Thursday, November 6, 2014



ಸೂಡಿಯ ನಾಗಕುಂಡ



       ಶಾಸನಗಳಲ್ಲಿ ಸೂಂಡಿಎಂದು ಉಲ್ಲೇಖಿತವಾಗಿ ಕಿಸುಕಾಡು-70ಕ್ಕೆ ಸೇರಿದ ಸೂಡಿ, ಕಲ್ಯಾಣ ಚಾಲುಕ್ಯರ ಜಯಸಿಂಹನ ಸಹೋದರಿ, ರಣಭೈರವಿ ಬಿರುದಿನ ರಾಣಿ ಅಕ್ಕಾದೇವಿಯು ಅನೇಕ ಆಳುತ್ತಿದ್ದ ಪ್ರಾಂತಗಳಲ್ಲಿ ಸೂಡಿಯೂ (ಕ್ರಿ.ಶ 1010) ಒಂದಾಗಿತ್ತು. ಆಕೆಯ ಆಳ್ವಿಕೆಯ ಸಮಯದಲ್ಲಿ ಇದು ದೊಡ್ಡ ಅಗ್ರಹಾರವಾಗಿತ್ತು. ಜೊತೆಗೆ ನಾಣ್ಯಗಳನ್ನು ತಯಾರಿಸುವ ಹೆಸರಾಂತ ಟಂಕಶಾಲೆ ಕೂಡಾ ಇಲ್ಲಿತ್ತು. ಈ ವಿಷಯಗಳನ್ನು ಇಲ್ಲಿರುವ ಶಾಸನಗಳು ವಿವರಿಸುತ್ತವೆ. ಸೂಡಿಯಿಂದ ಸುಮಾರು 9 ಶಾಸನಗಳು ಈಗಾಗಲೆ ಪ್ರಕಟಗೊಂಡಿವೆ. ಒಂದು ಕಾಲದಲ್ಲಿ ವೈಭೋಗದ ತುತ್ತತುದಿಯಲ್ಲಿ ಮೆರೆದ ಇಲ್ಲಿ ಹೆಸರಾಂತ ಪ್ರಕಾಂಡ ಪಂಡಿತರು, ಶಕ್ತಿ ಆರಾಧಕರು, ಕಾಳಾಮುಖರು, ಭೈರವರು, ಲಕುಲೀಶರು, ಪಾಶುಪತರು ಇದ್ದ ಬಗ್ಗೆ ಶಾಸನಗಳು ಪಿಸು ಮಾತಿನಲ್ಲಿ ಪಿಸುಗುಡುತ್ತಿವೆ.

     ಇಂದಿನ ಗದಗ ಜಿಲ್ಲೆಯ ರೋಣ ತಾಲೂಕಿಗೆ ಸೇರಿದ ರೋಣ ಗಜೇಂದ್ರಗಡ ರಸ್ತೆಗೆ ಹೊಂದಿರುವ ಸೂಡಿಯಲ್ಲಿ ಅಳಿದುಳಿದ ಪ್ರಾಚ್ಯ ಅವಶೇóಷಗಳು ಇತಿಹಾಸಕ್ಕೆ ಮೂಕ ಸಾಕ್ಷಿಯಾಗಿ ನಿಂತಿವೆ. ರಸ್ತೆಗೆ ಹೊಂದಿರುವ ದ್ವಿಕೂಟಾಚಲದ ಮಾದರಿಯ ಜೋಡು ಕಳಸದ ಗುಡಿ ನೋಡುಗರ ಗಮನವನ್ನು ಸೆಳೆಯುತ್ತದೆ.  ಕ್ರಿ.ಶ. 1074-75 ಕ್ಕೆ ಸೇರಿದ  ಶಾಸನದಲ್ಲಿ  ಕಲ್ಯಾಣ ಚಾಲುಕ್ಯ ಚಕ್ರವರ್ತಿ II ನೆಯ ಸೋಮೇಶ್ವರನ ಆಳ್ವಿಕೆಯಲ್ಲಿ ಸೂಂಡಿಯ ಪಂಚಲಿಂಗೇಶ್ವರ ದೇವರಿಗೆ ಕಿಸುಕಾಡು-70 ರಲ್ಲಿರುವ ಮುಶಿಗೇರಿ, ಕಲ್ಲಿಗನೂರು ಮತ್ತು ಗುಳಗುಳಿ ಗ್ರಾಮಗಳನ್ನು ಸೂಡಿಯ ಸೋಮೇಶ್ವರ ಪಂಡಿತರಿಗೆ ದಾನ ನೀಡಿದ ವಿಷಯವಿದೆ.

