಪುರಗಳಿವೆ. ಇವುಗಳು ೩೦ ಅಡಿ ಎತ್ತರವಾಗಿದ್ದು, ಅದರಲ್ಲಿ ಅರ್ಧಭಾಗ ಸ್ಥಳೀಯವಾಗಿ ಲಭ್ಯವಾಗುವ ಬೆಣಚು ಕಲ್ಲುಗಳನ್ನು ಮತ್ತು ಕಪ್ಪನೆಯ ಕಲ್ಲುಗಳನ್ನು ಬಳಸಿ ನಿರ್ಮಿಸಲಾಗಿದ್ದು ಮೇಲ್ಭಾಗವನ್ನು ಮಣ್ಣಿನಿಂದ ನಿರ್ಮಿಸಲಾಗಿದೆ. ಮಣ್ಣಿನ ಗೋಡೆಯ ನಿರ್ಮಾಣದಲ್ಲಿ ಒಂದು ವಿಶೇಷ ಕೌಶಲ್ಯ ಕಂಡುಬರುತ್ತದೆ. ಮೊದಲು ಮಣ್ಣನ್ನು ಹದಮಾಡಿ ಅವಶ್ಯವಿರುವ ಆಕಾರದಲ್ಲಿ ಅದನ್ನು ಸಿದ್ಧಪಡಿಸಿ ನಂತರದಲ್ಲಿ ಕೆಲವು ದಿನಗಳವರೆಗೆ ಅದನ್ನು ಒಣಗಿಸಿ ಆಮೇಲೆ ಅವುಗಳನ್ನು ಹಂತಹಂತವಾಗಿ ಒಂದರ ಮೇಲೆ ಒಂದನ್ನು ಜೋಡಿಸಲಾಗುತ್ತಿತ್ತು. ಎರಡು ಮಣ್ಣಿನ ಮುದ್ದೆಗಳ ಮಧ್ಯದಲ್ಲಿ ಸ್ವಲ್ಪ ಹಸಿ ಮಣ್ಣನ್ನು ಬಳಸಿರುವಂತೆ ಕಂಡುಬರುತ್ತದೆ.
ಅಲ್ಲದೆ ಗೋಡೆಯ ಮಧ್ಯದಲ್ಲಿ ಅವಶ್ಯವಿರುವೆಡೆ ರಂಧ್ರಗಳನ್ನು ಮುಂಚಿತವಾಗಿಯೇ ಕೊರೆಯುತ್ತಿದ್ದರು. ಇನ್ನೂ ಕೆಲವು ಕಡೆಯಲ್ಲಿ ಮಣ್ಣಿನ ಕೊಳವೆಗಳನ್ನು ಜೋಡಿಸಲಾಗುತ್ತಿತ್ತು. ಅವುಗಳು ಇಂದಿಗೂ ಯಥಾಸ್ಥಿತಿಯಲ್ಲಿ ಈ ವೀಕ್ಷಣಾ ರಂಧ್ರಗಳಿಂದ ಸುಮಾರು ೧ ಕಿ.ಮೀ. ದೂರದ ವರೆಗೆ ವೀಕ್ಷಿಸಬಹುದು. ಪ್ರತಿಯೊಂದು ಕೊತ್ತಳದ ಸುತ್ತಲು ಕೋಟೆಯ ತೆನೆಗಳಿವೆ. ಅಲ್ಲದೆ ಇಡಿಯ ಕೋಟೆ ಗೋಡೆಯ ಮೇಲ್ಭಾಗದಲ್ಲಿ ವಿಶಾಲವಾದ ತೆನೆಗಳು ಅವುಗಳ ಹಿಂಭಾಗದಲ್ಲಿ ಕಾವಲುಗಾರ ರಕ್ಷಣೆಯ ಸ್ಥಳವಿದೆ.
