ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕೈವಾರದ ಸುಗಟೂರು ಅರಸರ ಅಪ್ರಕಟಿತ ಶಾಸನ
ಕುಮಾರಿ ಮುನಿರತ್ನಮ್ಮ ಕೆ.ಹೆಚ್
ನಂ.ಜಿ-೧, ಅರುಣೋದಯ ನಿಲಯ,
೧ನೇ ಮುಖ್ಯರಸ್ತೆ, ೬ನೆಯ ಅಡ್ಡರಸ್ತೆ,
ಗಂಗಮ್ಮನ ಗುಡಿ ರಸ್ತೆ,
ಹೊಸಕೋಟೆ ಟೌನ್-೫೬೨೧೧೪
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಚಿಕ್ಕ ಗ್ರಾಮ ಕೈವಾರ.
ಚಿಂತಾಮಣಿ ಮತ್ತು ಶಿಡ್ಲಘಟ್ಟ ತಾಲ್ಲೂಕಿನ ದಕ್ಷಿಣ ಭಾಗಗಳು, ಕೋಲಾರ ಜಿಲ್ಲೆಯ ವಾಯವ್ಯ
ಭಾಗ ಹಾಗೂ ಹೊಸಕೋಟೆ ತಾಲ್ಲೂಕಿನ ಈಶಾನ್ಯಕ್ಕೆ ವಿಲೀನವಾಗಿದ್ದು, ಭೌಗೋಳಿಕವಾಗಿ
ಸ್ವಲ್ಪ ಎತ್ತರವಾದ ಪ್ರದೇಶದಲ್ಲಿದೆ. ಅಲ್ಲಲ್ಲಿ ಚದುರಿದಂತೆ ಹಲವು ಬೆಟ್ಟಗುಡ್ಡಗಳಿಂದ ಕೂಡಿದ್ದು,
ಅಂಬಾಜಿ ದುರ್ಗ, ಸೀತಿ ಬೆಟ್ಟ, ಕೈಲಾಸಗಿರಿ, ಮುರುಘಮಲೆ, ತಾಪಸಗಿರಿ
ಇವು ಮುಖ್ಯವಾದವುಗಳಾಗಿವೆ. ಕೈವಾರದ ಉತ್ತರಕ್ಕೆ ಪಾಪಗ್ನಿ, ಆಗ್ನೇಯಕ್ಕೆ
ಪಾಲಾರ್ ಹಾಗೂ ಪಶ್ಚಿಮದಲ್ಲಿ ದಕ್ಷಿಣ ಪಿನಾಕಿನಿ ನದಿಗಳು ಹರಿಯುತ್ತದೆ.೧ ಕೈವಾರ ಒಂದು ಪ್ರಸಿದ್ಧ ತೀರ್ಥಕ್ಷೇತ್ರವಾಗಿದ್ದು ಪೌರಾಣಿಕ ಮಹತ್ವದೊಂದಿಗೆ ಚಾರಿತ್ರಿಕ ಹಿನ್ನೆಲೆಯನ್ನು
ಪಡೆದಿದೆ. ಇದನ್ನು ಮಹಾಭಾರತದಲ್ಲಿ ಬರುವ ಏಕಚಕ್ರಪುರವೆಂದು ಕರೆಯಲಾಗುತ್ತದೆ. ಅರಗಿನ ಮನೆಯಿಂದ ತಪ್ಪಿಸಿಕೊಂಡ
ಪಾಂಡವರು ಕೆಲವು ಕಾಲ ಇಲ್ಲಿದ್ದರೆಂದು ಈ ಗ್ರಾಮದ ಹತ್ತಿರವಿರುವ ಚಿದಂಬರಗಿರಿ ಅಥವಾ ಚಿಕ್ಕಬೆಟ್ಟದಲ್ಲಿ
ಇದ್ದ ಬಕಾಸುರನನ್ನು ಭೀಮ ಕೊಂದು ಅವನ ಶವವನ್ನು ಬೆಟ್ಟದ ಗುಹೆಯೊಂದರಲ್ಲಿ ಮುಚ್ಚಿಟ್ಟನೆಂದು ಸ್ಥಳಪುರಾಣದಿಂದ
ತಿಳಿದುಬರುತ್ತದೆ.೨
ಕೈವಾರದಲ್ಲಿ
ಅಮರನಾರಾಯಣ, ಧರ್ಮರಾಯ, ಭೀಮೇಶ್ವರ, ಅರ್ಜುನೇಶ್ವರ, ನಕುಲೇಶ್ವರ, ಸಹದೇವೇಶ್ವರ
ದೇವಾಲಯಗಳಿವೆ. ಇವೆಲ್ಲಾ ಕ್ರಿ.ಶ.೧೨೮೩ಕ್ಕೆ ಮುಂಚೆಯೇ ಇದ್ದವೆಂದು ಇಲ್ಲಿ ದೊರಕಿರುವ ತಮಿಳುಶಾಸನಗಳಿಂದ
ತಿಳಿದುಬರುತ್ತದೆ.೩ ಆದರೆ ಎಲ್ಲವೂ ಬಹುವಾಗಿ
ನವೀಕೃತಗೊಂಡಿವೆ. ಕೈವಾರದ ನಾರಾಯಣ ಯೋಗಿಗಳೆಂಬ ಸಂತರು ೧೮ನೇ ಶತಮಾನದಲ್ಲಿ ಈ ಊರಿನಲ್ಲಿ ನೆಲೆಸಿದ್ದರು.
