Monday, April 27, 2015

ಪ್ರಾಚೀನ ಶಕ್ತಿ ದೇವತೆಯ ಆರಾಧನಾ ಕೇಂದ್ರ ದಿವ್ಯಾದಪೆÇಸವೂರು

ಪ್ರಾಚೀನ ಶಕ್ತಿ ದೇವತೆಯ ಆರಾಧನಾ ಕೇಂದ್ರ ದಿವ್ಯಾದಪೆಸವೂರು
ಶಿವಯೋಗಿ ಕೋರಿಶೆಟ್ಟರ 
ಹಾವೇರಿ ತಾಲೂಕಿನ ಒಂದು ಪ್ರಾಚೀನ ಐತಿಹಾಸಿಕ ಗ್ರಾಮ ದೇವಿಹೊಸೂರು. ಹಾವೇರಿಯಿಂದ ನೈಋತ್ಯಕ್ಕೆ ಸುಮಾರು 8 ಕಿ.ಮಿ. ದೂರದಲ್ಲಿದೆ. ಅತ್ಯಂತ ಪ್ರಾಚೀನವಾಗಿರುವ ಗ್ರಾಮದಲ್ಲಿ ಹಲವಾರು ಶಿಲಾಶಾಸನಗಳು, ವೀರಗಲ್ಲುಗಳು, ಗೋಸಾಸಗಳು, ಕೋಣನ ತಲೆಶಿಲ್ಪ ವಿವಿಧ ದೇವಾಲಯಗಳು ಮೂರ್ತಿಶಿಲ್ಪಗಳು ಮುಂತಾದ ಪ್ರಾಚ್ಯ ಸ್ಮಾರಕಗಳನ್ನು ಕಾಣಬಹುದು. ಈ ಗ್ರಾಮವು ಶಾಸನಗಳಲ್ಲಿ ಪೊಸವೂರು, ದಿವ್ಯಾದ ಪೊಸವೂರು, ದೆಯ್ವದ ಪೊಸವೂರು, ದೇವಿಯ ಹೊಸವೂರು ಎಂಬುದಾಗಿ ಉಲ್ಲೇಖಿತಗೊಂಡಿದೆ. ರಾಷ್ಟ್ರಕೂಟರ ಕಾಲದಷ್ಟು ಪ್ರಾಚೀನತೆ ಹೊಂದಿರುವ ದಿವ್ಯಾದಪೊಸವೂರು ಪ್ರಾಚೀನ ಕುಂತಳ ದೇಶದ ಬನವಾಸಿ-12000ದ ಒಂದು ಕಂಪಣ ಬಾಸವೂರು-140ರ ಆಧೀನಕ್ಕೆ ಒಳಪಟ್ಟಿತ್ತು. ಮಲ್ಲಾರಿ ಮಾರ್ತಾಂಡನ ದೇವಿ ಮಾಳಚಿ ಇಲ್ಲಿ ನೆಲೆಗೊಂಡಿದ್ದರಿಂದಲೇ ದೇವಿಹೊಸೂರ ಎಂಬ ಹೆಸರು ಈ ಊರಿಗೆ ಬಂದಿತೆನ್ನಬಹುದು.
