ಶಿವಮೊಗ್ಗ ಜಿಲ್ಲೆ ಸೂಡೂರಿನ ಅಪ್ರಕಟಿತ
ಶಾಸನ
ಮಧುಗಣಪತಿರಾವ್ ಮಡೆನೂರು
ಶಿವಮೊಗ್ಗ ತಾಲ್ಲೂಕು ಸುಡೂರು ಗ್ರಾಮದ ಸರ್ಕಾರಿ
ಅರಣ್ಯ ಪ್ರದೇಶದಲ್ಲಿ ವಿಜಯನಗರದ ಒಂದನೆಯ ದೇವರಾಯನ ಕಾಲಕ್ಕೆ ಸೇರಿದ, ವೀರ ಬಾಗಿಯೂರ ಕುಮಾರ ಬಸವಂಣನ ವೀರಗಲ್ಲು ಪತ್ತೆಯಾಗಿದೆ.
ಕುಮುದ್ವತಿ ನದಿ ಎಡದಂಡೆಯ ಪಶ್ಚಿಮಕ್ಕೆ ಆಯನೂರು ಹೊಸನಗರ ಹೆದ್ದಾರಿಯ ಎಡಭಾಗದ ಮುನ್ನೂರು ಮೀಟರ್ ದೂರದಲ್ಲಿದೆ.
೧೯೦೦ರ ಸುಮಾರಿಗೆ ಇದ್ದ ಊರು ಪ್ರಕೃತಿ ವಿಕೋಪದಿಂದ ನಾಶವಾಗಿರುವುದಾಗಿ ಗೋಚರಿಸುತ್ತದೆ. ಪ್ರಸ್ತುತ
ಅರಣ್ಯ ಪ್ರದೇಶವಾಗಿದ್ದು ಶಿವಮೊಗ್ಗ ಹಾಗು ಹೊಸನಗರ ತಾಲ್ಲೂಕಿನ ಗಡಿಭಾಗದಲ್ಲಿ ಈ ಕಲ್ಲು ದೊರೆತಿದೆ.
೧೯೫೯ರ ಮೊದಲು ಸೂಡೂರು ಬೇಚರಾಕ್ ಗ್ರಾಮವಾಗಿದ್ದು ಸಾಗರ ತಾಲ್ಲೂಕಿನ ಶರಾವತಿ ಕಣಿವೆ ಜಲವಿದ್ಯುತ್
ಯೋಜನೆಯು ೧೯೫೯-೬೦ರಲ್ಲಿನ ಪುನರ್ವಸತಿಯಿಂದಾಗಿ ಜನವಸತಿ ಊರಾಗಿ ಬೆಳೆದಿದೆ. ಗ್ರಾಮದ ನಡುವೆ ಕುಮುದ್ವತಿ
ನದಿ ಹರಿದು ಹೋಗುತ್ತಿದೆ. ಸೂಡೂರು ಪ್ರಾಗೈತಿಹಾಸಿಕ ನೆಲೆಯಾಗಿದ್ದು ನವಶಿಲಾಯುಗದ ಪಳೆಯುಳಿಕೆಗಳಾದ
ಕಲ್ಲಿನ ಮರಿಗೆ, ಬೆಣಚುಗಲ್ಲಿನ ಕೈಕೊಡಲಿಗಳು ನದಿ ಬಲದಂಡೆಯ ದಿಬ್ಬದಲ್ಲಿ
ನೆಲ ಬಗೆದಂತೆಲ್ಲ ಹೇರಳವಾಗಿ ದೊರೆಯುತ್ತಿವೆ. ಈ ದಿಬ್ಬದಲ್ಲಿ ಅನೇಕ ಕುಟುಂಬಗಳು ವಾಸವಿದ್ದು,
ನದೀ ಪಾತ್ರದ ತಗ್ಗು ಭೂಪ್ರದೇಶವಾಗಿರುವುದರಿಂದ ಅತಿವೃಷ್ಟಿಯಾದಾಗ ಆ ಕುಟುಂಬಗಳು
ತೇಲಿಕೊಂಡು ಹೋಗಿರುವ ಸಾಧ್ಯತೆಗಳಿವೆ. ಅಲ್ಲಿ ನೆರೆ ಹತ್ತಿದ ಕುರುಹುಗಳೂ ಕಂಡುಬರುತ್ತಿವೆ.
