Thursday, December 19, 2013

ಭೈರವ ಭಕ್ತರು

ಭೈರವಭಕ್ತ - ಗಂಗ ವಂಶೀಯರು
- ಡಾ|| ಪಿ.ವಿ. ಕೃಷ್ಣಮೂರ್ತಿ
 








ಕೊಂಗುಣಿವರ್ಮ ಧರ್ಮಮಹಾಧಿರಾಜನ ಸಂತತಿಯವರಾದ ಗಂಗವಂಶೀಯರು, ಕುವಳಾಲ ಪುರವರಾಧೀಶ್ವರ, ನಂದಗಿರಿನಾಥರೆಂದು ಪ್ರಸಿದ್ಧರಾಗಿದ್ದರು. ಕುವಳಾಲ ಅಥವಾ ಕೋಳಾಲ ಎಂಬುದು ಇಂದಿನ ಕೋಲಾರ. ಇದನ್ನು ಗಂಗರು ತಮ್ಮ ಮೊದಲ ಹಾಗೂ ಮುಖ್ಯ ರಾಜಧಾನಿಯನ್ನಾಗಿ ಮಾಡಿಕೊಂಡು ದಕ್ಷಿಣ ಕರ್ನಾಟಕದ ಬಹುಭಾಗವನ್ನು ಒಳಗೊಂಡಿದ್ದಂಥ ಗಂಗವಾಡಿಯನ್ನು ಆಳಿದರು. ಅವರ ಕಾಲದಲ್ಲಿ ಅನೇಕ ದೇವಾಲಯಗಳು ನಿರ್ಮಾಣವಾದವು. ಸೀತಿಯ ಸೀಪತೀಶ್ವರ (ಶ್ರೀಪತಿ) ಲಿಂಗ, ದುರ್ಗಾಶಿಲ್ಪ ಹಾಗೂ ಕ್ಷೇತ್ರಪಾಲ ದೇವರಾದ ಭೈರವದೇವರ ಶಿಲ್ಪಗಳು ಗಮನಾರ್ಹವಾಗಿದ್ದು, ಅವು ಗಂಗರ ಕಾಲದ ಶಿಲ್ಪ ಲಕ್ಷಣಗಳಿಂದ ಕೂಡಿವೆಯೆಂದು ವಿದ್ವಾಂಸರು ಅಭಿಪ್ರಾಯಪಟ್ಟಿರುತ್ತಾರೆ. ಗಂಗರ ಆಳಿಕೆಯ ಕಾಲಕ್ಕಾಗಲೇ ಸೀತಿಯಲ್ಲಿ ಭೈರವದೇವರ ಆರಾಧನೆ ಆರಂಭವಾಗಿದ್ದಿತು, ಅಲ್ಲದೆ ಕೊವಳಾಲ (ಕೋಲಾರ) ಪ್ರದೇಶದ ಒಡೆಯರಾಗಿದ್ದ ಗಂಗ ಅರಸರ ಆರಾಧ್ಯದೈವವಾಗಿಯೂ ನೆಲೆಗೊಂಡಿದ್ದ ಅಂಶ, ಮುಂದೆ ಅವರು ಚೋಳರ ಮಾಂಡಲಿಕರಾಗಿ ಕೊವಳಾಲ ಪ್ರದೇಶವನ್ನು ಆಳತೊಡಗಿದಾಗ ಸೀತಿಯ ಭೈರವದೇವರಿಗೆ ಅವರಿಂದ ಸಲ್ಲಿಸಲಾಗಿರುವ ದಾನದತ್ತಿಗಳ ವಿವರಗಳಿಂದ ಮನಗಾಣಬಹುದಾಗಿದೆ. ಚೋಳರ ಮಾಂಡಲಿಕರಾಗಿದ್ದ (ನಂತರ ಕಾಲದ ಈ) ಗಂಗರನ್ನು ಚರಿತ್ರಕಾರರು ತಮಿಳುಗಂಗರೆಂದೂ ಕರೆದಿರುವುದು ಕಂಡು ಬರುತ್ತದೆ. ಪ್ರಸ್ತುತ ಇವರ ನೆಲೆ, ಹಿನ್ನೆಲೆ ಮತ್ತು ಸೀತಿಯ ಭೈರವದೇವರಿಗೆ ಇವರಿಂದ ಸಂದ ಪೂಜಾ ಕೈಂಕರ್ಯ ಇತ್ಯಾದಿಗಳ ಒಂದು ಸ್ಥೂಲ ಪರಿಚಯವನ್ನು ನೀಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ.
ಕರ್ನಾಟಕ ಇತಿಹಾಸದಲ್ಲಿ ಗಂಗರದು ವಿಶಿಷ್ಟ ಸ್ಥಾನ. ದಕ್ಷಿಣ ಕರ್ನಾಟಕಕ್ಕೆ ಗಂಗವಾಡಿ ಎಂಬ ಹೆಸರು ಬಂದುದು ಅವರಿಂದಲೇ ಗಂಗಡಿಕಾರ ಒಕ್ಕಲಿಗ ಅಂದರೆ ಈ ಗಂಗವಾಡಿ ಪ್ರದೇಶದವರು ಎಂದು ಅರ್ಥ. ಗಂಗ ಅರಸರಲ್ಲಿ ಶ್ರೀಪುರಷ ಬಹು ಪ್ರಖ್ಯಾತನಾದ ದೊರೆ. ಅವನ ಮಗ ಇಮ್ಮಡಿ ಶಿವಮಾರ ಮಹಾ ಸ್ವಾಭಿಮಾನಿ. ಈತನು ರಾಷ್ಟ್ರಕೂಟರ ಬಂಧಿಯಾಗಿಯೇ ತನ್ನ ಜೀವಿತದ ಬಹುಭಾಗವನ್ನು ಕಳೆದನು. ಈತನ ಮಗ ಮಾರಸಿಂಹನು ಯುವರಾಜನಾಗಿ ಗಂಗ ರಾಜ್ಯವನ್ನು ಆಳಿದನು. ಈತನ ಹಿರಿಯ ಮಗ ಒಂದನೇ ಪ್ರಿಥಿವೀಪತಿ, ಇನ್ನೂ ಚಿಕ್ಕವನಿದ್ದುದರಿಂದ ಶಿವಮಾರನ ಸೋದರನಾದ ವಿಜಯಾಧಿತ್ಯನು ರಾಜ್ಯವಾಳಿದನು. ಇವನ ನಂತರ ಇವನ ಮಗನಾದ ಒಂದನೇ ರಾಚಮಲ್ಲನು ಗಂಗ ರಾಜ್ಯಾಧಿಪತಿಯಾದನು. ಗಂಗ ಸಿಂಹಾಸನಕ್ಕೆ ನಿಜವಾದ ವಾರುಸುದಾರನಾದ ಒಂದನೆಯ ಪ್ರಿಥಿವೀಪತಿಯ ಹಕ್ಕನ್ನು ರಾಜಮಲ್ಲನು ತಳ್ಳಿಹಾಕಲು ಸಾಧ್ಯವಾಗಲಿಲ್ಲ. ಅದರಿಂದಾಗಿ ಗಂಗ ರಾಜ್ಯವನ್ನು ಎರಡು ಭಾಗ ಮಾಡಿ, ಕೋಲಾರ ಜಿಲ್ಲೆಯನ್ನೊಳಗೊಂಡಂಥ ಗಂಗಱುಸಾಸಿರ ಪ್ರದೇಶದ ಅಧಿಪತಿಯನ್ನಾಗಿ ಪ್ರಿಥಿವೀಪತಿಯನ್ನು ನೇಮಿಸಿದನು. ಪ್ರಿಥಿವೀಪತಿಗೆ ಅಖಂಡ ಗಂಗವಾಡಿಯ ಅಧಿಪತಿಯಾಗುವ ಮೋಹ ಇದ್ದೇ ಇದ್ದಿತು. ಅದಕ್ಕಾಗಿ ಅವನು ತನ್ನ ನೆರೆಯವರಾದ ಬಾಣರು, ವೈದುಂಬರು-ತನ್ಮೂಲಕ ಪಲ್ಲವರ ಮೈತ್ರಿಯನ್ನು ಸಂಪಾದಿಸಿದನು. ಹಾಗೇ ಕಾಲಾಂತರದಲ್ಲಿ ಚೋಳರ ಮೈತ್ರಿಯನ್ನೂ ಗಳಿಸಿದನು. ಚೋಳದೊರೆ ಪರಾಂತಕನ ಮೂಲಕ ಬಾಣ ರಾಜ್ಯದ ಅಧಿಪತಿಯಾಗಿ ಹಸ್ತಿಮಲ್ಲನೆಂಬ ಹೆಸರಿನಿಂದ ಅದನ್ನು ಆಳಿದವನು ಇವನೇ ಎಂದು ತಿಳಿದು ಬರುತ್ತದೆ. ಬಾಣಕುಲದ ಮಾಂಡಲಿಕರೊಡನೆ ಬಾಂದವ್ಯ ಬೆಳಸಿದ್ದನು. ಈತನಿಗೆ ನನ್ನಿಯ-ಗಂಗನೆಂಬ ಮಗನಿದ್ದ. ಪಲ್ಲವರ ಮಿತ್ರನೂ ಆಗಿದ್ದ ಈ ಪ್ರಿಥಿವೀಪತಿಯು ಶ್ರೀಪುರಾಂಬಿಯಲ್ಲಿ ನಡೆದ ಕದನದಲ್ಲಿ ಕಾದು ಮಡಿದನು.
ಪ್ರಥಿವೀಪತಿಯ ಮಗನಾದ ನನ್ನಿಯಗಂಗನು, ತನಗೆ ಕ್ರಮಾಗತವಾಗಿ ಸಲ್ಲಬೇಕಾಗಿದ್ದ ಗಂಗಮಂಡಲವನ್ನು ಗಳಿಸಲು ಬಾಣರ ಹಾಗೂ ವೈದುಂಬರ ನೆರವನ್ನು ಪಡೆದನು. ಇವರೆಲ್ಲರೂ ಕೂಡಿ ಗಂಗ ಹಾಗೂ ಅವರ ಸಹಾಯಕರಾಗಿದ್ದ ನೊಳಂಬರ ವಿರುದ್ಧ ದಂಡೆತ್ತಿ ಬಂದು ಮಣ್ಣೆ, ಗಂಗಱುಸಾಸಿರ ಪ್ರದೇಶಗಳನ್ನಲ್ಲದೆ ವೈದುಂಬರಿಗೆ ಸೇರಿದ್ದ ಪುಲಿಯನಾಡೂ ಇವರ ವಶವಾಯಿತು. ಬಾಣರು ಅಧಿಪತಿಗಳಾದರು. ಈ ಜಯ ತಾತ್ಕಾಲಿಕವಾದುದಾಗಿದ್ದಿತು. ನೊಳಂಬ ಮಹೇಂದ್ರನು ಬಾಣರನ್ನು ಸೋರೆಮಡಿ ಎಂಬಲ್ಲಿ ನಡೆದ ಭೀಕರ ಕಾಳಗದಲ್ಲಿ ಸೋಲಿಸಿ ಓಡಿಸಿದನು. ಹೀಗಾಗಿ ನನ್ನಿಯಗಂಗನು ಗಂಗರಾಜ್ಯದ ಅಧಿಪತಿಯಾಗುವ ಆಸೆ ಈಡೇರದೇ ಕೊನೆಗೆ ಚೋಳರ ನಿಷ್ಠಾವಂತ ಮಾಂಡಲಿಕನಾಗಿಯೇ ಮುಂದುವರೆಯುವುದು ಅನಿವಾರ್ಯವಾಯಿತು.

