Tuesday, August 18, 2015

ಕಿತ್ತೂರು ಸಂಸ್ಥಾನದ ಅಪ್ರಕಟಿತ ಮೋಡಿ ದಾಖಲೆಗಳು

ಕಿತ್ತೂರು ಸಂಸ್ಥಾನದ ಅಪ್ರಕಟಿತ ಮೋಡಿ ದಾಖಲೆಗಳು
(ಮಲ್ಲಸರ್ಜನನ ರಕ್ಷಣೆಗೆ ಸಂಬಂಧಿಸಿದ ದಾಖಲೆಗಳು)
ಡಾ. ನರಹರಿ ಕೆ.ಎನ್.
1565ರಲ್ಲಿ ವಿಜಯನಗರ ಸಾಮ್ರಾಜ್ಯ ಪತನಗೊಂಡ ಬಳಿಕ ಉತ್ತರ ಕರ್ನಾಟಕದಲ್ಲಿ ಮುಸ್ಲಿಂ ಸಾಮ್ರಾಜ್ಯ ಪ್ರಬಲಗೊಂಡಿದ್ದರಿಂದ ಸಾಂಸ್ಕøತಿಕವಾಗಿ ಜನರ ಮೇಲೆ ಪ್ರಭಾವ ಬೀರಿವೆ. ಕಾರಣ ಉತ್ತರ ಕರ್ನಾಟಕದ ಎಲ್ಲಾ ಭಾಗದಲ್ಲಿ ಪಾರ್ಸಿ ಮತ್ತು ಮರಾಠಿ ಕಾಗದ ಪತ್ರಗಳ ವ್ಯವಹಾರ ನಡೆದಿರುವುದು ಇದಕ್ಕೆ ಸಾಕ್ಷಿ. ಸಾಮಾನ್ಯವಾಗಿ ಪತ್ರಗಳ ವ್ಯವಹಾರಗಳು ಮರಾಠಿ ಮೂಡಿ ಲಿಪಿಯಲ್ಲಿ ಬರೆಯಲ್ಪಟ್ಟಿದ್ದರೂ ಇದರ ಭಾಷೆ ಮಾತ್ರ ದೇವನಾಗರಿ ಮತ್ತು ಮರಾಠಿಯನ್ನು ಬಳಸಲಾಗಿದೆ. ಕೆಲವೊಮ್ಮೆ ಮೋಡಿ ಲಿಪಿಯಲ್ಲಿದ್ದರೂ ಕನ್ನಡ ಭಾಷೆಯಲ್ಲಿ ಪತ್ರ ಬರೆದಿರುವುದು ವಿಶೇಷವಾಗಿದೆ.1
ಮೋಡಿ ಇದು ಮಹಾರಾಷ್ಟ್ರದಲ್ಲಿಯ ಒಂದು ಲಿಪಿ. ಇದನ್ನು ದೇವಗಿರಿಯ ದಿವಾನ ಹೇಮಾಡಪಂತ ಇವರು ಶೋಧಿಸಿದರು. ಛತ್ರಪತಿ, ಪೇಶ್ವೆ, ಫಡಣೀಸ, ಶಿಂಧೆ, ಹೋಳಕರ, ಭೋಸಲೆ, ಚಟ್ನೀಸ ಮೊದಲಾದ ಅರಸರು ಮತ್ತು ಸರದಾರರು ಮೋಡಿಯಲ್ಲಿಯೇ ಪತ್ರ ವ್ಯವಹಾರ ಪ್ರಾರಂಭಿಸಿದರು. ಈ ಲಿಪಿಯಲ್ಲಿ ಪರಿಣಿತರಾದ ಆಗಿನ ಕಾರ್ಯಸ್ಥ ಪ್ರಭುಗಳು ಇದಕ್ಕೆ ರಾಷ್ಟ್ರೀಯ ಸ್ವರೂಪವನ್ನು ಕೊಟ್ಟರು.
ಮೋಡಿ ದಾಖಲೆಗಳು ಹೆಚ್ಚಾಗಿ ಪುಣೆಯ ಪತ್ರಾಗಾರದಲ್ಲಿ ಸಿಗುತ್ತವೆ. ಕ್ರಿ.ಶ.1818ರಲ್ಲಿ ಪೇಶ್ವೆಯರೊಡನೆ ಕೊನೆಯ ಯುದ್ಧ ಮುಗಿದ ನಂತರ ಅಂದಿನ ಮುಂಬೈ ಗೌರ್ನರ್ ಎಲಿಫನ್‍ಸ್ಟನ್‍ನು ಪೇಶ್ವೆ ಹುಜುರ ದಫ್ತರನ್ನು ತನ್ನ ವಶಕ್ಕೆ ತೆಗೆದುಕೊಂಡು ಪುಣೆಯ ಚೀಫ್ ಡೆಕ್ಕನ್ ಕಮೀಶನರ್ ಇವರ ಮೇಲ್ವಿಚಾರಣೆಯಲ್ಲಿ ಇಟ್ಟರು. ಈ ಇನಾಮ ಕಮೀಷನ್ (1843-1863) ಸಂಗ್ರಹಿಸಿದ ಅನೇಕ ಮೋಡಿ ಕಡತಗಳನ್ನು ಪುಣೆಯ ಪತ್ರಾಗಾರದಲ್ಲಿ ಇಡಲಾಗಿದೆ.