ದೇವಿಹೊಸೂರು ಪ್ರಾಚೀನ ಕಾಲದಲ್ಲಿ ಒಂದು ಅಗ್ರಹಾರವಾಗಿತ್ತು. ರಾಷ್ಟ್ರಕೂಟ 3ನೇ ಕೃಷ್ಣನ ಕ್ರಿ.ಶ. 961ರ ಶಾಸನವು ದೇವಿಹೊಸವೂರು ಅಗ್ರಹಾರದ ಮೊದಲ ಉಲ್ಲೇಖ ಹೊಂದಿದ್ದು, ಇದು ಪೊಸವೂರಿನ ಮಹಾಜನರನ್ನು ಉಲ್ಲೇಖಿಸುತ್ತದೆ. ಈ ಗ್ರಾಮವು ಮಾಳಜದೇವಿ ಲಬ್ದವರ-ಪ್ರಸಾದರಾಗಿದ್ದ ಸಾವಿರ ಮಹಾಜನರನ್ನು ಹೊಂದಿದ್ದ ಅಗ್ರಹಾರವಾಗಿತ್ತು. ದೇವಿಹೊಸವೂರಿನ ಅಗ್ರಹಾರವನ್ನು ಶಾಸನವು ಜನಮೇಜಯದತ್ತಿ ಅಗ್ರಹಾರ ಎಂದು ಉಲ್ಲೇಖಿಸಿರುವುದರಿಂದ ಈ ಅಗ್ರಹಾರವು ಅತ್ಯಂತ ಪ್ರಾಚೀನವಾದುದೆಂದು ತಿಳಿಯುತ್ತದೆ. ಇಲ್ಲಿನ ಮಹಾಜನ ಸಾಸಿರ್ವರು ದೇವಿಹೊಸವೂರು ಆಡಳಿತದ ಒಡೆತನ ಹೊಂದಿದ್ದು, ಇವರ ಸಮ್ಮಖದಲ್ಲಿಯೇ ಮಾಳಚಿ ದೇವಿಗೆ ದಾನದತ್ತಿಗಳನ್ನು ನೀಡಲಾಗಿದೆ. ಸಾಸಿರ್ವರೂ ಕೂಡಾ ದಾನಗಳನ್ನು ನೀಡಿದ ಮತ್ತು ಸ್ವೀಕರಿಸಿದ ಬಗ್ಗೆ ಶಾಸನಗಳು ಉಲ್ಲೇಖಿಸಿವೆ. ರಾಷ್ಟ್ರಕೂಟರ ಕಾಲದಿಂದ ಹಿಡಿದು ಯಾದವರ ಕಾಲದವರೆಗೂ ಈ ಗ್ರಾಮದ ಮೇಲೆ ಹಿಡಿತ ಹೊಂದಿದ್ದ ಮಹಾಜನ ಸಾಸಿರ್ವರು ಅಲ್ಲಿನ ಶಾಸನೋಕ್ತ ಮಾಳಚಿ, ಭೋಗೇಶ್ವರ, ಹಾಗೂ ಗವರೇಶ್ವರ ದೇವಾಲಯಗಳಲ್ಲದೇ, ಗ್ರಾಮದ ಇತರೆ ಅಭಿವೃದ್ದಿಗೆ ಶ್ರಮಿಸಿದ್ದಾರೆ.
ದಿವ್ಯಾದಪೊಸವೂರನ ಮಾಳಚಿ ದೇವಾಲಯ ಹಾಗೂ ಮೈಲಾರಲಿಂಗ ದೇವಾಲಯಕ್ಕೂ ಸಾಂಸ್ಕøತಿಕ ಸಂಬಂಧ ಇರುವಂತೆ ತೋರುತ್ತದೆ. ಜನಪದ ಪುರುಷ ದೇವತೆ ಏಳುಕೋಟೆ ಅಥವಾ ಮೈಲಾರಲಿಂಗ ಭಕ್ತರಿಗೆ ಪ್ರತ್ಯಕ್ಷ ಶಿವ ಮಣಿಮಲ್ಲರೆಂಬ ದೈತ್ಯರನ್ನ ಸಂಹರಿಸಲು ಭೂಲೋಕಕ್ಕೆ ಬಂದು ಕಂಬಳಿ ಕಂತೆಯ ವೇಷತೊಟ್ಟನು. ತಲೆಯ ಮೇಲೆ ಮುರುಗಿ-ಮುಂಡಾಸ, ಕೈಯಲ್ಲಿ ತ್ರೀಶೂಲ, ಡಮರು, ಭಂಡಾರ ಚೀಲ, ಗಂಟೆ, ಡೋಣಿ ಧರಿಸಿ ದೇವರಗುಡ್ಡ ಸಮೀಪ ಶಿಡಗಿನಹಾಳ ಗ್ರಾಮದ ಪಶ್ಚಿಮದ ಕರಿಯಾಲದಲ್ಲಿ ಹಲವಾರು ರಾಕ್ಷಸರನ್ನ ಸಂಹರಿಸಿ ಅಂತಿಮವಾಗಿ ಬಳ್ಳಾರಿ ಜಿಲ್ಲೆಯ ಮೈಲಾರದಲ್ಲಿ ಮಲ್ಲಾಸುರನನ್ನು ಸಂಹರಿಸಿದನೆಂದು ಹೇಳಲಾಗುತ್ತದೆ. ಏಳುಕೋಟಿ, ಮೈಲಾರಲಿಂಗ, ಮಲ್ಲಾರಿ, ಮಾರ್ತಾಂಡಭೈರವ, ಖಂಡೋಬಾ, ಮಾಲತೇಶ ಮುಂತಾದ ಹೆಸರುಗಳಿಂದ ಈತನನ್ನು ಕರೆಯಲಾಗಿದೆ.
