Friday, October 4, 2013

ಆನೆಗುಂದಿ ಪ್ರಭುಗಳ ಇತಿಹಾಸ -ಡಾ.ಪಿ.ವಿ. ಕೃಷ್ಣಮೂರ್ತಿ

ಡಾ. ಪಿ.ವಿ ಕೃಷ್ಣಮೂರ್ತಿ






  


ಆನೆಗೊಂದಿ ಪ್ರಭುಗಳ ಇತಿಹಾಸ - ಶಾಸನ ಮತ್ತು ಇತರ ಆಕರಗಳ ಹಿನ್ನೆಲೆಯಲ್ಲಿ ಒಂದು ಪರಿಶೀಲನೆ


ವಿಜಯನಗರ ಸಾಮ್ರಾಜ್ಯದ ಪೂರ್ವದಲ್ಲಿ ಆನೆಗೊಂದಿಯು ಕಂಪಿಲರಾಯನ ರಾಜ್ಯದ ಒಂದು ಆಯಕಟ್ಟಿನ ಸ್ಥಾನವಾಗಿದ್ದತು. ಅರವೀಡು ಅಥವಾ ಆರ‍್ವೀಟಿ ವಂಶೀಯರಿಗೂ ಆನೆಗೊಂದಿಗೂ; ವಿಜಯನಗರ ಸಾಮ್ರಾಜ್ಯ ಹುಟ್ಟುವುದಕ್ಕೆ ಪೂರ್ವದಲ್ಲೇ ಸಂಪರ್ಕವೇರ್ಪಟ್ಟಿತ್ತು. ಕ್ರಿ.ಶ. ೧೩೧೯-೨೦ರ ಸುಮಾರಿನಲ್ಲಿ ಆಗ್ಗೆ ಆ ಪ್ರದೇಶದ ಅರಸನಾಗಿದ್ದ ವೀರ ಕಂಪಿಲದೇವನ ವಿರುದ್ಧ ಕಾಕತೀಯ ಅರಸು ಪ್ರತಾಪರುದ್ರನು ಕೈಗೊಂಡ ಯುದ್ಧವೊಂದರಲ್ಲಿ ಆತನ ಮಂತ್ರಿಗಳಲ್ಲಿ ಒಬ್ಬನಾದ ಬೆಂಡುಪುಡ್ಡಿ ಅನ್ನಾ ಎಂಬುವವನೊಂದಿಗೆ ಅರವೀಡು ಪ್ರಭುಗಳ ವಂಶೀಯನಾದ ಸೋಮದೇವನ ಮಲಸೋದರ ಕೋಟಿಕಂಟಿರಾಘವ ಎಂಬುವನು ಭಾಗಿಯಾಗಿದ್ದು, ಆತ ಕಂಪಿಲದೇವನನ್ನು ಸೋಲಿಸಿ ಅವನ ಕುಟುಂಬದ ಏಳು ಮಂದಿಯನ್ನು ವಶಪಡಿಸಿಕೊಂಡಂತೆ ಶ್ರೀನಾಥನ ಬಿಮಖಂಡ ಹಾಗೂ ಕೋನೇರು ಕವಿಯ ಬಾಲsಗವತಮು ಎಂಬ ಕೃತಿಗಳಿಂದ ತಿಳಿದುಬರುತ್ತದೆ. ಇಲ್ಲಿ ಉಕ್ತನಾಗಿರುವ ರಾಘವನು ಕಾಕತೀಯರ ಕೈಕೆಳಗೆ ಕರ್ನೂಲು ಮತ್ತು ಅದರ ಆಸುಪಾಸಿನ ಪ್ರದೇಶದ ಒಬ್ಬ ಚಿಕ್ಕ ಪ್ರಭುವಾಗಿದ್ದನು.
         ಹೊಯ್ಸಳ ವೀರಬಲ್ಲಾಳನು ಕಂಪಿಲನ ಮೇಲೆ ಯುದ್ಧಕ್ಕೆ ಹೊರಟಾಗ ಕಂಪಿಲನ ಸೈನ್ಯ ಆನೆಗೊಂದಿಯಲ್ಲಿ ಬೀಡುಬಿಟ್ಟು ಮುಂದೆ ಸಾಗಿತು. ಆಗ್ಗೆ ಕಂಪಿಲರಾಯನು ಆನೆಯಾಕಾರದ ಮೂರು ಬೆಟ್ಟಗಳು ಸಂಧಿಸುವ ಆನೆಗೊಂದಿ ಎಂಬ ಸ್ಥಳದಲ್ಲಿ ಶತ್ರುಜನ ದುರ್ಗಮವಾದ ಕೋಟೆಯೊಂದನ್ನು ಕಟ್ಟಿಸಿದ್ದನು. ಪ್ರಾಚೀನ ಕಾಲದಲ್ಲಿ ರಾಜಕೀಯ ಮಹತ್ವವನ್ನು ಗಳಿಸಿಕೊಂಡಿದ್ದ ತುಂಗಭದ್ರಾ ನದಿಯ ಎಡದಂಡೆಯ ಮೇಲೆ ಹಂಪಿಯ ಉತ್ತರಕ್ಕೆ ಕೇವಲ ಎರಡೇ ಕಿ.ಮೀ. ಅಂತರದಲ್ಲಿರುವ ಆನೆಗೊಂದಿಯು, ತಾಲೂಕು ಕೇಂದ್ರ ಗಂಗಾವತಿಯ ನೈರುತ್ಯಕ್ಕೆ ೧೧ ಕಿ.ಮೀ. ದೂರದಲ್ಲಿದೆ.
