Wednesday, December 24, 2014

ನವಶಿಲಾಯುಗದ ನೆಲೆ ಬೆನಕನಮಟ್ಟಿ

ನವಶಿಲಾಯುಗದ ನೆಲೆ ಬೆನಕನಮಟ್ಟಿ: ಒಂದು ಟಿಪ್ಪಣಿ
ಡಾ. ಸಿ. ಮಹದೇವ
ಧಾರವಾಡಕ್ಕೆ ಸಮೀಪದಲ್ಲಿರುವ ಚಂದನಮಟ್ಟಿ ಗ್ರಾಮಕ್ಕೆ ಸೇರಿದ ಬೆನಕನಮಟ್ಟಿ ವಿಶಾಲವಾದ ಬಯಲಿನ ನಡುವೆ ಇರುವ ಗುಡ್ಡಪ್ರದೇಶ. ಇದು ಚಂದನಮಟ್ಟಿ ಗ್ರಾಮದಿಂದ ದಕ್ಷಿಣಕ್ಕೆ 1 ಕಿ.ಮೀ. ಅಂತರದಲ್ಲಿದೆ. ಮಟ್ಟಿ ಸುತ್ತಲೂ ಹೊಲಗಳಿವೆ. ಧಾರವಾಡ ಜಿಲ್ಲೆಯ ದೇವಾಲಯಗಳ ಸರ್ವೇಕ್ಷಣೆ ಮತ್ತು ದಾಖಲಾತಿ ಸಂದರ್ಭದಲ್ಲಿ ಬೆನಕನಮಟ್ಟಿಯ ನೆತ್ತಿಯಲ್ಲಿರುವ ಪರ್ವತ ಮಲ್ಲಯ್ಯನ ಗುಡಿಗೆ ಹೋದಾಗ ಆಶ್ಚರ್ಯವೇ ಕಾದಿತ್ತು. ಈಗ್ಗೆ ಕೆಲವು ದಶಕಗಳ ಹಿಂದೆ ನಿರ್ಮಿಸಿದ ಈ ಕೊಠಡಿಯಲ್ಲಿ ಸಣ್ಣ ಲಿಂಗವನ್ನು ಪ್ರತಿಷ್ಠಾಪಿಸಿದ್ದಾರೆ. ಲಿಂಗದ ಮುಂದಿಟ್ಟಿರುವ ನಚಿiÀು ಮಾಡಿದ ಆರು ಶಿಲಾಕೊಡಲಿಗಳು ಮತ್ತು ಕವಣೆಕಲ್ಲು ನವಶಿಲಾಯುಗ ಸಂಸ್ಕøತಿ ಕಾಲಕ್ಕೆ ಸೇರಿದ ಆಯುಧೋಪಕರಣಗಳಾಗಿದ್ದವು. ಇವುಗಳನ್ನು ಕಪ್ಪು ಟ್ರ್ಯಾಪ್ ಮತ್ತು ಬಸಾಲ್ಟ್ ಶಿಲೆಯಲ್ಲಿ ಮಾಡಲ್ಪಟ್ಟಿದೆ. ಇವು ಮಟ್ಟಿಯ ತಪ್ಪಲಿನ ಹೊಲಗಳಲ್ಲಿ ಉಳುಮೆಯ ಸಂದರ್ಭದಲ್ಲಿ ರೈತರಿಗೆ ದೊರೆತಿವೆ. ಇವುಗಳ ನಯಗಾರಿಕೆ ಮತ್ತು ಆಕಾರಕ್ಕೆ ಮನಸೋತ ರೈತರು ಲಿಂಗದ ಮುಂದಿಟ್ಟು ಪೂಜಿಸುತ್ತಿದ್ದಾರೆ. ಇದಲ್ಲದೆ ಸೂಕ್ಷ್ಮರಚನೆಯ ಶಿಲಾಕುಡಿಕೆಯೊಂದು ದೊರೆತಿದ್ದು, ಅದರ ಮುಖಭಾಗದಲ್ಲಿ ನಿಂತಿರುವ ಮೂವರು ಸ್ತ್ರೀಯರ ಸೂಕ್ಷ್ಮ ರಚನೆಗಳನ್ನು ಬಿಡಿಸಲಾಗಿದೆ. ಇದು ಸಹ ತಪ್ಪಲಿನ ಹೊಲದಲ್ಲಿ ದೊರೆತಿದೆ. ಇದನ್ನು ಖಾತರಿಪಡಿಸಿಕೊಳ್ಳಲು ಮರುದಿನ ಗುಡ್ಡದ ಸುತ್ತ ಅನ್ವೇಷಣೆ ನಡೆಸಲಾಯಿತು. ಆದರೆ ಫಲವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕವಣೆಕಲ್ಲುಗಳು ಹಾಗೂ ಭಗ್ನಗೊಂಡ ಶಿಲಾಕೊಡಲಿಗಳು ದೊರೆತವು. ಈ ಶಿಲಾಯುಧೋಪಕರಣಗಳನ್ನು ಹೆಬ್ಬಳ್ಳಿ ಮುದುಕಪ್ಪ ಶಾಲಿ ಮತ್ತು ಗಂಗಪ್ಪ ದೇಸಾಯಿ ಅವರ ಹೊಲಗಳಿಂದ ಸಂಗ್ರಹಿಸಲಾಗಿದೆ. ಈ ಹೊಲಗಳು ಮಟ್ಟಿಯ ಸುತ್ತಲೂ ಇದ್ದು, ಇಳಿಜಾರಾಗಿವೆ. ಟ್ರಾಕ್ಟರ್‍ನಿಂದ ಉಳುಮೆ ಮಾಡುವಾಗ ಆಯುಧೋಪಕರಣಗಳು ಮೇಲೆ ಬರುತ್ತವೆಂದು ಅದಕ್ಕೆ ಸಿಲುಕಿದ ಆಯುಧಗಳು ಒಡೆದಿವೆ ಎಂದು ರೈತ ಗಂಗಪ್ಪ ದೇಸಾಯಿಯವರು ತಿಳಿಸುತ್ತಾರೆ. ಇವರು ಲಿಂಗದ ಮುಂದಿಟ್ಟಿರುವ ಆಯುಧಗಳನ್ನು ಸಂಗ್ರಹಿಸಿದ್ದಾರೆ. ಬೆನಕನಮಟ್ಟಿಯು ಜಾಲಿಮರಗಳಿಂದ ಕೂಡಿದೆ. ಮಟ್ಟಿಯ ಮೇಲೆ ನಿಂತು ನೋಡಿದರೆ ಸುತ್ತಲೂ ವಿಶಾಲವಾದ ಬಯಲು ಕಾಣುವುದು. ನವಶಿಲಾಯುಗ ಕಾಲದ ಮಾನವನಿಗೆ ರಕ್ಷಣೆಯ ದೃಷ್ಟಿಯಿಂದ ಮಹತ್ವದ ಸ್ಥಳವಿದು. ಬಳ್ಳಾರಿ, ರಾಯಚೂರು ಪ್ರದೇಶಗಳಂತೆ ಇಲ್ಲಿ ಗ್ರಾನೈಟ್ ಬೆಟ್ಟಗುಡ್ಡಗಳಿಲ್ಲ. ಈ ಪ್ರದೇಶದಲ್ಲಿ ಇಂತಹ ಎತ್ತರವಾದ ಮಟ್ಟಿ ಅಥವಾ ಗುಡ್ಡಗಳೇ ನವಶಿಲಾಯುಗ ಕಾಲದ ಜನರಿಗೆ ಆಸರೆಯಾಗಿರುವುದು ಗಮನಾರ್ಹ. ಬೆನಕನಮಟ್ಟಿಯಲ್ಲಿ, ಗುಡ್ಡದ ನೆತ್ತಿಯ ಇಳಿಜಾರಿನ ಪೂರ್ವಭಾಗದಲ್ಲಿ ತಗ್ಗಾದ ಸ್ಥಳವಿದೆ. ಈ ತಗ್ಗುಸ್ಥಳವು ಹೊರಗಿನಿಂದ ಬರುವವರಿಗೆ ಕಾಣಿಸುವುದಿಲ್ಲ. ಗುಡ್ಡವನ್ನು ಏರಿದ ನಂತರ ಗೋಚರಿಸುತ್ತದೆ. ಹಾಗಾಗಿ ಇದು ಪ್ರಾಕೃತಿಕವಾಗಿ ರಕ್ಷಣಾತಾಣವಾಗಿದ್ದು, ಕಲ್ಲಾಸರೆಯಿಂದ ಕೂಡಿದೆ. ಸ್ಥಳೀಯರು ಈ ಕಲ್ಲಾಸರೆಯನ್ನು ಗವಿ ಎನ್ನುತ್ತಾರೆ. ಅಂದರೆ ಇನ್ನೂ ಒಳಗೆ ಸುರಂಗದಂತಿದ್ದ ಗವಿಯ ದ್ವಾರವನ್ನು ಸ್ಥಳೀಯ ದನಗಾಹಿಗಳು ಕಲ್ಲು ತುಂಬಿ ಮುಚ್ಚಿದ್ದಾರೆಂದು ಅಕ್ಕಪಕ್ಕದ ಹೊಲದ ರೈತರು ತಿಳಿಸುತ್ತಾರೆ. ಸದ್ಯ ಹೊರಕಾಣುವ ಕಲ್ಲಾಸರೆಯಲ್ಲಿ ನಾಲ್ಕೈದು ಜನರು ಮಳೆ, ಗಾಳಿ ಮತ್ತು ಬಿಸಿಲುಗಳಿಂದ ರಕ್ಷಣೆ ಪಡೆಯಬಹುದಾಗಿದೆ. ಆದರೆ ಇಲ್ಲಿ ಯಾವುದೇ ಬಗೆಯ ವ್ಮಡಿಕೆ ಚೂರುಗಳು ಕಂಡುಬರುವುದಿಲ್ಲ. ಈ ಕುರಿತು ಹೆಚ್ಚಿನ ಶೋಧನೆ ನಡೆಯಬೇಕಾಗಿದೆ. ಮೇಲೆ ತಿಳಿಸಿದಂತೆ ಸುರಂಗದ ದ್ವಾರಕ್ಕೆ ಮುಚ್ಚಿರುವ ಕಲ್ಲುಗಳನ್ನು ತೆಗೆದಲ್ಲಿ ಇನ್ನು ಹೆಚ್ಚಿನ ಮಾಹಿತಿಗಳು ದೊರೆಯುವ ಸಾಧ್ಯತೆಯುಂಟು. ಗುಡ್ಡದಿಂದ 2 ಪರ್ಲಾಂಗ್‍ಗಳ ಅಂತರದಲ್ಲಿ ಹಳ್ಳಗಳು ಹರಿಯುತ್ತವೆ. ಗುಡ್ಡದ ಈಶಾನ್ಯಕ್ಕೆ ಒಂದು ಪರ್ಲಾಂಗ್ ದೂರದಲ್ಲಿ ಸಣ್ಣ ಕೆರೆಯೊಂದಿದೆ. ಇದರ ಪ್ರಾಚೀನತೆಯನ್ನು ತಿಳಿಯುವುದು ಅವಶ್ಯವಿದೆ. ದೊರೆತಿರುವ ನಚಿiÀು ಮಾಡಿದ ಶಿಲಾಕೊಡಲಿಗಳು, ಕವಣೆಕಲ್ಲುಗಳು, ಕಲ್ಲಾಸರೆ, ನೀರಿನ ಮೂಲಗಳು ನವಶಿಲಾಯುಗ ಕಾಲದ ಮಾನವನ ವಸತಿ ನೆಲೆಯಾಗಿತ್ತೆಂದು ಸ್ಪಷ್ಟವಾಗುತ್ತದೆ.
