ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಲವು ನವಶೋಧಿತ
ಪ್ರಾಚ್ಯಾವಶೇಷಗಳು
ಡಾ. ಮುತ್ತುರಾಜು
ಬೆಂಗಳೂರು ದಕ್ಷಿಣ ತಾಲ್ಲೂಕಿನ ಕನಕಪುರ ಮುಖ್ಯ ರಸ್ತೆಯ ದೊಡ್ಡ ಕಲ್ಲಸಂದ್ರವು
ಪ್ರಾಚೀನ ಗ್ರಾಮವಾಗಿದ್ದು ಕಲ್ಲು ಸ್ಥಳನಾಮದಿಂದ ನಿಷ್ಪತ್ತಿಯಾದ ಗ್ರಾಮವಾಗಿದೆ. ಇಲ್ಲಿ ಹೊಸದಾಗಿ
ನಿರ್ಮಿತವಾಗುತ್ತಿರುವ ಗೋಕುಲ ಬಡಾವಣೆಯ ರಸ್ತೆಯ ಬದಿಯಲ್ಲಿ ಪುಟ್ಟದಾದ ಮುನೇಶ್ವರ ಗುಡಿ ಇದೆ. ಅದರಲ್ಲಿ
ನವಶಿಲಾಯುಗದ (ಕ್ರಿ.ಪೂ.ಸು. ೩೦೦೦) ಶಿಲಾ ಕೈಗೊಡಲಿಯೊಂದನ್ನೂ ಪೂಜಿಸಲಾಗುತ್ತಿದೆ. ಇದು ೨೨ ಅಂಗುಲ
ಎತ್ತರ ಮತ್ತು ೬ ಅಂಗುಲ ಅಗಲದಿಂದ ಕೂಡಿದ ಸಿಸ್ಟ್ ಶಿಲೆ ಆಗಿದೆ. ಇದು ತ್ರಿಕೋನಾಕಾರವಾಗಿದ್ದು ಮೇಲುಗಡೆ
ಬಲಭಾಗದಲ್ಲಿ ಸ್ವಲ್ಪ ಒಡೆದುಹೋಗಿದೆ.
ನವಶಿಲಾಯುಗ ಶಿಲಾ ಕೈಗೊಡಲಿ ದೊಡ್ಡಕಲ್ಲಸಂದ್ರ
|
ಇದೇ ದೊಡ್ಡ ಕಲ್ಲಸಂದ್ರ ಗ್ರಾಮದ ಈಶ್ವರ ದೇವಾಲಯದ ಮೇಲಿನ ಮಧ್ಯದ ಗೂಡೊಂದರಲ್ಲಿ ಮೂರು ನವಶಿಲಾಯುಗದ
ಶಿಲಾ ಕೈಗೊಡಲಿಗಳಿವೆ. ಎಡಭಾಗದ ಶಿಲಾಯುಧವು ೧೨ ಅಂಗುಲ ಎತ್ತರ ೫ ಅಂಗುಲ ಅಗಲವಾಗಿದ್ದು ತ್ರಿಕೋನಾಕಾದಲ್ಲಿರುವ
ಸಿಸ್ಟ್ ಕಲ್ಲಿನದು ಬಳಿಯಲ್ಲಿರುವ ಶಿಲಾಕೈಗೊಡಲಿಯು ೧೫ ಅಂಗುಲ ಎತ್ತರ ೫ ಅಂಗುಲ ಅಗಲವಾಗಿದ್ದು, ದೊಡ್ಡದಾಗಿದೆ. ಇದನ್ನು ಸಹ ಸಿಸ್ಟ್ ಕಲ್ಲಿನಿಂದಲೇ ಮಾಡಲಾಗಿದೆ. ಬಳಿಯಲ್ಲಿರುವ
ಮತ್ತೊಂದು ಶಿಲಾ ಕೈಗೊಡಲಿಯು ೯ ಅಂಗುಲ ಎತ್ತರ ೪ ಅಂಗುಲ ಅಗಲವಾಗಿದ್ದು ತ್ರಿಕೋನಾಕಾರದಲ್ಲಿರುವ ಸಿಸ್ಟ್
ಕಲ್ಲಿನದು. ಈ (ಕ್ರಿ.ಪೂ. ಸು. ೩೦೦೦) ಶೋಧನೆಗಳಿಂದಾಗಿ ಈ ಹಿಂದೆ ಈ ಪರಿಸರದಲ್ಲಿ ನವಶಿಲಾಯುಗದ ಕಾಲದಿಂದಲೇ
ಜನಜೀವನ ಅಸ್ತಿತ್ವದಲ್ಲಿ ಇದ್ದಿತೆಂಬುದಕ್ಕೆ ಆಧಾರಗಳು ಲಭಿಸಿದಂತಾಗಿವೆ.
ಬಳಿಯಲ್ಲಿರುವ ಅಗರ ಗ್ರಾಮವು ಪ್ರಾಚೀನ ಗ್ರಾಮವೇ ಆಗಿದ್ದು ಇದು ಕೆಂಗೇರಿ ಹೋಬಳಿಗೆ ಸೇರಿದೆ.
