Sunday, August 10, 2014

ಚಿಕ್ಕಹನಸೋಗೆಯ ತ್ರಿಕೂಟಾಚಲ ಬಸದಿ


ಚಿಕ್ಕಹನಸೋಗೆಯ ತ್ರಿಕೂಟಾಚಲ ಬಸದಿ

ಟಿ. ರಾಜು
ಕರ್ನಾಟಕದಲ್ಲಿ ಆಳ್ವಿಕೆ ನಡೆಸಿದ ಸಣ್ಣ ರಾಜಮನೆತನಗಳ ಪೈಕಿ ಚಂಗಾಳ್ವರ ಮನೆತನ ಪ್ರಸಿದ್ಧವಾಗಿದ್ದು, ಅವರ ಕಾಲದ ಸಾಂಸ್ಕøತಿಕ ಪ್ರಗತಿಯ ಬಗ್ಗೆ ಹೆಚ್ಚಿನ ಅಧ್ಯಯನ ಅಗತ್ಯವಿದೆ. ಬಿ.ಎಲ್. ರೈಸ್, ಹಯವದನರಾವ್. ಸೂರ್ಯನಾಥ ಕಾಮತ್ ಮತ್ತು ಹೆಚ್.ಎಸ್. ಗೋಪಾಲರಾವ್ ಮುಂತಾದವರು ಚಂಗಾಳ್ವರ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಮೇಲಿನ ಅಧ್ಯಯನದ ವಿವರ ಬಸದಿಯ ಖುದ್ದು ಅಧ್ಯಯನ ಹಾಗು ಬಸದಿಯ ಪ್ರಧಾನ ಅರ್ಚಕರು ಮತ್ತು ಚಂಗಾಳ್ವರ ಕಾಲದಿಂದಲೂ ರಾಜಾಶ್ರಯ ಪಡೆದಿದ್ದ ವಿದ್ವಾಂಸ ಮನೆತನದವರಾದ ಡಾ. ಡಿ. ಶರ್ಮ ಜೋಯಿಸ್‍ರವರಿಂದ ಪಡೆದ ಮಾಹಿತಿಯನ್ನು ಆಧರಿಸಿ ಈ ಲೇಖನವನ್ನು ಸಿದ್ಧಪಡಿಸಲಾಗಿದೆ.
ಚಿಕ್ಕಹನಸೋಗೆ ಗ್ರಾಮವು ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲ್ಲೂಕಿನ ಅತ್ಯಂತ ಪ್ರಾಚೀನ ಹಾಗೂ ಐತಿಹಾಸಿಕ ನೆಲೆ. ಈ ಗ್ರಾಮವು ಚಂಗಾಳ್ವ ಮತ್ತು ಚೋಳರ ಕಾಲದಿಂದಲೂ ಚಿನ್ನಸೋಗೆ, ಪನಸೋಗೆ, ಹೊನ್ನಸೋಗೆ ಹಾಗು ಹನಸೋಗೆ ಎಂಬ ಹೆಸರುಗಳಿಂದ ಪ್ರಸಿದ್ಧಿ ಪಡೆದು ಚಂಗಾಳ್ವರ ಆಡಳಿತ ಕೇಂದ್ರವಾಗಿ. ಐತಿಹಾಸಿಕ ಹಾಗೂ ಧಾರ್ಮಿಕ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ. ಹಲವಾರು ಶಾಸನಗಳು ಸಹ ಇಲ್ಲಿ ದೊರೆತಿವೆ. ಇಲ್ಲಿ ತ್ರಿಕೂಟಾಚಲ ಜೈನ ಬಸದಿ ಇದೆ. ಚೆಂಗಾಳ್ವರು ಗಂಗರ, ಚೋಳರ ನಂತರ ಹೊಯ್ಸಳರ ಸಾಮಂತರಾಗಿ ಈ ಭಾಗದಲ್ಲಿ ಆಳ್ವಿಕೆ ನಡೆಸಿರುವುದು ತಿಳಿದುಬರುತ್ತದೆ. ಕ್ರಿ.