        ಇಲ್ಲಿರುವ ವಿಶಿಷ್ಠವಾದ ಬಾವಿಯೊಂದು ತನ್ನ ಇತಿಹಾಸವನ್ನು ಗರ್ಭದಲ್ಲಿರಿಸಿಕೊಂಡಿದೆ. ನಾಗರ ಬಾವಿ, ಇದನ್ನು ನಾಗಕುಂಡ, ರಸ್ತಾಬಾವಿ, ಪಾಂಡವರ ಬಾವಿ ಎಂದು ಕರೆಯುತ್ತಾರೆ. ಈ ರಸ್ತೆಯ ಪಕ್ಕದಲ್ಲಿರುವ ಕಾರಣ ರಸ್ತಾದ ಬಾವಿ ಎಂದು ಹೆಸರು ಬಂದಿದೆ. ಆದರೆ ಪಾಂಡವರ ಬಾವಿ ಎಂದು ಏಕೆ ಕರೆದರೋ ತಿಳಿಯದು. ಸಾಮಂತನಾದ ನಾಗದೇವನ್ನು ಇದನ್ನು ನಿರ್ಮಿಸಿದ ಕಾರಣ ನಾಗರಬಾವಿ, ನಾಗಕುಂಡ ಎಂದು ಹೆಸರನ್ನು ಪಡೆದುಕೊಂಡಿದೆ. ಈ ಬಗೆಗಿನ ಶಾಸನವು ಇಲ್ಲಿರುವ ಜೋಡು ಕಳಸದ ಗುಡಿಯಲ್ಲಿದೆ. ಇದು ಸುಮಾರು 80 ಅಡಿ ಸುತ್ತಳತೆಯನ್ನು, ಸುಮಾರು 50 ಅಡಿ ಆಳವನ್ನು ಹೊಂದಿದೆ. ಆ ಶಾಸನದ ಪ್ರಕಾರ ಕ್ರಿ.ಶ 1060 ರಲ್ಲಿ ಚಾಲುಕ್ಯರ ಮಹಾಸಾಮಂತಾಧಿಪತಿ, ದಂಡನಾಯಕ ನಾಗದೇವನು ನಾಗಗೊಂಡವೆಂಬ ಅಪರೂಪದ, ವಿಶಿಷ್ಠವಾದ ಪುಷ್ಕರಣಿಯನ್ನು ಕಟ್ಟಿಸುತ್ತಾನೆ. ಇದು ಚಾಲುಕ್ಯರ ವೈಭದ ಕೊಳ. ಇದರ ಒಳಗೋಡೆಯಲ್ಲಿ ಉಬ್ಬು ಕಂಬದ ಗೋಪುರಗಳ ಮಾದರಿಯ ಕೆತ್ತನೆ ಇದೆ. ಇದು ಚೌಕಾಕಾರದಲ್ಲಿದ್ದು ಇದರ ಪಶ್ಚಿಮಕ್ಕೆ ಮೆಟ್ಟಲುಗಳಿದ್ದು. ಅವು ಪೂರ್ವ ದಿಕ್ಕಿಗೆ ಅವುಗಳ ಮೂಲಕ ಕೆಳಗಿಳಿಯುವಂತಿವೆ. ಮೆಟ್ಟಲುಗಳು ಪ್ರಾರಂಭವಾಗುವ ಒಂದು ಚೌಕಟ್ಟು ಇದ್ದು, ಅಲ್ಲಿ ಈಗ ಕೇವಲ ಅರೆಗಂಬಗಳು ಮಾತ್ರ ಉಳಿದಿವೆ. ಇಲ್ಲಿಂದ ಮೆಟ್ಟಲುಗಳ ಎರಡು ಸಾಲುಗಳು ಪ್ರಾರಂಭವಾಗುತ್ತವೆ. ಇದರಲ್ಲಿ ಒಂದು ಸಾಲು ಉತ್ತರಕ್ಕೆ, ಮತ್ತೊಂದು ಪಶ್ಚಿಮಕ್ಕೆ  ಹೋಗುತ್ತವೆ. ಇದೇ ತರಹದ ಮೆಟ್ಟಲುಗಳು ಈ ಬಾವಿಯ ಇನ್ನುಳಿದ ಮೂರೂ ಬದಿಯಲ್ಲಿ ಕಂಡುಬರುತ್ತವೆ. ಮೆಟ್ಟಲುಗಳ ಮೇಲಿರುವ ಬಾವಿಯ ಗೋಡೆ ಲಂಬವಾಗಿದ್ದರೂ ಅದು ದಾರಿಯ ವರೆಗೆ ಮುಂದುವರಿದಿದೆ.ಈ ಹಂತದ ಮೇಲೆ ಅದು ಮುಂದೆ ಉಬ್ಬಿಕೊಂಡಿರುವ ಕಪೋತವಿದೆ. ಇವು ನಾಲ್ಕು ಬದಿಯಲ್ಲಿ ಕಂಡುಬರುತ್ತದ್ದು ಅವು ಅಲಂಕಾರರಹಿತ ಗೂಡುಗಳಿಂದ ಕೂಡಿದೆ. ಈ ಗೋಡೆಗಳ ಜಗಲಿ, ಪದ್ಮ, ತ್ರಿಪಟ್ಟ ಕುಮುದ, ಕಪೋತ, ತೊಲೆಗಳ ಕೊನೆ ಪದ್ಮಗಳಿಂದ ಕೂಡಿದ ಅದಿಷ್ಠಾನವನ್ನೊಳಗೊಂಡಿದೆ. ಚೌಕಾಕಾರದ ಬಾವಿಯ ಮೂರು ಬದಿಯಲ್ಲಿರುವ ಭಿತ್ತಿಯು ಉದ್ದವಾದ ಅರೆಗಂಬಗಳಿಂದ ಕೂಡಿದ್ದು ಅವು ಅನೇಕ ಉಬ್ಬು ಮತ್ತು ಗೂಡುಗಳಿಂದ ಅಲಂಕರಿಸಲ್ಪಟ್ಟಿವೆ.ಇದರ ಮಧ್ಯದ ಭಾಗ ಮೂರು ಸಲ ಮುಂದುವರಿದು ಮಧ್ಯದಲ್ಲಿ ಸರಳ ಗೂಡನ್ನು ಹೊಂದಿದೆ. ಇದರ ಮೂಲೆಗಳಲ್ಲಿ ಚಾಚಿಕೊಂಡಿರುವ ಭಾಗಗಳಿದ್ದು. ಅವು ಕೃತಕ ಗೂಡುಗಳಿಂದ ಅಲಂಕೃತವಾಗಿ, ಪ್ರಸ್ತರವು ಶಾಲ, ಕೂಟ, ಪಂಚರಗಳಿಂದ ಕೂಡಿದೆ. ಬಾವಿಯ ದಾರಿಯ ಇಕ್ಕೆಲಗಳಲ್ಲಿ ಅಲಂಕಾರಿಕ ಗೋಡೆಗಳಿವೆ. ಈ ದಾರಿ ಪೂರ್ವಕ್ಕೆ ಕೊನೆಯಲ್ಲಿ ಪ್ರವೇಶ ಮಂಟಪವಿದ್ದು, ಇದು ನಾಲ್ಕು ಅರೆಗಂಬಗಳ ಮೇಲೆ ನಿಂತಿದೆ. ಈ ಮಂಟಪದ ಗೋಡೆ ಮತ್ತು ಪ್ರಸ್ತರವು ಈ ದಾರಿಯ ಇತರ ಗೋಡೆಗಳಂತಿವೆ. ಉತ್ತರ ಮತ್ತು ದಕ್ಷಿಣ ಗೋಡೆಗಳಲ್ಲಿ ಗೂಡುಗಳಿವೆ. ಬಾವಿಯ ದಾರಿಯು ಮಂಟಪದ ಪೂರ್ವ ಬದಿಯ ವರೆಗೆ ಮುಂದುವರಿದಿದೆ. ಇದು ಈ ಬಾವಿಯ ವಾಸ್ತು ರಚನೆ.

