Wednesday, February 20, 2013

ಕೆ.ಆರ್‌ ಪೇಟೆ.ಕೈಗೋನ ಹಳ್ಳಿಯ ವೀರಗಲ್ಲು ಶಾಸನ


ಕೃಷ್ಣರಾಜಪೇಟೆ ತಾಲ್ಲೂಕಿನ ಕೈಗೋನಹಳ್ಳಿ ಗ್ರಾಮದ ಅಪ್ರಕಟಿತ ವೀರಗಲ್ಲು ಶಾಸನ
ಡಾ. ಆರ್. ರಂಗಸ್ವಾಮಿ
ಮುಖ್ಯಸ್ಥರು, ಇತಿಹಾಸ ವಿಭಾಗ,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಶ್ರೀರಂಗಪಟ್ಟಣ-೫೭೧೪೩೮.



ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕೈಗೋನಹಳ್ಳಿ ಗ್ರಾಮ ಕೆ.ಆರ್. ಪೇಟೆಯಿಂದ ಉತ್ತರಕ್ಕೆ ೬ ಕಿ.ಮೀ. ಅಂತರದಲ್ಲಿದೆ. ಈ ಗ್ರಾಮದಲ್ಲಿ ಹೊಯ್ಸಳರ ಕಾಲದ ಈಶ್ವರ ದೇಗುಲವಿದೆ. ಈ ದೇಗುಲದ ಪರಿಸರದಲ್ಲಿ ಕೃಷ್ಣರಾಜಪೇಟೆಯ ಕಲ್ಪತರು ಕಾಲೇಜಿನ ಎನ್.ಎಸ್.ಎಸ್. ವಿದ್ಯಾರ್ಥಿಗಳು ವಿಶೇಷ ಶಿಬಿರ ಕೈಗೊಂಡು, ದೇಗುಲವನ್ನು ಸ್ವಚ್ಚಗೊಳಿಸುತ್ತಿದ್ದ ಸಂದರ್ಭದಲ್ಲಿ ಪ್ರಸ್ತುತ ಶಾಸನ ಬೆಳಕಿಗೆ ಬಂದಿದೆ. ಈ ಗ್ರಾಮದಿಂದ ಈಗಾಗಲೇ ಎರಡು ಶಾಸನಗಳು ಎಪಿಗ್ರಾಫಿಯ ಕರ್ನಾಟಕ (ಪರಿಷ್ಕೃತ) ಸಂಪುಟ ೬ರಲ್ಲಿ ಪ್ರಕಟವಾಗಿವೆ. ಆ ಸಂಗ್ರಹಕ್ಕೆ ಈ ಶಾಸನ ಹೊಸದಾಗಿ ಸೇರ್ಪಡೆಯಾಗಿದೆ. ಕಪ್ಪುಶಿಲೆಯಿಂದ ಕಂಡರಿಸಲ್ಪಟ್ಟ ಈ ಶಾಸನದ ಶಿಲ್ಪದ ಎರಡು ಅಡ್ಡ ಪಟ್ಟಿಯಲ್ಲಿ ೭ ಸಾಲುಗಳಿರುವ ಶಾಸನದ ಪಾಠವಿದೆ. ಈ ಶಾಸನ ೧೬೦ ಸೆಂ.ಮೀ. ಎತ್ತರ ಮತ್ತು ೮೦ ಸೆ.ಮೀ. ಅಗಲವಾಗಿದೆ. ಈ ತಾಲ್ಲೂಕಿನಲ್ಲಿ ಈವರೆಗೆ ವರದಿಯಾಗಿರುವ ಶಾಸನಗಳಲ್ಲಿ ಕೈಗೋನಹಳ್ಳಿಯ ಅಪ್ರಕಟಿತ ಶಾಸನ ೧೨೯ನೆಯದು.
ವೀರಗಲ್ಲು ಶಿಲ್ಪದ ವಿವರಗಳು : ಈ ವೀರಗಲ್ಲಿನಲ್ಲಿ ನಾಲು ಶಿಲ್ಪ ಪಟ್ಟಿಕೆಗಳಿವೆ.
