Friday, April 26, 2013

" ಅನಂತ ರಂಗ" ಪ್ರಶಸ್ತಿ ಪಡೆದ ಪುಸ್ತಕ -ವಿಮರ್ಶೆ












ಚಾವುಂಡರಾಯನ ಲೋಕೋಪಕಾರ ಜಲವಿಜ್ಞಾನ –ತಂತ್ರಜ್ಞಾನ-ಒಂದು ಅನಿಸಿಕೆ



ಎರಡು ತಿಂಗಳ ಹಿಂದೆ ಬಿ. ಎಂ. ಶ್ರೀ ಪ್ರತಿಷ್ಠಾನಕ್ಕೆ ಹೋಗಿದ್ದಾಗ ನಾಲ್ಕು ಪುಸ್ತಕ ಕೊಟ್ಟು “ ದಯಮಾಡಿ ಇವುಗಳನ್ನು ಪರಿಶೀಲಿಸಿ ಅವುಗಳಲ್ಲಿ ಒಂದನ್ನು ಪ್ರಶಸ್ತಿಗೆ ಆಯ್ಕೆ ಮಾಡಿ” ಎಂದು ಕೇಳಿಕೊಂಡರು. ಸರಿ ಒಂದು ವಾರದ ಓದಿಗೆ ಗ್ರಾಸ ದೊರೆಯಿತು ಎಂದು ಸಂತೋಷದಿಂದ ಒಪ್ಪಿಕೊಂಡು ಅವನ್ನುತೆಗೆದುಕೊಂಡು ಮನೆಗೆ ಬಂದೆ. ವಿರಾಮವಾಗಿ ಕುಳಿತು ಅವು ಯಾವ ಪುಸ್ತಕಗಳು ಎಂದು ನೊಡಿದಾಗ ಒಂದು ಕ್ಷಣ ಗಾಬರಿಆಯಿತು. ಕಥೆ, ಕವನ, ಕಾದಂಬರಿಗಳಾದರೆ ಖುಷಿಯಾಗಿ ಓದಿ ನನ್ನ ಅಭಿಪ್ರಾಯವನ್ನು ಹೇಳಬಹುದಿತ್ತು .ಆದರೆ ಅವು ನಾಲ್ಕೂ ಸಂಶೋಧನಾ ಗ್ರಂಥಗಳು. ಒಳ್ಳೆ ಫಜೀತಿ ಆಯಿತಲ್ಲ ಎನಿಸಿತು. ಮೊಟ್ಟ ಮೊದಲು ಅವನ್ನು ಓದುವುದೇ ಪ್ರಯಾಸದ ಕೆಲಸ .ಜೊತೆಗೆ ಅವುಗಳಲ್ಲಿ ಯಾವುದು ಪ್ರಶಸ್ತಿಗೆ ಅರ್ಹ ಎಂದು ತೀರ್ಮಾನಿಸುವುದಂತೂ ನನ್ನ ಅಳವಿಗೆ ಮೀರಿದ್ದು ಎನಿಸಿತು, ಸಾಹಿತ್ಯಾಭ್ಯಾಸಿಯಾದ ನನಗೆ ಸಂಶೋಧನೆ ಎಂದರೆ ವಿದ್ವಾಂಸರ ಲೋಕ ಎಂದೇ ಭಾವನೆ.ಅನಂತರಂಗ ಪ್ರಶಸ್ತಿಯನ್ನು ಆ ವರ್ಷದ ಅತ್ಯತ್ತುಮ ಸಂಶೋಧನಾ ಗ್ರಂಥಕ್ಕೆ ಕೊಡಲು ತೀರ್ಮಾನ ಮಾಡಲು ಮೊದಲು ನಾನು ಸಂಶೋಧನೆಯ ಅರ್ಥ, ಆಳ . ಆಗಲಗಳ ಅರಿಯಬೇಕಿತ್ತು. ಯಥಾರೀತಿ ಸಂಬಂಧಿಸಿದ ಪುಸ್ತಕಗಳನ್ನು  ಹುಡುಕಿದೆ. ಅಂತರ್‌ಜಾಲವಂತೂ ಒಂದು ರಾಶಿ ಮಾಹಿತಿ ಮುಂದೆ ಇಟ್ಟಿತು.ಸಂಶೋಧನೆ ಎಂದರೆ ಇಂಗ್ಲಿಷ್‌ನಲ್ಲಿ Research “..ಹುಡುಕಾಟ ಎಂಬ ಸ್ಥೂಲ ವಿವರಣೆ ಸಿಕ್ಕಿತು.ಚಿಂತಿಸಬೇಕಾದ ವಿಷಯ ಚಿಂತನೆಗೆ ದಾರಿ ಮಾಡಿಕೊಟಿತು.

