Thursday, December 6, 2012

ಹೊಳಲ್ಕೆರೆ ತಾಲ್ಲೂಕಿನಲ್ಲಿ ಕೆಲವು ಬೃಹತ್ ಶಿಲಾಯುಗದ ನೆಲೆಗಳ ಶೋಧ


ಎನ್.ಎಸ್. ಮಹಂತೇಶ ಎಸ್.
 ಇತಿಹಾಸ ಅಧ್ಯಾಪಕ
ಸಂಜೀವಿನಿ ನಿಲಯ, ೮ನೇ ಕ್ರಾಸ್
ಸಿ.ಕೆ. ಪುರ, ಕೆಳಗೋಟೆ, ಚಿತ್ರದುರ್ಗ - ೫೭೭೫೦೧.


ಹೊಳಲ್ಕೆರೆ ತಾಲೂಕು ಚಿತ್ರದುರ್ಗ ಜಿಲ್ಲೆಯ ಪ್ರಾಗೈತಿಹಾಸಿಕ ಸಂಸ್ಕೃತಿಯಲ್ಲಿ ತನ್ನದೇ ಆದ ಒಂದು ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿದೆ. ರಾಬರ್ಟ್ ಬ್ರೂಸ್‌ಪೂಟ್ ಅವರು ಕ್ರಿ.ಶ.೧೮೬೩ರಲ್ಲಿ ಹೊಳಲ್ಕೆರೆ ತಾಲೂಕಿನ ತಾಳ್ಯದಲ್ಲಿ ಆದಿ ಹಳೇಶಿಲಾಯುಗದ ಮೂರು ಆಯುಧಗಳನ್ನು ಪತ್ತೆಹಚ್ಚಿ ಪ್ರಕಟಿಸಿದ್ದರು. ತರುವಾಯ ಅನೇಕ ಸಂಶೋಧಕರು ಈ ತಾಲೂಕಿನ ವಿವಿಧೆಡೆ ಹಲವು ಪ್ರಾಗೈತಿಹಾಸಿಕ ನೆಲೆಗಳನ್ನು ಪತ್ತೆಹಚ್ಚಿ ಪ್ರಕಟಿಸುತ್ತಾ ಬರುತ್ತಿರುವುದು ಇಲ್ಲಿನ ಪ್ರಾಗೈತಿಹಾಸ ಸಂಸ್ಕೃತಿಯ ಅಗಾಧತೆಗೆ ಸಾಕ್ಷಿಯಾಗಿದೆ. ಈಗಾಗಲೇ ಪತ್ತೆಯಾಗಿ ಪ್ರಕಟಗೊಂಡಿರುವ ನೆಲೆಗಳು ಹಳೇಶಿಲಾಯುಗ, ಬೃಹತ್ ಶಿಲಾಯುಗ ಹಾಗೂ ಆರಂಭಿಕ ಇತಿಹಾಸ ಕಾಲಕ್ಕೆ ಸೇರಿದವುಗಳಾಗಿವೆ.
ಹೊಳಲ್ಕೆರೆ ತಾಲೂಕಿನಲ್ಲಿ ನಾನು ಕೈಗೊಂಡ ಸಂಶೋಧನಾ ಕ್ಷೇತ್ರಕಾರ‍್ಯದಲ್ಲಿ ಪತ್ತೆಹಚ್ಚಿರುವ ಬೃಹತ್ ಶಿಲಾಯುಗದ ನೆಲೆಗಳನ್ನು ಕುರಿತು ಈ ಲೇಖನದಲ್ಲಿ ವಿವರಿಸಿದ್ದೇನೆ. ಹೊಳಲ್ಕೆರೆ ತಾಲೂಕಿನಲ್ಲಿ ಪತ್ತೆಯಾಗಿರುವ ಬೃಹತ್ ಶಿಲಾಯುಗದ ನೆಲೆಗಳೆಂದರೆ: ೧. ಸಿರಾಪ್ಪನಹಳ್ಳಿ, ೨. ಗೂಳಿಹೊಸಹಳ್ಳಿ, ೩. ಹಳೇಹಳ್ಳಿ ಲಂಬಾಣಿಹಟ್ಟಿ, ೪. ಹುಲಿಕೆರೆ.