ಈ ಪತ್ರಾಗಾರದಲ್ಲಿ ಸುಮಾರು 34,972 ಗಂಟುಗಳು ಇವೆ. ಅವುಗಳಿಗೆ ‘ದಫ್ತರ್’ ಅಥವಾ ‘ರುಮಾಲು’ ಎಂದು ಕರೆಯುತ್ತಾರೆ. ಉದಾ: ಶಾಹು ದಫ್ತರ, ಪೇಶ್ವೆ ದಫ್ತರ, ಸಾತಾರಾ ಮಹಾರಾಜಾ ದಫ್ತರ, ಕರ್ನಾಟಕ ದಫ್ತರ, ಸೊಲ್ಲಾಪುರ ದಫ್ತರ ಇತ್ಯಾದಿ. ಕರ್ನಾಟಕ ದಫ್ತರದಲ್ಲಿ ಸುಮಾರು 2461 ರುಮಾಲುಗಳಿವೆ. ಅವುಗಳಲ್ಲಿ ಕಿತ್ತೂರಿಗೆ ಸಂಬಂಧಪಟ್ಟ ಕಡತಗಳು.
ಪುಣೆ ಪತ್ರಾಗಾರದಲ್ಲಿ ಸಾವಿರಾರು ತಾಳೆಬರಹದ ಪ್ರತಿಗಳು ಸಂಗ್ರಹವಾಗಿದೆ. ಅವುಗಳಲ್ಲಿ ಕಂಡುಬರುವ ಅಂಶಗಳೇನೆಂದರೆ ಆಯಾ ಪ್ರದೇಶದ ಆಯ-ವ್ಯಯ ಜೊತೆಗೆ ಅವರು ಕೊಡಮಾಡಿದ ಪೂಜೆ-ಪುನಸ್ಕಾರ, ಗಣಾಚಾರಿಕೆ ಹೀಗೆ ಇನ್ನಿತರ ಬಾಬ್ತುಗಳಿಗೆ ಕೊಡಮಾಡಿದ ಉಲ್ಲೇಖ ಇದೆ.
ಪುಣೆಯ ಡೆಕ್ಕನ್ ಕಾಲೇಜಿನ ವಸ್ತುಸಂಗ್ರಹಾಲಯ ದೊರೆತ ರುಮಾಲ್ ನಂ. 74 ರ ಕಡತದಲ್ಲಿ ಹಲವು ಪತ್ರಗಳಿದ್ದೂ ಬ್ರಿಟೀಷ್ ಹಾಗು ಪೇಶ್ವೆಯವರ ಪತ್ರ ವ್ಯವಹಾರಗಳ ದಾಖಲೆಗಳಿವೆ.
ಪತ್ರಗಳಲ್ಲಿ ಹೆಚ್ಚಿನವುಗಳು ಅರಬ್ಬಿ ಭಾಷೆಯ/ಪಾರ್ಸಿ ಭಾಷೆಯ ಅಂಕೆಗಳನ್ನು ಬಳಸಿರುತ್ತಾರೆ ಅಲಫ್, ತಿಸ್ನಯ್ಯ, ಮಯ್ಯಾತೀನ್, ಸುಮಾ ಎಂಬ ಪದಗಳಿಂದ ಅಂದಿನ ವರ್ಷಗಳನ್ನ ತಿಳಿಸುವ ಪದಗಳಾಗಿವೆ.2 ಆದ್ದರಿಂದ ಈ ಮೂಡಿ ಪತ್ರಗಳಲ್ಲಿ ಅರಬ್ಬಿ/ಪಾರ್ಸಿ, ಹಾಗೂ ಹಿಂದೂ ಪಂಚಾಂಗದ ಕಾಲಮಾನವನ್ನು ಬಳಸುತ್ತಿರುವುದರಿಂದ, ಅರಬ್ಬಿ ಭಾಷೆಯ ಕೋಷ್ಟಕವನ್ನು ಕೂಡಿಸಿ ಕಾಲಮಾನವನ್ನು ನಿರ್ಧರಿಸುವುದು ಕಷ್ಟಕರ. ಕೆಲವೊಮ್ಮೆ ಹಿಂದೂ ತಿಂಗಳು ಮತ್ತು ಅರಬ್ಬಿ ತಿಂಗಳು ಎರಡನ್ನು ಬಳಸಿದ ಉದಾಹರಣೆಯನ್ನು ಕಾಣುತ್ತೇವೆ.
ಕಿತ್ತೂರು ಸಂಸ್ಥಾನದಲ್ಲಿ ರಕ್ಷಣೆಗಾಗಿ 12000 ಸಾವಿರ ಸೈನ್ಯವಿತ್ತು ಸೈನ್ಯದ ಅವಶ್ಯಕತೆ ಬಿದ್ದಾಗ ಹಳ್ಳಿಯ ಓಲೆಕಾರರನ್ನು ಕರೆಯಿಸಿಕೊಂಡು ಗ್ರಾಮದ ಜನತೆಯ ಸಹಕಾರದಿಂದ ಸೈನಿಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಪ್ರತಿಯೊಬ್ಬ ಓಲೆಕಾರರಿಗೂ ಕತ್ತಿ, ಡಾಲು, ಖಡ್ಗಗಳನ್ನು ನೀಡುವ ಪದ್ಧತಿ ಇದ್ದವು. ಯುದ್ಧದ ಉಪಯೋಗಕ್ಕಾಗಿ 60 ತೋಪುಗಳಿದ್ದವು. ಕಿತ್ತೂರು ಅರಮನೆಯಲ್ಲಿ 5000 ಸಶಸ್ತ್ರ ಸೈನ್ಯ, ಗಜದಳ, ಅಶ್ವದಳ, ಓಂಟೆಗಳು, ಮಂತ್ರಿಗಳು, ಕಾರಭಾರಿಗಳು, ದಳವಾಯಿಗಳು ಮುಂತಾದ ಅಧಿಕಾರಿ ವರ್ಗಗಳಿದ್ದವೆಂದು ತಿಳಿದುಬರುತ್ತದೆ. ಸಂಸ್ಥಾನಕ್ಕಾಗಿ ಪ್ರಾಣ ತೆರಲು ಸಿದ್ಧರಿರುವ ವೀರ ಭಟರುಗಳು ಕೂಡಾ ಇದ್ದರು. ಇದಕ್ಕೆ ರಾಜಗುರುಗಳ ಆಶೀರ್ವಾದವು ಇರುತ್ತಿತ್ತು.