         ಆನೆಗೊಂದಿಯು ತನ್ನ ನೈಸರ್ಗಿಕ ವೈಶಿಷ್ಟ್ಯತೆಯಿಂದ ಒಂದು ಸಹಜ ಸ್ವಾಭಾವಿಕ ಸುರಕ್ಷಿತ ಸ್ಥಳವಾಗಿ ಪರಿಣಮಿಸಿತ್ತು. ಭೌಗೋಳಿಕವಾಗಿ ಆನೆಗೊಂದಿ ಪ್ರದೇಶವು ಚದುರಿದಂತೆ ಹರಡಿರುವ ವೈವಿಧ್ಯಮಯವಾದ ಬೂದು ಬಣ್ಣದ ಗಟ್ಟಿ ಕಲ್ಲಿನಿಂದಾದ ಬೆಟ್ಟಗುಡ್ಡಗಳಿಂದ ಕೂಡಿದೆ. ತುಂಗಭದ್ರ ನದಿಯು ಆನೆಗೊಂದಿಯನ್ನು ದಕ್ಷಿಣ, ಪೂರ್ವ ಮತ್ತು ಈಶಾನ್ಯ ದಿಕ್ಕುಗಳಲ್ಲಿ ಬಳಸಿಕೊಂಡಿದೆ. ಇಲ್ಲಿನ ಗುಡ್ಡಗಳ ಓರೆ ನದಿಯ ತಿರುವು ಆಳ ಮತ್ತು ವಿಶಾಲವಾದ ನೀರಿನ ಹರವು ಸ್ವಾಭಾವಿಕವಾಗಿ ಸೃಷ್ಟಿ ನೀಡಿದ ಪ್ರಥಮ ರಕ್ಷಣಾ ರೇಖೇ (Ã (first defence line)ಯಾಗಿ ಪರಿಣಮಿಸಿ ವಾಸ್ತವಿಕ ಆಯಕಟ್ಟಿನ ಸ್ಥಾನವಾಗಿದೆ. ಹಾಗಾಗಿ ಅದು ಪ್ರಾಗೈತಿಹಾಸಿಕ ಮಾನವನ ನೆಲೆವೀಡು ಕೂಡ ಆಗಿದ್ದಿತು. ಈ ಪ್ರದೇಶದಲ್ಲಿ ಆದಿ ಶಿಲಾಯುಗದ ಸಂಸ್ಕೃತಿ ಗಾಢವಾಗಿದ್ದುದನ್ನು ವಿದ್ವಾಂಸರು ಶೋಧಿಸಿರುತ್ತಾರೆ. ಈ ಪ್ರದೇಶದ ಬೆಟ್ಟಗುಡ್ಡಗಳಲ್ಲಿ ಕಲ್ಲಾಸರೆಗಳಿದ್ದು ನವಶಿಲಾಯುಗದ ಮಾನವನ ನೆಲೆಯಾಗಿದ್ದಿತೆಂದು ಹೇಳಬಹುದಾಗಿದೆ. ಅನಂತರದ ಬೃಹತ್ ಶಿಲಾಯುಗದ ಕುರುಹುಗಳು ಈ ಪ್ರದೇಶದಲ್ಲಿ ವಿಪುಲವಾಗಿ ಕಂಡುಬಂದಿದೆ.
         ಆನೆಗೊಂದಿ ಪ್ರದೇಶವನ್ನು ಕ್ರಿ.ಶ. ೭ನೇ ಶತಮಾನಕ್ಕಾಗಲೇ ಅಲ್ಲಿನ ಪಂಪಾ ಸರೋವರ ಮತ್ತು ಅದಕ್ಕೆ ಸಂಬಂಧಿಸಿದ ಪಂಪಾದೇವಿಯ ಐತಿಹ್ಯಗಳ ಹಿನ್ನೆಲೆಯಲ್ಲಿ ಪಂಪಾತೀರ್ಥವೆಂದು ಕರೆಯುತ್ತಿದ್ದರೆಂಬ ಅಂಶ ಶಾಸನಗಳಿಂದ ತಿಳಿದುಬರುತ್ತದೆ. ಹಾಗೇ ಈ ಪ್ರದೇಶಕ್ಕೆ ಕಿಷ್ಕಿಂಧೆ ಎಂಬ ಹೆಸರು ಪ್ರಚಲಿತವಿದ್ದುದು ಇದಕ್ಕೆ ಅಂಟಿಕೊಂಡಿರುವ ಪೌರಾಣಿಕ ಕಥೆಗಳ ಹಿನ್ನೆಲೆಯಲ್ಲಿ ಗ್ರಹಿಸಬಹುದಾಗಿದೆ. ಇಲ್ಲಿನ ಒಂದು ಗುಡ್ಡವನ್ನು ಅಂಜನೇಯನ ಜನ್ಮಸ್ಥಳವಾದ ಅಂಜನಾದ್ರಿ ಎಂದು ಗುರುತಿಸುತ್ತಾರೆ. ಅಲ್ಲದೆ ಶಾಸನಗಳಲ್ಲೂ ಕಿಷ್ಕಿಂಧೆಯ ಪ್ರಸ್ತಾಪ ಬಂದಿದ್ದು; ಕಿಷ್ಕಿಂಧ ಪರ್ವತವು ತುಂಗಭದ್ರೆಯ ಉತ್ತರ ದಡದಲ್ಲಿದೆ ಎಂದೂ ಕಿಷ್ಕಿಂಧೆ ಒಂದು ನಗರವೆಂದೂ ಒಂದು ಪರ್ವತವೆಂದೂ ಅಲ್ಲದೆ ಒಂದು ಆಡಳಿತ ಘಟಕವೆಂದೂ ವಿಧವಿಧವಾಗಿ ಉಕ್ತವಾಗಿದೆ. ರಾಮಾಯಣದಲ್ಲಿ ಈ ಕಿಷ್ಕಿಂಧ ನಗರದ ವರ್ಣನೆ ಬಂದಿದೆ.
         ....ನಗರೀ ರಮ್ಯಾ ಕಿಷ್ಕಿಂಧಾಗಿರಿ ಗಹ್ವರ್ ... ಗುಹಾಂ ಘೋರಾಂ ಕಿಷ್ಕಿಂಧಾಂ...
         ....ರಮ್ಯಾಂ ರತ್ನಸಮಾಕೀರ್ಣಾಂ... ಮಹತೀಗುಹಾಂ ... ಹರ್ಮ್ಮಪಠ್ರ -
         - ಸಾದಸಂಬಂಧಾಂ ನಾನಾ ಪಣ್ಯೋಪಶೋಭಿತಾಂ
         ಎಂದು ಮೊದಲಿಗೆ ಕಣ್ಣಿಗೆ ಕಟ್ಟುವಂತೆ ವರ್ಣಿಸಲಾಗಿದೆ. ಇಂತಹ ಪೌರಾಣಿಕ ಮತ್ತು ಐತಿಹ್ಯಗಳು ಪ್ರಾಗೈತಿಹಾಸಿಕ ಮಾನವನ ಆಚರಣೆಗಳು ಬಳಕೆಯಲ್ಲಿದ್ದ ಎಡೆಗಳ ಸೂಚಕವೆಂದೂ, ಕಾಲಾಂತರದಲ್ಲಿ ಆರ್ಯೀಕರಣಕ್ಕೊಳಗಾಗಿ ರೂಪಾಂತರಗೊಂಡಿರುತ್ತದೆ ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಅಂತೆಯೇ ಇಲ್ಲಿನ ಪಂಪಾ ಒಬ್ಬ ಮಾತೃದೇವತೆಯ ಸೂಚಕವೆಂದು ಪರಿಭಾವಿಸಿದರೆ - ಆಕೆ ಬೇಟೆ ಹಂತದ, ಅಲೆಮಾರಿ ಮಾನವನ ಆರಾಧನಾ ದೇವತೆಯಾಗಿದ್ದಳೆಂದು ಹೇಳಬಹುದು.