೧. ಸಿರಾಪ್ಪನ ಹಳ್ಳಿ
ಹೊಳಲ್ಕೆರೆ ತಾಲೂಕಿನ ತಾಳ್ಯದ ಸಮೀಪವಿರುವ ಸಿರಾಪ್ಪನಹಳ್ಳಿಯು ಈ ಪರಿಸರದ ಪ್ರಮುಖ ಬೃಹತ್ ಶಿಲಾಯುಗದ ನೆಲೆಗಳಲ್ಲಿ ಒಂದು. ಸಿರಿಯಪ್ಪಎಂಬ ಜನಪದ ವೀರನ ಸ್ಮರಣಾರ್ಥವಾಗಿ ಈ ಗ್ರಾಮಕ್ಕೆ ಸಿರಾಪ್ಪನಹಳ್ಳಿ ಹೆಸರು ಬಂದಿದೆ ಎಂದು ಸ್ಥಳೀಯರು ಹೇಳುತ್ತಾರೆ. ಸಿರಾಪ್ಪನಹಳ್ಳಿ ಪರಿಸರದಲ್ಲಿ ಬಿಳಿಕಣಶಿಲೆ, ಕೆಂಪು ಬೆಣಚುಕಲ್ಲು ಹಾಗೂ ಕಪ್ಪು ಶಿಲೆಗಳ ಬೆಟ್ಟ-ಗುಡ್ಡಗಳನ್ನು ಅಪಾರವಾಗಿ ಕಾಣಬಹುದು.
ಈ ಗ್ರಾಮದಿಂದ ಪಶ್ಚಿಮ ದಿಕ್ಕಿಗೆ ಕರಿಯಪ್ಪ ಅವರ ತೋಟದ ಪಕ್ಕದಲ್ಲೇ ಪಾಂಡವರಗುಂಡುಎಂದು ಕರೆಯಲ್ಪಡುವ ಮೂರು ಬೃಹದಾಕಾರದ ಕಲ್ಲಿನ ಹೆಬ್ಬಂಡೆಗಳಿವೆ. ಪಾಂಡವರು ವನವಾಸಕ್ಕೆ ಬಂದಾಗ ಇಲ್ಲೇ ನೆಲೆನಿಂತು ಅಡುಗೆಗೋಸ್ಕರ ಈ ಕಲ್ಲುಗುಂಡುಗಳನ್ನು ಹೂಡಿ ಒಲೆಯಾಗಿ ಮಾಡಿಕೊಂಡು ಅಡುಗೆ ಮಾಡಿಕೊಳ್ಳುತ್ತಿದ್ದರೆಂದು ಹೇಳಲಾಗುತ್ತದೆ. ಇದಕ್ಕೆ ಹೊಂದಿಕೊಂಡಂತೆ ಇರುವ ಬೆಟ್ಟದ (ಗೂಬೆಕಲ್ಲು) ಹಿಂಭಾಗದಲ್ಲಿ ಭೀಮನಗುಂಡುಎಂದು ಕರೆಯಲ್ಪಡುವ ಅತ್ಯಂತ ಬೃಹದಾಕಾರದ ಸುಮಾರು ೨೫ ಅಡಿ ಎತ್ತರದ ಬಂಡೆ ಇದ್ದು ಅದನ್ನು ಭೀಮನು ಒಲೆಗೋಸ್ಕರ ಹೊತ್ತು ತರುತ್ತಿರುವಾಗ ಅಷ್ಟರೊಳಗೆ ಆತನ ಕುಟುಂಬದವರು ಕಲ್ಲುಗುಂಡುಗಳನ್ನು ಹೂಡಿ ಅಡುಗೆ ಮಾಡುತ್ತಿದ್ದರು. ಆಗ ಭೀಮನು ಆ ಕಲ್ಲುಗುಂಡನ್ನು ಅಲ್ಲಿಯೇ ಬಿಟ್ಟು ಬಂದನು ಎಂದು ಅಲ್ಲಿನ ಸ್ಥಳೀಯರು ಕಥೆ ಹೇಳುತ್ತಾರೆ. ಹೀಗೆ ಪಾಂಡವರ ಐತಿಹ್ಯವಿರುವ ಈ ಪರಿಸರವು ಬೃಹತ್ ಶಿಲಾಯುಗದ ನೆಲೆಯಾಗಿದೆ. ಪಾಂಡವರ ಗುಂಡುಗಳಿರುವ ಜಾಗದಿಂದ ದಕ್ಷಿಣ ದಿಕ್ಕಿಗೆ ಇದೇ ಗ್ರಾಮದ ಶೇಖರಪ್ಪ ಅವರ ಹೊಲದಲ್ಲಿ ೨೮ ಬೃಹತ್ ಶಿಲಾಸಮಾಧಿಗಳಿವೆ. ಶಿಲಾವೃತ್ತಗಳಾಗಿರುವ ಇವುಗಳ ರಚನೆಗೆ ಸ್ಥಳೀಯವಾದ ಶಿಲಾ ಮಾದರಿಗಳನ್ನೇ ಬಳಸಿದ್ದಾರೆ. ವೃತ್ತ ಮಾದರಿಗಳ ಮಧ್ಯದಲ್ಲಿ ಸಣ್ಣಗಾತ್ರದ ಉರುಟುಗಲ್ಲುಗಳು, ಬೆಣಚು ಕಲ್ಲುಗಳನ್ನು ತುಂಬಿದ್ದಾರೆ. ವೃತ್ತಗಳಿಗೆ ಬಳಸಿರುವ ಕಲ್ಲುಗಳು ಸುಮಾರು ೪ ಅಡಿ ಅಗಲ, ೩ ಅಡಿ ಎತ್ತರದ ದೊಡ್ಡದಾದ ಆಕಾರದಲ್ಲಿವೆ. ಕೆಲವು ಶಿಲಾಸಮಾಧಿಗಳಿಗೆ ಬಳಸಿರುವ ಕಲ್ಲುಗಳು ೧.೫ ಅಡಿ ಅಗಲ ೨ ಅಡಿ ಎತ್ತದ ಚಿಕ್ಕ ಆಕಾರದಲ್ಲಿವೆ. ಈ ಶಿಲಾವೃತ್ತಗಳ ಸುತ್ತಳತೆಯು ೬೦ ಅಡಿ, ೭೦ ಅಡಿ, ೮೦ ಅಡಿ ಇವೆ. ಕಡಿಮೆ ಸುತ್ತಳತೆ ಹೊಂದಿರುವ ಶಿಲಾಸಮಾಧಿಗಳಿಗೆ ೧೦ರಿಂದ ೧೫ ಕಲ್ಲುಗುಂಡುಗಳನ್ನು ಇಟ್ಟಿದ್ದಾರೆ. ಕೆಲವು ಶಿಲಾಸಮಾಧಿಗಳಿಗೆ ಕಪ್ಪು ಶಿಲೆಗಳನ್ನು ಮತ್ತು ಕೆಲವಕ್ಕೆ ಬಿಳಿಕಣಶಿಲೆಗಳನ್ನು ಬಳಸಿದ್ದಾರೆ. ಮಧ್ಯದಲ್ಲಿರುವ ಹಾಸಿರುವ ಹಾಸುಗಲ್ಲು ೩/೪ ಅಡಿ ದಪ್ಪ ೧೫ x ೨೦ ಅಡಿ ಇವೆ. ಅದೇ ರೀತಿ ಪಾಂಡವರ ಗುಂಡುಗಳು ಇರುವ ಪ್ರದೇಶದಿಂದ ಉತ್ತರ ದಿಕ್ಕಿಗೆ ರುದ್ರಯ್ಯ ಅವರ ಹೊಲದಲ್ಲಿ ಸುಮಾರು ೨೫ ಬೃಹತ್ ಶಿಲಾಸಮಾಧಿಗಳಿವೆ. ಇವುಗಳು ಶಿಲಾವೃತ್ತ ಮಾದರಿಗೆ ಸೇರಿದವುಗಳಾಗಿದ್ದು ಇವುಗಳ ರಚನೆಯಲ್ಲಿ ಸುತ್ತಲೂ ಗುಂಡುಕಲ್ಲುಗಳನ್ನು ಕೆಲವಕ್ಕೆ ನೆಟ್ಟಿದ್ದರೆ, ಕೆಲವಕ್ಕೆ ಕಲ್ಲುಚಪ್ಪಡಿಗಳನ್ನು ಬಳಸಿದ್ದಾರೆ.
