Monday, October 14, 2013

ಗ್ರಾಮ ಇತಿಹಾಸ-ಡಾ. ಮಲ್ಲಿಕಾರ್ಜುನ ಕುಂಬಾರ

ಡಾ. ಮಲ್ಲಿಕಾರ್ಜುನ ಕುಂಬಾರ

ನನ್ನೂರು , ರಾಜೂರ - ಗ್ರಾಮ ಇತಿಹಾಸ

ಐತಿಹ್ಯ, ಶಾಸನ ಮತ್ತು ಮೌಖಿಕ ಆಧಾರಗಳ ಸಹಾಯದಿಂದ ಸ್ಥಳ ಒಂದರ ಸಾಮಾಜಿಕ, ಸಾಂಸ್ಕೃತಿಕ ಅಧ್ಯಯನ ಮಾಡುವ ಒಂದು ಸಾರ್ಥಕ ಪ್ರಯತ್ನದ ಫಲ ನನ್ನೂರು ರಾಜೂರು “ ಎಂಬ ಕೃತಿ. ಭಾರತ ಪ್ರಾಚ್ಯ ಇಲಾಖೆಯವರು ಐತಿಹಾಸಿಕ ದಾಖಲೆಗಳ ಸಂಗ್ರಹಕ್ಕಾಗಿ  “village to village”  ಯೋಜನೆಯ ಅಡಿಯಲ್ಲಿ ಪ್ರತಿಯೊಂದು ಗ್ರಾಮದಲ್ಲಿನ ಐತಿಹಾಸಿಕ ಸ್ಮಾರಕಗಳಾದ ಗುಡಿ, ಗುಂಡಾರ, ಶಾಸನ ಹಾಗೂ ಪ್ರಾಗೈತಿಹಾಸಿಕ ತಾಣಗಳ ದಾಖಲೀಕರಣದ  ಯೋಜನೆ  ಹಾಕಿದ್ದರೂ ಅದರ ಅನುಷ್ಠಾನ ಇನ್ನೂಸಂಪೂರ್ಣವಾಗಿ ಆಗ ಬೇಕಿದೆ. ಎಲ್ಲವೂ ಸರ್ಕಾರದ ಅನುದಾನದಿಂದಲೇ ಆಗ ಬೇಕು ಮತ್ತು ಸರ್ಕಾರಿ ಅಧಿಕಾರಿಗಳೇ ಮಾಡಬೇಕೆಂದರೆ ಹಲವು ದಶಕಗಳೇ ಬೇಕಾಗಬಹುದು. ಅದೂ ಅಲ್ಲದೆ ಅವರು ಸಂಗ್ರಹ  ಮತ್ತು ಸಂರಕ್ಷಣ ಕಾರ್ಯಮಾಡಿದರೂ ವಿವರವಾದ ಅಧ್ಯಯನಕ್ಕೆ  ಅಪಾರ ಸಂಪನ್ಮೂಲದ ಅಗತ್ಯವಿದೆ. ಜೊತೆಗೆ ಕೆಂಪುಪಟ್ಟಿಯ ಕಾಟ , ಪರಿಣಿತರ ಕೊರತೆ ಇದ್ದೇ ಇರುವುದು.ಆ ಎಲ್ಲ ಮಿತಿಯಿಂದಾಗಿ ಸರ್ಕಾರದ ಕೆಲಸದ ವೇಗ ಆಮೆಯ ಗತಿಯಲ್ಲಿರುವುದು ಸಹಜ.
