Tuesday, August 25, 2015

ಪ್ರಾಚೀನ ಕರ್ನಾಟಕದ ಅರಸು ಮನೆತನಗಳ ಮೂಲವನ್ನು ಸಾರುವ ಬಿರುದಾವಳಿಗಳು
ಡಾ. ಎಸ್.ವೈ. ಸೋಮಶೇಖರ್
ಕರ್ನಾಟಕದಲ್ಲಿ ವಿವಿಧ ಅರಸು ಮನೆತನಗಳು ಆಳ್ವಿಕೆ ನಡೆಸಿರುವುದು ತಿಳಿದ ವಿಷಯ. ಈ ಮನೆತನಗಳ ಆಳ್ವಿಕೆಯ ಅವಧಿಯಲ್ಲಾದ ಅನೇಕ ಸಂಗತಿಗಳು ಚರಿತ್ರೆಯಲ್ಲಿ ದಾಖಲಾಗಿವೆ. ಅವುಗಳ ಮೂಲಕ ಪ್ರಾಚೀನ ಕರ್ನಾಟಕದ ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕøತಿಕ ಅಂಶಗಳನ್ನು ಕಟ್ಟಿಕೊಡುವ ಪ್ರಯತ್ನ ನಡೆಯುತ್ತಾ ಬಂದಿದೆ. ಅಂತೆಯೇ ಕರ್ನಾಟಕದ ಪ್ರಾಚೀನ ಅರಸು ಮನೆತನಗಳ ಮೂಲವನ್ನು ಕುರಿತ ಚರ್ಚೆಗಳು ನಡೆದಿವೆ ಮತ್ತು ಇಂದಿಗೂ ನಡೆಯುತ್ತಲಿವೆ. ಅದರಲ್ಲೂ ಪ್ರಾಚೀನ ಅರಸು ಮನೆತನಗಳ ಮೂಲ ಕುರಿತ ಮಾಹಿತಿಯನ್ನು ಹೊರಹಾಕಲು ಬಿರುದಾವಳಿಗಳು ಪ್ರಮುಖ ಆಕರಗಳಾಗಿ ಕಂಡುಬಂದಿರುವುದು ಗಮನಾರ್ಹ. ಪ್ರಾಚೀನ ಅರಸರು ತಮ್ಮನ್ನು ಅನೇಕ ಬಗೆಯ ಬಿರುದುಗಳಿಂದ ಬಣ್ಣಿಸಿಕೊಂಡಿರುವುದನ್ನು ಕಾಣಬಹುದು. ಕರ್ನಾಟಕದ ಪ್ರಾಚೀನ ಶಾಸನ-ಸಾಹಿತ್ಯಗಳಲ್ಲಿ ಉಲ್ಲೇಖಗೊಂಡಿರುವ ಬಿರುದುಗಳನ್ನು ಗಮನಿಸಿದರೆ ಬಿರುದಾವಳಿಗಳು ಪ್ರಾಚೀನರ ಬದುಕಿನ ಅವಿಭಾಜ್ಯ ಅಂಗಗಳೇನೋ ಎಂಬಂತೆ ಭಾಸವಾಗುತ್ತದೆ. ಈ ಬಗೆಯ ಬಿರುದುಗಳು ಹೆಚ್ಚಾಗಿ ವಿಶೇಷಣಗಳೇ ಆಗಿವೆ. ಹಾಗಿದ್ದೂ ಮನೆತನಗಳ ಮೂಲವನ್ನು ಕುರಿತಂತೆ ಹೇಳುವುದಾದರೆ ಇವು ಅಧಿಕೃತ ಆಕರಗಳಾಗಿಯೇ ನಿಲ್ಲುತ್ತಿರುವುದು ಗಮನೀಯ ಅಂಶ. ಬಿರುದಾವಳಿಗಳಲ್ಲಿ ಅರಸು ಮನೆತನ, ಕುಲಮೂಲ, ವಂಶ, ರಾಜಧಾ£ ಮೊದಲಾದ ವಿವರಗಳಿವೆ. ಅವುಗಳನ್ನು ಗುರುತಿಸಿ ವಿಶ್ಲೇಷಿಸುವ ಪ್ರಯತ್ನ ಪ್ರಸ್ತುತ ಪ್ರಬಂಧದ್ದು.
ಆಕರಗಳ ಹಿನ್ನೆಲೆಯಲ್ಲಿ ಹೇಳುವುದಾದರೆ ಕರ್ನಾಟಕದಲ್ಲಿ ಮನೆತನಗಳನ್ನು ಕುರಿತ ಬಿರುದಾವಳಿಗಳು ಕಂಡುಬರುವುದು ಕದಂಬರ ಕಾಲದಿಂದ. ತಮ್ಮ ಕುಲಮೂಲ, ವಂಶ, ಮನೆತನ, ರಾಜಧಾನಿ ಪ್ರದೇಶಗಳನ್ನು ತಿಳಿಸುವ ಬಿರುದುಗಳು ಕದಂಬರಿಂದ ಆರಂಭವಾಗಿ ಪಾಳೆಯಗಾರರ ಕಾಲದವರೆಗೂ ಮುಂದುವರಿದಿವೆ.
