Sunday, December 1, 2013

ಪೆರ್ಜೇನಹಳ್ಳಿ ಪ್ರಾಚ್ಯಾವಶೇಷಗಳು



ವೇಮಗಲ್ ಮೂರ್ತಿ?

ನೊಳಂಬರಾಜ ಒಂದನೆಯ ಪೊಳಲ್ಚೋರ (ಸಂ. ೮೩೦-೮೭೦)ನು ಗಂಗರಿಗೆ ಆತ್ಮೀಯನಾಗಿದ್ದವನು. ಈ ಸಮಯದಲ್ಲಿ ಒಂದನೆಯ ಅಮೋಘವರ್ಷ ನೃಪತುಂಗನು ರಾಷ್ಟ್ರಕೂಟ ದೊರೆಯಾಗಿದ್ದು, ಅಪ್ರಾಪ್ತ ವಯಸ್ಕನಾದ ಕಾರಣ ಇದರ ಅವಕಾಶವನ್ನು ಬಳಸಿಕೊಂಡು, ಒಂದನೆಯ ರಾಚಮಲ್ಲನ ಆಡಳಿತಾವಧಿಯಲ್ಲಿ ಸ್ವತಂತ್ರರಾದ ಗಂಗರು, ಪಲ್ಲವರನ್ನು ಸೋಲಿಸಿ, ಇವರ ಸಾಮಂತರಾಗಿದ್ದ ‘ಬಾಣರ ವಶದಲ್ಲಿದ್ದ ‘ಗಂಗರುಸಾವಿರವನ್ನು ಅವರಿಂದ ಪಡೆದು ತಮ್ಮ ಅಳಿಯನಾದ ನೊಳಂಬ ಪೊಳಲ್ಚೋರನಿಗೆ ಅದರ ಆಡಳಿತವನ್ನು ವಹಿಸುತ್ತಾರೆ. ಈ ನೊಳಂಬ ಪೊಳಲ್ಚೋರನು ಬಾಣರ ಮಾಂಡಲೀಕ ಪೊಂಪಲನನ್ನು ಕೊಲ್ಲುತ್ತಾನೆ. ಇವನೇ ಕೋಲಾರ ತಾಲ್ಲೂಕ್ ವೇಮಗಲ್ ಪ್ರದೇಶವನ್ನು ಆಳುತ್ತಿದ್ದವನು ಎಂದು ಇತಿಹಾಸ ಹೇಳುತ್ತದೆ.
ಈ ವೇಮಗಲ್ಲಿನ ಹತ್ತಿರವಿರುವ ಪುಟ್ಟಗ್ರಾಮವೇ ‘ಪೆರ್ಜೇನಹಳ್ಳಿ. ಈ ಪರಿಸರದಲ್ಲಿ ‘ಹೆಜ್ಜೇನು ಹೆಚ್ಚು ಇದ್ದ ಕಾರಣ ಈ ಹೆಸರು ಬಂತೆಂದು ತಿಳಿದುಬರುತ್ತದೆ. ಈ ಗ್ರಾಮವು ಕೈವಾರ ಮತ್ತು ಸೀತಿ ಗ್ರಾಮಕ್ಕೆ ಹತ್ತಿರವಿರುವುದರಿಂದ ಕೈವಾರ ನಾಡಿಗೆ ಹಿಂದೆ ಸೇರಿತ್ತೆಂದು ಊಹಿಸಬಹುದು. ಇಲ್ಲಿನ ಸುತ್ತಮುತ್ತಲಿನ ಪರಿಸರದಿಂದ ಈ ಗ್ರಾಮವು ಸಂಪದ್ಭರಿತವಾಗಿತ್ತೆಂದು ಗ್ರಹಿಸಬಹುದು. ಇಲ್ಲಿ ಹರಿಯುವ ಪಾಲಾರ್ ನದಿ ಹಳ್ಳಿ, ವಿಶಾಲವಾದ ಕೆರೆ, ಕೆರೆ ಕೆಳಗಿನ ಗದ್ದೆ ಬಯಲು, ಈ ಗದ್ದೆ ಬಯಲಿನಲ್ಲಿ ನಮ್ಮ ಮುತ್ತಾತಂದಿರಾದ ವೇದಾಧ್ಯಯನ ಪ್ರವೀಣ ರಾಮಾಭಟ್ಟರಿಗೆ ಅಂದಿನ ರಾಜರಿಂದ ಗದ್ದೆ ಮತ್ತು ಹುಣಸೇಮರ ದಾನವಾಗಿ ಬಂದಿತ್ತು. ಅಲ್ಲಲ್ಲಿ ಕಾಣಬರುವ ಉಪ್ಪನ್ನು ತಯಾರಿಸುತ್ತಿದ್ದ ‘ಉಪ್ಪುಮಡಿಗಳು (ಉಪ್ಪುಮಣ್ಣಿನ ದಿಬ್ಬಗಳು) ಊರ ಹೊರವಲಯದ ಸುತ್ತಮುತ್ತ ಅಲ್ಲಲ್ಲಿ ಶ್ರೀಗಂಧದ ಮರಗಳಿಂದ ಕೂಡಿದ ಪ್ರದೇಶ. ಇಂತಹ ಪರಿಸರದಲ್ಲಿನ ನನ್ನ ಕ್ಷೇತ್ರಕಾರ್ಯದಲ್ಲಿ ಅನೇಕ ಪ್ರಾಚ್ಯಾವಶೇಷಗಳು ಕಂಡುಬಂದಿದ್ದು, ಅವುಗಳ ವಿಶ್ಲೇಷಣೆಯನ್ನು ಇಲ್ಲಿ ಕೊಡಲಾಗಿದೆ.
ಇಲ್ಲಿನ ರೈತಾಪಿ ಜನರು ಹೆಚ್ಚಾಗಿ ಹಸು, ಎತ್ತು, ಎಮ್ಮೆ, ಕುರಿ ಇತ್ಯಾದಿಗಳನ್ನು ಸಾಕುವುದು ಒಂದು ಉದ್ಯೋಗವಾಗಿದ್ದು, ಇದರ ಜೊತೆಗೆ ಶ್ರೀಗಂಧದ ಬೀಡು ಹಾಗೂ ಉಪ್ಪನ್ನು ತಯಾರಿಸುತ್ತಿದ್ದ ಕಾರಣ ಈ ಊರು ಹಿಂದೆ ವ್ಯಾಪಾರಕೇಂದ್ರವಾಗಿತ್ತೆಂದು ತರ್ಕಿಸಬಹುದು. ಇಲ್ಲಿನ ಪ್ರಾಚ್ಯಾವಶೇಷಗಳನ್ನು ಕೆಳಗೆ ವಿವರಿಸಲಾಗಿದೆ.
೧) ಕೋಟೆ : ಇದು ಸುಮಾರು ೧೫೦-೨೦೦ ವರ್ಷಗಳಷ್ಟು ಹಳೆಯದೆಂದು ಹಾಗೂ ಸುಮಾರು ೮ ಅಡಿಗಿಂತಲೂ ಹೆಚ್ಚು ಎತ್ತರದ ಕಲ್ಲಿನ ಕೋಟೆಯಾಗಿತ್ತೆಂದು ಸ್ಥಳೀಯ ಹಿರಿಯರಿಂದ ತಿಳಿದುಬರುತ್ತದೆ. ಆದರೆ ಇಂದು ಕೋಟೆಯ ತಳಪಾಯ ಪಾತ್ರ ಊರ ಸುತ್ತಲೂ ಹಾಗೆಯೇ ಇದ್ದು, ಕೋಟೆಯ ಬಾಗಿಲು ಇಂದು ಊರ ಬಾಗಿಲಾಗಿ ನವೀಕೃತಗೊಂಡಿದೆ.
