Saturday, May 3, 2014

ವಿದ್ಯಾರಣ್ಯರ ಉಲ್ಲೇಖ ಇರುವ ಒಂದು ಶಿಲಾಶಾಸನ

ವಿದ್ಯಾರಣ್ಯರ ಉಲ್ಲೇಖ ಇರುವ ಒಂದು ಪ್ರಾಚೀನ ಶಿಲಾಶಾಸನ

ಡಾ. ಪಿ.ಎನ್. ನರಸಿಂಹಮೂರ್ತಿ

ವಿಜಯನಗರ ಸ್ಥಾಪನೆಯ ವಿಚಾರದಲ್ಲಿ ವಿದ್ಯಾರಣ್ಯ ಶ್ರೀಪಾದಂಗಳ ಪಾತ್ರದ ಬಗ್ಗೆ ಬಹಳ ಚರ್ಚೆಗಳಾಗಿವೆ. ಈ ಚರ್ಚೆಗಳು ನಾನಾ ಮನೋಭಿಲಾಷೆಯ ಸ್ವರೂಪದವುಗಳಾಗಿರುವುದು ಎಲ್ಲರಿಗೂ ತಿಳಿದ ವಿಷಯ. ಈ ಚರ್ಚೆಗಳಿಗೆ ಗ್ರಾಸವಾಗಿದ್ದುದು ಆ ಕಾಲಕ್ಕೆ ಸಂಬಂಧಿಸಿದಂತೆ ಸರಿಯಾದ ಪುರಾವೆಗಳು ಅಲಭ್ಯವಾಗಿದ್ದುದು. ಆದರೆ ದೊರೆತಿದ್ದ ಕೆಲವು ಆಧಾರಗಳನ್ನು ಕೂಟ ಎಂದು ಕಡೆಗಾಣಿಸಿದ್ದೂ ಇದೆ. ಇವುಗಳಿಗೆ ಉತ್ತರ ಎಂಬಂತೆ ದೊರೆತಿದೆ ಹಾಲ್ಕಾವಟಗಿ ತಾಮ್ರಶಾಸನ. ಬಹುತೇಕ ಒಂದೇ ರೀತಿಯಲ್ಲಿ ವಿದ್ಯಾರಣ್ಯರನ್ನು ಈ ಶಾಸನಗಳು ಚಿತ್ರಿಸಿವೆ.  ಈ ತಾಮ್ರಶಾಸನ ಒಂದು ರೀತಿಯಲ್ಲಿ ಎಲ್ಲ ವಾದಗಳಿಗೂ ತೆರೆ ಎಳೆಯುವಂತಿದ್ದರೂ ಅದಕ್ಕೆ ಬಲ ಕೊಡಬಲ್ಲ ಇತರೇ ಮೂಲದ ಆಧಾರದ ಕೊರತೆ ಇತ್ತು. ಆ ಕಾಲದ ಶಿಲಾಶಾಸನಗಳಾವುವೂ ವಿದ್ಯಾರಣ್ಯರನ್ನು ಉಲ್ಲೇಖಿಸಿರಲಿಲ್ಲ ಅಥವಾ ಅವರನ್ನು ಹೆಸರಿಸುವ ಪ್ರಾಚೀನ ಶಿಲಾಶಾಸನ ಯಾವುದೂ ದೊರೆತಿರಲಿಲ್ಲ. ಈಗ ಆ ಕೊರತೆ ನೀಗಿದೆ. ವಿದ್ಯಾರಣ್ಯರನ್ನು `ವಿದ್ಯಾರಂಣ್ಯ ಶ್ರೀಪಾದಂಗಳು’ ಎಂದೇ ಹೆಸರಿಸಿ ಅವರಿಗೆ ಒಂದನೆಯ ಬುಕ್ಕರಾಯನು ಭೂದಾನ ಮಾಡಿದ ವಿಷಯವನ್ನು ತಿಳಿಸುವ ಶಿಲಾಶಾಸನವೊಂದು ಮಂಗಳೂರು ಬಳಿಯ ನೀರುಮಾರ್ಗ ಗ್ರಾಮದಲ್ಲಿ ದೊರೆತಿದೆ. ಇದರ ಕಾಲ ಕ್ರಿ.ಶ. ಸುಮಾರು 1353.  ಪ್ರಾಯಶಃ ವಿದ್ಯಾರಣ್ಯರನ್ನು ಹೆಸರಿಸುವ ಇಷ್ಟು ಪ್ರಾಚೀನವಾದ ಶಿಲಾಶಾಸನ ಇದೊಂದೆ ಆಗಿದೆ. 76 ಮುಡಿ ಬೀಜ ಬಿತ್ತುವ ವಿಸ್ತಾರವಾದ ಭೂಮಿಯನ್ನು ಒಂದನೆಯ ಬುಕ್ಕರಾಯನಿಂದ ಪಡೆದು ಅದರ ಉತ್ಪತ್ತಿಯಿಂದ ಅಲ್ಲಿಯ ದೇವಾಲಯದಲ್ಲಿ ಪೂಜಾಕಾರ್ಯಗಳು ಮತ್ತು ಅದರ ಛತ್ರದಲ್ಲಿ ಊಟದ ವ್ಯವಸ್ಥೆ ತಡೆಯಿಲ್ಲದೆ ನಿತ್ಯ ನಡೆಯುವಂತೆ ಮಾಡಿದರು ವಿದ್ಯಾರಣ್ಯ ಶ್ರೀಪಾದಂಗಳು. ನೀರುಮಾರ್ಗದ ಈ ಶಿಲಾಶಾಸನ ವಿಜಯನಗರದ ಸ್ಥಾಪಕ ಅರಸರಿಗೂ ಮತ್ತು ವಿದ್ಯಾರಣ್ಯರಿಗೂ ಸಂಬಂಧವಿದ್ದುದನ್ನು ಪರೋಕ್ಷವಾಗಿ ತಿಳಿಸುತ್ತದೆ. ಇದರಿಂದ ವಿದ್ಯಾರಣ್ಯರೆಂಬ ಒಬ್ಬ ಮುನಿ ಇದ್ದರೆ ಮತ್ತು ಅವರಿಗೂ ವಿಜಯನಗರಕ್ಕೂ ಸಂಬಂಧವಿತ್ತೇ ಎಂಬ ಪ್ರಶ್ನೆಗಳು ಇನ್ನು ಅಪ್ರಸ್ತುತವಾಗುತ್ತವೆ.