ಇಲ್ಲಿನ ಆಂಜನೇಯ ದೇವಾಲಯದ ಹಿಂಬದಿಯಲ್ಲಿ ಬಲಭಾಗಕ್ಕೆ ಉತ್ತರದಿಕ್ಕಿಗೆ ಮುಖ ಮಾಡಿ ನಿಲ್ಲಿಸಿರುವ ತುರುಗಾಳಗದ
ವೀರಗಲ್ಲು ಕಣಶಿಲೆಯ ಒಂದು ಮೂರುವರೆ ಅಡಿ ಎತ್ತರ ೩ ಅಡಿ ಅಗಲ ಮತ್ತು ಮೂರೂವರೆ ಅಂಗುಲ ದಪ್ಪದಿಂದ ಕೂಡಿದೆ.
ಇದರಲ್ಲಿ ವೀರನ ಚಿತ್ರಣ ಪ್ರಧಾನವಾಗಿದ್ದು ಗಂಗ ಅರಸರ ಕಾಲದ (ಕ್ರಿ.ಶ. ಸು. ೧೦ನೇ ಶತಮಾನ) ಶೈಲಿಯಲ್ಲಿ
ಇದೆ. ವೀರನು ತನ್ನ ಬಲದ ಕೈಯಲ್ಲಿ ಬಿಲ್ಲನ್ನು ಹಿಡಿದಿದ್ದು ಎಡದ ಕೈಯಲ್ಲಿ ಖಡ್ಗವನ್ನು ಹಿಡಿದಿದ್ದಾನೆ.
ಬೆನ್ನಿನಲ್ಲಿನ ಬತ್ತಳಿಕೆಯಲ್ಲಿ ಬಾಣಗಳಿವೆ. ಅಂದರೆ ಈತ ಬಿಲ್ವಿದ್ಯೆ ಮತ್ತು ಖಡ್ಗ ಪ್ರಹಾರಗಳಲ್ಲಿಯೂ
ಪರಿಣಿತನಾಗಿದ್ದ ಎಂಬುದನ್ನು ತಿಳಿಯಬಹುದಾಗಿದೆ. ಶಿರದಲ್ಲಿ ಎಡಭಾಗಕ್ಕೆ ಎತ್ತಿ ಕಟ್ಟಿರುವ ಶಿರೋಮುಡಿ
ಇದ್ದು ಕಿವಿಯಲ್ಲಿ ಕುಂಡಲಗಳಿವೆ. ಮುಖ ಲಕ್ಷಣ ಸ್ಪಷ್ಟವಾಗಿದ್ದು ನೇತ್ರಾ, ನಾಸಿಕ ಮತ್ತು ತುಟಿಗಳ ಸ್ಪಷ್ಟ ರೂಪಗಳು ಚಿತ್ರೀಕರಣವಾಗಿವೆ. ಕೊರಳಲ್ಲಿ ಸರಗಳಿದ್ದು,
ಮುಂಗೈ ಮತ್ತು ಕಾಲುಗಳಲ್ಲಿ ಕಡಗಗಳಿವೆ, ಈತನಿಗೆ ಅಲಂಕೃತ
ವೀರಗಚ್ಚೆಯ ಉಡುಪು ಇದ್ದು ನಡುವಿನಲ್ಲಿ ಬಿಚ್ಚುಗತ್ತಿ ಇದೆ.
ಈತನ ಬಲಬದಿಯಲ್ಲಿ ಅಶ್ವವಿದ್ದು, ಅದರಿಂದ ಬಂದಿಳಿದ ಈತ ಶತ್ರುಗಳೊಡನೆ ಯುದ್ಧ
ಮಾಡಿದ್ದಾನೆ. ಇವನ ಎಡಬದಿಯಲ್ಲಿ ಬಲ ಮುಖವಾಗಿರುವ ಎರಡು ತುರುಗಳು ಇದ್ದು ಇವುಗಳನ್ನು ತನ್ನ ಶತ್ರುಗಳಿಂದ
ರಕ್ಷಿಸುವಲ್ಲಿ ವೀರ ಯಶಸ್ವಿಯಾಗಿದ್ದಾನೆ. ಈತನ ಪಾದಗಳ ಬಳಿಯಲ್ಲಿ ಮತ್ತು ಮುಂದುಗಡೆ ಬಲ ಭಾಗದಲ್ಲಿ
ನಾಲ್ವರು ಸಂಗೀತ ವಾದ್ಯಗಳಾದ ತಮಟೆ ಕಹಳೆಗಳ ಜೊತೆ ಇವನನ್ನು ಯುದ್ಧಕ್ಕೆ ಕರೆದೊಯ್ಯುವ ದೃಶ್ಯವಿರುವುದರಿಂದ
ಇವನೊಬ್ಬ ಪ್ರಮುಖ ಸ್ಥಳೀಯ ನಾಯಕನಾಗಿದ್ದನೆಂದು ಪರಿಗಣಿಸಬಹುದಾಗಿದೆ. ಬಲಬದಿಯ ಮೇಲೆ ಶಿವಲಿಂಗದ ರೇಖಾ
ಚಿತ್ರಣವಿದೆ. ಎಡಭಾಗದ ಅಶ್ವ ಚಿತ್ರಣದ ಮೇಲೆ ತುರುಗಳಿಗಾಗಿ ಶತ್ರುಗಳೊಡನೆ ಹೋರಾಡಿ ತನ್ನ ಪ್ರಾಣವನ್ನು
ಅರ್ಪಿಸುವ ಈ ವೀರನನ್ನು ಅಪ್ಸರೆಯರಿಬ್ಬರು ಮೇನೆಯಲ್ಲಿ ಸ್ವರ್ಗಕ್ಕೆ ಕರೆದೊಯ್ಯುವ ದೃಶ್ಯವಿದ್ದು ತದನಂತರ
ಕೈಲಾಸದಲ್ಲಿ ಪದ್ಮಾಸನಬದ್ಧವಾಗಿ ಕೈಮುಗಿದು ಕುಳಿತಿರುವ ದೃಶ್ಯವಿದೆ. ಇಲ್ಲಿಯೇ ಶಿವಗಣವೊಬ್ಬನ ಚಿತ್ರಣವಿದ್ದು
ಒಡೆದುಹೋಗಿದೆ. ಕ್ರಿ.ಶ. ಸು. ೧೦ನೇ ಶತಮಾನಕ್ಕೆ ಸೇರುವ ಈ ವೀರಗಲ್ಲು ಬೇಗೂರಿನಲ್ಲಿರುವ ಗಂಗರ ಕಾಲದ
ವೀರಗಲ್ಲೊಂದನ್ನು ಹೋಲುತ್ತದೆ.