         ಆನೆಗೊಂದಿ, ಆನೆಗುಂಡಿ ಎಂಬ ಹೆಸರುಗಳು ತಡವಾಗಿ ಶಾಸನೋಕ್ತವಾಗಿದ್ದರೂ, ಈ ಸ್ಥಳದ ಭೂ ಮತ್ತು ನದಿಯ ಸ್ವರೂಪವನ್ನು ಗಮನಿಸಿಯೇ ಆ ಹೆಸರು ಪ್ರಚಲಿತವಾಗಿದ್ದಿತೆಂದು ಹೇಳಬಹುದು. ಸಂಸ್ಕೃತ ವಿದ್ವಾಂಸರು ಆನೆಗೊಂದಿಯನ್ನು ಹಸ್ತಿಕೋಣಪುರ, ಗಜಗಹ್ವರಪುರ, ಕುಂಜರಕೋಣಪುರ ಎಂದು ಕರೆದಿರುತ್ತಾರೆ. ಆದರೆ ಶಾಸನಗಳಲ್ಲಿ ಕಂಡುಬರುವ ಹಸ್ತಿನಾಪುರ ಎಂಬುದಕ್ಕೆ ಇದು ಸರಿಯಾದ ಪರ್ಯಾಯನಾಮವೆಂದು ತೋರುವುದಿಲ್ಲ. ಬೇಕಾದರೆ ಕಿಷ್ಕಿಂದೆ ಎಂಬುದು ಪರ‍್ಯಾಯ ನಾಮವಾಗಬಲ್ಲದು ಎಂಬ ಮೈ.ಹ.ರಾಮಶರ್ಮರ ಅಭಿಪ್ರಾಯವನ್ನು ಒಪ್ಪಬಹುದಾಗಿದೆ.
         ಸಂಗಮ ಅರಸರು ವಿಜಯನಗರ ರಾಜಧಾನಿಯನ್ನು ಕಟ್ಟುವುದಕ್ಕೆ ಮೊದಲು ಆನೆಗೊಂದಿಯಿಂದಲೇ ರಾಜ್ಯಭಾರ ಮಾಡುತ್ತಿದ್ದರು ಎಂಬುದು ಈಗ ಖಚಿತವಾಗಿರುವ ವಿಷಯ. ಇದಕ್ಕೆ ಈ ಸ್ಥಳದ ಆಯಕಟ್ಟಿನ ನೈಸರ್ಗಿಕ ಕಾರಣಗಳಲ್ಲದೆ, ಕಂಪಿಲದೇವನ ಕಾಲದಲ್ಲೇ ರಚನೆಯಾಗಿದ್ದಿರಬಹುದಾದ ಭದ್ರವಾದ ಕೋಟೆಯೂ ಕಾರಣವಾಗಿದ್ದಿರಬೇಕು. ಸಂಗಮ ವಂಶದ ಹರಿಹರನು ಹೊಯ್ಸಳ ವೀರಬಲ್ಲಾಳನ ಸಾಮಂತರಲ್ಲಿ ಒಬ್ಬನಾಗಿದ್ದನು, ಅಲ್ಲದೆ ಆತನು ಬಲ್ಲಾಳನಿಗೆ ಸಮೀಪ ಬಂಧುವೂ ಆಗಿದ್ದನು. ಬಲ್ಲಾಳನ ಸೋದರಳಿಯನಾದ ಬಲ್ಲಪ್ಪ ದಣ್ಣಾಯಕನು ಹರಿಹರನ ಅಳಿಯನಾಗಿದ್ದನು. ಇವರ ಸಂಬಂಧ ಸೌಹಾರ್ದಪೂರಿತವಾಗಿದ್ದಿತು. ಬಲ್ಲಾಳನ ಅಧಿಕಾರಿಗಳಲ್ಲಿ ಒಬ್ಬನಾಗಿದ್ದು ಕ್ರಮೇಣ ಮಹಾಮಂಡಳೇಶ್ವರ ಪದವಿಗೆ ಹರಿಹರನು ಏರಿದನು. ಕ್ರಿ.ಶ. ೧೩೩೯-೪೦ನೆಯ ವರ್ಷದ ಶಾಸನಗಳಲ್ಲಿ ಈತನನ್ನು ಮಹಾಮಂಡಳೇಶ್ವರನೆಂದೇ ಕರೆಯಲಾಗಿದೆ. ೧೩೪೦ ವೇಳೆಗೆ ಹರಿಹರನು ಚತುಃಸಮುದ್ರಾಧಿಪತಿಯೆಂದು ಕರೆಯಿಸಿಕೊಂಡಿದ್ದಾನೆ. ೧೩೪೩ರ ಶಾಸನದಲ್ಲಿ ಮಹಾರಾಜಾಧಿರಾಜ ರಾಜಪರಮೇಶ್ವರ ಇತ್ಯಾದಿ ಬಿರುದುಗಳಿಂದ ಅಲಂಕೃತನಾಗಿದ್ದಾನೆ. ೧೩೪೪ರಲ್ಲಿ ಇವನ ಸೋದರನೂ ಪ್ರಾಂತಾಧಿಕಾರಿಯೂ ಆದ ಬುಕ್ಕನು ಸಹ ಸಾರ್ವಭೌಮತ್ವದ ಬಿರುದುಗಳನ್ನು ಹೊಂದಿರುವುದು ಶಾಸನಗಳಿಂದ ಸ್ಪಷ್ಟವಾಗುತ್ತದೆ.