ಶಾಸನ ಪತ್ತೆಯಾದ ರೀತಿ: ನೀರುಮಾರ್ಗದ ಕ್ಷೇತ್ರಕಾರ್ಯ ಮಾಡುವ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಬೆಳಕಿಗೆ ಬಂದ ದಾಖಲೆ ಇದು. ಬಾವಿಕಟ್ಟೆಯ ನೆಲಕ್ಕೆ ಹಾಕಲಾಗಿದ್ದ ಈ ಕಲ್ಲು ಕಾಲು ತೊಳೆಯಲು ಅಲ್ಲಿಗೆ ಹೋದಾಗ ಗೋಚರಕ್ಕೆ ಬಂತು.  ಮನೆಯ ಯಜಮಾನರಿಗೆ (ಶಾಲಾ ಅಧ್ಯಾಪಕರು) ಈ ಶಾಸನದ ಪ್ರಾಮುಖ್ಯತೆಯ ಬಗ್ಗೆ ಅಲ್ಲೇ ತಿಳಿಸಿ ಅದನ್ನು ಸರಿಯಾದ ರೀತಿಯಲ್ಲಿ ರಕ್ಷಿಸಬೇಕೆಂದು ಕೇಳಿಕೊಂಡೆ. ಕೆಲ ವರ್ಷಗಳ ನಂತರ ಅದೇ ಗ್ರಾಮಕ್ಕೆ ಹೋಗಬೇಕಾದ ಸಂದರ್ಭ ಬಂದಾಗ ಈ ಶಾಸನಕಲ್ಲನ್ನು ನೋಡಲು ಹೋದೆ. ನಾನು ಮೊದಲು ನೋಡಿದ ಸ್ಥಳದಲ್ಲೇ ಬಟ್ಟೆ ಒಗೆಯುವ ಕಲ್ಲಾಗಿಯೇ ಈ ಶಾಸನ ಕಲ್ಲು ಇತ್ತು. ಅದರ ಸ್ಥಿತಿ ನೋಡಿ ಖೇದವಾಯಿತು. ಶಿಕ್ಷಕರಾದರೂ ದಾಖಲೆಗಳನ್ನು, ಸ್ಮಾರಕಗಳನ್ನೂ ಸರಿಯಾದ ರೀತಿಯಲ್ಲಿ ರಕ್ಷಿಸಬೇಕೆಂಬ ಮನೋಭಾವ ಅವರಲ್ಲಿ ಬೆಳೆಯದಿದ್ದುದು ಬೇಸರ ಹುಟ್ಟಿಸುವ ಸಂಗತಿಯಾಗಿತ್ತು. ಈ ಶಾಸನದ ಪಡಿಯಚ್ಚನ್ನು ತೆಗೆದುಕೊಳ್ಳುವುದಕ್ಕೆ ನನ್ನೊಂದಿಗೆ ಸಹಕರಿಸಿದವರು ಇವರೇ! ಅದಕ್ಕಾಗಿ ಇವರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಕಲ್ಲಿನಲ್ಲಿ ಬರಹದ ಸ್ಥಿತಿ: ಬಟ್ಟೆ ಒಗೆಯುವ ಕಲ್ಲಾಗೇ ಬಹಳ ಕಾಲದಿಂದ ಉಪಯೋಗಿಸುತ್ತಾ ಇರುವುದರಿಂದ ಇದರಲ್ಲಿನ ಬರಹ ಬಹಳ ಮಾಸಿದೆ. ಸುಮಾರು 18 ಘಿ 23 ಇಂಚು ಅಳತೆಯ ಈ ಕಲ್ಲಿನ ಬಲದ ಮೂಲೆ ಸ್ವಲ್ಪ ತುಂಡಾಗಿದೆ. ಇದರಿಂದ ಕೊನೆಯ ಎರಡು ಸಾಲಿನ ಕೆಲವು ಅಕ್ಷರಗಳು ನಷ್ಟವಾಗಿವೆ. ಕಲ್ಲಿನ ಮೇಲ್ಭಾಗ ವೃತ್ತಾಕಾರದಲ್ಲಿದ್ದು ಇದರ ಪರಿಧಿಯಲ್ಲಿ ಒಂದು ಸಾಲು ಬರಹ ಇದೆ. ಇದರ ಕೆಳಗೆ ಸರಳ ರೇಖೆಯಲ್ಲಿ ಒಂದು ಸಾಲು ಬರಹ ಇದೆ.  ಇದರ ಕೆಳಗೆ ಹದಿಮೂರು ಸಾಲು ಬರಹ ಇದೆ. ಒಟ್ಟು ಹದಿನೈದು ಸಾಲುಗಳು.
