. ರಾಷ್ಟ್ರಕೂಟರ ಕಾಲದ ಸಾಂಸ್ಕೃತಿಕ ಅಧ್ಯಯನಕ್ಕೆ ಮಹತ್ವದ ಆಖರ
ಗ್ರಂಥ ತ್ರಿವಿಕ್ರಮಭಟ್ಟನ ’ನಳಚಂಪೂ’
ಡಾ. ಬೆಂ. ಮ. ಶ್ಯಾಮಲಾ ಕುಮಾರಿ
ಡಾ. ಬೆಂ. ಮ. ಶ್ಯಾಮಲಾ ಕುಮಾರಿ
’ನಳಚಂಪೂ’ ಅಥವಾ ’ದಮಯಂತಿ ಕಥಾ’ ಸಂಸ್ಕೃತ ಭಾಷೆಯಲ್ಲಿ ರಚಿತವಾದ
ಪ್ರಥಮ ಚಂಪೂ ಕಾವ್ಯ. ಇದರ ಕರ್ತೃ ಕ್ರಿ.ಶ. ೧೦ನೇ ಶತಮಾನದ ಪೂರ್ವಾರ್ಧದಲ್ಲಿ ರಾಷ್ಟ್ರಕೂಟ
ಚಕ್ರವರ್ತಿ ಮೂರನೇ ಇಂದ್ರನ ಆಸ್ಥಾನ ಕವಿಯಾಗಿದ್ದ ತ್ರಿವಿಕ್ರಮಭಟ್ಟ. ಈತನು ಶಾಸನಕವಿಯೂ ಹೌದು.
ಮೂರನೇ ಇಂದ್ರನ ಬೆಗುಮ್ರಾ ಮತ್ತು ಜಂಬಗಾವ್ ತಾಮ್ರಪಟಗಳ ಪಾಠವನ್ನು ತ್ರಿವಿಕ್ರಮಭಟ್ಟನೇ
ರಚಿಸಿದ್ದಾನೆ. ನಾಸಿಕದ ಬಳಿ ದೊರೆತಿರುವ ತಾಮ್ರಪಟವೊಂದರಲ್ಲಿ ತ್ರಿವಿಕ್ರಮಭಟ್ಟನನ್ನು ’ಕವಿ
ಚಕ್ರವರ್ತಿ’ ಎಂದು ಹೇಳಲಾಗಿದೆ. ಈತನು ಶಾಂಡಿಲ್ಯಗೋತ್ರೋದ್ಭವನೂ ವೇದವಿದ್ಯಾ ವಿಶೇಷಜ್ಞ, ಆಸ್ಥಾನಕವಿ ದೇವಾದಿದ್ಯನ ಮಗನೂ ಆಗಿದ್ದನು. ತನ್ನ
ತಂದೆಯ ಅನುಪಸ್ಥಿತಿಯಲ್ಲಿ ರಾಜನಿಂದ ಪರದೇಶದಿಂದಾಗಮಿಸಿದ ಪಂಡಿತನೊಡನೆ ಶಾಸ್ತ್ರಾರ್ಥಕ್ಕಾಗಿ
ರಾಜನಿಂದ ಆದೇಶ ಪಡೆದನೆಂತಲೂ ಆ ಸಂದರ್ಭದಲ್ಲಿ ದೇವಿಯನ್ನಾರಾಧಿಸಿ ನಳಚಂಪೂ ರಚಿಸಿದನೆಂತಲೂ ತಂದೆಯ
ಆಗಮನದೊಂದಿಗೆ ಕೃತಿರಚನೆ ಅಲ್ಲಿಗೇ ಅಪೂರ್ಣವಾಗಿ ನಿಂತಿತೆಂದೂ ತಿಳಿದುಬರುತ್ತದೆ.
’ನಳಚಂಪೂ’
ಒಂದು ಪ್ರಣಯಕಾವ್ಯ, ಅಪೂರ್ಣ ಕೃತಿ. ಆದರೂ ಈ ತನ್ನ ಕಾವ್ಯದಲ್ಲಿ
ರಾಷ್ಟ್ರಕೂಟರ ಕಾಲದ ಹಿಂದೂ ಸಮಾಜ ಮತ್ತು ಸಂಸ್ಕೃತಿಯ ನೈಜ ಮತ್ತು ವಿಶಾದವಾದ ಪ್ರತಿಬಿಂಬವನ್ನೇ
ಮಂಡಿಸಿದ್ದಾನೆ ತ್ರಿವಿಕ್ರಮಭಟ್ಟ. ಇದರಲ್ಲಿ ಅತ್ಯಂತ ಪ್ರಧಾನವಾಗಿರುವ ರಾಜನ, ಮಂತ್ರಿಯ, ಪರಿವಾರದ, ಸೇನೆಯ,
ವಿಹಾರದ ಸ್ವಯಂವರ ನಿಯೋಜನೆ ಹಾಗೂ ಸಾಮಾನ್ಯ ಜನಜೀವನ ಚಿತ್ರಣಗಳ ಸಂಕ್ಷಿಪ್ತ
ಪರಿಚಯ ಇಂತಿದೆ :
ರಾಜ :
ಪ್ರಥಮೋಚ್ಛ್ವಾಸದಲ್ಲಿಯೇ ಕಾವ್ಯ ನಾಯಕ ನಳನ ವರ್ಣನೆಯನ್ನು ಅಮೋಘವಾಗಿ ಮಾಡಿದ್ದಾನೆ ಕವಿ.