ನವ ಶಿಲಾಯುಗದ ಶಿಲಾ ಆಯುಧಗಳು, ದೊಡ್ಡಕಲ್ಲಸಂದ್ರ |
ಇದೇ ಆಂಜನೇಯ ದೇವಾಲಯದ ಎಡಬದಿಗೆ ದಕ್ಷಿಣ ದಿಕ್ಕಿಗೆ ಮುಖ ಮಾಡಿ ನಿಲ್ಲಿಸಿರುವ ವೀರಗಲ್ಲೊಂದನ್ನು
ಐದು ಅಡಿ ಎತ್ತರ ಮೂರು ಮುಕ್ಕಾಲು ಅಡಿ ಅಗಲ ಮತ್ತು ಮೂರುವರೆ ಅಂಗುಲ ದಪ್ಪವಾಗಿರುವ ಕಣಶಿಲೆಯ ಸ್ಮಾರಕ
ಇದನ್ನು ಮೂರು ಹಂತಗಳಲ್ಲಿ ಮೂಡಿಸಲಾಗಿದೆ. ಮೊದಲ ಹಂತದ ಬಲಭಾಗದಲ್ಲಿ ಅಶ್ವವೊಂದರ ಚಿತ್ರಣವಿದ್ದು ಮಹಿಳೆಯೊಬ್ಬಳು
ಎತ್ತರವಾದ ಛತ್ರಿಯನ್ನು ಹಿಡಿದಿದ್ದಾಳೆ. ಈಕೆ ಎಡಭಾಗದಲ್ಲಿರುವ ಅಲಂಕೃತ ಅಶ್ವವನ್ನು ನೋಡುತ್ತಾ ತನ್ನ
ಎಡಗೈನಿಂದ ಛತ್ರಿಯನ್ನು ಹಿಡಿದಿದ್ದಾಳೆ. ಈಕೆಯ ಮುಂದುಗಡೆ ಇಬ್ಬರು ವೀರರು ತಮ್ಮ ಬಲದ ಕೈಗಳಿಂದ ಎತ್ತಿದ
ಖಡ್ಗಗಳನ್ನು ಹಿಡಿದು ಎಡ ಕೈಯಲ್ಲಿ ಗುರಾಣಿಗಳನ್ನು ಹಿಡಿದು ಎದುರಿಗೆ ಇರುವ ಇಬ್ಬರು ಶತ್ರುಗಳನ್ನು
ಎದುರಿಸುತ್ತಿದ್ದಾರೆ ಇವರಿಗೂ ಕೈಯಲ್ಲಿ ಖಡ್ಗ ಗುರಾಣಿಗಳಿವೆ.
ಈ ಸ್ಮಾರಕದ ಎರಡನೆಯ ಹಂತದಲ್ಲಿಯೂ ಯುದ್ಧದ ಚಿತ್ರಣವೇ ಮುಂದುವರೆದಿದ್ದು ಚಿತ್ರಣದ ಪ್ರಮಾಣ ದೊಡ್ಡದಾಗಿದೆ.
ಖಡ್ಗ ಗುರಾಣಿ ಹಿಡಿದು ಯುದ್ಧನಿರತರಾಗಿರುವ ವೀರರ ನಡುವೆ ಓರ್ವ ಮಹಿಳೆ ನಿಂತ ಚಿತ್ರಣವಿದೆ. ಸರ್ವಾಲಂಕೃತ
ವೇಷಭೂಷಣಗಳಿಂದ ಅಲಂಕೃತವಾಗಿರುವ ಈ ಮೂವರ ಮುಂದುಗಡೆಯಲ್ಲಿ ಅಡ್ಡವಾಗಿ ಖಡ್ಗ ಮತ್ತು ಗುರಾಣಿ ಹಿಡಿದು
ಹೋರಾಡುವ ಶತ್ರುಗಳ ಚಿತ್ರಣವನ್ನು ಕೆತ್ತಲಾಗಿದ್ದು, ಸ್ಥಳಾಭಾವದಿಂದ ಇಲ್ಲಿ ಈ ಪರಿವರ್ತನೆ ಮಾಡಿಕೊಳ್ಳಲಾಗಿದೆ.