ಈ ಮಣ್ಣಿನ ಕೋಟೆಯ ಉತ್ತರ, ದಕ್ಷಿಣ ಮತ್ತು ಪೂರ್ವ ಭಾಗಗಳಲ್ಲಿ ಸುಮಾರು ೧೦ ಅಡಿ ದಪ್ಪವಾಗಿದ್ದು, ೧೫ ಅಡಿ ಎತ್ತರವಿದೆ. ನಂತರ ಮುಂದೆ ಐದು ಅಡಿಯಲ್ಲಿ ಗೋಡೆಯನ್ನು ನಿರ್ಮಿಸಿ ಉಳಿದ ಸ್ಥಳವನ್ನು ಕಾವಲುಗಾರರು ಕೋಟೆಯ ಸುತ್ತಲೂ ಮೇಲ್ಭಾಗದಲ್ಲಿ ಸುತ್ತಾಡಲು ಅವಕಾಶ ಮಾಡಲಾಗಿದೆ. ಅಲ್ಲದೆ ಸುಮಾರು ೪ ಅಡಿ ದಪ್ಪ ೬ ಅಡಿ ಎತ್ತರದ ವಿಶಾಲವಾದ ತೆನೆಗಳನ್ನು ನಿರ್ಮಿಸಲಾಗಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಬಲಾಢ್ಯ ಕೋಟೆಯಂತೆ ಇದು ಕಂಡುಬರುತ್ತದೆ. ಇದರ ಮತ್ತೊಂದು ವಿಶೇಷತೆ ಎಂದರೆ ಸಮತಟ್ಟಾದ ಸ್ಥಳದಲ್ಲಿ ನಿರ್ಮಿಸಿರುವ ಮಣ್ಣಿನ ಕೋಟೆಗೆ ಕಂದಕವಿರುವುದಿಲ್ಲ. ಆದರೆ ಚಂಡ್ರಕಿ ಕೋಟೆಯ ಮೂರು ಭಾಗಗಳಲ್ಲಿ ಕಂದಕವಿದೆ. ಜೊತೆಗೆ ಕೋಟೆಯಿಂದ ಹೊರಭಾಗಕ್ಕೆ ಸಂಪರ್ಕ ಕಲ್ಪಿಸಲು ಎರಡು ಗುಪ್ತದ್ವಾರಗಳು ಹಾಗೂ ಒಂದು ದಿಡ್ಡಿಬಾಗಿಲು ಇದೆ. ಕೋಟೆಯ ಪಶ್ಚಿಮ ಭಾಗದ ಗೋಡೆಗೆ ಅಂಟಿಕೊಂಡಿರುವ ಒಂದು ಕಾವಲು ಗೋಪುರದ ಮೇಲೆ ೧೨ ಅಡಿ ಉದ್ದನೆಯ ತೋಪು ಇದೆ. ಈ ಎಲ್ಲಾ ಅಂಶಗಳಿಂದ ಇದೊಂದು ಬಲಾಢ್ಯ ಮಣ್ಣಿನ ಕೋಟೆ ಎಂದು ಹೇಳಲಾಗಿದೆ.
