Sunday, May 19, 2013

ನರಸಪ್ಪನ ಬೆಟ್ಟ



ನರಸಪ್ಪನ ಬೆಟ್ಟ ಒಂದು ಐತಿಹಾಸಿಕ ಪರಿಶೀಲನೆ
ಪ್ರೊ. ಜೆ.ಕೆ. ಮಲ್ಲಿಕಾರ್ಜುನಪ್ಪ
ಮುಖ್ಯಸ್ಥರುಇತಿಹಾಸ ವಿಭಾಗ,
ಎ.ಆರ್.ಜೆ. ಕಲಾ ಮತ್ತು ವಾಣಿಜ್ಯ ಕಾಲೇಜು,
ದಾವಣಗೆರೆ-೫೭೭೦೦೪.


ರಪನಹಳ್ಳಿ ತಾಲ್ಲೂಕಿನ ಹೋಬಳಿ ಕೇಂದ್ರ ಅರಸೀಕೆರೆ, ಇದೊಂದು ಐತಿಹಾಸಿಕ ಕೇಂದ್ರವಾಗಿದ್ದು ಪ್ರಾಚೀನ ಕಾಲದಲ್ಲಿ ನೊಳಂಬರ ಆಳ್ವಿಕೆಗೆ ಒಳಪಟ್ಟಿರುವ ನೊಳಂಬ ನರಸೀಕೆರೆ ಎಂಬ ಹೆಸರು ಇತ್ತು. ಹಾಗೂ ಹೊನ್ನರಸೀಕೆರೆ ಎಂದು ಸಹ ಕರೆಯಲಾಗುತ್ತದೆ. ಪ್ರಾಚೀನ ಕಾಲದಲ್ಲಿ ನೊಳಂಬ ಪಲ್ಲವರು, ಉಚ್ಚಂಗಿಯ ಪಾಂಡ್ಯರು ಮುಂತಾದವರ ಆಳ್ವಿಕೆಗೆ ಒಳಪಟ್ಟಿತ್ತು. ವಿಜಯನಗರ ಕಾಲದಲ್ಲಿ ಅವರ ಆಳ್ವಿಕೆಗೆ ಒಳಪಟ್ಟಿದ್ದ ಅರಸೀಕೆರೆ ಆ ನಂತರ ಹರಪನಹಳ್ಳಿ ಪಾಳೆಯಗಾರರ ಆಳ್ವಿಕೆಗೆ ಒಳಪಟ್ಟಿತು.
ಹರಪನಹಳ್ಳಿ ತಾಲ್ಲೂಕು ಕೇಂದ್ರದಿಂದ ಸುಮರು ೧೬ ಕಿ.ಮೀ. ದೂರದಲ್ಲಿ ಇರುವ ಈ ಊರಿನಲ್ಲಿ ಹರಪನಹಳ್ಳಿ ಪಾಳೆಯಗಾರರ ಕಾಲದ ಶಾಸನವೊಂದು ದೊರೆತಿದೆ. ಇತಿಹಾಸ ಪ್ರಸಿದ್ಧ ಪಂಚಗಣಾಧೀಶ್ವರರಲ್ಲಿ ಒಬ್ಬರಾಗಿದ್ದ ಶ್ರೀ ಕೋಲಶಾಂತೇಶ್ವರರ ಕೇಂದ್ರ ಸ್ಥಾನವೂ ಇದಾಗಿತ್ತು. ಹರಪನಹಳ್ಳಿ ಪಾಳೆಯಗಾರರ ಕಾಲದ ಅನೇಕ ಕಟ್ಟಡಗಳು ಇಲ್ಲಿ ಕಂಡುಬರುತ್ತವೆ. ಹರಪನಹಳ್ಳಿ ಪಾಳೆಯಗಾರರಲ್ಲಿ ಅತ್ಯಂತ ಪ್ರಸಿದ್ಧವಾದ ಒಂದನೇ ಸೋಮಶೇಖರ ನಾಯಕನ ಮಗನ ಸಮಾಧಿಯೂ ಇಲ್ಲಿಯ ಕೆರೆದಂಡೆಯ ಮೇಲೆ ಕಂಡುಬರುತ್ತದೆ.
ಅರಸೀಕೆರೆಯಿಂದ ಕಂಚೀಕೆರೆಗೆ ಹೋಗುವ ಮಾರ್ಗದಲ್ಲಿ ಸುಮಾರು ೨ ಕಿ.ಮೀ. ಸಾಗಿ ಬಲಗಡೆ ತಿರುವು ಪಡೆದುಕೊಂಡು ಸಾಗಿದರೆ ‘ಯರಬಳ್ಳಿ ಎಂಬ ಗ್ರಾಮ ಸಿಗುತ್ತದೆ. ಈ ಗ್ರಾಮದಲ್ಲಿ ಅತಿ ಪ್ರಾಚೀನವಾದ ಶಿವ ದೇವಾಲಯವಿದೆ. ಈ ಗ್ರಾಮಕ್ಕೆ ಹೊಂದಿಕೊಂಡಂತೆ ಭೂಮಟ್ಟದಿಂದ ಸುಮಾರು ೮೦೦-೧೦೦೦ ಅಡಿಗೂ ಹೆಚ್ಚು ಎತ್ತರವಾದ ಹಾಗೂ ಸುಮಾರು ೭೦೦ ಎಕರೆ ಭೂಪ್ರದೇಶವನ್ನು ಆವರಿಸಿಕೊಂಡ ಒಂದು ಬೆಟ್ಟ ಪ್ರದೇಶವಿದೆ. ಈ ಬೆಟ್ಟವನ್ನು ಯರಬಳ್ಳಿ ಬೆಟ್ಟ, ನರಸಪ್ಪನ ಬೆಟ್ಟ, ನರಸದೇವರ ಬೆಟ್ಟ, ನರಸಿಂಹದೇವರ ಬೆಟ್ಟ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ.
