Sunday, December 14, 2014

ನಲಿಗಾನಹಳ್ಳಿಯಲ್ಲಿ ದೊರೆತ ಬೃಹತ್ ಶಿಲಾಯುಗದ ನೆಲೆ


ಪಾವಗಡ ತಾಲ್ಲೂಕಿನ ನಲಿಗಾನಹಳ್ಳಿಯಲ್ಲಿ ದೊರೆತ ಬೃಹತ್ ಶಿಲಾಯುಗದ ನೆಲೆ
ಧನುಂಜಯ ಸಿ.
ನವಶಿಲಾಯುಗದ ಜನರು ಬೃಹದಾಕಾರದ ಕಲ್ಲುಚಪ್ಪಡಿ ಗಳನ್ನು ಬಳಸಿ ಸಮಾಧಿಗಳನ್ನು ನಿರ್ಮಿಸುತ್ತಿದ್ದರಿಂದ ಈ ಯುಗವನ್ನು ಬೃಹತ್ ಶಿಲಾಯುಗ ಎಂದು ಕರೆಯುತ್ತಾರೆ. ಕರ್ನಾಟಕದಾದ್ಯಂತ ಬೃಹತ್ ಶಿಲಾಯುಗದ ಅನೇಕ ನೆಲೆಗಳು ಪತ್ತೆಯಾಗಿವೆ. ಹಾಗೆಯೇ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಬೃಹತ್ ಶಿಲಾಯುಗಕ್ಕೆ ಸಂಬಂಧಪಟ್ಟಿರುವ ಹಲವಾರು ನೆಲೆಗಳು ಸಂಶೋಧಕರಿಂದ ಬೆಳಕಿಗೆ ಬಂದಿವೆ. ಅವುಗಳಲ್ಲಿ ಬಸವನಬೆಟ್ಟ, ಕನಿಕಲಬಂಡೆ, ತಪ್ಪಗಾನದೊಡ್ಡಿ, ಪಳವಳ್ಳಿ, ವೈ.ಎನ್.ಹೊಸಕೋಟೆ, ಯಲ್ಲಪ್ಪನಾಯಕನಹಳ್ಳಿ, ಬೂದಿಬೆಟ್ಟ, ಮರಿದಾಸನಹÀಳ್ಳಿ, ರಾಚಮಾರನಹಳ್ಳಿ,1 ಮುಂತಾದವು ಪ್ರಮುಖವಾಗಿವೆ.
ಶೃಂಗೇರಿಯಲ್ಲಿ ಸಮಾವೇಶಗೊಂಡಿದ್ದ ಕರ್ನಾಟಕ ಇತಿಹಾಸ ಅಕಾಡೆಮಿಯ 26ನೇ ವಾರ್ಷಿಕ ಸಮ್ಮೇಳನದಲ್ಲಿ ನನ್ನ ಕ್ಷೇತ್ರಕಾರ್ಯಕ್ಕೆ ಸಹಕರಿಸಿದ ಗೆಳೆಯನಾದ ರವೀಶ್ ಜಿ.ಎನ್. ಅವರು ಪಾವಗಡ ತಾಲೂಕಿನಲ್ಲಿ ಇತ್ತೀಚೆಗೆ ದೊರೆತ ಕೆಲವು ಪ್ರಾಗೈತಿಹಾಸಿಕ ನೆಲೆಗಳು ಎಂಬ ಲೇಖನವನ್ನು ಮಂಡಿಸಿದ್ದಾರೆ. ಇದರಲ್ಲಿ ನಲಿಗಾನಹಳ್ಳಿಯ ಪೂರ್ವ ದಿಕ್ಕಿನಲ್ಲಿರುವ ಕೆಲವು ಬೃಹತ್ ಶಿಲಾಯುಗ ನೆಲೆಗಳ ಜೊತೆಗೆ ನಲಿಗಾನಹಳ್ಳಿಯ ಈಶಾನ್ಯ ದಿಕ್ಕಿನಲ್ಲಿರುವ ಬೃಹತ್ ಶಿಲಾಯುಗದ ಸಮಾಧಿಗಳನ್ನು ಸೇರಿಸಿಕೊಂಡಿದ್ದು, ಅವರು ಕೇವಲ ಇಲ್ಲಿ ದೊರೆತಿರುವ ಪ್ರಾಚ್ಯಾವಶೇಷಗಳನ್ನು ಮಾತ್ರ ತಿಳಿಸಿರುತ್ತಾರೆ. ಆದರೆ ನಾನು ಈ ಲೇಖನದಲ್ಲಿ ನಲಿಗಾನಹಳ್ಳಿ ಗ್ರಾಮದ ಈಶಾನ್ಯ ಭಾಗದಲ್ಲಿರುವ 24 ಬೃಹತ್ ಶಿಲಾಸಮಾಧಿಗಳ ಕುರಿತು ಸಂಪೂರ್ಣವಾಗಿ ತಿಳಿಸುವ ಪ್ರಯತ್ನ ಈ ಲೇಖನದ್ದಾಗಿದೆ.
ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಕಸಬಾ ಹೋಬಳಿಯ ನಲಿಗಾನಹಳ್ಳಿ ಗ್ರಾಮದ ಈಶಾನ್ಯ ಭಾಗಕ್ಕೆ 1 ಕಿ.ಮೀ. ದೂರದಲ್ಲಿ ಬೃಹತ್ ಹೆಬ್ಬಂಡೆಯ ಗುಡ್ಡದ ಮುಂಭಾಗದಲ್ಲಿ ಬೃಹತ್ ಶಿಲಾಯುಗದ 24 ಸಮಾಧಿಗಳನ್ನು ಪತ್ತೆ ಹಚ್ಚಲಾಗಿದೆ. ಈ 24 ಸಮಾಧಿಗಳಲ್ಲಿ ಒಂದು ಕಿಂಡಿ ಕೋಣೆ ಸಮಾಧಿ, 3 ಸ್ವಸ್ತಿಕ್ ಮಾದರಿಯವು, 7 ಚಪ್ಪಟೆಯಾಕಾರದ ಬಂಡೆ ಸಮಾಧಿಗಳು, 3 ಚಿಕ್ಕ ನಿಲುಸುಗಲ್ಲು ಮಾದರಿಯವು. ಇನ್ನುಳಿದ ಎಲ್ಲಾ ಸಮಾಧಿಗಳು ವೃತ್ತಾಕಾರದ ಉಂಡೆಗಲ್ಲು ಸಮಾಧಿಗಳಾಗಿವೆ.
ಕಿಂಡಿಕೋಣೆ ಸಮಾಧಿಯು ಆಯತಾಕಾರವಾಗಿದ್ದು, ಸಮಾಧಿಯ ಪೂರ್ವದಿಕ್ಕಿಗೆ ಕಿಂಡಿಯಿರುವುದು ಕಂಡುಬರುತ್ತದೆ. ಇದು ಪೂರ್ವ ಪಶ್ಚಿಮವಾಗಿ 7 ಅಡಿ ಉದ್ದವಿದ್ದು, ಉತ್ತರ ದಕ್ಷಿಣವಾಗಿ 4 ಅಡಿ ಅಗಲವಾಗಿದೆ. ಈ ಸಮಾಧಿಯು ನಿಧಿಗಳ್ಳರ ಕೃತ್ಯಕ್ಕೆ ಒಳಗಾಗಿ ನಾಶವಾಗಿದೆ. ಹಾಗೆಯೇ ಈ ಸ್ವಸ್ತಿಕ್ ಆಕಾರದ ಸಮಾಧಿಗಳು ಆಯತಾಕಾರವಾಗಿದ್ದು, ನಾಲ್ಕು ಬಂಡೆಗಳನ್ನು ಒಂದಕ್ಕೊಂದು ಒರಗಿಸಿ ಇಟ್ಟಂತೆ ನಿರ್ಮಿಸಲಾಗಿದ್ದು, ಈ ಮೂರು ಸಮಾಧಿಗಳು ಸುಸ್ಥಿತಿಯಲ್ಲಿವೆ. ಇವುಗಳಲ್ಲಿ ಒಂದು ಪೂರ್ವ ಪಶ್ಚಿಮವಾಗಿ 9 ಅಡಿ ಉದ್ದ, ಉತ್ತರ ದಕ್ಷಿಣವಾಗಿ 6.5 ಅಡಿ ಅಗಲವಾಗಿದೆ. ಇನ್ನುಳಿದ 2 ಸಮಾಧಿಗಳು ಸುಮಾರು 6 ಅಡಿ ಉದ್ದ, 4 ಅಡಿ ಅಗಲವಾಗಿವೆ. ಇವುಗಳನ್ನು ಭೂಮಿಯಲ್ಲಿ 3 ರಿಂದ 