Sunday, June 16, 2013

ಅಳುಪ ಅರಸು ಮನೆತನ-ಡಾ. ಪಿ ಎನ್‌ನರಸಿಂಹ ಮೂರ್ತಿ

ಆಳುಪ ಅರಸು ಮನೆತನದ ರಾಣಿಯರು ಮತ್ತು ರಾಜಕುವರಿಯರು
ಡಾ. ಪಿ.ಎನ್. ನರಸಿಂಹಮೂರ್ತಿ
ಗುರುಕೃಪನಂ. ೨೦೩೧
೧೦ನೇ ಕ್ರಾಸ್ಕಲ್ಲಹಳ್ಳಿವಿ.ವಿ. ನಗರ
ಮಂಡ್ಯ-೫೭೧೪೦೧ರ್ನಾಟಕದ ವಿಶಿಷ್ಟ ಭೌಗೋಳಿಕ ಸನ್ನಿವೇಶ ಹೊಂದಿರುವ ಪ್ರದೇಶ ಕರಾವಳಿ. ಭೋರ್ಗರೆವ ಪಶ್ಚಿಮ ಕಡಲು ಒಂದೆಡೆಯಾದರೆ ಮುಗಿಲೆತ್ತರಕ್ಕೆ ಏರಿರುವ ಸಹ್ಯಾದ್ರಿ ಬೆಟ್ಟ ಸಾಲುಗಳು; ಇದರ ಬಿಳಿಲುಗಳಂತೆ ಸಮುದ್ರದವರೆಗೂ ಚಾಚಿರುವ ಗುಡ್ಡ ಸಾಲುಗಳು; ಕಿರಿದಾದ ಕಣಿವೆಗಳು, ಇದ್ದೂ ಇಲ್ಲದಂತಿರುವ ಬಯಲು; ಮಳೆಗಾಲದಲ್ಲಿ ಭೋರ್ಗರೆದು ಆನಂತರ ಶಾಂತವಾಗಿ ಪಶ್ಚಿಮ ಕಡಲಿಗೆ ಹರಿದೋಡುವ ಅಸಂಖ್ಯ ತೊರೆ, ಹೊಳೆ, ನದಿಗಳು. ಕಣಿವೆ, ಬಯಲುಗಳಲ್ಲಿ ನೇಗಿಲ ಕಜ್ಜವಾದರೆ, ಗುಡ್ಡ ಬೆಟ್ಟಗಳಲ್ಲಿ ಪ್ರಕೃತಿಯ ಓಕುಳಿಯಾಟ; ಹಚ್ಚ ಹಸುರಿನ ಸೆರಗು ಹೊತ್ತ ವಯ್ಯಾರದ ನೋಟ. ಅನುಭವಿಸಿ, ಆಸ್ವಾದಿಸಿ ಆನಂದಿಸುವವರಿಗೆ ಇದು ಸುಂದರ ಲೋಕ. ಕ್ಷಾತ್ರ ತೇಜ, ಆಡಳಿತ, ಆರ್ಥಿಕ ಚಟುವಟಿಕೆ, ವ್ಯಾಪಾರ, ವಾಣಿಜ್ಯ, ಸಮಾಜ, ಸಂಸ್ಕೃತಿ, ಧರ್ಮ, ದೇವ-ದೇವಿಯರು, ದೈವಗಳು, ಭೂತಗಳು, ನಂಬಿಕೆ, ಆಚರಣೆ, ಪೂಜೆ, ಉತ್ಸವ, ತೀರ್ಥ ಕ್ಷೇತ್ರಗಳು ಇತ್ಯಾದಿಯಾಗಿ ಎಲ್ಲಕ್ಕೂ ಇಲ್ಲಿದೆ ವಿಷಯ ಪ್ರವಾಹ. ಪರಂಪರಾಗತ ನಂಬಿಕೆಗಳ ಆಗರವಾದರೂ ಇಲ್ಲಿದೆ. ಆಧುನಿಕತೆಯ ಸಿಂಗಾರ. ಅಪೂರ್ವ ಎನ್ನಲೇಬೇಕಾದ ಪ್ರದೇಶ; ಇದು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದೆ.
ಕ್ರಿಸ್ತ ವರ್ಷಾರಂಭಕ್ಕೆ ಇಲ್ಲಿ ಸ್ವತಂತ್ರ, ಬಲಿಷ್ಠ ಮತ್ತು ಗೌರವಯುತ ರಾಜಕೀಯ ವಾತಾವರಣ ಇತ್ತು. ತಮಿಳು ಸಂಗಂ ಸಾಹಿತ್ಯದ ಪ್ರಕಾರ ನಣ್ಣನ್ ಇದರ ಪ್ರಥಮ ಪ್ರಭಾವೀ ರಾಜ ತಮಿಳು ರಾಜರೊಂದಿಗೆ ನಡೆದ ಹಲವಾರು ಯುದ್ಧಗಳಲ್ಲಿ ಈತ ಜಯಶಾಲಿಯಾಗಿದ್ದ. ಕೊನೆಗೆ ಚೇರ ರಾಜ ಕೞಂಗಾಯಕ್ಕಣ್ಣಿ ನಾರ್ಮುಡಿಚ್ಚೇರಲ್‌ನೊಡನೆ ನಡೆದ ಯುದ್ಧದಲ್ಲಿ ಮರಣ ಹೊಂದಿದ ಆನಂತರ ಈ ಭಾಗವನ್ನು ಆಳಿದವರು ಆಳುಪರು. ಸಾವಿರಕ್ಕೂ ಹೆಚ್ಚು ವರ್ಷಗಳ ಕಾಲ ಈ ಭಾಗದಲ್ಲಿ ಅವಿಚ್ಛಿನ್ನವಾಗಿ ಆಳ್ವಿಕೆ ನಡೆಸಿದವರು ಇವರು. ಸಾಮಂತರಾದರೂ ಸಾಮ್ರಾಜ್ಞರಂತೆ ಮೆರೆದ ಅತ್ಯಂತ ನಂಬಿಕಾರ್ಹ ಭೃತ್ಯರು. ತಮ್ಮ ದೀರ್ಘವಾದ ಆಳ್ವಿಕೆ ಕಾಲದಲ್ಲಿ ಇಂದಿನ ತುಳುವ ಸಮಾಜ ಮತ್ತು ಸಂಸ್ಕೃತಿಗೆ ಭದ್ರ ಬುನಾದಿಯನ್ನು ಇವರು ಹಾಕಿದರು. ಈ ಪರಂಪರೆಯ ಬೆಳವಣಿಗೆಯ ಜ್ಞಾನ ಸರಿಯಾಗಿ ಇಲ್ಲದಿದ್ದರೆ ಇಲ್ಲಿಯ ಸಮಾಜ, ಆಚಾರ-ವಿಚಾರ, ನಡೆ-ನುಡಿ ಇತ್ಯಾದಿಗಳ ಸ್ಪಷ್ಟ ಪರಿಚಯ ಆಗುವುದು ಕಷ್ಟ.
ತುಳುನಾಡಿನ ವಿಶಿಷ್ಟ ಸಂಸ್ಕೃತಿಯ ಜೀವನಾಡಿ ಮಹಿಳೆ. ಇಲ್ಲಿಯ ಪ್ರತಿಯೊಂದು ರೀತಿಯ ಬೆಳವಣಿಗೆಯಲ್ಲೂ ಈಕೆಯ ಪಾತ್ರ ಮಹತ್ವ ಪೂರ್ಣವಾದುದು. ಇಲ್ಲಿರುವುದು ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ. ಸ್ಥಳೀಯವಾಗಿ ಇದನ್ನು “ಅಳಿಯ ಸಂತಾನ ಕಟ್ಟು’’ ಎಂದು ಕರೆಯಲಾಗಿದೆ ಬಹುಮಂದಿ ಇದರ ಅನುಸರಿಗಳಾಗಿದ್ದರೂ ಸಮಾಜದ ಎಲ್ಲ ವರ್ಗಗಳೂ ಈ ಕಟ್ಟಿನ ಚೌಕಟ್ಟಿನೊಳಗಿವೆ ಎಂಬುದು ಇದರ ಅರ್ಥವಲ್ಲ. ಆದರೆ ಸ್ತ್ರೀ ಹಾಗು ಮಾತೆಯ ಗೌರವ ಮತ್ತು ಸ್ಥಾನಮಾನಗಳಿಗೆ ಸರ್ವತ್ರ ಎಂದೂ ಚ್ಯುತಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಈ ಭಾಗದ ಮಹಿಳಾ ಕಾರ್ಯಗಳ ಅಧ್ಯಯನಕ್ಕೊಂದು ಮೆರುಗು ಇದೆ.
ದಿನನಿತ್ಯದ ಆಗುಹೋಗುಗಳಲ್ಲಿ ಸಾಮಾನ್ಯ ಮಹಿಳೆಯ ಪಾತ್ರ ಹಿರಿದಾಗಿದ್ದರೂ ಅದು ಬಹುತೇಕ ಗೋಚರಕ್ಕೆ ಬಾರದೇ ಹೋಗುತ್ತದೆ. ಇದಕ್ಕೆ ಅಪವಾದಗಳಿರಬಹುದು. ಆದರೆ ಅದರ ಸಂಖ್ಯೆ ಬೆರಳೆಣಿಕೆಯಷ್ಟು. ಅರಸು ಮನೆತನಗಳ ಮತ್ತು ಹಿರಿಯ ಅಧಿಕಾರಿ ವಂಶಗಳ ಮಹಿಳೆಯರ ಕಾರ್ಯ ಚಟುವಟಿಕೆಗಳ ಒಂದಲ್ಲ ಒಂದು ರೀತಿಯಲ್ಲಿ ಇತಿಹಾಸದಲ್ಲಿ ದಾಖಲಾಗುವ ಸನ್ನಿವೇಶಗಳು ಹೆಚ್ಚು. ಇವರ ಕಾರ್ಯ ವೈಖರಿಗಳು ಸಾಮಾನ್ಯರ ಮೇಲೂ ಪ್ರಭಾವ ಬೀರಬಲ್ಲವಾಗಿರುವ ಕಾರಣ, ಇದು ಸ್ತ್ರೀ ಶಕ್ತಿಯನ್ನು ಅಳೆಯಲು ಪರೋಕ್ಷ ಸಹಕಾರಿ ಎಂದು ತಿಳಿಯಬಹುದು. ಈ ನಿಟ್ಟಿನಲ್ಲಿ ಆಳುಪ ಅರಸು ವಂಶದ ಕೆಲವು ಪ್ರಮುಖ ರಾಜಕುವರಿಯರ ಮತ್ತು ರಾಣಿಯರ ಸಾಧನೆಯ ಕಿರು ಸಮೀಕ್ಷೆಯನ್ನು ಇಲ್ಲಿ ಮಾಡಲಾಗಿದೆ.
ಆಳುಪರು ರಾಜಕೀಯವಾಗಿ ಬೆಳೆದುದು ಅವರು ತಮ್ಮ ಸಾಮ್ರಾಟರು ಮತ್ತು ಸಾಮಂತರೊಂದಿಗೆ ಬೆಳೆಸಿಕೊಂಡಿದ್ದ ಮಧುರ ಸಂಬಂಧದಿಂದ. ಇದಕ್ಕೆ ಸೇತುವಾಗಿದ್ದವರು ಅವರ ರಾಣಿಯರು ಮತ್ತು ರಾಜಕುವರಿಯರು. ಈ ಸಂಬಂಧಗಳನ್ನು ಮೂರು ಹಂತಗಳಲ್ಲಿ ಗುರುತಿಸಬಹುದು - ೧) ಆಳುಪ-ಬನವಾಸಿ ಕದಂಬ, ೨) ಆಳುಪ-ಬಾದಾಮಿ ಚಲುಕ್ಯ ಮತ್ತು ೩) ಆಳುಪ-ಸಾಂತರ ಸಂಬಂಧಗಳು. ಇದು ಪರಸ್ಪರ ಕೊಡು-ಕೊಳ್ಳುವಿಕೆಯ ನೆಲೆಯಲ್ಲಿ ಭದ್ರವಾಗಿತ್ತು.
೧. ಆಳುಪ ಇತಿಹಾಸ ಪ್ರಾರಂಭವಾಗುವುದೇ ಕದಂಬ ಕಾಕುಸ್ಥವರ್ಮನ ಹಲ್ಮಿಡಿ ಶಾಸನ ಕಾಲದಿಂದ (ಸು. ಕ್ರಿ.ಶ. ೪೨೦ ಇಲ್ಲಿ ಆಳುಪಗಣ ಪಶುಪತಿಯ ಉಲ್ಲೇಖ ಇದೆ. ಈತ ಕದಂಬ ರಾಜಕುಮಾರಿ ಕಾಕುಸ್ಥವರ್ಮನ ಮಗಳಾದ ಲಕ್ಷ್ಮಿಯನ್ನು ಮದುವೆಯಾಗಿದ್ದ. ಈ ಸಂಬಂಧ ಎರಡೂ ವಂಶಗಳನ್ನು ಗಟ್ಟಿಯಾಗಿ ಬೆಸೆದಿತ್ತು. ಇವರ ಮಗ ಕಾಕುಸ್ಥ ಭಟರಿ. ಈತ ಹತ್ತು ಮಾಂಡಲಿಕರ ನಾಯಕನಾಗಿ ಮತ್ತು ಸುಂಕದ ಅಧಿಕಾರಿಯಾಗಿ ದಕ್ಷತೆ ಮೆರೆದು ಎಲ್ಲರ ಪ್ರೀತಿಪಾತ್ರನಾಗಿದ್ದ ಲಕ್ಷ್ಮಿ ನೇರವಾಗಿ ರಾಜಕೀಯದಲ್ಲಿ ಪ್ರವೇಶಿಸಿದ್ದು ಕಂಡುಬರದಿದ್ದರೂ ತನ್ನ ಮಗನ ಕಾರ್ಯ ಚಟುವಟಿಕೆಗಳ ಮೇಲೆ ನಿಗಾ ಇಟ್ಟು ಅಪಾರವಾದ ಪ್ರಭಾವ ಬೀರಿರಬೇಕು. ಈ ಸಂಬಂಧ ಯಾವ ರೀತಿಯಲ್ಲಿ ಮುಂದುವರೆದಿತ್ತು ಎಂಬುದಕ್ಕೆ ಆಧಾರಗಳ ಕೊರತೆ ಇದೆ.
೨. ಬನವಾಸಿ ಕದಂಬರ ಸೋಲು ಮತ್ತು ಅಂತ್ಯದಿಂದ ಪ್ರಾರಂಭವಾಗುತ್ತದೆ ಬಾದಾಮಿ ಚಲುಕ್ಯರ ಅಭ್ಯುದಯ. ಕದಂಬರಿಗೆ ಬಹಳ ನಿಷ್ಠರಾಗಿದ್ದ ಆಳುಪರನ್ನು ಬಾದಾಮಿ ಚಲುಕ್ಯರು ತಮ್ಮ ಮುತ್ಸದ್ದಿತನದಿಂದಲೇ ಸ್ನೇಹ ಸಂಬಂಧಕ್ಕೆ ಒಳಪಡಿಸಿದರೆಂದು ಕಾಣುತ್ತದೆ. ಇದಕ್ಕಿರುವ ಸ್ಪಷ್ಟ ನಿದರ್ಶನವೆಂದರೆ ಚಲುಕ್ಯ ಮೊದಲ ಕೀರ್ತಿವರ್ಮ ತನ್ನ ತಮ್ಮ ಮಂಗಳೇಶನ ವಿವಾಹವನ್ನು ಆಳುಕ (ಆಳುಪ) ಮಹಾರಾಜನ ಮಗಳಾದ ಕದಂಬ ಮಹಾದೇವಿಯೊಂದಿಗೆ ನೆರವೇರಿಸಿದ್ದ. ಈ ಸಂಬಂಧ ಆಳುಪ-ಚಲುಕ್ಯ ಮನೆತನಗಳ ಪ್ರಮುಖ ಸಂಪರ್ಕ ಸೇತುವಾಯಿತು. ಇದು ಎಷ್ಟು ಗಾಢವಾಗಿತ್ತು ಎಂಬುದನ್ನು ಕ್ರಿ.ಶ.೫೯೮ಕ್ಕೆ ಸೇರುವ ಮಾರಟೂರು ಶಾಸನ ತಿಳಿಸುತ್ತದೆ. ಕ್ಷಾತ್ರ ಮತ್ತು ಧರ್ಮ ತೇಜಗಳನ್ನು ಮೈಗೂಡಿಸಿಕೊಂಡಿದ್ದ ಆಳುಪ ರಾಜಕುಮಾರಿ ಕದಂಬ ಮಹಾದೇವಿ ಸಾಮ್ರಾಟ ಮಂಗಳೇಶನಿಗೆ ತಕ್ಕ ರಾಣಿಯಾಗಿ, ಒಡತಿಯಾಗಿ ರಾಜಕಾರ್ಯದಲ್ಲಿ ಭಾಗಿಯಾಗಿದ್ದಳು. ಸದಾ ಸಾಮ್ರಾಜ್ಯದ ಹಿತ ಕಾಯುವುದರಲ್ಲೇ ನಿರತನಾಗಿದ್ದ ಆಳುಕ ಮಹಾರಾಜ ಸಾಮ್ರಾಟನ ಕರೆಗೆ ಓಗೊಟ್ಟು ತನ್ನ ವಾರ್ಧಕ್ಯವನ್ನೂ ಮರೆತು ಮಂಗಳಾಪುರದಿಂದ (ಇಂದಿನ ಮಂಗಳೂರು) ದೂರದ ಮಾರಟೂರಿಗೆ (ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆ) ಹೋಗಿ ಅಲ್ಲಿ ಚಕ್ರವರ್ತಿಗೆ ಯುದ್ಧದಲ್ಲಿ ಜಯ ದೊರಕಿಸಿಕೊಟ್ಟು ನಂತರ ಸೈನಿಕ ನೆಲೆಯಲ್ಲಿದ್ದಾಗ ಅಸುನೀಗಿದ ಕದಂಬ ಮಹಾದೇವಿಯು ತನ್ನ ತಂದೆಯ ಉತ್ತರಕ್ರಿಯಾದಿಗಳನ್ನು ಅಲ್ಲೇ ನೆರವೇರಿಸಿ ಅವನ ಪರೋಕ್ಷ-ವಿನಯಕ್ಕಾಗಿ ಹಲವು ಜನ ಬ್ರಾಹ್ಮಣರಿಗೆ ಮತ್ತು ಒಬ್ಬ ಯತಿಗೆ ಭೂ ದಾನಗಳನ್ನು ಮಾಡಿದಳು. ಚಕ್ರವರ್ತಿ ಇದನ್ನು ಶಾಸನಾಂಕಿತ ಮಾಡಿಸಿದ. ಇದರಲ್ಲಿ ಆಳುಕ ಮಹಾರಾಜನ ಗುಣಗಾನವಿದೆ. ಇದರಲ್ಲಿ ಹೆಸರಿಸಿರುವ ಆಳುಕ ಮಹಾರಾಜ ಇಷ್ಟರವರೆಗೆ ಬೆಳಕಿಗೆ ಬಾರದೆ ಇದ್ದ ಒಬ್ಬ ಪ್ರಖ್ಯಾತ ಆಳುಪ ರಾಜ. ಈತನ ಮಗಳು ಮೊದಲಬಾರಿಗೆ ಆಳುಪ-ಚಲುಕ್ಯ ಸಂಬಂಧಕ್ಕೆ ಸೇತುವಾದಳು, ೬ನೆಯ ಶತಮಾನದ ಉತ್ತರಾರ್ಧದ ಆಳುಪ ಇತಿಹಾಸ ನಮಗೆ ದೊರೆಯುವಂತೆ ಮಾಡಿದಳು.
ಇದಾದ ಬಹಳ ಸಮಯದ ನಂತರ ನಮಗೆ ದೊರೆಯುವ ಹೆಸರು ರಾಣಿ ಮಹಾದೇವಿ. ಈಕೆ ಆಳುಪ ಗುಣಸಾಗರ (ಒಂದನೆಯ ಆಳುವರಸ)ನ ಮಡದಿ ಎಂದು ಕಿಗ್ಗ ಶಾಸನ (ಕ್ರಿ.ಶ.೬೭೫) ತಿಳಿಸುತ್ತದೆ೧೦ ಈಕೆಯ ಬಗ್ಗೆ ಹೆಚ್ಚಿನ ಮಾಹಿತಿಯೇನೂ ಲಭ್ಯವಿಲ್ಲ. ಪ್ರಾಯಶಃ ಈಕೆ ಅಂದಿನ ಹೆಸರಾಂತ ಅರಸು ಮನೆತನದ ರಾಜಕುವರಿ ಇರಬೇಕು. ಇಲ್ಲಿ ಎರಡು ಸಾಧ್ಯತೆಗಳನ್ನು ಸೂಚಿಸಬಹುದು: ೧) ಸೇನ್ದ್ರಕ ರಾಜಕುಮಾರಿ ೨) ಚಲುಕ್ಯ ರಾಜಕುಮಾರಿ. ಸೇನ್ದ್ರಕರು ಶಿವಮೊಗ್ಗ ಮತ್ತು ಅದರ ಉತ್ತರ ಭಾಗದಲ್ಲಿ ಆಳುತ್ತಿದ್ದು, ರಾಜಕೀಯವಾಗಿ ಪ್ರಬಲರಾಗಿದ್ದರು. ಚಲುಕ್ಯರಿಗೆ ಆಪ್ತರಾಗಿದ್ದ ಒಂದು ಪ್ರಮುಖ ಸಾಮಂತ ಪ್ರಾಚೀನ ರಾಜ ವಂಶ. ಇವರ ನೈಋತ್ಯ ಭಾಗದ ಕರಾವಳಿ ಪ್ರದೇಶವನ್ನು ಆಳುತ್ತಿದ್ದವರು ಆಳುಪರು. ಇವರೂ ಸಹ ಬಾದಾಮಿ ಚಲುಕ್ಯರ ಪರಮಾಪತ್ತ ಭೃತ್ಯರು. ಈ ನೆಲೆಯಲ್ಲಿ ಆಳುಪ-ಸೇನ್ದ್ರಕ ಸ್ನೇಹ ಸಂಬಂಧ ಬೆಸೆದು ಅದು ಆಳುವರಸ ಗುಣಸಾಗರ ಮತ್ತು ಮಹಾದೇವಿಯರ ವಿವಾಹದಿಂದ ಭದ್ರವಾಗಿರಬಹುದು. ಇನ್ನು ಎರಡನೆಯದಾಗಿ ಯೋಚಿಸುವುದಾದರೆ ಬಾದಾಮಿ ಚಲುಕ್ಯ ಸಂಬಂಧ. ಇದರಲ್ಲಿ ಅಚ್ಚರಿಯ ಸಂಗತಿ ಏನೂ ಕಾಣುವುದಿಲ್ಲ. ಕಾರಣ ಈಗಾಗಲೇ ಚಲುಕ್ಯ ಮಂಗಳೇಶ ಆಳುಪ ರಾಜಕುಮಾರಿಯಾದ ಕದಂಬ ಮಹಾದೇವಿಯನ್ನು ಮದುವೆಯಾಗಿದ್ದ ವಿಚಾರವನ್ನು ಮೇಲೆ ನೋಡಿದ್ದೇವೆ. ಈಕೆ ಆಳುಕ ಮಹಾರಾಜನ ಮಗಳು. ಆತ ಕೈಗೊಂಡ ದೂರದ ಪ್ರಯಾಣ ಮತ್ತು ಅದರಿಂದಾದ ಆಯಾಸ, ನಂತರ ಭಾಗವಹಿಸಿದ ಯುದ್ಧಗಳು ಆಗಲೇ ವಾರ್ಧಕ್ಯದ ಹಿರಿತನದಲ್ಲಿದ್ದ ದೇಹಕ್ಕೆ ಘಾಸಿ ಉಂಟುಮಾಡಿದುದರಿಂದ ಆಗಿರಬೇಕು. ಪ್ರಾಯಶಃ ಆಳುವರಸ ಗುಣಸಾಗರ ಈತನ ಮೊಮ್ಮಗನಿರಬೇಕು. ಈ ಗುಣಸಾಗರ ಮತ್ತು ಮಹಾದೇವಿಯರ ಮಗ ಚಿತ್ರವಾಹನ ಚಲುಕ್ಯ ರಾಜಕುಮಾರಿ ಕುಂಕುಮದೇವಿಯನ್ನು ವಿವಾಹವಾಗಿದ್ದ ವಿಚಾರ ಬಹಳ ಖ್ಯಾತಿಯನ್ನು ಗಳಿಸಿದೆ.
ಆಳುಪರು ತಮಗೆ ಅತ್ಯಂತ ಕಷ್ಟಕಾಲದಲ್ಲಿ ಮಾಡಿದ ಸೇವೆಗಾಗಿ ಚಲುಕ್ಯ ವಿನಯಾದಿತ್ಯನು ತನ್ನ ಮಗಳಾದ ಕುಂಕುಮದೇವಿಯನ್ನು ಆಳುಪ ಚಿತ್ರವಾಹನನಿಗೆ ವಿವಾಹ ಮಾಡಿಕೊಟ್ಟ. ಇದರ ಪ್ರಸ್ತಾಪ ಚಕ್ರವರ್ತಿಯ ಶಿಗ್ಗಾವ್ ತಾಮ್ರ ಶಾಸನದಲ್ಲಿದೆ೧೧ ಈ ಶಾಸನ ಕ್ರಿ.ಶ.೭೦೬ಕ್ಕೆ ಸೇರಿದ್ದು. ಈ ವಿವಾಹ ಆಳುಪರು ಅಲ್ಲಿಯವರೆಗೆ ಮಾಡಿದ್ದ ಶ್ರೇಷ್ಠ ಸೇವೆ ಮತ್ತು ಸಾಧನೆಗೆ ಹಾಗೂ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಸಾಮಂತ ರಾಜಕುಮಾರನೋರ್ವ ಸಾಮ್ರಾಟ ರಾಜಕುವರಿಯ ಕೈ ಹಿಡಿಯುವುದೇನು ಸಾಮಾನ್ಯ ವಿಷಯವಲ್ಲ. ಈ ನಿಟ್ಟಿನಲ್ಲಿ ಕುಂಕುಮದೇವಿ ಬೆಸೆದ ಸಂಬಂಧ ಶ್ಲಾಘನೀಯ. ಈಕೆ ರಾಜಕೀಯ ಅಷ್ಟೇ ಅಲ್ಲದೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಬಹಳ ಯಶಸ್ವಿಯಾಗಿ ಬೆಳೆಸಿದ್ದಳು. ಈಕೆಯ ಅಣ್ಣ ಚಕ್ರವರ್ತಿ ವಿಜಯಾದಿತ್ಯ ಪರಮಭಾಗವತ, ಪತಿ ಆಳುಪ ಚಿತ್ರವಾಹನ ಪರಮ ಶಿವಭಕ್ತ (ಪಾಶುಪತರ ದೊರೆ) ಆದರೆ ತಾನು ಪರಮ ಜಿನ ಭಕ್ತೆ. ಈ ಮೂವರೊಳಗಿನ ಸಂಬಂಧ ಹಾಲು-ಸಕ್ಕರೆಯಂತಿತ್ತು. ಸಾಮಾನ್ಯವಾಗಿ ಇಂತಹ ಸಂಬಂಧಗಳನ್ನು ಸಾಧಿಸಿ ಬಲಪಡಿಸುವ ಶಕ್ತಿ ಮತ್ತು ಮನೋಧರ್ಮ ಹೆಣ್ಣಿಗೆ ಹೆಚ್ಚು. ಅಸಾಧಾರಣ ಮಹಿಳೆಯಾದ ಕುಂಕುಮದೇವಿ ಇದನ್ನು ಬಹಳ ಯಶಸ್ವಿಯಾಗಿ ಪ್ರೀತಿ ಮತ್ತು ವಿಶ್ವಾಸದಿಂದ ಸಾಧಿಸಿದಳು.
ಕುಂಕುಮದೇವಿ ಪುರಿಗೆರೆ (ಇಂದಿನ ಲಕ್ಷ್ಮೇಶ್ವರ)ದಲ್ಲಿ ಆನೆಸಜ್ಜೆಯ ಬಸದಿಯನ್ನು ಪತಿಯ ಸಹಕಾರದಿಂದ ಕಟ್ಟಿಸಿದಳು. ಇದರ ಪೂಜಾಕಾರ್ಯಗಳಿಗಾಗಿ ಚಕ್ರವರ್ತಿ ವಿಜಯಾದಿತ್ಯನು ಗುಡಿಗೆರೆ ಗ್ರಾಮವನ್ನು ದಾನ ಮಾಡುವಂತೆ ಮಾಡಿದಳು. ಈ ಗ್ರಾಮ ದಾನಕ್ಕೆ ಹೆಂಡತಿಯ ಪರವಾಗಿ ಬೇಡಿಕೆ ಸಲ್ಲಿಸಿದವ ಆಳುಪ ರಾಜ೧೨ ಇಲ್ಲಿ ಆಳುಪ ರಾಣಿಯ ಪಾತ್ರ ಹಿರಿದಾದುದೆಂದು ಹೇಳಬೇಕಾದುದಿಲ್ಲ. ಕುಂಕುಮದೇವಿ ತುಳುನಾಡಿನ ಸೊಸೆಯಾಗಿ ಬಂದ ಕಾರಣ ಈ ಭಾಗದಲ್ಲಿ ಜೈನ ಧರ್ಮದ ಕಾರ್ಯ ಚಟುವಟಿಕೆಗಳು ಗರಿಗೆದರಿ ಬಲಗೊಂಡವು.
