Monday, February 4, 2013

ಆರನೆಯ ವಿಕ್ರಮಾದಿತ್ಯನ ಅಪ್ರಕಟಿತ ಶಾಸನ




ಆರನೆಯ ವಿಕ್ರಮಾದಿತ್ಯನ ಹಾವೇರಿ ಜಿಲ್ಲೆ
ಹಾನಗಲ್ ತಾಲ್ಲೂಕಿನ ಅಪ್ರಕಟಿತ ಶಾಸನ
ಡಾ. ಕೆ.ಎಸ್. ಪಾಟೀಲ
ಇತಿಹಾಸ ಸಹಾಯಕ ಪ್ರಾಧ್ಯಾಪಕರು,
 ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಕುಂದಗೋಳ ಜಿಲ್ಲೆ, ಧಾರವಾಡ-೫೮೧೧೧೩


ಹಾವೇರಿ ಜಿಲ್ಲೆಯ ತಾಲ್ಲೂಕು ಕೇಂದ್ರವಾದ ಹಾನಗಲ್ಲದ ಶ್ರೀ ಕುಮಾರೇಶ್ವರ ಮಠದ ಆವರಣದಲ್ಲಿ ೨೦೦೧ರ ಫೆಬ್ರುವರಿ ೬ರಂದು ನೂತನ ಕಟ್ಟಡ ನಿರ್ಮಾಣಕ್ಕಾಗಿ ಪಾಯ ತೊಡುತ್ತಿದ್ದ ಸಂದರ್ಭದಲ್ಲಿ ಕಲ್ಯಾಣದ ಚಳುಕ್ಯ ಮನೆತನದ ಆರನೆಯ ವಿಕ್ರಮಾದಿತ್ಯನ ಅಪ್ರಕಟಿತ ಶಾಸನ ಪತ್ತೆಯಾಗಿದೆ. ಈ ಶಾಸನವನ್ನು ಕಪ್ಪುಮಿಶ್ರಿತ ನೀಲಿಛಾಯೆಯ ಬಳಪದ ಶಿಲೆಯ ಮೇಲೆ ಬರೆಯಲಾಗಿದೆ. ಈ ಶಿಲೆಯು ೧೮೦ ಸೆಂ.ಮೀ. ಎತ್ತರ ಮತ್ತು ೮೦ ಸೆಂ.ಮೀ. ಅಗಲವಾಗಿದೆ. ಇದರಲ್ಲಿ ಒಟ್ಟು ೪೪ ಸಾಲುಗಳಿವೆ. ಶಿಲೆಯ ಮೇಲ್ಭಾಗದಲ್ಲಿ ಉಬ್ಬುಶಿಲ್ಪ ಪಟ್ಟಿಕೆಯಿದೆ. ಇದರ ಮಧ್ಯದಲ್ಲಿ ಶಿವಲಿಂಗ, ಬಲಪಾರ್ಶ್ವದಲ್ಲಿ ನಂದಿ, ಎಡಪಾರ್ಶ್ವದಲ್ಲಿ ಒಬ್ಬ ಯತಿ ನಿಂತಿದ್ದಾನೆ. ಯತಿ ಎಡಗೈಯಲ್ಲಿ ಘಂಟೆ ಮತ್ತು ಬಲಗೈಯಲ್ಲಿ ಧೂಪಾರತಿಯನ್ನು ಹಿಡಿದುಕೊಂಡು ಶಿವಲಿಂಗಕ್ಕೆ ಪೂಜೆಗೈಯುತ್ತಿದ್ದಾನೆ. ಇಕ್ಕೆಲಗಳಲ್ಲಿ ಸೂರ್ಯ ಮತ್ತು ಚಂದ್ರರ ಚಿತ್ರಗಳಿವೆ. ಶಾಸನವನ್ನು ಕನ್ನಡ ಲಿಪಿ ಮತ್ತು ಭಾಷೆಯಲ್ಲಿ ಬರೆಯಲಾಗಿದೆ. ಅಕ್ಷರಗಳು ಸ್ಪಷ್ಟವಾಗಿವೆ. ಶಾಸನದಲ್ಲಿ ಉಲ್ಲಿಖಿತವಾಗಿರುವ ತೇದಿಯ ಆಧಾರದ ಮೇಲೆ ಈ ಶಾಸನದ ಕಾಲವು ಕ್ರಿ.ಶ.೧೧೧೯ರ ನವೆಂಬರ್ ೬, ಗುರುವಾರಕ್ಕೆ ಸಮನಾಗುತ್ತದೆ. ಶಾಸನದ ಪಾಠ, ಸಾರಾಂಶ ಮತ್ತು ಮಹತ್ವವನ್ನು ಈ ಕೆಳಗಿನಂತೆ ಗಮನಿಸಬಹುದು.
