ಪ್ರೊ. ಟಿ. ಮುರುಗೇಶಿ,
ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗ,
ಎಂ.ಎಸ್.ಆರ್.ಎಸ್. ಕಾಲೇಜು ಶಿರ್ವ - ೫೭೪೧೧೬, ಉಡುಪಿ. .
ಮತ್ತು
ಶ್ರೀಧರ್ ಭಟ್, ಕೆ. ಹಿರಿಯ ಶಿಕ್ಷಕರು,
ಕಮಲಾ ಬಾಯಿ ಪ್ರೌಢಶಾಲೆ, ಕಡಿಯಾಳಿ, ಉಡುಪಿ.
ಉಡುಪಿ ತೆಂಕನಿಡಿಯೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಳಾರ್ಕಳ ಬೆಟ್ಟುವಿನ ಕೊಜಕುಳಿ ಎಂಬ ಸ್ಥಳದಲ್ಲಿ ಹೊಸ ಶಾಸನವೊಂದು ಪತ್ತೆಯಾಗಿದೆ. ಕೊಜಕುಳಿಯ ಪ್ರಗತಿಪರ ರೈತ ಮಹಿಳೆ ಶ್ರೀಮತಿ ಹೇಮಲತಾ ಬಿ ಶೆಟ್ಟಿಯವರ ಮನೆಯ ಹಿಂಭಾಗದ ಗದ್ದೆಯಲ್ಲಿ ಈ ಶಾಸನ ಕಂಡು ಬಂದಿದೆ.
೯ ಇಂಚು ಅಗಲ ಮತ್ತು ೫ ಇಂಚು ದಪ್ಪನೆಯ ಆಯತಾಕಾರದ ಪಾಂಡು ಶಿಲೆಯಲ್ಲಿ ರಚಿತವಾಗಿರುವ ಈ ಶಾಸನದ ಮೇಲ್ಭಾಗವನ್ನು ಕುದುರೆ ಲಾಳದಂತೆ ವಿನ್ಯಾಸಗೊಳಿಸಲಾಗಿದೆ. ಮೇಲೆ ಮಧ್ಯಭಾಗದಲ್ಲಿ ಚಿಕ್ಕ ಪಾಣಿ ಪೀಠದ ಮೇಲೆ ದೊಡ್ಡ ಲಿಂಗವಿದೆ. ಪೀಠ ಮತ್ತು ಲಿಂಗ ಪ್ರಮಾಣ ಬದ್ಧವಾಗಿಲ್ಲ. ಎಡ-ಬಲದಲ್ಲಿ ಸೂರ್ಯ-ಚಂದ್ರರ ಉಬ್ಬು ಶಿಲ್ಪಗಳಿವೆ.
ಮೂರು ಸಾಲುಗಳಲ್ಲಿ ಈ ಶಾಸನವನ್ನು ಬರೆಯಲಾಗಿದೆ. ಕನ್ನಡ ಲಿಪಿ ಮತ್ತು ಭಾಷೆಯ ಈ ಶಾಸನದಲ್ಲಿ ಎರಡು ತುಳು ಮೂಲದ ಪದಗಳಿವೆ. ಈ ಶಾಸನ ಅಧ್ಯಯನದ ಉದ್ದೇಶವೇ ಈ ಪ್ರಬಂಧದ ಆಶಯವಾಗಿದೆ.
ಶಾಸನದ ಪಾಠ:
೧. ೦ ಶ್ರೀ ಮ ತು ಪಿ ಂ ಗ ಲ್ಸ ಂ (ವ) ರ (ದ) ಕು ಂ ದ ಯ
೨. ೦ ಪಿ ರು ಂ ಗೊ ಕೊ ಯ ಕು ಳಿ ಯ ಬ ಯ ಲ
೩. ೦ ಬೊ ರ ಗೆ ಎ ರ ದ ಧ ರ್ಮ - - -
ಶಾಸನದ ಮಹತ್ವ:
ಪ್ರತಿಯೊಂದು ಸಾಲನ್ನು ಶೂನ್ಯ ಬಿಂದುವಿನೊಂದಿಗೆ ಪ್ರಾರಂಭಿಸಲಾಗಿದೆ. ಶಾಸನೋಕ್ತ ವಿಷಯದ ಪ್ರಕಾರ ಪಿಂಗಳ ಸಂವತ್ಸರದಲ್ಲಿ ಕೊಯಕುಳಿ ಬಯಲನ್ನು ಬೋರ ಎಂಬ ವ್ಯಕ್ತಿಗೆ ದಾನವಾಗಿ ನೀಡಿರುವುದನ್ನು ಪ್ರಸ್ಥಾಪಿಸಲಾಗಿದೆ. ಪ್ರಸ್ತುತ ಶಾಸನ ದೊರೆತ ಈಗಿನ ಕೊಜಕುಳಿಯನ್ನು