Saturday, June 1, 2013

ಹರಿಶ್ಚಂದ್ರದತ್ತಿ ಅಗ್ರಹಾರ

ಹರಿಶ್ಚಂದ್ರದತ್ತಿ ಅಗ್ರಹಾರ ಒಂದು ಅಧ್ಯಯನ
ಡಾ. ಹೆಚ್.ಎಸ್. ಉಷಾರಾಣಿ
# ೪೩೩, ‘ಇ ಬ್ಲಾಕ್, ಜೆ.ಪಿ. ನಗರ,
ಮೈಸೂರು-೫೭೦೦೦೮.



ಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಶಾಸನಗಳು ಹರಿಶ್ಚಂದ್ರದತ್ತಿ ಅಗ್ರಹಾರ-ಬಾಗಳಿ ಬಗ್ಗೆ ಮಾಹಿತಿ ನೀಡುತ್ತವೆ. ಲಭ್ಯವಿರುವ ಶಾಸನಗಳನ್ನಾಧರಿಸಿ ಈ ಅಗ್ರಹಾರದ ಚಟುವಟಿಕೆಗಳ ಬಗ್ಗೆ ಚಿತ್ರಿಸುವುದೇ ಪ್ರಸ್ತುತ ಪ್ರಬಂಧದ ಉದ್ದೇಶ.
ಸುಮಾರು ೩೦೦ ವರ್ಷಗಳ ಕಾಲ ಶಾಸನಗಳಲ್ಲಿ ಹರಿಶ್ಚಂದ್ರದತ್ತಿ ಅಗ್ರಹಾರ ಪ್ರಸ್ತಾಪಿಸಲ್ಪಟ್ಟಿದೆ. ಅದರಂತೆ ಈ ಅಗ್ರಹಾರ ಶ್ರೀಮದನಾದಿ ಅಗ್ರಹಾರವೆಂದೂ, ಮಹಾಅಗ್ರಹಾರವೆಂದೂ, ಚಾಲುಕ್ಯ ಚಕ್ರೇಶ್ವರ ದತ್ತಿಯೆಂದೂ ಉಕ್ತವಾಗಿದೆ. ಇಲ್ಲಿಯ ಮಹಾಜನರನ್ನು ವರ್ಣಿಸಿರುವ ಪರಿ ಹೀಗಿದೆ : “ಯಮನಿಯಮ ಸ್ವಾಧ್ಯಾಯ ಧ್ಯಾನ ಧಾರಣ ಪಾರಾಯಣ ಜಪಸಮಾಧಿಶೀಲ ಗುಣಸಂಪನ್ನರುಂ ಯಜನಯಾಜನಾಧ್ಯಯನಾಧ್ಯಪನ ದಾನ ಪ್ರತಿಗ್ರಹಯುಕ್ತರುಂ ಅಗ್ನಿಷ್ಟೋಮಾದಿ ಸಪ್ತ....ಸ್ಥಾವಭೃತಾವಗಾಹನ ಪವತ್ರೀಕೃತ ಶರೀರರುಂ ಶ್ರೀ ಸ್ವಯಂಭು ಕಲಿದೇವ ಪಾದಾರಾಧಕರುಂ ಶ್ರೀ ಮಹಾಲಕ್ಷ್ಮಿ ವರಪ್ರಸಾದರುಮಪ್ಪ ಶ್ರೀಮದ್ ಹರಿಶ್ಚಂದ್ರ ದತ್ತಿಯ ಮಹಾಗ್ರಹಾರಂ ಬಾಳ್ಗುಳಿಯೂರೊಡೆಯ, ಪ್ರಮುಖವಶೇಷ ಮಹಾಜನ ಹಯ್ವದಿಂಬರು’’ ಎಂದು. ಇದರಿಂದ ಇವರು ಕಲಿದೇವರ ಆರಾಧಕರಾಗಿದ್ದುದಂತು ಸ್ಪಷ್ಟವಾಗಿದೆ.
ಸಾಮಾನ್ಯವಾಗಿ ಆಗ್ರಹಾರಗಳು ತೆರಿಗೆಗಳಿಂದ ಮುಕ್ತವಾಗಿರುತ್ತಿದ್ದವು. ಭೂದಾನ ನಗದು ದಾನ ಪಡೆಯುತ್ತಿದ್ದವು. ಅದರಂತೆ ರಾಷ್ಟ್ರಕೂಟರ ಕಾಲದಿಂದ ಪ್ರಸ್ತಾಪಿಸಲ್ಪಟ್ಟಿರುವ ಈ ಅಗ್ರಹಾರ ಹೊಯ್ಸಳವರೆಗೂ ತನ್ನ ಸಾಂಸ್ಕೃತಿಕ, ಧಾರ್ಮಿಕ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿದ್ದುದನ್ನು ಕಾಣಬಹುದು. ಮೊದಲಿಗೆ ಕ್ರಿ.ಶ.೯೫೬ ಶಾಸನದನ್ವಯ ರಾಷ್ಟ್ರಕೂಟ ದೊರೆ ಆರೇಳು ವರ್ಷ ಕನ್ನರದೇವನ ಆಳ್ವಿಕೆಯಲ್ಲಿ ಮಹಾಸಾಮಂತ ರೊಟ್ಟಯ್ಯ ಬಾಬನ್ದಿಯ ಎಲ್ಲಾ ತೆರಿಗೆಗಳನ್ನು ದಾನ ನೀಡಿದ್ದನೆಂದು ಗೊತ್ತಾಗುತ್ತದೆ. ಅಂದು ಪಶುಪತಿಭಟ್ಟನೆಂಬಾತ ಬಾಳ್ಗುಳಿಯ ಊರೊಡೆಯನಾಗಿದ್ದ. ಕ್ರಿ.ಶ.೯೮೭ರ ಶಾಸನ ಅಹವಮಲ್ಲದೇವನ ಆಳ್ವಿಕೆಯಲ್ಲಿ ಆತನ ಮಹಾಸಾಮಂತ ಆಯ್ತವರ್ಮ ಕಿಸುಕಾಡು ೫೦೦ನ್ನು ಆಳುತ್ತಿದ್ದಾಗ ಬಾಗಳಿಯ ಐವತ್ತು ಮಹಾಜನರು ದುಗ್ಗಿಮಯ್ಯ ಪ್ರತಿಷ್ಠಾಪಿಸಿದ ಆದಿತ್ಯ ದೇವರಿಗೆ ತೋಟ ಬಿಟ್ಟುಕೊಟ್ಟರೆಂದು ತಿಳಿಸುತ್ತದೆ. ಮತ್ತೊಂದು ರಾಷ್ಟ್ರಕೂಟರ ಶಾಸನ ದೊರೆ ಇಂದ್ರವಲ್ಲಭನ ಸಾಮಂತ ರೊಟ್ಟ ಎಂಬ ಬಿರುದುಳ್ಳಾತ ಕೋಗಳಿ ೫೦೦ ಹಾಗೂ ಮಾಸಿಯವಾಡಿ ೧೪೦ನ್ನ ಆಳುತ್ತಿದ್ದಾಗ ಬಾಳ್ಗುಳಿಯ ಐವತ್ತು ಮಹಾಜನರ ಸಮ್ಮತಿಯಿಂದ ಬಳಿಯರ ಬಾದಮ್ಮ ಎಂಬಾತನಿಗೆ ಬೂದುಗಳನ್ನಿತ್ತರು ಎಂದಿದೆ.
