Sunday, September 14, 2014

ಬೀರೇ ದೇವರ ಆಚರಣೆ

ದಳಿ ಕಟ್ಟುವ ಸೇವೆ
(ಕುರುಬ ಜನಾಂಗದ ಬೀರೇದೇವರ ಒಂದು ಪ್ರಾಚೀನ ಆಚರಣೆ)
ಡಾ. ಲಿಂಗದಹಳ್ಳಿ ಹಾಲಪ್ಪ
ಹಾಲುಮತಸ್ಥರಾದ ಕುರುಬ ಜನಾಂಗವು ಭಾರತದ ಮೂಲ ಜನಾಂಗಗಳಲ್ಲಿ ಒಂದಾಗಿದ್ದು, ಅದು ತನ್ನದೇ ಆದ  ಪ್ರಾಚೀನ ಧಾರ್ಮಿಕ ಪರಂಪರೆಗಳನ್ನು ಹೊಂದಿದೆ. ಧಾರ್ಮಿಕವಾಗಿ ಕುರುಬರು ಶೈವ ಪರಂಪರೆಯವರೂ, ಸಾಮಾಜಿಕವಾಗಿ ವೀರಪರಂಪರೆಯವರೂ ಆಗಿದ್ದಾರೆ. ಇವರ ಕುಲದೈವ ಬೀರಪ್ಪನಾಗಿದ್ದರೂ, ಇವರು ಮೈಲಾರಲಿಂಗ, ಮಾಳಿಂಗರಾಯ, ಹುಲ್ಲಪ್ಪ-ಚಂದಪ್ಪ, ಸೋಮೇಶ್ವರ, ಚಿಂಚಲಿ ಮಾಯವ್ವ ಮೊದಲಾದ ದೈವಗಳನ್ನು ಮನೆದೇವರೆಂದು ತಿಳಿದು ಪೂಜಿಸುತ್ತಾರೆ. ಮಧ್ಯಕರ್ನಾಟಕದ ಕೆಲವು ಸೀಮಿತ ಪ್ರದೇಶಗಳಲ್ಲಿ ಪೂಜೆಗೊಳ್ಳುತ್ತಿರುವ ಸೋಮೇಶ್ವರ ಅಥವಾ ಸೋಮಲಿಂಗ ಅಥವಾ ಸೋಮಬೀರಪ್ಪನ ಆಚರಣೆಗಳಲ್ಲಿ ಭೃಂಗಿ ಸೇವೆಯೂ ಒಂದಾಗಿದೆ.
ಓಲಗ ಅಥವಾ ವಾಲಗ ಎಂಬ ಪದಗಳ ನಿಷ್ಪತ್ತಿ ಕುರಿತು ವಿಭಿನ್ನ ಅಭಿಪ್ರಾಯಗಳಿವೆ. ‘ವಾಲಗ’ ಎಂದರೆ ಬಾಯಿಯಿಂದ ಊದಿ ನಾದ ಹೊರಡಿಸುವ ಒಂದು ವಾದ್ಯವೆಂದೂ, ಅದನ್ನು ಊದುತ್ತ ಸೇವೆ ಸಲ್ಲಿಸುವುದು ವಾಲಗಸೇವೆ ಯೆನ್ನಿಸಿಕೊಳ್ಳುತ್ತದೆಯೆಂಬ ಅಭಿಪ್ರಾಯ ಒಂದು ವರ್ಗದ್ದು. ಆದರೆ ಬೀರಪ್ಪನ ಭಕ್ತ ಪರಿವಾರದಲ್ಲಿ ಈ ವಾದ್ಯ ಮತ್ತು ಅದನ್ನು ನುಡಿಸುವ ಮನೆತನಗಳು ಇದ್ದರೂ, ಓಲಗ ಸೇವೆಯಲ್ಲಿ ಇದು ಕಂಡುಬರುವುದಿಲ್ಲ.
ಓಲಗ ಎಂದರೆ ಆಸ್ಥಾನ, ರಾಜಸಭೆ ನಡೆಯುವ ಸ್ಥಳ ಎಂಬ ಅರ್ಥವೂ ಇದೆ. ಬೀರಪ್ಪನ ಓಲಗಸೇವೆ ಎಂದರೆ ಬೀರಪ್ಪನ ಸನ್ನಿಧಿ(ಆಸ್ಥಾನ)ಯಲ್ಲಿ ಸಲ್ಲುವ ಸೇವೆ ಎಂಬ ಅರ್ಥವು ಹೆಚ್ಚು ಸೂಕ್ತವಾದದ್ದಾಗಿದೆ. ಕುರುಬರ ಧಾರ್ಮಿಕ ಪರಂಪರೆಯಲ್ಲಿ ಬೀರಪ್ಪನು ಅನಭಿಷಕ್ತ ದೈವಸಾಮ್ರಾಟನಾಗಿದ್ದಾನೆ. ಈ ವಿಚಾರವು ಅವನ ಆಚರಣೆಗಳನ್ನು ಗಮನಿಸಿದಾಗ ತಿಳಿದುಬರುತ್ತದೆ. ಅವನ ಆಸ್ಥಾನದಲ್ಲಿ ಪೂಜಾರಿಗಳು, ಸತ್ತಿಗೆ ಭಂಟರು, ದೀವಟಿಗೆ ಸೇವೆಯವರು, ಈರಗಾರರು, ಕೋಲುಕಾರರು, ಒಂದೊತ್ತಿನವರು, ಸಾವಿರದವರು, ವಾಲಗದವರು, ಡೊಳ್ಳುಬಾರಿಸುವ ಭಟರು, ಚಾಮರ ಸೇವೆಯವರು ಮೊದಲಾದ ಭಕ್ತವೃಂದವಿರುತ್ತದೆ. ಅವರಿಗೆಲ್ಲ ಒಡೆಯನಾಗಿ ಬೀರಪ್ಪನ ಜೀವಂತರೂಪವಾದ ದಳವಾಯಿಯೂ ಇರುತ್ತಾನೆ. ಇದೊಂದು ಧಾರ್ಮಿಕ ಮಹಾಸಾಮ್ರಾಜ್ಯವಾಗಿದ್ದು ಅದರ ಚಕ್ರವರ್ತಿ ಬೀರದೇವರಾಗಿರುವುದು ಕುರುಬರ ಧಾರ್ಮಿಕ ಪರಂಪರೆಯ ವಿಶೇಷವೆನ್ನಬಹುದು. ಇಂತಹ ಸಾಮ್ರಾಜ್ಯವನ್ನು ಆಡಳಿತಾತ್ಮಕವಾಗಿ ಮುನ್ನಡೆಸಲು ಆ ಗುಡಿಕಟ್ಟಿಗೆ ಒಬ್ಬ ಹಟ್ಟಿಗೌಡರು, ಬುದ್ಧಿವಂತರು, ಕೋಲುಕಾರರು, ಲೆಕ್ಕಪತ್ರಾಧಿಕಾರಿ, ಆಮಾಸೆ ಮನೆಯವರು ಇತ್ಯಾದಿಯಾದ ಒಂದು ಆಡಳಿತ ಯಂತ್ರವು ಕಾರ್ಯ ನಿರ್ವಹಿಸುತ್ತದೆ.