ಚೋಳರ ಅಧೀನರಾಗಿ
            ಚೋಳರು ನಂತರದಲ್ಲಿ ಅಂದರೆ ರಾಜರಾಜಚೋಳನ ಕಾಲದಲ್ಲಿ ಪ್ರಬಲರಾಗಿ ರಾಜ್ಯ ವಿಸ್ತರಣಾಕಾಂಕ್ಷಿಗಳಾಗಿ ಗಂಗವಾಡಿಯ ಹಲವು ಪ್ರದೇಶಗಳನ್ನು ಕ್ರಮಕ್ರಮವಾಗಿ ಆಕ್ರಮಿಸಿ ಅಂತಿಮವಾಗಿ ಕ್ರಿ.ಶ. ೧೦೦೪ ರಲ್ಲಿ ತಲಕಾಡನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ಮೂಲಕ ಗಂಗವಾಡಿಯಲ್ಲಿ ಗಂಗರ ಆಳಿಕೆಯನ್ನು ಅಳಿಸಿಹಾಕಿದರು. ಚೋಳರ ಇಂಥ ರಾಜ್ಯ ವಿಸ್ತರಣಾ ಕಾರ್ಯದಲ್ಲಿ ಮೂಲತಃ ಗಂಗವಂಶೀಯರಾದ ಪ್ರಿಥಿವೀಪತಿ-ನನ್ನಿಯಗಂಗರ ಸಂತತಿಯವರು ವಿಶೇಷವಾಗಿ ನೆರವಾಗಿದ್ದಿರಬೇಕು.
          ಕ್ರಿ.ಶ. ೧೧೧೭ ರಲ್ಲಿ ಹೊಯ್ಸಳ ವಿಷ್ಣುವರ್ಧನನು, ಚೋಳರ ವಶವಾಗಿದ್ದ ತಲಕಾಡನ್ನು ತನ್ನದಾಗಿಸಿಕೊಳ್ಳುವುದರ ಮೂಲಕ ಚೋಳರನ್ನು ಕರ್ನಾಟಕದಿಂದ ಓಡಿಸಿದನು. ಆದರೆ ಕೋಲಾರ ಪ್ರದೇಶದಲ್ಲಿ ಕ್ರಿ.ಶ. ೧೧೨೦ ರಿಂದ ೧೧೩೦ ರ ಅವಧಿಯಲ್ಲಿ ವಿಕ್ರಮ ಚೋಳನ ಹಲವು ಶಾಸನಗಳು ಕಂಡು ಬಂದಿರುವುದರಿಂದ ವಿಷ್ಣುವರ್ಧನನ ವಿಜಯದ ನಂತರದ ಕೆಲವೇ ವರ್ಷಗಳಲ್ಲಿ ಕೋಲಾರ ಪ್ರದೇಶದಲ್ಲಿ ಚೋಳರ ಆಳಿಕೆ ಮುಂದುವರಿದಿರುವುದನ್ನು ಗಮನಿಸಬಹುದಾಗಿದೆ. ಮತ್ತೆ ಕ್ರಿ.ಶ. ಸು. ೧೧೫೦ ರಿಂದ ೧೧೬೯ ರವರೆಗೆ ಹೊಯ್ಸಳರ ಶಾಸನಗಳು ಈ ಪ್ರದೇಶದಲ್ಲಿ ಕಾಣಿಸಿಕೊಂಡಿವೆ. ಅನಂತರದಲ್ಲಿ ಸುಮಾರು ಒಂಬತ್ತು ವರ್ಷಗಳ ಕಾಲ ಶಾಸನಗಳು ಮೌನ ವಹಿಸಿರುವುದು ಆಶ್ಚರ್ಯ ಸಂಗತಿಯಾಗಿದೆ. ಆದರೂ ಕ್ರಿ.ಶ. ೧೧೭೮ ರ ಮುಮ್ಮಡಿ ಕುಲೋತ್ತುಂಗ ಚೋಳನ ಶಾಸನದಿಂದ ಈ ಪ್ರದೇಶದ ಮೇಲೆ ಆತನ ಅಧಿಕಾರವಿದ್ದುದು ತಿಳಿದುಬರುತ್ತದೆ. ಆದರೆ ಅದೇ ಶಾಸನದ ಮುಂದಿನ ಸಾಲಿನಲ್ಲೇ ಹೊಯ್ಸಳ ವೀರಬಲ್ಲಾಳನ ಉಲ್ಲೇಖವಿದ್ದು, ಆತನೂ ರಾಜ್ಯವಾಳುತ್ತಿರುವಂತೆ ಉಕ್ತವಾಗಿದೆ. ಇದರಿಂದ, ಸಮಕಾಲೀನವಾಗಿ ಈ ಪ್ರದೇಶದಲ್ಲಿದ್ದ ರಾಜಕೀಯ ಪರಿಸ್ಥಿತಿಯ ಅಸ್ತವ್ಯಸ್ಥತೆಯನ್ನು ಮನಗಾಣಬಹುದಾಗಿದೆ. ಅಂದರೆ ರಾಜ್ಯಾಧಿಕಾರವು ಈ ಎರಡೂ ಶಕ್ತಿಗಳ ಮಧ್ಯೆ ತೊಳಲಾಡುತ್ತಿದ್ದಿತು.