ರಾಷ್ಟ್ರಕೂಟರಿಂದ ಪೋಷಿಸಲ್ಪಟ್ಟ ಈ ಅಗ್ರಹಾರ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿತ್ತೆಂದು ಶಾಸನಗಳ ಅಧ್ಯಯನದಿಂದ ದೃಢಪಡುತ್ತದೆ. ಉದಾಹರಣೆಗೆ: ಈ ಅಗ್ರಹಾರದ ವಿವಿಧ ವರ್ಗಗಳ ಮನವಿಗೆ ಚಾಲುಕ್ಯ ದೊರೆ ಸ್ಪಂದಿಸಿದ್ದನೆಂಬುದಕ್ಕೆ ಕ್ರಿ.ಶ.೯೯೧ರ ಶಾಸನ ನಿದರ್ಶನ. ಈ ಶಾಸನ ಪ್ರಕಾರ, ಬಾಳ್ಗುಳಿಯ ಐವತ್ತು ಮಹಾಜನರು, ಸಿದ್ದಿಸೆಟ್ಟಿ, ಸೋಭನಯ್ಯ ಮಲ್ಲಯ್ಯಸೆಟ್ಟಿ ಅಣ್ಣಮ್ಮ ಹಾಗೂ ತಂಬುಲಿಗರು ಸಾಸಿರ್ವರು ಐನೂರ್ವರು ಹೋಗಿ ತೆರಿಗೆ ಬಾರದ ಹೊರೆಯಿಂದ ಕೋರಿಕೆ ಸಲ್ಲಿಸಲಾಗಿ ಚಾಲುಕ್ಯ ಅಹವಮಲ್ಲದೇವನು ರಾಷ್ಟ್ರಕೂಟ ಕನ್ನರದೇವ ಗೊತ್ತುಪಡಿಸಿದ್ದ ಸುಂಕದ ಮರ್ಯಾದೆಯನ್ನೇ ನಿರ್ಧರಿಸುತ್ತಾನೆ.
ಇನ್ನು ಕಲಿದೇವಸ್ವಾಮಿಯ ನೈವೇದ್ಯ, ನಂದಾದೀವಿಗೆ, ಅಂಗರಂಗ ಭೋಗ, ತಪೋಧನರ ಸತ್ರ, ಬ್ರಾಹ್ಮಣರ ಗ್ರಾಸನಕ್ಕೆ, ದೇಸಿಗ ಛಾತ್ರಕ್ಕೆ, ಪುರಾಣ, ಖಂಡಿಕ, ಶಾಸ್ತ್ರವ್ಯಾಖ್ಯಾನ ಮಾಡುವ ಉಪಾಧ್ಯಾಯರಿಗೆ, ಕೆರೆ ನಿರ್ವಹಣೆಗೆಂದು ಕಾಲಕಾಲಕ್ಕೆ ಭೂದಾನ, ನಗದು ದಾನ ನೀಡುವುದರ ಮೂಲಕ ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಗಳ ಬಗ್ಗೆ ಜಾಗೃತರಾಗಿದ್ದುದನ್ನು ಶಾಸನಗಳು ದಾಖಲಿಸಿದೆ. ಅದರ ಪ್ರಕಾರ ದಂಡನಾಯಕರು, ಮಹಿಳೆಯರು, ವ್ಯಾಪಾರಿಗಳು, ಅಧಿಕಾರಿಗಳು ಈ ಅಗ್ರಹಾರದ ಚಟುವಟಿಕೆಗಳಿಗೆ ಆದ್ಯ ಗಮನ ನೀಡಿದ್ದರು.
ಕ್ರಿ.ಶ.೧೦೧೮ರ ಶಾಸನ ಚಾಲುಕ್ಯ ಜಗದೇಕಮಲ್ಲ ಜಯಸಿಂಹನ ಕಾಲದಲ್ಲಿ ಆತನ ಸಾಮಂತ  ಜಗದೇಕಮಲ್ಲ ನೊಳಂಬಪಲ್ಲವ ಪೆರ್ಮಾಡಿ ಉದಯಾದಿತ್ಯದೇವ ಕಂಪುಲಿಯ ಬೀಡಿನಿಂದ ಆಳುತ್ತಿದ್ದಾಗ ಉದಯಾದಿತ್ಯನು ಪಂಪಾಪುರ ತೀರ್ಥಕ್ಕೆ ಬಂದ ಸಂದರ್ಭದಲ್ಲಿ ಅವನ ಆದೇಶದಂತೆ ನರಸಿಂಘಯ್ಯ ಬಾಳ್ಗುಳಿಗೆ ಬಂದು ಸೋಮಸಿಂಘಭಟಾರರ ಪಾದ ತೊಳೆದು ಬಾಳ್ಗುಳಿಯ ಮಹಾಜನ ಬಿಕ್ಕಿಗ ೭೦ರ ಮನ್ನೆಯ ಬೀರಭಟ್ಟನ ಸಮಕ್ಷಮದಲ್ಲಿ ಕಲಿದೇವಸ್ವಾಮಿಯ “ನಿವೇದ್ಯ ನಂದಾದೀವಿಗೆಗಂ ತಪೋಧನರ ಸತ್ರಕ್ಕಂ ಪಂನ್ನಿರ್ವಸೂಳೆಯರ್ಗ್ಗಂ, ಸೂಳೆವಳಗಂ, ವಂಚಿಗಂಗ, ಪರೆಕಾರರ್ಗಂ ಪಾತ್ರಕ್ಕಂ ದೇಸಿಗಛಾತ್ರ ಭೋಜನಕ್ಕಂ’’ ಭೂಮಿ ದಾನ ಮಾಡಿದ್ದನ್ನು ದಾಖಲಿಸಿದೆ. ಕಲಿದೇವರ ಸೇನೆಗೈಯಲು ನೃತ್ಯಗಾತಿಯರು, ದೇವಾಲಯ ಶುಚಿಗೊಳಿಸಿ ಅಲಂಕರಿಸಲು ಸೂಳೆಯರು ಹಾಗೂ ಅವರ ಮೇಲ್ವಿಚಾರಣೆಗೆಂದು ನೇಮಕಗೊಂಡಿದ್ದ ಸೂಳೆವಳ ಎಂಬ ಮೇಲಾಧಿಕಾರಿ ದೇವಾಲಯಕ್ಕೆ ಹೊಂದಿಕೊಂಡಂತಿದ್ದ ಮಠ ತಪೋಧನರ ಸತ್ರ, ದೇಸಿಗ ಛಾತ್ರರ ಭೋಜನಕ್ಕೆಂದು ನಿರ್ಮಿಸಿದ್ದ ಪ್ರತ್ಯೇಕ ಸತ್ರಗಳು ವಿವಿಧ ವರ್ಗಗಳ ಅಸ್ತಿತ್ವ ಹಾಗೂ ಕಲ್ಪಿಸಿದ್ದ ಸೌಲಭ್ಯಗಳನ್ನು ಮನದಟ್ಟು ಮಾಡಿಸುತ್ತದೆ.
ಕ್ರಿ.ಶ.೧೦೩೫ರ ಶಾಸನ ಇಮ್ಮಡಿ ಜಯಸಿಂಹನ ಆಳ್ವಿಕೆಯಲ್ಲಿ ಕಲಿದೇವರ ನಂದಾದೀವಿಗೆಗೆ ಹಾಡುವ ಕಾಮವ್ವ ನಾಗವ್ವೆ ಮಗಳಾದ ಪಾತ್ರದ ಸಿರಿಯವ್ವೆ ವರ್ಷಕ್ಕೆ ಎರಡು ಪಣ ದಾನ ನೀಡಿದ್ದಾಳೆ. ಅದೇ ದಿನ ಮಹಾಜನರು ಹಾಗೂ ಇತರರು ಕಲಿದೇವರ ದೇವಾಲಯದಲ್ಲಿ ಸಮಾವೇಶಗೊಂಡು ಅಚ್ಛಿವಳ್ಳಿಯದ ಗಣಮಯ್ಯನ ತಮ್ಮ ನಾಯ್ಚಮ್ಯನ ಕೈಯಿಂದ ಅಕಸಾಲಿ ಆಯವಾಗಿ ಬಂದಿದ್ದ ಧಾನ್ಯ ಮತ್ತು ಉಪ್ಪನ್ನು ಪೊನ್ನಿಗೆ ಎರಡು ಬಳ್ಳದಂತೆ ಕೊಳ್ಳಲು ೧೦೩ ಗದ್ಯಾಣ ನೀಡಿ ಅದರ ಹುಟ್ಟುವಳಿಯಲ್ಲಿ ನಿತ್ಯ ನಾಲ್ಕು ಜನರಿಗೆ ಸತ್ರ ನಡೆಸಲು ದಾನ ನೀಡಿದರು. ಇದು ಕಲಿದೇವರ ದೇವಾಲಯದಲ್ಲಿ ದಿನನಿತ್ಯ ನಡೆಯುತ್ತಿದ್ದ ಅನ್ನಸಂತರ್ಪಣೆ, ನಿತ್ಯಸೇವೆಗೆ ನೀಡುತ್ತಿದ್ದ ನಗದು ದಾನದ ಕುರಿತು ತಿಳಿಸುತ್ತದೆ. ಅಲ್ಲದೆ ಹಾಡುವ ವೃತ್ತಿಯವರ ಮಕ್ಕಳು ನೃತ್ಯ ಮಾಡಬಹುದಿತ್ತು ಎಂಬುದು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮನವರಿಕೆ ಮಾಡಿಸುತ್ತದೆ.
ಕ್ರಿ.ಶ.೧೦೬೮ರ ಶಾಸನ ಕೃಷಿಗೆ ಸಂಬಂಧಿಸಿದುದಾಗಿದೆ. ಅದರಂತೆ ಮಾಂಡಳಿಕ ತ್ರೈಲೋಕ್ಯಮಲ್ಲ ನೊಳಂಬ ಪಲ್ಲವ ಪೆರ್ಮಾಡಿ ಜಯಸಿಂಗನ ಆಳ್ವಿಕೆಯಲ್ಲಿ ಒಮ್ಮೆ ಮಹಾಜನರು ಸಭೆ ಸೇರಿ ತೊಣಕಲಿಯ ಮಹಾದೇವಯ್ಯ ಬ್ರಾಹ್ಮಣರ ಭೂಮಿಯನ್ನು ಶೂದ್ರರು ಕೃಷಿ ಮಾಡುತ್ತಿದ್ದು ವರ್ಷಕ್ಕೆ ೫೨ ಗದ್ಯಾಣ ನೀಡುತ್ತಿದ್ದಾಗ್ಯೂ ಇತರರು ದುರುಪಯೋಗ ಮಾಡಿಕೊಳ್ಳಲಾಗಿ ಅದನ್ನು ತಾನೇ ಪಡೆದುಕೊಂಡು ಊರಿನ ಹಿರಿಯ ಕೆರೆಗೆ ದಾನ ನೀಡುತ್ತಾನೆ.
ಕ್ರಿ.ಶ.೧೦೭೯ ಶಾಸನ ಸಾಮಂತ ಪಾಂಡ್ಯದೇವಿ ನೊಳಂಬವಾಡಿ ೩೨,೦೦೦ನ್ನು ಆಳುತ್ತಿದ್ದಾಗ ಬಾಗಳಿಯ ೫೦ ಮಹಾಜನರ ಸನ್ನಿಧಿಯಲ್ಲಿ ಬ್ರಾಹ್ಮಣರ ಗ್ರಾಸನಕ್ಕೆ ಪುರಾಣಕ್ಕೆಂದು ಅರಸಿಕೆರೆಯ ಕಲಿಯಗೌಡನ ಮಗಳು ಪಿರಿಯಾಂಡ ಪೆರ್ಗಡೆಯ ಪತ್ನಿ ಬಾಚಲದೇವಿ ಶಿವಶಕ್ತಿ ಪಂಡಿತರ ಕಾಲನು ತೊಳೆದು ಭೂಮಿ ದಾನ ಮಾಡಿದಳು. ಇಲ್ಲಿ ಸ್ಥಳೀಯ ಅಧಿಕಾರಿ ವರ್ಗದ ಕಾಳಜಿಯನ್ನು ಗಮನಿಸಬಹುದು. ಉಲ್ಲೇಖಿತ ಶಿವಶಕ್ತಿ ಪಂಡಿತರು ‘ಯಮ ನಿಯಮಾಸನಾನುಷ್ಟಾಣ ಪಾರಾಯಣ ಜಪಸಮಾಧಿ ಸಕಳಾಗಮಶಾಸ್ತ್ರ ಪರಮತತ್ವಜ್ಞಾನ ಸಕಳಗುಣ ಸಂಪನ್ನರೆಂದು ಪ್ರಶಂಶಿಸಲ್ಪಟ್ಟಿದ್ದಾರೆ.
ಕ್ರಿ.ಶ.೧೧೦೩ರ೧೦ ಶಾಸನ ತ್ರಿಭುವನಮಲ್ಲನ ದಂಡನಾಯಕ ಮುದ್ದರಸ ಬಾಳ್ಗುಳಿಯ ಶಿವಶಕ್ತಿ ಪಂಡಿತರ ಪಾದ ತೊಳೆದು ಊರಿನ ಐವತ್ತು ಮಹಾಜನರ ಸನ್ನಿಧಿಯಲ್ಲಿ ಕಲಿದೇವರ ನೈವೇದ್ಯಕ್ಕೆ ಹಾಗೂ ನಂದಾದೀವಿಗೆ ತಿಂಗಳಿಗೆ ಎರಡು ಎಲೆ ಹೇರಿನ ಸುಂಕ ೧೨ ಪಣ ನೀಡಿದ್ದನೆಂದೂ, ಇದರಲ್ಲಿ ಪೂಜಾರಿಗೆ ಎರಡು ಪಣ, ಪುರಾಣ ಓದಿದವವನಿಗೆ ಒಂದು ಹಾಗೂ ಪೂವಿನ ತೋಟಕ್ಕೆ ಪಣ ಎರಡರಂತೆ ವ್ಯಯಿಸಬೇಕೆಂದು ಸ್ಪಷ್ಟಪಡಿಸಲಾಗಿದೆ. ಮತ್ತೊಬ್ಬ ದಂಡನಾಯಕ ಬರ್ಮೆರಸನೆಂಬಾತ ಕ್ರಿ.ಶ.೧೧೦೭ರಲ್ಲಿ ಹಿರಿಯ ಕೆರೆಯ ಕೆಲಸಕ್ಕೆ ಪನ್ನಾಯದ ಸುಂಕದಲ್ಲಿ ತಿಂಗಳಿಗೆ ಒಂದು ಗದ್ಯಾಣ ಹೊನ್ನನು ಮಹಾಜನರ ಕಾಲನ್ನು ತೊಳೆದು ಸ್ವಯಂಭು ಕಲಿದೇವರ ಸನ್ನಿಧಾನದಲ್ಲಿ ದಾನ ನೀಡಿದ್ದನ್ನು ಶಾಸನದಲ್ಲಿ೧೧ ದಾಖಲಿಸಲಾಗಿದೆ.
