ಇಂದಿರಾ ಹೆಗಡೆ |
ಕುಲಶೇಖರ ಆಳುಪೇಂದ್ರನ ಶಾಸನದಲ್ಲಿ ಅಳಿಯ ಸಂತಾನ ಕುಟುಂಬ ಪದ್ಧತಿ
ಕರ್ನಾಟಕದ ಕರಾವಳಿ ಭಾಗದ ತುಳುನಾಡು ಕರ್ನಾಟಕದ ಇತರ ಭಾಗಕ್ಕಿಂತ ಸಾಂಸ್ಕೃತಿಕ ಮತ್ತು ಸಾಮಾಜಿಕ ಪದ್ಧತಿಯಲ್ಲಿ ಭಾರತದ ಇತರ ಭಾಗಕ್ಕಿಂತ ಭಿನ್ನವಾಗಿ ವಿಶಿಷ್ಠತೆಯನ್ನು ಪಡೆದಿದೆ. ಅಂತರ ಒಂದು ವಿಶಿಷ್ಠ ಸಾಮಾಜಿಕ ಪದ್ಧತಿ ಅಳಿಯ ಸಂತಾನ ಕುಟುಂಬ ಪದ್ಧತಿ ಅಥವಾ ಮಾತೃವಂಶೀಯ ಕುಟುಂಬ ಪದ್ಧತಿ. ಮಾತೃವಂಶೀಯ ಪದ್ಧತಿಯಲ್ಲೂ ರಾಜ್ಯವನ್ನು ಆಳುವ ಅರಸ ಪುರುಷನೇ. ಹೀಗಾಗಿ ಒಬ್ಬ ಅರಸ ಸತ್ತ ಅನಂತರ ಅವನ ಸೋದರಳಿಯ ಆ ಸಿಂಹಾಸನಕ್ಕೆ ವಾರಸುದಾರನಾಗುತ್ತಾನೆ. ಆದ್ದರಿಂದ ಅಳಿಯ ಸಂತಾನ ಪದ್ಧತಿ ಎನ್ನುವ ರೂಢಿ ಬೆಳೆದಿದೆ. ಆದರೆ ವಂಶದ ವಿಷಯದಲ್ಲಿ ಆತನ ತಾಯಿಯ ಮೂಲವನ್ನು ನೋಡುವುದರಿಂದ ಮಾತೃವಂಶೀಯ ಕುಟುಂಬ ಪದ್ಧತಿ ಎನ್ನುತ್ತಾರೆ. ವಾಸ್ತವವಾಗಿ ಇವೆರಡೂ ಒಂದೇ.
ಅಳಿಯಸಂತಾನ ಪದ್ಧತಿಯ ಬಗ್ಗೆ ಶಾಸನಾಂಕಿತ ದಾಖಲೆ ಸಿಗುವುದು ತಡವಾಗಿ. ಕ್ರಿ.ಶ. ಹತ್ತನೆಯ ಶತಮಾನದ ತಳಂಗರೆಯ ಜಯಸಿಂಹನ ಶಾಸನದಲ್ಲಿ ಆ ಆಸ್ತಿಯ ಉತ್ತರಾಧಿಕಾರವು ಹೆಣ್ಣುಮಕ್ಕಳಿಗಲ್ಲದೆ ಗಂಡುಮಕ್ಕಳಿಗೆ ಹೋಗ ಸಲ್ಲದು ಎಂದು ಜೋಗವ್ವೆಯು ಶಾಸನೀಕರಿಸಿದ್ದಾಳೆ. ಈ ಆಸ್ತಿಯು ಆಕೆಯ ತಾಯಿಯ ಮೂಲದಿಂದ (ಮಾತೃ ಮೂಲ) ಬಂದ ಆಸ್ತಿಯಾಗಿರದೆ ಆಕೆಯ ಸ್ವಯಾರ್ಜಿತ (ಕನ್ಯಾದಾನವಾಗಿ) ಆಸ್ತಿಯಾಗಿದೆ. ಹೀಗಾಗಿ ಆಕೆಗೆ ಶಾಸನಾಂಕಿತಗೊಳಿಸುವ ಅಗತ್ಯ ಬಂದಿರಬೇಕು. ೧೦ನೆಯ ಶತಮಾನಕ್ಕಾಗಲೇ ತುಳುವ ರೂಢಿ ಪದ್ಧತಿಯಂತೆ ಹೆಣ್ಣುಮಕ್ಕಳಿಗೆ ತಾಯಿಯ/ಮಾತೃಮೂಲದ ಆಸ್ತಿ ಸಲ್ಲುತ್ತಿದ್ದು ಇತರ ಮೂಲಗಳ ಆಸ್ತಿಯಲ್ಲಿ ಗಂಡುಮಕ್ಕಳೂ ಪಾಲು ಪಡೆಯುತ್ತಿದ್ದಿರಬೇಕು. ಹೀಗಾಗಿ ಜೋಗವ್ವೆ ತನ್ನ ಆಸ್ತಿ ಹೆಣ್ಣು ಸಂತಾನಕ್ಕೆ ಮಾತ್ರ ಹೋಗಬೇಕೆಂದೂ ಹೆಣ್ಣು ಮಕ್ಕಳಿಲ್ಲವಾದರೆ ಗಂಡು ಮಕ್ಕಳಿಗೆ ಹೋಗಬಹುದೆಂದು ಶಾಸನ ಬರೆಸಿರಬೇಕು. ತಳಂಗೆರೆ ಆಳುಪರಸರ ಆಳ್ವಖೇಡಕ್ಕೆ ಸೇರಿದ ಭಾಗ.
ವರಾಂಗದ ಶಾಸನದ ಪ್ರಕಾರ ಕುಲಸೇಖರಾಳ್ಪೆಂದ್ರನಿಗೆ ಜಾಕಮಲಾದೇವಿ ಎಂಬ ರಾಣಿಯೂ ಇದ್ದಳು.
****************************************************************************************
ಕ್ರಿ.ಶ. ೧೨೦೪ರ ವೀರ ಕುಲಶೇಖರನ ಮಂಗಳೂರು ಶಾಸನವು ಮಂಗಲಾಪುರದ ಭುವನಾಶ್ರಯದ ಮೊಗಸಾಲೆಯಲ್ಲಿ ನಡೆದ ರಾಜ ಶಭೆಯಲ್ಲಿ ಅಳಿಯ ವೀರ ಬಂಕಿದೇವನಿಗೆ ಮುಗುರುನಾಡಿನ ರಾಜಭಾರವನ್ನು ಬಿಟ್ಟುಕೊಟ್ಟ ಬಗ್ಗೆ ಉಲ್ಲೇಖ ನೀಡುತ್ತದೆ. ಶಾಸನದ ಕೊನೆಗೆ “ ಯೀ ಧರ್ಮವನ್ನು ಶಿಲಾಶಾಸನಂಗೆಯಿದು ಕೊಟ್ಟ ಮಾವ ಕುಲಸೇಖರ ದೇವರ್ಗೆ ಅಳಿಯಂದಿರು ಬಂಕಿದೇವರು, ಬಂಮದೇವರು ಕುಲಸೇಖರ ದೇವರರ್ಗೇ ಮಂಗಳ ಮಹಾ .......” (ಕೆ.ವಿ ರಮೇಶ ಮತ್ತು ಎಂ.ಜೆ.ಶರ್ಮ ತುಳುನಾಡಿನ ಶಾಸನಗಳು ಸಂ. ೩೬) ಎಂದಿದೆ. ಕೂರ್ಸಿ ಶಾಸನ ಬರೆದ ೪೩ ವರ್ಷಗಳ ಬಳಿಕ ಮಂಗಳೂರು ಶಾಸನವನ್ನು ಬರೆಯಲಾಗಿದೆ. ೧೧೬೨ರಲ್ಲಿ ಕೂರ್ಸಿಯ ಭೂಮಿಯನ್ನು ದಾನ ನೀಡುವಾಗ ಕುಲಸೇಖರನ ಕುಟುಂಬದಲ್ಲಿ ಇದ್ದ ಇತರ ಆತನ ಸೋದರಳಿಯ ಪಾಂಡ್ಯ ಪಟ್ಟಿಗದೇವರುಂ, ಬಲ್ಲಹದೇವರುಂ, ಕುಲಶೇಖರ ದೇವರುಂ, ಕೀರ್ತಿದೇವರುಂ -ಇವರೆಲ್ಲರ ಪ್ರಸ್ತಾಪ ಮಂಗಳೂರಿನ ಮೇಲಿನ ಶಾಸನದಲ್ಲಿ ಇಲ್ಲ. ಬಂಕಿದೇವನ ಸೋದರ ಸಾಂತರ ದೇವನ ಪ್ರಸ್ತಾಪ ಕೂಡಾ ಇಲ್ಲಿ ಇಲ್ಲ. ‘ಅಳಿಯಂದಿರು ಬಂಕಿದೇವರು, ಬಂಮದೇವರು ಕುಲಸೇಖರ ದೇವರರ್ಗೇ’ ಎಂದಿದೆ. ಸಾಂತರ ದೇವ ಆ ಸಂಬದರ್ಭದಲ್ಲಿ ರಾಜ ಸಭೆಯಲ್ಲಿ ಇಲ್ಲದೆ ಹೋಗಿರಬಹುದು. ಆದರೆ ಕೊಲಶೇಖರನ ಉತ್ತರಾಧಿಕಾರಿಯಾಗಬೇಕಾಗಿದ್ದ ಪಾಂಡ್ಯ ಪಟ್ಟಿಗದೇವ ಏನಾದ? ಬಹುಷ ಮುಗುರುನಾಡನ್ನು ಬಂಕಿದೇವನಿಗೆ ಕೊಟ್ಟು ಹಿರಿಯ ಅಳಿಯ ಪಾಂಡ್ಯ ಪಟ್ಟಿಗದೇವನು ಆಳುಪ ಸಿಂಹಾಸನಕ್ಕೆ ಕೊಲಶೇಖರನ ಉತ್ತರಾಧಿಕಾರಿಯಾಗಿದ್ದಿರಬೇಕು. . ಈ ಮೂಲಕ ಆತ ತನ್ನ ಇಬ್ಬರು ಸೋದರಿಯರಲ್ಲಿ ರಾಜ್ಯವನ್ನು ಹಂಚಿರಬೇಕು. ತುಳುನಾಡಿನ ಅಳಿಯ ಸಂತಾನ ಪದ್ಧತಿಯಲ್ಲಿ ಎಲ್ಲಾ ಹೆಣ್ಣು ಮಕ್ಕಳಿಗೆ ಸಮಾನ ಭಾಗ ದೊರಕುತ್ತದೆ. ಮೂಲ ಭಾಗ ಹಿರಿಯವಳಿಗೆ ಸೇರುತ್ತದೆ.
ವರಾಂಗದ ೧೩ನೆಯ ಶತಮಾನದ ಶಾಸನದಲ್ಲಿ ಆಳುಪ ಅರಸರಾದ ಪಟ್ಟಿಯೊಡೆಯ , ಪಾಂಡ್ಯ ಪಟ್ಟಿಯೊಡೆಯ, ಕವಿಯಾಳುಪ, ಮತ್ತು ಪಟ್ಟಿಯೊಡೆಯ ಕುಲಶೇಖರ ಇವರುಗಳ ಹೆಸರು ಕ್ರಮವಾಗಿ ಬಂದಿದೆ. ಶಾಸನದ ಕೊನೆಯ ಭಾಗದಲ್ಲಿ “ತ್ರಿಭುವನ ಶಾನ್ತರನನ್ನು ಹೊಗುಳುತ್ತಾ ಇವನಿಗೆ ‘ಶಾಂತರನೆಂಬನ್ವರ್ತ್ಥ ಸಂಜ್ಞೆಯ(ಂ)’ ಎನ್ನುವುದಲ್ಲದೆ ಇವನನ್ನು ‘ವೀರ ಭೂಪಾಲ’ ಎನ್ನುತ್ತದೆ. “ರಿಪುರಾಯರ ತೂಳ್ದಿ ಧರ್ಮಮಂ ಪಾಳಿಸಿ ರಾಜ್ಯಲಕ್ಷ್ಮಿಯಂ ಮಿಳಿಸಿ ರಾಜ್ಯಂಗೈಯ್ಯುತ್ತಿರಲಾ ಮಹೀಭುಜ ನಿಜಾನುಜನ ಪಾರೋದರ ಶೌರ್ಯಚಾರ ವೀರಭೂಪಾಳನಿಂ ಕಿರಿಯನಪ್ಪ ಕುಂಡಣ ಕ್ಷೋಣೀಪಾಳನಖಿಲ ದಿಕ್ಪಾಳ ನಿಳಯಮಂ ನಿಜಕೀರ್ತಿಯಿಂ ಧವಳಿಸಿ ಜಗತ್ಪ್ರಸಿದ್ಧ ವಿದ್ಯಾ ವಿಳಾಸಿನೀ ಸ್ವರ್ಣ ಕರ್ಣ್ಣಕುಂಡಲಾಭರಣನಪ್ಪು(ದ)..........ಪಂಡಿತ ಪಾಂಡ್ಯನೆನೆನಿಸಿ ಪಾಂಡ್ಯ ದನಂಜಯ ನಪ್ಪು ........ .” (ಕೆ.