 ಹುಡುಕಾಟಕ್ಕೆ ನಾನು ಹೆಸರುವಾಸಿ. ಷಾರ್ಟ ಸೈಟು ದೋಷವಿರುವ ನಾನು ಓದುವಾಗ ಕನ್ನಡ  ತೆಗೆಯುವೆ. ಓದು ಮುಗಿದ ನಂತರ  ಶುರು ಹುಡುಕಾಟ.  ನನ್ನ ಮೊಮ್ಮಕ್ಕಳಿಗೆ ಕನ್ನಡಕ ಕಳೆದಿದೆ ಎಂದರೆ ಖುಷಿಯೋ ಖುಷಿ. ಅವರಿಗೆ ಐಸ್‌ಕ್ರಿಮ್‌ ಚಾಕೊಲೇಟ್‌ ಆಮಿಷ ಒಡ್ಡಿದಾಗ  ಮಾತ್ರ ಹುಡುಕಿ ಕೊಡುತಿದ್ದರು. ಒಂದು ಸಲವಂತೂ ಓದಿ ಅರ್ಧ ಗಂಟೆಯಾದ ಮೇಲೆ ಎಲ್ಲಿ ಹುಡುಕಿದರೂ ಸಿಗಲಿಲ್ಲ. ಮಕ್ಕಳು ಶಾಲೆಗೆ ಹೋಗಿದ್ದರು. ಕೊನೆಗೆ ಹೆಂಡತಿಯನ್ನೇ ಕರೆದು ’ ದಯಮಾಡಿ ನನ್ನ ಕನ್ನಡಕ ಹುಡುಕಿಕೊಡು ಹೊರಗೆ ಹೋಗ ಬೇಕು “ ಎಂದೆ. ಸದಾ ನಿಮ್ಮದೂ ಇದೇ ಆಯಿತು, ಎಂದು ಗೊಣಗುತ್ತಾ ಬಂದ ಮಡದಿ ನನ್ನನ್ನು  ನೋಡಿ ಗೊಳ್ಳನೆ ನಕ್ಕಳು . ನಾನು ಕಕ್ಕಾಬಿಕ್ಕಿಯಾದೆ.. ಬಂದಮೇಲೆ ನನ್ನ ತಲೆಗೆ ಏರಿಸಿಕೊಂಡಿದ್ದ ಕನ್ನಡಕವನ್ನು ತೆಗೆದು ಕೈಗೆ ಕೊಟ್ಟಳು.ನನಗಿರುವ ಸಂಶೋಧನೆ ಅನುಭವ ಇಷ್ಟು.  ಈ ಕೆಲಸ  ಆಗದು ಎಂದರೆ ಬಂದ ಪುಸ್ತಕಗಳನ್ನು ವಾಪಸ್ಸು ಮಾಡ ಬೇಕು ಮನಸ್ಸು ಒಪ್ಪಲಿಲ್ಲ. ಸರಿ ಮರು-ಹುಡುಕಾಟ ಮೊದಲು ಮಾಡಿದೆ.ಹಳೆಯದನ್ನು , ಕಳೆದುದನ್ನು ಹುಡುಕುವುದು search ಆದರೆ ಹಳೆಯದರಲ್ಲಿನ ಹೊಸತನ್ನು ಹುಡುಕುವುದು research  ಎಂದು ಹೊಳೆಯಿತು. ಆಗ ಅಡಿಗರ ಕವನದ ಸಾಲು” ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ“ನೆನಪಾಯಿತು. ಆದರೆ ತುಸು ಬದಲಾವಣೆ ಅಗತ್ಯವೆನಿಸಿತು ,”ಇರುವುದೆಲ್ಲವ ಅರಿತು ಇರಬಹದಾದನ್ನು ಅರಿಯಲು ತುಡಿವುದೇ ಸಂಶೋಧನೆ “  ವಾಸ್ತವಕ್ಕೆ ಹತ್ತಿರವೆನಿಸಿತು.


ಸಾಮಾನ್ಯವಾಗಿ ಸಂಶೋಧನೆ ಎಂದರೆ ಅದು ವಿಜ್ಞಾನಿಗಳ ಕ್ಷೇತ್ರ ಎಂಬ ಭಾವನೆ ಇದೆ  ಆದರೆ ವಾಸ್ತವ ವಿಭಿನ್ನ. ವಿದ್ಯುತ್‌ ಬಲ್ಬ್‌ ಕಂಡುಹಿಡಿದ ಥಾಮಸ್ ಅಲ್ವಾ ಎಡಿಸನ್‌ ನೂರಾರು ಸಂಶೋಧನೆ ಮಾಡಿರುವನೆಂದರೆ ಅದರ ವ್ಯಾಪ್ತಿಯ ಅರಿವಾಗುವುದು. “ಕಂನುಡಿಯ ಹುಟ್ಟು ಬೆಳವಣಿಗೆ “ ಅರಿಯಲು ಯತ್ನಿಸಿದ ಶಂ.ಬಾ ಜೋಷಿ , ಶಾಸನಗಳಲ್ಲಿ ಸಾಮಾಜಿಕ ಸಾಂಸ್ಕೃತಿಕ ಅಂಶ ಕಂಡುಕೊಂಡ ಚಿ.