ನಿಟ್ಟೂರಿನ ಶಾಂತಿನಾಥ ಜಿನಾಲಯ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಹೋಬಳಿ ಕೇಂದ್ರ ನಿಟ್ಟೂರು. ಇದು ಸಾಂಸ್ಕೃತಿಕ ಮತ್ತು ಐತಿಹಾಸಿಕ ಸ್ಥಳವಾಗಿದ್ದು ಸಂಸ್ಕೃತಿಯ ದೃಷ್ಟಿಕೋನದಲ್ಲಿ ತನ್ನದೇ ಆದಂತಹ ವಿಶಿಷ್ಟ ಸ್ಥಾನಮಾನವನ್ನು ಮೈಗೂಡಿಸಿಕೊಂಡಿದೆ.
ನಿಟ್ಟೂರು ಜಿಲ್ಲಾ ಕೇಂದ್ರದಿಂದ ೨೮ ಕಿ.ಮೀ. ತಾಲ್ಲೂಕು ಕೇಂದ್ರದಿಂದ ೮ ಕಿ.ಮೀ. ದೂರದಲ್ಲಿದೆ. ಕ್ರಿಸ್ತಶಕ ೧೨೨೬ರ ಪುರ ಗ್ರಾಮದ ಶಿಲಾಶಾಸನದಲ್ಲಿ ನಿಟ್ಟೂರನ್ನು ‘ತೆಂಕಣಯ್ಯಾವಳೆ’ ಎನಿಸಿದ ಮಹಾಪಟ್ಟಣವಾಗಿತ್ತು ಎಂದು ಉಲ್ಲೇಖಿಸಿದೆ. ಹಾಗಾಗಿ ನಿಟ್ಟೂರು ಒಂದು ಪ್ರಾಚೀನ ಪ್ರಸಿದ್ಧ ವ್ಯಾಪಾರಕೇಂದ್ರವಾಗಿದ್ದು ಇಲ್ಲಿನ ವ್ಯಾಪಾರ ವಹಿವಾಟು ಭಾರತದ ಉದ್ದಗಲಕ್ಕೂ ಹರಡಿತ್ತು.
ಈ ಪ್ರದೇಶವು ಅನೇಕ ರಾಜಮನೆತನಗಳ ಆಳ್ವಿಕೆಗೆ ಒಳಪಟ್ಟಿತ್ತು. ಇಂತಹ ರಾಜಮನೆತನಗಳಲ್ಲಿ ಒಂದಾದ ಹೊಯ್ಸಳರ ಕಾಲದಲ್ಲಿ ಶೈವ ಮತ್ತು ವೈಷ್ಣವ ಧರ್ಮದ ಜೊತೆಗೆ ಜೈನಧರ್ಮ ಈ ಪ್ರದೇಶದಲ್ಲಿ ಹೆಚ್ಚು ಪ್ರಭಾವ ಬೀರಿತ್ತು ಎಂಬುದಕ್ಕೆ ನಿಟ್ಟೂರಿನಲ್ಲಿ ನಿರ್ಮಾಣಗೊಂಡಿರುವ ಶಾಂತಿನಾಥ ಜಿನಾಲಯವೇ ಪ್ರಮುಖ ಸಾಕ್ಷಿ ಆಗಿದೆ.
ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡಿರುವ ಶಾಂತಿನಾಥ ಜಿನಾಲಯವು ಪ್ರಸಿದ್ಧವಿದ್ದು, ನಿಟ್ಟೂರಿನ ಮಧ್ಯಭಾಗದಲ್ಲಿ ಪೂರ್ವಾಭಿಮುಖವಾಗಿ ಎತ್ತರವಾದ ವೇದಿಕೆಯ ಮೇಲೆ ಹೊಯ್ಸಳರ ವಾಸ್ತು ಮತ್ತು ಶಿಲ್ಪಕಲಾ ಲಕ್ಷಣಗಳನ್ನು ಮೈಗೂಡಿಸಿಕೊಂಡು ನಿರ್ಮಾಣಗೊಂಡಿದೆ. ವಾಸ್ತುವಿನ್ಯಾಸದಂತೆ ಗರ್ಭಗುಡಿ, ಸುಖನಾಸಿ, ನವರಂಗ ಮತ್ತು ಮುಖಮಂಟಪಗಳನ್ನು ಒಳಗೊಂಡಿದೆ.