ಶಾಸನದ ಪಾಠ
೧        @ ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರಚಾರವೇ ತ್ರೈಳೋಕ್ಯನಗರಾಂಭ
೨        ಮೂಲಸ್ತಂಭಾಯ ಸಂಭವೇ || ಸ್ವಸ್ತಿ ಶ್ರೀಪಿಥ್ವೀವಲ್ಲಭ
೩        ಮಹಾರಾಜಾಧಿರಾಜ ಪರಮೇಶ್ವರ ಪರಮಭಟ್ಟಾರಕಂ ಸತ್ಯಾ
೪       ಶ್ರಯ ಕುಳತಿಳಕಂ ಚಾಳುಕ್ಯಭರಣಂ ಶ್ರೀಮತ್ತ್ರಿಭುವನ ಮಲ್ಲ
೫.       ದೇವರ ವಿಜಯರಾಜ್ಯಮುತ್ತರೋತ್ತರಾಭಿವೃದ್ಧಿ ಪ್ರವರ್ಧಮಾನಮಾಚಂ
೬        ದ್ರಾರ್ಕ್ಕ ತಾರಂಬರಂ ಸಲುತ್ತಮಿರೆ || ತತ್ಪಾದ ಪದ್ಮೋಪಜೀವಿ ಸ್ವಸ್ತಿ ಶಮದಿಶತ
೭        ಪಂಚಮಹಾಸಬ್ಧ ಮಹಾಮಂಡಳೇಶ್ವರಂ ಬನವಾಸಿ ಪುರವರಾಧೀಶ್ವ
೮        ರಂ ಜಯನ್ತಿ ಮಧುಕೇಶ್ವರದೇವಲಬ್ಧವರಪ್ರಸಾದ ಮ್ರಿಗಮದಾಮೋದ ತ್ರಕ್ಷ
೯        ಕ್ಷ್ಮಾಸಂಭವಂ ಚತುರಾಸಿತಿನಗ್ರರಾದಿಷ್ಠಿತಂ ಲಲಾಟಲೋಚನಂ ಚತುರ್ಭ್ಭುಜಂ
೧೦      ಜಗದ್ವಿದಿತಾಷ್ಪದಸಾಶ್ವಮೇಧ ದೀಕ್ಷಾದೀಕ್ಷಿತ ಹಿಮವದ್ಗಿರೀಂದ್ರ ರುಂದ್ರಶಿಖರ ಸ
೧೧      ಕ್ತಿ ಸಂಸ್ಥಾಪಿತ ಸ್ಫಟಿಕಸಿಳಾಸ್ತಂಭ ಭದ್ರಮಗಜ ಮಹಾಮಹಿಮಾಭಿರಾಮ ಕಾ
೧೨      ದಂಬಚಕ್ರಿ ಮಯೂರವರ್ಮ ಮಹಾಮಹಿಪಾಳ ಕುಳರ್ಭೂಷಣಂ ಪೆರ್ಮ
೧೩      ಟ್ಟಿತೂರ್ಯ್ಯನಿರ್ಘೋಷಣಂ ಶಾಖಾಚರೇಂದ್ರಧ್ವಜ ವಿರಾಜಮಾನ ಮಾನೋತ್ತುಂಗ ಸಿಂಹ
೧೪     ಲಾಂಛನಂ ದತ್ತಾರ್ತಿಕಾಂಚನಂ ಸಮರಜಯಕಾರಣಂ ಕಾಡಂಬರಾಭರಣ ಮಾ
೧೫     ರ್ಕ್ಕೊಳ್ವರಗಂಡಂ ಪ್ರತಾಪಮಾರ್ತಂಡ ಸಾಹಸೋ ತ್ತುಂಗ ಶ್ರೀಮತ್ತ್ರಿಭುವನ