ವೀರ ಸೆಲ್ವ ಗಂಗ
          ಇದೇ ಸಂದರ್ಭದಲ್ಲಿ ಪ್ರಾಚೀನ ಗಂಗರ ಬಿರುದುಗಳನ್ನು ಧರಿಸಿರುವ ಗಂಗ ವಂಶದ ವ್ಯಕ್ತಯೋರ್ವನು ಮಹಾಮಂಡಳೇಶ್ವರನಾಗಿ ಕಾಣಿಸಿಕೊಳ್ಳುತ್ತಾನೆ. ಈತನಿಗೆ ಶಾಸನಗಳಲ್ಲಿ ಸಾಮಂತ ಸ್ಥಾನದ ಉಲ್ಲೇಖವಿದ್ದರೂ ಇವನ ಯಾವ ಶಾಸನದಲ್ಲೂ ಅಧಿರಾಜನ ಉಲ್ಲೇಖವಿರುವುದಿಲ್ಲ. ಅಂದರೆ ಇವನು ಬಹುಮಟ್ಟಿಗೆ ಸ್ವತಂತ್ರನಾಗಿಯೇ ಆಳುತ್ತಿದ್ದಂತೆ ಕಂಡುಬರುತ್ತದೆ. ಈತನೇ ವೀರಗಂಗ. ಈತನನ್ನು ಶಾನವೊಂದು ಅಧೃಷ್ಟ ದೇವತೆಯ ಸಂಗಾತಿ, ವಿಜಯಶ್ರೀಯವಲ್ಲಭ, ಗಜಲಾಂಛನಾಲಂಕೃತ, ಮುಚುಕುಂದಗಿರಿವರಾದೀಶ್ವರ, ಪಾಂಡ್ಯರ ಹುಟ್ಟನ್ನಡಗಿಸಿ ಕಾವೇರಿಯನ್ನು ದಾಟಿ ವೆಂಗಾಲಿಯನ್ನು ಸ್ವಬಲದಿಂದ ಆಕ್ರಮಿಸಿದವನು ಎಂದು ಕೀರ್ತಿಸಿದೆ (ಕೋಲಾರ ೧೩೨). ಅಷ್ಟೇ ಅಲ್ಲದೆ ಈತನು ಮೂರು ತೆರನಾದ ತಮಿಳಿನಲ್ಲಿ ವಿದ್ವತ್ತನ್ನು ಸಂಪಾದಿಸಿದ್ದನೆಂದೂ ಅದೇ ಶಾಸನದಿಂದ ತಿಳಿದುಬರುತ್ತದೆ. ಈತನ ೪೬ನೇ ಆಡಳಿತ ವರ್ಷದ ಶಾಸನವು ಕ್ರಿ.ಶ. ೧೨೨೫ ಕ್ಕೆ ಸೇರಿರುವುದರಿಂದ ಈತನ ಆಡಳಿತವು ಕ್ರಿ.ಶ. ೧೧೭೯ ರಲ್ಲೇ ಪ್ರಾರಂಭವಾಯಿತೆಂದು ಹೇಳಬಹುದಾಗಿದೆ. ಈತನು ಚೋಳರ ನಿಕಟವರ್ತಿಯಾಗಿದ್ದ ಅಂಶ ಈತನ ಹೆಸರಿನೊಂದಿಗೆ ಸೇರಿರುವ ಸೆಲ್ವನ್, ಹಾಗೂ ಉತ್ತಮ ಚೋಳಗಂಗ ಸೆಲ್ವಗಂಗರ್ ಎಂಬ ಉಲ್ಲೇಖಗಳಿಂದಲೂ ಮನಗಾಣಬಹುದಾಗಿದೆ.
          ಕುವಳಾಲ ಪುರಪರಮೇಶ್ವರನ್, ಗಂಗಕುಲೋದ್ಭವನ್, ಕಾವೇರಿವಲ್ಲಭನ್, ನಂದಿಗಿರಿನಾಥನ್ ಉತ್ತಮ ಚೋಳಗಂಗನ್ ಎಂಬ ಸೆಲ್ವಗಂಗನ್ (ಎಂಬ) ವೀರಗಂಗನ್ ಎಂದು ಬಿರುದುಗಳನ್ನೊಳಗೊಂಡ ಇವನ ಹೆಸರು ಶಾಸನಗಳಲ್ಲಿ ದಾಖಲಾಗಿದೆ. ಈತನು ಚೋಳರ ಸೇವೆಯಲ್ಲಿದ್ದಾಗಲೇ ಪಾಂಡ್ಯರ ಮೇಲಿನ ವಿಜಯ ಹಾಗೂ ದಕ್ಷಿಣ ಕಾವೇರಿಯನ್ನು ದಾಟಿದ ಘಟನೆಗಳು ಸಂಭವಿಸಿರಬೇಕು. ಕುಲೋತ್ತುಂಗ ಚೋಳನು ಈ ವೀರಗಂಗನಿಗೆ, ಅವನ ನಿಷ್ಠಾವಂತ ಸೇವೆಯ ಪ್ರತಿಫಲವಾಗಿ ಕುವಳಾಲ ಪ್ರದೇಶವನ್ನು ಉಂಬಳಿಯಾಗಿ ನೀಡಿರಬಹುದು. ಅಂದರೆ ಕ್ರಿ.ಶ. ೧೧೭೯ ರಿಂದಲೇ ಈತನು ಕೋಲಾರ ಪ್ರದೇಶದ ಮೇಲೆ ತನ್ನ ಅಧಿಕಾರವನ್ನು ಸ್ಥಾಪಿಸಿದ್ದನೆನ್ನಬೇಕು. ಈತನು ತನ್ನ ಆಡಳಿತದ ಕೊನೆ ಕೊನೆಯ ವರ್ಷಗಳಲ್ಲಿ ಹೊಯ್ಸಳರೊಂದಿಗೆ ಮಧುರ ಸಂಬಂಧವಿರಿಸಿಕೊಂಡಿದ್ದನೆಂದು ಹೇಳಬಹುದಾಗಿದೆ. ಪ್ರಸಿದ್ಧ ಹೊಯ್ಸಳ ಸೇನಾನಿ ಪೋಳಾಲ್ವದಂಡನಾಯಕನ ಓರ್ವ ಮಗಳನ್ನು ವೀರಗಂಗನು ವಿವಾಹವಾಗಿದ್ದನು. ಇವನ ಆಳಿಕೆಗೆ ನಿಗಿರಿಲಿ ಚೋಳಮಂಡಲದ ಭಾಗಗಳಾಗಿದ್ದ ಕುವಳಾಲನಾಡು ಮತ್ತು ಅವನಿನಾಡುಗಳು ಒಳಪಟ್ಟಿದ್ದವು. ಆದರೆ ಕ್ರಿ.ಶ. ೧೨೨೫ರ ನಂತರದಲ್ಲಿ ಅವನಿ ಪ್ರದೇಶದಲ್ಲಿ ಜಯಗೊಂಡಚೋಳ ಇಳವಂಜಿರಾಯರರೆಂಬುವವರು ಕಾಣಿಸಿಕೊಳ್ಳುತ್ತಾರೆ.
          ವೀರಗಂಗನಿಗೆ ಸೋಮಲಾದೇವಿ ಎಂಬ ಮಗಳು ಹಾಗೂ ಗಂಗಪೆರುಮಾಳ್ ಎಂಬ ಮಗನಿದ್ದನು. ಈತನಿಗೂ ಗಂಗರ ಸಾಂಪ್ರದಾಯಿಕ ಬಿರುದುಗಳಿದ್ದು ಉತ್ತಮ ಚೋಳಗಂಗನ್ ಗಂಗಪೆರುಮಾಳ್ ಎಂದು ಅವನ ಪೂರ್ಣ ಹೆಸರನ್ನು ಶಾಸನಗಳು ನೀಡುತ್ತವೆ. ಇವನ ರಾಜ್ಯದ ಪೂರ್ವ ಭಾಗ (ಆವನಿನಾಡು) ಜಯಗೊಂಡ ಚೋಳ ಇಳವಂಜಿರಾಯ ಎಂಬುವವನ ಆಳ್ವಿಕೆಗೆ ಒಳಪಟ್ಟು, ಕೇವಲ ಕುವಳಾಲ ಪ್ರದೇಶ ಮಾತ್ರ ಇವನ ವಶದಲ್ಲಿತ್ತು. ಇವನ ಹೆಂಡತಿಯ ಹೆಸರು ಅರುಣವಲ್ಲಿ, ಮೇಲೆ ಉಕ್ತವಾಗಿರುವ ಜಯಗೊಂಡ ಚೋಳನು ಮೊದಲಿಗೆ ಗಂಗಪೆರುಮಾಳನ ಮಾಂಡಲಿಕನಾಗಿದ್ದನೆಂಬ ಅಂಶ ಶಾಸನವೊಂದರಿಂದ ತಿಳಿದು ಬರುತ್ತದೆ.
          ನಂತರದ ಕಾಲದಲ್ಲಿ (ಕ್ರಿ.ಶ. ೧೨೬೦) ವೀರಗಂಗ ವಿಕ್ರಮ ಗಂಗನ ಉಲ್ಲೇಖಗಳು ಶಾಸನಗಳಲ್ಲಿ ಕಂಡಬರುತ್ತದೆ. ಈತನಿಗೆ ತಲೈಸಿರಾಯನ್ ಎಂಬ ಮಂತ್ರಿಯೂ ಇದ್ದನು. ಅನಂತರದ ಕಾಲದಲ್ಲಿ ಗಂಗರ ಸಾಂಪ್ರದಾಯಕ ಬಿರುದುಗಳನ್ನು ಧರಿಸಿರುವ ವೆಟ್ಟುಮಾರ ಬಾಣ ಎಂಬ ಹೆಸರಿನ ವ್ಯಕ್ತಿಯೊಬ್ಬನು ಪ್ರಧಾನವಾಗಿ ಕಂಡುಬರುತ್ತಾನೆ. ಬಹುಮಟ್ಟಿಗೆ ಇವನ ಆಡಳಿತ ಕುವಳಾಲ ನಾಡಿಗೇ ಸೀಮಿತವಾಗಿದ್ದಂತೆ ಕಂಡಬರುತ್ತದೆ. ಮುಂದೆ ಕ್ರಿ.ಶ. ೧೨೭೩ ರ ಶಾಸನವೊಂದರಲ್ಲಿ ಉತ್ತಮ ಚೋಳಗಂಗನ್ ಪದುಮಿದೇವರ್, ಅವನ ಮಗ ಗಂಗಪೆರುಮಾಳರ ಉಲ್ಲೇಖಗಳು ಶಾಸನಗಳಲ್ಲಿ ಕಂಡುಬರುತ್ತವೆ.

