Monday, February 17, 2014

ಪಾರ್ಥಿವೇಶ್ವರ ಪೂಜೆ

  ಕರಸ್ಥಲ ಲಿಂಗಪೂಜೆಯ ವೈದಿಕ ರೂಪ : ಪಾರ್ಥಿವೇಶ್ವರ ಪೂಜೆ
ಡಾ. ಎಸ್.ಎಲ್. ಶ್ರೀನಿವಾಸಮೂರ್ತಿ
ರಸ್ಥಲ ಲಿಂಗಪೂಜೆಯು ವೀರಶೈವ ಮತಕ್ಕೆ ಮಾತ್ರ ಸೀಮಿತವಾದ ಪೂಜಾ ವಿಧಾನವೆನ್ನುವುದು ಸದ್ಯಕ್ಕೆ ರೂಢಿಯಲ್ಲಿರುವ ನಂಬಿಕೆ. ಆದರೆ ಬ್ರಾಹ್ಮಣರಲ್ಲಿಯೂ ಬಹು ಅಪರೂಪವಾಗಿ ಈ ಪದ್ಧತಿಯು ಚಾಲ್ತಿಯಲ್ಲಿದೆ ಎಂಬುದನ್ನು ನಿರೂಪಿಸುವುದು ಪ್ರಸ್ತುತ ಸಂಪ್ರಬಂಧದ ಉದ್ದೇಶ.
ವೀರಶೈವ ಮತದ ಉಗಮದ ಬಗ್ಗೆ ಅನೇಕ ಮಂದಿ ವಿದ್ವಾಂಸರು ಸಾಕಷ್ಟು ಚಿಂತನ-ಮಂಥನಗಳನ್ನು ನಡೆಸಿದ್ದಾರೆ. ಬಹುಮಟ್ಟಿಗೆ ಎಲ್ಲರೂ ಒಪ್ಪಿಕೊಂಡಿರುವ ಅಂಶವೆಂದರೆ “ವೀರಶೈವ ಪಂಥವು ಇತರ ಶೈವ ಪಂಥಗಳಾದ ಕಾಶ್ಮೀರಶೈವ ಮತ, ಕಾಳಾಮುಖ, ಪಾಶುಪತ, ಶೈವಸಿದ್ಧಾಂತ ಮತ್ತು ಶ್ರೀಕಂಠನ ಶಕ್ತಿ ವಿಶಿಷ್ಟಾದ್ವೈತಗಳಿಂದ ಆಚಾರ ವಿಚಾರಗಳಲ್ಲಿ ಪ್ರಭಾವಿತವಾಗಿದೆ.’’ ಇಷ್ಟಲಿಂಗ ಧಾರಣೆ ಮತ್ತು ಕರಸ್ಥಲ ಲಿಂಗಪೂಜೆಯು ವೀರಶೈವದ ಕೇಂದ್ರತತ್ವ. “ಲಿಂಗಧಾರಣ ಪದ್ಧತಿಯು ಲಿಂಗಾರ್ಚನೆಯಷ್ಟು ಪ್ರಾಚೀನವಲ್ಲದಿದ್ದರೂ ಬಸವಣ್ಣನವರಿಗಿಂತ ಹಿಂದೆಯೇ ಇದ್ದಂತೆ ತೋರುತ್ತದೆ. ಇದು ವೀರಶೈವರಿಗೆ ವಿಶಿಷ್ಟವಾದ ಕುರುಹು. ಆದ್ದರಿಂದ ಈ ಪದ್ಧತಿಯ ಆದಿಯು ಗೊತ್ತಾದರೆ ವೀರಶೈವ ಮತೇತಿಹಾಸಕ್ಕೆ ಅನುಕೂಲವಾಗುವುದು’’ ಎಂಬ ಉದ್ದೇಶದಿಂದ ಡಿ.