ಕನ್ನಡದಲ್ಲಿ ರಾಷ್ಟ್ರಕವಿ ಎಂಬ
ಪ್ರಶಸ್ತಿಯನ್ನು ಸ್ವಾತಂತ್ರ್ಯ ಪೂರ್ವದಲ್ಲಿಯೇ ಬ್ರಿಟಿಷರಿಂದ ಪಡೆದ ಮೊದಲ ಕವಿ ಮಂಜೇಶ್ವರ ಗೋವಿಂದ ಪೈ . ಅವರು
ಮೂಲತಃ ಮಂಗಳೂರಿನವರು. ತಂದೆ ಮಂಗಳೂರು ತಿಮ್ಮಪೈಗಳು ಮತ್ತು
ತಾಯಿ ದೇವಕಿಯಮ್ಮ. ತಾಯಿಯ ತೌರುಮನೆ ಮಂಜೇಶ್ವರ.
ಹಾಗಾಗಿ ಅವರು ಕಾಸರಗೋಡು ತಾಲೂಕಿನ ಮಂಜೇಶ್ವರದ ಅಜ್ಜನ ಮನೆಯಲ್ಲಿ ಮಾರ್ಚ್ ೨೩, ೧೮೮೩ ರಂದು ಜನಿಸಿದರು. ೧೯೫೬ರಲ್ಲಿ ರಾಜ್ಯ
ಪುನರ್‌ವಿಂಗಡಣೆಯಾದಾಗ ಕಾಸರಗೊಡು ಕೇರಳದ ಪಾಲಾಯಿತು. ಆಗ ಅವರು
ಬಹಳ ಹಳಹಳಿಸಿದರು. ಕೊನೆಯ ತನಕ ತಮ್ಮ ಹೆಸರಿನೊಂದಿಗೆ ಮಂಜೇಶ್ವರವನ್ನು
ಜೊತೆಗೂಡಿಸಿಕೊಂಡಿದ್ದರು.. ಅವರ ಪಾಲಿಗೆ ಕಾಸರಗೋಡು ಕರ್ನಾಟಕದ
ಅವಿಭಾಜ್ಯ ಅಂಗ.
ಅವರ ತಂದೆ ತುಂಬ ಸ್ಥಿತಿವಂತರು. ಆಗಿನ ಕಾಲಕ್ಕೆ ಸಾವಿರಾರು ರೂಪಾಯಿ ವಾರ್ಷಿಕ ಕಂದಾಯ
ಕಟ್ಟುತಿದ್ದವರು. ಗೋವಿಂದ ಪೈಗಳ ಪ್ರಾಥಮಿಕ ಶಿಕ್ಷಣ ಮಂಗಳೂರಿನಲ್ಲಿಯೇ ಆಯಿತು. ಅವರು ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ
ಇಂಟರ ಮೀಡಿಯೇಟ ವರೆಗೆ ಶಿಕ್ಷಣ ಪಡೆದರು,
ಖ್ಯಾತ ನವೋದಯ ಸಾಹಿತ್ಯದ ಆಚಾರ್ಯ ಪುರುಷರಾಗಿದ್ದ ಪಂಜೆ ಮಂಗೇಶರಾಯರು
ಇವರಿಗೆ ಕನ್ನಡದ ಅಧ್ಯಾಪಕರಾಗಿದ್ದರು. ನಂತರ ಪೈಯವರು ಮದ್ರಾಸಿನ ಕ್ರಿಶ್ಚಿಯನ್ ಕಾಲೇಜು ಸೇರಿದರು ಅಲ್ಲಿ ಡಾ. ಎಸ್. ರಾಧಾಕೃಷ್ಣನ್ ಅವರು ಇವರ
ಸಹಪಾಠಿಯಾಗಿದ್ದರು. ಬಿ.ಎ. ತರಗತಿ ಕೊನೇ ವರ್ಷದ ಪರೀಕ್ಷೆ
ನಡೆದಾಗಲೆ ತಂದೆಯ ಅನಾರೋಗ್ಯದ ಸುದ್ದಿ ತಿಳಿದು, ಬಿಟ್ಟು ಬಂದರು. ಮುಂದೆ ಡಿಗ್ರಿ ಪಡೆಯುವ ಗೋಜಿಗೆ ಹೋಗಲೇ ಇಲ್ಲ. ಬರೆದಿದ್ದ ಒಂದೇ ಪ್ರಶ್ನೆಪತ್ರಿಕೆ ಇಂಗ್ಲೀಷಿನಲ್ಲಿ
ಪ್ರಥಮಸ್ಥಾನ ಪಡೆದು ಬಂಗಾರದ
ಪದಕ ಪಡೆದರು.
