ಆದಪ್ಪ
ಪಾಸೋಡಿ
ಆಂಗ್ಲಭಾಷಾ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ,
ಅಗರ, ಬೆಂಗಳೂರು-೩೪.
ಬೆಂಗಳೂರು ಕೋಲಾರ ರಾಷ್ಟ್ರೀಯ ಹೆದ್ದಾರಿ (ಎಚ್.ಎಚ್.-೪) ಯಲ್ಲಿ ನರಸಾಪುರ
ಗ್ರಾಮದಿಂದ ಪಶ್ಚಿಮಕ್ಕೆ ಒಂದು ಕಿಲೋಮೀಟರ್ ದೂರದಲ್ಲಿರುವ ಗ್ರಾಮ ಬೆಳ್ಳೂರು. ಹಿಂದೆ ಮಾಲೂರು
ತಾಲ್ಲೂಕಿಗೆ ಸೇರಿದ್ದ ಬೆಳ್ಳೂರು ಈಗ ಕೋಲಾರ ತಾಲ್ಲೂಕಿಗೊಳಪಟ್ಟಿದೆ. ಕೋಲಾರದಿಂದ ೧೪ ಕಿ.ಮೀ.
ದೂರದಲ್ಲಿದೆ.
ಬೆಳ್ಳೂರು
ಗ್ರಾಮದ ಊರ ಬಾಗಿಲಿನ ಬಳಿಯ ಶಾಸನವು ೮ನೇ ಶತಮಾನದ ಶ್ರೀಪುರುಷನ ಕಾಲದ್ದಾಗಿದ್ದು ಒಬ್ಬ ದಂಡನಾಯಕ
ಹಾಗೂ ಕೋಳೂರು ಗ್ರಾಮವನ್ನು ಉಲ್ಲೇಖಿಸುತ್ತದೆ. ಕೆರೆಯ ತೂಬಿನ ಬಳಿಯಿರುವ ವೀರಗಲ್ಲು ಶಾಸನವು
ಸೆಬ್ಬೆನಾಡಿನ ೩೨ ಮಹಾಜನರು ಹಾಗೂ ಆಳ ಎಂಬ ಸೇವಕನನ್ನು ಪ್ರಶಂಸಿಸುತ್ತದೆ.೧ ಈ ಶಾಸನಗಳು ಬೆಳ್ಳೂರು ಗ್ರಾಮ ಪರಿಧಿಯಲ್ಲಿ ಹಾಕಿಸಲ್ಪಟ್ಟ ಕಾರಣದಿಂದ ಕ್ರಿ.ಶ.೮ನೇ
ಶತಮಾನದಲ್ಲಿ ಗಂಗದೊರೆ ಶ್ರೀಪುರುಷನ ಕಾಲಕ್ಕಾಗಲೇ ಬೆಳ್ಳೂರು ಗ್ರಾಮ ಪ್ರಸಿದ್ಧಿ ಪಡೆದಿತ್ತೆಂದು
ಹೇಳಬಹುದು. ಇದು ಹೊಯ್ಸಳರ ಕಾಲದಲ್ಲಿ ಅಗ್ರಹಾರ ಪಟ್ಟಣವಾಗಿತ್ತು. ಶ್ರೀವೈಷ್ಣವ ಪಂಡಿತರ
ನೆಲೆವೀಡಾಗಿದ್ದ ಬೆಳ್ಳೂರು ಗ್ರಾಮದಲ್ಲಿ ೧೪, ೧೫ನೇ ಶತಮಾನದಲ್ಲಿ ಆಗಿಹೋದ ಶ್ರೀವೈಷ್ಣವ ಗುರು
ಮನ್ವಾಳ ಮಹಾಮುನಿಯ ಶಿಷ್ಯ ಪ್ರತಿವಾದಿ ಭಯಂಕರ ಅಣ್ಣನವರ ವಂಶಜರು ಇರುವರೆಂದು ಹೇಳಲಾಗುತ್ತದೆ.೨ ಕೈವಾರ ನಾಡಿನ ನಿಗಿರಿಲಿ ಚೋಳಮಂಡಲದ ವ್ಯಾಪ್ತಿಗೊಳಪಟ್ಟ ಮಹತ್ವದ ಐತಿಹಾಸಿಕ ಕೇಂದ್ರವೂ
ಇದಾಗಿತ್ತು ಎಂದು ಶಾಸನಗಳಿಂದ ತಿಳಿದು ಬರುತ್ತದೆ.೩
ಶಾಸನಗಳ
ಆಧಾರದಲ್ಲಿ ಕಾಲಾನುಕ್ರಮವಾಗಿ ಬೆಳ್ಳೂರು ಗ್ರಾಮನಾಮವು ಈ ಕೆಳಕಂಡಂತೆ ಉಲ್ಲೇಖವಾಗಿರುವುದನ್ನು
ಕಾಣುತ್ತೇವೆ.
ವೆಲ್ಲಿಯೂರ > ಬೆಳ್ಳಿಯೂರ > ಬೆಳ್ಳೂರ ; ‘ವ’ ಕಾರಕ್ಕೆ ‘ಬ’ಕಾರ, ‘ಲ’ ಅಕ್ಷರಕ್ಕೆ ಬದಲಾಗಿ ‘ಳ’ ಅಕ್ಷರ ಆಗಮವಾಗಿರುವುದನ್ನು, ಬಿಟ್ಟರೆ
ಸುಮಾರು ಸಾವಿರ ವರ್ಷಗಳ ಅವಧಿಗೂ ಊರಿನ ಹೆಸರಿನಲ್ಲಿ ಹೆಚ್ಚಿನ ಬದಲಾವಣೆ ಗಳಾಗಿರುವುದಿಲ್ಲ.
ಪ್ರಸಕ್ತ ಬೆಳ್ಳೂರು ಗ್ರಾಮವು ಪಂಚಾಯಿತಿ ಕೇಂದ್ರ ಸ್ಥಾನವಾಗಿದ್ದು, ಸುತ್ತಲಿನ
ಲಕ್ಷ್ಮೀಸಾಗರ, ರಾಮಸಂದ್ರ, ಮಲ್ಲಸಂದ್ರ,
ಜೋಡಿಕೃಷ್ಣಾಪುರ, ಅಪ್ಪಸಂದ್ರ, ಕೆ.ಬಿ. ಹೊಸಹಳ್ಳಿ, ಕರಡುಬಂಡೆ, ಉದಪನಹಳ್ಳಿ
ಹಾಗೂ ಭೈರಸಂದ್ರ ಗ್ರಾಮಗಳು ಇದರ ವ್ಯಾಪ್ತಿಗೊಳಪಡುತ್ತವೆ.
ಬೆಳ್ಳೂರು ಪರಿಸರದ ಪ್ರಾಚ್ಯಾವಶೇಷಗಳು
ವೆಂಕಟರಮಣಪ್ಪನ
ಹೊಲದಲ್ಲಿರುವ ಬೃಹತ್ ಶಿಲಾಗೋರಿ
ಬೆಳ್ಳೂರು
ಗ್ರಾಮದ ವಾಯವ್ಯ ದಿಕ್ಕಿನಲ್ಲಿ ಮುನಿತಿಮ್ಮಪ್ಪನವರ ವೆಂಕಟರಮಣಪ್ಪನ ಹೊಲದಲ್ಲಿ ಬೃಹತ್
ಶಿಲಾಗೋರಿಯೊಂದು ಪತ್ತೆಯಾಗಿದೆ. ಸ್ಥಳೀಯರು ಇದನ್ನು ‘ಮೊಟಪು’ ಎಂದು
ಹೇಳುತ್ತಾರೆ. ‘ಮಂಟಪ’ ಪದದ ಅಪಭ್ರಂಶ ಇದಾಗಿರಬಹುದು. ಭೂಮಿಯ
ಮಟ್ಟದಿಂದ ಮೂರು ಅಡಿ ಎತ್ತರವಿರುವ ಆರು ಮೋಟುಗಲ್ಲುಗಳನ್ನು ನೆಟ್ಟು, ಅವುಗಳ
ಮೇಲೆ ಒಂದು ಬೃಹತ್ ಕಲ್ಲುಚಪ್ಪಡಿಯನ್ನು ಹೊದಿಸಲಾಗಿದೆ. ನೆಟ್ಟಿರುವ ಮೂರು ಕಲ್ಲುಗಳು ಸದ್ಯ
ಉರುಳಿಬಿದ್ದ ಸ್ಥಿತಿಯಲ್ಲಿದ್ದು, ಉಳಿದ ಮೂರು ಕಲ್ಲುಗಳ ಮೇಲೆ
ಮುಚ್ಚಳಕಲ್ಲು ನಿಂತುಕೊಂಡಿದೆ. ಈ ಹೊದಿಕೆಕಲ್ಲು ಅರ್ಧ ಅಡಿ ಎರಡು ಇಂಚುಗಳಷ್ಟು ದಪ್ಪ, ಹನ್ನೊಂದು ಅಡಿ ಉದ್ದ ಹಾಗೂ ಐದೂವರೆ ಅಡಿ ಅಗಲವಾಗಿರುತ್ತದೆ. ಇದರ ಅಗಲ ಮಧ್ಯಭಾಗದಲ್ಲಿ
ಹೆಚ್ಚಿದ್ದು, ಎರಡೂ ಬದಿಗಳಲ್ಲಿ ಕಡಿಮೆಯಾಗುತ್ತ ಹೋಗುತ್ತದೆ. ಬೃಹತ್
ಶಿಲಾಗೋರಿಗೆ ಬಳಸಲಾದ ಎಲ್ಲ ಕಲ್ಲುಚಪ್ಪಡಿಗಳು ನೈಸರ್ಗಿಕವಾಗಿ ಎದ್ದಿರುವ ಪದರುಗಳಾಗಿದ್ದು,
ಇವುಗಳ ದಪ್ಪ-ಉದ್ದಗಲಗಳಲ್ಲಿ ವ್ಯತ್ಯಾಸ ಕಾಣುತ್ತದೆ. ಶಿಲಾಗೋರಿಯು
ದಕ್ಷಿಣೋತ್ತರ ನಿರ್ಮಿತಿಯಾಗಿದ್ದು, ಹತ್ತಿರದಲ್ಲೇ ನೈಋತ್ಯ ಮತ್ತು
ವಾಯವ್ಯ ದಿಕ್ಕುಗಳಲ್ಲಿ ವಿಶಾಲವಾದ ನೆಲಬಂಡೆ ಶ್ರೇಣಿ ಹಾಗೂ ಗೋರಿಗಳ ನಿರ್ಮಾಣಕ್ಕೆ ಅಗತ್ಯವಾದ
ಕಲ್ಲುಚಪ್ಪಡಿ ಹಾಗೂ ಗುಂಡುಗಲ್ಲುಗಳ ಬೆಟ್ಟದ ಸಾಲುಗಳು, ಕಣಿವೆ
ಪ್ರದೇಶಗಳಿವೆ. ಬೃಹತ್ ಗಾತ್ರದ ಈ ಶಿಲಾಗೋರಿಯು ಸಮುದಾಯ ಅಥವಾ ಬುಡಕಟ್ಟಿನ ಯಜಮಾನ
ವ್ಯಕ್ತಿಯದಾಗಿರುತ್ತದೆ. ಇದರ ಸುತ್ತಮುತ್ತಲು ಸಮೀಪದಲ್ಲಿ ಬೇರೆ ಶಿಲಾಗೋರಿಗಳಿರುವುದಿಲ್ಲ.
ಶಿಲಾಗೋರಿಯ ಪೂರ್ವಕ್ಕೆ ಮತ್ತು ದಕ್ಷಿಣಕ್ಕೆ ಸಾಗುವಳಿ ಮಾಡುತ್ತಿರುವ ಕೃಷಿ ಭೂಮಿಯಿರುತ್ತದೆ.
ಪಶ್ಚಿಮದಲ್ಲಿ ಜಲ ಸಂಪನ್ಮೂಲ ಒದಗಿಸುವ ನೀರಿನ ಕೊಳವಿದೆ. ಬೃಹತ್ ಗಾತ್ರದ ಕಲ್ಲುಚಪ್ಪಡಿಗಳನ್ನು
ಸಮಾಧಿಗಾಗಿ ಬಳಸಿರುವುರಿಂದ ಇದೊಂದು ಬೃಹತ್ ಶಿಲಾಯುಗ ಸಂಸ್ಕೃತಿಯ ಸಮಾಧಿ ನೆಲೆಯೆನ್ನಬಹುದು;
ಇದು ಕೋಲಾರ ತಾಲ್ಲೂಕಿನ ಅರಾಭಿ ಕೊತ್ತನೂರಿನ ಬೃಹತ್ ಶಿಲಾಗೋರಿಯಷ್ಟು
ದೊಡ್ಡದಾಗಿಲ್ಲ ವಾದರೂ, ಅನುಸರಿಸಿದ ರಚನಾ ವಿನ್ಯಾಸ ಎರಡೂ ಕಡೆ ಒಂದೇ
ಆಗಿರುತ್ತದೆ.