ಭೌಗೋಳಿಕವಾಗಿ ಬಹು ಆಯಕಟ್ಟಿನ ಸ್ಥಳದಲ್ಲಿ ಇರುವ ಈ ಬೆಟ್ಟದ ಸುತ್ತಲೂ ಅರಣ್ಯ ಆವರಿಸಿತ್ತು. ಆದರೆ ಇಂದು ಈ ಅರಣ್ಯ ಪ್ರದೇಶ ಮಾಯವಾಗಿದ್ದು ಭೂಮಿ ಸಾಗುವಳಿಗೆ ಒಳಪಟ್ಟಿದೆ. ಈ ಪ್ರದೇಶದ ಸುತ್ತಮುತ್ತ ಅಡವಿಹಳ್ಳಿ, ಅಡವಿ ಮಲ್ಲನಕೇರೆ, ಅಡವಿಆನಂದಹಳ್ಳಿ, ಅಡವಿಮಲ್ಲಾಪುರ ಮುಂತಾದ ಹೆಸರಿನ ಗ್ರಾಮಗಳು ಕಂಡುಬರುತ್ತವೆ.
ಬೆಟ್ಟಶ್ರೇಣಿಗೆ ಹೊಂದಿಕೊಂಡಂತೆ ಪ್ರಾಚೀನ ಕಾಲದಲ್ಲಿ ಅರಸನಹಳ್ಳಿ ಅರಸಾಪುರ ಎಂಬ ಹೆಸರಿನ ಗ್ರಾಮವೊಂದು ಇತ್ತಂತೆ. ಆ ಗ್ರಾಮದ ಅವಶೇಷಗಳು ಕಂಡುಬರುತ್ತವೆ. ಮುಖ್ಯವಾಗಿ ರೈತರ ಹಗೇವುಗಳು ಕಂಡುಬರುತ್ತವೆ. ಈ ಬೆಟ್ಟದಲ್ಲಿ ನರಸಿಂಹದೇವರ ದೇವಾಲಯ ಇದ್ದುದರಿಂದಾಗಿ ಈ ‘ಬೇಚಿರಾಕ್ ಗ್ರಾಮಕ್ಕೆ ನರಸಾಪುರ ಎಂದು ಸಹ ಕರೆಯಲಾಗುತ್ತಿತ್ತು. ಒಟ್ಟಾರೆ ಈ ಬೆಟ್ಟ ಶ್ರೇಣಿಯನ್ನು ನರಸಿಂಹ ಬೆಟ್ಟ, ನರಸಪ್ಪನ ಬೆಟ್ಟ, ನರಸಿಂಹ ದೇವರ ಬೆಟ್ಟ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ.
ಅರಸೀಕೆರೆಯಿಂದ ಪಶ್ಚಿಮ ದಿಕ್ಕಿನಲ್ಲಿ ಸುಮಾರು ೪ ಕಿ.ಮೀ. ದೂರದಲ್ಲಿ ಇರುವ ಈ ನರಸಪ್ಪನ ಬೆಟ್ಟ ಒಂದು ಐತಿಹಾಸಿಕ ಕೇಂದ್ರವಾಗಿದ್ದು ತನ್ನದೇ ಆದ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಸುಮಾರು ೨೫-೩೦ ಕಿ.ಮೀ.ಗಳ ವ್ಯಾಪ್ತಿಯಲ್ಲಿ ಕಂಡುಬರುವ ಬೆಟ್ಟಗುಡ್ಡಗಳಲ್ಲಿ ಅತ್ಯಂತ ಎತ್ತರವಾದ ಬೆಟ್ಟ ಶ್ರೇಣಿ ಇದಾಗಿದೆ.
ನರಸಪ್ಪನ ಬೆಟ್ಟದ ಮಧ್ಯಭಾಗದಲ್ಲಿ ಬೃಹತ್ ಗುಹೆ ಯೊಂದು ಕಂಡುಬರುತ್ತದೆ. ಇಲ್ಲಿಯ ಲಕ್ಷಣಗಳನ್ನು ಅವಲೋಕಿ ಸಿದರೆ ಇದು ಮಾನವ ನಿರ್ಮಿತ ಗುಹೆಯಾಗಿರಲಿಕ್ಕೆ ಸಾಧ್ಯ. ಇದನ್ನು ಪರಿಗಣಿಸಿದರೆ ಇಲ್ಲಿ ಬೃಹತ್ ಶಿಲಾಯುಗದ ಮಾನವ ನೆಲೆಸಿದ್ದಿರಬಹುದೆಂದು ಹೇಳಬಹುದು. ಇದಕ್ಕೆ ಪೂರಕವಾಗಿ ಹೇಳುವಂತೆ ನೀರಿನ ಆಸರೆಗಳು ಬೆಟ್ಟದ ಕೆಳಭಾಗದಲ್ಲಿ ಕಂಡುಬರುತ್ತವೆ.