ಈ ಜಿನಾಲಯದ ಗರ್ಭಗುಡಿಯಲ್ಲಿ ಜೈನಧರ್ಮದ ಪ್ರಥಮ ತೀರ್ಥಂಕರನಾದ ಆದಿನಾಥನನ್ನು ನಿರಾಭರಣವಾಗಿ ಕುಳಿತ ಭಂಗಿಯಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಆದರೆ ಈ ಮೂಲ ವಿಗ್ರಹ ಭಗ್ನಗೊಂಡಿರುವುದರಿಂದ ಜಿನಾಲಯದ ಮುಂಭಾಗದಲ್ಲಿ ಇಡಲಾಗಿದೆ. ಪ್ರಸ್ತುತ ಗರ್ಭಗೃಹದಲ್ಲಿ ಜೈನರ ೧೬ನೇ ತೀರ್ಥಂಕರನಾದ ಶಾಂತಿನಾಥನ ಮೈ ಮಣಿಸದೆ ನಿಂತ ಕಾಯೋತ್ಸರ್ಗ ಭಂಗಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಶಾಂತಿನಾಥನ ವಿಗ್ರಹದ ಹಿಂದೆ ಹಿತ್ತಾಳೆಯಿಂದ ಮಾಡಿರುವ ಪ್ರಭಾವಳಿಯನ್ನು ಇಡಲಾಗಿದೆ.
ಗರ್ಭಗುಡಿಗೆ ಸಮಾನಾಂತರವಾಗಿ ಸುಖನಾಸಿ ಕಂಡುಬರುತ್ತದೆ. ಸಖನಾಸಿಯನ್ನು ದಾಟಿ ಮುಂದೆ ಬಂದರೆ ಕಂಡುಬರುವುದೇ ನವರಂಗ, ನವರಂಗ ಇಡೀ ಜಿನಾಲಯದಲ್ಲೇ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಇದರ ಮೇಲ್ಛಾವಣಿಯ ಒಳಭಾಗದಲ್ಲಿ ಒಂಬತ್ತು ಅಂಕಣಗಳಿವೆ. ಪ್ರತಿ ಅಂಕಣದಲ್ಲಿಯೂ ಒಂದೊಂದು ಆಕರ್ಷಕ ಸೂಕ್ಷ್ಮ ಕೆತ್ತನೆಯಿಂದ ಕೂಡಿರುವ ಭುವನೇಶ್ವರಿಗಳಿವೆ. ಕಪ್ಪು ಬಳಪದ ಕಲ್ಲಿನಿಂದ ಮಾಡಿರುವ ನಾಲ್ಕು ಕಂಬಗಳಿದ್ದು, ಇಡೀ ನವರಂಗದ ಮೇಲ್ಛಾವಣಿಯನ್ನು ಒತ್ತು ನಿಂತಿವೆ. ಇವು ಸ್ಥೂಲವಾದ ನೋಟಕ್ಕೆ ಒಂದರಂತೆ ಇನ್ನೊಂದು ಕಂಡರೂ ಅವುಗಳ ಕೆತ್ತನೆ ಕೆಲಸಗಳಲ್ಲಿ ವೈವಿಧ್ಯ ಇದೆ.