೨) ಯಂತ್ರದ ಕಲ್ಲು : ಯಂತ್ರದ ಕಲ್ಲನ್ನು ಊರಬಾಗಿಲ ಬಳಿ ಪೂರ್ವಾಭಿಮುಖವಾಗಿ ನೆಟ್ಟಿದ್ದು, ಸುಮಾರು ೭೦ ಸೆಂ.ಮೀ. ಉದ್ದ, ೫೦ ಸೆಂ.ಮೀ. ಅಗಲವಿದೆ. ಕಲ್ಲಿನ ಮೇಲೆ ಸ್ಪಷ್ಟವಾಗಿ ಸೂರ್ಯ, ಚಂದ್ರರನ್ನು ಬಿಡಿಸಿ, ಇವೆರಡರ ಮಧ್ಯೆ ಕನ್ನಡ ಲಿಪಿಯಲ್ಲಿ ‘ವೀರಭದ್ರ ಎಂದು ಕೆತ್ತಲಾಗಿದ್ದು, ಇದರ ಕೆಳಗಡೆ ಯಂತ್ರವನ್ನು ಬಿಡಿಸಿ, ಯಂತ್ರದ ಕೆಳಗಡೆ ‘ಕಾಲಭೈರವ ಎಂದು ಕೆತ್ತಲಾಗಿದೆ. ಯಂತ್ರದ ಕಲ್ಲಿನ ಮೇಲೆ ‘ವೀರಭದ್ರ ಹಾಗೂ ‘ಕಾಲಭೈರವ ಎಂದು ಬರೆದಿರುವುದಕ್ಕೆ ಕಾರಣ ಬಹುಶಃ ಪೆರ್ಜೇನಹಳ್ಳಿ ಗ್ರಾಮವು ಒಕ್ಕಲಿಗರ ಆರಾಧ್ಯದೇವರ ಕ್ಷೇತ್ರವಾದ ‘ದಕ್ಷಿಣ ಕಾಶಿ ಎಂದು ಹೆಸರು ಪಡೆದಿರುವ ಮತ್ತು ‘ಕಾಲಭಯರವ ಹಾಗೂ ‘ವೀರಭದ್ರ ನೆಲೆಸಿರುವ ‘ಸೀತಿ ಬೆಟ್ಟವು ಈ ಗ್ರಾಮಕ್ಕೆ ಅತೀ ಸಮೀಪವಿರುವುದೇ ಆಗಿದ್ದು, ಆ ದೇವರುಗಳ ಹೆಸರಲ್ಲಿ ಯಂತ್ರದ ಕಲ್ಲು ಹಾಕಿಸಿರಬಹುದೆನಿಸುತ್ತದೆ. ಸ್ಥಳೀಯ ಹಿರಿಯರ ಪ್ರಕಾರ ಈ ಯಂತ್ರದ ಕಲ್ಲನ್ನು ಊರ ಬಾಗಿಲ (ಹಿಂದೆ ಕೋಟೆ ಬಾಗಿಲು ಇದ್ದ ಸ್ಥಳ) ಬಳಿ ಹಾಗೂ ಕೋಟೆಯ ಸಮೀಪವೇ ನೆಟ್ಟಿರುವುದರಿಂದ ಊರಿಗೆ ಒಳ್ಳೆಯದಾಗಲೆಂದು ಹಾಕಿಸಿರಬಹುದೆಂದು ಅಭಿಪ್ರಾಯಪಡುತ್ತಾನೆ. ಎಲ್ಲಾ ಊರುಗಳಂತೆ ಇಲ್ಲಿಯೂ ಈ ‘ಯಂತ್ರದ ಕಲ್ಲಿಗೆ ಹಬ್ಬ ಹರಿದಿನಗಳಲ್ಲಿ ಹಾಗೂ ಗ್ರಾಮದ ವಿಶೇಷ ದಿನಗಳಲ್ಲಿ ಪೂಜೆ ಮಾಡುವ ಪದ್ಧತಿಯನ್ನು ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ. ಲಿಪಿಯ ಆಧಾರದ ಮೇಲೆ ಇದು ವಿಜಯನಗರೋತ್ತರದೆಂದು ತಿಳಿಯಬಹುದಾಗಿದೆ.
