Thursday, June 13, 2013

ಚಾಮರಾಜನಗರ ಜಿಲ್ಲೆಯ ಜೈನಧರ್ಮ

ಚಾಮರಾಜನಗರ ಜಿಲ್ಲೆಯ ಜೈನಧರ್ಮ
ಡಾ. ಬಿ.ಸಿ. ಸುರೇಶ
ರ್ನಾಟಕಕ್ಕೆ ಜೈನಧರ್ಮವು ಕ್ರಿ.ಪೂ.ದಲ್ಲಿಯೇ ಬಂದಿತ್ತೆಂದು ಹಲವು ಆಧಾರಗಳಿಂದ ತಿಳಿದುಬರುತ್ತದೆ. ಜೈನಧರ್ಮದ ಇತಿಹಾಸವನ್ನು ಹೊಂದಿರುವ ಕರ್ನಾಟಕದ ದಕ್ಷಿಣ ಭಾಗಗಳಲ್ಲಿ ಚಾಮರಾಜನಗರ ಜಿಲ್ಲೆಯು ಒಂದು. ಈ ಜಿಲ್ಲೆಯು ನೈಸರ್ಗಿಕವಾಗಿ ಪ್ರಕೃತಿದತ್ತವಾದಂತಹ ಭಾಗಗಳಿಂದ ಕೂಡಿದೆ. ಕರ್ನಾಟಕ, ಕೇರಳ, ತಮಿಳುನಾಡು ಗಡಿಪ್ರಾಂತ್ಯದ ಆಯಾಕಟ್ಟಿನ ಸ್ಥಳಗಳನ್ನು ಹೊಂದಿದೆ. ಈ ಪ್ರದೇಶವನ್ನು ಗಂಗರು, ಚೋಳರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರದ ದೊರೆಗಳು, ಉಮ್ಮತ್ತೂರು ಪಾಳೆಯಗಾರರು, ತೆರಕಣಾಂಬಿ ಪಾಳೆಯಗಾರರು, ಮೈಸೂರು ಅರಸರು ಪ್ರಮುಖವಾಗಿ ಆಳಿದವರಾಗಿದ್ದಾರೆ. ಇಂತಹ ರಾಜರ, ಪ್ರಧಾನರ, ಸಾಮಂತರ, ದಂಡನಾಯಕರ ಪೋಷಣೆಯಲ್ಲಿ ಜೈನಾಚಾರ್ಯರ ಮಾರ್ಗದರ್ಶನದಲ್ಲಿ ಜೈನಧರ್ಮವು ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಇವುಗಳ ಕುರುಹಾಗಿ ಹಲವು ಶಾಸನಗಳು ದೊರೆತಿವೆ. ಈ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಜೈನಬಸದಿಗಳು ನಿರ್ಮಾಣವಾಗಿವೆ. ಅನೇಕ ಜೈನಕವಿಗಳು ಸಾಹಿತ್ಯ ರಚನೆ ಮಾಡಿರುವುದು ಕಂಡು ಬರುತ್ತದೆ. ಈ ನಿಟ್ಟಿನಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಜೈನ ಧರ್ಮದ ಪ್ರಭಾವದ ಹಂತಗಳನ್ನು ಗುರುತಿಸಬಹುದು. ಜಿಲ್ಲೆಯಲ್ಲಿ ಹಲವು ಜೈನಶಾಸನಗಳಿವೆ. ಈ ಲೇಖನದ ಪ್ರಮುಖ ಉದ್ದೇಶವೆಂದರೆ ಈ ಜಿಲ್ಲೆಯಲ್ಲಿ ದೊರೆಯುವ ಜೈನಶಾಸನಗಳು ಹಾಗೂ ಬಸದಿಗಳ ಆಧಾರದ ಮೇಲೆ ಜಿಲ್ಲೆಯಲ್ಲಿದ್ದ ಜೈನಧರ್ಮ ಬಗ್ಗೆ ತಿಳಿಸುವುದೇ ಆಗಿದೆ.