ಎಲ್. ನರಸಿಂಹಾಚಾರ್‌ರವರು ತಮ್ಮ ಒಂದು ಲೇಖನದಲ್ಲಿ ಲಿಂಗಧಾರಣೆಯ ಮೂಲಚೂಲಗಳನ್ನು ವಿಸ್ತೃತವಾಗಿ ಚರ್ಚಿಸಿದ್ದಾರೆ. ವೈದಿಕ ಪರಂಪರೆಯ ಮೂಲದವರಾದ ಪಾಶುಪತರು ಮತ್ತು ಅವರ ಶಾಖೆಗಳಾದ ಮಾಹೇಶ್ವರರು, ಲಕುಲೀಶರು ಮತ್ತು ಕಾಳಾಮುಖರು ಶರೀರದ ಮೇಲೆ ಲಿಂಗಗಳನ್ನು ಧರಿಸುತ್ತಿದ್ದರೆಂಬುದನ್ನು ಶ್ರೀಪತಿ ಪಂಡಿತರ ‘ಶ್ರೀಕರಭಾಷ್ಯ (ಕಾಲ ಸು. ಕ್ರಿ.ಶ. ೧೧೬೦), ಸಾಯಣ ಮಾಧವರ ‘ಸರ್ವದರ್ಶನ ಸಂಗ್ರಹ ಮುಂತಾದವುಗಳ ಮೂಲಕ ಅವರು ಖಚಿತಪಡಿಸಿದ್ದಾರೆ. ಹಾಗಾಗಿ ‘ಶರೀರದ ವಿವಿಧ ಭಾಗಗಳ ಮೇಲೆ ಲಿಂಗವನ್ನು ಧರಿಸುವುದು ವೇದ ಸಮ್ಮತವಾದ ವಿಧಾನವಾಗಿದ್ದು ಅದನ್ನು ಎಲ್ಲ ಶೈವಪಂಥದವರೂ ನಡೆಸಿಕೊಂಡು ಬಂದಿದ್ದರು. ವೀರಶೈವವು ಈ ಪದ್ಧತಿಯನ್ನು ಮುಂದೆ ತನ್ನದಾಗಿಸಿಕೊಂಡಾಗ ಇಷ್ಟಲಿಂಗ ವೆಂಬ ತತ್ವವು ಮೂಡಿರಬೇಕು’’ ಎಂದು ತೀರ್ಮಾನಿಸಬಹುದು.
“ತಮ್ಮ ಗ್ರಾಮಗಳಲ್ಲಿ ಸಾರ್ವಜನಿಕವಾಗಿ ಪೂಜೆಗೊಳ್ಳುತ್ತಿದ್ದ ದೇವಾಲಯಗಳ ಸ್ಥಾವರಲಿಂಗಗಳ ಹೆಸರುಗಳನ್ನೇ ಶಿವಶರಣರು ತಮ್ಮ ದೇಹದ ಮೇಲೆ ಧರಿಸುತ್ತಿದ್ದ ಇಷ್ಟಲಿಂಗಕ್ಕೂ ಹೊಂದಿರುತ್ತಿದ್ದರು. ಅಂತಹ ಸ್ಥಾವರಲಿಂಗದ ಕುರುಹನ್ನು (ಇಷ್ಟಲಿಂಗವನ್ನು) ಮನೆಯ ಜಗುಲಿಯ ಮೇಲೆ ಇಟ್ಟು ಪೂಜಿಸುವ ಸಂಪ್ರದಾಯವೂ ಇತ್ತು. ಶೈವರ ಸ್ಥಾವರಲಿಂಗವು