Sunday, February 22, 2015

ಲಕ್ಷ್ಮೇಶ್ವರದ ಸೋಮೇಶ್ವರ ದೇವಾಲಯದಲ್ಲಿನ ವೀರಗಲ್ಲುಗಳು

ಲಕ್ಷ್ಮೇಶ್ವರದ ಸೋಮೇಶ್ವರ ದೇವಾಲಯದಲ್ಲಿನ ವೀರಗಲ್ಲುಗಳು
ಡಾ. ಜಯಮ್ಮ ಕರಿಯಣ್ಣ 
ಲಕ್ಷ್ಮೇಶ್ವರದಲ್ಲಿರುವ ಸೋಮೇಶ್ವರ ದೇವಾಲಯದ ಉತ್ತರ ಪ್ರವೇಶದ್ವಾರದ ಬಳಿ ನಿಲ್ಲಿಸಿರುವ ಮೂರು ವೀರಗಲ್ಲುಗಳಲ್ಲೂ ಶಾಸನವಿಲ್ಲ. ಶಿಲ್ಪ ಮತ್ತು ಬಳಸಿರುವ ಕಲ್ಲಿನ ಆಧಾರದ ಮೇಲೆ ಈ ವೀರಗಲ್ಲುಗಳು ಬಹುಶಃ ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸೇರಿದವು. ಇಲ್ಲಿನ ಮೂರು ವೀರಗಲ್ಲುಗಳಲ್ಲಿ ಒಂದು ಕೋಟೆ ಕಾಳಗಕ್ಕೆ ಸಂಬಂಧಿಸಿದ್ದು, ಉಳಿದವು ವೀರಗಲ್ಲುಗಳು.
ಕೋಟೆ ಕಾಳಗಕ್ಕೆ ಸೇರಿದ ವೀರಗಲ್ಲು ಐದು ಹಂತಗಳಲ್ಲಿದೆ. ಮೊದಲ ಹಂತದಲ್ಲಿ ನಾಲ್ವರು ವೀರರು ವೀರಗಲ್ಲಿನ ಎಡಭಾಗದಿಂದ ಬಲಭಾಗದ ಕಡೆ ಹೋಗುತ್ತಿದ್ದಾರೆ. ವೀರರ ಕೈಗಳಲ್ಲಿ ಕೋಟೆ ಕಾಳಗದಲ್ಲಿ ಬಳಸಬಹುದಾದ ಈಟಿಯಂತಿರುವ ಉದ್ದವಾದ ಆಯುಧವಿದೆ. ಇವುಗಳನ್ನು ಸಬಳ ಎಂದು ಗುರುತಿಸಬಹುದು. ಇದು ಮನುಷ್ಯನ ಎತ್ತರಕ್ಕಿಂತ ಉದ್ದವಾಗಿದ್ದು ಕೋಟೆಯ ಮೇಲಿರುವ ವ್ಯಕ್ತಿಗಳನ್ನು ತಿವಿಯಲು ಬಳಸಲಾಗುತ್ತಿತ್ತು. ಸಬಳಗಳ ತುದಿ ಮೊನಚಾಗಿ, ತಳಭಾಗ ತ್ರಿಕೋಣಕಾರವಾಗಿದೆ. ಅದರ ಕೆಳಭಾಗ ಒಂದು ಕಡೆ ಹರಿತವಾದ ಆಯುಧ ಸೇರಿಸಿದಂತೆ ಇದೆ. ವೀರರು ಎರಡೂ ಕಾಲುಗಳಲ್ಲಿ ಕಾಲಂದಿಗೆಗಳನ್ನು, ಕೈಗಳಲ್ಲಿ ಕೈ ಕಡಗ, ತೋಳಬಂದಿ ಮತ್ತು ಕೊರಳಿನಲ್ಲಿ ವಿವಿಧ ರೀತಿಯ ಕಂಠಾಭರಣಗಳನ್ನು, ಕಿವಿಗಳಲ್ಲಿ ಆಭರಣಗಳನ್ನು ಧರಿಸಿದ್ದಾರೆ. ತಲೆಯ ಕೂದಲನ್ನು ಗಂಟು ಹಾಕಿದ್ದಾರೆ. ಕಾಲಾಳು ವೀರರ ಹಿಂಭಾಗದಲ್ಲಿ ಕುದುರೆಗಳ ಮೇಲೆ ಕುಳಿತ ವೀರರ ಆಯುಧಗಳನ್ನು ಹಿಡಿದು ಬರುತ್ತಿದ್ದಾರೆ. ಈ ಹಂತದಲ್ಲಿ ಕೋಟೆ ಕಾಳಗಕ್ಕೆ ಸಿದ್ಧರಾಗಿ ಬರುತ್ತಿರುವಂತೆ ಬಿಡಿಸಲಾಗಿದೆ.
