ಪಂಚಿಕೇಶ್ವರ ಒಂದು ಅರ್ಥಗ್ರಹಿಕೆ : ಮರು ಚಿಂತನೆ
ಆರ್. ವೆಂಕಟೇಶಮೂರ್ತಿ
೨೭೧, ‘ನವಸುಮ’, ೨೩ನೇ ಮುಖ್ಯರಸ್ತೆ,
ಮುನೇಶ್ವರ ಬ್ಲಾಕ್, ಗಿರಿನಗರ, ‘ಟಿ’ ಬ್ಲಾಕ್,
ಬೆಂಗಳೂರು-೫೬೦೦೮೫.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಶಾಸನಗಳನ್ನು ಪುನರ್ ಪರಿಶೀಲನೆಗೆ
ಒಳಪಡಿಸಿದ ಸಂದರ್ಭದಲ್ಲಿ ಇದೇ ತಾಲ್ಲೂಕಿಗೆ ಸೇರಿದ ಬೆಳ್ಳೂರಿನ ಕ್ರಿ.ಶ.೧೨೭೧ರ ಶಾಸನದಲ್ಲಿ ‘ಪಂಚಿಕೇಶ್ವರ’ ಎಂಬ ಶಬ್ದ ಗಮನ ಸೆಳೆದು
ಇನ್ನಿತರ ಶಾಸನಗಳನ್ನು ಪರಿಶೀಲಿಸಿದಾಗ ಈ ಪಂಚಿಕೇಶ್ವರವು ವಿವಿಧ ಅರ್ಥಗಳಲ್ಲಿ ಪ್ರಯೋಗವಾಗಿರುವಂತೆ
ಕಂಡು ಆಲೋಚನೆ ಮಾಡುವಂತಾಯಿತು.
ಶಿಕಾರಿಪುರ ತಾಲ್ಲೂಕಿನ ಸಾಲೂರು
ಗ್ರಾಮದ ಶಾಸನವು ಈಗಾಗಲೇ ನೀಡಿರುವ ಕೊಡುಗೆಯ ಜೊತೆಗೆ ಒಂದು ಮತ್ತರಿನ ೧/೮ ಭಾಗವನ್ನು ನೀಡಿ ‘ಮತ್ತಂ ಅಲ್ಲಿ
ಪಡಿಯ ಪೊನ್ನಂ ನೆರಪಿ ತಮ್ಮ ಮನೆಯಿಂ ಪಂಚಾಕೇಶ್ವರಮಂ ಪೊರಮಡಿಸಿ, ಓದಿಸಿ, ಆ ಅರ್ಥಮಂ ಪೂಜಿಸುವರು’ ಎಂದು ದಾಖಲಿಸಿದೆ.
ಬೇಲೂರು ಶಾಸನವು ‘ಹೊಯ್ಸಣೇಶ್ವರ
ದೇವರ’ ಪಂಚಕೇಶ್ವರದ ಮೋದಿದ
ಬ್ರಾಹ್ಮಣರ ಪೂಜೆಗೋಸುಗ’ ಆ ಮಹಾಜನಂಗಳ ಕೈಯಲು ಧರ್ಮವಡಿಯಲು ಬೀಜವೊನ್ನಾಗಿ ಕೊಟ್ಟ
ಗದ್ಯಾಣ ಮೂವತ್ತು ಎಂದು ದಾಖಲಿಸಿದೆ. ಮತ್ತೊಂದು ಶಾಸನವು ಹೇಮಳಂಬಿ ಸಂವತ್ಸರದ ಭಾದ್ರಪದ ಸು. ೧೪ ಆ| ಶಾಂತಿಗ್ರಾಮದ ಸಿಂಗಮಾರವನು
‘ಪಂಚಿಕೇಶ್ವರ ದೇವರ’ ಧರ್ಮಕ್ಕೆ ಕೊಟ್ಟ ಬೀಜವೊಂನ್ನುಗ’ ಎಂದು ತಿಳಿಸುತ್ತದೆ.