ಕ್ರಿ.ಶ.೧೧೦೮ರ ಶಾಸನ೧೨ ಮಲೆಯಾಳಿಗಳು ನೆಲೆಸುವಿಕೆ ಹಾಗೂ ವಡ್ಡವ್ಯವಹಾರಿ ಕೊಮರ ಮೂಕ್ಕಂ ಎಂಬಾತ ಕಲಿದೇವರ ನಂದಾದೀವಿಗೆಗೆ ೫ ಗದ್ಯಾಣ ನೀಡಿ ಅದರ ಬಡ್ಡಿಯಲ್ಲಿ ನಂದಾದೀಪ ಸೇವೆ ಮಾಡಬೇಕೆಂದು ತಿಳಿಸಿದ್ದನ್ನು ಕಾಣುತ್ತೇವೆ. ಅದೇ ವರ್ಷ೧೩ ಪಸಾಯಿತ ವಿಜಯ ಹೆಮ್ಮಾಡಿ ಎಂಬ ದಂಡನಾಯಕನು ರಾಜನ ಕರ್ತವ್ಯಗಳನ್ನು  ಪಾಲಿಸುತ್ತಿದ್ದಾಗ ಮಹಾವಡ್ಡ ವ್ಯವಹಾರಿ ಚಿನ್ನಗೆಯಿ ಕಪ್ಪಿಸೆಟ್ಟಿ ಹೊನ್ನಬಾಚಯ್ಯ, ಪದ್ಮಣ್ನ, ಶರ್ವದೇವನಾಯಕ ಮಾಹಣ ಸೇನಭೋವ ಸಂಕಣ್ಣ ಮೊದಲಾದವರು ನಾಗರಾಸಿ ಪಂಡಿತರ ಕಾಲನ್ನು ತೊಳೆದು ನೀಲೇಶ್ವರ ದೇವರಿಗೆ ಭೂದಾನ ನೀಡಿದರು. ಇದರಿಂದ ಶಿವಶಕ್ತಿ ಪಂಡಿತರೊಂದಿಗೆ ನಾಗರಾಸಿ ಪಂಡಿತರು ಜನತೆಯ ಗಮನ ಸೆಳೆದಿದ್ದರೆಂಬುದು ಗಮನಾರ್ಹ. ಸೇನಬೊವ ಸಂಕಣ್ಣ ಪ್ರತ್ಯೇಕವಾಗಿ ನೀಲೇಶ್ವರ ದೇವರ ಪೂಜೆ ಹಾಗೂ ನಂದಾದೀಪಕ್ಕೆ ತೋಟ ಬಿಟ್ಟಿದ್ದನ್ನು ಶಾಸನ೧೪ ದಾಖಲಿಸಿದೆ. ನಿಡುಂಗಲ್ನಾಡ ಮಹಾವಡ್ಡ ವ್ಯವಹಾರಿ ಪೂಮೂರ್ಖ ಸೆಟ್ಟಿಯರು ಐವತ್ತು ಮಹಾಜನರ ಸನ್ನಿಧಿಯಲ್ಲಿ ಶಿವಶಕ್ತಿ ಪಂಡಿತರ ಕಾಲನ್ನು ತೊಳೆದು ನಂದಾದೀವಿಗೆಗೆ ೧೪ ಗದ್ಯಾಣ ನೀಡಿದ್ದನ್ನು ಮತ್ತೊಂದು ಶಾಸನದಲ್ಲಿ೧೫ ಉಲ್ಲೇಖಿಸಲಾಗಿದೆ. ಅದೇ ಪುಣ್ಯಕಾರ್ಯದಲ್ಲಿ ಸ್ಥಳೀಯರು ಭಾಗಿಗಳಾಗಿದ್ದರೆಂಬುದಕ್ಕೆ ಮತ್ತಷ್ಟು ದಾಖಲೆಗಳಿವೆ.
ಕ್ರಿ.ಶ.೧೧೧೫ರ ಶಾಸನ೧೬ ಯೆಲೆಕಲ ಬೊಜಂಗರ ಈಶ್ವರಯ್ಯನ ಮಾಚಕ್ಕ ಬಾಳ್ಗುಳಿಯ ಮಹಾಜನರ ಸನ್ನಿಧಿಯಲ್ಲಿ ಶಿವಶಕ್ತಿ ಪಂಡಿತರ ಕಾಲನ್ನು ತೊಳೆದು ಕಲಿದೇವರ ನೈವೇದ್ಯಕ್ಕೆ ೨೦ ಗದ್ಯಾಣ ನೀಡಿದ್ದನ್ನು ಉಲ್ಲೇಖಿಸುತ್ತದೆ. ಅದೇ ವರ್ಷದಲ್ಲಿ ಮತ್ತೊಂದು ಶಾಸನ೧೭ ನೀರಾವರಿ ಕೆಲಸಕ್ಕೆ ಆದ್ಯತೆ ನೀಡಿದ್ದನ್ನು ಸೂಚಿಸಿದಂತಿದೆ. ಅದರಂತೆ ದಂಡನಾಯಕ ತಿಕ್ಕಭಟ್ಟನು ಬಾಗಳಿಯ ಮತ್ತು ಮಹಾಜನರು ಮತ್ತು ಶಿವಶಕ್ತಿ ಪಂಡಿತರ ಸಮಕ್ಷಮದಲ್ಲಿ ದೇವರ ಗ್ರಾಸನಲಯ್ವರು ಉಣಲು ಹಾಗೂ ಮಿಕ್ಕಿದ ಹಣ ಹಿರಿಯ ಕೆರೆಯ ಕೆಲಸಕ್ಕೆಂದೂ, ಬ್ರಹ್ಮ ಜಿನಾಲಯದ ನಿವೇದ್ಯಕ್ಕೆಂದು ತಿಂಗಳಿಗೆ ಎರಡು ಪಣ ವಿನಿಯೋಗಿಸಲು ಶಿವಮಯ್ಯ ಎಂಬಾತನಿಗೆ ತಿಳಿಸಿದಂತಿದೆ.
ಹಬ್ಬದ ಆಡಂಗೆ ಅದರಲ್ಲೂ ದೀಪಾವಳಿ ಕಾಣಿಕೆಯಲ್ಲಿ ದೇವರ ಭೋಗಕ್ಕೆ ನಗದು ದಾನ ಬಿಟ್ಟದ್ದನ್ನು ಶಾಸನದಲ್ಲಿ ದಾಖಲಿಸಲಾಗಿದೆ. ಕ್ರಿ.ಶ.೧೧೧೯ರ ಶಾಸನದ೧೮ ಪ್ರಕಾರ ಸಾಮಂತ ಪಾಂಡ್ಯದೇವನು ನೊಳಂಬವಾಡಿ ೩೨,೦೦೦ನ್ನು ಆಳುತ್ತಿದ್ದಾಗ ದಂಡನಾಯಕನಾದ ರಿಮೆಯಣ್ಣಭಟ್ಟನು ನೀಲೇಶ್ವರ ಪಂಡಿತನ ಕಾಲು ತೊಳೆದು ತಿಂಗಳಿಗೆ ಒಂದು ಎಲೆಯ ಹೇರಿನ ಸುಂಕ ನೀಡಿದ. ಅಲ್ಲದೆ ಆಲೂರಿನ ಐವತ್ತು ಮಹಾಜನರು ಸಭೆ ಸೇರಿ ಕೆರೆ ಸುಂಕದಲ್ಲಿ ನಂದಾದೀವಿಗೆಗೆ ತಿಂಗಳಿಗೆ ಒಂದು ಪಣ ಹಾಗೂ ಪೆರ್ಗಡೆ ಕಾವರಾಜ ಎಂಬಾತ ದೀಪಾವಳಿಯಂದು ಮಹಾಜನರು ಕೊಡುವ ಎರಡು ಗದ್ಯಾಣದಲ್ಲಿ ಒಂದು ಗದ್ಯಾಣವನ್ನು ದೇವರಭೋಗಕ್ಕೆ ಬಿಟ್ಟನೆಂದು ತಿಳಿಸುತ್ತದೆ.