ಎರಡನೆಯ ಹಂತದಲ್ಲಿ ನಾಲ್ವರು ವೀರರು ಕೋಟೆಯ ಸಮೀಪಕ್ಕೆ ಬಂದು ಕೋಟೆಯನ್ನು ರಕ್ಷಣೆ ಮಾಡುತ್ತಿರುವ ಶತ್ರು ಪಕ್ಷದವರನ್ನು ಸಬಳದಿಂದ ಚುಚ್ಚಿ ತಿವಿಯುತ್ತಿದ್ದಾರೆ. ಕೋಟೆಯ ಬುಡದ ಕಲ್ಲನ್ನು ಕೀಳುತ್ತಿರುವ ವೀರ ಎಡಗಾಲ ಮಂಡಿಯನ್ನು ಭೂಮಿಯ ಮೇಲಿಟ್ಟು ಬಲಗಾಲನ್ನು ಮುಂದಿಟ್ಟು ಎಡಗೈಲಿ ಗುರಾಣಿ ಆಸರೆಯಲ್ಲಿ ಕೋಟೆಯ ಕಲ್ಲನ್ನು ಕೀಳುವ ಭಂಗಿಯಲ್ಲಿದ್ದಾನೆ. ಕೋಟೆಯ ಮೇಲಿರುವ ಶತ್ರು ಸೈನಿಕರು ಎದುರಾಳಿಗಳ ಮೇಲೆ ಕೆಲವು ವಸ್ತುಗಳನ್ನು ಹಾಕುತ್ತಿರುವಂತೆ ಬಿಡಿಸಿದೆ. ಕೆಳಗೆ ಒಬ್ಬ ಸತ್ತ ವೀರನ ತಲೆ ಕಾಣುತ್ತದೆ. ಕೋಟೆಯ ಬುಡದಲ್ಲಿ ಕುಳಿತಿರುವ ವೀರನನ್ನು ಡಾ. ಶೇಷಶಾಸ್ತ್ರಿಯವರು ಅಲ್ಲಿ ಸತ್ತು ಬಿದ್ದಿರುವ ವ್ಯಕ್ತಿಯ ಶವದ ಕಾಲನ್ನು ಎಳೆಯುತ್ತಿದ್ದಾನೆ ಎಂಬ ಅಭಿಪ್ರಾಯ ಪಟ್ಟಿದ್ದಾರೆ. ಇದೇ ಚಿತ್ರವನ್ನು ಹಲವು ಛಾಯಾಚಿತ್ರಗಳ ಜೊತೆಯಲ್ಲಿ ಡಾ. ಎಂ. ಚಿದಾನಂದಮೂರ್ತಿ ಅವರು ತಮ್ಮ ಕನ್ನಡ ಶಾಸನಗಳ ಸಾಂಸ್ಕøತಿಕ ಅಧ್ಯಯನ ಕೃತಿಯಲ್ಲಿ ನೀಡಿದ್ದಾರೆ.