          ಗುಂಡ್ಲುಪೇಟೆಯ ಕ್ರಿ.ಶ.೧೧೯೬ರ ಶಾಸನವೊಂದರಲ್ಲಿ ಹೊಯ್ಸಳ ವೀರಬಲ್ಲಾಳನನ್ನು ಸಮ್ಯಕ್ತ್ವ ಚೂಡಾಮಣಿ ಎಂದು ಕರೆಯಲಾಗಿದೆ. ಕುಡುಗನಾಡ ಸಮಸ್ತ ಪ್ರಭುಗಾವುಂಡಗಳು ತುಪ್ಪೂರ ಬಿಟ್ಟಿ ಜಿನಾಲಯಕ್ಕೆ ಮಡಹಳ್ಳಿಯನ್ನು ದತ್ತಿ ಬಿಟ್ಟಿದ್ದಾರೆ. ವಜ್ರನಂದಿ ಸಿದ್ಧಾಂತದೇವರ ಶಿಷ್ಯ, ನಾಗಪಂಡಿತರ ಮಗ ಕನಕನಂದಿಪಂಡಿತರ ಕಾಲು ತೊಳೆದು ಸಮಸ್ತ ಗಾವುಂಡರು ಜಿನಾಲಯದ ಜೀರ್ಣೊದ್ಧಾರ, ದೇವರ ಅಷ್ಟವಿಧಾರ್ಚನೆ ಮತ್ತು ಮುನಿಗಳ ಆಹಾರದಾನಕ್ಕೆ ದತ್ತಿ ಕೊಟ್ಟಿರುವುದನ್ನು ತಿಳಿಸುತ್ತದೆ. ಇದರ ಪಕ್ಕದಲ್ಲಿರುವ ಮತ್ತೊಂದು ಶಾಸನವು ಸಹ ವಿಜಯಪುರದ ಅನಂತದೇವರಿಗೆ ಕೆಲವು ಗೌಡಪ್ರಜೆಗಳು ದತ್ತಿಯನ್ನು ನೀಡಿರುವುದನ್ನು ತಿಳಿಸುತ್ತದೆ. ಶಾಸನ ದೊರೆತಿರುವ ತುಪ್ಪೂರು ಗ್ರಾಮದಲ್ಲಿ ಯಾವುದೇ ಬಸದಿ ಕಂಡುಬರುವುದಿಲ್ಲ. ಬಹುಶಃ ಬಸದಿ ಸಂಪೂರ್ಣವಾಗಿ ನಾಶವಾಗಿರಬಹುದು.
ಗುಂಡ್ಲುಪೇಟೆ ತಾಲ್ಲೂಕಿನ ರಾಘವಪುರದ ಕ್ರಿ.ಶ.೧೩೨೦ರ ಶಾಸನವು ಜೈನಶಾಸನವಲ್ಲದಿದ್ದರೂ ಸಹ ಜೈನಧರ್ಮದ ಸ್ಥಿತಿಗತಿಯ ಪರಿಶೀಲನೆಗೆ ನೆರವಾಗಿದೆ. ಈ ಶಾಸನ ಹೊಯ್ಸಳ ಮುಮ್ಮಡಿ ವೀರಬಲ್ಲಾಳನ ಕಾಲಕ್ಕೆ ಸೇರಿದುದಾಗಿದೆ. ಇದರಲ್ಲಿ ಕೇತಯ ದಂಡನಾಯಕನು ದೊರೆಯಿಂದ ಗುಮ್ಮಟಹಳ್ಳಿ ಮತ್ತು ಮಾಡ್ರಹಳ್ಳಿಗಳನ್ನು ಪಡೆದುಕೊಂಡು ತನ್ನ ಬಳಿ ಶ್ರೀಕರಣನಾಗಿದ್ದ ನಾರಣ ದೇವಣ್ಣನಿಗೆ ದತ್ತಿಕೊಟ್ಟನು. ಇವೆರಡು ಹಳ್ಳಿಗಳು ಅಗ್ರಹಾರವಾಗಿ ಪರಿವರ್ತಿತವಾದವು. ಗೊಮ್ಮಟಹಳ್ಳಿಗೆ ನಾರಣದೇವಣ್ಣನ ತಂದೆ ರಾಘವಾದೇವನ ಹೆಸರಿನಲ್ಲಿ ರಾಘವಪುರ ಎಂದು ಹೆಸರಾಯಿತು.        