Tuesday, July 9, 2013

ನಾಲ್ವಡಿ ಕೃಷ್ಣ ರಾಜ ಒಡೆಯರು- ಡಾ. ಮಹಾದೇವಿ


ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ ಪ್ರವಾಸಗಳು
ರಾಜ್ಯಾಭಿವೃದ್ಧಿಯಲ್ಲಿ ಅವುಗಳ ಪ್ರಭಾವ
ಡಾ. ಮಹಾದೇವಿ
ಸಹ ಪ್ರಾಧ್ಯಾಪಕರು,
ಇತಿಹಾಸ ಅಧ್ಯಯನ ಮತ್ತು ಸಂಶೋಧನಾ ವಿಭಾಗ,
 ಕರ್ನಾಟಕ ರಾಜ್ಯ ಮುಕ್ತ ವಿದ್ಯಾಲಯ,
ಮೈಸೂರು-೫೬೦೦೦೬.

 ಕ್ರಿ.ಶ. ೧೯೦೨-೧೯೪೦ರ ಅವಧಿಯಲ್ಲಿ ಮೈಸೂರು ಸಂಸ್ಥಾನದ ಆಡಳಿತದ ಚುಕ್ಕಾಣಿಯನ್ನು ಹಿಡಿದು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಮೈಸೂರು ಸಂಸ್ಥಾನವನ್ನು ಒಂದು ಮಾದರಿ-ರಾಜ್ಯವನ್ನಾಗಿ ಪರಿವರ್ತಿಸಿದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರು ತಮ್ಮ ಬಾಲ್ಯದಿಂದ ತಮ್ಮ ಕೊನೆಯ ದಿನಗಳವರೆಗೂ ದೇಶವಿದೇಶಗಳಲ್ಲಿ ಅನೇಕ ಪ್ರವಾಸಗಳನ್ನು ಕೈಗೊಂಡಿದ್ದರು. ದೇಶ ಸುತ್ತು-ಕೋಶ ಓದು ಎಂಬ ನಾಣ್ಣುಡಿಯಂತೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು ಕೈಗೊಂಡ ಪ್ರವಾಸಗಳು ರಾಜ್ಯಾಭಿವೃದ್ಧಿಯಲ್ಲಿ ಸಾಂಸ್ಕೃತಿಕವಾಗಿ ಮತ್ತು ಆರ್ಥಿಕವಾಗಿ ಮಹತ್ವವನ್ನು ಪಡೆದುಕೊಂಡಿವೆ. ನಾಲ್ವಡಿ ಕೃಷ್ಣರಾಜ ಒಡೆಯರ ಈ ಪ್ರವಾಸಗಳು ಚಾರಿತ್ರಿಕವಾದುವೂ ಆಗಿರುವುದರಿಂದ ಅವುಗಳಿಂದ ರಾಜ್ಯದಲ್ಲುಂಟಾದ ಅಭಿವೃದ್ಧಿ ಕಾರ್ಯಗಳನ್ನು ಮತ್ತು ನಾಲ್ವಡಿಯವರ ವ್ಯಕ್ತಿತ್ವ ಮತ್ತು ದೃಷ್ಟಿಕೋನಗಳನ್ನು ತಿಳಿಯಲು ಸಾಧ್ಯವಾಗುತ್ತದೆ.
ನಾಲ್ವಡಿಯವರು ಕೂಡ ವಿವಿಧ ಉದ್ದೇಶಗಳನ್ನಿರಿಸಿಕೊಂಡು ಅದರಲ್ಲೂ ಮುಖ್ಯವಾಗಿ ಶೈಕ್ಷಣಿಕ, ಧಾರ್ಮಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಕಾರಣಗಳಿಗಾಗಿ ಪ್ರವಾಸಗಳನ್ನು ಕೈಗೊಂಡಿದ್ದರು. ಅವರು ರಾಜ್ಯದಲ್ಲಿ ಪ್ರಜೆಗಳ ಸಮಸ್ಯೆಗಳನ್ನು ತಿಳಿದುಕೊಳ್ಳಲು ಸ್ಥಳೀಯ ಪ್ರವಾಸಗಳನ್ನೂ, ಭಾರತದಲ್ಲಿ ಹಾಗೂ ವಿದೇಶಗಳಲ್ಲಿ ಹಲವಾರು ಬಾರಿ ಸಂಚರಿಸಿ ತಮ್ಮ ಅನುಭವವನ್ನು ಶ್ರೀಮಂತಗೊಳಿಸಿಕೊಂಡರು. ಅವರ ಪ್ರವಾಸದ ಉದ್ದೇಶ ಹಾಗೂ ಅವರ ಪ್ರತಿಕ್ರಿಯೆ ಮತ್ತು ಫಲಿತಾಂಶಗಳನ್ನು ವಿಶ್ಲೇಷಿಸಿ ಅವುಗಳು ಹೇಗೆ ನಾಲ್ವಡಿಯವರ ಆಡಳಿತದ ವೈಖರಿಯನ್ನು ಸೂಚಿಸುವುದೆಂಬುದನ್ನು ಈ ಪ್ರಬಂಧದಲ್ಲಿ ಚರ್ಚಿಸಲಾಗಿದೆ.
ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ ಆಳ್ವಿಕೆಯ ಒಂದು ಗಮನಾರ್ಹ ಅಂಶವೆಂದರೆ ಅವರು ಕೈಗೊಂಡ ಪ್ರಾಂತೀಯ, ದೇಶೀಯ ಹಾಗೂ ವಿದೇಶಿ ಪ್ರವಾಸಗಳು. ಈ ಪ್ರವಾಸಗಳಿಂದ ಅವುಗಳ ಸಾಮಾಜಿಕ, ಧಾರ್ಮಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಮಹತ್ವ ಹಾಗೂ ಅವುಗಳಿಂದಾದ ಪ್ರಭಾವ ಮತ್ತು ಪರಿಣಾಮ ಗಳನ್ನು ಪರಿಶೀಲಿಸುವುದೇ ಈ ಲೇಖನದ ಉದ್ದೇಶ. ಇದರಿಂದ ನಾಲ್ವಡಿಯರ ವ್ಯಕ್ತಿತ್ವ ಮತ್ತು ದೃಷ್ಟಿಕೋನ, ಸಮದರ್ಶಿತ್ವ, ಧರ್ಮಪ್ರಿಯತೆ, ನ್ಯಾಯ-ನಿಷ್ಠತೆ, ಪ್ರಜಾವಾತ್ಸಲ್ಯ ಮತ್ತು ಅದರಿಂದ ಉಂಟಾದ ರಾಜ್ಯಾಭಿವೃದ್ಧಿ ಕಾರ್ಯಗಳು ಮೊದಲಾದವುಗಳನ್ನು ತಿಳಿಯಲು ಸಾಧ್ಯವಾಗುತ್ತದೆ.
I. ನಾಲ್ವಡಿಯವರ ಪ್ರಾಂತೀಯ ಪ್ರವಾಸಗಳು
ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ ಸಾಧನೆ ಬಹುಮುಖಿಯಾದ್ದದು. ಇವರ ಕಾಲದಲ್ಲಿ ಮೈಸೂರು ಸಂಸ್ಥಾನ ಸರ್ವತೋಮುಖ ಬೆಳವಣಿಗೆಗೆ ಕಾರಣವಾಯಿತು. ತಮ್ಮ ಕಾಲಾವಧಿಯಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕ ವಾಗಿ ಮತ್ತು ಸಾಂಸ್ಕೃತಿಕವಾಗಿ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತಂದು ಅಂದು ಭಾರತದಲ್ಲಿದ್ದ ೬೩೫ ಸಂಸ್ಥಾನಗಳಲ್ಲಿ ಮೈಸೂರು ಸಂಸ್ಥಾನವೇ ಅಗ್ರಸ್ಥಾನ ಪಡೆಯುವಂತೆ ಮಾಡಿದ ಕೀರ್ತಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಸಲ್ಲುತ್ತದೆ. ಶ್ರೀ ನಾಲ್ವಡಿಯವರು ರಾಜನೀತಿ ನೈಪುಣ್ಯತೆಯ ಜೊತೆಗೆ, ರಾಜ್ಯದ ಜನರ ಸ್ಥಿತಿಗತಿಗಳನ್ನು ಪರಿಚಯ ಮಾಡಿಕೊಳ್ಳುವ ಸಲುವಾಗಿ ನಾಡಿನಾದ್ಯಂತ ಅನೇಕ ವಿಸ್ತಾರವಾದ ಪ್ರವಾಸಗಳನ್ನು ಕೈಗೊಂಡರು. ಮೊದಲನೆಯದಾಗಿ, ಕ್ರಿ.ಶ.೧೮೯೮ರಲ್ಲಿ ಅವರು ಶಿವಮೊಗ್ಗ, ಕಡೂರು ಮತ್ತು ಹಾಸನ ಪ್ರದೇಶಗಳಿಗೆ ಪ್ರವಾಸ ಕೈಗೊಂಡರು. ಈ ಸಂದರ್ಭದಲ್ಲಿ ಅಲ್ಲಿನ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಜನರನ್ನು ಸಂಪರ್ಕಿಸಿ ಅವರ ಕಷ್ಟಸುಖಗಳನ್ನು ಮನನ ಮಾಡಿಕೊಂಡರು. ಅದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದರು.
ಕ್ರಿ.ಶ.೧೮೯೯ರಲ್ಲಿ ತುಮಕೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಆ ಭಾಗದ ಗಣ್ಯವ್ಯಕ್ತಿಗಳು ಮತ್ತು ಅಧಿಕಾರಿಗಳನ್ನು ಪರಿಚಯ ಮಾಡಿಕೊಂಡುದಲ್ಲದೆ, ಅಲ್ಲಿಯ ಜನರ ಸ್ಥಿತಿಗತಿಗಳನ್ನು ಅರಿತುಕೊಂಡರು. ಪ್ರಜೆಗಳ ಕಷ್ಟಸುಖಗಳನ್ನು ತಾವೇ ಸಾಕ್ಷಾತ್ತಾಗಿ ತಿಳಿದು, ಪ್ರಜೆಗಳಿಗೆ ಏನು ಬೇಕೆಂಬುದನ್ನು ಮನಗಂಡಿದ್ದರು. ಈ ರೀತಿಯಲ್ಲಿ ಪಡೆದ ಅನುಭವದಿಂದ ಮುಂದೆ ರಾಜ್ಯದಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಮೊದಲೇ ಗುರುತಿಸಿ ಅವುಗಳನ್ನು ಪರಿಹರಿಸಲು ಶಕ್ತರಾಗುತ್ತಿದ್ದರು.
