Thursday, February 7, 2013

ಉಚ್ಚಂಗಿ ಪಾಂಡ್ಯರ ಶಾಸನ


ದಾವಣಗೆರೆ ಜಿಲ್ಲೆಯ ಬಲ್ಲೂರು ಗ್ರಾಮದಲ್ಲಿ ದೊರೆತ ಉಚ್ಚಂಗಿ ಪಾಂಡ್ಯರ ಒಂದು ಶಿಲಾಶಾಸನ
ಸಂತೇಬೆನ್ನೂರು ಸುಮತೀಂದ್ರ ನಾಡಿಗ್
ಇತಿಹಾಸ ಸಂಶೋಧಕ ಮತ್ತು ಪತ್ರಕರ್ತ,
 ಸಂತೇಬೆನ್ನೂರು, ದಾವಣಗೆರೆ ಜಿಲ್ಲೆ-೫೭೭೫೫೨.





೧೧-೧೨ನೇ ಶತಮಾನದಲ್ಲಿ ಈಗಿನ ದಾವಣಗೆರೆ ಜಿಲ್ಲೆಯ ಉಚ್ಚಂಗಿದುರ್ಗದಿಂದ ಆಗಿನ ನೊಳಂಬವಾಡಿ ೩೨೦೦೦ ಪ್ರಾಂತ್ಯವನ್ನು ಆಳಿದ ಒಂದು ರಾಜವಂಶ ಉಚ್ಚಂಗಿ ಪಾಂಡ್ಯರದು. ದಾವಣಗೆರೆ ಸಮೀಪದ ಬೇತೂರಿನಿಂದಲೂ ಆಳಿದ ಈ ರಾಜವಂಶ ಆ ಕಾಲಕ್ಕೇ ೩೨೦೦೦ದಂತಹ ದೊಡ್ಡ ಪ್ರಾಂತ್ಯವನ್ನು ಸಾಕಷ್ಟು ಕಾಲ ಆಳಿದರೆಂಬುದಕ್ಕೆ ಅವರು ಹಾಕಿಸಿದ ಶಾಸನಗಳು ಈ ಪ್ರಾಂತ್ಯದಲ್ಲಿ ದೊರೆತಿರುವುದು ಸಾಕ್ಷಿಯಾಗಿವೆ. ಈಗ ಪ್ರಸ್ತುತಪಡಿಸುತ್ತಿರುವ ಶಿಲಾಶಾಸನ ದಾವಣಗೆರೆ ಜಿಲ್ಲಾ ಕಸಬಾ ತಾಲ್ಲೂಕು ಬಲ್ಲೂರು ಗ್ರಾಮದ ಸರ್ವೆ ನಂಬರ ೪೮ರಲ್ಲಿರುವ ಈಶ್ವರ ದೇವಸ್ಥಾನದ ಉತ್ತರ ದಿಕ್ಕಿನಲ್ಲಿದೆ. ಈ ಶಾಸನ ಕನ್ನಡ ಲಿಪಿ ಮತ್ತು ಭಾಷೆಯಲ್ಲಿದ್ದು ೨೨ ಸಾಲುಗಳನ್ನು ಒಳಗೊಂಡಿದೆ.