4 ಅಡಿ ಆಳಕ್ಕೆ ಅಗೆದು ನಿರ್ಮಿಸಿರುವುದು ಕಂಡುಬರುತ್ತದೆ. ಹಾಗೆಯೇ ಚಪ್ಪಟೆಯಾಕಾರದ ಬಂಡೆ ಸಮಾಧಿಗಳನ್ನು ಭೂಮಿಯಲ್ಲಿ ಸುಮಾರು 3 ರಿಂದ 4 ಅಡಿ ಆಳಕ್ಕೆ ಅಗೆದು ಅದರÀ ಮೇಲೆ ಬೃಹತ್ ಆದ ಚಪ್ಪಟೆಯಾಕಾರದ ಹಾಸುಗಲ್ಲನ್ನು ಹಾಕಿ ಮುಚ್ಚಿರುವಂತೆ ನಿರ್ಮಾಣ ಮಾಡಲಾಗಿದೆ. ಈ ಹಾಸುಗಲ್ಲು ಸುಮಾರು 7 ಅಡಿ ಉದ್ದ 6 ಅಡಿ ಅಗಲವಾಗಿದ್ದು. 1.5 ಅಡಿ ದಪ್ಪವಾಗಿದೆ. ಇವುಗಳಲ್ಲಿಯೂ ಕೆಲವು ಸುಸ್ಥಿತಿಯಲ್ಲಿದ್ದು ಮತ್ತೆ ಕೆಲವು ಹಾಳಾಗಿವೆ. ಅದೇ ರೀತಿ 3 ನಿಲುಸುಗಲ್ಲು ಮಾದರಿಯ ಸಮಾಧಿಗಳಿದ್ದು, ಶವಗಳನ್ನು ಭೂಮಿಯಲ್ಲಿ ಹೂತಿಟ್ಟು ಅದರ ಮೇಲೆ ಹಾಸುಗಲ್ಲನ್ನು ಹಾಸಿ, ಅದರ ಮೇಲೆ ಸುಮಾರು 2ರಿಂದ 3 ಅಡಿ ಎತ್ತರದ ಚಿಕ್ಕ ನಿಲುಸುಗಲ್ಲನ್ನು ಇಟ್ಟು ನಿರ್ಮಿಸಿರುವುದು ಕಂಡುಬರುತ್ತದೆ. ಇವು ಗಾತ್ರದಲ್ಲಿ ಸ್ವಲ್ಪ ಚಿಕ್ಕದಾಗಿರುವುದರಿಂದ ಬಹುಶಃ ಇವು ಚಿಕ್ಕಮಕ್ಕಳ ಸಮಾಧಿಗಳಾಗಿರÀಬಹುದು. ಹಾಗೆಯೇ ವೃತ್ತಾಕಾರದ ಉಂಡೆಗಲ್ಲು ಸಮಾಧಿಗಳು ಬಹಳಷ್ಟಿದ್ದು, ಇವುಗಳು ವಿಸ್ತೀರ್ಣದಲ್ಲಿ ದೊಡ್ಡದಾಗಿವೆ. ಇಲ್ಲಿ ಉಂಡೆಗಲ್ಲುಗಳನ್ನು ವೃತ್ತಾಕಾರವಾಗಿಟ್ಟು, ಮಧ್ಯಭಾಗದಲ್ಲಿ ಶವವನ್ನು ಮುಚ್ಚಿ ಅದರ ಮೇಲೆ ಬೃಹತ್ ಗಾತ್ರದ ಹಾಸುಗಲ್ಲನ್ನು ಹಾಸಿ ನಿರ್ಮಿಸಿರುವುದು ಕಂಡುಬರುತ್ತದೆ. ಇವುಗಳಲ್ಲಿಯೂ ಸಹ ಕೆಲವು ಹಾಳಾಗಿದ್ದು, ಇನ್ನೂ ಕೆಲವು ಸುಸ್ಥಿತಿಯಲ್ಲಿವೆ.
