Tuesday, December 30, 2014

ಬೇತೂರಿನ ವಿಜಯಪಾಂಡ್ಯದೇವನ ಶಾಸನ

ದಾವಣಗೆರೆ ತಾಲ್ಲೂಕು ಬೇತೂರಿನ ವಿಜಯಪಾಂಡ್ಯದೇವನ ಅಪ್ರಕಟಿತ ಶಾಸನ
ಬುರುಡೇಕಟ್ಟೆ ಮಂಜಪ್ಪ
[ಶಕ 1033 ಖರಸಂವತ್ಸರ ಕ್ರಿ.ಶ. 1111 ಕಲ್ಯಾಣಿ ಚಾಲುಕ್ಯ ಚಕ್ರವರ್ತಿ ಜಗದೇಕಮಲ್ಲದೇವರು-ಆತನ ಮಹಾ ಮಾಂಡಳೇಶ್ವರ ವಿಜಯಪಾಂಡ್ಯದೇವರು - ಆತನ ಮಾಸಾಮಂತ ಹೆಮ್ಮಾಡಿ ಉದಿಯಾದಿತ್ಯ, ಆತನ ಪ್ರಧಾನ ದಂಡನಾಯಕ ಬಮ್ಮಯ್ಯನು ಬೇಲ್ತೂರ ದೇಮೇಶ್ವರ-ಸಂಗಮೇಶ್ವರ ದೇವಾಲಯಕ್ಕೆ ಭೂದಾನ ನೀಡಿ ಹಾಕಿಸಿದ ಶಾಸನ]
1 ಶ್ರೀ ನಮಸ್ತುಂಗ ಶಿರಶ್ಚುಂಬಿ ಚಂದ್ರ ಚಾಮರಚಾರವೇ ತ್ರೈಲೋಕ್ಯ ನಗರಾರಂಭ ಮೂಲ
2 ಸ್ತಂಭಾಯ ಶಂಭುವೇ ||ನಮಸ್ತುಂಗ ಜಟಾಜೂಟ ಚಂದ್ರ ಚಂದ್ರಿಕಾಬೋಗ ಭೂತಯೇ
3 ಭವಾನಿ ದೋರ್ಲತಾಯ ಗಾಢ ಪರಿರಂಭಾಯ ಸಂಭುವೇ || ಸ್ವಸ್ತಿ ಸಮಸ್ತ ಭುವನಾಶ್ರಯ
4 ಪ್ರಿಥ್ವೀವಲ್ಲಭ ಮಹಾರಾಜಾಧಿರಾಜ ರಾಜಪರಮೇಶ್ವರ ಪರಮ ಭಟ್ಟಾರಕ ಸತ್ಯಾಶ್ರಯ ಕುಳತಿಳ
5 ಕಂ ಚಾಳುಕ್ಯಾಭರಣ ಶ್ರೀಮತ್ ಪ್ರತಾಪಚಕ್ರವರ್ತಿ ಜಗದೇಕಮಲ್ಲದೇವರು ವಿಜಯ ರಾಜ್ಯರಾಜ್ಯ ಮುತ್ತರೋ
6 ತ್ತರಾಭಿವೃದ್ಧಿ ಪ್ರವರ್ಧಮಾನಮಾಚಂದ್ರಾರ್ಕ ತಾರಾಂಬರಂ ಸಲುಮಿತ್ತಮಿರೆ ತತ್ಪಾದ ಪದ್ಮೋಪಜೀವಿ
7 *ಸ್ವಸ್ತಿ ಸಮದಿಗತ ಪಂಚಮಹಾ ಶಬ್ಧ ಮಹಾಮಾಂಡಳೇಶ್ವರಂ ಕಾಂಚಿಪುರವರಾದೀಶ್ವರಂ ಯದುವಂಶಾಂಬರ ದ್ಯು
8 ಮಣಿ ಸುಭಟಚೂಡಾಮಣಿ ಮಣಿಮಹೇಂದ್ರ ಮಣಿಮುಕುಟ ಕೋಟಿವಿಘಟಿತ ನಿಜವಿಜಯ
ಕರಕಂಕಣಂ ಲೀಲಾಮಾತ್ರ ಸಾದಿತ ಸಪ್ತಕೊಂಕಣಂ ಕನಕ ನಗರ ಶಿಳಾತಳ ಸ್ತಾಪಿತ ಪಾಠೀನಲಾಂಛನಂ ಜ
9 ಯಸ್ತಂಭಂ ದೂರೀಕೃತಾರಾತಿ ವೀರಾವಶ್ಠಂ ತಾಂಬ್ರಪಣ್ರ್ನೀಕ್ತಂ ಮೌಕ್ತಿಕ ಮುಕ್ತಾನೇಕ ರತ್ನಾಕರಾ
10 ಮುದ್ರಾಂಕಿತ ಸಮುದ್ರ ಭಾಡಾಗಾರಂ ಸಾರಂ ಮಳಯಗಿರಿ ಚಂದನ ನಂದನ ಮದ್ಯಾದೇಶ £ವೇಶಿತ ಶೃ