ಶರಣರ ಇಷ್ಟಲಿಂಗವೆನಿಸುವಲ್ಲಿ ಶೈವರು ಪ್ರವಾಸದ ಅನುಕೂಲಕ್ಕಾಗಿ ಮಾಡಿಕೊಂಡ ಉರಸ್ಥಲದ ಧಾರಣಕ್ರಮವೂ, ಪೂಜಾ ಅನುಕೂಲಕ್ಕಾಗಿ ಮಾಡಿಕೊಂಡ ಕರಸ್ಥಲದ ಅರ್ಚನ ಕ್ರಮವೂ ಶರಣರ ಇಷ್ಟಲಿಂಗದ ಸಾಮಾನ್ಯ ಬಾಹ್ಯ ಲಕ್ಷಣಗಳಾದವು ಎಂಬ ಅಭಿಪ್ರಾಯವನ್ನು ಎಂ.ಎಂ. ಕಲಬುರ್ಗಿಯವರು ತಮ್ಮ ಒಂದು ಸಂಪ್ರಬಂಧದಲ್ಲಿ ವ್ಯಕ್ತಪಡಿಸಿದ್ದಾರೆ. “ಇಷ್ಟಲಿಂಗವನ್ನು ಶಿರಸ್ಸು, ಕೊರಳು, ರೆಟ್ಟೆ, ಎದೆ, ಕರಸ್ಥಳ ಇವುಗಳಲ್ಲಿ ಯಾವುದಾದರೂ ಒಂದು ಸ್ಥಳದಲ್ಲಿ ಧರಿಸಬೇಕು’’ ಎನ್ನುವುದು ಶಾಸ್ತ್ರನಿಯಮ. ಲಿಂಗವನ್ನು ದೇಹದ ಯಾವುದೇ ಭಾಗದಲ್ಲಿ ಧರಿಸಿದರೂ ಅದನ್ನು ಅಂಗೈಯಲ್ಲಿಟ್ಟುಕೊಂಡು ಪೂಜಿಸುವುದು ಪದ್ಧತಿ. ಇದೇ ಕರಸ್ಥಲ ಲಿಂಗಪೂಜೆ.
ಬಸವಪೂರ್ವಯುಗದಲ್ಲಿ ಹೀಗೆ ಲಾಕುಲೀಶ ಮತ್ತು ಪಾಶುಪತ ಪಂಥದವರಲ್ಲಿದ್ದ ಕರಸ್ಥಲ ಲಿಂಗಪೂಜೆಯು ಮುಂದೆ ವೈದಿಕ ಪರಂಪರೆಯಲ್ಲಿ ಮುಂದುವರೆದದ್ದು ಕೇವಲ ಆರಾಧ್ಯ ಬ್ರಾಹ್ಮಣರಲ್ಲಿ ಮಾತ್ರ ಎಂದು ಕೆಲವು ವಿದ್ವಾಂಸರ ಅಭಿಪ್ರಾಯ. ಆದರೆ ಲಿಂಗವನ್ನು ದೇಹದ ಮೇಲೆ ಧರಿಸದೇ ಇದ್ದರೂ ಪ್ರತಿನಿತ್ಯವೂ ಮಣ್ಣಿನಿಂದ ಹೊಚ್ಚಹೊಸ ಲಿಂಗವೊಂದನ್ನು ರಚಿಸಿ ಕರಸ್ಥಲದಲ್ಲಿರಿಸಿಕೊಂಡು ಪೂಜಿಸುವ ವಿಧಾನವು ಅತ್ಯಂತ ಅಪರೂಪವಾಗಿಯಾದರೂ ಬ್ರಾಹ್ಮಣರಲ್ಲಿ ಉಳಿದುಬಂದಿರುವುದಕ್ಕೆ ಎರಡು ಪುರಾವೆಗಳು ಇಲ್ಲಿವೆ.