ವಿ ರಮೇಶ ಮತ್ತು ಎಂ.ಜೆ.ಶರ್ಮ ತುಳುನಾಡಿನ ಶಾಸನಗಳು ಸಂ. ೩೯) ಹೀಗೆ ಶಾಸನ ಪಾಠ ಮುಂದುವರಿಯುತ್ತದೆ. ಈ ಶಾಸನದಲ್ಲಿ ಬರುವ ಕುಲಸೇಖರನೇ ಕೂರ್ಸಿ ಶಾಸನದ ಕುಲಶೇಖರ. ಇಲ್ಲಿ ಬುರವ ಬಂಕಿದೇವನಿಗೆ ಮೊಗರುನಾಡಿನ ರಾಜ್ಯವನ್ನು ಕುಲಶೇಖರ ಬಿಟ್ಟುಕೊಟ್ಟಿದ್ದ. (ಅದೇ. ಸಂ. ೩೬) ಆದರೆ ಮುಂದಿನ ಇತಿಹಾಸಗಳ ಪುಟದಲ್ಲಿ ಮುಗುರುನಾಡಿನ ಬಂಕಿದೇವನ ಪ್ರಸ್ತಾಪ ಕಾಣಬರುವುದಿಲ್ಲ.
ಕುಂಡಣನ ಶಾಸನದಲ್ಲಿ ಮೇಲಿನ ಅರಸರನ್ನು ‘ನಲ್ಲಿಂ’ ಬಳಿಯವರು ಎನ್ನಲಾಗಿದೆ.
ಮುಂದೆ ಆಳುಪ ಸಿಂಹಾಸನ ದತ್ತಾಳುಪ ಬಳಿಯರಿಗೆ ಸೇರುತ್ತದೆ. ವೀರ ಪಾಂಡ್ಯನ ಅಳಿಯ ಬಂಕಿದೇವ ದತ್ತಾಳುಪ ಬಳಿಯವನೆಂದು ಹೇಳಲಾಗಿದೆ. ( SII.,ಗಿoಟ. ೨೭,ಓo, ೨೧೬, ೧೨೮೧ ಂ.ಆ) ಹೀಗಾಗಿ ಬಂಕಿದೇವನ ಸೋದರಮಾವನಾದ ವೀರ ಪಾಂಡ್ಯನೂ ದತ್ತಾಳುಪ ಬಳಿಯವನು ಆಗುತ್ತಾನೆ. ವೀರಪಾಂಡ್ಯದೇವಾಳುಪೇಂದ್ರನ ಕಾಲ ಕ್ರಿ.ಶ ೧೨೫೦-೧೨೭೫.
ಕ್ರಿ.ಶ. ೧೨೦೪ರಲ್ಲಿ ನಲ್ಲಿ ಬಳಿಯ ಕುಲಸೇಖರ ಮಂಗಳಾಪುರದಿಂದ ಆಳುತ್ತಿದ್ದ. ಮುಂದೆ ಆಳುಪ ಸಿಂಹಾಸನದಲ್ಲಿ ತ್ರಿಭುವನ ಸಾಂತರ ಮತ್ತು ಕುಂಡಣರು ಕಾಣಬರುತ್ತಾರಾದರೂ ಇವರ ಕಾಲ ೧೩ನೆಯ ಶತಮಾನ ಎಂದಿದೆ. ದತ್ತಾಳುಪೇಂದ್ರ ಶ್ರೀ ಮಾರ ಒಡ್ಡಮದೇವ ಕೆಲವು ಕಾಲ ಆಳಿರಬಹುದು. ಕ್ರಿ.ಶ. ೧೨೫೦ರಲ್ಲಿ ದತ್ತಾಳುಪ ಬಳಿಯ ವೀರ ಪಾಂಡ್ಯದೇವ ಮಂಗಳೂರಿನಿಂದ ಆಳುತ್ತಾನೆ. ಇಲ್ಲಿಯ ಸುಮಾರು ೮೫ವರುಷಗಳ ಅವಧಿಯ ರಾಜಕೀಯ ಇತಿಹಾಸ ಕತ್ತಲೆಯಲ್ಲಿ ಉಳಿದಿದೆ.