‘ಪಂಚಿಕೇಶ್ವರ ದೇವರ’ ಧರ್ಮಖ ಧವಿಸೆಯ ಪೂಜೆಗೆ
ಹೊಂಗೆ ವರಿಷಕ್ಕೆ ಹಣವೆರಡು ಮತ್ತು ‘ಶ್ರೀ ಪಂಚಿಕೇಶ್ವರ ದೇವರದ’ ದವಿಸೆಯ ಪೂಜೆಗೆ ಹೊಂಗೆ ವರಿಷಕ್ಕೆ
ಹಣವೆರಡರ ಬಡ್ಡಿಯಲು ಬಿಟ್ಟ ಗದ್ಯಾಣ ಹತ್ತು ಎಂದೂ ದಾಖಲಿಸಿದೆ.
ನಾಗಮಂಗಲ ತಾಲ್ಲೂಕಿನ ಬೆಳ್ಳೂರು
ಶಾಸನವು ಮೂರನೇ ಹೊಯ್ಸಳ ನರಸಿಂಹನ ಕಾಲದಲ್ಲಿ ಮಹಾಪ್ರಧಾನಿಯಾಗಿದ್ದ ಪೆರುಮಾಳೆದೇವ ದಣ್ನಾಯಕನು ಶ್ರೀಮತ್ಸರ್ವ್ವ
ನಮಸ್ಯದಗ್ರಹಾರ ಸ್ವಯಂಕೃತವಹ ವುದ್ಭವ ನರಸಿಂಹಪುರವಾದ ಬೆಳ್ಳೂರ ಶ್ರೀಮದಗ್ರಹಾರದಲಿ ತಾವು ಮಾಡಿಸುವ
‘ಶ್ರೀ ಪಂಚಿಕೇಶ್ವರದಲಿ’ಯಿಂದ್ರ ಪರ್ವದ ಧರ್ಮಕೆಯುಂ, ಆರಣ ಪೂಜೆಗೆಯುಂ’ ಗದ್ದೆ ಸಲಗೆ ಮೂವತ್ತಾಱನೂ
ದಾನ ನೀಡಿದ್ದಾನೆ.
ಚನ್ನರಾಯಪಟ್ಟಣ ತಾಲ್ಲೂಕಿನ
ಶಾಸನವು ‘ಆ ಗದ್ದೆ ಸ ೫ ಯೂ ಕ್ಷೇತ್ರವನು ಆ ಬಾಳುಗಚ್ಚಿನ ಆಯಿಂದ್ರ ಪರ್ವದ ಪಂಚಿಕೇಶ್ವರ ದೇವರ ಧರ್ಮಕ್ಕೆವೂ’ ಎಂದು ದಾಖಲಿಸಿದೆ.
ಮೊದಲ ಹಂತದಲ್ಲಿ ಹೊಯ್ಸಣೇಶ್ವರ
ದೇವರ ಪಂಚಿಕೇಶ್ವರದ ವೋದಿದ ಬ್ರಾಹ್ಮಣರ ಪೂಜೆಗೋಸುಗ; ಮತ್ತಂ ಅಲ್ಲಿ ಪಡಿಯ ಪೊನ್ನಂ
ನೆರಪಿ ತಮ್ಮ ಮನೆಯಿಂ ಪಂಚಾಕೇಶ್ವರಮಮ್ ಪೊರಮಡಿಸಿ, ವೋದಿಸಿ ಆ ಅರ್ಥಮಂ ಪೂಜಿಸುವರು; ಮತ್ತು ದೇವರ ವೇದ ಪಾರಾಯಣ | ಪಂಚಕೇಶ್ವರ | ಶ್ರೀ ಪಂಚರಾತ್ರ | ಶಾಸ್ತ್ರ, ಮಂತ್ರ ಸಿದ್ಧಾಂತ ಮಾರ್ಗ ಸಕಲ
ಭೋಗ ನಿತ್ಯಾರ್ಚನ ಎಂಬ ದಾಖಲೆಗಳಲ್ಲಿ ‘ಮೋದಿದ, ಓದಿಸಿ ಎಂಬ ಪದಗಳೊಂದಿಗೆ ವೋದಿದ ಬ್ರಾಹ್ಮಣರ ಪೂಜೆಗೋಸುಗ; ವೇದ, ಆಗಮಶಾಸ್ತ್ರ ಮಂತ್ರಗಳ ಸಾಲಿನಲ್ಲಿ