ಕಂಬಗಳ ಕೆಳಭಾಗ ಚಚ್ಚೌಕವಾಗಿದ್ದು ಕಾಂಡ ಭಾಗ ತಲೆಕೆಳಗಾದ ಗಂಟೆಯಾಕಾರದಲ್ಲಿದ್ದು ಅದರ ಮೇಲೆ ವೃತ್ತಾಕಾರವನ್ನೊಳಗೊಂಡ ಭಾಗಗಳು ಅದರ ಮೇಲೆ ಚಚ್ಚೌಕಾರದ ಚಾಚುಪೀಠಗಳು, ಅದರ ಮೇಲೆ ಬೋಧಿಗೆಗಳನ್ನು ಒಳಗೊಂಡಿದೆ. ಈ ನಾಲ್ಕು ಕಂಬಗಳ ಮಧ್ಯದ ಮೇಲ್ಛಾವಣಿಯಲ್ಲಿರುವ ಭುವನೇಶ್ವರಿ ಅತ್ಯಂತ ಸುಂದರವಾಗಿದ್ದು ಸೂಕ್ಷ್ಮ ಕೆತ್ತನೆಯಿಂದ ಕೂಡಿದೆ. ಇದು ೭ ಅಡಿ ಉದ್ದ ೭ ಅಡಿ ಅಗಲವಾಗಿದ್ದು ೪ ಅಡಿ ಆಳವಾಗಿದೆ ಈ ಭುವನೇಶ್ವರಿಯಲ್ಲಿ ಅಷ್ಟದಿಕ್ಪಾಲಕ ಮೂರ್ತಿಗಳು ಕಂಡುಬರುತ್ತವೆ. ಪೂರ್ವದಲ್ಲಿ ಇಂದ್ರ, ಆಗ್ನೇಯ ಅಗ್ನಿ, ದಕ್ಷಿಣ ಯಮ, ನೈರುತ್ಯ ನಿರುತಿ, ಪಶ್ಚಿಮ ವರುಣ, ವಾಯವ್ಯ ವಾಯು, ಉತ್ತರ ಕುಬೇರ, ಈಶಾನ್ಯ ಈಶ್ವರ ಮತ್ತು ಪರಿವಾರದವರು ಕಂಡುಬರುತ್ತಾರೆ. ಇದೇ ಭುವನೇಶ್ವರಿಯಲ್ಲಿ ಯಕ್ಷಿಯರಾದ ಕುಷ್ಮಾಂಡಿನಿ, ಪದ್ಮಾವತಿ, ಸರಸ್ವತಿ, ಜ್ವಾಲಾಮಾಲಿನಿಯರು ಇದ್ದಾರೆ. ಜ್ವಾಲಾಮುಖಿ ಉತ್ತರ ಭಾಗದಲ್ಲಿ, ದಕ್ಷಿಣಾಭಿಮುಖವಾಗಿದ್ದು ಇಂದಿಗೂ ಕೂಡ ದಿನನಿತ್ಯವೂ ಪೂಜೆ ಪುನಸ್ಕಾರಗಳು ನಡೆಯುತ್ತವೆ.
ನವರಂಗದ ಒಂಬತ್ತು ಭುವನೇಶ್ವರಿಗಳಲ್ಲಿ ೭೭ ಜನ ಭೂತ, ಭವಿಷ್ಯತ್, ವರ್ತಮಾನ ಕಾಲದ ತೀರ್ಥಂಕರರ ಮೂರ್ತಿಗಳಿವೆ. ವರ್ತಮಾನಕಾಲದ ತೀರ್ಥಂಕರರುಗಳನ್ನು ಗುರುತಿಸಲು ಅವರ ಲಾಂಛನಗಳು ಮೂರನೇ ಅಂಕಣದಲ್ಲಿ ಕಂಡುಬರುತ್ತದೆ. ಮಧ್ಯ ಅಂಕಣದ ಬಲಭಾಗದ ಭುವನೇಶ್ವರಿಯಲ್ಲಿ ಜೈನಮುನಿಗಳಿಗೆ ಆಹಾರ ಧಾನ್ಯಗಳನ್ನು ದಾನ ಮಾಡುತ್ತಿರುವ ಅಪೂರ್ವವಾದ ಕೆತ್ತನೆ ಇದೆ. ಇದರ ಮುಂದಿನ ಅಂಕಣದ ಭುವನೇಶ್ವರಿಯಲ್ಲಿ ವೇಣು, ವೀಣೆ, ಮೃದಂಗ ಮದ್ದಳೆಯಂತಹ ವಾದ್ಯಗಳನ್ನು ನುಡಿಸುತ್ತಿರುವ ವಾದ್ಯಗಾರರ ಮತ್ತು ನೃತ್ಯಗಳ ಶಿಲ್ಪಗಳಿವೆ. ಹೂ ಬಳ್ಳಿಗಳನ್ನು ಶಿಲ್ಪಿಯು ಸುಂದರವಾಗಿ ಕಂಡರಿಸಿದ್ದಾನೆ ನವರಂಗದ ಬಾಗಿಲಿನ ಎಡ ಮತ್ತು ಬಲಭಾಗದಲ್ಲಿ ಚಂಡ, ಮಹಾಚಂಡ, ದ್ವಾರಪಾಲಕ ವಿಗ್ರಹಗಳಿದ್ದು ಬಾಗಿಲಿನ ಮೇಲ್ಭಾಗದಲ್ಲಿ ೨೦೦೯ರಲ್ಲಿ ಶಾಂತಿನಾಥನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
ನವರಂಗದ ಮುಂದಿನ ಭಾಗವಾದ ಮಂಟಪದ ಬಲಭಾಗದಲ್ಲಿ ಬ್ರಹ್ಮಯಕ್ಷ ಮತ್ತು ಎಡಭಾಗದಲ್ಲಿ ಕಮಲಾಕಾರ ಪೀಠಸ್ಥಳಾಗಿರುವ ಪದ್ಮಾವತಿಯ ಗುಡಿಗಳು ಕಂಡುಬರುತ್ತವೆ. ಮಂಟಪ ಸಾಧಾರಣವಾಗಿದ್ದು ಮೇಲ್ಛಾವಣಿಯನ್ನು ಒತ್ತು ನಿಂತಿರುವ ಒಂಬತ್ತು ಕಂಬಗಳಿದ್ದು ಆರುಕೋನ, ಅಷ್ಠಕೋನ, ಹದಿನಾರುಕೋನ, ಮೂವತ್ತೆರಡು ಕೋನ, ನಕ್ಷತ್ರ ಕಮಲಗಳಂತೆ ಒಂದೊಂದು ಕಂಬವು ವಿಭಿನ್ನ ರೀತಿಯಲ್ಲಿ ಅಲಂಕಾರದಿಂದ ಕೂಡಿದ್ದು ಮನಮೋಹಕವಾಗಿವೆ ಕಂಬಗಳ ಪೀಠದ ಚಚ್ಚೌಕಾರದಲ್ಲಿ. ಧರ್ಮಸಂಕೇತಗಳಾದ ಸ್ವಸ್ತಿಕ್, ಅಭಯಹಸ್ತ ಮುಂತಾದ ಸಂಕೇತಗಳನ್ನು ಚಿತ್ರಿಸಿದ್ದಾರೆ. ಈ ಕಂಬಗಳ ಕೆತ್ತನೆಯಲ್ಲಿ ಶಿಲ್ಪಿಯ ಕೈ ಚಳಕ ಎದ್ದು ಕಾಣುತ್ತದೆ.
ಜಿನಾಲಯದಿಂದ ಹೊರಬಂದ ತಕ್ಷಣ ಎದುರಿಗೆ ಗೋಚರಿಸುವುದೇ ಮಾನಸ್ತಂಭ. ಇದು ಸುಮಾರು ಎರಡು ಅಡಿ ಎತ್ತರದ ಪೀಠದ ಮೇಲಿದ್ದು ಸುಮಾರು ೪೦ ಅಡಿ ಎತ್ತರವಾಗಿದೆ. ಸ್ತಂಭದ ಮೇಲ್ತುದಿಯಲ್ಲಿ ಒಂದು ಮಂಟಪ ವಿದೆ. ಅದರ ಒಳಗೆ ನಾಲ್ಕು ಕಡೆಗೂ ಅಭಿಮುಖವಾಗಿರುವ ಜಿನಮೂರ್ತಿಗಳಿವೆ. ಸ್ತಂಭದ ಕೆಳಭಾಗದಲ್ಲಿ ಬ್ರಹ್ಮದೇವನ ಮೂರ್ತಿ ಇದೆ.
ಜಿನಾಲಯದ ಹೊರಭಿತ್ತಿಯನ್ನು ಅವಲೋಕಿಸಿದಾಗ ಚಿಕ್ಕದಾದ ಪಂಜರ ಕೋಷ್ಟಗಳು ಇದ್ದು ಅವುಗಳಲ್ಲಿ ಜೈನ ತೀರ್ಥಂಕರರ ನಿಂತ ಭಂಗಿಯ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾರೆ.
