ಡಾ.ಸೂರ್ಯನಾಥ್ ಕಾಮತರು:
|
||||
ಪ್ರತಿಕೂಲ
ಪರಿಸ್ಥತಿಯಲ್ಲಿ ಪರಿಶ್ರಮದಿಂದ ಮೇಲೆ ಬಂದವರು ಅನೇಕ ಜನರಿರುವರು. ಆದರೆ ತಮ್ಮ ಬಾಲ್ಯದ
ದಿನಗಳನ್ನು ಮರೆಯದೆ ನೂರಾರು ಗ್ರಾಮೀಣ ಪ್ರತಿಭೆಗಳನ್ನು ಬೆಳಕಿಗೆ ತಂದ ವಿರಳರಲ್ಲಿ ಡಾ.
ಸೂರ್ಯನಾಥ ಕಾಮತರ ಹೆಸರು ಎದ್ದು ಕಾಣುತ್ತದೆ. ಅವರು ಹೆಸರಾಂತ ಇತಿಹಾಸ ಸಂಶೋಧಕರು ಮಾತ್ರವಲ್ಲ
ಸಾಹಿತಿಗಳೂ ಹೌದು. ಜೊತೆಗೆ ಪ್ರತಿಭೆಯ ಅನ್ವೇಷಕರೂ ಆಗಿರುವರು. ಬರೆಯುವದರ ಜೊತೆಗೆ ಬರೆಸುವುದೂ
ಅವರ ಮೆಚ್ಚಿನ ಹವ್ಯಾಸ..ಅವರು ಸ್ಥಾಪಿಸಿದ ಕರ್ನಾಟಕ ಇತಿಹಾಸ ಅಕಾದಮಿಯ ಮೂಲಕ ಸಂಶೋಧನ
ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದವರ ಸಂಖ್ಯೆ ಬಹಳ ದೊಡ್ಡದು. ಇತಿಹಾಸ ವಿದ್ವಾಂಸರು ಸಂಶೋಧನೆಗೆ
ಬರುವುದು ಸಹಜ . ಆದರೆ ಡಾ. ಕಾಮತರ ಉತ್ತೇಜನದಿಂದ ಹಳ್ಳಿಪಟ್ಟಣಗಳಲ್ಲಿ ವಾಸಿಸುತ್ತಿರುವ
ಶಿಕ್ಷಕರು, ಉಪನ್ಯಾಸಕರ ಜೊತೆಗೆ ಇತರೆ ವೃತ್ತಿಯಲ್ಲಿ ಇರುವವರು ತಮ್ಮ
ಪರಿಸರದಲ್ಲಿರುವ ಗುಡಿ ಗುಂಡಾರ, ಕೋಟೆ ಕೊತ್ತಳ, ಶಾಸನ ತಾಮ್ರಪಟಗಳ ಸಂಗ್ರಹ. ಅರ್ಥೈಸುವಿಕೆ ಮತ್ತು ಪ್ರಕಟನೆಗೆ ಮಾರ್ಗದರ್ಶನ ನೀಡಿ,
ವೇದಿಕೆ ಒದಗಿಸಿರುವವರು ಡಾ.ಕಾಮತ್ ಮತ್ತು ಅವರ ತಂಡ. ಪ್ರತಿವರ್ಷ ಇತಿಹಾಸ
ಸಮ್ಮೇಳನದಲ್ಲಿ ಮಂಡನೆಯಾಗುವ ನೂರಾರು ಸಂಶೋಧನಾ ಪ್ರಬಂಧಗಳು ಮತ್ತು ಸತತವಾಗಿ ೨೭ನೆಯ ವರ್ಷದಿಂದ
ಪ್ರಕಟವಾಗುತ್ತಿರುವ ಇತಿಹಾಸ ದರ್ಶನ ವಾರ್ಷಿಕ ಸಂಪುಟಗಳು ಅವರ ಪ್ರಯತ್ನದ ಫಲ. ಕರ್ನಾಟಕ
ಇತಿಹಾಸ ಮತ್ತು ಪರಂಪರೆಯ ಪ್ರಸಾರ ಮತ್ತು ಪ್ರಚಾರಕ್ಕೆ ಮುದ್ರಣ ವಿದ್ಯುನ್ಮಾನ ಮಾಧ್ಯಮ,ಸಂಘಟನೆ ಮತ್ತು ಸಾಹಿತ್ಯವನ್ನು ಸಶಕ್ತವಾಗಿ ಬಳಸಿದವರು. ಹೀಗೆ ಸಂಶೋಧನಾ ಸಾಹಿತ್ಯ
ಬೆಳೆಯ ಹುಲುಸಿಗೆ ಕಾರಣರಾಗಿರುವರು.