ನಮ್ಮಲ್ಲಿ ಐತಿಹಾಸಿಕ ದಾಖಲೆ ಎಂದರೆ ಅಳಿದುಹೋದ ಸಾಮ್ರಾಜ್ಯಗಳ ಕೇಂದ್ರಗಳು ,ಬೃಹತ್‌ ಸ್ಮಾರಕಗಳು, ಯುದ್ದ  ಮಾಡಿ ಗೆದ್ದ ಮತ್ತು ಸೋತು ಸುಣ್ಣವಾದವರ ವಿವರಗಳು ಎಂಬ ಭಾವನೆ ಬಲವಾಗಿ ಬೇರೂರಿದೆ.. ಆದರೆ ಇತಿಹಾಸವೆಂದರೆ ಅಷ್ಟು ಮಾತ್ರವಲ್ಲ. ಸಣ್ಣ ಪುಟ್ಟ ಗ್ರಾಮಗಳು ತಮ್ಮದೆ ಆದ ವೈಶಿಷ್ಟ್ಯವನ್ನು ಹೊಂದಿರದೆ ಇರುವುದರಿಂದ ವಿದ್ವಾಂಸರ ಗಮನ ಸೆಳೆಯುವಲ್ಲಿ ವಿಫಲವಾಗಿವೆ. ಹಾಗೆಂದ ಮಾತ್ರಕ್ಕೆ ಅವುಗಳ ಬಗ್ಗೆ ತಿಳಿಯುವ ಅಗತ್ಯವಿಲ್ಲ ಎಂದರೆ ಇತಿಹಾಸಕ್ಕೆ ಅಪಚಾರ.ಅದ್ದರಿಂದ ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಧ್ಯಯನ ಅಪೂರ್ಣ. ಈ ಕೊರತೆಯನ್ನು  ಡಾ. ಮಲ್ಲಿಕಾರ್ಜುನ ಕುಂಬಾರರ ತಮ್ಮ ಹುಟ್ಟೂರಿನ ಕುರಿತಾದ ಪುಸ್ತಕ   ತುಂಬಿಕೊಡುವುದು.ರಾಜೂರು ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿರುವ ಚಿಕ್ಕ ಗ್ರಾಮ. ಇದು ಭಾರತದಲ್ಲಿರುವ ಸಾವಿರಾರು ಹಳ್ಳಿಗಳ್ಲಿ ಒಂದು. ಯಾವುದೇ ಐತಿಹಾಸಿಕ  ಘಟನೆಗೆ ಸಾಕ್ಷಿಯಾಗದಿದ್ದರೂ ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಮಾಜಿಕವಾಗಿ ಸಮೃದ್ಧವಾದ ಹಳ್ಳಿ. ಅಲ್ಲಿ ದೊರೆತಿರುವ ಶಾಸನಗಳ , ಗುಡಿ, ಜನಜನಿತ ಐತಿಹ್ಯ, ಮೌಖಿಕ ಇತಿಹಾಸದ ಸಂಗ್ರಹಣೆ ಮತ್ತು ಅವೆಲ್ಲವುಗಳ ಸಂಶೋಧನಾತ್ಮಕ ವಿಶ್ಲೇಷಣೆಯ ಫಲ ಶೃತಿಯೇ ಈ ಕೃತಿ.