ತಂದೆಯವರ ಮರಣದ ನಂತರ ಹಿರಿಯ ಮಗನಾದ ಇವರ ಮೇಲೆ ಮನೆತನದ ಎಲ್ಲ
ಜವಾಬ್ದಾರಿ ಬಿತ್ತು. ಬಿ.ಎ. ಪದವಿ
ಪೂರ್ಣಗೊಳಿಸಲಿಲ್ಲ. ಮನೆಯಲ್ಲಿಯೇ ಅಮೂಲ್ಯ ಗ್ರಂಥ ಗಳನ್ನು
ತರಿಸಿ ಓದಿದರು. ಕಾಲೇಜಿನಲ್ಲಿದ್ದಾಗ ಲ್ಯಾಟಿನ್ , ಫ್ರೆಂಚ್,
ಸಂಸ್ಕ್ಕತ, ಪಾಲಿ, ಬಂಗಾಲಿ, ಭಾಷೆಗಳನ್ನು ಅಭ್ಯಸಿಸಿದ್ದರು.
ಮನೆಯಲ್ಲಿ ಇನ್ನೂ ಹಲವು
ಭಾಷೆಗಳನ್ನು ಅಭ್ಯಸಿಸಿ ಬಹುಭಾಷಾ ಪ್ರವೀಣರಾಗಿದ್ದರು.
ಇವರ ಗ್ರಂಥಾಲಯದಲ್ಲಿ ೪೩ ಭಾಷೆಗಳ ಸಾವಿರಾರು ಗ್ರಂಥ ಸಂಗ್ರಹವಿತ್ತು. ಇವರ ಮಾತೃಭಾಷೆ
ಕೊಂಕಣಿ, ಪರಿಸರದ ಭಾಷೆ ತುಳು, ರಕ್ತಗತವಾದ ಭಾಷೆ ಕನ್ನಡ, ಕಲಿತದ್ದು ಇಂಗ್ಲೀಷಿನಲ್ಲಿ. ಮಲೆಯಾಳಿ ಮತ್ತು
ತಮಿಳು ಆಜು ಬಾಜು ಭಾಷೆಗಳಾಗಿದ್ದವು. ಮರಾಠಿ ಗುಜರಾತಿ ಜರ್ಮನ್
ಗ್ರೀಕ್ ಮೊದಲಾದವು ಆಸಕ್ತ ಭಾಷೆಗಳಾಗಿದ್ದವು.
ಮರಾಠಿ, ಜರ್ಮನ್ ಗ್ರೀಕ್ ಮೊದಲಾದ ಭಾಷೆಗಳನ್ನು ಕಲಿತು
ಒಟ್ಟು ೨೨ಭಾಷೆಗಳಲ್ಲಿ ಪ್ರಾವಿಣ್ಯತೆ ಪಡೆದುಕೊಂಡಿದ್ದರು.
ಅವರು ಮೂಲತಃ ಕವಿ . ಇನ್ನೂ ಎಂಟನೆಯ ತರಗತಿಯಲ್ಲಿರುವಾಗಲೇ
ಬರೆದ ಮೂರು ಕವನಗಳು ಬಹುಮಾನ ಗಳಿಸಿದ್ದವು, ಮತ್ತು “ಸುವಾಸಿನಿ” ಪತ್ರಿಕೆಯಲ್ಲಿ
ಪ್ರಕಟವಾಗಿದ್ದವು. ಅವರ ಸಾಹಿತ್ಯ ಯಾತ್ರೆಯ ಪೂರ್ವಾರ್ಧವು ಬಹಳ ಸಮೃದ್ಧ ಮತ್ತು ಬಹುಮುಖಿ.