ಈ ಸಮಾಧಿಗಳನ್ನು ಅಗೆದಿರುವ ಮಣ್ಣಿನಲ್ಲಿ ಕಪ್ಪು ಮತ್ತು ಕೆಂಪು ಮಿಶ್ರಿತ ಬಣ್ಣದ ಮಡಿಕೆಯ ಚೂರುಗಳು, ಬೂದುಬಣ್ಣದ ಮೃತ್ಪಾತ್ರೆಗಳು, ಹೆರೆಚಕ್ಕೆಗಳು, ಕಬ್ಬಿಣದ ಕಿಟ್ಟಗಳು ದೊರೆತಿವೆ. ಸಾಮಾನ್ಯವಾಗಿ ಬೃಹತ್ ಶಿಲಾಯುಗದ ಜನರ ವಾಸದ ನೆಲೆಗಳ ಹತ್ತಿರದ ಬೆಟ್ಟಗುಡ್ಡಗಲ್ಲಿ, ಗವಿಗಳಲ್ಲಿ, ಕಲ್ಲಾಸರೆಗಳಲ್ಲಿ, ಕೆಲವೂಮ್ಮೆ ರೇಖಾಚಿತ್ರಗಳು ಕಂಡುಬರುತ್ತವೆ. ಇಂತಹ ರೇಖಾಚಿತ್ರವು ಈ ನೆಲೆಯ ಪಕ್ಕದಲ್ಲೇ ಪಶ್ಚಿಮ ದಿಕ್ಕಿನಲ್ಲಿರುವ ಬೃಹತ್ ಬಂಡೆಯ ಗುಡ್ಡದ ಮೇಲಿನ ತುದಿಯಲ್ಲಿ ಚಪ್ಪಡಿಕಲ್ಲುಗಳನ್ನು ಇಟ್ಟು ಅದರ ಮೇಲೆ ಪೂರ್ವ ಪಶ್ಚಿಮವಾಗಿ 18 ಅಡಿ, ಉತ್ತರ ದಕ್ಷಿಣವಾಗಿ 19 ಅಡಿ. ಮತ್ತು 1 ಅಡಿ ದಪ್ಪದ ವಿಶಾಲವಾದ ಹಾಸುಗಲ್ಲನ್ನು ಹಾಸಿ ನಿರ್ಮಿಸಿದ್ದು, ಈ ಹಾಸುಗಲ್ಲಿನ ಕೆಳಭಾಗದಲ್ಲಿ ಬಿಳಿ ಬಣ್ಣದ ರೇಖಾಚಿತ್ರವಿದೆ. ಅದು ಸ್ವಲ್ಪ ಹಾಳಾಗಿದ್ದು ವ್ಯಕ್ತಿಯ ರೇಖಾಚಿತ್ರದಂತೆ ಭಾಸವಾಗುತ್ತದೆ. ಈ ಬಂಡೆಯ ಪೂರ್ವದಿಕ್ಕಿಗೆ ಸ್ವಲ್ಪ ಕಿಂಡಿಯನ್ನು ಬಿಟ್ಟು ಸುತ್ತಲೂ ಚಿಕ್ಕ ಚಿಕ್ಕ ಕಲ್ಲುಗಳಿಂದ ಮುಚ್ಚಲಾಗಿದೆ. ಈ ಕೋಣೆಯ ಒಳಗಡೆ ಸುಮಾರು 6 ರಿಂದ 8 ಜನರ ವರೆಗೆ ಕುಳಿತುಕೊಳ್ಳುವಷ್ಟು ವಿಶಾಲವಾಗಿದೆ. ಈ ಹೆಬ್ಬಂಡೆಯ ಗುಡ್ಡವನ್ನು ಅಲ್ಲಿನ ಸ್ಥಳೀಯರು ಬತ್ತದ ಬಂಡೆ (ಓಡ್ಲಬಂಡ) ಎಂದು ಕರೆಯುತ್ತಾರೆ. ಹಾಗೆಯೇ ಇಂತಹ ಸಮಾಧಿಗಳನ್ನು ಪಾಂಡವರ ಗುಡಿಗಳೆಂದು ಕರೆಯುತ್ತಾರೆ. ಈ ಬತ್ತದ ಬಂಡೆಯ ಪಶ್ಚಿಮಕ್ಕೆ ಒಂದು ಕಿ.ಮೀ ದೂರದಲ್ಲಿ ಮತ್ತೊಂದು ಚಪ್ಪಟೆಯಾಕಾರದ ಬಂಡೆ ಸಮಾಧಿಯಿದ್ದು, ನಿಧಿಗಳ್ಳರಿಂದ ಅಗೆತಕ್ಕೆ ಒಳಗಾಗಿ ನಾಶವಾಗಿದ್ದು. ಇಲ್ಲಿಯೂ ಸಹ ಕಪ್ಪು ಮತ್ತು ಕೆಂಪು ಮಿಶ್ರಿತ ಮಡಿಕೆ ಚೂರುಗಳು ದೊರೆತಿವೆ. ಈ ಸಮಾಧಿಯಿಂದ ಸ್ವಲ್ಪ ದೂರದ ಜಮೀನಿನಲ್ಲಿ ನಯ ಮಾಡಿರುವ ಎರಡು ಕಲ್ಲಿನ ಕೈಕೊಡಲಿಗಳು ದೊರೆತಿದ್ದು, ಇವು ನವಶಿಲಾಯುಗದ್ದಾಗಿವೆ. ಇವು 15 ಸೆಂ.ಮೀ ಉದ್ದ 8 ಸೆಂ.ಮೀ. ಅಗಲವಾಗಿವೆ.