೧. ಡಿ.ವಿ. ಗುಂಡಪ್ಪನವರು ತಮ್ಮ ‘ಜ್ಞಾಪಕ ಚಿತ್ರಶಾಲೆಯ ಎಂಟನೇ ಸಂಪುಟದಲ್ಲಿ ‘ಶಿವಪೂಜೆ ನಾರಣಪ್ಪನವರು ಎಂಬುವರನ್ನು ಕುರಿತು ನೀಡುವ ಚಿತ್ರಣ ಹೀಗಿದೆ:
ಪಾರ್ಥೀವ ಪೂಜೆ
ನಾರಣಪ್ಪನವರು ಬೆಳಗ್ಗೆ ೫ ಗಂಟೆಗೆ ಎದ್ದು ತಣ್ಣೀರು ಸ್ನಾನ ಮಾಡಿ ವಿಭೂತಿ ಧರಿಸಿ ಮೂರು ನಾಲ್ಕು ರುದ್ರಾಕ್ಷಿ ಸರಗಳನ್ನು ಹಾಕಿಕೊಂಡು ಮೊದಲು ಪಾರ್ಥೀವ ಪೂಜೆ ಮಾಡುವರು. ಈ ಪಾರ್ಥೀವ ಲಿಂಗಪೂಜೆಯ ಪದ್ಧತಿ ಈಗ ನನಗೆ ತಿಳಿದಿರುವಂತೆ ಎಲ್ಲೂ ಇಲ್ಲ. ನನಗೆ ತೋರುತ್ತದೆ ಅದು ಸರ್ವೋತ್ಕೃಷ್ಟವಾದ ಏಕಾಂತ ಭಕ್ತಿಯೆಂದು ಭಕ್ತನು ಹುತ್ತದ ಮಣ್ಣನ್ನು ತಂದಿರಿಸಿಕೊಂಡಿರುತ್ತಾನೆ. ಅದು ಒದ್ದೆಯಾಗಿರುತ್ತದೆ. ಮಾರನೆಯ ದಿನ ಬೆಳಗ್ಗೆ ಸ್ನಾನ ಸಂಧ್ಯಾದಿಗಳು ಮುಗಿದ ತರುವಾಯ ಆತನು ತನ್ನ ಎಡಗೈಯಲ್ಲಿ ಆ ಮಣ್ಣಿನಿಂದ ಒಂದು ಶಿವಲಿಂಗದ ಪ್ರತೀಕವನ್ನು ಮಾಡಿ ಇರಿಸಿಕೊಳ್ಳುತ್ತಾನೆ. ಮಾಡಿ ಅದನ್ನು ಬಲಗೈಯಿಂದ ಪೂಜಿಸುತ್ತಾನೆ. ಆಗ ಹೇಳುವ ಮಂತ್ರಗಳೇ ‘ನಿಧನಪತಯೇ ನಮಃ ಇತ್ಯಾದಿಗಳು. ಅದೇ ‘ಅಂಗೈಯ ಲಿಂಗ. ಈ ಅರ‍್ಚನೆಗೆ ಬೇಕಾದ್ದು ತುಂಬೆಹೂವು ಮತ್ತು ಬಿಲ್ವ. ಒಂದೊಂದು ಸಾರಿ ನಮ್ಮ ನಾರಣಪ್ಪನವರು ನೈವೇದ್ಯಕ್ಕೆ ಬೇರೆ ಏನೂ ಗತಿಯಿಲ್ಲದೆ ಕುದುರೆಗಾಗಿ ಇರಿಸಿಕೊಂಡಿದ್ದ ಹುರಿದ ಹುರುಳಿಯನ್ನು ನೈವೇದ್ಯ ಮಾಡಿದ್ದುಂಟಂತೆ. ನಾರಣಪ್ಪನವರನ್ನು ಜನ ಶಿವಪೂಜಾ ಧುರಂಧರ ಎಂದು ಕರೆಯುತ್ತಿದ್ದರು.’’
೨. ಶೃಂಗೇರಿಯ ಶ್ರೀ ಸದ್ವಿದ್ಯಾ ಸಂಜೀವಿನೀ ಪಾಠಶಾಲೆಯಲ್ಲಿ ಅಧ್ಯಾಪಕರಾಗಿದ್ದು ನಂತರ ಅಧ್ಯಕ್ಷರಾಗಿದ್ದ ಆಸ್ಥಾನ ಜ್ಯೋತಿಷ್ಟ ವಿದ್ವಾನ್ ವೇ.ಬ್ರ.ಶ್ರೀ. ಶಂಕರ ನಾರಾಯಣ ಜೋಯಿಸರು (೧೯೦೩-೧೯೯೮) “ನಿಜ ಜೀವನದಲ್ಲಿ ಶಿವಶಕ್ತಿಯ ಉಪಾಸಕರು. ಅವರು ಅನೇಕ ವರ್ಷಗಳ ಕಾಲ ಪ್ರತಿದಿನ ಮೃಣ್ಮಯ ಪಾರ್ಥಿವೇಶ್ವರನ ಪೂಜೆಯನ್ನು ಮಾಡುತ್ತಿದ್ದರು’’ ಶ್ರೀ ಜೋಯಿಸರು ಕರಸ್ಥಲದಲ್ಲಿ ಮಣ್ಣಿನ ಲಿಂಗವನ್ನು ಇರಿಸಿಕೊಂಡು ಪೂಜಿಸುತ್ತಿರುವ, ೧೯೫೮ರಲ್ಲಿ ತೆಗೆಯಲಾದ ಛಾಯಾಚಿತ್ರವನ್ನು ಗಮನಿಸಿ.