ಮೂರನೇ ಹಂತದಲ್ಲಿ ಮಡಿದ ಇಬ್ಬರು ವೀರರು ಮತ್ತು ನಡುವೆ ಓರ್ವ ಮಹಿಳೆ ಕೈಲಾಸದಲ್ಲಿ ಕೈಮುಗಿದು ನಿಂತಿದ್ದಾರೆ.
ಯುದ್ಧದಲ್ಲಿ ಈಕೆಯೂ ಹೋರಾಡಿ ಮಡಿದಳೇ ಅಥವಾ ಸತಿ ಪದ್ಧತಿ ಅನುಸರಿಸಿ ಅಗ್ನಿಪ್ರವೇಶ ಮಾಡಿ ಮಡಿದಳೇ
ಇಲ್ಲಿ ಸ್ಪಷ್ಟವಿಲ್ಲ. ಇವರ ಮುಂದೆ ಅಲಂಕೃತ ಮಂಟಪದಲ್ಲಿ ಶಿವಲಿಂಗದ ಚಿತ್ರಣವಿದ್ದು ಮುಂದೆ ವೇದಿಕೆಯ
ಮೇಲೆ ನಂದಿಯ ಚಿತ್ರಣ ಮತ್ತು ಮೇಲ್ಭಾಗದಲ್ಲಿ ಸೂರ್ಯ ಚಂದ್ರರಿದ್ದಾರೆ.
ಆಂಜನೇಯ ದೇವಾಲಯದ ಬಳಿಯ ವೀರಗಲ್ಲು, ಅಗರ
|
ಇಲ್ಲಿ ಯುದ್ಧ ನಡೆಸಿದ ಕಾರಣಗಳ ಸ್ಪಷ್ಟ ಚಿತ್ರಣವಿಲ್ಲವಾಗಿ ಇದೊಂದು ರಾಜಕೀಯ ಕಾರಣಕ್ಕಾಗಿ ನಡೆದ
ಹೋರಾಟವೆಂದು ನಿರ್ಧರಿಸಬಹುದಾಗಿದೆ. ಅತ್ಯಂತ ಕಲಾತ್ಮಕವಾಗಿ ಮೂಡಿಬಂದಿರುವ ಈ ಪ್ರಾಚೀನ ವೀರಗಲ್ಲು
ಸ್ಮಾರಕದ ಕಾಲಮಾನವು ಕ್ರಿ.ಶ. ಸು. ೧೧ನೇ ಶತಮಾನವೆಂದು ನಿರ್ಧರಿಸಬಹುದಾಗಿದೆ.
ಅಗರದಿಂದ ತುಸು ದೂರದಲ್ಲಿರುವ ಭೈರಸಂದ್ರ ಮಾರಮ್ಮನ ಗುಡಿಯ ಹಿಂದೆ ಹುಣಸೆ ಮರದ ಕೆಳಗಡೆ ೫ ಅಡಿ
ಅಗಲ ಮತ್ತು ೬ ಅಡಿ ಎತ್ತರದ ಕಣಶಿಲೆಯ ಪ್ರಾಚೀನ ವೀರಗಲ್ಲುವೊಂದಿದೆ. ಇದರಲ್ಲಿ ಒಂದೇ ಹಂತದ ಚಿತ್ರಣವನ್ನು
ಮೂಡಿಸಲಾಗಿದೆ. ಈ ಪ್ರಾಚೀನ ಸ್ಮಾರಕದಲ್ಲಿ ಯುದ್ಧದ ಸನ್ನಿವೇಶ ರೋಚಕವಾಗಿ ಮೂಡಿ ಬಂದಿದೆ. ಸ್ಮಾರಕದ
ಎಡಭಾಗದಲ್ಲಿ ಅಶ್ವವೊಂದರ ಮೇಲೆ ಕುಳಿತ ವೀರನ ಚಿತ್ರಣವಿದ್ದು, ಇವನ ಶಿರಕ್ಕೆ
ಬರುವಂತೆ ಮೂರು ಛತ್ರಿಗಳಿವೆ. ಇವುಗಳ ಮೇಲೆ ರಾಜ ಚಿಹ್ನೆಗಳೆರಡರ ಚಿತ್ರಣವಿದ್ದು, ಎಕ್ಸ್ ಆಕಾರದಲ್ಲಿವೆ. ಛತ್ರಿಗಳ ಮುಂದೆ ಇಬ್ಬರು ಸಂಗೀತವಾದಕರ ಚಿತ್ರಣವಿದ್ದು ಇವರಲೊಬ್ಬ
ಕಹಳೆ ಊದುತ್ತಿದ್ದರೆ ಮತ್ತೊಬ್ಬ ತಮಟೆ ನುಡಿಸುತ್ತಿದ್ದಾನೆ. ಇವರ ಮುಂದೆ ವೀರನ ಚಿತ್ರಣ ಪ್ರಧಾನವಾಗಿದ್ದು
ಈತ ತನ್ನ ಬಲಭಾಗಕ್ಕೆ ಬರುವ ಹಾಗೆ ಮುಖ ಮಾಡಿ ವೀರತನದಿಂದ ನಿಂತಿದ್ದು ಎಡ ಕೈಯಲ್ಲಿ ಬಿಲ್ಲನ್ನು ಹಿಡಿದಿದ್ದು
ಬಲ ಕೈಯಲ್ಲಿ ಆಯುಧವನ್ನು ಮೂಡಿಸಿಲ್ಲ, ಶಿರದಲ್ಲಿ ಎಡಕ್ಕೆ ಬರುವಂತೆ ಕಟ್ಟಿದ
ತುರುಬು ಇದ್ದು ಅಂದವಾದ ಮುಖ ಲಕ್ಷಣವಿದ್ದು ದಪ್ಪನೆಯ ಮೀಸೆಯಿದೆ.