ಮೂ, ಪೆನ್ಸಿಲಿನ್‌ಅನ್ನು ಕಂಡು ಹಿಡಿದ ಅಲೆಕ್ಜಾಂಢರ್‌ ಫ್ಲೆಮಿಂಗ್‌. ಪಂಪ, ರನ್ನ ಕುಮಾರವ್ಯಾಸರ ಕಾಲನಿರ್ಣಯಮಾಡಿದ ಡಾ. ಗೋವಿಂದ ಪೈ , ಆಕಾಶದಲ್ಲಿನ ಕಪ್ಪುರಂದ್ರ ಕಂಡು ಹಿಡಿದ  ಸುಬ್ರಮಣ್ಯಂ ಚಂದ್ರಶೇಖರ್‌, ಸಾಗರದ ತಳದಲ್ಲಿನ ದ್ವಾರಕೆಯ ಅವಶೇಷಗಳನ್ನು ಬೆಳಕಿಗೆ ತಂದ ಎಸ್‌.ಆರ್‌.ರಾವ್ ಅಷ್ಟೇ ಏಕೆ ಕರ್ನಾಟಕ ಇತಿಹಾಸ ಅಕಾದೆಮಿಯ ವಾರ್ಷಿಕ ಸಮಾವೇಶದಲ್ಲಿ ಹಳ್ಳಿಹಳ್ಳಿಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಶಾಸನಗಳನ್ನು ಹುಡುಕಿ ದಾಖಲಿಸುವ ಯುವಜನರೂ ಸಂಶೋಧಕರೇ..ಈ ಹುಡುಕಾಟಕ್ಕೆ ಇಂಗ್ಲಿಷ್‌ನಲ್ಲಿ ತುಸು ಹೆಚ್ಚು ಎನ್ನಬಹುದಾದ ಸಂವಾದಿ ಶಬ್ದಗಳಿವೆ.Research, invention, discovery.exploration.  ಅವುಗಳ ನಡುವೆ ಬಹು  ಸೂಕ್ಷ್ಮವಾದ ವಿಭಿನ್ನತೆ ಇದೆ. ಆದರೆ ಕನ್ನಡದಲ್ಲಿ ಸಂಶೋಧನೆ ಪದವು ವ್ಯಾಪಕವಾಗಿ ಬಳಕೆಯಾಗುತ್ತದೆ.


ಸಂಶೋಧನೆಯ ಮೊದಲ ಹಂತ ಇರುವುದನ್ನು ಪೂರ್ಣವಾಗಿ ತಿಳಿದುಕೊಂಡು  ಅದರ  ಹೊಸ ಆಯಾಮಗಳನ್ನು ಹುಡುಕುವುದು ಯಾವುದೇ ಸಂಶೋಧನೆ ಅಂತಿಮ ಅಲ್ಲ. ಒಂದು ಕಾಲಕ್ಕೆ ಯಾವುದೇ ಮೂಲವಸ್ತುವಿನ ಅತ್ಯಂತ ಚಿಕ್ಕಭಾಗವನ್ನು ಅಣು ಎಂದರು . ಅದನ್ನು ವಿಭಜಿಸುದುವುದು ಸಾಧ್ಯವೇಇಲ್ಲ ಎಂದರು. ಆದರೆ ನೀಲ್‌ಭೋರ್‌ ಅಣುಗಳ ವಿಭಜನೆ ಸಾಧ್ಯ ಅವುಗಳನ್ನು ಪರಮಾಣುಗಳಾಗಿ ಒಡೆಯಬಹುದು ಎಂದು ಸಂಶೋಧನೆ ಮಾಡಿದ. ನಂತರ  ಪರಮಾಣುವನ್ನೂ ಎಲೆಕ್ಟ್ರಾನ್ ನ್ಯೂಟ್ರಾನ್‌ಮತ್ತು ಪ್ರೋಟಾನ್‌ಗಳನ್ನಾಗಿಸ ಬಹುದು  ಎಂದು ಕಂಡು ಹಿಡಿಯಲಾಯಿತು. ಇತ್ತೀಚೆಗೆ ದೇವಕಣ ಎಂಬ ಇನ್ನೊಂದು ಪರಿಕಲ್ಪನೆ ಜಾರಿಯಲ್ಲಿದೆ. ಹೀಗೆ ಕಾಲದಿಂದ ಕಾಲಕ್ಕೆ ಸಂಶೋಧನೆಗಳು ವಿಷಯವನ್ನು ಸ್ಪಷ್ಟ ಪಡಿಸುತ್ತವೆ.
ಸಾಹಿತ್ಯದಲ್ಲೂ ಅಷ್ಟೇ ಹೊಸ ಪುರಾವೆಗಳು ದೊರೆತಾಗ ಹಳೆಯಕಲ್ಪನೆ ಬದಲಾಗುತ್ತವೆ. ಕನ್ನಡದ ಪ್ರಥಮ ಲಾಕ್ಷಣಿಕ ಗ್ರಂಥವನ್ನು ಮೊದಲು ಅರಸನಾದ ನೃಪತುಂಗನ ಕೃತಿ  ಎಂದು ಕೊಂಡಿದ್ದರು ಆದರೆ ಅದು ಶ್ರೀವಿಜಯನದು ಎಂದು ಹೊಸದಾಗಿ ಸಿದ್ಧಮಾಡಲಾಗಿದೆ.