ಈ ಗ್ರಾಮವು
ರಾಜಕೀಯವಾಗಿ ನೊಳಂಬರು, ಬಾಣರು, ಗಂಗರು,
ಹೊಯ್ಸಳರು, ವಿಜಯನಗರ ಅರಸರ ಆಳ್ವಿಕೆಗೆ ಒಳಪಟ್ಟಿದೆ. ಈ
ಹಿನ್ನಲೆಯಲ್ಲಿ ನನ್ನ ಕ್ಷೇತ್ರಕಾರ್ಯ ಸಂದರ್ಭದಲ್ಲಿ ವಿಜಯನಗರ ಕಾಲಕ್ಕೆ ಸೇರಿದ ಒಂದು ಅಪ್ರಕಟಿತ ಶಾಸನ
ಲಭ್ಯವಾಗಿದೆ.
ಕೈವಾರದ ದಕ್ಷಿಣ
ದಿಕ್ಕಿಗೆ ಸರ್ಕಾರಿ ದವಾಖಾನೆಯಿಂದ ಸ್ವಲ್ಪ ದೂರದಲ್ಲಿ ಬರುವ ಸರ್ವೇ ನಂಬರ್ ೨೦೬ ಬಣಜಿಗರ ವೆಂಕಟಪ್ಪನವರ
ಹೊಲದಲ್ಲಿ ಪೂರ್ವಾಭಿಮುಖವಾಗಿ ನೆಲದ ಮೇಲೆ ಬಿದ್ದಿದೆ. ಇದು ೫ ಅಡಿ ಉದ್ದ, ೩
ಅಡಿ ಅಗಲ ಮತ್ತು ೪ ಇಂಚು ದಪ್ಪ ಇದೆ, ಗ್ರಾನೈಟ್ ಕಲ್ಲಿನ ಮೇಲೆ ಬರಹವಿದೆ.
ಲಿಪಿ ಮತ್ತು ಭಾಷೆ ಕನ್ನಡದಲ್ಲಿದ್ದು ಈ ಶಾಸನ ೧೫ ಸಾಲುಗಳನ್ನು ಒಳಗೊಂಡಿದೆ.
ಸ್ವಸ್ತಿ ಶ್ರೀ
ವಿಜಯಾಭ್ಯುದಯ ಶಾಲಿವಾಹನ ಶಕವರ್ಷ ೧೫೧೧ನೆಯ ವಿರೋಧಿ ಸಂವತ್ಸರದಲ್ಲಿ ಹೊರಡಿಸಲಾಗಿದೆ. ಇದರಲ್ಲಿ ಕಂಡುಬರುವ
ವಿಷಯವೆಂದರೆ ಸು. ಕ್ರಿ.ಶ.೧೫೮೯ರಲ್ಲಿ ಅರವೀಡು ವಂಶದ ಅರಸನಾದ ಎರಡನೇ ವೆಂಕಟನ ಕಾಲದಲ್ಲಿ ಈ ಶಾಸನ
ಹೊರಡಿಸಲಾಗಿದೆ. ವೀರಪ್ರತಾಪ ವೆಂಕಟಪತಿ ಮಹಾರಾಯರು ಸುಗಟೂರು ಶ್ರೀಮಾದವಪ್ಪಯ್ಯ ಗೌಡರ ಮಗ ಕೈವಾರದ
ಹರಿಗಪ್ಪಯ್ಯನ ಮಗ ಚನ್ನಯ್ಯನಿಗೆ ಬಿಟ್ಟ ಹೊಲ.... ಇದನ್ನು ‘ನೆತ್ತರ ಕೊಡುಗೆ’ಯಾಗಿ ನೀಡಲಾಗಿದೆ.
