ಕಲ್ಲಿನಲ್ಲಿನ ಕಥನ ಓದುವ, ಡಾ. ಪಿ.ವಿ.ಕೃಷ್ಣಮುರ್ತಿ.
ಎಚ್‌ಎ ಎಲ್ ಕಾರ್ಖಾನೆಯಲ್ಲಿ
ವೈಮಾಂತರಿಕ್ಷ ವಿಭಾಗದಲ್ಲಿ ಯಂತ್ರಗಳೊಡನೆ ಸೆಣಸಾಟ ಅವರ ವೃತ್ತಿ. ಬಯಲಿನಲ್ಲಿ ಬಿದ್ದ , ಗುಡಿ
ಗುಂಡಾರಗಳಲ್ಲಿ ಎಣ್ಣೆ ಮಣ್ಣುಗಳಲ್ಲಿ ಮಸುಕಾದ
ಯಾರೂ ನೋಡದ, ನೋಡಿದರೂ ಗಮನಿಸದ ಶಿಲಾಶಾಸನಗಳ ಅಧ್ಯಯನ ಅವರ ಮೆಚ್ಚಿನ ಪ್ರವೃತ್ತಿ,
ಇತಿಹಾಸ ಮತ್ತು ಸಾಹಿತ್ಯದ ಕ್ಷೇತ್ರಗಳೆರಡರಲ್ಲೂ ಮೂಲಭೂತ ದಾಖಲೆಗಳಾದ ಹಸ್ತಪ್ರತಿ ಮತ್ತು
ಶಾಸನಗಳ ಒಡಲೊಳಗೆ ಅಡಗಿರುವ ಮಾಹಿತಿಯನ್ನು
ಹೊರಗೆಳೆದು ಬೆಳಕು ಚೆಲ್ಲುವ ಪರಿಣಿತರಲ್ಲಿ ಅವರೂ ಒಬ್ಬರು. ಇತ್ತೀಚಿನ ವರ್ಷಗಳಲ್ಲಿ ಬೆಳಗ್ಗೆ
ಬಿ. ಎಂ ಶ್ರೀ. ಪ್ರತಿಷ್ಠಾನದಲ್ಲಿ ತಾಳೆಗರಿಗಳನ್ನು ಪರಿಶೀಲಿಸುತ್ತಿರುವ, ಮಧ್ಯಾಹ್ನ ಮಿಥಿಕ್‌ಸೊಸೈಟಿಯಲ್ಲಿ
ಹೆಬ್ಬೊತ್ತಿಗೆಯ ಹಾಳೆ ತಿರುವುತ್ತಿರುವ , ಸಂಜೆ
ಸಾಹಿತ್ಯ ಪರಿಷತ್ತಿನಲ್ಲಿ ಹಿರಿಕಿರಿಯರಿಗೆ ಪಾಠ ಮಾಡುತ್ತಿರುವ ಪುರಸೊತ್ತು ಸಿಕ್ಕಾಗಲೆಲ್ಲ ಪ್ರಿಂಟಿಗ್ ಪ್ರೆಸ್ ನಲ್ಲಿ ಪ್ರೂಫ್ ನೋಡುತ್ತಿರುವ
ಸಾಧಾರಣ ಎತ್ತರದ , ಸಾಮಾನ್ಯ ಮೈಕಟ್ಟಿನ ಅರೆ ಬಿಳಿತಲೆಯ ಸದಾ ಇನ್‌ಸರ್ಟ್ ಮಾಡಿದ ಶುಭ್ರ
ವಸನಧಾರಿ, ಧ್ಯಾನ ಮಗ್ನರಂತೆ ಅರೆ ಮುಚ್ಚಿದ ಕಣ್ಣು, ಮೆಲು ದನಿಯ, ಮಿತಭಾಷಿಯಾದ, ಸದಾ ಕೈನಲ್ಲಿ ಚರ್ಮದ ಚೀಲ ಚೀಲ ಹಿಡಿದ, ಕನ್ನಡಕಧಾರಿ ವ್ಯಕ್ತಿ ನಿಮ್ಮ ಕಣ್ಣಿಗೆ
ಬಿದ್ದರೆ, ಖಂಡಿತವಾಗಿ ಅವರೆ ಕರ್ನಾಟಕದ ಹೆಸರಾಂತ
ಶಾಸನ ತಜ್ಞರಲ್ಲಿ ಒಬ್ಬರಾದ ಡಾ. ಪಿವಿ. ಕೃಷ್ಣ ಮೂರ್ತಿ.
ಇವರು ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಆನೆಕಲ್ ತಾಲೂಕಿನ
ಸಮಂದೂರಿನಲ್ಲಿ. ತಂದೆ ಜಿ.ಎನ್.ಪಿಳ್ಳಪ್ಪ , ತಾಯಿ ಶ್ರೀಮತಿ ಪಾಪಮ್ಮ. ಅವರು ವೃತ್ತಿಯಿಂದ ಕೃಷಿಕರು. ಅವರ ಏಳು ಜನ ಮಕ್ಕಳಲ್ಲಿ
ಹಿರಿಯ ಮಗ ಕೃಷ್ಣಮೂರ್ತಿ ಹುಟ್ಟಿದ್ದು.೧೯೫೨ ರಲ್ಲಿ. ಒಡ ಹುಟ್ಟಿದವರಲ್ಲಿ. ನಾಲ್ವರು ಸೋದರರು ಮತ್ತು ಮೂವರು ಸೋದರಿಯರು. ದೊಡ್ಡ ಕುಟುಂಬದ ನಿರ್ವಹಣೆಗೆ
ಮಳೆಯಾಧಾರಿತ ಭೂಮಿಯ ಆದಾಯ ಯಾತಕ್ಕೂ ಸಾಲದು.ಅದಕ್ಕಾಗಿ
ಟೈಲರಿಂಗ್ ಹಾಗೂ ಇತರ ಉಪವೃತ್ತಿಗಳು. ಏನು ಮಾಡಿದರೂ ಹೊಟ್ಟೆ ಬಟ್ಟೆಗೆ ಹೊಂದಿಸುವುದರಲ್ಲೆ
ಏಳು ಹನ್ನೊಂದು. ಅವರ ಜೀವನದಲ್ಲಿನ ಆಶಾ ಕಿರಣವೆಂದರೆ
ಹಿರಿಯ ಮಗ ಕೃಷ್ಣ ಮೂರ್ತಿ. ಅವನೂ ಬಹಳ ಕೆಲಸವಂತ. ಓದಿನಲ್ಲಿ ಮುಂದು. ಕುಟುಂಬ ಪೋಷಣೆಗೆ
ಕೈ ಜೋಡಿಸುವನೆಂಬ ಆಶೆ ತಂದೆಯದು. ಪ್ರಾಥಮಿಕ
ಶಿಕ್ಷಣ ಹುಟ್ಟಿದೂರಾದ ಸಮಂದೂರಿನಲ್ಲಿ. ಪ್ರೌಢಶಿಕ್ಷಣ ಅತ್ತಿಬೆಲೆಯಲ್ಲಿ . ಎಸ್‌ಎಸ್ಎಲ್‌ಸಿ
ಯನ್ನು ಹುಡುಗ ಉತ್ತಮ ಅಂಕದೊಡನೆ ಪಾಸಾದ. ಆದರೆ ಇನ್ನು ಓದಿಸುವುದು ಆಗದು ಎಂದು ಕೈಚೆಲ್ಲಿದ
ತಂದೆ. ಹಳ್ಳಿಯಲ್ಲಿ ಹೊಲದಲ್ಲಿ ದುಡಿದರೆ , ಹೊರೆ
ಹುಲ್ಲು ತಂದರೆ ಸಿಗುವ ಕುಟುಂಬಕ್ಕೆ
ಆಸರೆ. ಅದರಲ್ಲೂ ಆಗ ಬರಗಾಲ ಬೇರೆ.