ಓಲಗಸೇವೆಯು ಬೀರದೇವರ ಒಂದು ಸೇವಾಚರಣೆಯಾಗಿದೆ. ಕರ್ನಾಟಕದ ಹಲವಾರು ಬೀರದೇವರ ದೇವಾಲಯಗಳಲ್ಲಿ ಓಲಗಸೇವೆ ನಡೆಯುವುದು ಕಂಡುಬರುತ್ತದೆ. ಅತ್ಯಂತ ಶೃದ್ಧೆಯಿಂದ ಕೂಡಿದ, ವೈಶಿಷ್ಟ್ಯಪೂರ್ಣವಾದ ಆಚರಣೆಯೆಂಬ ಹೆಗ್ಗಳಿಕೆಗೆ ಪಾತ್ರವಾದ ಓಲಗ ಸೇವೆಯು ದಾವಣಗೆರೆ ಜಿಲ್ಲೆ, ದಾವಣಗೆರೆ ತಾಲೂಕಿನ ಹದಡಿ ಗ್ರಾಮದಲ್ಲಿ ನಡೆಯುತ್ತದೆ.
ಓಲಗದ ಸಿದ್ಧತೆ : ಬೀರದೇವರ ದೇವಸ್ಥಾನದ ಹೊರಾವರಣವನ್ನು ಓಲಗಶಾಲೆಯೆಂದು ಪರಿಗಣಿಸಿ, ಅದನ್ನು ವಿಧಿವಿಧಾನವಾಗಿ ಶೃಂಗರಿಸಲಾಗುತ್ತದೆ. ಆವರಣದ ತಾರಸಿಯ ಎಂಟೂ ದಿಕ್ಕುಗಳಿಗೆ ಹಾಗೂ ಮಧ್ಯದಲ್ಲಿ ಪೂಜಿಸಿದ ತೆಂಗಿನ ಕಾಯಿ(ಒಟ್ಟು ಒಂಬತ್ತು)ಗಳನ್ನು ಕಟ್ಟಿ, ಅಲ್ಲಲ್ಲಿ ತೆಂಗಿನ ಕಾಯಿಗಳ ಮತ್ತು ಬಾಳೆಹಣ್ಣುಗಳ ಗೊನೆಗಳನ್ನು ಆವರಣದ ತಾರಸಿಗೆ ನೇತುಹಾಕುತ್ತಾರೆ. ಎಲ್ಲ ಕಂಬಗಳಿಗೆ ತೆಂಗು, ಬಾಳೆ, ಅಡಿಕೆ ಗರಿಗಳಿಂದ ಮತ್ತು ಅಡಿಕೆ ಹೊಂಬಾಳೆಗಳಿಂದ ಅಲಂಕರಿಸಿರುತ್ತಾರೆ. ನೆಲಕ್ಕೆ ಗುಡಾರಗಳನ್ನು ಹಾಸಿ, ಮೇಲೆ ಮಾಡಿಗೆ ಅರಿಶಿಣದಿಂದ ರಂಗೋಲಿ ಹಾಕಿದ ಮಡಿವಸ್ತ್ರಗಳನ್ನು ಶಾಮಿಯಾನದ ಆಕಾರದಲ್ಲಿ ಕಟ್ಟಿ ಶೃಂಗರಿಸುತ್ತಾರೆ. ಗರ್ಭಗುಡಿಯಲ್ಲಿರುವ ಬೀರದೇವರ ಸ್ಥಾವರ ಮೂರ್ತಿಗೆ ಅಭಿಮುಖವಾಗಿ ಓಲಗದಲ್ಲಿ ಅವನ ಸತ್ತಿಗೆಯನ್ನು ನಿಲ್ಲಿಸಲಾಗುತ್ತದೆ. ಅದರ ಪಕ್ಕದಲ್ಲಿ ನಿರಂತರವಾಗಿ ಬೀರಪ್ಪನ ದೀವಟಿಗೆಯು ಉರಿಯುತ್ತಿರುತ್ತದೆ. ನಿಲ್ಲಿಸಿದ ಸತ್ತಿಗೆಗೆ ಚಾಮರ ಸೇವೆಯವರು ಚಾಮರ ಹಾಕುತ್ತ ಸೇವೆ ಸಲ್ಲಿಸುವುದು ಕಂಡುಬರುತ್ತದೆ. ಓಲಗಶಾಲೆಯಲ್ಲಿ ನಿಲ್ಲಿಸಿದ ಸತ್ತಿಗೆಯು ಸ್ಥಾವರ ಮೂರ್ತಿಯ ಪ್ರತಿನಿಧಿಯಾಗಿದ್ದು, ಭಕ್ತರಿಂದ ದೇವರಿಗೆ ಸಲ್ಲುವ ಭಕ್ತಿ, ಶ್ರದ್ಧೆಗಳು ಅದಕ್ಕೆ ಸಲ್ಲುತ್ತವೆ.
ಮೊದಲು ಬೀರಪ್ಪನ ಸ್ಥಾವರಮೂರ್ತಿಗೆ ವಿಧಿವಿಧಾನವಾಗಿ ಪೂಜೆ ಸಲ್ಲುತ್ತದೆ. ಸ್ಥಾವರ ಮೂರ್ತಿಯ ಎದುರಿಗೆ ಎರಡು ದೊಡ್ಡಗಾತ್ರದ ಡೊಳ್ಳು(ಇವುಗಳಿಗೆ ಚೌಡಿ ಡೊಳ್ಳುಗಳೆಂದು ಹೆಸರು)ಗಳನ್ನಿಟ್ಟು ಪೂಜೆ ಮಾಡಿ, ಅವುಗಳನ್ನು ಇಬ್ಬರು ಸೊಂಟಕ್ಕೆ ಕಟ್ಟಿಕೊಳ್ಳುತ್ತಾರೆ. ಅವರನ್ನು ಗರ್ಭಗುಡಿಯಿಂದ ಹೊರಗೆ ಪೂಜಾರಿಯು ಕರ್ಪೂರದಾರತಿಯೊಂದಿಗೆ ಕರೆತಂದು ಓಲಗ(ಶಾಲೆ)ಕ್ಕೆ ಬಿಟ್ಟು, ಸತ್ತಿಗೆಯನ್ನು ಪೂಜಿಸಿ ಹೋಗುತ್ತಾನೆ. ಇವೆರಡು ಡೊಳ್ಳುಗಳನ್ನು ಬಾರಿಸುವುದರೊಂದಿಗೆ ವಾದ್ಯಸೇವೆ ಆರಂಭಗೊಳ್ಳುತ್ತದೆ. ಇತರ ಚಿಕ್ಕದೊಡ್ಡ ಸುಮಾರು ಹತ್ತು ಡೊಳ್ಳುಗಳು ಇವುಗಳನ್ನು ಸೇರಿಕೊಳ್ಳುತ್ತವೆ. ಡೊಳ್ಳುಸೇವೆಯು ಒಂದು ಆವರ್ತ ನಿರಂತರವಾಗಿ ನಡೆಯುತ್ತಿದ್ದರೆ, ಒಳಗೆ ಬೀರಪ್ಪನ ಸನ್ನಿಧಿಯಲ್ಲಿ ಇಬ್ಬರು ಈರಗಾರರು ಈರಿಕೆಯ ಕಾಸೆಗಳನ್ನು ಧರಿಸಿ, ಪೂಜೆಗೊಂಡು ಪೂಜಾರಿಯೊಂದಿಗೆ ಓಲಗಕ್ಕೆ ಬರುತ್ತಾರೆ. ಓಲಗಶಾಲೆಯಲ್ಲಿ ಸ್ಥಾವರ ಮೂರ್ತಿಗೆ ಅಭಿಮುಖವಾಗಿ ನಿಂತುಕೊಂಡು ಕುಣಿಯುತ್ತಾ ಓಲಗಸೇವೆಯನ್ನು ಆರಂಭಿಸುತ್ತಾರೆ. ಇವರ ಸಂಖ್ಯೆ ಕ್ರಮೇಣ ಹೆಚ್ಚುತ್ತ ಹೋಗಿ ಎಲ್ಲ ಹನ್ನೆರಡು ಈರಗಾರರು ಸನ್ನಿಧಿಗೆ ಬರುತ್ತಾರೆ.