ಜಿನಾಲಯದ ಎಡಭಾಗ ಮತ್ತು ಬಲಭಾಗದ ಹೊರಭಿತ್ತಿಯಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಕೋಷ್ಟಗಳ ಮೇಲೆ ಸುಂದರವಾದ ಕಿರುಗೋಪುರಗಳು ಕಂಡುಬರುತ್ತವೆ. ಇತರ ಕೋಷ್ಟಗಳಲ್ಲಿನ ಕೆಲವು ಜಿನಮೂರ್ತಿ ಗಳು ಭಗ್ನಗೊಂಡಿವೆ. ಜಿನಾಲಯವು ವಿನಾಶದ ಅಂಚಿನಲ್ಲಿರುವುದರಿಂದ ಜಿನಾಲಯದ ಹಿಂಭಾಗದ ಗೋಡೆಗೆ ಕಲ್ಲಿನಿಂದ ಒದ್ದು ಗೋಡೆಗಳನ್ನು ಕಟ್ಟಲಾಗಿದೆ. ಈ ಜಿನಾಲಯ ಶಾಸನಾಧಾರಿತವಾಗಿದ್ದು ಮೂಲಸಂಘದ ಬಸದಿಯಾಗಿದೆ. ಅದೇ ಜಿನಾಲಯದಲ್ಲಿರುವ ಶಾಸನ ತಿಳಿಸುವಂತೆ ಮೂಲಸಂಘದ ಶಾಖೆಯಾದ ದೇಶೀಗಣ, ಗಣದ ಶಾಖೆಯಾದ ಪುಸ್ತಕಗಚ್ಛ ಇದರ ಶಾಖೆಯಾದ ಕೊಂಡಕುಂದಾನ್ವಯದ ಪ್ರಕಾರ ದೇವರಗುಡ್ಡಿ, ಮಾಳವಸೆಟ್ಟಿಕಬ್ಬೆಯರ ಮಗನಾದ ಮಲ್ಲಿಸೆಟ್ಟಿ ಕ್ರಿ.ಶ.೧೨೧೯ರಲ್ಲಿ ಈ ಜಿನಾಲಯದ (ಚೈತ್ಯಾಲಯದ) ಹೊರಗೋಡೆಯ ಸುತ್ತಾ ಪ್ರತಿಮೆಗಳನ್ನು ಪ್ರಮಾದಿ ಸಂವತ್ಸರದ ಜೇಷ್ಠ ಶುದ್ಧ ಪಂಚಮಿಯಂದು ಪ್ರತಿಷ್ಠಾಪನೆ ಮಾಡಿಸಿರುವುದನ್ನು ಉಲ್ಲೇಖಿಸುತ್ತದೆ. ಈ ಪ್ರತಿಮೆಗಳು ಜಿನಾಲಯದ ಹೊರಭಿತ್ತಿಯ ಸೌಂದರ್ಯವನ್ನು ಹೆಚ್ಚಿಸಿವೆ.
ಜಿನಾಲಯದ ಉತ್ತರ ಕಡೆಯಲ್ಲಿ ಸಲ್ಲೇಖನವ್ರತ ಕೈಗೊಂಡು. ಪ್ರಾಣ ತ್ಯಜಿಸಿರುವುದರ ನೆನಪಿಗಾಗಿ ನಿಷದಿಕಲ್ಲುಗಳಿವೆ. ಇಂತಹ ನಿಷದಿಗಳನ್ನು ನಿಸಿದಿಗೆ, ನಿಶೀದಿಗೆ, ನಿಸಿದಿ, ನಿಶೀದಿಕಾ, ನಿಶಿದಿಗೆ, ನಿಷಿದ್ಯಾಲಯ ಎಂದು ಕರೆಯುತ್ತಾರೆ. ಒಂದೇ ಕಲ್ಲಿನಲ್ಲಿ ಮೂರು ನಿಷದಿಗಳಿವೆ. ಅತ್ತೆ ಮಾಳವ್ವೆ ಮತ್ತು ಸೊಸೆ ಚೌಡಿಯಕ್ಕರ ನಿಷದಿ ಅದೇ ಕಲ್ಲಿನ ಎಡಭಾಗದಲ್ಲಿ ಭೂಚವ್ವೆಯ ನಿಷದಿ, ಅದೇ ಕಲ್ಲಿನ ಬಲಭಾಗದಲ್ಲಿ ಮಲ್ಲಿಸೆಟ್ಟಿ ಮತ್ತು ಆತನ ಪ್ರೀತಿಯ ಮಗನಾದ ಮಾಳಯ್ಯ ಎಂಬ ಇಬ್ಬರ ನಿಷದಿ ವಿಚಾರಗಳನ್ನು ತಿಳಿಸುತ್ತದೆ. ಈ ನಿಷದಿಗಳು ಜೈನರ ಪಾವಿತ್ರ್ಯತೆಯನ್ನು ತೋರಿಸುತ್ತದೆ. ಜೈನ ಮುನಿಗಳ ವ್ರತಾಚರಣೆಯು ಮರಣದ ಸಂಕೇತವಾಗಿ ಗೋಚರಿಸುತ್ತವೆ.