೧೬      ಮಲ್ಲದೇವ ಪಾದಾಬ್ಜಭ್ರಿಂಗನಾಮಾದಿ ಸಮಸ್ತಪ್ರಶಸ್ತಿ ಸಹಿತಂ ಶ್ರೀಮನ್ಮಹಾಮಂಡ
೧೭      ಳೇಶ್ವರಂ ತೈಲಪದೇವರು || ಸರಣೆಂದರ್ಗಿಂದ್ರ ಬಾಹಕು. ದ.ಳ ಸತ್ವಂ
೧೮      ಜರಂತ. ತುಕೊಳಲುಪರ.. ರ್ಕತಕಂ ಮಾಷ್ಪಧರ ಸೆಳಿಲುಪೆರ್ಮ್ಮ
೧೯      ರಿಕಾಳೋರಗಂ ಬಲುಮೆರೆವುತ್ತಿರ್ಪ್ಪುಗ್ರ ಸಿಂಹಂನಿ-ನಯನದಾವನ
೨೦      ವುರಿಯಂದಳ್ಳುರಿಯಂನ್ತೆ (ನಟ್ಟಿ) ಕೋಲ್ಗುದುರೆಗಳು ಭಂಡೀ ತೈಲಭೂಪಾಳ
೨೧      ದೇವಂ ಶ್ರೀಮನ್ಮಹಾಮಂಡಳೇಶ್ವರಂ ತೈಲಪದೇವರು ಪಾನುಂಗಲ್ಲೈಯೂನಱ
೨೨      ಱುಭಯಸಾಮ್ಯಮುಮಂ ಬನವಾಸಿ ಪನ್ನಿರ್ಚಾಸಿರ ಮುಮಂ ದುಷ್ಟ
೨೩      ನಿಗ್ರಹ ಸಿಷ್ಟಪ್ರತಿಪಾಳನದಿಂದಾಳುರಾಜ್ಯಂಗೆಯುತ್ತಮಿರೆ|| ಶ್ರೀಮ
೨೪      .ತು ಪಾಂನ್ತಿಪುರದ ಶ್ರೀಮಚ್ಚಾಳುಕ್ಯವಿಕ್ರಮವರ್ಷದ ೪೪ ವಿಕಾರಿ
೨೫      ಸಂವತ್ಸರದ ಮಾರ್ಗ್ಗಸಿರ ಸುದ್ಧ ೨ ಬ್ರಿಹವಾರ ಸಂಕ್ರಾನ್ತಿಬ್ಯತಿಯ
೨೬      ಪಾತದಂದು ಶ್ರೀಸ್ವಯಂಭುಕೊನ್ತೇಸ್ವರ ದೇವರಂ[ಗ] ಭೋಗ ನಿವೇದ್ಯಕಂ
೨೭      ಖಂಡಸ್ಪುಟಿತಜೀರ್ನ್ನೋದ್ಧಾರಕಂ ಅಲ್ಲಿಯ ತಪೋಧನರಗ್ರಾಸಕಂ ಸ್ವಸ್ತಿ
೨೮      ಯಮನಿಯಮಸ್ವಾಧ್ಯಾಯಧ್ಯಾನಧಾರಣಮೋನಾ ಷ್ಟಾಣಜಪಸ
೨೯      ಮಾಧಿಸೀಳಗುಣ ಸಂಪನ್ನರಪ್ಪ ಶ್ರೀಮತುತತ್ಪುರುಷ ಪಂಡಿತ
೩೦      ದೇವರ ಕಾಲಂಕರ್ಚ್ಚಿ ಧಾರಾಪೂರ್ವ್ವಕಂಮಾಡಿ ಗೆಜ್ಜೆಯ ಹಳ್ಳಿಯ ಸರ್ವ
೩೧      ನಮಸ್ಯವಾಗಿ ಬಿಟ್ಟರು ಅವಱಗೆರೆಯ ಕೆಳಗೆಗದ್ದೆ ಮತ್ತಲುಮೂ