ತುಳುನಾಡಿನಲ್ಲಿ ಈಕೆ ಏನು ಮಾಡಿದಳು ಎಂಬುದಕ್ಕೆ ನಮಗೆ ಇನ್ನೂ ಮಾಹಿತಿ ದೊರೆಯಬೇಕಿದೆ. ಆಳುಪ ರಾಜ್ಯ ಆಗ ಇಡೀ ಕದಂಬ ಮಂಡಲಸಹಿತವಾದ ವಿಶಾಲವಾದ ಮತ್ತು ಆಯಕಟ್ಟಿನ ರಾಜ್ಯವಾಗಿತ್ತು. ಇದರ ಆಡಳಿತ ಮತ್ತು ಶಾಂತಿ ಪಾಲನೆ ಕ್ಲಿಷ್ಟಕರವಾಗಿತ್ತು.೧೩ ಇದರ ಸುಗಮ ಕಾರ್ಯಾಚರಣೆಗಾಗಿ ಕುಂಕುಮವೆಂಬ ತನ್ನ ಪತಿಯೊಡನೆ ಸಹಕರಿಸಿರಬೇಕು. ಈ ಕಾಲದ ಹೊಸ ಶಾಸನಗಳು ತೃಪ್ತಿಕರ ಸಂಖ್ಯೆಯಲ್ಲಿ ದೊರೆತಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುವುದು.
೩. ಕೇವಲ ಸಾಮ್ರಾಟರೊಂದಿಗೆ ಕೊಡು-ಕೊಳ್ಳುವಿಕೆಯ ಸಂಬಂಧವನ್ನು ರಾಜಕಾರಣದಲ್ಲಿ ಸ್ನೇಹ ಬಲವರ್ಧನೆಗಾಗಿ ಆಳುಪರು ಬೆಳೆಸಿದ್ದಲ್ಲ. ಇಂತಹುದೇ ಸಂಬಂಧವನ್ನು ತಮ್ಮ ಅಧಿಕಾರಿ ಸಾಮಂತರಾದ ಹೊಂಬುಚ್ಛ ಸಾಂತರರೊಂದಿಗೂ ಹೊಂದಿದ್ದರು. ಈ ಸಂಬಂಧಕ್ಕೆ ಸೇತುವಾದವರು ಎರಡೂ ಕಡೆಯ ರಾಜಕುಮಾರಿಯರು. ಇವರು ವಿವಾಹಾನಂತರ ರಾಣಿಯರಾದರು. ಇವರಲ್ಲಿ ಮೂರು ಜನ ಆಳುಪ ಹಾಗೂ ಒಬ್ಬಳು ಸಾಂತರ ರಾಜಕುಮಾರಿಯರ ಪಾತ್ರ ಹಿರಿದಾದುದು.
ಏಂಜಲದೇವಿ
ಹತ್ತನೆಯ ಶತಮಾನದ ಪ್ರಾರಂಭದಲ್ಲಿ ಆಳುಪ ರಣಂಜಯನು ತನ್ನ ಮಗಳಾದ ಏಂಜಲದೇವಿಯನ್ನು ಸಾಂತರ ರಾಜ ಚಾಗಿ ಸಾಂತರನಿಗೆ ಮದುವೆ ಮಾಡಿಕೊಟಿದೆ೧೪ ಇದಕ್ಕೆ ಹಿಂದಿನ ಸಂಬಂಧಗಳ ಮಾಹಿತಿ ಇಲ್ಲದ ಕಾರಣ ಸದ್ಯಕ್ಕೆ ಏಂಜಲದೇವಿ ಆಳುಪ-ಸಾಂತರ ಸಂಬಂಧದ ಪ್ರಥಮ ಸೇತು ಆದಳು. ವಿಕ್ರಮ ಸಾಂತರನ ಮಗ ಚಾಗಿ ಸಾಂತರ. ವಿಕ್ರಮ ಸಾನ್ತರನಿಗೆ ವಿಕ್ರಮಾದಿತ್ಯ ಸಾಂತರ ಎಂಬ ಹೆಸರೂ ಇತ್ತು.೧೫ ಈತ ಸುಮಾರು ಕ್ರಿ.ಶ.೮೯೦ರಿಂದ ೯೩೫ರ ವರೆಗೆ ಆಳಿದ. “ಆಳುಪರ ಸಂಬಂಧವನ್ನು ಹೊಂದಿದ್ದ ವಿಕ್ರಮಾದಿತ್ಯ ವೀರಸಾನ್ತರನು ತನ್ನ ಮಗನಾದ ಚಾಗಿ ಸಾನ್ತರನಿಗೆ ಆಳುಪ ರಣಂಜಯನ ಮಗಳಾದ ಏಂಜಲದೇವಿಯನ್ನು ಲಗ್ನಮಾಡಿ ಈ ಎರಡು ಮನೆತನಗಳಿಗೆ ರಾಜಕೀಯ ಬೆಸುಗೆ ಹಾಕಿದನು’’ ಎಂದು ಹಂಪ ನಾಗರಾಜಯ್ಯ ಹೇಳುತ್ತಾರೆ೧೬ ಆದರೆ ಮುಂದೆ ಸಾಂತರ ವಂಶಾವಳಿ ಕೊಡುವಾಗ ವೀರಸಾಂತರನ ಹೆಂಡತಿ ಏಂಜಲದೇವಿ, ಈಕೆ ಆಳುಪ ರಣಂಜಯನ ಮಗಳು ಎಂದು ಹೇಳಿದ್ದಾರೆ.೧೭ ಇದು ತಪ್ಪು. ಆಳ್ವ ರಣಂಜಯ ಈತನ ಸಮಕಾಲೀನ೧೮ ರಣಂಜಯ ಸುಮಾರು ಕ್ರಿ.ಶ.೯೦೦ರಿಂದ ೯೩೦ರ ವರೆಗೆ ಆಳಿದ ಎಂದು ಡಾ. ಕೆ.ವಿ. ರಮೇಶ ಅವರು ಅಭಿಪ್ರಾಯಪಡುತ್ತಾರೆ೧೯.
ಇದಾದ ಬಹಳ ಕಾಲದ ನಂತರ ಸಾಂತರ ರಾಜ ಅಂಮಣದೇವ ತನ್ನ ಮಗಳಾದ ಬೀರಬ್ಬರಸಿ (ಬೀರಲದೇವಿ) ಯನ್ನು ಆಳುಪ ರಾಜ ಬಂಕಿದೇವನಿಗೆ ಮದುವೆ ಮಾಡಿಕೊಟ್ಟ ಮತ್ತು ತನ್ನ ಮಗ ಸಾಂತರ ತೈಲಪದೇವನಿಗೆ ಆಳುಪ ರಾಜಕುಮಾರಿ ಬಂಕಿದೇವನ ತಂಗಿಯಾದ ಮಂಕಬ್ಬರಸಿಯನ್ನು ತಂದು ಮದುವೆ ಮಾಡಿದ. ಇದರಿಂದ ಆಳುಪ-ಸಾಂತರ ಸಂಬಂಧ ಮತ್ತೆ ಗಟ್ಟಿಯಾಯಿತು. ನಂಬಿಕೆ, ಪ್ರೀತಿ ಮತ್ತು ವಿಶ್ವಾಸದಿಂದ ನೆರವೇರಿದ ಈ ಸಂಬಂಧಗಳಿಗೆ ಇರ್ವರು ರಾಜಕುವರಿಯರು ಸರಕುಗಳಾದರು ಎಂದು ಕಂಡುಬಂದರೂ ಹಾಗೆನ್ನಲು ಸಾಧ್ಯವಿಲ್ಲ. ಕಾರಣ ಮುಂದೆ ಇರ್ವರೂ ತಾವು ಸೇರಿದ ವಂಶಗಳ ಬೆಳಕಾದರು. ಇವರ ಕುಡಿಗಳು ಆಯಾ ರಾಜ್ಯದ ಚುಕ್ಕಣಿ ಹಿಡಿದವು. ಇದೇನೂ ಸಾಮಾನ್ಯವಾದ ಸಾಧನೆಯಲ್ಲ. ಸಾಂತರ ಅಂಮಣ ಆಳುಪ ಬಂಕಿದೇವನ ಸಾಮಂತ. ಈತ ಕರಾವಳಿಯ ಮೇಲೆ ಧಾಳಿ ಮಾಡಿದ್ದ ಚೋಳರ ಸೈನ್ಯವನ್ನು ಧೂಳಿಪಟ ಮಾಡಿ ತನ್ನ ಸ್ವಾಮಿ ಬಂಕಿದೇವನಿಗೆ ಆತನ ರಾಜ್ಯ ಪುನಃ ದೊರೆಯುವಂತೆ ಮಾಡಿದ ಎಂದು ಬಾರಕೂರಿನ ಒಂದು ಶಾಸನ ತಿಳಿಸುತ್ತದೆ೨೦ ಇದೇ ವಿಷಯ ಇಲ್ಲಿನ ಇನ್ನೊಂದು ಶಾಸನದಲ್ಲೂ ಪ್ರಸ್ತಾಪವಾಗಿದೆ. ಆದರೆ ಈ ಶಾಸನದ ಪೂರ್ಣ ಪಾಠ ಲಭ್ಯವಿಲ್ಲ೨೧ ಬಂಕಿದೇವ ಸುಮಾರು ಕ್ರಿ.ಶ.೧೦೨೦ರಿಂದ ೧೦೫೦ರ ವರೆಗೆ ಆಳಿದ ಎಂದು ರಮೇಶ್ ಅವರು ಅಭಿಪ್ರಾಯಪಡುತ್ತಾರೆ೨೨ ಮುಂದೆ ಬಂಕಿದೇವನ ನಂತರ ಪಟ್ಟಣಕ್ಕೆ ಬಂದ ಆಳುಪ ಪಟ್ಟಿಯೊಡೆಯನು ತನ್ನ ಮಗಳಾದ ಅಚಲಾದೇವಿಯನ್ನು ಸಾಂತರ ತೈಲಪದೇವನ ಮಗನಾದ ವೀರ ಸಾಂತರನಿಗೆ ಮದುವೆ ಮಾಡಿಕೊಟ್ಟ. ವೀರ ಸಾಂತರನಿಗೆ ರಾಯ ಸಾಂತರ ಎಂಬ ಇನ್ನೊಂದು ಹೆಸರೂ ಇತ್ತು೨೩ ಅಚಲಾದೇವಿ ತನ್ನ ಪತಿ ವೀರ ಸಾಂತರನಿಗೆ ಆತನ ರಾಜಕಾರ್ಯದಲ್ಲಿ ಸದಾ ನೆರವಾಗಿದ್ದಳು ಎಂಬ ವಿಚಾರ ಉದಿಯಾವರದ ಒಂದು ಶಾಸನದಿಂದ ತಿಳಿಯುತ್ತದೆ.೨೪
ಈ ರೀತಿಯ ಆಳುಪ-ಸಾಂತರ ಸಂಬಂಧಗಳು ನಿರಂತರವಾಗಿ ಮುಂದುವರೆದಿತ್ತು ಎಂಬುದಕ್ಕೆ ನಂತರದ ಕಾಲಗಳಲ್ಲೂ ಹಲವಾರು ನಿದರ್ಶನಗಳು ದೊರೆಯುತ್ತವೆ೨೫ ಕಳಸ-ಕಾರ್ಕಳ ರಾಜ್ಯವನ್ನು ಮುಂದೆ ಆಳಿದ ರಾಜವಂಶ ಸಾಂತರ ಮೂಲದ್ದು.
ಮುಂದೆ ೧೨-೧೩ನೆಯ ಶತಮಾನಗಳಲ್ಲಿ ಬಹಳ ಕ್ರಿಯಾಶೀಲವಾಗಿದ್ದು ಮತ್ತು ಶಾಸನೋಕ್ತವಾಗಿರುವ ಪ್ರಮುಖ ಆಳುಪ ಅರಸಿಯರೆಂದರೆ-ಪಾಂಡ್ಯಮಹಾದೇವಿ, ಜಾಕಳಮಹಾದೇವಿ, ಪಟ್ಟಮಹಾದೇವಿ ಮತ್ತು ಬಲ್ಲ ಮಹಾದೇವಿಯರು. ಕವಿಆಳುಪನ (ಕ್ರಿ.ಶ.೧೧೧೦-೧೧೬೦) ರಾಣಿ ಪಾಂಡ್ಯಮಹಾದೇವಿ. ಈಕೆ ರಾಜ್ಯದ ಆಡಳಿತದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಪನ್ನೀರ್ಪಳ್ಳಿ ಭಾಗದ ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಳು ಎಂದು ಶಾಸನಗಳಿಂದ ತಿಳಿದುಬರುತ್ತದೆ.೨೬
ರಾಜ ಒಂದನೆಯ ಕುಲಶೇಖರನ (ಕ್ರಿ.ಶ.೧೧೬೦-೧೨೨೦) ಮಡದಿ ಜಾಕಲಮಹಾದೇವಿ. ಕುಂದಣನ ವರಾಂಗ ಶಾಸನವು (ಸು. ಕ್ರಿ.ಶ.೧೨೨೦) ಆಳುಪರ ಸಾಧನೆಗಳೊಂದಿಗೆ ಜಾಕಳಮಹಾದೇವಿಯ ಸಾಧನೆಯನ್ನು ವಿವರಿಸುತ್ತದೆ೨೭ ಈಕೆ ಪ್ರಖ್ಯಾತವೂ, ಪ್ರಾಚೀನವೂ ಆದ ಜೈನಕ್ಷೇತ್ರ (ಕಾರ್ಕಳ ತಾಲ್ಲೂಕು) ವರಾಂಗದ ನೇಮಿಶ್ವರ ಬಸದಿಯ ಜೀರ್ಣೋದ್ಧಾರ ಮಾಡಿ ಅಲ್ಲೊಂದು ಸುಂದರವಾದ ತಟಾಕವನ್ನು ನಿರ್ಮಿಸುತ್ತಾಳೆ. ಈಕೆಯ ಕಾರ್ಯ ಮೇಲೆ ವಿವರಿಸಿರುವ ಕುಂಕುಮದೇವಿಯ ಕಾರ್ಯಕ್ಕೆ ಸಮನಾದುದು.
ಪಟ್ಟಮಹಾದೇವಿ
ಆಳುಪ ರಾಜ ವಲ್ಲಭದೇವನ (ಕ್ರಿ.ಶ.೧೨೩೦-೧೨೫೦) ಮಡದಿ ಪಟ್ಟಮಹಾದೇವಿ. ಶಾಸನಗಳು ಈಕೆಯನ್ನು ‘ಪಟ್ಟವ ಪಿರಿಯರಸಿ ಪಟ್ಟಮಹಾದೇವಿ ಎಂದೇ ಉಲ್ಲೇಖಿಸಿವೆ.೨೮ ಇದೇ ಈಕೆಗೆ ರಾಜ್ಯಾಡಳಿತದಲ್ಲಿದ್ದ ವರ್ಚಸ್ಸನ್ನು ಸೂಚಿಸುವಂತಿದೆ. ಗಂಡನ ಆಳ್ವಿಕೆ ಕಾಲದಲ್ಲಿ ಆದ ಎಲ್ಲ ಪ್ರಮುಖ ನಿರ್ಧಾರಗಳಿಗೆ ಮತ್ತು ದಾನಕಾರ್ಯಗಳಿಗೆ ಈಕೆ ಸಾಕ್ಷಿಯಾಗಿದ್ದಳು. ರಾಜಸಭೆಯಲ್ಲಿ ಈಕೆಯೂ ಸದಾ ಉಪಸ್ಥಿತಳಿದ್ದಳು. ಈಕೆ ಸಾಂತರ ವೀರ ಜಗದೇವರಸನ ಅಕ್ಕ. ಹಾಗಾಗಿ ಕೆಲವೊಮ್ಮೆ ವೀರ ಜಗದೇವರಸನೂ ಆಳುಪ ರಾಜಸಭೆಯಲ್ಲಿ ಉಪಸ್ಥಿತನಿರುತ್ತಿದ್ದ೨೯
ಪಟ್ಟಮಹಾದೇವಿಯು ತನ್ನ ಗಂಡ ವಲ್ಲಭದೇವನ ಮರಣಾನಂತರ ಮಗನಾದ ವೀರಪಾಂಡ್ಯನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ಸ್ವಲ್ಪ ಕಾಲ ತಾನೇ ರಾಜ್ಯ ಸೂತ್ರ ವಹಿಸಿಕೊಂಡಳು ಎಂದು ಕಾಣುತ್ತದೆ೩೦ ರಾಜ್ಯದ ಹಿತರಕ್ಷಣೆ ರಕ್ಷಣೆ ಸಲುವಾಗಿ ಈ ಜವಾಬ್ದಾರಿ ಹೊತ್ತಿದ್ದೇ ಹೊರತು ಸರ್ವಾಧಿಕಾರಿ ಹಂಬಲದಿಂದಲ್ಲ. ಈಕೆ ತನ್ನ ಸೊಸೆ ಬಲ್ಲಮಹಾದೇವಿಯೂ ರಾಜ್ಯಾಡಳಿತದ ಜವಾಬ್ದಾರಿ ಹೊರುವಂತೆ ಮಾಡಿದಳು. ಇದೂ ಸಹ ರಾಜಮಾತೆ ಪಟ್ಟಮಹಾದೇವಿಯಲ್ಲಿ ಸರ್ವಾಧಿಕಾರಿ ಮನೋಭವ ಇರಲಿಲ್ಲ ಎಂಬುದನ್ನು ಸೂಚಿಸುತ್ತದೆ. ಕಿರಿಯರಿಗೆ ಆಡಳಿತದಲ್ಲಿ ಶಿಕ್ಷಣ ನೀಡುವ ಮನೋಭಾವ ಇವಳಲ್ಲಿತ್ತು. ತನ್ನ ಜೀವನದ ಇಳಿವಯಸ್ಸಿನಲ್ಲೂ ಈಕೆ ಈ ಜವಾಬ್ದಾರಿಗಳನ್ನೆಲ್ಲಾ ಹೊತ್ತಿದ್ದಳು ಎಂಬ ವಿಚಾರವನ್ನು ಸುಮಾರು ಕ್ರಿ.ಶ.೧೨೭೪ಕ್ಕೆ ಸೇರುವ ಬಾರಕೂರು ಕೋಟೆಕೇರಿಯ ಒಂದು ಶಾಸನ ತಿಳಿಸುತ್ತದೆ೩೧ ಪ್ರಾಯಶಃ ಈಕೆ ಇದೇ ವರ್ಷ ಮರಣ ಹೊಂದಿರಬೇಕು.
ಬಲ್ಲಮಹಾದೇವಿ
ವೀರ ಪಾಂಡ್ಯದೇವನು ಮರಣ (ಕ್ರಿ.ಶ.೧೨೭೫) ಹೊಂದಿದಾಗ ಆತನ ಮಗ ಇನ್ನೂ ಕಿರಿಯವನಾಗಿದ್ದ. ಇದರಿಂದ ರಾಜಕುಮಾರ ಮತ್ತು ರಾಜ್ಯದ ಜವಾಬ್ದಾರಿ ಬಲ್ಲಮಹಾದೇವಿಯದಾಯಿತು. ಬಲ್ಲಮಹಾದೇವಿ ತನ್ನ ಅತ್ತೆ ಪಟ್ಟಮಹಾದೇವಿಯಿಂದಲೇ ಆಡಳಿತದ ಶಿಕ್ಷಣ ಪಡೆದಳು ಎಂದು ಮೇಲೆ ಹೇಳಿದೆ. ಇದರಿಂದಾಗಿ ಪತಿ ವೀರಪಾಂಡ್ಯ ದೇವನು ಮರಣ ಹೊಂದಿದಾಗ ಮಗ ನಾಗದೇವರಸನು ಅಪ್ರಾಪ್ತನಾಗಿದ್ದರೂ ಧೃತಿಗೆಡದೆ ರಾಜಕಾರ್ಯ ಸೂತ್ರ ಹಿಡಿಯಲು ಈಕೆ ಸಿದ್ಧವಾಗಿದ್ದಳು. ಕ್ರಿ.ಶ.೧೨೭೫ರಿಂದ ೧೯೨೦ ರವರೆಗೆ ತಾನೇ ರಾಜ್ಯಭಾರ ಮಾಡಿದಳು೩೨ ಆನಂತರ ಮಗನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ೧೯೯೨ ರವರೆಗೆ ಜಂಟಿಯಾಗಿ ಆಳ್ವಿಕೆ ನಡೆಸಿದಳು. ನಂತರ ನಾಗದೇವರಸ ಸ್ವತಂತ್ರವಾಗಿ (ಕ್ರಿ.ಶ.೧೩೦೦ರವರೆಗೆ) ರಾಜ್ಯವಾಳಿದ.೩೩
“ಶ್ರೀಮತು ಪಟ್ಟದ ಪಿರಿಯರಸಿ ಬಲ್ಲಮಹಾ ದೇವಿಯರು’’ ಎಂಬುದು ಶಾಸನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಈಕೆ ಪ್ರಶಸ್ತಿ೩೪ ಕೆಲವು ಶಾಸನಗಳಲ್ಲಿ ‘ಪಾಂಡ್ಯ ಚಕ್ರವರ್ತಿ ಎಂಬ ಉಲ್ಲೇಖವೂ ಇದೆ೩೫ ‘ಸ್ವಸ್ತಿ ಶ್ರೀಮತು ಶ್ರೀಮನ್ಮಾನಾಭರಣೇಶ್ವರ ದೇವರ ವಂಶಾನ್ವೆಯರುಂ ಪಶ್ಚಿಮ ಸಮುದ್ರಾಧಿಪತಿಯರುಂ ಶ್ರೀಮತು ಪಟ್ಟದ ಹಿರಿಯರಸಿ ಬಲ್ಲಮಹಾದೇವಿಯರು’’ ಎಂದು ಈಕೆಯ ಕೆಂಜೂರು ಶಾಸನ ತಿಳಿಸುತ್ತದೆ೩೬ ಬಹಳ ತ್ರುಟಿತವಾಗಿರುವ ಪೆರ್ಣಂಕಿಲ ಶಾಸನದಲ್ಲಿ ಆಳುಪರಿಗಿದ್ದ ಎಲ್ಲ ಸಾರ್ವಭೌಮ ಸೂಚಕ ಪ್ರಶಸ್ತಿಗಳೂ ಈಕೆಗಿವೆ೩೭.
ಮೂಡ ಅಲೆವೂರಿನ ಶಾಸನದಲ್ಲಿರುವ ಈಕೆಯ ಪ್ರಶಸ್ತಿ ಇಲ್ಲಿ ಉಲ್ಲೇಖಾರ್ಹ. “ಅನವರತ ಪರಮ ಕಲ್ಯಾಣಾಭ್ಯುದಯ ಸಹಸ್ರ (ಫಳ ಭೋಗ) ಭಾಗಿನಿ ದ್ವಿತೀಯ ಲಕ್ಷ್ಮೀ ಸಮಾನೆ .... ಗಮನೆಯರುಂ . ಮದಗಜ(ಗಮ)ನೆಯರುಂ ... ಪ್ರತ್ಯಕ್ಷ ಪಾರ್ವತಿಯರುಂ ಪತಿವ್ರತಾ ಅರುಂಧತಿಯರುಂ ಸೋಮ ಕುಲೋದ್ಭವರುಂ .... ಕುಲ ಪ್ರಖ್ಯಾತೆಯರುಂ ಗೋತ್ರ ಪವಿತ್ರೆಯರುಂ ಬಂಧುಜನ ಚಿಂತಾಮಣಿಯರುಂ ಆಶ್ರಿತ ಜನ ಕಲ್ಪವ್ರಿಕ್ಷರುಂ ದಾನವಿನೋದಿಗಳುಂ ಸುವರ್ನ ದಾನ ಸೂಱೆಕಾಱರಯರುಂ ಮರೆಹೊಕ್ಕರ ಕಾವರುಂ ಶರಣಾಗತ ವಜ್ರ ಪಂಜರರುಮಪ್ಪ ಶ್ರೀ ಮಂಜುನಾಥ ದೇವರ ದಿವ್ಯಶ್ರೀಪಾದ ಪದ್ಮಾರಾಧಕೆಯರುಂ ಶ್ರೀ ಪರಬಳಸಾಧಕೆಯರುಮಪ್ಪ ಸ್ವಸ್ತಿ ಶ್ರೀಮತು ಪಟ್ಟದ ಪಿರಿಯರಸಿ ಬಲ್ಲಮಹಾದೇವಿಯರು’’೩೮ ಬಹಳ ಹಾಳಾಗಿರುವ ಕುದಿ ಗ್ರಾಮದ ಶಾಸನದಲ್ಲೂ ಸಹ ಈ ಪ್ರಶಸ್ತಿ ಪ್ರತಿಧ್ವನಿತವಾಗಿದೆ೩೯ ಬೇರಾವುದೇ ಆಳುಪ ರಾಣಿಗೆ ಇಲ್ಲದ ಪ್ರಶಸ್ತಿ-ಪ್ರಶಂಸೆ ಇಲ್ಲಿದೆ. ಇಲ್ಲಿ ಹೊಗಳಿಕೆಯ ಅಂಶ ಸ್ವಲ್ಪ ಇರಬಹುದು. ಆದರೆ ಸಾಕಷ್ಟು ಸಾಧನೆಗೈದ ಅರ್ಹತೆ ಇಲ್ಲದಿದ್ದಲ್ಲಿ ಅಂದಿನ ಪುರುಷ ಸಮಾಜ ರಾಣಿಯಾದರೂ ಸ್ತ್ರೀಯೊರ್ವಳನ್ನು ಈ ರೀತಿಯ ಸಾಮಾಜಿಕ ಗೌರವಕ್ಕೆ ಪಾತ್ರಳೆಂದು ಗುರುತಿಸುತ್ತಿರಲಿಲ್ಲ. ಇದಕ್ಕೆ ಶಾಸನೋಕ್ತವಾಗಿಯೇ ಹಲವು ಉದಾಹರಣೆಗಳನ್ನು ಕೊಡಬಹುದು.
ಈಕೆ “ಮಾನಾಭರಣೇಶ್ವರ ದೇವರ ವಂಶಾನ್ವಯೆ’’ ಎಂಬ ಬಗ್ಗೆ ಸರಿಯಾದ ಅರ್ಥ ಮೂಡಿಲ್ಲ. ಈ ಬಗ್ಗೆ ಇರುವ ತರ್ಕಗಳನ್ನು೪೦ ಒಂದೆಡೆಯಿಟ್ಟು ತುಳುನಾಡಿನ ಶಾಸನಗಳಲ್ಲಿ ದೊರೆಯುವ ಮಾಹಿತಿ ಆಧಾರದಲ್ಲಿ ಚಿಂತಿಸುವುದಾದರೆ ಈಕೆ ಬಲ್ಲವೆರ್ಗಡೆಯ ಮಗಳು ಇರಬಹುದು. ವೀರ ಪಾಂಡ್ಯದೇವನ (ಕ್ರಿ.ಶ.೧೨೫೪ರ) ಶಾಸನವೊಂದರಲ್ಲಿ೪೧ ಬಲ್ಲವೆರ್ಗಡೆಯ ಉಲ್ಲೇಖ ಇದೆ. ಆನಂತರ ಬಲ್ಲಮಹಾದೇವಿಯ ಶಾಸನಗಳಲ್ಲಿ ನರಸಿಂಗ ಹೆಗ್ಗಡೆಯ ಪ್ರಸ್ತಾಪ ವಿಶೇಷವಾಗಿದೆ.೪೨ ಪ್ರಾಯಶಃ ಈ ನರಸಿಂಗ ಹೆಗ್ಗಡೆಯೇ ಬಲ್ಲವೆರ್ಗಡೆ. ಬಲ್ಲಮಹಾದೇವಿಯ ಹೆಸರಿನಲ್ಲಿರುವ ಪೂರ್ವ ಪದ ‘ಬಲ್ಲ ತುಳುನಾಡಿನ ಪೂರ್ವ ಭಾಗದಲ್ಲಿದ್ದ ‘ಬಲ್ಲಹ ಪಾಳೆಯಪಟ್ಟನ್ನು ಸೂಚಿಸುವು ದಾಗಿರಬೇಕು. ೯ನೆಯ ಶತಮಾನದ ಬಂಟ್ರ ಶಾಸನದಲ್ಲಿ೪೩ ಬಲ್ಲ ವೊಡೆಯರ ಉಲ್ಲೇಖ ಇದೆ. ಈ ಶಾಸನದಲ್ಲಿ ಮರ್ದಾಳದ (ಈಶ್ವರ) ದೇವರ ಮತ್ತು ಕುಕ್ಕೆ (ಸುಬ್ರಹ್ಮಣ್ಯ ಮತ್ತು ಕುಕ್ಕೆ ಲಿಂಗ) ಉಲ್ಲೇಖ ಇದೆ. ಪ್ರಾಯಶಃ ಇಲ್ಲಿಯ ಯಾವುದಾದರೂ ದೇವರಿಗೆ ಮಾನಾಭರಣೇಶ್ವರ ದೇವ ಎಂಬ ಹೆಸರಿತ್ತೇ ಎಂಬುದು ತಿಳಿಯುವುದಿಲ್ಲ. ಮುಂದಿನ ಶೋಧಗಳು ಈ ಬಗ್ಗೆ ಬೆಳಕು ಚೆಲ್ಲಬೇಕು.