ಹಳ್ಳಿಗರ ಸಹಾಯಕ್ಕೆ ಬಂದುದು ಬೆಂಗಳೂರು ಸೇಲಂ ರೈಲು
ಮಾರ್ಗ ನಿರ್ಮಾಣದ ಕೆಲಸ. ದಿನಗೂಲಿ ಹೆಂಗಸರಿಗೆ ಎರಡು ರೂಪಾಯಿ, ಗಂಡಸರಿಗೆ ಎರಡೂವರೆ ರೂಪಾಯಿ. ಕೃಷ್ಣಮೂರ್ತಿತಿಂಗಳಿಗೆ
೭೫ ರೂಪಾಯಿ ಆದಾಯ. ಆದೆ ಅವನ ಅಕ್ಕನಿಗೆ ೬೦ ರೂಪಾಯಿ. ಅದರಲ್ಲೂ ಎಸ್‌ಎಸ್ ಎಲ್‌ಸಿ ಪಾಸಾದುದರಿಂದ
ಸ್ಟೋರ್‌ನೋಡಿ ಕೊಳ್ಳುವ ಹೊಣೆ ದೊರಕಿತು. ಇತರರಂತೆ ಮಣ್ಣು ಕಲ್ಲು ಹೊರುವ ಕೆಲಸ ಇಲ್ಲ. ಹದಿನಾರನೆ
ವಯಸ್ಸಿಗೆ ಬಾಳ ಬಂಡಿಯ ನೊಗಕ್ಕೆ ಹೆಗಲು ಕೊಡಬೇಕಾಯಿತು.ಒಂದು ವರ್ಷ ಹೇಗೋ ಸಾಗಿತು.
ಮುಂದೆ ಓದುವ ಮಾತೆ ಇಲ್ಲ. ಕಾಲೇಜಿನ ಕನಸು ಇದ್ದರೂ
ಅದು ನನಸಾಗುವ ಸಾಧ್ಯತೆ ಇರಲೇ ಇಲ್ಲ. ಅದರೆ ಕಾಸು
ಕೇಳದೆ ಕೆಲಸಕ್ಕೆ ಅನುಕೂಲವಾಗುವ ಓದಿಗೆ ಅಪ್ಪನ ಅಡ್ಡಿ ಇರಲಿಲ್ಲ..ಅದೃಷ್ಟವಶಾತ್ ಎನ್‌ಜಿಎಫ್‌ನಲ್ಲಿ
ಅಪ್ರೆಂಟೀಸ್ ತರಬೇತಿಗೆ ಆಯ್ಕೆ ಯಾಯಿತು. ಅಪ್ಪ ಆಕ್ಷೇಪ ಮಾಡಲಿಲ್ಲ. ಶಿಕ್ಷಣದ ಜೊತೆಗೆ
ತಿಂಗಳಿಗೆ ಐವತ್ತು ರೂಪಾಯಿ ತರಬೇತಿ ಭತ್ಯೆಯೂ ಸಿಗುತ್ತಿತ್ತು. ಮುಂದೆ ನೌಕರಿಯ ಖಾತ್ರಿಯೂ
ಇತ್ತು. ಅದೇ ತಾನೆ ಮೀಸೆ ಮೂಡುತಿದ್ದ
ಕೃಷ್ಣಮೂರ್ತಿಗೆ ದೇಶ ಗೆದ್ದಷ್ಟು ಸಂತೋಷ. ಕಾರ್ಖಾನೆಗೆ ಸೇರಲು ಒಂದೆ ತೊಡಕು. ಅಲ್ಲಿಗೆ ಸಮವಸ್ತ್ರದಲ್ಲೆ ಹೋಗಬೇಕು ಮತ್ತು ಷೂ ಇಲ್ಲದೆ ಒಳಗೆ ಕಾಲಿಡುವ ಹಾಗೇ ಇಲ್ಲ.
ಮನೆಯಲ್ಲಿನ ರಾಗಿ ಮಾರಿ ಮಗನಿಗೆ ಬಟ್ಟೆತಂದು ಒಂದು ಜತೆ ಸಮವಸ್ತ್ರ ಹೊಲಿದರು ತಂದೆ. ಹೊಲಿಗೆಯ ಕೈಕೆಲಸ. ಸಹಾಯಕ್ಕೆ ಬಂತು. ಇನ್ನು ಲೆದರ್‌ಷೂ
ನೂರಾರು ರೂಪಾಯಿ ಬೆಲೆ. ತಲೆ ಮೇಲೆ ಕೈ ಹೊತ್ತು ಕುಳಿತರು ತಂದೆ. ಉತ್ಸಾಹಿ ಕೃಷ್ಣಮೂರ್ತಿ ಎದೆಗೆಡಲಿಲ್ಲ. ಬೆಂಗಳೂರೆಲ್ಲ
ಅಲೆದಾಡಿ ಫುಟ್‌ಪಾತ್ ಮೇಲೆ ಮಾರುತಿದ್ದ ಹಳೆಯ
ಗಟ್ಟಿ ಮುಟ್ಟಾದ ಷೂ ಕೊಂಡು ಚೆನ್ನಾಗಿ ಪಾಲಿಷ್ ಮಾಡಿಸಿದ ಮೇಲೆ ಹೊಸದರ ಮುಖದ ಮೇಲೆ ಹೊಡೆವ ಅದರ
ಹೊಳಪು ನೋಡಿ ಹುಡುಗನಿಗೆ ಹುರುಪು ಹೆಚ್ಚಿತು. ತರಬೇತಿಯ ನಾಲಕ್ಕು ವರ್ಷ ಮಾತ್ರವಲ್ಲ ನೌಕರಿಯಾದ
ಮೇಲೂ ಅದು ಉಪಯೋಗಕ್ಕೆ ಬಂದಿತು.
ಕೋರ್ಸಿಗೆ
ಸೇರಿದ ಮೇಲೆ ದೊಡ್ಡ ಸಮಸ್ಯೆ ಧುತ್ತೆಂದು ಎದುರಾಯಿತು. ಹಳ್ಳಿ ಹುಡುಗನಿಗೆ ಬೆಂಗಳೂರಲ್ಲಿ
ತಂಗಲು ತಾಣ ಬೇಕಿತ್ತು. ಅದೂ ತಮ್ಮಕಾರ್ಖಾನೆಗೆ ಹತ್ತಿರದಲ್ಲಿ ನಡೆದು ಹೋಗುವ ಅಂತರದಲ್ಲಿ ವಸತಿ
ಬೇಕಿತ್ತು.. ಆಗಿನ್ನೂ ಸಿಟಿ ಬಸ್ಸುಹೆಚ್ಚಾಗಿ ಇರಲಿಲ್ಲ. ಸೈಕಲ್ ಕೊಳ್ಳುವುದೂ ವೈಭೋಗವಾಗಿದ್ದ
ಕಾಲ. ತರಬೇತಿ ಮುಗಿದಾದ ಮೇಲೆ ರೂಮಿನ
ಬೇಟೆ.ಜೊತೆಗೆ ಸಹಪಾಠಿಯೊಬ್ಬನೂ ಇದ್ದ. ಮೂರು ನಾಲಕ್ಕು ದಿನ ಅಲೆದು ಅಲೆದು ಕಾಲು ಮಾತನಾಡ ತೊಡಗಿದವು. ಫಲಿತಾಂಶ
ಶೂನ್ಯ. ದಾರಿಯಲ್ಲಿನ ಚಿಕ್ಕ ಹೋಟೆಲ್‌ನಲ್ಲಿ ಬೈಟೂ ಕಾಫಿ ಹೀರುತ್ತಾ ಮುಂದೆ ಗತಿ ಏನು? ಎಂದು ಚರ್ಚಿಸ ತೊಡಗಿದರು. ಹೇಳಿಕೇಳಿ ಹಳ್ಳಿ ಹುಡುಗರು.