ವೀರಗಲ್ಲು
ಶಿಲೆಯು ೪.೬ ಅಡಿ ಎತ್ತರ ಹಾಗು ಎರಡು
ಅಡಿ ಅಗಲವಿದ್ದ ನಾಲ್ಕು ಹಂತಗಳಲ್ಲಿ ಕೆತ್ತಲಾಗಿದೆ. ತಳದ ಹಂತದಲ್ಲಿ ಮೃತವೀರ ಹಾಗು ಆತನ ಮಡದಿಯ ವಿಗ್ರಹಗಳೆರಡನ್ನೂ
ಕೆತ್ತಲಾಗಿದೆ. ಇದು ವೀರನೊಡನೆ ಸತಿ ಹೋಗಿರುವುದನ್ನು ತಿಳಿಸುತ್ತದೆ. ಬಹುಶಃ ಕಾಡಿನ ಬೆಂಕಿಯಿಂದ ವೀರನ
ಚಿತ್ರ ಚಕ್ಕೆ ಎದ್ದುಹೋಗಿದ್ದು ಸತಿಯಿರುವ ಭಾಗ ತುಂಡಾಗಿದೆ. ಸತಿಯು ಅಗಲವಾದ ಕರ್ಣಕುಂಡಲ [ಓಲೆ] ಹಾಗು
ಕಿರೀಟಧಾರಿಣಿಯಾಗಿದ್ದು ಕೊರಳಹಾರ ಧರಿಸಿರುವಳು. ಬಲಗೈಯನ್ನು ಮೇಲಕ್ಕೆ ಎತ್ತಿದ್ದು ಎಡಗೈಯನ್ನು ಕೆಳಕ್ಕೆ
ಚಾಚಲಾಗಿದೆ. ಕೈಯಲ್ಲಿ ಬಳೆ ಹಾಗು ತೋಳಬಂಧಿ ಧರಿಸಿರುವಳು. ಸಣ್ಣದಾದ ಕಟಿ ಹಾಗು ಸೀರೆಯನ್ನು ತೊಟ್ಟಿದ್ದು, ಶಿಲ್ಪಿಯು ಸತಿಯನ್ನು ಸುಂದರವಾಗಿ ಕೆತ್ತಿರುವುದು
ಅಂದಿನ ಸ್ತ್ರೀಯರ ವೇಷಭೂಷಣವನ್ನು ನಿದೇರ್ಶಿಸುತ್ತದೆ. ಎರಡನೇ ಹಂತದಲ್ಲಿ ವೀರ ಮತ್ತು ಸತಿಯನ್ನು ಸುರಾಂಗನೆಯರು
ಸಂಗೀತ, ನೃತ್ಯ ವಾದ್ಯಮೇಳದೊಂದಿಗೆ ಸ್ವಾಗತಿಸುತ್ತಿದ್ದಾರೆ. ಮೂರನೇ ಹಂತದಲ್ಲಿ
ವೀರನನ್ನು ವಿಮಾನದಲ್ಲಿ ಕುಳ್ಳಿರಿಸಿ ಸ್ವರ್ಗಕ್ಕೆ ಕರೆದೊಯ್ಯುತ್ತಿರುವರು. ನಾಲ್ಕನೇ ಹಂತದಲ್ಲಿ ವೀರ
ಮತ್ತು ಸತಿ ಶಿವ ಸನ್ನಿಧಿಯಲ್ಲಿರುವುದನ್ನು ಚಿತ್ರಿಸಲಾಗಿದೆ. ನೆತ್ತಿಯಲ್ಲಿ ಸೂರ್ಯ, ಚಂದ್ರರನ್ನು ಕೆತ್ತಿದ್ದು ಮಧ್ಯೆ ಎರಡು ಗೆರೆ ಎಳೆಯಲಾಗಿದೆ. ಚಂದ್ರನಿದ್ದ ಭಾಗ ಮುಕ್ಕಾಗಿದೆ.
ಬಸವಣ್ಣ
ಪ್ರಸ್ತಾವಿತ ಶಾಸನವು ವಿಜಯನಗರದ ಅರಸ
ಎರಡನೇ ಹರಿಹರನ ಮಗ ಒಂದನೆಯ ದೇವರಾಯನ [೧೪೦೬-೧೪೨೨] ಆಡಳಿತ ಕಾಲದ್ದಾಗಿರುತ್ತೆ.೧ ಇವನ ರಾಜ್ಯಪಾಲನಾಗಿ ಆರಗವನ್ನು ವೀರಮಾರಪ್ಪ ಒಡೆಯರ ಕುಮಾರ ಸೋವಣ್ಣವೊಡೆಯ ಆಡಳಿತ ನಡೆಸುತ್ತಿದ್ದ.೨ ಅಂದು ಸೂಡೂರು ಸಮೃದ್ದಿಯಿಂದ ತುಂಬಿರಬಹುದು.
