Friday, December 28, 2012

ಕಲಘಟಗಿ ಪ್ರದೇಶದ ಪುರಾತತ್ತ್ವ ಹಾಗೂ ಇತಿಹಾಸ



                                                                               ಶೃಂಗೇರಿ ಕರ್ನಾಟಕ ಇತಿಹಾಸ ಸಮ್ಮೇಳನ

ಡಾ. ಎಸ್.ಕೆ. ಜೋಶಿ
೬೦, ಸಿಲ್ವರ್ ಆರ್ಚರ್ಡ್, ಪುರಾತತ್ತ್ವವಿದ,
ಧಾರವಾಡ-೫೮೦೦೦೧.

ರಡೂವರೆ ಸಾವಿರ ದೀರ್ಘ ಇತಿಹಾಸ ಕರ್ನಾಟಕದ, ಒಂದು ಮಲೆನಾಡಿನ ಪ್ರದೇಶವಾದ ಕಲಘಟಗಿ ಪ್ರದೇಶವು, ಒಂದು ಸಾವಿರ ವರುಷಗಳ ಪ್ರಶಾಂತ ಹಾಗೂ ನಿವಾಂತ ಸಾಂಸ್ಕೃತಿಕ ಬದುಕನ್ನು ಬೆಳೆದು, ಇಡಿಯಾದ ಕರ್ನಾಟಕದ ಸಾಂಸ್ಕೃತಿಕ ಬದುಕಿನಲ್ಲಿ ಭಾಗಿಯಾಗಿದೆ.
ಕಲಘಟಗಿ ಪ್ರದೇಶದಲ್ಲಿ ಕ್ಷಾತ್ರ ತೇಜದಿ ಮೆರೆದ ವೀರಗಲ್ಲುಗಳಿವೆ, ಮಹಾಸತಿ ಕೈಗಳಿವೆ, ಮೃದ್‌ಕೋಟೆ, ದೇವಸ್ಥಾನ, ಬಸದಿಗಳಿವೆ, ಕಿವಿವೆತ್ತ ಕಿವುಡರಿಗೆ ಇತಿಹಾಸದ ಕೂಗನ್ನು ಹೇಳುವ ಶಿಲಾಶಾಸನಗಳಿವೆ, ಸಾರ್ವಜನಿಕ ಉಪಯೋಗದ ಪ್ರಾಚೀನ ಕೆರೆ ಬಾವಿ, ಪುಷ್ಕರಣಿಗಳಿವೆ. ಈ ರೀತಿಯ ಪ್ರಾದೇಸಿಕ ಕೊಡುಗೆಗಳಾದ ಈ ಶಿಲ್ಪದ ಸಂಪುಷ್ಪ ತಲ್ಪಗಳು ಹೇಗೆ ಅರಳಿವೆ ಎಂಬುದನ್ನು ನೋಡಲು ಪ್ರಯತ್ನಿಸಲಾಗಿದೆ.
ಈ ರೀತಿ ಮುಂದುವರೆಯುತ್ತ, ಕನ್ನಡ ಸಾಹಿತ್ಯಸಿರಿ ಹಾಗೂ ಕನ್ನಡ ಶಿಲ್ಪ ಸಂಪುಟಗಳೆರಡನ್ನೂ ಜೋಡಿಸಿ ನೋಡಿ ದಾಗ ಹಾಗೂ ಪ್ರಾಚೀನ ತಲಘಟಗಿ (ಕಲ್ಲುತುಟಿಕೆ)ಗಳ ಪ್ರದೇಶಗಳು ಸ್ಮರಣೀಯ ಕೊಡುಗೆ ನೀಡಿವೆ. ಕರ್ನಾಟಕದ ಸಂಸ್ಕೃತಿಯಾಗುವಲ್ಲಿ ಅನೇಕ ವಿವೇಕಗಳು ಈ ನಾಡಿನಲ್ಲಿ ಕೈ ಜೋಡಿಸಿವೆ. ಕನ್ನಡದ ಕೈಗಳು ಶಿಲ್ಪಗಳನ್ನು ಕೊರೆದರೆ, ಅದೇ ಕೈಗಳ ಬೆರಳುಗಳು ಲೆಕ್ಕಣಿಕೆ ಹಿಡಿದು ಸಾಹಿತ್ಯ ಬರೆದಿವೆ.
ಕಲಘಟಗಿ ತಾಲೂಕಿನಲ್ಲಿ ಐತಿಹಾಸಿಕವಾಗಿ ಹರಡಿದ ತಾಣಗಳು: ಕಲಘಟಗಿ, ತಂಬೂರು, ಕಂದಲಿ, ಕಾಮಧೇನು, ಮಿಶ್ರಕೋಟಿ, ಸಂಗಮೇಶ್ವರ, ನೀರಸಾಗರ, ಗಂಜೀಗಟ್ಟಿ.