ಈಕೆ ಪಶ್ಚಿಮ ಸಮುದ್ರಾಧಿಪತಿಯಾಗಿದ್ದಳು. ಅಂದರೆ ಆ ಕಾಲದಲ್ಲಿ ಸಮುದ್ರದ ಮೇಲೆ ನಡೆಯುತ್ತಿದ್ದ ಎಲ್ಲ ರೀತಿಯ ಕಾರ್ಯಚಟುವಟಿಕೆಗಳ ಮೇಲೂ ಈಕೆ ಹಿಡಿತ ಸಾಧಿಸಿದ್ದಳು. ಇದಕ್ಕೆ ಸಹಕಾರಿಯಾಗಿ ಇವಳಲ್ಲಿ ನೌಕಾಬಲ ಇತ್ತೇ ಎಂಬ ಪ್ರಶ್ನೆಗೆ ಉತ್ತರ ಸಾಧ್ಯವಿಲ್ಲ. ಒಂದು ರೀತಿಯ ಕಾವಲು ಪಡೆ ಇವಳಲ್ಲಿ ಇದ್ದಿರಬಹುದು. ಯಾವುದೇ ರೀತಿಯ ಸಮಸ್ಯೆಯನ್ನೂ ಎದುರಿಸಬಲ್ಲ ಛಾತಿ ಇವಳಲ್ಲಿ ಇತ್ತು. ಆಳುಪರಿಗೆ ಸಮುದ್ರದ ಮೇಲಿನ ಹಿಡಿತ ಅನಾದಿ ಕಾಲದಿಂದಲೂ ಇತ್ತು. ಸಾಮ್ರಾಟರು ಯಾರೇ ಆಗಿರಲಿ ಆಳುಪರ ಈ ಶಕ್ತಿಗೆ ಕುತ್ತು ಬಂದಿರಲಿಲ್ಲ. ಹಾಗಾಗಿ ಅವರು ತಾವು ಸಮುದ್ರಾಧಿಪತಿ ಎಂದು ಕರೆದುಕೊಳ್ಳುವ ಅವಶ್ಯಕತೆ ಇರಲಿಲ್ಲ. ಆದರೆ ಬಲ್ಲ ಮಹಾದೇವಿಯ ಕಾಲಕ್ಕೆ ಪರಿಸ್ಥಿತಿ ಬದಲಾಗಿರಬೇಕು. ಇದು ತೀರ ಪ್ರದೇಶದಲ್ಲಿ ನಡೆಯುತ್ತಿದ್ದ ವ್ಯಾಪಾರ ಮತ್ತು ವಾಣಿಜ್ಯ ವ್ಯವಹಾರಗಳಿಗೆ ತೊಡಕನ್ನು ಉಂಟು ಮಾಡಿರಬೇಕು. ಇದರ ನಿವಾರಣೆಗಾಗಿ ಬಲ್ಲಮಹಾದೇವಿ ಸಮುದ್ರದ ಮೇಲಿನ ಚಟುವಟಿಕೆಗಳ ಮೇಲೆ ನಿಗಾವಹಿಸಲು ತನಗಿದ್ದ ಅಧಿಕಾರವನ್ನು ಸ್ಪಷ್ಟಪಡಿಸಿದಳು ಎಂದು ಕಾಣುತ್ತದೆ.
ಎದುರಾದ ಸಮಸ್ಯೆ
ತನ್ನ ಆಳ್ವಿಕೆಯ ಮಧ್ಯ ಕಾಲದಲ್ಲಿ ಬಲ್ಲಮಹಾದೇವಿ ಒಂದು ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಯಿತು. ತನ್ನ ಪತಿಯ ಸೋದರಿಯ ಮಗ ಬಂಕಿದೇವನು ಆವರೆವಿಗೂ ಒರ್ವ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದವನು ತಾನೂ ರಾಜನಾಗಬೇಕೆಂಬ ಆಸೆಯಿಂದ ರಾಜ್ಯದ ಮೇಲೆ ತನ್ನ ಹಕ್ಕನ್ನು ಪ್ರತಿಪಾದಿಸಲು ಪ್ರಾರಂಭಿಸಿದನು೪೪ ಅಷ್ಟರವರೆಗೂ ಮಕ್ಕಳ ಕಟ್ಟು ಅಂದರೆ ತಂದೆಯಿಂದ ಮಗನಿಗೆ ಅಧಿಕಾರ ಹಸ್ತಾಂತರ ನಿಯಮವನ್ನು ಪಾಲಿಸಿದ್ದ. ಅಳುಪ ವಂಶಕ್ಕೆ ಬಂಕಿದೇವನ ಆಗ್ರಹ ಹೊಸ ತಲೆನೋವಾಯಿತು. ಸೋದರಿಯ ಮಗನಿಗೆ ಹಕ್ಕು ಇದೆ ಎಂಬುದು ಅನೂಚಾನವಾಗಿ ಆಳುಪ ವಂಶದಲ್ಲಿ ನಡೆದು ಬಂದ ಪದ್ಧತಿಯಲ್ಲಿ ಇಲ್ಲದಿದ್ದರೂ ಸಮಾಜದ ಹಲವು ವರ್ಗಗಳಲ್ಲಿ ಈ ಪದ್ಧತಿ ಇದ್ದುದು ಇಲ್ಲೂ ಪ್ರಭಾವ ಬೀರಿತ್ತು೪೫ ಅನವಶ್ಯಕ ಬಲ ಪ್ರಯೋಗಕ್ಕೆ ಎಡೆಕೊಡದೆ ಅತ್ಯಂತ ಸಹನೆ ಮತ್ತು ಜಾಣ್ಮೆಯಿಂದ ಬಲ್ಲಮಹಾದೇವಿ ಈ ಸಮಸ್ಯೆಯನ್ನು ಬಗೆಹರಿಸಿದಳು. ರಾಜ್ಯವನ್ನು ಎರಡು ಭಾಗ ಮಾಡಿ ದಕ್ಷಿಣದ ಮಂಗಳೂರು ಭಾಗವನ್ನು ಬಂಕಿದೇವನಿಗೂ ಉತ್ತರದ ಬಾರಕೂರು ಭಾಗವನ್ನು ತನ್ನ ಮಗ ನಾಗದೇವನಿಗೂ ಹಂಚಿ ರಾಜ್ಯದ ಶಾಂತಿಯನ್ನು ಕಾಪಾಡಿದಳು೪೬ ಹೀಗೆ ಸಕಾಲದಲ್ಲಿ ಕ್ಲಿಷ್ಟ ಮತ್ತು ಸೂಕ್ಷ್ಮವಾಗಿದ್ದ ಸಮಸ್ಯೆಯನ್ನು ಬಗೆಹರಿಸುವ ಮೂಲಕ ತಾನೋರ್ವ ಚತುರಮತಿ ಮುತ್ಸದ್ದಿ ಎಂಬುದನ್ನು ತೋರಿಸಿಕೊಟ್ಟಳು; ಅಷ್ಟೇ ಅಲ್ಲ ಅರಮನೆ ಯೊಳಗಿನ ಕಲಹ ಹೊರಗೆ ಹೋಗದಂತೆ ನೋಡಿ ಕೊಂಡಳು. ಇದು ಅವಳ ಧೀಮಂತ ವ್ಯಕ್ತಿತ್ವವನ್ನು ಸಾರುತ್ತದೆ.
ಸ್ಥಳೀಯ ಆಚಾರ, ವಿಚಾರ, ನಡಾವಳಿ, ಜವಾಬ್ದಾರಿ ಮತ್ತು ಹಕ್ಕುಗಳನ್ನು ಸರಿಯಾಗಿ ಅರ್ಥೈಸಿಕೊಂಡು ಅವಕ್ಕೆ ಸೂಕ್ತವಾಗಿ ಮತ್ತು ಸಮಯಕ್ಕೆ ತಕ್ಕಂತೆ ಸ್ಪಂದಿಸುವ ಕಲೆ ಸ್ಥಳೀಯರಿಗೆ ಹೆಚ್ಚು ಸಿದ್ಧಿಸಿರುತ್ತದೆಯೇ ಹೊರತು ಅನ್ಯರಿಗೆ ಅಲ್ಲ. ಬಲ್ಲಮಹಾದೇವಿ ‘ಅಳಿಯ ಕಟ್ಟು ಮತ್ತು ‘ಮಕ್ಕಳ ಕಟ್ಟು ಎರಡನ್ನೂ ರಾಜಕೀಯವಾಗಿ ತೂಗಿ ನೋಡಿ ದೀರ್ಘವಾಗಿ ಬೆಳೆದಿದ್ದ ಆಳುಪ ವಂಶದ ಘನತೆ ಗೌರಗಳಿಗೆ ಕುಂದು ಬಾರದ ರೀತಿಯಲ್ಲಿ, ಸಮಾಜದಲ್ಲಿ ಸಂಘರ್ಷ ಮನೋಭಾವ ಮೂಡದ ರೀತಿಯಲ್ಲಿ, ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ ಸಲುವಾಗಿ ದಿಟ್ಟ ನಿರ್ಧಾರ ಕೈಗೊಂಡಳು. ಇದು ಆಕೆಯಲ್ಲಿ ರಕ್ತಗತವಾಗಿದ್ದ ಗುಣದ ಸಂಕೇತ. ಈ ನಿಟ್ಟಿನಲ್ಲಿ ಯೋಚಿಸಿದರೆ ಬಲ್ಲಮಹಾದೇವಿ ತುಳುನಾಡಿನವಳೇ ಆಗಿರಬೇಕು ಎಂಬ ಅನುಮಾನ ಬಲವತ್ತರ ವಾಗುತ್ತದೆ.
‘ಮಕ್ಕಳಕಟ್ಟು ಮತ್ತು ‘ಅಳಿಯಕಟ್ಟು ಈ ಎರಡೂ ಪದ್ಧತಿಗಳು ಕರಾವಳಿಯಲ್ಲಿ ಪ್ರಾಯಶಃ ಕ್ರಿಸ್ತ ವರ್ಷದ ಆರಂಭದಿಂದಲೇ ಬೆಳೆದುಬಂದ ಪದ್ಧತಿಗಳು. ‘ಮಕ್ಕಳ ಕಟ್ಟು ಆಚರಣೆ ಇರುವ ವರ್ಗಗಳಲ್ಲಿ ಆಸ್ತಿ ಮತ್ತು ಅಧಿಕಾರದ ಹಕ್ಕುಗಳು ತಂದೆಯಿಂದ ಮಗನಿಗೆ ಅನೂಚಾನವಾಗಿ ಬರುತ್ತಿತ್ತು. ಅಳಿಯಕಟ್ಟಿನಲ್ಲಿ ಈ ಹಕ್ಕು ಸೋದರಳಿಯ ಅಂದರೆ ಮಗಳ ಮಗನಿಗೆ ಹೋಗುತ್ತಿತ್ತು. ತುಳುನಾಡಿನಲ್ಲಿ ಈಗಲೂ ಈ ಪದ್ಧತಿ ಕೆಲವು ವರ್ಗಗಳಲ್ಲಿ ರೂಢಿಯಲ್ಲಿದೆ. ಆದರೆ ಪ್ರಾಚೀನ ರಾಜಮನೆತನವಾದ ಆಳುಪರಲ್ಲಿ ಮಕ್ಕಳಕಟ್ಟು ರೂಢಿಯಲ್ಲಿತ್ತು. ಬಂಕಿದೇವನ ಬೇಡಿಕೆಯಿಂದಾಗಿ ಅಳಿಯಕಟ್ಟಿನ ಹಕ್ಕಿಗೂ ಒಮ್ಮೆ ಮನ್ನಣೆ ದೊರೆಯುವಂತಾಯಿತು. ಆದರೆ ಅಳಿಯ ಬಂಕಿದೇವನ ನಂತರ ಪಟ್ಟಕ್ಕೆ ಬಂದುದು ಆತನ ಮಗ ಸೋಯಿದೇವ೪೭ ಈ ದೃಷ್ಟಿಯಲ್ಲಿ ಬಲ್ಲಮಹಾದೇವಿಯ ಕ್ರಮವನ್ನು ಅವಲೋಕಿಸಿದರೆ ಆಕೆ ಮಾಡಿದುದು ಕೇವಲ ಆಸ್ತಿ (ರಾಜ್ಯ) ವಿಭಜನೆ. ಇದರಿಂದ ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆಗಳನ್ನು ಕಾಪಾಡಿಕೊಂಡು ಬರಲು ಆಕೆಗೆ ಸಾಧ್ಯವಾಯಿತು. ಪ್ರಾಯಶಃ ಈಕೆ ಕ್ರಿ.ಶ.೧೨೯೨ರಲ್ಲಿ ಸ್ವರ್ಗಸ್ತಳಾದಳು. ಆಳುಪ ರಾಜ್ಯ ಕಮರುವುದಕ್ಕೆ ಮುನ್ನ ಬೆಳಗಿದ ತುಳುನಾಡ ಜ್ಯೋತಿ ಬಲ್ಲಮಹಾದೇವಿ.
ವೀರ ಚಿಕ್ಕಾಯಿತಾಯಿ
ಶಾಸನಗಳು ಈಕೆಯನ್ನು ವೀರ ಚಿಕ್ಕಾಯಿತಾಯಿ ಮತ್ತು ವೀರ ಕಿಕ್ಕಾಯಿತಾಯಿ ಎಂದು ಹೆಸರಿಸಿವೆ೪೮ ಈಕೆ ಆಳುಪ ರಾಜಕುಮಾರಿ ಮತ್ತು ಹೊಯ್ಸಳ ಚಕ್ರವರ್ತಿ ಮೂರನೆಯ ಬಲ್ಲಾಳನ ಪಟ್ಟದ ಪಿರಿಯರಸಿ೪೯ ಹೊಯ್ಸಳ ಚಕ್ರವರ್ತಿಯು ಆಳುಪ ಸೋಯಿದೇವನನ್ನು ಒಮ್ಮೆ (ಕ್ರಿ.ಶ.೧೩೧೮-೧೯ರಲ್ಲಿ) ಯುದ್ಧದಲ್ಲಿ ಸೋಲಿಸಿದ್ದ೫೦ ಆನಂತರ ಕ್ರಿ.ಶ.೧೩೩೩ರಲ್ಲಿ ತುಳುನಾಡಿನಮೇಲೆ ಧಾಳಿ ಮಾಡಿದ. ಪ್ರಾಯಶಃ ಈ ಸಂದರ್ಭದಲ್ಲಿ ಸೋಯಿದೇವ ಯುದ್ಧ ಮಾಡುವ ಬದಲು ಸ್ನೇಹ ಸಂಪಾದಿಸುವ ಸಲುವಾಗಿ ತನ್ನ ತಂಗಿಯಾದ ಚಿಕ್ಕಾಯಿ ತಾಯಿಯನ್ನು ವೀರ ಬಲ್ಲಾಳನಿಗೆ ಮದುವೆ ಮಾಡಿಕೊಟ್ಟ. ಇದು ಆಳುಪ-ಹೊಯ್ಸಳ ಮಧುರ ಸಂಬಂಧಕ್ಕೆ ದಾರಿ ಮಾಡಿಕೊಟ್ಟಿತು. ಆದರೆ ವೀರ ಬಲ್ಲಾಳ ಮಾತ್ರ ಈ ಕರಾವಳಿ ಪ್ರದೇಶವನ್ನು ತನ್ನ ವಶ ಇರಿಸಿಕೊಳ್ಳುವ ತೀರ್ಮಾನ ಮಾಡಿದ. ತನ್ನ ಪಟ್ಟದ ರಾಣಿ ಚಿಕ್ಕಾಯಿ ತಾಯಿಯನ್ನೇ ಈ ಭಾಗದ ಆಡಳಿತಾಧಿಕಾರಿಯಾಗಿ ನೇಮಿಸಿದ. ಬಾರಕೂರು ಹೊಯ್ಸಳರ ಕರಾವಳಿ ಭಾಗದ ರಾಜಧಾನಿ ಆಯಿತು೫೧ ಆಳುಪರು ಅಧಿಕಾರ ಕಳೆದುಕೊಳ್ಳದಿದ್ದರೂ ಅವಸಾನದ ಅಂಚಿಗೆ ದೂಡಲ್ಪಟ್ಟರು. ರಾಜಕೀಯವಾಗಿ ಸಂದಿಗ್ಧ ಮತ್ತು ಮಹತ್ತಾದ ಕಾಲವೊಂದರಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುವ ಜವಾಬ್ದಾರಿ ಚಿಕ್ಕಾಯಿ ತಾಯಿಯದಾಯಿತು. ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ ಕ್ರಿ.ಶ.೧೩೩೩ರಿಂದ ೧೩೪೮ರ ವರೆಗೆ ಈ ಕಾರ್ಯವನ್ನು ಈಕೆ ಯಶಸ್ವಿಯಾಗಿ ನಿಭಾಯಿಸಿದಳು.