ಚಾಳುಕ್ಯವಿಕ್ರಮ ವರ್ಷದ ೩೪ನೇ ವಿರೋಧಿ ಸಂವತ್ಸರದ ಉತ್ತರಾಯಣ ಸಂಕ್ರಾತಿಯಂದು ಪೃಥ್ವೀವಲ್ಲಭ, ಮಹಾರಾಜಾಧಿರಾಜ ರಾಜಪರಮೇಶ್ವರ, ಪರಮಭಟ್ಟಾರಕ, ಸತ್ಯಾಶ್ರಯ ಕುಲತಿಲಕ, ಚಾಳುಕ್ಯಾಭರಣ ಶ್ರೀ ತ್ರಿಭುವನಮಲ್ಲದೇವರು ಆಳುತ್ತಿರುವಾಗ, ಅವನ ಮಾಂಡಲೀಕ ಶ್ರೀ ತ್ರಿಭುವನಮಲ್ಲ ಪಾಂಡ್ಯದೇವರು ನೊಳಂಬವಾಡಿ ಮುವತ್ತು ಛಾಸಿರ ಆಳುತ್ತಿರೆ, ಅವನ ಪಾದಪದ್ಮೋಪಜೀವಿ ಶ್ರೀ ಮಹಾಪ್ರಧಾನ ದಂಡನಾಯಕ ದೇವಾಂಡ್ಯರ ತಮ್ಮ ಆಳ್ಕೊಂಡ ನಾಯಕ ಬಲ್ಲೂರು ಆಳುತ್ತಿರುವಾಗ ಬರ್ಮಗಾವುಂಡ ಎಂಬುವನು ಅತ್ತಿಯ ಮಹಾದೇವರ, ಪೂಜೆ ಪುನಸ್ಕಾರ, ನೈವೇದ್ಯ, ನಂದಾದೀವಿಗೆಗಾಗಿ ಗ್ರಾಮದ ಕೆಳಗಣ ಕೆರೆಯ ಕೋಡಿಯ ಹತ್ತಿರದ ಬೆದ್ದಲು, ಗದ್ದೆಭೂಮಿಯನ್ನು ಎಡುವ ಸೋವಿಮಯ್ಯನ ಮಗ ಹೆಗ್ಗಡೆ ನಾಗಿಮಯ್ಯ, ಬಲ್ಲೂರು ಗಾವುಂಡ ಕಂಕಳ ಗೋಸಿಯವರ್ಮ ಇವರಿಗೆ ಭೂದಾನವಾಗಿ ಕೊಟ್ಟಿದ್ದನ್ನು ಶಾಸನ ತಿಳಿಸುತ್ತದೆ.
ಈ ಶಾಸನದಿಂದ ಈ ಕೆಳಕಂಡ ವಿಚಾರಗಳು ತಿಳಿಯಬಹುದಾಗಿದೆ.
೧. ಇದೊಂದು ದಾನಶಾಸನವಾಗಿದ್ದು ವಿಕ್ರಮ ವರ್ಷ ೩೪ನೇ ವಿರೋಧಿ ಸಂವತ್ಸರದ ಸಂಕ್ರಾತಿ ಪುಣ್ಯಕಾಲದಂದು ಹಾಕಿಸಿದ್ದಾಗಿ ತಿಳಿಸುತ್ತದೆ. ಬೇರೆ ಶಾಸನಗಳಂತೆ ಇದರಲ್ಲಿ ತಿಥಿ, ಮಾಸ, ವಾರ ಬರೆದಿಲ್ಲವಾದರೂ ಸಂಕ್ರಾತಿಯಂದು ಹಾಕಿಸಿದ ಶಾಸನವೆಂದು ನಮೂದಿಸಿರುವಂತೆ ಸ್ವಾಮಿಕಣ್ಣು ಪಿಳ್ಳೆಯವರ ಎಫಿಮರೀಸ್‌ನಂತೆ ವಿರೋಧಿ ಸಂ||ದ ಸಂಕ್ರಾಂತಿ ಅಂದರೆ ಶಾಸನದ ಕಾಲ ಕ್ರಿ.ಶ.೧೪-೧-೧೧೧೦ ಆಗುತ್ತದೆ ಹಾಗೂ ತಿಥಿ ಪುಷ್ಯ ಬಹುಳ ಸಪ್ತಮಿ ಆಗುತ್ತದೆ.