ಇವುಗಳೆಲ್ಲ ಅಲ್ಪಸಂಖ್ಯೆಯಲ್ಲಿದ್ದರೂ, ಭಾವದ ಬೆಡಗನ್ನು ಕಲ್ಲಿನಲ್ಲಿ ಮೂಡಿಸಿವೆ. ಸತ್ತವರ ಕೃತಿಗಳಲ್ಲ ಅವು, ಎಚ್ಚತ್ತವರ ವಿಸ್ಮ ತಿಗಳು ಮೇಲಿನ ತಾಣಗಳು ಒಂದಿಲ್ಲೊಂದು ಐತಿಹಾಸಿಕ ಅಂಶಗಳಲ್ಲಿ ಕೋಟೆ, ಕೆರೆ, ದೇವಸ್ಥಾನ, ಶಿಲಾಲೇಖ, ಸ್ಥಳಮಹಾತ್ಮೆ ಇತ್ಯಾದಿಗಳಲ್ಲಿ ದಾಖಲೆಗೊಂಡಿವೆ. (ಕರ್ನಾಟಕ ರಾಜ್ಯ ಗ್ಯಾಝೆಟಿಯರ್, ಧಾರವಾಡ ಜಿಲ್ಲೆ, ಪರಿಷ್ಕೃತ ಆವೃತ್ತಿ, ಸಂ. ಸೂರ್ಯನಾಥ ಕಾಮತ, ೧೯೯೫).
ಇವುಗಳಲ್ಲದೆ ಕೆಳಗಿನವು ಕಂದಾಯ ಗ್ರಾಮಗಳ ಪಟ್ಟಿಕೆಯಲ್ಲಿ ದಾಖಲಿಸಲಾಗಿದೆ. ಕಲಘಟಗಿ ತಾಲೂಕು ಒಟ್ಟು ೮೨ ಗ್ರಾಮಗಳನ್ನೊಳಗೊಂಡಿದೆ. ಮಲಕನಕೊಪ್ಪ, ಹುಣಸಿಕಟ್ಟಿ, ಮಾಚಾಪುರ, ಮುಕ್ಕಲ, ಮುತ್ತಗಿ, ಹಲವದಾಳ, ಲಿಂಗನಕೊಪ್ಪ, ಸಿಂಗನಹಳ್ಳಿ, ಸಿದ್ಧನಭಾವಿ, ಶಿವನಾಪುರ, ಸಂಗದೇವರಕೊಪ್ಪ, ಸೂರಶೆಟ್ಟಿಕೊಪ್ಪ, ಸಂಗಟಿಕೊಪ್ಪ, ಸೂಳೆಕಟ್ಟೆ, ಸೋಮನಕೊಪ್ಪ, ಸೋಲಾರಗೊಪ್ಪ, ಹಟಕಿನಾಳ, ಹನುಮಾಪುರ, ಹಟಕಿನಾಳ, ಹಲತುಂಬಿ, ಹಾರೋಗೇರಿ, ಹಿಂಡಸಗೇರಿ, ಹುಲಗಿನಕೊಪ್ಪ, ರಾಮನಾಳ, ಹರಲಾಪುರ ಹಾಗೂ ಬೀರವಳ್ಳಿ, ಬುದ್ರುಗ ಸೀಗಿಹಳ್ಳಿ, ಬೆಂಡಿಗೇರಿ ಬೇಗೂರು, ಧುಮ್ಮವಾಡ, ನಾಗನೂರ, ತಾವರಗೇರಿ, ತಬಕದ ಹೊನ್ನಳಿ, ಜಮ್ಮಿಹಾಳ, ಜಿನ್ನೂರ, ದಿಂಬವಳ್ಳಿ, ಜುಂಜನಬೈಲು, ಚಳಮಟ್ಟಿ, ಬಸವನಕೊಪ್ಪ, ಗುಡ್ಡದ ಹುಲಿಕಟ್ಟಿ, ಗಂಟ್ಯಾಪುರ, ಗಂಜಿಗಟ್ಟಿ, ಗಂಗಿನಕಟ್ಟಿ, ಗಳಗಿ, ಖಾಲಸಾಹುಣಸಿಕಟ್ಟಿ, ಕಾಡನಕೊಪ್ಪ, ಅಸ್ತಕಟ್ಟಿ, ಕಂದ್ಲಿ, ಅರಳಿಹೊಂಡ ಹಾಗೂ ಅರೆಬಸವನ ಕೊಪ್ಪ.