ಪ್ರಸ್ತುತದಲ್ಲಿ ಪಾರ್ಥಿವ ಪೂಜೆಯನ್ನು ಆಚರಣೆಯಲ್ಲಿ ಇರಿಸಿಕೊಂಡಿರುವವರು ಯಾರಾದರೂ ಇದ್ದಾರೆಯೇ ಎಂಬ ಮಾಹಿತಿಯನ್ನು ಪಡೆಯುವಲ್ಲಿ ನಡೆಸಿದ ಪ್ರಯತ್ನ ಫಲ ನೀಡಿಲ್ಲ. ಹಾಗಾಗಿ ಈ ಆಚರಣೆಯ ವಿಧಿ ವಿಧಾನಗಳನ್ನು ಅರಿಯಲು ಮೇಲ್ಕಂಡ ಉಲ್ಲೇಖಗಳನ್ನು ಮಾತ್ರವೇ ಆಧರಿಸದೆ ವಿಧಿಯಿಲ್ಲ. ಆದರೆ ಶಿವ (ಮಹಾ) ಪುರಾಣದ ವಿದ್ಯೇಶ್ವರ ಸಂಹಿತೆಯ ೧೯, ೨೦ ಮತ್ತು ೨೧ನೇ ಅಧ್ಯಾಯಗಳು ಸಂಪೂರ್ಣವಾಗಿ ಪಾರ್ಥಿವೇಶ್ವರ ಪೂಜೆಯ ವಿವರಣೆಗೆ ಮೀಸಲಾಗಿದ್ದು ಇದರ ಬಗ್ಗೆ ಹೆಚ್ಚಿನ ಬೆಳಕನ್ನು ಚೆಲ್ಲುತ್ತವೆ. ಸುಮಾರು ೧೩೦ಕ್ಕೂ ಹೆಚ್ಚು ಅನುಷ್ಟುಪ್ ಶ್ಲೋಕಗಳಲ್ಲಿ ಹರಡಿರುವ ಇಲ್ಲಿಯ ವಿವರಗಳನ್ನು ಹೀಗೆ ಸಂಗ್ರಹಿಸಬಹುದು:
“ಇರುವ ಎಲ್ಲ ಬಗೆಯ ಲಿಂಗಗಳಲ್ಲಿಯೂ* ಪಾರ್ಥಿವ ಲಿಂಗವೇ ಅತ್ಯುತ್ತಮ. ಅದನ್ನು ಪೂಜಿಸಿ ಅನೇಕರು ಸಿದ್ಧಿಯನ್ನು ಪಡೆದಿರುವರು.೧೦ ದೇವತೆಗಳಲ್ಲಿ ಮಹೇಶ್ವರ, ನದಿಗಳಲ್ಲಿ ಗಂಗೆ, ಮಂತ್ರಗಳಲ್ಲಿ ಪ್ರಣವ, ಪಟ್ಟಣಗಳಲ್ಲಿ ಕಾಶಿ, ವರ್ಣಗಳಲ್ಲಿ ಬ್ರಾಹ್ಮಣ ಹಾಗೂ ವ್ರತಗಳಲ್ಲಿ ಶಿವರಾತ್ರಿ ಹೇಗೆ ಶ್ರೇಷ್ಠವೋ ಹಾಗೆಯೇ ಲಿಂಗಗಳಲ್ಲೆಲ್ಲಾ ಪಾರ್ಥಿವ ಲಿಂಗವು.೧೧ ಕೈಯಲ್ಲಿ ಇರಿಸಿಕೊಳ್ಳುವ ಚರಲಿಂಗವನ್ನು ಅಖಂಡವಾಗಿ ಮತ್ತು ವೇದಿಕೆಯ ಮೇಲೆ ಇರಿಸಿ ಪೂಜಿಸುವಂತಹುದನ್ನು ಪೀಠ ಮತ್ತು ಲಿಂಗವೆಂದು ಎರಡು ಭಾಗಗಳಾಗಿ ಮಾಡಬೇಕು.