ಸೀತಿ ಬೆಟ್ಟಕ್ಕೆ ಭಕ್ತಿ
            ಮೂಲತಃ ಗಂಗವಂಶೀಯರಾದ ಈ ವೀರಗಂಗನ ಸಂತತಿಯವರು, ತಮ್ಮ ಅಧಿರಾಜರಾಗಿದ್ದ ಚೋಳರಂತೆ ಸೀತಿಯ ಭೈರವದೇವರಿಗೆ ಅನೇಕ ದಾನದತ್ತಿಗಳನ್ನು ಬಿಟ್ಟು ತಮ್ಮ ಅನನ್ಯ ಭಕ್ತಿಯನ್ನು ವಿಶೇಷವಾಗಿ ಪ್ರದರ್ಶಿಸಿದ್ದಾರೆ. ಮುಂದೆ ಕುವಳಾಲ ಮತ್ತು ಕೈವಾರನಾಡುಗಳ ಮೇಲೆ ಅಧಿಕಾರವನ್ನು ಸ್ಥಾಪಿಸಿದ ಬ್ರಹ್ಮಾದಿರಾಜ ಗಂಗಪೆರುಮಾಳರು ಕೂಡ ಬಹುಮಟ್ಟಿಗೆ ಗಂಗವಂಶೀಯರೇ ಆಗಿದ್ದರೆಂದು ತೋರುತ್ತದೆ. ಶಾಸನವೊಂದರಲ್ಲಿ ಶ್ರೀ ನರಸಿಂಹ ಪೊಯ್ಸಳ ಬ್ರಹ್ಮಾಧಿರಾಯ ಎಂಬ ಉಲ್ಲೇಖವಿದೆ. ಅಂದರೆ ಇವರು ಹೊಯ್ಸಳರ ಮಾಂಡಲಿಕರಾಗಿದ್ದರೆಂದು ಮನಗಾಣಬಹುದಾಗಿದೆ. ಈ ಸಂತತಿಯವರ ಮೊದಲ ಆಡಳಿತಗಾರನೆಂದರೆ ದುಷ್ಟರಾಧಿತ್ಯ ರಾಜನಾರಾಯಣ ಬ್ರಹ್ಮಾದಿರಾಯ ಗಂಗಪೆರುಮಾಳ್ ಕ್ರಿ.ಶ. ೧೨೬೨ರ ಶಾಸನವು ಕೈವಾರನಾಡಿನ ಈ ಬ್ರಹಾದಿರಾಯರಿಗೂ ಅವನಿನಾಡಿನ ಇಳವಂಜಿರಾಯರಿಗೂ ಕೌಟುಂಬಿಕ ಸಂಬಂಧಗಳಿದ್ದುದನ್ನು ತಿಳಿಸುತ್ತದೆ. ಪ್ರಾಯಶಃ ಇವರಿಬ್ಬರೂ ಒಗ್ಗೂಡಿಯೇ ವೀರಗಂಗ ವಂಶೀಯರನ್ನು ಮೂಲೆಗೊತ್ತಿದರೆಂದು ತೋರುತ್ತದೆ. ಕುವಳಾಲ ನಾಡಿನ ಉತ್ತರದ ಭಾಗಗಳು ಬ್ರಹ್ಮಾದಿರಾಯರಿಗೂ, ದಕ್ಷಿಣದ ಭಾಗಗಳು ಇಳವಂಜಿರಾಯರ ವಶದಲ್ಲಿದ್ದ ವಿವರ ಶಾಸನಗಳಿಂದ ಗ್ರಹಿಸಬಹುದಾಗಿದೆ.
          ಕ್ರಿ.ಶ. ೧೨೬೮ರ ಶಾಸನ (ಕೋಲಾರ ೪೧) ದಲ್ಲಿ ತಮ್ಮಜಯನ್ ಎಂಬುವವನ ಉಲ್ಲೇಖವಿದ್ದು ಆತನಿಗೆ ಶಂಬುಕುಲೋದ್ಭವನ್, ಗೋದಾವಿರಿವಲ್ಲವನ್, ವಿರುದರಾಜ ಭಯಂಕರನ್, ತ್ರಿಲೋಕ್ಯರಾಯನ್ ಎಂಬ ಬಿರುದುಗಳಿದ್ದವು. ಆತನು ಸೀತಿಯ ಭೈರವದೇವರ ಉಚ್ಛಿ ಸಂಧಿ (ಮಧ್ಯಾಹ್ನದ ನೈವೇದ್ಯ) ಗಾಗಿ ಹಾಗೂ ಅಮೃತಪಡಿಗಾಗಿ ಶಿಱೆನಲ್ಲಾಳ ಸ್ಥಳದ ಹೊಲ ಗದ್ದೆಯ ಭೂಮಿಯನ್ನು ದತ್ತಿ ಬಿಟ್ಟಿರುತ್ತಾನೆ. ಈತನು ಯಾರು? ಎಂಬುದು ಸ್ಪಷ್ಟವಾಗುವುದಿಲ್ಲ. ಇವನ ಪ್ರವೇಶದೊಂದಿಗೆ ಬ್ರಹ್ಮಾದಿರಾಯರ ಆಳಿಕೆ ತಾತ್ಕಾಲಿಕವಾಗಿ ಹಿಂದೆ ಸರಿಯತೆನ್ನಬಹುದು.
          ಕ್ರಿ.ಶ. ೧೨೭೧ರ ವೇಳೆಗೆ ಬ್ರಹ್ಮಾದಿರಾಯರ ವಂಶೀಯನೇ ಆದ ಕುಪ್ಪಾಂಡೆಯ ಮಗ ಶೆಲ್ವಗಂಗನ ಆಳಿಕೆ ಕಂಡುಬರುತ್ತದೆ (ಕೋಲಾರ ೩೨೬). ಈತನು ಸೀತಿಯ ಭೈರವದೇವರ ನಂದಾದೀವಿಗೆಗೆ ದತ್ತಿಬಿಟ್ಟಿರುತ್ತಾನೆ. ಅಣ್ಣನಂಕಕಾರ ದುಷ್ಟರಾಧಿತ್ಯ ರಾಜನಾರಾಯಣ ಬ್ರಹ್ಮಾಧಿರಾಜ ಎಂಬ ಬಿರುದುಗಳನ್ನು ಈತನು ಹೊಂದಿದ್ದ ವಿವರ ಇತರ ಶಾಸನಗಳಿಂದ ತಿಳಿಯುತ್ತದೆ. ಕ್ರಿ.ಶ. ೧೨೮೦ರ ವೇಳೆಗೆ ಈ ಬ್ರಹ್ಮಾದಿರಾಯರವಂಶೀಯರು ಹೊಯ್ಸಳರ ನೇರ ಆಡಳಿತಕ್ಕೆ ಒಳಪಟ್ಟಂತೆ ತೋರುತ್ತದೆಯಾದರೂ ಅವರ ಯಾವ ಶಾಸನಗಳಲ್ಲೂ ಅಧಿರಾಜರ ಪ್ರಸ್ತಾಪವಿರುವುದಿಲ್ಲ. ಆದರೆ ಹೊಯ್ಸಳ ವೀರಬಲ್ಲಾಳನ ಮಗ ಪೆರಿಯವಲ್ಲಪ್ಪ ದಣ್ಣಾಯಕನನ್ನು ಪ್ರಸ್ತಾಪಿಸುವ ಶಾಸನವೊಂದು (ಕೋಲಾರ ೫೪) ಸೀತಿ ಬೆಟ್ಟದಲ್ಲಿದ್ದು ಆತನ ಖಡ್ಗ ಹಾಗೂ ಭುಜಕ್ಕೆ ಜಯವಾಗಲೆಂದು ಕೊಡಂಪುಲಿಯೂರಿನ ದೇವಪ್ಪನೆಂಬ ಸ್ಥಳೀಯ ಅಧಿಕಾರಿಯು ಸೀತಿ ಮತ್ತು ಕಳಪಲ್ಲಿ ಎಂಬ ಎರಡು ಗ್ರಾಮಗಳ ಭೂಮಿಯನ್ನು ಸರ್ವಮಾನ್ಯವಾಗಿ ದತ್ತಿಬಿಟ್ಟ ವಿವರವನ್ನು ನೀಡುತ್ತದೆ.
          ಕರಿಯಗಂಗ ಪೆರುಮಾಳನನ್ನು ಪ್ರಸ್ತಾಪಿಸುವ ಶಾಸನವೊಂದು ಕ್ರಿ.ಶ. ೧೨೮೦ಕ್ಕೆ ಸೇರಿದ್ದು (ಕೋಲಾರ ೪೯) ಆತನನ್ನು ಶೆಲ್ವಗಂಗನೆಂದು ಹೇಳಿದೆ. ಅಲ್ಲದೆ, ಶ್ರೀಪತಿಯ ತ್ರಿಭುವನ ವಿಡಂಗ ಕ್ಷೇತ್ರಪಾಲ ಪಿಳ್ಳೆಯಾರಿಗೆ ಮಂಟಪವನ್ನು ಕಟ್ಟಿಸಿ ಕೊಟ್ಟು ಅದರ ನಿರ್ವಹಣೆಗಾಗಿ ಕೈವಾರ ನಾಡಿನ ಪುಳ್ಳಿಯಂಪಳ್ಳಿ ಎಂಬ ಸ್ಥಳದ ಹೊಲಗದ್ದೆಗಳನ್ನು ದತ್ತಿಬಿಡಲಾಗಿದೆ. ಇಲ್ಲಿ ಪ್ರಸ್ತಾಪಿತವಾಗಿರುವ ಮಂಟಪವೇ ಇಂದು ಅಸ್ತಿತ್ವದಲ್ಲಿರುವ ಪ್ರಧಾನ ದೇವಾಲಯವಾಗಿದೆ.