ರಾಜನನ್ನು ವಿಷ್ಣುವಿಗಿಂತ ಮಿಗಿಲಾದ ಪುರುಷೋತ್ತಮನೆಂದೂ ನವಾವತಾರಿಯೆಂದೂ ವರ್ಣಿಸಲಾಗಿದೆ. ರಾಜ
ನಳನ ಪಾರ್ಥಿವ ಪುಂಗವ, ಸಮಸ್ತ ಗುಣಗಳ ನಿಧಿ,
ಶ್ರೇಷ್ಠರಲ್ಲಿ ಶ್ರೇಷ್ಠ. ನಳನ ಈ ವರ್ಣನೆಯಲ್ಲಿ ತನ್ನ ಪೋಷಕ ರಾಷ್ಟ್ರಕೂಟ
ಚಕ್ರವರ್ತಿ ಮೂರನೇ ಇಂದ್ರನ ರೂಪಗುಣಶೌರ್ಯಾದಿಗಳೂ ಅವನ ದಿಗ್ವಿಜಯ ಪ್ರವೃತ್ತಿಯೂ ದಾನಶೀಲಾದಿಗಳೂ
ಧ್ವನಿತವಾಗಿವೆ.
ರಾಜ್ಯದ
ಉತ್ತರಾಧಿಕಾರ, ರಾಜ್ಯಾಭಿಷೇಕ ಮುಂತಾದ ವಿಷಯಗಳ ಬಗ್ಗೆಯೂ ಮಾಹಿತಿ
ಈ ಗ್ರಂಥದಲ್ಲಿ ನಮಗೆ ದೊರಕುತ್ತದೆ. ನಳನ ರಾಜ್ಯಾಭಿಷೇಕ ವರ್ಣನೆಯು ರಾಷ್ಟ್ರಕೂಟ ಮೂರನೇ ಇಂದ್ರನು
ಕುರುಂದಕದಲ್ಲಿ ರಾಜ್ಯಾಭಿಷಕ್ತನಾದ ಆ ಮಹೋತ್ಸವದಲ್ಲಿ ತ್ರಿವಿಕ್ರಮಭಟ್ಟನು ಉಪಸ್ಥಿತನಾಗಿ ತಾನು
ಕಣ್ಣಾರೆ ಕಂಡ ವಿಧಿಗಳ ನೈಜ ನಿರೂಪಣೆಯೇ ಆಗಿದೆ.
ಮಂತ್ರಿ :
ರಾಜ್ಯದಲ್ಲಿ ಮಂತ್ರಿಯ ಸ್ಥಾನವು ಮಹತ್ವಪೂರ್ಣದ್ದಾಗಿತ್ತು. ಬಹುಮಟ್ಟಿಗೆ ಬ್ರಾಹ್ಮಣ
ವರ್ಣದವರನ್ನೇ ಈ ಪದವಿಗೆ ನೇಮಕ ಮಾಡಲಾಗುತ್ತಿತ್ತು. ಹುದ್ದೆ ವಂಶಪಾರಂಪರ‍್ಯವಾಗಿರುತ್ತಿತ್ತು.
ವ್ಯಕ್ತಿಯ ಯೋಗ್ಯತೆಯೊಂದಿಗೆ ಅವನ ವರ್ಣ ಮತ್ತು ಕುಲ ಶ್ರೇಷ್ಠತೆಯನ್ನು ಮಂತ್ರಿ ಹುದ್ದೆಗೆ
ಸಾಪೇಕ್ಷ ಅರ್ಹತೆಗಳೆಂದು ಭಾವಿಸಲಾಗಿತ್ತು. ಪ್ರಾಜಾಪಾಲನೆಯ ಕಾರ್ಯದಲ್ಲಿ ರಾಜನ ಸರ್ವಾಧಿಕ
ಸಹಾಯಕನಾಗಿರುತ್ತಿದ್ದ. ರಾಜನ ಚಿತ್ತವೃತ್ತಿಯನ್ನು ಮಂತ್ರಿಯು ಸದಾ ಅನುಸರಿಸಬೇಕಾಗಿತ್ತು. ರಾಜನ
ಪ್ರವೃತ್ತಿಯನ್ನು ದುಷ್ಟ ಮಾರ್ಗದಿಂದ ನಿರ್ವಹಿಸಲು ಅವನ ಮನಸ್ಸಿಗೆ ಒಪ್ಪತಕ್ಕಂತಹ ಮಾರ್ಗವನ್ನು
ಅನ್ವೇಷಿಸಿ ಅವಲಂಬಿಸಬೇಕಾಗುತ್ತಿತ್ತು. ಇವೆರೆಡು ಕಾರ್ಯಗಳೂ ಮಂತ್ರಿಯ ಅತಿ ಗುರುತರ ಹಾಗೂ ಕಠಿಣ
ಕಾರ್ಯಗಳಾಗಿರುತ್ತಿದ್ದವು.
ರಾಜ್ಯಾಭಿಷೇಕದ
ಪೂರ್ವದಲ್ಲಿ ಯುವರಾಜನಿಗೆ ರಾಜಯೋಗ್ಯವಾದ ವಿವಿಧ ರೀತಿಯ ಶಿಕ್ಷಣ ನೀಡುವ ಕಾರ್ಯಭಾರವು ಮಂತ್ರಿಯೇ
ನಿರ್ವಹಿಸುತ್ತಿದ್ದ. ರಾಜನನ್ನು ಅವನ ಎಲ್ಲಾ ಕಾರ್ಯಗಳಲ್ಲೂ ಎಡಬಿಡದೆ ಅನುಸರಿಸುವ ಆತ್ಮೀಯವಾದ
ಅಮಾತ್ಯನಾಗಿದ್ದ. ಹೀಗೆ ತನ್ನೆಲ್ಲ ಗುಣ ಹಾಗೂ ಕಾರ್ಯಗಳಿಂದ ರಾಜನಿಗೆ ಪ್ರಾಣ ಸಮನೂ
ಶರೀರಮಾತ್ರದಿಂದ ಭಿನ್ನನಾದ ಏಕಾತ್ಮನಂತೆಯೂ ಇರುತ್ತಿದ್ದ ಮಂತ್ರಿ.