ಗಂಗಿಮಾಳವ್ವ ಅಥವಾ ಮಾಳಚಿದೇವಿ ಮೈಲಾರಲಿಂಗನ ಪಟ್ಟದ ಹೆಂಡತಿ, ಕುರುಬತೆವ್ವ ಅಥವಾ ಕುರುಬರ ಮಾಳವ್ವ ಎರಡನೇ ಹೆಂಡತಿ. ಗಂಗಿಮಾಳವ್ವನ ಮೇಲಿನ ಹಠದಿಂದ ಇವಳನ್ನು ತಂದನೆಂಬುದು ನಂಬುಗೆ. ಇವರೀರ್ವರಿಗೂ ಹೆಗ್ಗಡೆಯೇ ಅಣ್ಣ. ಬನಾಯಿ, ಬನಶಂಕರಿ, ಬಾಣಾಯಿ ಮುಂತಾದ ಹೆಸರುಗಳಿಂದಲೂ ಈ ದೇವತೆಯನ್ನು ಕರೆಯಲಾಗಿದೆ. ಮೈಲಾರ ಮತ್ತು ದೇವರಗುಡ್ಡದಲ್ಲಿನ ಮಾಳಚಿ ಹಾಗೂ ಕುರುಬತೆವ್ವನ ಮೂರ್ತಿಗಳಲ್ಲಿ ಹೋಲಿಕೆಯನ್ನು ಕಾಣಬಹುದು. ಇವು ಮೈಲಾರಲಿಂಗನ ತದ್ವತ್ತಾದ ಸ್ತ್ರೀಮೂರ್ತಿಗಳಾಗಿವೆ. ಅಂದರೆ ಬಲದ ಕೈಗಳಲ್ಲಿ ಖಡ್ಗ ತ್ರಿಶೂಲಗಳು, ಎಡದ ಕೈಯಗಳಲ್ಲಿ ಪಾನಪಾತ್ರೆ ಡಮರುಗಳೂ ಇವೆ. ಮೈಲಾರಲಿಂಗನಿಗೆ ಮೈಲಾರ ಹಾಗೂ ದೇವರಗುಡ್ಡ ನೆಲೆಗಳಾಗಿರುವ ಹಾಗೆ ಮಾಳಚಿದೇವಿಗೆ ದೇವಿಹೊಸವೂರು ನೆಲೆಯಾಗಿತ್ತು.