ಕಾವ್ಯ, ನಾಟಕ, ಅನುವಾದ ವಿಮರ್ಶೆಗಳ ಬೆಳಸು
ಬಹು ಹುಲುಸಾಗಿದ್ದವು.ಇನ್ನು ಛಂದಸ್ಸಿನ ವಿಷಯದಲ್ಲೂ ಅವರು ಪ್ರಗತಿಪರರು .ಶತಮಾನದ ಹಿಂದೆಯೇ
ಕವನದಲ್ಲಿ ಪ್ರಾಸವನ್ನು ಕೈ ಬಿಟ್ಟಿದ್ದರು .ಅನುಕೂಲೆಯಾದ ಮಡದಿ ನೆಮ್ಮದಿಯ ಸಂಸಾರ ಮತ್ತು ನಿರಂತರ ಆದಾಯದಿಂದ ಗೃಹಸೌಖ್ಯವಿದ್ದ ಆ ಕಾಲದಲ್ಲಿ
ಗಿಳಿವಿಂಡು,ನಂದಾದೀಪ,ಹೃದಯರಂಗ ಕವನ
ಸಂಕಲನಗಳು, ಹೊರಬಂದವು. ಏಸುವಿನ ಕೊನೆಯ ದಿನಗಳ ಬಗ್ಗೆ ಗೊಲ್ಗೋಥಾ
ಬುದ್ಧನ, ಕೃಷ್ಣನ ಹಾಗೂ ಗಾಂಧೀಜಿಯವರ ಕೊನೆಯ ದಿನಗಳ
ಕುರಿತು ಬರೆದ ವೈಶಾಖಿ, ಪ್ರಭಾಸ
ಹಾಗೂ ದೆಹಲಿ ಖಂಡ ಕಾವ್ಯಗಳು ನಂತರ ಪ್ರಕಟವಾಗಿವೆ.
ವೈಶಾಖಿ, ಪ್ರಾಕೃತದ ಆಳವಾದ ಅಧ್ಯಯನದ ಫಲ
ಗೋಲ್ಗೋಥಾ ಖಂಡ ಕಾವ್ಯಕ್ಕೆ ಗ್ರೀಕ್ ಮೂಲ ಸಾಮಗ್ರಿಯ ಅವಲೋಕನ ಕಾರಣ,
ಹೆಬ್ಬೆರಳು ಚಿತ್ರಭಾನು ನಾಟಕಗಳು , ಅಲ್ಲದೆ ‘
ನೋ’ ಎಂಬ ಜಪಾನಿ ನಾಟಕಕಾರನ ಎಂಟು ಕೃತಿಗಳ
ಅನುವಾದ ಜೊತೆಗೆ ಸಂಶೋಧನೆ ಮತ್ತು ವಿಮರ್ಶೆ
ಮೊದಲಾದವು ಬೆಳಕು ಕಂಡವು.ಅವುಗಳಲ್ಲಿ ಸೃಜನಶೀಲ
ಕೃತಿಗಳ ಸಂಖ್ಯೆಯೇ ಅಧಿಕ.ಇವರ ಸಾಂಸಾರಿಕ ಜೀವನ ಸುಖದ
ಅವಧಿ ಬಹು ಕಡಿಮೆ.ಹುಟ್ಟಿದ ಒಂದು ಹೆಣ್ಣು ಮಗು ಬೇಗನೆ ತೀರಿ ಹೋಯಿತು. 1927 ರಲ್ಲಿ ಇವರ ಹೆಂಡತಿ ಕೃಷ್ಣಾಬಾಯಿ ಮರಣ ಹೊಂದಿದರು. ಆಗ ಪೈಯವರಿಗೆ 44 ವಯಸ್ಸು. ಅವರು
ಮರು ಮದುವೆಯಾಗದೆ ವಾನಪ್ರಸ್ಥಾಶ್ರಮ ಸ್ವೀಕರಿಸಿದರು. ಅವರ ಜೀವನದಲ್ಲಿ ಅದು ಹೊಸ ತಿರುವು ನೀಡಿತು. ತಮಗಾದ ಅನಾನುಕೂಲವನ್ನು ಅವರು ತಮ್ಮ ಸಾಹಿತ್ಯ ಸೇವೆಗೆ
ಪೂರಕವಾಗಿಸಿ ಕೊಂಡರು. ಅವರ ಬಹುತೇಕ ಸಂಶೋಧನ ಕೃತಿಗಳು ಈ ಅವಧಿಯಲ್ಲಿಯೇ ಹೊರ ಬಂದವು. ಕಾಲಮಾನದ
ದೃಷ್ಟಿಯಿಂದ ಸೃಜನ, ಅವರ ಪೂರ್ವಾರ್ಧ ಜೀವನದ ಕೃಷಿ, ಸಂಶೋಧನ ಉತ್ತರಾರ್ಧ ಜೀವನದ ಕೃಷಿ.