ಸೂರ್ಯನಾಥ್
ಉಪೇಂದ್ರ ಕಾಮತರು ೧೯೩೩ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದರು. ತಂದೆ
ಉಪೇಂದ್ರ ಕಾಮತ್, ತಾಯಿ ಪದ್ಮಾವತಿ. ಅವರ ಕುಟುಂಬ ಒಂದು ಫುಟ್ಬಾಲ್
ತಂಡ ಕಟ್ಟಬಹುದಾದಷ್ಟು ದೊಡ್ಡದು.. ಇವರು ಹನ್ನೆರಡನೆಯ ಮಗು.ತಂದೆಯದು ಹೋಟೆಲ್ ಉದ್ಯಮ. ಅದಕ್ಕೆ
ಅಣ್ಣಂದಿರ ಸಹಕಾರವೂ ಇದ್ದಿತು,ಇವರ ಹೋಟೆಲ್ ಓದುಬರಹ ಬಲ್ಲವರ,
ಭಾರತೀಯ ಸಂಸ್ಕೃತಿ ಮತ್ತು ಸ್ವಾತಂತ್ರ್ಯದ ಹಂಬಲ ಉಳ್ಳವರ ಅಡ್ಡೆಯಾಗಿತ್ತು.
ಅಲ್ಲಿ ಸೇರಿ ಚಾ ಕುಡಿಯುತ್ತಾ , ಪತ್ರಿಕೆ ಓದುತ್ತಾ ದೇಶದ
ಆಗುಹೋಗುಗಳ ಕುರಿತ ಬಿಸಿ ಬಿಸಿ ಚರ್ಚೆ ನಡೆಯುತಿದ್ದವು. ಅವರ ಅಣ್ಣ ಅಪ್ಪಟ ಕಾಂಗ್ರೆಸ್ಸಿಗ.
ಖಾದೀಧಾರಿ ಕೆಲವು ದಿನ ಜೇಲಿಗೂ ಹೋಗಿದ್ದರು. ಇವರ ಪ್ರಾಥಮಿಕ ಶಿಕ್ಷಣ ಬೆಳ್ತಂಗಡಿಯಲ್ಲಿ
ಆಯಿತು. ಎಂಟು ವರ್ಷವಾದಾಗಲೇ ತಂದೆಯನ್ನು ಕಳೆದುಕೊಂಡರು.ಅವರ ತಂದೆ-ಅಣ್ಣ ನಡೆಸುತಿದ್ದ ಹೋಟೆಲ್
ನಲ್ಲಿ ನಡೆಯುತಿದ್ದ ಚರ್ಚೆ, ವಿಚಾರ ವಿನಿಮಯ ಕಿರಿಯ ಸೂರ್ಯನಾರ್ಥರ
ಕಿವಿಯಮೇಲೆ ಬೀಳುತಿತ್ತು, ತಂದೆಯ ನಿಧನಾನಂತರ ಮುಂದೆ ಓದಲು
ಅನಾನುಕೂಲವಾಯಿತು. ಅದಕ್ಕಾಗಿ ಬಂಟ್ವಾಳದ ಬಳಿ ಇದ್ದ ಆಕ್ಕನ ಆಶ್ರಯದಲ್ಲಿ ಹೈಸ್ಕೂಲು ಶಿಕ್ಷಣ
ಸಾಗಿತು . ಅವರದೂ ಹೋಟೆಲ್ ಇತ್ತು. ಅಲ್ಲಿಯೂ ಅನಾಯಸವಾಗಿ ವಿದ್ಯಾವಂತರ ಪ್ರಭಾವ ಇದ್ದೇ ಇತ್ತು.
ಪತ್ರಿಕೆ, ಪುಸ್ತಕ ಮತ್ತು ಚರ್ಚೆಗಳು ಅವರ ಸಾಂಸ್ಕೃತಿಕ, ರಾಜಕೀಯ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಹರಿತಗೊಳಿಸಿದವು. ೧೯೪೨ ರ ಭಾರತ ಬಿಟ್ಟುತೊಲಗಿ
ಚಳುವಳಿ ಸಮಯದಲ್ಲಿ ಜೈಹಿಂದ್ ಘೋಷಣೆ ಸ್ಪೂರ್ತಿ ನೀಡಿತ್ತು. ಆಗಲೇ ಗಾಂಧೀಜಿ ಮತ್ತು ಕಾಂಗ್ರೆಸ್
ಬಗ್ಗೆ ಒಲವು ಮೂಡಿತು. ಖಾದಿ ಧರಿಸಲೂ ಮೊದಲು ಮಾಡಿದರು. ಅದೇ ಸಮಯದಲ್ಲಿ ರಾಷ್ಟ್ರೀಯಸ್ವಯಂ
ಸೇವಕ ಸಂಘದ ಸಂಪರ್ಕವೂ ಬಂದಿತು. ಅದರ ರಾಷ್ಟ್ರ ಭಕ್ತಿ ಪ್ರಚೋದಕ ಭಾಷಣಗಳು ಮನ ಸೆಳೆದವು.
ಸಕ್ರಿಯವಾಗಿ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸ ತೊಡಗಿದರು.ಆ ಸೆಳೆತ ಕೊನೆವರೆಗೂ ಉಳಿಯಿತು .
