Friday, October 12, 2012

ಕರ್ನಾಟಕ ಇತಿಹಾಸ ಅಕಾದೆಮಿಯ 26ನೇ ಸಮ್ಮೇಳನ


ಕರ್ನಾಟಕ ಇತಿಹಾಸ ಅಕಾದೆಮಿಯ ೨೬ನೇ  ವಾರ್ಷಿಕ ಸಮ್ಮೇಳನವು, ಸೆಪ್ಟಂಬರ್‌ ೨೨, ೨೩ ಮತ್ತು ೨೪ರಂದು ಮೂರು ದಿನ ಶ್ರೀಮದ್‌ಶಂಕರಾಚಾರ್ಯರ ದಕ್ಷಿಣಾಮ್ನಾಯ ಪೀಠದ ಸಹಯೋಗದಲ್ಲಿ ಶೃಂಗೇರಿಯಲ್ಲಿ ಜರುಗಿತು. ಡಾ.ಎಸ್‌.ವಿ. ವೆಂಕಟೇಶಯ್ಯನವರು ಸಮ್ಮೇಳನದ  ಸರ್ವಾಧ್ಯಕ್ಷರಾಗಿ ಮೂರು ದಿನದ ಕಾರ್ಯಕ್ರಮ ನಡೆಸಿಕೊಟ್ಟರು.

ಡಾ. ಡಿ.ಎಚ್‌. ಶಂಕರಮೂರ್ತಿ,  ಕರ್ನಾಟಕ ವಿಧಾನ ಪರಿಷತ್‌ ಸಭಾಪತಿಗಳುಶೃಂಗೇರಿ ಮಠದ ಆಡಳಿತಾಧಿಕಾರಿಗಳಾದ ಪದ್ಮಶ್ರೀ ಡಾ.ಗೌರಿಶಂಕರ ಅವರು, ಅಕಾದೆಮಿಯ ಅಧ್ಯಕ್ಷರಾದ ಡಾ. ದೇವರಕೊಂಡಾರೆಡ್ಡಿ, ಇತಿಹಾಸ ಸಂಸ್ಕೃತಿ ಪ್ರಶಸ್ತಿಯ ಪುರಸ್ಕೃತರಾದ ಪ್ರೊ. ಲಕ್ಷ್ಮಣ ತೆಲಗಾವಿ ಮತ್ತು ಡಾ. ಬಾ.ರಾ. ಗೋಪಾಲ್ ಪ್ರಶಸ್ತಿ ಪಡೆದ ಡಾ. ಸೀತಾರಾಮ ಜಾಗೀರದಾರ್‌  ಮತ್ತು, ನಿಕಟಪೂರ್ವ ಸರ್ವಾಧ್ಯಕ್ಷರಾದ ಡಾ. ಎಚ್‌.ಎಸ್. ಗೋಪಾಲರಾವ್‌, ಅನೇಕ ಹಿರಿಯ ಇತಿಹಾಸ ತಜ್ಞರು ಮತ್ತು ಅಕಾದೆಮಿಯ ಪದಾಧಿಕಾರಿಗಳು ವೇದಿಕೆಯ ಮೇಲಿದ್ದರು.