ಕದಂಬ ಮನೆತನದ ಆರಂಭದ ಅರಸರು ತಾವು ಆಳುತ್ತಿದ್ದ ಪ್ರದೇಶವನ್ನೂ ಬಿರುದುಗಳ ಮೂಲಕ ಪ್ರಕಟಪಡಿಸಿದ್ದಾರೆ. ಆರಂಭದ ಅರಸ ಕಂಗವರ್ಮನು ತನ್ನನ್ನು ಕುಂತಲ ಭೂವಲ್ಲಭನೆಂದು ಕರೆದುಕೊಂಡಿದ್ದಾನೆ. ಇದರಿಂದ ಕುಂತಲನಾಡು ಇವರ ಆಳ್ವಿಕೆಯ ನೆಲೆವೀಡಾಗಿದ್ದುದು ಸ್ಪಷ್ಟವಾಗುತ್ತದೆ. ಹಾಗೆಯೇ ಇವರ ಮನೆತನವನ್ನು ಕುರಿತ ಬಿರುದುಗಳು ಕಾಕುಸ್ಥವರ್ಮನ ಕಾಲದಿಂದ ಕಂಡುಬರುತ್ತವೆ. ಇವನನ್ನು ಶಾಸನಗಳಲ್ಲಿ ಕದಂಬಕುಲ ಶಿರೋಮಣಿ, ಕದಂಬಕುಲ ಭೂಷಣನೆಂದು ಹೊಗಳಿವೆ. ರವಿವರ್ಮನನ್ನು ಕದಂಬತೃಣೀತ, ಕದಂಬ ಕಂಠೀರವನೆಂದು ಕರೆಯುವ ಜೊತೆಗೆ ಅವನ ರಾಜಧಾನಿ ವಿವರವುಳ್ಳ ಕುಂತಲ ಭೂವಲ್ಲಭ, ಬನವಾಸಿ ಪುರವರಾಧೀಶ್ವರ, ಬನವಾಸಿ ವಿಷಯಾಧೀಶ್ವರ ಎಂಬ ಬಿರುದುಗಳು ಕಾಣಬರುತ್ತವೆ. ಈ ಬಗೆಯ ಬಿರುದುಗಳನ್ನು ಕದಂಬರು ಸ್ವತಂತ್ರವಾಗಿ ಆಳ್ವಿಕೆ ಮಾಡುವಾಗಲೂ, ಸಾಮಂತ, ಮಾಂಡಲಿಕರಾಗಿ ಆಳುತ್ತಿದ್ದಾಗಲೂ ಧರಿಸಿರುವರು. ಕದಂಬರಲ್ಲಿ ಅನೇಕ ಶಾಖೆಗಳಿವೆ. ಅವು ಗೋವಾ ಕದಂಬರು, ಹಾನಗಲ್ಲು ಕದಂಬರು ಇತ್ಯಾದಿ. ಈ ಎಲ್ಲ ಶಾಖೆಗಳವರೂ ತಮ್ಮ ಮನೆತನದ ಮೂಲ ಬಿರುದುಗಳನ್ನು ಧರಿಸುವ ಪರಿಪಾಠವನ್ನು ಮುಂದುವರಿಸಿದ್ದಾರೆ. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಸಾಮಂತ, ಮಾಂಡಲಿಕರಾಗಿ ಆಳುತ್ತಿದ್ದ ಆದಿತ್ಯವರ್ಮರಸ (ಕ್ರಿ.ಶ. 992), ಹರಿಕೇಶ್ವರದೇವ (ಕ್ರಿ.ಶ. 1055) ಬನವಾಸಿ ಪುರವರಾಧೀಶ್ವರರೆಂದು ಕರೆದುಕೊಂಡಿದ್ದಾರೆ. ಹರಿಕೇಶ್ವರದೇವನು ಕದಂಬ ಚಕ್ರವರ್ತಿ. ಕದಂಬಕುಳಕಮಳ ಮಾರ್ತಾಂಡ, ಕಾದಂಬ ಚಕ್ರಿಯೆಂದೂ1 ತೋಯಿಮರಸದೇವ (ಕ್ರಿ.ಶ. 1067) ಕದಂಬಕುಲ ಭೂಷಣ,2 ನಾಗವರ್ಮರಸ (ಕ್ರಿ.ಶ. 1077) ಕದಂಬಾಭರಣ,3 ನಾಚಿದೇವರಸ (ಕ್ರಿ.ಶ. 1085) ಕದಂಬಕುಲಕಮಲ ಮಾರ್ತಾಂಡ,4 ವೀರಪೆರ್ಮಾಡಿದೇವರಸÀ (ಕ್ರಿ.ಶ. 1173) ಕದಂಬವಂಶ ಮಹೋದಯ, ಕಾದಂಬ ಚೂಡಾಮಣಿ ಎಂದು ವಿಶಿಷ್ಟವಾಗಿ ಬಣ್ಣಿಸಿಕೊಂಡಿದ್ದಾನೆ.5 ಹಾಗೆಯೇ ಹಾನಗಲ್ಲಿನ ಕದಂಬರಾದ 2ನೇ ಶಾಂತಿವರ್ಮ (ಕ್ರಿ.ಶ.1075) ಕದಂಬ ಕಂಠೀರವನೆಂದೂ,6 1ನೇ ಕೀರ್ತಿವರ್ಮ ಕಾದಂಬಚಕ್ರಿ, ಕಾದಂಬರಾಭರಣನೆಂದು ಕರೆದುಕೊಂಡಿದ್ದಾರೆ.7 ವಿಜಯನಗರ ಕಾಲದಲ್ಲಿ ಬನವಾಸಿ ಪ್ರದೇಶವನ್ನು ನೋಡಿಕೊಳ್ಳುತ್ತಿದ್ದ ಬಿಕ್ಕಿದೇವ ಒಡೆಯ (ಕ್ರಿ.ಶ.1369)ನನ್ನು ಕದಂಬರಾಯ ಕುಲಾಚಾರ್ಯನೆಂದು ಕರೆಯಲಾಗಿದೆ.8 ಒಟ್ಟಿನಲ್ಲಿ ಈ ಮೇಲಿನ ಬಿರುದಾವಳಿಗಳಿಂದ ಕದಂಬ ಮನೆತನ ಕುರಿತು ಹಾಗೂ ಅವರ ಆಳ್ವಿಕೆ ಕ್ರಿ.ಶ. 4ನೆಯ ಶತಮಾನದಿಂದ ಹಿಡಿದು 14ನೆಯ ಶತಮಾನದ ವರೆಗೆ ಒಂದಲ್ಲಾ ಒಂದು ಬಗೆಯಲ್ಲಿ ಕರ್ನಾಟಕದಲ್ಲಿ ಮುಂದುವರಿದದ್ದು ಸ್ಪಷ್ಟವಾಗುತ್ತದೆ.