ಐತಿಹಾಸಿಕ ಕಾಲಕ್ಕೆ ಬಂದರೆ ಈ ಬೆಟ್ಟ ಪರಿಸರದಲ್ಲಿ ಅನೇಕ ಕುರುಹುಗಳು ಕಂಡುಬರುತ್ತವೆ. ಈ ಬೆಟ್ಟಕ್ಕೆ ಹೊಂದಿಕೊಂಡಿರುವ ಯರಬಳ್ಳಿ ಗ್ರಾಮದಲ್ಲಿ ಅತಿಪ್ರಾಚೀನ ಈಶ್ವರ ದೇವಾಲಯ ಕಂಡುಬರುತ್ತದೆ. ಈ ಬೆಟ್ಟದ ಪರಿಸರದಲ್ಲಿ ಎರಡು ಶಾಸನಗಳು ಕಂಡುಬರುತ್ತವೆ. ಗುಹೆಗೆ ಅಂಟಿ ಕೊಂಡಿರುವ ಬೃಹತ್ ಶಿಲಾ ಬಂಡೆಯಲ್ಲಿ ಒಂದು ಶಾಸನ ಕಂಡುಬರುತ್ತಿದ್ದು ಓದುವ ಸ್ಥಿತಿಯಲ್ಲಿ ಇರದೆ ಹಾಳಾಗಿದೆ. ಈ ಶಾಸನ ಬಾದಾಮಿ ಚಲುಕ್ಯ ಚಕ್ರವರ್ತಿ ೨ನೇ ಪುಲಕೇಶಿಯ ಕಾಲಕ್ಕೆ ಸಂಬಂಧಿಸಿದ್ದು ಜೈನ ಮುನಿಗಳು ಈ ಬೆಟ್ಟಶ್ರೇಣಿಯಲ್ಲಿ ತಪಸ್ಸು, ಸಲ್ಲೇಖವ್ರತವನ್ನು ಆಚರಿಸುತ್ತಿದ್ದರೆಂದು ಹೇಳಲಾಗಿದೆ. ಆದರೆ ಈ ಪರಿಸರದಲ್ಲಿ ಯಾವುದೇ ಜೈನ ಅವಶೇಷಗಳು ಇಂದು ಕಂಡುಬರುವುದಿಲ್ಲ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಕ್ಷೇತ್ರಕಾರ‍್ಯದಲ್ಲಿ ನನ್ನೊಂದಿಗೆ ಇದ್ದ ಇಲ್ಲಿನ ನರಸಿಂಹನ ಪೂಜಾರಿ ಮನೆತನದ ಅಡ್ಡಿ ನಾಗಪ್ಪ ಅವರು ಇಂದಿಗೂ ಸಹ ಅನೇಕ ಜೈನರು ಈ ಸ್ಥಳಕ್ಕೆ ಬಂದು ಪೂಜೆ ಮಾಡಿಸಿಕೊಂಡು ಹೋಗುತ್ತಾರೆ ಎಂದು ಹೇಳುತ್ತಾರೆ. ಇದನ್ನು ಪರಿಗಣಿಸಿದಲ್ಲಿ ಬಾದಾಮಿ ಚಲುಕ್ಯರ ಕಾಲದಲ್ಲಿ ಈ ಬೆಟ್ಟ ಜೈನರ, ಜೈನಮುನಿಗಳ ಕೇಂದ್ರವಾಗಿತ್ತು ಎಂದು ಅಭಿಪ್ರಾಯಪಡಬಹುದಾಗಿದೆ.
ನರಸಪ್ಪನ ಬೆಟ್ಟದ ಮಧ್ಯಭಾಗದಲ್ಲಿ ಇರುವ ಗುಹೆಯ ಪ್ರವೇಶದಲ್ಲಿ ಶಿವಲಿಂಗದ ಬೃಹತ್ ಶಿಲ್ಪವಿದೆ. ಇದು ಸುಮಾರು ೪-೫ ಅಡಿ ಎತ್ತರದ ಬೃಹತ್ ಶಿವಲಿಂಗವಾಗಿದ್ದು ಈ ಪರಿಸರ ಶೈವಕೇಂದ್ರವಾಗಿತ್ತು ಎಂಬುದನ್ನು ದೃಢಪಡಿಸುತ್ತದೆ. ಇದಕ್ಕೆ ಹೊಂದಿಕೊಂಡಂತೆ ೫ ಅಡಿ ಎತ್ತರದ ಭೈರವನ ಶಿಲ್ಪ ಮತ್ತು ೨ ಅಡಿ ಎತ್ತರದ ದುರ್ಗಾಮಾತೆಯ ಶಿಲ್ಪ ಕಂಡುಬರುತ್ತವೆ. ಇದನ್ನು ಪರಿಗಣಿಸಿ ಇಲ್ಲಿ ಭೈರವ ಆರಾಧನೆ ಕಾಳಾಮುಖ ಶೈವ ಆರಾಧನೆ ಇತ್ತು ಎನ್ನಬಹುದು. ಭೈರವನ ಶಿಲ್ಪ ವಿಶಿಷ್ಟವಾಗಿದ್ದು ೬ ಕೈಗಳು, ತ್ರಿಶೂಲ, ರುಂಡ, ಖಡ್ಗಳಿದ್ದು ಬಿಲ್ಲು ಹಿಡಿದಂತೆ ಕಂಡುಬರುತ್ತದೆ. ಕೊರಳಿಗೆ ರುಂಡ ಮಾಲೆಯನ್ನು ಧರಿಸಿದ್ದಾನೆ. ಪಾದತಳದ ಎಡಭಾಗದಲ್ಲಿ ನಾಯಿ ಬಲಭಾಗದಲ್ಲಿ ಒಬ್ಬ ಮಹಿಳೆ ಕೈ ಮುಗಿದು ಕುಳಿತಂತೆ ಇದೆ.