ಈ ಮೇಲಣ ಎಲ್ಲ ತಾಣಗಳು ಇತಿಹಾಸ ನೀಡಿಲ್ಲವಾದರೂ, ಇಡೀ ಮಾನವನ ಬೆಳವಣಿಗೆಯ ಇತಿಹಾಸದಲ್ಲಿದ್ದುಕೊಂಡು ಬದುಕಿಕೊಂಡು ಕಲಘಟಗಿ ನಾಡಿನ ಮೈಗಂಟಿಕೊಂಡಿವೆ. ಇವುಗಳಲ್ಲಿ ಎದ್ದುಕಾಣುವ ಇತಿಹಾಸ ಚರಿತೆಯ ಎಂಟೊಂಬತ್ತು ತಾಣಗಳನ್ನು ಈ ಕೆಳಗೆ ಸಮೀಕ್ಷಿಸುವಾ:
ಕಲಘಟಗಿ: ತಾಲ್ಲೂಕಾ ಕೇಂದ್ರ ಧಾರವಾಡ ಜಿಲ್ಲೆಯಲ್ಲಿ ಅಕ್ಕಿಯ ಕಣಜವಿದು. ಕಲಘಟಗಿ ಅಕ್ಕಿ ಎಂದೇ ಪ್ರಸಿದ್ಧ. ಮಲೆನಾಡಿನಲ್ಲಿ ಬರುವ ಇದು ಮಳೆಗಾಲದಲ್ಲಿ ಸುತ್ತೆಲ್ಲ ಹಸಿರು, ಕೆರೆಬಾವಿಗಳ ತವರು. ಶಾಸನೋಕ್ತ ‘ಕಲ್ಲುಕುಟಿಕೆ ಎಂಬ ಹೆಸರು ಇದಕ್ಕೆ. ಐದು ತ್ರುಟಿತ ಶಾಸನಗಳು ಲಭ್ಯ. ೬ನೆಯ ಕಲ್ಯಾಣ ವಿಕ್ರಮಾದಿತ್ಯನ (ಕ್ರಿ.ಶ.೧೦೮೦) ಆಳ್ವಿಕೆಯಲ್ಲಿಯ ಮಹಾಮಂಡಳೇಶ್ವರ ಗುವಲದೇವನು ಆಳುತ್ತಿದ್ದ ಉಣಕಲ್ಲು-೩೦ ಹಾಗೂ ಸಬ್ಬೆ-೩೦ ಮಂಡಲಗಳೂ ಸಬ್ಬೆಯ ಭಾಗವು ಕಲಘಟಗಿ ಆಗಿತ್ತು. ಬ್ರಾಹ್ಮಣರಿಗೆ ಹಾಗೂ ಜೈನರಿಗೆ ದಾನ ನೀಡಿದ ಶಾಸನಗಳು, ಕೆಲವು ಚೆಲ್ಲುವರಿದ ಮೂರ್ತಿಶಿಲ್ಪಗಳು, ಎರಡು ಜೈನಬಸ್ತಿಗಲ್ಲಿ ೧೧-೧೨ ಶತಮಾನದ ಜೈನ ತೀರ್ಥಂಕರ ಸುಂದರ ಮೂರ್ತಿಗಳು, ಇವುಗಳ ಜೊತೆಗೆ ಹನುಮಂತ, ಗ್ರಾಮದೇವತೆ, ಕಾಳಮ್ಮ ದ್ಯಾಮವ್ವನ ಬಸವಣ್ಣನ ಇತ್ತೀಚಿನ ಗುಡಿಗಳಿವೆ. ದ್ಯಾಮವ್ವ ಜಾತ್ರೆ ಪ್ರಸಿದ್ಧ, ರುಸ್ತುಮ್ ಸಾಹೇಬನ ದರ್ಗಾ, ನೈಋತ್ಯಕ್ಕೆ ಹೊರವಲಯದಲ್ಲಿ ‘ಸಾತ್ ಶಹೀದ್ ಎಂಬ ಏಳು ಸೂಫಿಗಳ ಹುತಾತ್ಮರ ಸಮಾಧಿಗಳಿವೆ. ಬಿಜಾಪುರದ ಹಾಸಿಮ್ ಪೀರ್‌ನ ಅನುಯಾಯಿಗಳಿವರು. ಬಿಜಾಪುರದ ಆದಿಲ್‌ಶಹನಿಂದ ಸನದು ಪಡೆದುಕೊಂಡ ಜಮೀನಲ್ಲಿ ಕಾಡು ಕಡಿದು ನೆಲೆ ನಿಲ್ಲುವ ಪ್ರಯತ್ನದಲ್ಲಿ ವಿರೋಧವಾಗಿ ಹುತಾತ್ಮರಾದರು (ಕ್ರಿ.ಶ. ೧೬೫೫). ಕಲಘಟಿಯ ಬಣ್ಣದ ತೊಟ್ಟಿಲುಗಳು, ಗಡಿಗೆ ಮಡಿಕೆಗಳು ಪ್ರಸಿದ್ಧ.