ಗುಡಿಯಲ್ಲಿ ಲಿಂಗದ ಮುಂದಿರುವ ಶಿಲಾಕೊಡಲಿಗಳು ಮೂರರಿಂದ ಏಳು ಅಂಗುಲ ಉದ್ದವನ್ನು ಹೊಂದಿವೆ. ಮೂರು ಅಂಗುಲದ್ದು ಕಪ್ಪು ಟ್ರ್ಯಾಪ್‍ಕಲ್ಲಿನದು ಹಾಗೂ ಹೆಚ್ಚು ಹೊಳಪುಳ್ಳದ್ದು. ಉಳಿದ ಕೊಡಲಿಗಳು ಬಸಾಲ್ಟ್ ಶಿಲೆಯವು. ಕೊಡಲಿಗಳು ರಚನೆಯಲ್ಲಿ ಪ್ರಮಾಣಬದ್ದವಾಗಿದ್ದು, ಉನ್ನತ ತಂತ್ರಜ್ಞಾನವನ್ನು ಪ್ರಕಟಮಾಡುತ್ತವೆ. ಎರಡು ಬದಿಗಳಲ್ಲಿ ಏಕರೂಪದ ನಯಗಾರಿಕೆಯನ್ನು ಕಾಣಬಹುದು. ಈ ಆಯುದೋಪಕರಣಗಳು ರಾಯಚೂರು, ಬಳ್ಳಾರಿ ಪ್ರದೇಶದಲ್ಲಿ ದೊರೆಯುವ ಆಯುಧೋಪಕರಣಗಳಿಗಿಂತ ಹೆಚ್ಚು ಹೊಳಪಿನವು ಹಾಗೂ ಉತ್ಕøಷ್ಟವೂ ಆಗಿವೆ. ನವಶಿಲಾಯುಗ ಸಂಸ್ಕøತಿಯ ಹೆಚ್ಚಿನ ನೆಲೆಗಳು ಬಳ್ಳಾರಿ, ರಾಯಚೂರು ಪ್ರದೇಶದಲ್ಲಿವೆ. ಕೃಷ್ಣ ಮತ್ತು ತುಂಗಭದ್ರಾ ನದಿಗಳ ಪರಿಸರದಲ್ಲಿ ಅನೇಕ ನೆಲೆಗಳನ್ನು ಗುರುತಿಸಿ ಉತ್ಖನನ ಮಾಡಲಾಗಿದೆ. ಇದೀಗ ಧಾರವಾಡ ತಾಲೂಕಿನ ಬೆನಕನಮಟ್ಟಿಯಲ್ಲಿ ನವಶಿಲಾಯುಗ ಕಾಲದ ಆಯುಧೋಪಕರಣಗಳು ದೊರೆತ ಪರಿಣಾಮವಾಗಿ ಆ ಕ್ಷೇತ್ರದ ಅಧ್ಯಯವನ್ನು ವಿಸ್ತರಿಸಿದಂತಾಗಿದೆ. ಈ ಭಾಗದಲ್ಲಿ ಈಗಲೂ ಜಿಂಕೆ, ಕರಡಿ, ಚಿರತೆ, ನರಿ ಮತ್ತಿತರ ಕಾಡು ಪ್ರಾಣಿಗಳನ್ನು ಕಾಣಬಹುದು. ಒಂದು ಕಾಲಕ್ಕೆ ಈ ಪ್ರದೇಶ ಅಪಾರವಾದ ಪ್ರಾಣಿಸಂಪತ್ತನ್ನು ಹೊಂದಿತ್ತೆಂದು ಗ್ರಹಿಸಬಹುದಾಗಿದೆ.