ದುರ್ಗಾಮಾತೆಯ ಶಿಲ್ಪ ನಾಟ್ಯಭಂಗಿಯಲ್ಲಿ ಇದ್ದು ೮ ಕೈಗಳೊಂದಿಗೆ ನರ್ತಿಸುವಂತೆ ಇದೆ. ಇವುಗಳನ್ನು ನಾವು ಪರಿಗಣಿಸಿದಾಗ ಇಲ್ಲಿ ಶೈವ ಕಾಳಾಮುಖ ಶೈವ ಆಚರಣೆ ಪ್ರಚಲಿತ ಇದ್ದವು ಎನ್ನಬಹುದು.
ಇದೇ ಗುಹೆಯಿಂದ ಹರಪನಹಳ್ಳಿ ಪಾಳೆಯಗಾರರ ಬಹುಮುಖ್ಯ ಕೇಂದ್ರವಾದ ಕೂಲಹಳ್ಳಿಯವರೆಗೆ ಸುರಂಗ ಮಾರ್ಗವಿದೆ ಎಂದು ಸ್ಥಳೀಯರು ಹೇಳುತ್ತಾರೆ. ಈ ಹೇಳಿಕೆಯನ್ನು ಪರಿಗಣಿಸಿದ್ದಲ್ಲಿ; ಈ ನರಸಪ್ಪನ ಬೆಟ್ಟ ಹರಪನಹಳ್ಳಿ ಪಾಳೆಯಗಾರರ ಕಾಲದ ಒಂದು ಮುಖ್ಯ ಕೇಂದ್ರವಾಗಿತ್ತು ಎಂದು ಹೇಳಬಹುದು. ಇದನ್ನು ಸಮರ್ಥಿಸಲು ಕೂಲಹಳ್ಳಿಯಲ್ಲಿಯೂ ಸಹ ಒಂದು ಸುರಂಗ ಮಾರ್ಗ ಕಂಡುಬರುತ್ತದೆ. ಗುಹೆಯನ್ನು ದಾಟಿ ಮುಂದೆ ಸಾಗಿದಲ್ಲಿ ನಮಗೆ ಕ್ರಿ.ಶ. ೧೫೧೦ ದಿನಾಂಕವನ್ನೊಳಗೊಂಡ ಶಾಸನವೊಂದು ಕಂಡುಬರುತ್ತದೆ. ಇದು ಸುಸ್ಥಿತಿಯಲ್ಲಿ ಇದ್ದು ದೇವರಸ ಮತ್ತು ಗಂಗೆಯ ಮಗನಾದ ಗಿರಿದೇವನು ಇಲ್ಲಿಯ ಯೋಗಾನರಸಿಂಹ ದೇವಾಲಯಕ್ಕೆ ಶಿಖರವನ್ನು ನಿರ್ಮಿಸಿದನು ಎಂಬ ಮಾಹಿತಿ ನೀಡುತ್ತದೆ. ಪ್ರಸ್ತುತ ಈ ಬೆಟ್ಟದ ಮಧ್ಯಭಾಗದಲ್ಲಿ ಇರುವ ಈ ಯೋಗಾನರಸಿಂಹ ದೇವಾಲಯವನ್ನು ಅವಲೋಕಿಸಿ ದರೆ ಇದಕ್ಕೆ ಯಾವ ಶಿಖರವು ಕಂಡುಬರುವುದಿಲ್ಲ. ಹೆಬ್ಬಂಡೆಯನ್ನು ಮೇಲ್ಛಾವಣಿ ಯಾಗಿ ಬಳಸಿ ಕೇವಲ ಸಣ್ಣ ಎರಡು ಗೋಡೆಗಳನ್ನೊಳ ಗೊಂಡು ಈ ದೇವಾಲಯ ನಿರ್ಮಾಣಗೊಂಡಿದೆ. ಈ ದೇವಾಲಯದ ಎದುರುಗಡೆ ದೀಪಸ್ತಂಭ ಕಂಡುಬರುತ್ತದೆ. ಇಲ್ಲಿಯ ಪೂಜಾರಿ ಮನೆತನದ ಅರಸೀಕೆರೆಯ ಅಡ್ಡಿ ನಾಗಪ್ಪ ಹೇಳುವಂತೆ; ಇಲ್ಲಿಯ ಯೋಗಾ ನರಸಿಂಹನ ಪೂಜೆಯನ್ನು ಈತನ ಪೂರ್ವಿಕರು ಮುತ್ತಜ್ಜನ ಕಾಲದಿಂದಲೂ ನಿರ್ವಹಣೆ ಮಾಡಿಕೊಂಡು ಬರುತ್ತಿರು ವರಂತೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು ಕಂಡುಬರುವುದಿಲ್ಲ. ಇಲ್ಲಿಯ ಪೂಜೆಗೆ ಜೈನ ಧರ್ಮದವರು ಸಹ ಬರುತ್ತಾರಂತೆ. ಈ ಅಂಶಗಳನ್ನು ಪರಿಗಣಿಸಿದಲ್ಲಿ ವಿಜಯನಗರ ಕಾಲದಲ್ಲಿ ಇತರೆಡೆ ಕಂಡುಬಂದಂತೆ ಇಲ್ಲಿಯೂ ಸಹ ವೈಷ್ಣವ ಆರಾಧನೆ ಬಲಗೊಂಡಂತೆ ಕಾಣುತ್ತದೆ. ಹೀಗಾಗಿ ಇಲ್ಲಿ ಯೋಗಾ ನರಸಿಂಹನ ದೇವಾಲಯ ಸ್ಥಾಪನೆಯಾಗಿರಬಹುದು. ದೇವಾಲಯದ ಒಳಗೆ ಉಗ್ರನರಸಿಂಹನ ರೂಪದಂತೆ ಕಾಣುವ ಯೋಗಾನರಸಿಂಹನ ಶಿಲ್ಪ ಕಂಡುಬರುತ್ತದೆ. ಈ ಶಿಲ್ಪದ ಎದುರಿಗೆ ಬಸವನ ನೂತನ ವಿಗ್ರಹವನ್ನು ಮಾಡಿಸಿ ಕ್ರಿ.ಶ. ೨೦೦೩ರಲ್ಲಿ ಸ್ಥಾಪಿಸಿದರಂತೆ. ಭಗ್ನಗೊಂಡ ಹಳೆಯ ಶಿಲ್ಪವನ್ನು ಮರುಜೋಡಿಸಿ ಇನ್ನೊಂದು ಭಾಗದಲ್ಲಿ ಇಟ್ಟಿದ್ದಾರೆ. ಕುಂ.ಬಾ. ಸದಾಶಿವಪ್ಪನವರು ಕ್ರಿ.ಶ. ೧೭೦೦ ರಲ್ಲಿ ಅರಸೀಕೆರೆಯ ಕೋಲುಶಾಂತೇಶ್ವರರು ಜೈನರನ್ನು ಮತಾಂತರ ಗೊಳಿಸಿ ಅವರನ್ನು ಲಿಂಗವಂತರನ್ನಾಗಿ ಮಾಡಿದರು ಎಂದು ತಮ್ಮ ಹರಪನಹಳ್ಳಿ ತಾಲ್ಲೂಕು ಪರಿಚಯ ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ. ಈ ಅಂಶಗಳನ್ನು ಪರಿಗಣಿಸಿದಲ್ಲಿ ಈ ನರಸಪ್ಪನ ಬೆಟ್ಟ ಶೈವ, ವೈಷ್ಣವ, ಜೈನರ ಕೇಂದ್ರವಾಗಿತ್ತು. ಈ ನರಸಪ್ಪನ ಬೆಟ್ಟ ಪ್ರಸ್ತುತ ಯೋಗಾನರಸಿಂಹಸ್ವಾಮಿಯ ಆರಾಧನೆಯ ಕೇಂದ್ರವಾಗಿದ್ದು ಬರಗಾಲ ಬಂದಾಗ ರೈತರು ಇಲ್ಲಿಗೆ ಬಂದು ಮಳೆಕೀಲು ಪರ್ವ ನಡೆಸುತ್ತಾರೆ.
ನರಸಪ್ಪನ ಬೆಟ್ಟದ ವಿಶೇಷ ಐತಿಹಾಸಿಕ ಮಹತ್ವ ಮತ್ತು ಪ್ರಾಮುಖ್ಯತೆಯೊಂದಿಗೆ ಇಲ್ಲಿಯ ಆಕರ್ಷಣೆ ಏನೆಂದರೆ, ಬೆಟ್ಟದ ತುದಿಯಲ್ಲಿ ಕಂಡುಬರುವ ಕೋಟೆ ಮತ್ತು ವೀಕ್ಷಣಾ ಬತೇರಿಗಳು. ಬೆಟ್ಟದ ತುದಿಗೆ ಬುರುಜು ಏರಿಕೊಂಡು ಹೋಗಲು ಹಿಂದೆ ಸುಸಜ್ಜಿತವಾದ ಮಾರ್ಗ ಇದ್ದಿರಬಹುದು ಇಂದು ಅದರ ಕುರುಹುಗಳು ಕಾಣಿಸುತ್ತವೆ. ಈಗಲೂ ಸಹ ಹೆಚ್ಚಿನ ಪ್ರಯಾಸವಿಲ್ಲದೆ ಸುಲಭವಾಗಿ ಬೆಟ್ಟವನ್ನು ಏರಿ ತುದಿಯನ್ನು ತಲುಪಬಹುದು. ಆ ತುದಿಯನ್ನು ತಲುಪಿ ವೀಕ್ಷಣೆ ಮಾಡಿದಾಗ ಸುಮಾರು ೫೦-೬೦ ಕಿ.