ಮೂರನೆಯ ಹಂತದಲ್ಲಿ ನಾಲ್ಕು ಜನ ಅಲಂಕೃತ ಅಪ್ಸರೆಯರು ವಾದ್ಯಗಳ ಸಹಿತ ವೀರನನ್ನು ಸ್ವರ್ಗಕ್ಕೆ ಕರೆದೊಯ್ಯುತ್ತಿದ್ದಾರೆ. ಎಡಭಾಗದ ಕಡೆಯಲ್ಲಿರುವ ಅಪ್ಸರೆಯ ಕೈಯಲ್ಲಿ ಜಾಗಟೆಯನ್ನು ಮತ್ತು ಬಲಭಾಗದ ಕಡೆಯ ಅಪ್ಸರೆಯ ಕೈಯಲ್ಲಿ ಮೃದಂಗ ಹಿಡಿದು ಬಾರಿಸುತ್ತಿರುವಂತೆಯೂ ನಡುವಿರುವ ಇಬ್ಬರು ಅಪ್ಸರೆಯರು ಸತ್ತ ವೀರನನ್ನು ಆಕಾಶ ಮಾರ್ಗವಾಗಿ ಎತ್ತಿಕೊಂಡು ಹೋಗುತ್ತಿರುವಂತೆ ಬಿಡಿಸಿದೆ. ನಾಲ್ಕನೆಯ ಹಂತದಲ್ಲಿ ವೀರನನ್ನು ವಿಮಾನದಲ್ಲಿ ಕುಳ್ಳಿರಿಸಿದ್ದಾರೆ. ವೀರ ಕೈಮುಗಿದು ಪದ್ಮಾಸನದಲ್ಲಿ ಆಸೀನನಾಗಿದ್ದಾನೆ. ಅಪ್ಸರೆಯರ ಆಚೆ ಈಚೆ ಒಬ್ಬ ಉದ್ದನೆಯ ತುತ್ತೂರಿಯನ್ನು ಮತ್ತೊಬ್ಬ ಶಂಖವನ್ನು ಊದುತ್ತಿದ್ದಾರೆ. ಇನ್ನಿಬ್ಬರು ಚಾಮರಧಾರಿ ಅಪ್ಸರೆಯರು ವೀರ ಕುಳಿತಿರುವ ಪುಷ್ಪಕ ವಿಮಾನವನ್ನು ಹೊತ್ತೊಯ್ಯುತ್ತಿದ್ದಾರೆ.
ಕಡೆಯ ಹಂತದಲ್ಲಿ ವೀರನು ಸ್ವರ್ಗಾರೋಹಣ ಮಾಡಿದ್ದಾನೆ. ಕೈಲಾಸದಲ್ಲಿರುವಂತೆ ದೇವಾಲಯದಲ್ಲಿ ಶಿವಲಿಂಗವನ್ನು ಪೂಜಿಸುತ್ತಿರುವ ವ್ಯಕ್ತಿ ಯೋಗಿಯಂತಿದ್ದಾನೆ. ಶಿವಲಿಂಗವಿರುವ ಆಲಯದ ಹೊರಭಾಗದಲ್ಲಿ ಭಕ್ತ ಪದ್ಮಾಸನದಲ್ಲಿ ಕೈಮುಗಿದು ಕುಳಿತಿದ್ದಾನೆ. ಅವನ ತಲೆಯ ಮೇಲೆ ಮತ್ತು ಕಿವಿಗಳಲ್ಲಿ ಆಭರಣದಂತಿರುವ ವಸ್ತು ಧರಿಸಿದ್ದಾನೆ. ಒಂದು ಪಕ್ಕದಲ್ಲಿ ಗಗ್ಗರ ಸರವನ್ನು ಧರಿಸಿರುವ ಹಿಂಗಾಲುಗಳ ಮೇಲೆ ಕುಳಿತು ಮುಂಗಾಲುಗಳನ್ನು ಮಡಿಚಿ ಕುಳಿತಿರುವ ನಂದಿ ಇದೆ. ಹಿಂದೆ ಮೇಲುಭಾಗದಲ್ಲಿ ಒಂದು ಕಡೆ ಸೂರ್ಯ ಮತ್ತೊಂದು ಕಡೆ ಚಂದ್ರನ ಶಿಲ್ಪವಿದೆ. ರುದ್ರಕಾಂತದ ಕಂಬಗಳ ಮೇಲೆ ಬೋದಿಗೆ ಇದೆ. ಅದರ ಮೇಲೆ ಅಲಂಕೃತ ಮುಚ್ಚಿಗೆ ಇದೆ. ಮುಚ್ಚಿಗೆಯ ಮೇಲ್ಭಾಗ ಒಡೆದಿದೆ.