ಮೊದಲ ಪ್ರಸಾದ ವಿನಿಯೋಗಕ್ಕೆ ನಗದು ದಾನ ಹಾಗೂ ಪುರಾಣ ಓದುವವರಿಗೆ ಭೂದಾನ ನೀಡಿದ್ದನ್ನು ಶಾಸನಗಳು ತಿಳಿಸುತ್ತವೆ. ಅದರಂತೆ ಕ್ರಿ.ಶ.೧೧೨೨ರ ಶಾಸನಗಳು೧೯ ಮಹಾಪ್ರಧಾನ ದಂಡನಾಯಕ ಸೋವರಸರು ನೊಳಂಬವಾಡಿ ೩೨,೦೦೦ದ ವಡ್ಡರಾವುಳದ ಸುಂಕವನ್ನಾಳುತ್ತಿದ್ದಾಗ ವಡ್ಡರಾವುಳದ ಸುಂಕ ಲಕ್ಷಕ್ಕೆ ಆರು ಪಣ ಮುಪ್ಪಾಗದೊಳಗೆ ಕಲಿದೇವಸ್ವಾಮಿಯ ದೇವರನಾಸಮದ ಸತ್ರಕ್ಕೆ ಒಂದು ಪಾಗ ಬಿಟ್ಟದ್ದನ್ನು ತಿಳಿಸುತ್ತದೆ. ಅದೇ ರೀತಿ ಮತ್ತೊಂದು ಶಾಸನ೨೦ ಮಾರ್ತಾಂಡಯ್ಯನ ಮಗ ದಾಸಯ್ಯ ನಾಯಕನು ಮಹಾಜನರ ಅಪ್ಪಣೆ ಪಡೆದು ಖಂಡಿಕಕ್ಕೆ ೩ ಮತ್ತರು ಮತ್ತು ೩೦೦ ಕಮ್ಮ ಭೂಮಿ ಬಿಟ್ಟದ್ದನ್ನು ಉಲ್ಲೇಖಿಸುತ್ತದೆ. ಕ್ರಿ.ಶ.೧೧೨೬ರ ಶಾಸನ೨೧ ಸಾಮಂತ ತ್ರಿಭುವನ ಮಲ್ಲಪಾಂಡ್ಯನ ಕಾಲದಲ್ಲಿ ಗುಜ್ಬರ ಶಾಂತಿಕಬ್ಬೆ ಕಲಿದೇವರ ನೈವೇದ್ಯಕ್ಕೆ ಪುರಾಣ ಓದುವ ಉಪಾಧ್ಯಾಯರಿಗೆ ೩೦೦ ಕಮ್ಮ ತೋಟ ಬಿಟ್ಟದ್ದನ್ನು ದಾಖಲಿಸಿದೆ. ಈ ಶಾಸನದಲ್ಲೂ ಶಿವಶಕ್ತಿ ಪಂಡಿತರನ್ನು ಪ್ರಸ್ತಾಪಿಸಲಾಗಿದೆ.
ಕಲಿದೇವರಿಗೆ ಸಲ್ಲುತ್ತಿದ್ದ ನಾನಾ ರೀತಿಯ ಸೇವೆಗಾಗಿ ಜನ ಕಾಳಜಿ ವಹಿಸಿ ಭೂದಾನ ನೀಡುತ್ತಿದ್ದದು ಗೋಚರಿಸುತ್ತದೆ. ಅದರಂತೆ ಕ್ರಿ.ಶ.೧೧೪೮ರ ಶಾಸನ೨೨ ಮಹಾಮಂಡಳೇಶ್ವರ ಜಗದೇಕಮಲ್ಲ ವೀರಪಾಂಡ್ಯನು ನೊಳಂಬವಾಡಿ ೩೨,೦೦೦ನು ಆಳುತ್ತಿದ್ದಾಗ ಭಟ್ಟರ ಮಾದಿಯಣ್ಣನು ಬಾಳ್ಗುಳಿಯ (ಐವತ್ತು ಮಹಾಜನರ) ಐಯ್ಯ ದಿಂಬರು ಮಹಾಜನರ ಸನ್ನಿಧಿಯಲ್ಲಿ ಕಲಿದೇವರ ನಾನಾ ಸೇವೆಗಾಗಿ ಏಳು ಜನ ಬ್ರಾಹ್ಮಣರಿಗೆ ೪೫ ಕಮ್ಮ ತೋಟ ಬಿಟ್ಟದನ್ನು ಹೇಳುತ್ತದೆ. ಶಾಸನವು ನಾಲ್ವರು ಪುೞ್ಪಮನಿಕ್ಕುವ, ಗಡುಂಗೆಯಂಕುಡುವ ಜಪಂ ಮಾರ್ತ ಮೂವರು ಅನವಳು. ಮಾನಸಬ್ರಾಹ್ಮರ್ಗ್ಗಂ ಪ್ರತ್ಯೇಕ ತಿಂಗಳುದಿಂಗಳಿಂಗ ಏಳು ಪಣವಡ್ಡ ದಕ್ಷಿಣೆಗೆವವರ...ಭೋಜನಕ್ಕಂ ದೇವರ ರಂಗಭೋಗ ನಿವೇದ್ಯ ಸುಗದ್ದ ದ್ರವ್ಯಕ್ಕೆ ಎಂದು ವಿವಿಧ ಸೇವೆಗಳನ್ನು ಸ್ಪಷ್ಟಪಡಿಸುತ್ತದೆ. ಇದರಿಂದ ದೇವಾಲಯದಲ್ಲಿ ನಡೆಯುತ್ತಿದ್ದ ಸೇವೆಗಳ ಬಗ್ಗೆಯೂ ಮಾಹಿತಿ ದೊರೆತಂತಾಗಿದೆ.
ದಾನಧರ್ಮದ ಫಲ ಇಂಥವರಿಗೆ ಸಲ್ಪ ಬೇಕೆಂಬ ಆಕಾಂಕ್ಷೆ, ಕಳಕಳಿ ಜನರಲ್ಲಿತ್ತು ಉದಾಹರಣೆಗೆ ಕ್ರಿ.ಶ.೧೧೫೩ರ ಶಾಸನ೨೩ ಸಾಮಂತ ಜಗದೇಕಮಲ್ಲನ ಮಾವ ವಿಕ್ರಮಾದಿತ್ಯರಸ ಬಾಳ್ಗುಳಿಯ ಐವತ್ತು ಮಹಾಜನರಿಗೆ ೧೭೩ ಗದ್ಯಾಣ ನೀಡಿ ಅದರ ಬಡ್ಡಿಯಲ್ಲಿ ೧೩ ಬ್ರಾಹ್ಮಣರಿಗೆ ಪಡಿಯ ರೂಪದಲ್ಲಿ ನೀಡಬೇಕೆಂದೂ ಹಾಗೂ ಕಲಿದೇವರ ನಂದಾದೀಪ ಮತ್ತು ನರಸಿಂಹದೇವರ ನಂದಾದೀಪ ನಡೆಸಬೇಕೆಂದೂ ಸೂಚಿಸಲಾಗಿದೆ. ಈ ಧರ್ಮದ ಫಲ ಸ್ವಾರಸ್ಯಕರವಾಗಿದೆ. ಅಂದರೆ ಈ ಧರ್ಮದ ಫಲ ಅತ್ತೆ ಕೇತಬ್ಬರಸಿ ಮತ್ತು ಪತ್ನಿ ನಾಗಿಯಾಂಡರಸಿಗೆ ಸಮಭಾಗ ಸಲ್ಲಬೇಕೆಂದು ತಿಳಿಸಲಾಗಿದೆ.