ದಾಖಲಾಗಿರುವ ಪಂಚಕೇಶ್ವರ; ಮತ್ತು ಅರ್ಥಮಂ ಪೂಜಿಸುವರ; ಎಂಬುದನ್ನು ಗಮನಿಸಿದಾಗ “ಪಂಚಕೇಶ್ವರ
ಎಂಬುದು ಪೂಜಾ ವಿಧಿ, ವಿಧಾನಗಳ ವಿವರಣೆಯನ್ನೋ
ಅಥವಾ ಮಂತ್ರಗಳನ್ನೋ ಒಳಗೊಂಡ ಗ್ರಂಥ ಅಥವಾ ತಾಡವೋಲೆ ಆಗಿರಬೇಕೆಂದು, ಮಂತ್ರಗಳನ್ನು ಹೇಳಿದ ಅಥವಾ
ಗ್ರಂಥವನ್ನು ವೋದಿದ ಬ್ರಾಹ್ಮಣರಿಗೆ ದಾನ ನೀಡುವ ಧಾರ್ಮಿಕ ಸಂಪ್ರದಾಯದ ಆಚರಣೆಯಾಗಿತ್ತೆಂದು ಊಹಿಸಲಾಗಿತ್ತು.
ಎರಡನೇ ಹಂತದಲ್ಲಿ, ಡಬ್ಲ್ಯೂ, ರೀವ್ ಅವರ ಕನ್ನಡ-ಇಂಗ್ಲಿಷ್
ನಿಘಂಟುವಿನಲ್ಲಿ ‘ಪಂಚ’ ಎಂದರೆ ‘ರೈತ’ ಎಂಬ ಅರ್ಥವಿದ್ದು, ಶಾಸನಗಳಲ್ಲಿ ದಾಖಲಾಗಿರುವ
(೧) ಶ್ರೀ ಪಂಚಿಕೇಶ್ವರ ಧರ್ಮಕೆ ಕೊಟ್ಟ ಬೀಜವೊಂನ್ನು, (೨) ಪಂಚಕೇಶ್ವರ ಧರ್ಮಖ ದವಿಸೆಯ
ಪೂಜೆಗೆ ಬಿಟ್ಟ ಗದ್ಯಾಣ ನಾಲ್ಕು; ಮತ್ತು (೩) ಪಂಚಕೇಶ್ವರ
ದೇವರದ ಧವಿಸೆಯ ಪೂಜೆಗೆ ಹೊಂಗೆ ವರಿಷಕ್ಕೆ ಹಣವೆರಡರ ಬಡ್ಡಿಯಲು; ಎಂಬುದನ್ನು ಗಮನಿಸಿದಾಗ, ಬೀಜವೊಂನು ಮತ್ತು ಧವಿಸೆಯ ಪೂಜೆಗೆ
ಎಂಬ ಪದಗಳು ‘ಪಂಚಕೇಶ್ವರ’ಕ್ಕೆ ಹೊಂದಿಕೊಂಡಂತೆ ಬಳಕೆಯಾಗಿರುವುದರಿಂದ ಈ ಪಂಚಿಕೇಶ್ವರ
ಪೂಜೆಯು ವ್ಯವಸಾಯಕ್ಕೆ ಸಂಬಂಧಿಸಿರಬಹುದೆ? ಎಂಬ ಅನುಮಾನವನ್ನೂ ವ್ಯಕ್ತಪಡಿಸಲಾಗಿತ್ತು.
ಪ್ರಸ್ತುತ ದೊರಕಿರುವ
ಮಾಹಿತಿಗಳೆಂದರೆ :
೧) ಶ್ರೀಯುತ ಷ. ಶೆಟ್ಟರ್‌ರವರು ತಮ್ಮ ‘ಸೋಮನಾಥಪುರ’ ಕೃತಿಯಲ್ಲಿ ಪಂಚಿಕೇಶ್ವರ
ದೇವಾಲಯವನ್ನು ಗುರುತಿಸಿ, ಇದು ಸೋಮನಾಥಪುರದ
ಕೇಶವ ದೇವಾಲಯದ ಈಶಾನ್ಯ ದಿಕ್ಕಿನಲ್ಲಿತ್ತು ಎಂದು ಗುರುತಿಸಿದ್ದಾರೆ.