ಕೆಲಸೂರಿನಲ್ಲಿ ಪಾರ್ಶ್ವನಾಥ ಬಸದಿಯೊಂದಿದೆ. ಇಲ್ಲಿ ನಾಲ್ಕು ಶಾಸನಗಳಿವೆ. ಬಸದಿಯ ಉತ್ತರ ಭಾಗದಲ್ಲಿರುವ ಶಾಸನದಲ್ಲಿ ಆ ಬಸದಿಯನ್ನು ಸರ್ವಲೋಕಾಶ್ರಯ ಎಂದು ಕರೆದಿದೆ. ತಮಿಳಿನ ಶಾಸನದಲ್ಲಿ ಆ ನಾಡಿನ ಗಾವುಂಡನಾದ ವಿಕ್ರಮಚೋಳ ಪೆರ್ಮಾಡಿಯು ಕೆಲವು ದತ್ತಿ ಬಿಟ್ಟಿರುವುದನ್ನು ತಿಳಿಸುತ್ತದೆ. ಪಶ್ಚಿಮ ದಿಕ್ಕಿನ ಶಾಸನ ಕೆಲವು ಭಕ್ತರು ಬಸದಿಗೆ ಬಿಟ್ಟ ದತ್ತಿಯನ್ನು ತಿಳಿಸುತ್ತದೆ. ಬಸದಿಯ ಗೋಡೆಯ ಮೇಲಿರುವ ೧೮೨೯ರ ಶಾಸನದಲ್ಲಿ ಶಾಂತಪಂಡಿತನ ಮಗನ ವಿಜ್ಞಾಪನೆಯ ಮೇರೆಗೆ ಮುಮ್ಮಡಿ ಕೃಷ್ಣರಾಜ ಒಡೆಯರು ಕೆಲಸೂರಿನ ಚೈತ್ಯಾಲಯಕ್ಕೆ ಚಂದ್ರಪ್ರಭ ಮತ್ತು ವಿಜಯ ಪಾರ್ಶ್ವನಾಥ ತೀರ್ಥಂಕರರ ಮತ್ತು ಜ್ವಾಲಿನಿದೇವಿಯ ಶಿಲ್ಪಗಳನ್ನು ಪ್ರತಿಷ್ಠಾಪಿಸಿ ಬಸದಿಯನ್ನು ಜೀರ್ಣೊದ್ಧಾರ ಮಾಡಿದ್ದಾರೆ. ಬಸದಿಯು ಗರ್ಭಗೃಹ, ಅರ್ಧಮಂಟಪ, ನವರಂಗವನ್ನು ಹೊಂದಿದೆ. ಈ ಬಸದಿಯು ಸಂಪೂರ್ಣವಾಗಿ ಜೀರ್ಣೊದ್ಧಾರವಾಗಿದೆ. ಇಲ್ಲಿ ನಿಷಧಿ ಕಲ್ಲುಗಳಿವೆ. ಬಸದಿಯು ಚೆನ್ನಾಗಿದೆ.
          ತೆರಕಣಾಂಬಿಯ ಪ್ರವಾಸಿ ಮಂದಿರದ ಬಳಿ ಬಿದ್ದಿದ್ದ ಪಾರ್ಶ್ವನಾಥ ವಿಗ್ರಹದ ಪೀಠದ ಮೇಲೆ ರಾಜಗುರು ಮಂಡಲಾಚಾರ್ಯರಾದ ಸಮಯಾಭರಣ ಲಲಿತಕೀರ್ತಿ ಭಟಾರರು ಮಾಡಿಸಿದ ಪ್ರತಿಮೆ ಎಂಬ ಬರಹವಿದೆ ಇದು ಕ್ರಿ.ಶ.೧೪ನೆಯ ಶತಮಾನದ ಬರಹವಾಗಿದೆ. ಪ್ರಸ್ತುತ ತೆರಕಣಾಂಬಿಯಲ್ಲಿ ಪಾರ್ಶ್ವನಾಥ ಬಸದಿಯಿಲ್ಲ. ಆದರೆ ಪಾರ್ಶ್ವನಾಥನ ವಿಗ್ರಹ ಸಂತೇಮಾಳದಲ್ಲಿ ಅನಾಥವಾಗಿ ನಿಂತಿದೆ. ಇದೇ ಬಸದಿಯಲ್ಲಿದ್ದ ಪದ್ಮಾವತಿ ಯಕ್ಷಿಯ ವಿಗ್ರಹವನ್ನು ಚಾಮರಾಜನಗರದ ಬಸದಿಗೆ ಸಾಗಿಸಿರುವುದಾಗಿ ತಿಳಿದುಬರುತ್ತದೆ.