೩೨      ರು ಸುಳೆಯ ಬಯಲಲು ಗದ್ದೆ ಮತ್ತಲು ಮೂರು ಸರಸ್ವತಿದೇವಿಗೆ
೩೩      ಅವಱಗೆರೆಯ ಕೆಳಗೆ ಮತ್ತಲೊಂದು ಮಾಬೇಸ್ವರ ದೇವರಿಗೆ ಸುಳೆಯ
೩೪      ಬಯಲಲು ಗದ್ದೆಕಮ್ಮ‌ಆಯ್ವತ್ತು ಶ್ರೀಕೊನ್ತೇಸ್ವರದೇವರ ಅವಱಗೆರೆಯೊಳರಕ
೩೫      ಣ್ಣುಗೆಯ ಬಟ್ಟೆಯಿಂ ಬಡಗಲು ಹಕಲು ಮತ್ತಲು ಮೂಱು ಹಣದ ಕಪಸಾಧ
೩೬      .......... ರಿಯಮರಗದ್ದೆಯಂ .......... ಸರ್ವನಮಸ್ಯವಾಗಿ ಬಿಟ್ಟರು ಸುಂಕದಕಾನಾಳು
೩೭      ............... ಸಹಿತವಾಗಿ ಸಮಸ್ತ ಸುಂಕರಿದ್ದು ಆ ಕೆರೆಯೊಳಗೆ ಲೆಯತ
೩೮      .ಪನ್ನಾಯತನ ಸುಂಕಮ್ಮ ಬಿಟ್ಟರು ಹೆಱು ವವರಲಿ ನೂರೆತ್ತಿನ ಸುಂಕಮಂಬಿ
೩೯      ಟ್ಟರು ಯಿನ್ತೀಧರ್ಮಮಂ ನಾವನೊರ್ವ್ವ ಪ್ರತಿಪಾಳಿಸಿ ದಾತಂಗೆ ವಾರಣಸಿಯಲು ಸ
೪೦     ಹ್ರಸ್ರ ಕವಿಲೆಯಂ ವೇದಪಾರಗರಪ್ಪ ಬ್ರಾಹ್ಮರ್ಗ್ಗೆ ದಾನಕೊಟ್ಟಫಲವಕ್ಕುಯಿ
೪೧     ನ್ತಿ ಧರ್ಮ್ಮವನಳಿದಾತಂಗೆ ಸಹಸ್ರ ಕವಿಲೆವಂನಳಿದು ಸಹಸ್ರ ಬ್ರಾಹ್ಮಣರು
೪೨      ಮಂ ಕೊಂದಮಹಾಪಾತಕನಕ್ಕು ಸ್ವದತ್ತಂ ಪರದತ್ತಂ ವಾಯೋ ಹರೇತಿ
೪೩      ವಸುಂಧರಾ ಷಷ್ಟಿರ್ವರುಸ ಸಹಸ್ರಾಣಿ ವಿಷ್ಟಾಯಾಂ ಜಾಯತೇ ಕ್ರಿ
೪೪     ಮಿಃ || @@
ಶಾಸನದ ಸಾರಾಂಶ
ಈ ಶಾಸನವು ಶೈವಶ್ಲೋಕದೊಂದಿಗೆ ಪ್ರಾರಂಭವಾಗಿದೆ. ತರುವಾಯ ಕಲ್ಯಾಣದ ಚಾಳುಕ್ಯ ಮನೆತನದ ಅರಸನಾದ ಶ್ರೀಮತ್‌ತ್ರಿಭುವನಮಲ್ಲ ಅಂದರೆ ಆರನೆಯ ವಿಕ್ರಮಾದಿತ್ಯನ ಪ್ರಶಸ್ತಿಯನ್ನು