Thursday, September 5, 2013

ಬನ್ನೂರು -ಒಂದುವಿವೇಚನೆ

ಶಾಸನಗಳ ಹಿನ್ನೆಲೆಯಲ್ಲಿ ಬನ್ನೂರು ಒಂದು ವಿವೇಚನೆ
ವೇಮಗಲ್ ಮೂರ್ತಿ
ಇಂದಿನ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರ (ತಿ. ನರಸೀಪುರ) ತಾಲ್ಲೂಕಿನ ಹೋಬಳಿ ಕೇಂದ್ರವಾಗಿರುವ ಬನ್ನೂರು, ಇತಿಹಾಸದ ಅನೇಕ ಪ್ರಮುಖ ಘಟನಾವಳಿಗಳಿಗೆ ಸಾಕ್ಷಿಯಾಗಿದೆ.
ಗಂಗರ ಕಾಲದಿಂದ ಆರಂಭವಾಗುವ ಬನ್ನೂರಿನ ಇತಿಹಾಸವು ಮೈಸೂರು ಅರಸರ ಆಡಳಿತದವರೆಗೂ ಅವಿಚ್ಛಿನ್ನವಾಗಿ ನಡೆದು ಬಂದಿದೆ. ಇಲ್ಲಿ ದೊರೆತಿರುವ ಶಾಸನಗಳಲ್ಲಿ ಅತ್ಯಂತ ಪ್ರಾಚೀನವಾದದ್ದೆಂದರೆ ರಾಮಸ್ವಾಮಿ ದೇಗುಲದ ಉತ್ತರ ದಿಕ್ಕಿನ ಕರುವು ಕಲ್ಲಿನ ಬಳಿ ಇರುವ ಶಾಸನವೇ ಆಗಿದೆ. ಈ ಶಾಸನವು ೮ನೆಯ ಶತಮಾನಕ್ಕೆ ಸೇರಿದ್ದು, ವಿವರಗಳು ನಷ್ಟವಾಗಿದ್ದರೂ, ಗಂಗರ ದೊರೆ ಶ್ರೀಪುರುಷನನ್ನು ಉಲ್ಲೇಖಿಸುತ್ತದೆ. ೧೦-೧೧ನೆಯ ಶತಮಾನದಲ್ಲಿ ಈ ಪ್ರಾಂತ್ಯವು ಚೋಳರ ವಶಕ್ಕೆ ಸಂದಿರುವುದನ್ನು ಇಲ್ಲಿನ ಶಾಸನಗಳಿಂದ ತಿಳಿಯಬಹುದಾಗಿದೆ. ನಂತರ ಚೋಳರನ್ನು ಸೋಲಿಸಿ ತಲಕಾಡನ್ನು ವಿಷ್ಣುವರ್ಧನ ಪಡೆದುಕೊಂಡ ಮೇಲೆ ಈ ಭಾಗವು ಹೊಯ್ಸಳರ ನೇರವಾದ ಆಳ್ವಿಕೆಗೆ ಸಂದಾಯವಾಯಿತು. ಆದರೂ ಇಲ್ಲಿನ ಕೆಲವು ಶಾಸನಗಳ ಭಾಷೆ ತಮಿಳೇ ಆಗಿರುತ್ತದೆ. ಹೊಯ್ಸಳರಿಗೂ, ಚೋಳರಿಗೂ ಆಗಾಗ ನಡೆಯುತ್ತಿದ್ದ ಕಾಳಗಕ್ಕೆ ಇಲ್ಲಿನ ಶಾಸನಗಳು ಸಾಕ್ಷಿಯಾಗಿವೆ. ಹೊಯ್ಸಳರ ವಿಷ್ಣುವರ್ಧನ ಹಾಗೂ ಎರಡನೆಯ ಬಲ್ಲಾಳನ ಶಾಸನಗಳ ಅವಲೋಕನದಿಂದ ಈ ಪ್ರಾಂತ್ಯದಲ್ಲಿ ಹೊಯ್ಸಳ ಸಾಮ್ರಾಜ್ಯವನ್ನು ಭದ್ರವಾಗಿ ಸ್ಥಾಪಿಸಿದ ಮೇಲೆ ಅವರು ಈ ಊರಿಗೆ ನೀಡಲಾದ ಪ್ರಾಮುಖ್ಯತೆಯನ್ನು ನಾವು ಗಮನಿಸಬೇಕಾಗುತ್ತದೆ.