ಸಾಕಷ್ಟು ಜೋರಾಗಿಯೆ ಇತ್ತು ಅವರ ಮಾತು. ಅಲ್ಲಿಯೆ ಕುಳಿತಿದ್ದ ಒಬ್ಬ ಯುವಕ ಎದ್ದು ಬಂದ. ನಿಮಗೆ
ರೂಮು ಬೇಕು ತಾನೆ ? ಎಂದ .
ಹೌದು ಎಂದು ಗೋಣಾಡಿಸಿದರು. ನಾನು ಒಬ್ಬನೆ
ರೂಮಿನಲ್ಲಿರುವೆ. ಬಾಡಿಗೆ ೧೮ ರೂಪಾಯಿ ನೀವಿಬ್ಬರೂ ತಲಾ ಆರು ರೂಪಾಯಿ ಬಾಡಿಗೆ ನೀಡುವುದಾದರೆ
ನನ್ನ ಜೊತೆ ಬನ್ನಿ, ಎಂದ. ಬರಿಕೈನಿಂದ ನಟ್ಟು ಬೋಲ್ಟು ಬಿಗಿ ಮಾಡುತಿದ್ದವರಿಗೆ ಸರಿಯಾದ ಅಳತೆಯ
ಸ್ಪಾನರ್ ಸಿಕ್ಕ ಸಂತೋಷ ವಾಯಿತು. ಎರಡನೆ ಮಾತಿಲ್ಲದೆ ಒಪ್ಪಿಕೊಂಡರು. ತಕ್ಷಣವೆ ವಿಳಾಸ ಪಡೆದು
ಮಾರನೆ ದಿನ ಸಂಜೆ ಬರುವುದಾಗಿ ಭರವಸೆ ನೀಡಿದರು .ತಪ್ಪದೆ ಬರಲುತಿಳಿಸಿದ . ತಾನು ಸಂಜೆ
ಕಾಯುತ್ತಿರುವುದಾಗಿ ತಿಳಿಸಿದ.
ಇಬ್ಬರಿಗೂ ಸ್ವರ್ಗ ಮೂರೆ
ಗೇಣು. ಬೆಂಗಳೂರಲ್ಲಿ ನಿಲ್ಲಲು ನೆಲೆ
ದೊರಕಿತ್ತು. ಅದೂ ಸುಲಭ ಬಾಡಿಗೆಯಲ್ಲಿ. ಆಗಲೆ ಹತ್ತಿರವಿದ್ದ ಹಣ ಖಾಲಿಯಾಗುತ್ತಾ ಬಂದಿತ್ತು.
ನಮ್ಮದು ಎಂಬ ಗೂಡು ದೊರೆತರೆ ಉಂಡೋ, ಉಪವಾಸವಿದ್ದೋ ಕಾಲ ಹಾಕಬಹುದು. ಸಂಜೆ ಕಾರ್ಖಾನೆಯ ಕೆಲಸ
ಮುಗಿದ ತಕ್ಷಣ ಗಂಟು ಮೂಟೆ ಕಟ್ಟಿಕೊಂಡು ವಿಳಾಸ ಅರಸಿ ಹೊರಟರು. ತುಸು ಹುಡುಕಾಟದ ನಂತರ
ವಿಳಾಸದಲ್ಲಿದ್ದ ರೂಮು ಸಿಕ್ಕಿತು. ಅದು ಒಂದು ಮಂಗಳೂರು ಹಂಚಿನ ಮನೆ. ಆದರೆ ಬಾಗಿಲಿಗೆ ಬೀಗ.
ಅಕ್ಕ ಪಕ್ಕ ಯಾರೂ ಇಲ್ಲ. ಸರಿ ಈಗ ಬರಹುದು, ಆಗ ಬರಬಹುದು ಎಂದು ರಸ್ತೆಯಕಡೆ ಕಣ್ಣು ನೆಟ್ಟು
ಕಾದದ್ದೆ ಬಂತು. ಆಸಾಮಿ ಪತ್ತೆಯೆ ಇಲ್ಲ.
ಕತ್ತಲಾಯಿತು. ಗಂಟೆ ಎಂಟಾಯಿತು. ಎದೆ ಡವ ಡವ ಗುಟ್ಟ ತೊಡಗಿತು.ಗಂಟು ಮೂಟೆ ಕಟ್ಟಿಕೊಂಡು ಇದ್ದ
ಬದ್ದ ಹಣ ನೀಡಿ ಜಟಕಾಮಾಡಿ ಕೊಂಡು ಬಂದದ್ದಾಗಿದೆ. ವಾಪಸ್ಸು ಹೋಗುವುದು ಹೇ ?. ಹೋಗ ಬೇಕೆಂದರೆ
ಜೇಬು ಖಾಲಿ. ಬೆಂಗಳೂರಿಗೆ ಬಂದು ಬೀದಿಗೆ ಬಿದ್ದೆವಲ್ಲಾ ಎಂದು ಕಣ್ಣೀರು ಉಕ್ಕಿ ಬಂತು.ಪ್ರದೇಶ
ನಿರ್ಜನ ವಾಗಿತ್ತು ಆಗೀಗ ಬೊಗಳುವ ನಾಯಿಯ ಧ್ವನಿ ಬಿಟ್ಟರೆ ಬೇರೆ ಏನೂ ಇಲ್ಲ. ಒಬ್ಬರ ಮುಖ ಒಬ್ಬರು ನೋಡುತ್ತಾ ತಮಗಾದ ಗತಿಯ ಬಗ್ಗೆ
ಚಿಂತಿಸ ತೊಡಗಿದರು. ಸುಮಾರು ಒಂಬತ್ತರ ಹೊತ್ತಿಗೆ ಒಬ್ಬವ್ಯಕ್ತಿ ಓಡುತ್ತಾ ಬರುವುದು ಕಾಣಿಸಿತು.
ನೋಡಿದರೆ ಹೋಟೆಲ್‌ನಲ್ಲಿ ಕಂಡ ಯುವಕ. ಬದುಕಿದೆಯಾ ಬಡ ಜೀವವೆ ಅಂದುಕೊಂಡರು. ಬಂದವನೆ ಬಾಗಿಲು
ತೆರೆದು ಒಳಗೆ ಕರೆದ. ತಡವಾದುದಕ್ಕೆ ಕ್ಷಮೆ ಕೇಳಿದ. ಕಾರ್ಖಾನೆಯಲ್ಲಿ ಒ. ಟಿ. ಇತ್ತು. ಅಲ್ಲದೆ
ಹಿಂದಿನ ದಿನ ಹೇಳಿದ ವಿಷಯ ನೆನಪಿಗೂ ಬರಲಿಲ್ಲ. ಕೆಲಸ ಮುಗಿದ ಮೇಳೆ ಜ್ಞಾಪಕಕ್ಕೆ ಬಂದು ಓಡುತ್ತಾ
ಬಂದೆ , ಎಂದು ವಿವರಣೆ ನೀಡಿದ.ತಡವಾದರೂ ತೊಂದರೆ ಇಲ್ಲ. ಕೊನೆಗಾದರೂ ಬಂದೆಯಲ್ಲ.ಎಂದುಅವನಿಗೆ
ಸಮಾಧಾನ ಹೇಳಿದರು. ಅಂದಿನ ಗೃಪ್ರವೇಶದಿಂದ ಆದ ನೆಮ್ಮದಿಯ ಅನುಭವ ಮುಂದೆ ಎರಡಂತಸ್ತಿನ ತಾರಸಿ ಮನೆ
ಕಟ್ಟಿಸಿದಾಗಲೂ ಆಗಲಿಲ್ಲ.ಎಂದು ಕನ್ನಡಕ ತೆಗೆದು ಕಣ್ಣೊರಸಿಕೊಂಡರು , ಡಾ.ಪಿ.ವಿ.ಕೆ..