ಅಲ್ಲಿರುವ ಎರಡನೆಯ ವೀರಗಲ್ಲು ಸಹ ಕೋಟೆಕಾಳಗಕ್ಕೆ ಸಂಬಂಧಿಸಿರುವಂತೆ ತಿಳಿಯಬಹುದು. ಮೂರು ಹಂತದಲ್ಲಿರುವ ಈ ವೀರಗಲ್ಲಿನಲ್ಲಿ ಮುಖಾಮುಖಿಯಾಗಿ ಕುದುರೆಯ ಮೇಲೆ ಕುಳಿತ ವೀರರು ಹಿಡಿದಿರುವ ಉದ್ದನೆಯ ಆಯುದ್ಧ ಈಟಿಯಂತೆ ಕಂಡರೂ ಸಬಳದಂತಿರುವ ಆಯುಧವನ್ನು ಪ್ರಯೋಗಿಸುತ್ತಿದ್ದಾರೆ. ಎಡಭಾಗದ ವೀರ ಎಡಗೈಲಿ ಹಾಗೂ ಬಲಗೈಲಿ ಕುದುರೆಯ ಲಗಾಮು ಹಿಡಿದಂತೆ ಆಯುಧವನ್ನು ಹಿಡಿದು ಶತ್ರುವಿನ ಮೇಲೆ ಆಕ್ರಮಣ ಮಾಡುತ್ತಿರುವಂತೆ ಬಿಡಿಸಿದೆ. ಈ ವೀರನ ತಲೆಯ ಮೇಲೆ ಛತ್ರಿಯನ್ನು ಬಿಡಿಸಿದೆ. ಹಾಗೂ ಬಲಭಾಗದ ವೀರ ಎಡಗೈಲಿ ಲಗಾಮು ಹಿಡಿದು ಬಲಗೈ ಒಂದರಿಂದಲೇ ಆಯುಧವನ್ನು ಹಿಡಿದು ಹೋರಾಡುತ್ತಿರುವಂತೆ ಚಿತ್ತಿತವಾಗಿದೆ. ಇಬ್ಬರು ವೀರರೂ ಕಡಗ, ತೋಳಬಂದಿ, ಕಂಠಾಭರಣ ಮೊದಲಾದ ಆಭರಣಗಳಿಂದ ಅಲಂಕೃತರಾಗಿದ್ದಾರೆ. ತಲೆಗೆ ಶಿರಸ್ತ್ರಾಣದಂತೆ ಕಾಣುವ ಕಿರೀಟವಿದೆ. ಅಥವಾ ರಕ್ಷಾ ಕವಚವಾಗಿರಲೂಬಹುದು. ಕುದುರೆಗಳೆಡರು ಮುಖಾಮುಖಿಯಾಗಿ ನಿಂತು ಹೋರಾಟದಲ್ಲಿ ಭಾಗಿಯಾಗಿವೆ. ಯುದ್ಧದಲ್ಲಿ ಪಾಲುಗೊಂಡು ಭೂಮಿಯ ಮೇಲೆ ಸತ್ತು ಬಿದ್ದಿರುವ ವೀರರನ್ನು ಕಾಣಬಹುದು.