ಇಲ್ಲಿದ್ದ ಲಕ್ಷ್ಮೀನಾರಾಯಣ ದೇವರ ಗುಡಿಯು ಕ್ರಿಯಾಶೀಲವಾಗಿತ್ತೆಂದು ಶಾಸನ ತಿಳಿಸುತ್ತದೆ. ಕ್ರಿ.ಶ.೧೬೦೦ ಶಾಸನ೨೪ ಪ್ರಕಾರ, ಚಾಲುಕ್ಯ  ಜಗದೇವಕಮಲ್ಲನ ಸಾಮಂತ ವೀರಪಾಂಡ್ಯನು ಕದಂಬಳಿಗೆ ೧೦೦೦, ಬಲ್ಲಕುಂದೆ ೩೦೦, ಕೋಗಳಿ ೫೦೦ನ್ನು ಆಳುತ್ತಿದ್ದಾಗ ಬಾಳ್ಗುಳಿಯ ಮಹಾಜನರ ಸಮ್ಮುಖದಲ್ಲಿ ಮಾಳಪ್ಪಮ್ಯನ ಮಗ ಚಿದ್ದಣ್ಣನ ಪತ್ನಿ ಧರ್ಮವ್ವೆ ಸ್ಥಾಪಿಸಿದ ಲಕ್ಷ್ಮಿನಾರಾಯಣದೇವರ ಪೂಜಾರ್ಥವಾಗಿ ಭೂದಾನ ನೀಡಿದ್ದು, ಅದರ ಉತ್ಪತ್ತಿಯಲ್ಲಿ ಪುರಾಣ ಹೇಳುವವನಿಗೆ ಶಾಸ್ತ್ರವ್ಯಾಖ್ಯಾನ ಮಾಡುವವನಿಗೆ ಮತ್ತು ಅಗ್ರಾಸನದ ಬ್ರಾಹ್ಮಣ ಭೋಜನಕ್ಕೆ ವ್ಯಯಿಸಬೇಕೆಂದು ಹೇಳಲಾಗಿದೆ.
ಕ್ರಿ.ಶ.೧೧೭೧ರ ಮಾಡಲಗೇರಿ ಶಾಸನ೨೫ ಬಾಗಳಿ ಐವತ್ತು ಮಹಾಜನರ ಸನ್ನಿಧಿಯಲ್ಲಿ ಕಂನಗೌಡನು ಮಿಂಡಹಳ್ಳಿಯನ್ನು ಕ್ರಯವಾಗಿ ಕೊಂಡು ಮಿಂಡೇಶ್ವರ ದೇವರಿಗೆ ದಾನ ನೀಡಿದ್ದನ್ನು ದಾಖಲಿಸಿದೆ.
ಕ್ರಿ.ಶ.೧೧೮೮ರ ಶಾಸನ೨೬ ಪ್ರಕಾರ ಬಾಳ್ಗುಳಿಯ ಮಹಾಜನರು ದಾಸೆಯನಾಯಕನ ಕೆರೆಯ ಧರ್ಮಕ್ಕೆ ಒಂದು ಮತ್ತರು ಭೂಮಿ ಬಿಟ್ಟರೆಂಬುದು ನೀರಾವರಿಗೆ ನೀಡಿದ್ದ ಮಹತ್ವವನ್ನು ಅರಿಯಲು ನೆರವಾಗುತ್ತದೆ.
ಕಾಳಿಮಯ್ಯನೆಂಬಾತ ಬಾಗಳಿಯ ಬ್ರಾಹ್ಮಣರ ಭೋಜನಕ್ಕೆ, ಬಾವಿಗೆ ಮತ್ತು ಸತ್ರಕ್ಕೆ ಭೂದಾನ ನೀಡಿದ ಉಲ್ಲೇಖವನ್ನು ದೇವಾಲಯದ ತ್ರುಟಿತ ಶಾಸನದಲ್ಲಿ ಕಾಣಬಹುದು.೨೭ ಹಾಗೆಯೇ ಕಾಲದ ಉಲ್ಲೇಖವಿಲ್ಲದ ಶಾಸನವೊಂದು೨೮ ವೀರಕೇಶವ ದೇವಾಲಯ ಮಂಟಪದಲ್ಲಿದ್ದು, ವೀರಕೇಶವ ದೇವರ ಪುರಾಣವೃತ್ತಿಗೆ ಆರು, ಅಯಿಂದ್ರಕ್ಕೆ (ಇಂದ್ರನ ಪೂಜೆ) ನಾಲ್ಕು ಹೊನ್ನನ್ನು ನೀಡುವಂತೆ ವ್ಯವಸ್ಥೆ ಮಾಡಲಾಗಿತ್ತೆಂದು ಉಲ್ಲೇಖಿಸುತ್ತದೆ.
ಈ ಅಗ್ರಹಾರದ ಜೀರ್ಣೋದ್ಧಾರಕ್ಕೆ ಗಮನಹರಿಸಿದ್ದನ್ನು ಹೊಯ್ಸಳ ವೀರಬಲ್ಲಾಳ ಶಾಸನದಲ್ಲಿ ದಾಖಲಿಸಿದೆ. ಅದರಂತೆ ಕ್ರಿ.ಶ.೧೧೯೩ರ ವೀರಬಲ್ಲಾಳನ ಶಾಸನ೨೯ ಆತನು ಬಾಳ್ಗುಳಿಯ ನೆಲೆವೀಡಿನಲ್ಲಿದ್ದಾಗ ಅಲ್ಲಿಯ ಕಲಿದೇವಸ್ವಾಮಿ ಅಂಗಭೋಗ ರಂಗಭೋಗ ಖಂಡಸ್ಪುಟಿತ ಜೀರ್ಣೋದ್ದಾರಕ್ಕೆ ಬ್ರಾಹ್ಮಣರ ಅಗ್ರಾಸನಕ್ಕೆಂದು ಅಲ್ಲಿಯ ಐವತ್ತು ಮಹಾಜನರ ಕಾಲನ್ನು ತೊಳೆದು ನಂದಿಬೇಹೂರ ಸೀಮೆಯ ಸಮಸ್ತ ಭೂಮಿಯನ್ನು ನೀಡಿದನೆಂದು ತಿಳಿಸುತ್ತದೆ.
ಕ್ರಿ.ಶ.೧೨೦೯ರ ಶಾಸನ೩೦ ಮಹಾಗ್ರಹಾರ ಬಾಳ್ಗುಳಿಯ ಬೆಣ್ಣಯ ನಾರಾಯಣ ಪಣಂಗಿಯರ ಪುತ್ರ ಸುಪರ್ಣ ವೇಗಾಮೃತ ಪಟವರ್ಧನ ದೀಕ್ಷಿತ ಸೋಮಯಾಜ್ಯರು ತಾವು ಪ್ರತಿಷ್ಟೆ ಮಾಡಿದ ಸುಪರ್ಣವೇಗಾಮೃತೇಶ್ವರ ದೇವರ ಅಂಗಭೋಗ ರಂಗಭೋಗಕ್ಕೆ ಕಲಿದೇವರ ಸನ್ನಿಧಿಯಲ್ಲಿ ಭೂದಾನ ನೀಡಿದ್ದನು ಜೊತೆಗೆ ಬೆಣ್ಣಯ ಹಯಣ್ಣಗಳ ಪುತ್ರ ಚಾಮಣ್ಣ ತಾನು ಪ್ರತಿಷ್ಟೆ ಮಾಡಿದ ಶ್ರೀ ಮಲ್ಲಿಕಾರ್ಜುನ ದೇವರಂಗ ಭೋಗಕ್ಕೆಂದು ತೋಟದ ಭಾಗ ದಾನ ನೀಡಿದ್ದನ್ನು ದಾಖಲಿಸಿದೆ.