ಮಾಡೊಕೆ ಒಂದು ಕೆಲಸ ,
ತಲೆ ಮೇಲೊಂದು ಸೂರು ದೊರಕಿದ ಮೇಲೆ ಉಳಿದೆಲ್ಲವೂ ಗೌಣ ವೆನಿಸಿತು. ಊಟ ದೊಡ್ಡ ಸಮಸ್ಯೆ ಎನಿಸಲೆ
ಇಲ್ಲ. ಕಾರ್ಖಾನೆಯಲ್ಲಿಯೆ ಒಂದು ಊಟ ಮತ್ತು ಒಂದು
ತಿಂಡಿ ಆಗುತಿತ್ತು .ಕತ್ತಲಾಗುವ ಮುಂಚೆ
ಕೋಣೆಗೆ ಬಂದ ತಕ್ಷಣ ಅಡುಗೆ ತಯಾರಿ. ಮೊದಲ
ತಿಂಗಳು ಆಶ್ರಯದಾತನೆ ಉದ್ದರಿ ಅಂಗಡಿ ಗೊತ್ತು ಮಾಡಿಕೊಟ್ಟಿದ್ದ. ದಿನಕ್ಕೊಂದು ಪಾವು ಅಕ್ಕಿ ,
ನಾಲಕ್ಕು ಟೊಮೆಟೋ ಒಂದರೆಡು ಹಸಿಮೆಣಸಿನಕಾಯಿ ಆದರೆ ಮುಗಿಯಿತು ರಾತ್ರಿಯೂಟ. ಪಾವು ಅನ್ನ,
ಟೊಮೆಟೋ ಮೆಣಸಿನ ಕಾಯಿ ಬೇಯಿಸಿ ಮಾಡಿದ ಗೊಜ್ಜು. ಒಂದಗಳೂ ಬಿಡದೆ
ತಿನ್ನುವರು ಅಷ್ಟು ರುಚಿ. ತರಬೇತಿ ಮುಗಿಯುವವರೆಗ
ಬೇರೆ ಇನ್ನೇನು ಇಲ್ಲ. ಸರಳ ಸುಲಭ ಅಡುಗೆ.ತಿಂಗಳಾಧ ಮೇಲೆ ಐವತ್ತು ರೂಪಾಯಿ ನಗದು ಕೈಗೆ
ಬಂತು.ಬಾಡಿಗೆ , ಅಂಗಡಿ ಬಾಕಿ ತಿಂಗಳಿಗೊಮ್ಮೆ ಊರಿಗೆ ಹೋಗುವ ಖರ್ಚು ಕಳೆದ ಮೇಲೆ ಪ್ರತಿ ತಿಂಗಳೂ
ಹತ್ತು ರೂಪಾಯಿಗೂ ಹೆಚ್ಚು ಮಿಗುತಿತ್ತು.ಅದನ್ನೆ ಪುಸ್ತಕ ಕೊಳ್ಳುವುದಕ್ಕೆ ಬಳಕೆ . ಅದೂ ರಷ್ಯನ್
ಮತ್ತು ಇಎಲ್‌ಬಿಎಸ್‌ನವರು ಪ್ರಕಟಿಸಿದ teach your self ಸರಣಿಯ ಯಂತ್ರೋಪಕರಣಗಳ ಬಗೆಗಿನ ಸಾಹಿತ್ಯ. ತರಬೇತಿಯಲ್ಲಿ ಟರ್ನರ್ ಟ್ರೇ ಡ್‌ಗೆ
ಪೂರಕವಾಗಿ ಅಗ್ಗದ ದರದಲ್ಲಿ ದೊರೆವ ಯಂತ್ರೋಪಕರಣಗಳಿಗೆ ಸಂಬಂಧಿಸಿದ ಪುಸ್ತಕಗಳ
ಅಧ್ಯಯನ.ಹೊಲಿಗೆ ಯಂತ್ರ ಮಾತ್ರ ನೋಡಿದ್ದ ಹಳ್ಳಿಯ ಹೈದನಿಗೆ ದೊಡ್ಡ ದೊಡ್ಡ ಯಂತ್ರಗಳೊಡನೆ ಕೆಲಸ.
ಹೊಸ ಹೊಸ ಯಂತ್ರೋಪಕರಣಗಳ ರಚನೆ ಮತ್ತು ಕಾರ್ಯ ಅರಿಯುವ ಗೀಳು ಹತ್ತಿತು. ತರಬೇತಿಯ ಜತೆ ಸದಾ
ಅಧ್ಯಯನ. ಅದರ ಫಲವಾಗಿ ತರಬೇತಿಯಲ್ಲಿ ಪ್ರಥಮ ಸ್ಥಾನ.ತರಬೇತಿಯ ಮೊದಲ ವರ್ಷ ಮುಗಿಯಿತು.
ಓರಗೆಯವರು ಕಾಲೇಜಿಗೆ
ಹೋಗಿ ಶಿಕ್ಷಣ ಪಡೆಯುವುದು, ಅದರಲ್ಲೂ ಪದವಿಗಾಗಿ ಓದುತ್ತಿರುವುದು ಹುಡುಗನ ಹುರುಪನ್ನು
ಹೆಚ್ಚಿಸಿತು.ತಡ ಮಾಡದೆ ಖಾಸಗಿಯಾಗಿ ಪಿಯುಸಿಗೆ ಕಟ್ಟಿದ. ಇದ್ದುದರಲ್ಲೆ ಹಣ ಉಳಿತಾಯ ಮಾಡಿ ಫೀಸು
ಪುಸ್ತಕದ ವ್ಯವಸ್ಥೆ ಮಾಡಿಕೊಂಡ.ಹಗಲಲ್ಲಿ ಕಾರ್ಖಾನೆಯಲ್ಲಿ ಕೆಲಸ . ರಾತ್ರಿಯಲ್ಲಿ ಪಿಯುಸಿ ಓದು.
ಅಡಾಡುತ್ತಾ ವರ್ಷಕಳೆಯಿತು. ಪಿಯುಸಿಯಲ್ಲೂ ಉತ್ತಮ ಅಂಕ ಗಳಿಸಿ ಪಾಸು.
ಮೂರುವರ್ಷದ ತಬೇತಿಯಲ್ಲಿ ಒಂದುವರ್ಷ ಉಳಿದಿತ್ತು.