ಎರಡನೆಯ ಹಂತದಲ್ಲಿ ವೀರನನ್ನು ಅಲಂಕೃತ ಚಾಮರಧಾರಿಣಿಯರಾದ ಅಪ್ಸರೆಯರು ಕೈಲಾಸಕ್ಕೆ ಕರೆದೊಯ್ಯುತ್ತಿದ್ದಾರೆ. ವೀರನ ತಲೆಯ ಮೇಲೆ ಗುಂಡಗೆ ಕಿರೀಟದಂತಿರುವ ಶಿರಸ್ತ್ರಾಣವಿದೆ. ಕೊರಳಲ್ಲಿ ಹಲವು ಬಗೆಯ ಕಂಠಾಭರಣಗಳಿವೆ. ನಡುವಿನಲ್ಲಿ ವೀರಗಚ್ಚೆಯ ಮೇಲೆ ಸೊಂಟಕ್ಕೆ ಅಂಗವಸ್ತ್ರ ಬಿಗಿದಿರುವಂತೆ ಬಿಡಿಸಲಾಗಿದೆ. ಮೂರನೆಯ ಹಂತದಲ್ಲಿ ಶಿವಲಿಂಗವಿದೆ. ಮುಂಭಾಗದಲ್ಲಿ ಭಕ್ತ ಪದ್ಮಾಸನದಲ್ಲಿ ಕೈ ಮುಗಿದು ಕುಳಿತಿದ್ದಾನೆ. ಹಿಂಭಾಗದಲ್ಲಿ ಶೈವಯತಿಯಂತಿರುವ ವ್ಯಕ್ತಿ ಕೈ ಮುಗಿದು ನಿಂತಿದ್ದಾನೆ.
ಅದೇ ಸ್ಥಳದಲ್ಲಿ ಮತ್ತೊಂದು ವೀರಗಲ್ಲಿದೆ. ಇದು ಮೂರು ಹಂತದಲ್ಲಿದ್ದು ಮೊದಲ ಹಂತದಲ್ಲಿ ತೀವ್ರ ಬಿರುಸಾದ ಕಾಳಗ ನಡೆಯುತ್ತಿರುವ ದೃಶ್ಯವೆಂದು ಊಹಿಸಬಹುದಾಗಿದೆ. ಶತ್ರುಗಳು ಮುಖಾಮುಖಿಯಾಗಿದ್ದಾರೆ. ವೀರಗಲ್ಲಿನ ಎಡಭಾಗದಲ್ಲಿ ಕುದುರೆಯ ಮೇಲೆ ಕುಳಿತ ವೀರನ ಕೈಯಲ್ಲಿ ಕತ್ತಿ ಗುರಾಣಿ ಇದೆ. ಅವನ ಜೊತೆ ಕುದುರೆ ರಾಹುತರು ಇದ್ದಾರೆ. ಅವರ ಮುಂದಿರುವ ಕಾಲಾಳು ಬಲಗೈಲಿ ಕತ್ತಿ, ಎಡಗೈಲಿ ಗುರಾಣಿ ಹಿಡಿದು ಬಲಭಾಗದಲ್ಲಿ ಕುದುರೆಯ ಮೇಲೆ ಕುಳಿತಿರುವ ಎದುರು ಪಕ್ಷದ ಶತ್ರುವಿನ ಮೇಲೆ ತನ್ನ ಕತ್ತಿಯಿಂದ ಆಕ್ರಮಣ ಮಾಡುತ್ತಿದ್ದಾನೆ. ಶತ್ರುವಿನ ಪಕ್ಕದಲ್ಲಿ ಬಿಲ್ಲು ಬಾಣ ಹಿಡಿದಿರುವ ಮತ್ತೊಬ್ಬ ವ್ಯಕ್ತಿ ಹೋರಾಟಕ್ಕೆ ಮುನ್ನುಗ್ಗುತ್ತಿದ್ದಾನೆ. ಕುದುರೆಯ ಮೇಲಿರುವ ಶತ್ರು ಎಡಗೈಲಿ ಲಗಾಮು ಹಿಡಿದು ಬಲಗೈಲಿರುವ ಕತ್ತಿಯನ್ನು ಪ್ರಯೋಗಿಸಲು ಸಿದ್ಧನಾಗಿದ್ದಾನೆ. ಸತ್ತು ಬಿದ್ದ ಸೈನಿಕರ ಹೆಣಗಳನ್ನು ಕಾಣಬಹುದು. ಇದರಿಂದ ತೀವ್ರ ಕಾಳಗ ನಡೆದಿರುವುದನ್ನು ತಿಳಿಯಬಹುದು.