ಶಾಸನ ಪಾಠ :
1 * * * ವಿಜೆಯ * ಮ * * * * * *
2 * (ಹಡಪ) * * * ಡೆ * * * * *
3 ಸ್ವಸ್ತಿ ಶ್ರೀ ವೀರ ಬುಕ್ಕರಾಯನ ನಿರೂಪದಿಂದ ಪಂ-
4 ಡರಿ ದೇವ(ರು) ಗಳು ನೀರುಮಾರ್ಗದೊಳಗೆ (ಕಟ್ಟಿ)ದ ಮಠ
5 ಛತ್ರದ (ಧರ್ಮದ) ವೋರೆಯನು * * (ಸೋಮ) * * * * *
6 * ನಿವೇದ್ಯ ಯತಿಗಳ (ಭಿಕ್ಷೆ) * * ಶ್ರೀ ವಿದ್ಯಾರಂ-
7 ಣ್ಯ ಶ್ರೀ ಪದ(ಂ)ಗಳಿಗೆ ಧಾರಾ ಪೂರ್ವಕವಾಗಿ
8 ಬಿತ್ತುವಾನೆ * * ಮ ಮೂಡೆ 76 ಯಿದಕುಳ್ಳ (ವತ್ತಾರ)
9 ಕುರುಂಭೆ £ಡಿಲು ಚತು ಸೀಮೆ ಸಹಿತ ಕೊಟ-
10 ರು ಮಲ್ಲಿಯ ವೊಡೆತನ ಶ್ರೀ ಪದಂಗಳಿಗೆ ಅ-
11 ಲ್ಲದೆ ಮತಾರಿಗೆ ಸಲ್ಲದು [|*] ಆರೊಬ್ಬರು ತಪ್ಪಿ-
12 ದಾದಡೆ ಅರ (ಸಿಂಗೆ ಕ) ಗ 2000 ತಪ್ಪಿದ
13 ಅಡಕ [|*] ಈ ಧಮ್ರ್ಮಕೆ ವೊಕ್ರವಾದಡೆ
14 1000 ಕವಿಲೆನೂ ಕೊಂದ ದೋ (ಷ) * *
15 ಗಳ ಮಹಾ ಶ್ರೀ ಶ್ರೀ ಶ್ರೀ * * * * * [||*]
ಇದರ ಅರ್ಥ: (ಒಂದನೆಯ) ಬುಕ್ಕರಾಯನ ನಿರೂಪದಿಂದ ಪಂಡರಿದೇವನು ನೀರುಮಾರ್ಗದಲ್ಲಿ ನಿರ್ಮಿಸಿದ ಮಠ ಮತ್ತು ಛತ್ರ, ಇಲ್ಲಿ ನಡೆಯುವ (ದೇವರ ಪೂಜೆ) ನೈವೇದ್ಯ ಮತ್ತು ಯತಿಗಳ ಭಿಕ್ಷೆಗಾಗಿ 76 ಮುಡಿ (ಬೀಜ) ಬಿತ್ತುವ (ಅಷ್ಟು ವಿಸ್ತಾರವಾದ) ಭೂಮಿಯನ್ನು ಅದಕ್ಕಿದ್ದ ಚತುಃಸೀಮೆ ಸಹಿತ ಶ್ರೀ ವಿದ್ಯಾರಂಣ್ಯ ಶ್ರೀಪಾದಂಗಳಿಗೆ ಧಾರೆಯೆರದು ಕೊಟ್ಟ. ಇದರ ಮೇಲಿನ ಒಡೆತನ ಶ್ರೀಪಾದಂಗಳಿಗಲ್ಲದೆ ಬೇರಾರಿಗೂ ಸಲ್ಲದು ಎಂದು ಕಟ್ಟು ಮಾಡಿದ. ಇದಕ್ಕೆ ತಪ್ಪಿದರೆ ಅರಸನಿಗೆ (ದಂಡ ಕ.) ಗದ್ಯಾಣ 2000 (ತೆರುವ) ಅಡಕ. ಈ ಧರ್ಮಕ್ಕೆ ಅಡ್ಡಿ ಬಂದರೆ 1000 ಕವಿಲೆಯನು ಕೊಂದ ದೋಷ. ಮಂಗಳವಾಗಲಿ ಶ್ರೀ.