ಪದವಿಗೂ ನೊಂದಾವಣೆ ಮಾಡಿಕೊಂಡ..ಹೀಗೆ ಗಳಿಕೆ
ಮತ್ತು ಕಲಿಕೆ (Earning & learning) ಜೊತೆ ಜೊತೆಯಾಗಿ
ಸಾಗಿತು.ಉದ್ಯೋಗಕ್ಕಾಗಿ ತಾಂತ್ರಿಕ ಶಿಕ್ಷಣ ಮನಸ್ಸಿನ ಮುದಕ್ಕಾಗಿ ಕಾಲೇಜು ಕಲಿಕೆ. ಅದೂ ಕನ್ನಡ
ಸಾಹಿತ್ಯದ ಅಭ್ಯಾಸ.
ಮೈಸೂರು ವಿಶ್ವ
ವಿದ್ಯಾನಿಲಯದಿಂದ ಪದವಿ ಮತ್ತು ವೃತ್ತಿ
ನಿರ್ವಹಣೆ ಮಾಡುತ್ತ ಕನ್ನಡದಲ್ಲಿ ಸ್ನಾತಕೋತ್ತರ.ಪದವಿ ಎಲ್ಲ ಅಂಚೆ ಮತ್ತು ತೆರಪಿನ ಶಿಕ್ಷಣದ
ಮೂಲಕ. . ಪದವಿ ಮುಗಿದಾಗಲೆ ಮದುವೆ. ಹೆಂಡತಿ ಪದ್ಮ ಹೈಸ್ಕೂಲು ಮಾತ್ರ
ಕಲಿತವಳು. ಆದರೆ ಗಂಡನ ಓದಿನ ಹಂಬಲಕ್ಕೆ ಅಡ್ಡಿ ಮಾಡಲಿಲ್ಲ ಇಬ್ಬರು ಮಕ್ಕಳಾದರು. ಒಂದು ಗಂಡು
ಮತ್ತು ಒಂದು ಹೆಣ್ಣು. ಎರಡು ಮಕ್ಕಳ ತಂದೆಯಾದರೂ ಕೃಷ್ಣಮೂರ್ತಿಯವರ ಕಲಿಯುವ ಹುಮ್ಮಸ್ಸು
ಕಡಿಮೆಯಾಗಲಿಲ್ಲ. ಮೊದಲ ಏಳುವರ್ಷ ಆಪರೇಟ್‌ರ್ ಆಗಿ ಕಾರ್ಯನಿರ್ವಹಣೆ. ಜೊತೆಜೊತೆಗೆ ಸಂಜೆ ಕಾಲೇಜಿನಲ್ಲಿ ವೃತ್ತಿ ಪ್ರಾವಿಣ್ಯತೆ
ಹೆಚ್ಚಿಸಿಕೊಳ್ಳಲು ಮೆಕ್ಯಾನಿಕಲ್ ಇಂಜನಿಯರಿಂಗ್‌ನಲ್ಲಿ
ಡಿಪ್ಲೊಮಾ ಪದವಿ ಅಷ್ಟರಲ್ಲಿ ಕಾರ್ಖಾನೆಯಲ್ಲೂ ಕೈಮುಟ್ಟಿ ಮಾಡುವ ಕೆಲಸದಿಂದ, ಇತರರಿಂದ
ಕೆಲಸ ಮಾಡಿಸುವ ವಿಭಾಗಕ್ಕೆ ವರ್ಗಾವಣೆ.
ಹೊಟ್ಟೆಯ ಚಿಂತೆ
ಪರಿಹರಿಸುವಲ್ಲಿಯೆ ಸಮಯ ಕಳೆಯದೆ ತಮ್ಮ ಮನದಾಳದ ಆಶೆಯಾದ ಕನ್ನಡ ಲಿಪಿಗಳ ಹುಟ್ಟಿನ
ಬೆಳವಣಿಗೆಯ ಮರ್ಮವರಿಯಲು ಕನ್ನಡ ಸಾಹಿತ್ಯ
ಪರಿಷತ್ ನಡೆಸುವ ಶಾಸನ ತರಗತಿಗೆ ಸೇರ್ಪಡೆ. ಇವರದೆ ಎರಡನೆಯ ತಂಡ.
ದೇವರಕೊಂಡಾ ರೆಡ್ಡಿಯವರ ಮಾರ್ಗದರ್ಶನದಲ್ಲಿ ಶಾಸನ ಶಾಸ್ತ್ರ ಅಧ್ಯಯನ. ಡಾ.
ಗಣೇಶ್, ಡಾ.ಶೇಷ ಶಾಸ್ತ್ರಿಗಳು ಮತ್ತು ಡಾ ಕೆ. ಆರ್. ಗಣೇಶ್ ಗುರುಗಳು. ಡಾ. ಚಿದಾನಂದ ಮೂರ್ತಿ ಮತ್ತು ಡಾ.ಸೂರ್ಯನಾಥ
ಕಾಮತ್‌ರಿಂದ ಆಗೀಗ ಮಾರ್ಗದರ್ಶನ.
ಸಹಪಾಠಿಗಳು ಸಹಾ ಇವರಂತೆಯೆ ಜ್ಞಾನ ದಾಹಿಗಳು. ಬಹುತೇಕರು ಕನ್ನಡ ಸಾಹಿತ್ಯದ ಹಿನ್ನೆಲೆಯಿಂದ ಬಂದವರಲ್ಲ. ಎಂಜಿ ನಾಗರಾಜ್ ಗಣಿತಶಾಸ್ತ್ರದ ಉಪನ್ಯಾಸಕರಾದರೆ, ಗೊಪಾಲರಾವ್ ಎಲೆಕ್ಟ್ರಿಕಲ್ ಇಂಜನಿಯರ್,ಅ.ಲ ನರಸಿಂಹನ್ ಮುದ್ರಣ ತಂತ್ರಜ್ಞಾನದಲ್ಲಿ ಪದವಿ ಪಡೆದವರು. ನಾ.ಗೀತಾಚಾರ್ಯ, ಕೆ. ರಮಾನಂದ ಅವರು ಇನ್ನ್ನುನೂ ಬಿ.ಎ ಓದುವವರು. ಬಹುತೇಕ ಇವರ ಬ್ಯಾಚ್‌ನಲ್ಲಿನ ಎಲ್ಲರೂ ಇತಿಹಾಸ ಮತ್ತು ಶಾಸನ ಕ್ಷೇತ್ರದಲ್ಲಿ ಈಗ ದಿಗ್ಗಜರು.
ಸಹಪಾಠಿಗಳು ಸಹಾ ಇವರಂತೆಯೆ ಜ್ಞಾನ ದಾಹಿಗಳು. ಬಹುತೇಕರು ಕನ್ನಡ ಸಾಹಿತ್ಯದ ಹಿನ್ನೆಲೆಯಿಂದ ಬಂದವರಲ್ಲ. ಎಂಜಿ ನಾಗರಾಜ್ ಗಣಿತಶಾಸ್ತ್ರದ ಉಪನ್ಯಾಸಕರಾದರೆ, ಗೊಪಾಲರಾವ್ ಎಲೆಕ್ಟ್ರಿಕಲ್ ಇಂಜನಿಯರ್,ಅ.ಲ ನರಸಿಂಹನ್ ಮುದ್ರಣ ತಂತ್ರಜ್ಞಾನದಲ್ಲಿ ಪದವಿ ಪಡೆದವರು. ನಾ.ಗೀತಾಚಾರ್ಯ, ಕೆ. ರಮಾನಂದ ಅವರು ಇನ್ನ್ನುನೂ ಬಿ.ಎ ಓದುವವರು. ಬಹುತೇಕ ಇವರ ಬ್ಯಾಚ್‌ನಲ್ಲಿನ ಎಲ್ಲರೂ ಇತಿಹಾಸ ಮತ್ತು ಶಾಸನ ಕ್ಷೇತ್ರದಲ್ಲಿ ಈಗ ದಿಗ್ಗಜರು.