ಕದಂಬರ ಬಳಿಕ ಕಾಣಬರುವ ಅರಸು ಮನೆತನ ಗಂಗರದು. ಗಂಗರು ಕರ್ನಾಟಕದಲ್ಲಿ ಸುದೀರ್ಘ ಆಳ್ವಿಕೆ ನಡೆಸಿದ್ದಾರೆ. ಕೊಂಗಣಿವರ್ಮ ಈ ಮನೆತನದ ಮೂಲಪುರುಷ. ಈತನಿಗೆ ಪ್ರಥಮ ಗಂಗನೆಂಬ ಬಿರುದಿತ್ತು. ಅಲ್ಲದೆ ಮೂಲಪುರುಷನಾದ ಇವನ ಹೆಸರನ್ನು ನಂತರ ಬಂದ ಈ ಮನೆತನದ ಅರಸರು ವಿಶೇಷಣವಾಗಿ ಧರಿಸಿದ್ದುದು ಕಂಡುಬರುತ್ತದೆ. ಅಂತೆಯೇ ಅವರು ಕೊಂಗಣಿವÀರ್ಮ ಧರ್ಮಮಹಾರಾಜ, ಸ್ಥಿರಪೃಥಿವೀ ಕೊಂಗಣಿ ಎಂಬುದಾಗಿ ತಮ್ಮನ್ನು ಕರೆದುಕೊಂಡಿದ್ದಾರೆ. ಹಾಗೆಯೇ ಗಂಗ ಎಂಬುದನ್ನು ಬಹಳ ವಿಶಿಷ್ಟವಾಗಿ ಬಿರುದುಗಳಲ್ಲಿ ಬಳಸಿದ್ದಾರೆ. 1ನೇ ನೀತಿಮಾರ್ಗ ಎರೆಯಂಗÀ (ಕ್ರಿ.ಶ. 843-870)ನು ಗಂಗಚಕ್ರಾಯುಧಾಂಕ, ಗಂಗನಾರಾಯಣ ನೆಂದು9 ಕರೆದುಕೊಂಡರೆ, ಸಾಮಂತ, ಮಾಂಡಲಿಕರಾಗಿ ಆಳ್ವಿಕೆ ನಡೆಸಿದ 2ನೇ ಬೂತುಗÀ (ಕ್ರಿ.ಶ. 936-961)ನು ಗಂಗಗಾಂಗೇಯ, ನನ್ನಿಯಗಂಗ, ಗಂಗಾನ್ವಯ ಕುಲತಿಲಕನೆಂದೂ,10 ಮರುಳದೇವನು ಗಂಗಮಾರ್ತಾಂಡ, 2ನೇ ಮಾರಸಿಂಹನು ಗಂಗಕಂದರ್ಪ, ಗಂಗಚೂಡಾಮಣಿ, ಗಂಗರಸಿಂಹ, ಗಂಗವಜ್ರ, ಗುತ್ತಿಯಗಂಗನೆಂದೂ11 ಬಣ್ಣಿಸಿಕೊಂಡಿದ್ದಾರೆ. ಕಲ್ಯಾಣ ಚಾಲುಕ್ಯ ಅವಧಿಯಲ್ಲಿದ್ದ ಗಂಗರಸ (ಕ್ರಿ.ಶ. 1120)ನನ್ನು ಕೊಳಾಲ ಪುರವರಾಧೀಶ್ವರ, ನನ್ನಿಯ ಗಂಗನೆಂದು ಶಾಸನದಲ್ಲಿ ಕರೆಯಲಾಗಿದೆ.12 ಹೀಗೆ ತಮ್ಮ ಮನೆತನವನ್ನು ಸೂಚಿಸುವ ಗಂಗ ಪದವನ್ನು ಹಾಗೂ ತಮ್ಮ ಮೂಲ ರಾಜಧಾನಿ ಕೋಳಾಲಪುರ(ಕೋಲಾರ)ವನ್ನು ಬಿರುದಿನಲ್ಲಿ ಧರಿಸುವ ಮೂಲಕ ತಮ್ಮ ಮೂಲವನ್ನು ಉಲ್ಲೇಖಿಸುವ ಪ್ರಯತ್ನ ಮಾಡಿರುವುದು ಗಮನಾರ್ಹ.
ಕರ್ನಾಟಕದ ಚರಿತ್ರೆಯಲ್ಲಿ ಚಾಲುಕ್ಯ ಮನೆತನದ ಪಾತ್ರ ಮಹತ್ವದ್ದು. ಇವರು ಬಾದಾಮಿ, ವೆಂಗಿ ಹಾಗೂ ಕಲ್ಯಾಣದ ಚಾಲುಕ್ಯರೆಂದೇ ಪ್ರಸಿದ್ಧರಾಗಿದ್ದಾರೆ. ಈ ಮನೆತನಗಳ ಅರಸರು ತಮ್ಮ ಮೂಲವನ್ನು ಚಲುಕ್ಯ, ಚಳುಕ್ಯ, ಚಾಲುಕ್ಯ ಎಂಬುದಾಗಿ ಸ್ಪಷ್ಟಪಡಿಸಿರುವರು. ಇದಕ್ಕೆ ಅನೇಕ ಬಿರುದುಗಳು ಸಾಕ್ಷ್ಯಗಳಾಗಿವೆ.
ಬಾದಾಮಿ ಚಾಲುಕ್ಯ ಮನೆತನದ ಆರಂಭಿಕ ಅರಸನಾದ ಜಯಸಿಂಹನು ವಲ್ಲಭೇಶ್ವರನೆಂದು ಕರೆದುಕೊಂಡಿದ್ದರೆ, 1ನೇ ಪುಲಕೇಶಿ (ಕ್ರಿ.ಶ. 543-567) ಚಾಳುಕ್ಯ ವಲ್ಲಭೇಶ್ವರನೆಂದು ಬಣ್ಣಿಸಿಕೊಂಡಿದ್ದಾನೆ.13 1ನೇ ಕೀರ್ತಿವರ್ಮನನ್ನು ಚಾಲುಕ್ಯ ವಂಶಾಂಬರನೆಂದು ಕರೆದರೆ,14 ಇಮ್ಮಡಿ ಪುಲಕೇಶಿಯನ್ನು ಚಲುಕಿ ಕುಲಾಲಂಕಾರನೆಂದೂ ವರ್ಣಿಸಲಾಗಿದೆ.15 ಈ ಬಿರುದುಗಳನ್ನು ಮುಂದೆ ಬಂದ ಅರಸರು ಸಾಮಾನ್ಯವಾಗಿ ಧರಿಸಿದ್ದಾರೆ.
ರಾಷ್ಟ್ರಕೂಟರ ಅವಧಿಯಲ್ಲಿ ಮಹಾಸಾಮಂತನಾಗಿ ಕೋಗಳಿ-500ನ್ನು ಆಳುತ್ತಿದ್ದ ಕತ್ಯೆರ (ಕ್ರಿ.ಶ.944)ನು ತನ್ನನ್ನು ಚಾಳುಕ್ಯ ವಂಶೋದ್ಭವನೆಂದೂ,16 ಅದೇ ಅವಧಿಯ ಧೋರಪಯ್ಯ (ಕ್ರಿ.ಶ. 954)ನು ಚಾಳುಕ್ಯ ನಾರಾಯಣನೆಂದು ಕರೆದುಕೊಂಡಿದ್ದಾರೆ.17 ಇದರಿಂದ ರಾಷ್ಟ್ರಕೂಟರ ಅವಧಿಯಲ್ಲಿ ಚಾಲುಕ್ಯರು ಸ್ವತಂತ್ರವಾಗಿ ಆಳ್ವಿಕೆ ನಡೆಸದಿದ್ದರೂ ಸಾಮಂತರಾಗಿ ಅಧಿಕಾರದಲ್ಲಿ ಮುಂದುವರಿದುದು ದೃಢವಾಗುತ್ತದೆ. ಹಾಗೆಯೇ ರಾಷ್ಟ್ರಕೂಟರನ್ನು ಹತ್ತಿಕ್ಕಿಬಂದ ಕಲ್ಯಾಣ ಚಾಲುಕ್ಯರು ತಮ್ಮ ಮೂಲವನ್ನು ಹೆಮ್ಮೆಯಿಂದ ದಾಖಲಿಸುವ ಪ್ರಯತ್ನವನ್ನು ಮಾಡಿದ್ದಾರೆ.
ಕಲ್ಯಾಣ ಚಾಲುಕ್ಯ ಮನೆತನದ ಮೊದಲ ಅರಸ 2ನೇ ತೈಲಪನು ಚಾಳುಕ್ಯ ರಾಮ, ಚಾಳುಕ್ಯಾಭರಣ, ಚಾಳುಕ್ಯ ವಂಶೋದ್ಭವನೆಂದು ಕರೆಯುವ ಮೂಲಕ ಚಾಳುಕ್ಯ ಮನೆತನದವನೆಂದು ತನ್ನನ್ನು ಸ್ಪಷ್ಟಪಡಿಸಿಕೊಂಡಿದ್ದಾನೆ.18 ಹಾಗೆಯೇ ಇವನು ರಾಷ್ಟ್ರಕೂಟರನ್ನು ಅಧಿಕಾರದಿಂದ ಕಿತ್ತೊಗೆದು ರಟ್ಟಘರಟ್ಟನೆಂದು ಕರೆದುಕೊಂಡಿದ್ದಾನೆ. ಇವನ ನಂತರ ಬಂದ ಸತ್ಯಾಶ್ರಯ (ಕ್ರಿ.ಶ. 997-1008)ನು ಚಾಳುಕ್ಯ ಕಂದರ್ಪ, ಚಾಳುಕ್ಯ ಮಾರ್ತಾಂಡನೆಂದೂ,19 5ನೇ ವಿಕ್ರಮಾದಿತ್ಯ ಸತ್ಯಾಶ್ರಯ ಕುಳತಿಳಕ,20 1ನೇ ಸೋಮೇಶ್ವರ ಚಾಳುಕ್ಯ ಚೂಡಾಮಣಿ,21 ವಿಜಯಾದಿತ್ಯ ಚಾಳುಕ್ಯ ಮಾಣಿಕ್ಯ,22 6ನೇ ವಿಕ್ರಮಾದಿತ್ಯ ಚಾಳುಕ್ಯ ನಾರಾಯಣ, ಚಾಳುಕ್ಯಾಭರಣ, ಚಾಳುಕ್ಯ ಚಕ್ರೇಶ್ವರ ಎಂದು ಕರೆದುಕೊಂಡಿದ್ದಾರೆ.23 2ನೇ ಜಗದೇಕಮಲ್ಲನು ಮುಂದುವರಿದು ಚಾಳುಕ್ಯ ಪ್ರತಾಪಚಕ್ರವರ್ತಿ, ಚಾಲುಕ್ಯ ವಂಶಲಲಾಮನೆಂದೂ,24 3ನೇ ತೈಲಪನು ಶ್ರೀಮದ್ವಿಕ್ರಮ ಚಕ್ರವರ್ತಿಯೆಂದೂ ಕರೆದುಕೊಂಡಿರುವರು.25 ಕಲ್ಯಾಣ ಚಾಲುಕ್ಯ ಮನೆತನದ ಕೊನೆಯ ಅರಸನಾದ 4ನೇ ಸೋಮೇಶ್ವರನು ಈ ಮೇಲಿನ ಬಿರುದುಗಳಲ್ಲದೆ ಕಲಚೂರ್ಯರಿಂದ ಸಾಮ್ರಾಜ್ಯವನ್ನು ವಶಮಾಡಿಕೊಂಡ ನೆನಪಿಗೆ ಕಲಚೂರ್ಯ ಕುಲನಾಶಕನೆಂಬ ಬಿರುದನ್ನು ಧರಿಸಿದ್ದಾನೆ.26 ಹಾಗೆಯೇ ಚಾಲುಕ್ಯ ಸಾಮ್ರಾಜ್ಯವನ್ನು ಪುನರ್‍ಸ್ಥಾಪಿಸಿದ ಹಿನ್ನೆಲೆಯಲ್ಲಿ ಚಾಲುಕ್ಯರಾಜ ಸಮುದ್ದರಣನೆಂದೂ ತನ್ನನ್ನು ಕರೆದುಕೊಂಡಿರುವನು.
ಚಾಲುಕ್ಯ ಮನೆತನವು ಕಲ್ಯಾಣ ಚಾಲುಕ್ಯರ ಕಾಲಕ್ಕೇ ಕೊನೆಗೊಳ್ಳಲಿಲ್ಲ. ವಿಜಯನಗರ ಕಾಲದಲ್ಲಿ (ಕ್ರಿ.ಶ. 1387) ಆಳುತ್ತಿದ್ದ ವಲ್ಲಭರಾಯ ಮಹಾರಾಜ ಎಂಬುವವನು ತನ್ನನ್ನು ಚಾಳುಕಿ ಚಕ್ರವರ್ತಿ, ಚಾಳುಕಿ ನಾರಾಯಣನೆಂದು ಕರೆದುಕೊಂಡಿದ್ದಾನೆ.27 ಇದರಿಂದ ಚಾಲುಕ್ಯ ಮನೆತನದ ಅಸ್ತಿತ್ವ ಕ್ರಿ.ಶ. 6ನೇ ಶತಮಾನದಿಂದ 14ನೇ ಶತಮಾನದವರೆಗೂ ಕರ್ನಾಟಕದ ಇತಿಹಾಸದಲ್ಲಿ ವಿರಾಜಮಾನರಾಗಿ ಇದ್ದುದನ್ನು ಬಿರುದಾವಳಿಗಳಿಂದ ಗುರುತಿಸಬಹುದಾಗಿದೆ.