ಸೇವಾ ಕಾರ್ಯ : ಓಲಗಸೇವೆಯು ಮೂರು ಹಂತಗಳಲ್ಲಿ ನಡೆಯುತ್ತದೆ.
ಅ. ಮೊದಲಿಗೆ ಡೊಳ್ಳು ಬಾರಿಸುವಿಕೆ ಒಂದು ಆವರ್ತ ಕಾಲ ನಡೆಯುತ್ತದೆ. ಬೀರೇದೇವರ ಸ್ಥಾವರ ಮೂರ್ತಿಗೆ ಮುಖಾಮುಖಿಯಾಗಿ ಡೊಳ್ಳಿನ ತಂಡ ನಿಲ್ಲುತ್ತದೆ. ಮೊದಲಿಗೆ ಸಾಲಾಗಿ ಒಬ್ಬರ ಹಿಂದೆ ಒಬ್ಬರು ನಿಂತು ಭಾರಿಸುತ್ತಾರೆ. ಈ ಬಾರಿಸುವಿಕೆಯಲ್ಲಿ ಬೀರಪ್ಪನಿಗೆ ‘ನೀನು ಕೇಳಲು ಹೆಚ್ಚೋ, ನಾನು ಭಾರಿಸಲು ಹೆಚ್ಚೋ?’ ಎಂಬ ಆವೇಶಭರಿತವಾದ ಡೋಳ್ಳಿನ ರಣವಾದ್ಯದ ಸವಾಲು ಕೇಳಿಸುತ್ತದೆ. ನಂತರ ಡೊಳ್ಳುಗಳು ವೃತ್ತಾಕಾರವಾಗಿ ನಿಂತುಕೊಂಡು ಕೇಂದ್ರದಲ್ಲಿ ತಾಳವಾದ್ಯದವನು ನಿಲ್ಲುತ್ತಾನೆ. ನಾದ ಹಿಡಿದ ನಂತರ, ಕೋಟೆ ಗೋಡೆಗಳು, ಕಲ್ಲುಬಂಡೆಗಳು ಚೂರು ಚೂರಾಗುವಂತೆ ಚರ್ಮದ ಡೊಳ್ಳುಗಳ ನಾದ ವಾತಾವರಣವನ್ನು ತುಂಬಿ, ಬೀರಪ್ಪನನ್ನು ನಿದ್ರಾವಸ್ಥೆಯಿಂದಲೆ ಎಬ್ಬಿಸುವುದು ಕಂಡುಬರುತ್ತದೆ. ಪ್ರತಿಯೊಂದು ಹಂತದ ಸೇವೆ ನಡೆಯುವಾಗ, ಪೂಜಾರಿಯು ಮಂಡಲಕ್ಕೊಮ್ಮೆ ಬೀರಪ್ಪನಿಗೆ ಮಂಗಳಾರತಿಯನ್ನು ಮಾಡಿ, ಹೊರಗೆ ಬಂದು ಈರಗಾರ, ಡೊಳ್ಳು, ಸತ್ತಿಗೆ ಮತ್ತು ಉರಿಯುವ ದೀವಟಿಗೆಗೆ ಆರತಿ ಎತ್ತುವುದು ಕಂಡುಬರುತ್ತದೆ. ಹೀಗೆ ಬೀರದೇವರು ಇಡೀರಾತ್ರಿ ನೂರೊಂದು ಸಲ ಪೂಜೆಗೊಳ್ಳುವುದು ಮತ್ತು ಒಂದು ಬಾರಿಗೆ ಒಂದು ಕದಳಿ(ಬಾಳೆ)ಮರ ಕಡಿದು ದೇಗುಲದ ಕಂಬಗಳಿಗೆ ಕಟ್ಟುವುದು ಕಂಡುಬರುವ ಆಚರಣೆಯಾಗಿದೆ. ಜೊತೆಗೆ ಚಾಮರಸೇವೆ ನಿರಂತರವಾಗಿ ನಡೆದಿರುತ್ತದೆ.
ಬ. ಎರಡನೆಯ ಘಟ್ಟದಲ್ಲಿ ಡೊಳ್ಳಿನ ನಾದಕ್ಕೆ ವೀರಗಾರರು ಬಂದು ಸೇರಿ ಕುಣಿತವನ್ನು ಆರಂಭಿಸುತ್ತಾರೆ. ದೇವರಿಗೆ ಎದುರಾಗಿ ಸಾಲಾಗಿ ನಿಂತ ವೀರಗಾರರು ಡೊಳ್ಳಿನ ನಾದಕ್ಕೆ ಎಡಗಾಲನ್ನು ಎತ್ತಿ ಎರಡೂ ಕೈಯಿಂದ ಈರಗಾರನ ಕಾಸೆಯನ್ನು ಚಿಮ್ಮಿ ಗತ್ತು ತೋರಿಸುತ್ತಾರೆ. ನಂತರ ಬಲಗಾಲೆತ್ತಿ ಅದೇ ರೀತಿ ಕಾಸೆಯನ್ನು ಕೊಡವಿ, ಬೀಸುತ್ತ ಗತ್ತು ಹಿಡಿಯುವುದು ಅದ್ಭುತ ಕಾವ್ಯದ ದೃಶ್ಯದಂತೆ ಕಾಣುತ್ತದೆ. ಇದೇ ರೀತಿ ಕಾಲೆತ್ತಿ ಕುಣಿಯುವ ಪ್ರಕಾರವು ಒಂದು ಅವರ್ತ ನಡೆಯುವುದು ಕಂಡುಬರುತ್ತದೆ. ಎರಡನೆಯ ಪ್ರಕಾರದಲ್ಲಿ ಡೊಳ್ಳುಗಳ ವೀರನಾದಕ್ಕೆ ತಕ್ಕಂತೆ ವೀರಗಾರರು ಎರಡೂ ಕೈಗಳಲ್ಲಿರುವ ಕಾಸೆಯನ್ನು ಕೊಡುವುತ್ತ, ಬೀಸುತ್ತ ಎರಡೂ ಕಾಲುಗಳನ್ನು ಎತ್ತಿ ಎತ್ತಿ ಹಾಕುತ್ತ ತಮ್ಮ ಸುತ್ತ ತಾವೇ ವರ್ತುಳಾಕಾರವಾಗಿ ತಿರುಗುತ್ತಾರೆ. ಅಂದರೆ ಚಾಮರಸೇವೆಯಂತೆಯೆ ಕಾಸೆಗಳನ್ನು ಬೀಸಿ ಬೀರಪ್ಪನ ಸೇವೆ ಮಾಡುವ ಪ್ರಕ್ರಿಯೆ ಇಲ್ಲಿ ಗಮನಾರ್ಹವಾದುದು. ವೀರಗಾರರು ಮತ್ತು ಡೊಳ್ಳಿನ ಭಂಟರ ಮಧ್ಯೆ ‘ಯಾರು ಮೊದಲು ನಿಲ್ಲಿಸುತ್ತಾರೆ ನೋಡೋಣ’ ಎಂಬ ಛಲ ಕಂಡುಬಂದು, ಈ ಕುಣಿತ, ಡೊಳ್ಳಿನ ಏಟು ಗಂಟೆಗಟ್ಟಲೇ ನಡೆದು ಕೊನೆಗೆ ಹಿರಿಯರು ಮಧ್ಯೆ ಪ್ರವೇಶಿಸುವ ಸನ್ನಿವೇಶಗಳು ಜರುಗುತ್ತವೆ. ಈರಗಾರರ ಈರಿಕೆಯ ಅಲಗನ್ನು ಒಬ್ಬ ಈರಗಾರನು ಸಾಂಕೇತಿಕವಾಗಿ ಹಿಡಿದುಕೊಂಡು ಅಲ್ಲಿ ನಿಂತಿರುವುದು ಕಂಡುಬರುತ್ತದೆ.