೧೨ ವೈದಿಕರಾದ ಬ್ರಾಹ್ಮಣರು ತಮ್ಮ ಗೃಹ್ಯಸೂತ್ರದಲ್ಲಿ ಹೇಳಿರುವ ವಿಧಿಯಂತೆ ಸ್ನಾನ ಮಾಡಿ ಸಂಧ್ಯಾವಂದನೆಯನ್ನು ಆಚರಿಸಿ ಮೊದಲು ಬ್ರಹ್ಮಯಜ್ಞವನ್ನು ಆಚರಿಸಿ ಬಳಿಕ ತರ್ಪಣ ನೀಡಬೇಕು. ನಂತರ ಶುದ್ಧವಾದ ಪ್ರದೇಶದಿಂದ ಮಣ್ಣನ್ನು ಹುಡುಕಿ ತಂದು ಅದನ್ನು ನೀರಿನಲ್ಲಿ ಶೋಧಿಸಿ ವೇದೋಕ್ತ ವಿಧಿಯಂತೆ ನಿಧಾನವಾಗಿ ಉಂಡೆಕಟ್ಟಿ ಲಿಂಗವನ್ನು ರಚಿಸಬೇಕು.೧೩ ಅನಂತರ ‘ನಮಸ್ತೇ ರುದ್ರ, ‘ನಮಃ ಶಂಭವಾಯ ಮುಂತಾದ ತೈತ್ತರೀಯ ಸಂಹಿತೆಯ ಮಂತ್ರಗಳಿಂದ ಮತ್ತು ‘ಯಾತೇ ರುದ್ರ ಮೊದಲಾದ ರುದ್ರಾಧ್ಯಾಯದ ಮಂತ್ರಗಳಿಂದ೧೪ ಅಥವಾ ಗುರುವು ಉಪದೇಶಿಸಿರುವಂತಹ ಶಿವ ಪಂಚಾಕ್ಷರೀ ಮಂತ್ರದಿಂದ೧೫ ಷೋಡಶೋಪಚಾರಗಳನ್ನು ಅರ್ಪಿಸಿ ವಿಧಿವತ್ತಾಗಿ ಪೂಜಿಸಬೇಕು. ಗೃಹಸ್ಥರಾದವರು ಈ ಲಿಂಗವನ್ನು ಪೀಠದ ಮೇಲಿಟ್ಟು೧೬ ವಿರಕ್ತರು (ಸನ್ಯಾಸಿಗಳು) ತಮ್ಮ ಕರತಲದಲ್ಲಿ ಇರಿಸಿಕೊಂಡೂ ಪೂಜಿಸಬೇಕು.’’೧೭
ಶಿವಪೂಜೆ ನಾರಣಪ್ಪನವರು ಹಾಗೂ ಶಂಕರ ನಾರಾಯಣ ಜೋಯಿಸರಿಬ್ಬರ ಪೂಜಾವಿಧಾನವೂ ಶಿವಪುರಾಣದ ಈ ಎಲ್ಲ ವಿಧಿಗಳಿಗೆ ಅನುಗುಣವಾಗಿರುವುದರಿಂದ ನಿಸ್ಸಂದೇಹವಾಗಿ ಇದು ವೈದಿಕ ಸ್ವರೂಪದ ಕರಸ್ಥಲ ಲಿಂಗಪೂಜೆಯೇ ಆಗಿದೆ. ಹಾಗಾಗಿ ಒಂದು ಕಾಲದಲ್ಲಿ ಲಾಕುಲೀಶ, ಪಾಶುಪಾತ ಮುಂತಾದವರಲ್ಲಿ ರೂಢಿಯಲ್ಲಿದ್ದ ಅಪರೂಪದ ಈ ವೈದಿಕ ಪೂಜಾ ವಿಧಾನವು ೨೦ನೆಯ ಶತಮಾನದಲ್ಲಿಯೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತ್ತೆಂಬುದು ಖಚಿತವಾಗುತ್ತದೆ.