೨. ಶಾಸನದಲ್ಲಿ ಪ್ರಸ್ತಾಪವಾಗಿರುವ ಬಲ್ಲೂರು ಗ್ರಾಮ ಈಗಲೂ ಅಸ್ತಿತ್ವದಲ್ಲಿದ್ದು ಅದೇ ಹೆಸರಿನಿಂದಲೇ ಕರೆಯಲ್ಪಡುತ್ತಿದೆ ಮತ್ತು ಶಾಸನ ತಿಳಿಸುವಂತೆ ಅದೊಂದು ಉಚ್ಚಂಗಿ ಪಾಂಡ್ಯರ ದಂಡನಾಯಕ ದೇವಾಂಡ್ಯರ ತಮ್ಮ ಆಳ್ಕೊಂಡ ನಾಯಕ ಅದನ್ನು ಆಳುತ್ತಿದ್ದನೆಂದು ತಿಳಿಸುವುದರಿಂದ, ಈಗ ಅದೊಂದು ಸಣ್ಣಗ್ರಾಮವಾಗಿದ್ದರೂ ಆ ಕಾಲದಲ್ಲಿ ಒಂದು ಪ್ರಾಂತ್ಯದ ರಾಜಧಾನಿಯಾಗಿತ್ತು ಎಂಬುದಾಗಿ ಊಹಿಸಬಹುದಾಗಿದೆ.
೩. ಶಾಸನದಲ್ಲಿ ಭೂದಾನಕೊಟ್ಟಿರುವುದು ಅತ್ತಿಯ ಮಹಾದೇವರ್ಗೆ ಎಂದು ಉಲ್ಲೇಖಿಸಲ್ವಟ್ಟಿದೆ. ಅತ್ತಿ ಗ್ರಾಮ ಯಾವುದು ಎಂಬುದು ಸಂದೇಹಾಸ್ಪದವಾಗಿದೆ. ಹಾಗೆಯೇ ಶಾಸನ ದೊರೆತಿರುವ ಸ್ಥಳವಾದ ಬಲ್ಲೂರ ಈಶ್ವರ ದೇವಸ್ಥಾನಕ್ಕೆ ಬರೆದ ದಾನಶಾಸನ ಇದಾಗಿರಬೇಕೆಂಬ ನಿರ್ಣಯಕ್ಕೂ ಬರುವುದು ಕಷ್ಟವಾಗುತ್ತದೆ. ಕಾರಣ ಬಲ್ಲೂರು ಗ್ರಾಮದ ಸಮೀಪ ಮತ್ತಿ ಎಂಬ ಗ್ರಾಮವಿದ್ದು, ಅತ್ತಿಯೇ ಈಗ ಮತ್ತಿಯಾಗಿ ಏಕೆ ಬದಲಾಗಿರಬಾರದು ಎಂಬ ಸಂದೇಹದ ಜೊತೆಗೆ ಈಗಿನ ಮತ್ತಿಯ ಈಶ್ವರ ದೇವಸ್ಥಾನಕ್ಕೆ ಈ ಶಾಸನದ ಭೂಮಿ ದಾನವಾಗಿ ಏಕೆ ಕೊಟ್ಟಿರಬಾರದೆಂಬ ಸಂದೇಹ ಬರುತ್ತದೆ. ಇದು ಇನ್ನಷ್ಟು ಸಂಶೋಧನೆಗಳಿಂದ ಗಟ್ಟಿಗೊಳ್ಳಬೇಕಿದೆ.
೪. ಎಲ್ಲಾ ಶಾಸನಗಳಲ್ಲಿರುವಂತೆ ಈ ಶಾಸನದಲ್ಲೂ ಮೇಲ್ಭಾಗದಲ್ಲಿ ಸೂರ್ಯ, ಚಂದ್ರ, ಶಿವಲಿಂಗ, ನಂದಿ, ಆಕಳು. ಕರುಗಳ ಚಿತ್ರಗಳಿದ್ದು ಶಾಸನದ ಪ್ರಾರಂಭದಲ್ಲಿ ನಮಸ್ತುಂಗ, ಶಿರಶ್ಚುಂಬಿ... ... ಎಂಬ ಬಾಣನ ಹರ್ಷ ಚರಿತೆಯ ಸಂಸ್ಕೃತ ಶ್ಲೋಕ ಬರೆಯಲ್ವಟ್ಟಿದೆ. ಉಳಿದ ಭಾಗ ಅಚ್ಚ ಕನ್ನಡ ಭಾಷೆಯಲ್ಲಿ ರಚಿತವಾಗಿದೆ.
