Tuesday, October 22, 2013

ಕೆಳದಿ ಇತಿಹಾಸ ವಿಶ್ವ ಕೋಶ- ಡಾ. ಕೆಳದಿ ಗುಂಡಾಜೋಯಿಸ್‌



ಡಾ.ಕೆಳದಿ ಗುಂಡಾಜೋಯಿಸ್


ಡಾ. ಕೆಳದಿ ಗುಂಡಾ ಜೋಯಿಸ್‌
 ಕೆಳದಿ ರಾಜವಂಶದ ಇತಿಹಾಸವನ್ನು ಜನಜನಿತ ಮಾಡುವ ಕಾರ್ಯದಲ್ಲಿ ಕೆಳದಿ ಅರಸರ ಆಸ್ಥಾನದಲ್ಲೇ ಆಶ್ರಿತರಾಗಿದ್ದ ಕವಿ ಮತ್ತು ಜೋಯಿಸ್‌ರ  ವಂಶದ ಕುಡಿಯೊಂದು  ಇಡೀ ಜೀವಮಾನವನ್ನೇ ಮುಡಿಪಿರಿಸಿ. ಕರ್ನಾಟಕದ ಪ್ರಮುಖ ರಾಜ್ಯವಾಗಿದ್ದ ಕೆಳದಿಯ ಇತಿಹಾಸದ ಓಡಾಡುವ ವಿಶ್ವ ಕೋಶವಾಗಿ,  ಜೀವಮಾನವನ್ನೆ   ತಾವು ಜನಿಸಿದ ಊರಿನ ಮತ್ತು ವಂಶಪಾರಂಪರೆಯಿಂದ ಸಂಬಂಧವಿದ್ದ  ಅಲ್ಲಿನ ರಾಜಮನೆತನದ ಹಿರಿಮೆ  ಮೆರೆಸಲು    ವೈಯುಕ್ತಿಕ ಪ್ರಯತ್ನದಿಂದ ಹಿಂದೆ ಆಡಳಿತ ಕೇಂದ್ರವಾಗಿದ್ದ ಆದರೆ ಇಂದು ಪುಟ್ಟ ಗ್ರಾಮವಾಗಿರುವ   ಕೆಳದಿಯಲ್ಲಿ   ಒಂದು ವಸ್ತು ಸಂಗ್ರಹಾಲಯವನ್ನೇ ಸ್ಥಾಪಿಸಿದ ಅತಿ ವಿರಳ ಇತಿಹಾಸಕಾರರಲ್ಲಿ  ಒಬ್ಬರು ಡಾ. ಕೆಳದಿ ಗುಂಡಾ ಜೋಯಿಸ್‌.

ಸಂಶೋಧನಾ ನಿರತರು
ಕರ್ನಾಟಕದಲ್ಲಿರುವ ಅನೇಕ ಖ್ಯಾತ  ಲಿಪಿತಜ್ಞರು ಇರುವರು.ಪ್ರಾಚೀನ ಬರಹಗಳನ್ನು ಓದುವವರು ಇಲ್ಲದಿಲ್ಲ. ಆದರೆ ಮಧ್ಯಕಾಲೀನ ಐತಿಹಾಸಿಕ ದಾಖಲೆಗಳನ್ನು ಅದರಲ್ಲೂ ಮೈಸೂರು , ಕೆಳದಿ ಮತ್ತು ಉತ್ತರ ಕರ್ನಾಟಕದಲ್ಲಿ ಲೆಕ್ಕ ಪತ್ರಗಳನ್ನು ಇಡಲು  ಮತ್ತು ಗೌಪ್ಯ ಪತ್ರವ್ಯವಹಾರಕ್ಕೆ ಬಳಸಿದ ವಿಶೇಷ ಲಿಪಿಯ ಮೋಡಿ  ಮತ್ತು ವಿಶೇಷವಾಗಿ ತಮಿಳು ಮತ್‌ಉ ಸಂಸ್ಕೃತ ಛಾಯೆಯ ತಿಗಳಾರಿ ಲಿಪಿ  ಓದುವಲ್ಲಿ ಪರಿಣಿತರೆಂದರೆ ಕೆಳದಿಯ ಗುಂಡಾಜೋಯಿಸರು.ಗುಂಡಾಜೋಯಿಸರು ಜನಿಸಿದ್ದು ೨೭-೦೯-೧೯೩೧ರಲ್ಲಿ ಐತಿಹಾಸಿಕ ಸ್ಥಳವಾದ ಕೆಳದಿಯಲ್ಲಿ. 