ಸಂಸ್ಥಾನದ ಸ್ಥಿತಿಗತಿಗಳನ್ನು ಖುದ್ದಾಗಿ ತಿಳಿಯಲು ನಾಲ್ವಡಿಯವರು ಆಗಾಗ್ಗೆ ಸಂಸ್ಥಾನದೊಳಗೆ ಸಂಚಾರ ಮಾಡುತ್ತಿದ್ದರು. ಹಳ್ಳಿಗಳ ಹೊಲಗದ್ದೆಗಳ ಮೇಲೆ ಸಾಮಾನ್ಯ ಜನರಂತೆಯೇ ನಡೆಯುತ್ತ, ರೈತರೊಡನೇ ಮಿಳಿತವಾಗಿ ಸ್ನೇಹಮಯಿಯಾಗಿ ಮಾತನಾಡುತ್ತ ತಾವು ಯಾರೆಂಬುದರ ಸೂಚನೆಯನ್ನೂ ಅವರಿಗೆ ತಿಳಿಸದೆ, ರೈತರ ಕಷ್ಟ ಸುಖಗಳನ್ನು ವಿಚಾರಿಸಿ, ಸಾಧ್ಯವಾದರೇ ಅಲ್ಲಿಯೇ ಪರಿಹಾರಗಳನ್ನು ಒದಗಿಸುತ್ತಿದ್ದರು. ಅಂತದೊಂದು ಘಟನೆ ಕ್ರಿ.ಶ.೧೯೦೧ನೇ ಇಸವಿಯಲ್ಲಿ ನಡೆಯಿತು. ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು ತಮ್ಮ ಮೈಸೂರು ಗ್ರಾಮಾಂತರ ಪ್ರದೇಶಗಳಿಗೆ ಪ್ರವಾಸ ಕೈಗೊಂಡರು. ಒಂದು ಗ್ರಾಮದ ಚಾವಡಿಗೆ ಆಗಮಿಸಿ, ಅಲ್ಲಿದ್ದ ಒಬ್ಬ ರೈತನನ್ನು ಕರೆದು, ಅವನು ತನ್ನ ಪಟ್ಟೆಯನ್ನು ತರುವಂತೆ ಆದೇಶವಿತ್ತರು. ರೈತನು ಇವರಾರೆಂದು ತಿಳಿಯದೆ, ಬಹುಶಃ ಇವರು ರೆವಿನ್ಯೂ ಇಲಾಖೆಯ ಅಧಿಕಾರಿಗಳಲೊಬ್ಬರಿರಬೇಕೆಂದು ತಿಳಿದು ತನ್ನ ಪಟ್ಟಪುಸ್ತಕವನ್ನು ತಂದು ತೋರಿಸಿ, ತಾನು ಪೂರ್ತಿಯಾಗಿ ಕಂದಾಯವನ್ನು ಪಾವತಿ ಮಾಡಿದ್ದರೂ ಶಾನುಭೋಗರು ಕಡಿಮೆ ಮೊತ್ತವನ್ನು ಪಟ್ಟೆಯಲ್ಲಿ ಕಾಣಿಸಿ ಅನ್ಯಾಯ ಮಾಡಿರುವುದಾಗಿಯೂ, ತಾನು ಎಷ್ಟು ಕೇಳಿಕೊಂಡರೂ ಪಟ್ಟೆಯನ್ನು ತಿದ್ದಿ ಸರಿಪಡಿಸಿಕೊಡುತ್ತಿಲ್ಲವೆಂದು ನಾಲ್ವಡಿಯವರಲ್ಲಿ ಬಿನ್ನವಿಸಿಕೊಂಡನು. ತಕ್ಷಣವೇ ಕಾರ್ಯಪ್ರವೃತ್ತರಾದ ಕೃಷ್ಣರಾಜರು ಆ ಚಾವಡಿಯ ಶಾನುಭೋಗನನ್ನು ಕರೆಸಿ, ಸಮಸ್ತ ಲೆಕ್ಕ ಪತ್ರಗಳನ್ನು ತರುವಂತೆ ಆಜ್ಞೆ ಮಾಡಿದರು.
ಶಾನುಭೋಗನಿಗೆ ಅವರಾರೆಂದು ತಿಳಿಯದಿದ್ದರೂ, ಈ ಮೊದಲೇ ವದಂತಿಯಿದ್ದಂತೆ ಹಳೆಯ ಅಮಲ್ದಾರರಿಗೆ ವರ್ಗವಾಗಿ ಹೊಸ ಅಮಲ್ದಾರರು ಬಂದಿರಬೇಕೆಂದು ಭಾವಿಸಿ ಶಾನುಭೋಗನು ಖಾತೆ, ಖಿರ್ದಿ ಮೊದಲಾದ ಲೆಕ್ಕದ ಪುಸ್ತಕಗಳನ್ನು ತಂದು ನಾಲ್ವಡಿಯವರಿಗೆ ಒಪ್ಪಿಸಿದನು. ಆ ಪುಸ್ತಕದ ಲೆಕ್ಕವನ್ನು ಪರಿಶೀಲಿಸಿದಾಗ ರೈತನು ಸಂದಾಯ ಮಾಡಿರುವ ಕಂದಾಯವನ್ನು ಸೇರಿಸಿರಲಿಲ್ಲ. ಕೂಡಲೇ ಶಾನುಭೋಗನಿಗೆ ಎಚ್ಚರಿಕೆಯನ್ನು ನೀಡಿ ರೈತನಿಗೆ ನ್ಯಾಯ ದೊರಕಿಸಿ ಕೊಟ್ಟುದಲ್ಲದೆ, ಇನ್ನು ಮುಂದೆ ಇಂತಹ ತಪ್ಪುಗಳನ್ನು ಮಾಡದಂತೆ ಎಚ್ಚರಿಸಿದರು. ಗ್ರಾಮ ಲೆಕ್ಕಗಳನ್ನು ಪರಿಶೀಲಿಸುವುದರಲ್ಲೂ ಅದ್ಭುತ ಜ್ಞಾನಶಕ್ತಿಯನ್ನು ಹೊಂದಿದ್ದ ನಾಲ್ವಡಿಯವರು ಇಂತಹ ಅನೇಕ ಕ್ರಮಗಳನ್ನು ಅನುಸರಿಸುವ ಮೂಲಕ ರೈತರ ಶೋಷಣೆಯನ್ನು ತಪ್ಪಿಸುತ್ತಿದ್ದರು.
ಈ ರೀತಿಯಲ್ಲಿಯೇ ಹಾಸನ ಜಿಲ್ಲೆಯ ಪ್ರವಾಸದಲ್ಲಿದ್ದಾಗ ಜಿಲ್ಲೆಯ ಡಿಸ್ಪೆನ್ಸರಿಯೊಂದಕ್ಕೆ ಹೋಗಿ, ಅಲ್ಲಿ ಇಂಜೆಕ್ಷನ್ ನೀಡಲು ಇಟ್ಟಿದ್ದ ಉಪಕರಣ ತುಕ್ಕು ಹಿಡಿದಿದ್ದುದನ್ನು ಗಮನಿಸಿ ಇದರಲ್ಲಿ ಹೇಗೆ ಚಿಕಿತ್ಸೆಯನ್ನು ಮಾಡುತ್ತಿರೆಂದು ಅಲ್ಲಿದ್ದ ವೈದ್ಯರನ್ನು ಪ್ರಶ್ನಿಸಿದರು. ವೈದೈರು ಅವುಗಳನ್ನು ದೃಷ್ಟಿಸಿ ನೋಡಿ, ಇದನ್ನು ಕುದಿಯುವ ನೀರಲ್ಲಿಟ್ಟು ಹೊರಕ್ಕೆ ತೆಗೆದು ಔಷಧ ದ್ರವವನ್ನು ಸೂಜಿಯ ಮೂಲಕ ಒಳಕ್ಕೆ ಸೆಳೆದುಕೊಂಡು ಸೂಜಿಯ ಮೊನೆಯನ್ನು ತೋಳಿಗೆ ಚುಚ್ಚಿ ಔಷಧವನ್ನು ರಕ್ತಕ್ಕೆ ಸೇರಿಸಿದರಾಯಿತು ಎಂದನು. ಇದನ್ನು ಕೇಳಿ ಆಶ್ಚರ್ಯ ಚಕಿತರಾದ ನಾಲ್ವಡಿಯವರು ರೋಗಿಯ ದೇಹಕ್ಕೆ ಔಷಧ ಸೇರುವ ಮುನ್ನ, ಸೂಜಿಯ ತುಕ್ಕು ರಕ್ತದೊಳಗೆ ವ್ಯಾಪಿಸಿ ರೋಗಿಯ ಪ್ರಾಣ ಹೋಗಿರುತ್ತದೆಂದು ಎಚ್ಚರಿಸಿ, ತುಕ್ಕು ಹಿಡಿದು ಅಪ್ರಯೋಜಕವಾಗಿ ಪರಿಣಮಿಸಿದ್ದ ಆ ಸೂಜಿಯನ್ನು ಹೊರಗೆ ಎಸೆದು, ವೈಜ್ಞಾನಿಕ ಮಾದರಿಯಲ್ಲಿಯೇ ಪ್ರಜೆಗಳಿಗೆ ಔಷದೋಪಚಾರ ಮಾಡಬೇಕೆಂದು ವೈದ್ಯರಿಗೆ ಬುದ್ಧಿ ಹೇಳಿದರು.
ಅಜ್ಞಾನವು ಜನರ ದುಃಖ ಪರಂಪರೆಗಳಿಗೆ ಮೂಲಕಾರಣವೆಂದು ಬಲವಾಗಿ ನಂಬಿದ್ದ ನಾಲ್ವಡಿಯವರು ಸಂಸ್ಥಾನದಲ್ಲಿ ವಿದ್ಯಾಭ್ಯಾಸವು ಸಾರ್ವತ್ರಿಕವಾಗಿ ಹರಡುವಂತೆ ತಮ್ಮ ಪ್ರಜಾವರ್ಗಕ್ಕೆ ಸದ್ವಿದ್ಯಾ ಶಿಕ್ಷಣವನ್ನು ನೀಡಲು ಅನೇಕ ಕ್ರಮಗಳನ್ನು ಕೈಗೊಂಡರು.
ಪಾಠಶಾಲೆಯೊಂದಕ್ಕೆ ಭೇಟಿ ನೀಡಿ ಆ ಶಾಲೆಯ ಉಪಾಧ್ಯಾಯರೊಬ್ಬರು ಭೂಗೋಳ ಪಾಠ ಮಾಡುತ್ತಿದ್ದು, ಭೂಪಟದಲ್ಲಿ ನಗರ ಮತ್ತು ನದಿಗಳು ಹರಿಯುವ ಸ್ಥಳಗಳನ್ನು ವಿದ್ಯಾರ್ಥಿಗಳಿಗೆ ತೋರಿಸಲು ವಿಫಲರಾದರು. ನಾಲ್ವಡಿಯವರು ಅವುಗಳನ್ನು ತೋರಿಸಿ, ಹಿಂದಿನ ದಿನವೇ ಭೂಪಟ ನೋಡಿ, ಮಾರನೆಯ ದಿನ ಪಾಠ ಹೇಳಬೇಕೆಂದು ಉಪಾಧ್ಯಾಯರಿಗೆ ಸಲಹೆ ನೀಡಿದರು. ಹಾಗೆಯೇ ವಿದ್ಯಾರ್ಥಿಗಳ ಜ್ಞಾನ ಮಟ್ಟವನ್ನು ಅರಿಯಲು ಭೂಪಟದ ಸಹಾಯವಿಲ್ಲದೆ ದಿಕ್ಕುಗಳನ್ನು ತೋರಿಸುವಂತೆ ಕೇಳಿದಾಗ ವಿದ್ಯಾರ್ಥಿಯೊಬ್ಬ ಸೂರ್ಯ ಹುಟ್ಟುವ ದಿಕ್ಕು ಪೂರ್ವ, ಮುಳುಗುವ ದಿಕ್ಕು ಪಶ್ಚಿಮ ಎಂತಲೂ, ಆಕಾಶದ ಕಡೆಗೆ ಕೈತೋರಿಸಿ ಅದು ಉತ್ತರವೆಂದೂ, ನೆಲದ ಕಡೆಗೆ ಕೈ ತೋರಿಸಿ ಅದು ದಕ್ಷಿಣವೆಂದು ಭೂಪಟದಲ್ಲಿ ತೋರಿಸಿದ ಕ್ರಮದಲ್ಲಿ ಹೇಳಿದನು. ಇದನ್ನು ಕೇಳಿ ಆಶ್ಚರ್ಯಚಕಿತರಾದ ಮಹಾರಾಜರು ಮಕ್ಕಳಿಗೆ ಪುಸ್ತಕದ ಪಾಠಗಳನ್ನು ಕಲಿಸುವಾಗ ನೈಜತೆಯೊಂದಿಗೆ ಸರಿಯಾದ ಕ್ರಮಗಳನ್ನನುಸರಿಸಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ಸೂಚಿಸಿದರು. ನಾಲ್ವಡಿಯವರು ಸಮಸ್ತ ವಿಚಾರಗಳಲ್ಲೂ ಜ್ಞಾನಾನುಭವಿಗಳಾಗಿದ್ದುದರಿಂದ ಸಂಸ್ಥಾನದಲ್ಲಿ ನಡೆಯುವ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಕಾರ್ಯಶ್ರದ್ಧತೆಯಿಂದ ಮುನ್ನಡೆಸುತ್ತಿದ್ದರು. ಹೀಗೆ ಇಂತಹ ಅನೇಕ ಸ್ಥಳೀಯ ಪ್ರವಾಸಗಳನ್ನು ಕೈಗೊಂಡು ಜನರ ಮತ್ತು ಪಶುಪಕ್ಷಿಗಳ ಸಂಕಷ್ಟಗಳನ್ನು ಖುದ್ದಾಗಿ ಹೋಗಿ ನೋಡಿ ಅವುಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದರು.
