ಎಸ್. ನಾಗರಾಜಪ್ಪ
ಮತ್ತು ಕೆ.ಎಸ್.
ಶರತ್‌ಬಾಬು
ಸಹಾಯಕ ಶಾಸನ ಶಾಸ್ತ್ರಜ್ಞ,
ಸಂಶೋಧಕ, ಕೂನಬೇವು,
.ಭಾರತೀಯ ಪುರಾತತ್ತ್ವ ಸರ್ವೇಕ್ಷಣ ಇಲಾಖೆ,
ಚಿತ್ರದುರ್ಗ ಜಿಲ್ಲೆ
ಫೋರ್ಟ್ ಸೆಂಟ್ ಜಾರ್ಜ್,
ಚೆನ್ನೈ-೬೦೦೦೦೯.
ಕೂನಬೇವು ಗ್ರಾಮವು ಚಿತ್ರದುರ್ಗದಿಂದ ಈಶಾನ್ಯಕ್ಕೆ ಸುಮಾರು ೨೦ ಕಿ.ಮೀ.
ದೂರದಲ್ಲಿರುವ ಸಣ್ಣ ಹಳ್ಳಿ. ಚಿತ್ರದುರ್ಗ
ತಾಲೂಕು ತುರುವನೂರು ಹೋಬಳಿಗೆ ಸೇರಿರುವ ಈ ಗ್ರಾಮ ಪರಿಸರದಲ್ಲಿ ಸಣ್ಣ ಸಣ್ಣ ಮಟ್ಟಿಗಳು, ಹಳ್ಳಗಳು,
ಉತ್ತಮ ಹವಾಗುಣದೊಡನೆ ಕೃಷಿಗೆ ಯೋಗ್ಯ ಮತ್ತು ಫಲವತ್ತಾದ ಭೂಮಿ, ಅಲ್ಲಲ್ಲಿ ಸ್ಲೇಟ್‌ಶಿಲೆ ಮತ್ತು ಫಿಲ್ಲೈಟ್ ಶಿಲೆಗಳನ್ನು ಹೆಚ್ಚಿನದಾಗಿ ಕಾಣಬಹುದು.
ಬಹುಶಃ ಹಿಂದೊಮ್ಮೆ ದಟ್ಟವಾದ ಕಾಡು ಉತ್ತಮ ಹವಾಗುಣ ಮತ್ತು ನೀರಿನ ಸೌಲಭ್ಯ ಹೊಂದಿದ್ದ ಈ
ಪರಿಸರದಿಂದ ಆಕರ್ಷಿತನಾದ ಮಾನವ ಇಲ್ಲಿ ನೆಲೆ ನಿಂತನೆನ್ನಬಹುದು. ಕೂನಬೇವು ಪರಿಸರದಲ್ಲಿ ನಾವು
ಇತ್ತೀಚೆಗೆ ಕೈಗೊಂಡ ಅನ್ವೇಷಣೆಯಲ್ಲಿ ಎರಡು ಆದಿಹಳೆ ಶಿಲಾಯುಗದ ಆಯುಧಗಳು ಮತ್ತು ಒಂದು
ನವಶಿಲಾಯಗದ ಕಲ್ಲಿನ ಕೊಡಲಿ ಪತ್ತೆಯಾದವು. ಪ್ರಸ್ತುತ ಲೇಖನದಲ್ಲಿ ಇವುಗಳ ವಿಶ್ಲೇಷಣೆ ಮಾಡುವ ಪ್ರಯತ್ನವನ್ನು
ಮಾಡಲಾಗಿದೆ.
ಕೂನಬೇವು ಗ್ರಾಮದ ದಕ್ಷಿಣಕ್ಕೆ ಸ್ವಲ್ಪ ದೂರದಲ್ಲಿರುವ
ಮಟ್ಟಿಯೊಂದನ್ನು ಸ್ಥಳೀಯರು ‘ಮೊರೇರಮಟ್ಟಿ’ ಎಂದು ಕರೆಯುತ್ತಾರೆ. ‘ಮೊರೇರ ಮಟಿ’, ‘ಮೊರೇರ ಮನೆ’ ಎಂಬ ಹೆಸರಿನ
ಸ್ಥಳಗಳು ಬೃಹತ್ ಶಿಲಾಗೋರಿಗಳಿಗೆ ಸಂಬಂಧಪಟ್ಟ ಸ್ಥಳಗಳೆಂಬುದು ಈಗಾಗಲೇ ಧೃಢಪಟ್ಟ ಅಂಶ. ಅಂತೆಯೇ
ಇಲ್ಲಿ ಈ ಹಿಂದೆ ಶಿಲಾವೃತ್ತ ಮಾದರಿಯ ಬೃಹತ್ ಶಿಲಾಸಮಾಧಿಗಳು ಬೆಳಕಿಗೆ ಬಂದಿವೆ. ಇವುಗಳ
ಸುತ್ತಮುತ್ತಲ ಪರಿಸರದಲ್ಲಿ ಕೈಗೊಂಡ ಕ್ಷೇತ್ರಕಾರ್ಯದಲ್ಲಿ ಎರಡು ಆದಿಹಳೇ ಶಿಲಾಯುಗದ ಆಯುಧಗಳು
ಪತ್ತೆಯಾದವು. ಕ್ವಾರ್ಟ್‌ಜೈಟ್ ಶಿಲೆಯಿಂದ ತಯಾರಿಸಿದ ಕೈಕೊಡಲಿ ಮತ್ತು ಸೀಳುಗತ್ತಿ ಮಾದರಿಯ ಈ
ಉಪಕರಣಗಳು ಕ್ರಮವಾಗಿ ೧೦.೫ ಮತ್ತು ೯.೫ ಸೆಂ.ಮೀ. ಉದ್ದ ಇವೆ. ಇವುಗಳಲ್ಲಿ ಅಂಡಾಕಾರದಲ್ಲಿರುವ
ಕೈಕೊಡಲಿಯ ಎರಡೂ ಬದಿಯಲ್ಲಿ ಚಕ್ಕೆಗಳನ್ನು ತೆಗೆದು ಅಂಚಿನ ಭಾಗವನ್ನು ಸ್ವಲ್ಪಮಟ್ಟಿಗೆ ಚೂಪು
ಮಾಡಿಕೊಳ್ಳಲಾಗಿದೆ. ಆದಿ ಹಳೇಶಿಲಾಯುಗದಲ್ಲಿ ಕೈಕೊಡಲಿಯನ್ನು ಬಳಕೆ ಹೆಚ್ಚಿನದಾಗಿದ್ದು, ಪ್ರಾಣಿಗಳನ್ನು
ಕೊಲ್ಲಲು ಬಳಸುತ್ತಿದ್ದರೆನ್ನಬಹುದು. ಸೀಳುಗತ್ತಿ ಇಲ್ಲಿ ದೊರೆತ ಇನ್ನೊಂದು ಉಪಕರಣ. ಸಾಧಾರಣವಾಗಿ
ಸೀಳುಗತ್ತಿಗಳು ಹೆಚ್ಚಿನದಾಗಿ ಇಂಗ್ಲಿಷಿನ ‘ಯು’ ಅಥವಾ ‘ವಿ’ ಅಕ್ಷರದ
ಆಕಾರದಲ್ಲಿರುತ್ತವೆ. ಕೂನಬೇವು ಗ್ರಾಮದ ವ್ಯಾಪ್ತಿಯಲ್ಲಿ ದೊರೆತ ಸೀಳುಗತ್ತಿಯ ಹರಿತವಾದ ಬಾಯಿ
ಅಗಲವಾಗಿದ್ದು ಕೊಯ್ಯುವ ಅಥವಾ ಕತ್ತರಿಸುವ ಅಂಚುಗಳನ್ನು ಹೊಂದಿರುವುದನ್ನು ಕಾಣಬಹುದು. ಪ್ರಾಚೀನ
ಕಾಲದ ಮಾನವರು ತಮ್ಮ ಕೈಯಿಂದ ಪ್ರಾಣಿಗಳನ್ನು ಕೊಲ್ಲಲು ಹಾಗೂ ಗೆಡ್ಡೆ ಗೆಣಸುಗಳನ್ನು ಸಂಗ್ರಹಿಸಲು
ಈ ಬಗೆಯ ಆಯುಧಗಳನ್ನು ಬಳಸುತ್ತಿದ್ದರು. ಇವು ಮಾನವನ ಬೇಟೆ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ.
ಕೂನಬೇವು ಗ್ರಾಮದ ಕೊಂಚೆ ಶಾಂತರುದ್ರಪ್ಪನವರ ಕೃಷಿ ಭೂಮಿಯಲ್ಲಿ ದೊರೆತ
ಉಪಕರಣವು ನೂತನ ಶಿಲಾಯಗ ಕಾಲಘಟ್ಟದ್ದು. ಡೈಕ್ ಶಿಲೆ ಬಳಸಿ ತಯಾರಿಸಿದ ಈ ಆಯುಧವು ೧೨.೫ ಸೆಂ.ಮೀ.