 ಕೃತಿಯು ೨೪ ಅಧ್ಯಾಯಗಳನ್ನುಹೊಂದಿದ್ದು  ಪೌರಾಣಿಕ, ಶಾಸನೋಕ್ತ  ಹಿನ್ನೆಲೆಯೊಂದಿಗೆ ಅಲ್ಲಿನ  ಪಂಡಿತರು, ವಣಿಕರು,ಗ್ರಾಮದೇವತೆಗಳು  ಪ್ರಾಚೀನ ಮನೆತನಗಳು ಅಲ್ಲಿ ದೊರೆತಿರುವ ಭಗ್ನ ಶಿಲಾವಶೇಷಗಳ ಕುರಿತಾದ ಪ್ರತ್ಯೇಕ ಅಧ್ಯಾಯಗಳಿವೆ. ಪ್ರಾಚೀನ , ಮಧ್ಯಕಾಲೀನ ಮತ್ತು ಆಧುನಿಕ ಕಾಲಘಟ್ಟದ ಚಾರಿತ್ರಿಕ  ಆರ್ಥಿಕ, ಸಾಂಸ್ಕೃತಿಕ ಮತ್ತು ಭೌಗೋಲಿಕ ವಿವರಗಳಿವೆ.ಆಗ್ರಾಮದಲ್ಲಿನ ಐತಿಹ್ಯ ಸಾಹಿತಿಕ ಉಯಲ್ಲೇಖ ಹಾಗೂ  ಪ್ರಾಗೈತಿಕ ಇತಿಹಾಸದ ನೆಲೆಗಳು ಇದ್ದ ಮಾಹಿತಿಯೊಂದಿಗೆ ಊರಿನ ಇತಿಹಾಸ ಪ್ರಾರಂಭವಾಗುವುದು.ಅಲ್ಲಿರುವ ಕಲ್ಗುಡಿಯ ಶಿಲ್ಪ ಮತ್ತು ಅದರೊಡನೆ ಎರಡು ಶಾಸನಗಳ ಸಹಾಯದಿಂದ ಗ್ರಾಮದ ಪ್ರಾಚೀನತೆ ಕ್ರಿ.ಶ ೧೧೧೪ ರದ್ದಾಗಿರುವುದೆಂಬ ಅವರ ಕಾಲನಿರ್ಣಯಕ್ಕೆ ಬರಲು ಅವರಲ್ಲಿನ ಸಂಶೋಧಕ ಶ್ರಮಿಸಿರುವುದು ಗೋಚರವಾಗುವುದು.ಅಂದಿನ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯನ್ನು ಶೋಧಿಸುತ್ತಾ ಕಲ್ಯಾಣ ಸಾಮಂತರ ಸಾಮಂತರ ಪ್ರತಿನಿಧಿಯಾದ ಜೋಗಗಾವುಂಡನ  ಉಲ್ಲೇಖವಿರುವ ರಾಜೂರಿನ ಶಾಸನಗಳನ್ನು ಪರಿಶೀಲಿಸಿದ್ದಾರೆ.