ಕಬ್ಬಿಣ ತಯಾರಿಕಾ ನೆಲೆ
ಸಿರಾಪ್ಪನಹಳ್ಳಿಯ ಪರಿಸರವು ಬೃಹತ್ ಶಿಲಾಯುಗ ಕಾಲಘಟ್ಟದ ಒಂದು ಅತ್ಯಂತ ದೊಡ್ಡನೆಲೆಯಾಗಿದೆ. ಈ ಪರಿಸರದಲ್ಲಿ ಕಾಣಬರುವ ಮಲಸಿಂಗನಹಳ್ಳಿಯ ಸುತ್ತಮುತ್ತಲೂ ಅಪಾರವಾದ ಕಬ್ಬಿಣದ ತಯಾರಿಕೆಗೆ ಸಂಬಂಧಿಸಿದ ಕಿಟ್ಟದ ಅವಶೇಷಗಳು, ಮಣ್ಣಿನ ಮೂಸೆಗಳು ಅಪಾರವಾಗಿವೆ. ಅದೆಷ್ಟೋ ಎಕರೆ ಭೂಪ್ರದೇಶದಲ್ಲಿ ಕಿಟ್ಟದ ಅವಶೇಷಗಳು ಹರಡಿಕೊಂಡಿವೆ. ಬೃಹತ್ ಶಿಲಾಯುಗದ ಕಾಲದಲ್ಲೇ ಈ ಪರಿಸರದಲ್ಲಿ ಕಬ್ಬಿಣ ತಯಾರಿಕೆ ಕಾರ‍್ಯಗಳು ನಡೆದಿರುವ ಸಾಧ್ಯತೆ ಇದೆ.
೨. ಗೂಳಿಹೊಸಹಳ್ಳಿ
ಹೊಳಲ್ಕೆರೆ ತಾಲೂಕಿನ ಪ್ರಸಿದ್ಧ ಹೊರಕೆರೆದೇವಪುರದ ಸಮೀಪ ಕಂಡುಬರುವ ಗೂಳಿಹೊಸಹಳ್ಳಿಯು ಈ ಪರಿಸರದ ಪ್ರಮುಖ ಪ್ರಾಗೈತಿಹಾಸಿಕ ನೆಲೆಗಳಲ್ಲಿ ಒಂದಾಗಿದೆ. ಈ ಗ್ರಾಮದ ಈಶಾನ್ಯ ದಿಕ್ಕಿನಲ್ಲಿ ಜುಂಜಪ್ಪನ ದೇವಾಲಯದ ಉತ್ತರ ಭಾಗಕ್ಕೆ ೭ ಬೃಹತ್ ಶಿಲಾಸಮಾಧಿಗಳು ಕಂಡುಬರುತ್ತವೆ. ಇವುಗಳು ಶಿಲಾವೃತ್ತ ಮಾದರಿಗೆ ಸೇರಿವೆ. ಈ ಪರಿಸರದಲ್ಲಿ ಭೌಗೋಳಿಕವಾಗಿ ಚಕ್ಕೆ ಕಲ್ಲುಗಳು ಕಂಡುಬರುತ್ತವೆ. ಆ ಕಲ್ಲುಗಳನ್ನೇ ಈ ಶಿಲಾಸಮಾಧಿಗಳ ರಚನೆಗೆ ಬಳಸಿದ್ದಾರೆ. ಸುತ್ತಲೂ ದೊಡ್ಡ ಗಾತ್ರದ ಚಿಕ್ಕಕಲ್ಲುಗಳನ್ನು ನೆಟ್ಟು ಮಧ್ಯದಲ್ಲಿ ಚಿಕ್ಕಗಾತ್ರದ ಶಿಲೆಗಳನ್ನು ತುಂಬಿದ್ದಾರೆ.