ಅಧ್ಯಯನದಲ್ಲಿ
ತಂದೆ  ನಂಜುಂಡೇ ಜೋಯಿಸರು  ಪುರೋಹಿತರು ಹಾಗೂ  ಸಣ್ಣ ಹಿಡುವಳಿದಾರರು.. ತಲತಲಾಂತರದಿಂದ ಬಂದ ಮನೆ  ಮತ್ತು ಹೆಸರಾಂತ ಮನೆತನ ಬಿಟ್ಟರೆ ಅಂಥಹ ಸ್ಥಿತಿವಂತರು ಏನಲ್ಲ. ಅರಸರ ಕಾಲದಿಂದಲೂ ಬಂದು ತುಸು ಜಮೀನು  ಇತ್ತು ಆದರೆಜೊತೆ ಊರಲ್ಲಿ ಜೋಯಿಸರೆಂಬ ಗೌರವ. ಮೂರು ಸೋದರರು ಮತ್ತು ಮೂವರು ಸೋದರಿಯರಿರುವ ತುಂಬು ಕುಟುಂಬ ಅವರದ್ದಾಗಿತ್ತು.ಪ್ರಾಥಮಿಕ ವಿದ್ಯಾಭ್ಯಾಸ ಕೆಳದಿಯಲ್ಲೆ ಆಯಿತು .ದುರದೃಷ್ಟವಶಾತ್  ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡರು. ಆದರೆ ತಾಯಿ ಮೂಕಾಂಬಿಕಾ ( ಮೂಕಮ್ಮ  ಎಂಬುದು ಮುದ್ದಿನ ಹೆಸರು) ,’ಕೆಳದಿ ನೃಪ ವಿಜಯ”   ಬರೆದ ಕವಿ ಎಸ್‌.ಕೆ  ಲಿಂಗಣ್ಣಯ್ಯನ ಕುಟುಂಬದವರು. ಅವರು ಬಹಳ ದೈವ ಭೀರು ಆದರೆ  ಧೈರ್ಯಶಾಲಿ.ಚಿಕ್ಕವಯಸ್ಸಿನಲ್ಲಿಯೇ ಪತಿ ಮೃತರಾದರೂ  ಮಕ್ಕಳ ಏಳಿಗೆಯಲ್ಲಿಅವರ  ಮಾರ್ಗದರ್ಶನದ ಪಾತ್ರ ಬಹಳ ಹಿರಿದು. ಗುಂಡಾಜೋಯಿಸರ ಹೈಸ್ಕೂಲ ಶಿಕ್ಷಣ ಬೆಂಗಳೂರಿನಲ್ಲಿ ಆಯಿತು. ಕುಟುಂಬದ ಆರ್ಥಿಕ ಸ್ಥಿತಿ ಯಿಂದಾಗಿ ಕಾಲೇಜು ಶಿಕ್ಷಣದಿಂದ ವಂಚಿತರಾದರು. ಚಿಕ್ಕವಯಸ್ಸಿನಲ್ಲೇ ಉದ್ಯೋಗ ಪರ್ವಪ್ರಾರಂಭ ವಾಯಿತು.ಮೊದಲು ಗ್ರಾಮ ಲೆಕ್ಕಿಗರಾಗಿ ಕೆಲಸ ಮಾಡಿದರು
 ಮದುವೆಯೂ ಸೊದರಿಕೆಯಲ್ಲಿನ  ಶ್ರೀಮತಿ  ಶಾರದಾ ಅವರೊಡನೆ.  ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು. ಹಿರಿಯಮಗ  ಡಾ.ಕೆ.ಜಿ  ವೆಂಕಟೇಶ ಜೋಯಿಸ್‌ ತಂದೆಯ ಜಾಡಿನಲ್ಲೇ ನಡೆಯುವ ಇತಿಹಾಸ ತಜ್ಞ , ಕೆಳದಿ ಮ್ಯೂಜಿಯಂನ  ಕ್ಯುರೇಟರ್‌