ಶಾಸನದ ಕಾಲ: ಶಾಸನದಲ್ಲಿ ಅಕ್ಷರಗಳು ಸ್ವಲ್ಪ ಮಾಸಿರುವುದರಿಂದ ಇಲ್ಲಿ ಇರಬಹುದಾದ ಕಾಲ ನಿರ್ದೇಶನ ಸರಿಯಾಗಿ ಅರ್ಥವಾಗುವುದಿಲ್ಲ. ಮೊದಲನೆಯ ಸಾಲಿನಲ್ಲಿ ‘ವಿಜೆಯ’ ಎಂಬ ಅಕ್ಷರಗಳನ್ನು ಗುರುತಿಸಬಹುದಾದರೆ ಎರಡನೆಯ ಸಾಲಿನಲ್ಲಿ ಅಸ್ಪಷ್ಟವಾಗಿ `ಹಡಪ’ ಅಕ್ಷರಗಳನ್ನು ಗುರುತಿಸಬಹುದು. ಇಲ್ಲಿ `ವಿಜೆಯ’ ಏನನ್ನು ಸೂಚಿಸುತ್ತದೆ ಎಂಬುದನ್ನು ಸುಲಭವಾಗಿ ಹೇಳಲು ಆಗುವುದಿಲ್ಲ. ಆದರೆ `ಹಡಪ’ ಎನ್ನುವುದನ್ನು ಅರ್ಥೈಸಬಹುದು. ಒಂದನೆಯ ಹರಿಹರನ ಆಳ್ವಿಕೆ ಕಾಲದಲ್ಲಿ ಹಡಪದ ಗೌತರಸ ಎಂಬಾತ ಮಂಗಳೂರು ರಾಜ್ಯದ ರಾಜ್ಯಪಾಲನಾಗಿ ಕಾರ್ಯ ನಿರ್ವಹಿಸಿದ್ದ. ಈ ವಿಷಯವನ್ನು ತಿಳಿಸುವ ಒಂದು ದಾಖಲೆ ಕಾರ್ಕಳ ತಾಲೂಕಿನಲ್ಲಿದೆ. ಈ ಶಿಲಾಶಾಸನ ಕಾನ್ತಾವರದ ಕಾನ್ತೇಶ್ವರ ದೇವಾಲಯದ ಪ್ರಾಕಾರದಲ್ಲಿದೆ (ಎಸ್.ಐ.ಐ. ಸಂ.7, ನಂ.231). ಇದರ ತೇದಿ ಸರ್ವಧಾರಿ ಸಂವತ್ಸರ, ವೃಷಭ 4, ಮಂಗಳವಾರ. ಇಲ್ಲಿ ಶಕವರ್ಷದ ಉಲ್ಲೇಖ ಇಲ್ಲ. ಪೂರಕ ಮಾಹಿತಿಗಳ ಆಧಾರದಲ್ಲಿ ಡಾ. ಕೆ.ವಿ. ರಮೇಶ ಅವರು ಇದರ ಕಾಲವನ್ನು (ಶಕ 1270) ಕ್ರಿ.ಶ. 1348 ಏಪ್ರಿಲ್ 29 ಎಂದು ನಿಗದಿಪಡಿಸಿದ್ದಾರೆ (ನೋಡಿ: “ಎ ಹಿಸ್ಟರಿ ಆ¥sóï ಸೌತ್ ಕೆನರ”, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ (1970) ಪು. 151). ಈ ಶಾಸನದಲ್ಲಿ ಗೌತರಸನನ್ನು `ಪ್ರಧಾನಂ’ ಎಂದು ಉಲ್ಲೇಖಿಸಲಾಗಿದೆ. ಅಂದರೆ ಒಂದನೆಯ ಹರಿಹರನ ಪ್ರಧಾನಿಯಾಗಿದ್ದ ಈತ ಮಂಗಳೂರಿನಂತಹ ಆಯಕಟ್ಟಿನ ರಾಜ್ಯಕ್ಕೆ ಆಡಳಿತಾಧಿಕಾರಿಯಾಗಿ (ರಾಜ್ಯಪಾಲನಾಗಿ) ನಿಯುಕ್ತನಾಗಿದ್ದ. ಇದು ರಾಜನೊಂದಿಗೆ ಈತನಿಗಿದ್ದ ನಿಕಟತೆಯನ್ನು ಪರೋಕ್ಷವಾಗಿ ತಿಳಿಸುತ್ತದೆ. ಈ ದೃಷ್ಟಿಯಲ್ಲಿ ನೋಡಿದಾಗ `ವಿಜೆಯ’ವನ್ನು ಸಂವತ್ಸರವಾಗಿ ತೆಗೆದುಕೊಂಡರೆ ಅದು ಶಕ 1275 ಆಗುತ್ತದೆ.  ಇದು ಕ್ರಿ.ಶ.1353-54ಕ್ಕೆ ಸರಿಹೊಂದುತ್ತದೆ.
