Saturday, December 1, 2012

ಪುನ್ನಾಟದ ಪುರಾತನ ಬಂಡಿ




         ಕೀರ್ತಿಪುರ ಅಥವಾ ಈಗಿನ ಮೈಸೂರು ಜಿಲ್ಲೆ, ಹೆಚ್.ಡಿ. ಕೋಟೆ ತಾಲೂಕಿನ ಕಿತ್ತೂರು ಪ್ರಾಚೀನ ಪುನ್ನಾಟದ ರಾಜಧಾನಿ. ಕಾವೇರಿ ಮತ್ತು ಕಪಿನಿ ನದಿಗಳಿಂದ ಆಲಂಕೃತವಾದ ಪ್ರದೇಶ ಪುಂರಾಷ್ಟ್ರ ವೆಂದು ಶಾಸನೋಕ್ತ ಉಲ್ಲೇಖವಿದೆ. ಪ್ರಸ್ತುತ ಕಬಿನಿ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಕಿತ್ತೂರಿನ, ಉಳಿಕೆ ಪ್ರದೇಶದಲ್ಲಿ  ರವಿರಾಮೇಶ್ವರ ದೇವಾಲಯ, ಶಾಸನ, ಬಿಡಿ ಶಿಲ್ಪಗಳು ಅಲ್ಲಲ್ಲಿ ಕಂಡು ಬರುತ್ತವೆ.
          ಅಕ್ಟೋಬರ್ ೨೯, ೨೦೧೧ ರಂದು ಹೆಚ್.ಡಿ. ಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ನಾವು ಕಿತ್ತೂರಿನಲ್ಲಿ ನಡೆಸಿದ ಕ್ಷೇತ್ರಾಧ್ಯಯನ ಸಂದರ್ಭದಲ್ಲಿ ಕಂಡು ಬಂದ ಒಂದು ಅಪರೂಪದ ಕಲ್ಲಿನ ಬಂಡಿಯ ಶಿಲ್ಪದ ವಿಶ್ಲೇಷಣಾತ್ಮಕ ಲೇಖನವೇ ಈ ಪ್ರಬಂಧ.


ಪುನ್ನಾಟ:

 ಪ್ರಾಚೀನ ಕರ್ನಾಟಕದ ದಕ್ಷಿಣ ಭಾಗದಲ್ಲಿದ್ದ ಒಂದು ಭೌಗೋಳಿಕ ಘಟಕ, ಇದರ ವಿಸ್ತೀರ್ಣ ಅಸ್ಪಷ್ಟ. ಪುನ್ನಾಟ ಪ್ರದೇಶಕ್ಕೆ ಬಹು ಪ್ರಾಚೀನ ಉಲ್ಲೇಖಗಳು ದೊರೆಯುತ್ತವೆ. ಈಜಿಪ್ಟಿನ ೧೮ನೆಯ ರಾಜವಂಶದ ಅರಸರುಗಳ, ಪ್ರ.ಶ.ಪೂ. ೧೫-೧೪ ನೆಯ ಶತಮಾನದ ದಾಖಲೆಗಳಲ್ಲಿ ದೊರಕುವ ಪುಂಟ್ ಪುನ್ನಾಟವಿರಬಹುದೆಂದು ಕೆಲವು ವಿದ್ವಾಂಸರ ಅಭಿಪ್ರಾಯ. ಒಂದು ಪ್ರತೀತಿಯಂತೆ ಹರಿಷೇಣನ ಬೃಹತ್ಕಥಾ ಕೋಶದಲ್ಲಿ (೯೩೧) ಭದ್ರಭಾಹುವಿನ ಮಾತಿನಂತೆ ಜೈನ ಸಂಘ ದಕ್ಷಿಣದಲ್ಲಿದ್ದ ಪುನ್ನಾಟ ವಿಷಯಕ್ಕೆ ಹೋಯಿತು ಎಂದು ಹೇಳಿದೆ. ಇದರಂತೆ ಪುನ್ನಾಟ ರಾಜ್ಯ ಪ್ರ.ಶ.ಪೂ. ೩ ನೇ ಶತಮಾನದಲ್ಲಿಯೇ ಅಸ್ತಿತ್ವದಲ್ಲಿತ್ತೆನ್ನಬಹುದು. ಪ್ರಶಕ್ತ ಶಕಾರಂಭದಲ್ಲಿ ರೋಮ್ ಚಕ್ರಾಧಿಪತ್ಯಕ್ಕೂ ಈ ರಾಜ್ಯಕ್ಕೂ ವ್ಯಾಪಾರ ಸಂಬಂಧ ಬೆಳದು ಬಂದಿದ್ದಿರಬೇಕು. ಫ್ಲೀನಿ ಭಾರತದ ಪಚ್ಚೆಯ ಹರಳುಗಳ ಮೇಲೆ ರೋಮನ್ ಕುಶಲ ಕಲೆಗಾರರು ಕೆತ್ತನೆ ಮಾಡಿರುವ ವಿಷಯ ತಿಳಿಸಿದ್ದಾನೆ. ಗ್ರೀಕ್ ಭೂಗೋಳ ಶಾಸ್ತ್ರಜ್ಞ ಟಾಲೆಮಿ (ಕ್ರಿ.ಶ. ೯೦-೧೬೮), ಪುನ್ನಾಟವನ್ನು ಪೌನ್ನಟ ವೆಂದು ಕರೆದಿದ್ದಾನೆ. 