 
ಗ್ರಾಮ ಲೆಕ್ಕಿಗರಾದಾಗ .ವೃತ್ತಿನಿಮಿತ್ತ ಓಡಾಟ ಮಾಡ ಬೇಕಿತ್ತು. ಆ ಸಮಯದಲ್ಲಿ ಅವರಿಗೆ ಹಳೆಯ ದಾಖಲೆಗಳ ಪರಿಶೀಲನೆಯ ಅಗತ್ಯ ಬೀಳುತಿತ್ತು. ಪರಿಣಾಮವಾಗಿ ಮೋಡಿ ಲಿಪಿಯನ್ನು ಓದುವುದನ್ನು ಕಲಿತರು. ಗುಂಡಾಜೋಯಿಸರಿಗೆ ಗ್ರಾಮಲೆಕ್ಕಿಗರಾದಾಗ ಹಳ್ಳಿಗರ ಸಂಪರ್ಕ ಹೆಚ್ಚು ಬರುತಿತ್ತು. ಜೊತೆಗೆ ಹಳ್ಳಿಗಳ ಸುತ್ತಾಟದಲ್ಲಿ ಕೆಳದಿ ಅರಸರ ಆಳ್ವಿಕೆಯಅವಧಿಯ ಅನೇಕ ದಾಖಲೆಗಳು ಲಭ್ಯವಾದವು. ಪರಿಣಾಮ ಕೆಳದಿಯ ಇತಿಹಾಸದತ್ತ ಅವರ ಒಲವು ಹೆಚ್ಚಾಯಿತು. ಅವರ ಚಿಕ್ಕಪ್ಪ ಬ.ನ ಸುಂದರರಾಯರು  ಇತಿಹಾಸದ ಆಸಕ್ತಿ ಮೂಡಿಸಿದರು. ಕೆಳದಿಯ ವಿದ್ವಾಂಸ ಶ್ರೀನಿವಾಸ ಭಟ್‌ರಿಂದ ತಿಗಳಾರಿ ಲಿಪಿ ಮತ್ತು ಮೋಡಿ ಲಿಪಿಗಳಲ್ಲಿ ಮಾರ್ಗದರ್ಶನ ದೊರೆಯಿತು.
ಕೆಳದಿಯ ಅರಸರ ಕಾಲದಲ್ಲಿ,ಮೈಸೂರು ಅರಸರ ಕಾಲದಲ್ಲಿ ಸರ್ಕಾರಿ ದಾಖಲೆ ಮತ್ತು ವ್ಯಾಪಾರ ವಾಣಿಜ್ಯಗಳನ್ನು ಮೋಡಿ ಲಿಪಿಯಲ್ಲೆ ಬರೆಯುತಿದ್ದರು. ವಿಶೇಷವಾಗಿ ಹೈದರಾಲಿಕಾಲದಲ್ಲಿ ಮೈಸೂರು ಅರಸರ ಲೆಕ್ಕ ಪತ್ರಗಳನ್ನು ಮರಾಠಿ ಮತ್ತು ಉರ್ದುಭಾಷೆಗಳಲ್ಲಿ ಏಕಕಾಲದಲ್ಲಿ ಬರೆಯುತಿದ್ದರು ಮರಾಠಿಯ ಲೆಕ್ಕ ಪತ್ರ ನಿರ್ವಹಿಸಲು ಮಹರಾಷ್ಟ್ರಮೂಲದ ಕರಣಿಕರು ಇರುತಿದ್ದರು. ಅವರು ಮೋಡಿ ಲಿಪಿಯಲ್ಲಿ ಬರೆಯುತಿದ್ದರು.