ನಂತರದ ದಿನಗಳಲ್ಲಿ ವಿಜಯನಗರದ ಅರಸರು ಈ ಪ್ರಾಂತ್ಯವನ್ನು ಆಳಿದರು. ಉಮ್ಮತ್ತೂರು ರಾಜ್ಯ, ತೆರಕಣಾಂಬಿ ರಾಜ್ಯಗಳನ್ನು ವಿಜಯನಗರದ ಅರಸರು ರೂಪಿಸುವಾಗ ಈ ಬನ್ನೂರು ಪ್ರಾಂತ್ಯವು ಉಮ್ಮತ್ತೂರು ರಾಜ್ಯದ ಗಡಿ ಪ್ರದೇಶವಾಗಿ ಬಹುಶಃ ರೂಪುಗೊಂಡಿರಬೇಕು. ವಿಜಯನಗರದ ಅರಸರ ತರುವಾಯ, ಮೈಸೂರು ಅರಸರ ಆಡಳಿತಕ್ಕೆ ಈ ಪ್ರದೇಶವು ಒಳಪಟ್ಟಿತ್ತು.
ಬನ್ನೂರು ಪ್ರಾದೇಶಿಕವಾಗಿ ಅಷ್ಟೇನೂ ಬೆಟ್ಟಗುಡ್ಡಗಳು ಇಲ್ಲದೇ ಇರುವ, ಕಾವೇರಿ ನದಿಯ ತಪ್ಪಲು ಪ್ರದೇಶವಾಗಿದ್ದು ಪ್ರಾಚೀನ ಕಾಲದಿಂದಲೂ ಕೃಷಿಯೇ ಆಧಾರವಾದ ಪ್ರದೇಶ. ಆದುದರಿಂದಲೇ ಇಲ್ಲಿ ಅನೇಕ ರೀತಿಯ ಬೆಳೆಗಳನ್ನು ಬೆಳೆಯಲು ಸಾಧ್ಯವಾಯಿತು. ಇಲ್ಲಿನ ಗದ್ದೆ, ತೋಟಗಳನ್ನು ದೇಗುಲಗಳಿಗೆ ದಾನವಾಗಿ ನೀಡಿರುವುದು ಅಲ್ಲಿನ ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ನಾವು ಸಾಮಾನ್ಯವಾಗಿ ಮಲೆನಾಡಿನ ಕೃಷಿಯ ವ್ಯಾಪ್ತಿಯಲ್ಲಿ ಸೇರಿಸುವ ಅಡಿಕೆ ಮರವನ್ನು ಇಲ್ಲಿನ ಶಾಸನಗಳಲ್ಲಿ ದಾನವಾಗಿ ನೀಡಿರುವುದನ್ನು ನೋಡಿದರೆ ಇಲ್ಲಿ ಅಡಿಕೆ ಬೆಳೆಯನ್ನು ಕೂಡ ವ್ಯವಸ್ಥಿತವಾಗಿ ನಡೆಸುತ್ತಿದ್ದರು ಎಂಬುದು ಮನವರಿಕೆಯಾಗುತ್ತದೆ.
ಆಡಳಿತ ವಿಭಾಗವಾಗಿ ‘ಬನ್ನೂರು ಪ್ರಾಚೀನ ಗಂಗರಸರ ಕಾಲದಲ್ಲಿ ಯಾವ ವಿಭಾಗದಲ್ಲಿತ್ತು ಎಂಬುದರ ಉಲ್ಲೇಖ ಸ್ಪಷ್ಟವಾಗಿಲ್ಲದಿದ್ದರೂ ಚೋಳರ ಆಳ್ವಿಕೆಯ ಹೊತ್ತಿಗೆ ಬನ್ನೂರು ಮುಡಿಗೊಂಡ ಚೋಳಮಂಡಲದ ಭಾಗವಾದ ವಡಗೆರೆ ನಾಡಿನಲ್ಲಿ ಅಂತರ್ಗತವಾಗಿತ್ತು.