೧೦ ಶಾಸನ ಮತ್ತು ಸಾಹಿತ್ಯ ಕೃತಿಗಳನ್ನು ಗಮನಿಸಿದರೆ ಸಂಗಮರು ಹಕ್ಕ (ಹರಿಹರ), ಬುಕ್ಕ, ಕಂಪ, ಮಾರಪ ಮತ್ತು ಮುದ್ದಪರೆಂಬ ಐವರು ಸಹೋದರರಿದ್ದುದೂ, ಅವರು ಹಿರಿಯನಾದ ಹಕ್ಕನ ಸೂಚನೆಯಂತೆ ನಡೆಯುತ್ತಿದ್ದುದು ಹಾಗೂ ಉತ್ತರದ ವಿಗ್ರಹ ವಿದ್ವಂಸಕರೂ, ಕ್ರೂರಿಗಳೂ ಆದಂಥ ವೈರಿಗಳಿಂದ ರಕ್ಷಿಸಲು ಬದ್ಧರಾಗಿ ತಾವು ಕೈಗೊಂಡ ಹಿಂದೂ ಸಾಮ್ರಾಜ್ಯ ರಕ್ಷಣೆಯ ಕಾರ್ಯದಲ್ಲಿ ತಮ್ಮನ್ನು ಮಹಾಭಾರತದ ಪಂಚಪಾಂಡವರೊಂದಿಗೆ ಸಮೀಕರಿಸಿಕೊಂಡು ತಮ್ಮ ರಾಜಧಾನಿಯನ್ನು ಹಸ್ತಿನಾವತಿ ಎಂದು ಕರೆದುಕೊಂಡರು. ಮೂಲತಃ ಪಶುಪಾಲನ ವೃತ್ತಿಯವರಾದ ಕುರುಬ ಜನಾಂಗದ ಸಂಗಮ ವಂಶೀಯರು ತಾವು ಯಾದವ ವಂಶದವರೆಂದು ಸಾಧಿಸಲು ರಾಜಧಾನಿಯ ಹೆಸರೂ ಸಹಾಯಕವಾಗಿರಬೇಕು. ಹಾಗೇ ಅವರ ರಾಜಲಾಂಛನವಾದರೂ ವಿಷ್ಣುವಿನ ಅವತಾರವಾದ ವರಾಹ - ಅದು ಅಧರ್ಮದ ಕಡಲಲ್ಲಿ ಮುಳುಗುತ್ತಿದ್ದ ಭೂಮಿಯನ್ನು ಮೇಲೆತ್ತಲು ತಾಳಿದ ಅವತಾರ. ಹೀಗೆ ಒಂದಕ್ಕೊಂದು, ಧಾರ್ಮಿಕ - ಪೌರಾಣಿಕ ಅಂಶಗಳ ಆಶಯಗಳು ಜನರಲ್ಲಿ ಆಗ್ಗೆ ಉಂಟಾಗಿದ್ದ ಒಂದು ಬಗೆಯಾದ ನಿರಾಶಾ ಭಾವನೆಯನ್ನು ತೊಲಗಿಸುವುದರೊಂದಿಗೆ ರಾಜರಿಗೆ, ತಾವು ಕೈಗೊಂಡ ಕಾರ್ಯಕ್ಕೆ ಸ್ಥೈರ್ಯವನ್ನು ತುಂಬಿಕೊಳ್ಳಲು ನೆರವಾಗಿರಬೇಕೆನಿಸುತ್ತದೆ.
         ವಿಜಯನಗರದ ಕಾಲಕ್ಕಿಂತ ಹಿಂದಿನ ಶಾಸನಗಳಲ್ಲಿ ಹಸ್ತಿನಾವತಿಯ ಪ್ರಸ್ತಾಪ ಬಂದಿಲ್ಲ. ವಿಜಯನಗರ ಸಾಮ್ರಾಜ್ಯದ ಆರಂಭ ಕಾಲದಲ್ಲಿ ಹಸ್ತಿನಾವತಿ, ಅನಂತರದಲ್ಲಿ ಹಸ್ತಿನಾವತಿ ವಳಿತ ಎಂಬ ಒಂದು ವಿಶಾಲವಾದ ಪ್ರಾದೇಶಿಕ ವಿಭಾಗದ ಉಲ್ಲೇಖ ಕಂಡುಬರುತ್ತದೆ. ಈ ವಳಿತದಲ್ಲಿ ಉಚ್ಚಂಗಿ, ದೊರವಡಿ, ರಾಯದುರ್ಗ, ಕೋಗಳೀ ವೇಂಠೆಗಳೂ, ಮುರುಗುಲ ಪಾಂಡ್ಯ, ಚಂದ್ರಮಂಡಲ, ಮೂಡನಾಡು ಎಂಬ ನಾಡುಗಳೂ, ಕಂಪಿಲ ಮತ್ತು ಆನೆಗೊಂದಿ ಮಾಗಣಿಗಳ ಉಲ್ಲೇಖ ಬಂದಿದ್ದು, ತುಮಕೂರು, ಅನಂತಪುರ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಯ ಬಹುಭಾಗಗಳನ್ನು ಒಳಗೊಂಡಂತೆ ಈ ಪ್ರಾದೇಶಿಕ ವಿಭಾಗ ರೂಪಗೊಂಡಿತ್ತು. ಪ್ರಾಯಶಃ ಆನೆಗೊಂದಿ (ಹಸ್ತಿನಾವತಿ) ರಾಜಧಾನಿಯಾಗಿದ್ದ ಕಾಲದಲ್ಲಿ ಅಂದರೆ ಸಾಮ್ರಾಜ್ಯದ ಉಗಮದ ಮೊದಲ ಹಂತದಲ್ಲಿ ಸಂಗಮ ಅರಸರ ಆಳ್ವಿಕೆಗೆ ಒಳಪಟ್ಟ ಆರಂಭಿಕ ಪ್ರದೇಶ ಇದಾಗಿದ್ದಿರಬೇಕು.