ಭೂಮಿಯ ಸುತ್ತಲೂ ಸೂರ್ಯ ಮತ್ತು ಇತರ ಗ್ರಹಗಳು ಸುತ್ತುತ್ತವೆ ಎಂಬ ಶತಶತಮಾನಗಳ ನಂಬಿಕೆಯನ್ನು ಖಗೋಳ ವಿಜ್ಞಾನಿ ಕೆಪ್ಲರ್‌ ಸುಳ್ಳು ಮಾಡಿದ. ಸೂರ್ಯನೇ ಸೌರವ್ಯಹದ ಕೇಂದ್ರ ಎಂದು ಸಿದ್ಧಮಾಡಿದ. ಇತ್ತೀಚಿನವರೆಗೆ  ಗ್ರಹ ಎಂದು ಪರಿಗಣಿತವಾಗಿದ್ದ ಪ್ಲೂಟೊ ಈಗ ಗ್ರಹ ಅಲ್ಲ ಎಂದು ಸಿದ್ಧವಾಗಿದೆ.
ಅಂದರೆ ಯಾವುದೇ ವಿಷಯದ ಬಗೆಗಿನ ಮಾಹಿತಿ ಮತ್ತು ದತ್ತಾಂಶಗಳನ್ನು ಸಂಗ್ರಹಿಸಿ, ಅವುಗಳನ್ನುವಿಶ್ಲೇಷಿಸಿ,ಹೊಸ ಆಯಾಮಗಳನ್ನು ಬೆಳಕಿಗೆ ತಂದು ನಿಜ ಜೀವನಕ್ಕೆ ಅನ್ವಯಿಸುವುದೇ ಸಂಶೋಧನೆ ಎಂಬುದನ್ನು ಮನಗಂಡೆ
ಈ ಎಲ್ಲ ಮಾನದಂಡಗಳೊಡನೆ ಸನ್ನದ್ಧನಾಗಿ ಆ ಪುಸ್ತಕಗಳನ್ನು ಓದಲು ಕುಳಿತೆ.ಪರಿಶೀಲಸಬೇಕಿದ್ದ ನಾಲ್ಕು ಪುಸ್ತಕಗಳಲ್ಲಿ ಎರಡು ಮಹಿಳೆಯರವು  ದಕ್ಷಿಣ ಕನ್ನಡದ  “ತುಂಡು ಭೂತಗಳು” ಇನ್ನೊಂದು  ಹರಪ್ಪಾಸಂಸ್ಕೃತಿಯ ಬಗೆಗಿನ ಸಂಶೋಧನೆಗಳು ಮೂರನೆಯದು ಬಳ್ಳಾರಿಜಿಲ್ಲೆಯ ಗ್ರಾಮ ಒಂದದರಲ್ಲಿನ ಹೋಳಿ ಹುಣ್ಣಿಮೆಯ ಹಾಡುಗಳು , ನಾಲ್ಕನೆಯದು ಶಾಸನ ಇತಿಹಾಸ, ಜನಪದ ,,ಸಾಹಿತ್ಯ ಮತ್ತು ವಿಜ್ಞಾನಗಳು ಮುಪ್ಪುರಿಯಾದಕೃತಿ.ಹತ್ತನೆಯ ಶತಮಾನದ ಕೃತಿಯ ಕುರಿತಾದ ಸಂಶೋಧನೆ : ಚಾವಂಡರಾಯನ ಲೋಕೋಪಕಾರಿಯಲ್ಲಿನ ಜಲವಿಜ್ಞಾನ-ತಂತ್ರಜ್ಞಾನ-
 ಈ ಪುಸ್ತಕದ  ಶೀರ್ಷಿಕೆಯೇ ವಿಷಯದ ಸಂಕೀರ್ಣತೆಯನ್ನು  ಸೂಚ್ಯವಾಗಿ ತಿಳಿಸುವುದು. ಇಲ್ಲಿ ಸುಮಾರು ಸಾವಿರ ವರ್ಷದ ಹಿಂದಿನ ಕೃತಿಯಲ್ಲಿನ ಜಲವಿಜ್ಞಾನ ಮತ್ತು ತಂತ್ರಜ್ಞಾನದ ಸಮನ್ವಯತೆ ಇದೆ. ಚಾವುಂಡರಾಯ ಎಂದೊಡನೆ ಶ್ರವಣಬೆಳಗೊಳದ ಗೊಮ್ಮಟೇಶ್ವರನ ನಿರ್ಮಾಣಕ್ಕೆ ಕಾರಣ ಕರ್ತನಾದವನು ಎಂಬ ಚಿತ್ರ ಬರುವುದು ಸಹಜ. ಆದರೆ ಈ ಕವಿ ಬೇರೆಯವನು . ಮಾನ್ಯಖೇಟದ ರಾಷ್ಟ್ರಕೂಟ ವಂಶದ ನೃಪತುಂಗನ ಪೀಳಿಗೆಯ ಅರಸನ  ಆಸ್ಥಾನ ಕವಿಯಾಗಿದ್ದವನು. ಜೊತೆಗ ಇದು ಕಾವ್ಯ ಅಲ್ಲ. ಬಹುತೇಕ ಕಂದ ಪದ್ಯಗಳಲ್ಲಿ ರಚಿಸಿದ ವಿಶ್ವ ಕೋಶ, ಇದರ ಮೂಲ ಸಂಸ್ಕೃತ.ಆದರೆ ಕನ್ನಡದಲ್ಲಿ ಸ್ವತಂತ್ರ ಕೃತಿ ಎನಿಸುವಷ್ಟು ಸರಳ ಮತ್ತು  ಸುಂದರ.