ಎರಡನೆಯ ಹಂತದಲ್ಲಿ ಇಬ್ಬರು ಚಾಮರಧಾರಿ ಅಲಂಕೃತ ಅಪ್ಸರೆಯರು ವೀರನು ಕುಳಿತ ವಿಮಾನವನ್ನು ಕೈಲಾಸಕ್ಕೆ ಕೊಂಡೊಯ್ಯುತ್ತಿದ್ದಾರೆ. ವಿಮಾನದಲ್ಲಿ ವೀರ ಪದ್ಮಾಸನದಲ್ಲಿ ಕೈಮುಗಿದು ಕುಳಿತಿದ್ದಾನೆ. ಕಡೆಯ ಹಂತದಲ್ಲಿ ಅದೇ ಶಿವಲಿಂಗ. ಶಿವಲಿಂಗವನ್ನು ಯೋಗಿಯೊಬ್ಬ ಪೂಜಿಸುತ್ತಿರುವಂತೆಯೂ ಆತನ ಹಿಂಭಾಗದಲ್ಲಿ ಕೈಮುಗಿದು ಕುಳಿತ ಭಕ್ತ ಹಾಗೂ ಮುಂಭಾಗದಲ್ಲಿ ನಂದಿ ಶಿವಲಿಂಗವನ್ನು ನೋಡುತ್ತಾ ಕುಳಿತಿರುವಂತೆ ಶಿಲ್ಪಿ ಬಿಡಿಸಿದ್ದಾನೆ.
ಮೇಲಿನ ಈ ಮೂರು ವೀರಗಲ್ಲುಗಳನ್ನು ಗಮನಿಸಿದಾಗ ಕೋಟೆಯ ಚಿತ್ರಣವಿರುವ ವೀರಗಲ್ಲು ಕೋಟೆಯ ಅವರೋಹಣ ಮತ್ತು ಕೋಟೆಯ ಕಲ್ಲು ಕೀಳುವ ಅಪರೂಪದ ವಿವರಗಳನ್ನು ನಮಗೆÉ ನೀಡುತ್ತದೆ. ಕೆಲವು ಸಾಹಿತ್ಯ ಗ್ರಂಥಗಳಲ್ಲಿ ಕೋಟೆಕಾಳಗದ ವಿವರ ಬಂದಿದ್ದರೂ ಇಲ್ಲಿ ಕೋಟೆ ಕಾಳಗದ ದೃಶ್ಯ ಕಾವ್ಯವನ್ನು ಶಿಲ್ಪಿ ಕಣ್ಣಿಗೆ ಕಟ್ಟುವಂತೆ ಬಿಡಿಸಿದ್ದಾನೆ. ಶಿಲ್ಪಿ ತಾನು ವೀರಗಲ್ಲಿನ ಶಿಲ್ಪದ ಚೌಕಟ್ಟನ್ನು ವಿನ್ಯಾಸ ಮಾಡಿ ತಾನು ಬಿಡಿಸುವ ಪ್ರತಿಯೊಂದು ವಿವರಗಳು ಚಲನಶೀಲತೆ ಇರುವಂತೆ ಬಿಡಿಸಿದ್ದಾನೆ. ಹೀಗಾಗಿ ಹನ್ನೊಂದನೆ ಶತಮಾನದಲ್ಲಿ ನಡೆದಿರಬಹುದಾದ ಕೋಟೆ ಕಾಳಗದ ವಿವರವನ್ನು ಇದರಲ್ಲಿ ನೋಡಬಹುದಾಗಿದೆ.