ಉದ್ರಿಕ್ತ ಭಾವನೆಗಳ ನೆಲೆಯಲ್ಲಿ ನಡೆಯುವ ಕಾವ್ಯ
ಕ್ರಿಯೆಗಿಂತ ಅನ್ವೇಷಣ ಪ್ರಜ್ಞೆಯ ನೆಲೆಯಲ್ಲಿ
ನಡೆಯುವ ಸಂಶೋಧನೆಯು ಆಗ ಅವರಿಗೆ ಅವಶ್ಯವೆನಿಸಿತು, ಮತ್ತು
ಅನಿವಾರ್ಯವೂ ಆಯಿತು. ಅದರ ಪರಿಣಾಮ, ಪೈ ಎಂದರೆ ಸಂಶೋಧನೆ , ಸಂಶೋಧನೆ ಎಂದರೆ ಪೈ ಎನ್ನುವಷ್ಟು .
ಸಂಶೋಧನೆಯು ಅವರ ಪ್ರಧಾನ ಸಾಹಿತ್ಯ ಕೃಷಿ ಆಯಿತು.ಬಹು
ಭಾಷಾಪಾಂಡಿತ್ಯ ಮತ್ತು ಸಾಹಿತ್ಯ ಅಧ್ಯಯನವು ಅವರ ಜ್ಞಾನದ ಆಳ ಅಗಲಗಳನ್ನು ಹೆಚ್ಚಿಸಿದವು.
ಯಾವುದೇ ವಿಷಯವಾದರೂ ಅನುವಾದವನ್ನು ಆಶ್ರಯಿಸದೇ ಮೂಲ ಕೃತಿಯನ್ನೆ ಓದಿ ಅರ್ಥೈಸುವ ಸಾಮರ್ಥ್ಯ
ಗಳಿಸಿದ್ದರು. ಇದರಿಂದ ಅವರ ಸಂಶೋಧನೆ ತಳ ಸ್ಪರ್ಶಿ ಯಾಗಿರುತಿತ್ತು..
ಸಂಶೋಧಕ ಪೈ ಅವರ ಹಿರಿಯ ಗುಣ ಸತ್ಯ ಪ್ರಿಯತೆ , ಬೌದ್ಧಿಕ ಪ್ರಮಾಣಿಕತೆ ಮತ್ತು ವಸ್ತು ನಿಷ್ಠತೆ. ಸತ್ಯದ ಎಳೆಹಿಡಿದು
ಎಷ್ಟೇ ವಾದ ಮಾಡಿದರೂ, ತಮ್ಮನಿರ್ಧಾರ ಸರಿ ಅಲ್ಲ ಎಂದು
ಮನವರಿಕೆಯಾದಾಗ ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುವ ಗುಣ ಅವರದಾಗಿತ್ತು. ಸಂಶೋಧನಾ ಫಲಿತವು
ಎಂದೂ ನಿತ್ಯ ಸತ್ಯವಲ್ಲ, ಹೊಸ ಪ್ರಮಾಣಗಳು ದೊರೆತಾಗ ಹಳೆಯ
ಅಭಿಪ್ರಾಯವನ್ನು ಬದಲಿಸಿಕೊಳ್ಳುವ ಅಗತ್ಯದ ಆಶಯ ಅವರದಾಗಿತ್ತು .ಅವರ ಅನೇಕ ನಿರ್ಧಾರಗಳು
ಕಾಲುನುಕ್ರಮದಲ್ಲಿ ನಿಲ್ಲದೆ ಇರಬಹುದು ಆದರೆ ಸಂಶೋಧನಾ ವಿಧಾನದ ,ನಿಖರತೆ
ಮತ್ತು ನಿರ್ಧಾರಗಳ ಅಧಿಕೃತತೆಯು ಮಾತ್ರ ಸುಸ್ಥಿರ ಕವಿ
ಕಾವ್ಯಗಳ ಕಾಲ ನಿರ್ಣಯದಲ್ಲಿ ಅವರು ವಿದೇಶಿ ವಿದ್ವಾಂಸರು ಅನುಸರಿಸುತಿದ್ದ ಪದ್ದತಿ
ವಿರೋಧಿಸಿದರು. ಕ್ರೈಸ್ತರ ಪಂಚಾಂಗವನ್ನು ಅನುಕರಿಸಿ ಶಾಸನಗಳ ಕಾಲ ನಿರ್ಣಯ ಮಾಡಲು ನಿರಾಕರಿಸಿದರು. ಅದರ ಬದಲಾಗಿ
ಭಾರತೀಯ ಪಂಚಾಂಗಗಳ ಆಧಾರದ ಮೇಲೆ ತಮ್ಮ ಗಮನ ಕೇಂದ್ರೀಕರಿಸಿದರು . ಅದೇ ವಿಧಾನದಿಂದ ಗೌತಮ
ಬುದ್ದ, ಮಹಾವೀರ , ಬ್ರಹ್ಮ ಶಿವ,ಕುಮಾರವ್ಯಾಸ ಮೊದಲಾದರ ಕಾಲನಿರ್ಣಯ ಮಾಡಿದರು. ಪ್ರಸಿದ್ಧ ಕವಿಗಳಾದ ಪಂಪ, ರನ್ನ, ನಾಗಚಂದ್ರ, ಲಕ್ಷ್ಮೀಶ,ರತ್ನಾಕರವರ್ಣಿ ಮತ್ತು ಪಾರ್ತಿಸುಬ್ಬ ಇವರ ಕಾಲದೇಶಗಳ ನಿರ್ಣಯಕ್ಕೆ ವ್ಯಾಪಕ ಸಂಶೋಧನೆ
ಮಾಡಿರುವರು. ಅದರಿಂದ ಅವರ ಕಾಲ ಒಪ್ಪಿತವಾದ ಕಾಲಕ್ಕಿಂತ ಬಹು ಹಿಂದೆ ಹೋಗಿರುವುದು ಗಣನೀಯ.