ಪ್ರಸ್ತುತ ಪುಸ್ತಕದ ಹಿರಿಮೆ ಇರುವುದು ಅದರ ಶಿರ್ಷಿಕೆಯೇ ತಿಳಿಸುವಂತೆ ಅದರ ಲೋಕೋಪಕಾರ ಗುಣದಲ್ಲಿ .ಪಂಚ ಭೂತಗಳಲ್ಲಿ  ಪ್ರಕೃತಿಯ ಎರಡು ಉದಾರ ಕೊಡುಗೆಗಳು ಜೀವ  ಜಗತ್ತಿನ ಉಳುವಿಗೆ ಅಗತ್ಯವಾದ  ಗಾಳಿ ಮತ್ತು ನೀರು.. ಈಗ ಬದಲಾದ ಪರಿಸರದಲ್ಲಿ ಜೀವಜಲವು ಉಚಿತವಾಗಿ ದೊರೆಯುವ ಮಾತು ದೂರ ಉಳಿಯಿತು ,ಕ್ವಚಿತವಾಗೀಯು ದೊರಕುವುದು ಕಷ್ಟವಾಗಿದೆ.  ಜೊತೆಗೆ ದೊರೆತ ನೀರೂ ಬಳಸಲು ಉಚಿತವೇ ಎಂದು ಚಿಂತನೆ ನಡೆಸ ಬೇಕಿದೆ. ಈ ಹಿನ್ನೆಲೆಯಿಂದಾಗಿ ಪರೊಪಕಾರ ಪುಸ್ತಕ ಆದ್ಯತೆ ಪಡೆಯುತ್ತದೆ.

ನೀರಿನ ಬಹು ಬಳಕೆಯ ಜೊತೆಗೆ ದುರ್ಬಳಕೆಯಿಂದ ಜಲಮಾಲಿನ್ಯ ಮೇರೆ ಮೀರಿದೆ. ಕಳೆದ ವರ್ಷ ಹಂಪೆಗೆ ಹೋದಾಗ ಉಗ್ರ ನರಸಿಂಹನ ಹತ್ತಿರ ಜುಳುಜುಳುನೆ ಹರಿಯುತ್ತಿರುವ ಕಿರುಗಾಲುವೆಯ ತಿಳಿ ನೀರು ನೋಡಿ ಕೊಡಿಯಲು ಬಾಗಿ ಕೈನೀಡಿದಾಗ ಅಲ್ಲಿರುವ ಕೂಲಿಕಾಯಕದ ಮಹಿಳೆಯೊಬ್ಬಳು”  ಬೇಡ, ಸಾರು, ಕುಡಿಯಬೇಡಿ”  ಎಂದುತಡೆದಳು.ಗಂಗಾಸ್ನಾನ, ತುಂಗಪಾನ  ಎಂಬ ಗಾದೆಗೆ ಕಾರಣವಾಗಿದ್ದ ತುಂಗಭದ್ರಾನದಿಯ ನೀರನ್ನು ಕುಡಿಯಬೇಡ ಎಂದಾಗ ಅಚ್ಚರಿ ಆಯಿತು. ಕಾರಣ ಕೇಳಿದೆ. “ಸ್ವಾಮಿ ರಸ ಗೊಬ್ಬರ ಮತ್ತು ಕೀಟನಾಶಕದ ಅತಿ ಬಳಕೆಯಿಂದ ನೀರು ಕುಲುಷಿತವಾಗಿದೆ ಕುಡಿದರೆ ಅಪಾಯ ಖಂಢಿತ ಎಂದಳು.ನಾನು ಗಾಬರಿಯಿಂದ ಬೊಗಸೆಯಲ್ಲಿದ್ದ ನಿರು ಚೆಲ್ಲದೆ. ಎಳನೀರಿಗಿಂತ ಸಿಹಿಯಾಗಿದ್ದ ನದಿನೀರಿಗೆ ಬಂದ ದುರ್ಗತಿ ಕಂಡು ಖೇದ ವಾಯಿತು. ಕೈಗಾರಕಿಕರಣದ ಪ್ರಭಾವ ಹೇಗೆ ಹರಿವ ನೀರನ್ನೂ ವಿಷಮಾಡಿದೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ದೊರಕಿತು

ಹಿಂದೆ ಹೆಣ್ಣಿಗಾಗಿ, ಮಣ್ಣಿಗಾಗಿ , ಹೊನ್ನಿಗಾಗಿ ಯುದ್ದಗಲಗುತಿದ್ದವು ಆದರೆ ಇಗ ನೀರಿಗಾಗಿ ಕದನಗಳಾಗುವ ಕಾಲ ಬಂದಿದೆ. ಕಾವೇರಿ ನದಿ ನೀರಿನ ಹಂಚಕೆಯ ಸಮಸ್ಯೆಯು ಎರಡು ನೆರೆ ರಾಜ್ಯಗಳನ್ನು ಕದನ ಕುತೂಹಲಿಗಳನ್ನಾಗಿ ಮಾಡಿದೆ.ಇಂಥಹ ಜ್ವಲಂತ ಸಮಸ್ಯೆಯ ಬಗೆಗಿನ ಬಗೆಗಿನ ಮಾಹಿತಿಯನ್ನು ೧೦೦೦ ವರ್ಷದ ಹಿಂದೆಯೇ ನೀಡಿದ ಕೃತಿಯ ಕುರಿತಾದ ವೈಜ್ಞಾನಿಕ ದೃಷ್ಟಿಯ ಸಂಶೋದನೆ ಇದಾಗಿದೆ.