ಆದರೆ ಪ್ರಸ್ತುತ ಇದರ ಸ್ಥಿತಿ ಶೋಚನೀಯವಾಗಿದೆ. ಕೋಟೆಯ ಪಶ್ಚಿಮ ಭಾಗದ ಗೋಡೆ ಬಹುಮಟ್ಟಿಗೆ ಬಿದ್ದುಹೋಗಿವೆ. ಅಲ್ಲಿಂದ ದನಕರುಗಳು ಒಳಗಡೆ ಬಾರದಂತೆ ಮುಳ್ಳಿನ ಬೇಲಿಯನ್ನು ಹಾಕಲಾಗಿದೆ. ರೈತರು ಉತ್ತರ ಭಾಗದ ಒಳಗೋಡೆಯನ್ನು ಕೆಡವಿ ಅಲ್ಲಿ ಸಾಗುವಳಿ ಮಾಡುತ್ತಿದ್ದಾರೆ. ಈ ಭಾಗದಲ್ಲಿಯ ತೆನೆಗಳು ನೆಲಕ್ಕೆ ಉರುಳಿ ಬೀಳುತ್ತಿವೆ. ಕೋಟೆಗೋಡೆಯ ಮಣ್ಣನ್ನು ತಂದು ಒಳಭಾಗದಲ್ಲಿರುವ ಬಾವಿಗಳನ್ನು ಮುಚ್ಚುತ್ತಿದ್ದಾರೆ. ಗೋಡೆಯ ನಿರ್ಮಾಣಕ್ಕೆ ಬಳಸಿದ ಮಣ್ಣು ಫಲವತ್ತಾಗಿರುವುದರಿಂದ ಅದರ ಮೇಲೆ ಗಿಡ ಮರಗಳು ಬೆಳೆದು ಅವುಗಳಿಂದ ಕೋಟೆಯು ಅವನತಿ ಹೊಂದುತ್ತಲಿದೆ. ಈ ರೀತಿಯ ಚಟುವಟಿಕೆಗಳಿಗೆ ಕೋಟೆಯು ಒಳಗಾಗಿರುವುದರಿಂದ ಇದರ ರಕ್ಷಣೆ ಅಸಾಧ್ಯವಾಗಿದೆ.
ಗುರಮಿಠಕಲ್ ಸಮೀಪದಲ್ಲಿರುವ ಇಟಕಲ್ ಕೋಟೆಯು ಗ್ರಾಮರಕ್ಷಣಾಕೋಟೆಯಾಗಿದ್ದು ಇದರ ರಚನೆ
ಭಿನ್ನವಾಗಿದೆ. ತಳಪಾಯದಲ್ಲಿ ಕೇವಲ ಎರಡು ಅಡಿಯ ಕಲ್ಲಿನ ಗೋಡೆ ಇದ್ದು ಅದರ ಮೇಲೆ ಒಂದು ಶಹಾಬಾದ ಪರ್ಶಿಯಂತಹ ಕಲ್ಲನ್ನು ಹಾಕಿ ಅದರ ಮೇಲೆ ೨೦ರಿಂದ ೨೫ ಅಡಿ ಎತ್ತರದ ಮಣ್ಣಿನ ಗೋಡೆಯನ್ನು ನಿರ್ಮಿಸಲಾಗಿದೆ. ಇದರಲ್ಲಿ ಹಲವು ಬಗೆಯ ರಂಧ್ರಗಳನ್ನು ಕೊರೆಯಲಾಗಿದೆ ಇಡೀ ಗ್ರಾಮದ ಸುತ್ತಲು ಇರುವ ಈ ಕೋಟೆಯು ಕೆಲವು ಭಾಗಗಳಲ್ಲಿ ಮಾತ್ರ ಉಳಿದುಕೊಂಡಿದೆ ಇದರ ಕೆಲವು ಭಾಗಗಳನ್ನು ಕಲ್ಲಿನಿಂದ ಪುನರ್‌ನಿರ್ಮಿಸಲಾಗಿದೆ. ಆದರೆ ಗ್ರಾಮದ ಚರಂಡಿಯ ನೀರು ಕೋಟೆ ಗೋಡೆಯ ತಳಭಾಗದಿಂದ ಹರಿದು ಹೊರಗಡೆ ಬರುತ್ತದೆ.