ಅವರು ರಾಜಧಾನಿಯಿಂದ ಹೊರಗೆ ಉಳಿಯಬೇಕಾಗುತ್ತಿತ್ತು. ಆದಷ್ಟು ಅಲ್ಪ ಸಮಯದಲ್ಲಿ ತಮ್ಮ ಪ್ರವಾಸವನ್ನು ಮುಗಿಸಿ ಮೈಸೂರಿಗೆ ಹಿಂತಿರುಗುವುದು ಅವಶ್ಯವಾಗುತ್ತಿತ್ತು. ಒಮ್ಮೆ ತಮ್ಮ ಪ್ರವಾಸದಲ್ಲಿ ಹೆಚ್ಚು ಸಮಯವಿಲ್ಲದಿದ್ದುದರ ಬಗ್ಗೆ ಅವರು ವಿವರಿಸಿದ್ದು ಹೀಗೆ; ನಾವು ಇಲ್ಲಿ ಅಲ್ಪಕಾಲವಿದ್ದರೂ ನಮ್ಮ ವಶದಲ್ಲಿರುವ ಈ ಕಾಲವನ್ನು ಸಾರ್ಥಕ ವಾದ ರೀತಿಯಲ್ಲಿ ಉಪಯೋಗಿಸಬೇಕೆಂದಿದ್ದೇನೆ. ನಾವು ಇಲ್ಲಿ ಸ್ವಲ್ಪಕಾಲವಿದ್ದರೂ ನಿಮ್ಮಲ್ಲಿಯೇ ಆಗಲಿ ನಿಮ್ಮ ಕೆಲಸಗಳಲ್ಲಿಯೇ ಆಗಲಿ ನಮಗೆ ಶ್ರದ್ಧೆಯಿಲ್ಲವೆಂದು ನೀವು ಖಂಡಿತ ತಿಳಿಯಕೂಡದು.
೧೯೦೩ರಲ್ಲಿ ರಾಬರ್ಟ್‌ಸನ್ ಪೇಟೆಗೆ ಭೇಟಿ ನೀಡಿದಾಗ ಸಾಕ್ಷಾತ್ತಾಗಿಯೇ ಭೇಟಿ ನೀಡುವ ಅವಕಾಶ ಸಿಕ್ಕಿತೆಂದು ಸಮಾಧಾನ ಪಡುತ್ತಾರೆ. ೧೯೦೭ರಲ್ಲಿ ಮಳವಳ್ಳಿಗೆ ಭೇಟಿ ನೀಡಿದಾಗ ಅವರು ಹೇಳಿದ್ದು, ನಾವು ಮಳವಳ್ಳಿಗೆ ಬಂದುದು ಇದೇ ಮೊದಲನೆಯ ಸಲವಲ್ಲವಾದರೂ ಈ ಊರಿಗೂ ಈ ತಾಲ್ಲೂಕಿಗೂ ಪದೇ ಪದೇ ಬರುವ ಸಂದರ್ಭ ಪದೇ ಪದೇ ಒದಗಬಹುದೆಂದು ನಿರೀಕ್ಷಿಸುತ್ತೇವೆ ಎಂದಿದ್ದಾರೆ.
          ಹೀಗೆ ಮಹಾರಾಜರು ರಾಜ್ಯದ ಮೂಲೆಮೂಲೆಗೂ ಭೇಟಿ ನೀಡಿ ಜನರ ಸ್ಥಿತಿಗತಿಗಳನ್ನು ವಿಚಾರಿಸಿ ಅವರಿಗೆ ಪರಿಹಾರ ದೊರಕಿಸಲು ಪ್ರಾಮಾಣಿಕವಾಗಿ ಪ್ರಯತ್ನ ನಡೆಸುತ್ತಿದ್ದರು. ಆದರೆ ಸ್ಥಳೀಯರು ಅವಾಸ್ತವಿಕವಾದ ದುರ್ಬಲವಾದ ಯೋಜನೆ ಕಾಮಗಾರಿಗಳನ್ನು ತಮ್ಮ ಮುಂದಿಟ್ಟಾಗ ಅವು ಸಾಧ್ಯವಾಗದೆಂದು ತಿಳಿಸಲು ಹಿಂಜರಿಯುತ್ತಿರಲಿಲ್ಲ. ಒಮ್ಮೆ ಮಳವಳ್ಳಿಯ ನೀರಾವರಿ ಕಾಲುವೆಯ ನಾಗರಿಕರ ಬೇಡಿಕೆ ಸಧ್ಯಕ್ಕೆ ಸಾಧ್ಯವಾಗದೆಂಬ ವಿಷಯವನ್ನು ಅವರು ಖಡಾಖಂಡಿತವಾಗಿ ತಿಳಿಸಿದರು.
          ೧೯೦೭ರಲ್ಲಿ ಕೋಲಾರ ಜಿಲ್ಲೆಯ ಮುಳಬಾಗಿಲು, ಚಿಂತಾಮಣಿ ಶ್ರೀನಿವಾಸಪುರ ಮೊದಲಾದ ಕಡೆ ಸಂಚರಿಸಿದಾಗ ಅಲ್ಲಿನ ಕೆರೆಗಳನ್ನು ದುರಸ್ತಿಗೊಳಿಸಿಕೊಡಬೇಕೆಂದು ಸ್ಥಳೀಯರು ಮನವಿ ಸಲ್ಲಿಸಿದರು. ಆಗ ಮಹಾರಾಜರು ಕೆರೆಗಳ ರಚನೆ ಒಳಹರಿವು ಹೊರಹರಿವು ಮೊದಲಾದ ಸೂಕ್ಷ್ಮ ವಿವರಗಳನ್ನು ಚರ್ಚಿಸುತ್ತಾರೆ. ಆ ಕೆರೆಗಳಿಂದ ನೀರು ಬರುವ ಸಾಧ್ಯಾಸಾಧ್ಯತೆಯನ್ನು ವಿಶ್ಲೇಷಿಸಿ ಅವರಿಗೆ ಸೂಕ್ತ ಸಲಹೆ ನೀಡುತ್ತಾರೆ. ಇದೇ ರೀತಿಯಲ್ಲಿ ಬೌರಿಂಗ್‌ಪೇಟೆಯಲ್ಲಿ ಗಣಿ ಉದ್ಯಮದ ಬಗ್ಗೆ ಅಲ್ಲಿಗೆ ರೈಲು ಹಾಕುವ ಬಗ್ಗೆ ಚಿತ್ರದುರ್ಗಕ್ಕೆ ಹೋದಾಗ ಅಲ್ಲಿನ ವ್ಯಾಪಾರದ ಬಗ್ಗೆ ಪ್ರತಿಯೊಂದು ಭಾಗದ ವಿಶೇಷ ಸ್ಥಿತಿ ಮತ್ತು ಸಮಸ್ಯೆಗಳನ್ನು ಪ್ರಸ್ತಾಪಿಸಿ ಅದಕ್ಕೆ ಪರಿಹಾರ ನೀಡಲು ಪ್ರಯತ್ನಿಸಿದರು.
II. ನಾಲ್ವಡಿಯವರ ದೇಶೀಯ ಪ್ರವಾಸಗಳು
          ದೇಶವಿದೇಶಗಳ ಪ್ರವಾಸಗಳನ್ನು ಕೈಗೊಂಡು ಬೇರೆ ರಾಜ್ಯಗಳಿಗೂ ತಮ್ಮ ರಾಜ್ಯದ ಅಭಿವೃದ್ಧಿಗೂ ಇರುವ ಬದಲಾವಣೆಗಳನ್ನು ಗುರುತಿಸಿ, ಆ ಮೂಲಕ ತಮ್ಮ ಸಂಸ್ಥಾನ ಅಭಿವೃದ್ಧಿ ಸಾಧಿಸಲು ಬಯಸುತ್ತಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ಭಾರತದ ಅನೇಕ ರಾಜ್ಯಗಳಿಗೆ ಪ್ರವಾಸಗಳನ್ನು ಕೈಗೊಂಡಿದ್ದರು. ಅವರು ದೆಹಲಿ, ಉತ್ತರ ಭಾರತದ ಇತರ ಅನೇಕ ರಾಜ್ಯಗಳು; ಅವುಗಳಲ್ಲಿ ಮುಖ್ಯವಾಗಿ, ಕಾಶ್ಮೀರ, ಕಲ್ಕತ, ಬರೋಡ, ಪೂನ, ಮುಂಬಯಿ, ಮದ್ರಾಸ್ ಮೊದಲಾದ ಭಾಗಗಳಲ್ಲಿ ಪ್ರವಾಸ ಕೈಗೊಂಡಿದ್ದರು. ಭಾರತದಲ್ಲಿ ಸಂಚರಿಸಲು ರಾಜಕೀಯ ಕಾರಣಗಳಲ್ಲದೆ ಧಾರ್ಮಿಕ ಕೇಂದ್ರಗಳಿಗೆ, ದೇವಾಲಯಗಳಿಗೆ ಹಾಗೂ ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದು ಮುಖ್ಯ ಕಾರಣಗಳಾಗಿದ್ದವು.
ನಾಲ್ವಡಿಯವರ ದೆಹಲಿ ಪ್ರವಾಸ (೧೯೦೩)
          ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು ರಾಜ್ಯಭಾರ ಕ್ರಮದ ಅಧಿಕಾರವನ್ನು ಪಡೆದ ಮರುವರ್ಷ ಅಂದರೆ ಕ್ರಿ.ಶ.೧೯೦೩, ಜನವರಿ ೧ ರಂದು ಭಾರತದ ಅಂದಿನ ವೈಸ್‌ರಾಯಿಯ ಆಹ್ವಾನದ ಮೇರೆಗೆ ಏಳನೇ ಏಡ್ವರ್ಡ್ ಭಾರತದ ಸಾರ್ವಭೌಮರಾದುದರ ಗೌರವಾರ್ಥವಾಗಿ ದೆಹಲಿಯಲ್ಲಿ ಪುಣೆ ಮತ್ತು ಮುಂಬಯಿಗಳ ಮೂಲಕ ನಡೆದ ದರ್ಬಾರಿಗೆ ಪ್ರವಾಸ ಕೈಗೊಂಡಿದ್ದರು. ಈ ಪ್ರವಾಸದ ಅನುಭವದ ಮೂಲಕವೇ ಮಹಾರಾಜರು ಮೈಸೂರು ಸಂಸ್ಥಾನಕ್ಕೆ ಮೊಟ್ಟಮೊದಲು ಮೋಟಾರು ಕಾರುಗಳನ್ನು ತರಿಸಿದುದು ಎಂದು ತಿಳಿದುಬರುತ್ತದೆ.