ಮಂಗಳೂರಿನ
ಸೈಂಟ್ಅಲೋಷಿಯಸ್ ಕಾಲೇಜಿನಲ್ಲಿ ಪದವಿ ಓದುವಾಗ ಸ್ವಾತಂತ್ರ್ಯ ಸಂಭ್ರಮದಲ್ಲಿಯೂ ದೇಶ ವಿಭಜನೆ
ಕೋಮು ಗಲಭೆ ಅವರನ್ನು ವಿಷಾದದಲ್ಲಿ ಮುಳುಗಿಸಿತು. ಮಂಗಳೂರಿನಲ್ಲಿ ಇಂಟರ್ ಮುಗಿಸಿದರು.
ತರ್ಕಶಾಸ್ತ್ರದಲ್ಲಿ ಕಾಲೇಜಿಗೆ ಪ್ರಥಮರಾಗಿದ್ದರು..ಮುಂದಿನ ಓದಿಗೆ ಮತ್ತೆ ಪರದಾಟ ಮೊದಲಾಯಿತು.
ಆಗ ಆಸರೆ ಕೊಟ್ಟಿದ್ದು ಧಾರವಾಡದಲ್ಲಿದ್ದ ಇನ್ನೊಬ್ಭ ಅಕ್ಕ. ಧಾರವಾಡದಲ್ಲಿ ಜೆ.ಎಸ್.ಎಸ್.
ಕಾಲೇಜಿನಲ್ಲಿ ಪದವಿ ಅಧ್ಯಯನವಾಯಿತು. ಅಲ್ಲಿ ಇವರ ಮೆಚ್ಚಿನ ವಿಷಯ ಅರ್ಥಶಾಸ್ತ್ರ ಮತ್ತು
ಇತಿಹಾಸ . ನಂತರ ಎಂಎ.ಗೆ ಸೇರಿದಾಗ ಡಾ.ಸಾಲೆತ್ತೂರರ ಹಾಗೂ ಜಿ.ಎಸ್.ದೀಕ್ಷಿತ್ ಪ್ರಭಾವ
ವಲಯದಲ್ಲಿ ಬಂದರು. ಅವರ ಚಿಂತನಾ ಲಹರಿಯೇ ಹೊಸ ದಿಕ್ಕು ಕಂಡು ಕೊಂಡಿತು. ಕರ್ನಾಟಕ ಇತಿಹಾಸ ಅವರ ಆಯ್ಕೆಯ
ವಿಷಯವಾಯಿತು. ಅವರಿಗೆ ಪಿಎಚ್. ಡಿ ಅಧ್ಯಯನಕ್ಕೆ ವಿದ್ಯಾರ್ಥಿ ವೇತನ ಪಡೆಯುವ ಅವಕಾಶವಿತ್ತು.
ಆದರೆ ಅವರು ಮೂರುವರ್ಷ ಕಲಾವಕಾಶ ಕೇಳಿದರು. ಕಾರಣ ಅವರ ಸಂಘದ ಚಟುವಟಿಕೆಯಲ್ಲಿ ತೀವ್ರವಾಗಿ
ತೊಡಗಿಸಿಕೊಂಡಿದ್ದರು. ಧಾರವಾಡ ಮತ್ತು ಬೆಳಗಾಂ ಜಿಲ್ಲೆಯಲ್ಲಿ ಸಂಘಟನೆಯ ಹೊಣೆ ಹೊತ್ತು
ಕೊಂಡಿದ್ದರು. ಜಿಲ್ಲೆಯ ಹಳ್ಳಿಹಳ್ಳಿಗೂ ಭೇಟಿ ಇತ್ತು ಸಂಘಟನೆಯ ಕೆಲಸ ಮಾಡಿದರು. ಅದರಿಂದ
ಮುಂದೆ ಸಂಶೋಧನೆಗೆ ಅನುಕೂಲವಾಯಿತು. ಅವರ ವಾಕ್ಚಾತುರ್ಯ ಬೆಳೆಯಿತು. ಸಂವಹನ ಕಲೆ ಸಿದ್ದಿಸಿತು.
ಜಾತಿ ಮತ ಬೇಧವಿಲ್ಲದೆ ಕರೆದವರ ಮನೆಯಲ್ಲಿ ಊಟ, ಶಾಖೆಯಲ್ಲಿ
ವಸತಿ. ಇದರಿಂದ ಜನಸಂಪರ್ಕ ಹೆಚ್ಚಿತು. ಆ ಭಾಗದ ಸಾಮಾಜಿಕ ಆರ್ಥಿಕ ಪಸರಿರದ ನೇರ ಅನುಭವ
ಸಿಕ್ಕಿತು. ಅದೇ ಸಮಯದಲ್ಲಿ ಪ್ರತಿ ಹಳ್ಳಿಯಲ್ಲಿ ಇರುವ ಪ್ರಾಚ್ಯ ವಸ್ತುಗಳ ಸ್ಮಾರಕಗಳ ನ್ನೂ
ಗಮನಿಸುತಿದ್ದರು . ಮುಂದೆ ಉತ್ತರ ಕರ್ನಾಟಕದ ಯಾವುದೇ ಭಾಗದಲ್ಲೂ ಸಂಶೋಧನೆಯ
ಕ್ಷೇತ್ರಕಾರ್ಯಕ್ಕೆ ಹೋದಾಗ ಆತ್ಮೀಯ ಸಹಕಾರ ಸಿಗುತಿತ್ತು. ಬಹುದಿನದ ನಂತರ ಬಂದ ಬಂಧುವಿಗೆ
ನೀಡುವಂತೆ ಸ್ವಾಗತ ನೀಡಿ ಹಬ್ಬದ ಊಟ ಹಾಕಿ ಸಹಕರಿಸುತಿದ್ದರು. ಯಾವುದೇ ಮಾಹಿತಿಯ ಸಂಗ್ರಹ
ಸುಲಭವಾಗುತಿತ್ತು.