ಕಿತ್ತೂರು ಸಂಸ್ಥಾನವು ವ್ಯಾಪ್ತಿಯ ದೃಷ್ಟಿಯಿಂದ ಒಂದು ಸಣ್ಣ ಸಂಸ್ಥಾನ. ಸಮಕಾಲೀನ ಟಿಪ್ಪುವಿನದು ದೊಡ್ಡ ಸಾಮ್ರಾಜ್ಯ. ಹಾಗಿದ್ದರೂ ಕಿತ್ತೂರು ಕೋಟೆ ಮತ್ತು ಸೈನ್ಯದ ಸಾಮಥ್ರ್ಯದ ಬಗ್ಗೆ ಬ್ರಿಟಿಷರಿಗೆ ಕೂಡ ಭಯವಿತ್ತು.3 ಕಿತ್ತೂರಿನ ಗಢಾದ ಮರಡಿ, ಕೆಮ್ಮನಮರಡಿ ಮತ್ತು ಮುನೋಳಿಯಲ್ಲಿ ಸೈನ್ಯದ ತರಬೇತಿಯ ಕೇಂದ್ರವಾಗಿತ್ತು. ಸರ್ದಾರ ಗುರುಸಿದ್ಧಪ್ಪ, ಅವರಾಧಿ ಸರದಾರ ವೀರಪ್ಪ, ಗುರುಪುತ್ರಪ್ಪ, ನರಸಿಂಹರಾವ್, ಗೋಲಂದಾಜ್ ಹಿಮ್ಮತ್‍ಸಿಂಗ್, ಸಂಗೊಳ್ಳಿ ರಾಯಣ್ಣ, ಗಜವೀರ, ಬಿಚ್ಚುಗತ್ತಿ ಚೆನ್ನಬಸಪ್ಪ ಮುಂತಾದ ಸೇನಾ ನಾಯಕರುಗಳಿದ್ದರು.
ಕಿತ್ತೂರು ಸಂಸ್ಥಾನದ ಇತಿಹಾಸದಲ್ಲಿ ಸೈನಿಕ ವ್ಯವಹಾರ ತುಂಬ ಮಹತ್ವದ ಪಾತ್ರವನ್ನು ವಹಿಸುತ್ತದೆ.  ಮಲ್ಲಸರ್ಜನನ ಕಾಲದಲ್ಲಿ ಸಂಸ್ಥಾನದ ಉಳಿವಿಗಾಗಿ ಸೈನಿಕರು ಮತ್ತು ಗ್ರಾಮದ ಜನರುಗಳು ಸಾಕಷ್ಟು ಪ್ರಯತ್ನ ಮಾಡಿರುವುದನ್ನು ಪತ್ರಗಳಲ್ಲಿ ಕಾಣುತ್ತೇವೆ. ಒಕ್ಕುಂದ, ದೇಗಾವಿ ಮತ್ತು ಬೀಡಿ ಸುತ್ತಮುತ್ತಲ ಪ್ರದೇಶಗಳಲ್ಲಿ ಮಲ್ಲಸರ್ಜನನ್ನು ರಕ್ಷಣೆ ಮಾಡುತ್ತಿರುವುದನ್ನು ಪುಣೆಯ ನಾನಾ ಫಡ್ನೀಸನಿಗೆ ಆತನ ಕಿರಿಯ ಅಧಿಕಾರಿಗಳು ಬರೆದ ಅಂಶಗಳಿವೆ.
ಒಂದನೆ ಪತ್ರದಲ್ಲಿ ಸೇವೆಯಲ್ಲಿರುವ ಬಾಪೂಜಿ ನಾರಾಯಣ ಪರಚುರೆ ಮಾಡುವ ಸಾಷ್ಟಾಂಗ ನಮಸ್ಕಾರಗಳು. ತಾರೀಖ್ ಚ. 26 ಸಾಬಾನ ಕಿತ್ತೂರು ತಾಲೂಕಿನ ಒಕ್ಕುಂದ ಗ್ರಾಮದ ಸೇವಕನು ಬರೆಯುವ ವರ್ತಮಾನ ಇಲ್ಲಿ ವಿಶೇಷವೇನೆಂದರೆ ದೇಸಾಯಿಯವರು ದೇಗಾವಿಯಲ್ಲಿದ್ದಾರೆ ಎಂದು ತಿಳಿದು ರಾಜಶ್ರೀ ಮಹದಜೀ ಪಂಥ್ ಬೆಹರೆಯವರು ಸೈನ್ಯದ ಸಮೇತವಾಗಿ ದೇಗಾವಿಗೆ ಸಮೀಪಕ್ಕೆ ಹೋದರು. ಆಗ ಮಧ್ಯಾಹ್ನವಾಗಿತ್ತು. ಮುಂದೆ ಹೋಗಬಾರದೆಂದು ಮಾತುಕತೆ ನಡೆದಿತ್ತು. ಇಷ್ಟರಲ್ಲೇ ಮಲ್ಲಸರ್ಜನ ದೇಸಾಯಿಯವರ ಕಡೆಗಿನ ಮೂರು ಕುದುರೆ ಸವಾರರು ಒಂದು ಸಾವಿರ ಸೈನಿಕರು ಮತ್ತು ಲೂಟಿಕೋರರು ಮುಂದೆ ಹೋಗಿದ್ದಾರೆಂದು ಗೊತ್ತಾದ ಮೇಲೆ ರಾಜಶ್ರೀ ದೊಂಡೋ ಪಂಥ್ ಗೋಖಲೆ ತಮ್ಮ ಶೂರ ಸೈನಿಕರೊಂದಿಗೆ ಬೆನ್ನತ್ತಿದರು. ಅವರು