ಸೇನೆ :
ಸೇನೆ ರಾಜ್ಯದ ಸಪ್ತಾಂಗಗಳಲ್ಲೊಂದು. ಈ ಕಾವ್ಯದಲ್ಲಿ ಕೇವಲ ಸ್ಥಳಸೇನೆಯ ವರ್ಣನೆ ಇದೆ. ಇದರಲ್ಲಿ
ವ್ಯಾಧಸೇನೆ ಹಾಗೂ ಪರಿವಾರ ಸೇನಾಪಡೆ ಪ್ರಧಾನವಾಗಿ ವರ್ಣಿತವಾಗಿದೆ. ರಾಜನ ಬಳಿ ಚತುರಂಗ
ಸೇನೆಯಿದ್ದು ಅದರಲ್ಲಿ ಗಜ, ಅಶ್ವ, ರಥ ಮತ್ತು ಪದಾತಿಗಳ ಪ್ರತ್ಯೇಕ ಪಡೆಗಳು ಇದ್ದವೆಂದು ಹೇಳಲ್ಪಟ್ಟಿದೆ. ರಾಜನೇ ಸೇನೆಯ
ಮುಖ್ಯಸ್ಥನಾಗಿರುತ್ತಿದ್ದ. ರಾಜನ ಆಜ್ಞೆಯಿಂದ ಸೇನಾಪತಿ ಸೈನ್ಯ ಸಂಚಾಲನೆ ಮಾಡುತ್ತಿತ್ತು.
ಸೈನಿಕರ ಮುಖ್ಯ ಅಸ್ತ್ರವು ಧನುಷ್ಬಾಣವಾಗಿತ್ತು ಸೇನೆ ಹೊರಡುವಾಗ ಗಜ ಮತ್ತು ಅಶ್ವಗಳನ್ನು
ವಿಶೇಷವಾಗಿ ಸಿಂಗರಿಸಲಾಗುತ್ತಿತ್ತು. ಸೇನೆ ಚಲಿಸುಸುವಾಗ ಮಾರ್ಗದಲ್ಲಿನ ಜನಗಳಿಗೆ
ಆತಂಕವುಂಟಾಗುತ್ತಿತ್ತು. ಕಾರಣ ಪದಾತಿ ಸೇನೆ ಮಾರ್ಗದುದ್ದಕ್ಕೂ ಶತ್ರುಗಳಿಗೆ ಸೇರಿದ ನಗರಗಳನ್ನು
ಲೂಟಿಮಾಡುತ್ತಾ ಮುಂದುವರಿಯುತ್ತಿತ್ತು. ಅಶ್ವಗಳಿಗೆ ಹುಲ್ಲು ಮತ್ತು ಗಜಗಳಿಗೆ ಸುಲಭವಾಗಿ ಕೀಳಲು
ಸಾಧ್ಯವಾಗುವಂಥ ವೃಕ್ಷಗಳಿರುವೆಡೆ ಸೇನಾ ಶಿಬಿರಗಳನ್ನೇರ್ಪಡಿಸಲಾಗುತ್ತಿತ್ತು. ಶಿಬಿರದ ಸಮೀಪದ
ಸರೋವರಗಳನ್ನು ಪಾಚಿ ಮುಂತಾದವುಗಳಿಂದ ದೂರೀಕರಿಸಿ ಸ್ವಚ್ಛಗೊಳಿಸಲಾಗುತ್ತಿತ್ತು. ಹಳ್ಳತಿಟ್ಟು
ಭೂಮಿಯನ್ನು ಸಮಗೊಳಿಸಲಾಗುತ್ತಿತ್ತು ಹಾಗೂ ಮುಳ್ಳಕಂಟೆಗಳನ್ನು ಸವರಿಸಲಾಗುತ್ತಿತ್ತು. ಸೇನಾಸಾಮಗ್ರಿಗಳನ್ನು
ಹೊತ್ತು ಸಾಗಿಸಲು ಸೈನ್ಯದೊಂದಿಗೆ ಎತ್ತು, ಎಮ್ಮೆ, ಒಂಟೆ ಮುಂತಾದವುಗಳನ್ನು ಕರೆದೊಯ್ಯುತ್ತಿದ್ದರು. ಸೈನ್ಯವು ಬೀಡುಬಿಟ್ಟೆಡೆಯಲ್ಲಿ ಒಂದು
ನಗರವೇ ಕಾಣುತ್ತಿತ್ತು. ಶಿಬಿರವು ಧ್ವಜಪತಾಕೆಗಳಿಂದ ಶೋಭಿಸುತ್ತಿತ್ತು. ಚರ ಚಿತ್ರಶಾಲಾ ಗೃಹಗಳೂ
ಕೆಲವು ವೇಳೆ ನಿರ್ಮಿತಗೊಳ್ಳುತ್ತಿದ್ದವು. ಶೀಬಿರಗಳನ್ನು ಕೆಂಪುಬಟ್ಟೆಗಳಿಂದಲೂ ಮಂಟಪಗಳನ್ನು
ಶ್ವೇತವಸ್ತ್ರಗಳಿಂದಲೂ ನಿರ್ಮಿಸಲಾಗುತ್ತಿತ್ತು.