ಇಂತಹ ಬನ್ನೂರು ಶಾಸನಗಳಲ್ಲಿ ಬನ್ನಿಯೂರು, ವಹ್ನಿಪುರ, ವನ್ನಿಯೂರು ಎಂಬೆಲ್ಲಾ ಹೆಸರುಗಳಿಂದ ಕರೆಯಲ್ಪಟ್ಟಿದೆ. ಅಲ್ಲದೆ ಇದು ಪ್ರಾಚೀನ ಪ್ರಮುಖ ಅಗ್ರಹಾರವಾಗಿದ್ದು ದೇವಾಲಯಗಳ ತಾಣವಾಗಿಯೂ ಇದ್ದುದಕ್ಕೆ ಸಾಕ್ಷಿಯಾಗಿ ಬನ್ನೂರನ್ನು ‘ಜನನಾಥ ಚತುರ್ವೇದಿ ಮಂಗಲ ಎಂದು ಹೊಯ್ಸಳರ ಶಾಸನಗಳು ಕರೆದಿರುವುದು ಅದರ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.
ಇಲ್ಲಿ ಹಲವಾರು ದೇವಾಲಯಗಳು ಇದ್ದಿರುವ ಬಗ್ಗೆ ಅಲ್ಲಿನ ಶಾಸನಗಳಿಂದ ನಮಗೆ ತಿಳಿದು ಬರುತ್ತದೆ. ಅವುಗಳಲ್ಲಿ ಪ್ರಮುಖವಾದ ದೇವಾಲಯಗಳೆಂದರೆ ೧) ಹನುಮಂತೇಶ್ವರ, ೨) ಕೈಲಾಸೇಶ್ವರ, ೩) ವಿಷ್ಣು ದೇವಾಲಯ, ೪) ರಾಮಚಂದ್ರ, ೫) ರಘುಪತಿಸ್ವಾಮಿ ದೇವಾಲಯಗಳು. ಇಷ್ಟೇ ಅಲ್ಲದೆ ಜನ್ಮಾಂಜನೇಯ ದೇವಾಲಯ, ಸರೋವರ ಆಂಜನೇಯ ಮತ್ತು ಹೇಮಾದ್ರಮ್ಮ ದೇವಾಲಯಗಳೂ ಇವೆ.
ಕೆಲವು ದೇವಾಲಯಗಳಿಗೆ ಸಂದಂತಹ ದತ್ತಿ ದಾನಗಳನ್ನು ಶಾಸನಗಳ ಮುಖೇನ ವಿಶ್ಲೇಷಿಸಲಾಗಿದೆ. ಮುಂದೆ:
೧) ವಿಷ್ಣು ದೇವಾಲಯ
ಕ್ರಿ.ಶ.೧೧೩೫ರಲ್ಲಿ ಹೊಯ್ಸಳರ ರಾಜ ವಿಷ್ಣುವರ್ಧನನ ಕಾಲದಲ್ಲಿ ಬನ್ನಿಯೂರಾದ, ಜನನಾಥ ಚತುರ್ವೇದಿ ಮಂಗಲದ ೧೭೦೦ ಮಹಾಜನ ಕೂಡಿರುವ ವಿಷ್ಣುದೇವನಿಗೆ ಬೆಳ್ವಲದ ಬಾದಾಮಿಯ ಹುವಿಯರ ನಾರಸಿಂಹದೇವ ಮಾಡಿದ ಧರ್ಮ ಇಂತಿದೆ. ಉತ್ತರಾಯಣ ಸಂಕ್ರಮಣದಲ್ಲಿ ನಂದಾದೀವಿಗೆಗಾಗಿ ೩ ಗದ್ಯಾಣ, ಸಂಜೆ ಅಗ್ಗಿಷ್ಟಿಕೆಗೆ ೩ ಗದ್ಯಾಣ, ತಾಂಬೂಲಕ್ಕೆ ೨ ಗದ್ಯಾಣ, ಹೀಗೆ ೧೧ ಗದ್ಯಾಣದ ಜೊತೆಗೆ ಊರಿನ ಮಹಾಜನಗಳು ಅಗ್ಗಿಷ್ಟಿಕೆಗೆ ನೀಡಿರುವ ೧ ಗದ್ಯಾಣ ಸೇರಿ ಒಟ್ಟು ೧೨ ಗದ್ಯಾಣ ನೀಡಿರುವುದರ ವಿಷಯ ತಿ.ನ.ಶಾ. ಸಂಖ್ಯೆ ೬೯ರಲ್ಲಿ ಪ್ರಸ್ಥಾಪಿಲ್ಪಟ್ಟಿದೆ. ನಾರಸಿಂಹದೇವ ಮಾತ್ರವಲ್ಲದೆ, ಊರಿನ ಮಹಾಜನಗಳೂ ದಾನ ಕೊಟ್ಟಿದ್ದಾರೆ, ಇದರಿಂದ ಇಲ್ಲಿನ ಜನಗಳಲ್ಲಿ ಸಾಮರಸ್ಯ ಎಷ್ಟೊಂದು ಇತ್ತೆಂದು ತಿಳಿದುಬರುತ್ತದೆ.