ಶ.11ನೇ ಶತಮಾನದಲ್ಲಿ ಹನಸೋಗೆ ಜೈನಧರ್ಮದ ಪ್ರಮುಖ ಕೇಂದ್ರವಾಗಿದ್ದು ಹಲವಾರು ಸಂಘಗಳು ಅಂದಿನ ಕಾಲಕ್ಕೆ ನೆಲೆಗೊಂಡಿದ್ದಕ್ಕೆ ಶಾಸನೋಕ್ತ ದಾಖಲೆಗಳಿವೆ. ಮೂಲಸಂಘ, ದೇಶಿಗಣ, ಪುಸ್ತಕಗಚ್ಚ ಮತ್ತು ಕುಂದಕುಂದಾನ್ವಯ ಸಾಲಿಗೆ ಸೇರಿದ ಜೈನ ಗುರುಗಳು ಚಿಕ್ಕ ಹನಸೋಗೆಯಲ್ಲಿ ನೆಲೆಸಿದ್ದಾಗಿ ತಿಳಿದುಬರುತ್ತದೆ.
11-12ನೇ ಶತಮಾನದಲ್ಲಿ ಸುಮಾರು ಅರವತ್ತಕ್ಕು ಹೆಚ್ಚು ಬಸದಿಗಳು ಚಿಕ್ಕ ಹನಸೋಗೆಯಲ್ಲಿ ಇದ್ದ ಬಗ್ಗೆ ಶಾಸನಗಳು ತಿಳಿಸುತ್ತವೆ. ಅಲ್ಲದೆ ಜೈನಗುರುಗಳು, ಆಚಾರ್ಯರು ಹಲವಾರು ಕೈಂಕರ್ಯವನ್ನು ನಡೆಸಿದ ವಿವರಗಳು ದಾಖಲೆಯಲ್ಲಿದೆ. ಅದಕ್ಕೆ ಊರಿನ ಮಧ್ಯಭಾಗದಲ್ಲಿ ನಿರ್ಮಾಣವಾಗಿರುವ ತ್ರಿಕೂಟಾಚಲ ಜೈನ ಬಸದಿ ನಿದರ್ಶನವಾಗಿದ್ದು ಚಂಗಾಳ್ವರ ಕಾಲದ ಜೈನ ಧರ್ಮದ ಬಗ್ಗೆ ಸಾಕ್ಷಿಯಾಗಿದೆ.
ಚಂಗಾಳ್ವರ ದೊರೆಯಾದ ವೀರರಾಜೇಂದ್ರನು ಚೋಳರ ರಾಜರಾಜಚೋಳನ ಆಳ್ವಿಕೆಯಲ್ಲಿ ಮಾಂಡಲೀಕನಾಗಿದ್ದು ಚಿಕ್ಕಹನಸೋಗೆಯಲ್ಲಿ ಆದಿನಾಥ, ಚಂದ್ರನಾಥ ಮತ್ತು ನೇಮಿನಾಥ ಎಂಬ ತೀರ್ಥಂಕರರ ತ್ರಿಕೂಟಾಚಲ ಬಸದಿಯನ್ನು ನಿರ್ಮಿಸಿದನೆಂದು ತಿಳಿದುಬರುತ್ತದೆ. ಈ ಬಸದಿಯು ಸರಳವಾದ ಕಟ್ಟಡವಾಗಿದ್ದು ಮೂರು ಗರ್ಭಗುಡಿಗಳನ್ನು, ಅಂತರಾಳ ಮತ್ತು ನವರಂಗಗಳನ್ನು ಹೊಂದಿದೆ. ಮೂರೂ ನವರಂಗಗಳಿಗೆ ಮಧ್ಯದಲ್ಲಿ ಮಹಾಮಂಟಪ ಇದೆ. ಮಹಾ ಮಂಟಪದ ಪೂರ್ವಭಾಗಕ್ಕೆ ಎರಡು ಕಂಭಗಳು ಮುಂದೆ ಚಾಚಿರುವ ಮಂಟಪ ಇದೆ.