ಕ. ಮೂರನೆಯ ಘಟ್ಟದಲ್ಲಿ ಈ ಎರಡೂ ತಂಡಕ್ಕೆ ವಿಶ್ರಾಂತಿ ಎಂದೇ ಹೇಳಬೇಕು. ಈಗ ಹಿರಿಯ ಹಾಡುಗಾರರು ಬೀರಪ್ಪನ ಸ್ಥಾವರಮೂರ್ತಿಗೆ ಎದುರಾಗಿ ನಿಂತು, ಡೊಳ್ಳಿನ ಹಾಡುಗಳನ್ನು ಮತ್ತು ಬೀರಪ್ಪನ ಪವಾಡದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತಾರೆ. ಇವರ ಹಾಡುಗಳಲ್ಲಿ ಬೀರದೇವರ ಸ್ತುತಿಯು ಸ್ಥಾಯಿಭಾವ ದೊಂದಿಗೆ ಲೀನವಾಗಿರುವುದು ಕಂಡುಬರುತ್ತದೆ. ‘ಬಂಗಾರದ ಪದಕಾವು ಬೆಳ್ಳಿಯ ಪಲಕಾವು ತಂದೆವೋ ಕರಿಯಣ್ಣಗ. . .’ ಎನ್ನುವಂತಹ ಸ್ತುತಿಯೊಂದಿಗೆ, ‘ಮಂದಮತಿ ಕುರುಬರು ನಾವು ನಂದೇಶ್ವರರು £ೀವು, ನಮ್ಮ ಮೇಲೆ ಕೋಪ ಮಾಡುವ ಮನುಜಗೆ ಸದ್ಬುದ್ಧಿ ಕೊಡೊ ತಂದೆ. . . ‘ಎಂಬ ಹಲವಾರು ಬೇಡಿಕೆ, ಹಾರೈಕೆಗಳು ಈ ಹಾಡುಗಳಲ್ಲಿ ಕಂಡುಬರುತ್ತವೆ.
ಈ ರೀತಿ ಬೀರಪ್ಪನ ಸನ್ನಿಧಿಯಲ್ಲಿ ಓಲಗ ಸೇವೆ ನಡೆಯುತ್ತಿದ್ದರೆ, ಊರಿನ ಭಕ್ತಾಧಿಗಳು ರಾತ್ರಿಯಿಡಿ ತಮ್ಮತಮ್ಮ ಮನೆಗಳಿಂದ ಹಬ್ಬದ ಅಡಿಗೆ, ಹಣ್ಣುಕಾಯಿ, ಕರ್ಪೂರಾದಿಗಳನ್ನು ತಂದು ದೇವರಿಗೆ ನೈವೇದ್ಯ ಮಾಡಿಸಿಕೊಂಡು ಹೋಗುತ್ತಾರೆ. ಮದುವೆ ಮನೆಯವರು ಅತ್ತಿಗೆಮ್ಮ(ಅತ್ತಿಮರದ ರೆಂಬೆ) ಮತ್ತು ಆಲದಮ್ಮ(ಆಲದ ಮರದ ಕೊಂಬೆ) ದೇವರನ್ನು ಬೀರಪ್ಪನ ಸನ್ನಿಧಿಯಲ್ಲಿ ಪೂಜಿಸಿಕೊಂಡು ಆರತಿಯೊಂದಿಗೆ ತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗುತ್ತಾರೆ. ಹೀಗೆ ಒಯ್ದರೆ ಅವರ ಮನೆಯಲ್ಲಿ ಶುಭಕಾರ್ಯ ಮತ್ತು ಶುಭಯೋಗಗಳು ಸಂಭವಿಸುವವೆಂಬ ನಂಬಿಕೆ ಇಲ್ಲಿಯ ಭಕ್ತರಲ್ಲಿದೆ. ಬೀರಪ್ಪನಿಗೆ ಪೂಜೆ ಮಾಡಿಸಲು ಮತ್ತು ಪ್ರಸಾದÀ ತೆಗೆದುಕೊಳ್ಳಲು ಗ್ರಾಮದ ಎಲ್ಲ ಜಾತಿಜನಾಂಗಗಳು ಜಾತಿ ಮತಭೇದವಿಲ್ಲದೆ ಭಾಗವಹಿಸುವುದು ಕಂಡುಬರುತ್ತದೆ. ಭಕ್ತಾದಿಗಳು ವೀರಗಾರರಿಗೆ, ಡೊಳ್ಳುವಾದ್ಯದವರಿಗೆ, ಹಾಡುಗಾರರಿಗೆ ತಮ್ಮ ಖುಷಿಯ ಸಂಕೇತವಾಗಿ 50 ರೂಪಾಯಿ, ನೂರು ರೂಪಾಯಿಗಳ ನೋಟುಗಳನ್ನು ಹಾರಮಾಡಿ ಹಾಕುವುದೂ ಉಂಟು.