ಶತ್ರುಗಳು ಊರಿಗೆ ನುಗ್ಗಿ ಕೊಳ್ಳೆಹೊಡೆದು, ದೋಚಿದ ನಂತರ ಊರನ್ನು ನಾಶಪಡಿಸಲು ಬೆಂಕಿಯನ್ನು ಹಚ್ಚಿರಬೇಕು. ಊರಳಿವನ್ನು
ತಡೆಗಟ್ಟಲು ಬಾಗಿಯಾದ ಕುಮಾರ ಬಸವಂಣನು ಶತ್ರುಗಳೊಡನೆ ಹೋರಾಡಿ....ಸಂವತ್ಸರದ ಆಶ್ವೀಜ ಬ. ೧೧ರ ಆದಿವಾರದಂದು
ಮೃತನಾಗುವನು. ಕಲ್ಲು ಮಾಸಿರುವುದರಿಂದ ಸಂವತ್ಸರ ಹಾಗು ವರ್ಷ ತಿಳಿಯುವುದಿಲ್ಲ. ಆರಗದ ಸೋಮಂಣನು ಮೃತ
ವೀರನಿಗೆ ದಾನ ನೀಡುವನು.
ಬಾಗಿಯಾರ ಬಸವಣ್ಣನ ಶಾಸನ ಪಾಠ
ಪಟ್ಟಿಕೆ-೧
೧ ಬಾಗಿಯಾರ ಕುಮಾರ
ಬಸವಂಣನು ಚ
೨ ಹೋ.. .. ..ಸಲಿಸಿ
ಊರು [ಊರಳಿದ]
ಪಟ್ಟಿಕೆ-೨
೩ ಳುತ ಸಂವತ್ಸರದ
ಆಶ್ವೀಜ ಬ ೧೧ ಆದಿವಾರ
೪ ಶ್ರೀಮತು ದೇವರಾಯರ
ಕಾಲದಲ್ಲಿ ಆ
೫ ರಗದ ರಾಜ್ಯವನಾಳಿದ
ಹೊಳ ಸೋಮಂಣ.
ಆನೆಗಳ ತಾಣ
ಸೂಡೂರು ಸುತ್ತೆಲ್ಲ ಕಾಡು ಮತ್ತು ಕುಮದ್ವತಿ ನದಿಯು ಬೇಸಿಗೆಯಲ್ಲೂ ಸದಾ
ನೀರಿರುವುದರಿಂದ ಇದು ಆನೆಗಳ ವಾಸದ ತಾಣ. ಭದ್ರಾ ಅಭಯಾರಣ್ಯದಿಂದ ಶಂಕರಗುಡ್ಡದ ತಪ್ಪಲಿನಲ್ಲಿ ಹಾಯ್ದು
ಸೂಡೂರಿಗೆ ಇಂದಿಗೂ ಆಗಾಗ್ಗೆ ಆನೆಗಳು ವಲಸೆ ಬಂದು ಬೆಳೆಹಾನಿ ಮಾಡುತ್ತಿರುತ್ತವೆ. ಇದೇ ದೇವರಾಯನ ಕಾಲದಲ್ಲಿ
[೧೪೦೭] ಬೆಳೆ ಹಾನಿ ಮಾಡುತ್ತಿದ್ದ ಆನೆಯನ್ನು ಎದುರಿಸಿದ ವೀರನಿಗೆ ಸಂಬಂಧಿಸಿದ ಶಾಸನವೊಂದು ಕುಮದ್ವತಿಯ
ಬಲದಂಡೆಯಲ್ಲಿದೆ.