೫. ಉಚ್ಚಂಗಿ ಪಾಂಡ್ಯರು ನೊಳಂಬರ ಅವನತಿಯ ನಂತರ ಕಲ್ಯಾಣದ ಚಾಲುಕ್ಯರ ಸಾಮಂತರಾಗಿ ಅವರ ಉತ್ತರಾಧಿಕಾರಿಗಳಾಗಿ ಆಡಳಿತ ಮಾಡಿಕೊಂಡಿದ್ದರು. ಆದ್ದರಿಂದ ಈ ಶಾಸನದ ಮೊದಲಭಾಗದಲ್ಲಿ ತಮ್ಮ ಚಕ್ರವರ್ತಿ ಚಾಳುಕ್ಯ ತ್ರಿಭುವನಮಲ್ಲ ದೇವರ ಹೊಗಳಿಕೆ, ಬಿರುದು ವಂಶದ ವರ್ಣನೆ ಬಂದಿರುವುದು ಸಹಜವಾಗಿದೆ.
೬. ಚಾಳುಕ್ಯರು ತಾವು ಚಂದ್ರವಂಶ, ಯದುವಂಶದವರೆಂದು ತಮ್ಮ ಕೀರ್ತಿಪ್ರಕಾಶಕ್ಕಾಗಿ ಹೊಗಳಿಕೊಂಡು ಬಂದಿರುವುದನ್ನು ನಾವು ಬರೆ ಶಾಸನಗಳಿಂದ ತಿಳಿಯಬಹುದಾಗಿದೆ. ಹಾಗೆಯೇ ಉಚ್ಚಂಗಿ ಪಾಂಡ್ಯರು ತಾವು ಯದುಕುಲ ತಿಲಕರೆಂದು ಹೇಳಿಕೊಂಡಿರುವುದರಿಂದ ಇರ್ವರೂ ಕುಲಸಂಬಂಧಿಗಳಾಗಿರುವ ಸಾಧ್ಯತೆಯೂ ಇದೆ.
೭. ತ್ರಿಭುವನಮಲ್ಲ ಪಾಂಡ್ಯನ ಸುಮಾರು ೪೦ಕ್ಕೂ ಹೆಚ್ಚು ಶಾಸನಗಳು ಈವರೆಗೆ ಪ್ರಕಟವಾಗಿರುವುದನ್ನು ಇತಿಹಾಸಕಾರರು ಗುರುತಿಸಿದ್ದಾರೆ. ಈ ಶಾಸನದಲ್ಲಿ ಉಲ್ಲೇಖಿಸಲಾದ ಮಹಾಮಂಡಳೇಶ್ವರ ತ್ರಿಭುವನಮಲ್ಲ ಪಾಂಡ್ಯದೇವರು ಎಂಬ ವ್ಯಕ್ತಿಯನ್ನು ಬಿಟ್ಟರೆ ಅವನ ಮಹಾಪ್ರಧಾನ ದಂಡನಾಯಕ ದೇವಾಂಡ್ಯ, ಅವನ ತಮ್ಮ ಆಳ್ಕೊಂಡನಾಯಕ, ದಾನ ಕೊಟ್ಟ ಬರ್ಮಗಾವುಂಡ, ದಾನಪಡೆದ ಎಡುವ ಸೋವಿಮಯ್ಯ, ಅವನ ಮಗ ಹೆರ್ಗಡೆ ನಾಗಿಮಯ್ಯ, ಬಲ್ಲೂರು ಗಾವುಂಡ ಕಂಕಳಗೋಸಿ ಹೆರ್ಗಡೆ ಮುಂತಾದ ಹೆಸರುಗಳು ಹೊಸದಾಗಿ ಈ ಶಾಸನದಿಂದ ಪರಿಚಯವಾಗುತ್ತಾರೆ.
೮. ಶಾಪಾಶಯದ ಕೊನೆಯ ಭಾಗದಲ್ಲಿ ಈಂನ್ತೀ ಧರ್ಮವನ್ನು ಪ್ರತಿಪಾದಿಸಿದಲ್ಲಿ ಪ್ರಯಾಗ, ಕುರುಕ್ಷೇತ್ರಗಳಿಗೆ ಹೋಗಿಬಂದ ಪುಣ್ಯ ಬರಲೆಂದೂ, ಹಾಳು ಮಾಡಿದಲ್ಲಿ ಸಾವಿರ ಕಪಿಲೆಗಳ ಕೊಂದ ಪಾಪ ಬರಲಿ ಎಂದೂ ಕೆತ್ತಲಾಗಿದೆ.