ಬೆನಕನಮಟ್ಟಿಯ ತಪ್ಪಲಿನಲ್ಲಿ ಆದಿ ಇತಿಹಾಸ ಕಾಲದ ಮಡಿಕೆ ಚೂರುಗಳು ದೊರೆಯುತ್ತವೆ. ಇವು ಚಿತ್ರಿತ ಕೆಂಪುವರ್ಣದವು. ಅಂದರೆ ಶಾತವಾಹನರ ಕಾಲಕ್ಕೆ ಸೇರುತ್ತವೆ. ಈ ಮೊದಲೇ ತಿಳಿಸಿದ ಲಿಂಗದ ಮುಂದಿರುವ ಸೂಕ್ಷ್ಮ ರಚನೆಯ ಕುಡಿಕೆಯ ಮೇಲೆ ಮೂವರು ಸ್ತ್ರೀಯರ ಸೂಕ್ಷ್ಮಶಿಲ್ಪಗಳಿದ್ದು, ಇದು ಸಹ ಆದಿ ಇತಿಹಾಸ ಕಾಲದ ರಚನೆ ಎನ್ನಬಹುದು. ವಾಸ್ತವವಾಗಿ ಇಲ್ಲಿ ಹಳೆ ಊರಿದ್ದು, ಸಾಂಕ್ರಾಮಿಕ ರೋಗಗಳಿಂದಾಗಿ ಹಾಳು ಬಿದ್ದಿತೆಂದು, ಅಲ್ಲಿನ ಜನರು ಸಮೀಪದ ಚಂದನಮಟ್ಟಿ ಗ್ರಾಮದಲ್ಲಿ ನೆಲೆಸಿದರೆಂದು ಸ್ಥಳೀಯರು ತಿಳಿಸುತ್ತಾರೆ. ಹೀಗೆ ಬೆನಕನಮಟ್ಟಿ ನೆಲೆಯಲ್ಲಿ ನವಶಿಲಾಯುಗ ಕಾಲದಿಂದಲೂ ಮಾನವನ ಅಸ್ತಿತ್ವವನ್ನು ಗುರುತಿಸಬಹುದು. ಅಲ್ಲಿ ದೊರೆತಿರುವ ನವಶಿಲಾಯುಗ ಮತ್ತು ಆದಿ ಇತಿಹಾಸ ಕಾಲದ ವಸ್ತು ಅವಶೇಷಗಳು ಧಾರವಾಡ ಪ್ರದೇಶದ ಪ್ರಾಗಿತಿಹಾಸದ ಅಧ್ಯಯನ ವ್ಯಾಪ್ತಿಯನ್ನು ವಿಸ್ತರಿಸಿವೆ ಹಾಗೂ ಮುಂದಿನ ಶೋಧನೆಗಳಿಗೆ ಅನುವು ಮಾಡಿಕೊಟ್ಟಿವೆ.
[ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಸಹಕರಿಸಿದ ಚಂದನಮಟ್ಟಿಯ ಗ್ರಾಮಸ್ಥರಾದ ಸೋಮಲಿಂಗಪ್ಪ ತಲವಾಯಿ, ಗಂಗಪ್ಪ ದೇಸಾಯಿ, ಯಲ್ಲಪ್ಪ ಎಡಳ್ಳಿ ಮತ್ತು ಚಂದ್ರು ಭಂಡಾರಗಟ್ಟಿ ಇವರುಗಳನ್ನು ಪ್ರೀತಿಯಿಂದ ನೆನೆಯುತ್ತೇನೆ.]

ಆಧಾರಸೂಚಿ ಮತ್ತು ಟಿಪ್ಪಣಿಗಳು
1. ಧಾರವಾಡ ಜಿಲ್ಲಾ ಗ್ಯಾಸೆಟಿಯರ್: ಗ್ಯಾಸೆಟಿಯರ್ ಇಲಾಖೆ, ಬೆಂಗಳೂರು.
2. ಶಿವತಾರಕ್ ಕೆ.ಬಿ: ಕರ್ನಾಟಕದ ಪುರಾತತ್ವ ನೆಲೆಗಳು, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ.
3. ಅ. ಸುಂದರ: ಕರ್ನಾಟಕ ಚರಿತ್ರೆ ಸಂಪುಟ 1, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ.
4. ಸಂಕಾಲಿಯಾ ಎಚ್.ಡಿ: ಪ್ರಿ ಅಂಡ್ ಪ್ರೋಟೊ ಹಿಸ್ಟಿರಿ ಆಫ್ ಇಂಡಿಯಾ ಅಂಡ್ ಪಾಕಿಸ್ತಾನ್.

 ಪ್ರಾಧ್ಯಾಪಕರು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ 583 276

No comments:

Post a Comment