ಕರ್ನಾಟಕದಲ್ಲಿ ಚಾಲುಕ್ಯರಂತೆಯೇ ರಾಷ್ಟ್ರಕೂಟರು ವಿಶಿಷ್ಟವಾದ ಕೊಡುಗೆಗಳನ್ನು ನೀಡಿದ್ದಾರೆ. ಇವರಲ್ಲಿ ಒಬ್ಬೊಬ್ಬ ಅರಸ ಒಂದೊಂದು ಬಗೆಯ ವಿಶಿಷ್ಟ ಬಿರುದಿನ ಮೂಲಕ ತಮ್ಮನ್ನು ಗುರುತಿಸಿಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ. 1ನೇ ಕೃಷ್ಣನು ಅಕಾಲವರ್ಷನೆಂದೂ, 2ನೇ ಗೋವಿಂದನು ಪ್ರಭೂತವರ್ಷ, ಧ್ರುವನು ಧಾರಾವರ್ಷ, ಅಮೋಘವರ್ಷನು ನಿತ್ಯವರ್ಷ, 4ನೇ ಗೋವಿಂದನು ಸುವರ್ಣವರ್ಷ ಎಂದು ಬಣ್ಣಿಸಿಕೊಂಡಿರುವುದು ಗಮನಾರ್ಹ. ಹಾಗೆಯೇ ಈ ಮನೆತನದವರು ತಮ್ಮ ಮನೆತನ, ವಂಶ, ರಾಜಧಾನಿಗಳನ್ನೂ ಬಿರುದಾವಳಿಗಳ ಮೂಲಕ ದಾಖಲಿಸಿದ್ದಾರೆ. ಅದರಲ್ಲೂ ತಮ್ಮ ಮೂಲ ರಾಜಧಾನಿ ಲಟ್ಟಲೂರೆಂದೂ, ತಾವು ರಟ್ಟರು ಹಾಗೂ ಯಾದವ ವಂಶದವರೆಂದು ಗುರುತಿಸಿಕೊಂಡಿದ್ದಾರೆ. 1ನೇ ಕೃಷ್ಣನು ತನ್ನನ್ನು ಯಾದವ ವಂಶೋದ್ಭವನೆಂದು28 ಕರೆದುಕೊಳ್ಳುವ ಮೂಲಕ ಯಾದವ ವಂಶದವನೆಂದು ದಾಖಲಿಸುತ್ತಾನೆ. ಅಮೋಘವರ್ಷನು ತನ್ನ ಮೂಲ ರಾಜಧಾನಿ ಕುರಿತಂತೆ ಲಟ್ಟಲೂರ ಪುರವರಾಧೀಶ್ವರನೆಂದೂ ಕರೆದುಕೊಂಡಿದ್ದಾನೆ. ಹಾಗೆಯೇ ತನ್ನ ಕುಲಮೂಲವನ್ನು ಕುರಿತಂತೆ ಯದುಕುಳನರಪಾಳನೆಂದೂ ಕರೆದುಕೊಂಡಿರುವನು.29 3ನೇ ಇಂದ್ರನು ರಟ್ಟಕಂದರ್ಪ, ರಟ್ಟರ ಮೇರು, ಲತ್ತಲೂರ ಪುರಪರಮೇಶ್ವರನೆಂದೂ,30 3ನೇ ಕೃಷ್ಣನು ರಟ್ಟಕುಲ ಚಕ್ರವರ್ತಿ, ರಟ್ಟಕುಲಾನ್ವಯನೆಂದೂ,31 ಕೊಟ್ಟಿಗದೇವನು ರಟ್ಟತಿಲಕನೆಂದೂ,32 ಬನವಾಸಿಯ ಸಾಮಂತನಾಗಿದ್ದ ಶಂಕರಗಂಡನು (ಕ್ರಿ.ಶ. 924) ರಟ್ಟರ ಮೇರು ಎಂಬುದಾಗಿ ಕರೆದುಕೊಂಡಿದ್ದಾರೆ.33 4ನೇ ಕೃಷ್ಣನು ಮಾನ್ಯಖೇಟ ಪುರಭೂಷಣನೆಂದು ಕರೆದುಕೊಳ್ಳುವ ಮೂಲಕ ಲತ್ತಲೂರಿನಿಂದ ರಾಜಧಾನಿಯನ್ನು ಮಾನ್ಯಖೇಟಕ್ಕೆ ವರ್ಗಾಯಿಸಿದ್ದುದು ತಿಳಿಯುತ್ತದೆ.34 ಕಲ್ಯಾಣ ಚಾಲುಕ್ಯರ ಆಳ್ವಿಕೆಯ ಅವಧಿಯಲ್ಲಿ ರಾಷ್ಟಕೂಟರು ಸಾಮಂತರಾಗಿ ಆಳಿದ ವಿವರಗಳು ಶಾಸನಗಳಲ್ಲಿ ಗೋಚರಿಸುತ್ತದೆ. ಕ್ರಿ.ಶ. 1062ರಲ್ಲಿ ಮಹಾರಾಷ್ಟ್ರ ಭಾಗದಲ್ಲಿ ಮಹಾಸಾಮಂತನಾಗಿದ್ದ ಕಾಳಸೇನರಸನನ್ನು ರಟ್ಟಕುಲಭೂಷಣನೆಂದು ಶಾಸನವೊಂದರಲ್ಲಿ  ಕರೆಯಲಾಗಿದೆ.35 ಈ ಮೇಲಿನ ಬಿರುದುಗಳಿಂದ ರಾಷ್ಟ್ರಕೂಟರು ತಮ್ಮನ್ನು ರಟ್ಟರು, ರಾಷ್ಟ್ರಕೂಟರು, ರಟ್ಟ ಕುಲದವರೆಂದೂ, ಹಾಗೆಯೇ ಯಾದವ ಅಥವಾ ಯದುಂಶದವರೆಂದು ಕರೆದುಕೊಂಡಿರುವುದು ಗಮನೀಯ ಸಂಗತಿ.
ಕಲ್ಯಾಣ ಚಾಲುಕ್ಯರ ಬಳಿಕ ಆಳಿದ ಕಲ್ಯಾಣದ ಕಲಚೂರಿಗಳು ತಮ್ಮ ಮನೆತನದ ಮೂಲವನ್ನು ಬಿರುದುಗಳಲ್ಲಿ ದಾಖಲಿಸಿದ್ದಾರೆ. ಇಮ್ಮಡಿ ಬಿಜ್ಜಳದೇವ ತನ್ನನ್ನು ಕಳಚೂರ್ಯ ಚಕ್ರವರ್ತಿ, ಕಳಚೂರ್ಯ ಕುಳಕಮಳಮಾರ್ತಾಂಡ, ಕಾಳಂಜರ ಪುರವರಾಧೀಶ್ವರನೆಂದು ಕರೆದುಕೊಂಡಿದ್ದಾನೆ. ಹಾಗೆಯೇ ತನ್ನ ರಾಜಧಾನಿ ಕುರಿತಂತೆ ಕಲ್ಯಾಣ ಪುರವರಾಧೀಶನೆಂದೂ ಬಣ್ಣಿಸಿಕೊಂಡಿರುವನು.36 ಇವೇ ಬಿರುದುಗಳನ್ನು ಈ ಮನೆತನದ ಮುಂದಿನ ಅರಸರೂ ಧರಿಸಿದ್ದಾರೆ. ಮಲ್ಲುಗಿದೇವನು ಕಳಚೂರ್ಯ ಪ್ರತಾಪಚಕ್ರವರ್ತಿಯೆಂದು ತನ್ನನ್ನು ಕರೆದುಕೊಂಡಿರುವನು.