   ಹಿಂದೆ ಈ ಬಾವಿಯ ನೀರನ್ನು ಪಕ್ಕದಲ್ಲಿರುವ ನಾಗೇಶ್ವರ ದೇವಾಲಯದ ಪೂಜೆಗಾಗಿ ಒಯ್ಯುತ್ತಿದ್ದರಂತೆ, ಆದರೆ ಇಂದು ಬಾವಿಯು ನೀರಿಲ್ಲದೇ ಬತ್ತಿ ಶಿಥಿಲಾವಸ್ಥೆಯಿಂದ ಶಿಲ್ಪವು ಸಾಕಷ್ಟು ಜೀರ್ಣಗೊಂಡಿದೆ. ಈಗ ಇದನ್ನು ಪುನರ್ ನವೀಕರಣವನ್ನು ಮಾಡಲಾಗುತ್ತಿದೆ. ಇದರಿಂದ ಇದರ ಹಿಂದಿನ ವೈಭವವು ಮರುಕಳಿಸಿತೆ?


       - ಡಾ.ಮಲ್ಲಿಕಾರ್ಜುನ ಕುಂಬಾರ
 ವಿಳಾಸ; ಡಾ.ಮಲ್ಲಿಕಾರ್ಜುನ ಕುಂಬಾರ.
   ‘’ವಚನ’’
  ರಾಜೂರ-582230
 ತಾ;ರೋಣ, ಜಿ;ಗದಗ
 ದೂರವಾಣಿ; [08381] 262925, (ಸನಿಹವಾಣಿ::- 9739341726)






No comments:

Post a Comment