[ಈ ಸಂಪ್ರಬಂಧವನ್ನು ಸಿದ್ಧಪಡಿಸುವಲ್ಲಿ ನೆರವಾದ ಶ್ರೀಮತಿ ಕೆ.ಎಸ್. ಶೈಲಜಾ ಹಾಗೂ ಡಾ. ಎಸ್.ವಿ. ಶ್ರೀಧರಮೂರ್ತಿ ದಂಪತಿಗಳಿಗೆ, ಅಪರೂಪದ ಛಾಯಾಚಿತ್ರವನ್ನು ಒದಗಿಸಿದ ಹೈದರಾಬಾದಿನ ಶ್ರೀ ಸೀತಾರಾಮ್‌ರವರಿಗೆ ಹಾಗೂ ಆರಾಧ್ಯ ಬ್ರಾಹ್ಮಣರನ್ನು ಕುರಿತು ವಿವರಿಸಿದ ತುಮಕೂರಿನ ಡಾ. ಬಿ. ನಂಜುಂಡಸ್ವಾಮಿಯವರಿಗೆ ಧನ್ಯವಾದಗಳು.)

ಆಧಾರಸೂಚಿ ಮತ್ತು ಟಿಪ್ಪಣಿಗಳು
೧.         ರುದ್ರಪ್ಪ ಜೆ., ‘ವೀರಶೈವ ಧರ್ಮ, ಕರ್ಣಾಟಕದ ಪರಂಪರೆ, ಭಾಗ ೧, ಪುಟ ೫೨೯, ೧೯೭೦.
೨.         ನರಸಿಂಹಾಚಾರ್, ಡಿ.ಎಲ್. ‘ಲಿಂಗಾರ್ಚನೆ, ಲಿಂಗಧಾರಣೆ ಪೀಠಿಕೆಗಳು, ಲೇಖನಗಳು, ಪುಟ ೯೮೬, ೧೯೭೧.
೩.         ಪಾರಮೇಶ್ವರಾಗಮದ ಪ್ರಕಾರ ಚತುರ್ವರ್ಣಗಳಲ್ಲಿ ಯಾರೇ ಆದರೂ ಲಿಂಗಧಾರಣ ಮಾತ್ರದಿಂದ ಅವರು ಶಿವರೇ ಆಗುವರು. (ನೋಡಿ: ನಂದಿಕೋಲಮಠ, ಜ.ಐ., ಕರಸ್ಥಲ ಪರಂಪರೆ, ಪುಟ ೩೫, ೨೦೦೯.
೪.         ಕಲಬುರ್ಗಿ ಎಂ.ಎಂ., ‘ಇಷ್ಟಲಿಂಗ, ಮಾರ್ಗ ಸಂ. ೧, ಪುಟ ೧೮೭, ೧೯೮೮.
೫.         ಉತ್ತಮಾಂಗೇ ಗಲೇಕಕ್ಷೇ ತಥಾ ವಕ್ಷಃ ಸ್ಥಲೇಪಿ ವಾ |
            ಕರಸ್ಥಲೇಪಿವಾ ನಿತ್ಯಂ ಸಾವಧಾನೇನ ಧಾರಯ || -ಸೂಕ್ಷ್ಮಾಗಮ.