ಕಾಮನ ಬಿಲ್ಲಿನಿಂದ ಪ್ರಾರಂಭವಾಗುವ ಇದು ಕುತೂಹಲ ಹೆಚ್ಚಿಸುತ್ತಾ ಹೋಗುತ್ತದೆ. ಯಾವುದೇ ಕೃತಿಯ ಯಶಸ್ಸು ಇರುವುದು ಅದು ನಮ್ಮ ನೆನಪನ್ನು ಕೆದಕಿ ಅದು ನಮ್ಮಅನುಭವವೂ ಹೌದು ಎನಿಸಿದಾಗ. ಇಲ್ಲಿನ ವಿವರಣೆ ಅರ್ಧ ಶತಮಾನದ ಹಿಂದೆ ನನ್ನನ್ನು ಒಯ್ದಿತು. ಆಗಿನ್ನು ಕೃಷಿ ಇಲಾಖೆ ಹೆಸರಿಗೆ ಮಾತ್ರ ಇದ್ದ ಕಾಲ. ಹಳ್ಳಿಗರು ಮಳೆಗಾಳಿಯ ಮುನ್ಸೂಚನೆಗೆ ತಮ್ಮದೇ ಆದ ವಿಧಾನ ಅನುಸರಿಸುತಿದ್ದರು. ಬಿಳಿ   ಮೋಡ ಕಟ್ಟಿದರೆ ಮಳೆ ಬಾರದು ದಕ್ಷಿಣದಲ್ಲಿ ಮಿಂಚಿದರೆ ಮಳೆ ಶೂನ್ಯ,ಬೆಳಗ್ಗೆ ಬಂದ  ಬಂದ ಮಳೆ ಸಂಜೆ ಬಂದ ಅಳಿಯ ಬೇಗನೆ ಹೋಗುವುದಿಲ್ಲ., ಸ್ವಾತಿ ಮಳಿ ಹೇತೆನೆಂದರೂ ಬಿಡದು, ಕುರುಡು ಚಿತ್ತಿ, ಉತ್ತರಿ ಮಳಿ ಉಸ್‌ ಅಂದರೆ ಹೋತು,ರೋಹಿಣಿ ಮಳೆ ಬಂದರೆ ಓಣಿ ಎಲ್ಲ ಜೋಳ ಎಂಬ ಮೊದಲಾದ ನಾಣ್ಣುಡಿಗಳು ದೇಶೀಯ ಜಾಣ್ಮೆಯ ಪ್ರತೀಕವಾಗಿದ್ದವು. ನಿಜ ಆಗತಾನೆ ಬಂದಿದ್ದ ಊರಿನಲ್ಲಿನ ಒಂದೋ ಎರಡೋ ರೇಡಿಯೋದಲ್ಲಿ ಹವಾ ಮುನ್ಸೂಚನೆ ಬಿತ್ತರವಾಗುತಿದ್ದಿತು.  ರೇಡಿಯೋದಲ್ಲಿ ಇಂದು ಜಡಿ ಮಳೆ ಎಂದಾಗ ರಣ ರಣ ಬಿಸಿಲು, , ಈ ದಿನ ಒಣ ಹವೆ ಎಂದಾಗ ಮಣ್ಣಿನ ಮಾಳಿಗೆಯಿಂದ ತೊಟ್ಟಿಕ್ಕುವ ಜಂತಿಹನಿ , ಅದನ್ನು ನೋಡಿ ಜನ ನಗುವುದು ಸಾಮಾನ್ಯವಾಗಿತ್ತು
ರೆಂಟೆ ,ಕೂಂಟೆಟೆ ಹೂಡಲು, ಬೀಜ ಬಿತ್ತಲು ರಾಶಿ ಮಾಡಲು ನಮ್ಮಹಳ್ಳಿಗರು ಪಡೆದ ಪರಂಪರಾಗತ ಜ್ಞಾನ ಬಳಸುತಿದ್ದರು. ಅದಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ ಎಂದು ಈ ಕೃತಿಯ ಮೂಲಕ ತಿಳಿಯಿತು.