ತೋಳು ಮತ್ತು ಕಾಲುಗಳಲ್ಲಿ ಕಡಗಗಳಿವೆ. ವೀರಗಚ್ಚೆಯ ಉಡುಪು ಇದ್ದು ನಡುವಿನಲ್ಲಿ ಬಿಚ್ಚುಗತ್ತಿ
ಇದೆ ಇವನ ಕಾಲುಗಳ ನಡುವೆ ಎರಡು ಶತ್ರು ಶವಗಳು ಬಿದ್ದಿದ್ದು ಇವುಗಳನ್ನು ದಾಟಿ ವೀರ ನಡೆಯುತ್ತಿದ್ದಾನೆ.
ಇವನ ಮುಂದೆ ಮೂರು ಜನ ವೀರರ ಕಿರು ಕೆತ್ತನೆ ಇದ್ದು, ಇವರು ಸಹ ಬಿಲ್ಲಿಗೆ ಬಾಣಗಳನ್ನು ಹೂಡಿ ವೀರತನದಿಂದ
ಯುದ್ಧ ಮಾಡುತ್ತಾ ಮುನ್ನಡೆಯುತ್ತಿದ್ದಾರೆ. ಇವರ ಕಾಲ ಕೆಳಗೆ ನೆಲಕ್ಕೆ ಉರುಳಿರುವ ಶತ್ರುವೊಬ್ಬನ ಶವವೊಂದು
ಬಿದ್ದಿದೆ. ಇವರ ಮುಂದೆ ಇಬ್ಬರು ಶತ್ರುಗಳು ಯುದ್ಧ ಮಾಡುವ ಚಿತ್ರಣವಿದ್ದು, ಈ ಚಿತ್ರಣದಲ್ಲಿ ಶತ್ರುಗಳು ಒಬ್ಬರ ಮೇಲೆ ಒಬ್ಬರು ಇರುವಂತೆ ಚಿತ್ರಣ ಬಂದಿದೆ. ಕೆಳಗಿರುವ
ಶತ್ರುವು ಖಡ್ಗ-ಗುರಾಣಿಯೊಂದಿಗೆ ವೀರನನ್ನು ಎದುರಿಸುತ್ತಿದ್ದರೆ ಮೇಲ್ಭಾಗದ ಚಿತ್ರಣದ ವೀರನು ಬಿಲ್ಲು
ಮತ್ತು ಬಾಣದಿಂದ ವೀರನೊಡನೆ ಯುದ್ಧ ಮಾಡುತ್ತಿದ್ದಾನೆ. ಇವನ ಮೇಲ್ಭಾಗದಲ್ಲಿ ಅಂದರೆ ವೀರಗಲ್ಲಿನ ಬಲಭಾಗದ
ಮೇಲ್ತುದಿಯಲ್ಲಿ ವೀರನೊಬ್ಬನು ಮಂಡಿಕಾಲನ್ನೂರಿ ಕುಳಿತು ಶತ್ರುವೊಬ್ಬನನ್ನು ಹಿಡಿದುಕೊಂಡು ತನ್ನ ಖಡ್ಗದಿಂದ
ಅವನ ಉದರಕ್ಕೆ ಇರಿದು ಸಾಯಿಸುತ್ತಿದ್ದಾನೆ ಚೀತ್ಕರಿಸುವಂತೆ ಶತ್ರುವಿನ ಚಿತ್ರಣ ಮೂಡಿಬಂದಿದೆ. ಈ ಚಿತ್ರಣದ
ಹಿಂಬದಿಯಲ್ಲಿ ಅಂದರೆ ವೀರಗಲ್ಲಿನ ಮೇಲ್ಭಾಗದ ಮಧ್ಯದಲ್ಲಿ ಮಡಿದ ವೀರನು ಸ್ವರ್ಗದಲ್ಲಿ ಅರೆಸುಖಾಸನದಲ್ಲಿ
ಕುಳಿತು ಅಪ್ಸರೆಯರಿಂದ ಚಾಮರಸೇವೆ ಪಡೆಯುವ ಚಿತ್ರಣವಿದೆ. ಬೀಭತ್ಸವಾದ ಯುದ್ಧ ಚಿತ್ರಣವನ್ನು ಕಟ್ಟಿಕೊಡುವ
ಈ ವೀರಗಲ್ಲಿನ ಯುದ್ಧದ ಕಾರಣ ಸ್ಪಷ್ಟವಿಲ್ಲವಾಗಿದ್ದು, ಇದೊಂದು ರಾಜಕೀಯ
ಕಾರಣದಿಂದ ಉಂಟಾದ ವೀರಗಲ್ಲು ಆಗಿರುವಂತಿದೆ. ಬೇಗೂರಿನ ವೀರಗಲ್ಲಿನ ಹೋಲಿಕೆಯನ್ನು ಇದು ಪಡೆದಿರುವುದರಿಂದ
ಇದರ ಕಾಲಮಾನವನ್ನು ಕ್ರಿ.ಶ. ಸು. ೧೦ನೇ ಶತಮಾನಕ್ಕೆ ಗುರುತಿಸಬಹುದಾಗಿದೆ.