ಸೂರಪ್ಪನ ಹೊಲದಲ್ಲಿರುವ ಕಲ್ಮನೆ
ಬೆಳ್ಳೂರು
ಗ್ರಾಮದ ಉತ್ತರ ದಿಕ್ಕಿನಲ್ಲಿ ಕೆರೆಗೆ ಹೋಗುವ ಮಾರ್ಗದಲ್ಲಿ ಸಾಗಿ, ಬಲಕ್ಕೆ
ತಿರುಗಿದರೆ ಸೂರಪ್ಪನ ಹೊಲ ಸಿಗುತ್ತದೆ. ಇಲ್ಲಿ ನೆಲಮಟ್ಟದಿಂದ ಮೂರು ಅಡಿ ಎತ್ತರದ ಹನ್ನೆರಡು
ಕಲ್ಲುಚಪ್ಪಡಿಗಳನ್ನು ನೆಟ್ಟು ಅವುಗಳ ಮೇಲೆ ೮’ ೧೦’ x ೧೦’ ವಿಸ್ತೀರ್ಣವುಳ್ಳ
ನಾಲ್ಕೂವರೆ ಇಂಚುಗಳ ದಪ್ಪನೆಯ ಕಲ್ಲು ಚಪ್ಪಡಿ ಹೊದಿಸಲಾಗಿದೆ. ಮುಚ್ಚಳ ಕಲ್ಲಿನ ಎರಡು ಮೂಲೆಗಳು
ಮುರಿದು ಹೋಗಿರುತ್ತವೆ. ಕಲ್ಮನೆಗಳಲ್ಲಿ ಸಾಮಾನ್ಯವಾಗಿ ಯಾವುದಾದರೊಂದು ಗೋಡೆಕಲ್ಲು ಅಥವಾ ಮುಚ್ಚಳ
ಕಲ್ಲಿನಲ್ಲಿ ವಿವಿಧ ಆಕಾರದ ತೂತುಗಳಿರುತ್ತವೆ೪ ಎಂಬ
ವಿಷಯಕ್ಕೆ ಪೂರಕವಾಗಿರುವಂತೆ ಮುಚ್ಚಳ ಕಲ್ಲಿನ ಪೂರ್ವದಂಚಿನಲ್ಲಿ ಒಂದೂವರೆ ಅಡಿ ಬಿಟ್ಟು
ರಂಧ್ರವಿರುತ್ತದೆ. ಹೊದಿಕೆ ಕಲ್ಲಿನ (ಅಚಿಠಿ Sಣoಟಿe) ಮೇಲೆ ಬಲ ಅಂಚಿನ
ಗುಂಟ ಏಳು, ಮುಂಭಾಗದಲ್ಲಿ ಎಂಟು ಚಿಕ್ಕ ಚಿಕ್ಕ ಕುಳಿಗಳಿರುತ್ತವೆ. ಈ ಕಲ್ಮನೆಯ
ಹಿಂಭಾಗದಲ್ಲಿ ಮತ್ತೆ ಮೂರು ಕಲ್ಲುಚಪ್ಪಡಿ ನಿಲ್ಲಿಸಿ ಮುಂದಿನಕ್ಕೆ ಸೇರ್ಪಡೆ ಮಾಡಲಾಗಿದೆ. ಇದರ
ಮೇಲೆ ಇರುವ ಹೊದಿಕೆ ಚಪ್ಪಡಿಯ ೭’ x ೬’ ವಿಸ್ತೀರ್ಣವುಳ್ಳದ್ದಾಗಿದೆ. ಇದರ ಮೇಲೂ ಎಡ-ಬಲ ಮೂಲೆಗಳಲ್ಲಿ
ಕುಳಿಗಳಿರುತ್ತವೆ. ಉಪಕರಣಗಳ ಮೊನೆಗಳನ್ನು ಮಸೆದಿರುವುದರಿಂದ ಈ ಬಗೆಯ ಕುಳಿಗಳಾಗಿರುವ ಸಾಧ್ಯತೆ
ಇದೆ. ಕಲ್ಮನೆ ನಿರ್ಮಾಣದ ನಂತರದಲ್ಲಿ ಕುಳಿಗಳಾಗಿರಬಹುದು. ದೊಡ್ಡ ಗ್ರಾನೈಟ್ ಬಂಡೆಗಳಿಂದ
ಕತ್ತರಿಸಿ ಎರಡೂ ಮುಖಗಳಲ್ಲಿ ಕಲ್ಲು ಮುಳ್ಳನ್ನು ತೆಗೆದಿರುವ ಚಪ್ಪಡಿಗಳನ್ನು ಈ ಕಲ್ಮನೆಯ
ನಿರ್ಮಾಣಕ್ಕೆ ಬಳಸಲಾಗಿದೆ.
ಕೋಟೆಪ್ಪನ ಹೊಲದಲ್ಲಿರುವ ಕಲ್ಮನೆ
ಬೆಳ್ಳೂರಿನ
ಕೆರೆಯಂಗಳದ ಉತ್ತರದಂಚಿನಲ್ಲಿ ಕೋಟೆಪ್ಪನ ಹೊಲವಿದೆ. ಇಲ್ಲಿಯೂ ‘ಮೊಟಪು’ ಎನ್ನಲಾಗುವ ಆಯತಾಕಾರದ ಕಲ್ಮನೆಯಿರುತ್ತದೆ. ಇದೂ ಸಹ ಪೂರ್ವಾಭಿಮುಖವಾಗಿದ್ದು, ಮುಂಭಾಗದಲ್ಲಿ
ಎರಡು ಕಲ್ಲುಚಪ್ಪಡಿ, ಎಡ-ಬಲಕ್ಕೆ ಎರಡೆರಡು ಗೋಡೆಕಲ್ಲುಗಳು ಹಾಗೂ
ಹಿಂಭಾಗದಲ್ಲಿ ಒಂದು ಗೋಡೆಕಲ್ಲು, ಹೀಗೆ ಒಟ್ಟು ಏಳು ಚಪ್ಪಡಿಕಲ್ಲುಗಳ
ಮೇಲೆ ಎರಡು ಬೃಹತ್ ಗಾತ್ರದ ಮುಚ್ಚಳ ಕಲ್ಲುಗಳನ್ನು ಹೊದಿಸಲಾಗಿದೆ. ಹಿಂಭಾಗದ ಮುಚ್ಚಳ ಕಲ್ಲು
ಕೆಳಗೆ ಬಿದ್ದಿದ್ದು, ಅರ್ಧ ಅಡಿ ದಪ್ಪವಿರುತ್ತದೆ. ಬಲಕ್ಕೆ
ನಿಲ್ಲಿಸಿರುವ ಮೊದಲನೇ ಗೋಡೆ ಕಲ್ಲಿನ ಒಳಭಾಗದಲ್ಲಿ ಆರು, ಎರಡನೇ ಗೋಡೆ
ಕಲ್ಲಿನಲ್ಲಿ ಎರಡು ಹಾಗೂ ಮುಚ್ಚಳಕಲ್ಲಿನ ಮೇಲೆ ಎಂಟು ಕುಳಿಗಳಿರುತ್ತವೆ. ಕಲ್ಮನೆಯು ಪೂರ್ವ
ಪಶ್ಚಿಮದಲ್ಲಿ ಹದಿನಾಲ್ಕು ಅಡಿ ಉದ್ದ, ಮುಂಭಾಗದಲ್ಲಿ ಎಂಟು ಅಡಿ,
ಹಿಂಭಾಗದಲ್ಲಿ ಆರು ಅಡಿ ಅಗಲ ಹೊಂದಿದೆ. ನೆಲಮಟ್ಟದಿಂದ ಮೇಲೆ ಇರುವ
ಎತ್ತರಕ್ಕಿಂತಲೂ ನೆಲದೊಳಗೆ ನೆಟ್ಟಿರುವ ಭಾಗವೇ ಹೆಚ್ಚು. ನಿಧಿಶೋಧಕರು ಕುತೂಹಲದಿಂದ ನೆಲ
ಅಗೆದಿರುವ ಪ್ರಯತ್ನದಿಂದಾಗಿ ಮುಚ್ಚಳಕಲ್ಲು ಕೆಳಗೆ ಬಿದ್ದಿರುತ್ತದೆ. ಹಾಳಾಗಿರುವ ಕಲ್ಮನೆಗಳ
ರಚನಾ ವಿನ್ಯಾಸವನ್ನು ಇಲ್ಲಿ ತಿಳಿಯಲು ಸಾಧ್ಯವಾಗುತ್ತದೆ. ಹಾಳಾಗಿರುವ ಈ ಕಲ್ಮನೆಯ ತಳಭಾಗ ಹಾಗೂ
ದಫನ ಸಾಮಗ್ರಿಗಳ ಬಗೆಗಿನ ಮಾಹಿತಿಗಾಗಿ ಹೆಚ್ಚಿನ ಉತ್ಖನನದ ಅಗತ್ಯ ಕಾಣುತ್ತದೆ.
ಬನದ ಭೈರಪ್ಪನ ವೀರಗಲ್ಲು
ಬೆಳ್ಳೂರು
ಕೆರೆಯ ದಕ್ಷಿಣದ ದಂಡೆಯ ಮೇಲೆ ಬನದ ಭೈರಪ್ಪ ಎಂದು ಕರೆಯಲಾಗುವ ವೀರಗಲ್ಲು ಇರುತ್ತದೆ. ಆರು ಅಡಿ
ಉದ್ದ, ಮೂರು ಅಡಿ ಅಗಲವಿರುವ ಕಲ್ಲು ಚಪ್ಪಡಿಯನ್ನು ಬಳಸಿದ್ದು, ವೀರಗಲ್ಲಿನ ೨’ ೪’’ ರಷ್ಟು ಭಾಗವನ್ನು ನೆಲದಲ್ಲಿ ನೆಡಲಾದ ಗುರುತು ಇದೆ. ವೀರಗಲ್ಲಿನ ಮೇಲಿನ ನಾಲ್ಕು ಅಡಿ
ಭಾಗದಲ್ಲಿ ವೀರನನ್ನು ಕಂಡರಿಸಲಾಗಿದೆ. ವೀರನ ಶಿಲ್ಪ ತ್ರಿಭಂಗಿಯಲ್ಲಿದ್ದು, ಚಾಚಿದ
ಎಡಗೈಯಲ್ಲಿ ಬಿಲ್ಲು, ಬಲಗೈಯಲ್ಲಿ ಬಾಕು ಹಿಡಿದಿರುತ್ತಾನೆ. ವೀರನ
ಟೊಂಕದ ಭಾಗದಲ್ಲಿ ಶತ್ರು ಪಾಳೆಯದ ಬಾಣ ತಾಕಿದೆ. ಸೊಂಟಕ್ಕೆ ಬಟ್ಟೆ, ಕೊರಳಲ್ಲಿ
ಕಂಠಹಾರ, ತಲೆ ಮೇಲೆ ಮುಡಿ ಕಟ್ಟಲಾಗಿದೆ. ವೀರಗಲ್ಲಿನ ಮೇಲ್ಭಾಗದಲ್ಲಿ
ಕನ್ಯೆಯರಿಬ್ಬರು ವೀರನನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುವುದನ್ನು ಮತ್ತು ವೀರನ ಗೌರವಕ್ಕಾಗಿ
ಚೌರಾ ಬೀಸುವುದನ್ನು ತೋರಿಸಲಾಗಿದೆ.