ಸೈನಿಕರು
ಕೆಲುವೊಮ್ಮೆ ಪ್ರಮತ್ತತೆಯಿಂದ ವರ್ತಿಸಿ, ತಮ್ಮ ತಮ್ಮಲ್ಲೇ
ಜಗಳವಾಡುವ ಸಂದರ್ಭಗಳೂ ಇರುತ್ತಿದ್ದವು. ಇಂತಹ ವೇಳೆ ತೀರ್ಥಸ್ಥಳ, ಯಜ್ಞಸ್ತಂಭ,
ಉದ್ಯಾನ, ಅರಣ್ಯಗಳು, ದೇವಮಂದಿರ,
ಮುನಿಕುಟೀರಗಳನ್ನು ನಾಶಗೊಳಿಸಲೂ ಹೇಸುತ್ತಿರಲಿಲ್ಲ. ಆ ಸಂದರ್ಭದಲ್ಲಿ ರಾಜನು
ಅವರ ವಿನಾಶಕರ ಕೃತ್ಯಗಳನ್ನು ತಡೆಗಟ್ಟಲು ಕಟ್ಟಾಜ್ಞೆಯನ್ನೂ ಹೊರಡಿಸಬೇಕಾಗುತ್ತಿದ್ದಿತು.
ರಾಜ್ಯದಲ್ಲಿ
ಬೇಟೆಗಾಗಿಯೇ ಸೈನ್ಯದ ಒಂದು ವಿಭಾಗವನ್ನು ವ್ಯವಸ್ಥೆಗೊಳಿಸಲಾಗಿತ್ತು. ಈ ವಿಭಾಗದ ಸೇನೆಯೊಂದಿಗೆ
ಶ್ವಾನ(ನಾಯಿ) ಪಡೆಯೂ ಇರುತ್ತಿತ್ತು. ಧರ್ನುಬಾಣಗಳನ್ನೂ ಪಾಶಗಳನ್ನೂ ಬಲೆಗಳನ್ನೂ ಒಯ್ಯಲಾಗುತ್ತಿತ್ತು.
ಸೇನೆಯನ್ನು ಗಣವೆಂಬ ತುಕಡಿಗಳಾಗಿ ವಿಭಜಿಸಿಲಾಗಿತ್ತು. ತುಕಡಿಯ ಮುಖ್ಯಸ್ಥನನ್ನು ಗಣಪತಿಯೆಂದು
ಕರೆಯಲ್ಪಡುತ್ತಿತ್ತು.
ಈ
ಸೇನಾವ್ಯವಸ್ಥೆ, ಸೇನಾಸಂಚಲನೆ ಮತ್ತು ಯುದ್ಧ ಕಟಕ(ಶಿಬಿರ)ಗಳ
ನಿರ್ಮಾಣದ ವಿವರಗಳು ರಾಷ್ಟ್ರಕೂಟ ಸೇನೆಯು ದಿಗ್ವಿಜಯ ನಡೆಸಲು ಹೊರಟ ಸಂದರ್ಭದ ಚಿತ್ರಣವೇ ಆಗಿದೆ.
ವ್ಯಾಧಸೇನೆ ಕರ್ನಾಟಕದ ನಿಷಧಸೇನೆಯನ್ನು ಪ್ರತಿನಿಧಿಸುತ್ತದೆ.
ಸ್ವಯಂವರ
ವರ್ಣನೆ : ರಾಜವಂಶೀಯರಲ್ಲಿ ಕನ್ಯೆಯರ ಸ್ವಯಂವರ ವಿವಾಹ ಪದ್ಧತಿ ಪ್ರಚಲಿತವಿತ್ತು. ಕನ್ಯೆಯು ತನ್ನ
ಮನಸ್ಸಿಗೊಪ್ಪಿದವನನ್ನು ಮಾಲೆ ಹಾಕಿ ವರಿಸುತ್ತಿದ್ದಳು. ಕೆಲವು ವೇಳೆ ಕೇವಲ ಪರಂಪರೆಯ
ನಿರ್ವಾಹಕ್ಕಾಗಿ ಸ್ವಯಂವರವನ್ನೇರ್ಪಡಿಸಲಾಗುತ್ತಿತ್ತು. ಸ್ವಯಂವರಕ್ಕಾಗಿ ಕನ್ಯಾಪಿತರಾಜನು ತನ್ನ
ಚತುರ ದೂತರನ್ನು ಉಡುಗೊರೆಗಳೊಂದಿಗೆ ಬೇರೆ ರಾಜರುಗಳ ಬಳಿಗೆ ಕಳುಹಿಸಿಕೊಡುತ್ತಿದ್ದನು. ರಾಜರುಗಳು
ಸ್ವಯಂವರದಲ್ಲಿ ಭಾಗಿಗಳಾಗಲು ತಮ್ಮ ಮಂತ್ರಿಜನ, ಸೇನಾಪರಿವಾರ,
ಸಾಮಗ್ರಿಗಳೊಂದಿಗೆ ಆಗಮಿಸುತ್ತಿದ್ದರು. ಈ ಎಲ್ಲರಿಗೂ ಕನ್ಯಾಪಿತನು ಭೋಜನ
ನಿವಾಸಾದಿಗಳನ್ನು ವಿಧಿವತ್ತಾಗಿ ಏರ್ಪಡಿಸಬೇಕಾಗಿತ್ತು. ನಗರವಧುಗಳು ಅತಿಥಿಗಳ ಚಿತ್ರಗಳನ್ನು
ಬರೆದುಕೊಡುತ್ತಿದ್ದರು. ಅದಕ್ಕಾಗಿ ಅವರಿಗೆ ಅತಿಥಿಗಳಿಗೆ ಯಥಾವತ್ತಾಗಿ ವೀಕ್ಷಿಸಲು ಉನ್ನತ
ಸ್ಥಳಗಳಲ್ಲಿ ಸೇರಲು ಏರ್ಪಡಿಸಲಾಗುತ್ತಿತ್ತು. ನಗರದ ಪ್ರತಿ ಮನೆಯ ಮುಂದೂ ಪೂರ್ಣಕಲಶವನ್ನಿಟ್ಟು
ಸ್ವಸ್ತಿಕದ ಚಿಹ್ನೆಯನ್ನು ಬರೆಯಲಾಗುತ್ತಿತ್ತು. ನಗರದ ಅಂಗನೆಯರು ವಿವಿಧ ಭೂಷಣಗಳಿಂದ ಸಜ್ಜುಗೊಂಡು
ಮಂಗಳದ್ರವ್ಯ, ದೂರ್ವದಳ, ಮೊಸರು, ಹೂವುಗಳನ್ನು ಹಿಡಿದು ಮಂಗಳಗೀತೆಗಳನ್ನು ಹಾಡುತ್ತಿದ್ದರು.