ತಂಬೂರು: ಕಲಘಟಗಿಯಿಂದ ದಕ್ಷಿಣಕ್ಕೆ ೧೧ ಕಿ.ಮೀ. ದೂರ. ಶಾಸನೋಕ್ತವಾಗಿ ‘ತಮ್ಮಿಯೂರ, ‘ತಾಂಬ್ರಪುರ, ‘ತಮ್ಮ ಊರು ಕರೆದುಕೊಂಡು ರಾಷ್ಟ್ರಕೂಟರ ಕಾಲದಷ್ಟು ಪುರಾತನ. ಹಲಸಿ-೧೨೦೦೦ಗೆ ಸೇರಿದ ತಮ್ಮಿಯೂರು-೧೨ರ ಆಡಳಿತ ಕೇಂದ್ರ. ರಾಷ್ಟ್ರಕೂಟರ ೪ನೆಯ ಗೋವಿಂದನ (ಕ್ರಿ.ಶ. ೯೩೨) ಶಾಸನವು ಊರುಳವಿಗಾಗಿ ಹೋರಾಟದ ಅಣ್ಣಿಗನ ಬಗ್ಗೆಯೂ ಹಾಗೂ ಇಲ್ಲಿ ೧೦೦೦ ಮಹಾಜನರನ್ನೊಳಗೊಂಡ ಅಗ್ರಹಾರದ ಬಗ್ಗೆಯೂ ಹೇಳುತ್ತದೆ. ಕ್ರಿ.ಶ.೧೧೨೦ರ ಮತ್ತೊಂದು ಶಾಸನವು ಕದಂಬ ಗುವಲದೇವನಾಳುತ್ತಿರುವಾಗ ಸೇನಿಗಗಾವುಂಡ ಫಣಿರಾಜನು ದೇವಾಲಯವೊಂದನ್ನು ಕಟ್ಟಿಸಿದ ಬಗ್ಗೆಯೂ, ಜಯದೇವನೆಂಬ ಪ್ರಮುಖನಿಂದ ವಿಷ್ಣುದೇವಾಲಯ ಕಟ್ಟಿಸಿ ಭೂದಾನ ಮಾಡಿದ ವಿಷಯ ತಿಳಿಸುತ್ತದೆ. ಕ್ರಿ.ಶ.೧೧೨೫ರಲ್ಲಿ ಬರ್ಮಚಯ್ಯ ನಾಯ್ಕ ಹಾಗೂ ರಾಜಮಲ್ಲನಾಯ್ಕರು ಜಿನದೇವಾಲಯ ಕಟ್ಟಿಸಿದ ಬಗ್ಗೆ, ಭೂದಾನದ ಬಗ್ಗೆ ಹೇಳುತ್ತದೆ ಇನ್ನೊಂದು ಶಾಸನ. ಊರಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಬಸವಣ್ಣ (ಈಶ್ವರ) ದೇವಾಲಯವಿದೆ, ಇದನ್ನು ಭಾರತೀಯ ಪುರಾತತ್ವ ಇಲಾಖೆ ರಕ್ಷಿಸುತ್ತಿದೆ. ಶ್ರೀ ಕಲ್ಮೇಶ್ವರ ದೇವಾಲಯವೂ ಜೀರ್ಣೋದ್ಧಾರಗೊಂಡಿದೆ. ಊರ ಹೊರಗೆ ಗುಡ್ಡದ ಮೇಲೆ ‘ಉತ್ತರ ಕುಮಾರನ ಗುಡಿ ನವರಂಗ, ಅಂತರಾಳ, ಗರ್ಭಗೃಹಗಳಿಂದೊಡಗೂಡಿದ್ದು, ಕದಂಬನಾಗರ ಶೈಲಿಯ ಶಿಖರ ಹೊಂದಿದೆ. ಹಲವಾರು ವೀರಗಲ್ಲುಗಳು ಮಾಸ್ತಿಕಲ್ಲುಗಳು ಇರುವುದರಿಂದ ೧೨ನೇ ಶತಮಾನದಲ್ಲಿ ದೊಡ್ಡ ಕಾಳಗವೊಂದು ಜರುಗಿರಲು ಸಾಕು. ಊರಿನ ಸುತ್ತ ಕೋಟೆಯಿದ್ದ ಅವಶೇಷಗಳು ಮಾತ್ರ ಉಳಿದಿವೆ. ಮಸೀದಿ ಹಾಗೂ ದರ್ಗಾಗಳೂ ಇಲ್ಲಿವೆ.  ಐತಿಹಾಸಿಕವಾಗಿ ಇದು ಈ ಭಾಗದಲ್ಲಿಯ ಅತ್ಯಂತ ಚಟುವಟಿಕೆಯ ತಾಣವಾಗಿತ್ತೆಂದು ತಿಳಿಯುತ್ತದೆ.
