Sunday, September 29, 2013

ಸಮಾರೋಪ ಸಮಾರಂಭ

ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಲು ಪ್ರೊ.ಸುಂದರ ಕರೆ
ವರದಿ: ಡಾ.ಬಾಲಕೃಷ್ಣ ಹೆಗಡೆ




ಬೆಂಗಳೂರು: ಸಂಶೋಧನಾ ಕಾರ್ಯ ಕೈಗೊಳ್ಳುವ ಮುನ್ನ ಯುವ ಇತಿಹಾಸ ಸಂಶೋಧಕರು ಆಯಾ ಕ್ಷೇತ್ರದಲ್ಲಿ ಆಳವಾದ ಅಧ್ಯಯನ ಮಾಡಿಕೊಳ್ಳಬೇಕು ಎಂದು ಖ್ಯಾತ ಪುರಾತತ್ವಜ್ಞ ಪ್ರೊ.ಅ.ಸುಂದರ ಕರೆ ನೀಡಿದರು.
ಅವರು ಇಲ್ಲಿಯ ದಿ ಮಿಥಿಕ್ ಸೊಸೈಟಿಯಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿ ಆಯೋಜಿಸಿದ್ದ ಮೂರು ದಿನಗಳ ೨೭ನೇ ವಾರ್ಷಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡುತ್ತಿದ್ದರು.
ಇತಿಹಾಸ ಬಲ್ಲ ಯುವಕರ ಸಂಖ್ಯೆ ಕಡಿಮೆ ಇದೆ. ಇಂದಿನ ಬಹುತೇಕ ಯುವ ಪೀಳಿಗೆಗೆ ದೇಶಾಭಿಮಾನ ಇಲ್ಲ. ಸ್ತ್ರೀಯರ ಬಗ್ಗೆ ಗೌರವ ಇಲ್ಲವಾಗಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಮನೋಭಾವ ಕಳೆದುಕೊಂಡಿದ್ದಾರೆ ಎಂದು ವಿಷಾದಿಸಿದ ಅವರು ಇತಿಹಾಸ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಈಗ ನಾವು ದೇಶದ ಕೇವಲ ಶೇ.೨೦ರಿಂದ ೨೫ರಷ್ಟು ಇತಿಹಾಸ ಮಾತ್ರ ಗೊತ್ತಾಗಿದೆ. ಅದರಲ್ಲೂ ಹಲವಾರು ದೋಷಗಳಿವೆ. ಭಾರತೀಯ ಆತ್ಮ ಇದರಲ್ಲಿ ದರ್ಶನವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ದೇಶದ ನಿಜವಾದ ಇತಿಹಾಸ ರಚನೆಯಾಗಬೇಕಿದೆ ಎಂದು ಅವರು ಪ್ರತಿಪಾದಿಸಿದರು.
ತಮ್ಮ ಭಾಷಣದಲ್ಲಿ ಹೆಚ್ಚಾಗಿ ಯುವ ಸಂಶೋಧಕರನ್ನೇ ಗುರಿಯಾಗಿಟ್ಟು ಮಾತನಾಡಿದ ಅವರು ಯುವ ಸಂಶೋಧಕರು ವಿಷಯದ ತಜ್ಞರಲ್ಲಿ ಸಲಹೆ ಪಡೆದುಕೊಂಡು ಕೆಲಸ ಮಾಡಬೇಕು. ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಪರಿಣಿತರು ಯುವ ಸಂಶೋಧಕರಿಗೆ ಪ್ರೋತ್ಸಾಹ ನೀಡಬೇಕು ಎಂದು ಕಿವಿ ಮಾತು ಹೇಳಿದರು.
ದೇಶದ ಇತಿಹಾಸ ಸಂಶೋಧನೆಯಲ್ಲಿ ನಿರೀಕ್ಷೆಯ ಷ್ಟು ಪ್ರಗತಿ ಕಂಡುಬಂದಿಲ್ಲ ಎಂದು ಅವರು ವಿಷಾದಿಸಿದರು.
ಮಿಥಿಕ್ ಸೊಸೈಟಿಯ ಕಾರ್ಯದರ್ಶಿ ವಿ.ನಾಗರಾಜ ಮಾತನಾಡಿ ಆಧುನಿಕ ವಿಜ್ಞಾನ-ತಂತ್ರಜ್ಞಾನದ ಉಪಯೋಗದಿಂದ ಪುರಾತತ್ವ ಸಂಶೋಧನೆಯತ್ತ ಗಮನ ಹರಿಸಬೇಕು. ಕರ್ನಾಟಕದ ಇತಿಹಾಸ ಅಧ್ಯಯನದಲ್ಲೂ ಇದರ ಅಳವಡಿಕೆ ಅಗತ್ಯ. ಸಮಾಜದಲ್ಲಿ ಸಾಮರಸ್ಯ ತರುವ ಜವಾಬ್ದಾರಿ ಇತಿಹಾಸಕಾರರ ಮೇಲಿದೆ ಎಂದು ಅಭಿಪ್ರಾಯ ಪಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿಯ ಅಧ್ಯಕ್ಷ ಡಾ.ದೇವರಕೊಂಡಾರೆಡ್ಡಿ ಮಾತನಾಡಿ ೪೫ ವ ರ್ಷದೊಳಗಿನ ಶಿಕ್ಷಕರು-ಉಪನ್ಯಾಸಕರಿಗೆ ಪುರಾತತ್ವ ಕಮ್ಮಟ ಏರ್ಪಡಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ವಿನಂತಿಸಿದರು.
ಕರ್ನಾಟಕದಲ್ಲಿದ್ದ ಷ್ಟು ಶಿಲ್ಪ ಸಂಪತ್ತು ಬೇರೆ ಯಾವ ರಾಜ್ಯಗಲ್ಲೂ ಇಲ್ಲ. ಅವುಗಳನ್ನು ಪ್ರಪಂಚಕ್ಕೆ ಪರಿಚಯಿಸುವ ಕಾರ್ಯವನ್ನು ಅಕಾಡೆಮಿ ತನ್ನ ಅಂತರ್ಜಾಲ ಸ್ಥಾಪಿಸಿ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದರು.

ಸಮ್ಮೇಳನದ ಸರ್ವಾಧ್ಯಕ್ಷ ಡಾ.ಎಸ್.ಕೆ.ಜೋಷಿ, ಉಪಸ್ಥಿತರಿದ್ದರು.  ಶಿವಮೊಗ್ಗ ಕಮಲಾನೆಹರು ಮಹಿಳಾ ಕಾಲೇಜಿನಉಪನ್ಯಾಸಕ ಡಾ.ಬಾಲಕೃಷ್ಣ ಹೆಗಡೆ, ಬೆಂಗಳೂರು ವಿಜಯಾ ಕಾಲೇಜಿನ ಪ್ರೊ.ಶ್ರೀನಿವಾಸಮೂರ್ತಿ, ಹಂಪಿಯ ಶ್ರೀಮತಿ ಪದ್ಮಜಾ ದೇಸಾಯಿ ಸಮ್ಮೇಳನದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು. ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಡಾ.ದೇವರಾಜಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.

(ಶಿವಮೊಗ್ಗದ ಅಜೇಯ ಪತ್ರಿಕೆಯಿಂದ)





No comments:

Post a Comment