ಮೂರು ವರ್ಷದ
ನಂತರ ಪಿಎಚ್.ಡಿ ಅಧ್ಯಯನಕ್ಕೆ ಶುರು ಮಾಡಿದರು, ಅದೇ ವೇಳೆಗೆ
ಡಾ.ಸಾಲೆತ್ತೂರು ನಿವೃತ್ತರಾದರು. ಯಾಕೋ ಮುಂದಿನ ಅಧ್ಯಯನಕ್ಕೆ ವಾತಾವರಣ ಪೂರಕವಾಗಿರಲಿಲ್ಲ.
ಗುರುಗಳು ಸಲಹೆಯಂತೆ ಬೊಂಬಾಯಿಗೆ ಹೋಗಿ ಅಲ್ಲಿ ಡಾ. ವಿಲಿಯಂ ಕೋಲ್ಹೋ ಅವರ ಮಾರ್ಗದರ್ಶನ ದಲ್ಲಿ
ಪಿಎಚ್. ಡಿ ಅಧ್ಯಯನಕ್ಕೆ ತೊಡಗಿದರು.
ಆದರೆ ಹಣದ
ಅಡಚಣೆ. ಆಗಲೇ ಮಾವನ ಮಗಳ ಜೊತೆ ಮದುವೆ ನಿಶ್ಚಯವಾಗಿತ್ತು..ದುಡಿಮೆಯ ಹಾದಿ ಹುಡುಕಲೇ ಬೇಕಿತ್ತು
ಅನೇಕ ಸಣ್ಣಪುಟ್ಟ ಕೆಲಸ ಮಾಡುವುದು., ಟ್ಯೂಷನ್ ಹೇಳುವುದು ಹಣ
ಗಳಿಕೆಗೆ ಸಹಾಯವಾದವು. ಆದರೆ ಗುರುಗಳಾದ ದೀಕ್ಷಿತ್ ಮತ್ತು ಸಾಲೆತ್ತೂರ ಪ್ರಭಾವದಿಂದ
ಬೊಂಬಾಯಿಯಲ್ಲಿ ದಿನಪತ್ರಿಕೆಯಲ್ಲಿ ಉದ್ಯೋಗ ದೊರಕಿತು.ಗಳಿಕೆ ಮತ್ತು ಕಲಿಕೆ ಜೊತೆ ಜೊತೆಯಾಗಿ
ಸಾಗಿತು. ೧೯೬೫ ರಲ್ಲಿ ಪಿಎಚ್. ಡಿ ಪ್ರಬಂಧ " Tuluvas in Vijaya nagara
Times " ಸಲ್ಲಿಸಿ ಡಾಕ್ಟರೇಟ್ ಪಡೆದರು. ಬೊಂಬಾಯಿಯಲ್ಲೇ ಟೈಮ್ಸ್
ಪತ್ರಿಕೆಯಲ್ಲಿ ಉತ್ತಮ ವೇತನದ ಉದ್ಯೋಗಾವಕಾಶ ಬಂದರೂ ಕರ್ನಾಟಕದ ಸೆಳೆತ ಹೆಚ್ಚಾಗಿ ಬೆಂಗಳೂರಿಗೆ
ಬಂದರು. ಉತ್ಥಾನದಲ್ಲಿ ಆಸರೆ ದೊರೆಯಿತು. ಅಲ್ಲಿ ಅವರದು ಏಕಸದಸ್ಯ ಪತ್ರಿಕಾತಂಡ. ಎಲ್ಲ ಕೆಲಸ
ಒಬ್ಬರೇ ನಿರ್ವಹಿಸಬೇಕು.. ಹಗಲು ಬರೆಯವ ಮೇಜು ರಾತ್ರಿ ಮಲಗುವ ಮಂಚ. ದಣಿವರಿಯದೆ ಹೊಸ
ಮಾಸಪತ್ರಿಕೆ ಹೊರ ತಂದರು. ಒಂದು ವರ್ಷ ಅಲ್ಲಿ ಸೇವೆ ಸಂದಿತು. ನಂತರ ಪ್ರಜಾವಾಣಿಯಲ್ಲಿ
ಉಪಸಂಪಾದಕನ ಕೆಲಸ ದೊರೆಯಿತು. ಪತ್ರಿಕಾ ಬರವಣಿಗೆಯಲ್ಲಿ ಕೈ ಕುದುರಿ ಖ್ಯಾತಿಗಳಿಸಿದರು. ಆಗಲೇ
ನೂರಾರು ಲೇಖನ ಕಥೆ ಕಾದಂಬರಿ ಸುಧಾ, ಮಯೂರ, ಪ್ರಜಾವಾಣಿಯಲ್ಲಿ ಪ್ರಕಟವಾದವು. ಪ್ರೊ. ದೀಕ್ಷಿತರು ಒತ್ತಾಯ ಮಾಡಿ ಹಂಪೆಯಲ್ಲಿನಡೆದ
ಇತಿಹಾಸ ಸಮಾವೇಶದಲ್ಲಿ ಪ್ರಬಂಧ ಮಂಡಿಸಲು ಉತ್ತೇಜನ ನೀಡಿದರು. ಆಗಿನಿಂದ ಅವರ ಸಂಶೋಧನಾ ಪಯಣ
ತೀವ್ರಗತಿಯಲ್ಲಿ ಸಾಗಿತು. ಆದರೆ ಅವರ ಮೊದಲ ಪ್ರೀತಿ ಇತಿಹಾಸ ಮತ್ತು ಸಂಶೋಧನೆ.