ಈ ಕಾರ್ಯಕ್ರಮದ ವಿಭಿನ್ನತೆ ಎಂದರೆ ಸಮಯಕ್ಕೆ ಸರಿಯಾಗಿ ಆದ ಉದ್ಘಾಟನೆ. ಕರ್ನಾಟಕದ ಮೂಲೆಮೂಲೆಗಳಿಂದ ಬಂದ ಪ್ರತಿನಿಧಿಗಳಿಗೆ ಉತ್ತಮ ವಸತಿ ಸೌಕರ್ಯ ದೊರಕಿತು. ಸುಮಾರು ಅರವತ್ತೈದು ಸುಸಜ್ಜಿತ ಕೋಣೆಗಳ ವ್ಯವಸ್ಥೆಯಾಗಿತ್ತು.. ಬೆಳಗ್ಗೆ ಎಂಟೂವರೆಗೆ ಸರಿಯಾಗಿ ಬೆಳಗಿನ ಉಪಹಾರ ಸಹಪ್ರಾಯೋಜಕರಾದ ಶ್ರೀ ಮಠದಿಂದ ಏರ್ಪಾಡಾಗಿತ್ತು. ಹಾಗಾಗಿ ರಾತ್ರಿ ಪ್ರಯಾಣ ಮಾಡಿ ದಣಿದು ಬಂದವರು ಬಿಸಿ ನೀರ ಸ್ನಾನ ಮಾಡಿ ಗಡದ್ದು ತಿಂಡಿ ತಿಂದು ಕಾರ್ಯಕ್ರಮ ನಡೆವ ವೇದಿಕೆಗೆ ಬಂದು ನೋಂದಾವಣೆ ಮಾಡಿಕೊಳ್ಳಲು ಸರತಿಗಾಗಿ ಕಾದಿದ್ದರು. ಅದೃಷ್ಟ ಎಂದರೆ ಅತಿಥಿಗಳಿಗಾಗಿ ಕಾಯುವ ಗೋಜಿರಲಿಲ್ಲ. ಹೇಳಿ ಕೇಳಿ ದೇವಸ್ಥಾನ. ಎಲ್ಲರೂ ಪಾದರಕ್ಷೆಗಳನ್ನು ಅದರ ಜೊತೆ ತಮ್ಮ ದುಶ್ಚಟಗಳನ್ನು ಆವರಣದ ಹೊರಗೆ ಬಿಟ್ಟು ಶ್ರದ್ಧೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಮ್ಮೇಳನವನ್ನು ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್.ಶಂಕರಮೂರ್ತಿಯವರು ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಸುದೀರ್ಘವಾಗಿ ಪರಂಪರೆಯನ್ನು ಉಳಿಸಿಕೊಳ್ಳುವ ಅಗತ್ಯದ ಬಗೆಗೆ ಮಾತನಾಡಿದರು. ಯುವಜನರ ಜಾಗೃತಿಗೆ ಇತಿಹಾಸದ ಅಧ್ಯಯನದ ಅಗತ್ಯವನ್ನು ಒತ್ತಿ ಹೇಳಿದರು. ಸರಿಯಾದ ಇತಿಹಾಸದ ಪುನರ‍್ರಚನೆಯ ಅಗತ್ಯವನ್ನು ತಿಳಿಸಿದರು.

ಶ್ರೀಮಠದ ಆಡಳಿತಾಧಿಕಾರಿಗಳಾದ ಪದ್ಮಶ್ರೀ ಡಾ. ಗೌರಿಶಂಕರ್‌ ಅವರು ೨೬ನೇ ವಾರ್ಷಿಕ ಇತಿಹಾಸ ದರ್ಶನ ಗ್ರಂಥವನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಪದ್ಮಶ್ರೀ ಡಾ. ಗೌರಿಶಂಕರ ಅವರು ಸಮ್ಮೇಳನದ ಸಹಯೋಗ ತಮ್ಮ ಸೌಭಾಗ್ಯ ಎಂದು ತಿಳಿಸಿದರು. ಶ್ರೀಮಠ ಒಂದು ಶ್ರದ್ಧಾಕೇಂದ್ರ. ಇಲ್ಲಿ ಇತಿಹಾಸ ಮತ್ತು ಪರಂಪರೆಗಳು ಒಂದುಗೂಡಿವೆ. ಆದ್ದರಿಂದ ಇತಿಹಾಸ ಸಮ್ಮೇಳನ ನಡೆಸುವಲ್ಲಿ ಕೈಜೋಡಿಸುವುದು ತಮ್ಮ ಕರ್ತವ್ಯ. ಆದ್ದರಿಂದ ತಮಗೆ ಅತೀವ ಆನಂದವಾಗಿದೆ ಎಂದು ಹೇಳಿದರು. ಅಲ್ಲದೆ ಈ ಕೆಲಸ ಮಾಡಲೆಂದೇ ತಾವಿರುವುದು.  ಈ ರೀತಿಯ ಸಹಕಾರ ಭವಿಷ್ಯದಲ್ಲಿಯೂ ನೀಡಲು ಸಿದ್ಧ ಎಂದರು.