          ದೆಹಲಿಯ ಈ ದರ್ಬಾರಿನಲ್ಲಿ ಭಾರತದ ವಿವಿಧ ರಾಜ್ಯ ಮತ್ತು ಪ್ರಾಂತ್ಯಗಳ ರಾಜಮಹಾರಾಜರುಗಳು, ಬ್ರಿಟೀಷ್ ಅಧಿಕಾರಿಗಳು ಅತ್ಯಂತ ಆಡಂಬರ ವಸ್ತ್ರಭೂಷಣಗಳನ್ನು ಧರಿಸಿ ತಮ್ಮ ರಾಜವೈಭವ ಮೆರೆದರೆ; ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು ಅವರೆಲ್ಲರಿಗಿಂತ ಭಿನ್ನವಾದ ರೀತಿಯಲ್ಲಿ ಆಡಂಬರವಿಲ್ಲದ ಸರಳವಾದ ರಾಜಧಿರಿಸುಗಳನ್ನು ಧರಿಸಿ ತಮ್ಮ ಸಂಸ್ಥಾನದ ಹಣವನ್ನು ತಮ್ಮ ಶೃಂಗಾರಕ್ಕೆ ಬಳಸಿ ದುರುಪಯೋಗ ಮಾಡುವುದಕ್ಕಿಂತ, ಅದನ್ನು ಪ್ರಜೆಗಳ ಪ್ರಯೋಜನಕ್ಕಾಗಿ ವ್ಯಯ ಮಾಡುವುದನ್ನು ಬಿಟ್ಟು ಅನವಶ್ಯಕವಾದ ವೆಚ್ಚಗಳಿಗಾಗಿ ವಿನಿಯೋಗಿಸಬಾರದೆಂದು ಅಲ್ಲಿ ನೆರೆದಿದ್ದವರಿಗೆ ಹೇಳುವ ಮೂಲಕ ಸಂಸ್ಥಾನದ ಮೇಲೆ ಅವರಿಗಿದ್ದ ಭಾವನಾತ್ಮಕ ಸಂಬಂಧಗಳು ಎಂಥದು ಎಂಬುದನ್ನು ನಮಗೆ ಕಾಣುವಂತೆ ಮಾಡುತ್ತಾರೆ. ನಾಲ್ವಡಿಯವರು ಇಂತಹ ವಿಶೇಷ ಗುಣಗಳನ್ನು, ಹೃದಯ ವೈಶಾಲ್ಯ ವಿಶೇಷತೆಗಳನ್ನು ಕಂಡ ನಾಲ್ವಡಿಯವರ ಆಸ್ಥಾನದಲ್ಲಿ ಪಟ್ಟಣಾಭಿವೃದ್ಧಿ ಅಧಿಕಾರಿಯಾದ  Shri M.A. Sreenivasan-Incharge Officer of Chamundi Extension in Mysore, During Sri Nalvadi Krishnaraj Wodeyar CªÀgÀÄ »ÃUÉ ºÉüÀÄvÁÛgÉ.
            This is not to say that there were not among them rulers that were good, Patriotic, benevolent and beloved of their subjects. “It is that Sri Krishnaraja Wodeyar was exceptional a living example of the kingly Dharma. I say this not as a Mysorean, but with all the impartiality and objectivity I can claim”14. (Dasara Cultural Festivities 1981 Souvenir PP 84-Shಡಿi ). ಎಂಬ ಮಾತುಗಳನ್ನು ಹೇಳುವ ಮೂಲಕ, ಭಾರತದ ಇತರ ರಾಜರುಗಳಿಗೂ, ಮೈಸೂರು ಸಂಸ್ಥಾನದ ಮಹಾರಾಜ ರಾದ ಶ್ರೀ ನಾಲ್ವಡಿಯವರ ನಡುವಿನ ವಿಶೇಷತೆಯನ್ನು ಮೆಚ್ಚುತ್ತಾರೆ.
ಇದೇ ಸಂದರ್ಭದಲ್ಲಿ ಮಹಾರಾಜರವರು ಹರಿದ್ವಾರಗಳಂತಹ ಧಾರ್ಮಿಕ ಪುಣ್ಯಕ್ಷೇತ್ರಗಳನ್ನು ಆಗ್ರಾಗಳಂತಹ ಐತಿಹಾಸಿಕ ಸ್ಥಳಗಳನ್ನು ಸಂದರ್ಶಿಸಿ ಅಲ್ಲಿಯ ಧಾರ್ಮಿಕ ಪಾವಿತ್ರತೆಯನ್ನೂ ಮತ್ತು ಕಲೆಯ ವೈಶಿಷ್ಯತೆಗಳನ್ನು ಗುರುತಿಸಿ ತಮ್ಮ ಸಂಸ್ಥಾನದಲ್ಲೂ ಅಂತಹ ಪುಣ್ಯಕ್ಷೇತ್ರಗಳ ಪುನರುದ್ಧಾರ ಮತ್ತು ಕಟ್ಟಡಗಳ ನಿರ್ಮಾಣಗಳನ್ನು ಕೈಗೊಳ್ಳಲು ತಮ್ಮ ಈ ಪ್ರವಾಸದ ಅನುಭವಗಳನ್ನು ಬಳಸಿಕೊಂಡರು. (ಆಳಿದ ಮಹಾಸ್ವಾಮಿಯವರು, ಪು. ೨೨೨-೨೨೩)
ಮದ್ರಾಸಿನ ಪ್ರವಾಸ (೧೯೦೫)
೧೯೦೫ರಲ್ಲಿ ಮದರಾಸಿನಲ್ಲಿದ್ದ ಗೌರ್ವನರ್ ಜನರಲ್‌ರವರನ್ನು ಕಾಣುವ ಸಲುವಾಗಿ ಪ್ರಯಾಣ ಬೆಳೆಸಿದ್ದರು. ಈ ಸಂದರ್ಭದಲ್ಲಿ ಮಹಾರಾಜ ಶ್ರೀ ಕೃಷ್ಣರಾಜ ಒಡೆಯರು ಮದ್ರಾಸಿನ ಸಮುದ್ರ ತೀರದಲ್ಲಿ ಸಂಜೆಯ ವೇಳೆ ಗಾಳಿ ಸವಾರಿಗೆಂದು ಹೊರಟಾಗ ಸಾಮಾನ್ಯರಂತಿದ್ದು, ತಮಗೆ ಪರಿಚಯವಿದ್ದ ಮೈಸೂರು ಸಂಸ್ಥಾನದ ಪ್ರಜೆಗಳೊಂದಿಗೆ ಮಾತನಾಡುತ್ತಿದ್ದುದನ್ನು ಮದರಾಸಿನ ಜನರು ಗಮನಿಸಿ, ಮೈಸೂರು ಮಹಾರಾಜರ ಪ್ರಜಾಪ್ರೇಮ ಸರಳತೆಯೂ ಸದ್ಗುಣ, ಘನತೆ ಗಾಂಭೀರ್ಯ, ಸ್ನೇಹ ಪ್ರವೃತ್ತಿಗಳನ್ನು ಗಮನಿಸಿ ಅವರನ್ನು ಗುಣಗಾನ ಮಾಡಿದರು. ನಾಲ್ವಡಿಯವರ ವಿಶಿಷ್ಟ ಸದ್ಗುಣಗಳನ್ನು ಅವರು ಮೆಚ್ಚಿದರು. ಇವು ನಾಲ್ವಡಿಯರ ಮೇಲೆ ಗೌರವಾದರಗಳು ಹೆಚ್ಚಾಗಿ ಅವರೊಡನೆ ಮಾತನಾಡಲು ಮದ್ರಾಸಿನ ಪ್ರಜೆಗಳು ಸಹ ಮುಂದಾಗುತ್ತಿದ್ದರು ಎಂಬುದಾಗಿ ಸರ್ ಇವ್ಯಾನ್ ಮೇಕಾನಕಿ ಎಂಬ ಬ್ರಿಟೀಷ್ ಬರಹಗಾರ ಬರೆಯುತ್ತಾನೆ. (ಅದೇ, ಪು. ೨೨೬)
ಉತ್ತರ ಭಾರತ ಪ್ರವಾಸ (೧೯೧೧)
          ೧೯೧೧ರಲ್ಲಿ ಜನವರಿ ತಿಂಗಳಲ್ಲಿ ನಾಲ್ವಡಿಯವರು ಎರಡು ಬಾರಿ ಉತ್ತರ ಭಾರತದ ಸಂಚಾರ ಕೈಗೊಂಡರು ಭಾರತದ ಯಾವ ಭಾಗದಲ್ಲೂ ಎಂದೂ ನಡೆಯದಂತಹ ವಿಶೇಷವಾದ ವಸ್ತುಪ್ರದರ್ಶನನವೂಂದು ಪ್ರಯಾಗದಲಿ ನಡೆಯಿತು. ಇದನ್ನು ವಿಕ್ಷೀಸಲು ದೇಶದ ವಿವಿಧ ಭಾಗಗಳಿಂದ ರಾಜಮಹಾರಾಜರು ಮತ್ತು ರಾಜಪ್ರತಿನಿಧಿಗಳು ಭಾಗವಹಿಸಿದ್ದರು. ಇದರಲ್ಲಿ ನಾಲ್ವಡಿ ಕೃಷ್ಣರಾಜ ಪಡೆಯರು ಭಾಗವಹಿಸಿದ್ದರು. ನಾಲ್ವಡಿಯವರು ಪ್ರಯಾಗದಲ್ಲಿ ನಡೆದ ಈ ವಸ್ತುಪ್ರದರ್ಶನವನ್ನು ವೀಕ್ಷಿಸಿದ ತರುವಾಯ ಮತ್ತೊಂದು ವಿಶಿಷ್ಟವಾದ ವಸ್ತುಪ್ರದರ್ಶನವನ್ನೇರ್ಪಡಿಸಿ, ಅಲ್ಲಿಗೆ ಮೈಸೂರಿನಲ್ಲಿ ತಯಾರಿಸಿದ ಗುಡಿ ಕೈಗಾರಿಕೆಗಳ ವಸ್ತುಗಳನ್ನು ಅಲ್ಲಿ ಪ್ರದರ್ಶನಕ್ಕಿಡಬೇಕು ಎಂಬ ಉದ್ದೇಶದಿಂದ ಮುಂಬಯಿ ಮಾರ್ಗವಾಗಿ ಪ್ರಯಾಗಕ್ಕೆ ಪ್ರವಾಸ ಕೈಗೊಂಡರು. ಪ್ರಯಾಗದಿಂದ ಮೈಸೂರು ನಗರಕ್ಕೆ ಹಿಂತಿರುಗಿದ ನಂತರ ಮೈಸೂರಿನಲ್ಲೂ ವಿಶೇಷವಾದ ಪ್ರಮಾಣದಲ್ಲಿ ವ್ಯವಸಾಯ ಮತ್ತು ಕೈಗಾರಿಕೆಗಳ ವಸ್ತು ಪ್ರದರ್ಶನಗಳನ್ನು ಏರ್ಪಡಿಸಿದರು. ಮುಂದೆ ದಸರಾ ಉತ್ಸವದ ಸಂದರ್ಭದಲ್ಲಿ ಇಂತಹ ವಸ್ತುಪ್ರದರ್ಶನಗಳನ್ನು ಏರ್ಪಡಿಸಲು ಆರಂಭಿಸಿದರು. ಇದರಿಂದ ಮುಂದೆ ಸಂಸ್ಥಾನದ ಆದಾಯವು ಹೆಚ್ಚಾಯಿತು.