ಹೇಳಲಾಗಿದೆ. ಶಾಸನದಲ್ಲಿ ಪಾನುಂಗಲ್ಲು-೫೦೦ ನಾಡಿನ ಮಹಾಮಂಡಳೇಶ್ವರನಾದ ತೈಲಪದೇವನ ಪ್ರಶಸ್ತಿಗಳ ನಿರೂಪಣೆಯಿದೆ. ಈತನು ಪಾನುಂಗಲ್ಲು-೫೦೦ ಮತ್ತು ಬನವಾಸಿ-೧೨,೦೦೦ ಪ್ರಾಂತಗಳನ್ನು ಆಳುತ್ತಿದ್ದನು. ಈತನು ಸ್ವಯಂಭು ಕೊನ್ತೇಶ್ವರದೇವರ ರಂಗಭೋಗಕ್ಕೆ, ನೈವೇದ್ಯಕ್ಕೆ ಖಂಡಸ್ಫುಟಿತ ಜೀರ್ಣೋದ್ಧಾರಕ್ಕೆ ಮತ್ತು ಅಲ್ಲಿಯ ತಪೋಧನರ ಆಹಾರಕ್ಕೆ ಗೆಜ್ಜೆಹಳ್ಳಿಯನ್ನು ಸರ್ವನಮಸ್ಯವಾಗಿ ದತ್ತಿ ಕೊಟ್ಟನು. ಈ ದಾನವನ್ನು ಕೊನ್ತೇಶ್ವರ ದೇವಾಲಯದ ಸ್ಥಾನಾಚಾರ್ಯರಾಗಿದ್ದ ತತ್ಪುರುಷ ಪಂಡಿತದೇವರ ಪಾದವನ್ನು ತೊಳೆದು ದಾನ ಮಾಡಲಾಗಿದೆ. ಅಲ್ಲದೆ ಇದೇ ದೇವರಿಗೆ ಅವರಗೆರೆ ಎಂಬ ಹಳ್ಳಿಯ ಕೆಳಗಿನ ೩ ಮತ್ತರು ಗದ್ದೆಯನ್ನು ಮತ್ತು ಸುಳೆಯ ಬಯಲಿನಲ್ಲಿ ೩ ಮತ್ತರು ಗದ್ದೆಯನ್ನು ದಾನ ನೀಡಲಾಗಿದೆ.
ಅದೇ ರೀತಿಯಾಗಿ ಸರಸ್ವತಿ ದೇವಾಲಯಕ್ಕೆ ಅವರಗೆರೆಯ ಕೆಳಗೆ ಒಂದು ಮತ್ತರು ಭೂಮಿಯನ್ನು ದಾನ ನೀಡಲಾಗಿದೆ. ಹಾಗೆಯೇ ಮಾಬೇಸ್ವರ ದೇವಾಲಯಕ್ಕೆ ಸುಳೆಯ ಬಯಲಿನಲ್ಲಿ ಐವತ್ತು ಕಮ್ಮಗದ್ದೆಯನ್ನು,ಕೊನ್ತೇಶ್ವರ ದೇವಾಲಯಕ್ಕೆ ಅವರಗೆರೆಯ ಕೆಳಗೆ ಮೂರು ಮತ್ತರು ಗದ್ದೆಯನ್ನು, ಹಣವನ್ನು ಹಾಗೂ ನೂರೆತ್ತಿನ ಸುಂಕವನ್ನು ದಾನ ನೀಡಿದರು.
ಶಾಸನದ ಕೊನೆಯಲ್ಲಿ ಈ ಧರ್ಮವನ್ನು ಪ್ರತಿಪಾಳಿಸಿದವರಿಗೆ ವಾರಣಾಸಿಯಲ್ಲಿ ಸಹಸ್ರ ಬ್ರಾಹ್ಮಣರಿಗೆ ದಾನ ಕೊಟ್ಟ ಫಲ ಬರುವುದೆಂದು, ಇದನ್ನು ನಾಶಪಡಿಸಿದವರಿಗೆ ಕೊಂದ ಪಾಪ ಬರುವದೆಂಬ ಶಾಪಾಶಯವಿದೆ.