ಪ್ರಾಯಶಃ ಹಡಪದ ಗೌತರಸನು ಮಂಗಳೂರು ರಾಜ್ಯದ ರಾಜ್ಯಪಾಲನಾಗಿದ್ದಾಗ ಪಂಡರಿದೇವನು ಸ್ವಲ್ಪ ಸಮಯ ಇಲ್ಲಿದ್ದು ಬುಕ್ಕರಾಯನ ಆಣತಿಯಂತೆ ನೀರುಮಾರ್ಗದಲ್ಲಿ ಒಂದು ಮಠ ಮತ್ತು ಛತ್ರಗಳನ್ನು ನಿರ್ಮಿಸಿ ಅಲ್ಲಿಯ ದೇವರ ಪೂಜೆ, ನೈವೇದ್ಯಾದಿಗಳಿಗೆ ಮತ್ತು ಯತಿಗಳ ಭಿಕ್ಷೆಗಾಗಿ ವಿಶಾಲವಾದ ಭೂಮಿಯನ್ನು ಶ್ರೀ ವಿದ್ಯಾರಂಣ್ಯ ಶ್ರೀಪಾದಂಗಳಿಗೆ ಧಾರಾಪೂರ್ವಕವಾಗಿ ಕೊಟ್ಟ. ನೀರುಮಾರ್ಗದ ಈ ಮಠದಲ್ಲಿ ಯತಿಗಳು ಇದ್ದರು.  ಇವರು ಶೃಂಗೇರಿ ಪರಂಪರೆಯ ಅದ್ವೈತ ಸಂಪ್ರದಾಯದವರು. ಇವರ ಭಿಕ್ಷಾಕಾರ್ಯ ನಿರಂತರ ನಡೆಯುವ ಸಲುವಾಗಿಯೂ ಭೂಮಿ ದಾನ ಮಾಡಿರುವುದು. ಇದನ್ನು ಸ್ವೀಕರಿಸಿದವರು (ಶೃಂಗೇರಿಯ) ಗುರುಗಳಾದ ವಿದ್ಯಾರಂಣ್ಯ ಶ್ರೀಪಾದಂಗಳು. ಇದೊಂದು ಮುಖ್ಯವಾದ ವಿಷಯ.
ಒಂದನೆಯ ಬುಕ್ಕರಾಯನು ಶೃಂಗೇರಿ ಮಠಕ್ಕೆ ಅದರಲ್ಲೂ ಮುಖ್ಯವಾಗಿ ವಿದ್ಯಾರಂಣ್ಯ ಶ್ರೀಪಾದಂಗಳಿಗೆ ಮಂಗಳೂರು ಭಾಗದಲ್ಲಿ ಹಲವಾರು ದಾನಗಳನ್ನು ಮಾಡಿದ ಉಲ್ಲೇಖ ಇವನ ಶಾಸನಗಳಲ್ಲಿವೆ. ಇವೆಲ್ಲವೂ ಶಿಲಾಶಾಸನಗಳು. ಇಲ್ಲಿ ಒಂದನ್ನು ಉದಾಹರಿಸುವುದು ಸೂಕ್ತ. ಕ್ರಿ.ಶ.1375 ಅಕ್ಟೊಬರ್ 25ಕ್ಕೆ ಸೇರುವ ಈ ಶಾಸನ ಕುಡುಪು ದೇವಾಲಯದಲ್ಲಿ ದೊರೆತುದು (ಎಸ್.ಐ.ಐ. ಸಂ.27, ಸಂ.56).
‘ಸಿಂಗೇರಿಯ ಶ್ರೀ ವಿದ್ಯಾರಂಣ್ಯ ಶ್ರೀ ಪಾದಂಗಳಿಗೆ’ ಸ್ವತಃ ಬುಕ್ಕರಾಯನೇ ಕೊಡಮಾಡಿದ ದಾನವನ್ನು ಈ ಕುಡುಪು ಶಾಸನ ದಾಖಲಿಸಿದೆ. ಶಾಸನದಲ್ಲಿ ಕುಡುಪು ಮತ್ತು ಮಾಲೂರು ಎಂಬ ಎರಡು ಗ್ರಾಮಗಳನ್ನು, 240 ಕಾಟಿ ಗದ್ಯಾಣಗಳನ್ನು ಮತ್ತು ವಾರ್ಷಿಕ 420 ಮುಡಿ ಉತ್ಪತ್ತಿಯ ಗದ್ದೆಗಳನ್ನು ಶ್ರಿ ವಿದ್ಯಾರಂಣ್ಯರಿಗೆ ರಾಜ ದಾನ ಮಾಡಿದ ವಿಚಾರ ಉಲ್ಲೇಖಗೊಂಡಿದೆ. ಆಗ ಮಂಗಳೂರು ರಾಜ್ಯಕ್ಕೆ ರಾಜ್ಯಪಾಲನಾಗಿದ್ದವ ಮೇಲೆ ಹೆಸರಿಸಿರುವ ಪಂಡರಿದೇವನೇ.