ಸೂಡೂರಿನಲ್ಲಿನ ಚೀಲಗೊಂಡರಸನ ಜಮೀನಿಗೆ ಆನೆಯು ನುಗ್ಗಿ ಬೆಳೆ ನಾಶಪಡಿಸುತ್ತಿದ್ದ
ವೇಳೆ ಅದನ್ನು ಓಡಿಸುವ ಪ್ರಯತ್ನದಲ್ಲಿ ತೊಡಗುವರು. ಆನೆಯು ಬೆನ್ನಟ್ಟಿ ಒಂದು ಚೀಲಗೊಂಡರಸನನ್ನು ಮುಗಿಸಿಯೇ
ಬಿಟ್ಟಿತು ಎನ್ನುವಷ್ಟರಲ್ಲಿ ಬೊಮ್ಮಣ್ಣನೆಂಬುವನು ಆನೆಗೆ ಅಡ್ಡಬಂದು ಎದುರಿಸಿ ಚೀಲಗೊಂಡರಸನನ್ನು ಪ್ರಾಣಾಪಾಯದಿಂದ
ರಕ್ಷಿಸುವನು. ಆದರೆ ಬೊಮ್ಮಣನು ಆನೆಯ ಧಾಳಿಗೆ ಸಿಕ್ಕು ಹತನಾಗುವನು. ಇದರ ಕಾಲ ಶಕ ವರುಷ ೧೩೨೯ ಅಂದರೆ
ಕ್ರಿ.ಶ.೧೪೦೭, ಸರ್ವಜಿತು ಸಂವತ್ಸರದ ಕಾರ್ತೀಕ ಬಹುಳ ೧೧ ಆಗಿರುತ್ತದೆ.೩ ಪ್ರಾಣವ ಕಾಪಾಡಿದ ಮೃತ
ಬೊಂಮ್ಮಣ್ಣನ ವಂಶಸ್ತರಿಗೆ ಚೀಲಗೊಂಡರಸನು ಉಂಬಳಿ ನೀಡುವನು.
ಮಲೆಯಶಂಕರ ಗುಡ್ಡದಿಂದ ಅಂಬಲಿಗೊಳದವರೆಗೆ ಹಾದುಹೋದ ಪರ್ವತ ಶ್ರೇಣಿಗಳು
೧೯೦೦ರ ಸುಮಾರಿನಲ್ಲಿ ಇದ್ದ ಜನವಸತಿಯು ಪ್ರಕೃತಿ ವಿಕೋಪ ಹಾಗು ಅನಾವೃಷ್ಟಿಯಿಂದ ಜನಸಂಖ್ಯೆ ನಾಶವಾಗಿ
ಕಾಡು ಬೆಳೆದುಕೊಂಡಿತ್ತು. ಈ ಭಾಗದಲ್ಲಿ ಆನೆಗಳು ಓಡಾಡುವ ದಾರಿಯೂ ಆಗಿತ್ತು. ಇಂತಹದರಲ್ಲಿ ಸೂಡೂರು
ಗ್ರಾಮವೂ ಒಂದು. ಮೇಲಿನಂತೆ ಸೂಡೂರಿನಲ್ಲಿ ವಿಭಿನ್ನ ಘಟನೆಗಳಿಗೆ ಸಂಬಂಧಿಸಿದಂತೆ ವಿಜಯನಗರದ ಒಂದನೇ
ದೇವರಾಯನ ಕಾಲದ ಎರಡು ವೀರಗಲ್ಲುಗಳನ್ನು ಕಾಣುತ್ತೇವೆ. ಬೇಚರಾಕ್ ಗ್ರಾಮವು ಶರಾವತಿ ಮುಳುಗಡೆ ರೈತರ
ಪುನರ್ವಸತಿಯಿಂದಾಗಿ ಸೂಡೂರು ಮತ್ತೆ ಜನವಸತಿಯನ್ನು ಕಂಡಿದೆ. ಸೂಡೂರು ಅಂದು ಆರಗ ಆಡಳಿತ ವ್ಯಾಪ್ತಿಗೆ
ಒಳಪಟ್ಟಿತ್ತು.
ಆಧಾರಸೂಚಿ ಮತ್ತು ಟಿಪ್ಪಣಿಗಳು
೧. ಎಪಿಗ್ರಾಫಿಯಾ
ಕರ್ನಾಟಿಕ, ಸಂಪುಟ ೮, (ರೈಸ್ ಆವೃತ್ತಿ), ಭಾಗ-೨, ತೀರ್ಥಹಳ್ಳಿ ೧೨೨.
೨. ಎಪಿಗ್ರಾಫಿಯಾ
ಕರ್ನಾಟಿಕ, ಸಂಪುಟ ೮, (ರೈಸ್ ಆವೃತ್ತಿ), ಭಾಗ-೨, ತೀರ್ಥಹಳ್ಳಿ ೧೩೨.
೩. ಎಂ.ಎ.ಆರ್.
೧೯೨೩, ತೀರ್ಥಹಳ್ಳಿ ೬೦, ಕಾಲ ೧೪೦೭, ಪುಟ ೭೨-೭೩.
No comments:
Post a Comment