ಶಾಸನದ ಮಹತ್ವ
ಈ ಶಾಸನದಲ್ಲಿ ಕೋನ್ತೇಶ್ವರ, ಮಾಬೇಶ್ವರ, ಮಧುಕೇಶ್ವರ ಮತ್ತು ಸರಸ್ವತಿದೇವಿಯ ಉಲ್ಲೇಖವಿರುವುದು ಮಹತ್ವದ್ದಾಗಿದೆ. ಏಕೆಂದರೆ ಶೈವ ದೇವತೆಗಳೊಂದಿಗೆ ಶಕ್ತಿ ದೇವತೆಗೂ ಪ್ರಾಧಾನ್ಯತೆ ನೀಡಲಾಗಿದೆ. ಹಾನಗಲ್ಲದಲ್ಲಿ ಈಗಾಗಲೇ ಇಮ್ಮಡಿ ತೈಲಪದೇವನಿಗೆ ಸಂಬಂಧಪಟ್ಟ ಶಾಸನಗಳು ಲಭ್ಯವಾಗಿವೆ. ಆ ಶಾಸನಗಳಲ್ಲಿ ಬಿಲ್ಲೇಶ್ವರ, ಚಿಕ್ಕೇಶ್ವರ, ನಿಂಬೇಶ್ವರ, ಸೋಮೇಶ್ವರ, ದೇವಾಲಯಗಳ ಪ್ರಸ್ತಾಪವಿದೆ. ಮೊದಲನೆಯ ಶಾಸನದಲ್ಲಿ ಶ್ರೀದೇವರಾಶಿಪಂಡಿತ ಎಂದು ಹೇಳಿದರೆ, ಇಲ್ಲಿ ದೊರೆತ ಶಾಸನದಲ್ಲಿ ಶ್ರೀತತ್ಪುರುಷ ಪಂಡಿತದೇವರ ಹೆಸರನ್ನು ಪ್ರಸ್ತಾಪಿಸಲಾಗಿದೆ.

          [ಕೃತಜ್ಞತೆಗಳು : ಈ ಶಾಸನವನ್ನು ನನ್ನ ಗಮನಕ್ಕೆ ತಂದು ಕ್ಷೇತ್ರಕಾರ್ಯದಲ್ಲಿ ನೆರವು ನೀಡಿದ ಶ್ರೀಕುಮಾರೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿ.ಜಿ. ಶಾಂತಪುರಮಠ ಹಾಗೂ ಈ ಶಾಸನವನ್ನು ಓದಿ ಪಾಠ ಸಂಗ್ರಹಿಸಲು ಮತ್ತು ಲೇಖನದ ಬರವಣಿಗೆಯಲ್ಲಿ ಮಾರ್ಗದರ್ಶನ ಮಾಡಿದ ನನ್ನ ವಿದ್ಯಾಗುರುಗಳಾದ ಡಾ. ರು.ಮ. ಷಡಕ್ಷರಯ್ಯ ಪ್ರಭಾರಿ ನಿರ್ದೇಶಕರು, ಕನ್ನಡ ಸಂಶೋಧನ ಸಂಸ್ಥೆ, ಕ.ವಿ.ವಿ. ಧಾರವಾಡ ಇವರಿಗೆ ನನ್ನ ಕೃತಜ್ಞತೆಗಳು.]

ಆಧಾರಸೂಚಿ ಮತ್ತು ಟಿಪ್ಪಣಿಗಳು
೧.         ಕಪ್ಪುಶಾಯಿಯಿಂದ ತೆಗೆದ ಪಡಿಯಚ್ಚಿನಿಂದ ಓದಲಾಗಿದೆ.
೨.         ಏ.I. ಗಿoಟ. ಗಿ, ಶಾಸನ ಸಂಖ್ಯೆ ೧೮ ಮತ್ತು ೧೯, ಪುಟ ೬೨-೬೮.






No comments:

Post a Comment