ಪ್ರಸ್ತುತ ಗ್ರ್ರಾಮದ ಹೊರಗೆ ಇರುವ ಬನಶಂಕರಿ ದೇವಸ್ಥಾನವೇ ಮಾಳಚಿ ದೇವಸ್ಥಾನವಾಗಿದೆ. ಈ ಬಗ್ಗೆ ಇಲ್ಲ್ಲಿನ ಶಾಸನಗಳು ಉಲ್ಲೇಖ ಹೊಂದಿವೆ. ಯೋಗಪೀಠಕ್ಕಿಂತ ಮಿಗಿಲಾದ ಮಾಳಜ ಪೀಠ ಇದೆಂದು ಶಾಸನವೊಂದು ಬಣ್ಣಿಸಿದೆ. ಊರಿನ ಉತ್ತರಕ್ಕೆ ಇರುವ ದೊಡ್ಡಕೆರೆಯ ಸಮೀಪದಲ್ಲಿರುವ ಮಾಳಚಿ ದೇವಾಲಯವು ಭೌಗೋಳಿಕವಾಗಿ ಎತ್ತರದ ದಿನ್ನೆಯ ಆಯಕಟ್ಟಿನ ಜಾಗದಲ್ಲಿದೆ. ವಿಶಾಲ ಭೂಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ದೇವಾಲಯವು ಪೂರ್ವಾಭಿಮುಖವಾಗಿದ್ದು, ತನ್ನದೇ ಆದ ವಾಸ್ತುಶಿಲ್ಪ ಹಾಗೂ ಸಾಂಸ್ಕøತಿಕ ಇತಿಹಾಸವನ್ನು ಹೊಂದಿದೆ. ಕ್ರಿ.ಶ. ಸುಮಾರು 10ನೇ ಶತಮಾನದಲ್ಲಿ ಇಟ್ಟಿಗೆಯಿಂದ ನಿರ್ಮಿಸಲ್ಪಟ್ಟಿರುವ ಈ ದೇವಾಲಯವು ಗರ್ಭಗೃಹ, ಅಂತರಾಳ, ನವರಂಗ ಹಾಗೂ ಮುಖಮಂಟಪವನ್ನು ಹೊಂದಿದೆ. ದೇವಾಲಯದ ಗರ್ಭಗೃಹದಲ್ಲಿನ ಮೂರ್ತಿಯು ಕಾಲಾಂತರದಲ್ಲಿ ಸ್ಥಳಾಂತರಗೊಂಡಿದ್ದು, ಈಗ ಗಣಪತಿಯ ಮೂರ್ತಿ ಇದೆ. ಇಲ್ಲಿನ ದೇವಿ ಮೂರ್ತಿಯನ್ನು ಊರಿನಲ್ಲಿರುವ ಬನಶಂಕರಿ ಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂಬುದು ಸ್ಥಳೀಕರ ಅಭಿಪ್ರಾಯ. ಸುಕನಾಸಿಯ ದ್ವಾರದ ಮೇಲ್ಭಾಗದ ಪಟ್ಟಿಕೆಯಲ್ಲಿ ಎರಡು ಮಕರಗಳ ನಡುವೆ ಮಾಳಚಿಯ ವಿಗ್ರಹವನ್ನು ಕೆತ್ತಲಾಗಿದೆ. ಚತುರ್ಭುಜೆಯಾಗಿರುವ ಮಾಳಚಿ ಕೈಗಳಲ್ಲಿ ಕ್ರಮವಾಗಿ ಕತ್ತಿ, ಡಮರು, ತ್ರಿಶೂಲ ಮತ್ತು ಕಪಾಲಗಳಿವೆ.  ಇನ್ನುಳಿದಂತೆ ಬಾಗಿಲುವಾಡ ಸರಳವಾದ್ದು, ಪಕ್ಕದಲ್ಲಿ ಸುಂದರ ಜಾಲಂದ್ರಗಳಿವೆ. ನವರಂಗದಲ್ಲಿ ನಾಲ್ಕು ಕಂಬಗಳು ಕಲಾತ್ಮಕವಾಗಿ ನಿರ್ಮಿಸಲ್ಪಟ್ಟಿವೆ. ಅವುಗಳ ಮಧ್ಯದ ಛತ್ತಿನಲ್ಲಿ ಕಮಲದಳಗಳ ಉಬ್ಬು ಚಿತ್ರದ ವಿತಾನವಿದೆ. ಬದಿಗಳಲ್ಲಿ ನಾಗಗಳಿವೆ. ದೇವಾಲಯದ ಗರ್ಭಗೃಹ ಹಾಗೂ ಅಂತರಾಳದ ಭಿತ್ತಿಗಳು ಇಟ್ಟಿಗೆಯಿಂದ ನಿರ್ಮಿಸಲ್ಪಟ್ಟಿವೆ. ಗೋಡೆಗುಂಟ ಅರ್ಧಕಂಭಗಳಿದ್ದು ಪೀಠ, ಕಾಂಡ, ಕಂಠ ಹಾಗೂ ಬೋದಿಗೆಗಳಿಂದ ಅಲಂಕೃತಗೊಂಡಿವೆ. ಮುಖಮಂಟಪವು ಹನ್ನೆರಡು ಕಂಭಗಳನ್ನು ಹೊಂದಿದ್ದು, ನವೀಕರಣಗೊಂಡಿದೆ. ಗರ್ಭಗೃಹದ ಶಿಖರವು ಶಿಥಿಲಗೊಂಡು ದುರಸ್ತಿಯಾಗಿದೆ.