೩. ಹಳೇಹಳ್ಳಿ ಲಂಬಾಣಿಹಟ್ಟಿ
ಹೊಳಲ್ಕೆರೆ ತಾಲೂಕಿನ ಬೃಹತ್ ಶಿಲಾಯುಗದ ನೆಲೆಗಳಲ್ಲಿ ಲಂಬಾಣಿಹಟ್ಟಿಯು ಒಂದು. ಈ ಗ್ರಾಮವು ಶಿವಗಂಗಾ ಮತ್ತು ಹೊಳಲ್ಕೆರೆ ಮಾರ್ಗದಲ್ಲಿದೆ. ಹಳೇಹಳ್ಳಿ ಲಂಬಾಣಿಹಟ್ಟಿಯಿಂದ ಗಿಲಕೇನಹಳ್ಳಿಗೆ ಹೋಗುವ ಮಾರ್ಗದಲ್ಲಿ ಆಂಜನೇಯ ದೇವಾಲಯದ ಪರಿಸರದಲ್ಲಿ ಬೃಹತ್ ಶಿಲಾಸಮಾಧಿ ನೆಲೆ ಇದೆ. ಈ ಪರಿಸರವು ಭೌಗೋಳಿಕವಾಗಿ ಬೆಟ್ಟ-ಗುಡ್ಡ, ತಗ್ಗು-ದಿನ್ನೆಗಳಿಂದ ಕೂಡಿದ್ದು ಇಲ್ಲೇ ಗ್ರಾನೈಟ್ ಬೆಟ್ಟವಿದೆ. ಆದುದರಿಂದ ಅದಕ್ಕೆ ಸಮೀಪದಲ್ಲೇ ಕಲ್ಲು ಗಣಿಗಾರಿಕೆಯು ನಡೆಯುತ್ತಿದೆ. ಇಲ್ಲಿನ ಆಂಜನೇಯ ದೇವಾಲಯದ ಹತ್ತಿರ ಸುಮಾರು ೫೦ ಬೃಹತ್ ಶಿಲಾಸಮಾಧಿಗಳು ಪತ್ತೆಯಾದವು. ಇವುಗಳು ವೃತ್ತಮಾದರಿಗೆ ಸೇರಿವೆ. ಇವುಗಳ ರಚನೆಗೆ ಒಳಭಾಗಕ್ಕೆ ಬಿಳಿಕಣಶಿಲೆಯ ಚಪ್ಪಡಿಗಳನ್ನು ಬಳಸಿ ಮೇಲೆ ಅದೇ ಕಲ್ಲಿನ ಚಪ್ಪಡಿಯ ಹಾಸುಬಂಡೆಗಳನ್ನು ಹಾಕಿದ್ದಾರೆ. ಅಲ್ಲದೇ ಸಮಾಧಿಯ ಸುತ್ತಲೂ ಕಪ್ಪು ದುಂಡುಶಿಲೆಗಳನ್ನು ಬಳಸಿದ್ದಾರೆ. ಒಟ್ಟಾರೆ ಇಲ್ಲಿ ಭೌಗೋಳಿಕವಾಗಿ ದೊರೆಯುವ ಶಿಲಾ ಮಾದರಿಗಳನ್ನೇ ಬಳಸಿ ಸಮಾಧಿಗಳನ್ನು ನಿರ್ಮಿಸಿರುವುದು ಕಂಡುಬರುತ್ತದೆ.
೪. ಹುಲಿಕೆರೆ
ಹುಲಿಕೆರೆ ಗ್ರಾಮವು ಹೊಳಲ್ಕೆರೆ ತಾಲೂಕಿಗೆ ಸೇರಿದ್ದು ಹೊಸದುರ್ಗ ತಾಲೂಕಿನ ಗೂಳಿಹಟ್ಟಿ ಗ್ರಾಮಕ್ಕೆ ಸನಿಹದಲ್ಲಿದೆ. ಇದರ ಸ್ಥಳನಾಮವು ಪ್ರಾಣಿವಾಚಿಯಿಂದ ಕೂಡಿದೆ. ಈ ಗ್ರಾಮದ ಪಶ್ಚಿಮ ದಿಕ್ಕಿನಲ್ಲಿ ಹಾಳೂರು ಅಥವಾ ಹಳೇಊರು ಪರಿಸರವಿದೆ. ಇಲ್ಲಿನ ತಿಪ್ಪೇಸ್ವಾಮಿ ಅವರ ಹೊಲದಲ್ಲಿ ೩ ಬೃಹತ್ ಶಿಲಾಗೋರಿಗಳು ಪತ್ತೆಯಾಗಿದ್ದು ಅವುಗಳು ಸ್ವಸ್ತಿಕ ಮಾದರಿಗೆ ಸೇರಿವೆ. ಇವುಗಳ ಬದಿಗಳಲ್ಲಿ ಕಪ್ಪು, ಕೆಂಪು ಹಾಗೂ ಕಪ್ಪು-ಕೆಂಪು ಬಣ್ಣದ ಮಡಿಕೆ ಚೂರುಗಳು ದೊರೆತಿವೆ. ಬೃಹತ್ ಶಿಲಾಗೋರಿಗಳ ಬದಿಯಲ್ಲೇ ಒಂದು ಬೃಹದಾಕಾರದ ಬೆಟ್ಟದ ಗವಿ ಇದೆ. ಆದರೆ ಒಳಗೆ ಹೋಗುವ ಯಾವ ಪ್ರವೇಶದ್ವಾರಗಳು ಇರದೇ ಮುಚ್ಚಿಹೋಗಿವೆ. ಆದರೆ ಗವಿಗಳ ಹೊರವಲಯಗಳಲ್ಲಿ ಬೃಹತ್ ಶಿಲಾಸಂಸ್ಕೃತಿಯ ಮಡಿಕೆ ಚೂರುಗಳು ದೊರೆತಿವೆ. ಬಹುಶಃ ಇವುಗಳು ಮಾನವರ ವಾಸ್ತವ್ಯದ ಗುಹೆಗಳಾಗಿದ್ದಿರಬಹುದು.