ಕುಡುಪು ಮತ್ತು ನೀರುಮಾರ್ಗ ಗ್ರಾಮಗಳು ಮಂಗಳೂರು ತಾಲೂಕಿನಲ್ಲಿರುವ ಅಕ್ಕ-ಪಕ್ಕದ ಗ್ರಾಮಗಳು. ಕಾರ್ಕಳ-ಮಂಗಳೂರು ಹೆದ್ದಾರಿ ಕುಡುಪು ಮೂಲಕ ಹೋಗಿರುವುದರಿಂದ ಈ ಸ್ಥಳ ಹೆಚ್ಚು ಪರಿಚಿತವಾಗಿದೆ. ಆದರೆ ನೀರುಮಾರ್ಗ ಒಳನಾಡಿನ ಭಾಗದಲ್ಲಿದ್ದು ಇಂದಿನ ಸೌಕರ್ಯಗಳಿಂದ ವಂಚಿತವಾಗಿದೆ. ಭೌಗೋಳಿಕವಾಗಿ ಎರಡೂ ಗ್ರಾಮಗಳು ಬೆಟ್ಟ-ಗುಡ್ಡ, ಕಣಿವೆ-ಕಾಡುಗಳಿಂದ ಆವೃತವಾಗಿವೆ. ನಂಬಿಕೆ ಮತ್ತು ಐತಿಹ್ಯಗಳ ಪ್ರಕಾರ ಈ ಎರಡೂ ಗ್ರಾಮಗಳಿಗೆ ಪ್ರಾಚೀನ ಕಾಲದಲ್ಲಿ (ನಾಗಾರಾಧನೆ ವಿಷಯವಾಗಿ) ಪರಸ್ಪರ ಸಂಬಂಧ ಇತ್ತು. ಬುಕ್ಕರಾಯನ ಶೃಂಗೇರಿಯ ಶ್ರೀ ವಿದ್ಯಾರಣ್ಯರಿಗೆ ಕೊಡಮಾಡಿದ ದಾನಗಳನ್ನು ಉಲ್ಲೇಖಿಸುವ ಶಾಸನಗಳು ಈ ಗ್ರಾಮಗಳಲ್ಲೂ ದೊರೆತಿವೆ. ಇದು ವಿಜಯನಗರದ ಆಳ್ವಿಕೆಯ ಪ್ರಾರಂಭಿಕ ಕಾಲದಲ್ಲಿ ಈ ಎರಡೂ ಗ್ರಾಮಗಳು ಹೊಂದಿದ್ದ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ. ಎರಡು ಕಡೆಗಳಲ್ಲಿ ಪ್ರಾಚೀನವಾದ ಸುಬ್ರಹ್ಮಣ್ಯ ದೇವಾಲಯಗಳಿವೆ.  ನೀರುಮಾರ್ಗದಲ್ಲಿ 10-11ನೆಯ ಶತಮಾನಕ್ಕೆ ಸೇರುವ ಸುಂದರವಾದ ಸ್ಕಂದನ ವಿಗ್ರಹ ಇದ್ದರೆ ಕುಡುಪುವಿನಲ್ಲಿ ನಾಗ-ಸುಬ್ರಹ್ಮಣ್ಯ; ಆದರೆ ಇಲ್ಲಿ ದೇವರನ್ನು ಅನಂತಪದ್ಮನಾಭಸ್ವಾಮಿ ಎಂದು ಕರೆಯುತ್ತಾರೆ.
ಕುಡುಪು ಶಾಸನೋಕ್ತ ದಾನದಲ್ಲಿರುವ ವಿಶೇಷತೆ :
ಕುಡುಪು ದಾನದಲ್ಲಿ ಹಲವು ವಿಶೇಷತೆಗಳಿವೆ. ರಾಜ ಕೊಡಮಾಡಿರುವ ದಾನವನ್ನು ಯಾವ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಎಂಬುದಕ್ಕೆ ನಿರ್ದೇಶನವಿದೆ. ‘ರಾಯನ ಸಿಂಗೇರಿಯ ವಿದ್ಯಾರಂಣ್ಯ ಶ್ರೀಪಾದಂಗಳಿಗೆ ಸಮರ್ಪಿಸಿದ ಧರ್ಮದ ಕ್ರಮವೆಂತೆಂದತಾ(ವೆಂತೆಂದರೆ) ಕುಡುಪಿನ ದೇವಾಲ್ಯದಲು ಯತಿಗಳು ಬ್ರಾಹ್ಮಣರಿಗೆ ಪ್ರತಿ ದಿನ (ಜನ) 12ಕಂ ಭೋಜನ ನಡವಂತಾಗಿ (ಶಾಸನ ಪಾಠ ಸಾಲು:5-8). ಇದನ್ನು ನಿರ್ವಹಿಸುವ ಛತ್ರದ ವೆಚ್ಚಕ್ಕಾಗಿ 360 ಮುಡಿ ಬತ್ತ ಮತ್ತು ಇದರ ಮೇಲು ವೆಚ್ಚಕ್ಕಾಗಿ 90 ಮಂಗಳೂರು ಕಾಟಿ ಗದ್ಯಾಣಗಳನ್ನು ನಿಗದಿ ಮಾಡಿದ.  