ಒಟ್ಟಾರೆ ಯಾದಗಿರಿ ಜಿಲ್ಲೆಯಲ್ಲಿ ಬರುವ ಈ ಮಣ್ಣಿನ ಕೋಟೆಗಳು ಮಹತ್ವದ ಸ್ಥಾನವನ್ನು ಪಡೆದುಕೊಂಡಿವೆ. ಇವುಗಳ ಅಧ್ಯಯನಕ್ಕೆ ಇನ್ನೂ ಹೆಚ್ಚಿನ ಆಧಾರಗಳ ಅವಶ್ಯಕತೆ ಇದೆ. ಸ್ಥಳೀಯವಾಗಿ ಲಭ್ಯವಾಗುವ ಮಾಹಿತಿ ಹಾಗೂ ಕೋಟೆಯ ಕುರಿತು ರಚನೆಗೊಂಡ ಕೃತಿಗಳಿಂದ ನಮಗೆ ಸಾಮಾನ್ಯ ಮಾಹಿತಿ ಲಭ್ಯವಾಗುತ್ತದೆ. ಅದರಲ್ಲಿ ಗ್ರಾಮರಕ್ಷಣಾಕೋಟೆಯ ಬಗ್ಗೆ ಯಾವುದೇ ಸ್ಪಷ್ಟವಾದ ದಾಖಲೆಗಳು ಲಭ್ಯವಾಗುವುದಿಲ್ಲ. ಇವುಗಳನ್ನು ಕುರಿತು ಅಧ್ಯಯನ ಕಷ್ಟಕರವಾದುದು. ಆದರೂ ಕ್ಷೇತ್ರ ಅಧ್ಯಯನದಿಂದ ಇವುಗಳ ಮಾಹಿತಿಯನ್ನು ಇಲ್ಲಿ ಸಂಗ್ರಹಿಸಲಾಗಿದೆ.

ಸಹ ಪ್ರಾಧ್ಯಾಪಕರು, ಇತಿಹಾಸ ವಿಭಾಗ
ಸ್ನಾತಕೋತ್ತರ ಕೇಂದ್ರ, ಸರಕಾರಿ ಕಾಲೇಜು
ಗುಲಬರ್ಗಾ-೫೮೫೧೦೩.

ಆಧಾರಸೂಚಿ
೧.         Joshi S.K., Defence Architecture in Early Karnataka..
೨.         ಪಾಟೀಲ ಚನ್ನಬಸಪ್ಪ ಎಸ್., ಕರ್ನಾಟಕದ ಕೋಟೆಗಳು, ಕನ್ನಡ ವಿ.ವಿ. ಹಂಪಿ, ೧೯೯೯.
೩.  .J.N. Kamalpurkar, The Deccan Forts.
೪            Aruni S.K., Surapura Samsthana Historical and Archaeological Study poligar state in south India, Bharatiya Kala Prakashana, Delhi-2004

೫.         ಮುಡಬಿ ಗುಂಡೆರಾವ, ಸೇಡಂ ತಾಲ್ಲೂಕಿನ ಐತಿಹಾಸಿಕ ಸ್ಮಾರಕಗಳು.
೬.         ಎಂ.ಬಿ. ಪಾಟೀಲ, ಗುಲಬರ್ಗಾ ಜಿಲ್ಲಾ ಗ್ಯಾಸೆಟಿಯರ್.
೭.         ಡಾ. ಸಿ. ಮಹದೇವ, ವಿಜಯನಗರೋತ್ತರ ಕಾಲದ ಬಳ್ಳಾರಿ ಪ್ರದೇಶದ ಗ್ರಾಮ ರಕ್ಷಣಾ ವಾಸ್ತು ಮತ್ತು ರಾಜಕೀಯ ಸ್ಥಿತಿಗತಿ.
೮.         ಡಾ. ಶಂಭುಲಿಂಗವಾಣಿ, ರಕ್ಷಣಾ ವಾಸ್ತುಶಿಲ್ಪ, ಗುಲಬರ್ಗಾ ಜಿಲೆ, (ಅಪ್ರಕಟಿತ ಪಿಎಚ್‌ಡಿ ಪ್ರಬಂಧ)Gulbarga city and its Monuments (Unpublished M. Phil Thieses.
೯.         ಶ್ರೀಶೈಲ ಬಿರಾದಾರ, ಸೇಡಂ ಒಂದು ಸಾಂಸ್ಕೃತಿಕ ಅವಲೋಕನ, ಸಂಸ್ಕೃತಿ ಪ್ರಕಾಶನ, ಬಸವನಗರ, ಸೇಡಂ, ಗುಲ್ಬರ್ಗಾ-೨೦೦೫.



No comments:

Post a Comment