ಈ
ಸ್ವಯಂವರಗಳು ಹಲವು ವೇಳೆ ರಾಜರುಗಳ ನಡುವೆ ಪೈಪೋಟಿಗೂ, ವೈಮನಸ್ಯಕ್ಕೂ, ಘರ್ಷಣೆಗೂ ಎಡೆಮಾಡಿಕೊಡುತ್ತಿದ್ದವು.
ಆದ್ದರಿಂದಲೇ ಕಾಲಕ್ರಮದಲ್ಲಿ ಈ ಸ್ವಯಂವರ ಪದ್ಧತಿಯು ಆಚರಣೆಯಲ್ಲಿ ತರುವುದು ವಿರಳಗೊಂಡಿತು.
ರಾಜನ
ದೈನಂದಿನ ಚಟುವಟಿಕೆಗಳ ಬಗ್ಗೆಯೂ ಈ ಗ್ರಂಥದಲ್ಲಿ ಪ್ರಸ್ತಾಪವಿದೆ. ರಾಜ್ಯದ ಕೆಲವು
ಅಧಿಕಾರಿಗಳನ್ನು ಉಲ್ಲೇಖ ಮಾಡಿದ್ದಾನೆ ತ್ರಿವಿಕ್ರಮಭಟ್ಟ. ಮೃಗಯಾವನ, ಕ್ರೀಡಾವನದ ಪ್ರಸ್ತಾಪವಿದ್ದು ಅದರ ಪಾಲಕರಾಗಿ
ಸ್ತ್ರೀಯರಾಗಿ ನೇಮಿಸಲಾಗುತ್ತಿತ್ತು. ಅವರನ್ನು ವನಪಾಲಿಕೆ ಎಂದು ಕರೆಯಲಾಗುತ್ತಿತ್ತು.
ಮೃಗಯಾವನ್ನು ನೋಡಿಕೊಳ್ಳುವುದಕ್ಕಾಗಿ ವನಪಾಲಕರಿರುತ್ತಿದ್ದರು. ಸರಸ್ಸುಗಳನ್ನು ಸಂರಕ್ಷಿಸಲು
ಸರೋವರ ಪಾಲಿಕೆಯರಿರುತ್ತಿದ್ದರು. ವೈತಾಳಿಕರು ರಾಜನ ಸ್ತುತಿಪಾಠಕರಾಗಿದ್ದರು. ಪ್ರಹರಿಗಳು,
ಕುಬ್ಜಿಕರು, ವಾಮನಿಕರು, ದಮಯಂತಿಯ(ರಾಜಕುಮಾರಿಯ),
ದೂತಿಯರು, ಇವರುಗಳನ್ನೂ ಪ್ರಸ್ತಾಪಿಸಲಾಗಿದೆ.
ಜನಪದಗಳು :
ತ್ರಿವಿಕ್ರಮಭಟ್ಟನು ತತ್ಕಾಲೀನವಾದ ಕೆಲವು ಪ್ರಸಿದ್ಧ ನಗರ, ಜನಪದ, ನದಿ ಮುಂತಾದವುಗಳ ವರ್ಣನೆಯನ್ನು ಮಾಡಿದ್ದಾನೆ.
ದಕ್ಷಿಣ ಭಾರತಕ್ಕೆ ಸೇರಿದ ಈ ಕವಿ ಆ ಪ್ರದೇಶದ ವಿದರ್ಭ, ಕುಂಡಿನಪುರ,
ಕಂಚಿ, ಕುಂತಲ, ನಾಸಿಕ್ಯ,
ನಿಷಧ ಅಲ್ಲದೇ ಪ್ರಭಾಸತೀರ್ಥ, ಕಳಿಂಗ, ಅಂಗ, ಕಾಮರೂಪ, ಗೂರ್ಜರ, ಪಾರಸಿಕ, ಮಹಾರಾಷ್ಟ್ರ, ಮಗಧ,
ಮಧ್ಯದೇಶ, ವಂಗ, ಲಂಕ,
ಮುಂತಾದ ಇತರ ರಾಜ್ಯಗಳನ್ನೂ ತಪತೀ, ನರ್ಮದಾ, ಕಾವೇರಿ, ಗೋದಾವರಿ, ಪಯೋಷ್ಣೀ(ಪೂರ್ಣಾ),
ವರದಾ, ಮಂದಾಕಿನೀ, ನದಿಗಳನ್ನೂ,
ಗಂಧಮಾದನ, ಮಲಯ, ಮೇರು,
ವಿಂಧ್ಯಾಚಲ, ಹಿಮವಾನ್, ಮುಂತಾದ
ಪರ್ವತಗಳನ್ನೂ ಉಲ್ಲೇಖಿಸಿದ್ದಾನೆ.