ಬಸದಿಯ ಅಧಿಷ್ಠಾನವು ಉಪಾನ ದುಂಡಾದ ಕುಮುದ ಕಂಠ ಮತ್ತು ಅಲ್ಲಲ್ಲಿ ಕೂಡುಗಳನ್ನು ಹೊಂದಿರುವ ಕಪೆÇೀತ ವನ್ನು ಹೊಂದಿದೆ. ಬಸದಿಯ ಭಿತ್ತಿ ಮೇಲೆ ಕೋಷ್ಠಕಗಳಿವೆ.
ಆದಿನಾಥ ಗರ್ಭಗುಡಿಯು ಮಧ್ಯಭಾಗದಲ್ಲಿದ್ದು ಪೂರ್ವಕ್ಕೆ ಮುಖ ಮಾಡಿಕೊಂಡಿದೆ. ಆದಿನಾಥ ಶಿಲ್ಪವು ಪದ್ಮಾಸನದಲ್ಲಿದ್ದು ಧ್ಯಾನಮುದ್ರೆಯಲ್ಲಿದೆ. ಆದಿನಾಥನಿಗೆ ಇಬ್ಬರು ಚಾಮರಧಾರಿಗಳು ಇದ್ದಾರೆ, ಈ ಚಾಮರಧಾರಿಗಳು ಪ್ರಭಾವಳಿಯಲ್ಲಿರುವುದು ಒಂದು ವಿಶೇಷತೆ. ಆದಿನಾಥನಿಗೆ ಹಿಂಭಾಗದಲ್ಲಿ ಸಿಂಹಾಸನದ ಕೆತ್ತನೆ ಕಂಡುಬರುವುದಿಲ್ಲ. ಇದರಿಂದ ಅದರ ಪ್ರಭಾವಳಿಯ ಮೇಲ್ಭಾಗದಲ್ಲಿ ಅಲಂಕೃತ ಗೊಂಡ ಮುಕ್ಕೋಡೆ ಕಂಡುಬರುತ್ತದೆ. ಸಿಂಹಗಳ ಕೆತ್ತನೆ ಇರುವ ಪೀಠದ ಮೇಲೆ ಆದಿನಾಥನ ವಿಗ್ರಹವಿದೆ. ಶಿಲ್ಪವು ಸುಂದರವಾಗಿದ್ದು ಹೆಚ್ಚು ಅಲಂಕೃತವಾಗಿಲ್ಲ, ಈ ಗರ್ಭಗುಡಿಯ ದ್ವಾರ ಆಕರ್ಷಕವಾಗಿದ್ದು ದ್ವಾರದ ತೊಲೆಯ ಮೇಲೆ “ಶ್ರೀ ರಾಜರಾಜೇಂದ್ರ ಚೋಳ ಪುಸ್ತಕಗಚ್ಛಂ” ಎಂದು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಕೆತ್ತಲಾಗಿದೆ.
ಉತ್ತರ ದಿಕ್ಕಿಗೆ ಮುಖಮಾಡಿಕೊಂಡಿರುವ ಚಂದ್ರನಾಥ ಗರ್ಭಗುಡಿಯ ನವರಂಗ ದ್ವಾರವು ಐದು ಶಾಖೆಗಳಿಂದ ಅಲಂಕೃತಗೊಂಡ ದ್ವಾರವಾಗಿದೆ. ಇವುಗಳಲ್ಲಿ ಬಳ್ಳಿ ಸುರುಳಿ ಹಾಗೂ ಲತಾ ವಿನ್ಯಾಸಗಳ ಮಧ್ಯೆ ಯಕ್ಷರ ಕಿರು ಶಿಲ್ಪ ಅಲಂಕಾರಿಕ ಕಂಬ, ಸಿಂಹ ಹಾಗೂ ಬಳ್ಳಿಗಳು ಕ್ರಮವಾಗಿ ಕಂಡುಬರುತ್ತವೆ. ಲಲಾಟ ಬಿಂಬದಲ್ಲಿ ಸುಂದರವಾದ ಗಜಲಕ್ಷ್ಮಿಯ ಶಿಲ್ಪವಿದೆ. ದ್ವಾರಶಾಖೆಯಲ್ಲಿ ಕಂಡುಬರುವ ಕಂಭಗಳು ಹದಿನಾರು ಮುಖವುಳ್ಳ ದಿಂಡನ್ನು ಹೊಂದಿದೆ.