         ಈ ಮೊದಲೇ ಹೇಳಿರುವಂತೆ ವಿಜಯನಗರ ಸಾಮ್ರಾಜ್ಯದ ಪ್ರಾರಂಭದಲ್ಲಿ ಆನೆಗೊಂದಿಯೇ ರಾಜಧಾನಿಯಾಗಿದ್ದಿತು. ಕ್ರಿ.ಶ. ೧೩೬೮ರ ವರೆಗಿನ ಯಾವುದೇ ಅಧಿಕೃತ ದಾಖಲೆಗಳಲ್ಲಿ ವಿಜಯನಗರವನ್ನು ತಮ್ಮ ರಾಜಧಾನಿಯೆಂದು ಉಲ್ಲೇಖಿಸಿಕೊಂಡಿಲ್ಲ. ಇತ್ತೀಚೆಗೆ ಹಂಪಿಯಲ್ಲಿ ಶೋಧವಾದ ಬುಕ್ಕರಾಯನ ಕಾಲದ ಶಾಸನಗಳು೧೧ ಬುಕ್ಕರಾಯನ ವಿಜಯನಗರ ಎಂದು ಖಚಿತವಾಗಿ ಉಲ್ಲೇಖಿಸಿರುವುದರಿಂದ ಬುಕ್ಕರಾಯನ ಕಾಲಕ್ಕಿಂತ ಹಿಂದೆ ವಿಜಯನಗರ ರಾಜಧಾನಿ ರಚನೆಯಾಗಿರಲಿಲ್ಲ ಎಂಬುದನ್ನು ಇನ್ನಷ್ಟು ಖಚಿತಪ್ಟಿದೆ. ಕ್ರಿ.ಶ. ೧೩೭೯ರ ವರೆಗೂ ಹಸ್ತಿನಾವತಿ-ಆನೆಗೊಂದಿ ರಾಜಧಾನಿಯಾಗಿ ಕಾರ್ಯನಿರ್ವಹಿಸುತ್ತಿತ್ತೆಂಬುದಕ್ಕೆ ಶಾಸನಾಧಾರವಿದೆ.೧೨
         ಸಾಮ್ರಾಜ್ಯದ ಆರಂಭ ದಿಸೆಯಲ್ಲಿ ರಾಜಧಾನಿಯಾಗಿ ಮೆರೆದ ಆನೆಗೊಂದಿ ವಿಜಯನಗರ ರಾಜಧಾನಿಯಾದ ಅನಂತರ, ಅದು ಆ ಬೃಹತ್ ರಾಜಧಾನಿ ವಿಜಯನಗರದ ಒಂದು ಉಪನಗರವಾಗಿ ಉಳಿಯಿತಾದರೂ, ಆಯಕಟ್ಟಿನ ಸೈನಿಕ ಠಾಣೆಯಾಗಿ ಮುಂದುವರೆದಿದ್ದುದಲ್ಲದೆ ಅದು ಒಬ್ಬ ದಂಡನಾಯಕನ ಆವಾಸಸ್ಥಾನವಾಗಿದ್ದ ಬಗ್ಗೆ ವಿದೇಶಿ ಪ್ರವಾಸ ಕಥನಗಳಿಂದ ತಿಳಿದುಬರುತ್ತದೆ. ಪ್ರಾಯಶಃ ಆ ದಂಡನಾಯಕರು - ಅರವೀಡು ವಂಶೀಯರೇ ಇದ್ದಿರಲೂಬಹುದು.
         ರಕ್ಕಸಗಿ ತಂಗಡಿಗಿ ಯುದ್ಧದಲ್ಲಿ ರಾಮರಾಯನು ಕೊಲೆಯಾದ ನಂತರ ಆತನ ಸೋದರ ತಿರುಮಲ ಪೆನುಗೊಂಡೆಯಲ್ಲಿ ಸ್ಥಾಪಿಸಿದ ಆಳ್ವಿಕೆಯಿಂದ ಅರವೀಡು ವಂಶೀಯರ ಆಳ್ವಿಕೆಯನ್ನು ಸಾಮಾನ್ಯವಾಗಿ ಗುರುತಿಸುತ್ತಾರೆ. ಆದರೆ ವಾಸ್ತವವಾಗಿ ಸದಾಶಿವರಾಯ ಪಟ್ಟಕ್ಕೆ ಬಂದಂದಿನಿಂದಲೇ ಅರವೀಡು ವಂಶೀಯರ ಆಡಳಿತ ಅನಧಿಕೃತವಾಗಿ ಆರಂಭವಾಗಿರುತ್ತದೆ. ಸದಾಶಿವರಾಯನನ್ನು ರಾಜನೆಂದು ಸೂಚಿಸಿ ರಾಮರಾಜನ ನಿರೂಪದಿಂದ ಎಂಬ ಪದವನ್ನು ಬಳಸುವ ಮೂಲಕ ಅಧಿಕಾರದ ಎಲ್ಲಾ ಸೂತ್ರಗಳನ್ನು ರಾಮರಾಜನೇ ಹೊಂದಿದ್ದಿದನ್ನು ಸೂಚಿಸುತ್ತದೆ೧೩ ಎಂಬ ಡಾ|| ದೇವರಕೊಂಡಾರೆಡ್ಡಿಯವರ ಅಭಿಪ್ರಾಯವನ್ನು ಒಪ್ಪಬಹುದಾಗಿದೆ.
         ಕ್ರಿ.ಶ. ೧೫೬೫ರಲಿ ರಕ್ಕಸಗಿ ತಂಗಡಿಗಿ ಯುದ್ಧದ ಪರಿಣಾಮವಾಗಿ, ಅನೇಕ ವರ್ಷಗಳ ಕಾಲ ವೈಭವಯುತವಾಗಿ ಮೆರೆದ ರಾಜಧಾನಿ ವಿಜಯನಗರ ಹಾಗೂ ಅದಕ್ಕೆ ಹೊಂದಿಕೊಂಡಂತೆ ಇದ್ದ ಆನೆಗೊಂದಿಯೂ ವೈರಿಗಳ ಲೂಟಿ ಸುಲಿಗೆಗಳಿಗೆ ಈಡಾಗಿ ಸಾಕಷ್ಟು ವಿರೂಪ ಹೊಂದಿತು. ಮೂಲತಃ ಸುಲಿಗೆ-ಲೂಟಿ ಉದ್ದೇಶವನ್ನೇ ಪ್ರಧಾನವಾಗಿ ಹೊಂದಿದ್ದ ಮುಸ್ಲಿಂ ಅರಸರು ತಮ್ಮ ಠಾಣೆಯನ್ನು ಈ ಪ್ರದೇಶದ ಮೇಲೆ ಕಾಯಂ ಆಗಿ ನೆಲೆಗೊಳಿಸಿರಲಿಲ್ಲವೆಂಬ ಅಂಶ ಶಾಸನಗಳು ಮತ್ತು ಕೈಫಿಯತ್ತುಗಳಲ್ಲಿ ದಾಖಲಾಗಿರುವ ವಿವರಗಳಿಂದ ಗ್ರಹಿಸಬಹುದಾಗಿದೆ.