11 ಂಗಾರಗಾರಂ ಕಿಂಕರೀಕೃತ ಚೂತವಿತಾಳಂ ಸ್ವೀಕೃತಾನೇಕ ರಿಪು ನೃಪತಿ ಮಂಡಳಂ ಹೇಳಾ ನೃಪಾಳ ವೇಳಾನೀತಿ
12 ಜಳಶೈಳದುರ್ಗನಂದಿ ಕೃತಾರಾತಿ ವೀರಮಾಂಡಳಿಕ ವರ್ಗಂ || ಶ್ರೀ ಶಂಕರನಾರಾಯಣ ಚರಣಾ ಸ್ಮರಣ
13 ಪರಿಣಿತಾಂತಕರಣ ಯಾದವಾಭರಣ ಪಾಂಡ್ಯ ಕುಳಕಮಳ ಮಾರ್ತಾಂಡಂ ಪರಿಚ್ಛೇದಿ ಗಂಡಂ ರಾ
14 ಜಿಗಚೋಳ ಮನೋಭಂಗ ಶ್ರೀಮಜ್ಜಗದೇಕ ಮಲ್ಲದೇವರ ಪಾದಾಬ್ಜಬೃಂಗ ನಾಮಾದಿ ಸಮಸ್ತ ಪ್ರಶಸ್ತಿ ಸಹಿತ ಶ್ರೀಮ
15 ನ್ ಮಹಾಮಾಂಡಳೇಶ್ವರಂ ಶ್ರೀ ವಿಜಯ ಪಾಂಡ್ಯದೇವರು ನೊಣಂಬವಾಡಿ ಮೂವತ್ತಿರ ಚ್ಛಾಸಿರಮಂ ದುಷ್ಟ £ಗ್ರಹ ಶಿಷ್ಟ ಪ್ರತಿಪಾಳನಂ ಮಾ
16 ಡಿ ಸುಖ ಸಂಕಥಾ ವಿನೋದದಿಂ ರಾಜ್ಯಂಗೆಯ್ಯುತ್ತ ಮಿರೆ ಶ್ರೀಮದುಚ್ಚಂಗಿಯ ನೆಲೆಬೀಡಿ£ಂ ಪ್ರಿಥ್ವೀ
17 ರಾಜ್ಯಂಗೆಯ್ಯುತ್ತಮಿರೆ ಚಮೂರಾಜ ಶ್ರೀಮನ್ಮಹಾ ಪ್ರಧಾನ ವಿಜಯಹೆಂಮಾಡಿ ದಂಡನಾಯಕರು
18 **************************************ಮ
19 ಲೆಯಾದಿರಾಜ ಮಹಾನಾಯಕ ಮಣಿ ವುದಿಯಾದಿತ್ಯನುಂ ನಾಯಕ ಬಮ್ಮಯ್ಯನು ಮ
20 **ಸಕವರಿಷ 1034ನೆಯ ಖರ ಸಂವತ್ಸರ ಮಾಘಬಹುಳ ಮಂಗಳವಾರ ಸೂ
21 ರ್ಯಗ್ರಹಣ ವ್ಯತೀಪಾತದಂದು ಹಿರಿಯ ಬೆಳ್ತೂರ ದೇಮೇಶ್ವರದೇವಗ್ರ್ಗೆ*****ಹಿರಿಯ ಕೆರೆಯ ಯೇರಿ
22 ಕೆಳಗೆ ಗದ್ದೆ ಮತ್ತರೊಂದು ಮೂಡಣಕೋಡಿಯ ಬಡಗಣ ಕೆಳಗೆ ಮತ್ತ
23 ರೆರಡು ಸಂಗಮೇಶ್ವರ ದೇವರಂಗ ಬೋಗಂಗಬೋಗ ಖಂಡಸ್ಫುಟಿತ ಜೀರ್ಣೋದ್ಧಾರಕ್ಕೆ ಸರ್ವನ
24 ಮಸ್ಯವಾಗಿ ಸಂಗಮೇಶ್ವರ ಪಂಡಿತಗ್ರ್ಗೆ ಧಾರಾಪೂರ್ವಕಂ ಮಾಡಿ ಕೊಟ್ಟರು|| ನ ವಿಶಂ
25 ವಿಷ ಮಿತ್ಯಾóಶು ದೇವಸ್ವಂ ವಿಷಮುಚ್ಛತೇ ವಿಷ ಮೇ ಕಾಕಿನಾಂ ಹಂತಿ ದೇವಸ್ವಂ
26 ಪುತ್ರ ಪೌತ್ರಕಂ | ವಿಂತೀ ಧರ್ಮವಂ ಪ್ರತಿಪಾಳಿಸುವಗ್ರ್ಗೆ ವಾರಣಾಸಿ ಕುರುಕ್ಷೇತ್ರದಲು