ಬೆಳ್ಳೂರ ಕೆರೆಯ ಉತ್ತರ ದಿಕ್ಕಿನಲ್ಲಿರುವ ಶಿಲಾವೃತ್ತಗಳು
ಕೋಟೆಪ್ಪನ
ಹೊಲದಲ್ಲಿರುವ ಕಲ್ಮನೆಯಿಂದ ಉತ್ತರಕ್ಕೆ ಅರ್ಧ ಕಿ.ಮೀ. ದೂರ ಸಾಗಿದರೆ ಕುರುಚಲು ಪೊದೆ ಬೆಳೆದಿರುವ
ವಿಶಾಲವಾದ ಜಮೀನಿನಲ್ಲಿ ಹತ್ತು ಶಿಲಾವೃತ್ತ (Sಣoಟಿe ಅiಡಿಛಿಟes) ಗಳಿರುವ ನೆಲೆ ಇದೆ. ಅವುಗಳಲ್ಲಿ ನಾಲ್ಕು ಮಾತ್ರ ಗುರುತಿಸುವ
ಸ್ಥಿತಿಯಲ್ಲಿದ್ದು, ಉಳಿದವುಗಳು ಹಾಳಾಗಿರುತ್ತವೆ. ಸುಸ್ಥಿತಿಯಲ್ಲಿರುವ ಶಿಲಾವೃತ್ತಗಳು ೩೫
ಅಡಿಗಳಷ್ಟು ವ್ಯಾಸವನ್ನು ಹೊಂದಿರುತ್ತವೆ. ಒಂದು ಶಿಲಾವೃತ್ತದಿಂದ ಇನ್ನೊಂದು ಶಿಲಾವೃತ್ತಕ್ಕೆ ೫೦
ಅಡಿಗಳಷ್ಟು ಅಂತರವಿದೆ. ಶಿಲಾವೃತ್ತಗಳಿಗೆ ಸ್ಥಳೀಯವಾಗಿ ಲಭ್ಯವಿರುವ ಸ್ವಾಭಾವಿಕ, ಅನಿರ್ದಿಷ್ಟ ಆಕಾರದ ಮೋಟು ಕಲ್ಲುಗಳನ್ನು ಬಳಸಲಾಗಿರುವುದರಿಂದ ಇವುಗಳನ್ನು ಗುಂಡುಗಲ್ಲು
ವೃತ್ತಗಳೆಂದು ಕರೆಯಬಹುದು. ನೆಲಮಟ್ಟದಿಂದ ಮೇಲ್ಭಾಗದಲ್ಲಿ ಪ್ರತಿಯೊಂದು ಕಲ್ಲುಗಳು ಒಂದೂವರೆಯಿಂದ
ಎರಡು ಅಡಿ ಎತ್ತರವಾಗಿರುತ್ತವೆ. ಶಿಲಾವೃತ್ತಗಳ ಒಳಗೆ ಹಳದಿ-ಕೆಂಪು ಬಣ್ಣದ ಹೂ ಬಿಡುವ ಕುರುಚಲು
ಪೊದೆ ಬೆಳೆದಿದ್ದು, ಶಿಲಾವೃತ್ತಗಳ ಪರಿಧಿ ಅಥವಾ ವ್ಯಾಸವನ್ನು
ಗುರುತಿಸುವುದು ಕಷ್ಟವೆನಿಸುತ್ತದೆ. ಕೆರೆಯಿಂದ ಮರಳು ಸಾಗಿಸುವ ವಾಹನಗಳು ಈ ಶಿಲಾವೃತ್ತಗಳಿರುವ
ಜಮೀನಿನ ಆಗ್ನೇಯ ದಿಕ್ಕಿನಿಂದ ವಾಯವ್ಯದ ಮೂಲೆಗೆ ಹಾಯ್ದು ಹೋಗುವುದರಿಂದ ಬಹುತೇಕ ಏಳೆಂಟು
ಶಿಲಾವೃತ್ತಗಳ ಕಲ್ಲುಗಳು ಚಲ್ಲಾಪಿಲ್ಲಿಯಾಗಿ ಹರಡಿ, ವೃತ್ತ
ವಿನ್ಯಾಸಗಳು ಕಾಣುತ್ತಿಲ್ಲ.
ದಿಣ್ಣೆಹೊಸಹಳ್ಳಿಯ ಸರ್ವೇ ನಂ. ೫೬ರಲ್ಲಿರುವ ಶಿಲಾಗೋರಿಗಳು
ಕೋಲಾರ
ತಾಲ್ಲೂಕಿನ ದಿಣ್ಣೆಹೊಸಹಳ್ಳಿಯಲ್ಲಿ ಬೃಹತ್ ಶಿಲಾಯುಗ ಸಂಸ್ಕೃತಿಯ ಗೋರಿ ನೆಲೆಯಿದ್ದು, ಶಿಲಾವೃತ್ತಗಳು
ಕಂಡು ಬಂದಿವೆಯೆಂಬ ಮಾಹಿತಿಯು ೧೯೮೧-೮೨ರ ಇಂಡಿಯನ್ ಆರ್ಕಿಯಾಲಾಜಿಕಲ್ ರಿಪೋರ್ಟ್‌ನಲ್ಲಿ
ವರದಿಯಾಗಿರುತ್ತದೆ. ಬೆಳ್ಳೂರು, ಲಕ್ಷ್ಮೀಸಾಗರ ಮತ್ತು ದಿಣ್ಣೆ
ಹೊಸಹಳ್ಳಿ ಭಾಗದಲ್ಲಿ ಬಿಳಿ ಗ್ರಾನೈಟ್ ಹೆಚ್ಚಾಗಿ ದೊರಕುವ ಬೆಟ್ಟಶ್ರೇಣಿಗಳಿರುತ್ತವೆ.
ಬಂಡೆಗಳನ್ನು, ಕಲ್ಲುಚಪ್ಪಡಿಗಳನ್ನು ಜಲ್ಲಿ ಮಾಡುವ ಸ್ಟೋನ್ ಕ್ರಶರ್‌ಗಳು
ಸುಮಾರು ಹತ್ತು ಹನ್ನೆರಡು ಕಡೆಗಳಲ್ಲಿ ಸ್ಥಾಪನೆಗೊಂಡು ಕಾರ್ಯ ನಡೆಸುತ್ತಿರುವ ಪ್ರಯುಕ್ತ
ಬೆಳ್ಳೂರು ಪರಿಸರದಲ್ಲಿರುವ ಪ್ರಾಚ್ಯಾವಶೇಷಗಳು ಹಾಳಾಗುತ್ತವೆಯೆಂಬ ಅನಿಸಿಕೆಯಿಂದ ದಿಣ್ಣೆ
ಹೊಸಹಳ್ಳಿ ಶಿಲಾಗೋರಿಗಳ ಮಾಹಿತಿಯನ್ನು ದಾಖಲಿಸುವ ಪ್ರಯತ್ನ ಮಾಡಲಾಗಿದೆ.
ದಿಣ್ಣೆ
ಹೊಸಹಳ್ಳಿಯಿಂದ ದಕ್ಷಿಣಕ್ಕೆ ಅಂದರೆ ಬೆಳ್ಳೂರು ಕಲ್ಲುಬಂಡೆಯ ದಾರಿಗುಂಟ ಸುಮಾರು ಒಂದು ಕಿ.ಮೀ.
ದೂರ ಕ್ರಮಿಸಿದರೆ ಹೈ ಟೆನ್ಶನ್ ವಿದ್ಯುತ್ ಕಂಬಗಳ ಸಾಲು ಸಿಗುತ್ತದೆ. ಇಲ್ಲಿ ಹುಟ್ಟುಬಂಡೆಯ ಮೇಲೆ
ಎರಡು ಅಂಕಿಗಳು ಮತ್ತು ಒಂದು ಅಕ್ಷರದ ಶಿಲಾಶಾಸನ ಇದ್ದು, ಅದರ ಕಣ್ನಕಲು ಹೀಗಿದೆ:
ಹಾಗೇ
ಮುಂದೆ ಸಾಗಿದರೆ ಉಲ್ಲೇಖಿತ ದಿಣ್ಣೆ ಹೊಸಹಳ್ಳಿ ಸರ್ವೇ ನಂ. ೫೬ರಲ್ಲಿರುವ ಬೃಹತ್ ಶಿಲಾಯುಗ ಸಂಸ್ಕೃತಿಯ
ಗೋರಿನೆಲೆ ಸಿಗುತ್ತದೆ. ಇಲ್ಲಿರುವ ಶಿಲಾಗೋರಿಗಳನ್ನು ಗುಂಡುಗಲ್ಲುವೃತ್ತ, ಚಪ್ಪಡಿಕಲ್ಲು
ವೃತ್ತಗಳೆಂಬ ಶಿಲಾವೃತ್ತಗಳು ಮತ್ತು ಕಲ್ಲುಪ್ಪೆಗಳೆಂದು ವರ್ಗೀಕರಿಸಬಹುದಾಗಿದೆ. ಗೋರಿನೆಲೆ
ಪ್ರದೇಶದಲ್ಲಿ ನೀಲಗಿರಿ ತೋಪು ಇದ್ದು, ಸುತ್ತಲಿನ ಜಮೀನುಗಳು
ಸಾಗುವಳಿಯಾಗುತ್ತಿವೆ. ಇನ್ನು ಕೆಲವು ಶಿಲಾವೃತ್ತಗಳು ಕೃಷಿ ಸಾಗುವಳಿ ಚಟುವಟಿಕೆಗಳಿಂದಾಗಿ ತಮ್ಮ
ಸ್ವರೂಪವನ್ನು ಕಳೆದುಕೊಂಡಿರುತ್ತವೆ. ಮೊದಲನೇ ಶಿಲಾವೃತ್ತವು ೩೧ ಅಡಿ ವ್ಯಾಸ ಹೊಂದಿದ್ದು,
ಇಪ್ಪತ್ತು ದೊಡ್ಡ ದೊಡ್ಡ ಗುಂಡುಗಲ್ಲುಗಳನ್ನು ವೃತ್ತಾಕಾರವಾಗಿ ನೆಡಲಾಗಿದೆ.
ಶಿಲಾವೃತ್ತದ ಉತ್ತರ ದಿಕ್ಕಿನ ಅರ್ಧ ಭಾಗಕ್ಕೆ (ಓoಡಿಣh hemi) ಜೋಡಿಸಿರುವ
ಗುಂಡುಗಲ್ಲುಗಳ ಒಳಬದಿಯಲ್ಲಿ ಎರಡನೇ ಸುತ್ತು ಕಲ್ಲು ನೆಟ್ಟಿರುವುದು ಕಂಡುಬಂತು. ಎರಡನೇ
ಶಿಲಾವೃತ್ತವು ೨೫ ಅಡಿ ವ್ಯಾಸವುಳ್ಳದ್ದಾಗಿದ್ದು, ಇಲ್ಲಿಯೂ ಹತ್ತು ಗುಂಡುಗಲ್ಲುಗಳನ್ನು
ವೃತ್ತಾಕಾರವಾಗಿ ನೆಡಲಾಗಿದೆ. ಮೂರನೇ ಶಿಲಾವೃತ್ತದಲ್ಲಿ ಹದಿನಾರು ಗುಂಡುಗಲ್ಲುಗಳಿರುತ್ತವೆ.
ಶಿಲಾವೃತ್ತ ನಾಲ್ಕರಲ್ಲಿ ಗುಂಡುಗಲ್ಲು ಮತ್ತು ಕಲ್ಲುಚಪ್ಪಡಿಗಳನ್ನು ವೃತ್ತಾಕಾರದಲ್ಲಿ
ಹಾಕಲಾಗಿದೆ. ಐದನೇ ಶಿಲಾವೃತ್ತದಲ್ಲಿ ಬರೀ ಕಲ್ಲುಚಪ್ಪಡಿಗಳನ್ನೇ ನಿಲ್ಲಿಸಲಾಗಿದೆ. ಆರನೇ
ಶಿಲಾವೃತ್ತದ ಕಲ್ಲುಗಳನ್ನು ಪಕ್ಕದ ಜಮೀನಿನವರು ಸಾಗುವಳಿ ಸಂದರ್ಭಕ್ಕಾಗಿ ನೀಲಗಿರಿ ತೋಪಿನೆಡೆಗೆ
ಒಡ್ಡು ನಿರ್ಮಿಸಿದಂತೆ ಜೋಡಿಸಿಟ್ಟಿದ್ದಾರೆ. ಈ ಶಿಲಾವೃತ್ತದ ಗುಂಡುಗಲ್ಲುಗಳು
ಸ್ಥಳಾಂತರವಾಗಿರುವದು ಇದರಿಂದ ಸ್ಪಷ್ಟವಾಗುತ್ತದೆ. ಶಿಲಾವೃತ್ತದ ಮೂಲಸ್ಥಳದಲ್ಲಿ ಹುರುಳಿ ಮತ್ತು
ರಾಗಿಬೆಳೆಯ ದಂಟುಗಳು ಮಾಮೂಲಿ ಬೆಳೆಗಿಂತ ಎತ್ತರವಾಗಿ ಬೆಳೆದಿರುತ್ತವೆ. ಏಳನೇ ಶಿಲಾವೃತ್ತದಲ್ಲಿ
ಎತ್ತರದ ಪಾಪಾಸುಕಳ್ಳಿ ಹಾಗೂ ಆಡು ತಿನ್ನುವ ಸೊಪ್ಪಿನ ಸಸ್ಯಗಳು ಎತ್ತರವಾಗಿ ಬೆಳೆದಿರುವುದರಿಂದ
ಗುಂಡುಗಲ್ಲು ಹಾಗೂ ಚಪ್ಪಡಿಗಲ್ಲುಗಳ ಸಂಖ್ಯೆ ನಿಖರವಾಗಿ ತಿಳಿಯುವುದಿಲ್ಲ. ಇದರಲ್ಲಿ ನೆಟ್ಟಿರುವ
ಕಲ್ಲುಚಪ್ಪಡಿಗೆ ಮತ್ತೊಂದು ಚಪ್ಪಡಿಯನ್ನು ಆಧಾರವಾಗಿ ನಿಲ್ಲಿಸಿರುವುದು ಕಂಡುಬಂತು. ಎಂಟನೇ
ಶಿಲಾವೃತ್ತಕ್ಕೆ ಚಪ್ಪಡಿಗಳನ್ನು ನೆಟ್ಟಿರುವುದರಿಂದ ಭೂಮಿಮಟ್ಟದವರೆಗಿನ ಭಾಗಗಳನ್ನು ಒಡೆದು
ತೆಗೆದುಕೊಂಡು ಹೋಗಿರುವುದು ತಿಳಿಯುತ್ತದೆ. ಇನ್ನೂ ಸುಮಾರು ೨೦ ರಿಂದ ೨೫ ಶಿಲಾವೃತ್ತಗಳು ಹಾಳಾಗಿದ್ದು,
ಅವುಗಳ ಗುರುತುಗಳು ಕಾಣಿಸುತ್ತದೆ.