ಇಲ್ಲಿಯೇ ಬಳಿಯಲ್ಲಿ ಐದು ಅಡಿ ಎತ್ತರ ಎರಡು ಅಡಿ ಅಗಲ ಮತ್ತು ಅರ್ಧ ಅಡಿ ದಪ್ಪದ ಕಣಶಿಲೆಯ ಪ್ರಾಚೀನ
ವೀರಗಲ್ಲು ಒಂದು ನಿಂತಿದ್ದು ಇದರಲ್ಲಿ ವೀರನು ಯುದ್ಧ ಮಾಡುವ ಪ್ರಧಾನ ಚಿತ್ರವನ್ನೇ ಮೂಡಿಸಲಾಗಿದೆ.
ಬಹುತೇಕ ನೆಲದಲ್ಲಿ ಹುದುಗಿಹೋಗಿರುವ ಈ ವೀರಗಲ್ಲಿನ ಚಿತ್ರಣದಲ್ಲಿ ಎಡಭಾಗದಲ್ಲಿ ಅಶ್ವವೊಂದರ ಪುಟ್ಟ
ಪ್ರಮಾಣದ ಚಿತ್ರಣವಿದೆ. ವೀರನು ಅಶ್ವವನ್ನೇರಿ ಯುದ್ಧಕ್ಕೆ ಬಂದಿರುವುದನ್ನು ಇದು ಸೂಚಿಸುತ್ತದೆ. ವೀರನ
ಪ್ರಧಾನ ಚಿತ್ರಣದಲ್ಲಿ ವೀರನು ತನ್ನ ಎಡ ಕೈಯಲ್ಲಿ ಬಿಲ್ಲನ್ನು ಹಿಡಿದಿದ್ದು ಬಲ ಕೈಯಲ್ಲಿ ಖಡ್ಗವನ್ನು
ಹಿಡಿದಿದ್ದಾನೆ. ಶಿರೋಮುಡಿಯನ್ನು ವಸ್ತ್ರದಿಂದ ಕಟ್ಟಲ್ಪಟ್ಟಿದ್ದು, ಎಡಭಾಗಕ್ಕೆ ತುರುಬಿನ ಗಂಟು ಬಂದಿದೆ. ಮುಖದ ಲಕ್ಷಣ ತ್ರಿಕೋನಾಕಾರವಾಗಿದ್ದು
ನೇತ್ರ ನಾಸಿಕ ಮತ್ತು ತುಟಿಗಳನ್ನು ಗಮನಿಸಬಹುದಾಗಿದೆ. ಕಿವಿಗಳಲ್ಲಿ ಆಭರಣ ಕೊರಳಲ್ಲಿ ಸರಗಳಿದ್ದು
ವೀರಗಚ್ಚೆಯ ಉಡುಪು ಇದೆ. ನಡುವಿನಲ್ಲಿ ಬಿಚ್ಚುಗತ್ತಿ ಇದ್ದು ಇವನ ಶರೀರಕ್ಕೆ ಹಲವಾರು ಶತ್ರುಗಳಿಂದ
ಬಾಣಗಳು ಹೊಕ್ಕಿವೆ. ವೀರಗಲ್ಲಿನ ಮೇಲ್ಭಾಗದಲ್ಲಿ ಸ್ವರ್ಗದಲ್ಲಿ ಪದ್ಮಾಸನಬದ್ಧನಾಗಿ ಕೈಮುಗಿದು ಕುಳಿತ
ವೀರನಿಗೆ ಅಪ್ಸರೆಯರಿಬ್ಬರು ಚಾಮರಸೇವೆ ನಡೆಸುತ್ತಿದ್ದಾರೆ. ಯಾವುದೋ ಕಾರಣದಿಂದ ಶತ್ರುಗಳೊಡನೆ ಹೋರಾಡಿ
ಇಲ್ಲಿನ ವೀರ ಸ್ವರ್ಗಸ್ಥನಾಗಿದ್ದಾನೆ. ಗಂಗರಸರ ಕಾಲದ ಇತರ ವೀರಗಲ್ಲುಗಳನ್ನು ಇದು ಹೋಲುವುದರಿಂದ ಈ
ವೀರಗಲ್ಲಿನ ಕಾಲಮಾನವನ್ನು ಕ್ರಿ.ಶ. ಸು. ೧೦ನೆಯ ಶತಮಾನದ್ದೆಂದು ನಿರ್ಧರಿಸಬಹುದಾಗಿದೆ.