ದಾನದ ಎರಡನೆಯ ಭಾಗ: ‘ಕುಡುಪಿನ ದೇವರಿಗೆ ಯಿರುಳಿನ ನಿವೇದ್ಯಕ್ಕೆ ಮಾಲೂರು ಹರವರಿಯಿಂದ ಭತ್ತ ಮೂಡೆ 60 ಕುಡಿ ಅಕಿ ಹಾನೆ (32) ನು ನಡವುದು’ (ಶಾಸನ ಪಾಠ ಸಾಲು: 11-13). ಮುಂದೆ ‘ಶಂಕರ ದೇವರ ಅಮೃತಪಡಿ * * ಮಂಗಳೂರು ಕಾ.ಗ. 150 ಅಂತು ಕಾ.ಗ. 240 ಭತ್ತ ಮೂಡೆ 420 ವರುಷಂ ಪ್ರತಿಯಲು ನಡೆವುದು’ ಎಂದು ಹೇಳಿ ನಂತರ ‘ಯಿ ಸ್ತಾನವನೂ ಧರ್ಮವನೂ ಶ್ರೀಪಾದಂಗಳ ನಿರೂಪದಿಂದಲಿ * * * ಶಂಕರ ರಾಮನಾಥ ದೇವರಿಗೆ ಧಾರಾಪೂವ್ರ್ವಕ ನಡವಂತಾಗಿ ಕೊಟ್ಟರು’ ಎಂದಿದೆ (ಶಾಸನ ಪಾಠ ಸಾಲು: 15-17). ಅಂದರೆ ಕುಡುಪಿನ ಈ ದೇವಾಲಯದಲ್ಲಿ ಒಂದು ಮಠ ಸಹ ಇತ್ತು, ಅದರಲ್ಲಿ ಯತಿಗಳೂ ಇದ್ದರು. ಇದಕ್ಕೆ ಸೇರಿದಂತೆ ಒಂದು ಛತ್ರವೂ ಇತ್ತು. ಪ್ರಾಯಶಃ ಇವುಗಳ ಪುನರುತ್ಥಾನವನ್ನು ಶ್ರೀ ವಿದ್ಯಾರಂಣ್ಯರು ಮಾಡಿದರು. ಆಗ ಕಂಡುಬಂದ ನ್ಯೂನತೆಗಳನ್ನು ಸರಿಪಡಿಸುವ ಸಲುವಾಗಿ ಬುಕ್ಕರಾಯ ಇದಕ್ಕೆ ಭೂ ಮತ್ತು ಹಿರಂಣ್ಯ ದಾನಗಳನ್ನು ಮಾಡಿದ.  ಅದರೊಂದಿಗೆ ವ್ಯವಸ್ಥೆ ನಡೆಯಬೇಕಾದ ರೂಪುರೇಖೆಗಳನ್ನೂ ನಿರೂಪಿಸಿ ಕೊಟ್ಟ. ಕೊನೆಯಲ್ಲಿ ‘ಯಿ (ಯೀ)ಊರ ವೊಡೆತನಮುಂ ಶ್ರೀಪಾದಂಗಳಿಗಲ್ಲದೆ ಅರಸಿನ ವೊಡೆತನ ಸಲ್ಲದು’ ಎಂದು ಕಟ್ಟು ಮಾಡಿ ದಾನವನ್ನು ಸಂಪೂರ್ಣ ತೆರಿಗೆ ರಹಿತವನ್ನಾಗಿ ಮಾಡಿ ಶಾಸನ ಹಾಕಿಸಿ ಕೊಟ್ಟ.
ನೀರುಮಾರ್ಗದ ಶಾಸನದ ಪ್ರಕಾರ ಬುಕ್ಕರಾಯನ ಆಜ್ಞಾವರ್ತಿಯಾದ ಪಂಡರಿದೇವನು ನೀರುಮಾರ್ಗದಲ್ಲಿ ಮಠವನ್ನು ಕಟ್ಟಿಸಿ ಅಲ್ಲಿಯ ದೇವಾಲಯ, ಛತ್ರ ಮತ್ತು ಮಠಗಳಲ್ಲಿನ ಕಾರ್ಯಗಳು ನಿರಂತರವಾಗಿ ನಡೆಯುವಂತೆ ವ್ಯವಸ್ಥೆ ಮಾಡಿದ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ನೆರೆಯ ಗ್ರಾಮಗಳೆರಡರಲ್ಲೂ ಶೃಂಗೇರಿಯ ಅದ್ವೈತ ಪರಂಪರೆಗೆ ಸೇರಿದ ಮಠಗಳು ಇದ್ದುದು ಮತ್ತು ಅಲ್ಲಿ ಯತಿಗಳೂ ಇದ್ದರು ಎಂಬುದು. ಇದು ಸಾಧ್ಯವೇ ಎಂಬ ಸಮಸ್ಯೆ ಬಂದರೆ ಅಲ್ಲೆ ‘ಇದು ಹೀಗಿರಬಾರದೆಂದೇನು ಇಲ್ಲವಲ್ಲ!’ ಎಂಬ ಉತ್ತರ ಇದೆ.