ಮೊದಲನೆಯ ಪಟ್ಟಿಕೆಯಲ್ಲಿ ವೀರನು ತನ್ನ ಎಡಗಾಲನ್ನು ಮುಂದಕ್ಕಿಟ್ಟು, ವೈರಿಯ ವಿರುದ್ಧ ಹೋರಾಡುತ್ತಿರುವನು. ವೀರನ ಹಿಂಭಾಗದಲ್ಲಿ ಇಬ್ಬರು ಸೈನಿಕರು ಹಾಗೂ ಎಂಟು ಹಸುಗಳ ಚಿತ್ರಗಳಿವೆ. ತಳಭಾಗದಲ್ಲಿ ಸೈನಿಕನೊಬ್ಬನು ಸತ್ತುಬಿದ್ದಿರುವ ದೃಶ್ಯವಿದೆ. ವೈರಿಯು, ಬಲಗಾಲನ್ನು ಮುಂದಿಟ್ಟು ವೀರನ ವಿರುದ್ಧ ಹೋರಾಡುತ್ತಿರುವನು. ಇವನ ಹಿಂಭಾಗದಲ್ಲಿ ಇಬ್ಬರು ಸೈನಿಕರು ಗುರಾಣಿಯನ್ನು ಹಿಡಿದುಕೊಂಡು ನಿಂತಿದ್ದಾರೆ.
ಎರಡನೆಯ ಪಟ್ಟಿಕೆಯಲ್ಲಿ ಯುದ್ಧದಲ್ಲಿ ಮಡಿದ ವೀರನ್ನು ಅಪ್ಸರೆಯರು ದೇವಲೋಕಕ್ಕೆ ಕೊಂಡೊಯ್ಯುತ್ತಿರುವ ದೃಶ್ಯವಿದೆ. ಅಪ್ಸರೆಯರು ಕೈಗಳಲ್ಲಿ ಹೂಮಾಲೆಯನ್ನು ಹಿಡಿದುಕೊಂಡಿದ್ದಾರೆ. ವೀರನು ವಿಮಾನದಲ್ಲಿ ಪದ್ಮಾಸನದಲ್ಲಿ ಕುಳಿತಿದ್ದಾನೆ.
ಮೂರನೆಯ ಪಟ್ಟಿಕೆಯ ಮಧ್ಯದಲ್ಲಿರುವ ಶಿವಲಿಂಗವನ್ನು ಇಬ್ಬರು ಯತಿಗಳು ಪೂಜಿಸುತ್ತಿರುವ ದೃಶ್ಯವಿದೆ. ಬಲಪಾರ್ಶ್ವದಲ್ಲಿ ವೀರನು ಕೈಮುಗಿದು ಕುಳಿತಿರುವನು. ಎಡಪಾರ್ಶ್ವದಲ್ಲಿ ಕುಳಿತ ನಂದಿ ಶಿಲ್ಪವಿದೆ.
ನಾಲ್ಕನೆಯ ಪಟ್ಟಿಕೆಯಲ್ಲಿ ಬ್ರಹ್ಮ, ಮಹೇಶ್ವರ ಮತ್ತು ವಿಷ್ಣು ಶಿಲ್ಪಗಳಿವೆ. ಎಡ ಮತ್ತು ಬಲ ಪಾರ್ಶ್ವದಲ್ಲಿ ಭಕ್ತರಿಬ್ಬರು ಕೈಮುಗಿದು ಕುಳಿತಿದ್ದಾರೆ. ಶಿಲ್ಪದ ಮೇಲ್ಭಾಗದಲ್ಲಿ ಸಾಮಾನ್ಯವಾದ ಸೂರ್ಯ ಮತ್ತು ಚಂದ್ರರ ಸಂಕೇತಗಳಿವೆ.
ಶಾಸನದ ಸಾರಾಂಶ : ವೀರಗಲ್ಲಿನ ಎರಡು ಅಡ್ಡಪಟ್ಟಿಯಲ್ಲಿ ಕನ್ನಡ ಭಾಷೆ ಮತ್ತು ೧೨ನೆಯ ಶತಮಾನದ ಕನ್ನಡ ಅಕ್ಷರಗಳಿವೆ. ಪ್ರಸ್ತುತ ಶಾಸನದಲ್ಲಿ ಹೊಯ್ಸಳ ಚಕ್ರವರ್ತಿ ವೀರನರಸಿಂಹದೇವನ ಹೆಸರು ಉಲ್ಲೇಖಿತವಾಗಿದೆ. ಇದರಲ್ಲಿ ತೇದಿಯ ಉಲ್ಲೇಖವಿಲ್ಲ. ಛಾಯಾಚಿತ್ರ ಮತ್ತು ಪಡಿಯಚ್ಚು ಸಹಾಯದಿಂದ ಶಾಸನವನ್ನು ಓದಲಾಗಿದೆ. ಪ್ರಸ್ತುತ ಶಾಸನ ಮತ್ತು ಶಿಲ್ಪದ ಮಹತ್ವವನ್ನು ಪರಿಚಯಿಸುವ ಪ್ರಯತ್ನ ನಮ್ಮದಾಗಿದೆ. ನಮಗೆ ತಿಳಿದ ಮಟ್ಟಿಗೆ ಶಾಸನದ ಸಾರಾಂಶ ಅಥವಾ ಪಾಠ ಈವರೆಗೆ ಪ್ರಕಟವಾಗಿಲ್ಲ.