ಅಂದಿನ
ಧಾರ್ಮಿಕ ಸ್ಥಿತಿಯನ್ನು ಕುರಿತ ಮಾಹಿತಿಯೂ ಸ್ವಲ್ಪ ಮಟ್ಟಿಗೆ ಈ ಗ್ರಂಥದಲ್ಲಿ ದೊರಕುತ್ತದೆ.
’ನಳಚಂಪೂ’ ಕಾವ್ಯದ ಎಲ್ಲ ಪಾತ್ರಗಳೂ ಶಿವಭಕ್ತರು. ಶೀವನ ಆರಾಧನೆಯ ನಂತರ ವಿಷ್ಣುವನ್ನು
ಪೂಜಿಸಲಾಗುತ್ತಿತ್ತು. ಶಿವನ ದರ್ಶನವನ್ನು ವಿನಾಯಕ, ಕಾರ್ತಿಕೆಯನ
ಜೊತೆ-ಜೊತೆಗೆ ಮಾಡುವುದನ್ನು ಅಧಿಕ ಪ್ರಶಸ್ತವೆಂದು ತಿಳಿಯಲಾಗುತ್ತಿತ್ತು. ’ನಳಚಂಪೂ’ವಿನ
ಪ್ರತಿಯೊಂದು ಉಚ್ಛ್ವಾಸವೂ "ಹರಿಚರಣಸರೋಜದ್ವಂದ್ವಮುಂದ್ರಾಙ್ಕಮೌಲೇಃ" ಎಂದು
ಕೊನೆಗೊಳ್ಳುತ್ತದೆ. ರಾಷ್ಟ್ರಕೂಟರು ಕೈಲಾಸನಾಥನಿಗೆ ದೇವಾಲಯವನ್ನು ನಿರ್ಮಿಸುವುದರ ಮೂಲಕ
ಶೈವಮತವನ್ನು ಪ್ರೋತ್ಸಾಹಿಸಿದರು ಎಂಬ ಅಂಶವನ್ನೂ ಕವಿಯು ವ್ಯಕ್ತಗೊಳಿಸಿದ್ದಾನೆ.
ಬ್ರಾಹ್ಮಣರು
ಷಟ್ಕರ್ಮನಿರತರಾಗಿದ್ದರು. ಅನ್ನದಾನಕ್ಕಾಗಿ ಛತ್ರಗಳನ್ನು ತೆರೆಯಲಾಗಿದ್ದಿತು. ಬ್ರಾಹ್ಮಣರಿಗೆ
ತಮ್ಮ ಪಂಚಯಜ್ಞ(ಹೋಮ, ತರ್ಪಣ, ಬಲಿಹರಣ, ಸ್ವಾಧ್ಯಾಯ, ವೈಶ್ವದೇವ)
ಗಳಿಗಾಗಿ ಅಗ್ರಹಾರಗಳನ್ನು ನೀಡಲಾಗಿದ್ದಿತು. ಕಪಿಲೆ ಗೋವುಗಳಿಗೆ ಗೋಗ್ರಾಸವನ್ನು ನೀಡುವ
ಪದ್ಧತಿಯೂ ಇದ್ದಿತು. ಕಾಗೆಗಳಿಗೆ ಬಲಿಹರಣ ನೀಡಲು ಎತ್ತರವಾದ ಕಂಬಗಳನ್ನು ನೆಡಲಾಗಿದ್ದತು.
ರಾಜರಿಂದಲೂ ವೈಶ್ವದೇವರಿಗೆ ಆಹುತಿ ಸಲ್ಲುತ್ತಿತ್ತು. ಯಜ್ಞವಿಧಿಗಳನ್ನು ನಡೆಸಲು ವೇದಾಧ್ಯಯನ
ಸಂಪನ್ನರಾದ ಬ್ರಾಹ್ಮಣರನ್ನು ನೇಮಿಸಲಾಗುತ್ತಿತ್ತು ಎಂದು ಸಮಕಾಲೀನ ಧಾರ್ಮಿಕ ಸ್ಥಿತಿಯನ್ನು
ವಿವರಿಸಿದ್ದಾನೆ ತ್ರಿವಿಕ್ರಮಭಟ್ಟ.