DAd£ÉÃAiÀÄ zÉêÁ®AiÀÄzÀ §½AiÀÄ «ÃgÀUÀ®Äè, CUÀgÀ
|
ಇದರ ಬಳಿಯಲ್ಲಿಯೇ ಇರುವ ಮತ್ತೊಂದು ಪ್ರಾಚೀನ ವೀರಗಲ್ಲು ಸಹ ಭೂಮಿಯಲ್ಲಿ ಹುದುಗಿಹೋಗಿದ್ದು, ಭೂಮಿಯಿಂದ ಮೇಲಕ್ಕೆ ೫ ಅಡಿ ಎತ್ತರ ಮತ್ತು ೩ ಅಡಿ ಅಗಲ ಹೊಂದಿದ ಕಣಶಿಲೆಯ
ಸ್ಮಾರಕವಾಗಿದೆ. ಈ ವೀರಗಲ್ಲಿನ ಎಡಭಾಗದಲ್ಲಿ ಅಶ್ವವೊಂದರ ಚಿತ್ರಣ ಇರುವುದರಿಂದ ಇವನು ಸಹ ಅಶ್ವರೂಢನಾಗಿ
ಯುದ್ಧಕ್ಕೆ ಬಂದಿದ್ದಾನೆ. ಇವನಿಗೂ ಶಿರದಲ್ಲಿ ಎಡಭಾಗಕ್ಕೆ ಬರುವಂತೆ ತುರುಬು ಇದ್ದು ವಸ್ತ್ರದಿಂದ
ಕಟ್ಟಲ್ಪಟ್ಟಿದೆ. ಕರ್ಣಗಳಲ್ಲಿ ಆಭರಣಗಳು ಮತ್ತು ಕೊರಳಲ್ಲಿ ಹಾರವಿದೆ. ಇವನ ಚಿತ್ರಣದಲ್ಲಿಯೂ ಸಹ ಎಡ
ಕೈಯಲ್ಲಿ ಧನುಸ್ಸು ಇದ್ದು ಮೇಲ್ಭಾಗಕ್ಕೆ ಬರುವಂತೆ ಎತ್ತಿಹಿಡಿದಿದ್ದಾನೆ. ಬಲದ ಕೈಯಲ್ಲಿ ಹಿರಿದಾದ
ಖಡ್ಗವಿದೆ ಶತ್ರುವಿನಿಂದ ಬಿಡಲ್ಪಟ್ಟ ಬಾಣವೊಂದು ಇವನ ಶರೀರವನ್ನು ಭೇದಿಸಿಕೊಂಡು ಬೆನ್ನಿನಿಂದ ಹೊರಬಂದಿದೆ.
ಈ ಸ್ಮಾರಕದ ಎಡಭಾಗದ ಮೇಲ್ತುದಿಯಲ್ಲಿ ಮಡಿದ ವೀರನು ಸ್ವರ್ಗದಲ್ಲಿ ಸುಖಾಸೀನವಾಗಿ ಕೈಮುಗಿದು ಕುಳಿತಿದ್ದು
ಅಪ್ಸರೆಯರಿಂದ ಚಾಮರಸೇವೆ ಪಡೆಯುತ್ತಿದ್ದಾನೆ. ಬಹುತೇಕ ಭೂಮಿಯಲ್ಲಿ ಹುದುಗಿಹೋಗಿರುವ ವೀರಗಲ್ಲು ಇದಾಗಿರುವುದರಿಂದ
ಹೆಚ್ಚಿನ ವಿವರಗಳು ಪ್ರಸ್ತುತ ಅಲಭ್ಯವಾಗಿವೆ. ಈ ಪ್ರಾಚೀನ ವೀರಗಲ್ಲು ಸಹ ಗಂಗರ ಕಾಲದ ವೀರಗಲ್ಲನ್ನೇ
ಹೋಲುವುದರಿಂದ ಇದರ ಕಾಲಮಾನವನ್ನು ಸಹ ಕ್ರಿ.ಶ. ಸು.
೧೦ನೇ ಶತಮಾನದ್ದೆಂದು ನಿರ್ಧರಿಸಬಹುದಾಗಿದೆ.
ಅಗರದಿಂದ ಬಂಜಾರಪಾಳ್ಯಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ತುರುಗೊಳದ ಪ್ರಾಚೀನ ವೀರಗಲ್ಲೊಂದು ನಿಂತಿದ್ದು
ಐದು ಅಡಿ ಎತ್ತರ ಎರಡೂವರೆ ಅಡಿ ಅಗಲ ಮತ್ತು ಏಳೂವರೆ ಅಂಗುಲ ದಪ್ಪದಿಂದ ಕೂಡಿದ ಕಣಶಿಲೆಯ ಸ್ಮಾರಕ ಇದಾಗಿದೆ.