ಹೊಯ್ಸಳ ಮನೆತನದ ವೀರನರಸಿಂಹದೇವನ ಆಳ್ವಿಕೆಯಲ್ಲಿ ವೀರನೊಬ್ಬನು ತುರುಗೋಳ್ ಯುದ್ಧದ ಸಂದರ್ಭದಲ್ಲಿ ವೀರ ಮರಣವನ್ನಪ್ಪಿದ ಉಲ್ಲೇಖವಿದೆ. ಐದು, ಆರು ಮತ್ತು ಏಳನೆಯ ಸಾಲಿನ ಅಕ್ಷರಗಳು ಮಾಸಿ ಹೋಗಿರುವುದರಿಂದ ವಿವರಗಳು ಅಸ್ಪಷ್ಟವಾಗಿದೆ. ಈ ವೀರಗಲ್ಲು ಶಾಸನಶಿಲ್ಪ ನಾಲ್ಕು ಪಟ್ಟಿಕೆಗಳಿಂದ ಕೂಡಿದೆ. ನಾಲ್ಕನೆಯ ಪಟ್ಟಿಕೆಯಲ್ಲಿ ಬ್ರಹ್ಮ, ಮಹೇಶ್ವರ ಮತ್ತು ವಿಷ್ಣು ಶಿಲ್ಪಗಳಿರುವುದು ವೈಶಿಷ್ಟ್ಯ. ಧರ್ಮಸಮನ್ವಯದ ತತ್ವವನ್ನು ಶಿಲ್ಪದಲ್ಲಿ ಸಾಂಕೇತಿಕವಾಗಿ ಬಿಡಿಸಲಾಗಿದೆ.
ಶಾಸನದ ಪಾಠ
೧        ಸ್ವಸ್ತಿ ಸಮಸ್ತಭುವನಾಶ್ರಯ[ಶ್ರೀ] ಪ್ರಿಥ್ವೀವಲ್ಲಭಂ ಮಹಾರಾಜಾಧಿರಾಜ ಪರಮೇಶ್ವರಂ ದ್ವಾರಾವತೀ
೨        ಪುರವರಾಧೀಶ್ವರಂ ಯಾದವ ಕುಲಾಂಬರದ್ಯಮಣಿ ಸಮ್ಯಕ್ ಚೂಡಾಮಣಿ ಮಲೆರಾಜ
೩        ರಾಜಮಲಪರೊಳುಗುಂಡ ಕದನ ಪ್ರಚಂಡನಸಹಾಯಸೂರ ಸನಿವಾರಸಿದ್ದಿ ಗಿರಿದುರ್ಗಮ
೪        ಲ್ಲ ಚಲದಂಕರಾಮನೇಕಾಂಗವೀರ ನಿಸ್ಸಂಕಪ್ರತಾಪ ಚಕ್ರವರ್ತಿ ಹೊಯ್ಸಳ ಶ್ರೀ ವೀರನರಸಿಂಹ ದೇವರು ಪಿಥ್ವೀ
೫        . . . . ದಲಿ ಕಹಿಗೊಂಡನ ಹಳಿಯ ತುಱುವನು [ಜಳೂರ ? ಮನು[ಗೊಂಡ] ಮಾ[ಳಾ ?] . . . . . .
೬        ಕಾಮಯ ಸುರಲೋಕ . . . . . . . . . . . . .
೭        . . . . . . . . . . . . . . . . ಶ್ರೀ ಶ್ರೀ


[ಕೃತಜ್ಞತೆಗಳು : ಸಂಪಾದಕರು, ಮಂಡ್ಯ ಜಿಲ್ಲೆ ಗ್ಯಾಸೆಟಿಯರ್ ಇವರಿಗೆ. ಲಿಪಿ ತಜ್ಞರಾದ ಡಾ. ಎಸ್.ವಿ. ಪಾಡಿಗಾರ್ ಮತ್ತು ಡಾ. ಡಿ.ಎಂ. ನಾಗರಾಜುರವರಿಗೆ ಹಾಗೂ ಕಲ್ಪತರು ಕಾಲೇಜಿನ ವ್ಯವಸ್ಥಾಪಕರನ್ನು ಮತ್ತು ಕೈಗೋನಹಳ್ಳಿ ಗ್ರಾಮದ ಮುಖ್ಯಸ್ಥರನ್ನು ನೆನೆಯುತ್ತೇನೆ.]





No comments:

Post a Comment