ಶಾಸನಗಳಲ್ಲಿ
ಉಲ್ಲೇಖಿಸಿರುವ ‘ನೆತ್ತರ ಕೊಡುಗೆ’ ಎಂಬ ಪದ ಬಳಕೆಯಾಗಿರುವುದು
ಇದರ ವಿಶೇಷತೆಯನ್ನು ಸೂಚಿಸುತ್ತದೆ. ವಿಜಯನಗರ ಅರಸರುಗಳ ಕಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭೂಮಾನ್ಯಗಳನ್ನು
ಹೊರಡಿಸುವ ಬಗೆ ಶಾಸನಗಳಿಂದ ತಿಳಿದುಬರುತ್ತದೆ, ಹಾಗೂ ಇದಕ್ಕೂ ಪೂರ್ವಕಾಲದಿಂದಲೂ ಸಹ ‘ನೆತ್ತರ ಕೊಡುಗೆ’ಯ ಭೂದಾನ ಶಾಸನಗಳನ್ನು ನಾವು ಕಾಣಬಹುದು. ವೀರ ಪರಂಪರೆಯ ದ್ಯೋತಕವಾಗಿ ಶೌರ್ಯ ಬಲಿದಾನಗಳ ಸಂಕೇತವಾಗಿ
ನೀಡಲಾಗುತ್ತದೆ. ನೆತ್ತರ ಕೊಡುಗೆಯನ್ನು ವಿಶೇಷ ಸಂದರ್ಭದಲ್ಲಿ ಅಂದರೆ ಯುದ್ದಲ್ಲಿ ಗೆದ್ದು ಬಂದ ವೀರರಿಗೆ
ಅಥವಾ ವೀರಮರಣಕ್ಕಾಗಿ ಕೊಟ್ಟ (ದತ್ತಿ) ಭೂಮಿಯನ್ನು ಮಾನ್ಯವಾಗಿ ಅಥವಾ ಬಳುವಳಿಯಾಗಿ ನೀಡುತ್ತಿದ್ದರು.೪
ಶಾಸನ ಪಾಠ
೧ ಸ್ವಸ್ತಿ ಶ್ರೀ ವಿಜಯಾಬ್ಯುದಯ ಸಲಿವಾ[ಹ]
೨ ನ ಸಕ ವರುಸಂಗಗಳೂ ೧೫೧೧ ಯ ವಿರೋ
೩ ದಿ ಸಂವತ್ಸರದ ಮ ಬ ೨ ಬು ಲು ರಾ .
೪ ದಿ ರಾಜ ವಿರಪ್ರತಪ ವೆಂಕಟಪತಿ ಮಹರಯ
೫ ರಾಜ್ಯ ಗೆಉತ್ತ ಇರಲು ಸುಗುಟುರ ತಂ(ಯಿಂ)
೬ ಮಡಿ ತಮಪಯ ಗೌಡರ ಪ್ರತಿಪಲಗೆ
೭ ಯ ಕೈವರದ ತಿಂಮ(ರ)ಸನ ಧರ್ಮ ಪರಿಪತ್ಯದಲು
೮ ಕೈವರದ ಹರಿಗಪಪಯನ ಮಗನು ಚೆಂ
೯ ನಯಗೆ ಬಿಟ ನೆತ್ತರ ಗೊಡಗೆ ಬಿಟ್ಟ ಹೊಲಕ್ಕೆ
೧೦ ವರದ ಹಲಸು ಮರದವರು ಭಾಂನು ಮಾನ್ಯ
೧೧ ವಾಗಿಉಳಉ ಇದವನಿವ ಮನ್ಯಕೆ ಆ
೧೨ ರು ತಪಿದವರು ತಂಮ ಹೆಂಡಿರ ಯಾ
೧೩ ಉರ ತೋಟಿ ತಿಂಮನು ಕೇದನು
೧೪ ತಂಮ ಮಕಳು ತಂಮ ಎಡೆಯ
೧೫ ಲಿ ಹೊರಳದಿ ಹೊಗುವರು
[ಕೃತಜ್ಞತೆಗಳು: ಶಾಸನ ಪಾಠ ಓದಿಕೊಟ್ಟ ಪ್ರೊ|| ಕಲವೀರ ಮನ್ವಾಚಾರ್ಯ
ಅವರಿಗೆ ವಂದನೆಗಳು.]
ಆಧಾರಸೂಚಿ ಮತ್ತು ಟಿಪ್ಪಣಿಗಳು
೧. ಡಾ. ಪಿ.ವಿ. ಕೃಷ್ಣಮೂರ್ತಿ, ‘ಕೈವಾರನಾಡು-ಶಾಸನಗಳ ಹಿನ್ನೆಲೆಯಲ್ಲಿ ಒಂದು ಅಧ್ಯಯನ’
ಇತಿಹಾಸ ದರ್ಶನ, ಸಂಪುಟ ೧೧-೧೯೯೬, ಪುಟ ೨೧೦, ಕೋಲಾರ ಜಿಲ್ಲೆ ಗ್ಯಾಸೆಟಿಯರ್, ಸಂ. ಎಚ್. ಚಿತ್ತರಂಜನ್, ೨೦೦೪.
೨. ಡಾ. ಪಿ.ವಿ. ಕೃಷ್ಣಮೂರ್ತಿ, ‘ಪುರಾಣ ಪ್ರಸಿದ್ಧ ಏಕಚಕ್ರಪುರವಾದ ಕೈವಾರ ಕ್ಷೇತ್ರದ ಶಾಸನಗಳು-ಒಂದು
ಅವಲೋಕನ’
ಶಾಸನ ಮಂಥನ, ಪುಟ ೧೨೧-೧೩೨.
೩. ಅದೇ.
೪. ಡಾ. ಪಿ.ವಿ. ಕೃಷ್ಣಮೂರ್ತಿ, ಸುಗುಟೂರು ವೀರಶೈವ ಅರಸು ಮನೆತನ, ಕರ್ನಾಟಕ
ವಿಶ್ವವಿದ್ಯಾಲಯ, ಧಾರವಾಡ, ೧೯೯೮.
.
No comments:
Post a Comment