ಮೋಡಿ ಎಂಬುದು ವೇಗವಾಗಿ ಬರೆಯಲು ಮರಾಠರು ರೂಢಿಸಿಕೊಂಡ ಬರೆಯುವ ವಿಧಾನ. ಅದರ ವಿಶೇಷತೆ ಎಂದರೆ ಬರೆಯಲು ಶುರು ಮಾಡಿದರೆ ಲೇಖನಿ ಎತ್ತದೆ ವಾಕ್ಯ ಮುಗಿಯುವವರೆಗೆ ಬರೆಯುತ್ತಲೇ ಹೋಗುವುದು. ಲೇಖನ ಚಿಹ್ನೆಗಳಿಗೆ ಮಧ್ಯದಲ್ಲಿ ಅವಕಾಶವೇ ಇರದು. ಅದು ಒಂದು ರೀತಿಯ ಕೂಡು ಬರಹ ಮತ್ತು ಶೀರ್ಘಲಿಪಿಗಳ ಸಂಕರ ಎನ್ನ ಬಹುದು ತಮ್ಮ ಅನುಭವ ಮತ್ತು ಅಧ್ಯಯನದಿಂದ ನಮ್ಮ ರಾಜ್ಯದಲ್ಲಿನ ತಿಗಳಾರಿ ಮತ್ತು ಮೋಡಿ ಲಿಪಿಗಳ ತಜ್ಞರಲ್ಲಿ ಇವರು ಪ್ರಮುಖರಾದರು, ಇವರು ಹಳೆಯ ಕೈಬರಹ, ಮೋಡಿಲಿಪಿ ಮತ್ತು ತಿಗಳಾರಿ ಲಿಪಿಗಳನ್ನು ಓದುವಲ್ಲಿ ಶ್ರೇಷ್ಠ ಪರಿಣಿತರು. ವಿರಳವಾದ ಮತ್ತು ಮಹತ್ವದ ಅನೇಕ ಸಂಗತಿಗಳನ್ನು ಮೂಲಕ ಬೆಳಕಿಗೆ ತಂದ ಕೀರ್ತಿ ಇವರದು.  ಇವರಿಂದ ವಿದ್ವಾಂಸ ಎ..ಕೆ. ಶಾಸ್ತ್ರಿ  ಹಾಗೂ ಅನೇಕ ಅಧಿಕಾರಿಗಳು ಮಾರ್ಗದರ್ಶನ ಪಡದಿದ್ದಾರೆ.ಇತಿಹಾಸದ ಆಸಕ್ತಿ ಹೆಚ್ಚಿದಂತೆ ಕಲಿಕೆಯ ಕಾರ್ಯವನ್ನೂ ಮುಂದುವರಿಸಿದರು . ಕನ್ನಡ ಪಂಡಿತ, ಆಗಮ ವೇದ ವಿದ್ವಾನ್, ಕನ್ನಡ ರತ್ನ, ಹಿಂದಿ ಪ್ರಬೋಧ ಪರೀಕ್ಷೆಗಳಲ್ಲಿಯೂ ತೇರ್ಗಡೆಯಾಗಿರುವ ಇವರು ಮುಕ್ತ ವಿಶ್ವ ವಿದ್ಯಾಲಯದ  ಇತಿಹಾಸ ವಿಷಯದಲ್ಲಿ ಎಮ್.. ಪದವಿ ಪಡೆದರು.
ಅಧ್ಯಕ್ಷ ಭಾಷಣ