ಕ್ರಿ.ಶ.೧೯೧೧ರ ಡಿಸೆಂಬರ್ ತಿಂಗಳ ೧೧ರಲ್ಲಿ ನಾಲ್ವಡಿಯವರು ಐದನೇ ಜಾರ್ಜ್ ಚಕ್ರವರ್ತಿಯವರ ಮತ್ತು ಮೇರಿ ಚಕ್ರವರ್ತಿನಿಯವರ ಕಿರೀಟಧಾರಣಾ ಮಹೋತ್ಸವ ಪ್ರಯುಕ್ತ ದರ್ಬಾರಿಗಾಗಿ ದೆಹಲಿ ಪ್ರವಾಸ ಕೈಗೊಂಡರು. ಆ ಸಂದರ್ಭದಲ್ಲಿ ಮೈಸೂರಿನಿಂದ ಹಲವಾರು ಉತ್ಸಾಹಿಗಳು ಈ ಉತ್ಸವ ವೀಕ್ಷಿಸಲು ದೆಹಲಿಗೆ ಆಗಮಿಸಿದರಾದರೂ, ಉಳಿದುಕೊಳ್ಳಲು ಜಾಗವಿಲ್ಲದೆ ಪರಿತಪಿಸುವ ವಿಚಾರವನ್ನು ತಿಳಿದ ಮಹಾರಾಜರು, ತಮ್ಮ ಪ್ರಜೆಗಳು ಅವರು ಅಲ್ಲಿದ್ದಷ್ಟು ಕಾಲವೂ ಯಾವುದೇ ಅನಾನುಕೂಲ ಅನುಭವಿಸದಂತೆ, ವಸತಿ ಮತ್ತು ಆಹಾರದ ವ್ಯವಸ್ಥೆ ಮಾಡಿದರು. ಇದು ತಾವು ಎಲ್ಲೇ ಇರಲಿ ತಮ್ಮ ಪ್ರಜೆಗಳು ತೊಂದರೆಗೊಳಗಾಗಬಾರೆಂದು ಭಾವಿಸಿ, ಮೇಲಿನಂತೆ ಕ್ರಮ ಕೈಗೊಂಡರು. ಇದರಿಂದ ಜನರ ಸಮಸ್ಯೆಗಳಿಗೆ ನಾಲ್ವಡಿಯವರು ಹೇಗೆ ಸ್ಪಂದಿಸುತ್ತಿದ್ದರೆಂಬುದನ್ನು ತೋರಿಸುತ್ತದೆ.
          ದೆಹಲಿಯಿಂದ ಲಾಹೋರು, ಅಮೃತಸರ, ಹರಿದ್ವಾರ, ಗಯಾ ಮುಂತಾದ ಪುಣ್ಯಕ್ಷೇತ್ರಗಳಿಗೂ ಸಂದರ್ಶಿಸಿದರು. ಆ ಬಳಿಕ ಕಲ್ಕತಾ ನಗರಕ್ಕೆ ಆಗಮಿಸಿ ಪದ್ಧತಿಗನುಸಾರ ಕಾಳೀಘಟ್ಟದಲ್ಲಿರುವ ಶ್ರೀ ಚಾಮರಾಜೇಂದ್ರ ಒಡೆಯರವರ ಶಿಲಾ ಬೃಂದಾವನದ ಬಳಿ ಸೇವೆ, ಸಂತರ್ಪಣೆಯನ್ನು ನಡೆಸಿದರು. ಅದರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದವರಿಗೆ ಕೆಲವು ಸೌಲಭ್ಯಗಳನ್ನು ಒದಗಿಸಿಕೊಡುವ ಮೂಲಕ ತಮ್ಮ ರಾಜಧರ್ಮವನ್ನು ಮೆರೆದರು. (ಶಿಂಗ್ರಯ್ಯ; ಪು. ೨೨)
ಕಾಶೀಯಾತ್ರೆ (೧೯೧೮)
ನಾಲ್ವಡಿ ಕೃಷ್ಣರಾಜ ಒಡೆಯರು ಹಿಮಾಚಲ ಪರ್ಯಂತವಾಗಿರುವ ಸಮಸ್ತ ಪುಣ್ಯ ಕ್ಷೇತ್ರಗಳಿಗೂ ಅನೇಕ ಬಾರಿ ಯಾತ್ರೆಗಳನ್ನು ಕೈಗೊಂಡು ಧಾರ್ಮಿಕ ಸಂಪ್ರದಾಯ ಗಳನ್ನು ಮುಂದುವರಿಸಿದರು. ೧೯೧೮ರಲ್ಲಿ ಕಾಶ್ಮೀರ ಪ್ರವಾಸ: ಕ್ರಿ.ಶ.೧೯೧೮, ಜುಲೈ ೩ರಂದು ಕಾಶ್ಮೀರ ಸಂಸ್ಥಾನದ ರಾಜಧಾನಿ ಶ್ರೀನಗರಕ್ಕೆ ತೆರಳಿದರು. ಅಲ್ಲಿಯ ಮಹಾರಾಜರ ಛಷ್ಮಷಾಹಿ ಅರಮನೆಯಲ್ಲಿ ತಮ್ಮವಾಸ್ತವ್ಯ ಹೂಡಿದ್ದರು. ಆ ಸಂದರ್ಭದಲ್ಲಿ ಮೊದಲನೆಯದಾಗಿ ಕಾಶ್ಮೀರ ಸಂಸ್ಥಾನದ ರೇಷ್ಮೆ ಕಾರ್ಖಾನೆಯವರು ರೋಗ ರಹಿತವಾದ ರೇಷ್ಮೆ ಬಿತ್ತನೆ ಮೊಟ್ಟೆಗಳನ್ನು ರೈತರಿಗೆ ಒದಗಿಸುವ ಏರ್ಪಾಡು ಮಾಡಿದ್ದುದನ್ನು ಗಮನಿಸಿದ ನಾಲ್ವಡಿಯವರು ಅದನ್ನು ಕಂಡು ವಿಸ್ಮಯಪಟ್ಟು, ಮೈಸೂರು ಸಂಸ್ಥಾನದಲ್ಲಿಯೂ ಅದೇ ರೀತಿಯ ಏರ್ಪಾಡು ಮಾಡಿ, ರೇಷ್ಮೆ ಕೈಗಾರಿಕೆಗೆ ಉತ್ತೇಜನ ಕೊಟ್ಟರು.
ಎರಡನೆಯದಾಗಿ ಕಾಶ್ಮೀರ ಸಂಸ್ಥಾನದ ಸೌಂದರ‍್ಯವನ್ನು ವಿಕ್ಷೀಸಿ, ಅಲ್ಲಿನ ವಿಧವಿಧವಾದ ಉದ್ಯಾನವನಗಳು, ಫಲಪುಷ್ಪಗಳು ಮೊಗಲ್ ಚಕ್ರವರ್ತಿಗಳ ಕಾಲದ ಉದ್ಯಾನವನಗಳಿಂದ ಶೋಭಿಸುತ್ತ ರಮಣೀಯವಾದ ಗಿರಿದುರ್ಗಗಳಿಂದ ಹಾಗೂ ನದಿಗಳಿಂದ ಕಂಗೊಳಿಸುವುದನ್ನು ವೀಕ್ಷಿಸಿ, ಅದರ ಮಾದರಿಯಲ್ಲಿಯೇ ಕೆ.ಆರ್.ಎಸ್.ನಲ್ಲಿ ಫಲಪುಷ್ಪಗಳ ತೋಟವನ್ನು ಬೆಳೆಸಲು ಉತ್ತೇಜನ ನೀಡಿದರು.
ಕೈಲಾಸ ಶಿಖರ ಯಾತ್ರೆ (೧೯೩೧)
ನಾಲ್ವಡಿಯವರು ನೆರವೇರಿಸಿದ ಯಾತ್ರೆಗಳಲೆಲ್ಲಾ ಕೈಲಾಸ ಶಿಖರ ದರ್ಶನ ಯಾತ್ರೆಯು ಧಾರ್ಮಿಕವಾಗಿ ಅತ್ಯಂತ ಪ್ರಮುಖವಾದುದೆನ್ನಲಾಗಿದೆ. ಇದು ಕ್ರಿ.ಶ.೧೯೩೧ ಜೂನ್ ೨೭ರಂದು ಪ್ರಾರಂಭಗೊಂಡಿತು. ಅಲ್ಲಿಂದ ಅವರು ಮಾನಸ ಸರೋವರಕ್ಕೆ ಪ್ರಯಾಣ ಮಾಡಿದರು. ಧಾರ್ಮಿಕ ದೃಷ್ಠ್ಟಿಯಿಂದ ಮಾನಸ ಸರೋವರ ಪ್ರವಾಸ ಮಾಡುವುದು ಹಿಂದಿನಿಂದಲೂ ಪ್ರಸಿದ್ಧಿ ಪಡೆದುಕೊಂಡು ಬಂದಿದೆ.
ಕೈಲಾಸವು ಧಾರ್ಮಿಕ ಕಾರಣಗಳು ಮಾತ್ರವಲ್ಲದೆ, ನೈಸರ್ಗಿಕ, ಭೌಗೋಳಿಕ ಅಂಶಗಳಿಗೂ ಪ್ರಸಿದ್ಧವಾದುದು. ಅಸಾಧಾರಣವಾದ ಚಳಿ, ಗಾಳಿ, ಹಿಮಗಳಿಂದ ಒಮ್ಮೊಮ್ಮೆ ಜೀವಕ್ಕೆ ಅಪಾಯವನ್ನುಂಟು ಮಾಡುವ ಪರಿಸ್ಥಿತಿಯಲ್ಲಿಯೂ, ನಾಲ್ವಡಿಯವರು ಅಲ್ಲಿನ ಪ್ರಾಕೃತಿಕ ವೈಶಿಷ್ಟ್ಯಗಳನ್ನೂ, ಕೈಲಾಸ ಶಿಖರದ, ಘನ-ಗಾಂಭಿರ್ಯ ದೃಶ್ಯಗಳನ್ನು ನೋಡುವುದಕ್ಕಾಗಿ ಈ ಯಾತ್ರೆಯನ್ನು ಕೈಗೊಂಡರೆನ್ನಲಾಗಿದೆ. ಅಲ್ಲಿಗೆ ಹೋದಾಗ ಪರಮಾತ್ಮನ ಸಾನ್ನಿಧ್ಯವೇ ಇರುವಂತೆ ತೋರಿ ಆನಂದಾನುಭವವಾಗುವಂತೆ ಅಗೋಚರ ಶಕ್ತಿಯೊಂದು ಕೈಲಾಸ ಶೈಲದ ಸುತ್ತಲೂ ತುಂಬಿದೆ ಎಂದು ಅವರು ತಮ್ಮ ಅನುಭವವನ್ನು ಇತರರಿಗೆ ಹೇಳುವ ಮೂಲಕ ಧಾರ್ಮಿಕ ಯಾತ್ರೆಗಳಿಗೆ ರಾಜ್ಯದ ಜನರನ್ನು ಹೋಗುವಂತೆ ಉರಿದುಂಬಿಸುತ್ತಿದ್ದರು.