ಮಾಳಚಿ ದೇವಾಲಯವು ವಿಶಾಲವಾದ ಪ್ರಾಕಾರ ಹೋದಿದ್ದು, ದೇವಾಲಯದ ಸುತ್ತಲೂ ನಿರ್ದಿಷ್ಟಪಡಿಸಿದ ದಿಕ್ಕಿನಲ್ಲಿ ಚಿಕ್ಕ ಚಿಕ್ಕ ಗುಡಿಗಳ ಅವಶೇಷಗಳಿವೆ. ಇವುಗಳಲ್ಲಿನ ಮೂರ್ತಿಗಳು ಕಾರಣಾಂತರಗಳಿಂದ ಚದುರಿ ಹೋಗಿವೆ. ದೇವಾಲಯದ ಸುತ್ತಲೂ ಇರುವ ಆವಾರದಲ್ಲಿ ಶಿವಲಿಂಗಗಳು ಹಾಗೂ ಚಿಕ್ಕ ಚಿಕ್ಕ ಗುಡಿಗಳ ಅವಶೇಷಗಳÀನ್ನು ಗುರುತಿಸುವುದು ಕಷ್ಟವೆನಿಸಿದರೂ, ಈ ಚಿಕ್ಕ ಮಂದಿರಗಳು ಮೈಲಾರಲಿಂಗ ಹಾಗೂ ಮಾಳಚಿಯರ ಪರಿವಾರ ದೇವತೆಗಳಾದ ರಣದಾಗ್ನಿ, ಕೋಮಾಲೆ, ಚಿಕ್ಕಯ್ಯ, ಜುಂಜಯ್ಯ, ಹೆಗ್ಗಡೆ ಮುಂತಾದವರಿಗಾಗಿ ನಿರ್ಮಿಸಿದವುಗಳಂತೆ ತೋರುತ್ತವೆ. ಮಾಳಚಿ ದೇವಾಲಯದ ಮುಂದೆ ಸಾಲಾಗಿ ಅಲ್ಲಲ್ಲಿ ಕಲ್ಲಿನಲ್ಲಿ ನಿರ್ಮಿಸಿದ ಪಾದಪೀಠಗಳನ್ನು ಕಾಣಬಹುದು. ದೇವಾಲಯದ ಪ್ರಾಕಾರದಲ್ಲಿ ಇಂತಹ ಮೂರು ಪಾದಪೀಠಗಳಿವೆ. ಪಾದಪೀಠಗಳು ಪ್ರಾಕಾರದ ಹೊರಗೂ ರಸ್ತೆಬದಿಯ ಹೊಲದಲ್ಲಿಯೂ ವಿಸ್ತರಿಸಿವೆ. ಇಂತಹ ಜೋಡುಪಾದ ಮುದ್ರೆಗಳನ್ನು ಹೆಡೆಬಿಚ್ಚಿದ ಹಾವುಗಳು ಸುತ್ತಿದಂತೆ ಕೆತ್ತಲಾಗಿದೆ. ಈ ಪ್ರಾಕಾರದ ಹಿಂಬದಿಯಲ್ಲಿ ಅಯ್ಯನ ಹೊಂಡವಿದ್ದು, ಇದರ ದಂಡೆಯ ಮೇಲೆ ಗಜಲಕ್ಷ್ಮಿ ಹಾಗೂ ಕೋಣನತಲೆ ಶಿಲ್ಪಗಳಿವೆ. ಗಜಲಕ್ಷ್ಮಿ ಶಿಲ್ಪವು ಅತ್ಯಂತ ಆಕರ್ಷಕವಾಗಿದ್ದು, ನಾಲ್ಕು ಆನೆಗಳ ಮಧ್ಯದಲ್ಲಿ ಕುಳಿತ ಗಜಲಕ್ಷ್ಮಿಯ ಮೇಲ್ಭಾಗದ ಎರಡು ಆನೆಗಳು ತಮ್ಮ ಸೊಂಡಿಲುಗಳಲ್ಲಿ ಕುಂಭಗಳನ್ನು ಹೊತ್ತು ದೇವಿಗೆ ಅಭಿಷೇಕ ಮಾಡುತ್ತಿವೆ. ಈ ಗಜಲಕ್ಷ್ಮಿ ಶಿಲ್ಪದ ಬಳಿಯಲ್ಲಿಯೆ ಕೋಣನ ತಲೆಯುಳ್ಳ ಶಿಲ್ಪವಿದೆ. ಹರವಾದ ಕಲ್ಲುಚಪ್ಪಡಿಯ ಮೇಲೆ ನೆಲಕ್ಕೆ ಒರಗಿದಂತೆ ಕಂಡುಬರುವ ಇದರ ನಾಲಿಗೆ ಹೊರಚಾಚಿದೆ. ಕೋಡುಗಳ ಮಧ್ಯದಲ್ಲಿ ಅರಳಿದ ಕಮಲವಿರುವ ಉಬ್ಬುಶಿಲ್ಪ ಇದಾಗಿದೆ. ಕೆರೆ ಕಟ್ಟೆಗಳ ಬಳಿಯಲ್ಲಿ ಜೋಡಾಗಿಯೇ ಕಂಡುಬರುವ ಇಂತಹ ಶಿಲ್ಪಗಳು ವನದುರ್ಗೆಯ  ಸಂಕೇತವನ್ನು ಪ್ರತಿನಿಧಿಸುತ್ತವೆ.
ದೇವಾಲಯ ಪ್ರಾಕಾರದ ಸುತ್ತಲೂ ಶಿಲೆಯ ಸಮುಚ್ಯಯದ ಪ್ರಾಕಾರ ನಿರ್ಮಿಸಿದ್ದು, ಅದು ಅಲ್ಲಲ್ಲಿ ಶಿಥಿಲಗೊಂಡಿದೆ. ದೇವಾಲಯಕ್ಕೆ ಪ್ರಾಕಾರದ ಒಳಗೆ ಪ್ರವೇಶಿಸಲು ಎತ್ತರವಾದ ಸ್ಥಂಭಗಳುಳ್ಳ ಆಕರ್ಷಕ ಮಕರ ತೋರಣವಿದೆ. ಎರಡು ಸ್ಥಂಭಗಳ ಮೇಲೆ ಅಡ್ಡಲಾಗಿ ಕೂಡಿಸಿದ ಪಟ್ಟಿಕೆಯ ಹೊರಮುಖದ ಮಕರತೋರಣದ ಮಧ್ಯದಲ್ಲಿ ಸವ್ಯ ಲಲಿತಾಸನದಲ್ಲಿ ಕುಳಿತಿರುವ ಮೂವರು ದೇವತೆಗಳನ್ನು ಖಂಡರಿಸಲಾಗಿದೆ. ಬದಿಯಲ್ಲಿ ಕುದುರೆ ಸವಾರರು ಒಬ್ಬ ಭಕ್ತೆ ಹಾಗೂ ಮೂವರು ಆನೆ ಸವಾರರಿದ್ದಾರೆ. ಈ ಮಕರ ತೋರಣದ ಒಂದು ಸ್ಥಂಭದಲ್ಲಿ ಕಲ್ಯಾಣ ಚಾಲುಕ್ಯ ದೊರೆ 1ನೇ ಸೋಮೇಶ್ವರನ ಆಳ್ವಿಕೆಯ ಕಾಲದ ಶಾಸನವಿದ್ದು, ಇದು ಮಹಾಸಾಮಂತ   ಜೋಮದೇವರಸನ ರಕ್ಷಕ ಇಂದಪಯ್ಯ ಈ ಮಕರ ತೋರಣವನ್ನು ನಿರ್ಮಿಸಿದನೆಂದು ಉಲ್ಲೇಖಿಸಿದೆ. ಇದರಿಂದಾಗಿ ಮಾಳಚಿ ದೇವಾಲಯವು ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣಗೊಂಡಿದ್ದರೂ, ನಂತರದಲ್ಲಿ ಕಲ್ಯಾಣ ಚಾಳುಕ್ಯರ ಕಾಲದಲ್ಲಿ ಈ ದೇವಾಲಯದ ಇತರೆ ಅಭಿವೃದ್ದಿಗಳಾಗಿರುವ ಸಂಗತಿಯನ್ನು ಗುರುತಿಸಬಹುದು.