          ಅವರು ಮಧ್ಯದಲ್ಲಿ ವೃತ್ತಿ ಬದಲಿಸಿದರೂ ಪ್ರವೃತ್ತಿ ಬದಲಾಗಲಿಲ್ಲ.  ಕೆಳದಿಗೆ ಸಂಬಂಧಿಸಿದ ಪ್ರಾಚೀನ ವಸ್ತುಗಳ ಮತ್ತು ತಾಳೆಯೋಲೆ ಕಟ್ಟುಗಳ ಶಾಸನ ಮತ್ತು ತಾಮ್ರಪಟಗಳ  ಮತ್ತು ಆ ಕಾಲದಲ್ಲಿ ಬಳಸುತಿದ್ದ ಪುರಾತನ ವಸ್ತುಗಳನ್ನು ಜನರ ಮನ ಒಲಿಸಿ ಸಂಗ್ರಹಿಸಿದರು. ಅದಕ್ಕಾಗಿ ಅನೇಕ ಸಲ ಸಂಪರ್ಕ ಸೌಲಭ್ಯಇಲ್ಲದ್ದರಿಂದ  ಕಾಲುನಡಗೆಯಲ್ಲಿ ವಸ್ತುಗಳನ್ನು ಹೊತ್ತು ಕೊಂಡು ಬರಬೇಕಾಗುತಿತ್ತು. ಹೀಗೆ ಪ್ರಾಚ್ಯವಸ್ತು ಸಂಗ್ರಹ ಮುಂದುವರಿಯಿತು. ಅವರ ಮನೆಯೆ ಕಿರು ವಸ್ತುಸಂಗ್ರಹಾಲಯವಾಯಿತು.  ಅವರು ಬರಿ ಸಂಗ್ರಹದಿಂದ ತೃಪ್ತಿ ಪಡಲಿಲ್ಲ. ಅವುಗಳನ್ನು ಅಧ್ಯಯನಮಾಡಿ ಸಂಪ್ರಬಂಧಗಳನ್ನು , ಸಂಶೋಧನಾ ಲೇಖನಗಳನ್ನು  ಪ್ರಕಟಿಸಿರುವರು. ೩೦ಕ್ಕೂ ಹೆಚ್ಚು ಇತಿಹಾಸ ಸಂಶೋಧನೆಯ ಕೃತಿಗಳು, ೨೫೦ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು, ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರ ಎಲ್ಲಾ ಕೃತಿಗಳು ದಾಖಲೆಗಳನ್ನು ಆಧರಿಸಿದ್ದು ಸತ್ಯಶೋಧನೆಯ ಫಲಗಳಾಗಿವೆ.  ಇವರ ೧೭ನೆಯ ಶತಮಾನದ ಕವಿ ಲಿಂಗಣ್ಣ ರಚಿಸಿದ ಕೆಳದಿನೃಪ ವಿಜಯ ಕಾವ್ಯದ  ಸರಳ  ಗದ್ಯಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿಸಿದೆ.ಅದು ಈಗಾಗಲೇ ಮೂರು ಮುದ್ರಣಗಳನ್ನು ಕಂಡಿದೆ ಹಿಂದಿ ಮತ್ತು ಇಂಗ್ಲಿಷ್‌ಗೂ ಅನುವಾದಗೊಂಡಿದೆ.  ಅವರ ಹೆಚ್ಚಿನ ಕೃತಿಗಳು ಕೆಳದಿ ಅರಸರು, ಅವರ ಕಾಲದ ಇತಿಹಾಸ, ಸಾಹಿತ್ಯಗಳಿಗೆ ಸಂಬಂಧಿಸಿವೆ.ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸೆಮಿನಾರುಗಳಲ್ಲಿ ಭಾಗವಹಿಸಿರುವರು.
ಶ್ರೀ ಎಂ ಪಿ. ಪ್ರಕಾಶ್ ರಿಂದ ಪ್ರಾಚ್ಯ ವಸ್ತು ವೀಕ್ಷಣೆ
ಸುಮಾರು ೫೦-೫೫ ವರ್ಷಗಳ ಹಿಂದೆ ಕರ್ನಾಟಕ ಪ್ರಾಚ್ಯವಸ್ತು ಸಂಗ್ರಹಾಲಯದ ನಿರ್ದೇಶಕರಾಗಿದ್ದ ಡಾ. ಶೇಷಾದ್ರಿಯವರು ಸರ್ವೇಕ್ಷಣೆಗಾಗಿ ಕೆಳದಿಗೆ ಬಂದವರು ಗುಂಡಾಜೋಯಿಸರ ಮನೆಯಲ್ಲಿದ್ದ ಪ್ರಾಚೀನ ಮತ್ತು ಅಮೂಲ್ಯ ವಸ್ತುಗಳ ಸಂಗ್ರಹ ಕಂಡು ಬೆರಗಾದರು.. ಸರ್ಕಾರ ಅವುಗಳ ರಕ್ಷಣೆ ಮಾಡುವುದು ಅಗತ್ಯವನ್ನು ಮನಗಂಡು ಸರಕಾರದೊಂದಿಗೆ ವ್ಯವಹರಿಸಿ ರೂ.