ನೊಳಂಬ ಅರಸರ ಆಳ್ವಿಕೆಯನ್ನು ಕರ್ನಾಟಕ, ಆಂಧ್ರ ಪ್ರದೇಶಗಳಲ್ಲಿ ಕಾಣುತ್ತೇವೆ. ಇವರಲ್ಲಿ ಸಿಂಹಪೋತಕಲಿಯು ತನ್ನನ್ನು ನೊಳಂಬಾಧಿರಾಜ, ಪಲ್ಲವಾನ್ವಯ, ಪಲ್ಲವ ಕುಲತಿಲಕನೆಂದು ಕರೆದುಕೊಂಡಿದ್ದಾನೆ.37 ಇದರಿಂದ ನೊಳಂಬರು ಪಲ್ಲವ ವಂಶಕ್ಕೆ ಸೇರಿದವರೆಂದು ಗೊತ್ತಾಗುತ್ತದೆ. ನೊಳಂಬ ದಿಲೀಪನು ನೊಳಂಬ ನಾರಾಂiÀiಣ, ಪಲ್ಲವರಮ, ಪಲರೊಡೆಗಂಡ, ಪಲ್ಲವಮುರಾರಿ, ಪಲ್ಲವಾದಿತ್ಯ, ಪಲ್ಲವೋಳ್ಗಂಡ ಎಂಬ ವಿಶಿಷ್ಟ ಬಿರುದುಗಳಿಂದ ಖ್ಯಾತಿ ಹೊಂದಿದ್ದುದಲ್ಲದೆ ಅವನು ತಾನು ಪಲ್ಲವ ಮನೆತನದವನೆಂಬುದನ್ನು ಒತ್ತಿ ಹೇಳಿಕೊಂಡಿದ್ದಾನೆ. ಹಾಗೆಯೇ 2ನೇ ಮಹೇಂದ್ರನು ಪಲ್ಲವಾಭರಣ,38 2ನೇ ಇರಿವ ನೊಳಂಬನು ಕಾಂಚೀಪುರವರೇಶ್ವರ, ಉದಯಾದಿತ್ಯ ಕಾಂಚಿಪುರವರೇಶ್ವರ, ನೊರೆಯೂರು ಪುರವರಾಧೀಶ್ವರ, ಪಲ್ಲವ ಕುಲಾನ್ವಯನೆಂದು ಕರೆದುಕೊಂಡಿದ್ದಾರೆ.39 ಹೀಗೆ ನೊಳಂಬರು ತಾವು ಮೂಲತಃ ತಮಿಳುನಾಡಿನ ಕಂಚಿಯವರಾಗಿದ್ದು ಪಲ್ಲವ ಮನೆತನಕ್ಕೆ ಸೇರಿದವರೆಂಬುದನ್ನು ದಾಖಲಿಸಿರುವುದು ಗಮನಾರ್ಹ.
ಕಲ್ಯಾಣ ಚಾಲುಕ್ಯರ ನಂತರ ಬಂದ ದೇವಗಿರಿ ಯಾದವರು ಅಥವಾ ಸೇವುಣರು ತಮ್ಮನ್ನು ಯಾದವರೆಂದೇ ಗುರುತಿಸಿಕೊಂಡಿದ್ದಾರೆ. ಈ ಮನೆತನದ 5ನೇ ಭಿಲ್ಲಮ ಯಾದವ ನಾರಾಯಣ, ಯಾದವ ಚಕ್ರವರ್ತಿ, ವಿಷ್ಣು ವಂಶೋದ್ಭವನೆಂಬ ಬಿರುದುಗಳನ್ನು ಹೊಂದಿದ್ದನು.40 ಜೈತುಗಿಯು ದ್ವಾರಾವತಿ ಪುರವರಾಧೀಶ್ವರ, ಯಾದವ ವಂಶಾಂಬರದ್ಯುಮಣಿ, ಯಾದವಕುಳಕಮಲನೆಂದೂ ಬಣ್ಣಿಸಿಕೊಂಡಿದ್ದಾನೆ.41 ಹಾಗೆಯೇ 2ನೇ ಸಿಂಗಣನನ್ನು ಯಾದವಕುಳಕಮಲ ಮಾರ್ತಾಂಡನೆಂದು ಕರೆದರೆ,42 ಕನ್ನರ ದೇವನನ್ನು ಯಾದವಕುಲತಿಲಕನೆಂದು ಬಣ್ಣಿಸಲಾಗಿದೆ.43 ಇವೇ ಬಿರುದುಗಳನ್ನು ಮುಂದೆ ಬಂದ ಅರಸರೂ ಧರಿಸಿದ್ದಾರೆ. ಸೇವುಣರು ತಾವು ಯಾದವ ಕುಲದವರೆಂಬುದನ್ನು ಬಿರುದುಗಳ ಮೂಲಕ ಒತ್ತಿ ಹೇಳಿಕೊಂಡಿರುವುದನ್ನು ಇಲ್ಲಿ ಗಮನಿಸಬಹುದು. ಇದೇ ಅವಧಿಯಲ್ಲಿ ಆಳ್ವಿಕೆ ನಡೆಸಿದ ಹೊಯ್ಸಳರು ಕೂಡ ತಮ್ಮನ್ನು ದ್ವಾರಾವತೀ ಪುರವರಾಧೀಶ್ವರರೆಂದು ಕರೆದುಕೊಂಡಿದ್ದಾರೆ. ವಿಷ್ಣುವರ್ಧನ, ವೀರ ನರಸಿಂಹ, 2ನೇ ನರಸಿಂಹ ಮೊದಲಾದವರು ಯಾದವಕುಲತಿಲಕ, ಯಾದವನಾರಾಯಣ, ಯಾದವ ಕುಲಾಂಬರದ್ಯುಮಣಿಯೆಂದು ಹೇಳಿಕೊಳ್ಳುವ ಮೂಲಕ ತಾವು ಯಾದವ ವಂಶಕ್ಕೆ ಸೇರಿದವರೆಂದು ಹೇಳಿಕೊಂಡಿದ್ದಾರೆ.44
ಕಮ್ಮಟದುರ್ಗದ ಕಂಪಿಲರಾಯನು ತನ್ನನ್ನು ಯಾದವ ನಾರಾಯಣನೆಂದು ಕರೆದುಕೊಡಿದ್ದಾನೆ.45 ವಿಜಯನಗರ ಅರಸರ ಕಾಲದಲ್ಲಿ ಅನೇಕ ಬಗೆಯ ಬಿರುದುಗಳನ್ನು ಶಾಸನ
ಸಾಹಿತ್ಯಗಳಲ್ಲಿ ಕಾಣುತ್ತೇವೆ. ಅವರು ಹಿಂದೂರಾಯ ಸುರತ್ರಾಣ, ದಕ್ಷಿಣ ಸಮುದ್ರಾಧೀಶ್ವರ, ಉತ್ತರ ದಕ್ಷಿಣ ಪೂರ್ವ ಪಶ್ಚಿಮ ಸಮುದ್ರಾಧಿಪತಿ ಮುಂತಾಗಿ ಬಣ್ಣಿಸಿಕೊಂಡಿದ್ದಾರೆ. ಹಾಗೆಯೇ ಇವರ ಬಿರುದುಗಳಲ್ಲಿ ತಮ್ಮ ಮನೆತನವನ್ನು ಹೇಳಿಕೊಳ್ಳುವ ಪ್ರಯತ್ನವನ್ನೂ ಮಾಡಿದ್ದಾರೆ. 2ನೇ ಹರಿಹರನು ಪಡವಾರ ವಂಶೋದ್ಭವನೆಂದೂ,46 2ನೇ ದೇವರಾಯನು ವಿಜಯನಗರ ಪುರವರಾಧೀಶ್ವರ,47 ಶ್ರೀಕೃಷ್ಣದೇವರಾಯನು ತೌಳವಂಶಾಬ್ದಿಚಂದ್ರ, ಯಾದವಕುಲಾಂಬರದ್ಯುಮಣಿಯೆಂದು ತಮ್ಮನ್ನು ಕರೆದುಕೊಂಡಿದ್ದಾನೆ.48 ಈ ಮೇಲಿನ ಬಿರುದುಗಳಿಂದ ವಿಜಯನಗರ ಅರಸರ ಮೂಲವನ್ನು ಕುರಿತು ಚರ್ಚಿಸುವ ಅಗತ್ಯವಿದೆ.