          ೪ ನೇ ಶತಮಾನದಲ್ಲಿ ಕದಂಬ ಮೂಲ ಪುರುಷ ಮಯೂರ ಶರ್ಮ ಇತರ ಅನೇಕ ರಾಜ ಮನೆತನಗಳ ಜೊತೆಗೆ ಪುನ್ನಾಟರನ್ನು ಸೋಲಿಸಿದನೆಂದು ಚಂದ್ರವಳ್ಳಿಯ ಶಾಸನದಿಂದ ವ್ಯಕ್ತವಾಗುತ್ತದೆ. (ಆದರೆ ಡಾ. ಬಿ. ರಾಜಶೇಖರಪ್ಪ ನವರು, ಶಾಸನದ ಪಾಠವನ್ನು ಸಂಪೂರ್ಣ ಪರಿಷ್ಕರಿಸಿ, ಚಂದ್ರವಳ್ಳಿ ಶಾಸನ ಕೇವಲ ಕೆರೆಯೊಂದರ ನಿರ್ಮಾಣದ ವಿಷಯವನ್ನು ತಿಳಿಸುತ್ತದೆ ಎಂದು ಸಾಧಿಸಿ ತೋರಿಸಿದ್ದಾರೆ) ಪುನ್ನಾಟ ರಾಜರೆಂದು ಪ್ರಸಿದ್ಧವಾಗಿರುವ ೫-೭ ನೇ ಶತಮಾನಗಳಲ್ಲಿ ಈ ಪ್ರದೇಶದಲ್ಲಿ ಆಳಿದ ವಂಶದವರ ಮೂರು ತಾಮ್ರ ಶಾಸನಗಳು ಇದುವರೆಗೆ ದೊರೆತಿವೆ. ಕೊಮರಲಿಂಗಂ ತಾಮ್ರ ಶಾಸನದಲ್ಲಿ ಪುನ್ನಾಟ ರಾಜ ರವಿದತ್ತ ರಾಜಧಾನಿ ಕಿತ್ಥಿಪುರ ದಲ್ಲಿದ್ದು ದಾನ ಮಾಡಿದುದಾಗಿ ತಿಳಿಸಿರುವುದರಿಂದ ಕಿತ್ಥಿಪುರ ಅಥವಾ ಕೀರ್ತಿಪುರ ಇವರ ರಾಜಧಾನಿಯಾಗಿತ್ತೆಂಬುದು ಸ್ಪಷ್ಟ.