ಮೀ. ದೂರದವರೆಗೆ ಬರಿಗಣ್ಣಿನಿಂದ ನೋಡಬಹುದಾದ ಬಯಲು ಪ್ರದೇಶ ಕಂಡುಬರುತ್ತದೆ. ಈ ಬೆಟ್ಟದ ತುದಿಯ ಭೂ ಪ್ರದೇಶ ಸೀಮಿತವಾಗಿದ್ದು ಸುಮಾರು ೧೦-೧೫ ಸಾವಿರ ಚದರಡಿ ವಿಸ್ತೀರ್ಣವನ್ನು ಹೊಂದಿದೆ. ಈ ತುದಿಯ ಸುತ್ತಲೂ ರಕ್ಷಣಾ ಗೋಡೆ ಇದ್ದು ಎಂಟು ದಿಕ್ಕಿನಲ್ಲಿ ವೀಕ್ಷಣಾ ಬತೇರಿಗಳಿವೆ. ಇವುಗಳಲ್ಲಿ ೪ ಸುಸ್ಥಿತಿಯಲ್ಲಿದ್ದು ಉಳಿದ ನಾಲ್ಕು ಹಾಳಾಗಿವೆ. ಕೋಟೆಯ ಎಲ್ಲಾ ಲಕ್ಷಣಗಳನ್ನು ಗುರುತಿಸಬಹುದು. ಪ್ರವೇಶದ್ವಾರವನ್ನು ಕೇವಲ ಕುರುಹುಗಳಿಂದ ಗುರುತಿಸ ಬಹುದಾಗಿದೆ. ಈ ಬೆಟ್ಟದ ಮೇಲುತುದಿಯಲ್ಲಿ ಎರಡು ಹಂತಗಳ ರಕ್ಷಣಾ ವ್ಯವಸ್ಥೆ ಇದ್ದಂತೆ ಕಂಡುಬರುವುದು. ಈ ಎರಡೂ ಹಂತಗಳನ್ನು ಪ್ರತ್ಯೇಕ ಗೋಡೆ ಬೇರ್ಪಡಿಸುತ್ತದೆ. ಈ ಗೋಡೆಯ ಸುತ್ತಲೂ ವೀಕ್ಷಣೆ ಮಾಡಲು ಬಂದೂಕಿನ ನಳಿಕೆಗಳ ಕಿಂಡಿಗಳಿವೆ. ಬತೇರಿಗಳ ಮೇಲಿಂದ ನೋಡಿದಾಗ ಉಚ್ಚಂಗಿದುರ್ಗದ ಕೋಟೆ ಸ್ಪಷ್ಟವಾಗಿ ಕಾಣಿಸುತ್ತದೆ. ಈ ಕೋಟೆಯ ಒಳಗಡೆ ಗಾರೆಯಿಂದ ನಿರ್ಮಿಸಿದ ಕೆಲವು ಚಿಕ್ಕ ಚಿಕ್ಕ ಕಟ್ಟಡ ಅವಶೇಷಗಳಿವೆ. ಕೋಟೆಯ ಕಟ್ಟಡಗಳಲ್ಲಿ ವಿಜಯನಗರದ ಅಂತಿಮಕಾಲದ ಹಾಗೂ ಹರಪನಹಳ್ಳಿ ಪಾಳೆಯಗಾರರ ಕಾಲದ ಕಟ್ಟಡ ಲಕ್ಷಣಗಳನ್ನು ಗುರುತಿಸ ಬಹುದು, ಹೆಚ್ಚಿನ ಜನವಸತಿಯ ಲಕ್ಷಣಗಳು ಕಂಡುಬರುವು ದಿಲ್ಲ. ಗಾರೆ, ಇಟ್ಟಿಗೆ, ಮಡಿಕೆ ಕುಡಿಕೆಯ ಅವಶೇಷಗಳು ಕಂಡುಬರುತ್ತವೆ. ಇಲ್ಲಿಯ ಮಣ್ಣನ್ನು ಪರೀಕ್ಷಿಸಿದಾಗ ಬೃಹತ್ ಪ್ರಮಾಣದಲ್ಲಿ ಬೂದಿಯ ಮಿಶ್ರಣ ಕಂಡುಬರುತ್ತದೆ. ಈ ಕೋಟೆ ಹರಪನಹಳ್ಳಿ ಮತ್ತು ಉಚ್ಚಂಗಿದುರ್ಗಕ್ಕೆ ಮಧ್ಯಭಾಗ ದಲ್ಲಿದೆ. ಕೋಟೆಯ ಒಳಗಡೆ ವಾಸಿಸುವವರಿಗಾಗಿ ನೀರಿನ ಸೌಕರ‍್ಯಕ್ಕಾಗಿ ಮಳೆಗಾಲದಲ್ಲಿ ಬೀಳುವ ನೀರನ್ನು ಸಂಗ್ರಹಿಸಲು ಬೃಹತ್ ಹೊಂಡವನ್ನು ನಿರ್ಮಿಸಿಕೊಂಡಿದ್ದರು.  ಇಲ್ಲಿ ನಿಧಿಚೋರರು ಆಗಾಗ ದಾಳಿಯಿಟ್ಟು ಭೂಮಿಯನ್ನು ಅಗೆದಿರುವ ಗುರುತುಗಳು ಕಂಡುಬರುತ್ತವೆ. ಈ ಎಲ್ಲ ಅಂಶಗಳನ್ನು ಅವಲೋಕಿಸಿದಾಗ ಕಂಡುಬರುವುದೇನೆಂದರೆ; ವಿಜಯನಗರ ಕಾಲದಲ್ಲಿ ಈ ಕೋಟೆ ಈ ಪ್ರದೇಶದ ಆಯಕಟ್ಟಿನ ಸ್ಥಳವಾಗಿತ್ತು ಹಾಗೂ ನಾಣ್ಯ ಟಂಕಿಸುವ ಕೇಂದ್ರವಾಗಿತ್ತು ಎಂದು ಅಭಿಪ್ರಾಯ ಪಡಬಹುದಾಗಿದೆ. ಇದನ್ನು ಸಮರ್ಥಿಸುವ ಅನೇಕ ಅಂಶಗಳು ಪರಿವೀಕ್ಷಣೆಯ ಸಂದರ್ಭದಲ್ಲಿ ಕಂಡುಬರುತ್ತದೆ.