ಕೊಯಕುಳಿ ಎಂದು ಉಲ್ಲೇಖಿಸಲಾಗಿದೆ. ಇದರಿಂದ ಕೊಜಕುಳಿಯ ಸ್ಥಳನಾಮದ ಅಧ್ಯಯನಕ್ಕೆ ಸದರಿ ಶಾಸನ ಹೆಚ್ಚಿನ ಸಹಾಯ ಒದಗಿಸುತ್ತದೆ. ಶಾಸನದ ಎರಡನೇ ಸಾಲಿನಲ್ಲಿರುವ ಪಿರುಂಗೊ ಕೊಯಕುಳಿ ಎಂಬ ಪದಗಳು ತುಳು ಮೂಲದ ಪದಗಳಾಗಿವೆ. ಈಗಲೂ ಮಡಕೆ ತಯಾರಿಸುವ ಮಣ್ಣನ್ನು ತುಳುವಿನಲ್ಲಿ ಕೊಜೆತ್ತ ಮಣ್ಣ್/ಕೊಜೆ ಮಣ್ಣು ಎಂದು ಕರೆಯಲಾಗುತ್ತದೆ. ಆದರೆ ಕೊಯಕುಳಿಯ ಪೂರ್ವೋಕ್ತ ‘ಪಿರುಂಗೊ’ ಪದದ ಅರ್ಥ ಅಸ್ಪಷ್ಟವಾಗಿದೆ. ಕುಂದಯನ ಮೂಲವೂ ಇನ್ನು ಸ್ಪಷ್ಟವಾಗಿಲ್ಲ. ಮೂರನೇ ಸಾಲಿನ ನಂತರ ಶಾಸನದ ಅಕ್ಷರಗಳನ್ನು ಕೆತ್ತಿ ತೆಗೆದಂತೆ ಕಂಡು ಬರುತ್ತದೆ. ಶಾಸನ ಇರುವ ಭಾಗದ ಮೇಲ್ಮೈಗೂ ಕೆಳಭಾಗದ ಮೇಲ್ಮೈಗೂ ಇರುವ ಅಂತರ ಸ್ಪಷ್ಟವಾಗಿ ಕಂಡು ಬರುತ್ತದೆ. ಕೆತ್ತಿದ ಗುರುತುಗಳನ್ನೂ ಸೂಕ್ಷ್ಮವಾಗಿ ಅವಲೋಕಿಸಿದರೆ ಕಾಣಬಹುದು.
ಶಾಸನದ ಕಾಲ:
ಶಾಸನದಲ್ಲಿ ಪಿಂಗಳ ಸಂವತ್ಸರ ಉಲ್ಲೇಖದ ಹೊರತಾಗಿ ಕಾಲಮಾನದ ಬೇರಾವುದೇ ಉಲ್ಲೇಖವಿಲ್ಲ. ಶಾಸನದಲ್ಲಿ ಬಳಕೆಯಾಗಿರುವ ‘ಕು’ ಹಾಗೂ ‘ಳಿ’ ಅಕ್ಷರಗಳು ವಿಜಯನಗರೋತ್ತರ ಲಿಪಿ ಲಕ್ಷಣವನ್ನು ಅಭಿವ್ಯಕ್ತಗೊಳಿಸುತ್ತವೆ. ಆದರೆ ‘ಪಿ’ ಮತ್ತು ‘ರ’ ಅಕ್ಷರಗಳು ಆರಂಭಿಕ ವಿಜಯನಗರದ ಲಿಪಿ ಲಕ್ಷಣಗಳನ್ನು ಹೊಂದಿವೆ. ತುಳುನಾಡಿನ ಲಿಪಿ ಲಕ್ಷಣದ ಈ ವಿಶಿಷ್ಠ ತೊಡಕು ಲಿಪಿ ಲಕ್ಷಣದ ಆಧಾರದ ಮೇಲೆ ಕಾಲಮಾನವನ್ನು ನಿರ್ಧರಿಸುವಲ್ಲಿ ಸವಾಲಾಗಿದೆ. ಶಾಸನಾರಂಭದ ‘ಶ್ರೀ’ ಅಕ್ಷರ ಸ್ಪಷ್ಟವಾಗಿ ವಿಜಯನಗರೋತ್ತರ ಶೈಲಿಯಲ್ಲಿದೆ, ಆದ್ದರಿಂದ ಶಾಸನವನ್ನು ವಿಜಯನಗರೋತ್ತರ ಕಾಲದ ಶಾಸನವೆಂದು ಪರಿಗಣಿಸಬಹುದಾಗಿದೆ. ಪಿಂಗಳ ಕ್ರಿ.ಶ. ೧೬೧೮ ಮತ್ತು ೧೬೭೮ ಕ್ಕೆ ಸರಿಹೊಂದುತ್ತದೆಯಾದ್ದರಿಂದ, ಸದರಿ ಶಾಸನದ ಕಾಲವನ್ನು ಲಿಪಿ ಲಕ್ಷಣದ ಆಧಾರದಲ್ಲಿ ಕ್ರಿ.ಶ. ೧೬೭೮ ಕ್ಕೆ ಅನ್ವಯಿಸಬಹುದಾಗಿದೆ.
No comments:
Post a Comment