ಶಿಲಾಗೋರಿಗಳಿರುವ
ಜಮೀನಿನ ವಾಯವ್ಯ ದಿಕ್ಕಿನಲ್ಲಿ ಆರು ಕಲ್ಗುಪ್ಪೆಗಳು ಇರುತ್ತವೆ. ಇವು ನೆಲಮಟ್ಟದಿಂದ
ಮಧ್ಯಭಾಗದಲ್ಲಿ ಉಬ್ಬಿದ ಹಾಗೆ ಕೆಲವೊಮ್ಮೆ ಚಿಕ್ಕ ದಿಬ್ಬದ ಹಾಗೆ ಕಾಣಿಸುತ್ತವೆ. ಕಲ್ಗುಪ್ಪೆಗಳ
ಮೇಲೆ ಕಲ್ಲುಚಕ್ಕೆಗಳ ರಾಶಿಯಿದ್ದು, ಅಲ್ಲಲ್ಲಿ ಸುತ್ತಲೂ ದೊಡ್ಡ ದೊಡ್ಡ ಗುಂಡುಗಲ್ಲುಗಳು
ಬಿದ್ದಿರುತ್ತವೆ. ದಿಣ್ಣೆಹೊಸಹಳ್ಳಿಯ ಶಿಲಾಗೋರಿ ನೆಲೆಯ ಪಶ್ಚಿಮದ ಅಂಚಿನಲ್ಲಿ ಭೂಮಿಯ ಮಟ್ಟದಿಂದ
ಕೆಳಗೆ, ಮೂರು ಶಿಲಾತೊಟ್ಟಿಗಳು ಅಗೆದು ಹಾಕಿರುವ ಸ್ಥಿತಿಯಲ್ಲಿ
ಕಂಡುಬಂದಿವೆ. ಗ್ರಾನೈಟ್ ಬಂಡೆಗಳನ್ನು ಕತ್ತರಿಸಿ, ದೊಡ್ಡ ದೊಡ್ಡ
ಚಪ್ಪಡಿಗಳನ್ನು ಮಾಡಿಕೊಂಡು ಅವುಗಳನ್ನು ಅಗೆದ ಗುಂಡಿಯಲ್ಲಿ ಆಯತಾಕಾರವಾಗಿ ಜೋಡಿಸಲಾಗಿದೆ. ಒಂದು
ಕಲ್ಲು ಚಪ್ಪಡಿ ಮತ್ತೊಂದು ಚಪ್ಪಡಿ ಕಳಚಿ ಬೀಳದಂತೆ ಶಿಲಾತೊಟ್ಟಿಗಳನ್ನು ರಚಿಸಲಾಗಿದೆ. ಇಲ್ಲಿ
ಕಂಡುಬಂದಿರುವ ಮೂರೂ ಶಿಲಾತೊಟ್ಟಿಗಳು ವಿಸ್ತೀರ್ಣದಲ್ಲಿ ಅಲ್ಪಸ್ವಲ್ಪ ವ್ಯತ್ಯಾಸ ಹೊಂದಿವೆ. ಶಿಲಾ
ಕೋಣೆಗಳನ್ನು ನಿರ್ಮಿಸುವಾಗ ಪೂರ್ವಭಾಗದ ಆರ್ತೋಸ್ಟಾಟ್‌ನಲ್ಲಿ ಒಂದು ವೃತ್ತಾಕಾರದ ದೊಡ್ಡ ಕಿಂಡಿ (Poಡಿಣ hoಟe) ಯನ್ನು
ಇಡಲಾಗುತ್ತದೆ.೫ ಆದರೆ ದಿಣ್ಣೆ ಹೊಸಹಳ್ಳಿಯ ಶಿಲಾಗೋರಿ ನೆಲೆಯಲ್ಲಿ ಕಂಡುಬಂದ ಈ ಮೂರೂ
ಶಿಲಾತೊಟ್ಟಿಗಳ ಪೂರ್ವಭಾಗದ ಚಪ್ಪಡಿಕಲ್ಲುಗಳು ಇರುವುದಿಲ್ಲ. ಅವುಗಳನ್ನು ನಿಧಿಗಳ್ಳರು ಒಡೆದು
ಹಾಕಿರುವ ಶಂಕೆಯಿದೆ. ಆಯತಾಕಾರದ ಈ ಶಿಲಾತೊಟ್ಟಿಗಳ ಅಡಿಯಲ್ಲಿ ಹಾಕಿದ ಕಲ್ಲುಚಪ್ಪಡಿ (ಃoಣಣom sಟಚಿb)ಗಳೂ ಅಗೆಯಲ್ಪಟ್ಟು, ಒಡೆದು
ಚೂರು ಚೂರಾಗಿರುವುದನ್ನು ಇಲ್ಲಿ ನೋಡಬಹುದು. ಬೆಳ್ಳೂರು ಪರಿಸರದಲ್ಲಿ ಕಂಡುಬಂದ ಶಿಲಾಗೋರಿಗಳ
ಅಧ್ಯಯನದಿಂದ ತಿಳಿದುಬರುವುದೇನೆಂದರೆ ಮುನಿತಿಮ್ಮಪ್ಪನವರ ವೆಂಕಟರಮಣಪ್ಪನ ಹೊಲದಲ್ಲಿರುವ
ಶಿಲಾಗೋರಿಯನ್ನು ಶವದ ಅಸ್ಥಿಗಳನ್ನು ಸಂಗ್ರಹಿಸಿ ಮಡಕೆಗಳಲ್ಲಿಟ್ಟು ಸಮಾಧಿ ಮಾಡುವ ವಿಧಾನಕ್ಕೆ
ಪೂರಕವಾದ ಭೂಮಿಯ ಮೇಲಿನ ಶಿಲಾತೊಟ್ಟಿಯ ಪ್ರಕಾರಕ್ಕೆ ಸೇರಿಸಬಹುದಾದರೆ, ಕೋಟೆಪ್ಪನವರ
ಹೊಲದಲ್ಲಿರುವ ಶಿಲಾಗೋರಿಗಳನ್ನು ಅರ್ಧಭಾಗ ಹೊರಗೆ ಆರ್ತೋಸ್ಟಾಟ್‌ಗಳು ಕಾಣುವಂತೆ ರಚಿಸಲಾಗಿರುವ
ಶಿಲಾತೊಟ್ಟಿಗಳೆಂದೂ ಇನ್ನು ದಿಣ್ಣೆ ಹೊಸಹಳ್ಳಿ ಶಿಲಾಗೋರಿಗಳ ನೆಲೆಯಲ್ಲಿ ಕಂಡುಬರುವ ಮೂರು
ಶಿಲಾತೊಟ್ಟಿಗಳನ್ನು ಭೂಮಿಯೊಳಗೆ ಗುಂಡಿ ತೋಡಿ ಕೆಳಗೆ ಒಂದು ಕಲ್ಲುಚಪ್ಪಡಿ ಹಾಸಿ, ಗುಂಡಿಯೊಳಗೆ ಹುದುಗಿ ಹೋಗುವಂತೆ ಆರ್ತೋಸ್ಟಾಟ್‌ಗಳನ್ನು ನಿರ್ಮಿಸುವ ವಿಧಾನವೆಂದು
ವರ್ಗೀಕರಿಸಬಹದು. ಬೃಹತ್ ಶಿಲಾಯುಗ ಸಂಸ್ಕೃತಿಯ ವಿಶಿಷ್ಟ ಹಾಗೂ ವೈವಿಧ್ಯಪೂರ್ಣ ಸಮಾಧಿ
ಪ್ರಕಾರಗಳಾದ ಮೂರು ಬಗೆಯ ಶಿಲಾತೊಟ್ಟಿಗಳು, ಎರಡು ಪ್ರಕಾರಗಳ
ಶಿಲಾವೃತ್ತಗಳು ಹಾಗೂ ಕಲ್ಗುಪ್ಪೆಗಳು ಬೆಳ್ಳೂರು ಪರಿಸರದಲ್ಲಿ ಕಂಡುಬಂದಿವೆ. ಸತ್ತವರ
ಅಂತ್ಯಸಂಸ್ಕಾರವನ್ನು ಇಷ್ಟೊಂದು ವಿಧಿವತ್ತಾಗಿ ಮಾಡುತ್ತಿದ್ದ ಅಂದಿನವರು ಹಾಗೂ ನೂರಾರು
ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿರುವ ನಾಯಕ ಜನಾಂಗದವರ ಹಿನ್ನೆಲೆಯನ್ನು
ಪರಿಶೀಲಿಸಬಹುದಾಗಿದೆ. ಶಿಲಾಗೋರಿಗಳಿರುವ ಬಹುತೇಕ ಹೊಲ ಗದ್ದೆಗಳು ಇಂದಿಗೂ ಇದೇ ಜನಾಂಗದವರ
ಮಾಲೀಕತ್ವಕ್ಕೊಳಪಟ್ಟಿರುತ್ತವೆ. ಆದ್ದರಿಂದ ಈ ಸಮುದಾಯಕ್ಕೆ ಸೇರಿದ ಪ್ರಾಚೀನರೇ ತಮ್ಮ ಸಂಸ್ಕೃತಿಯ
ಸಾಕ್ಷಿಗಳನ್ನು ಬಿಟ್ಟುಹೋಗಿರುತ್ತಾರೆಂಬ ಮಾತುಗಳನ್ನಾಡಬಹುದಾಗಿದೆ.
ಕುಂತೆಮ್ಮನ ಒರಳುಕಲ್ಲು
ಸುಮಾರು
ಮೂವತ್ತು ಅಡಿ ವ್ಯಾಸದ ಒರಳಿನಾಕಾರದ ಟೊಳ್ಳುಭಾಗ ಹೊಂದಿರುವ ಅಖಂಡ ಶಿಲೆಯೊಂದು ಬೆಳ್ಳೂರು
ಗ್ರಾಮದಿಂದ ವಾಯವ್ಯ ದಿಕ್ಕಿಗೆ ಮೂರು ಕಿ.ಮೀ. ದೂರದಲ್ಲಿದೆ. ನೈಸರ್ಗಿಕ ಬಾವಿಯಂತಿರುವ ಇದರೊಳಗೆ
ಮಳೆನೀರು ಸಂಗ್ರಹವಾಗಿ ತುಂಬಿ ಹೊರಗೆ ಹರಿದಿರುವ ಗುರುತು ಮೂಡಿದೆ. ಸ್ಥಳೀಯರು ಇದನ್ನು
‘ಕುಂತೆಮ್ಮನ ಒರಳಕಲ್ಲು’ ಎನ್ನುತ್ತಾರೆ. ಇದರ ಹತ್ತಿರದಲ್ಲೇ ಇರುವ
ಕಲ್ಲಾಸರೆಗಳನ್ನು ‘ಪಾಂಡವರ ಕಲ್ಲು’ ಮತ್ತು ‘ಪೆದ್ದೋರ್
ಗುಡ್ಲು’ ಎನ್ನಲಾಗುತ್ತದೆ. ‘ಭೀಮನ ತೊಟ್ಟಿಲು’ ಎಂಬ ಬೃಹತ್ ಶಿಲೆ ಈಗ ನೋಡಲೂ ಇಲ್ಲಿ ಸಿಗುವುದಿಲ್ಲ. ಕುಂತೆಮ್ಮನ ಒರಳುಕಲ್ಲು, ಪಾಂಡವರ
ಕಲ್ಲು ಮತ್ತು ಭೀಮನ ತೊಟ್ಟಿಲು - ಈ ಎಲ್ಲ ಪದಪ್ರಯೋಗಗಳು ಸಾಮಾನ್ಯವಾಗಿ ಬೃಹತ್ ಶಿಲಾಯುಗದ ಸಮಾಧಿ,
ಸ್ಥಳಗಳನ್ನು ಉಲ್ಲೇಖಿಸುತ್ತಾರೆ. ಜನರು ಈಗಾಗಲೇ ಬೆಳ್ಳೂರಿನ ಹೊಲಗಳಲ್ಲಿರುವ
ಶಿಲಾಗೋರಿಗಳು ಆ ಸಂಸ್ಕೃತಿಯ ಸಮಾಧಿ ನೆಲೆಯೆಂಬ ಸಂಗತಿ ತಿಳಿದಿದೆ. ಕುಂತೆಮ್ಮನ ಒರಳುಕಲ್ಲು,
ಪಾಂಡವರ ಕಲ್ಲು/ಗುಡ್ಡ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಕ್ಷೇತ್ರಕಾರ್ಯವಾದರೆ
ಮಾಹಿತಿಗಳು ಲಭ್ಯವಾಗುತ್ತದೆ. ಬೇಸಿಗೆ ಕಾಲ ಇದಕ್ಕೆ ಸೂಕ್ತ ಸಮಯವೆಂದು ಅಭಿಪ್ರಾಯಪಡಲಾಗಿದೆ.