ವಡಕರೈನಾಡಿನ ವಣ್ಣಿಯೂರಿನ (ಜನನಾಥ ಚತುರ್ವೇದಿ ಮಂಗಲ) ಮಹಾಜನಗಳು ಮಣವಾಳ ಆಳ್ವಾರರ ಪ್ರತಿಷ್ಠೆಗಾಗಿ ಕಾವೇರಿ ನೀರನ್ನು ಹುಣ್ಣಿಮೆಯಂದು ಹಾಗೂ ಸಾಮನಪಲ್ಲಿಯನ್ನು (ಸಾಮನಹಳ್ಳಿ) ದೇವದಾನವಾಗಿ ಬಿಟ್ಟಿದ್ದು ತಿಳಿದುಬರುತ್ತದೆ (ತಿ.ನ.ಶಾ.ಸಂ. ೬೮).
೨) ಹನುಮಂತೇಶ್ವರ
ಈ ದೇವಾಲಯವು ತುಂಬಾ ಹಳೆಯದಾದದ್ದು. ದೇವಾಲಯದಲ್ಲಿರುವ ಲಿಂಗವನ್ನು ಹನುಮಂತನೇ ಪ್ರತಿಷ್ಠಾಪಿಸಿದನೆಂದು ಐತಿಹ್ಯವಿದೆ. ಕ್ರಿ.ಶ.೧೫೪೧ರಲ್ಲಿ ಅಚ್ಚುತರಾಯ ಮಹಾರಾಯನ ಆಳ್ವಿಕೆಯಲ್ಲಿ ಈತನ ಮಂತ್ರಿ ವರದಪ್ಪನಣ್ಣನ ಪ್ರತಿನಿಧಿ ಕಂನಪನಾಯಕರ ಮಗ ತಂಮನಾಯಕರು ವಹ್ನಿಪುರದ ಹನುಮಂತೇಶ್ವರ ದೇವರಿಗೆ ಹೊಸದಾಗಿ ರಥವನ್ನು ಕಟ್ಟಲು ಹಾಗೂ ಉಮಾಸ್ಕಂದೇಶ್ವರ, ವಿಘ್ನೇಶ್ವರ ಮುಂತಾದ ಸೌಮ್ಯದೇವರುಗಳನ್ನು ಹೊಸದಾಗಿ ಮಾಡಿಸಿ ಆಚಂದ್ರಾರ್ಕವಾಗಿ ರಥೋತ್ಸವ ನಡೆಯಲು ಕಾವೇರಿ ಕಾಲುವೆಯ ಕೆಳಗೆ ೬ ಖಂಡುಗ ಗದ್ದೆ, ಕಲ್ಲುಮಡವೆಯ ತೆಂಗಿನ ತೋಟ ಹಾಗೂ ಅಲ್ಲಿನ ೯೦೦ ಅಡಿಕೆ ಮರಗಳನ್ನು ದಾನವಾಗಿ ನೀಡಿರುವುದರ ಬಗ್ಗೆ ಪ್ರಸ್ತಾಪವಿದೆ. ಇಷ್ಟೇ ಅಲ್ಲದೆ ನಿತ್ಯಪ್ರಾತಃ ಕಾಲದ ಧ್ಯಾನಕ್ಕಾಗಿ ತಂಮನಾಯಕರ ಹೆಂಡತಿ ತಿಪ್ಪಂಮ್ಮನೂ ಹನುಮಂತೇಶ್ವರ ದೇವರಿಗೆ ಗದ್ದೆ ಕಾಲುವೆ ಕೆಳಗೆ ಒಂದು ಖಂಡುಗ ಹಾಗೂ ೭ ಖಂಡುಗ ಗದ್ದೆ, ೯೦೦ ಅಡಿಕೆ ಮರಗಳನ್ನು ‘ಬನ್ನೂರಿನ ಹೆಬ್ಬಾರುಗಳ ಗೌಡರ, ಮಹಾಜನಗಳ ಹಾಗೂ ಊರ ಶ್ಯಾನುಭೋಗರ ಸಮಕ್ಷಮದಲ್ಲಿ ನೀಡಿರುವುದು ಮತ್ತು ತಂಮನಾಯಕರು ಹೆಡೆಹಳ್ಳಿಯ ಪಡುವಣ ಕೆರೆಯನ್ನು, ಆ ಕೆರೆ ಕೆಳಗಿನ ಗದ್ದೆ ತೋಟವನ್ನು ಹಿರಣ್ಯೋದಕ ದಾನವಾಗಿ ನೀಡಿದ್ದಾರೆ. ಈ ವಿಷಯವು ಹನುಮಂತೇಶ್ವರ ದೇವಾಲಯದ ಪ್ರಾಕಾರದಲ್ಲಿ ಗಿರಿಜಾ ಕಲ್ಯಾಣ ಮಂಟಪದಲ್ಲಿ ನೆಟ್ಟಿರುವ ಶಾಸನದ ಸಂಖ್ಯೆ ತಿ.ನ.ಶಾ.ಸಂ. ೫೫ ರಿಂದ ತಿಳಿದುಬರುತ್ತದೆ.