ಹಂಗಳ ಗ್ರಾಮದ ಭೂಮಿಯೊಳಗೆ ಹಲವಾರು ಲೋಹದ ವಸ್ತುಗಳು ದೊರೆತಿವೆ. ದೊರೆತ ಅನೇಕ ಪೂಜಾ ವಸ್ತುಗಳಲ್ಲಿ ೧೮ ವಸ್ತುಗಳ ಕೆಳಭಾಗದಲ್ಲಿ ಬರಹವಿದೆ. ಇವುಗಳು ಕ್ರಿ.ಶ.೧೦ನೆಯ ಶತಮಾನದ ಲಿಪಿಲಕ್ಷಣಗಳನ್ನು ಹೊಂದಿದೆ. ಚವ್ವೀಸ ತೀರ್ಥಂಕರರ ಬಿಂಬದ ಹಿಂಬದಿಯ ಪಾದಪೀಠದಲ್ಲಿರುವ ಬರವಣಿಗೆಯಿಂದ ಚಿಕ್ಕಜೋಗಚ್ಚಿಯ ತಾಯಿ ಮಾಚಿಕಬ್ಬೆಯು ದಾಮನಂದಿ ಭಟ್ಟಾರಕರ ಶಿಷ್ಯೆ ಎಂದು ತಿಳಿಯುತ್ತದೆ. ಮಿಕ್ಕ ವಸ್ತುಗಳ ಮೇಲೆ ಸರ್ವಲೋಕಾಶ್ರಯನ ಪ್ರಿಯಭಾರ್ಯೆ ಚಿಕ್ಕಜೋಗಬ್ಬೆಯ ಹೆಸರುಗಳಿವೆ. ಚಿಕ್ಕಜೋಗಬ್ಬೆ ಒಬ್ಬ ಜೈನ ಮಹಿಳೆಯಾಗಿದ್ದಳು. ಅವಳು ಮಾಡಿಸಿದ ಲೋಹದ ಪೂಜಾಸಾಮಗ್ರಿಗಳು ಮೈಸೂರು ಶಾಸನ ಇಲಾಖೆಯ ಪ್ರಾಚ್ಯವಸ್ತು ವಿಭಾಗದಲ್ಲಿವೆ.
ಚಾಮರಾಜನಗರ ತಾಲ್ಲೂಕಿನ ಮಲೆಯೂರು (ಕನಕಗಿರಿ) ಎಂಬಲ್ಲ್ಲಿ ಪಾರ್ಶ್ವನಾಥ ಬಸದಿಯಿದೆ. ಬೆಟ್ಟದ ಮೇಲಿರುವ ಈ ಬಸದಿ ಪೂರ್ವಾಭಿಮುಖವಾಗಿದೆ. ಗಂಗ ಮತ್ತು ಚೋಳರ ಕಾಲದ ದ್ರಾವಿಡ ಶೈಲಿಯಲ್ಲಿರುವ ಈ ಬಸದಿಯು ದ್ರಾವಿಡ ವಿಮಾನವನ್ನು ಹೊಂದಿದ್ದು, ಗರ್ಭಗೃಹ, ಸುಖನಾಸಿ, ನವರಂಗ ಮತ್ತು ಮಹಾಮಂಟಪವನ್ನು ಹೊಂದಿದೆ. ನವರಂಗದ ಮುಂದೆ ಮತ್ತೆರಡು ಮಂಟಪಗಳಿವೆ. ಗರ್ಭಗೃಹ, ಸುಖನಾಸಿ ಮತ್ತು ನವರಂಗ ಮಾತ್ರ ಪ್ರಾಚೀನ ಕಾಲದ್ದವಾಗಿವೆ. ಮಂಟಪಗಳೆರಡು ವಿಜಯನಗರ ಮತ್ತು ಅನಂತರದ ಕಾಲದ್ದಾಗಿವೆ. ಗರ್ಭಗೃಹದಲ್ಲಿ ಏಳು ಹೆಡೆಯ ಸರ್ಪದ ಕೆಳಗಡೆ ಧ್ಯಾನಮುದ್ರೆಯಲ್ಲಿ ಕುಳಿತಿರುವ ಸುಮಾರು ಐದು ಅಡಿ ಎತ್ತರದ ಪಾರ್ಶ್ವನಾಥನ ಶಿಲ್ಪವಿದೆ. ಪ್ರಭಾವಳಿಯಲ್ಲಿ ಪದ್ಮಾವತಿ ಮತ್ತು ಧರಣೇಂದ್ರ ಯಕ್ಷನನ್ನು ಚಿತ್ರಿಸಲಾಗಿದೆ. ನವರಂಗದಲ್ಲಿ ಯಕ್ಷ ಮತ್ತು ಯಕ್ಷಿಯ ಬಿಡಿಶಿಲ್ಪಗಳಿವೆ. ಈ ಬಸದಿ ಮೂಲಸಂಘ, ದೇಸಿಯಗಣ ಮತ್ತು ಪುಸ್ತಕಗಚ್ಚ ಸಂಪ್ರದಾಯಕ್ಕೆ ಸೇರಿದ್ದಾಗಿದೆ. ಇಲ್ಲಿ ಕ್ರಿ.ಶ.೧೧೮೧ರ ದಾನಶಾಸನವಿದೆ. ಅಚ್ಚುತ ವೀರೇಂದ್ರ ಎಂಬ ರಾಜ ಪ್ರಮುಖರು ಇಲ್ಲಿನ ವಿದ್ಯಾನಂದಸ್ವಾಮಿಯ ಮೂಲಕ ಬಸದಿಯನ್ನು ಆಚಾರ್ಯರಿಗೆ ದಾನ ನೀಡಿದ ವಿವರವಿದೆ. ವಿಜಯನಗರದ ದೊರೆ ಹರಿಹರನ ಶಾಸನದಲ್ಲಿ ಕನಕಗಿರಿಯ ವಿಜಯ ಪಾರ್ಶ್ವನಾಥನ ಪೂಜೆಗಾಗಿ ನೀಡಿದ ದಾನ ಧರ್ಮಗಳನ್ನು ಉಲ್ಲೇಖಿಸುತ್ತದೆ.
ಚಾಮರಾಜನಗರ ತಾಲ್ಲೂಕಿನಲ್ಲಿ ಕುದೇರು ಎಂಬ ಚಿಕ್ಕ ಗ್ರಾಮವಿದ್ದು ಇಲ್ಲಿ ಆದಿನಾಥ ಬಸದಿಯಿದೆ. ಇಲ್ಲಿನ ಕ್ರಿ.ಶ.೧೨೪೮-೪೯ರ ಹೊಯ್ಸಳ ಶಾಸನವು ವೀರಸೋಮೇಶ್ವರನ ಕಾಲದ್ದು. ಬಸದಿಯು ಗರ್ಭಗೃಹ, ಸುಖನಾಸಿ, ಅರ್ಧಮಂಟಪ ಮತ್ತು ನವರಂಗವನ್ನು ಹೊಂದಿದೆ. ದ್ರಾವಿಡ ಶೈಲಿಯಲ್ಲಿರುವ ಈ ಬಸದಿಯು ಏಕಕೂಟವಾಗಿದೆ. ಗರ್ಭಗೃಹದಲ್ಲಿ ಆದಿನಾಥನ ಶಿಲ್ಪವಿದೆ. ಪ್ರಭಾವಳಿಯ ಇಕ್ಕೆಲಗಳಲ್ಲಿ ಚತುರ್ಬಾಹು ಯಕ್ಷಿಣಿಯರ ಶಿಲ್ಪಗಳಿವೆ. ಲಲಾಟಬಿಂಬದಲ್ಲಿ ತೀರ್ಥಂಕರರ ಬಿಂಬವಿದೆ. ನವರಂಗದಲ್ಲಿ ಜೈನ ಸಂಪ್ರದಾಯಕ್ಕೆ ಸಂಬಂಧಿಸಿದಂತೆ ಕುದುರೆ ಮೇಲೆ ಕುಳಿತ ಬ್ರಹ್ಮ, ಜ್ವಾಲಾಮಾಲಿನಿ, ಯಕ್ಷಿ, ಸರಸ್ವತಿ ಮತ್ತು ತೀರ್ಥಂಕರರ ಶಿಲ್ಪ ಮತ್ತು ಇನ್ನಿತರ ಕಂಚಿನ ಶಿಲ್ಪಗಳಿವೆ. ಈಗೀಗ ಬಸದಿ ಶಿಥಿಲವಾಗುತ್ತಿದೆ. ಇದೆ ತಾಲ್ಲೂಕಿನ ಉಮ್ಮತ್ತೂರಿನಲ್ಲಿ ಬಸದಿಯೊಂದಿದೆ. ಇಲ್ಲಿನ ಕ್ರಿ.