ನೂತನ ಶಿಲಾಯುಗದ ನಂತರದ ಕಾಲದಲ್ಲಿ ಕಂಡುಬರುವ ಬೃಹತ್ ಶಿಲಾಸಂಸ್ಕೃತಿಯ ಪ್ರಧಾನವಾದ ಲಕ್ಷಣಗಳೆಂದರೆ - ಬೃಹದಾಕಾರದ ಸಮಾಧಿಗಳ ನಿರ್ಮಾಣ ಹಾಗೂ ಮೊತ್ತ ಮೊದಲ ಬಾರಿಗೆ ಕಬ್ಬಿಣ ಉಪಯೋಗದ ಪರಿಚಯ. ಆದುದರಿಂದ ಈ ಕಾಲವನ್ನು ಕಬ್ಬಿಣಯುಗಎಂದು ಕರೆಯಲಾಗಿದೆ. ಚಿತ್ರದುರ್ಗ ಜಿಲ್ಲೆಯ ಬಹುಭಾಗಗಳಲ್ಲಿ ಬೃಹತ್ ಶಿಲಾಸಮಾಧಿಗಳು ಹಾಗೂ ನೆಲೆಗಳು ಅಪಾರ ಪ್ರಮಾಣದಲ್ಲಿ ಕಂಡುಬಂದಿವೆ. ಈ ಜಿಲ್ಲೆಯ ಬೃಹತ್ ಶಿಲಾಸಮಾಧಿಗಳ ಕಾಲಮಾನವನ್ನು ಕ್ರಿ.ಪೂ.೨೦೦ ರಿಂದ ಕ್ರಿ.ಶ.೧ನೇ ಶತಮಾನ ಎಂದು ಅಂದಾಜಿಸಲಾಗಿದೆ. ಹೊಳಲ್ಕೆರೆ ತಾಲೂಕಿನ ಸಿರಾಪ್ಪನಹಳ್ಳಿ, ಗೂಳಿಹೊಸಹಳ್ಳಿ, ಹಳೇಹಳ್ಳಿ, ಲಂಬಾಣಿಹಟ್ಟಿ, ಹುಲಿಕೆರೆ ಗ್ರಾಮಗಳ ಪರಿಸರಗಳಲ್ಲಿ ಕಂಡುಬಂದಿರುವ ಬೃಹತ್ ಶಿಲಾಸಮಾಧಿಗಳು ಇದೇ ಮೊದಲ ಬಾರಿಗೆ ಈ ಲೇಖನದ ಮೂಲಕ ಪ್ರಕಟಗೊಳ್ಳುತ್ತಿವೆ.

[
ಕೃತಜ್ಞತೆ : ಹೊಳಲ್ಕೆರೆ ತಾಲ್ಲೂಕಿನ ಕ್ಷೇತ್ರಕಾರ‍್ಯದಲ್ಲಿ ಸಹಕರಿಸಿದ ದುಗ್ಗಾವರದ ಬಿ.ಪಿ. ಸಂತೋಷ್‌ಕುಮಾರ್, ನನ್ನ ಆತ್ಮೀಯ ಗೆಳೆಯ ಆರ್.ಎಸ್. ಉಮೇಶ ಇವರಿಗೆ ವಂದನೆಗಳು.]








No comments:

Post a Comment