ಇದೇ ಸಂದರ್ಭದಲ್ಲಿ ಇತಿಹಾಸತಜ್ಞರಾದ ಪ್ರೊ. ಲಕ್ಷ್ಮಣ ತೆಲಗಾವಿಯವರಿಗೆ ಇತಿಹಾಸ ಸಂಸ್ಕೃತಿ ಶ್ರೀ  ಪ್ರಶಸ್ತಿ ಪ್ರದಾನ ಮಾಡಿ, ಜೊತೆಗೆ ಒಂದು ಲಕ್ಷ ರೂಪಾಯಿ ನಗದು ನೀಡಲಾಯಿತು. ಈ ಪ್ರಶಸ್ತಿಯ ಪ್ರಾಯೋಜಕರಾದ ಲಕ್ಷ್ಮಿ ಪ್ರಿಂಟರ್ಸನ ಶ್ರೀ ಅಶೋಕ ಕುಮಾರ್‌ ಅವರು, ತಮ್ಮ ಬಿ.ಆರ್.ಆರ್. ಟ್ರಸ್ಟ್ ವತಿಯಿಂದ ಬಹುಶಃ ದೇಶದಲ್ಲಿಯೆ ಅತಿ ಹೆಚ್ಚು ಮೌಲ್ಯಯುತವಾದ ಇತಿಹಾಸ ಪ್ರಶಸ್ತಿಯನ್ನು ಪ್ರತಿವರ್ಷ ಕರ್ನಾಟಕ ಇತಿಹಾಸ ಅಕಾದೆಮಿಯ ಮೂಲಕ ನೀಡುವುದಾಗಿ ಘೋಷಿಸಿದರು.
ಇದೇ ಸಮಯದಲ್ಲಿ  ಡಾ. ಬಾ.ರಾ. ಗೋಪಾಲ್ ಶಾಸನ ದತ್ತಿ ಪ್ರಶಸ್ತಿಯನ್ನು ಶ್ರೀ ಸೀತಾರಾಮ ಜಾಗೀರದಾರ್‌ ಅವರಿಗೆ ಪ್ರದಾನ ಮಾಡಲಾಯಿತು.

 ಶ್ರೀ ಕೆ.ಆರ್.ರಾಮಕೃಷ್ಣಆಯುಕ್ತರುಪ್ರಾಚ್ಯವಸ್ತು, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರಅವರು ಹಿಂದಿನ ವರ್ಷದಲ್ಲಿ ಪಿಎಚ್.ಡಿ.  ಪಡೆದ ಅಕಾದೆಮಿ ಸದಸ್ಯರಿಗೆ ಸನ್ಮಾನ ಮಾಡಿದರು.
ಈ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಎಸ್.ವಿ. ವೆಂಕಟೇಶಯ್ಯನವರು ತಮ್ಮ ೩೩ ವರ್ಷದ ಸುದೀರ್ಘ ಮತ್ತು ಸಾರ್ಥಕ ಸೇವೆಯಲ್ಲಿ ಪ್ರಾಚೀನ ಸ್ಮಾರಕಗಳ ರಕ್ಷಣೆ, ಉತ್ಖನನ ಮತ್ತು ಪ್ರಾಚ್ಯವಸ್ತು ಇಲಾಖೆಯ ಮೂಲಕ ಮಾಡಿದ ಕೆಲಸದ ವಿವರ ನೀಡಿದರು. ಪುರಾತತ್ವ ಇಲಾಖೆಯ ಕಾರ್ಯವೈಖರಿ, ಪರಂಪರೆಯ ಸ್ಮಾರಕಗಳ ಸಂರಕ್ಷಣೆಗೆ ಇಲಾಖೆಯ ಕಳಕಳಿ ಮತ್ತು ಕಾಳಜಿ ಕುರಿತು ಮಾಹಿತಿ ನೀಡಿದರು. ಇತಿಹಾಸ ಅಕಾದೆಮಿಯ ಅಧ್ಯಕ್ಷರಾದ ಡಾ. ದೇವರಕೊಂಡಾರೆಡ್ಡಿಯವರು ಸಮ್ಮೇಳನದ ಹಿನ್ನೆಲೆ ಅದರ ಯಶಸ್ಸಿಗೆ ಕೈಜೋಡಿಸಿದವರ ವಿವರ ನೀಡಿ ಎಲ್ಲರನ್ನೂ ಸ್ವಾಗತಿಸಿದರು. ಸರಿಸುಮಾರು ಮೂರು ನೂರು ಪ್ರತಿನಿಧಿಗಳು ಭಾಗವಹಿಸಿದ್ದರು. ಅದರಲ್ಲಿ ಮಹಿಳೆಯರ ಸಂಖ್ಯೆಯೂ ಗಣನೀಯವಾಗಿತ್ತು. ಇತಿಹಾಸ ಮತ್ತು ಸಾಹಿತ್ಯರಂಗದಲ್ಲಿನವರ ಜೊತೆಜೊತೆಗೆ ಸಮಾಜದ ವಿವಿಧ ರಂಗದಲ್ಲಿನ ಇತಿಹಾಸ ಆಸಕ್ತರು ಭಾಗವಹಿಸಿದ್ದು ವಿಶೇಷವಾಗಿತ್ತು. ಅರವತ್ತು-ಎಪ್ಪತ್ತು ವಯೋಮಾನದ ಹಿರಿಯ ತಲೆಗಳೊಡನೆ ಅವರ ಮಾರ್ಗದರ್ಶನ ಪಡೆಯಲು, ಸಂವಾದ ನಡೆಸಲು, ಸಂಪ್ರಬಂಧ ಮಂಡಿಸಲು ಹೆಚ್ಚಿನ ಸಂಖ್ಯೆಯ ಯುವಜನರು ಭಾಗವಹಿಸಿದುದು ಭವಿಷ್ಯದ ಭರವಸೆಯ ಸಂಕೇತವಾಗಿತ್ತು. ಅಂದಾಜು ೧೪೦ಕ್ಕೂ ಹೆಚ್ಚು ಮಂದಿ ತಮ್ಮ ಸಂಪ್ರಬಂಧ ಮಂಡಿಸಲು ನೋಂದಾಯಿಸಿ ಕೊಂಡಿದ್ದರು. ಅದಕ್ಕಾಗಿ ಮುಖ್ಯ ವೇದಿಕೆಯ ಜೊತೆಗೆ ಸಮಾಂತರವಾಗಿ ಕಾರ್ಯಕ್ರಮ ನಡೆಸಲು ಇನ್ನೊಂದು ವೇದಿಕೆಯನ್ನು ಸಿದ್ಧಮಾಡಲಾಗಿತ್ತು. ಅಲ್ಲಿ ಪವರ್‌ ಪಾಯಿಂಟ್‌ ಪ್ರಾತ್ಯಕ್ಷಿಕೆ ಕೊಡಲು ಸೂಕ್ತ ವ್ಯವಸ್ಥೆ ಮಾಡಿದುದು, ಸಂಪ್ರಬಂಧಗಳನ್ನು ಪರಿಣಾಮಕಾರಿಯಾಗಿ ಚಿತ್ರ ಸಮೇತ ಮಂಡಿಸಲು ಅನುಕೂಲವಾಗಿತ್ತು.