          ಕಬಿನಿ ನದಿಯ ದಡದಲ್ಲಿರುವ ಈಗಿನ ಕಿತ್ತೂರು ಹಿಂದಿನ ಕೀರ್ತಿಪುರವಾಗಿತ್ತೆಂದು ಅಲ್ಲಿ ಒಂದು ಶಾಸನದಿಂದ ಸಿದ್ಧಪಡುತ್ತದೆ. ಈ ವಂಶದ ಮೂಲ ಪುರುಷ ತಾಮ್ರ ಕಶ್ಯಪ (ಇವನು ಮಿಕನೆಂಬುವನ ಮಗನೆಂದು ಒಂದು ಶಾಸನ ತಿಳಿಸುತ್ತದೆ).  ಈ ತಾಮ್ರ ಕಾಶ್ಯಪನ ಮಗ ರಾಜಾದಿತ್ಯ. ಇವನ ವಂಶದಲ್ಲಿ ಮುಂದೆ ಕಾಣಿಸಿಕೊಳ್ಳುವವನು ವಿಷ್ಣುದಾಸ. ಈ ವಿಷ್ಣುದಾಸನ ಮಗ ರಾಷ್ಟ್ರವರ್ಮ (ಸು. ೪೭೫), ಕದಂಬ ವಂಶದ ಪ್ರಭಾವತಿ ಎಂಬುವಳನ್ನು ಮದುವೆಯಾಗಿದ್ದ. ಈತನಿಗೆ ಮೂವರು ಮಕ್ಕಳು. ಮಾಂಬಳ್ಳಿ ಶಾಸನವನ್ನು ಹಾಕಿಸಿದ ಪ್ರಥ್ವೀಪತಿ (ಸು. ೫೨೦), ಸ್ಕಂದವರ್ಮ (ಸು. ೫೩೦) ಮತ್ತು ಕೊಮರಲಿಂಗಂ ಶಾಸನದ ಕರ್ತೃ ರವಿದತ್ತನ ಮುತ್ತಾತನಾದ ನಾಗದತ್ತ (ಸು. ೫೩೦). ಕೊಮರಲಿಂಗಂ ಶಾಸನದಲ್ಲಿ, ಈ ವಂಶಾವಳಿ ಹೀಗೆ ಮುಂದುವರೆಯುತ್ತದೆ. ನಾಗದತ್ತನ ಮಗ ಭುಜಂಗಾಧಿರಾಜ (ಸು. ೫೭೫), ಅವನ ಮಗ ಸ್ಕಂದವರ್ಮ (ಸು.೬೨೫), ಆ ಸ್ಕಂದವರ್ಮನ ಮಗ ಶಾಸನದ ಕರ್ತೃವಾದ ಪುನ್ನಾಟದ ರಾಜ ರವಿದತ್ತ (ಸು. ೬೫೦). ದುರ್ವಿನೀತನ ಶಾಸನಗಳಲ್ಲಿ ಅವನನ್ನು ಪೌನ್ನಾಟಾಧಿಪತಿನಾ ಎಂದು ಕರೆಯಲಾಗಿದೆ.

 ಬಂಡಿಯ ಪ್ರಾಚೀನತೆ:

     ಭಾರತ ಅನಾದಿ ಕಾಲದಿಂದಲೂ ಕೃಷಿ ಪ್ರಧಾನ ಆರ್ಥಿಕತೆಯ ದೇಶ. ಎತ್ತಿನ ಬಂಡಿ ಕೃಷಿಯಾಧಾರಿತ ಬದುಕಿನ ಬುನಾದಿ. ಸಿಂಧೂ-ಸರಸ್ವತಿ ನಾಗರೀಕತೆಯ ಕಾಲದಿಂದಲೂ ಬಂಡಿ ಭಾರತದ ಆರ್ಥಿಕತೆಯ ಭಾಗವಾಗಿದೆ. ಸಿಂಧೂ-ಸರಸ್ವತಿ ನಾಗರೀಕತೆಯ ವಿವಿಧ ನಿವೇಶನಗಳಲ್ಲಿ ಬಂಡಿಯ ಆಟಿಕೆ ಮಾದರಿಯ ಅವಶೇಷಗಳು ಪತ್ತೆಯಾಗಿವೆ. ಉತ್ತರ ದಖ್ಖನ್ನಿನ ಜೋರ್ವೆ ಸಂಸ್ಕೃತಿಯ ಇನಾಂಗಾವ್ ನೆಲೆಯಲ್ಲಿ ದೊರೆತ ಒಂದು ಮಡಕೆಯ ಅವಶೇಷದ ಮೇಲೆ ಎತಿನ ಬಂಡಿಯ ಆಕರ್ಷಕ ಚಿತ್ರವಿದೆ, ಬಹುಶಃ ಇದೇ ದಕ್ಷಿಣ ಭಾರತದ ಅತ್ಯಂತ ಪ್ರಾಚೀನ ಬಂಡಿಯ ಉದಾಹರಣೆಯೆನ್ನಬಹುದು. ಕರ್ನಾಟಕದಲ್ಲಿ ಬೃಹತ್ ಶಿಲಾಯುಗದ ಕಾಲದಲ್ಲಿಯೇ ಎತ್ತು ಅಥವಾ ಕೋಣಗಳಿಂದ ಎಳೆಯಲ್ಪಡುತ್ತಿದ್ದ ಬಂಡಿಗಳು ಅಸ್ತಿತ್ವದಲ್ಲಿದ್ದಿರಬಹುದಾದ ಭಾಷಿಕ ಸೂಚನೆಗಳಿವೆ. ಮಲೆನಾಡಿನ ಹೆರಗಲ್, ಬೈಸೆ ಮತ್ತು ಮುರುಂಬದ ಬೃಹತ್ ಶಿಲಾಯುಗ ಕಾಲದ ನಿಲಿಸುಗಲ್ಲುಗಳ ಬಗ್ಗೆ ಚರ್ಚಿಸುತ್ತಾ ಡಾ. ಅ. ಸುಂದರ ಅವರು ಹೇರು ಎಂದರೆ ಭಾರ + ಕಲ್ = ಹೆರಗಲ್, ಎಂದರೆ ಕಲ್ಲುಗಳನ್ನು ಬಂಡಿಗಳಲ್ಲಿ ತುಂಬಿಸಿ ಸಾಗಿಸುತ್ತಿದ್ದ ಸ್ಥಳ ಎಂದು ಅರ್ಥೈಸಿದ್ದಾರೆ. ಇದರಿಂದ ಬೃಹತ್ ಶಿಲಾಯುಗ ಕಾಲದಲ್ಲೆ ಬಂಡಿಗಳ ಬಳಕೆ ಇಲ್ಲಿ ವ್ಯಾಪಕವಾಗಿತ್ತೆಂದು ತಿಳಿಯುತ್ತದೆ.  ಸನ್ನತಿಯ ಉತ್ಖನನದಲ್ಲಿ ಪತ್ತೆಯಾದ ಶಿಲಾ ಫಲಕಗಳ ಮೇಲೆ ಬಂಡಿಯ ಉಬ್ಬು ಶಿಲ್ಪಗಳಿದ್ದು ಬಹುಶಃ ಅವುಗಳೇ ದಕ್ಷಿಣ ಭಾರತದ ಅತ್ಯಂತ ಪ್ರಾಚೀನ ಎತ್ತಿನ ಬಂಡಿಯ ಶಿಲ್ಪಗಳಾಗಿವೆ. ನಂತರ ದೇವಾಲಯಗಳ ಭಿತ್ತಿ ಶಿಲ್ಪಗಳಾಗಿ ಬಂಡಿಯ ಶಿಲ್ಪಗಳು ಕಂಡು ಬರುತ್ತವೆ.

ಪುನ್ನಾಟದ ಪುರಾತನ ಬಂಡಿ:



ಪುನ್ನಾಟದ ಪುರಾತನ ಬಂಡಿ ಸುಮಾರು ಎರಡು ಅಡಿ ಎತ್ತರವಿದ್ದು ಹತ್ತು ಇಂಚು ಅಗಲವಿದೆ. ಇದನ್ನು ಕಂದು ಬಣ್ಣದ ಗ್ರಾನೈಟ್ ಶಿಲೆಯಲ್ಲಿ ರಚಿಸಲಾಗಿದೆ. ದೇವಾಲಯದ ಭಿತ್ತಿ ಶಿಲ್ಪವಾಗಿಯೋ ಅಥವಾ ಉಬ್ಬು ಶಿಲ್ಪವಾಗಿಯೋ ಇರದೆ, ಹಂಪಿಯ ರಥದ ಹಾಗೆ ಒಂದು ಸ್ವತಂತ್ರ ಶಿಲ್ಪವಾಗಿರುವುದು ಈ ಶಿಲ್ಪದ ವೈಶಿಷ್ಟ್ಯವಾಗಿದೆ. ಎತ್ತರವಾದ ಪೀಠದ ಮೇಲೆ ಎರಡು ದಷ್ಠ-ಪುಷ್ಠ ಎತ್ತುಗಳು ಗಾಡಿಯ ನೊಗವನ್ನು ಹೊತ್ತು ನಿಂತಿರುವಂತೆ ಚಿತ್ರಿಸಲಾಗಿದೆ. ಗಾಡಿಯ  ಮುಂಭಾಗದಲ್ಲಿ ಗಾಡಿ ನಡೆಸುವ ವ್ಯಕ್ತಿ ಎಡಗೈಯಲ್ಲಿ ಸೂತ್ರಗಳನ್ನು ಹಿಡಿದು ಕುಳಿತು ಕೊಂಡಿದ್ದಾನೆ ಬಲಗೈಯಲ್ಲಿ ಚಾವಟಿಯಿದೆ. ಬಂಡಿಯ ಎರಡೂ ಪಾರ್ಶ್ವಗಳಲ್ಲಿ ಎರಡು ಗಾಲಿಗಳಿವೆ. ಬಂಡಿಯ ಅರೆ ಸುತ್ತ ಮತ್ತೊಂದು ಗಾಲಿಯಂತಹ ರಚನೆ ಇದ್ದು, ಸರಳವಾದ ಗಾಲಿಗೆ ಸೌಂದರ್ಯವನ್ನು ಒದಗಿಸಿದೆ. ಗಾಡಿಯ ಹೊರಭಾಗದಲ್ಲಿ ಎರಡು ಅಡ್ಡ ಪಟ್ಟಿಕೆಗಳಿವೆ. ಗಾಡಿಗೆ ಕಮಾನಿನ ಮುಚ್ಚುಕೆ ಇದೆ. ಎತ್ತುಗಳ ಮುಖ ಮತ್ತು ಬಂಡಿ ಹೊಡೆವವನ ಮುಖಗಳು ಮುಕ್ಕಾಗಿವೆಯಾದರೂ ಅವುಗಳ ಸಹಜ ಸೌಂದರ್ಯಕ್ಕೆ ಗಾಂಭೀರ್ಯಕ್ಕೆ ಏನೂ ಧಕ್ಕೆಯಾಗಿಲ್ಲ.