ಅವರು ಸಂಶೋಧನೆಗೆ ಆರಿಸಿದ ವಿಷಯಗಳು ಅನೇಕ. ಧರ್ಮಗಳು, ದೇವಾಲಯಗಳು , ರಾಜವಂಶಗಳು, ಶಾಸನಗಳು
ಪುರಾತನ ಕವಿಗಳು ಹೀಗೆ ಎಲ್ಲದರಲ್ಲೂ ಅವರ ಸಂಶೋಧನಾತ್ಮಕ ಕೊಡುಗೆ ಇದೆ. ಸಾಹಿತ್ಯ ಸಂಶೋಧನೆಯ
ಜೊತೆ ಜೊತೆಗೆ ಹೊಸ ಪದಗಳ ಸೃಷ್ಠಿಗೂ ಅವರು ಪ್ರಾಮುಖ್ಯತೆ ಕೊಟ್ಟಿದ್ದರು ಭಾಷೆ ಬೆಳೆಯಬೇಕಾದರೆ
ಶಬ್ದ ಸಂಗ್ರಹವನ್ನು ಹೆಚ್ಚಿಸುವುದು ಅನಿವಾರ್ಯ ಎನ್ನುವುದು ಅವರ ಅಚಲ ನಂಬಿಕೆ “ ಹೊಸ ಭಾವನೆಗಳು ಹುಟ್ಟುತಿದ್ದಂತೆ ಅವುಗಳನ್ನು ಯಥಾವತ್ತಾಗಿ ಮೂಡಿಸಲು ಹಳೆಯ ಶಬ್ದ
ಸಂಗ್ರಹ ಸಾಲದು" ಎಂಬ ಅವರ ಮಾತು ಆಧುನಿಕ ಮನೋಭಾವದ
ಸಂಕೇತ. ತಮ್ಮ ಅನಿಸಿಕೆಯನ್ನು ಬರಿ ಮಾತಿನಲ್ಲಿ ಮಾತ್ರವಲ್ಲ
ಕೃತಿಯಲ್ಲೂ ಮಾಡಿ ತೋರಿಸಿದರು.” ಇಸು”
ಪ್ರತ್ಯಯ ಬಳಸಿ ಪಾನಿಸು, ಕೋಲಾಹಲಿಸು’ ಪದಗಳನ್ನು ಸೃಷ್ಠಿಸಿದರು. ಕನ್ನಡದಲ್ಲಿ ಪಾರಿಭಾಷಿಕ ಪದಗಳ ಕೊರತೆಯನ್ನು ನೀಗಿಸಲು
ಅವರ ಮಾತನ್ನು ಪರಿಶೀಲಿಸಬೇಕಾಗಿದೆ. ಈ ದಿಶೆಯಲ್ಲಿ ಅವರನ್ನು
ಬಹಳಮಟ್ಟಿಗೆ ಅನುಸರಿಸಲಾಗಿದೆ. ಪ್ರಾಚೀನ ಗ್ರೀಕ್ ನಾಟಕದಲ್ಲಿ
ಕೆಲವು ಕನ್ನಡ ಪದಗಳು ಇರುವುದನ್ನು ಮೊಟ್ಟ ಮೊದಲು ಗುರುತಿಸಿದ ವಿದ್ವಾಂಸರು ಅವರು.