ಎರಡನೆಯ ವೀರಗಲ್ಲಿನಲ್ಲಿಯೂ ವೀರರು ಸಬಳವನ್ನು ಹಿಡಿದು ಕುದುರೆಯ ಮೇಲೇರಿ ಎದುರಾಳಿಯೊಡನೆ ಯುದ್ಧ ಮಾಡುತ್ತಿರುವಂತೆ ಬಿಡಿಸಲಾಗಿದೆ. ಹೀಗಾಗಿ ಸಬಳದ ಪ್ರಯೋಗ ಹಿಂದಿನ ಕೋಟೆಕಾಳಗದ ಶಿಲ್ಪದಲ್ಲಿಯೂ ಬಂದಿರುವುದರಿಂದ ಈ ವೀರಗಲ್ಲಿನ ಕಾಲವನ್ನು ಕೂಡ ಹನ್ನೊಂದನೆ ಶತಮಾನಕ್ಕೆ ಹಾಕಬಹುದು. ಈ ವೀರಗಲ್ಲಿನ ವೈಶಿಷ್ಟವೆಂದರೆ ಮೊದಲ ಹಂತದಲ್ಲಿ ಮುಖಾಮುಖಿಯಾಗಿ ನಿಂತು ಕುದುರೆಗಳ ಮೇಲೆ ಕುಳಿತ ಯೋಧರ ನಡುವೆ ಯುದ್ಧಕ್ಕೆ ಸಾಮಗ್ರಿಗಳನ್ನು ಒಯ್ಯುತ್ತಿರುವ ವ್ಯಕ್ತಿಯನ್ನು ಚಿಕ್ಕದಾಗಿ ಬಿಡಿಸಿರುವುದು ಕಂಡುಬರುತ್ತದೆ. ಸಬಳವನ್ನು ಹಿಡಿದಿರುವ ವೀರನ ತಲೆಯ ಮೇಲೆ ಛತ್ರಿ ಇರುವುದರಿಂದ ಆತ ಯಾವುದೋ ರಾಜ ವಂಶದವನಾಗಿರುವ ಸಾಧ್ಯತೆ ಇದೆ.
ಮೂರನೆಯ ವೀರಗಲ್ಲಿನ ಶಿಲ್ಪದಲ್ಲಿ ಅಶ್ವಸೇನೆ ಮತ್ತು ಕಾಲ್ದಳಗಳ ಬಳಕೆ ಇದ್ದು ತೀವ್ರವಾದಂತಹ ಹೋರಾಟ ನಡೆಯುತ್ತಿರುವಂತೆ ಬಿಡಿಸಿದೆ. ಈ ವೀರಗಲ್ಲಿನಲ್ಲಿ ಯುದ್ಧಕ್ಕೆ ಕಾರಣವನ್ನು ಶಿಲ್ಪದ ಮೂಲಕವಾಗಲಿ ಬರವಣಿಗೆಯ ಮೂಲಕವಾಗಲಿ ತಿಳಿಸಿಲ್ಲ, ಖಡ್ಗ, ಬಿಲ್ಲು, ಬಾಣ ಇವುಗಳ ಪ್ರಯೋಗ ಇಲ್ಲಿನ ಯುದ್ಧ ಶಿಲ್ಪದಲ್ಲಿ ಯಥೇಚ್ಚವಾಗಿದೆ. ಎರಡೂ ಕಡೆಯ ಸೈನಿಕರು ಸತ್ತಿರುವುದನ್ನು ಗಮನಿಸಿದಾಗ ಯುದ್ಧವು ತೀವ್ರವಾಗಿ ನಡೆದಿರಬಹುದೆಂದು ಊಹಿಸಬಹುದಾಗಿದೆ.
ಹೀಗಾಗಿ ಲಕ್ಷ್ಮೀಶ್ವರದಲ್ಲಿರುವ ಈ ವೀರಗಲ್ಲುಗಳ ಪ್ರಕಾರ ನಡೆದಿರಬಹುದಾದಂತಹ ಬೇರೆ ಬೇರೆ ಕಾಲದ ಯುದ್ಧಗಳಲ್ಲಿ ಭಾಗವಹಿಸಿ ವೀರರು ತಮ್ಮ ಶೌರ್ಯವನ್ನು ಮೆರೆದಿರುವುದನ್ನು ಗುರುತಿಸಬಹುದಾಗಿದೆ.
ದೇವಾಲಯದ ಹೊರಭಾಗದಲ್ಲಿದ್ದ ವೀರಗಲ್ಲುಗಳನ್ನು ಇತ್ತೀಚೆಗೆ ದೇವಾಲಯದ ಒಳಗೆ ರಕ್ಷಿಸಿ ಇಟ್ಟಿದ್ದಾರೆ.

             ಆಶೀರ್ವಾದ, # 2933, 13ನೇ ಮುಖ್ಯರಸ್ತೆ, ವಿಜಯನಗರ 2ನೆಯ ಹಂತ, ಬೆಂಗಳೂರು-560040.

       

        


               

No comments:

Post a Comment