ಶ.೧೮ನೆಯ ಶತಮಾನದ ಶಾಸನದಲ್ಲಿ ಪಾಯಣಪಂಡಿತರು ವರ್ಧಮಾನಸ್ವಾಮಿಯ ಸೇವೆ ಎಂದಿದೆ. ಕುಲಗಾಣದಲ್ಲಿರುವ ಕ್ರಿ.ಶ.೧೨೪೧ರ ಶಾಸನದಲ್ಲಿ ಎಡೆನಾಡ ಕುಲಗಾಣದ ಬಸದಿಗೆ ಮಹಾಪ್ರಧಾನ, ಸೇನಾಧಿಪತಿ, ಸರ್ವಾಧಿಕಾರಿಯಾದ ಕೇತಯ್ಯ ದಂಡನಾಯಕನು ತೆರಿಗೆಗಳಿಂದ ಬಂದ ಹಣವನ್ನು ದಾನವನ್ನಾಗಿ ನೀಡಿರುವ ಉಲ್ಲೇಖವಿದೆ ಆದರೆ ಪ್ರಸ್ತುತವಾಗಿ ಈ ಗ್ರಾಮದಲ್ಲಿ ಯಾವುದೇ ಬಸದಿ ಇರುವುದಿಲ್ಲ. ಇದೇ ಗ್ರಾಮದ ಕ್ರಿ.ಶ.೭-೮ನೆಯ ಶತಮಾನದ ಗಂಗರ ಕಾಲದ ತಾಮ್ರಶಾಸನದಲ್ಲಿಯೂ ಚೈತ್ಯಾಲಯಕ್ಕೆ ದಾನ ನೀಡಿದ ಉಲ್ಲೇಖವಿದೆ. ಇದೇ ತಾಲ್ಲೂಕಿನ ಹರವೆ ಗ್ರಾಮದಲ್ಲಿ ಆದೀಶ್ವರ ಬಸದಿಯೊಂದಿದೆ. ಇಲ್ಲಿನ ಕ್ರಿ.ಶ.೧೪೮೨ರ ಶಾಸನದಲ್ಲಿ ವೀರಸೋಮೇಶ್ವರರಾಯ ಒಡೆಯರ ಕರಣಿಕನಾದ ದೇವರಸನು ಹರವೆಯಲ್ಲಿ ಚೈತ್ಯಾಲಯ ಮತ್ತು ಪಾಕಶಾಲೆಯನ್ನು ಮಾಡಿಸಿ ಆದಿ ಪರಮೇಶ್ವರನನ್ನು ಪ್ರತಿಷ್ಠಾಪಿಸಿದರು. ಕ್ರಿ.ಶ.೧೪೮೬ರ ನಿಷದಿ ಕಲ್ಲೊಂದಿದೆ. ಇದು ಶಾಸನೋಕ್ತವಾಗಿದ್ದು ಇದರಲ್ಲಿ ದೇವರಸರ ಹಿರಿಯ ಹೆಂಡತಿ ಸೋಮಾಯಿಯು ನಿಷದಿಯಾದ ಬಗ್ಗೆ ಉಲ್ಲೇಖವಿದೆ. ಪ್ರಸ್ತುತ ಈ ಗ್ರಾಮದಲ್ಲಿ ಯಾವುದೇ ಬಸದಿ ಇರುವುದಿಲ್ಲ. ಯಳಂದೂರಿನ ಯರಗಂಬಳ್ಳಿಯ ಹೊರವಲಯದ ಜಮೀನಿನಲ್ಲಿ ಜಿನ ಶಿಲ್ಪಗಳಿವೆ. ಇವುಗಳು ಅಲ್ಪಪ್ರಮಾಣದಲ್ಲಿ ಭಗ್ನವಾಗಿವೆ. ಬಹುಶಃ ಇಲ್ಲಿ ಹಿಂದೆ ಬಸದಿಯಿದ್ದಿರಬಹುದೆಂದು ಹೇಳಬಹುದು.