ಸುಮಾರು ನಡುರಾತ್ರಿ ಕಳೆದು, ಮೂರುಗಂಟೆಯ ಸಮಯಕ್ಕೆ ದೇವಸ್ಥಾನದ ಮುಖ್ಯ ಈರಗಾರರನು (ಇವನು ದೈವ ಆಹ್ವಾಹನೆ ಮಾಡಿಕೊಳ್ಳುವ ದೈವೀ ಪುರುಷನೆಂಬ ನಂಬಿಕೆ ಭಕ್ತರದ್ದು) ದೇವಾಲಯದಲ್ಲಿ ಕಾಸೆವೇಷ ಧರಿಸಿ, ದೇವರ ಸನ್ನಿಧಿಯಲ್ಲಿ ಪೂಜೆಗೊಂಡು ರಂಗಪ್ರವೇಶ ಮಾಡುತ್ತಾನೆ. ಈಗ ಒಟ್ಟು ಹನ್ನೆರಡು ಜನ ವೀರಗಾರರು ಈ ಸೇವೆಯಲ್ಲಿ ಭಾಗವಹಿಸುತ್ತಾರೆ. ಓಲಗಸೇವೆಗೆ ಈಗ ಪೂರ್ಣಾತಿ ರಂಗು ಬಂದು ಓಲಗಸೇವೆ ಕಳೆಕಟ್ಟುವುದು ವಿಶೇಷ. ಬೆಳಗಿನ ಎಂಟು ಅಥವಾ ಒಂಬತ್ತು ಗಂಟೆಗಳವರೆಗೆ ನಡೆಯುವ ಈ ಸೇವೆಯು ಅಂತಿಮ ಹಂತಕ್ಕೆ ಬಂದಾಗ, ಬೀರಪ್ಪನ ಸತ್ತಿಗೆಯೊಂದಿಗೆ ಎಲ್ಲ ಈರಗಾರರು, ವಾದ್ಯದವರು ಮತ್ತು ಹಾಡುಗಾರರು ಮೆರವಣಿಗೆಯಲ್ಲಿ ಊರಿನ ಎಲ್ಲ ದೇವಾಲಯಗಳಿಗೆ ತೆರಳುತ್ತಾರೆ. ಪ್ರತಿ ದೇವಾಲಯದ ಮುಂದೆ ಹಾಕಿದ ಉತ್ಸವದ ಚಪ್ಪರದಲ್ಲಿ, ದೇವರಿಗೆ ಎದುರಾಗಿ ನಿಂತು ಓಲಗಸೇವೆ ಸಲ್ಲಿಸುತ್ತಾರೆ. ನಂತರ ಮರಳಿ ಬೀರಪ್ಪನ ದೇವಸ್ಥಾನಕ್ಕೆ ಬಂದ ಓಲಗಸೇವೆಯು ಮುಖ್ಯ ಪೂಜಾರಿ, ಹಟ್ಟಿಗೌಡ, ಹಿರಿಯರ ಒಪ್ಪಿಗೆಯೊಂದಿಗೆ ಮುಕ್ತಾಯಗೊಳ್ಳುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಸೇವೆಯು ಜಾತಿ ಮತಭೇದವಿಲ್ಲದೇ ಊರಿನ ಎಲ್ಲ ದೇವರುಗಳ ಮುಂದೆ ಸಾಂಕೇತಿಕವಾಗಿ ನಡೆಯುತ್ತದೆ. ಅಂದರೆ ಹಾಲುಮತಸ್ಥ ಕುರುಬರು ಸರ್ವಜಾತಿ, ಮತಗಳೊಂದಿಗೆ ಧಾರ್ಮಿಕ ಸಹಬಾಳನ್ನು ಹೊಂದಿದವರು-ಧಾರ್ಮಿಕ ಸಹನಾಶೀಲರು ಎಂಬುದು ಇದರಿಂದ ವ್ಯಕ್ತವಾಗುತ್ತದೆ.
ವೀರಗಾರನ ವೇಷಭೂಷಣಗಳು
ಹದಡಿ ಗ್ರಾಮದ ಬೀರಪ್ಪನ ಸೇವಾಕಾರನಾದ ವೀರಗಾರನು ಕರ್ನಾಟಕದ ಉಳಿದ ಪ್ರದೇಶಗಳ ವೀರಗಾರರಿಗಿಂತ ಭಿನ್ನವ್ಯಕ್ತಿತ್ವವನ್ನು ಹೊಂದಿರುವುದು ಕಂಡುಬರುತ್ತದೆ. ಇವನ ವೇಷವು ಸರಳವಾಗಿದ್ದು, ಅದು ಕೆಳಗೆ ಸೂಚಿಸಿದ ವಸ್ತ್ರ ಸಂಹಿತೆಯನ್ನು ಒಳಗೊಂಡಿದೆ. ಈ ಗುಡಿಕಟ್ಟಿನ ಆಚರಣೆಯಲ್ಲಿ ದಳವಾಯಿ ಪಟ್ಟವು ಕಂಡುಬರುವುದಿಲ್ಲ. ಅವನ ಎಲ್ಲ ಧಾರ್ಮಿಕ ಕಾರ್ಯಗಳನ್ನು ದೇವಾಲಯದ ಮುಖ್ಯ ಈರಗಾರ(ದೈವೀ ವ್ಯಕ್ತಿ)ಯು ನಿರ್ವಹಿಸಿ ಕೊಡುವುದು ವಿಶೇಷವಾಗಿದೆ.
1. ಈರಗಾರನು ಬಿಳಿ ಬಣ್ಣದ ಜರಿಪಂಚೆಯನ್ನು ಲುಂಗಿಯಾಕಾರವಾಗಿ ಉಟ್ಟಿರುತ್ತಾನೆ. ಮೇಲೆ ಬಿಳಿ ಶರ್ಟನ್ನು ತೊಟ್ಟಿರುವುದು ಕಂಡುಬರುತ್ತದೆ.
2. ತಲೆಗೆ ಬಿಳಿ ರುಮಾಲು ಸುತ್ತಿ, ಬಗಲು ಕುತ್ತಿಗೆಗಳು ಸೇರಿದಂತೆ ಎರಡು ಕೇಸರಿ ಅಥವಾ ಹಸಿರು ಬಣ್ಣದ ಈರಗಾರನ ಕಾಸೆ ವಸ್ತ್ರಗಳನ್ನು ಕಟ್ಟಿಕೊಂಡಿರುತ್ತಾನೆ.
3. ತೋಳಿಗೆ, ಮುಂಗೈಗೆ ಎರಡು ಕೆಂಪುವಸ್ತ್ರಗಳನ್ನು ಕಟ್ಟಿಕೊಂಡು ಕೈಯಲ್ಲಿ ದಳವಾಯಿ(ಬೀರಪ್ಪನ) ಕಾಸೆಗಳನ್ನು ಹಿಡಿದಿರುತ್ತಾನೆ. ಇವನ ಕೈಯಲ್ಲಿ ಈರಗಾರನ ಅಲಗು ಸಹ ಇರುತ್ತದೆ.
4. ಕೊರಳಲ್ಲಿ ಹೂಮಾಲೆ, ಹಣೆಯಲ್ಲಿ ಭಂಡಾರ ಮತ್ತು ವಿಭೂತಿಯನ್ನು ಧರಿಸಿರುವುದು ಕಂಡುಬರುತ್ತದೆ. ಈರಗಾರರು ಓಲಗಕ್ಕೆ ಬರುವ ಮುನ್ನ ಬೀರಪ್ಪನ ಗರ್ಭಗುಡಿಯಲ್ಲಿ ಪೂಜೆಮುಗಿಸಿ, ಪೂಜಾರಿಯೊಂದಿಗೆ ಕರ್ಪೂರದಾರತಿ ಹಿಡಿದು ಬಂದು ಸೇವೆಗೆ ಸೇರುತ್ತಾರೆ.
ಈರಗಾರನ ಈ ವೇಷವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಪ್ರಾಚೀನ ಕಾಲದ ಈರಗಾರರಿಗಿಂತ ವೇಷ, ಆವೇಶಗಳಿಂದ ದೂರ ನಿಲ್ಲುವುದು ಕಂಡುಬರುತ್ತದೆ. ಈ ಪರಿಷ್ಕರಣೆಯು ರೇವಣಸಿದ್ದೇಶ್ವರರ ಶಿಷ್ಯರೊಬ್ಬರಿಂದ ನಡೆದಿರಬಹುದಾದ ಸಾಧ್ಯತೆಗಳಿದ್ದು, ಇದು ಶರಣರ ಸಂಪ್ರದಾಯಿಕ ವೇಷಕ್ಕೆ ಹತ್ತಿರವಾಗಿರುವುದು ಕಂಡುಬರುತ್ತದೆ. ಈರಗಾರರ ಬದುಕು ಧಾರ್ಮಿಕವಾಗಿ ನೈಷ್ಠಿಕತೆಯಿಂದ ಕೂಡಿದ ಬದುಕಾಗಿರುತ್ತದೆ. ಈರಗಾರಿಕೆಯ ವೇಷ ಧರಿಸುವ ಮೊದಲು ಅವನು ಮೂರು ದಿನ ಉಪವಾಸವಿದ್ದು ಅಲ್ಪಾಹಾರವನ್ನು ಸೇವಿಸುವುದು ತಿಳಿದುಬರುತ್ತದೆ. ಇವನು ಎಷ್ಟು ಸಾತ್ವಿಕ, ಧರ್ಮನಿಷ್ಠನೆಂದರೆ ಉರಿಯುವ ಅರಳೆ ಬತ್ತಿಯ ಜ್ವಾಲೆಯನ್ನು ನುಂಗುವ, ಬೇವಿನ ಸೊಪ್ಪನ್ನು ಸಹ ಸೇವಿಸುವ ಕಠೋರ ಉಪಾಸನಾ ಕ್ರಮವನ್ನು ಹೊಂದಿರುವುದನ್ನು ಭಕ್ತರು ಹೇಳುತ್ತಾರೆ.