ಶಾಸನ ಶಾಸ್ತ್ರ
ಆಧ್ಯಯನದಿಂದ ಅವರ ಬದುಕೆ ತಿರುವು ಪಡೆಯಿತು. ಕನ್ನಡ ಮತ್ತು ಇತಿಹಾಸದ ಅಧ್ಯಯನಕ್ಕೆ ಆದ್ಯತೆ
ಬಂದಿತು ಶಾಸನ ತರಗತಿಯಲ್ಲಿ ಪರಿಚಿತವಾದ
ಬ್ರಾಹ್ಮಿ, ತಿಗಳಾರಿ, ಮೋಡಿ ಲಿಪಿಗಳು ಅವನ್ನು ಕೈ ಮಾಡಿ ಕರೆದವು.. ಇವರದು ಆ ನಿಟ್ಟಿನಲ್ಲಿ
ತಾತ್ರಿಕ ತರಬೇತಿಯೂ ಸಹಾಯಕ್ಕೆ ಬಂದಿತು.. ಯಾರ ಕಣ್ಣಿಗೂ
ಕಾಣದ , ಕಂಡರೂ ಓದಲಾಗದ ಲಿಪಿಗಳ ಅಜ್ಞಾತ
ಜ್ಞಾನ ಭಂಡಾರ ಸೂರೆ ಮಾಡುವ ಕೀಲಿಕೈ ಆದರು ಕೃಷ್ಣ ಮೂರ್ತಿ.ಶಾಸನ ಶಾಸ್ತ್ರದ ಪರೀಕ್ಷೆಯಲ್ಲಿ ಪ್ರಪ್ರಥಮರಾಗಿ ತೇರ್ಗಡೆಯಾದರು. ಅವರಿಗೆ ಗುರುಗಳಾಗಿದ್ದ
ಡಾ. ಶೇಷ ಶಾಸ್ತ್ರಿಗಳಿಗೆ ಸಂಜೆ ಕಾಲೇಜಿನಲ್ಲಿ ಕೆಲಸ ದೊರೆತುದರಿಂದ ಅವರು ಸಾಹಿತ್ಯ
ಪರಿಷತ್ತಿನಲ್ಲಿ ಮಾಡುತಿದ್ದ ಶಾಸನ ಅಧ್ಯಯನ ಸಂಜೆ ತರಗತಿಗಳ ಬೋಧನೆಯ ಹೊಣೆ ಇವರ ಹೆಗಲೇರಿತು.. ಅಲ್ಲಿಂದ ಶುರುವಾದ ಶಾಸನ ಶಾಸ್ತ್ರ
ಯಾತ್ರೆ. ವೃತ್ತಿಯಲ್ಲಿದ್ದಾಗ ಅರೆ
ಕಾಲಿಕವಾದದ್ದು ನಿವೃತ್ತಿ ಪಡೆದ ಮೇಲೆ ಪೂರ್ಣ ಕಾಲಿಕವಾಗಿದೆ.
ಪರಿಣಾಮವಾಗಿ ಕರ್ನಾಟಕ
ಇತಿಹಾಸ ಪರಿಷತ್ತಿನಲ್ಲಿ ಕಾರ್ಯದರ್ಶಿಯಾದರೆ , ಬಿಎಂ ಶ್ರೀ. ಪ್ರತಿಷ್ಠಾನದಲ್ಲಿ ಹಸ್ತ ಪ್ರತಿ
ಅಧ್ಯಯುನ ವಿಭಾಗದ ಸಂಚಾಲಕತ್ವ.ಜೊತೆಗೆ ಸಾಹಿತ್ಯ ಪರಿಷತ್ತಿನಲ್ಲಿ ಶಾಸನ ಶಾಸ್ತ್ರ ಅಧ್ಯಾಪನ
ಮತ್ತು ಇತಿಹಾಸ ಸಂಶೋಧಕರಿಗೆ ಮಾರ್ಗದರ್ಶನ.ವೃತ್ತಿಯಿಂದ ನಿವೃತ್ತರಾದರೂ ಪ್ರವೃತ್ತಿಗೆ ಅವರಪೂರ್ಣ
ಕಾಲವನ್ನು ಇತಿಹಾಸ ಕ್ಕೆ ಮೀಸಲಾಗಿಸಿ ಧನ್ಯತೆ ಪಡೆದಿರುವರು.
ಶಾಸನ ಮತ್ತು ಸಂಶೋಧನೆ ಅವರ ಎಡಬಿಡದ ಹವ್ಯಾಸ. ಕ್ಞೇತ್ರ ಕಾರ್ಯ ಅವರ ನೆಚ್ಚಿನ
ಕೆಲಸ. ಆಸಕ್ತರೊಂದಿಗೆ ,ವಿದ್ಯಾರ್ಥಿಗಳೊಂದಿಗೆ ಇಲ್ಲವಾದರೆ ತಾವೊಬ್ಬರೆ ರಜಾದಿನಗಳಲ್ಲಿ ಹೆಗಲಿಗೆ
ಉಪಕರಣಗಳ ಚೀಲ ಹೆಗಲಿಗೆ ತೂಗು ಹಾಕಿಕೊಂಡು ಎಲ್ಲಿಯಾದರೂ ಶಾಸನ ಇದೆ ಎಂಬ ಸುಳಿವು ಸಿಕ್ಕರೂ ಸಾಕು ಹೊರಡುವರು. ಅದರ
ಪಡಿಯಚ್ಚು ತೆಗೆದು, ಓದಿ ಅಧ್ಯಯನ ಮಾಡಿ ಲೇಖನ ಸಿದ್ಧ ಮಾಡುವವರೆಗೆ ಬೇರೆ ಯೋಚನೆಯೇ ಇಲ್ಲ. ಶಾಸನ ಅಧ್ಯಯನಕ್ಕಾಗಿ ಗುಡಿ ಗುಂಡಾರಗಳಿರುವ ಊರುಗಳಿಗೆ
ಅವರು ನೀಡಿರುವ ಭೇಟಿ ಅಗಣಿತ. ಪಾಳೆಯಗಾರರ
ಕುರಿತಾದ ಅನೇಕ ಶಾಸನಗಳ ಸಮಗ್ರ ಅಧ್ಯಯನ ಮಾಡಿ ನೀಡಿದ ಉಪನ್ಯಾಸವು, ಕರ್ನಾಟಕ ವಿಶ್ವ
ವಿದ್ಯಾನಿಲಯದ ಕನ್ನಡ ಅಧ್ಯಯನ ಪೀಠದಿಂದ. ಪ್ರಕಟವಾದ ಇವರ ಪ್ರಥಮ ಸಂಶೋಧನಾ ಗ್ರಂಥ, ನಂತರ
ತೆರಪಿಲ್ಲದೆ ಸಂಶೋಧನೆ ಮತ್ತು ಬೋಧನೆಯ ಕೆಲಸ ಸಾಗಿದೆ.