ಕ್ರಿ.ಶ. ೧೪೨೧ರಲ್ಲಿ ಮಾದರಸರು, ಪಿರಿಯಣ್ಣ ಒಡೆಯರು ಹಾಗೂ ದೇವರಸರು ನಿರೂಪಿಸಿದಂತೆ ಒಂದು ಸಾವಿರದ ಅಡಿಕೆ ಮರದಿಂದ ಬರುವ ಸುಂಕವನ್ನು ದಂಣಯ್ಯ ಒಡೆಯರಿಗೆ ಒಳ್ಳೆಯದಾಗಲೆಂದು ಹನುಮಂತೇಶ್ವರ ದೇವರಿಗೆ ಮಾನ್ಯವಾಗಿ ಬಿಟ್ಟಿದ್ದಾರೆ (ತಿ.ನ.ಶಾ.ಸಂ. ೬೦).
ಅಂತೆಯೇ ಇದೇ ತಿ.ನ.ಶಾ.ಸಂ. ೬೦ರಲ್ಲಿ ಬುತಿಗನಹಳ್ಳಿ ಬರನ ಮಗ, ಕೇತನ ಮಗ, ದಾದನ ಮಗ ಹಾಗೂ ಮತಿಗನಹಳ್ಳಿಯ ಕದನ ಮಗ ಕೊಮಾರ ಗಾಣಿಕೆಮೊದೆ ಸುಂಕವನ್ನು ಹನುಮಂತೇಶ್ವರ ದೇವರ ನಂದಾದೀವಿಗೆಗಾಗಿ ನೀಡಿದ್ದಾರೆ.
ಹಾಗೆಯೇ ತಿ.ನ.ಶಾ.ಸಂ. ೬೨ರಲ್ಲಿ ಪಾಣಗಶೆಟ್ಟಿಯ ಅಳಿಯ ತನ್ನ ಸ್ವಇಚ್ಛೆಯಂತೆ ಹನುಮಂತೇಶ್ವರನಿಗೆ ೩ ಗದ್ಯಾಣವನ್ನು ಧನುರ್‌ಮಾಸದ ದೀಪಕ್ಕಾಗಿ ವೈಶ್ಯವೃತ್ತಿಯನ್ನು ಬಿಟ್ಟಿರುವುದು ತಿಳಿದುಬರುತ್ತದೆ.
ಹೀಗೆ ಅನೇಕರು ತಮ್ಮ ಸ್ವಂತ ಇಚ್ಛೆಯಂತೆ ಹನುಮಂತೇಶ್ವರನಿಗೆ ದಾನಗಳನ್ನು ಬಿಟ್ಟಂತೆ ತಿ.ನ.ಶಾ.ಸಂ. ೬೪ರಲ್ಲಿ, ಅಂದರೆ ಕ್ರಿ.ಶ.೧೧೯೯ರಲ್ಲಿ ಪೆಂಣಮಾಂಡ ಹೆಗ್ಗಡೆಯವರು ತಾವೇ ಕೊಂಡು ಕೊಟ್ಟ ನಂದಾದೀವಿಯ ಸೊಡರ್ ಎಣ್ಣೆಗೆ ಆ ಊರಿನ ಸ್ಥಾನಿಕ ಗೊಣಿಯ ಜೀಯ ಪರದೇಸಿಯಪ್ಪನವರ ಮೊಮ್ಮಕ್ಕಳು, ವಂಶದವರು ದೇವರ ಭಂಡಾರವಾಗಿ ಕೊಟ್ಟ ಗದ್ಯಾಣ ೩, ಈ ಬಡ್ಡಿಯಿಂದ ನಿತ್ಯಪಡಿಯ ಸೊಡರು ಸಲ್ಲಿಸುವುದಕ್ಕಾಗಿ ಬಿಟ್ಟಿರುವ ವಿಷಯದ ಬಗ್ಗೆ ಪ್ರಸ್ತಾಪವಿದೆ.