ದಕ್ಷಿಣಕ್ಕೆ ಮುಖ ಮಾಡಿರುವ ಗರ್ಭಗುಡಿಯಲ್ಲಿರುವ ಶಿಲ್ಪವು ಆಕರ್ಷಕವಾಗಿದ್ದು ಸರಳವಾದ ಕೆತ್ತನೆಯನ್ನು ಹೊಂದಿದೆ. ಈ ಶಿಲ್ಪವು ಕೂಡ ಆದಿನಾಥನಂತೆ ಪ್ರಭಾವಳಿ ಹಾಗೂ ಪರಿಚಾರಕಿ ಯಕ್ಷ-ಯಕ್ಷಿಯರನ್ನು ಪ್ರಭಾವಳಿಯ ಮೇಲೆ ಹೊಂದಿದೆ. ಈ ಶಿಲ್ಪವು ಕುಸುರಿಯಿಂದ ಕೂಡಿದ್ದ್ದು, ಆಕರ್ಷಕವಾದ ವಿನ್ಯಾಸವನ್ನು ಹೊಂದಿದೆ.
ಮೂರು ನವರಂಗಗಳನ್ನು ಜೋಡಿಸಿರುವ ಮಂಟಪದ ವಿನ್ಯಾಸ ಆಕರ್ಷಕವಾಗಿದ್ದು ನವರಂಗದ ಭಾಗಿಲುಗಳಿಗೆ ಹೊಂದಿಕೊಂಡಂತೆ ಎತ್ತರದ ಸೋಪಾನಗಳು ಇವೆ. ಈ ಸೋಪಾನದ ಮೇಲೆ ಮಂಟಪದ ಸುತ್ತಲೂ ಕಂಭಗಳನ್ನು ಕೂರಿಸಲಾಗಿದೆ. ಈ ಸೋಪಾನಗಳನ್ನು ಒಂದೇ ತೆರನಾದ ಜಗಲಿ ಅಥವಾ ಶಾಸನಗಳಂತೆ ವಿನ್ಯಾಸಗೊಳಿಸಲಾಗಿದೆ ಮಧ್ಯದಲ್ಲಿ ಎತ್ತರದ ಕಂಭಗಳಿದ್ದು ವಿನ್ಯಾಸದಲ್ಲಿ ದ್ರಾವಿಡ ಶೈಲಿಯನ್ನು ಹೊಂದಿವೆ. ಚೌಕದ ಪೀಠ, ಚೌಕದ ತಳಭಾಗ ಅಷ್ಟಮುಖವುಳ್ಳ ಪಟ್ಟಿಕೆ, ಉಬ್ಬುಗಳುಳ್ಳ ದುಂಡಾದ ದಿಂಡು ಪಲಗೈ ಮತ್ತು ಚಾಚು ಪೀಠಗಳು ಕಂಭಗಳ ವಿನ್ಯಾಸಗಳಲ್ಲಿ ಕಂಡುಬರುತ್ತದೆ. ಈ ಕಂಭಗಳು ಹೊಯ್ಸಳ ಶೈಲಿಯ ಪ್ರೌಢಕಂಭಗಳ ಬೆಳವಣಿಗೆಯ ಪೂರ್ವ ಹಂತವನ್ನು ತೋರಿಸುತ್ತವೆ.