ಪುನ್ನಾಟದ ಬಂಡಿಯ ಕಾಲ:

          ಈ ಶಿಲ್ಪದ ಚಿತ್ರವನ್ನು ಅವಲೋಕಿಸಿದ ಪ್ರಖ್ಯಾತ ಪುರಾತತ್ವ ವಿದ್ವಾಂಸ ಡಾ.ಅ. ಸುಂದರ ಅವರು ಇದೊಂದು ಸ್ಮಾರಕ ಶಿಲ್ಪದಂತಿದ್ದು, ಕಾಲಮಾನದ ದೃಷ್ಠಿಯಿಂದ ವಿಜಯನಗರ ಕಾಲದ್ದಾಗಿರಬಹುದೆಂದು ಅಭಿಪ್ರಾಯ ಪಟ್ಟಿದ್ದಾರೆ. ಮತ್ತೋರ್ವ ವಿದ್ವಾಂಸರಾದ ಡಾ. ಬಿ. ರಾಜಶೇಖರಪ್ಪನವರು, ಸುಮಾರು ೧೦ನೇ ಶತಮಾನದ ಶಿಲ್ಪವೆಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ನನ್ನ ಪ್ರಕಾರ ಇದು ಸುಮಾರು ೭ ನೇ ಶತಮಾನದ ಶಿಲ್ಪವಾಗಿದೆ. ಕಾಲದ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದ್ದರೂ ಖಂಡಿತ ಇದೊಂದು ಅಪರೂಪದ ಶಿಲ್ಪವೆನ್ನುವುದರಲ್ಲಿ ಎರಡು ಮಾತಿಲ್ಲ ಎನ್ನುವುದು ವಿದ್ವಾಂಸರ ಅಭಿಪ್ರಾಯವಾಗಿದೆ.

ಪುನ್ನಾಟದ ಬಂಡಿಯ ಮಹತ್ವ:


            ಸು. ಕ್ರಿ.ಶ. ೬ನೇ ಶತಮಾನದ ಮಾಂಬಳ್ಳಿ ತಾಮ್ರ ಶಾಸನವು ಈ ರಾಷ್ಟ್ರವನ್ನು ಹೀಗೆ ಬಣ್ಣಿಸಿದೆ. ಈ ದೇಶವು ಎಮ್ಮೆ, ಆಕಳು, ಕುದುರೆಗಳಿಂದಲೂ, ಉಣ್ಣೆಯ ಬಟ್ಟೆ, ರತ್ನ, ಬಂಗಾರ, ಬೆಳ್ಳಿ, ಮುತ್ತು, ಹವಳಗಳ ಸಂಪತ್ತುಳ್ಳ ಜನರಿಂದಲೂ ಬಹು ಶೋಭಾಯಮಾನವಾಗಿತ್ತು. ಭತ್ತ, ಗೋಧಿ, ಜವೆಗೋಧಿ, ರಾಡಾಕ(?) (ಇದು ರಾಗಿಯಾಗಿರಬಹುದೇ?)ಗಳು ಪ್ರತಿವರ್ಷವೂ ಹುಲುಸಾಗಿ ಬೆಳಿಯುತ್ತಿದ್ದವು. ಜನರು ತಮ್ಮ ನಿತ್ಯ ಜೀವನದಲ್ಲಿ ವಿವಾಹ, ಉತ್ಸವ, ನರ್ತನಾದಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆನಂದಗೊಳ್ಳುತ್ತಿದ್ದರು. ಬಾಳೆ, ಅಡಕೆ, ತೆಂಗು, ಕಬ್ಬು, ಹಲಸು, ಸಂಪಿಗೆ, ವೀಳ್ಯದೆಲೆ, ಬಕುಲ, ಅಶೋಕ, ಪುನ್ನಾಗ, ಮೊದಲಾದ ಗಿಡಬಳ್ಳಿಗಳುಳ್ಳ ತೋಟಗಳಿಂದ ಕಂಗೊಳಿಸುವ ತಟಗಳುಳ್ಳ ಕಾವೇರಿ, ಕಪಿನೀ ನದಿಗಳಿಂದ ಆಲಂಕೃತವಾಗಿತ್ತು ಮತ್ತು ವಿದೇಹ ದೇಶದಂತೆ ಸೊಬಗಿನ ಬೀಡಾಗಿ ಶೋಭಿಸುತ್ತಿತ್ತು ಎಂದು ತಿಳಿಸಿದೆ. ಅದೇ ಶಾಸನದ ೧೯ ನೇ ಸಾಲಿನಲ್ಲಿ, ವ್ಯಾಪಾರೋರ್ಜಿತದಕ್ಷಿಣ ಭುಜಃ ಎಂದೂ, ಮುಂದುವರೆದು ವ್ಯಾಪಾರ ರತಾಪ ಘನ ಭುಜಃ ಅಪ್ರತಿಹತ ನೆಂದು ವರ್ಣಿಸಲಾಗಿದೆ ಶಾಸನೋಕ್ತ ವಿವರಗಳಿಂದ ಪುನ್ನಾಟವು ಕೃಷಿ, ಪಶುಪಾಲನೆ, ಗಣಿಗಾರಿಕೆ ಮತ್ತು ವಾಣಿಜ್ಯಾಧಾರಿತ ಆರ್ಥಿಕತೆಯನ್ನು ಹೊಂದಿದ್ದ ಸಂಪದ್ಭರಿತ ದೇಶವಾಗಿತ್ತು ಎನ್ನುವುದು. ಸ್ಪಷ್ಟವಾಗುತ್ತದೆ. ವಾಣಿಜ್ಯ ಮತ್ತು ಕೃಷಿಯಲ್ಲಿ ಮುಂಚೂಣಿಯಲ್ಲಿದ್ದ ದೇಶವೊಂದರ ಪ್ರಮುಖ ಸಾಧನವೆಂದರೆ ಬಂಡಿ, ಅಂತಹ ಬಂಡಿಯನ್ನು ಸ್ವತಂತ್ರ ಶಿಲ್ಪವೊಂದರಲ್ಲಿ ಅಭಿವ್ಯಕ್ತಗೊಳಿಸಿರುವುದು ಅಸಹಜ ಸಂಗತಿಯೇನಲ್ಲ. ಈ ಹಿನ್ನೆಲೆಯಲ್ಲಿ ಬಂಡಿ ೬-೭ ನೇ ಶತಮಾನದ ಶಿಲ್ಪವೇ ಆಗಿರಬೇಕೆನಿಸುತ್ತದೆ.

  

       
             ಪ್ರೊ.ಟಿ.ಮುರುಗೇಶಿ
ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗ
ಎಂ.ಎಸ್.ಆರ್.ಎಸ್. ಕಾಲೇಜು ಶಿರ್ವ - ೫೭೪೧೧೬
ಉಡುಪಿ. Ph: ೯೪೮೨೫೨೦೯೩೩
ಪ್ರೊ. ಎ. ಉಷಾದೇವಿ
ಇತಿಹಾಸ ವಿಭಾಗ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಹೆಚ್.ಡಿ. ಕೋಟೆಮೈಸೂರು.
*

 

                                   


.

No comments:

Post a Comment