27 ಸಾಯಿರ ಕವಿಲೆಯಂ ವೇದಪಾರಂಗತರಪ್ಪ ಬ್ರಾಹ್ಮಣಗ್ರ್ಗೆ ಸೋಮಸೂರ್ಯ ಗ್ರಹಣದಂದು                                                          
28 ಮಹಾಪುರುಷನಕ್ಕು ಅದನ್ನಳಿದವರಾ ಮಹಹಾ ಪಾಪಿಯಕ್ಕು//ಸ್ವದತ್ತಾಂ ಪರದತ್ತಾಂ
29 ವಾ ಯೋ ಹರೇತಿ ವಸುಂಧರಾಂ ಷಷ್ಠಿರ್ವ***************** ಮಂಗಳ ಮಹಾ ಶ್ರೀ
ಶಾಸನದ ಮಹತ್ವ
ಚಾಲುಕ್ಯ ಚಕ್ರವರ್ತಿ ಒಂದನೇ ಪ್ರತಾಪ ಚಕ್ರವರ್ತಿ ಜಗದೇಕಮಲ್ಲನ ಮಹಾಮಾಂಡಳೇಶ್ವರನಾದ ಉಚ್ಚಂಗಿ ಪಾಂಡ್ಯರ ವಿಜಯಪಾಂಡ್ಯ ಒಬ್ಬನಲ್ಲ, ಇಬ್ಬರು ವಿಜಯ ಪಾಂಡ್ಯರು ಬರುತ್ತಾರೆಂಬ ಅಂಶವನ್ನು ಪ್ರಸ್ತುತಪಡಿಸುವುದೇ ಈ ಶಾಸನದ ಮಹತ್ವವಾಗಿದೆ.
ಮಹಾಮಾಂಡಳೇಶ್ವರ ಒಂದನೇ ವಿಜಯಪಾಂಡ್ಯನ ಶಾಸನ
ಚಾಳುಕ್ಯ ಚಕ್ರವರ್ತಿ ಒಂದನೆಯ ಪ್ರತಾಪಚಕ್ರವರ್ತಿ ಜಗದೇಕಮಲ್ಲನ ಆಳ್ವಿಕೆಯಲ್ಲಿ ಮಹಾಮಾಂಡಳೇಶ್ವರ ಮೊದಲನೇ ವಿಜಯಪಾಂಡ್ಯನ ಸಾಮಂತಾಧಿಪತಿ ಮಲೆಯಾದಿರಾಜ ವುದಿಯಾದಿತ್ಯ ಪೆರ್ಮಾಡಿದೇವನು ಆತನ ಪ್ರಚಂಡ ದಂಡನಾಯಕ ನಾಯಕಮಣಿ ಬಂಮಯ್ಯನು ಬೇಲ್ತೂರ ದೇಮೇಶ್ವರ ಮತ್ತು ಸಂಗಮೇಶ್ವರ ದೇವರ ಅಂಗಭೋಗರಂಗಭೋಗ, ಖಂಡಸ್ಫುಟಿತ ಜೀರ್ಣೋದ್ಧಾರಕ್ಕೆ ಹಿರಿಯ ಕೆರೆಯ ಕೆಳಗೆ ಭೂದಾನ ನೀಡಿ ಹಾಕಿಸಿದ ಶಾಸನ. ಕಾಲದ ಉಲ್ಲೇಖದಲ್ಲಿ ಸಕವರ್ಷ 1034 ಖರ ಸಂವತ್ಸರ ಮಂಗಳವಾರ ಸೂರ್ಯಗ್ರಹಣ ವ್ಯತೀಪಾತವಿದ್ದು ಖರ ಸಂವತ್ಸರವು ಸಕ 1033 ಆಗಿದ್ದು ಕ್ರಿ.ಶ. 1113 ಆಗುತ್ತದೆ. ಈ ಸಮಯದಲ್ಲಿ ಪ್ರತಾಪ ಚಕ್ರವರ್ತಿ ಇಮ್ಮಡಿ ಜಗದೇಕಮಲ್ಲನ ಆಳ್ವಿಕೆಯೂ ಆರಂಭವಾಗಿರುವುದಿಲ್ಲ. ಇಮ್ಮಡಿ ಜಗದೇಕಮಲ್ಲನ ಆಳ್ವಿಕೆಯ ಕಾಲ 1139ರಿಂದ 1150ರ ವರೆಗೆ. ಹಾಗಾದರೆ ಇಲ್ಲಿ ಬರುವ ಪ್ರತಾಪ ಚಕ್ರವರ್ತಿ ಜಗದೇಕಮಲ್ಲದೇವ ಮೊದಲನೆ ಜಗದೇಕಮಲ್ಲನಾಗಿದ್ದಾನೆ.