ಕ್ರಿ.ಶ.೧೨೧೨ರ ಶಾಸನ೩೧ ಮಹಾಮಂಡಳೇಶ್ವರ ಕೊಟ್ಟೂರ ನಾಚಿದೇವನ ಮೊಮ್ಮಗ ಹರಿದೇವನ ಪುತ್ರನಾದ ಶ್ರೀ ಮನ್ಮಾಹಮಂಡಳೇಶ್ವರ ವೀರಜಗದಾಳ ಬಂಮ್ಮಿದೇವರನು ತಮ್ಮಾರಾಧ್ಯರರಸಿಯ ಬೀಡಿನ ಸೋಮಯಾಜ್ಯ ಹಿರಿಯಂಣ್ನಂಗಳ ಸನ್ನಿಧಿಯಲ್ಲಿ ಕಲಿದೇವರ ಅಂಗರಂಗ ಭೋಗಕ್ಕೆಂದು ನಂದಿಬೇಹೂರ ಸಮಸ್ತ ಭೂಮಿಯನ್ನು ಸರ್ವಾಬಾಧೆ ಪರಿಹಾರವಾಗಿ ನೀಡಲಾಗಿತ್ತೆಂದು ಉಲ್ಲೇಖಿಸಿದೆ. ಕ್ರಿ.ಶ.೧೨೨೮ರ ಶಾಸನವು ಇಮ್ಮಡಿ ನರಸಿಂಹನ ದಂಡನಾಯಕ ಬಮ್ಮಯ್ಯ ದಂಡನಾಯಕನು ಬಾಗಳಿಯ ಕಲಿದೇವರಿಗೆ ದಾನ ನೀಡಿದ್ದನು.
ಹೀಗಿರಲು ಕ್ರಿ.ಶ.೧೨೩೧ರ೩೨ ಶಾಸನ ಪ್ರಕಾರ ಮಹಾಜನರು ಬಾಗಳಿಯ ಬ್ರಾಹ್ಮಣರಿಗೆ ಗ್ರಾಮ ಸ್ವಾಮ್ಯದಿಂದ ವಿನಾಯಿತಿ ನೀಡುತ್ತಾರೆ. ಇದು ಶಾಸನದಲ್ಲಿ ಉಕ್ತವಾಗಿರುವುದು ಹೀಗಿದೆ: ‘ಗ್ರಾಮ ಸಮಯ ಯೀ ದಿನಂ ಮೊದಲಾಗಿ ಬ್ರಾಹ್ಮಣರಿಗೆ ಸಾಮ್ಯ ವಡಿಕೆಯಿಲ್ಲ ವ್ರಿತ್ತಿ ವ್ಯವಹಾರವಿಲ್ಲ ಇದನ್ನು ಮೀರಿದವ ಗ್ರಾಮ ದ್ರೋಹಿ ಎಂದು ಕ್ರಿ.ಶ.೧೨೩೨ರ೩೩ ಶಾಸನ ಬಗಳಿಯ ಐವತ್ತು ಮಹಾಜನರು ಬ್ರಹ್ಮಾನಂದದೇವನ ಶಿಷ್ಯನಾದ ಮನೋಹರದೇವರಿಗೆ ಮನೆ ಹಾಗೂ ಭೂಮಿದಾನ ನೀಡಿದರೆಂದು ಹೇಳುತ್ತದೆ. ಅಲ್ಲದೆ ವೀರನರಸಿಂಹ ಬಾಳ್ಗುಳಿಯ ಕಲಿದೇವರಿಗೆ ೪೪೨ ತಮ್ಮ ಗದ್ದೆ ಬಿಟ್ಟದ್ದನ್ನು ತಿಳಿಸುತ್ತದೆ. ಅದೇ ಶಾಸನದಲ್ಲಿ ಅಂಗಡಿ ಕಾಳಯ್ಯ ಎಂಬಾತ ತನ್ನ ಮಗಳು ಜಾತಿ ಸಂಕರ ಮಾಡಿದಾಗ ಬಾಳ್ಗುಳಿಯ ಐವತ್ತು ಮಹಾಜನರು ಮತ್ತು ಹೆಗ್ಗಡೆ ಮಲ್ಲಯ್ಯ ಗೋಪಯ್ಯನ ಸಮ್ಮುಖದಲ್ಲಿ ಕಲಿದೇವರಿಗೆ ದಂಡವಾಗಿ ಭೂದಾನ ನೀಡಿದ್ದನ್ನು ದಾಖಲಿಸಲಾಗಿದೆ. ಈ ಶಾಸನದಿಂದ ಜಾತಿ ಕಟ್ಟಳೆ ಹಾಗೂ ಮೀರಿದವರು ತೆರಬೇಕಾದ ದಂಡದ ಬಗ್ಗೆ ಮಾಹಿತಿ ದೊರೆತಿದೆ. ಮಿಗಿಲಾಗಿ ಅಗ್ರಹಾರದ ಆಡಳಿತ ನಿರ್ವಹಿಸುವಲ್ಲಿ ತೋರಿದ ಬೇಜವಾಬ್ದಾರಿಯಿಂದಾಗಿ ಬ್ರಾಹ್ಮಣರಿಗೆ ನೀಡಿದ ಅಧಿಕಾರವನ್ನು ಹಿಂತೆಗೆದುಕೊಂಡದ್ದು ಸ್ಪಷ್ಟವಾಗಿದೆ.
ಇಷ್ಟಾದರೂ ಕ್ರಿ.ಶ.೧೨೪೬ರ ಶಾಸನ೩೪ ಸದಾಶಿವ ದೇವರ ಅಂಗರಂಗಭೋಗಕ್ಕೆ ಬಾಗಳಿಯ ಮಹಾಜನರು ಗೋಪಣನ ಮಗ ಸದಾಶಿವ, ವಿಠಣ್ಣ, ನಾಚಣ್ಣ ಕೊಳಗದ ಚವುಡಯ್ಯ ಸೇರಿ ಭೂದಾನ ನೀಡಿದ್ದನ್ನು ಉಲ್ಲೇಖಿಸುತ್ತದೆ.
ಕೊನೆಯದಾಗಿ ಈ ಅಗ್ರಹಾರ ನಶಿಸಿದ ಬಗ್ಗೆಯೂ ಸ್ಥೂಲವಾಗಿ ಮಾಹಿತಿ ಇದೆ. ಕ್ರಿ.ಶ.೧೨೮೭ ಶಾಸನ೩೫ ಪ್ರಕಾರ, ಬಾಗಳಿಯ ಮಹಾಜನರು ಬಿದಿರಹಳ್ಳಿಯ ಸ್ವಾಮಿದೇವರಿಗೆ ತೋಟ ಗದ್ದೆ ನೀಡಿದರು.