ಈ ಕಂಭಗಳ ಮೇಲ್ಭಾಗವು ಕುಂಭಗಳನ್ನು ಹೊಂದಿದ್ದು, ಇವುಗಳೊಳಗಿಂದ ಎಲೆಗಳು ಹೊರಚಾಚಿದಂತೆ ಕಾಣುತ್ತದೆ. ಇವು ಪೂರ್ಣ ಕಳಸದ ಸಂಕೇತವಾಗಿದೆ. ಈ ಕಂಭಗಳ ಮೇಲೆ ಉಬ್ಬು-ತಗ್ಗು, ಮೈಯುಳ್ಳ ಹೂದಾನಿ ಆಕೃತಿ ಕಂಠವಿದೆ. ಬೋದಿಗೆಗಳು ಕೂಡ ಉಬ್ಬು ಮೈಯನ್ನು ಹೊಂದಿವೆ. ಇವುಗಳಲ್ಲಿನ ದಿಂಬು ಆಮ್ಲಕದಂತೆ ಕಾಣುತ್ತದೆ. ಈ ಬೋದಿಗೆಯ ಮೇಲೆ ತರಂಗಪೆÇೀತಕವಿದ್ದು ದ್ವಾರಬಂಧದ ಮೇಲ್ಭಾಗದಲ್ಲಿ ಹೊರಚಾಚಿರುವಂತೆ ತೆಳುವಾದ ಕಪೆÇೀತವಿದ್ದು ಮೇಲೆ ಕೀರ್ತಿ ಮುಖವುಳ್ಳ ಅಲಂಕಾರವಾದಿ ಕೋಡುಗಳು ತೆಳು ಕೆತ್ತನೆಯನ್ನು ಹೊಂದಿವೆ.
ಚಿಕ್ಕಹನಸೋಗೆಯ ಆದಿನಾಥ ಬಸದಿ ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿದೆ. ಜೈನ ಸಂಘವಾದ ಪುಸ್ತಕಗಚ್ಚಕ್ಕಾಗಿ ಚಂಗಾಳ್ಳ ದೊರೆ ವೀರ ರಾಜೇಂದ್ರನು ನಿರ್ಮಿಸಿದನು. ರಾಜೇಂದ್ರ ಚೋಳನ ಬಸದಿ ಎಂದು ಇದನ್ನು ಶಾಸನಗಳು ತಿಳಿಸುತ್ತವೆ. ಈ ಸಂಗತಿ ಅವರು ಅನ್ಯ ಧರ್ಮಗಳೊಂದಿಗೆ ಹೊಂದಿದ್ದ ಒಲವು ತಿಳಿದುಬರುತ್ತದೆ.