ಮುಂದೆ ಹೋಗಿ ಕುದುರೆಗಳನ್ನು ನಿಲ್ಲಿಸಿದಾಗ ಮಲ್ಲಸರ್ಜನ ದೇಸಾಸಿಯವರ ಕುದುರೆ ಸವಾರರು ಓಡಿ ಹೋದರು. ನಂತರ ಸುಮಾರು ನೂರು ಸೈನಿಕರ ಸಾವನ್ನು ಅನುಭವಿಸಿದರು. ಅನೇಕರು ಗಾಯಾಳುಗಳಾದರು. ಇದೇ ಸಂದರ್ಭದಲ್ಲಿ ರಾಸ್ತೆಯವರ ಕಡೆಯ ಸೈನಿಕರು ನೂರೈವತ್ತೂ ಹೆಚ್ಚು ಜನ ಬೇರೆ ಕಡೆಯಿಂದ ಬಂದರು. ಅವರು 10-15 ಜನರನ್ನು ಕೊಂದು ಹಾಕಿದರು. ಈ ಘಟನೆಯು ದೇಗಾವಿಯ ಸಮೀಪ ನಡೆಯಿತು. ಸಂಕೋಜಿ ಕಾಟೆ ಇವರ ಸೈನ್ಯವು ಇಲ್ಲಿಗೆ ಬಂದಾಗ ಯುದ್ಧ ಮಾಡುವ ಸಂದರ್ಭದಲ್ಲಿ ಇವರ ಎದೆಗೆ ಕಲ್ಲು ಬಡಿದು ಮೂತ್ರ ಬಂದಾಗಿತ್ತು. ಆಗ ನಾಲ್ಕೈದು ತಾಸುಗಳ ಕಾಲ ವಿಶ್ರಾಂತಿ ಪಡೆದು ಚೇತರಿಸಿಕೊಂಡರು. ಗೋಖಲೆಯವರ ಕಡೆಗಿನ ಎಂಟು ಕುದುರೆಗಳು ಬೆಹರೆಯವರ ನಾಲ್ಕೈದು ಕುದುರೆಗಳು ಕಾಟೆಯವರ ಒಂದೆರಡು ಕುದುರೆಗಳು ಗಾಯಾಳುಗಳಾಗಿದ್ದವು. ರಾಸ್ತೆಯವರ ಒಂದು ಕುದುರೆ ಸತ್ತು ಹೋಗಿದೆ ಎಂದು ವರ್ತಮಾನ ಬಂದಿದೆ ಎಂದು ಮಾಹಿತಿಗಾಗಿ ಪತ್ರದಲ್ಲಿ ಉಲ್ಲೇಖವಿದೆ.4
ಎರಡನೆ ಪತ್ರದಲ್ಲಿ ಮಹದಜೀ ಖಂಡೆರಾವ್ ಮಾಡುವ ನಮಸ್ಕಾರಗಳು. ವಿನಂತಿ. ಚ. 28 ಸಾಬಾನ (ಉರ್ದು ಮಾಸ) ಇಲ್ಲಿಯವರೆಗೆ ಎಲ್ಲವೂ ಕ್ಷೇಮ. ಕಿತ್ತೂರು ತಾಲೂಕಿನ ಒಕ್ಕುಂದ ಗ್ರಾಮದಲ್ಲಿರುವ ಸೇವಕನಾಗಿರುವ ನಾನು ತಿಳಿಸುವುದೇನೆಂದರೆ ಚ. 25ರಂದು ರಾಜಶ್ರೀ ಮಹದಜೀ ಪಂಥ್ ಬೆಹೆರೆ ಅವರು ತಮ್ಮ ಸೈನ್ಯವನ್ನು ದೇಗಾವಿಗೆ ತೆಗೆದುಕೊಂಡು ಹೋದರು. ಆಗ ಮಧ್ಯಾಹ್ನವಾಗಿತ್ತು. ಅಲ್ಲಿಂದ ಸುಮಾರು 50 ಜನ ಕುದುರೆ ಸವಾರರು ಸುಮಾರು 500 ಜನ ಸೈನಿಕರು ಮುಂದೆ ಹೋಗಿ ದೊಂಡೋಪಂಥ್ ಗೋಖಲೆ ಆನಂದ ಬಾಬರ ಮತ್ತು ಸಕೋಜಿ ಕಾಟೆ ಇವರ ನಾಯಕತ್ವದಲ್ಲಿ ಮೂರು ತಂಡಗಳನ್ನಾಗಿ ವಿಂಗಡಿಸಿ ಮಲ್ಲಸರ್ಜನ ದೇಸಾಯಿಯ ಸೈನ್ಯವನ್ನು ತಡೆ ಹಿಡಿಯಲು ಪ್ರಯತ್ನಮಾಡಿದರು. ಆಗ ಯುದ್ಧ ನಡೆಯಿತು. ಅಲ್ಲಿ ಸೇರಿದಂತಹ ಜನರು ಕುದುರೆ ಸವಾರರನ್ನು ಕಂಡು ತಾವೂ ಕುದುರೆಯನ್ನು ಹತ್ತಿ ಯುದ್ಧವನ್ನು ಆರಂಭಿಸಿದರು. ಸುಮಾರು 75-100 ಜನರನ್ನು ಈ ಯುದ್ಧದಲ್ಲಿ ಕೊಲ್ಲಲಾಯಿತು. ಅನೇಕ ಜನರಿಗೆ ಗಾಯವಾಯಿತು. ನಂತರ ಮೂರೂ ಜನ ಸೈನ್ಯದ ಮುಖ್ಯಸ್ಥರೂ ಒಂದು ಕಡೆ ಸೇರಿದ್ದಾಗ ಅಲ್ಲಿಗೆ ಬೆಹೆರೆಯವರು ಆಗಮಿಸಿದರು. ಆಗ ಸ್ಥಳೀಯ ಜನರು ಪರಾಭವಗೊಂಡಿದ್ದರು. ಸಂಜೆಯ ವೇಳೆಗೆ ಸೈನ್ಯವು ಠಾಣೆಗೆ ಬಂದಿತು. ಆಗ ರಾಸ್ತೆಯವರ ಸೈನ್ಯದ ಒಂದು ಕುದುರೆ ಸತ್ತು ಬಾಬರನ ಒಬ್ಬ ಸೈನಿಕ ಸತ್ತಿದ್ದನು. ಐದಾರು ಕುದುರೆಗಳು ಗಾಯಗಳಾಗಿದ್ದವು. ಹತ್ತರಿಂದ 12 ಜನರು ಪೆಟ್ಟನ್ನು ತಿಂದಿದ್ದರು. ಮರುದಿವಸ ಅಂದರೆ ಚ. 26 ರಂದು ಸ್ಥಳೀಯ ಜನರು ಹೆದರಿಕೆಯಿಂದ ರಾತ್ರಿ ವೇಳೆಯಲ್ಲಿ ದೇಗಾವಿಯನ್ನು ಬಿಟ್ಟು ಓಡಿಹೋದರು. ಅವರ ಜೊತೆಯಲ್ಲಿ ಸುಮಾರು 1500 ಸೈನಿಕರು ನೂರು ಕುದುರೆ ಸವಾರರು ಇದ್ದರೆಂದು ತಿಳಿದುಬರುತ್ತದೆ. ಅರ್ಧ ದಾರಿಯಲ್ಲಿ ಹೋದಾಗ ಅವರ ಜೊತೆಗಿದ್ದ ಸುಮಾರು 500 ಸೈ£ಕರಲ್ಲಿ ಕೆಲವರು ಬಿಟ್ಟು ಓಡಿ ಹೋದರು. ಹನುಮಂತ ಗಡ ಮತ್ತು ಬಿಜಗರಣಿ ಸಮೀಪವಿರುವ ಹಲಸಿಯ ಅಡವಿಯಲ್ಲಿ ಅವರು ತಂಗಿದ್ದರು. ಜೊತೆಗೆ ಸಮೀಪದ ಸಂಗೊಳ್ಳಿ, ಶೀಗಿ ಹಳ್ಳಿ, ದೇಗಾವಿ ಮತ್ತು ಗಂದಿಗವಾಡದಿಂದ ಸುಮಾರು 2000 ಸೈನಿಕರು ಇದ್ದಾರೆ ಒಟ್ಟಿನಲ್ಲಿ 3-5 ಸಾವಿರ ಜನ ಕೂಡಿಸಿರಬಹುದೆಂದು ತಿಳಿದುಬರುತ್ತದೆ. ನಮ್ಮಲ್ಲಿ ಕೇವಲ ಎರಡು ಸಾವಿರದ ಐದುನೂರು ಸೈನಿಕರು ಮಾತ್ರವಿದ್ದು ಮೊದಲು 2 ಠಾಣೆಗಳಿದ್ದವು. ಆವಾಗ ಎಲ್ಲವೂ ಸರಿ ಎನಿಸುತ್ತಿತ್ತು. ಆದರೆ ಈಗ ಕೆಲವು ಠಾಣೆಗಳು ಕಿತ್ತೂರಿನಲ್ಲಿಯೇ ಉಳಿದವು. ಮತ್ತೆ ಕೆಲವು ದೇಸಾಯಿಯವರ ಕಡೆಗೆ ಉಳಿದವು. ಹೀಗಾಗಿ ಒಟ್ಟಿನಲ್ಲಿ ಬಂದೋಬಸ್ತ್ ಆಗುವವರೆಗೂ ಮುಖ್ಯಠಾಣೆಯ ಮೇಲೆ ಬಹಳಷ್ಟು ಸೈನಿಕರನ್ನು ನೇಮಿಸಬೇಕಾಗಿದೆ. ಸಣ್ಣ ಪುಟ್ಟ ಠಾಣೆಗಳನ್ನು ರಕ್ಷಣೆ ಮಾಡಲು ಕೆಲವು ಸೈನಿಕರನ್ನು ಇಡಲಾಗಿದೆ. ಇದನ್ನು ಮಾಡದಿದ್ದರೆ ಬಂದೋಬಸ್ತ್ ಆಗುವುದಿಲ್ಲ. ನಮ್ಮ ಸಿಬ್ಬಂದಿಯನ್ನು ಹೆಚ್ಚು ಮಾಡಬೇಕಾಗಿದೆ. ಬೆಹೆರೆಯವರ ಕಡೆಯಿಂದಲೂ ಬಂದೋಬಸ್ತ್ ಆಗಬೇಕಾಗಿದೆ. ಠಾಣೆಗಳಲ್ಲಿ ಸಿಬ್ಬಂದಿಗಳ ಕಡಿಮೆಯಾಗಿದೆ. ದೇಸಾಯಿಯವರು ಅಡವಿಯಲ್ಲಿ ಅಡಗಿಕೊಂಡಿದ್ದರೆ ಸೈನಿಕರಿಲ್ಲದೆ ಅವರನ್ನು ಸೋಲಿಸಲು ಸಾಧ್ಯವಿಲ್ಲ. ಆದ್ದರಿಂದ ಸುಮಾರು 2 ಸಾವಿರ ಸೈನಿಕರನ್ನು ಕಳಿಸುವ ವ್ಯವಸ್ಥೆ ಮಾಡಬೇಕು. ಇಲ್ಲಿನ ಬಂದೋಬಸ್ತ್ ಬಗ್ಗೆ ಸ್ವಾಮಿಯವರಿಗೆ ಎಲ್ಲವೂ ತಿಳಿದ ವಿಷಯವಾಗಿದೆ. ಮುಂದೆ ಏನು ಆಗುತ್ತದೆ ಎನ್ನುವುದನ್ನು ಬರೆದು ಕಳಿಸುತ್ತೆನೆ. ಇದು ತಮ್ಮ ಮಾಹಿತಿಗಾಗಿ ಇಂತಿ ನಿಮ್ಮ ಸೇವಕನೆಂದು ದಾಖಲಿಸಿದೆ.5
ಮೂರನೆ ಪತ್ರದಲ್ಲಿ ಕಿತ್ತೂರಿನ ತಾಲೂಕಿನ ಸುದ್ದಿ ತಮಗೆ ತಲುಪಿದೆ ಚ. 15 ಜಿಲಕಾದ (ಉರ್ದು ಮಾಸ)ದಂದು ರಾಜಶ್ರೀ ಮಹದಜಿ ಪಂಥ್ ಬೆಹೆರೆ ಇವರ ಸೈನ್ಯದ ವಾಸ್ತವ್ಯ ಬೀಡಿಯಲ್ಲಿದೆ. ಅಲ್ಲಿಂದ ಎರಡು ಸಾವಿರ ಸೈನಿಕರನ್ನು ತೆಗೆದುಕೊಂಡು ಕ್ರೂರ ಸೈನಿಕರ ಜೊತೆಗೆ ಹಲಸಿಯ ಸಮೀಪವಿರುವ ಹನುಮಂತಗಡದಲ್ಲಿದ್ದಾರೆ. ಹಲಸಿಯ ಮೇಲೆ ದಾಳಿ ಮಾಡಿ ಆ ಪೇಟೆಯನ್ನು ವಶಪಡಿಸಿಕೊಂಡರು. ನಂತರದಲ್ಲಿ ಕೋಟೆಯಲ್ಲಿ ಬಹಳಷ್ಟು ಚಟುವಟಿಕೆಗಳು ನಡೆದವು. ಅ ಸಂದರ್ಭದಲ್ಲಿ ಯಾವುದೇ ನಿರ್ಣಯಗಳನ್ನು ಕೈಗೊಳ್ಳಲು ಆಗಲಿಲ್ಲ. ಪೇಟೆಯನ್ನು ಬಿಟ್ಟು ಸೈನ್ಯದ ಪಡೆ ಮತ್ತೆ ಹಿಂತುರಿಗಿ ಬಂದಿತು. ಆಗ 50-60 ಜನ ಸಾವಿಗೆ ಈಡಾದರು. ಸುಮಾರು 75 ಜನರು ಗಾಯಾಳುಗಳಾದರು. ಚ. 16 ರಂದು ರಾಜಶ್ರೀ ಮೋರೋ - ಬಾಪು ಫsÀಡ್ಕೆ ಇವರು ಬೆಹೆರೆಯವರ ಸೈನ್ಯದಲ್ಲಿ ಹಾಜರಾದರು. ನಂತರದಲ್ಲಿ ಹಲಸಿಯ ಸಮೀಪದಲ್ಲಿರುವ ಹನುಮಂತಗಡಕ್ಕೆ ಹೋಗಲು ತೀರ್ಮಾನಿಸಿದರು. ಆಗ ಕಿತ್ತೂರ್‍ಕರ್ ದೇಸಾಯಿಯವರು ತಮ್ಮ ಕ್ರೂರ ಸೈನಿಕರೊಂದಿಗೆ ಹಲಸಿಯಿಂದ ಹನುಮಂತ ಗಡದ ಅಡವಿಯ ಕಡೆಗೆ ಓಡಿಹೋದರು. ಮುಫ್ತಿಯಲ್ಲಿದ್ದ ಕೆಲವು ಸೈನಿಕರನ್ನು ಖಾನಾಪುರದಲ್ಲಿಟ್ಟರು. ಸೈನ್ಯವನ್ನು ತೆಗೆದುಕೊಂಡು ದೇಸಾಯಿಯವರನ್ನು ಬೆನ್ನತ್ತಿಕೊಂಡು ಹೋಗಲು ನಿರ್ಧರಿಸಲಾಯಿತು. ಆಗ ಪೆದ್ರು ಫಿರಂಗಿ ಶಿವರುದ್ರಪ್ಪ ವಾಣಿ ಇವರು ಕಿತ್ತೂರಕರ್ ದೇಸಾಯಿಯವರ ಕಡೆಗೆ ಇದ್ದರು. ಇವರ ಕುಟುಂಬದ ಜನರನ್ನು ಖಾನಾಪುರಲ್ಲಿ ಬಂಧಿಸಿದಾಗ ಇವರು ಅಡವಿಯಿಂದ ಓಡಿಬಂದರು ಎಂಬುದು ಖಚಿತ ಸುದ್ಧಿಯಾಗಿದೆ, ಮಾಹಿತಿಗೆ ತಿಳಿಸಲಾಗಿದೆ ಎಂದು ದಾಖಲಿಸಿದೆ.6