ಪುಳಿಯಂಪಳ್ಳಿ - ಮಾಡಕ್ಕಿರೈಗಳಿಂದ ಭೂದಾನ
          ಕ್ರಿ.ಶ. ೧೨೮೦ರ ಕೊನೆಯ ವೇಳೆಗೆ ಕರಿಯಗಂಗನ ಮಗನಾದ ವಾಸುದೇವನನ್ನು ಪ್ರಸ್ಥಾಪಿಸುವ ಶಾಸನಗಳು ಕಾಣಸಿಗುತ್ತವೆ. ಅವುಗಳಲ್ಲಿ ಆತನನ್ನು ಅಯ್ಯನಂಕಕಾರ, ದುಷ್ಟರಾಧಿತ್ಯ, ರಾಜನಾರಾಯಣ ಬ್ರಹ್ಮಾದಿರಾಜ ಎಂದು ಮುಂತಾಗಿ ವರ್ಣಿಸಿವೆಯಲ್ಲದೆ ಶ್ರೀಪತಿಯ ತ್ರಿಭುವನ ವಿಡಂಗ ಕ್ಷೇತ್ರಪಾಲ ಪಿಳ್ಳೆಯಾರರ ಅಮೃತಪಡಿಗಾಗಿ ಮುದುಗೆರೆ ಹಾಗೂ ಕೈವಾರನಾಡಿನ ಪುಳಿಯಂಪಳ್ಳಿ ಗ್ರಾಮಗಳ ಹೊಲಗದ್ದೆಗಳನ್ನು ದತ್ತಿಬಿಟ್ಟಿರುವ ವಿವರ ಬಂದಿದೆ. ಈತನ ಮಗನ ಹೆಸರು ಗಂಗಪೆರುಮಾಳ್, ಈತನಿಗೂ ಅಯ್ಯನಂಕಕಾರ ಎಂಬ ಬಿರುದಿದ್ದಿತು. ಈ ಗಂಗಪೆರುಮಾಳನನ್ನು ಕೆಲವು ಶಾಸನಗಳಲ್ಲಿ ಮಾಮನಂಕಕಾರನೆಂದೂ ಕರೆಯಲಾಗಿದೆ. ಕ್ರಿ.ಶ. ೧೨೮೪ರ ಶಾಸನವು (ಕೋಲಾರ ೪೬) ಸೀತಿ ಬೆಟ್ಟದಲ್ಲಿದ್ದು ಭೈರವದೇವರಿಗೆ ಮಾಡಕ್ಕಿರೈ ಎಂಬ ಸ್ಥಳದ ಸಮೀಪದ ಹೊಲಗದ್ದೆಗಳನ್ನು ದತ್ತಿಬಿಟ್ಟ ವಿವರ ನೀಡುತ್ತದೆ. ಈತನ ಶಾಸನಗಳಲ್ಲಿ ಪ್ರಯುಕ್ತವಾಗಿರುವ ಮಾಮನಂಕಕಾರ ಎಂಬುದು ಏನನ್ನು ಸೂಚಿಸುತ್ತದೆ? ಅಂಕಕಾರ ಎಂದರೆ ಯುದ್ಧಯೋಧ, ಸಹಾಯಕ ಅಥವಾ ಆಶ್ರೀತ ಎಂಬ ಸಾಮಾನ್ಯ ಅರ್ಥಗಳಿವೆ. ಅಯ್ಯನಂಕಕಾರ ಎಂಬುದು ತಂದೆಗೆ ಬಲಗೈಯಂತಿದ್ದವನು ಎಂದೂ ಅರ್ಥೈಸಬಹುದು. ಇದು ತನ್ನ ತಂದೆ ಜೀವಂತವಾಗಿರುವಾಗ ಧರಿಸಿದ್ದಿರಬಹುದಾದ ಬಿರುದೆನ್ನಬಹುದು. ಪ್ರಾಯಶಃ ನಂತರದಲ್ಲಿ ಈತನು ತನ್ನ ನೆರವನ್ನು ಒಬ್ಬ ಬಲಿಷ್ಟನಾದ ಅಧಿಪತಿಗೆ ನೀಡಿದ್ದು, ಆತನು ಹೆಣ್ಣುಕೊಟ್ಟ ಮಾವನೋ, ಅಥವಾ ತಾಯಿಯ ಸೋದರನೋ ಆಗಿದ್ದಿರಬಹುದು. ಆ ಕಾರಣದಿಂದಲೇ ಮಾಮನಂಕಕಾರ ಎಂಬ ಬಿರುದನ್ನು ಧರಿಸಿದ್ದಿರಬೇಕು. ಹಾಗಾದರೆ ಈ ಮಾಮ (ಮಾವ) ನೆನಿಸಿಕೊಂಡ ವ್ಯಕ್ತಿ ಯಾರಿರಬಹುದು? ಕ್ರಿ.ಶ. ೧೨೮೫ರ ಶಾಸನವೊಂದು ಕೈವಾರದಲ್ಲಿದ್ದು ಅಲ್ಲಿನ ಅಮರನಾರಾಯಣಸ್ವಾಮಿ ದೇವರಿಗೆ ಹೊಯ್ಸಳ ರಾಮನಾಥನೇ ಖುದ್ದಾಗಿ ಆಗಮಿಸಿ ದತ್ತಿಬಿಟ್ಟಿರುವ ವಿವರವಿದೆ. ಪ್ರಾಯಶಃ ಹೊಯ್ಸಳ ರಾಮನಾಥನು ತಮಿಳುನಾಡಿನಲ್ಲಿದ್ದ ತನ್ನ ರಾಜಧಾನಿಯನ್ನು ಕೋಲಾರಕ್ಕೆ ಸಮೀಪದ ಕುಂದಾಣಿಗೆ ವರ್ಗಾಯಿಸಿ, ಆ ಪ್ರದೇಶದ ಮಾಂಡಲಿಕರ ಮೇಲೆ ಹಿಡಿತವನ್ನು ಸಾಧಿಸಲು ನಡೆಯೆಸಿದ ರಾಜಕೀಯ ಪ್ರಾವೀಣ್ಯತೆಯ ಭಾಗವಾಗಿ ಗಂಗ ಪೆರುಮಾಳನನ್ನು ತನ್ನ ಅಳಿಯನನ್ನಾಗಿ ಮಾಡಿಕೊಂಡಿರಬಹುದೆಂದು ಊಹಿಸಬಹುದಷ್ಟೇ ಹೊರತು ನಿರ್ದಿಷ್ಟ ಆಧಾರಗಳಿಲ್ಲ. ಇವನ ಆಳಿಕೆ ಕ್ರಿ.ಶ. ೧೨೮೬ರ ಪೂರ್ವಾರ್ಧದ ವೇಳೆಗೆ ಕೊನೆಗೊಂಡಿರಬೇಕು.