“ಕಾಳಿಗೆ, ಕಾಳರಾಕ್ಷಸಿಗೆ, ರೌದ್ರೆಗೆ,
ಭೈರವಿ ಗುಗ್ರೇಗಾ ಮಹಾಕಾಳಿಗೆ,
ಕಾಳಯೋಗಿನಿಗೆ, ಮಾಲಿಚದೇವತೆಗಿನ್ದರಂ” ಎಂಬುದಾಗಿ ಇಲ್ಲಿನ ಶಾಸನವೊಂದು ಮಾಳಚಿದೇವಿಯ ವಿವಿಧ ರೂಪಗಳನ್ನು ವರ್ಣಿಸಿದೆ. ದೇವಿಹೊಸವೂರಿನ ಮಾಳಚಿದೇವಿ ಆ ಕಾಲದ ಪ್ರಸಿದ್ದ ಶಕ್ತಿದೇವತೆಯಾಗಿದ್ದು, ಸಹಜವಾಗಿಯೆ ಅಪಾರ ಭಕ್ತಸಮೂಹವನ್ನು ಹೊಂದಿದ್ದಳು. ಇವಳ ಆಶೀರ್ವಾದ ಪಡೆದು ಕೃತಾರ್ಥರಾಗಲು ಅರಸರು, ಸಾಮಂತರು, ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಹರಕೆಹೊತ್ತು ಹಲವಾರು ದಾನದತ್ತಿಗಳನ್ನು ನೀಡುತ್ತಿದ್ದರು. ಕಲ್ಯಾಣದ ಚಾಲುಕ್ಯ ದೊರೆ 2ನೇ ಜಗದೇಕಮಲ್ಲನ ಕಾಲದ ಇಲ್ಲಿನ ಶಾಸನವು ದಂಡನಾಯಕ ರೇಚರಸ ಬನವಾಸಿ-12000ವನ್ನು ಆಳುತ್ತಿದ್ದ ಉಲ್ಲೇಖವನ್ನು ಹೊಂದಿದೆ. ದಂಡನಾಯಕ ರೇಚರಸ ಮತ್ತು ಸುಂಕಾಧಿಕಾರಿ ದೇವಧರದಂಡನಾಯಕರು, ಅಲ್ಲಿನ ಮಹಾಜನ ಸಾಸಿರ್ವರ ಸಮ್ಮುಖದಲ್ಲಿ, ದೇವಿಯ ಪರ್ವದಂದು, ಅಗ್ರಹಾರ ದಿವ್ಯಾದ ಪೊಸವೂರಿನ ಮಾಳಚಿದೇವಿಯ ಉಯ್ಯಲ ಪರ್ವಕ್ಕೆ ಭೂದಾನ ಮಾಡಿ, ತನ್ನ ಹರಕೆ ತೀರಿಸಿದ್ದ ಸಂಗತಿಯನ್ನು ಉಲ್ಲೇಖಿಸಿದೆ. ಸಿಂಧರ ಅರಸನು ಇವಳ ಭಕ್ತನಾಗಿದ್ದ ಬಗ್ಗೆ, ಸುಂಕದಾನ ಮತ್ತು ಇನ್ನಿತರ ದಾನಗಳ ಬಗ್ಗೆ ಬೇರೆ ಶಾಸನಗಳಲ್ಲಿ ಉಲ್ಲೇಖನಗಳನ್ನು ಕಾಣಬಹುದು.