೨) ಸೋಮನಾಥಪುರ ಶಾಸನಗಳಲ್ಲಿ ಪಂಚಲಿಂಗದೇವರು ಎಂದು ಕರೆದಿರುವುದನ್ನು
ಗಮನಿಸಿದರೆ, ಬಹುಶಃ ಕಾಲ ಕಳೆದಂತೆ
ಪಂಚಿಕೇಶ್ವರವು ಪಂಚಲಿಂಗದೇವರು ಎಂದು ಕರೆದಿರಬಹುದಾಗಿದೆ.
೩) ಈಶಾನ್ಯದಲ್ಲಿರುವ ಪಂಚಲಿಂಗ ದೇವಾಲಯಕ್ಕೆ ಆಗ್ನೇಯದಲ್ಲಿ
ಇರುವ ಶಾಸನದಂತೆ ಇಲ್ಲಿ ಬಿಜ್ಜಳೇಶ್ವರ ದೇವರು, ಹೆಮ್ಮೇಶ್ವರದೇವರು, ರೇವಲೇಶ್ವರ ದೇವರು, ಸೋಮನಾಥದೇವರು, ಭೈರವೇಶ್ವರದೇವರು ಇದ್ದು ಪೂಜೆಗೊಳ್ಳುತ್ತಿತ್ತು
ಎಂದು ಗುರುತಿಸಬಹುದಾಗಿದೆ.
೪) ಈ ದೇವಾಲಯದ ಅಂಗರಕ್ಷಕ ವಾರ್ಷಿಕ ೧೦ ಗದ್ಯಾಣವನ್ನು, ಸೇನಬೋವ ಭಂಡಾರಿಗ ಮತ್ತು ಮುದ್ರಾಕಾರ
ಕೂಡ ೧೨ ಗದ್ಯಾಣವನ್ನು ಪಡೆಯುತ್ತಿದ್ದರು.
೫) ಮೂರು ರಂಗವಾಲೆಗಳು, ಆರು ಪರಿಚಾರಕರು, ಒಂಬತ್ತು ಆಳುಗಳು, ಹನ್ನೆರಡು ದವಸಿಗರು ಈ ಸಮುಚ್ಛಯದಲ್ಲಿದ್ದರು.
೬) ಆರು ಜನ ಸಿಂಗಾರದವರು ತಲಾ ೬ ಗದ್ಯಾಣಗಳನ್ನು ವಾರ್ಷಿಕವಾಗಿ
ಪಡೆದುಕೊಳ್ಳುತ್ತಿದ್ದರು.
೭) ದೀಪಾವಳಿ ಉತ್ಸವದಲ್ಲಿ ೨ ಸಲಗೆ ಎಣ್ಣೆಯನ್ನು ಈ ದೇವಾಲಯದಲ್ಲಿ
ಬಳಸಲಾಗತ್ತಿತ್ತು.
೮) ತಾಂಬೂಲ ಸೇವೆಗೆ ಪ್ರತಿನಿತ್ಯ ೨೦೦ ಅಡಿಕೆ ಮತ್ತು ೬೦೦
ವೀಳ್ಯೆದೆಲೆ ಬೇಕಾಗುತ್ತಿತ್ತು.
೯) ಶಿವಲಿಂಗಗಳಿಗೆ ‘ಶೃಂಗಾರದ ವಸ್ತ್ರ’ ಎಂಬ ನೂಲಿನ ಬಟ್ಟೆ
ಮತ್ತು ‘ಪುಲೆಯಪಟ್ಟಿ’ ಎಂಬ ರೇಶ್ಮೆ ಶಲ್ಯಗಳನ್ನು ವರ್ಷಕ್ಕೆ ನಾಲ್ಕು ಬಾರಿ ಅಥವಾ
ಮೂರು ತಿಂಗಳಿಗೊಮ್ಮೆ ಬದಲಿಸಲಾಗುತ್ತಿತ್ತು. ಇದಕ್ಕಾಗಿ ಈ ದೇವಾಲಯಕ್ಕೆ ೨೮ ಶೃಂಗಾರದ ವಸ್ತ್ರಗಳನ್ನು
೧೪ ಪುಲಿಯ ಪಟ್ಟಿಗಳನ್ನು ಒದಗಿಸಲಾಗುತ್ತಿತ್ತು.