ಎದುರಾದ ಸಂದಿಗ್ಧತೆ
ಚಕ್ರವರ್ತಿಯ ಕೈಹಿಡಿದು ಆನಂತರ ತುಳು ರಾಜ್ಯಕ್ಕೆ ಅಧಿಪತಿಯಾಗಿ ಬಂದಾಗ ಚಿಕ್ಕಾಯಿ ತಾಯಿ ಹಲವು ಸಂದಿಗ್ಧತೆಗಳನ್ನು ಎದುರಿಸಬೇಕಾಯಿತು. ಆಳುಪ ರಾಜ್ಯ ತನ್ನ ತವರು; ಅದರ ಮೇಲೆ ಹೊಯ್ಸಳರ ಆಧಿಪತ್ಯವನ್ನು ಸ್ಥಾಪಿಸಿದ್ದು ತನ್ನ ಪತಿ ವೀರಬಲ್ಲಾಳ, ದೈವ ಲೀಲೆ ಅದರ ಆಡಳಿತದ ಜವಾಬ್ದಾರಿ ಚಿಕ್ಕಾಯಿತಾಯಿ ಹೆಗಲಿಗೆ ಬಂದುದು. ಈ ಜವಾಬ್ದಾರಿ ಈಕೆಗೆ ಮದುವೆ ಆದ ಕೂಡಲೇ ಬಂದುದರ ಸಾಧ್ಯತೆ ಬಹಳ ಕಡಿಮೆ. ಆದರೆ ಕೆ.ವಿ. ರಮೇಶ ಅವರ ಪ್ರಕಾರ೫೨ ಮೇಲೆ ಹೇಳಿದಂತೆ ಆಳುಪ ಸೋಯಿದೇವ ಈ ವಿವಾಹವನ್ನು ೧೩೩೩ರ ಆಸುಪಾಸಿನಲ್ಲಿ ಜರುಗಿಸಿದ. ಈ ಬಗ್ಗೆ ಸ್ವಲ್ಪ ಚರ್ಚೆ ಅಗತ್ಯ ಎನಿಸುತ್ತದೆ.
ಹೊಯ್ಸಳ ಮೂರನೆಯ ಬಲ್ಲಾಳನು ಕ್ರಿ.ಶ.೧೩೧೮-೧೯ರಲ್ಲಿ ಆಳುಪ ಸೋಯಿದೇವನ ರಾಜ್ಯದ ಮೇಲೆ ಧಾಳಿ ನಡೆಸಿ ಜಯಶೀಲನಾಗಿದ್ದ. ಇದರಿಂದ ತನ್ನ ರಾಜ್ಯವನ್ನೇನೂ ಕಳೆದುಕೊಳ್ಳದಿದ್ದರೂ ಪ್ರಬಲ ಶಕ್ತಿಯೊಂದರ ವಿರುದ್ಧ ಹಗೆತನ ಸಾಧಿಸುವ ಶಕ್ತಿ ಸೋಯಿದೇವನಿಗಿರಲಿಲ್ಲ ಎಂದು ಕಾಣುತ್ತದೆ. ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಈತ ಅನುಸರಿಸಿದ ಮಾರ್ಗ ವೈವಾಹಿಕ ಸಂಬಂಧ ಕಲ್ಪಿಸುವುದು. ಈ ರೀತಿಯ ವೈವಾಹಿಕ ಸಂಬಂಧಗಳನ್ನು ಆಳುಪರು ಚಕ್ರವರ್ತಿ ವಂಶಗಳೊಂದಿಗೆ ಹೊಂದಿದ್ದನ್ನು ಮೇಲೆ ನೋಡಿದ್ದೇವೆ. ಸೋಯಿದೇವ ಅನುಸರಿಸಿದ ನೀತಿ ಅದೇ ಆಗಿದೆ. ಪ್ರಾಯಶಃ ಈ ವಿವಾಹ ಸಂಬಂಧ ಕ್ರಿ.ಶ.೧೩೧೯-೨೦ರ ಆಸುಪಾಸಿನಲ್ಲಿ ನೆರವೇರಿರಬೇಕು. ಇದರ ರಕ್ಷೆಯಲ್ಲಿ ಸ್ವಲ್ಪ ಕಾಲ ಸೋಯಿದೇವ ನಿಶ್ಚಿಂತನಾಗಿದ್ದ. ಆದರೆ ಕ್ರಿ.ಶ.೧೩೩೦ರ ವೇಳೆಗೆ ಈ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದು ಕರಾವಳಿಯ ಮೇಲೆ ನೇರ ಆಳ್ವಿಕೆ ಸ್ಥಾಪಿಸುವಂತೆ ಹೊಯ್ಸಳ ವೀರಬಲ್ಲಾಳನನ್ನು ಪ್ರೇರೇಪಿಸಿದೆ. ಇದರ ಕುರುಹಾಗಿ ಕರಾವಳಿಯಲ್ಲಿ ಹೊಯ್ಸಳ ಶಾಸನಗಳು ಕ್ರಿ.ಶ.೧೩೩೩ ರಿಂದ ಕಾಣಿಸಿಕೊಳ್ಳಲು ಪ್ರಾರಂಭಿಸಿವೆ. ಅಷ್ಟೇ ಅಲ್ಲ ಆಳುಪ ಪ್ರಶಸ್ತಿಗಳಾದ ‘ಪಾಂಡ್ಯ ಚಕ್ರವರ್ತಿ, ‘ಅರಿರಾಯ ಬಸವ ಶಂಕರ ಮತ್ತು ‘ರಾಯ ಗಜಾಂಕುಶ-ಇವು ಅಂದಿನಿಂದ ಹೊಯ್ಸಳರಿಗೂ ಲಭ್ಯವಾದವು೫೩ ಆ ವೇಳೆಗೆ ಸುಮಾರು ಒಂದು ದಶಕದ ಕಾಲ ವೈವಾಹಿಕ ಜೀವನ ನಡೆಸಿದ್ದ ಚಿಕ್ಕಾಯಿತಾಯಿ ಆಡಳಿತದ ಜವಾಬ್ದಾರಿ ಹೊರಲು ಸಿದ್ಧವಾಗಿದ್ದಳು. ಹೊಯ್ಸಳ ವೀರಬಲ್ಲಾಳನಿಗೂ ತನ್ನ ರಾಣಿಯ ಶಕ್ತಿ ಮತ್ತು ನಿಷ್ಠೆಯ ಬಗ್ಗೆ ಅಪಾರವಾದ ನಂಬಿಕೆ ಇದ್ದ ಕಾರಣ ಅವಳನ್ನೆ ಕರಾವಳಿಯಂತಹ ಸೂಕ್ಷ್ಮ ಪ್ರದೇಶಕ್ಕೆ ಅಧಿಪತಿ ಆಗಿ ನೇಮಿಸಿದ.
ಡಿರೆಟ್ಟನ ಆಕ್ಷೇಪಣೆ
ಹೊಯ್ಸಳ ಇತಿಹಾಸವನ್ನು ರಚಿಸಿರುವ ಬ್ರಿಟಿಶ್ ಇತಿಹಾಸಕಾರರ ಡಂಕನ್ ಎಂ. ಡಿರೆಟ್ ಚಿಕ್ಕಾಯಿ ತಾಯಿಯ ಮೇಲೆ ಒಂದು ಆರೋಪ ಹೊರೆಸಿದ್ದಾನೆ. ಹೊಯ್ಸಳ ವೀರ ಬಲ್ಲಾಳ ಈಕೆಯ ಹಲವು ಪತಿಗಳಲ್ಲಿ ಒಬ್ಬನಿರಬಹುದು ಎಂಬುದು ಈತನ ಆರೋಪ೫೪ ಇದನ್ನು ಅಳಿಯ ಸಂತಾನ ಕಟ್ಟಿನ ಆಧಾರದಲ್ಲಿ ಮಾಡಿದ್ದಾನೆ. ಈ ಆರೋಪದಲ್ಲಿ ಹುರುಳಿಲ್ಲ ಎಂಬುದನ್ನು ಕೆ.ವಿ. ರಮೇಶ ಸಿದ್ಧಪಡಿಸಿದ್ದಾರೆ೫೫.
ಚಿಕ್ಕಾಯಿತಾಯಿ ಬಾರಕೂರಿಗೆ ಆಡಳಿತದ ಜವಾಬ್ದಾರಿ ಹೊತ್ತು ಬರುವ ವೇಳೆಗೆ ಮಗ ಕುಲಶೇಖರನಿಗೆ ಜನ್ಮ ನೀಡಿದ್ದಳು. ಈತ ತನ್ನ ಕೊನೆಗಾಲದವರೆಗೆ ತಾಯಿಯ ಜೊತೆಯಲ್ಲಿದ್ದ. ಚಿಕ್ಕಾಯಿತಾಯಿ ಇಲ್ಲಿಗೆ ಬಂದ ಕೆಲವೇ ವರ್ಷಗಳಲ್ಲಿ ಪ್ರಬಲವಾದೊಂದು ಹೊಸ ರಾಜ್ಯ ವೀರ ಬಲ್ಲಾಳನ ಆಶೀರ್ವಾದದೊಂದಿಗೆ ಹುಟ್ಟಿದ್ದನ್ನು (ಕ್ರಿ.ಶ.೧೩೩೬ರಲ್ಲಿ) ಕಂಡಳು. ಕೆಲವೇ ವರ್ಷಗಳಲ್ಲಿ ಇದರ ಅಧಿಕಾರ ಇಡೀ ಕರಾವಳಿಯನ್ನು ಆವರಿಸಿತು. ಮಂಗಳೂರು ಮತ್ತು ಬಾರಕೂರು ರಾಜ್ಯಗಳೆಂಬ ಎರಡು ಆಡಳಿತ ಭಾಗಗಳು ಇಲ್ಲಿ ಹುಟ್ಟಿಕೊಂಡವು. ಹೊಸ ರಾಜಕೀಯ ಪರಿಸ್ಥಿತಿಗೆ ಚಿಕ್ಕಾಯಿ ತಾಯಿ ಬಲು ಬೇಗ ಹೊಂದಿಕೊಂಡಳು. ಆದರೆ ದುರ್ವಿಧಿ ತನ್ನ ಗಂಡನನ್ನು ಕಳೆದುಕೊಳ್ಳುವಂತೆ ಮಾಡಿತು. ಹೊಯ್ಸಳ ವೀರಬಲ್ಲಾಳ ಕ್ರಿ.ಶ.೧೩೪೨ರಲ್ಲಿ ನಡೆದ ಮಧುರೆಯ ಯುದ್ಧದಲ್ಲಿ ಮೋಸದಿಂದ ಕೊಲೆಯಾದ೫೬ ಮಗನ ರಕ್ಷಣೆ ಮತ್ತು ನಷ್ಟವನ್ನು ಸಾವರಿಸಿಕೊಂಡು ಕ್ರಿ.ಶ.೧೩೪೮ರ ವರೆಗೆ ರಾಜ್ಯವಾಳಿದಳು. ಕ್ರಿ.ಶ.೧೩೪೪ ರಲ್ಲಿ ಮಗ ಕುಲಶೇಖರನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ರಾಜ್ಯವನ್ನು ಜಂಟಿಯಾಗಿ ಆಳಿದಳು. ಕೆ.ವಿ. ರಮೇಶ ಅವರ ಪ್ರಾಕಾರ ಪ್ರಾಯಶಃ ಈಕೆ ಕ್ರಿ.ಶ.೧೩೫೦ರಲ್ಲಿ ಮರಣ ಹೊಂದಿದಳು ಮತ್ತು ತನ್ನ ತಾಯಿ ಗತಿಸಿದ ನಂತರ ಕುಲಶೇಖರ ಹೆಚ್ಚು ಕಾಲ ರಾಜ್ಯವಾಳಲಿಲ್ಲ೫೭ ಘಟ್ಟದ ಮೇಲಣ ಸ್ಥಳಗಳಲ್ಲಿ ಹೊಯ್ಸಳ ಇತಿಹಾಸ ವೀರಬಲ್ಲಾಳನ ಮರಣದೊಂದಿಗೆ ಮುಕ್ತಾಯಗೊಂಡರೆ ಕರಾವಳಿಯಲ್ಲಿ ಅದು ಕುಂಟುತ್ತಾ ಸಾಗಿದ್ದು ಕ್ರಿ.ಶ.೧೩೫೦ರ ವೇಳೆಗೆ ಕೊನೆಯುಸಿರೆಳೆಯಿತು.