ಅಪ್ರಕಟಿತ ದಾಖಲೆಗಳಿಂದ ತಿಳಿದುಬರುವ ಅಂಶಗಳೇನೆಂದರೆ
ಕಿತ್ತೂರಿನ ಮಲ್ಲಸರ್ಜನ ದೇಸಾಯಿಯ ಸೈನ್ಯ ಮತ್ತು ರಾಜಶ್ರೀ ಮಹದಜಿ ಪಂಥ ಬೆಹೆರೆಯವರ ಸೈನ್ಯದ ಮಧ್ಯೆ ನಡೆದ ಕದನದ ವಿವರ ಕದನದಿಂದಾಗುವ ಪರಿಣಾಮಗಳನ್ನು ಪ್ರಸ್ತಾಪಗೊಂಡಿದೆ.  ಮಲ್ಲಸರ್ಜನನ ಸೈನ್ಯದ ಬಲದ ಬಗ್ಗೆ ಉಲ್ಲೇಖ ಮಾಡಿರುವುದು ಇಲ್ಲಿಯ ಒಂದು ವಿಶೇಷತೆಯಾಗಿದೆ. ರಾಜಶ್ರೀ ದುಂಡೋಪಂಥ ಬೆಹೆರೆಯವರು ತಮ್ಮ ಸೈನಿಕರನ್ನು ಒಡಗೂಡಿ ಮಲ್ಲಸರ್ಜನನ್ನು ಬೆನ್ನತ್ತಿಕೊಂಡು ಹೋದಾಗ ಉಂಟಾದ ಯುದ್ಧದಲ್ಲಿ ಸೈನ್ಯದ ಮುಖ್ಯಸ್ಥನಾದ ಸಂಕೋಜಿ ಕಾಟೆಯವರಿಗೆ ಪೆಟ್ಟು ತಗುಲಿ ಕೆಲವು ಕಾಲ ಚೇತರಿಸಿಕೊಳ್ಳಬೇಕಾಯಿತು. ಬೆಹೆರೆಯವರ ಕೆಲವು ಕುದುರೆಗಳು ಗಾಯವಾಗಿದೆಯೆಂಬುದು ಈ ಪತ್ರದಲ್ಲಿ ಕಂಡುಬಂದಿದೆ. ಮಲ್ಲಸರ್ಜನನು ಒಕ್ಕುಂದದಿಂದ ಖಾನಾಪುರದ ಕಡೆಗೆ ಓಡಿಹೋದನೆಂದು ಇದರಿಂದ ತಿಳಿದುಬರುತ್ತದೆ.
ಎರಡನೆ ಪತ್ರವು ಹಿಂದಿನ ಪತ್ರದ ಮುಂದುವರೆದ ಭಾಗವಾಗಿದ್ದು, ದೇಗಾವಿಯಲ್ಲಿ ನಡೆದ ಬೆಹೆರೆ ಮತ್ತು ಮಲ್ಲಸರ್ಜನನ ಸೈನ್ಯದ ನಡುವೆ ನಡೆದ ಘರ್ಷಣೆಯ ವಿವರ ಸಂಪೂರ್ಣವಾಗಿ ತಿಳಿದು ಬರುತ್ತದೆ.  ಬೆಹೆರೆಯವರ ಸೈನ್ಯವು ದೇಗಾವಿಗೆ ಹೋಗುವವರೆಗೆ ಮೂರು ಭಾಗಗಳನ್ನಾಗಿ ವಿಂಗಡಿಸಲಾಗಿತ್ತು. ಇವುಗಳ ನೇತೃತ್ವವನ್ನು ದುಂಡೋಪಂಥ ಗೋಖಲೆ, ಆನಂದ ಬಾಬರ್ ಮತ್ತು ಸಂಕೋಜಿ ಕಾಟೆ ವಹಿಸಿಕೊಂಡಿದ್ದರು. ಇವರೆಲ್ಲರೂ ಕೂಡಿ ಮಲ್ಲಸರ್ಜನನ ಸೈನ್ಯವನ್ನು ತಡೆಯಲು ಪ್ರಯತ್ನಿಸಿ ವಿಫಲರಾದರು ಕಾರಣ ದೇಗಾವಿ, ಗಂಧಿಗವಾಡ, ಸಂಗೊಳ್ಳಿ ಮತ್ತು ಶೀಗಿಹಳ್ಳಿಯ ಜನರು ಸುಮಾರು 2000ದಷ್ಟಿದ್ದು, ಮಲ್ಲಸರ್ಜನ ಫಲಾಯನಗೈಯಲು ಸಹಾಯಕರಾದರು.  ಈ ಪತ್ರದಿಂದ ತಿಳಿದುಬರುವ ಅಂಶವೆಂದರೆ ಮಲ್ಲಸರ್ಜನ ದೇಸಾಯಿಯವರು ಸಂಕಷ್ಟ ಬಂದಾಗ ಅಡವಿಯಲ್ಲಿ ಅಡಗಿಕೊಂಡು ತಮ್ಮನ್ನು ರಕ್ಷಿಸಿಕೊಳ್ಳುತ್ತಿದ್ದರು. ಹಾಗೂ ತಮ್ಮ ಬಂದೋಬಸ್ತಿಗಾಗಿ ಗ್ರಾಮಗಳ ಜನರನ್ನು ಬಳಸಿಕೊಳ್ಳುತ್ತಿದ್ದರು ಎಂಬುದು ತಿಳಿದುಬರುತ್ತದೆ.