ವೀರ ಪಾಂಡ್ಯಾಳುಪೇಂದ್ರನ ಶಾಸನದಲ್ಲೂ ಆತನ ತಾಯಿಯನ್ನು ಸ್ಮರಿಸಲಾಗಿದೆ. ತಂದೆಯನ್ನಲ್ಲ:
“ ಶ್ರೀ ಮತ್ಪಟ್ಟದ ಪಿರಿಯರಸಿ ಪಟ್ಟಮಹಾದೇವಿಯ ಸುಪುತ್ರರಹ ಶ್ರೀಮತು ಪಾಂಡ್ಯ ಚಕ್ರವರ್ತಿ ಅರಿರಾಯ ಗಜಕೆಸರಿ ವೀರ ಪಾಂಡ್ಯ ದೇವಾಳುಪೇಂದ್ರ ದೇವರಸರು......ತನ್ನ ರಾಣಿ ಬಲ್ಲಮಹಾದೇವಿಯೊಂದಿಗೆ ಬಾರಹ ಕನ್ಯಾಪುರದಿಂದ ಆಳುವ ಮಾಹಿತಿ ಸಿಗುತ್ತದೆ. (SII.,ಗಿoಟ. ೨೭,ಓo .೨೧೩ , ೧೩ಣh ಛಿeಟಿಣuಡಿಥಿ’) ವೀರಪಾಂಡ್ಯದೇವಾಳುಪೇಂದ್ರನನ್ನು ಪಟ್ಟದ ಪಿರಿಯರಸಿ ಪಟ್ಟಮಹಾದೇವಿಯ ಪುತ್ರ ಎಂದಿದೆ. ಕೂರ್ಸಿಯ ಶಾಸನದಲ್ಲಿ ಕುಲಶೇಖರನ ಸೋದರಿ ಬಮ್ಮಲದೇವಿಯನ್ನು ‘ಪಟ್ಟಮಹಾದೇವಿ’ ಎನ್ನಲಾಗಿದೆ. ಕ್ರಿ.ಶ. ೧೨೯೨ರ ಶಾಸನದಲ್ಲಿಯೂ ನಾಗದೇವರಸನನ್ನು ‘ಪಿರಿಯರಸಿ ಬಲ್ಲಮಹಾದೇವಿಯ ಪುತ್ರ’ ಎನ್ನಲಾಗಿದೆ. . (SII.,Vol.
27,No .213 , 13th century’)ಕ್ರಿ.ಶ. ೧೩೦೨ರಕ್ಕೆ ವೀರಪಾಂಡ್ಯದೇವಾಳುಪೇಂದ್ರನ ಅಳಿಯ ಬಂಕಿದೇವ ಬಂಕಿದೇವಾಳುಪೇಂದ್ರನಾಗಿ ರಾಜಧಾನಿ ಮಂಗಳಾಪುರದಿಂದ ಆಳುತ್ತಾನೆ. ಕುಲಸೇಖರ ಮಂಗಳಾಪುರದರಮನೆಯ ಮೊಗಸಾಲೆಯಲ್ಲಿ ಕುಳಿತು ನಡೆಸಿದ ಒಡ್ಡೋಲಗವನ್ನು ಈತ ನಡೆಸುತ್ತಾನೆ. (ಕೆ.ವಿ ರಮೇಶ ಮತ್ತು ಎಂ.ಜೆ.ಶರ್ಮ ತುಳುನಾಡಿನ ಶಾಸನಗಳು. ಸಂ .೪೫) ಈತನ ಅಕ್ಕ ವೋಚಮಲಾ ದೇವಿಗೆ ಈತ ವಾಮನನ ಕೈಯಲ್ಲಿ ನೀರದೇವಾಲಯದಲ್ಲಿ ಪಿಂಡಪ್ರಧಾನ ಮಾಡಿಸುತ್ತಾನೆ. ಹೀಗಾಗಿ ಬಂಕಿದೇವನಿಗೆ ವಾಮನನೆಂಬ ಅಳಿಯನಿದ್ದ ಎಂದಾಗುತ್ತದೆ. ಸತ್ತವರ ಗಂಡು ಮಕ್ಕಳ ಕೈಯಲ್ಲಿ ಪಿಂಡ ಪ್ರಧಾನ ಮಾಡುವುದು ಪದ್ಧತಿ. ಹಾಗಿದ್ದಲ್ಲಿ ವೋಚಮಲಾ ದೇವಿಗೆ ವೋಮನ ಎಂಬ ಮಗನಿದ್ದ. ಆತ ಬಂಕಿದೇವನ ಉತ್ತರಾಧಿಕಾರಿಯಾಗಬೇಕಾದವನು.