ಪ್ರಜಾವಾಣಿಯಲ್ಲಿ ಪಾಳಿಯ ಕೆಲಸ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿತು. ಅಲ್ಲಿ ೧೬ ತಿಂಗಳ
ಸೇವೆಯ ನಂತರ ಎ.ಪಿ.ಎಸ್ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆ ದೊರೆಯಿತು.ಪತ್ರಿಕಾರಂಗ ತೊರೆದು
ಬೋಧನಾರಂಗಕ್ಕೆ ಕಾಲಿಟ್ಟರು. ಬೆಂಗಳೂರುವಿಶ್ವವಿದ್ಯಾಲಯದಲ್ಲಿ ಅಧ್ಯಾಪನ ಮೊದಲಾಯಿತು.
ಪ್ರವಾಚಕರ ಹುದ್ದೆ ದೊರೆಯಿತು. ೧೯೮೧ರಲ್ಲಿ ನಿವೃತ್ತಿಯ ನಂತರ ಕರ್ನಾಟಕ ರಾಜ್ಯ ಗೆಜೆಟಿಯ
ನಿರ್ದೇಶಕರಾಗಿ ಮಾಡಿದ ನೇಮಕ ಜೀವನದಲ್ಲಿ ಹೊಸ ತಿರುವ ನೀಡಿತು. ಕರ್ನಾಟಕ ರಾಜ್ಯ ಗೆಜೆಟಿಯರ್
ಗಳ ಇಂಗ್ಲಿಷ್ ನಲ್ಲಿ ಎರಡು ಸಂಪುಟ ಮತ್ತು ಕನ್ನಡದಲ್ಲಿ ಮೂರು ಸಂಪುಟ ಪ್ರಕಟಿಸಿದರು.ಒಂದು
ದಶವಾರ್ಷಿಕ ಪುರವಣಿ ಹಾಗೂ ಉತ್ತರ ಕನ್ನಡ, ಬೆಳಗಾಂ,ಮೈಸೂರು ಬೆಂಗಳೂರು, ಕೊಡಗು ಮತ್ತು ಧಾರವಾಡ ಜಿಲ್ಲೆಗಳ
ಗೆಜೆಟಿಯರ್ಗಳನ್ನು ಹೊರ ತಂದರು.ಅವುಗಳ ಮೊದಲಭಾಗ ಸಂಶೋಧನೆಯ ಫಲವಾಗಿದ್ದರೆ ಕೊನೆಯಲ್ಲಿ ಹತ್ತು
ಹಲವು ವಿಷಯಗಳ ಹೊಳವು ಇವೆ. ಅಂತರ್ ಶಿಸ್ತೀಯ ಸಂಶೋಧಕರಿಗೆ ಅವು ಮಾಹಿತಿಯ ಗಣಿಗಳಾಗಿವೆ.
ಅದೇ
ಸಮಯದಲ್ಲಿ ಮೂರು ವರ್ಷ ರಾಜ್ಯ ಪತ್ರಾಗಾರದ ಇಲಾಖೆಯ ನಿರ್ದೇಶಕ ಹೊಣೆಯೂ ಬಂದಿತು. ರಾಜ್ಯಾದ್ಯಂತ
ಅಮೂಲ್ಯ ಚಾರಿತ್ರಿಕ ದಾಖಲೆಗಳ ಸಂಗ್ರಹ ಶುರುಮಾಡಿದರು ಹಳೆಯಪತ್ರಿಕೆಗಳಾದ ‘ಪಂಚಾಚಾರ್ಯ ಪ್ರಭ', ಕುಮುಟೆಯ ‘ಕಾನಡ
ವೃತ್ತ', ‘ಕಂಠೀರವ', ‘ನವಯುಗ' ಮೊದಲಾದಬ ಪತ್ರಿಕೆಗಳಲ್ಲಿನ ಅಮೂಲ್ಯವಾದ ಲಕ್ಷಗಟ್ಟಲೆ ಪುಟದ ದಾಖಲೆಗಳನ್ನು
ಸಂಗ್ರಹಿಸಿ ಮೈಕ್ರೊ ಫಿಲ್ಮ್ ಮಾಡಿಸಿದರು. ಮೈಸೂರಿನ ಅರಮನೆ ದಾಖಲೆಗಳಲ್ಲದೆ ಆ ಕಾಲದ ಹಿರಿಯರಾದ
ಮಹದೇವಪ್ಪ ರಾಂಪುರೆ, ಸರ್ದಾರ್ ವೀರಣ್ಣ ಗೌಡ,ಗಂಡಪ್ಪ ಗೌಡ, ಬಿ.ಪುಟ್ಟಯ್ಯ ಮೊದಲಾದ ಸಮಾಜ ಮತ್ತು
ರಾಜಕೀಯರಂಗದ ಗಣ್ಯರ ದಾಖಲೆಗಳನ್ನು ಸಂಗ್ರಹಿಸಿದರು.
ಅವರ ಕರ್ನಾಟಕ
ಸಂಕ್ಷಿಪ್ತ ಇತಿಹಾಸವು ಪ್ರಾಗೈತಿಹಾಸಿಕ ಕಾಲದಿಂದ ಪ್ರಸಕ್ತಕಾಲದವರೆಗಿನ ಕಥಾನಕವಾಗಿದೆ.ಇದರ
ಇಂಗ್ಲಿಷ್ಆವೃತ್ತಿಯೂ ಬಂದಿದೆ, ಈ ಪುಸ್ತಕ ಪಠ್ಯಪುಸ್ತಕವಾಗಿ
ಜನಮಾನ್ಯವಾಗಿದೆ. ಡಾ. ಕಾಮತರ ಪರಿಣಿತಿ ಮತ್ತು ಪರಿಶ್ರಮ ಎದ್ದು ಕಾಣುವುದು ಸ್ವಾತಂತ್ರ್ಯ 'ಸಂಗ್ರಾಮದ ಸ್ಮೃತಿಗಳು" ಎಂಬ ಬೃಹತ್ಗ್ರಂಥದಲ್ಲಿ.ನಾಡಿನಾದ್ಯಂತದ ತಿರುಗಾಟ
ಮತ್ತು ಕ್ಷೇತ್ರಕಾರ್ಯದ ಫಲವಾಗಿ ಮೌಖಿಕ ಇತಿಹಾಸದ ಮಹಾನ್ ದಾಖಲೆಯಾಗಿದೆ ಆ ಗ್ರಂಥ. ನೂರಾರು
ಜನಸಾಮಾನ್ಯರ ತ್ಯಾಗದ ಕಥೆ ಅವರ ಬಾಯಿಂದಲೇ ಮೂಡಿಬಂದಿದೆ. ೩೨೦೦ ಪುಟದ ೩ ಸಂಪುಟಗಳಲ್ಲಿ
ಪ್ರಕಟವಾಗಿದೆ.
ಇನ್ನೂ
ಹೆಚ್ಚಿನ ಶಾಸ್ತ್ರೀಯ ರೂಪದಲ್ಲಿ ಹೊರ ಬಂದಿರುವುದು " ಕ್ವಿಟ್ಇಂಡಿಯಾ ಮೂಮೆಮ್ಟ್ ಇನ್
ಕರ್ನಾಟಕ". ಸ್ವಲ್ಪಮಟ್ಟಿಗೆ ಸ್ಮೃತಿ ಆಧಾರಿತವಾದರೂ ಬಹು ಮಟ್ಟಿಗೆ ಸರ್ಕಾರಿದಾಖಲೆ ಮತ್ತು
ಪತ್ರಿಕಾವರದಿಗಳನ್ನು ಬಳಸಿಕೊಳ್ಳಲಾಗಿದೆ. ದಕ್ಷಿಣಕರ್ನಾಟಕದ ಹಳ್ಳಿಪಟ್ಟಣಗಳಲ್ಲಿ ನಡೆದ
ವಿದ್ಯಾರ್ಥಿಗಳ,ಶ್ರಮಜೀವಿಗಳ ಮತ್ತು ರೈತರ ಹೋರಾಟದ ಕಥನ ಇಲ್ಲಿದೆ.