ಇಲ್ಲಿ ಸ್ಥಾಪಿತವಾಗಿರುವ ಸ್ಟೋನ್ ಕ್ರಶರ್‌ನ ಕಾರ್ಯಕ್ಕೆ ಪ್ರಸ್ತುತ ಹೆಬ್ಬಂಡೆಗಳು
ಆಹುತಿಯಾಗಲಣಿಯಾಗಿವೆ.
ಬೆಳ್ಳೂರಿನ ಕಣ್ವೇಶ್ವರ ದೇವಾಲಯ
ಬೆಳ್ಳೂರಿನ
ಕಣ್ವೇಶ್ವರ ದೇವಾಲಯವು ಹೊಯ್ಸಳರ ದ್ರಾವಿಡ ಶೈಲಿಯಲ್ಲಿದೆ. ಸ್ಥಳೀಯರು ಈಶ್ವರ ದೇವಸ್ಥಾನ ಎಂದು
ಕರೆಯುತ್ತಾರೆ. ಪೂರ್ವಕ್ಕೆ ಮುಖ ಮಾಡಿರುವ ಮುಖ್ಯ ಗರ್ಭಗೃಹದ ಮೇಲೆ ಮಾತ್ರ ಶಿಖರವಿದೆ. ದೇವಾಲಯವು
೧೨ ಮತ್ತು ೧೩ನೇ ಶತಮಾನದ ಶಿಲಾಶಾಸನಗಳಲ್ಲಿ ಉಲ್ಲೇಖವಾಗಿದೆ. ಮುಖ್ಯ ಗರ್ಭಗೃಹ, ಅಂತರಾಳಗಳು
೧೨ನೇ ಶತಮಾನದಲ್ಲಿ ಕಟ್ಟಿಸಲ್ಪಟ್ಟಿವೆ. ಸಭಾಮಂಟಪ ದಕ್ಷಿಣಕ್ಕೆ ಮುಖ ಮಾಡಿರುವ ಗರ್ಭಗೃಹಗಳು
ನಂತರದ ಜೋಡಣೆಯಾಗಿರುತ್ತವೆ.
ಮುಖ್ಯ
ಗರ್ಭಗೃಹದ ದ್ವಾರವು ೪’ ೭’’
ಎತ್ತರವಿದ್ದು, ಅಲಂಕಾರರಹಿತ ದ್ವಾರಶಾಖೆಗಳಿರುತ್ತವೆ. ೬’ x ೬’ ಚೌರಸ ವಿಸ್ತೀರ್ಣದ ಗರ್ಭಗೃಹದಲ್ಲಿ
ಎತ್ತರವಾದ ಪಾಣಿಪೀಠದ ಮೇಲೆ ಬಾಣಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಗರ್ಭಗೃಹದ ಗೋಡೆಗಳು ಎರಡು
ಅಡಿ ದಪ್ಪವಿದ್ದು, ಛತ್ತಿನಲ್ಲಿ ಆರು ದಳಗಳ ಅರಳಿದ ಕಮಲ ಬಿಡಿಸಲಾಗಿದೆ. ಸಭಾಮಂಟಪದಿಂದ
ಅಂತರಾಳಕ್ಕೆ ೨’ ೫’’ ಅಗಲ ಹಾಗೂ
೪’ ೭’’ ಎತ್ತರದ ಪ್ರವೇಶದ್ವಾರವಿದೆ.
ದ್ವಾರಶಾಖೆಗಳಿಗೆ ಎರಡು ಗೆರೆ ಎಳೆದು ಕಲ್ಲಿನ ಮೂಲೆಗಳನ್ನು ತೆಗೆದುಹಾಕಿದೆ. ದ್ವಾರಬಂಧದ
ಇಕ್ಕೆಲಗಳಲ್ಲಿ, ಗೋಡೆಯಲ್ಲಿ ಎರಡು ಅರ್ಧಕಂಬ ಮಾದರಿ, ಅವುಗಳ
ಪಕ್ಕದಲ್ಲಿ ಎರಡು ಪೂರ್ಣಕಂಬ ಮಾದರಿಗಳನ್ನು ತೋರಿಸಲಾಗಿದೆ. ಅಂತರಾಳ ಛತ್ತಿಗೆ ನಾಲ್ಕು ಕಲ್ಲು
ಚಪ್ಪಡಿಗಳನ್ನು ಹೊದಿಸಿ ಛತ್ತಿನ ಮಧ್ಯದಲ್ಲಿ ಎರಡು ವೃತ್ತಗಳು, ಎಂಟು
ದಳಗಳ ಅರಳಿದ ಕಮಲ ಮಧ್ಯದಲ್ಲಿ ಮತ್ತೆ ಎರಡು ವೃತ್ತಗಳನ್ನು ಕಂಡರಿಸಲಾಗಿದೆ. ಸಭಾಮಂಟಪದಲ್ಲಿರುವ
ಗರ್ಭಗೃಹವು ದಕ್ಷಿಣಕ್ಕೆ ಮುಖ ಮಾಡಿದ್ದು, ೬’ ೧’’ x ೬೪’’ ವಿಸ್ತೀರ್ಣ ಹೊಂದಿದೆ. ಇದರ ಮೇಲೆ
ಶಿಖರವಿಲ್ಲ. ದಕ್ಷಿಣದಿಂದ ಪ್ರವೇಶದ್ವಾರ ಹೊಂದಿರುವ ಸಭಾಮಂಟಪವು ದಕ್ಷಿಣೋತ್ತರವಾಗಿ ೧೬’ ೧೦’’ ಹಾಗೂ ಪೂರ್ವ ಪಶ್ಚಿಮದಲ್ಲಿ ೨೩’ ೧’’ ಅಳತೆಯದ್ದಾಗಿದೆ. ಸಭಾಮಂಟಪದಲ್ಲಿ ಆರು ಸರಳ ಪೂರ್ಣ ಕಂಬಗಳು, ಅವುಗಳ
ಮೇಲೆ ಸಾದಾ ಬೋದಿಗೆಗಳಿವೆ. ಕಂಬಗಳ ಪಿಂಡಿ ಭಾಗವು ಎರಡು ಅಡಿ ಎತ್ತರವಿದ್ದು, ಚತುರ್ಮುಖ ಹೊಂದಿವೆ. ಅಷ್ಟಮುಖಗಳುಳ್ಳ ಮಧ್ಯಭಾಗವು ೧’ ೮’’ ಎತ್ತರ ಹಾಗೂ ಅದರ ಮೇಲೆ ೧’ ೭’’ ಎತ್ತರದ ಚತುರ್ಮುಖ ಪುನರಾವರ್ತನೆಯಾಗುತ್ತದೆ. ಒಟ್ಟು ೫’ ೨’’ ಎತ್ತರದ ಕಂಬಗಳು ಸಭಾಮಂಟಪದಲ್ಲಿರುತ್ತವೆ. ಒಂಭತ್ತು ಇಂಚು ಎತ್ತರದ
ಸರಳ ಬೋದಿಗೆಗಳ ಮೇಲೆ ಶಿಲಾತೊಲೆಗಳನ್ನು ಜೋಡಿಸಲಾಗಿದೆ. ಛತ್ತಿನಲ್ಲಿ ದಕ್ಷಿಣೋತ್ತರವಾಗಿ ಒಟ್ಟು
ನಾಲ್ಕು ಅಂಕಣಗಳನ್ನು ಮಾಡಲಾಗಿದೆ. ಪೂರ್ವಾಭಿಮುಖವಾಗಿರುವ ಗರ್ಭಗೃಹದ ಎದುರಿಗೆ ಸಭಾಮಂಟಪದ
ಪೂರ್ವದ ಗೋಡೆಯಲ್ಲಿ ಐದು ಸಣ್ಣ ಕಿಂಡಿಗಳ ಒಂದು ಜಾಲಂಧ್ರವಿರುತ್ತದೆ.
ಕಣ್ವೇಶ್ವರ
ದೇವಾಲಯದ ಗರ್ಭಗೃಹದ ಹೊರ ಗೋಡೆಯಲ್ಲಿ ಮೂರು ದೇವಕೋಷ್ಠಗಳಿರುತ್ತವೆ. ಬಲಭಾಗದ ದೇವಕೋಷ್ಠದ
ಇಕ್ಕೆಲಗಳಲ್ಲಿ ಕಂಬ ಮಾದರಿಗಳು, ಮೇಲ್ಭಾಗದಲ್ಲಿ ವೃತ್ತಾಕಾರದ ಎರಡು ಗೆರೆಗಳು,
ಅದರೊಳಗೆ ಆರು ಎಲೆಯಾಕಾರ ಚಿತ್ರಿಸಲಾಗಿದೆ. ಹಿಂಭಾಗದ ದೇವಕೋಷ್ಠದ ಮೇಲೆ ವೃತ್ತ,
ಅದರೊಳಗೆ ರೆಕ್ಕೆ ಬಿಚ್ಚುತ್ತಿರುವ ಹಕ್ಕಿಯನ್ನು ಕಂಡರಿಸಲಾಗಿದೆ. ಎಡಪಕ್ಕದ
ದೇವಕೋಷ್ಠದಲ್ಲಿ ಬಲಭಾಗದ ವೃತ್ತವನ್ನೇ ಪುನರಾವರ್ತಿಸಿ, ನಾಲ್ಕು ಮೂಲೆಗಂಬ
ಮಾದರಿ, ಆರು ಅರ್ಧಗಂಬ ಮಾದರಿಗಳನ್ನು ಗರ್ಭಗೃಹದ ಹೊರಗೋಡೆಯಲ್ಲಿ
ಕಾಣಿಸಲಾಗಿದೆ. ಅಂತರಾಳದ ಹೊರಗೋಡೆಯಲ್ಲಿ ಎರಡು ಕೋಷ್ಠಗಳು, ಎರಡು
ಮೂಲೆಗಂಬ ಮಾದರಿಗಳಿರುತ್ತವೆ. ದಕ್ಷಿಣಾಭಿಮುಖ ಗರ್ಭ ಗೃಹದ ಹೊರಗೋಡೆಯಲ್ಲಿ ಮೂರು ದೇವಕೋಷ್ಠಗಳು,
ನಾಲ್ಕು ಮೂಲೆಗಂಬ ಮಾದರಿ, ಆರು ಅರ್ಧಕಂಬ
ಮಾದರಿಗಳಿರುತ್ತವೆ. ಸಭಾಮಂಟಪದ ಹೊರಗೋಡೆಯ ಭಿತ್ತಿಯಲ್ಲಿ ಹತ್ತು ಅರ್ಧಕಂಬ, ಆರು ಮೂಲೆಕಂಬ ಮಾದರಿಗಳನ್ನು ಮಾಡಲಾಗಿದೆ. ದೇವಾಲಯದ ಅಧಿಷ್ಠಾನದಲ್ಲಿ ಒಂದು ಅಡಿ
ಎತ್ತರದ ಜಗತಿ, ಎಂಟೂವರೆ ಇಂಚು ಎತ್ತರದ ತ್ರಿಪಟ್ಟ ಕುಮುದ, ಅರ್ಧ ಅಡಿ ಕಂಪ, ಅರ್ಧ ಅಡಿಗಳ, ಕಂಪ
ಹಾಗೂ ಒಂಬತ್ತೂವರೆ ಇಂಚು ಎತ್ತರದ ಪ್ರತಿ ಭಾಗಗಳು ಇರುತ್ತವೆ. ಮುಂದುವರೆದು ಭಿತ್ತಿ, ಉತ್ತರ, ವಾಜನ, ವಲ್ಲಭಿ ಹಾಗೂ ಕಪೋತ
ಭಾಗಗಳು ಸೇರಿ ಆರು ಅಡಿ ಎತ್ತರ ಇರುತ್ತವೆ. ಇದೊಂದು ತ್ರಿತಲ ದೇವಾಲಯವಾಗಿದ್ದು, ಕಪೋತದವರೆಗಿನ ಭಾಗಗಳನ್ನು ಹಳೆಯ ಕಲ್ಲುಗಳನ್ನು ಬಳಸಿ ಮೊದಲಿನಂತೆಯೇ ಜೋಡಿಸಿ
ಕಟ್ಟಲಾಗಿದೆ. ನಂತರದ ದ್ವಿತಲ, ತ್ರಿತಲ ಭಾಗಗಳಿಗೆ ಹೊಸ ಕಲ್ಲುಗಳನ್ನು
ಮೂಲ ವಾಸ್ತುಶಿಲ್ಪದ ಅನುಸಾರವಾಗಿ ಉಪಯೋಗಿಸಲಾಗಿದೆ. ದೇವಾಲಯದ ಪುನರ್ನಿರ್ಮಾಣ ಕಾರ್ಯ ಧರ್ಮಸ್ಥಳದ
ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರ ಸಹಕಾರದಿಂದ, ಐತಿಹಾಸಿಕ
ಪರಂಪರೆಗನುಗುಣವಾಗಿ ನಡೆದು ಸಂಪೂರ್ಣಗೊಂಡಿರುತ್ತದೆ. ಕಣ್ವೇಶ್ವರ ದೇವಾಲಯದ ಹಿಂಭಾಗದಲ್ಲಿ
ವಾಯವ್ಯ ಮೂಲೆಯಲ್ಲಿ ‘ಅಮ್ಮನ ಗುಡಿ’ ಎಂದು ಹೇಳಲಾಗುವ
ಪರಿವಾರ ದೇವಾಲಯ ಇರುತ್ತದೆ. ಇಲ್ಲಿಯೂ ಗರ್ಭಗೃಹ ಮತ್ತು ಮುಖಮಂಟಪಗಳಿದ್ದು, ಮುಖಮಂಟಪದಲ್ಲಿ
೧೬ ಕಲ್ಲುಕಂಬಗಳಿರುತ್ತವೆ. ಒಂದು ಕಂಬದ ಮೇಲೆ ನಂದಿ, ಇನ್ನೊಂದು ಕಂಬದ
ಮೇಲೆ ಎಡಗೈಯಲ್ಲಿ ಬಿಲ್ಲು, ಬಲಗೈಯಲ್ಲಿ ಬಾಣ ಹಿಡಿದುಕೊಂಡ ವ್ಯಕ್ತಿ
ಶಿಲ್ಪವಿದೆ. ಪಕ್ಕದಲ್ಲಿ ಟಗರಿನ ಕೊಂಬು ಇರುವ ಮನುಷ್ಯಾಕೃತಿಯನ್ನು ಕಂಡರಿಸಲಾಗಿದೆ. ಮುಖಮಂಟಪದ
ಪ್ರವೇಶದಲ್ಲಿ ತದನಂತರದಲ್ಲಿ ಸೇರಿಸಲಾದ ಎರಡು ಕಲ್ಲುಕಂಬಗಳ ಮೇಲೆ ಗಜಲಕ್ಷ್ಮಿಯ ಶಿಲ್ಪವಿದೆ.