೬೦೦೦೦/- ಪರಿಹಾರ ಕೊಟ್ಟು ವಸ್ತುಗಳನ್ನು ಮೈಸೂರು ಮತ್ತು ಬೆಂಗಳೂರು ವಸ್ತುಸಂಗ್ರಹಾಲಯದಲ್ಲಿ ಇರಿಸಲು ಗುಂಡಾಜೋಯಿಸ್ ಕುಟುಂಬದವರ ಒಪ್ಪಿಗೆ ಪಡೆದರು. ಆದರೆ ಅಂದಿನ ಜಿಲ್ಲಾಧಿಕಾರಿ ಶ್ರೀ ಸತೀಶ್ ಚಂದ್ರನ್ ರವರು. ಪ್ರಾಚೀನ ವಸ್ತುಗಳನ್ನು ಹಸ್ತಾಂತರ ಮಾಡುವ ವಿಚಾರದಲ್ಲಿ ಪರಿಶೀಲನೆಗೆ ಬಂದಾಗ ಗುಂಡಾಜೋಯಿಸರ ಬಳಿಯಿದ್ದ ತಾಳೆಗರಿಗಳು, ಹಳೆಯ ಜಾನಪದ ವಸ್ತುಗಳು, ಕಡತಗಳು, ತಾಳೆಗರಿಗಳು, ಮುಂತಾದುವನ್ನು ಕಂಡು ಬೆರಗಾದರು. ಆ ಐತಿಹಾಸಿಕ ಸಂಗ್ರಹಾಲಯವು  ಕೆಳದಿಯಲ್ಲಿಯೇ ಇರುವುದು ಒಳ್ಳೆಯದೆಂದು ಭಾವಿಸಿ ಸರ್ಕಾರದ ಒಪ್ಪಿಗೆ ಮತ್ತು ಅನುದಾನ ಪಡೆದು ಗುಂಡಾಜೋಯಿಸರ ಮನೆಯ ಪಕ್ಕದ ಆವರಣದಲ್ಲಿ ಕೆಳದಿ ವಸ್ತು ಸಂಗ್ರಹಾಲಯ ಮತ್ತು ಇತಿಹಾಸ ಸಂಶೋಧನಾ ಕೇಂದ್ರದ ಸ್ಥಾಪನೆಗೆ ಕಾರಣಕರ್ತರಾದರು.ಅದರ ಹೊಣೆ ಗುಂಡಾ ಜೋಯ್ಸರಿಗೆ ಒಪ್ಪಿಸಿದರು.
ಹಸ್ತಪ್ರತಿಗಳು
ತುರ್ತುಪರಿಸ್ಥಿತಿಯ ಸಮಯದಲ್ಲಿ ಕೆಲವರ ಚಿತಾವಣೆಯಿಂದ  ವಸ್ತುಸಂಗ್ರಹಾಲಯವನ್ನು ಸೂಪರ್ ಸೀಡ್ ಮಾಡಲು ಸರ್ಕಾರ ಮುಂದಾಗಿತ್ತು. ಆಗ ನೆರವಿಗೆ ಬಂದವರು ಆಗ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ  ಶ್ರೀ ಸತೀಶ್ ಚಂದ್ರನ್ ರವರು. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿನ ಅಪೂರ್ವವೆನಿಸಿರುವ ವಸ್ತು ಸಂಗ್ರಹಾಲಯ ಕೆಳದಿಯಲ್ಲೇ ಉಳಿಯಿತು.
     ಗುಂಡಾಜೋಯಿಸರ ಶ್ರಮದಿಂದ ಸಣ್ಣ ಪ್ರಮಾಣದಲ್ಲಿ ಆರಂಭಗೊಂಡ ಸಂಸ್ಥೆ ಕ್ರಮೇಣ ಹಲವರ ಸಹಕಾರದಿಂದ  ದೊಡ್ಡದಾಗಿ ಬೆಳೆದಿದೆ. ೧೯೮೭-೮೯ರಲ್ಲಿ ಹೊಸ ಕಟ್ಟಡ ನಿರ್ಮಾಣವಾಗಿದೆ. ಇದಕ್ಕೆ ಜೋಯಿಸರು ಭೂಮಿದಾನ ನೀಡಿದ್ದಾರೆ. ಈಗ ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಹಸ್ತಾಂತರಗೊಂಡಿರುವ ವಸ್ತು ಸಂಗ್ರಹಾಲಯ ಹೊಸ ಕಟ್ಟಡದಲ್ಲಿದೆ. ಗುಂಡಾಜೋಯಿಸರು ತಮ್ಮ ಶ್ರಮದಿಂದ ಸಂಗ್ರಹಿಸಿದ ಎಲ್ಲಾ ವಸ್ತುಗಳನ್ನು ಪ್ರತಿಫಲಾಪೇಕ್ಷೆಯಿಲ್ಲದೆ ನೀಡಿರುವುದು ವಿಶೇಷವೇ ಸರಿ. ಹಳೆಯ ಕಾಲದ ವಿಗ್ರಹಗಳು, ಕಾಷ್ಠಶಿಲ್ಪಗಳು, ವರ್ಣಚಿತ್ರಗಳು, ತುಕ್ಕು ಹಿಡಿದಿದ್ದರೂ ಅಂದಿನ ಕಥೆ ಹೇಳುವ ಆಯುಧಗಳು, ನಾಣ್ಯಗಳು, ಬೀಗಗಳು, ರಾಜ-ರಾಣಿಯರ ಉಡುಪುಗಳು, ಶಾಸನಗಳು, ವೀರಗಲ್ಲುಗಳು, ತಾಡೆಯೋಲೆಗಳು, ಹಸ್ತಪ್ರತಿಗಳು, ಮುಂತಾದವು ಅಮದಿನ ಇತಿಹಾಸವನ್ನು ಕಣ್ಣಿಗೆ ಕಟ್ಟುವಂತೆ ತಿಳಿಸುವವು.
ಕೆಳದಿಯ ರಾಮೇಶ್ವರ ದೇವಸ್ಥಾನ