ಕಂದಲಿ: ಕಲಘಟಗಿಯಿಂದ ನೈಋತ್ಯಕ್ಕೆ ೫ ಕಿ.ಮೀ. ದೂರದಲ್ಲಿರುವ ಪುಟ್ಟಗ್ರಾಮ. ಕಲ್ಯಾಣ ಚಾಲುಕ್ಯರ ಎರಡು ಶಾಸನಗಳಿವೆ. ಅವುಗಳಲ್ಲಿ ಗೋವೆ ಕದಂಬ ಅರಸ ಇಮ್ಮಡಿ ಚೆಟ್ಟಿದೇವನ ಕ್ರಿ.ಶ.೧೦೫೦ ಶಾಸನವು ಬಾದುಬ್ಬೆ (ಬನಶಂಕರಿ) ವಿಗ್ರಹ ಸ್ಥಾಪನೆ ಮಾಡಿದ ವಿವರ ತಿಳಿಸುತ್ತದೆ. ಎರಡನೆಯ ಶಾಸನವು ಕ್ರಿ.ಶ.೧೧೫೨ರದಿದ್ದು, ಅಜ್ಜಿಗಾವೆಯ ತೈಲಜ ಸಾಮಂತನು ಕಿರುವತ್ತಿಯನ್ನು ಮುತ್ತಿದಾಗ ಅಹವಮಲ್ಲಯ್ಯ ನಾಯಕನು ಹೋರಾಡುತ್ತ ಮಡಿದ ವಿಷಯವನ್ನು ಸೂಚಿಸುತ್ತದೆ. ಈ ತಾಣವು ತ್ಯಾಗ ಬಲಿದಾನದ ನೆನಪನ್ನು ನೀಡುತ್ತದೆ.
ಕಾಮಧೇನು: ಇದೂ ಕಲಘಟಗಿಯಿಂದ ಈಶಾನ್ಯಕ್ಕೆ ೧೦ ಕಿ.ಮೀ. ದೂರದಲ್ಲಿದೆ. ಪ್ರಾಚೀನ ಶಾಸನಗಳಲ್ಲಿ ‘ಸಾಸಲು ಎಂದೇ ಕರೆಯಲ್ಪಟ್ಟಿದ್ದು ಕಾಮಧೇನು ಎಂಬ ಹೆಸರು ಹೇಗೆ ಬಂತು? ಇದರ ಬಗ್ಗೆ ದಾಖಲೆಗಳೇನೂ ಇಲ್ಲ. ಈ ಊರ ದಕ್ಷಿಣಕ್ಕಿರುವ ಶ್ರೀ ಕಲ್ಲೇಶ್ವರ ದೇವಸ್ಥಾನದಲ್ಲಿ ೩ ಶಿಲಾಶಾಸನಗಳು ಲಭ್ಯವಾಗಿವೆ. ೨ನೇ ಸೋಮೇಶ್ವರ (ಕ್ರಿ.ಶ.೧೧೨೯) ಶಾಸನವು ಹಲಸನಾಡಿನ ಶಾಸನವೆಂದು ದಾಖಲಿಸಿ, ಸಾಸಲು ಗ್ರಾಮದ ಸೌಂದರ್ಯೀಕರಣ ಬಗ್ಗೆ ಹಾಗೂ ಅದರ ಪ್ರಾಕೃತಿಕ ಸೌಂದರ್ಯ ವರ್ಣಿಸುತ್ತದೆ. ಮಲ್ಲಶೆಟ್ಟಿ ಎಂಬುವನು ಈ ದೇವಸ್ಥಾನಕ್ಕೆ ಭೂಮಿ ಹಾಗೂ ಹಣ ದಾನ ಮಾಡಿದ್ದನ್ನು ಹೇಳುತ್ತದೆ. ಕ್ರಿ.ಶ.೧೧೭೧ರ ಶಾಸನವು ಕುಮಾರ ಮಲ್ಲಯ್ಯನು ಕಲಿದೇವರಿಗೆ ದಾನ ಕೊಟ್ಟದ್ದು ಹೇಳುತ್ತದೆ. ೧೩ನೇ ಶತಮಾನದ ಶಾಸನವು ಮಾಂಟಲಿಕ ಮಾದಿಗನನ್ನು ಉಲ್ಲೇಖಿಸುತ್ತದೆ. ಈ ದೇವಸ್ಥಾನ ವಾಸ್ತುಶಿಲ್ಪದ ಎಲ್ಲ ಅಂಗಗಳನ್ನು ಮುಖಮಂಟಪ, ಸಭಾಮಂಟಪ, ಅಂತರಾಳ, ಗರ್ಭಗೃಹ ಒಳಗೊಂಡು, ಬಾಗಿಲವಾಡ ಜಾಲಂಧ್ರಗಳು, ಅಲಂಕರಿಕ ಕಂಬಗಳು, ಕಾರ್ತಿಕೇಯ, ಸಪ್ತಮಾತ್ರಿಕೆಯರ ಶಿಲ್ಪಗಳು, ಗಣಪತಿ, ಮಹಿಷಮರ್ದಿನಿ, ಕೇಶವನ ಬಿಡಿ ಸುಂದರ ಮೂರ್ತಿಗಳಿವೆ. ಈ ದೇವಸ್ಥಾನವು ಅತ್ಯಂತ ಸುಂದರ ದೇವಸ್ಥಾನವಾಗಿದ್ದು ಕಲಘಟಗಿ ತಾಲೂಕಿಗೆ ಶಿಲ್ಪ ಸೌಂದರ್ಯವನ್ನು ಎಳೆದುತಂದಿದೆ.