ಪ್ರಾಚೀನ ಗ್ರೀಕ್ ನಾಟಕ ಒಂದರಲ್ಲಿ ಕೆಲವು ಕನ್ನಡ ಪದಗಳು ಇರುವುದನ್ನು
ಗುರುತಿಸಿದರು. ಅದರಲ್ಲಿ ಬರುವ ಹಬ್ಬ ತೆರಿಗೆ , ಸಂರಕ್ಷಿಸು,
ಎತ್ತು ಒಸೆ ಮೊದಲಾದ ಪದಗಳು ಕನ್ನಡ ಮೂಲದ
ಪದಗಳೆಂಬುದು ಅವರ ಊಹೆ. ಈ ಗ್ರೀಕ್‌ಪ್ರಹಸನವು ಕ್ರಿ. ಪೂರ್ವ
ಆವಧಿಯದು . ಆದ್ದರಿಂದ ಕನ್ನಡ ಕ್ರಿ. ಪೂರ್ವ ಒಂದನೆಯ ಶತಮಾದಲ್ಲಿಯೇ ಇದ್ದಿತು ಎಂಬುದ ಅವರ
ವಾದ. ಅವರ ಈ ವಾದವನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿದೆ ಎನಿಸುವುದು. ಕನ್ನಡದ
ಪ್ರಾಚೀನತೆಯನ್ನು ನಿರ್ಧರಿಸುವಲ್ಲಿ, ಅದರಲ್ಲೂ ಕನ್ನಡಕ್ಕೆ
ಕ್ಲಾಸಿಕಲ್‌ಪಟ್ಟ ದೊರಕುವಲ್ಲಿ ಇದು ಬಹುಮುಖ್ಯ ಆಧಾರ ಎನ್ನಬಹುದು
ಸಂಶೋಧನೆಯ ಮೂಲ ಪರಿಕರಗಳೆಂದರೆ ಶಾಸ್ತ್ರೀಯ ಅಡಿಪಾಯ ಮತ್ತು
ಕಲಾತ್ಮಕ ದೃಷ್ಟಿಕೋನ. ಯಾವುದೇ ಶಾಸ್ತ್ರಕ್ಕಿರುವಂತೆ ನಿಗದಿತ ಚೌಕಟ್ಟು ಆಂತರಿಕ ಮತ್ತು ಬಾಹ್ಯ
ಸಾಕ್ಷ್ಯಾಧಾರಗಳ ಸಂಗ್ರಹಣೆ,ಪರಿಗಣನೆ ತುಲನೆಮತ್ತು ವಿಶ್ಲೇಷಣೆ ಅಂತಿಮ
ನಿರ್ಣಯದಲ್ಲಿ ಕಲಾತ್ಮಕ ಅನ್ವಯತೆಯಿಂದ ಪ್ರಾಯೋಗಿಕ ಮೌಲ್ಯವು ಸಿದ್ಧವಾದಾಗ ಮಾತ್ರ ಸಂಶೋಧನೆ
ಸಂಫಲವಾಗುತ್ತದೆ.
ಎರಡನೆ ಶತಮಾನದಿಂದ ಹದಿನೈದನೆಯ
ಶತಮಾನದವರೆಗೆ ತುಳುನಾಡನ್ನು ನಿರಂತರವಾಗಿ ಆಳಿದ “ಆಳುಪ
ರಾಜವಂಶ” ವನ್ನು ಕೇಂದ್ರವಾಗಿಟ್ಟು ಕೊಂಡು ಪೈ ಅವರು ತುಳುನಾಡಿನ
ಇತಿಹಾಸ ನಿರೂಪಿಸಿದ್ದಾರೆ, ಗಂಗರು, ಪುನ್ನಾಟರು,
ಶಾತವಾಹನರು, ಕದಂಬರು ಮೊದಲಾದ ಪ್ರಸಿದ್ಧ
ರಾಜವಂಶಗಳನ್ನು ಕುರಿತು ವ್ಯಾಪಕವಾಗಿ ಬರೆದಿರುವುರು. ಅವರ ಪ್ರಕಾರ ಭದ್ರಭಾಹು ಭಟ್ಟಾರಕರ ಜೊತೆ
ಶ್ರವಣ ಬೆಳಗೊಳಕ್ಕೆ ಬಂದವನು ಚಕ್ರವರ್ತಿ ಚಂದ್ರ ಗುಪ್ತ ಮೌರ್ಯನಲ್ಲ. ಬದಲಾಗಿ ಕ್ರಿ. ಪೂ.