          ಕ್ರಿ.ಶ. ೧೨೮೬ ಉತ್ತರಾರ್ಧದಲ್ಲಿ ವಾಸುದೇವರ್ ಎಂಬ ಅಯ್ಯನಂಕಕಾರ ದುಷ್ಟರಾಧಿತ್ಯ ರಾಜನಾರಾಯಣ ಬ್ರಹ್ಮಾದಿರಾಯ ಎಂಬುವವನು ಸಿಂಹಾಸನಸ್ಥನಾಗಿದ್ದನು. ಈ ವಾಸುದೇವನ ಶಾಸನವೊಂದು ಸೀತಿಯಲ್ಲದ್ದು, ಭೈರವದೇವರಿಗೆ ಸರ್ವಮಾನ್ಯನಾಗಿ ಮೂವಾಟ್ರು ಎಂಬ ಸ್ಥಳದಲ್ಲಿನ ಹೊಲಗದ್ದೆಗಳನ್ನು ನೀಡಿರುವುದನ್ನು ಉಲ್ಲೇಖಿಸುತ್ತದೆ.
          ಗಂಗಪೆರುಮಾಳನ ಕಾಲದ ನಂತರ ಈ ಪ್ರದೇಶದ ಶಾಸನಗಳ ಸ್ವರೂಪದಲ್ಲೇ ಮಾರ್ಪಾಟಾಗಿರುವುದು ಕಂಡುಬರುತ್ತದೆ. ಅವು ಹೊಯ್ಸಳ ರಾಮನಾಥನನ್ನು ನಿಯತವಾಗಿ ಉಲ್ಲೇಖಿಸತೊಡಗಿರುವುದು ಅಂದರೆ ಅವರೆವಿಗೂ ಸ್ವತಂತ್ರರಂತೆವರ್ತಿಸುತ್ತಿದ್ದ ಬ್ರಹ್ಮಾದಿರಾಯರೇ ಮೊದಲಾದ ಮಾಂಡಲಿಕರ ಮೇಲೆ ಹೊಯ್ಸಳ ರಾಮನಾಥನು ಹಿಡಿತವನ್ನು ಸಾಧಿಸಿರುವುದನ್ನು ಬಿಂಬಿಸುತ್ತವೆ. ಈ ಅವಧಿಯಲ್ಲಿ ಗಂಗಪೆರುಮಾಳನ ಅಧಿಕಾರ ತೇಕಲ್‌ನಾಡಿನವರೆಗೂ ವಿಸ್ತಾರಗೊಂಡಿದ್ದ ಅಂಶವನ್ನು ಮನಗಂಡರೆ, ಆತನು ರಾಮನಾಥನ ವಿಧೇಯ ಸಾಮಂತನಾಗಿದ್ದನೆನ್ನಬಹುದಾಗಿದೆ. ಈತನನ್ನು ಉಲ್ಲೇಖಿಸುವ ಕೊನೆಯ ಶಾಸನದ ಕಾಲ ಕ್ರಿ.ಶ. ೧೨೮೯ ರದ್ದಾಗಿದೆ.
          ಸುಮಾರು ಕ್ರಿ.ಶ. ೧೨೮೫ರ ವೇಳೆಗೆ ಹೊಯ್ಸಳ ರಾಮನಾಥನು ತನ್ನ ಆಡಳಿತ ನೀತಿಯನ್ನು ಮತ್ತೂ ವಿಶಿಷ್ಟವಾಗಿ ಬದಲಿಸಿರುವಂತೆ ಕಂಡುಬರುತ್ತದೆ. ಹಿಂದೆ ಪ್ರಚಲಿತವಿದ್ದ, ವಂಶಪಾರಂಪರ‍್ಯವಾಗಿ ಸಾಗಿಬರುತ್ತಿದ್ದ ಅಧಿಕಾರಕ್ಕೆ ಧಕ್ಕೆ ಒದಗಿ, ಸಮ್ರಾಟನ ಇಚ್ಛೆ ಮತ್ತು ಅನುಕೂಲಕ್ಕೆ ತಕ್ಕಂತೆ ಅಧಿಕಾರಿ, ಸಾಮಂತ ಮಾಂಡಲಿಕರನ್ನು ವರ್ಗಾಯಿಸುವ ಇಲ್ಲವೆ ಬದಲಿಸುವ ಕ್ರಿಯೆ, ವ್ಯಾಪಕವಾಗಿ ಉಂಟಾಗಿರುವುದನ್ನು ಶಾಸನಗಳಿಂದ ಮನನವಾಗುತ್ತದೆ. ಈ ಕ್ರಿಯೆಯಲ್ಲಿ, ಹಿಂದೆ ಅಧಿಕಾರ ಕಳೆದುಕೊಂಡಿದ್ದ ಹಲವು ರಾಜವಂಶೀಯರಿಗೂ ಆಡಳಿತದಲ್ಲಿ ಅವಕಾಶವನ್ನು ಕಲ್ಪಿಸಿಕೊಟ್ಟಿರುವುದು ಕಂಡು ಬರುತ್ತದೆ.
          ಕ್ರಿ.ಶ. ಸುಮಾರು ೧೨೮೮ರ ಉತ್ತರಾರ್ಧದಲ್ಲಿ ಕೋಲಾರ ಪ್ರದೇಶವನ್ನು ರಾಜನಾರಾಯಣ ಬ್ರಹ್ಮಾಧಿರಾಜ ವೀರಗಂಗನ ಮಗ ಮಲೈಪೆರುಮಾಳನು ಆಳುತ್ತಿದ್ದನು. ನಂತರದಲ್ಲಿ ಹೊಯ್ಸಳರ ಮಾಂಡಲಿಕರಾಗಿ ತೆಯ್ಯಕ್ಕೂರನಾಡ ವಂಶೀಯರು ಪ್ರಬಲರಾದರು. ಅವರಲ್ಲಿ ರಾಘವದೇವ ಎಂಬುವವನು ಬ್ರಹ್ಮಾದಿರಾಯನ ವಂಶೀಯರನ್ನು ಮೂಲೆಗುಂಪಾಗಿಸಿದಂತೆ ತೋರುತ್ತದೆ. ಈ ತೆಯ್ಯಕ್ಕೂರ ವಂಶೀಯರು ಹೊಯ್ಸಳ ರಾಮನಾಥನ ಬಿರುದುಗಳನ್ನು ಧರಿಸಿ ರಾಮನಾಥನ ಪರವಾಗಿ ತಾನೇ ಸಾಮ್ರಾಟನಂತೆ ಗಂಗಪೆರುಮಾಳನ ಮೇಲೆ ಅಧಿಕಾರ ಚಲಾಯಿಸಿರುವುದು ಕಂಡು ಬರುತ್ತದೆ.