ತಮ್ಮ ತೀರ್ಥಯಾತ್ರೆಯ ಸಂದರ್ಭದಲ್ಲಿ ನಾಲ್ವಡಿಯವರು ತಮ್ಮ ಆರಾಧನೆಯಿಂದ ಒದಗುವ ಪುಣ್ಯವು ತಮ್ಮ ಪ್ರಜೆಗಳಿಗೆ ಲಭಿಸಲೆಂದು ಬೇಡಿಕೆಯನ್ನು ಸಲ್ಲಿಸಿದ್ದು ಗಮನಾರ್ಹವಾದುದು
III. ನಾಲ್ವಡಿ ಕೃಷ್ಣರಾಜ ಒಡೆಯರ ವಿದೇಶಿ ಪ್ರವಾಸಗಳು
ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು ತಮ್ಮ ಜೀವಿತ ಕಾಲದಲ್ಲಿ ತಮ್ಮ ಸ್ವಹಿತಸಾಧನೆ ಮತ್ತು ಮೈಸೂರು ಸಂಸ್ಥಾನದ ಅಭಿವೃದ್ಧಿ ಹಾಗೂ ಪ್ರಜೆಗಳ ಅನುಕೂಲಕ್ಕಾಗಿ ಅನೇಕ ವಿದೇಶಿಯಾತ್ರೆಗಳನ್ನು ಕೈಗೊಂಡು, ಆ ಮೂಲಕ ತಾವು ಪ್ರತ್ಯಕ್ಷವಾಗಿ ನೋಡಿದ ಅನೇಕ ಹೊಸ ಹೊಸ ವಿಚಾರಗಳನ್ನು ಅನುಭವಗಳನ್ನು ಸಂಸ್ಥಾನದ ಅಭ್ಯುದಯಕ್ಕೆ ತೊಡಗಿಸಿದರು. ಅವರು ಬರ್ಮಾ, ಜಪಾನ್, ಯುರೋಪ್ ಖಂಡ; ಅದರಲ್ಲಿ ಮುಖ್ಯವಾಗಿ ಫ್ರಾನ್ಸ್, ಇಂಗ್ಲೆಂಡ್, ಜರ್ಮನಿ, ನೆದರ್‌ಲ್ಯಾಂಡ್, ಸ್ವಿಡ್ಜರ್‌ಲ್ಯಾಂಡ್‌ನ ಅನೇಕ ಪಟ್ಟಣ ಮತ್ತು ನಗರಗಳಲ್ಲಿ ಸಂಚರಿಸಿ ಅಲ್ಲಿನ ಅಭಿವೃದ್ಧಿ ಕ್ರಮಗಳನ್ನು ಮೈಸೂರು ಸಂಸ್ಥಾನದಲ್ಲಿ ಸಾಧ್ಯವಾಗುವಷ್ಟರ ಮಟ್ಟಿಗೆ ಅಳವಡಿಸಿ ಮಾದರಿ ರಾಜ್ಯವನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆನ್ನಬಹುದು.
ಜನವರಿಯಲ್ಲಿ ನಾಲ್ವಡಿಯರ ಬರ್ಮಾ ಪ್ರವಾಸ (೧೯೦೧)
          ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು ಅಧಿಕಾರದ ಗದ್ದುಗೆ ಹಿಡಿಯುವ ಒಂದು ವರ್ಷದ ಹಿಂದೆಯೇ ಬರ್ಮಾ ದೇಶಕ್ಕೆ ಪ್ರಯಾಣ ಬೆಳೆಸಿದರು. (ಜಬಿಂಗ್ಲಾ ಎಂಬ ಜಹಜನ್ನೇರಿ)
ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಬರ್ಮಾದೇಶದ ರಾಜಪ್ರತಿನಿಧಿಗಳು ನೀಡಿದ ವಿಜ್ಞಾಪನಾ ಪತ್ರಿಕೆಯಲ್ಲಿ ಮೈಸೂರು ಸಂಸ್ಥಾನವು ಇತರ ಸಮಸ್ತ ಸಂಸ್ಥಾನಗಳಿಗಿಂತ ಹೆಚ್ಚಾಗಿ ಪುರೋಭಿವೃದ್ಧಿ ಹೊಂದಿದ್ದು, ಜಾತಿ ಜನಾಂಗ ಭೇದವಿಲ್ಲದೆ ಸಮಸ್ತ ಪ್ರಜೆಗಳಿಗೂ ಸಮಾನವಾದ ಪ್ರೋತ್ಸಾಹ ಕೊಟ್ಟಿರುವ ಹಾಗೂ ಪ್ರಪಂಚದಲ್ಲಿ ಅತ್ಯಂತ ನಾಗರಿಕವೆನಿಸಿದ್ದ ಜನಾಂಗಗಳವರು ಅನುಸರಿಸುತ್ತಿದ್ದ ಅತ್ಯುತ್ತಮವಾದ ಕಾರ್ಯನಿಯಮಗಳು ಆಚರಣೆಯಲ್ಲಿದ್ದ ಸುಖವಾಸವೆಂದೂ ಮುಂದುವರಿದು ಮೈಸೂರು ಸಂಸ್ಥಾನವು ಭರತ ಖಂಡದ ರಮಣೀಯವಾದ ಉದ್ಯಾನವೆಂದು ವರ್ಣಿತವಾಗಿದೆ ಮುಂದೆ ಅದು ಸದ್ಯದಲ್ಲಿಯೇ ಅದರ ಅಧಿಕಾರ ಸ್ವೀಕರಿಸಲಿರುವ ಶ್ರೀ ಕೃಷ್ಣರಾಜ ಒಡೆಯರ ಆಳ್ವಿಕೆಯಲ್ಲಿ ಮತ್ತಷ್ಟು ಪುರೋಭಿವೃದ್ಧಿ ಹೊಂದಲಿದ್ದು, ಮಹಾರಾಜರು ತಮ್ಮ ಪೂರ್ವಜರಿಗಿಂತಲೂ ಹೆಚ್ಚಿನ ಖ್ಯಾತಿಯನ್ನು ಗಳಿಸುವರು ಎಂಬುದಾಗಿ ಹಾರೈಸುವ ಮೂಲಕ ನಾಲ್ವಡಿಯವರ ಅಭಿವೃದ್ಧಿಯ ಮುಂದಾಲೋಚನೆಯ ಗುಣಗಳನ್ನು ಗಮನಿಸಿ ಹೊಗಳಲಾಗಿದೆ.
          ನಾಲ್ವಡಿಯವರು ಬರ್ಮಾ ಪ್ರವಾಸದ ಸಂದರ್ಭದಲ್ಲಿ ಮಾಂಡಲೆ, ಮಿಚಿನಾ, ಭಾಮೋ, ಪ್ರೋಮ್ ಮೊದಲಾದ ನಗರಗಳನ್ನು ಸಂದರ್ಶಿಸಿ, ಅಲ್ಲಿನ ಜನರ ಆಚಾರ, ಸಂಸ್ಕೃತಿ, ಅತಿಥ್ಯ ವಿಚಾರಗಳನ್ನು ಗಮನಿಸಿ ಪ್ರಭಾವಿತರಾದರು. ಮಾಣಿಕ್ಯದ ಗಣಿಗಳಿಗೆ ಹೆಸರಾಗಿದ್ದ ಮೋಗಾಕ್ ಎಂಬ ನಗರವನ್ನು ಸಂದರ್ಶಿಸಿ ಅಲ್ಲಿ ಗಣಿಗಳ ವಿವರಗಳನ್ನು ಪಡೆದುಕೊಂಡು ಮದರಾಸಿನ ಮೂಲಕ ಮೈಸೂರಿಗೆ ಹಿಂತಿರುಗಿದರು.
          ನಾಲ್ವಡಿಯವರು ತಮ್ಮ ಬರ್ಮಾ ಪ್ರವಾಸದಲ್ಲಿ ತಾವು ಕಣ್ಣಾರೆ ಕಂಡು ವಿಸ್ಮಯಗೊಂಡ ಅಲ್ಲಿನ ಬೌದ್ಧದೇವಾಲಯಗಳನ್ನು, ಸೀಮೆಎಣ್ಣೆ ಬುಗ್ಗೆಗಳು ಉಕ್ಕುವ ಪ್ರದೇಶಗಳನ್ನು, ಗಗನ ಚುಂಬಿ ವೃಕ್ಷಗಳಿಂದ ಆವೃತಗೊಂಡಿದ್ದ ಕಾನನಗಳನ್ನೂ ನೋಡಿ ಆಕರ್ಷಿತಗೊಂಡು ಅಂತಹ ಆಕರ್ಷಕ ಪ್ರವಾಸ ತಾಳಗಳನ್ನು ಮೈಸೂರಿನಲ್ಲೂ ಸ್ಥಾಪಿಸಲು ಪ್ರಯತ್ನಪಟ್ಟರು. ಅದರ ಫಲವಾಗಿಯೇ ಇಂದು ಪ್ರವಾಸಿಗರ ಆಕರ್ಷಕ ತಾಣವಾಗಿರುವ ಕೆ.ಆರ್.ಎಸ್.ನಂತಹ ಸುಂದರ ತೋಟಗಳು ನಿರ್ಮಾಣವಾಗಲು ಕಾರಣವಾದವು ಎನ್ನಬಹುದು.
          ಬರ್ಮಾ ಪ್ರವಾಸದಲ್ಲಿದ್ದಾಗ ನಾಲ್ವಡಿಯವರು ಕಂಡ ಇತರ ವಿಸ್ಮಯಗಳೆಂದರೆ, ಬರ್ಮಾ ಸ್ತ್ರೀಯರು ವ್ಯಾಪಾರ ವಹಿವಾಟುಗಳಲ್ಲಿ ಉದ್ಯುಕ್ತವಾಗಿ ವಿಶೇಷ ಸ್ವಾತಂತ್ರ್ಯದಿಂದ ವ್ಯವಹರಿಸುತ್ತಿದ್ದುದು. ಅದನ್ನು ಕಂಡು ಅವರು ಬಹು ವಿಸ್ಮಯಗೊಂಡರು. ಏಕೆಂದರೆ ಬರ್ಮಾದಲ್ಲಿ ಸ್ತ್ರೀಯರಿಗಾಗಿ ಪ್ರತ್ಯೇಕವಾಗಿ ರೈಲು ಬೋಗಿಗಳನ್ನು ಮಿಸಲಿರಿಸಿರಲಿಲ್ಲ ಅಥವಾ ಮಿಸಲಿರಿಸಿದ್ದ ಅಂತಹ ಬೋಗಿಗಳಲ್ಲಿ ಪ್ರಯಾಣ ಮಾಡಲು ಇಚ್ಫಿಸದ ಸ್ತ್ರೀಯರು, ಪುರುಷರೊಡನೆ ಪ್ರಯಾಣ ಮಾಡಲು ನಮಗೆ ಯಾವ ಹೆದರಿಕೆಯೂ ಇಲ್ಲವೆಂದೂ ಹೇಳುವ ಮೂಲಕ ಅವರಲ್ಲಿದ್ದ ಧೈರ್ಯ ಮತ್ತು ಬದಲಾವಣೆಯ ಮನೋದೃಷ್ಟಿಯನ್ನು ಮಹಾರಾಜರು ಸ್ವತಃ ನೋಡುವ ಮೂಲಕ ತಮ್ಮ ಸಂಸ್ಥಾನದ ಸ್ತ್ರೀಯರಲ್ಲೂ ಅದೇ ಬಗೆಯ ಧೈರ್ಯ ಸಾಹಸಗಳನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಅವರ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಗೊಂಡರು.    ಬರ್ಮಾದ ಗೋಟಿಕ್‌ಗಾರ್ಜ ರೈಲ್ವೆ ಸೇತುವೆ. ಆ ರೈಲ್ವೇ ಸೇತುವೆಗೆ ಅಳವಡಿಸಿರುವ ಸ್ತಂಭಗಳನ್ನು ನಿರ್ಮಿಸುವುದೇ ಸಾಧ್ಯವಿಲ್ಲದ ೯೦೦ ಅಡಿಗಳ ಆಳದ ಕಮರಿಗೆ, ಮೇಲ್ಭಾಗದಲ್ಲಿ ಸ್ತಂಭವೇ ಇಲ್ಲದೆ ಕಟ್ಟಿರುವ ಆ ಸೇತುವೆಯ ಶಿಲ್ಪಕಲಾ ಕೌಶಲ್ಯವನ್ನೂ, ಹಾಗೂ ಅದರ ಮೇಲೆ ಸಂಚರಿಸುತ್ತಿದ್ದ ರೈಲುಗಳ ಸಂಚಾರದ ತಾಂತ್ರಿಕತೆಯನ್ನು ಸಾಧ್ಯವಾದ ಕಡೆ ಮೈಸೂರು ಸಂಸ್ಥಾನದಲ್ಲೂ ಆಳವಡಿಸಿಕೊಳ್ಳಲು ಪ್ರೇರೇಪಣೆ ನೀಡಿದವು.