೩) ಎತ್ತಿನ ಚಿತ್ರವಿರುವ ಶಿಲಾಸ್ಮಾರಕ-ಒಂದು : ಈ ಸ್ಮಾರಕವು ಯಂತ್ರದ ಕಲ್ಲಿನ ಸಮೀಪವಿದ್ದು, ಉತ್ತರಾಭಿಮುಖವಾಗಿ ನೆಡಲಾಗಿದೆ. ಈ ಸ್ಮಾರಕವು ಸುಮಾರು ೯೦ ಸೆಂ.ಮೀ. ಉದ್ದ ಮತ್ತು ೬೨ ಸೆಂ.ಮೀ. ಅಗಲವಿದೆ. ಎತ್ತಿನ ಚಿತ್ರವನ್ನು ಸ್ಪಷ್ಟವಾಗಿ ಬಿಡಿಸಲಾಗಿದೆ. ಚಿತ್ರದ ಕೆಳಗಡೆ ‘ಸಕ್ಕರಪ್ಪನ ಎತ್ತು ಎಂದು ದಪ್ಪ ಅಕ್ಷರಗಳಲ್ಲಿ ಕೆತ್ತಲಾಗಿದ್ದು ಲಿಪಿ ಇತ್ತೀಚಿನದಾಗಿದೆ. ಎತ್ತು sಸಮಾಧಿಯಾದ ದಿನಾಂಕವನ್ನು ೧೧-೨-೦೨ ಎಂದು ಹಾಕಿರುವುದರಿಂದ ಈ ಸ್ಮಾರಕವು ಸುಮಾರು ೧೧೧ ವರ್ಷಗಳಷ್ಟು ಹಳೆಯದೆಂದು ತಿಳಿಯಬಹುದು. ಈ ಸ್ಮಾರಕದಲ್ಲಿನ ಹೆಸರಿನ ಮನೆತನದವರು ಇಂದಿಗೂ ಈ ಊರಿನಲ್ಲಿದ್ದು ಅವರ ಪ್ರಕಾರ ಪ್ರೀತಿಯಿಂದ ಸಾಕಿದ ಎತ್ತಿನ ಮೇಲಿನ ಮಮಕಾರಕ್ಕೆ ಈ ಸ್ಮಾರಕವನ್ನು ಹಾಕಿರುವುದೆಂದು ತಿಳಿಸುತ್ತಾರೆ. ಇಂದಿಗೂ ಇವರು ಹಾಗೂ ಊರಿನ ಜನ ಸ್ಮಾರಕಕ್ಕೆ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ.
೪) ಎತ್ತಿನ ಚಿತ್ರವಿರುವ ಶಿಲಾಸ್ಮಾರಕ-ಎರಡು : ಈ ಶಿಲಾಸ್ಮಾರಕವು ಮೇಲೆ ಹೇಳಿರುವ ಎತ್ತಿನ ಸ್ಮಾರಕದ ಪಕ್ಕದಲ್ಲಿದ್ದು, ಇದೂ ಸಹ ಉತ್ತರಾಭಿಮುಖವಾಗಿದೆ. ಇದು ಚಿಕ್ಕದಾಗಿದ್ದು ಸುಮಾರು ೮೦ ಸೆಂ.ಮೀ. ಉದ್ದ, ೬೦ ಸೆಂ.ಮೀ. ಅಗಲವಿದೆ. ಎರಡೂ ಸ್ಮಾರಕಗಳು ಒಂದೇ ಸ್ಥಳದಲ್ಲಿರುವುದರಿಂದ ಎರಡೂ ಎತ್ತುಗಳು ಒಬ್ಬರಿಗೇ ಸೇರಿದ್ದಾಗಿದೆ. ಈ ಸ್ಮಾರಕವನ್ನು ಯಾವುದೇ ತೆರನಾದ ಲಿಪಿಯಲ್ಲಿ ಆದರೆ ೨೭-೯-೫೫ ಎಂದು ದಿನಾಂಕವನ್ನು ಸ್ಪಷ್ಟವಾಗಿ ಹಾಕಲಾಗಿದೆ. ಇದು ಸುಮಾರು ೫೮ ವರ್ಷಗಳಷ್ಟು ಹಳೆಯದಾಗಿದ್ದು, ಇತ್ತೀಚಿನದು ಎನಿಸಿದೆ. ಈ ಸ್ಮಾರಕಕ್ಕೂ ಪೂಜೆಯನ್ನು ಮಾಡುತ್ತಾರೆ.
೫) ಕಲ್ಲಿನ ಗಾಣಗಳು : ಗಾಣಗಳು ಊರಿನ ಮಧ್ಯೆ ಇದ್ದು, ಇವುಗಳನ್ನು ಹಿಂದೆ ಎಣ್ಣೆ ತೆಗೆಯಲು ಬಳಸುತ್ತಿದ್ದರು. ಸುಮಾರು ೧೫೦-೨೦೦ ವರ್ಷಗಳಷ್ಟು ಹಳೆಯದಾಗಿದೆ. ಒಂದು ಕಲ್ಲಿನ ಗಾಣದ ಮೇಲೆ ಲಿಪಿ ಇದ್ದು, ಅಸ್ಪಷ್ಟವಾಗಿದೆ. ಇಂದು ಗಾಣಗಳನ್ನು ಬಳಸದೆ ಹಾಗೆ ಬಿಡಲಾಗಿದೆ.