೫೨೦ರಲ್ಲಿದ್ದ ಉಜ್ಜಯನಿಯ ಅರಸ ಸಂಪ್ರತಿ ಚಂದ್ರಗುಪ್ತ. ಹನ್ನೆರಡನೆಯ ಶತಮಾನದ ಶಿವಶರಣರಾದ
ಬಸವೇಶ್ವರ, ಮರುಳ ಸಿದ್ಧ,ಮತ್ತು
ದೇವರ ದಾಸಿಮಯ್ಯ ಅವರ ಐತಿಹಾಸಿಕತೆಯನ್ನು ಕುರಿತು ವ್ಯಾಪಕ
ಸಂಶೋಧನೆ ಮಾಡಿರುವರು. ಅನೇಕ ವಿದ್ವತ್‌ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಸಂಶೋಧನ ಲೇಖನಗಳು
೧೫೦೦ ಪುಟಗಳಿಗೂ ಹೆಚ್ಚು.
ಗೋವಿಂದ ಪೈ ಅವರು ೧೯೫೦ ರಲ್ಲಿ ಮುಂಬೈನಲ್ಲಿ ನಡೆದ
ಮೂವತ್ತನಾಲ್ಕನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು’ ಅವರಿಗೆ ಮದ್ರಾಸ್‌ಸರ್ಕಾರವು ‘ರಾಷ್ಟ್ರ ಕವಿ’
ಪ್ರಶಸ್ತಿಯನ್ನು ನೀಡಿತ್ತು. ಅವರ ಗೌರವಾರ್ಥ “ ದೀವಿಗೆ”
ಸಂಭಾವನಾ ಗ್ರಂಥವು ಅರ್ಪಿತವಾಗಿದೆ.
ಅವರ ಸಂಶೋಧನೆಗಳ ಫಲವಾದ ಸಂಪ್ರಬಂಧಗಳು: ಹಳಗನ್ನಡ-೫೫ , ನಡುಗನ್ನಡ-೧೫, ತುಳುನಾಡಿನ ಇತಿಹಾಸ -೨೧ ,
ಕರ್ನಾಟಕದ ಇತಿಹಾಸ-೨೨, ಭಾರತದ ಇತಿಹಾಸ-೨೨’,
ವಾಗರ್ಥ-೬ ಲೇಖನ, ಧರ್ಮ
ಮತ್ತು ತತ್ವಜ್ಞಾನ ್-೮ ,ಇಂಗ್ಲಿಷ್‌ನಲ್ಲಿ-೨೯, ಅಲ್ಲದೆ ಕೊಂಕಣಿಯಲ್ಲಿಯೂ ಅನೇಕ ಸಂಪ್ರಬಂಧಗಳನ್ನೂ ಬರೆದಿರುವರು. ತುಳುನಾಡಿನ
ಪೂರ್ವಸ್ಮತಿ ಕರ್ನಾಟಕದ ಪ್ರಾಚೀನತೆ ಕನ್ನಡ ಕವಿ ಕಾಲದೇಶ ಭಾರತದ
ಪ್ರಾಚೀನತೆ ಧರ್ಮಗಳ ಕುರಿತು
ಮೊದಲಾದ ಸುಮಾರು ೨೦೦ ಪ್ರಬಂಧಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
ಪತ್ರ ಲೇಖನವೂ ಇವರ ಒಂದು ಹವ್ಯಾಸವಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಜಾನಪದ ಕಲಾವೈಭವ” ಕರಾವಳಿಯ ಜನಪದ ಲೋಕದಲ್ಲಿನ ಮೊಟ್ಟಮೊದಲ ಅಧ್ಯಯನವಾಗಿದೆ.
ಅವರ ಸಂಶೋಧನಾ ವಿಷಯಗಳ ವ್ಯಾಪ್ತಿಗೆ ಮಿತಿ ಇಲ್ಲ. ಅವರು
ಸಂಶೋಧನೆಗೆ ಅಗತ್ಯವಾದ ತಾತ್ವಿಕ ಪರಿಜ್ಞಾನ, ಪಾರಿಭಾಷಿಕಗಳ
ಪರಿಚಯ, ಮಾಹಿತಿ ಸಂಗ್ರಹಗಳನ್ನು ತಪಸ್ಸಿನಂತೆ ಮಾಡಿದರು.