ಈ ಎಲ್ಲಾ ಮಾಹಿತಿಗಳ ಹಿನ್ನೆಲೆಯಲ್ಲಿ ಪಂಚಕೇಶ್ವರ, ಪಂಚಿಕೇಶ್ವರ, ಪಂಚಾಕೇಶ್ವರ ಎಂಬುದು ಆರಂಭ
ಕಾಲದಲ್ಲಿ ಧಾರ್ಮಿಕ ಆಚರಣೆಗೆ ಸಂಬಂಧಿಸಿದ ಪೂಜಾ ವಿಧಿ-ವಿಧಾನಗಳ ವಿವರಣೆಯನ್ನೋ ಅಥವಾ ಮಂತ್ರಗಳನ್ನೋ
ಒಳಗೊಂಡ ಗ್ರಂಥ ಅಥವಾ ತಾಡವೋಲೆ ಆಗಿರಬಹುದಾಗಿದೆ. ಆದರೆ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಶಾಸನಗಳಲ್ಲಿ
ದಾಖಲಾಗಿರುವ ‘ಬೆಳ್ಳೂರ ಶ್ರೀಮದಗ್ರಹಾರದಲಿ ತಾವು ಮಾಡಿಸುವ ಶ್ರೀ ಪಂಚಿಕೇಶ್ವರದಲಿ ಯಿಂದ್ರಪರ್ವದ
ಧರ್ಮ್ಮಕೆಯುಂ ಆರಣ ಪೂಜೆಗೆಯುಂ’ ಹಾಗೂ ದಾನ ನೀಡಿದ ಮೇರೆಗಳನ್ನು ಗುರುತಿಸುವಲ್ಲಿ ‘ಅಲ್ಲಾಳ
ಸಮುದ್ರದ ಕೆಳಗೆ ‘ಪಂಚೀಕೇಶ್ವದಿಂ ಪಡುವಲು’ ಎಂಬುದನ್ನು ಗಮನಿಸಿದರೆ, ಬೆಳ್ಳೂರಿನಲ್ಲಿ ಐದು ಲಿಂಗಗಳನ್ನು
ಪ್ರತಿಷ್ಠಾಪಿಸಿ ಪೂಜೆ ಪುನಸ್ಕಾರಗಳನ್ನು ನಡೆಸುವಂತೆ ಮಾಡಲಾಗಿತ್ತು ಎಂಬುದಾಗಿ ಹೇಳಬಹುದಾಗಿದೆ.
ಆಧಾರಸೂಚಿ
೧. ಪಂಚಿಕೇಶ್ವರ ಒಂದು ಅರ್ಥ ಗ್ರಹಿಕೆ, ಇತಿಹಾಸ ದರ್ಶನ, ಸಂ. ೧೨, ೧೯೯೭, ಪುಟ ೧೫೦-೧೫೩.
೨. ಎ.ಕ. ಗಿ, (ಪರಿಷ್ಕೃತ ಆವೃತ್ತಿ), ತಿ. ನರಸೀಪುರ ತಾಲ್ಲೂಕು, ಸೋಮನಾಥಪುರದ ಶಾಸನಗಳು.
೩. ಷ. ಶೆಟ್ಟರ್, ಸೋಮನಾಥಪುರ, ಅಭಿನವ ಪ್ರಕಾಶನ, ಬೆಂಗಳೂರು, ೨೦೦೮.
೪. ಎ.ಕ. ಗಿII, (ಪರಿಷ್ಕೃತ ಆವೃತ್ತಿ), ನಾಗಮಂಗಲ ತಾಲ್ಲೂಕು, ಬೆಳ್ಳೂರು ಶಾಸನಗಳು.
No comments:
Post a Comment