೬) ಛತ್ರ, ಅರಳಿಕಟ್ಟೆ, ಹೊರೆಕಲ್ಲು, ಸೀಸಂದ್ರ, ಬಾವಿ: ಸ್ಥಳೀಯರ ಪ್ರಕಾರ ಸುಮಾರು ೧೫೦ ವರ್ಷಗಳ ಹಿಂದೆ ಈ ಊರಲ್ಲಿ ಒಂದು ಛತ್ರ ಇದ್ದಿದ್ದು, ಇಂದು ಅದು ಮನೆಯಾಗಿ ಮಾರ್ಪಟ್ಟಿದೆ. ಛತ್ರ ಇತ್ತು ಎನ್ನುವುದಕ್ಕೆ ಕುರುಹುಗಳೇನೂ ಇಲ್ಲ. ಆದರೆ, ಇದೇ ಪರಿಸರದಲ್ಲಿ ಅರಳಿಕಟ್ಟೆ, ಬಾವಿ, ಹೊರೆಕಲ್ಲು, ಸೀಸಂದ್ರ ಒಂದು ಶಾಸನ ಇರುವುದರಿಂದ ಹಿಂದೆ ಇಲ್ಲಿ ಒಂದು ಛತ್ರ ಇತ್ತೆಂದು ಹೇಳಬಹುದು. ಬಾವಿಯಲ್ಲಿ ನೀರಿಲ್ಲದ ಕಾರಣ ಕಲ್ಲು ಚಪ್ಪಡಿಯಿಂದ ಮುಚ್ಚಿದ್ದಾರೆ. ಊರಿನಲ್ಲಿ ನಲ್ಲಿಗಳು ಇರುವುದರಿಂದ ಇಂದು ಸೀಸಂದ್ರ ಬಳಸುತ್ತಿಲ್ಲ. ಆದರೆ ‘ಸೀಸಂದ್ರ ಬಳಸುತ್ತಿದ್ದ ಕಾಲದಲ್ಲಿ ಊರಿನ ಗ್ರಾಮಸ್ಥರು ಸೀಸಂದ್ರದಲ್ಲಿ ನೀರನ್ನು ತುಂಬಿ, ವ್ಯಾಪಾರಕೇಂದ್ರವಾಗಿದ್ದ ಕಾರಣ, ವ್ಯಾಪಾರಕ್ಕಾಗಿ ಬರುತ್ತಿದ್ದ ಜನರಿಗೂ ಹಾಗೂ ದಾರಿಯ ಪ್ರಯಾಣಿಕರಿಗೂ ಅನುಕೂಲವಾಗಲೆಂದು ಬಳಸಲ್ಪಡುತ್ತಿತ್ತು. ಇದೊಂದು ಜನೋಪಕಾರವೂ ಆಗಿತ್ತು. ಹೊರೆಕಲ್ಲು, ವ್ಯಾಪಾರಕ್ಕಾಗಿ ಈ ಊರಿಗೆ ಬಂದ ಜನರಿಗೂ ಹಾಗೂ ಆ ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಕಾಲು ನಡಿಗೆಯವರಿಗೂ ಮತ್ತು ಇತರರಿಗೆ ತಮ್ಮ ಸರಕುಗಳನ್ನು ‘ಹೊರೆಕಲ್ಲು ಮೇಲೆ ಇಟ್ಟು ವಿಶ್ರಾಂತಿ ಪಡೆಯುವ ಉದ್ದೇಶವೇ ಆಗಿತ್ತು. ಇದು ಇನ್ನು ಸುಸ್ಥಿತಿಯಲ್ಲಿದ್ದು, ಹೆಚ್ಚು ಬಳಸಲ್ಪಡುತ್ತಿಲ್ಲ. ಅರಳಿಕಟ್ಟೆ ಅಳಿವಿನ ಅಂಚಿನಲ್ಲಿದೆ.