ಬೀರದೇವರ ಜಲಪವಾಡ
ಮರುದಿನ, ಅಂದರೆ ಮಂಗಳವಾರ ಮಧ್ಯಾಹ್ನ ಸುಮಾರು ಮೂರು ಗಂಟೆಯ ಸಮಯಕ್ಕೆ ಬೀರದೇವರ ಸ್ಥಾವರಮೂರ್ತಿಗೆ ಶೃಂಗಾರ ಮಾಡಿ, ಬೀರಪ್ಪನ ದೊಡ್ಡ ಪಲ್ಲಕ್ಕಿಯಲ್ಲಿ ಕೂಡ್ರಿಸುತ್ತಾರೆ. ಪಲ್ಲಕ್ಕಿಯನ್ನು ವಿವಿಧ ಹೂವು, ಬಣ್ಣದ ಗೊಂಡೆ ಮತ್ತು ಅಡಿಕೆ ಹೂವುಗಳಿಂದ ಶೃಂಗರಿಸ ಲಾಗುತ್ತದೆ. ಬೀರದೇವರ ಉತ್ಸವ ಮೂರ್ತಿಯ ಪೀಠದಲ್ಲಿ ಒಟ್ಟು ಐದು ಬೀರದೇವರುಗಳು ಆಸೀನರಾಗಿರುವುದನ್ನು ನೋಡಬಹುದು. ದೇವರಿಗೆ ಹೂ ಮತ್ತು ರುದ್ರಾಕ್ಷಿ ಸರಗಳಿಂದ ಶೃಂಗರಿಸಿರುತ್ತಾರೆ. ಪೂಜೆಯ ನಂತರ ಪಲ್ಲಕ್ಕಿ ಏರಿದ ಬೀರದೇವರುಗಳ ಸವಾರಿಯು ತನ್ನ ಸತ್ತಿಗೆಯೊಂದಿಗೆ, ದೀವಟಿಗೆ ಸೇವೆ, ಚಾಮರಸೇವೆ ಮತ್ತು ಡೊಳ್ಳುಸೇವೆಯನ್ನು ಸ್ವೀಕರಿಸುತ್ತ ಮೆರವಣಿಗೆಯಲ್ಲಿ ಬಂದು, ಗ್ರಾಮದ ಇತರ ನಾಲ್ಕು ದೈವಗಳನ್ನು ಹೊರಡಿಸುತ್ತದೆ. ತಮ್ಮವೇ ಆದ ವಿಶಿಷ್ಟ ರಚನೆಯ ಪಲ್ಲಕ್ಕಿಗಳಲ್ಲಿ ಊರಿನ ಇತರ ದೈವಗಳಾದ ಶ್ರೀ ಆಂಜನೆಯಸ್ವಾಮಿ, ಮಸಿಯಮ್ಮ, ದಂಡಿನ ದುರುಗಮ್ಮ ಮತ್ತು ಹೊರಟ್ಟಿ ಅಮ್ಮ (ಹರಿಜನರ ಕೇರಿಯ ಶಕ್ತಿದೇವತೆ>ಮಾತೃದೇವತೆ)ನವರು ಮೆರವಣಿಗೆಯಲ್ಲಿ ಬೀರದೇವರನ್ನು ಅನುಸರಿಸುತ್ತಾರೆ. ತನ್ನ ಎಲ್ಲ ವೈಭವ, ವಾದ್ಯಸೇವೆ, ಭಕ್ತವೃಂದದೊಂದಿಗೆ ಬೀರಪ್ಪನು ಊರ ಹೊರಗಿನ ಬಾವಿ(ಇದಕ್ಕೆ ದೇವರ ಬಾವಿ ಎನ್ನೋಣ)ಯ ಹತ್ತಿರ ಬಂದು ಸಾಲಾಗಿ ತಮ್ಮ ತಮ್ಮ ಪೀಠದಲ್ಲಿ ಆಸೀನರಾಗುತ್ತಾರೆ.
 ನಂತರ ಬೀರೇದೇವರ ಸತ್ತಿಗೆಯನ್ನು ಹೊರಡಿಸಿಕೊಂಡು, ಡೊಳ್ಳುವಾದ್ಯ ಮತ್ತು ಆರತಿಯೊಂದಿಗೆ ಐನೋರ (ಜಂಗಮ) ಮಠಕ್ಕೆ ಹೋಗಿ ವಿಧಿವಿಧಾನವಾಗಿ ಅವರನ್ನು ಸ್ವಾಗತಿಸಿ ಕೆರೆಯ ಹತ್ತಿರ ಕರೆದುಕೊಂಡು ಬರುತ್ತಾರೆ. ಜಂಗಮರು ಕೆರೆಯ ದಂಡೆಯ ಮೇಲಿರುವ ದೇವರ ಬಾವಿಯನ್ನು ಶಾಸ್ತ್ರೋಕ್ತವಾಗಿ ಪೂಜೆ ಮಾಡುತ್ತಾರೆ. ಬೀರದೇವರ ದೊಡ್ಡ ಪಲ್ಲಕ್ಕಿಯನ್ನು ಹೊತ್ತ ಭಕ್ತರು, ಡೊಳ್ಳು, ಆರತಿಗಳೊಂದಿಗೆ ಮುಖ್ಯ ಈರಗಾರ(ಇವರನ್ನು ದೈವೀಪುರುಷ ಎನ್ನೋಣ) ಮನೆಗೆ ಬರುತ್ತಾರೆ. ಇಡೀ ದಿನ ವ್ರತಾಧಾರಿಯಾಗಿದ್ದ ದೈವೀಪುರುಷನು ಪೂಜೆ ಮಾಡಿ, ಬೀರಪ್ಪನ ದೈವದಂಡವನ್ನು ಕೈಯಲ್ಲಿ ಧರಿಸಿದೊಡನೆ ಸ್ಥಾವರಮೂರ್ತಿಯಲ್ಲಿನ ದೈವದ ಆವಾಹನೆಯು ಅವನ ದೇಹದಲ್ಲಿ ಆಗುತ್ತದೆ. ಅವನು ಬೀರಪ್ಪನ ಆತ್ಮ ಮೈದುಂಬಿದ ದೈವೀಪುರುಷನಾಗುತ್ತಾನೆ. ಅವನನ್ನು ಕರೆದುಕೊಂಡು ಬೀರದೇವರು ದೇವರ ಬಾವಿಯತ್ತ ಬರುತ್ತದೆ. ಬಾವಿಯ ಹತ್ತಿರ ಬಂದ ದೈವೀಪುರುಷನು ಬಾವಿಯನ್ನು ಪೂಜಿಸಿ ವಂದಿಸುತ್ತಾನೆ. ಈಜು ಗೊತ್ತಿರದ ದೈವೀಪುರುಷನು ದೇವರ ದಂಡದೊಂದಿಗೆ ಬಾವಿಗೆ ಜಿಗಿಯುತ್ತಾನೆ. ನೀರಿನಲ್ಲಿ ಬಿದ್ದೊಡನೆ ಎರಡೂ ಪಾದಗಳನ್ನು ಜೋಡಿಸಿ, ಎರಡೂ ಕೈಗಳಿಂದ ದೇವರ ದಂಡದ ಎರಡು ತುದಿಗಳನ್ನು ಹಿಡಿದು, £ೀರಿನ ಪಾತಳಿಯ ಮೇಲೆ ಎದೆ ಮೇಲೆ ಮಾಡಿ ಮಲಗುತ್ತಾನೆ. ಬಾಳೆ ಎಲೆಯನ್ನು ನೀರಿನ ಪಾತಳಿಯ ಮೇಲೆ ಹಾಸಿದಂತೆ ಅವನ ದೇಹ ನೀರಿನ ಮೇಲೆ ತೇಲುವುದು ಕಂಡುಬರುತ್ತದೆ. ಸೇರಿದ ಭಕ್ತಸಮೂಹವೆಲ್ಲ ಭಕ್ತಿಭಾವದಿಂದ ಬೀರಪ್ಪದೇವರಿಗೆ ಜೈಕಾರ ಹಾಕುತ್ತಾರೆ.
ಇದೇ ಸ್ಥಿತಿಯಲ್ಲಿ ಹತ್ತು ನಿಮಿಷ, ಅರ್ಧಗಂಟೆ, ಒಂದು ತಾಸು ಮತ್ತು ಇಡೀ ದಿನ ನೀರಿನ ಮೇಲೆ ತೇಲಿದ ದಾಖಲೆಗಳನ್ನು ಸಮಾಜದ ಹಿರಿಯರು ಪವಾಡವೆಂದು ವಿವರಿಸುತ್ತಾರೆ. ನಂತರ ಈಜು ಗೊತ್ತಿರುವ ಒಬ್ಬ ಪೂಜಾರಿಯು ನೀರಿಗೆ ಹಾರಿ ದೈವೀಪುರುಷನ ಎರಡೂ ಪಾದಗಳನ್ನು ನೂಕುತ್ತ, ಇಡೀ ದೇಹವನ್ನು ದಂಡೆಗೆ ನೂಕಿಕೊಂಡು ಬರುತ್ತಾನೆ. ಉಳಿದವರು ಸ್ವಾಮಿಯನ್ನು ಎತ್ತಿ ಸಮಾಧಿ ಸ್ಥಿತಿಯಲ್ಲಿ ಕೂಡ್ರಿಸುತ್ತಾರೆ.
ಬೀರದೇವರು ಮುಳ್ಳುಗದ್ದುಗೆ ಏರುವುದು
ಬೀರದೇವರ ಜಲಪವಾಡದ ನಂತರ ಸಮಾಧಿ ಸ್ಥಿತಿಯಲ್ಲಿದ್ದ ದೈವೀಪುರುಷನು ಸಿದ್ಧಪಡಿಸಿದ ಮುಳ್ಳುಗದ್ದುಗೆಯ ಹತ್ತಿರ ಬರುತ್ತಾನೆ. ವೈಶಿಷ್ಠ್ಯವೆಂದರೆ ಇಲ್ಲಿರುವ ಮುಳ್ಳುಗದ್ದುಗೆಯ ಪಲ್ಲಕ್ಕಿಯು ಉಳಿದ ಪ್ರದೇಶಗಳ ಮುಳ್ಳುಪಲ್ಲಕ್ಕಿಯನ್ನು ಹೋಲುವುದಿಲ್ಲ. ಇದೊಂದು ವಿಶಿಷ್ಟ ರಚನೆಯ ಪಲ್ಲಕ್ಕಿಯಾಗಿದೆ. ಇದು ಸಿಂಹಾಸನಾಕಾರದ ಪೀಠವಾಗಿದ್ದು, ನಾಲ್ಕು ಜನರು ಹೊರಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಪೀಠಸ್ಥವಾಗುವ ಭಾಗದಲ್ಲಿ ಜಾಲಿಮುಳ್ಳುಗಳು ಇರುವ ಟೊಂಗೆಗಳನ್ನು ನೀಟಾಗಿ ಕತ್ತರಿಸಿ ಜೋಡಿಸಿ, ಮುಳ್ಳು ಸಿಂಹಾಸನವನ್ನು ಮಾಡಿರುತ್ತಾರೆ. ಮುಳ್ಳಿನ ದಪ್ಪ ಎರಡು ಅಡಿಯಷ್ಟು ಎತ್ತರವಿರುತ್ತದೆ. ಚೂಪಾದ ಮುಳ್ಳುಗಳು ಮೇಲ್ಬಾಗದಲ್ಲಿ ಬಾಯ್ದೆರೆದು ನಿಂತಿರುವುದನ್ನು ಯಾರಾದರೂ ಗಮನಿಸಬಹುದು. ಹಿಂದೆ ಒರಗಿಕೊಳ್ಳಲು ಮೆತ್ತನೆಯ ದಿಂಬುಗಳನ್ನು ಇಡಲಾಗುತ್ತದೆ. ಪೀಠವನ್ನು ಪೂಜಿಸಿದ ನಂತರ, ಎರಡರಿಂದ ಮೂರು ಅಡಿ ಎತ್ತರವಿರುವ ಚೂಪಾದ ಮುಳ್ಳಿನ ಆಸನವನ್ನು ದೈವೀಪುರುಷನು ಲೀಲಾಜಾಲವಾಗಿ ಏರಿ ಕುಳಿತುಕೊಳ್ಳುತ್ತಾನೆ. ಜೈಕಾರದೊಂದಿಗೆ ಭಕ್ತರು ಹೂವಿನ ಮಳೆಗರೆಯುತ್ತಾರೆ. ವಾದ್ಯಗಳು ಮೊಳಗು ತ್ತವೆ. ನಾಲ್ಕು ಜನರು0 ಹೊತ್ತಿರುವ ಮುಳ್ಳು ಪಲ್ಲಕ್ಕಿಯು ಮೆರವಣಿಗೆಯಲ್ಲಿ ಹೊರಡುತ್ತದೆ. ಮುಂದೆ ಜಂಗಮರು, ನಂತರ ಮುಳ್ಳುಗದ್ದುಗೆ, ಬೀರಪ್ಪನ ದೊಡ್ಡ ಪಲ್ಲಕ್ಕಿಯಲ್ಲಿ ಸ್ಥಾವರಮೂರ್ತಿ, ಗ್ರಾಮದ ಉಳಿದ ದೈವಗಳು ಹೀಗೆ ಮೆರವಣಿಗೆಯಲ್ಲಿ ಹೋಗುತ್ತಿದ್ದರೆ ಭಕ್ತರು ನಡೆಮಡಿ ಹಾಸಿ ಸ್ವಾಗತಿಸುತ್ತಾರೆ. ಭಕ್ತರ ಮನೆಗಳ ಹತ್ತಿರ ಬಂದಾಗ ಜಾತಿ ಮತ ಧರ್ಮಗಳ ಭೇದಭಾವವಿಲ್ಲದೆ ದೇವರಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿ, ಹಣ್ಣುಕಾಯಿ ಮಾಡಿಸುವುದು ಕಂಡುಬರುತ್ತದೆ.