ರಾಷ್ಟ್ರಕೂಟರ ಕಾಲದಿಂದಲೂ ಅರಸರು, ಮಾಂಡಳೀಕರು, ಅಧಿಕಾರಿಗಳ ಪ್ರೋತ್ಸಾಹ ಹಾಗೂ ಮಹಾಜನ ಸಾಸಿರ್ವರ ನೇತೃತ್ವದಲ್ಲಿ ಪ್ರಸಿದ್ದ ಶಕ್ತಿದೇವತೆಯ ಆರಾಧನಾ ಕೇಂದ್ರ ಎನಿಸಿದ್ದ ಇದು ಕಲ್ಯಾಣದ ಚಾಲುಕ್ಯರು, ದೇವಗಿರಿಯ ಯಾದವ ದೊರೆಗಳ ಕಾಲದಲ್ಲಿ ಪ್ರಖ್ಯಾತಿಯ ಪರಾಕಾಷ್ಠೆ ತಲುಪಿತ್ತೆನ್ನಬಹುದು. ಆನಂತರದಲ್ಲಿ ಈ ಮಾಳಜಪೀಠ ಕ್ರಮೇಣವಾಗಿ ತನ್ನ ಪ್ರಖ್ಯಾತಿ ಕಳೆದುಕೊಂಡಿದ್ದಿರಬಹುದಾದರೂ, ಇಂದಿಗೂ ಅಪಾರ ಭಕ್ತ ಸಮೂಹವನ್ನು ಈ ದೇವಿ ಹೊಂದಿರುವುದಕ್ಕೆ ದೇವಾಲಯದಲ್ಲಿ ಈಗಲೂ ನಡೆಯುವ ಪೂಜೆ ಹಾಗೂ ಪರ್ವಗಳೇ ಸಾಕ್ಷಿಯಾಗಿವೆ.

ಆಧಾರಸೂಚಿ ಮತ್ತು ಅಡಿಟಿಪ್ಪಣಿ
1. ಸೌಥ್ ಇಂಡಿಯನ್ ಇನ್‍ಸ್ಕ್ರಿಪ್ಸನ್ಸ್ : ಸಂಪುಟ 18, ನ್ಯೂಡೆಲ್ಲಿ, 1975.
2. ಸೂರ್ಯನಾಥ ಕಾಮತ್. (ಸಂ) ಧಾರವಾಡ ಜಿಲ್ಲಾ ಗೆಸೆಟಿಯರ್, ಬೆಂಗಳೂರು, 1995.
3. ಎಂ.ಬಿ. ನೇಗಿನಹಾಳ, ನೇಗಿನಹಾಳ ಪ್ರಬಂಧಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ.
4. ಮಹದೇವ. ಸಿ. ಹಾಗೂ ಇತರರು, ಕರ್ನಾಟಕ ದೇವಾಲಯ ಕೋಶ, ಹಾವೇರಿ ಜಿಲ್ಲೆ, ಹಂಪಿ, 1999.
5. ಭೋಜರಾಜ ಬ. ಪಾಟೀಲ, ನಾಗರಖಂಡ-70 ಒಂದು ಅಧ್ಯಯನ, ಆನಂದಪುರಂ, 1995.

  ಸಹಾಯಕ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯ, ಹಾವೇರಿ-581110.

No comments:

Post a Comment