೭) ಅಪ್ರಕಟಿತ ಶಾಸನ : ಈ ಮೇಲೆ ಹೇಳಿರುವ ಪರಿಸರದಲ್ಲಿ ಒಂದು ಅಪ್ರಕಟಿತ ಶಾಸನವಿದ್ದು, ಇದನ್ನು (ಛತ್ರದ) ಮನೆಯ ಕಾಂಪೌಂಡಿನ ಕಲ್ಲುಚಪ್ಪಡಿಗಳ ಸಾಲಿನಲ್ಲಿ ನೆಟ್ಟಿದ್ದಾರೆ. ಇದರಿಂದ ಇದು ಸುಲಭವಾಗಿ ಯಾರಿಗೂ ತಿಳಿಯುವುದಿಲ್ಲ. ಇದರಲ್ಲಿನ ಲಿಪಿ ಸ್ಪಷ್ಟವಾಗಿದೆ. ಶಾಸನದಲ್ಲಿ ೬ ಸಾಲುಗಳಿದ್ದು, ಲಿಪಿಯ ಆಧಾರದ ಮೇಲೆ ಸುಮಾರು ೧೫೦ ವರ್ಷಗಳಷ್ಟು ಹಳೆಯದೆಂದು ಹೇಳಬಹುದು. ಶಾಸನದ ಪಾಠ ಈ ಕೆಳಗಿನಂತಿದೆ.
೧        ಗೌ | ತಿಂ
೨        ಮಂಣನ
೩        ಮಗ ಚೌಡ
೪        ವ್ಯ | ಮುತ್ತಮ್ಮ
೫        ಯಿವರು ಮಾ
೬        ಡಿಶಿದ ಕೆಲಸ
ಶಾಸನವಿರುವ ಪರಿಸರದಲ್ಲೇ ಛತ್ರ, ಬಾವಿ, ಹೊರೆಕಲ್ಲು, ಸೀಸಂದ್ರ, ಅರಳಿಕಟ್ಟೆ ಎಲ್ಲವೂ ಇಂದಿಗೂ ಇರುವು ದರಿಂದ ಹಾಗೂ ಶಾಸನದಲ್ಲಿರುವ ಪಾಠವನ್ನು ಗಮನಿಸಿದರೆ ಗೌಡರ ತಿಂಮಣನ ಮಗ ಚೌಡಪ್ಪ ಮತ್ತು ಮುತ್ತಮ್ಮ (ಅಂದರೆ ತಿಂಮಣನ ಮಗ ಚೌಡಪ್ಪ ಮತ್ತು ಸೊಸೆ ಮುತ್ತಮ್ಮ ಎಂದು ಊಹಿಸಬಹುದು) ಜನೋಪಕಾರಿ ಕೆಲಸಗಳನ್ನು ಮಾಡುವ ವ್ಯಕ್ತಿಗಳಾಗಿದ್ದು, ಆ ಹಾದಿಯಲ್ಲಿ ಹಾದುಹೋಗುವ ಜನರಿಗೆ ಆ ಸಂದರ್ಭಗಳಲ್ಲಿ ಎಲ್ಲಾ ಅನುಕೂಲತೆಗಳು ಒಂದೇ ಕಡೆ ಸಿಗಲಿ ಎನ್ನುವ ಉದ್ದೇಶದಿಂದ ಛತ್ರ, ಅರಳಿಕಟ್ಟೆ, ಸೀಸಂದ್ರ ಕಟ್ಟಿಸಿ, ಬಾವಿ ತೋಡಿಸಿ, ಹೊರೆಕಲ್ಲು ಹಾಕಿಸಿದ್ದಾರೆಂದು ತಿಳಿಯುತ್ತದೆ.
೮) ಚನ್ನರಾಯಸ್ವಾಮಿ ಗುಡಿ : ಊರಿನ ಪಶ್ಚಿಮ ದಿಕ್ಕಿನ ಕುಬೇರ ಮೂಲೆಯಲ್ಲಿ ಚನ್ನರಾಯಸ್ವಾಮಿ ಗುಡಿ ಇದ್ದು, ‘ಮೂರ್ತಿ ಬೃಂದಾವನ ರೂಪದಲ್ಲಿರುವುದು ವಿಶೇಷವಾಗಿದೆ. ಗುಡಿಯನ್ನು ಇತ್ತೀಚೆಗೆ ನವೀಕರಿಸಲಾಗಿದೆ. ಹಳೆಯ ದೇಗುಲವಿದ್ದ ಪರಿಸರ ಇಂದಿಗೂ ಎದ್ದು ಕಾಣುತ್ತದೆ. ಬೃಂದಾವನವು ವಿಜಯನಗರೋತ್ತರದ್ದಾಗಿತ್ತು. ಸ್ವಾಮಿಗೆ ತಪ್ಪದೆ ಪೂಜೆ ನಡೆಯುತ್ತಿದೆ.