ಉತ್ತರ ಕರ್ನಾಟಕದ ಚಳುವಳಿ ಜಯಪ್ರಕಾಶ ನಾರಾಯಣರಿಂದಲೂ ಮಾದರಿ ಎಂದು ಮೆಚ್ಚುಗೆಗೆ
ಪಾತ್ರವಾಯಿತು. ಸಹಕಾರ ಚಳುವಳಿಯ ಆಳ ಅಗಲಗಳ ಅಧ್ಯಯನ ಮತ್ತು ಸಂಶೋಧನೆ ಮಾಡಿ ಸ್ಮೃತಿ ಸಂಪುಟಗಳು
ಎಂಬ ಗ್ರಂಥ ಬರೆದಿರುವರು.
ಕರ್ನಾಟಕದ
ಸಾಮಾಜಿಕ ಚಳುವಳಿ ಕುರಿತು ಅನೇಕ ಲೇಖನ ಮತ್ತು ಪ್ರಬಂಧ ಮಂಡಿಸಿರುವರು. ಅವುಗಳೆಲ್ಲವನ್ನೂ
ಸೇರಿಸಿದ ಸಂಪುಟ ಹೊರ ಬರಬೇಕಿದೆ.ಅವರಲ್ಲಿ ಸಂಶೋದನೆ, ಸಂಪಾದನೆ
ಮತ್ತು ಸೃಜನಶೀಲತೆಗಳು ಮುಪ್ಪುರಿಗೊಂಡು ಅವರ ಬರಹದ ಮೌಲ್ಯ ಹೆಚ್ಚಿಸಿವೆ.
ಅವರ ಸಾಹಿತ್ಯ
ಸೇವೆಯೂ ಗಣನೀಯ. ಅವರು ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಬರವಣಿಗೆ ಪ್ರಾರಂಭ ಮಾಡಿದರು. ಅವರ
ಮೊದಲ ಕೃತಿ ಬೆಳಗಿದ ತಾರೆಗಳು ೧೯೫೮ ರಲ್ಲಿ ಪ್ರಕಟವಾಯಿತು. ಇತಿಹಾಸದಲ್ಲಿ ಅಷ್ಟೇನು
ಪ್ರಸಿದ್ಧರಲ್ಲದ ಎಂಟು ಮಹಿಳೆಯನ್ನು ಕುರಿತ ಕಥಾಸಂಗ್ರಹ ಅದಾಗಿದೆ. ಕಾಲೇಜು ದಿನಗಳಲ್ಲಿ
ಸಂಯುಕ್ತ ಕರ್ನಾಟಕ ಮತ್ತು ಕರ್ಮವೀರದಲ್ಲಿ ಕಥೆ ,ಲೇಖನ ಪ್ರಕಟವಾದವು ,
ಕಥೆ, ಕಾದಂಬರಿ, ವ್ಯಕ್ತಿಚಿತ್ರ
ಹರಟೆ, ಎಲ್ಲ ವಿಭಾಗದಲ್ಲೂ ಪರಿಶ್ರಮ. ಹಿಂದಿ ಮರಾಠಿಗಳ ಪರಿಚಯದ
ಪರಿಣಾಮ ಅನುವಾದಕ್ಕೂ ಕೈಹಾಕಿದರು. ನಾಲ್ಕು ಕಾದಂಬರಿಗಳು, ಏಳು
ಕಥಾಸಂಕಲನ, ಹೆಚ್ಚಾಗಿ ಐತಿಹಾಸಿಕ ಕಥೆಗಳು ,೧೫ ವೈಚಾರಿಕ ಮತ್ತು ಸಂಶೋಧನಾ ಲೇಖನಗಳೂ ಇವೆ. ಅವರ ಮೂರು ಭಾಷಾಂತರಗಳೂ ಮತ್ತು
ಹದಿನಾರು ಗೆಜೆಟಿಯರ್ ಗಳು ಅವರ ಕತೃತ್ವ ಶಕ್ತಿಯ ಫಲಗಳಾವೆ. ಅವರು ಇಂಗ್ಲಿಷ್ ನಲ್ಲಿಯೂ ೧೨
ರಚನೆ ಮಾಡಿರುವರು. ಡಾ. ಕಾಮತ್ಅವರ ಅಧ್ಯಕ್ಷತೆಯಲ್ಲಿ , ಶ್ರದ್ಧೆ
ಮತ್ತು ಸಂಘಟನಾಶಕ್ತಿಯ ಫಲವಾಗಿ ಮಿಥಿಕ್ ಸೊಸೈಟಿ ಮತ್ತು ಕರ್ನಾಟಕ ಇತಿಹಾಸ ಅಕಾದಮಿಗಳು ಇಂದು
ವಿದ್ವತ್ ಲೋಕದಲ್ಲಿ ಹೆಸರು ಮಾಡಿವೆ. ಅವರ ಬಲ ಪಂಥೀಯ ಒಲವು ಮತ್ತು ಸಂಘದ ನಂಟಿನಿಂದ
ಕಿರುಕುಳಕ್ಕೆ ಒಳಗಾದದ್ದೂ ಉಂಟು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಅವರ ಸಂಬಂಧವಿರುವ