ಅಭಿವೃದ್ಧಿಶೀಲ ವಿಸ್ಮಯಗಳನ್ನು ಅಳವಡಿಸಿಕೊಳ್ಳುವು ದಕ್ಕಷ್ಟೇ ತಮ್ಮನ್ನು ಮಿಸಲಿರಿಸಲಿಚ್ಫಿಸದ ನಾಲ್ವಡೀ ಕೃಷ್ಣರಾಜರು, ಬಾಲ್ಯದಿಂದಲೂ ಪಾರಂಪರ‍್ಯವಾಗಿ ಅನುಸರಿಸಿ ಕೊಂಡು ಬಂದಿದ್ದ ಪ್ರಾಣಿದಯೆ ನೀತಿಯನ್ನು ಅನುಸರಿಸಲು ಬರ್ಮಾದ ಪ್ರವಾಸದಲ್ಲಿದ್ದಾಗ ಅವಕಾಶವೊಂದು ಅವರಿಗೆ ದೊರಕಿತು. ಬರ್ಮಾ ಸೈನಿಕರ ಆಹಾರಕ್ಕೆಂದು ಬಿಟ್ಟಿದ್ದ ಬಿಳಿ ಮೇಕೆಯೊಂದು ಹೇಗೋ ಮಹಾರಾಜರ ಹಿಂದೆ ಹಿಂದೆ ಬರಲಾರಂಭಿಸಿದಾಗ ಅದನ್ನು ಯಾತಕ್ಕಾಗಿ ಸೈನಿಕರ ಶಿಬಿರದಲ್ಲಿಡಲಾಗಿದೆ ಎಂಬುದರ ಬಗೆಗೆ ವಿವರ ಪಡೆದುಕೊಂಡು ನಂತರ ಅದನ್ನು ಸೈನಿಕರಿಂದ ಕ್ರಯಕ್ಕೆ ಕೊಂಡು, ಮೈಸೂರಿಗೆ ತಂದ ಮೇಲೆ ಅದಕ್ಕೆ ಪ್ರೀತಿಯಿಂದ ಆದರಿಸಿ, ಮೈದಡವಿ ಮೇವನ್ನು ಹಾಕಿ ಸಲುಹುತ್ತಿದ್ದರಲ್ಲದೆ; ಅದರ ಪ್ರಭಾವದಿಂದ ಮೈಸೂರು ಸಂಸ್ಥಾನದಲ್ಲಿ ಪ್ರಾಣಿದಯಾ ಸಂಘವನ್ನು ಸ್ಥಾಪಿಸಿ, ಪ್ರಾಣಿಗಳನ್ನು ರಕ್ಷಿಸುವ ಕೆಲಸವನ್ನು ಪ್ರಾರಂಭಿಸಿದರೆಂಬ ಅಂಶ ಬೆಳಕಿಗೆ ಬರುತ್ತದೆ.
ಜಪಾನ್ ಪ್ರವಾಸದ ಸಿದ್ಧತೆ (೧೯೦೮)
          ಕ್ರಿ.ಶ.೧೯೦೮ರ ಹೊತ್ತಿಗೆ ಜಪಾನ್ ದೇಶ ಅದ್ಭುತವಾದ ಪುರೋಭಿವೃದ್ಧಿ ಸಾಧಿಸಿದ್ದಿತು. ಜಗತ್ತಿನ ಅನೇಕ ದೇಶಗಳು ಹತ್ತಾರು ಶತಮಾನಗಳಲ್ಲಿ ಸಾಧಿಸುವುದಕ್ಕಾಗದಷ್ಟು ಅಭ್ಯುದಯವನ್ನು ಕೇವಲ ಐವತ್ತು ವರ್ಷಗಳಲ್ಲಿ ಜಪಾನ್ ಅತ್ಯಾಧುನಿಕ ಅಭಿವೃದ್ಧಿ ಸಾಧಿಸಿದ್ದ ದೇಶವೆಂದು ಖ್ಯಾತಿಗಳಿಸಿದ್ದಿತು. ಅದು ೧೮೯೬ನೆಯ ಇಸವಿಯಲ್ಲಿ ಬರುತ್ತಿದ್ದ ಹುಟ್ಟುವಳಿಯ ಆರರಷ್ಟು ಹೆಚ್ಚಿನ ಹುಟ್ಟುವಳಿಯು ೧೯೦೮ರಲ್ಲಿ ಜಪಾನಿನಲ್ಲಿ ಬರುತ್ತಿತ್ತು. ಇದರಿಂದ ಆಕರ್ಷಣಿಗೆ ಒಳಗಾದ ರಾಜಕುಮಾರ ಶ್ರೀ ನಾಲ್ವಡಿಯವರು, ಜಪಾನ್ ದೇಶದ ಈ ಅಭಿವೃದ್ಧಿ ಸಾಧನೆಯ ವಿವರಗಳನ್ನೆಲ್ಲ ಪ್ರತ್ಯೇಕ್ಷವಾಗಿ ಪರಿಶೀಲಿಸಿ ಸಾಧ್ಯವಾದಷ್ಟು ಅಲ್ಲಿಯ ವ್ಯವಸ್ಥೆಗಳನ್ನು ಮೈಸೂರು ಸಂಸ್ಥಾನದಲ್ಲಿ ಆಚರಣೆಗೆ ತಂದು ಸಂಸ್ಥಾನದ ಅಭಿವೃದ್ಧಿಯನ್ನು ಸಾಧಿಸುವ ಸಲುವಾಗಿ ೧೯೦೮ರಲ್ಲಿ ಜಪಾನಿಗೆ ಪ್ರಯಾಣ ಬೆಳೆಸಲು ಉದ್ದೇಶಿಸಿದ್ದರು. ಆದರೆ ಅದೇ ವರ್ಷ ಸಂಸ್ಥಾನದಲ್ಲಿ ಅನಾವೃಷ್ಠಿಯ ಪರಿಣಾಮ ಕ್ಷಾಮ ಸಂಭವಿಸಿ ಜನರು ಸಾಕಷ್ಟು ಸಂಕಟದಲ್ಲಿದ್ದಾಗ, ಆ ಸನ್ನಿವೇಶದಲ್ಲಿ ಸಂಸ್ಥಾನವನ್ನು ಬಿಟ್ಟು ಜಪಾನಿಗೆ ತೆರಳುವುದು ಉಚಿತವಲ್ಲವೆಂದು ನಿರ್ಧರಿಸಿ ಜಪಾನ್ ಪ್ರಯಾಣವನ್ನು ತಮ್ಮ ಸಹೋದರ ಯವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರಿಗೆ ವಹಿಸಿ ತಾವು ಸಂಸ್ಥಾನದಲ್ಲಿ ಉಂಟಾಗಿದ್ದ ಕ್ಷಾಮ ನಿವಾರಣ ಕ್ರಮಗಳು ಹಾಗೂ ಪ್ರಜೆಗಳ ರಕ್ಷಣೆಯತ್ತ ಗಮನ ಹರಿಸಿದರು.
          ಶ್ರೀ ನಾಲ್ವಡಿಯವರು ಮಹಾರಾಜರಾಗಿ ತಾವೊಬ್ಬರೇ ವಿದೇಶ ಯಾತ್ರೆಗಳನ್ನು ಕೈಗೊಳ್ಳದೆ ಸಂಸ್ಥಾನದ ಅಭಿವೃದ್ಧಿ ದೃಷ್ಟಿಯಿಂದ ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರನ್ನು ಕ್ರಿ.ಶ. ೧೯೧೩ರಲ್ಲಿ ಯುರೋಪ್ ದೇಶಗಳಿಗೆ ಪ್ರವಾಸಕ್ಕೆ ಕಳುಹಿಸಿದರು.
ಜಪಾನಿನ ಗ್ಲಾಸ್ಗೊ ನಗರಕ್ಕೆ ಭೇಟಿ ನೀಡಿ ಯುವರಾಜ ಕಂಠೀರವ ನರಸರಾಜ ಒಡೆಯರು ಅಲ್ಲಿನ ಆಡಳಿತ ನಿರ್ವಹಣೆ ಸಂಬಂಧಪಟ್ಟ ಅತ್ಯಂತ ಗಹನವಾದ ವಿಚಾರಗಳನ್ನೂ, ಹಾಗೂ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಿ ರಾಜ್ಯಕ್ಕೆ ಒದಗಿಸುವ ಏರ್ಪಾಡುಗಳನ್ನೂ ಮತ್ತು ನಗರದ ಕಲ್ಮಶಜಲವನ್ನು ಸುಗಮವಾಗಿ ಹೊರ ಸಾಗಿಸಿ ಅನಾರೋಗ್ಯಕ್ಕೆ ಕಾರಣವಾಗದಂತೆ ನೈರ್ಮಲ್ಯಕ್ಕೆ ಹೆಚ್ಚಿನ ಗಮನ ನೀಡುವ ಕಾರ್ಯಗಳ ವ್ಯವಸ್ಥೆ ಮಾಡುವ ಏರ್ಪಾಡುಗಳನ್ನು ತಿಳಿದುಕೊಂಡು ಅದನ್ನು ಮೈಸೂರು ಸಂಸ್ಥಾನದ ನಗರಗಳಲ್ಲಿ ಅಳವಡಿಸಲು ನೆರವಾದರು.
ನಾಲ್ವಡಿಯವರ ಯುರೋಪು ಖಂಡದ ಪ್ರವಾಸಗಳು (೧೯೩೬ ರಿಂದ ೧೯೩೯)
ಶ್ರೀ ನಾಲ್ವಡಿ ಕೃಷ್ಣರಾಜರು ಕ್ರಿ.ಶ.೧೯೩೬, ಜೂನ್ ೨೧ರಂದು ಅನಾರೋಗ್ಯದಿಂದ ಬಳಲುತ್ತಿದ್ದಾಗ ಆರೋಗ್ಯ ತಪಾಸಣೆಗಾಗಿ ಯುರೋಪು ಖಂಡದ ಪ್ರವಾಸವನ್ನು ಕೈಗೊಂಡರು. ಆ ಸಂದರ್ಭದಲ್ಲಿ ಅವರು ತಮ್ಮ ಆ ಪ್ರವಾಸ ವನ್ನು ಮೈಸೂರು ಸಂಸ್ಥಾನದ ಅಭ್ಯುದಯ ಸಾಧನೆಗೆ ಸಹಾಯಕವಾಗುವ ಹಲವಾರು ವಿಷಯಗಳನ್ನು ಸಂಗ್ರಹಿಸಿ ಅದನ್ನು ಸಂಸ್ಥಾನದಲ್ಲಿ ಅಳವಡಿಸಿದರು.