ಸ್ಥಳೀಯರು ಅಭಿಪ್ರಾಯಪಡುವಂತೆ ಹರಪನಹಳ್ಳಿ ಪಾಳೆಯಗಾರರ ಕಾಲದಲ್ಲಿ ಇದೊಂದು ರಕ್ಷಣಾ ಕೇಂದ್ರ ಹಾಗೂ ಸೈನಿಕ ವೀಕ್ಷಣೆ ಕೇಂದ್ರವಾಗಿತ್ತು ಎಂದು ಹೇಳುತ್ತಾರೆ. ಉಚ್ಚಂಗಿದುರ್ಗದ ಕೋಟೆಯ ಕಾವಲುಗಾರರಿಗೆ ಇಲ್ಲಿಯ ರಕ್ಷಣಾಪಡೆಯ ಕಾವಲುಗಾರರು ಮುನ್ನೆಚ್ಚರಿಕೆಗಳನ್ನು ಪಂಜುಗಳನ್ನು ಉರಿಸುವ ಮೂಲಕ ನೀಡುತ್ತಿದ್ದರಂತೆ. ಈ ಎಲ್ಲಾ ಅಂಶಗಳನ್ನು ಗಮನಿಸಿ ಈ ನರಸಪ್ಪನ ಬೆಟ್ಟ ವಿಜಯನಗರ ಹಾಗೂ ಹರಪನಹಳ್ಳಿ ಪಾಳೆಯಗಾರರ ಕಾಲದ ನಾಣ್ಯ ಟಂಕಸಾಲೆ ಆಗಿದ್ದಿರಬಹುದು ಮತ್ತು ಹರಪನಹಳ್ಳಿ ಪಾಳೆಯಗಾರರ ಕಾಲದಲ್ಲಿ ಒಂದು ರಕ್ಷಣಾ ಆಯಕಟ್ಟಿನ ಕೇಂದ್ರ ಅಥವಾ ರಕ್ಷಣಾ ವೀಕ್ಷಣಾಲಯ ಆಗಿದ್ದಿರಬಹುದೆಂದು ಅಭಿಪ್ರಾಯ ಪಡಬಹುದಾಗಿದೆ.
ಈ ಬೆಟ್ಟದ ಮೇಲೆ ಪದೇಪದೇ ನಡೆಯುವ ನಿಧಿ ಚೋರರ ಆಕ್ರಮಣಗಳು ಹಾಗೂ ಈ ಭಾಗದ ಸ್ಥಳೀಯರು ಹೇಳುವಂತೆ; ಒಮ್ಮೆ ಇಲ್ಲಿ ಹೊನ್ನಿನ ಮಳೆಯಾಗಿತ್ತಂತೆ, ಮಳೆಯ ನೀರಿನ ಜೊತೆಗೆ ಬೃಹತ್ ಸಂಖ್ಯೆಯಲ್ಲಿ ನಾಣ್ಯಗಳು ಹರಿದು ಬಂದಿದ್ದವಂತೆ. ಇದರಿಂದಾಗಿ ಅರಸೀಕೆರೆಗೆ ಹೊನ್ನರಸೀಕೆರೆ ಎಂದು ಸಹ ಕರೆಯುತ್ತಾರಂತೆ. ಅನೇಕರಿಗೆ ನಾಣ್ಯಗಳು ದೊರೆತ್ತಿದ್ದವಂತೆ, ಈ ಎಲ್ಲ ಅಂಶಗಳನ್ನು ಗಣನೆಗೆ  ತೆಗೆದುಕೊಂಡಲ್ಲಿ ಬಹುತೇಕ ಈ ನರಸಪ್ಪನ ಬೆಟ್ಟದ ತುದಿಯಲ್ಲಿ ಇರುವ ಕೋಟೆ ವಿಜಯನಗರ ಕಾಲ ಅಥವಾ ಹರಪನಹಳ್ಳಿ ಪಾಳೆಯಗಾರರ ಕಾಲದ ನಾಣ್ಯ ಟಂಕಿಸುವ ಒಂದು ಕೇಂದ್ರವಾಗಿತ್ತು ಎಂದು ಹೇಳಬಹುದು ಇದನ್ನು ಸಮರ್ಥಿಸಲು ಲಿಖಿತ ದಾಖಲೆಗಳು ಬೇಕಾಗಿವೆ.