ಉದ್ದವಿದೆ. ಆಯುಧದ ತುದಿಯು ಚೂಪಾಗಿ ಮತ್ತು ಅಗಲವಾಗಿದೆಯಲ್ಲದೆ ಅದರ ಹಿಂಬದಿಯು ಸಣ್ಣದಾಗುತ್ತಾ
ಹಾಗೂ ದುಂಡಾಗುತ್ತಾ ಹೋಗಿರುವುದನ್ನು ಕಾಣಬಹುದು. ಕಲ್ಲಿನ ಈ ಉಪಕರಣವು ಮಾನವನ ಕೃಷಿ ಸಂಸ್ಕೃತಿಯ
ಸಂಕೇತವೂ, ಕೃಷಿ ಆರಂಭಿಸಲು ಉಪಯೋಗಿಸಲ್ಪಟ್ಟ ಮೊದಲ ಸಾಧನವೂ ಆಗಿದೆ. ಕೃಷಿಯ
ಆರಂಭದಿಂದ ಮಾನವ ಮುಂದೆ ತನ್ನ ಪರಿವಾರದೊಡನೆ ಒಂದೆಡೆ ನೆಲೆನಿಂತು ಆರಂಭಿಸಿದ ಗ್ರಾಮ ಸಂಸ್ಕೃತಿಗೆ
ಇದು ಮೂಲ ಪ್ರೇರಕ ಸಾಧನವಾಯಿತೆನ್ನಬಹುದು. “ಪ್ರಸ್ತುತ
ಪತ್ತೆಯಾಗಿರುವ ಆಯುಧಗಳು ಪ್ರಾಗಿತಿಹಾಸ ಕಾಲದ ವಿವಿಧ ಕಾಲಘಟ್ಟಗಳನ್ನು ಪ್ರತಿನಿಧಿಸುವ ಮಹತ್ವದ
ಆಕರಗಳಾಗಿವೆಯಲ್ಲದೆ ಇವು ಚಿತ್ರದುರ್ಗ ತಾಲೂಕು ಪರಿಸರದಲ್ಲಿ ಕಂಡುಬಂದ ಅಪರೂಪದ ಹಾಗೂ ಆದಿಹಳೆ
ಶಿಲಾಯುಗ ಕಾಲದ ಕುರುಹಾಗಿ ದೊರೆತ ಮೊಟ್ಟಮೊದಲ ಶಿಲಾಯಧಗಳಾಗಿವೆಯೆಂದು ಕನ್ನಡ ವಿಶ್ವವಿದ್ಯಾಲಯದ
ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎಸ್.ವೈ. ಸೋಮಶೇಖರ್
ಅಭಿಪ್ರಾಯಪಟ್ಟಿದ್ದಾರೆ’’. ಈ ಹಿಂದೆ ಜಿಲ್ಲೆಯ ತಾಳ್ಯ ಮತ್ತು
ಜಾನಕಲ್ಲು ಗ್ರಾಮಗಳಲ್ಲಿ ಆದಿ ಹಳೇಶಿಲಾಯುಗಕ್ಕೆ ಸಂಬಂಧಿಸಿದ ಉಪಕರಣಗಳನ್ನು ರಾಬರ್ಟ್ ಬ್ರೂಸ್
ಫೂಟ್ ಹಾಗೂ ಎಂ. ಶೇಷಾದ್ರಿಯವರು ಪತ್ತೆಹಚ್ಚಿದ್ದರು.
ಕಬ್ಬಿಣಯುಗವನ್ನು ಸಂಕೇತಿಸುವ ಬೃಹತ್ ಶಿಲಾಯುಗದ ಶಿಲಾವೃತ್ತ ಮಾದರಿಯ
ಸಮಾಧಿಗಳು, ಕುಟ್ಟಿ ಮೂಡಿಸಿದ ರೇಖಾಕೃತಿಗಳು ಮತ್ತು ಸಮಾಧಿಯೊಂದರಿಂದ ಶವಸಂಸ್ಕಾರದ
ಸಮಯದಲ್ಲಿ ಶವದ ಜೊತೆಗೆ ಇಟ್ಟಿದ್ದ ಕಪ್ಪು ವರ್ಣದ, ಕಪ್ಪು ಮತ್ತು
ಕೆಂಪು ವರ್ಣದ ವಿವಿಧ ಆಕಾರದ ಮಡಕೆಗಳು ಮತ್ತು ಕಬ್ಬಿಣದ ವಸ್ತುಗಳನ್ನು ಡಾ. ಎಸ್.ವೈ. ಸೋಮಶೇಖರ್
ಮತ್ತು ಡಾ. ಎಸ್. ತಿಪ್ಪೇಸ್ವಾಮಿಯವರು ಈ ಹಿಂದೆ ಗ್ರಾಮದ ವ್ಯಾಪ್ತಿಯಲ್ಲಿ ಪತ್ತೆಹಚ್ಚುವ ಮೂಲಕ
ಕೂನಬೇವು ಗ್ರಾಮದ ಇತಿಹಾಸವನ್ನು ಕ್ರಿ.ಪೂ.೧೦೦೦ ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ದಿದ್ದರು.