ಅವರ ಆಸಕ್ತಿ
ಕನ್ನಡ ನಾಡಿಗೆ ಮಾತ್ರ ಸೀಮಿತವಲ್ಲ. ಪ್ರಾಚೀನ ಕಾಲದಲ್ಲಿ ಕನ್ನಡ ಪ್ರಚಲಿತವಿದ್ದ . ಎಲ್ಲ
ಪ್ರದೇಶಗಳು ಅವರ ಅಧ್ಯಯನದ ವ್ಯಾಪ್ತಗೆ ಸೇರಿವೆ. ವಿಶೇಷವಾಗಿ ತಮಿಳುನಾಡಿನಲ್ಲಿ ಕನ್ನಡ ಶಾಸನಗಳು
ಅವರ ಪರಿಶ್ರಮದಿಂದಾಗಿ ಸಮಗ್ರ ಕೃತಿ ರೂಪದಲ್ಲಿ
ಮೂಡಿ ಬಂದಿವೆ..
ಕರ್ನಾಟಕದ ಪ್ರಮುಖ
ರಾಜಮನೆತನವಾದ ಬಾಣವಂಶದ ಅರಸರ
ಕರ್ನಾಟಕದ ಅವಗಣನೆಗೆ ಒಳಗಾಗಿದ್ದ ಅನೇಕ ಚಿಕ್ಕ ಪುಟ್ಟ ರಾಜ ಮನೆತನಗಳ
ಬಗೆಗಿನ ಅವರ ಸಂಶೋಧನೆಗಳಾದ ಆವತಿಯನಾಡ ಪ್ರಭುಗಳು,
ಪೂರ್ವಾದಿರಾಯರು, ಮಹಾನಾಡ ಪ್ರಭುಗಳ ವಿಷಯದಲ್ಲಿ ಅವರು ಚೆಲ್ಲಿದ ಬೆಳಕು ಕರ್ನಾಟಕ
ಇತಿಹಾಸ ಪುನರ್ರಚನೆಗೆ ಮಹತ್ವದ ಕೊಡುಗೆ ನೀಡಿದೆ.
ಶಾಸನ ಗಳ ಅಧ್ಯಯನದಲ್ಲಿ ಅವರ ನೆಚ್ಚಿನ ವಿಭಾಗ ಪ್ರಾಚೀನ
ಕರ್ನಾಟಕದ ಆಡಳಿತ ವ್ಯವಸ್ಥೆ. ಕನ್ನಡನಾಡಿನ ಆಗಿ
ಹೋದ ಪ್ರಾಚೀನ ರಾಜರುಗಳ ಆಡಳಿತ ಪದ್ದತಿಯನ್ನು ಅಧ್ಯಯನ ಮಾಡಲು ಅವರು ನೀಡಿದ ಕಾಣಿಕೆ
ಗಣನೀಯ.ವಿವಿಧ ಆಡಳಿತ ವಿಭಾಗಗಳಾದ ಸಿಗಲ್ ನಾಡು,
ಕುಕ್ಕುಲ ನಾಡು,ಯಲಹಂಕ ನಾಡು,ಕಳಲೆ ನಾಡು,ದಡಿಗಾವಳಿನಾಡು ಇತ್ಯಾಧಿ ಅನೇಕ ಶಾಸನಗಳಲ್ಲಿ
ನಮೂದಿತವಾದ ಆಡಳಿತ ವಿಭಾಗಗಳನ್ನು ಮೊದಲು ಗುರುತಿಸಿದ ಹಿರಿಮೆ ಅವರದು.
ಅವರ ಸುತ್ತು ಸದಾ ಯುವ
ಸಂಶೋಧನಾ ವಿದ್ಯಾರ್ಥಿಗಳು ಇದ್ದೆ ಇರಲು ಕಾರಣ ತಾವು ಮಾಡುವ ಸಂಶೋಧನೆಯ ಜೊತೆಜೊತೆಗೆ ಆಸಕ್ತ ಯುವ
ವಿದ್ವಾಂಸರಿಗೂ ಸೂಕ್ತ ಮಾರ್ಗದರ್ಶನ ನೀಡಿ ಅವರಿಂದ ಲೇಖನ ಬರೆಸುವ ಅವರ ಮುಕ್ತ ಮನಸ್ಸು. ಇದರ
ಫಲವೆ “ಕರ್ನಾಟಕ ಪ್ರಾಚೀನ ಆಡಳಿತ ವಿಭಾಗಗಳು”. ಎಂಬ ಕೃತಿ.
ಅವರಿಗೆ. ೨೦೦೦
ಇಸ್ವಿಯಲ್ಲಿ ಹಂಪಿವಿಶ್ವ ವಿದ್ಯಾನಿಲಯದಿಂದ “ಬಾಣರಸರ ಶಾಸನಗಳು” ಸಂಪ್ರಬಂಧಕ್ಕಾಗಿ ಡಿಲಿಟ್‌ಪ್ರಶಸ್ತಿ.ದೊರೆಯಿತು.
ತಮಿಳು ನಾಡಿನ ಕನ್ನಡ ಶಾಸನಗಳು ಕನ್ನಡ ಸಾಹಿತ್ಯ ಪರಿಷತ್‌ನಿಂದ, ಶಾಸನ ಮಂಥನ, ಶಾಸನ ಇತಿಹಾಸ ಮಂಥನ, ಗ್ರಂಥಗಳು ತುಮಕೂರು ವಿಶ್ವ ವಿದ್ಯಾಲಯದಿಂದ ಪ್ರಕಟಿತ ಸಂಶೋಧನಾ
ಲೇಖನಗಳ ಸಂಗ್ರಹಗಳು. ಜೊತೆ ಜೊತೆಯಲ್ಲೆ ಅಭಿನಂದನ ಸಂಪುಟಗಳ, ಗ್ರಂಥಗಳ ಸಂಪಾದಕೀಯ ಸಹಭಾಗಿತ್ವ.”ಗುಣ ಮಧುರ”, ಮತ್ತು “ಸೂರ್ಯ ಕೀರ್ತಿ “ ಬೆಳಕು ಕಾಣಲು ಕಾರಣಕರ್ತರು.
ಇತಿಹಾಸ ಅಕಾದಮಿಯ
ವಾರ್ಷಿಕ ಸಮ್ಮೇಳನದ “ಇತಿಹಾಸ ದರ್ಶನ” ಸಂಶೋಧನಾ ಲೇಖನಗಳ ಬೃಹತ್‌ಗ್ರಂಥ. ಸುಮಾರು ಸಂಪುಟ
ಹತ್ತರಿಂದ ೨೮ ರವರೆಗಿನ ಹತ್ತೊಂಬತ್ತು ವರ್ಷಗಳಿಂದ ಅದನ್ನು ಸಂಪಾದಿಸುವ ಹೊಣೆಯಲ್ಲಿ ಅವರ ಪಾಲೂ ಇದೆ. ನಾಡಿನ ವಿದ್ವತ್
ಪತ್ರಿಕೆಗಳಾದ ಇತಿಹಾಸ ದರ್ಶನ. ಕರ್ನಾಟಕ ಲೋಚನ,ಸಾಹಿತ್ಯ ಪರಿಷತ್‌ಪತ್ರಿಕೆ, ಪ್ರಾಚ್ಯ
ವಸ್ತುಸಂಶೋಧನಾಇಲಾಖೆಯ ಪ್ರಕಟನೆಗಳು,ಕರ್ನಾಟಕ ಹಿಸ್ಟರಿ ಕಾಂಗ್ರೆಸ್, ಮಿಥಿಕ್ ಸೊಸೈಟಿ ಜರ್ನಲ್‌ಗಳಲ್ಲಿ ಮತ್ಸಂತು ಸಾದನೆ ಗಳಲ್ಲಿ ಪ್ರಕಟಿತ ಲೇಖನಗಳೇ ಹಲವಾರು ನೂರು..ಹಂಪಿ, ತುಮುಕೂರು,
ಕರ್ನಾಟಕ ವಿಶ್ವವಿದ್ಯಾನಿಲಯ ಗಳಿಂದಲೂ ಇವರ ಕೃತಿಗಳು ಪ್ರಕಟಿತವಾಗಿವೆ.