೯. ಒಟ್ಟಿನಲ್ಲಿ ಈ ಶಾಸನದಂತೆ ಶಾಸನದೊರೆತ ಬಲ್ಲೂರು ಒಂದು ಪ್ರಾಚೀನ ಗ್ರಾಮವಾಗಿದ್ದು, ಅಲ್ಲಿನ ಈಶ್ವರ ದೇವಾಲಯವು ಈಚೆಗೆ ನವೀಕರಿಸಲ್ವಟ್ಟಿದ್ದರೂ, ಅಲ್ಲಿರುವ ಗಣಪತಿ, ಷಣ್ಮುಖ, ಭೈರವ, ನಂದಿ, ಈಶ್ವರ ಮುಂತಾದ ವಿಗ್ರಹಗಳಿಂದಾಗಿ ಅವು ಚಾಲುಕ್ಯರ ಕಾಲದ ರಚನೆ ಎಂಬುದಾಗಿ ಗುರುತಿಸಬಹುದಾಗಿದೆ.
ಶಾಸನ ಪಾಠ
೧        ನಮಸ್ತುಂಗ ಶಿರಶ್ಚುಂಬಿ ಚಂದ್ರ ಚಾಮರ ಚಾರವೇ [ತ್ರೈ]ಳೋಕ್ಯನಗರಾರಂಬ
೨        ಮೂಲ ಸ್ತಂಭಾಯ ಸಂಬವೇ|| ಸ್ವಸ್ತಿ ಸಮಸ್ತ ಭುವನಾಸ್ರಯಂ
೩        [ಶ್ರೀ] ಪ್ರಿಥ್ವೀವಲ್ಲಭ ಮಹಾರಾಜಾಧಿರಾಜ ಪರಮೇಶ್ವರ ಪರಮಭಟ್ಟಾರಕ ಸತ್ಯಾಶ್ರ
೪        ಯ ಕುಳತಿಳಕಂ ಚೂಳುಣ್ಯ(ಚಾಳುಕ್ಯಾ)ಭರಣಂ ಶ್ರೀಮತ್ರಿಭುವನ ಮಲ್ಲದೇವರ ವಿ
೫        ಜೆಯ ರಾಜ್ಯಮುತ್ತರೋತ್ತರಾಭಿವ್ರಿಧ್ಧಿ ಪ್ರವರ್ಧಮಾನ ಮಾಚಂದ್ರಾರ್ಕ್ಕತಾರಂಬರಂ ಸ
೬        ಲುತ್ತಮಿರೆ|| ಸ್ವಸ್ತಿ ಸಮಾಧಿಗತ ಪಂಚಮಹಾಸಬ್ದ ಮಹಾಮಣ್ಡಳೇಶವರ ತ್ರಿಭು
೭        ವನಮಲ್ಲ ಪಾಂಣ್ಡ್ಯದೇವರು ನೊಳಂಬವಾಡಿ ಮೂವತ್ತಿರ್ಚ್ಛಾಸಿರಮನಾಳುತ್ತ
೮        ಮಿರೆ ತತ್ಪಾದಪದ್ಮೋಪಜೀವಿ ಶ್ರೀಮನ್ಮಹಾಪ್ರಧಾನಂ ದಂಡನಾಯಕಂ
೯        ದೇವಾಂಡ್ಯರ ತಂಮ್ಮನಾಳ್ಕೊ [ಂ] ಡನಾಯಕರು ಬಲ್ಲೂರನಾಳುತ್ತಮಿರಲಾ
೧೦     ಸ್ವಸ್ತಿ ಶ್ರೀ ಮಚ್ಚಾಳುಕ್ಯ ವಿಕ್ರಮ ವರ್ಷದ ೩೪ನೆಯ ವಿರೋಧಿ ಸಂವತ್ಸರಮುತ್ತರಾ
೧೧     ಯಣ ಸಂಕಾನ್ತಿಯಂದು ಆಳ್ಕೊಂಡನಾಯಕರು ಬರ್ಮಗಾಮುಂಡನುಂ ಅ