ಚಾಮರಾಜನಗರ ಪಟ್ಟಣದ ಮಧ್ಯಭಾಗದಲ್ಲಿರುವ ಚಾಮರಾಜೇಶ್ವರ ದೇವಾಲಯದ ಆಗ್ನೇಯ ಭಾಗದಲ್ಲಿ ಪಾರ್ಶ್ವನಾಥ ಬಸದಿಯಿದೆ. ಕ್ರಿ.ಶ.೧೧೧೬ರ ಶಾಸನದಲ್ಲಿ ಎಣ್ಣೆನಾಡಿನ ಪ್ರಾಂತ್ಯದ ಅರಕೊಠಾರದಲ್ಲಿ ತ್ರಿಕೂಟ ಬಸದಿಯನ್ನು ಪುಣಿಸರಾಜ ದಂಡಾದೀಪ ಎಂಬುವವನು ಪುಣಿಸಜಿನಾಲಯವನ್ನು ಕಟ್ಟಿಸಿದನು. ಪ್ರಸ್ತುತವಾಗಿ ಈ ಬಸದಿಯು ಜೀರ್ಣೋದ್ಧಾರವಾಗಿದ್ದು ಪೂಜಾಕಾರ್ಯಗಳು ನಡೆಯುತ್ತಿವೆ. ಇಲ್ಲಿನ ಕ್ರಿ.ಶ.೧೫೧೮ರ ಮತ್ತೊಂದು ಶಾಸನದಲ್ಲಿ ಚಾಮರಾಜನಗರವನ್ನು ಅರಿಕೊಠಾರ ಎಂದು ಕರೆಯಲಾಗಿದೆ. ಇಲ್ಲಿಯ ಮಹಾಪ್ರಭು ಕಾಮಯ್ಯನಾಯಕರ ಮಗ ವೀರಯ್ಯನಾಯಕನು ವಿಜಯನಾಥ ದೇವರಿಗೆ ಮುಣಚಣಹಳ್ಳಿಯನ್ನು ದಾನವಾಗಿ ನೀಡಿರುವ ಉಲ್ಲೇಖವಿದೆ. ಇಲ್ಲಿನ ಕ್ರಿ.ಶ.೧೨೦೩ರ ಶಾಸನದಲ್ಲಿ ಉತ್ತರಾಯಣ ಸಂಕ್ರಮಣದ ದಿನ ಅರಿಕುಠಾರದ ಬಸದಿಗೆ ಕೇತಗಾವುಂಡನ ಮಗ ಬಿಟ್ಟಿಗಾವುಂಡ, ಅಲ್ಲಾಳಗಾವುಂಡನ ಮಗ ದಾಸೆಗಾವುಂಡರು, ನೀರಿನ ಕರ, ಮನೆಕರ ಮುಂತಾದವುಗಳಿಂದ ಬಂದ ಹಣವನ್ನು ಬಸದಿಗೆ ನೀಡಿರುವ ಉಲ್ಲೇಖವಿದೆ.
ಕೊಳ್ಳೇಗಾಲದಿಂದ ಸುಮಾರು ೫ ಕಿ.ಮೀ. ದೂರದಲ್ಲಿ ಧನಗೆರೆ ಎಂಬ ಹಳ್ಳಿಯಿದೆ ಈ ಗ್ರಾಮದ ಪೂರ್ವ ಭಾಗದಲ್ಲಿರುವ ಒಂದು ಜಮೀನಿನಲ್ಲಿ ಜೈನ ಅವಶೇಷಗಳು ದೊರೆತಿವೆ. ಇಲ್ಲಿಯ ಒಂದು ಶಿಲ್ಪವನ್ನು ಪ್ರಾಚ್ಯವಸ್ತು ಸಂಗ್ರಹಾಲಯ ಶ್ರೀರಂಗಪಟ್ಟಣ ಇಲ್ಲಿ ಇಡಲಾಗಿದೆ. ಕೊಳ್ಳೇಗಾಲದ ಪಕ್ಕದಲ್ಲಿರುವ ಬಸ್ತಿಪುರ (ಬಸದಿಪುರ) ಎಂಬುದು ಸಹ ಒಂದು ಜೈನ ಕೇಂದ್ರವಾಗಿತ್ತು. ಇಲ್ಲಿ ಪೂಜ್ಯಪಾದನು ಹಲವು ಕಾಲದವರೆಗೆ ಜೀವಿಸಿದ್ದನು. ದೇವನಂದಿ ಎಂಬ ಹೆಸರಿನ ಈ ಆಚಾರ್ಯನಿಗೆ ಪೂಜ್ಯಪಾದನೆಂದು ಸಹ ಕರೆಯುತ್ತಿದ್ದರು. ಕೊಳ್ಳೇಗಾಲದ ಮನುಗನಹಳ್ಳಿ ಎಂಬ ಗ್ರಾಮದ ಹೊರವಲಯದಲ್ಲಿರುವ ಒಂದು ಜಮೀನಿನಲ್ಲಿ ಜಿನಶಿಲ್ಪಗಳು ಕಂಡುಬಂದಿವೆ. ಇಲ್ಲಿ ನಿಷದಿ ಕಲ್ಲುಗಳು ಸಹ ಇವೆ. ಕೊಳ್ಳೇಗಾಲ ರಾಘವೇಂದ್ರಸ್ವಾಮಿ ದೇವಾಲಯದ ಎದುರುಗಡೆ ಪಾಳುಬಿದ್ದಿರುವ ಮಂಟಪದಲ್ಲಿ ಪಾರ್ಶ್ವನಾಥನ ಶಿಲ್ಪವಿದೆ ಮತ್ತು ಪಟ್ಟಣದ ಕೊಳದ ಪಕ್ಕದಲ್ಲಿ ನಿಷದಿ ಶಿಲ್ಪವಿದೆ. ಮೇಲಿನ ಅಂಶಗಳನ್ನು ಗಮನಿಸಿದರೆ ಚಾಮರಾಜನಗರ ಜಿಲ್ಲೆಯಾದ್ಯಂತ ಕ್ರಿ.ಶ. ಸುಮಾರು ೬-೭ನೆಯ ಶತಮಾನಗಳಿಂದಲೂ ಸಹ ಜೈನಧರ್ಮವಿತ್ತೆಂದು ಹೇಳಬಹುದು.

ಆಧಾರಸೂಚಿ
೧.         ಮೈಸೂರು ಜಿಲ್ಲೆಯ ಗ್ಯಾಸೆಟಿಯರ್, ಕರ್ನಾಟಕ ಸರ್ಕಾರ, ಬೆಂಗಳೂರು.
೨.         ಮೈಸೂರು ಆರ್ಕಿಯಲಾಜಿಕಲ್ ರಿಪೋರ್ಟ್ಸ್, ಮೈಸೂರು ಸರ್ಕಾರ, ಬೆಂಗಳೂರು.
೩.         ಸೋಮಸಿರಿ, ಮಲೆಯೂರು ಗುರುಸ್ವಾಮಿ, ಗುಂಡ್ಲುಪೇಟೆ, ೨೦೦೦.
೪.         ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೩, (ಪರಿಷ್ಕೃತ), ಗುಂಡ್ಲುಪೇಟೆ ಶಾಸನ ಸಂಖ್ಯೆ ೩, ೪೦, ೧೦೦, ೧೦೧, ೧೦೨, ೧೦೩, ೨೦೩ ಮತ್ತು ೨೧೮.
೫.         ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೪, (ಪರಿಷ್ಕೃತ), ಶಾಸನ ಸಂಖ್ಯೆ ೨, , ೬೦, ೬೧, ೯೧, ೨೧೫, ೩೪೪, ೩೪೭, ೩೫೮-೩೭೫, ೩೮೯, ೩೯೦.
೬.         ದೇವರಕೊಂಡಾರೆಡ್ಡಿ, ತಲಕಾಡಿನ ಗಂಗರ ದೇವಾಲಯಗಳು ಒಂದು ಅಧ್ಯಯನ, ಬೆಂಗಳೂರು, ಕನ್ನಡ ಸಾಹಿತ್ಯ ಪರಿಷತ್ತು, ೧೯೯೪.

? ಸಹಾಯಕ ಪ್ರಾಧ್ಯಾಪಕ, ಶ್ರೀ ಮದ್ದಾನೇಶ್ವರ ಸರ್ಕಾರಿ ಪ್ರ.ದ. ಕಾಲೇಜು, ಕಬ್ಬಹಳ್ಳಿ, ಗುಂಡ್ಲುಪೇಟೆ ತಾ, ಚಾಮರಾಜನಗರ-೫೭೧೩೧೯.




No comments:

Post a Comment