ಪಿ.ವಿ.ಕೆ. ಯವರ ಕನ್ನಡ ಸೇವೆಯ ಇನ್ನೊಂದು ಆಯಾಮ ಕನ್ನಡೇತರರಿಗೆ
ಕನ್ನಡ ಬೋಧನೆ. ಮೊದಲೆರಡು ವರ್ಷ ಕನ್ನಡ ಸಾಹಿತ್ಯ ಪರಿಷತ್ತಿನ ಅಡಿಯಲ್ಲಿ ಕಾರ್ಯ
ನಿರ್ವಹಿಸಿದ ನಂತರ ಕನ್ನಡ ಮತ್ತು ಸಂಸ್ಕೃತಿ
ಇಲಾಖೆಯಡಿಯಲ್ಲಿ ಕನ್ನಡ ಬಾರದವರಿಗೆ ಕನ್ನಡ
ಕಲಿಸುವ , ಅಂದರೆ ಮಾತನಾಡಲು, ಓದಲು ಮತ್ತು ಬರೆಯಲು ಕಲಿಸುವ ಹೊಣೆಯನ್ನು ಹೊತ್ತುಕೊಂಡು ನುರಾರು
ಕನ್ನಡೇತರರಿಗೆ ಕನ್ನಡ ಕಸ್ತೂರಿಯ ಪರಿಮಳ ಪಸರಿಸುವ ಗುರುವಾಗಿರುವರು . ಅವರ ಪ್ರಕಾರ ಈ ರೀತಿಯ
ಭಾಷಾಬೋಧನೆ ಬಹು ಆಸಕ್ತಿದಾಯಕ. ತಮಿಳರಿಗೆ ಕನ್ನಡ ಕಲಿಸುವ ಅವರ ಉಚ್ಚಾರಣೆ ತಿದ್ದುವುದು,ಅಲ್ಪ
ಪ್ರಾಣ ಮಹಾಪ್ರಾಣಗಳ ವ್ಯತ್ಯಾಸವೆ ಇಲ್ಲದ ಅವರ ಭಾಷೆಯ ಪ್ರಭಾವದಿಂದ ಬಹಳ ರಂಜನೀಯ.ಆದರೆ ತಮಿಳು
ಹಳೆಗನ್ನಡ ವನ್ನು ಬಹು ಮಟ್ಟಿಗೆ ಹೋಲುವುದರಿಂದ ಅವರು ಬೇಗನೆ ಕಲಿಯುವುರು
ಮಲೆಯಾಳಿಗಳಿಗೆ
ಉಚ್ಚಾರಣೆಯ ಸಮಸ್ಯೆ ಇಲ್ಲ ಆದರೆ . ಆದರೆ ಕ್ರಿಯಾಪದಗಳಲ್ಲಿ ಲಿಂಗ ಬೇಧವಿಲ್ಲ. ಅವನು, ಬಂತು,
ಅವಳು ಬಂತು ಅದು ಬಂತು ಎಂದಾಗ ನಗು ಉಕ್ಕುವುವುದು.ಇನ್ನು ಉತ್ತರ ಭಾರತದ ಕಲಿಕೆಯಂತೂ ಸರಳ
ಕೆಲಸವಲ್ಲ. ಅವರಲ್ಲಿ ಚರಾಚರ ವಸ್ತುಗಳಿಗೂ ಲಿಂಗವಿರುವುದರಿಂದ ಕೈ ಪುಲ್ಲಿಂಗ, ಬೆರಳು ಸ್ತ್ರೀ
ಲಿಂಗ , ಉಗುರು ಪುಲ್ಲಿಂಗ ಎಂದು ಕಲಿತವರಿಗೆ ಕನ್ನಡ ಮಾತನಾಡಲು ಬಹಳ ಕಷ್ಟ ವಾಗುತಿತ್ತು. ಹೀಗೆ
ಅನ್ಯ ಭಾಷೆಯವರಿಗೆ ಕನ್ನಡ ಕಲಿಸುತ್ತಾ ತಾವೂ ಅವರ ಭಾಷೆ ಕಲಿತರು.ಅದರ ಫಲವಾಗಿ ಹಲವಾರು
ಭಾಷೆಗಳಲ್ಲಿ ಪ್ರಾವೀಣ್ಯತೆ.
ಡಾ. ಪಿವಿಕೆ ಎಂದು
ಸಾಂಸ್ಕೃತಿಕ ವಲಯದಲ್ಲಿ ಪ್ರಚಲಿತವಿರುವ ಅವರು ಅನೇಕ ಎಂ. ಫಿಲ್‌ವಿದ್ಯಾರ್ಥಿಗಳಿಗೆ
ಮಾರ್ಗದರ್ಶಕರು. ಇತಿಹಾಸ ಸಂಶೋಧಕರಿಗಂತೂ ಅತ್ಯಮೂಲ್ಯ ಆಕರಗಳ ಮೂಲ.
ಅವರಿಗೆ ಡಾ. ಬಾ.ರಾ.ಗೋಪಾಲ್
ಹೆಸರಿನ ಇತಿಹಾಸ ಪ್ರಶಸ್ತಿ. ಮತ್ತು ಗದಗಿನ ನಡೆದ ೭೬ನೆ ಸಾಹಿತ್ಸ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ
ಪರಿಷತ್ ಸನ್ಮಾನ ಸಂದಿವೆ.
ಇಂದಿಗೂ ಇಲ್ಲಿಗೇ
ನಿಂತಿಲ್ಲ ಇವರ ಹುಡುಕಾಟ. ಈಗಲೂ ಬೆಳಗಾದರೆ ಶಾಸನಗಳು, ಹಸ್ತಪ್ರತಿಗಳೊಂದಿಗಿನ ಒಡನಾಟ. ಅವುಗಳ
ಸಂಗ್ರಹಣೆ ಸಂರಕ್ಷಣೆ ಮತ್ತು ವಿಶ್ಲೇಷಣೆಗಾಗಿ ಈಗಲೂ ತುಡಿಯುತ್ತಿದ್ದಾರೆ. ಈ ಕಾರ್ಯದಲ್ಲಿ
ಕೈಜೋಡಿಸುವ ಅನೇಕರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ ಕೃಷ್ಣಮೂರ್ತಿ.
ಅಭಿನಂದನಾರ್ಹರು. ಧನ್ಯವಾದ ನಿಮಗೆ ಈ ಸ್ತುತಾರ್ಹ ಕಾರ್ಯಕ್ಕಾಗಿ.
ReplyDeleteSheeshagiriraayarige abinandanegalu. Dr. PVK avarannu vibhinna reetiyalli parichayisidadkke. Krishna Moorthy yavaru samshoodhisida ondu shaashanavannoo haakiddare innoo chennagiruttitu. Nimaa vinootana sahiliya jotegi ennu munde halegannadada kampoo moodi baralendu aashisuve
ReplyDeleteಪಿ ವಿ ಕೆ ಅವರ ಸಂಪರ್ಕ ಸಂಖ್ಯೆ ತಿಳಿಸಿ
Deleteನಮ್ಮೂರಲ್ಲಿ ಒಂದು ಶಾಸನ ಇದೆ ಅದರ ಬಗ್ಗೆ ತಿಳಿದುಕೊಳ್ಳುವ ಹಂಬಲ