ನೈಋತ್ಯ ಮೂಲೆಯಲ್ಲಿ ಇನ್ನೊಂದು ಪರಿವಾರ ದೇವಾಲಯವಿದ್ದು ಗಣಪತಿ ವಿಗ್ರಹ ಪ್ರತಿಷ್ಠಾಪಿಸಲಾಗಿದೆ.
ಕಣ್ವೇಶ್ವರ ದೇವರ ಉತ್ಸವಮೂರ್ತಿಗಳನ್ನು ಸದ್ಯಕ್ಕೆ ಇದೇ ಗಣಪತಿ ದೇವಾಲಯದಲ್ಲಿಡಲಾಗಿದೆ.
ಉತ್ಸವಮೂರ್ತಿಗಳಲ್ಲಿರುವ ಚತುರ್ಭುಜ ಈಶ್ವರನು ತನ್ನ ಎಡಗಾಲನ್ನು ಮಡಿಚಿ, ಬಲಗಾಲು ಕೆಳಗಿಟ್ಟು ಪೀಠವೊಂದರ ಮೇಲೆ ಕುಳಿತಿರುತ್ತಾನೆ. ಒಂದನೇ ಬಲಗೈ ಅಭಯಮುದ್ರೆ
ಎರಡನೇ ಬಲಗೈಯ ತೋರಬೆರಳು ಮಧ್ಯದ ಬೆರಳುಗಳಲ್ಲಿ ಮನುಷ್ಯನ ಚಿಕಣಿ ಶಿಲ್ಪವನ್ನು ಹಿಡಿದಿರುವಂತಿದೆ.
ಮೊದಲನೆಯ ಎಡಗೈ ಬೆರಳುಗಳನ್ನು ನೆಲಕ್ಕೆ ಚಾಚಿದ್ದು, ಎರಡನೆಯ ಕೈಯಲ್ಲಿ
ತೋರಬೆರಳು ನಡುಬೆರಳುಗಳ ಮಧ್ಯ ಜಿಂಕೆಯ ಹಿಂಗಾಲುಗಳನ್ನು ಹಿಡಿದಿರುವುದನ್ನು ತೋರಿಸಲಾಗಿದೆ. ತಲೆಯ
ಮೇಲೆ ಉದ್ದನೆಯ ಕರಂಡಕ, ಬಲಕಿವಿಯಲ್ಲಿ ಕರ್ಣಕುಂಡಲ, ಎಡಕಿವಿಯಲ್ಲಿ ಸ್ವಲ್ಪ ದೊಡ್ಡದಾದ ಕರ್ಣಕುಂಡಲ, ಕಾಲುಕಡಗ
ಇರುತ್ತವೆ. ಈಶ್ವರನ ಎಡಕ್ಕೆ ದೇವತೆ ಇದ್ದು, ತಲೆಯ ಮೇಲೆ
ಶಂಕುವಿನಾಕಾರದ ಕರಂಡಕ ಧರಿಸಿದ್ದಾಳೆ. ಬಲಗೈಯಲ್ಲಿ ಹೂವಿನ ದಳ, ಎಡ
ಹಸ್ತವನ್ನು ಕೆಳಗೆ ನೆಲಕ್ಕೆ ಚಾಚಲಾಗಿದೆ. ಈಶ್ವರ-ಪಾರ್ವತಿ ವಿಗ್ರಹಗಳ ಮಧ್ಯದಲ್ಲಿ ಪೀಠದ ಮೇಲೆ
ತ್ರಿಭಂಗಿಯಲ್ಲಿರುವ ಚಿಕಣಿ ಮೂರ್ತಿಯೊಂದನ್ನು ನಿಲ್ಲಿಸಲಾಗಿದೆ.
ಕಣ್ವೇಶ್ವರ
ದೇವಾಲಯದ ಪೂರ್ವಗೋಡೆಯ ಮೇಲಿರುವ ಕ್ರಿ.ಶ.೧೧೨೯ರ ಶಾಸನದಲ್ಲಿ ಹೊಯ್ಸಳ ದೊರೆ ವಿಷ್ಣುವರ್ಧನನ
ಸಾಮಂತನಾದ ನಿಮಂಡವಲಿದೇವನು ಬೆಳ್ಳೂರಿನ ತಿರುಕಾಳೀಶ್ವರಂ ಉದಿಯ ಮಹದೇವರ್ ಅಥವಾ ಶ್ರೀ ಕೈಲಾಸಂ
ದೇವಾಲಯದ ಕುಟ್ಟಾಂದುನ್ ದೇವರ ದೀಪಕ್ಕಾಗಿ ಹಣ ನೀಡಿದ ಉಲ್ಲೇಖ೬ ಇದೆ.
ದಕ್ಷಿಣದ ತಳಪಾದಿ ಕಲ್ಲಿನ ಮೇಲಿರುವ ಕ್ರಿ.ಶ.೧೧೩೯ರ ಶಾಸನದಲ್ಲಿ ಕಂಬೀಶ್ವರ ದೇವಾಲಯ ನಿರ‍್ಮಾಣವಾಯಿತೆನ್ನಲಾಗಿದೆ.೭ ದಕ್ಷಿಣ ಗೋಡೆಯಲ್ಲಿರುವ ಕ್ರಿ.ಶ.೧೪೦೬ರ ಶಾಸನವು ವಿಜಯನಗರದ ಅರಸು ಒಂದನೆಯ ದೇವರಾಯನ
ಕಾಲದ್ದಾಗಿದ್ದು, ಬೊಮ್ಮಣ ದಂಡನಾಯಕನ ಮಗನಾದ ದೇವರಾಯ ಶ್ರೀ ವಿಷ್ಣುವರ್ಧನ ಚತುರ್ವೇದಿ
ಮಂಗಲವಾದ ಬೆಳ್ಳೂರ ಸೋಮಯದೇವರಿಗೆ ಅಂಗರಂಗ ಭೋಗ, ಅಮೃತಪಡಿಗೆ ಬೆಳ್ಳೂರು
ಸ್ಥಳದ ಬಯಿಚನಕುಂಟೆ ಎಂಬ ಹಳ್ಳಿಯನ್ನು ದಾನ ಬಿಟ್ಟ ಬಗ್ಗೆ ತಿಳಿಸುತ್ತದೆ. ಮುಂದುವರೆದು ಇದೇ
ಶಾಸನದಲ್ಲಿ ಉಲ್ಲೇಖಿತ ಸೋಮಯದೇವರ ಅಂಗರಂಗ ಭೋಗ, ಅಮೃತಪಡಿಗೆ ದೇವರಾಯ
ಒಡೆಯರ ಆದೇಶದಂತೆ ಬೆಳಿಮಾರನಹಳ್ಳಿಯ ದಾವುಲಸೂರೆನಾಯಕನು ತನ್ನೂರಿನ ಬಿದಿರಕುಂಟೆ ಹಾಗೂ ಅದಕ್ಕೆ
ಸಲ್ಲುವ ಹೊಲ, ಶ್ರೀ ಗಿರಿನಾಥನಿಗೆ ಸಲ್ಲುವ ಬಯಿರಗೊಂಡನಹಳ್ಳಿ,
ಮಾರಗುಳಿ ಕುಂಟೆಗಳನ್ನು ದಾನ ಬಿಟ್ಟ ಬಗ್ಗೆ ಹೇಳಲಾಗಿದೆ.೮ ಪೂರ್ವ ದಿಕ್ಕಿನ ಗೋಡೆ ಮೇಲಿರುವ ವಿಜಯನಗರ ದೊರೆ ಇಮ್ಮಡಿ ಸಾಳುವ ನರಸಿಂಹನ ಕ್ರಿ.ಶ.೧೪೯೮ರ
ಶಾಸನದಲ್ಲಿ ನರಸಣನಾಯಕರಿಗೆ ಧರ್ಮವಾಗಲೆಂದು ರಾಮಿಯಪ್ಪ ರಾಹುತರು ಅನಾದಿ ಅಗ್ರಹಾರ ಶ್ರೀ
ವಿಷ್ಣುವರ್ಧನ ಚತುರ್ವೇದಿ ಮಂಗಲವಾದ ಬೆಳೂರ ಸೋಮಯದೇವರಿಗೆ ಅಂಗರಂಗ ವೈಭೋಗ, ಅಮೃತಪಡಿ,
ನಂದಾದೀವಿಗೆಗೆ, ತರಟೆ, ರಾಮಾಪುರದ
ಸುತ್ತಲಿನ ಭೂಮಿದಾನ ಮಾಡಿದ್ದನೆಂದು ತಿಳಿದುಬರುತ್ತದೆ.೯
ಕ್ರಿ.ಶ.೧೫೩೨ರಲ್ಲಿ
ಇದೇ ದೇವಾಲಯದ ಧ್ವಜಸ್ತಂಭದ ಕೆಳಗೆ ಬರೆಸಿದ ಶಾಸನದಲ್ಲಿ ವಿಲಿಸೆಟ್ಟಿಯ ಮಗ ಹಿರಿಯ ವೀರನು
ಬೆಳ್ಳೂರ ಸೋಮಯದೇವರ ಗುಡಿಯ ಮುಂದೆ ನಿಲ್ಲಿಸಿದ ಕಂಬ ಎನ್ನಲಾಗಿದೆ. ಮೇಲ್ಕಂಡ ಎಲ್ಲ ಶಿಲಾಶಾಸನಗಳು
ಕಣ್ವೇಶ್ವರ ದೇವಾಲಯದ ತಳಪಾದಿ ಕಲ್ಲು, ಗೋಡೆ, ಭಿತ್ತಿ,
ಧ್ವಜಸ್ತಂಭಗಳ ಮೇಲೆಯೇ ಹಾಕಿಸಲ್ಪಟ್ಟಿದ್ದು, ಎಲ್ಲಿಯೂ
ಕಣ್ವೇಶ್ವರ ಎಂದು ಉಲ್ಲೇಖವಾಗಿರುವುದಿಲ್ಲ. ಹಾಗಾದರೆ ಶಾಸನೋಕ್ತ ಕುಟ್ಟಾಂದುನ್, ಕಂಬೀಶ್ವರ, ಸೋಮಯದೇವ ಎಂಬ ಹೆಸರುಗಳು ಕಣ್ವೇಶ್ವರನ ಪರ್ಯಾಯ
ನಾಮಗಳಾಗಿರಬಹುದು. ಕಂಬೀಶ್ವರನೇ ಕಣ್ವೇಶ್ವರನೆಂದು ಪ್ರಚಲಿತವಾಗಿರುವ ಸಾಧ್ಯತೆಗಳಿವೆ. ಒಟ್ಟಾರೆ
ಕಣ್ವೇಶ್ವರ ದೇವಾಲಯವು ಕ್ರಿ.ಶ.೧೧೨೯ಕ್ಕಿಂತ ಮುಂಚೆಯೇ ನಿರ‍್ಮಾಣವಾದ ಹೊಯ್ಸಳ
ನಿರ್ಮಿತಿಯಾಗಿರುತ್ತದೆ. ಕಡಿಮೆ ಅಲಂಕರಣ, ಸರಳ ವಾಸ್ತುಪ್ರಕಾರಗಳು
ಇಲ್ಲಿಯ ಗುಣಲಕ್ಷಣಗಳಾಗಿವೆ.