ಮಹಾಮಾಂಡಳೇಶ್ವರ ವಿಜಯಪಾಂಡ್ಯನ ಆಳ್ವಿಕೆಯ ಕಾಲ ಸು. ಕ್ರಿ.ಶ. 1168 ರಿಂದ 1208 ರವರಗೆ ಇಲ್ಲಿ ಬರುವ ಕಾಲಕ್ಕು ಈ ವಿಜಯಪಾಂಡ್ಯನಿಗೂ ಹೊಂದುವುದಿಲ್ಲ. ಶಾಸನಗಳ ಪ್ರಕಾರ ಕ್ರಿ.ಶ.1108 ಮತ್ತು 1110ರಲ್ಲಿ ವಿಜಯಪಾಂಡ್ಯನು ಜಗದೇಕಮಲ್ಲನ ಆಳ್ವಿಕೆಯಲ್ಲಿ ಮಹಾಮಾಂಡಳೇಶ್ವರನಾಗಿ ಆಳುತ್ತಿದ್ದ ಮಾಹಿತಿ ಸಿಗುತ್ತದೆ. ಹೀಗಾಗಿ ಇಲ್ಲಿ ಬರುವ ವಿಜಯಪಾಂಡ್ಯನನ್ನು ಮೊದಲನೇ ವಿಜಯಪಾಂಡ್ಯನೆಂದು ಹೇಳಬಹುದು. ಆದರೂ ಇದೇ ಅಂತಿಮವಲ್ಲ. ಬಾಗಳಿ ಕ್ರಿ.ಶ.1108 (ಹರಪ-180), ಬಾಗಳಿ, ಕ್ರಿ.ಶ.1110 (ಹರಪ-181), ಚಿತ್ರದುರ್ಗ ಕ್ರಿ.ಶ.1124 (ಚಿತ್ರ-13), ಹಾಗು ಪ್ರಸ್ತುತ ಬೇತೂರು ಕ್ರಿ.ಶ.1113 (ದಾವಣ-ಬು.ಮ) ಶಾಸನಗಳ ಪ್ರಕಾರ ಕ್ರಿ.ಶ.1108 ರಿಂದ 1124ರವರೆಗೆ ಒಂದನೇ ವಿಜಯಪಾಂಡ್ಯ ಆಳ್ವಿಕೆ ಮಾಡಿದ್ದನೆಂಬ ಅಂಶ ಕಂಡುಬರುತ್ತದೆ.
ಆದರೆ ಈ ಸಂದರ್ಭದಲ್ಲಿ ಕಲ್ಯಾಣ ರಾಜ್ಯದ ಚಕ್ರವರ್ತಿ ಆರನೇ ವಿಕ್ರಮಾದಿತ್ಯನಾಗಿದ್ದು ಪ್ರತಾಪ ಚಕ್ರವರ್ತಿ ಜಗದೇಕಮಲ್ಲನೆಂಬ ಹೆಸರಿನ ಆತನ ಸಹೋದರನೋ, ಸಾಮಂತನೋ ಇದ್ದಿರಬೇಕು ಅಥವಾ ಆರನೇ ವಿಕ್ರಮಾದಿತ್ಯನಿಗೇ ಈ ಬಿರುದು ಇತ್ತೇ ಎಂಬುದನ್ನು ಶೋಧಿಸಬೇಕಾಗಿದೆ.
 `ಕುಂಭಶ್ರೀ’, 789/11, ಜಯನಗರ `ಎ’ ಬ್ಲಾಕ್, ದಾವಣಗೆರೆ-577004.

No comments:

Post a Comment