ಸಂಶೋಧನೆಗೆ ಅವರು ವಿಷಯ ಸಂಗ್ರಹಿಸುತಿದ್ದ ವಿಧಾನ,ಅವುಗಳ ವರ್ಗೀಕರಣ, ವಿಶ್ಲೇಷಣೆ ಕುರಿತಾದ
ಕಳಕಳಿ, ವಿಷಯ ಸಂಯೋಜನೆ ಕುರಿತಾದ ಜಾಗೃತಿ, ಸಾಕ್ಷ್ಯಾಧಾರಗಳನ್ನು ತುಲನೆ ಮಾಡುವಾಗಿನ ಸಂಯಮ, ಇಂದಿನ
ಮತ್ತು ಮುಂದಿನ ವಿದ್ವಾಂಸರಿಗೆ ಸಂಶೋಧನ ಶಾಸ್ತ್ರದಲ್ಲಿ ಅನುಸರಿಸಬೇಕಾದ ಮಾರ್ಗದರ್ಶಿ
ಸೂತ್ರಗಳಾಗಿವೆ.
ಸ್ವಾತಂತ್ರ್ಯ ಚಳುವಳಿಯೂ ಅವರ ಮನ ಸೆಳೆದಿತ್ತು.
ಗಾಂಧೀಜಿಯವರಿಂದ ಪ್ರಭಾವಿತರಾಗಿದ್ದ
ಪೈಯವರು ಖಾದಿ ವೃತ ಧರಿಸಿ ಕೊನೆಯವರೆಗೆ
ಪಾಲಿಸಿಕೊಂಡು ಬಂದರು.. ತಾಯ್ನಾಡಿನ ಬಂಧ
ವಿಮೋಚನೆ, ಅಸ್ಪೃಶ್ಯತೆ ಜಾತೀಯತೆ ನಿವಾರಣೆಗಾಗಿ ಯಾತ್ರೆ ಕೈಕೊಂಡರು ಅಗ್ರಗಣ್ಯ ದೇಶಭಕ್ತರ ಪರಿಚಯ ಇವರಿಗಿತ್ತು. ಹಲವಾರು ದೇಶಭಕ್ತಿ ಗೀತೆಗಳನ್ನು ರಚಿಸಿದರು. ಅವರು ತಮ್ಮ ಅಂತಿಮ ದಿನಗಳನ್ನು ಹೃದಯಕ್ಕೆ ಹತ್ತಿರವಾದ
ಮಂಜೇಶ್ವರದಲ್ಲಿಯೇ ಕಳೆದರು.
ಅವರ ಅಪೂರ್ವ ಗ್ರಂಥ ಸಂಗ್ರಹವೇ ಅವರ ಬಹು ಭಾಷಾ
ಪಾಂಡಿತ್ಯಕ್ಕೆ ಸಾಕ್ಷಿ. ಅವರು ಸಂಗ್ರಹಿಸಿದ್ದ ಸುಮಾರು ೫೦೦೦ಕ್ಕೂ ಹೆಚ್ಚಿನ ಪುಸ್ತಕಗಳು ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲ
ಪ್ರೇರಣೆಯಾದವು.. ಅವರ ವ್ಯಕ್ತಿತ್ವವನ್ನುಇನ್ನೊಬ್ಬ ರಾಷ್ಟ್ರ
ಕವಿ ಕುವೆಂಪು ಹೃದಯಪೂರ್ವಕವಾಗಿ ಹೇಳಿಕೆಯಂತೆ “ಅವರೆ
ತಾವೊಂದು ಗೊಮ್ಮಟ ಸಮ ಮಹಾಕಾವ್ಯ” ಮಾತು ಎಲ್ಲರ ಭಾವನೆಯ
ಪ್ರತಿಬಿಂಬವಾಗಿದೆ. ಎಂಟು ದಶಕಗಳ ಸಾರ್ಥಕ ಬದುಕಿನ ನಂತರ ಕಾಲದಲ್ಲಿ ಲೀನವಾದರು, ಕಳೆದ ಮಾರ್ಚ ತಿಂಗಳಲ್ಲಿ ಅವರ ೧೩೦ನೆಯ ಜನ್ಮ
ದಿನ.ಅವರು ಹಚ್ಚಿದ ಜ್ಞಾನ ದೀವಿಗೆಯು ಸದಾ
ಬೆಳಕು ಬೀರುವಂತೆ ಗೋವಿಂದ ಪೈ ಪ್ರತಿಷ್ಠಾನ ಈಗಲೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.
|
No comments:
Post a Comment