ವಿಚಕ್ಷಣ ಮನೋವೃತ್ತಿ
ಹಲವು ಸಾಧನೆಗಳ ಹಿನ್ನೆಲೆಯ ವಂಶದಿಂದ ಬಂದ ಚಿಕ್ಕಾಯಿತಾಯಿ ಚತುರಮತಿ ರಾಜಕುವರಿಯಾಗಿ, ಪ್ರೀತಿಯ ಪಟ್ಟದರಸಿಯಾಗಿ, ರಾಜನೀತಿಜ್ಞೆಯಾಗಿ ಮತ್ತು ರಾಜ ಮಾತೆಯಾಗಿ ಮೆರೆದಿದ್ದಾಳೆ. ಆಡಳಿತದ ಜವಾಬ್ದಾರಿ ಹೊತ್ತು ಕರಾವಳಿಗೆ ಬಂದಾಗ ಆಕೆಯ ಮಗ ಇನ್ನೂ ಬಾಲಕ. ಈತನ ಲಾಲನೆ, ಪಾಲನೆ ಮತ್ತು ವಿದ್ಯಾಭ್ಯಾಸ ಹೇಗಾಯಿತು ಎಂಬುದರ ಬಗ್ಗೆ ಮಾಹಿತಿ ಇಲ್ಲದಿದ್ದರೂ ರಾಣಿ ಈ ಬಗ್ಗೆ ಸೂಕ್ತವಾದ ಏರ್ಪಾಟು ಮಾಡಿದ್ದಿರಬೇಕು. ಬಾರಕೂರಿನಲ್ಲಿ ಹೊಯ್ಸಳ ಸೈನಿಕ ನೆಲೆಯನ್ನು ಸ್ಥಾಪಿಸಿ ಅದರ ಉಸ್ತುವಾರಿಯನ್ನು ವೀರಬಲ್ಲಾಳನೇ ನೋಡಿಕೊಂಡಿದ್ದುದು೫೮ ಚಿಕ್ಕಾಯಿತಾಯಿಗೆ ಹೆಚ್ಚು ಶಕ್ತಿ ನೀಡಿತ್ತು. ಈಕೆ ಬಹಳ ಎಚ್ಚರಿಕೆಯಿಂದ ಹೊಯ್ಸಳ-ಆಳುಪ ಸಂಬಂಧವನ್ನು ಕಾಯ್ದುಕೊಂಡಳು. ಎರಡೂ ವಂಶಗಳು ಇಲ್ಲಿ ತಮ್ಮ ಗೌರವಯುತ ಸ್ವತಂತ್ರ ಸ್ಥಾನ-ಮಾನಗಳನ್ನು ರಕ್ಷಿಸಿಕೊಂಡು ಬಾಳುವಂತೆ ನೋಡಿಕೊಂಡಳು. ಇದು ಅವರ ಶಾಸನಗಳಿಂದ ವ್ಯಕ್ತವಾಗುತ್ತದೆ೫೯ ಈ ನಿಟ್ಟಿನಲ್ಲಿ ಚಿಕ್ಕಾಯಿತಾಯಿ ಕೈಗೊಂಡ ಒಂದು ನಿರ್ಧಾರ ಬಹಳ ಮುಖ್ಯವಾದುದು. ಈ ವಿಷಯವನ್ನು ತಿಳಿಸುವ ಶಿಲಾ ಶಾಸನವೊಂದು ಕುಂದಾಪುರ ತಾಲ್ಲೂಕಿನ ಬಿಜೂರು ಗ್ರಾಮದಲ್ಲಿ ದೊರೆತಿದೆ.೬೦
ಇದೊಂದು ಹೊಸ ಶಾಸನ. ಇತ್ತೀಚೆಗೆ ನನ್ನ ಅನ್ವೇಷಣಾ ಕಾರ್ಯ ಸಮಯದಲ್ಲಿ ದೊರೆತುದು೬೧. ಇದರ ಕಾಲ ಕ್ರಿ.ಶ.೧೩೩೫ ಡಿಸೆಂಬರ್ ೧೦ ಆದಿವಾರ. ಇದರ ಲಿಪಿ ಮತ್ತು ಭಾಷೆ ಕನ್ನಡ. ಈ ಶಾಸನ “ಶ್ರೀ ಮತ್ಪಾಂಡ್ಯ ಚಕ್ರವರ್ತಿ ಅರಿರಾಯ ಬಸವ ಸಂಕರ ರಾಯಗಜಾಂಕುಸ ಶ್ರೀಮತು ಪ್ರ(ತಾಪ ಚಕ್ರವರ್ತಿ) ಹೊಯಿಸಣ ಬೀರ ಬಲ್ಲಾಳ ದೇವರ್ಸ(ರ) ಪಟ್ಟದ ಪಿರಿಯರಸಿ ಚಿಕ್ಕಾಯಿ ತಾಯಿಗಳ ಶ್ರೀ ಪಾದ ಸಂನ್ನಿಧಿಯಲು೬೨ ಎಂದು ನೇರವಾಗಿ ಚಿಕ್ಕಾಯಿ ತಾಯಿಯ ಆಳ್ವಿಕೆಯನ್ನು ಉಲ್ಲೇಖಿಸಿದೆ. ಈಕೆಯ ಆಸ್ಥಾನದಲ್ಲಿ ಮಹಾ ಪ್ರಧಾನ ವಯಿಜಪ್ಪ ದಂಣಾಯಕ, ಅಜ್ಜಂಣ ಸಹಾಣಿ, ಸಮಸ್ತ ಪ್ರಧಾನರು, ಎರಡು ಕೋಲ ಬಳಿಯವರು, ಬಾಹತ್ತರ ನಿಯೋಗಿಗಳು ಮುಂತಾಗಿ೬೩ ನೆರೆದಿದ್ದ ಸಮಸ್ತರ ಸಮ್ಮುಖದಲ್ಲಿ “ವೀರ ಬಸವಿ ದೆವರ್ಸರ ರಾಣಿವಾಸ (ಹೆಸರು ನಷ್ಟವಾಗಿದೆ) ದೇವಿಯರ ಕುಮಾರ ಬೆಮಕೋವ ದೇವರಸರಿಗೆ’’ ೧೨೦ ಮುಡಿ ಭೂಮಿಯನ್ನು ಧಾರೆ ಯೆರೆದು ಕೊಟ್ಟಳು೬೪. ಇದರ ಉತ್ಪತ್ತಿಯಲ್ಲಿ ವರ್ಷಂಪ್ರತಿ ಆರು (೬) ಗದ್ಯಾಣ ಹೊಂನನ್ನು ಕೋಟೀಸ್ವರ ದೇವರ ನಂದಾ ಬೆಳಕಿಗೆ ಕೊಡಬೇಕೆಂದು ಕಟ್ಟು ಮಾಡಲಾಯಿತು೬೫. ಈ ಭೂ ದಾನವನ್ನು ‘ಸರ್ವಮಾಂನ್ಯ (ಸಂಪೂರ್ಣ ತೆರಿಗೆ ರಹಿತ) ಎಂದು ಘೋಷಿಸಿದಳು೬೬.
ಇಲ್ಲಿ ಗಮನಿಸಬೇಕಾದ ಒಂದು ಮುಖ್ಯ ಅಂಶವೆಂದರೆ-ವೀರ ಬಸವಿ ದೇವರಸ, ಆತನ ರಾಣಿ ಮತ್ತು ಮಗ ಬೆಂಕೋವ ದೇವರ್ಸನ ಪ್ರಸ್ತಾಪ ಮತ್ತು ಚಿಕ್ಕಾಯಿ ತಾಯಿ ಬೆಂಕೋವ ದೇವರಸನಿಗೆ ಮಾಡಿದ ಭೂದಾನ. ಕ್ರಿ.ಶ.೧೩೧೮-೧೯ರಲ್ಲಿ ನಡೆದ ಹೊಯ್ಸಳ-ಆಳುಪ ಯುದ್ಧದಲ್ಲಿ ಆಳುಪ ಅಧಿಕಾರಿ ಚಂದಾವರದ ವೀರ ಬಸವಿ ದೇವರಸನು ಹೊಯ್ಸಳ ವೀರ ಬಲ್ಲಾಳನ ವಿರುದ್ಧ ಯುದ್ಧ ಮಾಡಿದ್ದನು೬೭. ಬಿಜೂರಿನ ಶಾಸನ ಕಾಲಕ್ಕೆ ಈತ ಮರಣ ಹೊಂದಿದ್ದ ಎಂದು ಕಾಣುತ್ತದೆ. ಅಲ್ಲದೆ ಈತನ ರಾಣಿ ಮತ್ತು ಮಗ ಚಂದಾವರದಲ್ಲಿ ತಮ್ಮ ಅಸ್ಥಿತ್ವ ಕಳೆದುಕೊಂಡಿದ್ದರೆಂದೂ ತೋರುತ್ತದೆ. ಈ ಭಾಗದ ಅಧಿಕಾರ ಹೊಯ್ಸಳರ ಪಾಲಾದಾಗ ಬೆಂಕೋವ ದೇವ ಮತ್ತು ಆತನ ತಾಯಿ ಚಿಕ್ಕಾಯಿ ತಾಯಿಗೆ ಶರಣಾಗಿ ಆಶ್ರಯ ಬೇಡಿರಬೇಕು. ಹೊಯ್ಸಳ ರಾಣಿ ತನ್ನ ಪತಿಯ ಹಳೆಯ ಹೆಗಯನ್ನು ಮನ್ನಿಸಿ ಅವನ ಸಂಸಾರಕ್ಕೆ ಆಶ್ರಯ ಕೊಟ್ಟು ತನ್ನ ಉದಾತ್ತ ಗುಣವನ್ನು ಪ್ರಕಟಪಡಿಸಿದಳು.
ಚಿಕ್ಕಾಯಿತಾಯಿ ಔದಾರ್ಯದ ಗಣಿಯಾಗಿದ್ದಳು ಎಂಬುದು ಅವಳ ಶಾಸನಗಳಿಂದ ತಿಳಿದುಬರುತ್ತದೆ೬೮. ಇಲ್ಲಿಯವರೆಗೆ ದೊರೆತಿರುವ ಅವಳ ಎಲ್ಲ ಶಾಸನಗಳೂ ದಾನ ಶಾಸನಗಳೇ ಆಗಿವೆ. ಬದಲಾದ ಪರಿಸ್ಥಿತಿಗೆ ಹೊಂದಿಕೊಂಡು ಅವಳು ನಡೆಸುತ್ತಿದ್ದ ರಾಜ ಕಾರ್ಯಗಳು ಅತ್ಯಂತ ಸಮರ್ಥ, ಸಕಾಲಿಕ ಮತ್ತು ಶ್ಲಾಘನೀಯವಾದುವು. ಇದಕ್ಕೆ ಮೇಲಿನದಲ್ಲದೆ ಇನ್ನೂ ಒಂದು ಉದಾಹರಣೆಯನ್ನು ಕೊಡಬಹುದು.
ಹೊಯ್ಸಳ ವೀರ ಬಲ್ಲಾಳನ ಆಶೀರ್ವಾದದೊಂದಿಗೆ ಪ್ರಬಲವಾದೊಂದು ರಾಜ್ಯ ಕ್ರಿ.ಶ.೧೩೩೬ರಲ್ಲಿ ಹುಟ್ಟಿ ಅದು ಶೀಘ್ರವಾಗಿ ಕರಾವಳಿಗೆ ಹರಡಿದ ವಿಚಾರ ಮೇಲೆ ಹೇಳಿದೆ. ಇದರಿಂದಾಗಿ ಬೇರಾವ ಪ್ರದೇಶದಲ್ಲೂ ಇಲ್ಲದಂತಹ ರಾಜಕೀಯ ಪರಿಸ್ಥಿತಿ ಕರಾವಳಿಯಲ್ಲಿ ಹುಟ್ಟಿಕೊಂಡಿತು. ಹೊಸದಾಗಿ ಬಂದ ವಿಜಯನಗರದ ಅಧಿಕಾರ ಆಮವೇಳೆಗಾಗಲೇ ಅಲ್ಲಿದ್ದ ಆಳುಪ ಮತ್ತು ಹೊಯ್ಸಳ ರಾಜ್ಯಗಳನ್ನು ತನ್ನ ತೆಕ್ಕೆಗೆ ಒಳಪಡಿಸಿಕೊಂಡಿತು. ಆದರೂ ಅವುಗಳ ಅಧಿಕಾರ ಮತ್ತು ಆಂತರಿಕ ಸ್ವಾತಂತ್ರ್ಯವನ್ನು ಮಾನ್ಯ ಮಾಡಿತು. ಅದುವರೆವಿಗೂ ತನಗಿದ್ದ ಸಾಮ್ರಾಟ ಸ್ಥಿತಿಗೆ ಇದರಿಂದ ಭಂಗ ಬಂದರೂ ಪರಿಸ್ಥಿತಿಯ ಅನಿವಾರ್ಯತೆಯನ್ನು ಅರ್ಥ ಮಾಡಿಕೊಂಡ ಚಿಕ್ಕಾಯಿತಾಯಿ ಅದಕ್ಕೆ ತಕ್ಕಂತೆ ನಡೆದುಕೊಂಡಳು. ವಿಜಯನಗರದೊಂದಿಗೆ ಸ್ನೇಹ ಮೆರೆದು ಮುಂದೆ ತನ್ನ ಪತಿ ಯುದ್ಧದಲ್ಲಿ ಮರಣ ಹೊಂದಿದ ನಂತರ ಅದರ ಸಾರ್ವಭೌಮತೆಯನ್ನು ಗೌರವಿಸಿದಳು. ಕ್ರಿ.ಶ.೧೩೪೬ರಲ್ಲಿ ಒಂದನೆಯ ಹರಿಹರನು ತನ್ನ ಪರಿವಾರ ಸಹಿತ ಶೃಂಗೇರಿಗೆ ಬಂದು ಅಲ್ಲಿನ ಮಠಕ್ಕೆ ದಾನ ಮಾಡಿದ ಸಂದರ್ಭದಲ್ಲಿ ಚಿಕ್ಕಾಯಿತಾಯಿಯು ಪುತ್ರ ಸಹಿತವಾಗಿ ಚಕ್ರವರ್ತಿಯನ್ನು ಭೇಟಿ ಮಾಡಿ ತಾನೂ ಶ್ರೀಮಠಕ್ಕೆ ಹಲವು ಗ್ರಾಮಗಳನ್ನು ದಾನ ಮಾಡಿದಳು೬೯. ಈಕೆ ದಾನ ಮಾಡಿದ ಗ್ರಾಮಗಳು ಸಾಂತಳಿಗೆ ನಾಡೊಳಗಿದ್ದುವು. ಈ ಭಾಗ ಚಿಕ್ಕಾಯಿತಾಯಿಯ ಆಳ್ವಿಕೆಗೆ ಒಳಪಟ್ಟಿತ್ತೆಂದು ಇದರಿಂದ ತಿಳಿಯುತ್ತದೆ.೭೦ ಅಲ್ಲದೆ ತುಂಗೆಯ ತಟದಲ್ಲಿದ್ದ ಪಾವನಕ್ಷೇತ್ರ ಶೃಂಗೇರಿ ಸಹ ಈಕೆಯ ಆಳ್ವಿಕೆಯ ಪ್ರದೇಶದೊಳಗೇ ಇತ್ತೆಂದು ಕಾಣುತ್ತದೆ. ಅತ್ಯಂತ ಪ್ರಾಚೀನ ಆಳುಪರ ಶಾಸನವೊಂದು ಇದರ ಸಮೀಪ ಇರುವ ಕಿಗ್ಗದಲ್ಲಿ ದೊರೆತಿದೆ.೭೧ ಅದು ಆಳುಪ ಗುಣಸಾಗರನು ಅಲ್ಲಿಯ ದೇವಾಲಯಕ್ಕೆ ಮಾಡಿದ ದಾನವನ್ನು ಉಲ್ಲೇಖಿಸುತ್ತದೆ. ಆಗ ಅವನೊಡನೆ ಅವನ ರಾಣಿ ಮಹಾದೇವಿ ಮತ್ತು ಮಗ ಚಿತ್ರವಾಹನರಿದ್ದರು. ಚಿಕ್ಕಾಯಿತಾಯಿ ಶೃಂಗೇರಿ ಮಠಕ್ಕೆ ಮಾಡಿದ ದಾನ ಹೊಯ್ಸಳ ನೆಲೆಯಲ್ಲಿ ಮಾಡಿದ್ದಾದರೂ ತನ್ನ ಮೂಲ ಆಳುಪ ನೆಲೆಯಲ್ಲಿ ಮಾಡಿದ ಕೊನೆಯ ದಾನ ಕಾರ್ಯವಾದುದು ವಿಚಿತ್ರವಾದುದು.