ಬೆಳ್ಳೂರಿನ ಶ್ರೀ ರಾಮದೇವರ (ರಾಮನಾಥ) ದೇವಾಲಯ
ಗ್ರಾಮದ
ಪಶ್ಚಿಮ ದಿಕ್ಕಿಗೆ ಶ್ರೀ ರಾಮದೇವರ ದೇವಾಲಯವಿದೆ. ಪೂರ್ವಾಭಿಮುಖವಾಗಿರುವ ಈ ದೇವಾಲಯದಲ್ಲಿ
ಗರ್ಭಗೃಹ, ಅಂತರಾಳ, ಸಭಾಮಂಟಪಗಳಿರುತ್ತವೆ. ಸಭಾಮಂಟಪಕ್ಕೆ
ಪೂರ್ವ ಹಾಗೂ ದಕ್ಷಿಣ ದಿಕ್ಕುಗಳಿಂದ ಪ್ರವೇಶ ದ್ವಾರಗಳಿವೆ. ದಕ್ಷಿಣದ ಪ್ರವೇಶ ದ್ವಾರವನ್ನು ಗೋಡೆ
ಕಟ್ಟಿ ಸದ್ಯಕ್ಕೆ ಮುಚ್ಚಲಾಗಿದೆ. ೭’ ೭’’ x ೮’ ವಿಸ್ತೀರ್ಣದ ಗರ್ಭಗೃಹವಿದ್ದು, ಛತ್ತಿನಲ್ಲಿ
ಕತ್ತರಿಗಲ್ಲುಗಳ ಮೇಲ್ಛಾವಣಿ ಹಾಕಲಾಗಿದೆ. ಛತ್ತಿನ ಮಧ್ಯದಲ್ಲಿ ಅರಳಿದ ಕಮಲ, ಅದರ ಸುತ್ತಲೂ ಎಂಟು ವೃತ್ತಗಳನ್ನು ಎಳೆದು ಅಲಂಕಾರ ಮಾಡಲಾಗಿದೆ. ಗರ್ಭಗೃಹದಲ್ಲಿ
ವರದರಾಜ ಸ್ವಾಮಿಯನ್ನು ಪ್ರತಿಷ್ಠಾಪಿಸಲಾಗಿದೆ. ಎಡಬಲಕ್ಕೆ ಶ್ರೀದೇವಿ ಭೂದೇವಿಯರಿರುತ್ತಾರೆ.
ಸುಮಾರು ೧೪ನೇ ಶತಮಾನದ ಲಕ್ಷಣಗಳನ್ನು ಹೊಂದಿರುವ ಈ ವಿಗ್ರಹವನ್ನು ಶ್ರೀನಿವಾಸಪುರ ತಾಲ್ಲೂಕಿನ
ದಳಸನೂರಿನಿಂದ ತಂದು ಇಲ್ಲಿಡಲಾಗಿದೆಯೆಂದು ಹೇಳಲಾಗುತ್ತದೆ.೧೦ ಗರ್ಭಗೃಹದ
ಮೇಲೆ ಇಟ್ಟಿಗೆ ಮತ್ತು ಗಾರೆಯಿಂದ ಕಟ್ಟಲಾದ ೧೭ನೇ ಶತಮಾನದ ಶಿಖರವಿದ್ದು, ಶಿಥಿಲಾವಸ್ಥೆಯಲ್ಲಿದೆ.
ಅಂತರಾಳವೂ ಗರ್ಭಗೃಹದಂತೆ ೭’ x ೭’’ ೮’ ವಿಸ್ತೀರ್ಣವುಳ್ಳದುದ. ಛತ್ತಿನಲ್ಲಿ ಮೂರು
ಕಲ್ಲುಚಪ್ಪಡಿಗಳು, ಮಧ್ಯದಲ್ಲಿ ವೃತ್ತಾಲಂಕಾರವಿದೆ. ಅಂತರಾಳದ ಎಡಕ್ಕೆ ಎರಡೂವೆ ಅಡಿ ಎತ್ತರದ
ಕಟ್ಟೆ ಕಟ್ಟಲಾಗಿದೆ. ಅಂತರಾಳದ ಇಕ್ಕೆಲಗಳಲ್ಲಿ ಎರಡು ಅರ್ಧಗಂಬ, ಎರಡು
ಪೂರ್ಣಗಂಬ ಮಾದರಿಗಳಿರುತ್ತವೆ. ದ್ವಾರಶಾಖೆಯ ಪಕ್ಕದಲ್ಲಿ ಸಿಮೆಂಟ್‌ನಿಂದ ಮಾಡಿರುವ ದ್ವಾರಪಾಲಕರ
ವಿಗ್ರಹಗಳಿವೆ. ಸಭಾಂಗಣವು ದಕ್ಷಿಣೋತ್ತರ ೨೬ ಅಡಿ, ಪೂರ್ವ
ಪಶ್ಚಿಮದಲ್ಲಿ ೨೭ ಅಡಿ ಇರುತ್ತದೆ. ಇಲ್ಲಿ ೧೬ ಪೂರ್ಣಗಂಬಗಳಿದ್ದು ಗರ್ಭಗೃಹದೆದುರಿನ ನಾಲ್ಕು
ಕಂಬಗಳ ಅಲಂಕಾರ ಉಳಿದ ಕಂಬಗಳಿಗಿಂತ ಸ್ವಲ್ಪ ಹೆಚ್ಚು. ಛತ್ತಿನಲ್ಲಿ ಐದು ಅಂಕಣಗಳಿದ್ದು, ಮಧ್ಯಭಾಗದ ಅಂಕಣದಲ್ಲಿ ವೃತ್ತ, ಅದರೊಳಗೆ ನಾಲ್ಕು ದಳಗಳನ್ನು
ತೋರಿಸಲಾಗಿದೆ. ಮೇಲ್ಛಾವಣಿಯ ಮಧ್ಯದ ನಾಲ್ಕು ಅಂಕಣಗಳ ಛತ್ತು ಸಮತಟ್ಟಾಗಿದ್ದು, ಮುಂಭಾಗದ ಐದನೇ ಅಂಕಣದ ಛತ್ತು ಇಳಿಜಾರಾಗಿದೆ. ಸಭಾಮಂಟಪದ ಹೊರಗೋಡೆಯಲ್ಲಿ ಬಲಕ್ಕೆ ಎರಡು
ಮೂಲೆಗಂಬ, ಐದು ಕಂಬ ಮಾದರಿಗಳು, ಅಂತರಾಳದ
ಹೊರಗೋಡೆಯಲ್ಲಿ ಬಲಕ್ಕೆ ಒಂದು ದೇವಕೋಷ್ಠ, ಒಂದು ಅರ್ಧಗಂಬ; ಗರ್ಭಗೃಹದ ಹೊರಗೋಡೆಯಲ್ಲಿ ಎರಡು ಮೂಲೆಗಂಬ, ಎರಡು ಅರ್ಧಗಂಬ;
ಗರ್ಭಗೃಹದ ಹಿಂದೆ ಒಂದು ದೇವಕೋಷ್ಠ, ಎರಡು ಮೂಲೆಗಂಬ,
ಎರಡು ಅರ್ಧಕಂಬ ಮಾದರಿಗಳನ್ನು ಕಂಡರಿಸಲಾಗಿದೆ. ಸಭಾಮಂಟಪದ ಎದುರಿನ ಹೊರಗೋಡೆಗೆ
ಎರಡು ಅರ್ಧಗಂಬ ಮಾದರಿಗಳು, ಎರಡು ಮೂಲೆಗಂಬ ಮಾದರಿಗಳಿರುತ್ತವೆ.
ದೇವಾಲಯದ ಸಭಾಮಂಟಪದ ಎಡಪಾರ್ಶ್ವದಲ್ಲಿ ಎರಡು ಮೂಲೆಗಂಬಗಳು ಮಾತ್ರ ಇದ್ದು, ಗೋಡೆಯು ನಂತರದ ಸೇರ್ಪಡೆಯಾಗಿರುತ್ತದೆ. ಪೂರ್ವದ ಪ್ರವೇಶ ದ್ವಾರಕ್ಕೆ ಹೊಂದಿಕೊಂಡಿರುವ
ದೇವಸ್ಥಾನದ ಮಹಾದ್ವಾರವು ವಿಜಯನಗರ ಕಾಲದ ವಾಸ್ತುವಿನ್ಯಾಸವನ್ನೊಳ ಗೊಂಡಿದೆ. ಸಭಾಮಂಟಪದ ಗೋಡೆಗಳು
೨’ ೧೦’’, ಅಂತರಾಳ
ಮತ್ತು ಗರ್ಭಗೃಹಗಳ ಗೋಡೆಗಳು ೨’ ೭’’ ದಪ್ಪ ಹೊಂದಿರುತ್ತವೆ.
ರಾಮನಿಗೆ
ಅರ್ಪಿಸಲಾದ ದೇವಾಲಯವೇ ರಾಮ ದೇವಾಲಯವಾಗಿದ್ದು, ರಾಮನನ್ನು ತಮಿಳು ಶಾಸನಗಳಲ್ಲಿ ವಳವಂಡ ಪೆರುಮಾಳ್ ಎಂದು ಕರೆಯಲಾಗಿದೆ.೧೧ ಈ ದೇವಾಲಯದ ದಕ್ಷಿಣ ಗೋಡೆಯಲ್ಲಿರುವ ಕ್ರಿ.ಶ.೧೧೮೭ರ ಶಾಸನದಲ್ಲಿ ಗಂಗಪೆರುಮಾಳ್ ಹಾಗೂ ಅವನ
ಪತ್ನಿ ಅರನವಲ್ಲಿ ವೆಲ್ಲಿಯೂರಿನ ವಳವಂಡ ಪೆರುಮಾಳ ದೇವರಿಗೆ ಸುಂದರವಾದ ಮಂಟಪವನ್ನು
ಕಟ್ಟಿಸಿದನೆಂದು ತಿಳಿದುಬರುತ್ತದೆ.೧೨ ಉತ್ತರದ ತಳಪಾದಿ
ಕಲ್ಲಿನ ಮೇಲಿರುವ ಕ್ರಿ.ಶ.೧೨೮೬ರ ಶಾಸನವು ಹೊಯ್ಸಳ ದೊರೆ ರಾಮನಾಥನ ಆಳ್ವಿಕೆಯ ಕಾಲದ್ದಾಗಿದ್ದು, ಗಂಗ
ಪೆರುಮಾಳನು ವೆಲ್ಲಿಯೂರ್‌ನಿಂದ ತನಗೆ ಸಲ್ಲಬೇಕಾದ ಎಲ್ಲ ತೆರಿಗೆಗಳನ್ನು ವಳವಂಡ ಪೆರುಮಾಳ್
ದೇವರಿಗೆ ಬಿಟ್ಟನೆಂದು ತಿಳಿಸುತ್ತದೆ.೧೩ ವಿಜಯನಗರದ
ದೊರೆ ಒಂದನೇ ದೇವರಾಯನ ಕಾಲದ ಕ್ರಿ.ಶ.೧೪೦೭ರ ಶಿಲಾಶಾಸನವು ದೇವಾಲಯದ ಪೂರ್ವದ ತಳಪಾದಿ ಕಲ್ಲಿನ
ಮೇಲೆ ಬಾಗಿಲಿಗೆ ಬಲಗಡೆಯಿದೆ. ಇದರಲ್ಲಿ ಮಹಾಪ್ರಧಾನ ಬೊಮ್ಮೆ ದಣ್ಣಾಯಕ ಮಗ ಮುಳುವಾಗಿಲ ದೇವರಾಯ
ಒಡೆಯರ ಆದೇಶದಂತೆ ಮಲ್ಲಿಗ ದೇವರಾಣಿಯರ ಮಗ ಮಲಿದೇವರಾಣಿಯರು ಶ್ರೀ ವಿಷ್ಣುವರ್ಧನ ಚತುರ್ವೇದಿ
ಮಂಗಲವಾದ ಬೆಳ್ಳೂರು ಗ್ರಾಮಾಧಿದೈವರಾದ ಶ್ರೀ ರಾಮದೇವರಿಗೆ ಸಲ್ಲುವ ಮಡವಳ ಸೀಮೆಯನ್ನು
ಸಮರ್ಪಿಸಿದನೆಂದೂ ದೇವರಿಗೆ ಕಾಣಿಕೆಯಾಗಿ ಬಂದ ಹಣವನ್ನು ದೀಪಮಾಲೆಗೆ ಉಪಯೋಗವಾಗಲಿಯೆಂದೂ
ತಿಳಿಸಿದ್ದಾನೆ.೧೪ ಕ್ರಿ.ಶ.೧೪೯೮ರ ಶಿಲಾಶಾಸನವು ಬೆಳ್ಳಿಯೂರ್‌ನ ರಾಮಚಂದ್ರ ದೇವರ
ಉತ್ಸವಕ್ಕೆ ತೇರು ಮಾಡಿಸಿಕೊಟ್ಟ ಕಳವರದ ಪೆರುಮಾಳದೇವನ ಮಗನಾದ ಅಧಿಕಾರಿ ತಿಮ್ಮಯ್ಯನನ್ನು
ಉಲ್ಲೇಖಿಸುತ್ತದೆ.೧೫ ಒಟ್ಟಿನಲ್ಲಿ ಬೆಳ್ಳೂರಿನ ಕಣ್ವೇಶ್ವರ, ರಾಮದೇವರ
ದೇವಾಲಯಗಳ ಬಗ್ಗೆ ಇರುವ
ಶಿಲಾಶಾಸನಗಳು, ಕಲಾ ಇತಿಹಾಸದ ಅಂಶಗಳನ್ನು ಅವಲೋಕಿಸಿದಾಗ, ಎರಡು ದೇವಾಲಯಗಳು ಹೊಯ್ಸಳರ
ಅವಧಿಯಿಂದಲೂ ಪ್ರಸಿದ್ಧವಾಗಿದ್ದವೆಂದು ತಿಳಿದುಬರುತ್ತದೆ.