ಭೈರವನಿಗೆ ವಿಪುಲದಾನ
          ಹೊಯ್ಸಳ ರಾಮನಾಥನ ಮರಣನಂತರ ಅವನ ಪ್ರಾಂತ್ಯವು ಮುಮ್ಮಡಿ ವೀರಬಲ್ಲಾಳನ ಆಳಿಕೆಗೆ ಒಳಪಟ್ಟಿತು. ಇಲ್ಲಿಂದ ಮುಂದೆ ಈ ಪ್ರದೇಶದ ಶಾಸನಗಳಲ್ಲಿ ಯಾವುದೇ ವಂಶೀಯರ ಶಾಸನಗಳು ನಿಯತವಾಗಿ ಮುಂದುವರೆದಿಲ್ಲ. ಅಂತೆಯೇ ಸೀತಿಬೆಟ್ಟದ ಭೈರವದೇವರಿಗೆ ಸಂದ ದಾನ ದತ್ತಿಗಳು ಆ ಅಂಶವನ್ನೇ ಪ್ರತಿಬಿಂಬಿಸುತ್ತವೆ. ವೀರಬಲ್ಲಾಳನ ಅಧೀನನಾಗಿದ್ದ ಮರೈಪುಕ್ಕರಾಮನ್‌ನಾದ ಸೊಣ್ಣಯನ್ ಎಂಬುವವನ ಉಲ್ಲೇಖ ಕ್ರಿ.ಶ. ೧೩೦೩ರ ಶಾಸನದಲ್ಲಿ ಬಂದಿದೆ (ಕೋಲಾರ ೩೫೨), ಮುಂದೆ ಕ್ರಿ.ಶ. ೧೩೧೦ರಲ್ಲಿ ವಟ್ಟರಸರ್ ಕೂಳದೇವರ್ (ಕೋಲಾರ ೩೫೭), ಕ್ರಿ.ಶ. ೧೩೩೨ ರಲ್ಲಿ ಶಿರಪ್ರಧಾನಿ . . . ದುರುಗೈಯನ್, ಕಟಾರಿಸಾಳುವನರಸಯ್ಯ ನಾಯಕನ್, ಕ್ರಿ.ಶ. ೧೩೩೪ ರ ವೇಳೆಗೆ ಸೊಪ್ಪೆಯನಾಯಕನ್ (ಕೋಲಾರ ೩೪೪) ಹಾಗೂ ಕ್ರಿ.ಶ. ೧೩೩೮ ರಲ್ಲಿ ವಲ್ಲಪ್ಪ ದಣ್ಣಾಯಕರಗಳು ಹೀಗೆ ಹೊಯ್ಸಳ ವೀರಬಲ್ಲಾಳನ ಅಳಿಕೆಯ ಕಾಲದಲ್ಲಿ ಸೀತಿಯ ಬೆಟ್ಟದ ಭೈರವದೇವರಿಗೆ ಬೇರೆ ಬೇರೆ ಅಧಿಕಾರಿಗಳಿಂದಲೂ ಎಂದಿನಂತೆ ವಿಪುಲವಾದ ದಾನ-ದತ್ತಿಗಳು, ಪೂಜಾ-ಕೈಂಕರ್ಯಗಳು ಮುಂದುವರಿದಿರುವುದು ಕಂಡು ಬರುತ್ತದೆ.
          ಮುಂದೆ ವಿಜಯನಗರದ ಅರಸರಕಾಲದಲ್ಲೂ ಕಂಪಣ್ಣ ಒಡೆಯ (ಬುಕ್ಕರಾಯನ ಮಗ), ಲಕ್ಕರಸರ ಕುಮಾರ ದೇವಮಹಾರಾಯ (ಕೋಲಾರ ೩೨೨), ಮಹಾಸಾಮಂತಾಧಿಪತಿ ಮಂಜಯನಾಯಕ್ಕರ ಮಗ ಶ್ರೀಪತಿನಾಯಕ (ಕೋಲಾರ ೩೨೩; ೧೩೭೩), ವೆಂಗಡನ ಮಗ ಅಳಗಿಯ ವಂದ (ಕೋಲಾರ ೩೨೪; ೧೩೭೭), ಪರಾಕ್ರಮ ಪಾಂಡಿಯನ್, ಕೆಂದಾಮರೈ ಕಣ್ಣನ್ (ಕೋಲಾರ ೩೪೭; ೧೪೩೧) ಮುಂತಾದವರ ಸೇವೆಯು ಸೀತಿಯ ಭೈರವದೇವರಿಗೆ ಸಂದಿದೆ.
          ಗಂಗರ ಕಾಲದಲ್ಲಿ ಅಸ್ತಿತ್ವವನ್ನು ಪಡೆದ ಸೀಪತಿಯ ಭೈರವದೇವರ ಆರಾಧನೆ, ಗಂಗರ ನಂತರ ಬಂದ ಚೋಳರು ಹಾಗೂ ಅವರ ಅಧೀನರಾಗಿ ಬಂದ ಮೂಲತಃ ಗಂಗ ವಂಶೀಯರೇ ಆಗಿದ್ದ ವೀರಗಂಗ ಹಾಗೂ ಬ್ರಹ್ಮಾದಿರಾಯರ ಸಂತತಿಯವರು ಆಳಿಕೆಯ ಕಾಲದಲ್ಲಿ ಪೂಜಾಕೈಂಕರ್ಯಗಳ ಹೆಚ್ಚಳದೊಂದಿಗೆ ಅನೇಕ ವಾಸ್ತು, ರಚನಾ ಕಾರ್ಯಗಳು ವಿಶೇಷವಾಗಿ ನಡೆಯಿತು. ಮುಂದೆ ಹೊಯ್ಸಳ ಹಾಗೂ ವಿಜಯನಗರದ ಅಧೀನರಾಗಿದ್ದ ಸ್ಥಳೀಯ ಮಾಂಡಲಿಕರು ಕೂಡ ಭೈರವದೇವರ ಪ್ರಖರವಾದ ಪ್ರಭೆಯಿಂದ ಹೊರಗುಳಿಯಲಿಲ್ಲ ಎಂಬುದು ಮೇಲಿನ ಶಾಸನೋಕ್ತ ವಿವರಗಳ ವಿವೇಚನೆಯಿಂದ ಮನಗಾಣಬಹುದಾಗಿದೆ.