ಬೀರಪ್ಪನ ಅಗ್ನಿಸೇವೆ
ಗ್ರಾಮದ ಬೀದಿಗಳಲ್ಲಿ ಹೀಗೆ ಮೆರವಣಿಗೆಯಲ್ಲಿ ಬರುವ ದೇವಗಣವನ್ನು ಮುಳ್ಳುಗದ್ದುಗೆಯಲ್ಲಿ ಕುಳಿತು ದೈವೀಪುರುಷನು ಮುನ್ನಡೆಸುವುದು ಕಂಡುಬರುತ್ತದೆ. ಮೆರವಣಿಗೆಯು ಆಂಜನೇಯ ದೇವಸ್ಥಾನದ ಮುಂದಿರುವ ಬಯಲಿಗೆ ಬಂದು ಪಶ್ಚಿಮಾಭಿಮುಖವಾಗಿ ನಿಲ್ಲುತ್ತದೆ. ಆಂಜನೇಯ ದೇವಸ್ಥಾನದ ಎದುರಿನ ಬಯಲಿನಲ್ಲಿ ಹತ್ತಡಿ ಉದ್ದ ಮತ್ತು ಹತ್ತು ಅಡಿ ಅಗಲದ ಅಗ್ನಿಕುಂಡವನ್ನು ಅಗೆದು, ಅದರಲ್ಲಿ ನಿಗಿನಿಗಿ ಕೆಂಡವನ್ನು ಬೆಳಗಿನಿಂದಲೇ ಮಾಡಿರುತ್ತಾರೆ. ದೈವಗಳು ಅಗ್ನಿಕುಂಡವನ್ನು ಹತ್ತಿ ಇಳಿಯಲು ಅನುಕೂಲವಾಗುವಂತೆ ಅಗ್ನಿಕುಂಡದ ಪೂರ್ವ ಮತ್ತು ಪಶ್ಚಿಮ ಭಾಗದ ಅಂಚಿಗೆ ಮೆಟ್ಟಿಲುಗಳನ್ನು ಮಾಡಲಾಗಿರುತ್ತದೆ. ಹಟ್ಟಿಗೌಡರ ಮನೆಯಲ್ಲಿ ತಯಾರಿಸಿದ ಎಂಟು ತಟ್ಟೆಗಳಲ್ಲಿ ಅನ್ನದೆಡೆಯ ಪ್ರಸಾಧವನ್ನು ತಂದು ಎಂಟೂ ದಿಕ್ಕಿಗೆ ಇಟ್ಟು ಜಂಗಮರು ಅಗ್ನಿಯ ಪೂಜೆಯನ್ನು ಸಲ್ಲಿಸುತ್ತಾರೆ. ಪವಿತ್ರ ಜಲವನ್ನು ಅಗ್ನಿಕುಂಡದ ಸುತ್ತ ಸಿಂಪಡಿಸಲಾಗುತ್ತದೆ. ಮುಳ್ಳುಗದ್ದುಗೆಯನ್ನು ಇಳಿಸಿದ ನಂತರ ಮೈದುಂಬಿದ ದೈವೀಪುರುಷನು ಬಲಗೈಯಲ್ಲಿ ಬೀರದೇವರ ದೈವೀದಂಡವನ್ನು ಹಿಡಿದುಕೊಂಡು ಪೂರ್ವದಿಂದ ಪಶ್ಚಿಮಾಭಮುಖವಾಗಿ ಅಗ್ನಿಯನ್ನು ಪ್ರವೇಶಿಸುತ್ತಾನೆ. ಅಗ್ನಿಕುಂಡದ ಮಧ್ಯೆ ಬಂದಾಗೊಮ್ಮ ನಿಂತು ಎರಡೂ ಕೈಯಿಂದ ದಂಡವನ್ನು ಹಿಡಿದು ಮೇಲೆತ್ತಿ ಭಕ್ತರಿಗೆ ಅಭಯರೂಪದ ಆಶೀರ್ವಾದ ಮಾಡುತ್ತಾನೆ. ನಂತರ ಪಶ್ಚಿಮದ ಅಂಚನ್ನು ತಲುಪಿ, ತಿರುಗಿ ಅದೇ ಪಥದಲ್ಲಿ ಅಗ್ನಿಯನ್ನು ದಾಟಿ ಪೂರ್ವದ ಅಂಚಿಗೆ ಬರುತ್ತಾನೆ. ಈಗ ಎರಡನೆಯ ಹಂತದಲ್ಲಿ ದೈವೀಪುರುಷನು ಬೀರದೇವರ ಪಲ್ಲಕ್ಕಿಯನ್ನು ಹಿಡಿದುಕೊಂಡು ಪೂರ್ವ-ಪಶ್ಚಿಮವಾಗಿ ದಾಟಿದಾಗ ಉಳಿದ ಎಲ್ಲ ದೈವಗಳು ಅವನನ್ನು ಅನುಸರಿಸಿ ಅಗ್ನಿಯನ್ನು ದಾಟುತ್ತವೆ. ಒಂದು ಬಾರಿ ಅಗ್ನಿಯನ್ನು ದಾಟಿಬಂದ ಆಂಜನೇಯ ಸ್ವಾಮಿಯು ತನ್ನ ದೇವಸ್ಥಾನಕ್ಕೆ ಮರಳಿ ಹೋಗುತ್ತದೆ. ಹೊರಟ್ಟಮ್ಮನೂ ಸಹ ತನ್ನ ಸ್ವಸ್ಥಾನಕ್ಕೆ ಹಿಂದಿರುಗುವುದು ಕಂಡುಬರುತ್ತದೆ. ದೈವೀಪುರುಷನಾದ ಈರಗಾರನ ಜೊತೆ ಬೀರಪ್ಪ ಮತ್ತು ಮಸಿಯಮ್ಮ, ದಂಡಿನ ದುರುಗಮ್ಮ ದೇವರುಗಳು ಮತ್ತೆ ಎರಡು ಸಲ ಅಗ್ನಿಯನ್ನು ಹಾಯ್ದು ಬರುತ್ತವೆ. ನಂತರ ಈ ಮೂರೂ ದೈವಗಳು ಅಗ್ನಿ ಕುಂಡವನ್ನು ಪೂರ್ಣವಾಗಿ ಸುತ್ತಿ ಪ್ರದಕ್ಷಿಣೆ ಸಲ್ಲಿಸುವುದು ಕಂಡುಬರುತ್ತದೆ.
ಅಗ್ನಿಸೇವೆಯ ನಂತರ ಮೂರೂ ದೈವಗಳು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಹೊರಡುತ್ತವೆ. ಮೆರವಣಿಗೆಯ ಸಂದರ್ಭದಲ್ಲಿ ಭಕ್ತರು ಸಾಲುಸಾಲಾಗಿ ಬೀದಿಯ ಮಧ್ಯೆ ಕುಳಿತು ತಮ್ಮ ಮೇಲೆ ದೇವರ ಪಲ್ಲಕ್ಕಿಗಳು ಹಾಯ್ದು ಹೋಗುವಂತೆ ಪ್ರಾರ್ಥಿಸಿ, ಆಶೀರ್ವಾದ ಪಡೆಯುತ್ತಾರೆ. ಪ್ರತಿಯೊಂದು ಮನೆಯ ಮುಂದೆ ನಿಂತು ಈ ದೈವಗಳು ಕಣ್ಣುಕಾಯಿಗಳ ಪೂಜೆ ಮಾಡಿಸಿಕೊಂಡು ಅಂತಿಮವಾಗಿ ಗುಡಿದುಂಬುತ್ತವೆ.
 ಪಿ/20, ಕೆ.ಪಿ.ಸಿ. ಕಾಲೋನಿ, ಕದ್ರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ-581396.

No comments:

Post a Comment