ಆದರೆ ಪ್ರಸ್ತುತ ಪತ್ತೆಯಾದ ಉಪಕರಣಗಳಿಂದ ಕೂನಬೇವು ಪರಿಸರದಲ್ಲಿ ಮಾನವನ ಇತಿಹಾಸವನ್ನು
ಕ್ರಿ.ಪೂ.೬೦೦೦ ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ಯಬಹುದು.
ಒಟ್ಟಾರೆ ಚಿತ್ರದುರ್ಗ ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ ದೊರೆತ
ಆದಿಹಳೆ ಶಿಲಾಯುಗದ ಆಯುಧಗಳು ಪ್ರಸ್ತುತ ಸಂಶೋಧನೆಯ ಮಹತ್ವವನ್ನು ಹೆಚ್ಚಿಸಿವೆ ಹಾಗೂ ಇದರಿಂದ
ಚಿತ್ರದುರ್ಗ ಜಿಲ್ಲೆಯ ಪ್ರಾಗೈತಿಹಾಸಿಕ ಯುಗದ ಅಧ್ಯಯನಕ್ಕೆ ಹೊಸ ಗರಿಯೊಂದು
ಸೇರ್ಪಡೆಯಾದಂತಾಗಿದೆ.
ಆಧಾರಸೂಚಿ
೧. ತಿಪ್ಪೇಸ್ವಾಮಿ
ಎಸ್., ೨೦೦೭, ಚಿತ್ರದುರ್ಗ
ತಾಲೂಕಿನ ಮತ್ತಷ್ಟು ಪ್ರಾಗೈತಿಹಾಸಿಕ ನೆಲೆಗಳು, ಇತಿಹಾಸ
ದರ್ಶನ, ಸಂ-೨೨, ಕರ್ನಾಟಕ
ಇತಿಹಾಸ ಅಕಾಡೆಮಿ, ಬೆಂಗಳೂರು.
೨. ಲಕ್ಷ್ಮಣ್
ತೆಲಗಾವಿ, ೨೦೦೪, ಬೆಳಗಟ್ಟ
ಗ್ರಾಮ ಪರಿಸರದ ಎದ್ದುಲುಬಂಡೆಯ ಬಯಲುಬಂಡೆ ರೇಖಾಕೃತಿಗಳು, ಇತಿಹಾಸ
ದರ್ಶನ, ಸಂ.೧೯, ಕರ್ನಾಟಕ
ಇತಿಹಾಸ ಅಕಾಡೆಮಿ, ಬೆಂಗಳೂರು.
೩. ಶಿವತಾರಕ್
ಕೆ.ಬಿ., ೨೦೦೧, ಕರ್ನಾಟಕದ
ಪುರಾತತ್ತ್ವ ನೆಲೆಗಳು, ಪ್ರಸಾರಾಂಗ, ಕನ್ನಡ
ವಿಶ್ವವಿದ್ಯಾಲಯ, ಹಂಪಿ.
೪. ಸುಂದರ ಅ., ೧೯೯೭, ಕರ್ನಾಟಕ ಚರಿತ್ರೆ, ಸಂ.-೧, ಪ್ರಸಾರಾಂಗ, ಕನ್ನಡ
ವಿಶ್ವವಿದ್ಯಾಲಯ, ಹಂಪಿ.
೫. ಈooಣe ಖ.ಃ., ೧೯೧೬, Pಡಿehisಣoಡಿiಛಿ ಚಿಟಿಜ Pಡಿoಣohisಣoಡಿiಛಿ ಂಟಿಣiquiಣies ಒಚಿಜಡಿಚಿs, ಉoveಡಿಟಿmeಟಿಣ ಒuseum,
ಒಚಿಜಡಿಚಿs.
೬. ನಾಗರಾಜಪ್ಪ
ಎಸ್., ಮತ್ತು ಶರತ್‌ಬಾಬು ಕೆ.ಎಸ್., ಕೂನಬೇವು: ಶಿಲಾಯುಗದ ಕೊಡಲಿಗಳು ಪತ್ತೆ, ೧೯.೦೩.೨೦೧೨ರ ಕನ್ನಡಪ್ರಭ
ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ.
No comments:
Post a Comment