೬.         “ಲಿಂಗಯಜ್ಞೋಪವೀತಧಾರೀ ಪಾಶುಪತ ಮಹೇಶ್ವರ..ಧರ್ಮವನ್ನು ಬಸವೇಶ್ವರನು ಸಂಸ್ಕರಿಸಲು, ಪಾಶುಪತರು ಪಥವನ್ನರಿಯದೆ, ಕಾಳಾಮುಖರು ಕಂಗೆಟ್ಟು ಸುಧಾರಿತ ಧರ್ಮವನ್ನು ಬಹುಸಂಖ್ಯೆಯಲ್ಲಿ ಅಪ್ಪಿಕೊಂಡರಾದರೂ ಲಿಂಗ ಬ್ರಾಹ್ಮಣ ಧರ್ಮವು ಆರಾಧ್ಯ ಬ್ರಾಹ್ಮಣರಲ್ಲಿ ಮುಂದುವರೆಯಿತು’’ -ಮಲ್ಲಪ್ಪ ಟಿಎನ್., ‘ಬಸವಯುಗದ ಹಿನ್ನೆಲೆ, ಬಸವೇಶ್ವರ ಸಮಕಾಲೀನರು, ಪುಟ ೬೮೦, ೨೦೦೭.
೭.         ಗುಂಡಪ್ಪ. ಡಿ.ವಿ. ‘ಡಿವಿಜಿ ಕೃತಿ ಶ್ರೇಣಿ, ಸಂ. ೮, ಪುಟ ೨೪೯, ೧೯೯೮.
೮.         ‘ಸಾರ್ಥಕಜೀವಿ ಶೃಂಗೇರಿ ಕುಲಪತಿ ಶಂಕರನಾರಾಯಣ ಜೋಯಿಸರು, ಪುಟ ೮, ಶ್ರೀ ಕಲ್ಲೇಶ್ವರ ಮಲ್ಲೇಶ್ವರ ಸ್ವಾಮಿ ಸೇವಾ ಟ್ರಸ್ಟ್, ಶಿವಮೊಗ್ಗ, ೨೦೦೯.
೯.         ವೆಂಕಟರಾವ್ (ಸಂ) ಶಿವಮಹಾಪುರಾಣ, ಭಾಗ ೧, ಜಯಚಾಮರಾಜೇಂದ್ರ ಗ್ರಂಥಮಾಲಾ, ಕ್ರ.ಸಂ. ೨೧, ೧೯೪೫.
*           ದ್ರವ್ಯಗಳ ಭೇದದಿಂದ ಲಿಂಗಗಳಲ್ಲಿ ಶೈಲಜ, ರತ್ನಜ, ಧಾತುಜ, ದಾರುಜ, ಮೃಣ್ಮಯ ಮತ್ತು ಕ್ಷಣಿಕವೆಂಬ ಆರು ಬಗೆಗಳಿವೆ. -ಲಿಂಗ ಮಹಾಪುರಾಣ, ಪೂರ್ವಭಾಗ, ಅಧ್ಯಾಯ ೭೪, ಶ್ಲೋಕ : ೧೭.
೧೦.      ಶಿವಮಹಾಪುರಾಣ, ಅಧ್ಯಾಯ ೧೮, ಶ್ಲೋಕ-೪.
೧೧.      ಅಲ್ಲೇ., ಶ್ಲೋಕಗಳು ೯-೧೫.
೧೨.      ಅಲ್ಲೇ., ಶ್ಲೋಕಗಳು ೩೧-೩೫.
೧೩.      ಅಲ್ಲೇ., ಅಧ್ಯಾಯ ೧೯, ಶ್ಲೋಕಗಳು ೬-೯.
೧೪.      ಅಲ್ಲೇ., ಶ್ಲೋಕಗಳು ೧೧-೪೧.
೧೫.      ಅಲ್ಲೇ., ಶ್ಲೋಕಗಳು ೪೨-೪೪.
೧೬.      ಅಲ್ಲೇ., ಅಧ್ಯಾಯ ೨೦, ಶ್ಲೋಕ ೩೩.
೧೭.      ಅಲ್ಲೇ., ಶ್ಲೋಕ ೩೫.
?   ಮುಖ್ಯಸ್ಥ, ಕನ್ನಡ ವಿಭಾಗ, ವಿಜಯ ಪದವಿ ಪೂರ್ವ ಕಾಲೇಜು, ಆರ್.ವಿ. ರಸ್ತೆ, ಬಸವನಗುಡಿ, ಬೆಂಗಳೂರು-೫೬೦೦೦೪.






No comments:

Post a Comment