ಕವಿ ಶ್ರೀ ಎಸ್.ಕೆ. ಲಿಂಗಣ್ಣಯ್ಯನವರ ರಚನೆಯ ಅದ್ಭುತವೆನಿಸುವ ಕಲಾಕೃತಿಗಳು ಎಲ್ಲರ ಮನಸೆಳೆಯುತ್ತವೆ. ಅವರ ಗಾರ್ಡಿಯನ್ ಏಂಜಲ್ ಆಫ್ ಬ್ರಿಟಿಷ್ ಎಂಪೈರ್ ಚಿತ್ರದಲ್ಲಿ ಆಂಗ್ಲರ ಆಡಳಿತಕಾಲದಲ್ಲಿದ್ದ ದೇಶಗಳನ್ನು ವಿಕ್ಟೋರಿಯಾ ರಾಣಿಯ ಚಿತ್ರದಲ್ಲಿ ರೂಪಿಸಿದ್ದು ಅದರಲ್ಲಿ ಭಾರತ ಹೃದಯಭಾಗದಲ್ಲಿರುವಂತೆ ಚಿತ್ರಿಸಿರುವುದು ವಿಶೇಷ. ಕಲಾತಜ್ಞರ ಪ್ರಕಾರ ಚಿತ್ರ ಲಕ್ಷಾಂತರ ರೂ. ಮೌಲ್ಯವುಳ್ಳದ್ದಾಗಿದೆ. ಸುಮಾರು ೧೮೦೦ ಚಿತ್ರಗಳಿರುವ ಚಿತ್ರರಾಮಾಯಣ, ಚಿತ್ರಭಾಗವತಗಳೂ ಇಲ್ಲಿ ಕಾಣಸಿಗುತ್ತವೆ. ಕವಿಮನೆತನದ ವಂಶವೃಕ್ಷವನ್ನು ಸಹ ಇಲ್ಲಿ ನೋಡಬಹುದು. ಅಸಂಖ್ಯ ಕನ್ನಡ, ತೆಲುಗು, ತಮಿಳು, ತಿಗಳಾರಿ, ದೇವನಾಗರಿ ಲಿಪಿಗಳಲ್ಲಿರುವ ಓಲೆಗರಿ ಕಟ್ಟುಗಳಿದ್ದು ಅಧ್ಯಯನಯೋಗ್ಯವಾಗಿವೆ. ಧರ್ಮಶಾಸ್ತ್ರ, ಸಂಗೀತ, ಆಯುರ್ವೇದ, ಇತಿಹಾಸ, ಇತ್ಯಾದಗಳಿಗೆ ಸಂಬಂಧಿಸಿದ ಓಲೆಗರಿಗಳಿವೆಯೆಂದು ತಿಳಿದುಬರುತ್ತದೆ. ಕೃಷ್ಣದೇವರಾಯನ ದಿನಚರಿ, ನವಾಬ್ ಹೈದರಾಲಿಯ ಸಹಿಯುಳ್ಳ ದಾಖಲೆ, ಸರ್ವಜ್ಞನ ಪೂರ್ವಾಪರ ತಿಳಿಸುವ ತಾಡಪತ್ರ, ಶ್ರೀ ಶಂಕರಾಚಾರ್ಯರ ಅಪ್ರಕಟಿತ ಸ್ತೋತ್ರಗಳು, ಗದಗದ ತೋಂಟದಾರ್ಯ ಮಠದ ಚಿನ್ನದ ಪಾದುಕೆಗಳಲ್ಲಿರುವ ಕೆಳದಿಯ ಶಾಸನ ಹಾಗೂ ರೇಖಾಚಿತ್ರವಿದ್ದ ಸಂಶೋಧನಾತ್ಮಕ ಕೃತಿಗಳು, ವಿಜಯನಗರದ ದೇವರಾಯನ ಅಂಕಿತದ ತಾಮ್ರಶಾಸನ, ಹೀಗೆ ನೂರಾರು ಅಮೂಲ್ಯ ಪ್ರಾಚೀನ ಸಂಪತ್ತು ಇಲ್ಲಿ ರಕ್ಷಿಸಲ್ಪಟ್ಟಿದ್ದು ಇವುಗಳ ಮಹತ್ವವನ್ನು ಬಿತ್ತರಿಸುವ ನೈಜ ಇತಿಹಾಸ ಹೊರತರುವ ಕೆಲಸ ಆಗಬೇಕಿದೆ. ಕುವೆಂಪು ವಿಶ್ವವಿದ್ಯಾನಿಲಯ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲು ವಿಪುಲ ಆಕರಗಳು, ಅವಕಾಶಗಳು ಇವೆ. ಇಲ್ಲಿಯ ತಾಡೆಯೋಲೆ ಸಂಗ್ರಹ ಮತ್ತು ವೈಜ್ಞಾನಿಕ ರೀತಿಯ ರಕ್ಷಣೆಗಾಗಿ ಕೇಂದ್ರ ಸರಕಾರ ಇದನ್ನು ಹಸ್ತಪ್ರತಿ ಸಂಪನ್ಮೂಲ ಕೇಂದ್ರವಾಗಿ ಗುರುತಿಸಿದೆ. ಈಗ ಸರಕಾರ ಇದನ್ನು ಕುವೆಂಪು ವಿಶ್ವವಿದ್ಯಾನಿಲಯದ ಜೊತೆ ವಿಲೀನಗೊಳಿಸಿದೆ. ಇತ್ತೀಚೆಗೆ ಇಕ್ಕೇರಿಯ ಹಳೆರಥವನ್ನು ವಸ್ತುಸಂಗ್ರಹಾಲಯದ ಸಂಗ್ರಹಕ್ಕೆ ಸೇರಿಸಿಕೊಳ್ಳಲಾಗಿದೆ.