೧೯೩೯ ಜುಲೈ ೧೦ರಂದು ಪ್ಯಾರಿಸ್ ನಗರಕ್ಕೆ ಆಗಮಿಸಿದ ಮಹಾರಾಜರು ಜುಲೈ ೧೫ರವರೆಗೂ ಅಲ್ಲೇ ಉಳಿದಿದ್ದು, ಪ್ಯಾರಿಸ್ ನಗರದ ಸಂಪೂರ್ಣ ವೀಕ್ಷಣೆ ಮಾಡಿದರು. ಪ್ಯಾರಿಸ್ ನಗರದಲ್ಲಿದ್ದ ಭವ್ಯ ಕಟ್ಟಡಗಳನ್ನು ಅವುಗಳ ಶೈಲಿಯನ್ನು, ಸ್ಮಾರಕಗಳನ್ನು, ಸೊಗಸಾದ ಇತರ ದೃಶ್ಯಗಳನ್ನು, ವರ್ಸೈಲ್ಸ್ ಅರಮನೆಯ ಭವ್ಯತೆಯನ್ನು, ಚಿತ್ರಶಾಲೆಗಳನ್ನು ವೀಕ್ಷಿಸಿ ಆಕರ್ಷಿತಗೊಂಡರು.
ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು ಧನಿಕರಲ್ಲಿ ಧನಿಕರಾದ ಮಹಾರಾಜರೆನಿಸಿದರೂ, ಇಂಗ್ಲೆಂಡ್‌ನಲ್ಲಿ ಬಡವರ ಮನೆಗಳಿಗೆ ಭೇಟಿ ನೀಡಿ ಅವರ ಸ್ಥಿತಿಗೂ, ಮೈಸೂರು ಸಂಸ್ಥಾನದ ಬಡವರ ಸ್ಥಿತಿಗೂ ಪರಸ್ಪರ ತಾರತಮ್ಯಗಳೇನೆಂಬುದನ್ನು ಪ್ರತ್ಯಕ್ಷವಾಗಿ ಕಾಣಲು ದೊರೆತ ಅವಕಾಶಗಳನ್ನೆಲ್ಲ ಉಪಯೋಗಿಸಿಕೊಂಡು ಆ ಮೂಲಕ ಮೈಸೂರು ಸಂಸ್ಥಾನದಲ್ಲಿ ಅನೇಕ ಸುಧಾರಣಾಭಿವೃದ್ಧಿ ಕ್ರಮಗಳನ್ನು ಕೈಗೊಳ್ಳಲು ಕಾರಣವಾಯಿತು. ಅವರಿಗೆ ತಮ್ಮ ರಾಜ್ಯದ ರೈತರ ಬಗೆಗೆ ಇದ್ದ ಕಾಳಜಿ ಎಂತಹದು ಎಂಬುದನ್ನು ಇದರಿಂದ ತಿಳಿಯಬಹುದಾಗಿದೆ.
ಅವರು ಇಂಗ್ಲೆಂಡಿನ ವ್ಯವಸಾಯ ಕ್ಷೇತ್ರಗಳನ್ನೂ ವ್ಯವಸಾಯಗಾರರ ಮನೆಗಳನ್ನೂ ಪರಿಶೀಲಿಸಿ ಅಲ್ಲಿಯ ದರ್ಶನಗಳಿಂದ ಸ್ವದೇಶದ ಸ್ಥಿತಿಯನ್ನು ಉತ್ತಮ ಪಡಿಸುವ ಯೋಚನೆ ಮಾಡಿದರು. ಈ ದೂರದರ್ಶಿತ್ವ ಕಾರ್ಯಗಳನ್ನು ಲಂಡನ್ನಿನ ಸಂಜೆಪತ್ರಿಕೆಯೊಂದು ಪ್ರಕಟಿಸಿತು. ಲಂಡನ್ನಿನ ಸ್ಟಾರ್ ಪತ್ರಿಕೆ (ಜುಲೈ ೧೭, ೧೯೩೬)
ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು ಯಾವ ದೇಶದಲ್ಲಾಗಲಿ ಅಥವಾ ಯಾವ ಕಾಲದಲ್ಲಾಗಲಿ ಇದ್ದವರಲ್ಲಿ ಅತ್ಯಂತ ಶ್ರೇಷ್ಠರೆಂದೂ ಅವರ ಸರಳತೆಯನ್ನು ಸಜ್ಜನಿಕೆಯನ್ನು ಜನಾನುರಾಗಿ ನಡವಳಿಕೆಯನ್ನು ಕುರಿತು ಶ್ಲಾಘಿಸಿತು.
ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು ಲಂಡನ್ನಿನ ಪ್ರವಾಸದಲ್ಲಿದ್ದಾಗ, ಅಲ್ಲಿಯ ಕಟ್ಟಡ ಶೈಲಿಯ ವಿಧಾನಗಳನ್ನೂ ಕಟ್ಟಡಗಳಲ್ಲಿರುವ ಶೈಲಿಗಳನ್ನು ಅಲ್ಲಿನ ಟ್ಯೂಬ್ ರೈಲ್ವೆ ವ್ಯವಸ್ಥೆಯನ್ನು ಅಲ್ಲಿನ ಜನರ ಶಿಸ್ತಿನ ಜೀವನ ಕ್ರಮಗಳನ್ನು, ಅಂಗಡಿ ವ್ಯಾಪಾರ ಚಟುವಟಿಕೆಗಳ ಕ್ರಮಗಳು ಬೆಲೆ ನಿರ್ಣಯಗಳು, ಜನರು ಅನುಸರಿಸುತ್ತಿದ್ದ ರಸ್ತೆಯ ನಿಯಮಗಳು, ಅಲ್ಲಿನ ಮೋಟಾರು ಕಾರು ಮತ್ತು ಬಸ್ಸುಗಳ ಸೌಕರ್ಯಗಳ ಬಗೆಗೆ ದೀರ್ಘವಾಗಿ ವಿವರಣೆ ಪಡೆದುಕೊಂಡು, ಅವುಗಳನ್ನು ಮೈಸೂರು ಸಂಸ್ಥಾನದಲ್ಲಿ ಅನುಷ್ಠಾನಗೊಳಿಸಲು ಪ್ರಯತ್ನಿಸಿದರು.
ಲಂಡನ್ನಿನ ಯಶಸ್ವಿ ಪ್ರವಾಸದ ನಂತರ ಶ್ರೀ ನಾಲ್ವಡಿಯವರು ೧೯೩೯ ಆಗಸ್ಟ್ ೧೯ರಂದು ಜರ್ಮನಿಗೆ ಪ್ರವಾಸ ಹೊರಟರು. ಅಲ್ಲಿ ಬರ್ಲಿನ್ ನಗರದಲ್ಲಿದ್ದ ಕೈಸರ್ ಚಕ್ರವರ್ತಿಯ ಅರಮನೆ, ಪ್ರಾಣಿ ಶಾಲೆಗಳು, ನರ್ತನ ಮತ್ತು ವ್ಯಾಯಾಮ ಶಾಲೆಗಳು ಇತ್ಯಾದಿಗಳನ್ನು ವೀಕ್ಷಿಸಿದರು.
ಅಲ್ಲಿಂದ ಸ್ವಿಡ್ಜರ‍್ಲೆಂಡಿಗೆ ಪ್ರಯಾಣ ಮಾಡಿದರು. ಸ್ವಿಡ್ಜರ‍್ಲೆಂಡಿನಲ್ಲಿ ದೊಡ್ಡ ಪರ್ವತಗಳನ್ನು ಕೊರೆದು ಸುರಂಗ ಮಾರ್ಗಗಳನ್ನು ಮಾಡಿ ಅಲ್ಲಿ ರೈಲು ಓಡಾಡಲು ವ್ಯವಸ್ಥೆಗೊಳಿಸಿರುವ ವಿಧಾನಗಳನ್ನು, ಆ ದೇಶದ ವ್ಯವಸಾಯ ಪದ್ಧತಿ ಮತ್ತು ಕೈಗಾರಿಕೆಗಳ ಬೆಳವಣಿಗೆಗಳನ್ನು ಅಲ್ಲಿನ ಜಲಪಾತಗಳಲ್ಲಿ ವಿದ್ಯುಚ್ಫಕ್ತಿಯ ಉತ್ಪಾದನೆ ಕ್ರಮವನ್ನು ತಿಳಿದುಕೊಂಡು ತಮ್ಮ ಸಂಸ್ಥಾನದಲ್ಲಿ ಅದೇ ಮಾದರಿಯ ಅಭಿವೃದ್ಧಿ ಕ್ರಮಗಳನ್ನು ಕೈಗೊಂಡರು.
ಹೀಗೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು ಸ್ವಹಿತವನ್ನು, ಸಂಸ್ಥಾನದ ಹಿತವನ್ನು ಮನಸ್ಸಿನಲ್ಲಿಟ್ಟುಕೊಂಡು ಯೂರೋಪಿನ ಪ್ರವಾಸಗೊಂಡು, ಅಲ್ಲಿನ ಅನೇಕ ಹೊಸ ಹೊಸ ವಿಚಾರಗಳನ್ನು ಅನುಭವನ್ನು ಮುಂದೆ ಸಂಸ್ಥಾನದ ಅಭ್ಯುದಯಕ್ಕೆ ತೊಡಗಿಸಿದರು. ಪರಿಣಾಮವಾಗಿ ಹೊಸ ಹೊಸ ಕೈಗಾರಿಕೆಗಳ ಸ್ಥಾಪನೆ, ಉದ್ಯಾನವನಗಳ ರಚನೆ, ಸಂಚಾರ ಸೌಕರ್ಯಗಳಿಗೆ ಚಾಲನೆ, ಉಬ್ಬು ಚಿತ್ರಗಳ ಕೆತ್ತನೆ ಕೆಲಸಗಳನ್ನು ಸಂಸ್ಥಾನದಲ್ಲಿ ಪ್ರಾರಂಭಿಸಲು ಕ್ರಮಗಳನ್ನು ಕೈಗೊಳ್ಳುವ ಮೂಲಕ ಮೈಸೂರು ಸಂಸ್ಥಾನದ ಪುರೋಭಿವೃದ್ಧಿಯನ್ನು ಸಾಧಿಸಿದರು.
ಆಧಾರಸೂಚಿ
೧.    Ramanna H.S., South India as seen by Forgin Travallers, (an Unpublished Thieses).
೨.         ನಾಗೇಗೌಡ, ಪ್ರವಾಸಿ ಕಂಡ ಇಂಡಿಯಾ, ಸಂ. ೧, ಮೈಸೂರು, ಪ್ರಾಸ್ತಾವಿಕ ನುಡಿ, ಪುಟ i, II.
೩.         QJMS, Vol. XXXI-1-3 and 4, Jan-April 1940-1941, Sri Krishnaraja Memorial Number.
೪.         ಸಿ.ಕೆ. ವೆಂಕಟರಾಮಯ್ಯ, ಆಳಿದ ಮಹಾಸ್ವಾಮಿಯವರು, ಬೆಂಗಳೂರು, ೧೯೪೧.
೫.         ಎಂ. ಶಿಂಗ್ರಯ್ಯ., ಶ್ರೀ ಚಾಮರಾಜೇಂದ್ರ ಒಡೆಯರ ಚರಿತ್ರೆ, ಬೆಂಗಳೂರು, ೧೯೨೬.
೬.         . Dasara Cultural Festivites 1981, Sovenior
೭.         ಬಿ. ರಾಮಕೃಷ್ಣರಾವ್., ಶ್ರೀಮನ್ ಮಹಾರಾಜರ ವಂಶಾವಳಿ, ಮೈಸೂರು, ೧೯೨೨.




.



No comments:

Post a Comment