ವೇಷಭೂಷಣಗಳು
: ಜನರು ತಮ್ಮ ಯೋಗ್ಯತೆ ಮತ್ತು ಸ್ಥಿತಿಗನುಸಾರವಾಗಿ ವೇಷಭೂಷಣಗಳನ್ನು ಧರಿಸುತ್ತಿದ್ದರು. ಬಿಳಿ
ವಸ್ತ್ರಗಳನ್ನು ನಾಗರೀಕರು ವಿಶೇಷವಾಗಿ ಧರಿಸುತ್ತಿದ್ದರು. ರಾಜನನ್ನು ಹಿಂಬಾಲಿಸುವ ಬೇಟೆಗಾರರು ತಮ್ಮ
ಕೇಶಗಳನ್ನು ಕೆಸರಿನ ಬಣ್ಣದ ಬಟ್ಟೆಗಳನ್ನು ಕಟ್ಟುತ್ತಿದ್ದರು. ಅಶ್ವಾರೋಹಿಗಳಯ ಕೆಂಪು
ವಸ್ತ್ರಗಳನ್ನು ತೊಡುತ್ತಿದ್ದರು. ಸಾಮಾನ್ಯ ಜನರೂ ತಮ್ಮ ಯೋಗ್ಯತೆಗನುಸಾರವಾಗಿ ಶಿರೋಭೂಷಣ
ಧರಿಸುತ್ತಿದ್ದರು. ಶ್ರೀಮಂತರ ಪರಿಚಾರಕರೂ ತಮ್ಮ ವೇಷಭೂಷಣಗಳಿಂದ ಆಕರ್ಷಣೀಯರಾಗಿದ್ದರು.
ದರಿದ್ರಪಥಿಕರೂ ಲಂಗೋಟಿ ಮಾತ್ರ ಧಾರಿಗಳಾಗಿದ್ದರು. ಮಣ್ಣಿನ ಮಣಿಗಳ ಮಾಲೆಗಳ ಭೂಷಿತರಾಗಿ ಲತೆಯ
ಬಳ್ಳಿಯಿಂದ ತಮ್ಮ ಕೇಶಗಳನ್ನು ಕಟ್ಟುತ್ತಿದ್ದರು. ಶ್ರೀಮಂತರೂ ಹಾಗೂ ರಾಜ ಪರಿವಾರದವರೂ ಚೀನಾಂಶುಕ, ಪಟ್ಟಾಂಶುಕ ಮುಂತಾದ ಪಾರದರ್ಶಕ
ವಸ್ತ್ರಗಳನ್ನುಡುತ್ತಿದ್ದರು. ದಮಯಂತಿಯ ತಾಯಿ ಪ್ರಿಯಂಗುಮಂಜರಿಯು ದಮನಕಋಷಿಗೆ ಚೀನಾಂಶುಕ
ವಸ್ತ್ರಗಳನ್ನಿತ್ತು ಗೌರವಿಸಿದಳೆಂದು ಹೇಳಿದೆ. ಈ ಚೀನಾಂಶುಕ ಮತ್ತು ಪಟ್ಟಾಂಶುಕಗಳು
ಶ್ವೇತವಸನಗಳಾಗಿದ್ದವು.
ಭೋಜನ, ತರಕಾರಿಗಳು : ತ್ರಿವಿಕ್ರಮಭಟ್ಟನು ಪೇಯ, ಅಸ್ವಾದ್ಯ, ಆಲೇಹ್ಯ ಮತ್ತು ಕವಲ್ಯ ಎಂಬ ನಾಲ್ಕು ಬಗೆಯ
ಭೋಜ್ಯಗಳನ್ನು ಹೇಳಿದ್ದಾನೆ (ಸಪ್ತಮೋಚ್ಛ್ವಾಸ, ಶ್ಲೋಕ ೧೧). ಶಾಲೀ
ಮತ್ತು ಕುಸುಬಲಕ್ಕಿಗಳನ್ನು ಹೇಳಿದೆ. ಕಬ್ಬಿನ ರಸವನ್ನು ಮೆಣಸು ಏಲಕ್ಕಿಗಳೊಂದಿಗೆ ಸೇರಿಸಿ
ಕುಡುಯುತ್ತಿದ್ದರೆಂದು ಶಿಖರಣೀ(ಹಾಲು, ಬಾಳೆ ಹಣ್ಣು, ಮೊಸರು, ಏಲಕ್ಕಿ, ಲವಂಗ, ಪಂಚಕರ್ಪೂರ ಬೆರಕೆಯ ಪಾನೀಯ) ಪೇಯವೂ ಹೇಳಲ್ಪಟ್ಟಿದೆ. ದಾಕ್ಷಿಣತ್ಯ ಜನರು
ಮಾಂಸಾಹಾರದಲ್ಲಿ ಹೆಚ್ಚು ಅಭಿರುಚಿ ಹೊಂದಿರಲಿಲ್ಲ. ಊಟವಾದ ಮೇಲೆ ತಾಂಬೂಲವನ್ನು
ಸೇವಿಸುತ್ತಿದ್ದರು. ತುಪ್ಪದ ಜಿಡ್ಡನ್ನು ತೆಗೆಯಲು ಊಟವಾದ ಬಳಿಕ ಕೈಯನ್ನು ಚಂದನದ ಧೂಳಿನಿಂದ
ಉಜ್ಜಿ ತೊಳೆದುಕೊಳ್ಳಲಾಗುತ್ತಿತ್ತು. ಸ್ವಯಂವರದ ಸಮಯದಲ್ಲಿ ವರನ ಕಡೆಯ ಜನರಿಗೆ ಊಟವಾದ ಮೇಲೆ
ಅತ್ಯಂತ ಭವ್ಯವಾದ ಧೋತಿ ಮತ್ತು ಶಲ್ಯಗಳನ್ನು ನೀಡಲಾಗುತ್ತಿತ್ತು. ಪಾಕ ವಿಜ್ಞಾನವು ಉನ್ನತ
ದೆಸೆಯಲ್ಲಿತ್ತು. ದಮಯಂತಿ ನಳನಿಗಾಗಿ ಸ್ವಯಂ ಅಡಿಗೆ ಮಾಡಿ, ಭೋಜನವನ್ನು
ಕಳುಹಿಸುತ್ತಿದ್ದಳು. ಅಲ್ಲದೆ ಸೂಪಕಾರರು ಮತ್ತು ಪಾಚಕವೃಂದದವರು ಬಹಳ ಮಂದಿ ಇದ್ದರೆಂದು
ತ್ರಿವಿಕ್ರಮಭಟ್ಟನು ತಿಳಿಸಿದ್ದಾನೆ.