ಕೆಳದಿಯ ಮ್ಯೂಜಿಯಂ


 ಹೀಗೆ ಸಂಸ್ಥೆಯೊಂದು ಮಾಡಲಾಗದ  ಇತಿಹಾಸರಕ್ಷಣೆಯ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದ ಅವರ ಸಾಧನೆ ಗುರುತಿಸಿ ಹಲವಾರು ಪ್ರಶಸ್ತಿ, ಸನ್ಮಾನಗಳು ಇವರನ್ನು ಅರಸಿ ಬಂದಿವೆ. ೧೯೯೪ರಲ್ಲಿ ರಾಜ್ಯ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಇತಿಹಾಸ ಅಕಾಡೆಮಿಯ ಆಜೀವ ಸದಸ್ಯರಾಗಿರುವ ಇವರು ೨೦೦೪ರಲ್ಲಿ ಹೊನ್ನಾಳಿಯಲ್ಲಿ ನಡೆದ ಅಕಾಡೆಮಿಯ ವಾರ್ಷಿಕ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರ ಸಾಧನೆಯನ್ನು ಕೆಳದಿ ರಾಜಗುರು ಹಿರೇಮಠ ಗುರುತಿಸಿ ಕೆಳದಿ ಇತಿಹಾಸ ಸಂಶೋಧನಾ ರತ್ನ ಎಂಬ ಪ್ರಶಸ್ತಿ ನೀಡಿರುವರು, ಬಿರುದು ನಿಜಕ್ಕೂ ಅರ್ಥಪೂರ್ಣವಾಗಿದೆ. ವಿಶ್ವ ಹಿರಿಯನಾಗರಿಕರ ದಿನಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ಸರ್ಕಾರದಿಂದ ಸನ್ಮಾನಿತರಾದ ಐವರ ಪೈಕಿ ಇವರೂ ಒಬ್ಬರು. ಕನ್ನಡ ಸಾಹಿತ್ಯ ಪರಿಷತ್‌ವತಿಯಿಂದ ಲ್ಲಿ ನಡೆಸಿದ ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರುಇವರ ಸಾಧನೆ ಗಮನಿಸಿ 2013gÀ°è §¼Áîj «dAiÀÄ£ÀUÀgÀ ಶ್ರೀ ಕೃಷ್ಣದೇವರಾಯ «±Àé«zÁ央AiÀÄವು  UËgÀªÀ qÁPÀÖgÉÃmï ನೀಡಿದ್ದಾರೆ..
ಧರ್ಮಸ್ಥಳದ  ವೀರೇಂದ್ರ ಹೆಗ್ಗಡೆಯವರ ಜೊತೆ ಮ್ಯುಜಿಯಂನಲ್ಲಿ


ಎಂಬತ್ತರ ಇಳಿವಯಸ್ಸಿನಲ್ಲೂ ಅವರ ಇತಿಹಾಸ ಆಸಕ್ತಿ ಕೊಂಚವೂ ಕಡಿಮೆಯಾಗಿಲ್ಲ .ಆಸಕ್ತರಿಗೆ ಮಾರ್ಗದರ್ಶನ ನೀಡಲು ಸದಾ ಮುಂದು. ಕೆಳದಿಯ ಅಪ್ರಕಟಿತ ಇತಿಹಾಸ ಸಂಶೋಧನೆಗಳನ್ನು ಕುರಿತು ಮುಂದಿನ ವರ್ಷಗಳಲ್ಲಿ ಮಾಡಲು ಉದ್ದೇಶಿಸಿರುವ ಹಲವಾರು ಯೋಜನೆಗಳಿವೆ. ತಿಗಳಾರಿ ಹಸ್ತಪ್ರತಿಗಳು, ಮೋಡಿ ಲಿಪಿಗಳ ಕುರಿತು ಸಮಗ್ರ ಸಂಶೋಧನೆ, ಅಪ್ರಕಟಿತ ತಾಳೆಗರಿ ಸಾಹಿತ್ಯಗಳನ್ನು ಹೊರತರುವುದು, ಕೆಳದಿಯ ಸಮಗ್ರ ಇತಿಹಾಸ (ಇಂಗ್ಲಿಷ್ ಮತ್ತು ಕನ್ನಡದಲ್ಲಿ), ತರುವುದು ಇತ್ಯಾದಿ.ಈ ಯೋಜನೆಗೆ ಸುಮಾರು ಅರವತ್ತು-ಎಪ್ಪತ್ತು ಲಕ್ಷ ಅನುದಾನ ದೊರೆತರೆ ಎಲ್ಲವನ್ನೂ ಸಾಧಿಸುಬಹುದೆಂಬ ಹಂಬಲದಿಂದ ತುಡಿಯುತ್ತಿದ್ದಾರೆ. .ಸಾಗರದಿಂದ ಕಿ,ಮೀ, ದೂರದ ಕೆಳದಿಗೆ ಭೇಟಿ ನೀಡಿದಾಗ  ರಾಮೇಶ್ವರ ದೇವಾಲಯ ಮತ್ತು ಕೆಳದಿಯ ವಸ್ತು ಸಂಗ್ರಹಾಲಯ ನೋಡಿದ ಮೇಲೆ ಹತ್ತಿರದಲ್ಲಿಯೇ ಇರುವ ಹಿರಿಯ ಸಾಧಕ ಡಾ.ಗುಂಡಾಜೋಯಿಸ್‌ರನ್ನು . ಕಂಡು ಮಾತನಾಡಿಸಿದರೆ  ಕೆಳದಿಯ ಇತಿಹಾಸದ ಪೂರ್ಣ ದರ್ಶನವಾಗುವುದು.
   

ಎಚ್‌.ಶೇಷಗಿರಿರಾವ್‌



3 comments:

  1. Gunnda Jois is my dearest person. I know him from my childhood. He was visiting our house during his visit to Bangalore. He has taken me to Hirannaia's dramas once or twice. Really he has struggled in bringing up the Keladi museum. Kudos to him.

    ReplyDelete
  2. Where can I find his books?

    ReplyDelete
  3. You can find his books and articles at Keladi Museum, Keladi, Sagar, Karnataka.

    ReplyDelete