ಸಂಘಟನೆಗಳಿಗೆ ಆರ್ಥಿಕ ನೆರವು ನಿಲ್ಲಿಸಿದುದೂ ಇದೆ. ಆದರೆ ಅವರ ಪ್ರಗಲ್ಬ ಪಾಂಡಿತ್ಯ ಮತ್ತು
ದಣಿವರಿಯದ ದುಡಿಮೆಯ ಮುಂದೆ ಅವೆಲ್ಲ ಮಂಕಾದವು. ಅವರ ಸೇವೆಯನ್ನು ಅಗತ್ಯ ಬಿದ್ದಾಗ
ಬಳಸಿಕೊಳ್ಳುವಲ್ಲಿ ಸರ್ಕಾರ ಹಿಂಜರಿಯಲಿಲ್ಲ. ಡಾ. ಕಾಮತರ ಜನಪರ ಕಾಳಜಿ ಅವರ ಎಲ್ಲ ಕೆಲಸದಲ್ಲೂ
ಕಾಣುವುದು.. ಈಗ ಕರ್ನಾಟಕ ಇತಿಹಾಸ ಬಗ್ಗೆ ಇದಮಿಥ್ಥಂ ಎಂದು ಹೇಳಲು ಡಾ. ಸೂರ್ಯನಾಥ ಕಾಮತ್
ಬೇಕೇ ಬೇಕು. ಕಾಮತ್ ಬಾಲ್ಯದಿಂದಲೇ ಗಾಂಧಿ ತತ್ವದ ನಿಷ್ಠ ಪ್ರತಿಪಾದಕ. ಹಣದ ಹಿಂದೆ ಹೋಗುವ ಗುಣ
ಇಲ್ಲದೆ ಇರುವುದರಿಂದ ಸಹಜವಾಗಿ ಶ್ರೀಮಂತಿಕೆಯಿಂದ ದೂರ. ವೈಯುಕ್ತಿಕ ಜೀವನದಲ್ಲೂ ತುಸು
ತ್ರಾಸದಾಯಕ ಪರಿಸ್ಥಿತಿ. ಶ್ರೀಮತಿಗೆ ಏಕೋ ಆರೋಗ್ಯ ಭಾಗ್ಯದ ಕೊರತೆ. ಎರಡು ಹೆಣ್ಣು ಒಂದು
ಗಂಡಿನ ಚಿಕ್ಕ ಸಂಸಾರವಾದರೂ ಇದ್ದ ಒಬ್ಬ ಮಗನದೂ ತುಸು ಕಾಳಜಿ ಮಾಡಬೆಕಾದ ಪರಿಸ್ಥಿತಿ. ಆದರೆ
ಇವು ಯಾವೂ ಅವರ ಉತ್ಸಾಹ ಕುಗ್ಗಿಸಲಿಲ್ಲ ಅವರ ಬೆನ್ನುನೋವು ಉಲ್ಬಣಿಸಿದರೂ ಹಾಸಿಗೆಯಲ್ಲೇ ಮಲಗಿ
ಬರವಣಿಗೆ ಮಾಡಿದ ಛಲಗಾರ.ಇತ್ತೀಚೆಗೆ ಬಾಳಸಂಗಾತಿಯನ್ನೂ ಕಳೆದುಕೊಂಡರು . ಈಗಲೂ ಯಾರೇ ಯುವ
ಸಂಶೋಧಕರು ಮಾಹಿತಿ ಕೇಳಿದರೆ ಮನಮುಟ್ಟುವಂತೆ ಮಾರ್ಗದಶನ ಮಾಡುವರು.ಅವರ ಕನಸು ಮನಸಿನಲ್ಲೂ
ಇತಿಹಾಸ ಕುರಿತಾದ ಕಳಕಳಿ ಎದ್ದು ಕಾಣುವುದು.ಈ ಹಿರಿಯ ಚೇತನದ ಜೀವಮಾನದ ಸಾಧನೆ ಪರಿಗಣಿಸಿ
ಕರ್ನಾಟಕ ಇತಿಹಾಸ ಅಕಾದಮಿಯು ತನ್ನ ೨೭೭ನೆಯ ವಾರ್ಷಿಕ ಸಮ್ಮೇಳನದಲ್ಲಿ ಬಿ. ಆರ್. ಆರ್ ಫ್ಯಾಮಿಲಿ ಟ್ರಸ್ಟ್‌ನ ಒಂದು ಲಕ್ಷ ರೂಪಾಯಿ ನಗದು ಮತ್ತು ಸ್ಮರಣಫಲಕ ಒಡಗೂಡಿದ ಇತಿಹಾಸ ರಂಗದ ಪ್ರತಿಷ್ಠಿತ “ ಇತಿಹಾಸ ಶ್ರೀ” ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದೆ.
(ಕೆಂಡಸಂಪಿಗೆಯಲ್ಲಿ ಪ್ರಕಟಿತ ಲೇಖನ)
|
Friday, September 20, 2013
"ಇತಿಹಾಸ ಶ್ರೀ " ಪ್ರಶಸ್ತಿ ವಿಜೇತರು
Subscribe to:
Post Comments (Atom)
No comments:
Post a Comment