ಲಲಿತಕಲೆ:
ಲಲಿತಕಲೆಗಳಾದ ಚಿತ್ರ ಮತ್ತು ಸಂಗೀತ, ಇವುಗಳ ಬಗ್ಗೆ
ವಿವರಗಳಿವೆ. ಚಿತ್ರಕಲೆ ಪ್ರಗತಿ ಹೊಂದಿದ್ದಿತು. ರಾಗ ಪರಿವಾರದವರೂ ಚಿತ್ರಕಲೆಯಲ್ಲಿ ಪರಿಶ್ರಮ
ಹೊಂದಿದ್ದರು. ಗೋಡೆಗಳ ಮೇಲೆ ಚಿತ್ರ ಬಿಡಿಸುವುದು ವಾಡಿಕೆಯಲ್ಲಿತ್ತು. ಚಿತ್ರಕಲೆಯ
ಸೂಕ್ಷ್ಮಾಂಶಗಳಾದ ಶಿಶು, ಸಕಲ, ಸ್ವಸ್ತಿಕ,
ಪ್ರವರ್ಧಮಾನ ಮತ್ತು ಸರ್ವತೋಭದ್ರಗಳು ವಿದರ್ಭದ ರಾಜಧಾನಿ ಕುಂಡಿನಪುರದ ಮನೆಗಳ
ಗೋಡೆಗಳ ಮೇಲೆ ಇದ್ದಿದುರ ಬಗ್ಗೆ ವರ್ಣಿಸಿದ್ದಾರೆ. ಗ್ರಾಮ್ಯ ಸ್ತ್ರೀಯರೂ ಕೂಡ ಸ್ವಯಂವರಕ್ಕಾಗಿ
ಆಗಮನಿಸಿದ ನಳನ ಚಿತ್ರವನ್ನು ಬರೆಯಲುತ್ಸುಖರಾಗಿ ಇವನನ್ನು ತದೇಕಚ್ಛಿತ್ತರಾಗಿ
ನೋಡುತ್ತಿದ್ದರಂತೆ. ಮರದ ಪಟ್ಟಿಕೆಗಳ ಮೇಲೆಯೂ ಚಿತ್ರಗಳನ್ನು ಬಿಡಿಸುತ್ತಿದ್ದರು. ಇಂತಹ
ಚಿತ್ರಪಟ್ಟಿಕೆಗಳಿಂದಲೇ ಗೃಹವನ್ನೂ ನಿರ್ಮಿಸುತ್ತಿದ್ದರು. ಇಂತಹ ಚಿತ್ರ ಗೃಹಗಳನ್ನು ವಿಶೇಷವಾಗಿ
ರಾಜರು ತಮ್ಮ ಶಿಬಿರಕ್ಕಾಗಿ ಬಳಸುತ್ತಿದ್ದರು. ನಳನ ಶಿಬಿರವೂ ಇಂತದೇ ಚಿತ್ರಗೃಹವಾಗಿತ್ತೆಂದೂ
ಅದರಲ್ಲಿ ಎರಡು ಸಿಂಹಾಸನಗಳಿದ್ದು ಅವುಗಳ ಮೇಲೆ ಕರ್ನಾಟಕದ ರಮಣಿಯರ ಚಿತ್ರಗಳು ಸಿಂಹಾಸನದ
ಕೈಚಾಚುಗಳ ಮೇಲೆ ಸರ್ಪಸಮೂಹವನ್ನೂ ಕೆತ್ತಲಾಗಿತ್ತು. ಮಣಿಗಳನ್ನೂ ಜೋಡಿಸಲಾಗಿತ್ತು.
ಎಲ್ಲ ವರ್ಗದ
ಜನರೂ ಸಂಗೀತದಲ್ಲಿ ಅಭಿರುಚಿಯನ್ನು ಹೊಂದಿದ್ದರು. ಷಡ್ಜ, ಮಧ್ಯಮ ಮತ್ತು ಗಾಂಧಾರ ರಾಗಗಳಿಗೆ ಸಮಾಜದಲ್ಲಿ ಅಪಾರ ಮನ್ನಣೆಯಿತ್ತು. ವೀಣೆ, ಮೃದಂಗ, ನಗಾರ, ಝಾಲ ಮತ್ತು
ವಂಶಿ(ಕೊಳಲು) ಈ ಕಾಲದ ಮುಖ್ಯ ಸಂಗೀತವಾದ್ಯಗಳಾಗಿದ್ದವು.
ಈ ಮೇಲಿನ
ತ್ರಿವಿಕ್ರಮಭಟ್ಟನು ’ನಳಚಂಪೂ’ ಕೃತಿಯಲ್ಲಿ ನೀಡಿರುವ ವರ್ಣನೆಗಳಿಂದ ರಾಷ್ಟ್ರಕೂಟರ ಕಾಲದಲ್ಲಿ
ಜನರ ಸಭ್ಯತೆ ಮತ್ತು ಸಂಸ್ಕೃತಿಯು ಅತ್ಯಂತ ಉನ್ನತ ಮಟ್ಟದಲ್ಲಿದ್ದಿತೆಂದು ಸ್ಫಷ್ಟವಾಗಿ
ಹೇಳಬಹುದಾಗಿದೆ.
No comments:
Post a Comment