ಈ ಮೇಲೆ ಬಿಟ್ಟಿರುವ ದಾನಗಳನ್ನು ಗಮನಿಸಿದರೆ, ಊರಿನ ಮುಖ್ಯ ಜನಾಂಗದವರಷ್ಟೇ ಅಲ್ಲದೆ, ಸಾಮಾನ್ಯ ಜನರ ಸಮ್ಮುಖದಲ್ಲಿಯೂ ದಾನ ಕೊಡುತ್ತಿರುವುದು (ಸಾಕ್ಷಿಗಳಾಗಿ) ಅಂದಿನ ಸಾಮರಸ್ಯದ ಸಾಮಾಜಿಕ, ಪರಿಸರಕ್ಕೆ ಕನ್ನಡಿ ಹಿಡಿದಂತಿದೆ.
ಹಾಗೆಯೇ ಹನುಮಂತೇಶ್ವರ ದೇವರಿಗೆ ಕ್ರಯಕ್ಕೆ ಗದ್ದೆ ಕೊಂಡು ಬಿಟ್ಟಿರುವುದು, ಅಡಿಕೆಯಿಂದ ಬರುವ ಸುಂಕವನ್ನು ದೇವರಿಗೆ ಬಿಟ್ಟಿರುವುದು, ಗಾಣಿಕೆ ಮೊದೆ ಸುಂಕವನ್ನು ದೇವರಿಗೆ ಬಿಟ್ಟಿರುವುದು, ಗದ್ಯಾಣವನ್ನು ದಾನವಾಗಿ ಬಿಟ್ಟಿರುವುದು, ಧನುರ್ ಮಾಸದ ದೀಪಕ್ಕಾಗಿ ವೈಶ್ಯ ವೃತ್ತಿಯನ್ನು ಬಿಟ್ಟಿರುವ ವಿಷಯಗಳು ವಿಶೇಷವೆನಿಸುತ್ತದೆ.
ಕ್ರಿ.ಶ.೧೬-೧೭ರಲ್ಲಿ ಆಚರಸರು ಹನುಮಂತೇಶ್ವರ ದೇವರ ದಧ್ಯಾನ್ನಕ್ಕಾಗಿ ಕಾಲುವೆ ಗದ್ದೆ ಸಿರಿದೇವಿ ಬಳಿಯ ಹಳ್ಳದಲ್ಲಿ ೧ ಖಂಡುಗ ಗದ್ದೆ ಕ್ರಯಕ್ಕೆ ಕೊಂಡು ಸ್ವಾಮಿಗೆ ಅರ್ಪಿಸಿರುವ ವಿಷಯ ವಿಶೇಷವೆನಿಸುತ್ತದೆ (ತಿ.ನ.ಶಾ.ಸಂ. ೫೬).
೩) ಕೈಲಾಸದೇವರಿಗೆ
ಬನ್ನೂರು (ವಹ್ನಿಪುರ) ಭಾರದ್ವಾಜ ಗೋತ್ರದ ರುಕ್ಶಾಖಾಧ್ಯಾಯಿಗಳಾದ ಚಿಕ್ಕಲಿಂಗರಸರ ಮಕ್ಕಳು ‘ಕಪಿನಿ ಎಂಬಾತನು ತಮ್ಮ ಮನೆತನದ ಹಿರಿಯರಿಗೆ ಎಲ್ಲವೂ ಒಳ್ಳೆಯದಾಗಲೆಂದು ತಮಗೆ ಸರ್ವಮಾನ್ಯವಾಗಿ ಬಂದಿರುವ ‘ಗುಂಡ ಸಮುದ್ರದ ತಟಾಕವನ್ನು ಹಿರಣ್ಯೋದಕ ದಾನವಾಗಿ ಕೈಲಾಸದೇವರಿಗೆ ಬಿಟ್ಟಿದ್ದಾರೆ ಎಂಬ ವಿಷಯ ಕ್ರಿ.ಶ.೧೫೫೩ರ ತಿ.ನ.ಶಾ.ಸಂ. ೪೫ರಿಂದ ತಿಳಿಯುತ್ತದೆ.