ಕ್ರಿ.ಶ.೧೨೯೧ರ೩೬ ಶಾಸನದಲ್ಲಿ ಉಕ್ತವಾಗಿರುವಂತೆ ಬಾಗಳಿಯ ಮಹಾಜನರು ವಿಷ್ಣುಗೈಸರಿಗೆ ತೋಟ ದಾನ ಮಾಡಿದರು. ಕ್ರಿ.ಶ.೧೩೩೬ ಶಾಸನದಂತೆ ಮಹಾಜನರು ಭೂಮಿ ಮತ್ತು ಮನೆಯನ್ನು ಆತ್ಮಾರಾಮ ಸ್ವಾಮಿಗೆ ನೀಡಿದರು. ಜೊತೆಗೆ ವೀರನರಸಿಂಹನ ದಂಡನಾಯಕ ಚಾರ್ವಾಡಯ್ಯನು ಕಲಿದೇವರಿಗೆ ಭೂದಾನ ಮಾಡಿದ. ಅಲ್ಲದೆ ಐವತ್ತು ಮಹಾಜನರು ಮತ್ತು ಕುಮಾರ ಪಂಡಿತಯ್ಯ ಜೊತೆಗೂಡಿ ಅಪ್ಪರಸ, ಹಿರಿಯಣ್ಣ ಮತ್ತು ಜ್ಞಾನಿನಿಧಿಮಯ್ಯನಿಗೆ ಭೂದಾನ ನೀಡಿದರು.
ಒಟ್ಟಿನಲ್ಲಿ ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು ಹೊಯ್ಸಳರ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಹರಿಶ್ಚಂದ್ರ ದತ್ತಿ ಅಗ್ರಹಾರ-ಬಾಗಳಿ ಚಕ್ರವರ್ತಿಯ ಕೃಪೆಗೆ ಪಾತ್ರವಾಗಿತ್ತು. ಅಂದರೆ ಆತನ ಸಾಮಂತರು, ದಂಡನಾಯಕರು, ಅಧಿಕಾರಿಗಳು ಸರ್ವರೀತಿಯಲ್ಲೂ ಈ ಅಗ್ರಹಾರದ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಚಟುವಟಿಕೆ ಗಳಿಗೆ ಉತ್ತೇಜನ ನೀಡಿದ್ದರು. ವಿದ್ಯಾರ್ಥಿಗಳು, ಬ್ರಾಹ್ಮಣರು ಜ್ಞಾನಾರ್ಜನೆ ಮತ್ತು ದೇವತಾಕಾರ್ಯದಲ್ಲಿ ತೊಡಗಿದ್ದರು. ವಿವಿಧ ವರ್ಗದ ಜನ ಕಲಿದೇವರಿಗೆ ನಿಷ್ಟೆಯಿಂದಿದ್ದರು. ಆದರೆ ಸಮಾಜದ ಕಟ್ಟಳೆ ಮೀರಿ ನಡೆದಲ್ಲಿ ಅವರನ್ನು ಸಮಾಜದಿಂದ ಬಹಿಷ್ಕರಿಸುವ ನಿಯಮ ಇತ್ತೆಂದು ಗೊತ್ತಾಗುತ್ತದೆ. ವಿಜಯನಗರ ಸಾಮ್ರಾಜ್ಯ ಉದಯಿಸುವ ವೇಳೆಗೆ ಬಾಗಳಿ ಅಗ್ರಹಾರದ ಅಸ್ತಿತ್ವ ಉಡುಗಿದ್ದರೂ ಕಲಿದೇವರ ಆರಾಧನೆ ಯಾವುದೇ ಅಡತಡೆಗಳಿಲ್ಲದೆ ಮುಂದುವರಿದಿತ್ತೆಂಬುದು ಮನವರಿಕೆಯಾಗುತ್ತದೆ.


ಆಧಾರಸೂಚಿ ಮತ್ತು ಟಿಪ್ಪಣಿಗಳು
೧.         ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-೧, ಬಳ್ಳಾರಿ ಜಿಲ್ಲೆ, ಹರಪನಹಳ್ಳಿ ೯೨.
೨.         ಅದೇ., ಹರಪನಹಳ್ಳಿ ೯೪.
೩.         ಅದೇ., ಹರಪನಹಳ್ಳಿ ೧೩೦.
೪.         ಅದೇ., ಹರಪನಹಳ್ಳಿ ೧೨೬.
೫.         ಅದೇ., ಹರಪನಹಳ್ಳಿ ೯೬.
೬.         ಅದೇ., ಹರಪನಹಳ್ಳಿ ೧೩೬.
೭.         ಅದೇ., ಹರಪನಹಳ್ಳಿ ೯೯.
೮.         ಅದೇ., ಹರಪನಹಳ್ಳಿ ೧೩೨.
೯.         ಅದೇ., ಹರಪನಹಳ್ಳಿ ೧೦೦.
೧೦.      ಅದೇ., ಹರಪನಹಳ್ಳಿ ೧೦೨.
೧೧.      ಅದೇ., ಹರಪನಹಳ್ಳಿ ೧೦೩.
೧೨.      ಅದೇ., ಹರಪನಹಳ್ಳಿ ೧೦೫.
೧೩.      ಅದೇ., ಹರಪನಹಳ್ಳಿ ೧೮೦.
೧೪.      ಅದೇ., ಹರಪನಹಳ್ಳಿ ೧೮೧.
೧೫.      ಅದೇ., ಹರಪನಹಳ್ಳಿ ೧೨೭.
೧೬.      ಅದೇ., ಹರಪನಹಳ್ಳಿ ೧೦೬.
೧೭.      ಅದೇ., ಹರಪನಹಳ್ಳಿ ೧೦೭.
೧೮.      ಅದೇ., ಹರಪನಹಳ್ಳಿ ೧೭೯.
೧೯.      ಅದೇ., ಹರಪನಹಳ್ಳಿ ೧೦೮.
೨೦.      ಅದೇ., ಹರಪನಹಳ್ಳಿ ೧೧೦.
೨೧.      ಅದೇ., ಹರಪನಹಳ್ಳಿ ೧೧೨.
೨೨.      ಅದೇ., ಹರಪನಹಳ್ಳಿ ೧೧೪.
೨೩.      ಅದೇ., ಹರಪನಹಳ್ಳಿ ೧೧೫.
೨೪.      ಅದೇ., ಹರಪನಹಳ್ಳಿ ೧೮೪.
೨೫.      ಅದೇ., ಹರಪನಹಳ್ಳಿ ೯೨.
೨೬.      ಅದೇ., ಹರಪನಹಳ್ಳಿ ೧೦೯.
೨೭.      ಅದೇ., ಹರಪನಹಳ್ಳಿ೧೨೮.
೨೮.      ಅದೇ., ಹರಪನಹಳ್ಳಿ ೧೮೩.
೨೯.      ಅದೇ., ಹರಪನಹಳ್ಳಿ ೧೧೬.
೩೦.      ಅದೇ., ಹರಪನಹಳ್ಳಿ ೧೨೯.
೩೧.      ಅದೇ., ಹರಪನಹಳ್ಳಿ ೧೧೭.
೩೨.      ಅದೇ., ಹರಪನಹಳ್ಳಿ ೧೩೫.
೩೩.      ಅದೇ., ಹರಪನಹಳಿ ೧೩೫.
೩೪.      ಅದೇ., ಹರಪನಹಳ್ಳಿ ೧೩೮.
೩೫.      ಅದೇ., ಹರಪನಹಳ್ಳಿ ೧೩೩.
೩೬.      ಅದೇ., ಹರಪನಹಳ್ಳಿ ೧೩೩.



No comments:

Post a Comment