ಅನುಬಂಧ-೧
ವಿವೀರಗಂಗನ ವಂಶ

ವೀರಗಂಗ ಶೆಲ್ವಗಂಗ                   (ಪೋಳಾಲ ದಂಡನಾಯಕನ ಮಗಳನ್ನು ವಿವಾಹವಾಗಿದ್ದನು)
(೧೧೭೯-೧೨೨೫)
¯
ಗಂಗಪೆರುಮಾಳ್ (೧೨೨೫-?)      ಸೋಮಲಾದೇವಿ
¯
ವಿಕ್ರಮಗಂಗನ್ (?-೧೨೬೦-?)
¯
ವೇಡುಮ್ಮಾರಬಾಣನ್ (?-೧೨೬೦-೧೨೬೨)
¯
?
¯
ಪದುಮಿಶೇಯನ್
¯
ಗಂಗಪೆರುಮಾಳ್ (೧೨೭೩)


ಅನುಬಂಧ-೨
ಬ್ರಹ್ಮಾಧಿರಾಜರ ವಂಶ


ನರಸಿಂಗ ಪೊಯ್ಸಳ ಬ್ರಹ್ಮಾಧಿರಾಯ
¯
?
¯
ಗಂಗಪೆರುಮಾಳ್ (೧೨೫೮-೧೨೬೭)
¯
?
¯
ಸೆಲ್ವಗಂಗನ್ (೧೨೬೭ ಮತ್ತು ೧೨೭೮ರ ಮಧ್ಯಾವಧಿ)
¯
ಕುತ್ತಾಂಡುದೇವ / ಕರಿಯಗಂಗ ಗೋಪಾಲ / ಕರಿಯಗಂಗ ಪೆರುಮಾಳ್ (?-೧೨೭೮-೧೨೮೧-?)
¯
ವಾಸುದೇವ (೧೨೮೦-೧೨೮೧)
¯
ಗಂಗಪೆರುಮಾಳ್ (೧೨೮೩-೧೨೮೬)
¯
ವಾಸುದೇವ (೧೨೮೬)
¯
?
¯
ಗಂಗಪೆರುಮಾಳ್ (೧೨೮೬)


zzz



No comments:

Post a Comment