ಮೂರನೆ ಪತ್ರದಲ್ಲಿ ಕಿತ್ತೂರ್‍ಕರ್ ದೇಸಾಯಿಯವರು ಹಲಸಿ ಮತ್ತು ಹನುಮಂತಗಡದಲ್ಲಿದ್ದಾರೆ ಎಂಬುದನ್ನು ತಿಳಿದು ಮಹದಜಿ ಪಂತ್ ಬೆಹರೆಯವರು ಇವರನ್ನು ಬೆನ್ನಟ್ಟಿಕೊಂಡು ಹಲಸಿ ಪೇಟೆಯ ಮೇಲೆ ದಾಳಿ ನಡೆಸಿದರು. ಅಷ್ಟರ ವೇಳೆಗಾಗಲೇ ಕಿತ್ತೂರ್‍ಕರ್ ದೇಸಾಯಿಯ ಸೈನ್ಯವು ಹಲಸಿಯನ್ನು ಬಿಟ್ಟು ಹನುಮಂತಗಡದ ಅಡವಿಯನ್ನು ಸೇರಿದ್ದರು. ಆಗ ಜನರಿಗೂ ಮತ್ತು ಸೈನಿಕರಿಗೂ ಯುದ್ಧ ನಡೆದಾಗ 50-60 ಜನರು ಸಾವನ್ನು ಅನುಭವಿಸಿದರು. ಸುಮಾರು 75 ಕ್ಕೂ ಹೆಚ್ಚು ಜನ ಗಾಯಾಳುಗಳಾದರು. ಗುಪ್ತದಳದವರ ಸಹಾಯದಿಂದ ಮಲ್ಲಸಜ್ಜನ ದೇಸಾಯಿಯ ಭಟರಾದ ಪೆದ್ರು ಪಿರಂಗಿ ಮತ್ತು ಶಿವರುದ್ರಪ್ಪ ವಾಣಿಯವರ ಕುಟುಂಬದ ಸದಸ್ಯರನ್ನು ಬೆಹರೆಯವರು ಬಂಧಿಸಿದಾಗ ಸುದ್ಧಿಯನ್ನು ತಿಳಿದ ಅಡವಿಯಲ್ಲಿದ್ದ ಇವರಿಬ್ಬರೂ ವಾಪಸು ಬಂದರೆಂದು ಈ ಪತ್ರದಿಂದ ತಿಳಿದುಬರುತ್ತದೆ.
ಒಟ್ಟಾರೆ ಆಪ್ರಕಟಿತ ದಾಖಲೆಗಳು ಕಿತ್ತೂರು ಮಲ್ಲಸರ್ಜನ ದೇಸಾಯಿ ಸೈನ್ಯ ಮತ್ತು ರಾಜಶ್ರೀ ಮಹಾದಜಿ ಪಂಥ ಬೆಹರೆಯವರ ನಡುವೆ ಕದನ, ಅದರಿಂದುಂಟಾದ ಪರಿಣಾಮ, ಬುದ್ಧಿವಂತಿಕೆಯಿಂದ ಸೈನ್ಯ ಬೇರ್ಪಡಿಸಿದ ನೀತಿ, ರಕ್ಷಿಸಿಕೊಳ್ಳುವುದಕ್ಕಾಗಿ ಗ್ರಾಮದ ಜನರನ್ನು ಬಳಸಿಕೊಳ್ಳುವಿಕೆ, ಗುಪ್ತದಳವನ್ನು ಬಳಸಿಕೊಳ್ಳುವಿಕೆ, ಜನರ ಸಾವು-ನೋವುಗಳ ಚಿತ್ರಣ ಈ ಅಪ್ರಕಟಿತ ದಾಖಲೆಗಳಿಂದ ತಿಳಿದು ಬರುತ್ತದೆ.

ಆಧಾರಸೂಚಿ
1. ನರಹರಿ ಕೆ.ಎನ್., ‘ಕಿತ್ತೂರು ಸಂಸ್ಥಾನದ ಆಡಳಿತ ವಿಭಾಗ-ವಿಸ್ತಾರ’, ಅಪ್ರಕಟಿತ ಮಹಾಪ್ರಬಂಧ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2013, ಪುಟ-189.
2. ಅದೇ ಪುಟ-190.
3. ಅದೇ ಪುಟ-238.
4. ಅದೇ ಪುಟ-214.
5. ಅದೇ ಪುಟ-215.
6. ಅದೇ ಪುಟ-216.
ಆಕರಗ್ರಂಥ
1. ಕಡತದ ಸಂಖ್ಯೆ 11, ರುಮಾಲ್ ನಂ. 74, ಪತ್ರದ ಸಂಖ್ಯೆ 07, ಡೆಕ್ಕನ್ ಕಾಲೇಜು ವಸ್ತು ಸಂಗ್ರಹಾಲಯ, ಪುಣೆ.
2. ಕಡತದ ಸಂಖ್ಯೆ- 11, ರುಮಾಲ್ ನಂ 74, ಪತ್ರದ ಸಂಖ್ಯೆ-03, ಡೆಕ್ಕನ್ ಕಾಲೇಜು ವಸ್ತು ಸಂಗ್ರಹಾಲಯ, ಪುಣೆ.
3. ಕಡತದ ಸಂಖ್ಯೆ- 02, ರುಮಾಲ್ ನಂ 74, ಪತ್ರದ ಸಂಖ್ಯೆ-03, ಡೆಕ್ಕನ್ ಕಾಲೇಜು ವಸ್ತು ಸಂಗ್ರಹಾಲಯ, ಪುಣೆ

  ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಚನ್ನಮ್ಮನ ಕಿತ್ತೂರು-591115. ಬೆಳಗಾವಿ ಜಿಲ್ಲೆ.

No comments:

Post a Comment