ಆಳುಪ ಅರಸು ಮನೆತನ ಒಂದು ಸಾವಿರ ವರ್ಷಕ್ಕೂ ಹೆಚ್ಚು ಕಾಲ ಕರಾವಳಿಯನ್ನಾಳಿದ ಒಂದು ಧೀಮಂತ ಮನೆತನ. ಇವರ ಎಲ್ಲ ಮಹಾನ್ ಸಾಧನೆಗಳ ಹಿಂದೆ ಇವರ ರಾಣಿಯರ ಮತ್ತು ರಾಜ ಕುವರಿಯರ ತ್ಯಾಗ ಮತ್ತು ಕರ್ತವ್ಯ ನಿಷ್ಠೆ ಇದ್ದು ಅದು ಈ ವಂಶವನ್ನು ಉತ್ತುಂಗಕ್ಕೇರಿಸಿದೆ.
[ಈ ಬಗ್ಗೆ ಕರಾವಳಿಯಲ್ಲಿ ನಾನು ಕೈಗೊಂಡ ಕ್ಷೇತ್ರ ಕಾರ್ಯದಲ್ಲಿ ನೆರವಾದ ಎಲ್ಲ ಮಹನೀಯರಿಗೆ ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ.]
ಆಧಾರಸೂಚಿ ಮತ್ತು ಟಿಪ್ಪಣಿಗಳು
೧.         ಕೆ.ವಿ. ರಮೇಶ, ಎ ಹಿಸ್ಟರಿ ಆಫ್ ಸೌತ್ ಕೆನರ, (೧೯೭೦), ಪುಟ ೧೨-೨೬.
೨.         ಅದೇ, ಪುಟ ೨೪-೨೫.
೩.         ಅದೇ, ಪುಟ ೩೫-೧೫೦.
೪.         ಪೊಳಲಿ ಶೀನಪ್ಪ ಹೆಗ್ಡೆ, ದಕ್ಷಿಣ ಕನ್ನಡ ಜಿಲ್ಲೆಯ ಚರಿತ್ರೆ ಮತ್ತು ಭೂತಾಳಪಾಂಡ್ಯರಾಯನ ಅಳಿಯಕಟ್ಟು, ಉಡುಪಿ, ೧೯೮೧ ದ್ವಿತೀಯ ಮುದ್ರಣ.
೫.         ಕೆ.ವಿ. ರಮೇಶ೧೯೭೦, ಪುಟ ೨೭-೩೪.
೬.         ಅದೇ, ಪುಟ ೩೧-೩೨ ಮತ್ತು ಎಂ.ಎ.ಆರ್. ೧೯೩೬, ಸಂಖ್ಯೆ ೧೬, ಪುಟ ೭೨.
೭.         oಠಿಠಿeಡಿ ಠಿಟಚಿಣe Iಟಿsಛಿಡಿiಠಿಣioಟಿs oಜಿ ಂಟಿಜಡಿಚಿ Pಡಿಚಿಜesh, oveಡಿಟಿmeಟಿಣ ಒuseum, ಊಥಿಜeಡಿಚಿbಚಿಜ (ಗಿoಟ-೧) ಇಜ-ಓ. ಖಚಿmeshಚಿಟಿ ಂ.P.ಉ. ಂ.S-, ಊಥಿಜeಡಿಚಿbಚಿಜ, ೧೯೬೨, Pಚಿge ೧೧-೩೯.
೮.         ಅದೇ.
೯.         ಅದೇ.
೧೦.      ಎಪಿಗ್ರಾಫಿಯ ಕರ್ನಾಟಿಕ, ಸಂ. ೬, (ರೈಸ್ ಆವೃತ್ತಿ), ಕೊಪ್ಪ, ೩೯.
೧೧.      ಶಿಗ್ಗಾವ್ ತಾಮ್ರ ಶಾಸನ, (ಕ್ರಿ.ಶ. ೭೦೭), ಎಪಿಗ್ರಾಫಿಯಾ ಇಂಡಿಕಾ, ಸಂ. ೩೨, ಪುಟ ೩೧೭ ರಿಂದ ಮುಂದೆ ಮತ್ತು ಛಾಯಾಚಿತ್ರ.
೧೨.      ಅದೇ ಮತ್ತು ಕೆ.ವಿ. ರಮೇಶ್, (೧೯೭೦) ಪುಟ ೫೯-೬೦.
೧೩.      ಕೆ.ವಿ. ರಮೇಶ್, (೧೯೭೦), ಪುಟ ೫೦-೬೨.
೧೪.      ಎಪಿಗ್ರಾಫಿಯ ಕರ್ನಾಟಿಕ, ಸಂ. ೭, (ರೈಸ್ ಆವೃತ್ತಿ), ನಗರ ೩೫, ಕ್ರಿ.ಶ. ೧೦೭೭ರ ಹೊಂಬುಚ ಶಾಸನ.
೧೫.      ಹಂಪ ನಾಗರಾಜಯ್ಯ, ಸಾಂತರರು-ಒಂದು ಅಧ್ಯಯನ, ೧೯೯೭, ಪುಟ ೪೬.
೧೬.      ಅದೇ ಪುಟ ೪೬.
೧೭.      ಅದೇ ಪುಟ ೩೦೨.
೧೮.      ಕೆ.ವಿ. ರಮೇಶ್, ೧೯೭೦, ಪುಟ ೯೩.
೧೯.      ಅದೇ, ಪುಟ ೯೩-೯೪.
೨೦.      ದಕ್ಷಿಣ ಭಾರತದ ಶಾಸನಗಳು, ಎಸ್.ಐ.ಐ, ಸಂ. ೭. ಸಂ. ೩೨೭.
೨೧.      ಅದೇ, ಸಂ. ೩೨೮, ಕೆ.ವಿ. ರಮೇಶ್, ೧೯೭೦, ಪುಟ ೧೦೨-೧೦೩.
೨೨.      ಕೆ.ವಿ. ರಮೇಶ್, ಪುಟ ೧೦೪.
೨೩.      ಹೊಂಬುಚ ಶಾಸನ, ಸಾಂತರರು ಒಂದು ಅಧ್ಯಯನ, ಹಂಪನಾ, ೧೯೯೭.
೨೪.      ಎಸ್.ಐ.ಐ. ಸಂ. ೭, ಸಂ. ೨೭೮.
೨೫.      ಪಿ.ಎನ್. ನರಸಿಂಹಮೂರ್ತಿ, ಕುಂದನಾಡಿನ ಶಾಸನಗಳು, ೨೦೦೭, ಪ್ರಸ್ತಾವನೆ ಪುಟ ೧೪-೧೬, ಕುಂದಣನ ವರಾಂಗ ಶಾಸನ, ಎಪಿಗ್ರಾಫಿಯಾ ಇಂಡಿಕಾ, ೩೭ ಪುಟ ೨೬೯-೨೭೬.
೨೬.      ಎಸ್.ಐ.ಐ. ಸಂ. ೭, ನಂ. ೩೭೬.
೨೭.      ಕೆ.ವಿ. ರಮೇಶ್ ಮತ್ತು ಎಮ್.ಜೆ. ಶರ್ಮ, ತುಳುನಾಡಿನ ಶಾಸನಗಳು, ೧೯೭೮, ಸಂ. ೩೯, ತು.ನಾ.ಶಾ.
೨೮.      ಎಸ್.ಐ.ಐ. ಸಂ. ೯ ಭಾಗ ೧, ನಂ. ೩೯೫, ೩೯೬, ಸಂ. ೨೭, ನಂ. ೨೦೮ ಇತ್ಯಾದಿ.
೨೯.      ಕೆ.ವಿ. ರಮೇಶ್, ೧೯೭೦, ಪುಟ ೧೨೧-೧೨೫.
೩೦.      ಅದೇ ಕೆ.ವಿ. ರಮೇಶ್, ೧೯೭೦.
೩೧.      ಎಸ್.ಐ.ಐ. ಸಂ. ೭, ಸಂ. ೩೮೦.
೩೨.      ಕೆ.ವಿ. ರಮೇಶ್, (೧೯೭೦), ಪುಟ ೧೨೫-೧೨೭.
೩೩.      ಅದೇ, ಪುಟ ೧೨೭-೧೨೯.
೩೪.      ಎಸ್.ಐ.ಐ. ಸಂ. ೨೭, ಸಂ. ೨೧೪, ೨೧೫, ೨೧೮, ೨೧೯, ೧೨೧ ಮತ್ತು ೧೨೩.
೩೫.      ಅದೇ, ಸಂ. ೨೧೭.
೩೬.      ಅದೇ, ಸಂ. ೨೧೬.
೩೭.      ಅದೇ, ಸಂ. ೨೨೩.
೩೮.      ಅದೇ, ಸಂ. ೨೨೦.
೩೯.      ಅದೇ, ಸಂ. ೨೨೨.
೪೦.      ಕೆ.ವಿ. ರಮೇಶ್, (೧೯೭೦), ಪುಟ ೧೨೫-೧೨೭.
೪೧.      ಎಸ್.ಐ.ಐ. ಸಂ. ೨೭, ಸಂ. ೨೦೫ ಮತ್ತು ೨೦೬.
೪೨.      ಅದೇ, ಸಂ. ೨೦೭, ೨೦೮, ೨೦೯ ಮತ್ತು ೨೧೬.
೪೩.      ತು.ನಾ.ಶಾ. ಸಂ. ೨೪, ಎಪಿಗ್ರಾಫಿಯಾ ಇಂಡಿಕಾ, ೩೭, ಪುಟ ೨೩-೨೬.
೪೪.      ಕೆ.ವಿ. ರಮೇಶ್, (೧೯೭೦) ಪುಟ ೧೨೮.
೪೫.      ಅದೇ, ಪುಟ ೧೨೮, ೧೩೯, ೧೭೪, ೧೮೫-೧೯೫, ಇತ್ಯಾದಿ.
೪೬.      ಅದೇ, ಪುಟ ೧೨೫-೧೩೦.
೪೭.      ಅದೇ, ಪುಟ ೧೩೦-೧೩೧.
೪೮.      ಎಸ್.ಐ.ಐ. ಸಂ. ೨೭, ಸಂ. ೨೩೬, ೨೩೭, ೨೩೮, ೨೪೧ ಇತ್ಯಾದಿ.
೪೯.      ಅದೇ ಶಾಸನಗಳು.
೫೦.      ಎಪಿಗ್ರಾಫಿಯ ಕರ್ನಾಟಿಕ, ಸಂ. ೭, (ರೈಸ್ ಆವೃತ್ತಿ) ಹೊನ್ನಾಳಿ ಸಂ. ೧೧೭.
೫೧.      ಕೆ.ವಿ. ರಮೇಶ್, (೧೯೭೦), ಪುಟ ೧೩೮.
೫೨.      ಅದೇ, ಪುಟ ೧೩೮-೧೩೯.
೫೩.      ಅದೇ.
೫೪.      ಡಂಕನ್ ಎಮ್. ಡಿರೆಟ್, ದಿ ಹೊಯ್ಸಳಾಸ್, ಪುಟ ೧೬೫-೧೬೬.
೫೫.      ರಮೇಶ ಕೆ.ವಿ. ಪುಟ ೧೩೯.
೫೬.      ಅದೇ, ಪುಟ ೧೪೨.
೫೭.      ಅದೇ, ೧೪೪.
೫೮.      ಎಪಿಗ್ರಾಫಿಯ ಕರ್ನಾಟಿಕ-೫, ಹಾಸನ ಜಿಲ್ಲೆ, ರೈಸ್ ಆವೃತ್ತಿ, ಅರಸೀಕೆರೆ ತಾಲ್ಲೂಕು, ಆಲದಹಳ್ಳಿ, ನಂ. ೧೮೩.
೫೯.      ನೋಡಿ : ಈ ಕಾಲದ ಆಳುಪ ಮತ್ತು ಹೊಯ್ಸಳ ಶಾಸನಗಳು.
೬೦.      ಪಿ.ಎನ್. ನರಸಿಂಹಮೂರ್ತಿ, ಕುಂದನಾಡಿನ ಶಾಸನಗಳು, ಸಂ. ೨೪.
೬೧.      ಇದರ ಪತ್ತೆ ಕಾರ್ಯದಲ್ಲಿ ಭಾಗವಹಿಸಿ ಸಹಕರಿಸಿದ ಶ್ರೀ ಉಪ್ಪುಂದ ಚಂದ್ರಶೇಖರ ಹೊಳ್ಳ (ಮಾಜಿ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್
ಅಧ್ಯಕ್ಷರು) ಅವರಿಗೆ ನನ್ನ ಕೃತಜ್ಞತೆಗಳು.
೬೨.      ಶಾಸನ ಪಾಠ ಸಾಲುಗಳು ೨-೭.
೬೩.      ಅದೇ, ಸಾಲುಗಳು, ೮-೧೦.    
೬೪.      ಅದೇ, ಸಾಲುಗಳು ೧೧-೧೭.
೬೫.      ಅದೇ, ಸಾಲುಗಳು ೧೮-೧೯.  
೬೬. ಅದೇ, ಸಾಲು ೧೮.
೬೭.      ಎಪಿಗ್ರಾಫಿಯ ಕರ್ನಾಟಿಕ, ಸಂ. ೭, ರೈಸ್ ಆವೃತ್ತಿ, ಹೊನ್ನಾಳಿ ೧೧೭, ಹನಗವಾಡಿ ಶಾಸನ.
೬೮.      ನೋಡಿ, ಮೇಲೆ ಉದಾಹರಿಸಿರುವ ಈಕೆಯ ಶಾಸನಗಳು.
೬೯.      ಎಪಿಗ್ರಾಫಿಯ ಕರ್ನಾಟಿಕ, ಸಂ. ೬, ರೈಸ್ ಆವೃತ್ತಿ, ಶೃಂಗೇರಿ ನಂ. ೧.
೭೦.      ಕೆ.ವಿ. ರಮೇಶ್, ಪುಟ ೧೪೪.
೭೧.      ಎಪಿಗ್ರಾಫಿಯ ಕರ್ನಾಟಿಕ, ಸಂ. ೬, ರೈಸ್ ಆವೃತ್ತಿ, ಕೊಪ್ಪ ೩೮, ಕಿಗ್ಗ ಶಾಸನ.

 ‘ಗುರುಕೃಪ, ನಂ. ೨೦೩೧
೧೦ನೇ ಕ್ರಾಸ್, ಕಲ್ಲಹಳ್ಳಿ, ವಿ.ವಿ. ನಗರ
, ಮಂಡ್ಯ-೫೭೧೪೦೧.




1 comment:

  1. ಸರ್,ಭುಜಬಲಿ ಅಳುಪೇಂದ್ರ ರಾಯ, ಬಾರಕೂರು ಇವನ ಧರ್ಮ ಜೈನ ಅಲ್ಲವೇ?
    ಅಳುಪ ಮನೆತನ ಜೈನ ಅಲ್ಲವೇ?🙏

    ReplyDelete