ವಿಜಯನಗರ ನಂತರ ಬಂದ ಮೈಸೂರು ಒಡೆಯರು ಅನೇಕ ಬಿರುದುಗಳನ್ನು ಧರಿಸಿದ್ದರು. ಅವುಗಳಲ್ಲಿ ಬಿರುದಂತೆಂಬರ ಗಂಡ ಎಂಬುದು ಚಿರಪರಿಚಿತವಾದುದು. ಈ ಮನೆತನದ ಮೂಲವನ್ನು ಕುರಿತ ಬಿರುದುಗಳಲ್ಲಿ ಚಿಕ್ಕದೇವರಾಯ ಒಡೆಯರು ಯಾದವಕುಲೋದ್ದರಣ ಧುರೀಣ ಎಂದೂ,49 ಮುಮ್ಮಡಿ ಕೃಷ್ಣರಾಜ ಒಡೆಯ ಯದುಕುಲಪಯಃ ಪಾರಾವಾರ ಕಳಾನಿಧಿ ಎಂದು ಕರೆದಿರುವುದು ಪ್ರಮುಖವಾಗಿದೆ.50 ಇವುಗಳಿಂದ ಒಡೆಯರು ತಮ್ಮನ್ನು ಯಾದವ ವಂಶದವರೆಂದು ಹೇಳಿಕೊಂಡಂತಾಗಿದೆ.
ಪ್ರಾಚೀನ ಕರ್ನಾಟಕದ ಅನೇಕ ಅರಸು ಮನೆತನಗಳಲ್ಲಿ ರಾಷ್ಟ್ರಕೂಟರಿಂದ ಹಿಡಿದು ಮೈಸೂರು ಒಡೆಯರವರೆಗೆ ತಮ್ಮನ್ನು ಯಾದವ ಅಥವಾ ಯದುವಂಶದವರೆಂದು ಕರೆದುಕೊಂಡಿರುವುದು ಗಮನಾರ್ಹ. ರಾಷ್ಟ್ರಕೂಟರು ಯಾದವ ವಂಶೋದ್ಭವ, ಯದುಕುಳನರಪಾಳ, ದೇವಗಿರಿ ಯಾದವರು ಯಾದವನಾರಾಯಣ, ಯಾದವ ಚಕ್ರವರ್ತಿ, ಕಮ್ಮಟದುರ್ಗದ ಕಂಪಿಲರಾಯ ಯಾದವನಾರಾಯಣ, ಹೊಯ್ಸಳ ಮತ್ತು ವಿಜಯನಗರ ಅರಸರು ಯಾದವ ಕುಳಾಂಬರದ್ಯುಮಣಿ, ಮೈಸೂರು ಒಡೆಯರು ಯಾದವ ಕುಲೋದ್ದರಣದುರೀಣ, ಯದುಕುಲಪಯಃ ಪಾರಾವಾರ ಕಳಾನಿಧಿ ಎಂದು ಬಣ್ಣಿಸಿಕೊಂಡಿದ್ದಾರೆ. ಇದರಿಂದ ಯದು ಅಥವಾ ಯಾದವ ಕುಲದವರೆಂದು ಗುರುತಿಸಿಕೊಳ್ಳುವುದು ಪ್ರಾಚೀನ ಅರಸರಿಗೆ ಹೆಮ್ಮೆಯ ಸಂಗತಿಯಾಗಿತ್ತೆಂದು ತಿಳಿದುಬರುತ್ತದೆ. ಯದು ಯಯಾತಿ ಚಕ್ರವರ್ತಿ ಮತ್ತು ದೇವಯಾನಿಯರ ಹಿರಿಯ ಮಗ. ಇವನ ವಂಶದವರನ್ನು ಸಾಮಾನ್ಯವಾಗಿ ಯದುವಂಶದವರೆಂದು ಕರೆಯಲಾಗಿದೆ.
ಒಟ್ಟಿನಲ್ಲಿ ಬಿರುದಾವಳಿಗಳ ಮೂಲಕ ಪ್ರಾಚೀನ ಕರ್ನಾಟಕದ ಅರಸು ಮನೆತನಗಳ ಮೂಲ, ವಂಶ, ಕುಲ, ರಾಜಧಾನಿ ಮತ್ತು ಆಳ್ವಿಕೆಯ ಪ್ರದೇಶಗಳನ್ನು ತಿಳಿಯಲು ಸಾಧ್ಯವೆಂಬುದು ಪ್ರಸ್ತುತ ಪ್ರಬಂಧದ ಮುಖ್ಯ ಆಶಯ. ಬಿರುದಾವಳಿಗಳು ಪ್ರಾಚೀನ ಚರಿತ್ರೆಯ ಪುನಾರಚನೆಗೆ ಮಹತ್ವದ ಆಕರಗಳಾಗುವುದರ ಜೊತೆಗೆ ಅಂದಿನ ಮೂಲ ನೆಲೆಗಳನ್ನು ಪ್ರಕಟಪಡಿಸುವ ಸಂವಹನ ಮಾಧ್ಯಮಗಳೆಂದರೆ ಅತಿಶಯೋಕ್ತಿಯಾಗಲಾರದು.