ಮುಂದೆ ಬರುವ ಅರಸರ ಸಾಮಾಜಿಕ ಪದ್ಧತಿಯಲ್ಲಿಯೂ ಮಾತೃ ವಂಶೀಯ, ಮಾತೃಪ್ರಧಾನ, ಅಳಿಯ ಸಂತಾನ ಪದ್ಧತಿಯನ್ನು ಕಾಣಬಹುದು. ‘ಕ್ರಿ.ಶ. ೧೪೫೫ರ ಶಾಸನವು ‘ಶ್ರೀ ಚಂದಲ ದೇವಿಯರ ಕುಮಾರ ಅರಿರಾಯ ಗಂಡರಧಾವಣಿ ಶ್ರೀ ವೀರ ಪಾಂಡ್ಯಪ್ಪೊಡೆಯರು.’ (ಕೆ.ವಿ.ರಮೆಶ ಮತ್ತು ಎಂ ಜೆ. ಶರ್ಮ ತುಳುನಾಡಿನ ಶಾಸನಗಳು ಸಂ. ೮೬.)ಎಂಬಲ್ಲಿ ತಾಯಿಯೇ ಪ್ರಧಾನಳಾಗುತ್ತಾಳೆ. ಕಿರಿತಾಯಿಗೂ ಇಲ್ಲಿ ಅಧಿಕಾರ ಇರುತ್ತದೆ. ಕ್ರಿ.ಶ. ೧೫೪೬ರ ಕುಂದಾಪುರ ತಾಲೂಕಿನ ಹಾಡುವಳ್ಳಿ ಶಾಸನದಲ್ಲಿ “....ಚಿಕ್ಕ ಅರಮನೆಯ ಕಿರಿತಾಯಿ ಬಸವನಾಯಕತಿ ಹಾಕಿಸಿದ ಕಲ್ಲು ಎಂದಿದೆ. (ಡಾ| ಪಿ.ಎನ್. ನರಸಿಂಹಮೂರ್ತಿ, ಕುಂದಾನಾಡಿನ ಶಾಸನಗಳು. ಸಂ.೫೬ ) ‘ಶ್ರೀ ಮದ್ಭೈರವರಾಜ ತುಂಗ ಭಗಿನೀ ಶ್ರೀ ಗುಮ್ಮಟಾಂಬಸುತ ..’.ಎಂದು ಭೈರವರಾಜನ ಅಳಿಯ ತನ್ನನ್ನು ಕರೆದುಕೊಳ್ಳುತ್ತಾನೆ. (ಕೆ.ವಿ.ರಮೆಶ ಮತ್ತು ಎಂ ಜೆ. ಶರ್ಮ ತುಳುನಾಡಿನ ಶಾಸನಗಳು ಸಂ. ೮೮ ) ಅನೇಕ ಶಾಸನಗಳು ತಾಯಿಯ ಮೂಲಕವೇ ಅರಸನನ್ನು ಹೆಸರಿಸುತ್ತವೆ.