೯) ತಾಟಪ್ಪರಾಯನ ಗುಡಿ: ಈ ಗುಡಿ ಊರ ಹೊರಗೆ ಇದ್ದು, ಯಾವುದೇ ‘ಮೂರ್ತಿ ಇಲ್ಲ. ಆದರೆ ಮೂರ್ತಿಯು ೩ ಕಲ್ಲುಗಳ ರೂಪದಲ್ಲಿವೆ. ಸಂಕ್ರಾಂತಿ ಹಬ್ಬದ ದಿನಗಳಲ್ಲಿ ವಿಶೇಷವಾಗಿ ಪೂಜೆ ಮಾಡುತ್ತಾರೆ.
೧೦) ಶಿಲಾವೃತ್ತ ಸಮಾಧಿಗಳು : ಬೃಹತ್ ಶಿಲಾಯುಗಕ್ಕೆ ಸೇರಿದ ೪ ಶಿಲಾವೃತ್ತ ಸಮಾಧಿಗಳು ಊರ ಬಳಿಯ ಹೊಲದಲ್ಲಿದ್ದು ಎಲ್ಲವೂ ಚೆನ್ನಾಗಿದೆ. ಇದನ್ನು ಈಗಾಗಲೇ ಪರಿಷ್ಕೃತ ಜಿಲ್ಲಾ ಗೆಜೆಟಿಯರ್ ಕೋಲಾರ ಮತ್ತು ಡಾ|| ಕೆ.ಬಿ. ಶಿವತಾರಕರವರ ‘ಕರ್ನಾಟಕದ ಪುರಾತತ್ತ್ವ ನೆಲೆಗಳು ಪುಸ್ತಕಗಳಲ್ಲಿ ದಾಖಲಿಸಿದ್ದಾರೆ. ಇವುಗಳ ಸಂಶೋಧನೆಯಿಂದ ಅನೇಕ ಹೊಸ ವಿಷಯಗಳು ಹೊರಬರಬಹುದು ಎನಿಸುತ್ತದೆ.
ಹೀಗೆ ‘ಪೆರ್ಜೇನಹಳ್ಳಿ ಗ್ರಾಮವು ಹಲವಾರು ಪ್ರಾಚ್ಯಾವಶೇಷಗಳಿಂದ ಕೂಡಿರುವುದಷ್ಟೇ ಅಲ್ಲದೆ ಬೃಹತ್ ಶಿಲಾಯುಗಕ್ಕೂ ಸೇರಿದ ಪ್ರದೇಶ ಆಗಿದೆ ಎಂದು ಹೇಳಬಹುದು.
[ಕೃತಜ್ಞತೆಗಳು : ಕ್ಷೇತ್ರಕಾರ್ಯದಲ್ಲಿ ನೆರವಾದವರು : ಪೆರ್ಜೇನಹಳ್ಳಿಯ ಸೊಣ್ಣಪ್ಪ, ಸುಬ್ರಮಣಿ, ನಾಗೇಶ್, ವೇಮಗಲ್ಲಿನ ವಿಜಯ್ ಹಾಗೂ ನನ್ನ ಮಗ ವಿ.ಎಂ. ದೀಪು ಸುಬ್ರಹ್ಮಣ್ಯಂ, ಇವರಿಗೆ ಹಾಗೂ ಸಲಹೆ ಸೂಚನೆಗಳನ್ನಿತ್ತ ಗುರುಗಳಾದ ಪಿ.ವಿ. ಕೃಷ್ಣಮೂರ್ತಿ ಹಾಗೂ ಶ್ಯಾಮಲ ರತ್ನಕುಮಾರಿಯವರಿಗೆ ನನ್ನ ವಂದನೆಗಳು.]


??# ೧೮೩, ೩ನೇ ಮುಖ್ಯರಸ್ತೆ, ಅರೆಹಳ್ಳಿ, ಎ.ಜಿ.ಎಸ್. ಲೇಔಟ್, ಸುಬ್ರಹ್ಮಣ್ಯಪುರ ಅಂಚೆ, ಬೆಂಗಳೂರು-೫೬೦೦೬೧.



              




             






No comments:

Post a Comment