ಹಿಂದೆÉ ಚಂಗಾಳ್ವರ ಕಾಲದಲ್ಲಿ ವೈಭವದಿಂದ ಮೆರೆದು ಆಡಳಿತ ಕೇಂದ್ರವಾಗಿದ್ದ ಚಿಕ್ಕಹನಸೋಗೆಯಲ್ಲಿ ಬ್ರಾಹ್ಮಣ ಮತ್ತು ಜೈನ ಧರ್ಮೀಯರಿದ್ದರು. 650 ವರ್ಷಗಳ ಹಿಂದೆ ಪಿರಿಯಾಪಟ್ಟಣ-ಬೆಟ್ಟದಪುರದ ಲಿಂಗಾಯಿತ ಪಾಳೆಯಗಾರನಿಗೂ, ಪನ್ನಸೋಗೆಯ ಜೈನಪಾಳೆಗಾರನಿಗೂ ಕಾವೇರಿ ನದಿ ದಡದಲ್ಲಿ ನಡೆದ ಯುದ್ಧದಲ್ಲಿ ಜೈನ ಪಾಳೆಗಾರ ಸೋತುಹೋದ, ಕಾಲಕ್ರಮದಲ್ಲಿ ಈ ಪಟ್ಟಣವು ಅವನತಿಗೊಂಡಿರುವಂತೆ ತೋರುತ್ತದೆ. ಹಿಂದೆ ಪ್ರಮುಖ ಆಡಳಿತ ಕೇಂದ್ರವಾಗಿದ್ದ ಪನ್ನಸೋಗೆ ಈಗ ದೊಡ್ಡ ಹನಸೋಗೆ ಮತ್ತು ಚಿಕ್ಕ ಹನಸೋಗೆ ಎಂಬ ಎರಡು ಗ್ರಾಮಗಳಾಗಿವೆ. ದೊಡ್ಡ ಹನಸೋಗೆಯಲ್ಲಿ ಬ್ರಾಹ್ಮಣರು ಬಹು ಸಂಖ್ಯಾತರಾಗಿದ್ದಾರೆ. ಚಿಕ್ಕ ಹನಸೋಗೆಯಲ್ಲಿ ಒಕ್ಕಲಿಗರು ಬಹು ಸಂಖ್ಯಾತರಾಗಿದ್ದು ಈಗ ಜೈನರ ಒಂದೇ ಒಂದು ಕುಟುಂಬ ಮಾತ್ರ ಈ ಗ್ರಾಮದಲ್ಲಿರುವುದು ವಿಶೇಷವಾಗಿದೆ. ಹಿಂದೆ ಲಲಿತಕೀರ್ತಿಸ್ವಾಮಿ ಎಂಬ ಜೈನ ಗುರುವಿದ್ದು ಸುತ್ತಮುತ್ತಲ ಹದಿನಾರು ಗ್ರಾಮಗಳ ಜೈನಬಸದಿಗಳಿಗೆ ಗುರುವಾಗಿದ್ದರು. ಚಂಗಾಳ್ವರ ರಾಜಕುಮಾರಿಯರು ಹಿಂದೆ ಚಿಕ್ಕಹನಸೋಗೆಯಲ್ಲಿ ಎರಡು ಕೆರೆಗಳನ್ನು ನಿರ್ಮಿಸಿದ್ದು ಈಗ ಅಕ್ಕನ ಕೆರೆ ಮತ್ತು ತಂಗಿಯ ಕೆರೆ ಎಂದು ಪ್ರಸಿದ್ಧವಾಗಿದ್ದು ಸಾವಿರಾರು ಎಕರೆ ಜಮೀನಿಗೆ ನೀರಾವರಿಯನ್ನು ಒದಗಿಸುತ್ತಿವೆ ಎಂದು ಸ್ಥಳೀಯರು ಹೇಳುತ್ತಾರೆ. ಈ ಗ್ರಾಮಕ್ಕೆ ಸಮೀಪವಿರುವ ಸಾಲಿಗ್ರಾಮದಲ್ಲಿ ಜೈನರ ಕುಟುಂಬಗಳು ಸಾಕಷ್ಟಿವೆ. ಹೊಯ್ಸಳರ ಕಾಲದಲ್ಲಿ ಶ್ರೀ ರಾಮಾನುಜಾಚಾರ್ಯರು ಚಿಕ್ಕ ಹನಸೋಗೆ ಗ್ರಾಮಕ್ಕೆ ಬಂದಿದ್ದು ಅಲ್ಲಿ ಮತಾಂತರ ಕಾರ್ಯಕ್ರಮವನ್ನು ಹಮ್ಮಿಕೊಂಡರೆಂದು, ಅಲ್ಲಿದ್ದ ಜೈನರಿಗೆ ನಾಮ ಹಾಕಿಸಿ ಮತಾಂತರಗೊಳಿಸಿದ್ದರೆಂದು ಹೇಳಲಾಗುತ್ತದೆ. ಇಂದಿಗೂ ಈ ಭಾಗದಲ್ಲಿ ನಾಮಧಾರಿಗೌಡ ಎಂಬ ಜಾತಿಯ ಜನರಿದ್ದು ಶುದ್ಧ ಸಸ್ಯಹಾರಿಗಳಾಗಿದ್ದಾರೆ. ಇವರಿಗೂ ಮತ್ತು ಜೈನರಿಗೂ ವೈವಾಹಿಕ ಸಂಬಂಧಗಳು ನಡೆÀಯುತ್ತವೆ. ಈ ಮೇಲಿನ ವಿವರಣೆಯಿಂದ ಚಂಗಾಳ್ವರ ಕಾಲದಲ್ಲಿ ಪ್ರಸಿದ್ಧವಾಗಿದ್ದ ಜೈನ ಧರ್ಮ ಚಿಕ್ಕ ಹನಸೋಗೆ ಪ್ರಮುಖ ಜೈನ ಕೇಂದ್ರವಾಗಿದ್ದು ಜೈನಧರ್ಮದ ಪ್ರಚಾರ ಹಾಗೂ ಪ್ರಸಿದ್ಧಿಗೆ ಹೆಸರುವಾಸಿಯಾಗಿತ್ತು. ಹೊಯ್ಸಳರ ಆಳ್ವಿಕೆಯ ಕಾಲದಲ್ಲಿ ಈ ಭಾಗದಲ್ಲಿ ಜೈನಧರ್ಮ ತನ್ನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದಕ್ಕೆ ಅಂದಿನ ಕಾಲದಲ್ಲಿ ಚಿಕ್ಕ ಹನಸೋಗೆಯಲ್ಲಿ ಜೈನಧರ್ಮ ಅತ್ಯಂತ ಸಾಕ್ಷಿಯಾಗಿ ಆದಿನಾಥ ತ್ರಿಕೂಟಾಚಲ ಬಸದಿ ಪ್ರಸ್ತುತ ಕಂಡುಬರುತ್ತದೆ.

ಆಧಾರಸೂಚಿ
1. ಎಪಿಗ್ರಾಪಿಯ ಕರ್ನಾಟಕ, ಸಂ. 8, ಹಾಸನ.
2. ಎಪಿಗ್ರಾಪಿಯ ಕರ್ನಾಟಕ, ಸಂ. 4, ಪಿರಿಯಾಪಟ್ಟಣ, ಹುಣಸೂರು.
3. ಎಪಿಗ್ರಾಪಿಯ ಕರ್ನಾಟಕ, ಸಂ. 1, ಕೊಡಗು.
4. ಎಪಿಗ್ರಾಪಿಯ ಕರ್ನಾಟಕ, ಸಂ. 5, ಕೆ.ಆರ್. ನಗರ
5. ಎಪಿಗ್ರಾಪಿಯ ಕರ್ನಾಟಕ, ಸಂ. 5, ಮೈಸೂರು.
6. ಎಪಿಗ್ರಾಪಿಯ ಕರ್ನಾಟಕ, ಸಂ. 3, ಹೆಚ್.ಡಿ. ಕೋಟೆ.
7. ಮೈನರ್ ಡೈನಾಸ್ಟಿಸ್ ಆಫ್ ಸೌತ್ ಇಂಡಿಯಾ, ಡಾ. ಬಿ.ಆರ್. ಗೋಪಾಲ್.
8. ಚೋಳರ ಕಾಲದ ವಾಸ್ತು ಮತ್ತು ಶಿಲ್ಪ, ಡಾ. ಬಸವರಾಜು.
9. ಡಾ. ಡಿ. ಶರ್ಮ ಜೋಯಿಸ್ ಸ್ಥಳೀಯರು ಇವರಿಂದ ಮಾಹಿತಿ.

 ಸಹಾಯಕ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ), ಮಂಡ್ಯ-571401.


ತ್ರಿಕೂಟಾಚಲ ಬಸದಿಯ ಮುಖ್ಯ ದ್ವಾರ

   

No comments:

Post a Comment