         ಕೆಳದಿ ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಶಿವಮೊಗ್ಗ ಜಿಲ್ಲೆಯ ನಗರ ತಾಲೂಕಿನ ಶಾಸನಗಳು ಕ್ರಿ.ಶ. ೧೫೬೬ನೇ ವರ್ಷಕ್ಕೆ ಸೇರಿದವಾಗಿದ್ದು, ಅವು ವೀರಪ್ರತಾಪ ಹರಿಹರರಾಯ ಮಹಾರಾಯರ ವಂಶೀಭೂತರಾದಂಥ ಸದಾಶಿವ ಮಹಾರಾಯರು ಹಂಪೆಯ ಹಸ್ತಿನಗರಿಯಲ್ಲಿ,೧೪ ಹಸ್ತಿನಾವತಿಯೆಂಬ ವಿದ್ಯಾನಗರಿಯಿಂದ,೧೫ ಹಂಪೆಯ ಹಸ್ತಿನಾವತಿಯೆಂಬ ವಿದ್ಯಾನಗರಿಯಿಂದ೧೬ ಆಳುತ್ತಿದ್ದಂತೆ ಉಲ್ಲೇಖಿಸುತ್ತವೆ. ಹಾಗೇ ಕಂಪಿಲಿ ಕೈಫಿಯತ್ತಿನಲ್ಲಿ ಬರುವ .....ರಾಮರಾಯನು ಪಾದಷಾಹಾ ಸಂಗಡ ಕೃಷ್ಣಾ ತೀರದಲ್ಲಿ ರಕ್ಕಸತಂಗಡಿಯಂಬೊ ಗ್ರಾಮದ ಬಳಿಯಲ್ಲಿ ಘೋರವಾದಂಥ ಯುದ್ಧವನ್ನು ಮಾಡಿ, ಪಾದಷಾನವರು ರಾಮರಾಜನ ತಲೆಕೊಯಿದ್ದು ಝಂಡಾಕೆ ಕಟ್ಟಿ, ಅಲ್ಲಿಂದ ಪಾದಷನವರು ಬಂದು ವಿಜಯನಗರ ಪಟ್ನ ಶರೆಸೂರಿ ಮಾಡಿಕೊಂಡು, ಬೊಕ್ಕಸ ಮೊದಲಾದ ಲುಟಾಯ್ಸಿಕೊಂಡು, ಯೀ ದೇಶವನ್ನು ಯಾವತ್ತು ನಿಪಾತ್ತು ಮಾಡಿ ಹೊರಟುಹೋಗೋ ಸಮಯದಲ್ಲಿ ಸದಾಶಿವರಾಯರ್ರಿಗೆ ಅಲ್ಪಸ್ವಲ್ಪ ತಾಲ್ಕು ಕೊಟ್ಟು ಹೋದರ್ರು೧೭ ಎಂಬ ವಿವರದ ಜೊತೆಗೆ ಕುರುಗೋಡು ಕೈಫಿಯತ್ತಿನಲ್ಲಿ೧೮ ಉಕ್ತವಾಗಿರುವ .... ಅಳಿಯ ರಾಮರಾಯನು ಹತನಾದ ... ತರುವಾಯ ಬಿಜಾಪುರದ ಮೊಗಲ ಶಾಹಾನವರ ಸ್ವಾಧೀನ ಪೆನುಗೊಂಡೆ ಪರಿಯಂತ್ರ ರಾಜ್ಯ ಸ್ವಾದೀನವಾಯಿತು. ಠಾಣೆ ಕಾಯಮವಾಗಿ ನಿಂದರಲಿಲ್ಲ. ಪುನಹಾಅಳಿಯ ರಾಮರಾಜನ ತಮ್ಮ ಕೋದಂಡರಾಮರಾಜನು ಕೆಲವು ಜಮಿಯತ್ ಭರತಿ ಮಾಡಿಕ್ಕೊಂಡ ಕೃಷ್ಣಾನದಿ ಆರಂಭಾ ಮಾಡಿಕ್ಕೊಂಡು ಠಾಣ್ಯವನ್ನು ಕಾಯಮ ಮಾಡಿ ... ದರು ಎಂಬ ವಿವರಗಳನ್ನು ಗಮನಿಸಿದರೆ; ವಿಜಯನಗರದ ಅರಸರು ರಕ್ಕಸಗಿ ತಂಗಡಿಗಿ ಯುದ್ಧದ ನಂತರ ಏಕಾಏಕಿ ಹಂಪೆ ಪ್ರದೇಶವನ್ನು ತೊರೆದು, ಕೂಡಲೇ ಪೆನುಗೊಂಡೆಯನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಆಳತೊಡಗಲಿಲ್ಲ; ಎಂಬ ಅಂಶ ಸ್ಪಷ್ಟವಾಗುತ್ತದೆ. ಪೆನುಗೊಂಡೆ ಸಂಗಮ ಅರಸರ ಕಾಲದಿಂದಲೂ ಸಾಮ್ರಾಜ್ಯದ ಒಂದು ಉಪರಾಜಧಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದುದು ಸರಿಯಷ್ಟೆ. ಆದರೆ ಅದೊಂದು ಅಧಿಕೃತ ರಾಜಧಾನಿಯಾಗಿ ಪರಿಗಣಿತವಾಗಿರುವುದು ಕ್ರಿ.ಶ. ೧೫೭೧ರ ಅನಂತವೆಂಬ ಅಂಶವನ್ನು ಶಾಸನಗಳು೧೯ ಧೃಢಪಡಿಸುತ್ತವೆ. ಅಂದರೆ ಅವರು ತಮ್ಮ ಪ್ರಾಚೀನ ರಾಜಧಾನಿಯಾದ ಆನೆಗೊಂದಿ (ಹಸ್ತಿನಾವತಿ)ಯಿಂದಲೇ ತಮ್ಮ ಆಡಳಿತವನ್ನು ಮುಂದುವರಿಸಿದ್ದರೆಂಬುದು ಖಚಿತಪಡುತ್ತದೆ. ಕೈಫಿಯತ್ತಿನ೨೦ ಪ್ರಕಾರ ಅಳಿಯ ರಾಮರಾಯನ ಸೋದರರಲ್ಲೊಬ್ಬನಾದ ಕೋದಂಡರಾಮ ರಾಯನು ೧೯ ವರ್ಷಗಳ ಕಾಲ ರಾಜ್ಯವಾಳಿದನೆಂದು ತಿಳಿಯುತ್ತದೆ. ಆದರೆ ಆನೆಗೊಂದಿಯು ಕ್ರಿ.