ಆಧಾರಸೂಚಿ ಮತ್ತು ಅಡಿಟಿಪ್ಪಣಿಗಳು
1. ಏಚಿಡಿಟಿಚಿಣಚಿಞಚಿ Iಟಿsಛಿಡಿiಠಿಣioಟಿs, voಟ-i, ಠಿ.17, ಏಚಿಡಿಟಿಚಿಣಚಿಞಚಿ Uಟಿiveಡಿsiಣಥಿ, ಆhಚಿಡಿತಿಚಿಜ.
2. ಇಠಿigಡಿಚಿಠಿhiಚಿ Iಟಿಜiಛಿಚಿ-xvi, ಠಿ.11.
3. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-1, ಪುಟ 126.
4. ಅದೇ, ಪುಟ 223-224.
5. ಏಚಿಡಿಟಿಚಿಣಚಿಞಚಿ Iಟಿsಛಿಡಿiಠಿಣioಟಿs, voಟ-v, ಠಿ.241.
6. Iಟಿಜiಚಿಟಿ ಂಟಿಣiquಚಿಡಿಥಿ-x, 27.
7. ಏಚಿಡಿಟಿಚಿಣಚಿಞಚಿ Iಟಿsಛಿಡಿiಠಿಣioಟಿs, voಟ.v, ಠಿ.20.
8. ಗಿiರಿಥಿಚಿಟಿಚಿgಚಿಡಿ Iಟಿsಛಿಡಿiಠಿಣioಟಿs, voಟ.ii, ಏಓ.918.
9. ಕನ್ನಡ ಕಾವ್ಯಗಳಲ್ಲಿ ಐತಿಹಾಸಿಕ ವಿಚಾರಗಳು, ರಾಗೌ. ಪುಟ 64.
10. ರಾಷ್ಟ್ರಕೂಟರ ಶಾಸನಗಳು-2, ಪುಟ 544.
11. ಅದೇ, ಪುಟ 787.
12. ಇಠಿigಡಿಚಿಠಿhiಚಿ ಅಚಿಡಿಟಿಚಿಣiಛಿಚಿ-xi, ಊoಟ.68.
13. Iಟಿsಛಿಡಿiಠಿಣioಟಿs oಜಿ ಣhe ಅhಚಿಟuಞಥಿಚಿs oಜಿ ಃಚಿಜಚಿmi, ಇಜ.Pಚಿಜigಚಿಡಿ, ಠಿ.1.
14. Ibiಜ, ಠಿ.10.
15. Ibiಜ, ಠಿ.333.
16. ರಾಷ್ಟ್ರಕೂಟರ ಶಾಸನಗಳು-2, ಪುಟ 518.
17. ಅದೇ, ಪುಟ 563.
18. ಕಲ್ಯಾಣ ಚಾಲುಕ್ಯರ ಶಾಸನಗಳು-1, ಪುಟ 8.
19. ಕನ್ನಡ ಕಾವ್ಯಗಳಲ್ಲಿ ಐತಿಹಾಸಿಕ ವಿಚಾರಗಳು, ರಾಗೌ. ಪುಟ146.
20. ಕಲ್ಯಾಣ ಚಾಲುಕ್ಯರ ಶಾಸನಗಳು-1, ಪುಟ 151.
21. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-1, ಪುಟ 61.
22. ಅದೇ, ಪುಟ 420, 467.
23. ಅದೇ, ಸಂ. 1, ಪುಟ 21; ಸಂ. 10, ಪುಟ 257.
24. ಏಚಿಡಿಟಿಚಿಣಚಿಞಚಿ Iಟಿsಛಿಡಿiಠಿಣioಟಿs, voಟ.v, ಠಿ.104; Souಣh Iಟಿಜiಚಿಟಿ Iಟಿsಛಿಡಿiಠಿಣioಟಿs-15, ಠಿ.188.
25. Ibiಜ, ಠಿ.114.
26. Ibiಜ, ಠಿ.121; Souಣh Iಟಿಜiಚಿಟಿ Iಟಿsಛಿಡಿiಠಿಣioಟಿs-15, ಓo.69.
27. ಇಠಿigಡಿಚಿಠಿhiಚಿ ಅಚಿಡಿಟಿಚಿಣiಛಿಚಿ-xi, ಠಿ.388.
28. ರಾಷ್ಟ್ರಕೂಟರ ಶಾಸನಗಳು-1, ಪುಟ 237.
29. ಅದೇ, ಪುಟ 291.
30. ಅದೇ, ಪುಟ 408, 435.
31. ಅದೇ, ಪುಟ 697, 500.
32. ಅದೇ, ಪುಟ 483, 488.
33. ಅದೇ, ಪುಟ 316, 472.
34. ಅದೇ, ಪುಟ 787.
35. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-6, ಪುಟ 70.
36. ಅದೇ, ಪುಟ 213; ಇಠಿigಡಿಚಿಠಿhiಚಿ ಅಚಿಡಿಟಿಚಿಣiಛಿಚಿ-vii, ಠಿ.132.
37. ಖಿhe ಓoಟಚಿmbಚಿs, ಒ.S.ಏಡಿishಟಿಚಿmuಡಿಣhಥಿ, ಠಿ. 57.
38. Ibiಜ, ಠಿ.126.
39. Ibiಜ, ಠಿ.71, 84, 94; ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-1, ಪುಟ 283.
40. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-10, ಪುಟ 131.
41. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-1, ಪುಟ 274.
42. ಏ.I-ಗಿ, ಠಿಠಿ.165-166; ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-10, ಪುಟ 280; ಅದೇ-9, ಪುಟ 450.
43. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-2, ಪುಟ 180, 606; ಅದೇ, ಸಂ. 1, ಪುಟ 296.
44. ಎಪಿಗ್ರಾಫಿಯ ಕರ್ನಾಟಿಕ-9, ಪುಟ 51, 465; ಅದೇ, ಸಂ. 3, ಪುಟ 76.
45. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-2, ಪುಟ 158.
46. ಇಅ-vii, ಒu.89; iii, ಒi-20.
47. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-3, ಪುಟ 72, 200.
48. ಕೃಷ್ಣದೇವರಾಯನ ಶಾಸನಗಳು, ಡಿ.ವಿ. ಪರಮಶಿವಮೂರ್ತಿ(ಸಂ.), ಪುಟ 624, 625.
49. ಎಪಿಗ್ರಾಫಿಯ ಕರ್ನಾಟಿಕ-5, ಪುಟ 209-223.
50. ಅದೇ, ಪುಟ 160-163.


  ಸಹ ಪ್ರಾಧ್ಯಾಪಕರು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ.

No comments:

Post a Comment