ಇದರಲ್ಲಿಯೂ ವೀರನ ಚಿತ್ರಣವೇ ಪ್ರಧಾನವಾಗಿದ್ದು, ಈತನು ತನ್ನ ಎಡಕೈಯಲ್ಲಿ ಬೃಹತ್ತಾದ ಧನಸ್ಸನ್ನು
ಹಿಡಿದಿದ್ದಾನೆ. ಬಲಕೈಯಲ್ಲಿ ಪುಟ್ಟ ಬಾಕುವಿನಂತಹ ಆಯುಧವನ್ನು ಹಿಡಿದಿದ್ದಾನೆ. ಇವನ ಬಲಗಡೆಯ ನಡುವಿನಲ್ಲಿ
ಖಡ್ಗವಿದೆ. ಶತ್ರುಗಳು ಬಿಟ್ಟಿರುವ ಬಾಣಗಳು ಇವನ ಶಿರ, ಎದೆ ಮತ್ತು ಗೋಳುಗಳನ್ನು
ಹೊಕ್ಕಿವೆ. ಶಿರದಲ್ಲಿ ಎಡಭಾಗಕ್ಕೆ ವಸ್ತ್ರದಿಂದ ಕಟ್ಟಿದ ಶಿರೋಮುಡಿ ಇದ್ದು ಮುಖ ಮತ್ತು ಶರೀರ ಭಾಗ
ಸವೆದು ಹೋಗಿದೆ. ನಡುವಿನಲ್ಲಿ ಅಲಂಕಾರ ಯುಕ್ತವಾದ ವಸ್ತ್ರದ ಪೋಷಾಕು ಇವನಿಗೆ ಇದೆ. ಈತನ ಪಾದಗಳ ಬಳಿಯಲ್ಲಿ
ತುರುವೊಂದು ಬಲಮುಖ ಮಾಡಿ ನಿಂತಿದೆ. ಅಂದರೆ ವೀರನು ಶತ್ರುಗಳಿಂದ ಗೋವನ್ನು ರಕ್ಷಿಸುವಲ್ಲಿ ಸಫಲನಾಗಿದ್ದು
ತಾನು ಮಾತ್ರ ಸ್ವರ್ಗಸ್ಥನಾಗಿದ್ದಾನೆ. ಈ ವೀರಗಲ್ಲಿನ ಮೇಲ್ಭಾಗದಲ್ಲಿ ಮಡಿದ ವೀರ ಅರೆ ಪದ್ಮಾಸನದಲ್ಲಿ
ಅಪ್ಸರೆಯರಿಂದ ಚಾಮರಸೇವೆ ಪಡೆಯುತ್ತಾ ಸ್ವರ್ಗದಲ್ಲಿ ಕುಳಿತಿದ್ದಾನೆ. ಕ್ರಿ.ಶ. ಸು. ೯ನೇ ಶತಮಾನಕ್ಕೆ
ಈ ವೀರಗಲ್ಲು ಸೇರುತ್ತದೆ.
ಈ ತುರುಗಾಳಗದ ವೀರಗಲ್ಲಿನ ಹಿಂಬದಿಯಲ್ಲಿಯೇ ಬಿಲ್ಲನ್ನು ಹಿಡಿದಿರುವ ಕೈ ಚಿತ್ರಣದ ತುಣುಕೊಂದು
ಬಿದ್ದಿದ್ದು ಮತ್ತಷ್ಟು ಹಿಂದೆ ಒಂದುವರೆ ಅಡಿ ಎತ್ತರ ಮತ್ತು ಅಷ್ಟೇ ಅಗಲದ ವೀರನ ಚಿತ್ರಣವಿರುವ ವೀರಗಲ್ಲೊಂದು
ಬಿದ್ದಿದೆ. ಪ್ರಾಯಶಃ ಇದು ತುರುಗಾಳಗದ ವೀರಗಲ್ಲೇ ಆಗಿದ್ದು ಕ್ರಿ.ಶ. ಸು. ೧೫ನೇ ಶತಮಾನಕ್ಕೆ ಸೇರುತ್ತದೆ.
ಈ ಪ್ರಾಚ್ಯಾವಶೇಷಗಳ ಹೊಸ ಶೋಧನೆಯಿಂದಾಗಿ ಬೆಂಗಳೂರು ದಕ್ಷಿಣ ಭಾಗದ ಈ ಪ್ರದೇಶದಲ್ಲಿ ಪ್ರಾಗೈತಿಹಾಸಿಕ
ಕಾಲವಾದ ನವ ಶಿಲಾಯುಗದಿಂದ (ಕಾಲ ಕ್ರಿ.ಪೂ. ೩೦೦೦) ಇಂದಿನವರೆಗೆ ಸತತವಾಗಿ ಜನ ಸಂಸ್ಕೃತಿ ಅಸ್ತಿತ್ವದಲ್ಲಿರುವುದು
ಬೆಳಕಿಗೆ ಬಂದಂತಾಗಿದೆ.
ಕನ್ನಡ
ಅಧ್ಯಾಪಕರು, ಜವಾಹರ್ ನವೋದಯ ವಿದ್ಯಾಲಯ, ಕಾನ್ಹಿವಾಡಾ
ಜಿಲ್ಲೆ ಶಿವನಿ (ಮ.ಪ್ರ)-೪೮೦೯೯೦.
No comments:
Post a Comment