ಮಿಶ್ರಕೋಟಿ: ಕಲಘಟಗಿಯಿಂದ ಈಶಾನ್ಯಕ್ಕೆ ೧೦ ಕಿ.ಮೀ. ದೂರ ಇದೆ. ಇಲ್ಲಿ ೩ ಶಾಸನಗಳು, ಒಂದು ರಾಮಲಿಂಗೇಶ್ವರ ದೇವಸ್ಥಾನ, ಒಂದು ಸುತ್ತುವರದಿ ಮಣ್ಣಿನ ಕೋಟೆ (ಒuಜ ಜಿoಡಿಣ) ಬುರುಜಗಳೊಂದಿಗೆ (ಃಚಿsioಟಿs) ದೊರೆಯುತ್ತವೆ. ಕೋಟೆಗೆ ನಿರ್ದಿಷ್ಟ ಹಂತಗಳಲ್ಲಿ ಈ ಬುರುಜುಗಳಿವೆ ಹನ್ನೆರಡು. ಪ್ರಾಚೀನ ಮೃದ್ ಕೋಟೆಗಳು ಬನವಾಸಿ ಕದಂಬರ ಕಾಲದಲ್ಲಿ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಭಾಗಶಃ ಧಾರವಾಡ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಸ್ಥಳ ದುರ್ಗ, ವನದುರ್ಗ, ಗಿರಿದುರ್ಗ ಹಾಗೂ ಜಲದುರ್ಗಗಳು, ಒಂದು ಪ್ರಕಾರವಾದ ಸ್ಥಳದುರ್ಗ (ಉಡಿouಟಿಜ ಜಿoಡಿಣ) ಇದಾಗಿದೆ. ಇಲ್ಲಿ ಕ್ರಿ.ಶ.೧೧೨೬, ಕ್ರಿ.ಶ.೧೧೫೬ ಹಾಗೂ ಕ್ರಿ.ಶ.೧೧೫೮ರ ಶಾಸನಗಳು ದೊರೆಯುತ್ತವೆ. ವಿಶೇಷವಾಗಿ ಕ್ರಿ.ಶ.೧೧೫೮ರ ಶಾಸನವು ಗೋವಾ ಕದಂಬರ ‘ಪೆರ್ಮಾಡಿದೇವನ ಕೊಡುಗೆಯನ್ನು ವಿವರಿಸುತ್ತದೆ. ಗೋವೆಯರು ಕನಾಟಕದ ಒಂದು ಭಾಗವಾಗಿತ್ತೆಂದು ಈ ಶಾಸನವು ಸತ್ಯಸ್ಯ ಸತ್ಯ ಹೇಳುತ್ತದೆ.