೪) ರಘುಪತಿಸ್ವಾಮಿ/ರಾಮಚಂದ್ರ ದೇವರಿಗೆ
ಕ್ರಿ.ಶ.೧೬೧೫ ತಿ.ನ.ಶಾ.ಸಂ. ೫೦ರಲ್ಲಿ ವೆಂಕಟಪತಿದೇವ ಮಹಾರಾಯ ವಹ್ನಿಪುರದ ರಾಮಚಂದ್ರದೇವರಿಗೆ ಅರ್ಚನೆ, ಅಂಗ, ರಂಗ ವೈಭೋಗ ಪಡಿತರಕ್ಕೆ ಮತ್ತು ಮೈಸೂರಿನ ಚಾಮರಸ ಒಡೆಯರ ಮಕ್ಕಳು ಹಾಗೂ ದೇವರಾಜವಡೇರು ‘ರಘುಪತಿಸ್ವಾಮಿಗೆ ಬನ್ನೂರು ಬಳಿ ತಮಗೆ ಹಿಂದಿನಿಂದಲೂ ಉಂಬಳಿಯಾಗಿ ಬಂದಿರುವ ‘ಬೇವಿನಹಳ್ಳಿ ಗ್ರಾಮವನ್ನು ಅರ್ಪಿಸಿದ್ದಾರೆ.
ಮೇಲೆ ಹೇಳಿದ ದಾನಗಳಷ್ಟೇ ಅಲ್ಲದೆ ಭಟವೃತ್ತಿಗಾಗಿ ಚಾವಯ್ಯ ಎಂಬಾತನು ಭೂಮಿದಾನವನ್ನು ನೀಡಿರುವ ವಿಷಯ ಕ್ರಿ.ಶ.೯ನೆಯ ಶತಮಾನದ ತಿ.ನ.ಶಾ.ಸಂ. ೪೭ ರಿಂದ ತಿಳಿಯುತ್ತದೆ. ಇಲ್ಲಿನ ‘ಭಟವೃತ್ತಿ ದಾನವು ದಾನಗಳಲ್ಲಿ ಒಂದು ವಿಶೇಷ ದಾನ ಎನಿಸುತ್ತದೆ.
ಬನ್ನೂರಿನ ಊರಿನ ಗೌಡರು ಹಾಗೂ ಶಾನುಭೋಗರು ಊರಿನ ಎಲ್ಲಾ ಜನರ ಮುಂದೆ ನಾವಿದರಿಗೆ ತೆರಿಗೆ ವಿನಾಯತಿ ನೀಡಿರುವ ವಿಷಯವನ್ನು ಪ್ರಸ್ತಾಪಿಸಿ ಇದನ್ನು ತಪ್ಪಿಸಿದವರು ನಾಯಿಮಾಂಸ ತಿನ್ನುತ್ತಾರೆ ಹಾಗೂ ಈ ಶಾಸನವನ್ನು ಹಾಳು ಮಾಡಿದವರು ನಾವಿದರ ಮಕ್ಕಳಾಗಿ ಹುಟ್ಟುತ್ತಾರೆ ಎನ್ನುವ ವಿಶೇಷವಾದ ಶಾಪಾಶಯ ಕ್ರಿ.ಶ.೧೬ನೆಯ ಶತಮಾನದ ತಿ.ನ.ಶಾ.ಸಂ. ೫೧ರಲ್ಲಿ ಸಿಗುತ್ತದೆ.
ಸಾರ್ವಜನಿಕರಿಂದ ಸ್ವಾಮಿಗೆ ಕಾಣಿಕೆ ಮುಖಾಂತರ ಅರ್ಪಿಸಲ್ಪಟ್ಟ ಕಾಣಿಕೆಗಳು ಅಂದರೆ, ಅವು ಎಣ್ಣೆ, ಅಕ್ಕಿ, ತುಪ್ಪ, ಚಿನ್ನ ಹೀಗೆ ಯಾವುದೇ ರೂಪದಲ್ಲಿದ್ದರೂ ಅದು ದೇವರ ಖಜಾನೆಗೇ ಸೇರಬೇಕೆಂದು ಇದನ್ನು ತಪ್ಪಿಸಿದವರಿಗೆ ೨ ಕೊಳಗ ಭತ್ತ ದಂಡದ ರೂಪದಲ್ಲಿ ಕೊಡಬೇಕೆಂದು ಕ್ರಿ.ಶ.೧೦ನೆಯ ಶತಮಾನದ ತಿ.ನ.ಶಾ.ಸಂ. ೫೯ರಲ್ಲಿ ಹೇಳಲ್ಪಟಿದೆ. ಇದೊಂದು ಕುತೂಹಲಕಾರಿಯಾದ ವಿಷಯ ವಾಗಿದೆ.