ಹಾಗೆಯೇ ಈ ನೆಲೆಯ ಕಾಲಮಾನವನ್ನು ತಿಳಿಯುವುದಾದರೆ, ಇತಿಹಾಸ ದರ್ಶನ ಸಂಪುಟ 17ರಲ್ಲಿ ಡಾ. ಕೆ.ಬಿ. ಶಿವತಾರಕ್ ಅವರ ತುಮಕೂರು ಜಿಲ್ಲಾ ಪ್ರದೇಶದ ಬೃಹತ್ ಶಿಲಾಯುಗ ಸಂಸ್ಕøತಿ ಎಂಬ ಲೇಖನದಲ್ಲಿ ಪಾವಗಡ ತಾಲೂಕಿನ ಇತರೆ ಬೃಹತ್ ಶಿಲಾಯುಗ ಸಂಸ್ಕøತಿಯ ಕಾಲಮಾನವನ್ನು ಕ್ರಿ.ಪೂ. 1200ರಿಂದ ಕ್ರಿ.ಪೂ.250 ಎಂದು ಹೇಳಿರುತ್ತಾರೆ.2 ಹಾಗಾಗಿ ಇಲ್ಲಿ ದೊರೆತಿರುವ ಪ್ರಾಚ್ಯಾವಶೇಷಗಳ ಆಧಾರದ ಮೇಲೆ ಈ ನೆಲೆಯ ಕಾಲಮಾನವನ್ನು ಕ್ರಿ.ಪೂ. 800ರಿಂದ ಕ್ರಿ.ಪೂ 100ರ ಆಸುಪಾಸು ಇರಬಹುದೆಂದು ಅಂದಾಜಿಸಬಹುದು. ಇಂತಹ ಸಮಾಧಿಗಳು ಪಾವಗಡ ತಾಲೂಕಿನ ಹಲವು ಕಡೆ ಕಂಡುಬಂದಿದ್ದು. ನಮ್ಮ ದುರಾದೃಷ್ಟಕ್ಕೆ ಇಲ್ಲಿಯ ಹಳ್ಳಿಯ ಜನರು ಈ ಜಾಗವನ್ನು ಆಕ್ರಮಿಸಿಕೊಂಡು ಸಮಾಧಿಗಳನ್ನು ಕೆಡವಿ ಬೇಸಾಯ ಕಾರ್ಯಗಳನ್ನು ಮಾಡುತ್ತಿದ್ದಾರೆ. ಈ ಜನರಿಗೆ ಇವುಗಳ ಮಹತ್ವವನ್ನು ತಿಳಿಸಿದರೂ ಏನು ಪ್ರಯೋಜನವಾಗುತ್ತಿಲ್ಲ. ಜೊತೆಗೆ ನಿಧಿ ಆಸೆಗಾಗಿ ಕೆಲವು ಗೋರಿಗಳು ನಿಧಿಗಳ್ಳರಿಂದ ನಾಶವಾಗಿರುವುದನ್ನು ಸಹ ನಾವು ಕಾಣಬಹುದು. ಹಾಗಾಗಿ ಇವುಗಳಿಗೆ ರಕ್ಷಣೆ ಒದಗಿಸಬೇಕಾಗಿದೆ.
[ಈ ಲೇಖನ ಸಿದ್ದಪಡಿಸಲು ನನಗೆ ಸಲಹೆ ಸೂಚನೆಗಳನ್ನು ನೀಡಿದ ನನ್ನ ಮಾರ್ಗದರ್ಶಕರು ಹಾಗೂ ಗುರುಗಳಾದ ಡಾ. ಸಿ.ಎಸ್. ವಾಸುದೇವನ್ ಅವರಿಗೆ ಹಾಗೆಯೇ ಕ್ಷೇತ್ರಕಾರ್ಯದಲ್ಲಿ ಸಹಕರಿಸಿದ ಗೆಳೆಯರಾದ ರವೀಶ್ ಜಿ.ಎನ್. ಮತ್ತು ರಾಮಾಂಜಿಯವರಿಗೆ ನನ್ನ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.]

ಆಧಾರಸೂಚಿ
1. ಇತಿಹಾಸ ದರ್ಶನ ಸಂಪುಟ 7, 1992.
2. ಇತಿಹಾಸ ದರ್ಶನ ಸಂಪುಟ 17, 2002.

No comments:

Post a Comment