ಜಿನಾಲಯದ ಹೊರಭಾಗದಲ್ಲಿ ನಿಂತು ತಲೆ ಎತ್ತಿ ನೋಡಿದರೆ ಜಿನಾಲಯದ ಗರ್ಭಗೃಹದ ಮೇಲೆ ಶಿಖರವಿದೆ. ಮುಖಮಂಟಪದ ಮೇಲ್ಛಾವಣಿಯ ಮೇಲಿನ ಕೋಷ್ಠದಲ್ಲಿ ನಿಂತ ಭಂಗಿಯ ಶಾಂತಿನಾಥನ ಮೂರ್ತಿಯನ್ನು ಪ್ರತಿಷ್ಠಾಪಿಸ ಲಾಗಿದೆ. ಜಿನಾಲಯದ ಸುತ್ತಲು ಪ್ರಕಾರಗೋಡೆ ಇದೆ.
ಈ ಜಿನಾಲಯದಲ್ಲಿ ಬರಹವುಳ್ಳ ತಾಳೆಗರಿಯ ಒಂದು ಕಟ್ಟು ಇದ್ದು ಅನಂತನೋಂಪಿ ವ್ರತದ (ಮಂತ್ರ) ಶ್ಲೋಕವನ್ನು ಒಳಗೊಂಡಿದೆ. ಈ ಪ್ರದೇಶವನ್ನೊಳಗೊಂಡಂತೆ ಇತರ ಭಾಗದಲ್ಲಿ ಜೈನಧರ್ಮ ಪ್ರಬಲವಾಗಿತ್ತು ಎಂಬುದಕ್ಕೆ ಈ ಜಿನಾಲಯವೇ ಪ್ರಮುಖ ಆಧಾರಸ್ತಂಭವಾಗಿದೆ.
ಶ್ರೀನಿವಾಸ ಎ.ಜಿ.
ಸಂಶೋಧನಾ ವಿದ್ಯಾರ್ಥಿ,
ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ಅಧ್ಯಯನ ವಿಭಾಗ,
ಕನ್ನಡ ವಿಶ್ವವಿದ್ಯಾಲಯ, ಹಂಪಿ-೫೮೩೨೭೬.
ಆಧಾರಸೂಚಿ
೧. ಬಿ.ಎಲ್. ರೈಸ್., ಎಪಿಗ್ರಾಫಿಯಾ ಕರ್ನಾಟಿಕಾ, ಸಂ. ೧೨.
೨. ಡಾ. ಎಂ. ಚಿದಾನಂದಮೂರ್ತಿ., ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಸಪ್ನ ಬುಕ್ ಹೌಸ್, ಬೆಂಗಳೂರು, ೨೦೦೪.
೩. ಕವಿತಾಕೃಷ್ಣ (ಸಂ)., ಜಯಮಂಗಲಿ, ೬೯ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೨೦೦೨.
೪. ಡಾ. ಕೆ.ಎಲ್.ಎನ್. ಮೂರ್ತಿ., ಕರ್ನಾಟಕದ ಕಲೆ ಮತ್ತು ವಾಸ್ತುಶಿಲ್ಪ, ರಂಜಿತಾ ಪ್ರಕಾಶನ, ತುಮಕೂರು, ೧೯೯೮.
೫. ಡಾ. ಸೂರ್ಯನಾಥ ಕಾಮತ್., ಡಾ. ದೇವರಕೊಂಡಾರೆಡ್ಡಿ (ಸಂ)., ಇತಿಹಾಸ ದರ್ಶನ, ಸಂಪುಟ-೯, ಕರ್ನಾಟಕ ಇತಿಹಾಸ ಅಕಾಡೆಮಿ, ಬೆಂಗಳೂರು, ೧೯೯೪.
೬. ಕೆ. ಶಾರದ., ಕರ್ನಾಟಕದಲ್ಲಿ ಜೈನಧರ್ಮ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೬.
೭. ಪ್ರಜಾವಾಣಿ ದಿನಪತ್ರಿಕೆ, ೨-೯-೨೦೧೦.
No comments:
Post a Comment