ಊರಿನಲ್ಲಿನ ಪುರಾತನ ಮನೆತನಗಳಾದ ಕೋರಿ , ಮೇಟಿ, ಜೋಗಿನ, ಮತ್ತು ಹಸಬಿಗಳ ಉಗಮ ಮತ್ತು ಅವುಗಳು ಹೇಗೆ ಹಿಂದೆ ಗ್ರಾಮವು ವ್ಯಾಪಾರದ ಕೇಂದ್ರವಾಗಿದ್ದಿರಬಹುದು  ಎಂಬ ನಿರೂಪಣೆಯು ಅದಕ್ಕೆ ಶಾಸನ ಮತ್ತು ಭಗ್ನಾವಶೇಷಗಳ ವಿಶ್ಲೇಷಣೆಯ ಮೂಲಕ  ನಿರ್ಧರಿಸಿರುವರು.
ಅವರ ಊರಿನಲ್ಲಿ ವಿವಿಧ ಜಾತಿಯವರಿಗೆ ಬೇರೆ ಬೇರೆ ಸ್ಮಶಾನಗಳು ಇದ್ದಂತೆ ಮಂಗನಿಗೂ ಒಂದು ಸ್ಮಶಾನವಿತ್ತೆಂಬ ಅವರ ವಿವರಣೆ ಕುತೂಹಲ ಮೂಡಿಸುತ್ತದೆ.ಗ್ರಾಮವು ಒಂದು ಕಾಲದಲ್ಲಿ  ಸುಣ್ಣ ಮತ್ತು ಸೌಳಿಗೆ ಹೆಸರಾಗಿದ್ದುದನ್ನುದಾಖಲಿಸಿದ್ದಾರೆ.. ಹತ್ತೊಂಬತ್ತನೆ ಶತಮಾನದ ಆದಿಯಲ್ಲಿದ್ದ ಮಠದಲ್ಲಿನ ಏಕ ವ್ಯಕ್ತಿ ಶಾಲೆಯು ಹೇಗೆ ಬೆಳೆಯಿತು ಎಂಬುದರ ವಿವರಣೆ ಇದೆ.
ಆಂದಿನ ಆಯಗಾರರು , ನಾಪಿತರು, ಕುಂಬಾರರು, ಅಚಾರಿಗಳು, ಅಗಸರು,ಹೂಗಾರರು ,ಕಮ್ಮಾರರು ಹೇಗೆ ವರ್ಷಕೊಮ್ಮ ರಾಶಿ ಸಮಯದಲ್ಲಿ ಧಾನ್ಯ  ಪಡೆದು ವರ್ಷಪೂರ್ತಿ ನಿರ್ವಂಚನೆಯಿಂದ ಕೆಲಸ ಮಾಡುತ್ತಾ ಇದ್ದ ಸಮಾಜದ ಚಿತ್ರಣ ನೀಡಿರುವರು. ಶತಮಾನದ ಹಿಂದೆ ಇದ್ದ ನಂಬಿಕೆ ಆಚರಣೆಗಳ ವಿವರ ಇದೆ. ಅಂದು ಗಾಂವಟಿನ ವೈದ್ಯರು, ಪಶು ಚಿಕಿತ್ಸಕರು , ಹಾವು ಕಡಿದರೆ, ಕಾಮಣಿಯಾದರೆ,ಹೆರಿಗೆಯ ತೊಂದರೆಯಾದರೆ  ನಾರು ಬೇರಿನ ಔಷಧಿ ನೀಡಿ ಪರಿಹಾರ ಕೊಡುತಿದ್ದ ಇಇತರರು ಶತಶತಮಾನಗಳಿಂದ ವಂಶಪಾರ್ಯಂಪರೆ ಯ ಜ್ಞಾನದ ಬಳಕೆ ಮಾಡಿ ಉಪಶಮನ ನೀಡುತ್ತಿರುವವರ  ವಿವರಣೆ ದಾಖಲಿಸಿರುವರು.