ಸಂಗಮೇಶ್ವರ: ಇದು ಕಲಘಟಗಿಯಿಂದ ಪಶ್ಚಿಮಕ್ಕೆ ೧೦ ಕಿ.ಮೀ. ದೂರದಲ್ಲಿದೆ. ಇಲ್ಲಿ ಐದು ಶಾಸನಗಳು ದೊರೆತಿವೆ. ಊರ ಹೊರಗೆ ಇರುವ ಕಲ್ಮೇಶ್ವರ ಗುಡಿ (ಶಾಸನೋಕ್ತ ಹಮ್ಮೇಶ್ವರ)ಯ ತೊರೆಯ ಮೇಲೆ ಮೂರು ಇವೆ. ಗೋವೆಯ ಕದಂಬ ಒಂದನೆಯ ಜಯಕೇಶಿಯ (ಕ್ರಿ.ಶ.೧೦೬೮ರ ಶಾಸನ) ಚಟ್ಟಗೊಡಬನೆಂಬುವನು ಈ ದೇವಾಲಯಕ್ಕೆ ಭೂದಾಣ ಮಾಡಿದ ವಿವರವಿದೆ. ಕ್ರಿ.ಶ.೧೦೮೨ರ ಶಾಸನವೊಂದು ಅಲ್ಲಿಯ ಶಿವಾಲಯಕ್ಕೆ ದಾನ ಮಾಡಿದ ನಾಗಣ್ಣನನ್ನು ಸ್ಮರಿಸುತ್ತದೆ. ೧೦೮೯ರಲ್ಲಿ ವೀರಸ್ಪರ್ಗವನ್ನೇರಿದ ಯೋಧನ ವೀರಗಲ್ಲೊಂದಿದೆ. ಹಲಸಿಗೆ-೧೨೦೦೦ಕ್ಕೆ ಸೇರಿದ್ದ ಈ ಊರಿಗೆ ‘ಸಂಗಮೇಶ್ವರ ಹೆಸರು ಬರಲು ಕಾರಣ ದೊಡ್ಡಹಳ್ಳ ಮತ್ತು ಮಂಗ್ಯಾನಹಳ್ಳಿ ಹಂಪಾಹಳ್ಳ ಹಾಗೂ ಸಂಗಮೇಶ್ವರಗಳ ನಡುವೆ ಕೂಡಿದ್ದು ಅದು ಇಂದಿನ ಸಂಗಮೇಶ್ವರದಿಂದ ಎರಡು ಕಿ.ಮೀ. ದೂರದಲ್ಲಿ ಸಂಗಮವಾಗಿರುವುದರಿಂದ ಈ ಊರಿಗೆ ಆ ಹೆಸರು. ಈ ಕಲ್ಮೇಶ್ವರ ಗುಡಿಯು ದೇವಾಲಯ ಎಲ್ಲ ವಿನ್ಯಾಸದ ಅಂಗಗಳನ್ನು ಹೊಂದಿದ್ದು, ಮಹಿಷಮರ್ದಿನಿ, ಸರಸ್ವತಿ ಭೈರವ, ಸಪ್ತಮಾತ್ರಿಕೆಯರು, ಗಣಪತಿ, ಕಾರ್ತಿಕೇಯ, ಶಿವಪಾರ್ವತಿ, ಅನಂತಪದ್ಮನಾಭ, ಸುಂದರ ಶಿಲ್ಪಗಳಿವೆ. ಶೈವ ಹಾಗೂ ವೈಷ್ಣವ ಭಾವಗಳನ್ನು ಸಂಗಮಿಸುವ ಈ ದೇವಾಲಯವು ಸಂಗಮೇಶ್ವರ ಊರಿಗೆ ಭಾವೈಕ್ಯದ ಹೆಮ್ಮೆ ತಂದಿದೆ.
ಗಂಜೀಗಟ್ಟಿ: ಕಲಘಟಗಿಯಿಂದ ೧೨ ಕಿ.ಮೀ. ದೂರದಲ್ಲಿದ್ದು, ಮಿಶ್ರಕೋಟಿಯ ನೆರೆಯ ಗ್ರಾಮವಾಗಿದೆ. ಊರ ಹೊರಗೆ ಗುಡ್ಡದ ಮೇಲೆ ೧೨ನೇ ಶತಮಾನದ ಶ್ರೀ ನಾಗಲಿಂಗೇಶ್ವರ ಗುಡಿ ಇದೆ. ಪೂರ್ವಾಭಿಮುಖವಾದ ಈ ಗುಡಿಯು ನವರಂಗ, ಅಂತರಾಳ ಹಾಗೂ ಗರ್ಭಗುಡಿ ಹೊಂದಿದ್ದು, ಕದಂಬನಾಗರ ಶಿಖರ ಶೈಲಿಯನ್ನು ಹೊಂದಿದೆ. ನವರಂಗದ ಮುಂಭಾಗ ಹಾಳಾಗಿದೆ, ದೇವಕೋಷ್ಟಗಳಲ್ಲಿ ಗಣಪಡಿ, ಭೈರವ, ಸಪ್ತಮಾತೃಕೆಯರು, ವೀರಭದ್ರರ ಮೂರ್ತಿಗಳಿವೆ.