ಪಿತೃವಂಶೀಯ ವ್ಯವಸ್ಥೆಯಲ್ಲಿ ತಂದೆಯ ಅನಂತರ ಮಗನ ಆಳ್ವಿಕೆಯಲ್ಲಿಯೇ ಆ ರಾಜ್ಯ ಉಳಿದು ಬರುತ್ತದೆಯೆಂದು ಹೇಳಲಾಗದು. ಅಂತಯೇ ಮಾತೃವಂಶೀಯ ವ್ಯವಸ್ಥೆಯಲ್ಲಿ ಸೋದರಮಾವನ ಅನಂತರ ಸೋದರಳಿಯನಲ್ಲಿ ಮಾತ್ರವೇ ಉಳಿಯುವುದು ಎಲ್ಲಾ ಸಮದಭ್ದಲ್ಲೂ ಸಂಭವವಲ್ಲ. ರಾಜ್ಯಕ್ಕಾಗಿಯೇ ಯುದ್ಧನಡೆಯುತ್ತಿರುವಾಗ ಇಂತಹ ನಿರೀಕ್ಷೆಗಳೇ ತಪ್ಪಾಗುತ್ತವೆ. ಎಂಟನೆಯ ಶತಮಾನದಲ್ಲಿ ಉದ್ಯಾವರದ ಆಳುಪ ಸಿಂಹಾಸನಕ್ಕಾಗಿ ರಣಸಾಗರ, ಚಿತ್ರವಾಹನ, ಶ್ವೇತವಾಹನ ಇವರೊಳಗೆ ನಡೆದ ಯುದ್ಧವನ್ನೂ ಗಮನಿಸಬಹುದು. ಹಿಂದಿನ ಅರಸರ ಉತ್ತರಾಧಿಕಾರಿಯಾಗಿ ಬಂದವರು ಮಗನೇ ಎಂದು ತುಳುನಾಡಿನ ಯಾವ ಶಾಸನಗಳಲ್ಲೂ ಸ್ಪಷ್ಟ ಮಾಹಿತಿ ಇಲ್ಲ. ಹೀಗಿರುವಾಗ ನಾನು ಮೇಲೆ ತೋರಿಸಿದ ಮಾತೃಪ್ರಧಾನ ಪದ್ಧತಿಯನ್ನು ಆಧಾರಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಸಿಂಹಾಸನದ ಉಪನಾಮ ಪಟ್ಟಾಭಿಷೇಕ ಆದವರಿಗೆ ಅಧಿಕೃತವಾಗಿ ನೀಡುವ ಪಟ್ಟದ ಹೆಸರು. ಅಲ್ಲಿ ಮಗ ಕೂತರೂ ಅಳಿಯ ಕೂತರೂ ಅಥವಾ ಇವರಿಬ್ಬರಿಗೂ ಸಂಬಂಧ ಪಡದ ಮೂರನೆಯ ವ್ಯಕ್ತಿ ಕೂತರೂ ಆತ ಸಿಂಹಾಸನದ ಪೂರ್ವ ಪರಂಪರೆಯ ಹೆಸರನ್ನು ಪಡೆಯುತ್ತಾನೆ.
ಪಿತೃಪ್ರಧಾನ, ಪಿತೃವಂಶೀಯ ವ್ಯವಸ್ಥೆಯು ಮಾತೃಪ್ರಧಾನ, ಮಾತೃವಂಶೀಯ ವ್ಯವಸ್ಥೆಯಾಗಿ ಪಲ್ಲಟಗೊಂಡ ಉದಾಹರಣೆ ಇಡಿಯ ವಿಶ್ವದಲ್ಲಿ ಎಲ್ಲೂ ಕಾಣದು ಎನ್ನುತ್ತಾರೆ ಮಾನವ ಶಾಸ್ತ್ರಜ್ಷರು. ಮಾತೃಪ್ರಧಾನ, ಮಾತೃವಂಶೀಯ ವ್ಯವಸ್ಥೆಯೇ ವಿಶ್ವದ ಮೊದಲ ಸಮಾಜ ವ್ಯವಸ್ಥೆಯಾಗಿದ್ದು ಅದು ಪಿತೃಪ್ರಧಾನತೆಗೆ ಪರಿವರ್ತನೆಗೊಂಡುದೇ ಹೆಚ್ಚು ಅಥವಾ ಇವೆರಡರ ಮಧ್ಯೆ ಇತ್ತು ಎನ್ನುವುದು ಅವರ ಅಭಿಪ್ರಾಯ.
ಇಂದಿರಾ ಹೆಗ್ಗಡೆ
ನಂ ೬ ಕೃಷ್ಣಾ ರೆಸಿಡೆನ್ಸಿ ೪ನೆಯ ತಿರುವು,ಅಮರಜ್ಯೋತಿ ನಗರ
ವಿಜಯನಗರ ಬೆಂಗಳೂರು ೫೬೦೦೪೦
೦೮೦-೨೩೩೮೧೬೩೩, ೯೮೪೫೫೭೭೫೫೩
No comments:
Post a Comment