  ಇವರ  ಮೌಖಿಕ ಇತಿಹಾಸವು ಸಂಗ್ರಹವು ಬಹಳಸ್ವಾರಸ್ಯವಾಗಿದೆ, ಶತಮಾದ ಹಿಂದೆ ಸತತ ಹತ್ತುದಿನಗಳವರೆಗೆ ಬಂದ ಸ್ವಾತಿ ಮಳೆಯ ವಿವರವನ್ನು ಶತಾಯುಷಿಯೊಬ್ಬರ ಮಾತಿನಲ್ಲಿ  ಈಗ ಇಪ್ಪತ್ತು ವರ್ಷದ ಹಿಂದ ದಾಖಲಿಸಿ, ಅದರಿಂದಾ ದ ತೊಂದರೆ ಮತ್ತು ಅದರ ತಡೆಗೆ ಮಾಡಿದ ಪ್ರಯತ್ನಗಳ ವಿವರಣೆ ನೀಡಿರುವುದು ಅಂದಿನ ಸಾಮಾಜಿಕ ಜೀವನದ ಒಳ ನೋಟ ಕೊಡುವುದು.
ಕೃತಿಯಲ್ಲಿ  ಅಲ್ಲಿ ದೊರೆತಿರುವ ಶಾಸನಗಳ ವಿವರ ಮತ್ತು ಅವುಗಳ  ಪೂರ್ಣಪಾಠ ವನ್ನು ಅನುಬಂಧದಲ್ಲಿ ನಿಡಿರುವುದು ಜೊತೆಯಲ್ಲಿ ಗ್ರಾಮದ ಇತಿಹಾಸಕ್ಕೆ ಸಂಬಂಧಿಸಿದ ಚಾಯಾಚಿತ್ರಗಳನ್ನು ನೀಡಿರುವುದ ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ,
ಈಗಾಗಲೇ ಇತಿಹಾಸ ಅಧ್ಯಯನದ ಪ್ರಮುಖ ಭಾಗವೇ ಆಗಿರುವ  “ಸ್ಥಳ ನಾಮ ಸೊಸೈಟಿ’ ಈ ಕುರಿತು ಅಧ್ಯಯನ ಕೈಕೊಂಡಿದೆ. ವ್ಯಾಪಕ ಕಾರ್ಯಚಾರಣೆ ಮಾಡುತ್ತಿದೆ. ಅದು ಯಶಸ್ವಿಯಾಗುವುದು ಸ್ಥಳಿಯ ಆಸಕ್ತರು ಭಾಗವಹಿಸಿದರೆ ಮಾತ್ರ ಪರಿಪೂರ್ಣ ಅಧ್ಯಯನ ಸಾಧ್ಯ. ಅದರಲ್ಲೂ ಸ್ಥಳಿಯ ವಿದ್ವಾಂಸರೇ ಮುಂದೆ ಬಂದರೆ ಪರಿಪೂರ್ಣ ಚಿತ್ರಣದೊರೆಯುವುದು.  ಈ ದಿಶೆಯಲ್ಲಿ ಡಾ.ಮಲ್ಲಿಕಾರ್ಜುನ ಕುಂಬಾರರ ಕೃತಿಗೆ ಪ್ರಾಮುಖ್ಯತೆ ದೊರೆಯುವುದು  ಈ ಕೃತಿಯಲ್ಲಿನ ಕೆಲವು ಅಂಶಗಳು ಐತಿಹಾಸಿಕವಾಗಿ ಖಚಿತವಾಗಿವೆ ಎಂಬ ಬಗ್ಗೆ ನಿಖರ ಸಂಶೋಧನೆಯ ಅಗತ್ಯ ಇದೆ  ಎಂದು  ಆಕ್ಷೇಪಣೆ ಎತ್ತುವ ಸಾಧ್ಯತೆ ಇದೆ. ಆದರೆ ಡಾ.ಕುಂಬಾರರ ಪ್ರಯತ್ನದ ಹಿಂದಿನ ಕಳಕಳಿ ಮತ್ತು ಶ್ರಮ ಮೆಚ್ಚುಗೆಗ ಪಾತ್ರ. ಹೆಸರಾಂತ ವಿಷಯ ಕುರಿತಾದ ಸಂಶೋಧನೆಗಳನ್ನು ಮಾಡಲು ಹಲವಾರು ವಿದ್ವಾಂಸರು ಸಿಗುವರು., ಸಂಘ ಸಂಸ್ಥೆಗಳು ತುದಿಗಾಲಲ್ಲಿ ನಿಂತಿರುತ್ತವೆ. ಅವುಗಳಿಗೆ ಹಣಕಾಸಿನ  ಅಭಾವವೂ ಇರುವುದಿಲ್ಲ. ಆದರೆ ಯಾವುದೇ ಹಣಕಾಸಿನ ನೆರವು, ಪರಾಮರ್ಶನ ಗ್ರಂಥಗಳು  ಮತ್ತು ತಜ್ಞರ ಸಲಹೆಯ ಅವಕಾಶವಿಲ್ಲದ ಗ್ರಾಮಾಂತರ ಪ್ರದೇಶದಲ್ಲಿ   ನೆಲಸಿರುವ  ಡಾ. ಮಲ್ಲಿಕಾರ್ಜುನ ಕುಂಬಾರರ  ಪ್ರಯತ್ನವು ಅಭಿನಂದನೀಯ.

ಈ ಪುಸ್ತಕದ ಪರಿಚಯ ಮತ್ತು ವಿಮರ್ಶೆಯನ್ನು ಇತಿಹಾಸ ಅಕಾದಮಿಯ ಬ್ಲಾಗ್‌ನಲ್ಲಿ ಪ್ರಕಟಿಸಿರುವುದರಿಂದ ನಮ್ಮ ಸದಸ್ಯರೆಲ್ಲರಿಗೂ ಈ ಕುರಿತು ಮಾಹಿತಿ ದೊರೆತು ಸ್ಪೂರ್ತಿ ಪಡೆದು ತಮ್ಮ ಊರಿನ ಅಥವ ತಮ್ಮ ಅಕ್ಕಪಕ್ಕದ ಗ್ರಾಮ ಕುರಿತಾದ ಕೃತಿ ರಚಿಸಲುಪ್ರೇರಣೆ ದೊರೆಯಬಹುದೆಂದು ಆಶಿಸಿದೆ.

No comments:

Post a Comment