ಶ. ೧೫೬೬ರಲ್ಲಿ ಅಲಿ ಅದಿಲ್‌ಷಾನ ಆಕ್ರಮಣಕ್ಕೊಳಗಾಯಿತು. ಆತ ತಿರುಮಲನನ್ನು ಹೊರಹಾಕಿ ಅವನ ಸ್ಥಾನದಲ್ಲಿ ಕೃಷ್ಣದೇವರಾಯನ ಮೊಮ್ಮಗನಾದ ಪೆದ್ದತಿಮ್ಮನನ್ನು ಸಿಂಹಾಸನಕ್ಕೇರಿಸಿ, ಅನಂತರ ತನ್ನ ರಾಜಧಾನಿ ಅಹಮದನಗರವನ್ನು ಮೂರ್‌ತಾಜ್‌ಶಾಹನ ಆಕ್ರಮಣದಿಂದ ರಕ್ಷಿಸಿಕೊಳ್ಳುವ ಸಲುವಾಗಿ ಬಿಜಾಪುರಕ್ಕೆ ಹಿಂತಿರುಗಿದನು. ಹೀಗೆ ಆನೆಗೊಂದಿ ಪ್ರದೇಶದ ಆಳ್ವಿಕೆ ಅಳಿಯ ರಾಮರಾಯನ ಮಗ ನಾಲ್ವಡಿ ರಂಗರಾಜನ ವಂಶೀಯರ ಒಂದು ಸಣ್ಣ ಸಂಸ್ಥಾನದ ಕೇಂದ್ರವಾಗಿ ಮುಂದುವರೆದು ನರಪತಿ ಸಂಸ್ಥಾನವೆಂಬ ಪರ‍್ಯಾಯ ನಾಮದೊಂದಿಗೆ ಪ್ರಸಿದ್ಧಿ ಪಡೆಯಿತು. ಇದಕ್ಕೆ ಸಮಾನಾಂತರವಾಗಿ ಪೆನುಗೊಂಡೆ, ಅರವೀಡು ಅರಸರ ಮುಖ್ಯ ರಾಜಧಾನಿಯಾಗಿ ಕಾರ್ಯ ನಿರ್ವಹಿಸತೊಡಗಿದ್ದುದು ಶಾಸನಗಳಿಂದ೨೧ ತಿಳಿದುಬರುತ್ತದೆ.


         ಕ್ರಿ.ಶ. ೧೫೭೫ರ ಸಿರಗುಪ್ಪ ತಾಲೂಕಿನ ಸಾಲಿಗನೂರು ಗ್ರಾಮದ ಶಾಸನ೨೨ ಅರವೀಡು ಶ್ರೀರಂಗ ರಾಯನನ್ನು ಪ್ರಸ್ತಾಪಿಸುತ್ತದೆ. ಈ ಶಾಸನ ಪ್ರಾಯಶಃ ಮೇಲೆ ಉಲ್ಲೇಖಿಸಿದ ನಾಲ್ವಡಿ ರಂಗರಾಜನದಾಗಿದೆಯಾದರೂ ಬಹಳವಾಗಿ ತ್ರುಟಿತವಾಗಿದೆ. ಈ ಸಂದರ್ಭದಲ್ಲಿ ಅಳಿಯ ರಾಮರಾಯನ ಸೋದರನಾದ ತಿರುಮಲನ ಆಡಳಿತ ಪೆನುಗೊಂಡೆಯಿಂದ ಮುಂದುವರೆದಿತ್ತು.
         ಕೂಡಲಿ ತಾಲೂಕು ಕೊಟ್ಟೂರಿನ ಕ್ರಿ.ಶ. ೧೫೮೦ಕ್ಕೆ ಸೇರಿದ ಶಾಸನ ರಾಮರಾಜಯ್ಯದೇವ ಮಹಾ ಅರಸುಗಳ ಕೋಮಾರ ತಿಮ್ಮರಾಜಯ ಮಹಾ ಅರಸುಗಳು ಆನೆಯಗೊಂದಿಯ ಪಟ್ಟಣದಲು ರತ್ನಸಿಂಹಾಸನಾರೂಢರಾಗಿ ಆಳುತ್ತಿದ್ದ ಬಗ್ಗೆ ತಿಳಿಸುತ್ತದೆ.೨೩ ಅಲ್ಲದೆ ಕಾರ್ಯಕರ್ತನಾದ ಬಾಗುಳಿಯ ಶ್ರೀ ಮಾಚಿನಾಯಕರ ಮಕ್ಕಳು ವಾದಿನಾಯಕನವರು ಕೊಟ್ಟೂರು ಸೀಮೆಯ ಕುರುಬ ಕುಲದವರು ತಾವು ಅರಮನೆಗೆ ತೆಱುವಂಥಾ ಕುಱುದೆಱಯನು ಬಾಗುಳಿಯ ಕಲ್ಲಿನಾಥದೇವರ ಸನ್ನಿದಿಯಲ್ಲಿ ತಮ್ಮ ಗುರುಸ್ವಾಮಿಗಳಿಗೂ, ಮಾತಾ ಪಿತೃಗಳಿಗೂ ಪುಣ್ಯ ಅಧಿಕವಾಗಬೇಕೆಂದೂ ಸರ್ವಮಾನ್ಯವಾಗಿ ಕುಱುದೆಱಯನ್ನು ದತ್ತಿ ಬಿಡಲಾಗಿದೆ. ಇಲ್ಲಿ ಉಕ್ತನಾಗಿರುವ ತಿಮ್ಮರಾಜಯ್ಯನು ಅಳಿಯ ರಾಮರಾಜನ ಒಬ್ಬ ಮಗನಾಗಿದ್ದಾನೆ. ಪ್ರಸ್ತುತ ಈ ಸಂಸ್ಥಾನಿಕರ ವಂಶವೃಕ್ಷದಲ್ಲಿ ಈತನನ್ನು ಪೆದ್ದತಿಮ್ಮ ಎಂದು ನಮೂದಿಸಿರುವಂತಿದೆ. ಅಲಿ ಆದಿಲ್‌ಷಾನು ಪಟ್ಟಕ್ಕೇರಿಸಿದ ಪೆದ್ದತಿಮ್ಮ ಈತನೇ ಇರಬೇಕು.