ಉದ್ಘಾಟನೆಯ ನಂತರ ಗೋಷ್ಠಿಗಳು ಪ್ರಾರಂಭವಾದವು. ಪ್ರತಿ ಗೋಷ್ಠಿಗೂ ತಜ್ಞರೊಬ್ಬರು ಅಧ್ಯಕ್ಷರು, ಜೊತೆಗೆ ಒಬ್ಬ ನಿರೂಪಕರು. ಹೆಚ್ಚಿನ ಸಂಖ್ಯೆಯ ಪ್ರಬಂಧಗಳ ಮಂಡನೆ ಆಗಬೇಕಾದುದರಿಂದ ಪ್ರತಿ ಪ್ರಬಂಧ ಮಂಡನೆಗೆ ೮-೧೦ ನಿಮಿಷ ಕಾಲಾವಧಿ ನಿಗದಿ ಮಾಡಲಾಗಿತ್ತು. ಜೊತೆಗೆ ೨-೩ ಪ್ರಶ್ನೆಗಳಿಗೂ ಅವಕಾಶವಿತ್ತು.

ಹಲವು ಗೋಷ್ಠಿಗಳು ಬಹು ಆಸಕ್ತಿದಾಯಕವಾಗಿದ್ದವು. ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲುವ ಪ್ರಯತ್ನ ಆ ಸಂಪ್ರಬಂಧಗಳಲ್ಲಿ ಕಂಡುಬಂದಿದ್ದು ಉತ್ತಮ ಭವಿಷ್ಯದ ಭರವಸೆ ಮೂಡಿಸಿತು.

ಆಯ್ದ ಗೋಷ್ಠಿಗಳ ವಿವರವನ್ನು ಒಂದೊಂದಾಗಿ ಬ್ಲಾಗ್‌ನಲ್ಲಿ ಮುಂಬರುವ ದಿನಗಳಲ್ಲಿ ನೀಡುವ ಯೋಜನೆ ಇದೆ. ಆಸಕ್ತರು ತಮ್ಮ ಸಂಪ್ರಬಂಧ, ಚಿತ್ರಗಳು (ಇದ್ದರೆ), ಸ್ವವಿವರವನ್ನು ಭಾವಚಿತ್ರ ಸಮೇತ ಇ-ಮೇಲ್‌ ಮುಖಾಂತರ ಕಳುಹಿಸಿದರೆ, ಪ್ರಕಟಿಸಬಹುದಾಗಿದೆ.  
ಮಿಂಚಂಚೆ (ಇ-ಮೇಲ್) ವಿಳಾಸ :  appaaji@gmail.com ಗೆ ದಯವಿಟ್ಟು ಕಳುಹಿಸಿ.


                                        ಸದಸ್ಯರ ಪ್ರತಿಕ್ರಿಯೆ ಮತ್ತು ಸಹಕಾರ ನಿರೀಕ್ಷಿಸಿದೆ




No comments:

Post a Comment