೧೨     ತ್ತಿಯ ಮಹಾದೇವರ್ಗ್ಗೆ ಪೂಜೆಪುನಸ್ಕಾರ ನಿವೇದ್ಯ ನಂದಾದೀಪಿಗೆಗಂ ಗ್ರಾಮದ ಕೆ[ರೆ]ಯ
೧೩     ಕೋಡಿಯಲು ಬಿಟ್ಟ ಬೆಳ್ದೆಲೆ ಮತ್ತರು ೧ ಹುಲೆಯ ಬಿಳಿಲಲು ಬೆ[ಳ್ದೆ]ಲೆ ಮತ್ತರು
೧೪     ೯ ಗರ್ದ್ದೆ ಕರ್ಮ್ಮ ೯೨೦೦ ಎಡದ ಸೋವಿಮಯ್ಯನ ಮಗಂ ಹೆರ್ಗ್ಗಡೆ ನಾಗಿಮಯ್ಯ ಬಲ್ಲೂ
೧೫     ರ ಗಾಮುಂಡ ಕಂಕಳ ಗೋಸಿಯ ಮರ್ಮ್ಮ ಹೆಗ್ಗಡೆ ನಾಗಿಮಯ್ಯನ ಕೆ[ರೆ]ಗೆ ಆಕೆ[ರೆ]ಯ
೧೬     ಕೆಳಗೆ ಕೊಡಂಗೆಯ್ಯಾಗೆ ಬೆ[ದ್ದ]ಲೆ ಮತ್ತರು ೧೦೦ ಈನ್ತೀ ಧರ್ಮಂ ಪ್ರತಿಪಾಳಿ
೧೭     ಸಿದವರ್ಗ್ಗೆ ಬಾಣರಾಸಿ ಪ್ರಯಾಗ ಕುರುಕ್ಷೇತ್ರಮಿನ್ತೀ ಪುಣ್ಯತೀರ್ತ್ಥದೊಳೆ[ಸಾಸಿರ್ಬ್ಬ]
೧೮     ಬ್ರಾಹ್ಮಣರ್ಗ್ಗೆ ಧಾರಾದತ್ತಂಗೆಯ್ದು ಸಾವಿರ ಕವಿಲೆಯ ಕೊಮ್ದುಕೊಳಗಮಂ ಪೊನ್ನ
೧೯     ಲು. ಕಟ್ಟಿಸಿದಾನಂಗೆಯ್ದ ಪಳಮಕ್ಕು ಈ ಧರ್ಮಮನಳಿ ದವರ್ಗ್ಗೆಯಾ ಪುಣ್ಯತೀರ್ತದ
೨೦     ಲು ಸಾ[ಸೆ] . ವೇದಪಾರಗುರುಂ .ಸಾಸಿರ ಕವಿಲೆಯನಳಿದ ಪಂಚಮಹಾಪಾತಕನ
೨೧     ಕ್ಕು|| ಸ್ವದತ್ತ ಪರದತ್ತ ವಾಯೋ ಹರೇತಿ ವಸುಧರಾ ಸಷ್ಟಿರ್ವರ್ಷ ಸಹಸ್ರಾಣಿ ವಿಷ್ಟಾಯಾಂ ಜಾಯತೇ ಕ್ರಿಮಿ||

[ಈ ಶಾಸನ ಇರುವಿಕೆ ಬಗ್ಗೆ ನನಗೆ ಮಾಹಿತಿ ನೀಡಿದ ಬಲ್ಲೂರು ಗ್ರಾಮದ ಯುವಮಿತ್ರ ವೀರೇಶರವರಿಗೂ, ಶಾಸನ ಓದಿ ಅದರ ಪಾಠ ಒದಗಿಸಿದ ಚಿತ್ರದುರ್ಗದ ಡಾ|| ಬಿ. ರಾಜಶೇಖರಪ್ಪನವರಿಗೂ ಧನ್ಯವಾದಗಳು.]








No comments:

Post a Comment