ಬುಕ್ಕರಾಯನು 1353ರ ವೇಳೆಗೆ ಯುವರಾಜನಾಗಿದ್ದ. ಅದನ್ನೇನು ನೀರುಮಾರ್ಗದ ಶಾಸನ ಹೇಳುವುದಿಲ್ಲ.  ಆದರೆ ವಿದ್ಯಾರಂಣ್ಯರನ್ನು ‘ಶ್ರಿಪಾದಂಗಳು’ ಎಂದು ಉಲ್ಲೇಖಿಸಿರುವು ಗಮನಾರ್ಹ. ಆಗ ಶೃಂಗೇರಿಯ ಪೀಠಾಧಿಪತಿಗಳಾಗಿದ್ದವರು ಶ್ರೀ ಭಾರತಿ (ಭಾರತೀಕೃಷ್ಣ)ತೀರ್ಥರು. ಇವರ ಉಲ್ಲೇಖ ಎರಡೂ ಶಾಸನಗಳಲ್ಲಿ ಇಲ್ಲ.  ಹಾಗೆಂದ ಮಾತ್ರಕ್ಕೆ ಈ ಶಾಸನಗಳನ್ನು ಕೂಟ ಎಂದು ನಿರ್ಧರಿಸುವುದಕ್ಕಾಗಲಿ ಅಥವಾ ವಿದ್ಯಾರಂಣ್ಯರ ಪಾತ್ರವನ್ನು ಕೀಳು ಅಭಿರುಚಿಯಿಂದ ನೋಡುವುದಕ್ಕಾಗಲೀ ಆಸ್ಪದವಿಲ್ಲ. ಒಂದನೆಯ ಬುಕ್ಕರಾಯನಿಗೆ ವಿದ್ಯಾರಂಣ್ಯರು ಒಂದು ಸಂಚಾರೀ ಶಕ್ತಿಯಾಗಿದ್ದರು. ಅವರನ್ನು ಕೇವಲ ಯತಿಗಳೆಂದು ಸಂಬೋಧಿಸುವ ಮನಸ್ಸು ಇವನಿಗೆ ಇಲ್ಲವಾಗಿತ್ತು.  ಹಾಗಾಗಿ ಅವರನ್ನು ‘ಶ್ರಿಪಾದ’ರೆಂದೇ ಸಂಬೋಧಿಸಿ ತನ್ನ ಭಕ್ತಿ. ಶ್ರದ್ಧೆ ಮತ್ತು ನಂಬಿಕೆಗಳನ್ನು ಈತ ಪ್ರಕಟಿಸಿದ. ರಾಜನ ಈ ಭಾವನೆಗೆ ಯಾರಿಂದಲೂ ವಿರೋಧವಿರಲಿಲ್ಲವಾದರೂ ಸ್ವತಃ ವಿದ್ಯಾರಂಣ್ಯರು ತಮಗೆ ಸಂದಾಯವಾದ ಎಲ್ಲ ಗೌರವ, ಸಮ್ಮಾನಗಳನ್ನು ವಿನಮ್ರತೆಯಿಂದ ಗುರುಗಳಾದ ಭಾರತೀತೀರ್ಥರಿಗೆ ಅರ್ಪಿಸಿ ಗುರು-ಶಿಷ್ಯ ಸಂಬಂಧದ ಮಹತ್ವವನ್ನು ಎತ್ತಿ ಹಿಡಿದರು. ಒಟ್ಟಿನಲ್ಲಿ ವಿದ್ಯಾರಂಣ್ಯರನ್ನು ಉಲ್ಲೇಖಿಸುವ ಪ್ರಥಮ ಮತ್ತು ಪ್ರಾಚೀನ ಶಿಲಾಶಾಸನವಾಗಿದೆ ನೀರುಮಾರ್ಗದ ಈ ಶಾಸನ. [ಈ ಶಾಸನದ ಪಾಠ ಶೃಂಗೇರಿ ಮಠದೊಂದಿಗೆ ದಕ್ಷಿಣ ಕನ್ನಡದ ಸಂಬಂಧ-ಲೇಖಕರು : ಪಿ.ಎನ್. ನರಸಿಂಹಮೂರ್ತಿ, ಪ್ರಕಟನೆ: ಶತನಮನ {ಜಿ.ವಿ. ಅಭಿನಂದನ ಗ್ರಂಥ, (ಪ್ರ ಸಂ) ಪಿ.ವಿ. ನಾರಾಯಣ}, ಶ್ರೀಜಯರಾಮ ಸೇವಾ ಮಂಡಲಿ, ಜಯನಗರ, ಬೆಂಗಳೂರು-2012, ಪುಟ 94 ಎಂಬಲ್ಲಿಯೂ ಪ್ರಕಟವಾಗಿದೆ].
[ವಿದ್ಯಾರಣ್ಯರ ಶಾಸನಗಳ ಸೂಚಿಯನ್ನು ಬೆಂಗಳೂರಿನ ಸಂಶೋಧಕರಾದ ಎಸ್. ಕಾರ್ತಿಕ್ ಅವರು ಸಿದ್ಧಪಡಿಸಿದ್ದಾರೆ. ಅದನ್ನು ಇಲ್ಲಿ ನೀಡಲಾಗಿದೆ. ಈ ಸೂಚಿಯನ್ನು ಉಲ್ಲೇಖಿಸುವವರು ಎಸ್. ಕಾರ್ತಿಕ್ ಅವರ ಹೆಸರಿನಲ್ಲಿ ಉಲ್ಲೇಖಿಸಬೇಕು. ಇಲ್ಲಿ ಇದನ್ನು ಪ್ರಕಟಿಸಲು ಒಪ್ಪಿಗೆಯಿತ್ತ ಎಸ್. ಕಾರ್ತಿಕ್ ಅವರಿಗೆ ಕೃತಜ್ಞತೆಗಳು.]
 # 2031, ಗುರುಕೃಪ, 10ನೆಯ ಅಡ್ಡರಸ್ತೆ, ಕಲ್ಲಹಳ್ಳಿ, ವಿ.ವಿ. ನಗರ, ಮಂಡ್ಯ-571401.

No comments:

Post a Comment