         ಕ್ರಿ.ಶ. ೧೫೯೧ರಕ್ಕೆ ಸೇರಿದ ಆನೆಗೊಂದಿಯ ರಂಗನಾಥಸ್ವಾಮಿ ದೇವಸ್ಥಾನದ ಹಿಂಭಾಗದ ವೇದಿಕೆಗೆ ಸೇರಿಸಿರುವ ಕಲ್ಲಿನ ಮೇಲಿರುವ ಶಾಸನ೨೪ ಮಹಾ ಮಂಡಳೇಶ್ವರ ರಾಮರಾಜನನ್ನು ಉಲ್ಲೇಖಿಸುತ್ತದೆ. ಉಳಿದ ವಿವರಗಳು ತ್ರುಟಿತವಾಗಿವೆ. ಇಲ್ಲಿ ಉಕ್ತನಾಗಿರುವ ರಾಮರಾಜನು ಬಹುಮಟ್ಟಿಗೆ ನಾಲ್ವಡಿ ರಂಗರಾಯನ ಒಬ್ಬ ಮಗನಾದ ಚಿನ್ನವೆಂಕಟಪತಿರಾಯನ ಮೊಮ್ಮಗ ವೀರವೆಂಕಟನ ಮಗನಾದ ರಾಮ ಅಥವಾ ರಂಗರಾಯನೇ ಆಗಿರಬೇಕು. ಈ ಕಾಲಕ್ಕೆ ಪೆನುಗೊಂಡೆಯಲ್ಲಿ ತಿರುಮಲನ ಮಗನಾದ ವೆಂಟಕಪತಿರಾಯನ ಆಡಳಿತವಿದ್ದಿತು.
         ಹರಪನಹಳ್ಳಿ ತಾಲೂಕು ಮೈದೂರು ಶಾಸನ೨೫ ಕ್ರಿ.ಶ. ೧೬೪೪ಕ್ಕೆ ಸೇರಿದ್ದು ವೀರವೆಂಕಟಪತಿರಾಯನನ್ನು ಉಲ್ಲೇಖಿಸುತ್ತದೆ. ಈತ ಪೆನುಗೊಂಡೆಯಿಂದ ಆಳಿದ ಇಮ್ಮಡಿ ವೆಂಕಟಪತಿರಾಯನಿಂದ ಭಿನ್ನ, ಆದರೆ ಆತನ ಸೋದರನಾದ ಚಿನ್ನವೆಂಕಟಪತಿರಾಯನ ಮಗನಾದ ವೀರವೆಂಕಟರಾಯನದೆಂದು ಇತಿಹಾಸದಿಂದ ತಿಳಿದುಬರುತ್ತದೆ. ಅಲ್ಲದೆ ಇವರಲ್ಲಿ ಇಮ್ಮಡಿ ವೆಂಕಟಪತಿರಾಯನಿಗೆ ಪೆನುಗೊಂಡೆಯ ಸಿಂಹಾಸನವನ್ನು ದೃಢಪಡಿಸಿ ಕೊಡುವಲ್ಲಿ ಬೆಂಗಳೂರಿನ ಇಮ್ಮಡಿ ಕೆಂಪೇಗೌಡನು ನೆರವಾಗಿದ್ದ ವಿವರವನ್ನು ಕೆಂಪೇಗೌಡನ ಜಯಪ್ರಶಸ್ತಿ ಕೃತಿಯು ದೃಢಪಡಿಸುತ್ತದೆ.
         ಆನೆಗೊಂದಿಯಲ್ಲಿರುವ ಇನ್ನೊಂದು ತ್ರುಟಿತ ಶಾಸನದಲ್ಲಿ೨೬ ಮಹಾಮಂಡಳೇಶ್ವರ ರಾಮರಾಯನಿಗೆ ಪುಣ್ಯವಾಗಲಿ ಎಂದು ತಿರುಮಲರಾಜರಾಯನೆಂಬುವವನು ದತ್ತಿ ಬಿಟ್ಟ ವಿವರ ಬಂದಿದೆ. ಇಲ್ಲಿ ಉಕ್ತನಾಗಿರುವ ರಾಮರಾಯ ಈ ಮೊದಲೇ ಉಲ್ಲೇಖಿಸಿದ ರಾಮರಾಯ ಅಥವಾ ರಂಗರಾಯನ ಮೊಮ್ಮಗ ಹಾಗೂ ರಂಗ ಅಥವಾ ವೆಂಕಟರಾಯನ ಮಗನೇ ಆಗಿದ್ದು, ದತ್ತಿ ಬಿಟ್ಟವನು ಆತನ ಸೋದರನೇ ಆಗಿದ್ದ ತಿರುಮಲರಾಯನೆಂದು ತೋರುತ್ತದೆ.
         ಹರಪನಹಳ್ಳಿ ತಾಲುಕು ಕದಂಬಗೆರೆಗೆ ಸೇರಿದ ಕಸವನಹಳ್ಳಿ ಶಾಸನವು೨೭ ಕ್ರಿ.ಶ. ೧೬೬೦ಕ್ಕೆ ಸೇರಿದ್ದು ಶ್ರೀ ವೀರವೆಂಕಟಪತಿರಾಯನನ್ನು ಪ್ರಸ್ತಾಪಿಸುತ್ತದೆ. ಅದೇ ತಾಲೂಕು ಅರಿಶಿನಕೆರೆ ಶಾಸನವು ಕ್ರಿ.ಶ. ೧೬೬೧ಕ್ಕೆ ಸೇರಿದ್ದು ರಾಮರಾಯ ಮಹಾರಾಯನನ್ನು ಪ್ರಸ್ತಾಪಿಸುತ್ತದೆ.೨೮ ಈ ಎರಡೂ ಶಾಸನಗಳಲ್ಲಿ, ಮೊದಲನೆಯದು ಮೇಲೆ ಉಲ್ಲೇಖಿಸಿದ ರಾಮರಾಯ ಅಥವಾ ರಂಗರಾಯನ ಮಗನದೆಂದು ಹೇಳಬಹುದು. ಎರಡನೆಯ ಶಾಸನವು ಶ್ರೀರಂಗರಾಯನ ಇಬ್ಬರು ಮಕ್ಕಳಲ್ಲಿ ಒಬ್ಬನಾದ ರಾಮರಾಯನದೆಂದು ತೋರುತ್ತದೆ. ಇವರ ಕಾಲದಲ್ಲೇ ಇವರ ಪ್ರದೇಶಗಳು ಮೊಗಲರ ಆಳ್ವಿಕೆಗೆ ಒಳಪಟ್ಟಿತು. ಅನಂತರದಲ್ಲಿ ಈ ಪ್ರದೇಶ ಮರಾಠರ ವಶವಾಯಿತೆಂದು ತೋರುತ್ತದೆ.

     -------ಮುಂದುವರಿಯುವುದು

1 comment:

  1. Namasakaar Sir, Anegudi Maharaaja Jambukeshwara bagge hecchina vivaragalu bekidavu, elli sigabaudantha dayavittu tilisi.--Dhanyavaadagalu.Manohar Joshi

    ReplyDelete