ಬಾವಿ ,ಕೆರೆ, ಕಂಟೆ ಕೊಳಗಳ ನಿರ್ಮಾಣ ಮತ್ತು ನಿರ್ವಹಣೆ  ವಿವರ ವೈಜ್ಞಾನಿಕವಾಗಿತ್ತು ಎಂಬುದುನ್ನು ಈ ಕೃತಿ ವಿಶದಪಡಿಸುವುದು..ಸಂಶೋಧಕರಾದ ಡಾ.ಹರಿಹರ ಶ್ರೀನಿವಾಸರಾಯರು ವೃತ್ತಿಯಿಂದ ಜಲವಿಜ್ಞಾನ ತಜ್ಞರು.ಪ್ರವೃತ್ತಿಯಿಂದ ಇತಿಹಾಸ ಸಂಶೋಧಕರು. ವೈಜ್ಞಾನಿಕ ಅಂಶಗಳ ಅನ್ವಯ ಅವರಿಗೆ ಅತಿ ಸಲೀಸು. ಅದರಿಂದ ಮನರಂಜನೆ ಎನಿಸಬಹುದಾದ ವಿವರಗಳು ಮನೋವಿಕಾಸಕ್ಕೆ ಕಾರಣವಾಗುವಂತೆ ಬರೆದಿರುವರು..
ನೀರು ಜಗತ್ತಿನ ಜೀವ ರಾಶಿಗಳನ್ನು ಒಗ್ಗೂಡಿಸುವ ಸಾಧನವಾಗಿದೆ. ಸಸ್ಯಶಾಸ್ತ್ರ , ಪ್ರಾಣಿಶಾಸ್ತ್ರ , ಭೂ ವಿಜ್ಞಾನ, ರಸಾಯನ ಶಾಸ್ತ್ರ, ಖಗೋಳ ಶಾಸ್ತ್ರ ಎಲ್ಲವೂ ಜಲಶಾಸ್ತ್ರದೊಂದಿಗೆ ಅಂತರ್‌ಸಂಬಂಧ ಹೊಂದಿವೆ..ಯಾವ ಸಸ್ಯಗಳು ನೀರಿನ ಇರವನ್ನು ಸೂಚಿಸುತ್ತವೆ,ಮಣ್ಣಿ ಬಣ್ಣದಿಂದ ನೀರಿನಬಾಹುಳ್ಯ ಮತ್ತು ರುಚಿಯ ನಿರ್ಧಾರ ಹೇಗಾಗುತ್ತದೆ, ಮನೆಯ ಅಥವ ಊರಿನ ಯಾವ ದಿಶೆಯಲ್ಲಿ ನೀರು ಇದ್ದರೆ ಏಳಿಗೆ .ಅಥವ ಅವನತಿ ಎಂಬುದನ್ನು ನಾವು ಸಂಪ್ರದಾಯ, ಮೂಢನಂಬಿಕೆ ಎನ್ನುವುದು ತುಂಬಾ ಸರಳೀಕರಣ.ಅಗಲವಾದ ಎಲೆಇರುವ , ಮುಳ್ಳುಇಲ್ಲದ ಬನ್ನಿ ಮರದ ಹತ್ತಿರದಲ್ಲಿ , ಹುತ್ತದ ಸುತ್ತ ಮುತ್ತ ನೀರಿನಸೆಲೆ ಇರುವುದು .ಹಿಂದಿನಕಾಲದ ಜಲತಜ್ಞರು ಕೆಲವು ಸಸ್ಯದ ಟೊಂ ಗೆಹಿಡಿದು  ನೀರಿರುವ ಜಾಗವನ್ನು ಖಚಿತವಾಗಿ ತೋರಿಸುತಿದ್ದ ರಹಸ್ಯದ  ವಿವರವನ್ನು ಈ ಕೃತಿ ನೀಡುತ್ತದೆ. ಇವೆಲ್ಲದರ ವಿಶ್ಲೇಷಣೆಯನ್ನು ವೈಜ್ಞಾನಿಕ ಆಧಾರದ ಮೇಲೆ ಮಾಡಿರುವುದು ಸಂಶೋಧನೆಯ ವ್ಯಾಪ್ತಿಯನ್ನು ತೋರುವುದು . ಈ ಅಂತರ್‌ಶಿಸ್ತೀಯ ವಿಶ್ಲೇಷಣೆಯ ಪುಸ್ತಕದ ಮೌಲ್ಯವನ್ನು ಹೆಚ್ಚಿಸಿದೆ.