ಲಕ್ಷ್ಮೀಸಾಗರ ಕೋಟೆ
ಬೆಳ್ಳೂರು, ಗ್ರಾಮಪಂಚಾಯ್ತಿಗೊಳಪಡುವ
ಒಂದು ಹಳ್ಳಿ ಲಕ್ಷ್ಮೀಸಾಗರ. ಇಲ್ಲಿರುವ ಹಳೆಯ ಊರಿನ ಪಕ್ಕದ ಬೆಟ್ಟದ ಮೇಲೆ ಲಕ್ಷ್ಮೀಸಾಗರ ಕೋಟೆ
ಇರುತ್ತದೆ. ಬೆಟ್ಟದ ಮೇಲೆ ಸಿಗುವ ಬಿಳಿ ಗಟ್ಟಿಕಲ್ಲಿನ ಪದರುಗಳನ್ನು ತೆಗೆದು, ಅವುಗಳನ್ನು ಚಿಕ್ಕ ಚಿಕ್ಕ ಆಯತಾಕೃತಿಯಲ್ಲಿ ರಚಿಸಿಕೊಂಡು, ಸುಮಾರು
ಎಂಟು ಅಡಿ ಎತ್ತರದ ಕೋಟೆಗೋಡೆಯನ್ನು ಕಲ್ಲುಗಳಿಂದ, ಅದರ ಮೇಲಿನ ಐದು
ಅಡಿ ಎತ್ತರದ ಕೋಟೆಯನ್ನು ಇಟ್ಟಿಗೆಯಲ್ಲಿ ಕಟ್ಟಲಾಗಿದೆ. ಕಲ್ಲುಗಳ ನಡುವೆ ಗಾರೆ ಅಥವಾ ಸಿಮೆಂಟ್
ಬಳಕೆ ಮಾಡಿರುವುದಿಲ್ಲ. ಇಟ್ಟಿಗೆಗಳ ಮಧ್ಯ ಕೆಸರನ್ನು ಬಳಸಿರುವಂತೆ ಕಾಣುತ್ತದೆ. ಇಟ್ಟಿಗೆಗಳು
ಒಂದು ಅಡಿ ಉದ್ದ, ಅರ್ಧ ಅಡಿ ಅಗಲವಾಗಿರುತ್ತದೆ. ಕೋಟೆಗೆ ಪಶ್ಚಿಮ
ದಿಕ್ಕಿನಿಂದ ೬’ ೬’’ ಎತ್ತರದ
ಪ್ರವೇಶದ್ವಾರವಿದೆ. ಒಳಬಾಗಿಲಿಗೆ ಲಾಳಕಿಂಡಿ ಹಾಕಲು ಗೋಡೆಯಲ್ಲಿ ದೊಡ್ಡ ರಂಧ್ರ ಬಿಡಲಾಗಿದೆ.
ಕೋಟೆ ಗೋಡೆಯ ೪’ ೭’’ ದಪ್ಪವನ್ನು
ಹೊಂದಿದ್ದು, ಪ್ರವೇಶ ದ್ವಾರದಲ್ಲಿ ಎರಡು ಕಲ್ಲುಗಂಬಗಳನ್ನು ನಿಲ್ಲಿಸಿ, ಅವುಗಳ ಮೇಲೆ ಮೂರು ಕಲ್ಲು ಚಪ್ಪಡಿಗಳನ್ನು ಹೊದಿಸಲಾಗಿದೆ. ಬಾಗಿಲುಗಳನ್ನು ಕೂಡಿಸಲು
ಮೇಲಣ ಚಪ್ಪಡಿಗಳಿಗೆ ನಾಲ್ಕು ಇಂಚುಗಳ ವ್ಯಾಸದ ರಂಧ್ರಗಳಿರುತ್ತವೆ. ಕೋಟೆಯ ಒಳ ವಿಸ್ತೀರ್ಣವು ೭೫’ x ೭೫’ ಆಗಿರುತ್ತದೆ. ಕೋಟೆಯೊಳಗಿನ ಕಲ್ಲುಹಾಸಿನ
ಮೇಲೆ ನಾಲ್ಕು ಇಂಚು ವ್ಯಾಸದ ನಾಲ್ಕು ಹಾಗೂ ೧’ ೪’’ ವ್ಯಾಸದ ಒಂದು ರಂಧ್ರಗಳನ್ನು ಕೊರೆಸಲಾಗಿದೆ. ಕೋಟೆಯ ಹಿಂಭಾಗಕ್ಕೆ ಅಂದರೆ ಪೂರ್ವದ
ಗೋಡೆಯಲ್ಲಿ ೧’ ೬’’ x ೧’ ೬’’ ವಿಸ್ತೀರ್ಣದ ಚೌಕದ ಕಿಂಡಿಯನ್ನು ನೆಲದಿಂದ
ಒಂದು ಅಡಿ ಎತ್ತರದಲ್ಲಿ ಮಾಲೂರು ರಸ್ತೆಯಲ್ಲಿರುವ ಜೋಡಿ ಕೃಷ್ಣಾಪುರ ಗ್ರಾಮ ಹಾಗೂ ಬೆಟ್ಟಗಳ
ಹಿನ್ನೆಲೆಯ ಪ್ರಾಕೃತಿಕ ಸೊಬಗು ಕಾಣಿಸುತ್ತದೆ. ಕೋಟೆಯ ನಾಲ್ಕು ದಿಕ್ಕುಗಳಲ್ಲಿ ಗೋಡೆಗಿಂತಲೂ
ಎತ್ತರದ ವೃತ್ತಾಕಾರದ ಬುರುಜುಗಳನ್ನು ನಿರ‍್ಮಿಸಲಾಗಿದೆ. ಕೋಟೆಯ ಲಕ್ಷಣಗಳ ಆಧಾರದಿಂದ ಇದೊಂದು ೧೭
ಅಥವಾ ೧೮ನೇ ಶತಮಾನದ ಕೋಟೆಯೆನ್ನಬಹುದು. ಕೋಟೆಯು ಬೃಹತ್ತಾದ ಏಕಶಿಲಾ ಬೆಟ್ಟದ ಮೇಲಿದ್ದು, ಕ್ಷೇತ್ರ
ಕಾರ್ಯ ಸಂದರ್ಭದಲ್ಲಿ ಬಂಡೆಸ್ಫೋಟ ನಡೆಯುತ್ತಿತ್ತು.
ವೆಲ್ಲಿಯೂರಿನ
ಪ್ರಖ್ಯಾತ ಸಭಾ (ಉಡಿeಚಿಣ ಂssembಟಥಿ oಜಿ ಗಿiಟಟiಥಿuಡಿ)ದ ಸದಸ್ಯನಾದ
ಮುರುಗನ್ ತನ್ನ ಹಳ್ಳಿ ಬೆಳ್ಳೂರಿಗೆ ಸೇವೆ ಸಲ್ಲಿಸಿದ ವ್ಯಕ್ತಿಯೊಬ್ಬನಿಗೆ ಕುಡಂಗೈ ಭೂದಾನ
ಮಾಡಿರುವುದು; ವಿಲಿಸೆಟ್ಟಿಯ ಮಗ ವೀರನು ಕಟ್ಟಿಸಿದ ಕಲ್ಲುಕಟ್ಟಿನ ಬಾವಿ, ಒರಳುಗಳ ನಿರ್ಮಾಣ; ಅತ್ರೇಯ ಗೋತ್ರದ ಪುಳ್ಳಿಯಯ್ಯ ಮಾಡಿಸಿದ
ಕೆರೆಯ ತೂಬು೧೬ ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಬೆಳ್ಳೂರು ಪರಿಸರದಲ್ಲಿ
ನಿರಂತರವಾಗಿ ಸಮಾಜ ಸೇವಾ ಕೈಂಕರ್ಯ ನಡೆದಿರುವುದು ಸ್ಪಷ್ಟವಾಗುತ್ತದೆ.
[ಸಲಹೆಗಳನ್ನಿತ್ತ ಪೂಜ್ಯ ಗುರುಗಳಾದ ಡಾ. ಪಿ.ವಿ. ಕೃಷ್ಣಮೂರ್ತಿ, ಕ್ಷೇತ್ರಕಾರ‍್ಯದಲ್ಲಿ ನೆರವಾದ ಬೆಳ್ಳೂರಿನ ಅನಿಲ್ ಹಾಗೂ
ತಿಮ್ಮರಾಯಪ್ಪನವರಿಗೆ ಅಭಾರಿಯಾಗಿರುತ್ತೇನೆ.]
ಆಧಾರಸೂಚಿ ಮತ್ತು ಟಿಪ್ಪಣಿಗಳು
೧. ಮೈಸೂರು ಆರ್ಕಿಯಾಲಾಜಿಕಲ್
ರಿಪೋರ್ಟ್ ೧೯೧೪, ಪುಟ ೩೫, ೩೮.
೨. ಗೆಜೆಟಿಯರ್ ಆಫ್ ಇಂಡಿಯಾ, ಕೋಲಾರ ಡಿಸ್ಟ್ರಿಕ್ಟ್, ೧೯೬೮, ಸಂಪಾದಕರು : ಕೆ. ಅಭಿಶಂಕರ್, ಪುಟ ೫೩೪.
೩. ಭಾರತದ ಗೆಜೆಟಿಯರ್, ಕೋಲಾರ ಜಿಲ್ಲೆ, ಸಂಪಾದಕರು : ಎಚ್. ಚಿತ್ತರಂಜನ್, ಪುಟ ೮೮೭.
೪. ಡಾ. ಕೆ.ಬಿ. ಶಿವತಾರಕ್., ತುಮಕೂರು ಜಿಲ್ಲಾ ಪ್ರದೇಶದ ಬೃಹತ್ ಶಿಲಾಯುಗ ಸಂಸ್ಕೃತಿ, ಇತಿಹಾಸ ದರ್ಶನ, ಸಂ. ೧೭, ಪು೧ ೧೬.
೫. ಕನ್ನಡ ವಿಶ್ವಕೋಶ, ಸಂ. ೧೪, ಕುವೆಂಪು ಕನ್ನಡ ಅಧ್ಯಯನ
ಸಂಸ್ಥೆ, ಮೈಸೂರು ವಿ.ವಿ., ಪುಟ ೫೮೭.
೬. ಎಪಿಗ್ರಾಫಿಯಾ ಕರ್ನಾಟಿಕ
೧೭, ಕೋಲಾರ ಜಿಲ್ಲೆ ಪುರವಣಿ, ಶಾಸನ ಸಂಖ್ಯೆ ೧೪೫.
೭. ಅದೇ, ಕೋಲಾರ ೧೪೨.
೮. ಅದೇ, ಕೋಲಾರ ೯೪.
೯. ಅದೇ, ಕೋಲಾರ ೧೪೬.
೧೦. ಗೆಜೆಟಿಯರ್ ಆಫ್ ಇಂಡಿಯಾ, ಕೋಲಾರ್ ಡಿಸ್ಟ್ರಿಕ್ಟ್ ೧೯೬೮, ಸಂ. ಕೆ. ಅಭಿಶಂಕರ್, ಪುಟ ೭೯.
೧೧. ಅದೇ, ಪುಟ ೫೩೪.
೧೨. ಎಪಿಗ್ರಾಫಿಯಾ ಕರ್ನಾಟಿಕ
೧೭, ಕೋಲಾರ ಜಿಲ್ಲೆ ಪುರವಣಿ, ಕೋಲಾರ ೧೫೦.
೧೩. ಅದೇ, ಕೋಲಾರ ೧೫೧.
೧೪. ಅದೇ, ಕೋಲಾರ ೧೫೨.
೧೫. ಅದೇ, ಕೋಲಾರ ೧೪೭.
೧೬. ಮೈಸೂರು ಆರ್ಕಿಯಾಲಾಜಿಕಲ್
ರಿಪೋರ್ಟ್ ೧೯೧೪, ಪುಟ ೩೮, ೪೪, ೫೧.
No comments:
Post a Comment