ಈ ನರಸಪ್ಪನ ಬೆಟ್ಟ ಇಲ್ಲಿರುವ ಕೋಟೆ ಪರಿಸರದ ಅವಶೇಷಗಳು ಹರಪನಹಳ್ಳಿ ಪಾಳೆಯಗಾರರ ಕಾಲಕ್ಕೆ ಅತಿ ಸಮೀಪದ ಹೋಲಿಕೆ ಇರುವುದರಿಂದಾಗಿ ಹಾಗೂ ಪಾಳೆಯಗಾರರ ಕೇಂದ್ರ ಸ್ಥಾನ ಹರಪನಹಳ್ಳಿ ಮತ್ತು ಉಚ್ಚಂಗಿದುರ್ಗಕ್ಕೆ ಮಧ್ಯವರ್ತಿ ಸ್ಥಾನದಲ್ಲಿರುವುದರಿಂದಾಗಿ ಈ ನರಸಪ್ಪನ ಬೆಟ್ಟ ಹರಪನಹಳ್ಳಿ ಪಾಳೆಯಗಾರರ ಒಂದು ಸೈನಿಕ ವೀಕ್ಷಣೆ ಕೇಂದ್ರವಾಗಿತ್ತು ಎಂದು ಅಭಿಪ್ರಾಯ ಪಡಬಹುದಾಗಿದೆ.
[ಪ್ರಬಂಧವನ್ನು ಸಿದ್ಧಪಡಿಸಲು ಪ್ರೇರಣೆ ನೀಡಿದ ನನ್ನ ಸಂಶೋಧನಾ ಮಾರ್ಗದರ್ಶಕರಾದ ಡಾ. ಎಂ. ಕೊಟ್ರೇಶ್ ಅವರಿಗೂ ಹಾಗೂ ಕ್ಷೇತ್ರಕಾರ‍್ಯದಲ್ಲಿ ನನ್ನೊಂದಿಗೆ ಇದ್ದು ಸಹಕರಿಸಿದ ಗೆಳೆಯ ಅಜ್ಜಪ್ಪ ಹಾಗೂ ಸ್ಥಳೀಯ ಮಾಹಿತಿ ನೀಡಿದ ಪೂಜಾರಿ ಅಡ್ಡಿ ನಾಗಪ್ಪ ಹಾಗೂ ರೈತರಾದ ಹನುಮಂತಪ್ಪ ಇವರಿಗೂ ಮತ್ತು ನನ್ನ ಜೊತೆಗೆ ಇದ್ದು ಈ ಕಾರ‍್ಯಕ್ಕೆ ನೆರವಾದ ಉಪನ್ಯಾಸಕ ಮಿತ್ರರಾದ ಶಂಕರಯ್ಯ, ಜೆ.ವಿ. ಮಲ್ಲಿಕಾರ್ಜುನ ಹಾಗೂ ನನ್ನ ಪುತ್ರ ಅಶ್ವಿನ್‌ಕುಮಾರ್ ಜವಳಿ ಇವರಿಗೆ ಧನ್ಯವಾದಗಳು.]

ಆಧಾರಸೂಚಿ
೧.         ದೇವರಕೊಂಡಾರೆಡ್ಡಿ ಇತರರು (ಸಂ). ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-೧, ಬಳ್ಳಾರಿ ಜಿಲ್ಲೆ, ಕ.ವಿ.ವಿ., ಹಂಪಿ, ೧೯೯೮.
೨.         ಡಾ. ಎಂ. ಕೊಟ್ರೇಶ್, ಹರಪನಹಳ್ಳಿ ತಾಲ್ಲೂಕಿನ ರಕ್ಷಣಾ ಸ್ಮಾರಕಗಳು, ಕ.ವಿ.ವಿ., ಹಂಪಿ-೨೦೧೦.
೩.         ಬಸವರಾಜ ಡಿ., ದಂಡಿ ದುರುಗಮ್ಮನ ಸಾಂಸ್ಕೃತಿಕ ಅಧ್ಯಯನ, (ಎಂ.ಫಿಲ್., ಅಪ್ರಕಟಿತ ಪ್ರಬಂಧ), ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೭.
೪.         ಗಿರಿಜ ಟಿ., ದಾವಣಗೆರೆ ಇದು ನಮ್ಮ ಜಿಲ್ಲೆ, ನಿಹಾರಿಕಾ ಪ್ರಕಾಶನ, ದಾವಣಗೆರೆ, ೨೦೦೧.
೫.         ಕುಂ.ಬಾ. ಸದಾಶಿವಪ್ಪ, ಹರಪನಹಳ್ಳಿ ತಾಲ್ಲೂಕು ಪರಿಚಯ, ಮಾಲತೇಶ ಪ್ರಕಾಶನ, ಹರಪನಹಳ್ಳಿ, ೨೦೦೮.
೬.         ಕುಂ.ಬಾ. ಸದಾಶಿವಪ್ಪ, ಹರಪನಹಳ್ಳಿ ಪಾಳೆಗಾರರು, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, ೧೯೯೬.
೭.         ಡಾ. ಜೆ.ಎಂ. ನಾಗಯ್ಯ, ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸ, ಲೋಹಿಯಾ ಪ್ರಕಾಶನ, ಬಳ್ಳಾರಿ.

ಮುಖ್ಯಸ್ಥರು, ಇತಿಹಾಸ ವಿಭಾಗ,
ಎ.ಆರ್.ಜೆ. ಕಲಾ ಮತ್ತು ವಾಣಿಜ್ಯ ಕಾಲೇಜು,
ದಾವಣಗೆರೆ-೫೭೭೦೦೪.





No comments:

Post a Comment