ಇನ್ನು ಯಾವುದೇ ಸಂಶೋಧನೆಯು ಜನ ಜೀವನಕ್ಕೆ ಹತ್ತಿರವಾಗುವುದು, ಉಪಯುಕ್ತವಾಗುವುದು ಅದರ ಅಧ್ಯಯನ  ಮತ್ತು, ಅನ್ವಯದಿಂದ. ಅದು ಜೀವನ್ಮುಖಿಯಾದಾಗಲೇ ಅದಕ್ಕೆ ಬೆಲೆ. ಈಗಿರುವ ನೀರಿನ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನಿಸುವ ಅವಕಾಶ ವನ್ನು ಬಳಸಿಕೊಳ್ಳುವುದು  ಅಗತ್ಯ.  .ಈಗ ಕೋಟ್ಯಂತರ ರೂಪಾಯಿ ಹಣ ವೆಚ್ಚ ಮಾಡಿ ಹೂಳೆತ್ತಿಸಿ ಕೆರೆಯ ಪುನರುಜ್ಜೀವನ ಮಾಡಿಸುವ ಯೋಜನೆಗಳು ವಿಫಲವಾಗುತ್ತಿರುವುದು ಜಲಾಶಯಕ್ಕ ಬರಬೇಕಾದ ನೀರು ಬಾರದೆ ಇರುವುದರಿಂದ ಮತ್ತು ಬರಬಾರದ ಕೊಳೆ ಮತ್ತು ತ್ಯಾಜ್ಯಗಳನ್ನು ಮುಕ್ತವಾಗಿ ಹರಿಯ ಬಿಟ್ಟಿರುವುದರಿಂದ. ಹಿಂದೆ ನೀರನ್ನು ದೇವರು ಎಂದುಕೊಂಡಿದ್ದರು  ಅದು ಮೂಢ ನಂಬಿಕೆ ಯಾಗಿ ಆಧುನಿಕರಿಗೆ ಕಾಣಿಸುವುದು ಸಹಜ.   ಅದರ ಹಿಂದಿನ ಉದ್ದೇಶ ದೇವರು ಎಂಬ ಭಕ್ತಿ ಅಥವ ಭಯದಿಂದಲಾದರೂ ನೀರಿನ ದುರ್ಬಳಕೆ ಅಥವ ಮಾಲಿನ್ಯ ನಡೆಯದಿರಲಿ ಎಂದು.
ಈಗ ಪ್ರಶಸ್ತಿಗಳ ಮಹಾಪೂರವೇ ಹರಿದಿದೆ. ಪ್ರಶಸ್ತಿಯ ಮೊತ್ತವೂ ಆಕರ್ಷಕವಾಗಿದೆ. ಆದರೆ  ಈ ಪ್ರಶಸ್ತಿಯು ವಿಭಿನ್ನವಾಗಿದೆ..  “ ಕನ್ನಡದ ಕಣ್ವರಾದ ಬಿ.ಎಂ ಶ್ರೀ ಹೆಸರಿನಲ್ಲಿ  ಪ್ರತಿಷ್ಠಾನವನ್ನುಸ್ಥಾಪಿಸಿದವರು ಎಂ. ವಿ.  ಸೀತಾರಾಮಯ್ಯನವರು . ಉದ್ಘಾಟಿಸಿದವರು ಅವರ ಗುರುಗಳಾದ ಮತ್ತು ಬಿ. ಎಂ ಶ್ರೀಯವರ ನೇರ ಶಿಷ್ಯರಾದ ಕುವೆಂಪು ಅವರು..ಈ ಮೂವರು ಮಹನೀಯರ  ಆಶಯದಂತೆ ಪ್ರತಿಷ್ಠಾನವು  ಅಂತರ್‌ಗಂಗೆಯಾಗಿ  ಸದ್ದುಗದ್ದಲವಿಲ್ಲದೆ ಕನ್ನಡದ ಕೆಲಸ  ಮಾಡುತ್ತಿದೆ. ಫ್ರತಿಷ್ಠಾನ ನೀಡುವ  ಪ್ರಶಸ್ತಿಯ ಮೊತ್ತ ಕಿರಿದಾದರೂ ಅದರ ಪ್ರತಿಷ್ಠೆ ಬಹು ಹಿರಿಯದು.. ಅದಕ್ಕೆಂದೇ ಹೆಸರಾಂತ ಸಂಶೋಧಕರು ದೂರದಿಂದ  ತಮ್ಮ ಖರ್ಚಿನಲ್ಲೇ ಬಂದು ಪ್ರಶಸ್ತಿಯನ್ನು ಹೆಮ್ಮೆಯಿಂದ ಸ್ವೀಕರಿಸುವರು”, ಎಂಬ ಅಧ್ಯಕ್ಷರಾದ ಡಾ. ಪಿ.ವಿ ನಾರಾಯಣರ ಮಾತು ಅಕ್ಷರಶಃ ಸತ್ಯ.
ಪ್ರಶಸ್ತಿ ಪ್ರದಾನ ಮಾಡಿದ ಶೂದ್ರ ಶ್ರೀನಿವಾಸ ಅವರು ಈ ಪುಸ್ತಕವು ಹೇಗೆ ಪ್ರಚಲಿತ ಸಮಸ್ಯೆಗೆ ಪರಹಾರ ನೀಡಬಲ್ಲದು ಮತ್ತು ಸಾಮಾನ್ಯ ಜನರೂ ಇದರಿಂದ ಹೇಗೆ ಅದರ ಲಾಭ ಪಡೆಯಬಹುದು ಎಂಬದನ್ನು ಕಳಕಳಿಯಿಂದ ತಿಳಿಸಿದರು.
“ ಅನಂತ ರಂಗ “ ಪ್ರಶಸ್ತಿ ಪಡೆದ ಈ ಪುಸ್ತಕವನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ.  ಪರಿಸರ ಕಾಳಜಿ ಇರುವ ಎಲ್ಲರ ಮನೆಯ ಓದುವ ಮೇಜಿನ ಮೇಲೆ ಸ್ಥಾನ ಪಡೆಯಲು ಸರ್ವಥಾ ಯೋಗ್ಯವಾಗಿದೆ.


No comments:

Post a Comment