ಕ್ರಿ.ಶ.೧೧ನೆಯ ಶತಮಾನದ ತಿ.ನ.ಶಾ.ಸಂ. ೭೦ರಲ್ಲಿ ವಣ್ಣಿಯೂರಿನಲ್ಲಿ ಬಂಗಾರ ದಾನವನ್ನು ನೀಡಿರುವ ವಿಷಯ, ಕಾಲಭಟ್ಟರಸನ ಮಗನಿಂದ (ಇಲ್ಲಿ ಮಗನ ಹೆಸರಿಲ್ಲ) ಪೆರುವಣ್ಣೆಯೂರಿನಲ್ಲಿ ಕೊಂಡ ಜಮೀನನ್ನು, ಆಹಾರ ದಾನ್ಯವನ್ನು ಕೊಳ್ಳುವುದಕ್ಕಾಗಿ ಬಿಟ್ಟಿರುವ ವಿಷಯಗಳು ವಿಶೇಷವಾಗಿವೆ.
ಇಷ್ಟೇ ಅಲ್ಲದೆ ತಿ.ನ.ಶಾ.ಸಂ. ೫೭ರಲ್ಲಿ ಕ್ರಿ.ಶ.೧೦ನೆಯ ಶತಮಾನದಲ್ಲಿ ಚೋಳರ ಒಂದನೆಯ ರಾಜರಾಜ ಆಳುತ್ತಿದ್ದ ಕಾಲದಲ್ಲಿ ಎಲ್ಲರಿಗೂ ಒಳ್ಳೆಯದಾಗಲೆಂದು ಕಂದಲೂರು ಸಲೈ, ಕೊಡಗು, ಮಲೆನಾಡು, ಕೊಲ್ಲಾಲಂ, ಕಳಿಂಗಂ, ಮಾದನ ಮಂಗಲಂಗಳ ವಡೆಯನ್ ದೇವಸ್ಥಾನದ ಉತ್ತರಕ್ಕಿರುವ ೩ ಖಂಡಗ ಗದ್ದೆ ಮತ್ತು ಕೆರೆ ಬಿಟ್ಟಿರುವುದು ತಿಳಿಯುತ್ತದೆ.
ಈ ಮೇಲಿನ ವಿಷಯಗಳನ್ನೆಲ್ಲಾ ಕ್ರೋಡೀಕರಿಸಿ ಹೇಳುವುದಾದರೆ ‘ಬನ್ನೂರು ಶಾಸನಗಳ ಹಿನ್ನೆಲೆಯ ಅಧ್ಯಯನದಿಂದ ಒಂದು ಒಳ್ಳೆಯ ರಾಜಕೀಯ, ಧಾರ್ಮಿಕ ಕೇಂದ್ರವಾಗಿತ್ತೆಂದು ತಿಳಿದುಬರುತ್ತದೆ.
[ಈ ಲೇಖನದಲ್ಲಿ ಬಳಸಿರುವ ಶಾಸನ ಸಂಖ್ಯೆಗಳು, ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೫-(ಪರಿಷ್ಕೃತ), ತಿ. ನರಸೀಪುರ ತಾಲ್ಲೂಕಿನದಾಗಿರುತ್ತದೆ. ಈ ಲೇಖನ ಬರೆಯುವಾಗ ಕೆಲವು ಸಲಹೆ, ಸೂಚನೆಗಳಿತ್ತ ಆತ್ಮೀಯರಾದ ಸುಂಕಂ ಗೋವರ್ಧನ್ ಅವರಿಗೆ ನನ್ನ ವಂದನೆಗಳು.]
೧೭೨, ೭ನೆಯ ಮುಖ್ಯರಸ್ತೆ, ೨ನೆಯ ಅಡ್ಡರಸ್ತೆ, ಮೊದಲನೆಯ ಮಹಡಿ, ಶ್ರೀನಿವಾಸನಗರ, ಬೆಂಗಳೂರು-೫೬೦೦೫೦.



No comments:

Post a Comment