ಹುಣಸಿಕಟ್ಟೆ: ಕಲಘಟಗಿಯಿಂದ ಆಗ್ನೇಯಕ್ಕೆ ೧೦ ಕಿ.ಮೀ. ದೂರ. ಹಲಸಿಗೆ-೧೨೦೦೦ ಪ್ರಾಂತ್ಯಕ್ಕೆ ಸೇರಿದ, ಮಾವಳ್ಳಿ-೫೦೦ ನಾಡಿನ, ಹುಲಿಗೋಡ ೧೨ಕ್ಕೆ ಸೇರಿದ ಗ್ರಾಮವಾಗಿದೆ ಈ ಹುಣಸಿಕಟ್ಟಿ, ಇಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಕಲ್ಯಾಣ ಚಾಲುಕ್ಯರ ಮುಮ್ಮಡಿ ಸೋಮೇಶ್ವರನಿಗೆ ಸಂಬಂಧಿಸಿದೆ (ಕ್ರಿ.ಶ.೧೧೩೦-೩೧ ಎಂದು ಇಲ್ಲಿಯ ಶಾಸನವೊಂದು ತಿಳಿಸುತ್ತದೆ. ಗೋವೆಯ ಕದಂಬ ಪೆರ್ಮಾಡಿದೇವನ ಕಾಲದ ಕ್ರಿ.ಶ.೧೧೪೨ರ ಶಾಸನವು ಹುಳಿಗೋಡ ಮುದ್ದಗಾವುಂಡನು ಹೋಬೇಶ್ವರ ದೇವರಿಗೆ ಭೂದಾನ ಕೊಟ್ಟ ವಿಷಯ ತಿಳಿಸುತ್ತದೆ. ಅಂತರಾಳದಲ್ಲಿ ನಂದಿ ಹಾಗೂ ಕೇಶವನ ಶಿಲ್ಪಗಳಿವೆ. ಚತುರ್ಭುಜ ಈ ಕೇಶವನ ವಿಗ್ರಹ ೨.೫ ಅಡಿ ಎತ್ತರವಾಗಿದ್ದು ಬಹಳ ಸುಂದರವಾಗಿದೆ. ಇವುಗಳಲ್ಲದೆ ಹನುಮಂತ, ದ್ಯಾಮವ್ವ, ಈಶ್ವರ, ಬಸವಣ್ಣರ ಗುಡಿಗಳೂ, ಮಸೀದಿ ಹಾಗೂ ದರ್ಗಾಗಳೂ ಇವೆ. ಇದು ಕೂಡ ಶೈವ ವೈಷ್ಣವ, ಹಿಂದು-ಮುಸ್ಲಿಂ, ಭಾವೈಕ್ಯದ ತಾಣವಾಗಿದೆ.
ಈ ತರಹದ ಇನ್ನೂ ಹತ್ತು ಹಲವಾರು ಐತಿಹಾಸಿಕ ತಾಣಗಳು ಕಲಘಟಗಿ ತಾಲೂಕಿನಲ್ಲಿವೆ. ಆದರೆ ಅವು ಗೌಣವಾಗಿದೆ. ಅಂತಹ ಉಪಸಂಹಾರದಲ್ಲಿ ಹೇಳುವುದಾದರೆ, ಕಲಘಟಗಿಯು ತನ್ನ ಬದುಕಿನುದ್ದಕ್ಕೂ ತನ್ನದೇ ಆದ, ಏರು-ಪೇರುಗಳಿಲ್ಲದ ಪ್ರಶಾಂತ ಹಾಗೂ ನಿವಾಂತ ಐತಿಹಾಸಿಕ ಜೀವನವನ್ನು ಬಾಳಿದೆ. ಕದಂಬರ ನಾಡಾಗಿ, ಕದಂಬ ವಾಸ್ತುಶೈಲಿಯ ದೇವಾಲಯವನ್ನು ಶಿಲ್ಪಗಳನ್ನು ಹೊಂದಿ, ಅಲ್ಲಲ್ಲಿ ಕೆಲ ಮೃದ್‌ದುರ್ಗಗಳನ್ನು ಕಟ್ಟಿಸಿಕೊಂಡು, ಶಾಸನಗಳ ಹೇಳಿಕೆಗಳನ್ನು ಮಾಡಿಸಿ, ತನ್ನದೇ ಆದ ಪ್ರಾದೇಶಿಕ ಇತಿಹಾಸ ಕಟ್ಟಿಕೊಂಡಿದೆ. ಪಕ್ಕದ ನಾಡಾದ ಧಾರವಾಡದ ಸಾಹಿತ್ಯಿಕ ಸಿರಿಯನ್ನು ಹೊಂದಿದ್ದರೂ, ಶಿಲ್ಪಕಲೆಯ ದೃಷ್ಟಿಯಿಂದ ತನ್ನೊಡಲಿನಲ್ಲಿ ಸಾವಿರ ವರುಷದ ಶಿಲ್ಪದ ಸಂಪುಷ್ಟ ತಲ್ಪ ಹೊಂದಿದೆ ಎಂದು ಅಭಿಮಾನದಿಂದ ಹೇಳಬಹುದು.




1 comment:

  1. Please give your phone number. please update kalghatagi details kalaghtagi rice

    ReplyDelete