ಕಾಳಾಮುಖ
ಪರಂಪರೆಯ ಸೂಡಿಯ ಕಳಕೇಶ್ವರ ಯತಿಗಳು
ಡಾ. ಮಲ್ಲಿಕಾರ್ಜುನ ಕುಂಬಾರ
ವಚನ’, ರೋಣ ತಾಲ್ಲೂಕು,
ಗದಗ ಜಿಲ್ಲೆ, ರಾಜೂರ-೫೮೨೨೩೦.
ಶೈವ ಯತಿಗಳ ಕಾಳಾಮುಖ ಸಂಪ್ರದಾಯವು ೧೧, ೧೨ ಹಾಗೂ ೧೩ನೆಯ ಶತಮಾನದ ಪೂರ್ವಾರ್ಧದವರೆಗೆ
ಕನ್ನಡ ನಾಡಿನಲ್ಲಿ ನೆಲೆಸಿತ್ತು. ಅವರು ನಾಡಿನ ತುಂಬೆಲ್ಲಾ ಪ್ರಭಾವಶಾಲಿಗಳಾಗಿದ್ದರು. ದುರ್ದೈವದ
ಸಂಗತಿ ಎಂದರೆ ಅವರ ನಂಬಿಕೆ ಹಾಗೂ ಮತಾಚಾರಗಳನ್ನು ಕುರಿತು ಶಾಸನಗಳಿಂದ ಹೆಚ್ಚಿನ ಹೆಚ್ಚಿನದೇನೂ ತಿಳಿದುಬರುವುದಿಲ್ಲ.
ಕಾಳಾಮುಖ ಸಂಪ್ರದಾಯದಲ್ಲಿ ಶಕ್ತಿಪರಿಷೆ ಹಾಗೂ ಸಿಂಹಪರಿಷೆಗಳು ಎಂಬ ಎರಡು ಮುಖ್ಯ ಶಾಖೆಗಳಿದ್ದವು.
ಇದರಲ್ಲಿ ಸಿಂಹಪರಿಷೆ ಶಾಖೆಯು ಆಂಧ್ರ-ಕರ್ನಾಟಕ ಪ್ರಾಂತಗಳ ವಿಸ್ತೃತ ಭೂಭಾಗದಲ್ಲಿ ಕಂಡುಬಂದರೆ,
ಶಕ್ತಿಪರಿಷೆಯು ಹೆಚ್ಚಾಗಿ ಧಾರವಾಡ, ಮೈಸೂರು ಮತ್ತು ಶಿವಮೊಗ್ಗ
ಜಿಲ್ಲೆಗಳಿಗೆ ಸೀಮಿತಗೊಂಡಿದ್ದಿತು.೧
ಕಾಳಾಮುಖರೆಂದರೆ ಯಾರು? ಶಾಸನಗಳು
ಇವರನ್ನು ಪರಮಾಪ್ತಗಮ, ಅಸಿತವಕ್ತ್ರ, ಮಹಾಕಾಲ ಎಂದು ಕರೆದಿವೆ. ಶಿವನ ೫ ಮುಖಗಳು ಕಲೆಗೆ
ಸಂಬಂಧಿಸಿವೆಯೇ ಅವು ಕಲಾಮುಖ, ಈ ಕಲಾಮುಖಗಳನ್ನು ಅನುಷ್ಠಾನ ಮಾಡುವವರು ಕಾಳಾಮುಖರು
ಎಂದು ಹೆಸರು. ಅವುಗಳೆಂದರೆ ಪರಾಶಕ್ತಿ, ಆದಿಶಕ್ತಿ, ಜ್ಞಾನಶಕ್ತಿ, ಇಚ್ಚಾಶಕ್ತಿ ಮತ್ತು ಕ್ರಿಯಾಶಕ್ತಿಗಳು. ಈ ತತ್ವಗಳನ್ನೇ
ಎತ್ತಿಹಿಡಿದು ಲಿಂಗಪೂಜೆಯನ್ನು ಮುಂದೆ ತಂದ ಖ್ಯಾತಿ ಕಾಳಾಮುಖ ಮತ್ತು ಪಾಶುಪತರಿಗೆ ಸಲ್ಲುತ್ತದೆ.
ಇವರಿಂದಲೇ ಲಿಂಗವೆಂಬುದು ಶಿವನ ರೂಪ, ಜ್ಯೋತಿ ಸ್ತಂಭ ಎಂಬ ಅಭಿಪ್ರಾಯ ಎತ್ತಿಹಿಡಿಯಲ್ಪಟ್ಟಿತು.
ಅವರ ಪ್ರತಿಯೊಂದು ಶಾಸನಗಳು “ನಮಸ್ತುಂಗ ಶಿರಶ್ಚುಂಬಿ ಚಂದ್ರ ಚಾಮರ ಚಾರವೇ ತ್ರೈಲೋಕ್ಯ ನಗರಾರಂಭ ಮೂಲ
ಸ್ತಂಭಾಯ ಶಂಭುವೇ ||’’ ಎಂದು ಆರಂಭವಾಗುತ್ತದೆ. ಈ ಮತವು ಹೇಗೆ ಭೂಮಿಗಿಳಿದು ಬಂದಿತು ಎಂಬುದರ ಬಗ್ಗೆ ‘ಪಂಪಾಮಹಾತ್ಮೆ’ ಎಂಬ ಗ್ರಂಥದಲ್ಲಿ ಬಹಳಷ್ಟು ವಿವರಗಳಿವೆ.೨
“ಕಾಪಾಲಿಕರು ಸಂಪೂರ್ಣವಾಗಿ ವಾಮಾಚಾರಿಗಳ ಪಂಥವಾದರೆ, ಕಾಳಾಮುಖರದ್ದು ಶುದ್ಧಸಾತ್ವಿಕಾಚರಣೆ
ಪಂಥ” ಎಂದು ಸಂಶೋಧಕರಾದ ಡಾ. ಎಂ. ಚಿದಾನಂದಮೂರ್ತಿ
ಅಭಿಪ್ರಾಯಪಡುತ್ತಾರೆ. ಶಿವ ಹಾಗೂ ಶಕ್ತಿ, ಭೈರವ ಮತ್ತು ಮಹಾಕಾಳಿಯ ಅವತಾರಗಳ ನಿಷ್ಠಾವಂತ ಆರಾಧಕರು. ಹಾಗೂ ಉದ್ದಾಮ
ಪಂಡಿತರು ಇವರ ಪೂಜಾವಿಧಾನ ಮತ್ತು ಧಾರ್ಮಿಕ ಜೀವನವು ಬಹಳಷ್ಟು ಕಠೋರವಾದದ್ದರಿಂದ ಸಾಮಾನ್ಯ ಜನರಿಗೆ
ಅವು ಹಿಡಿಸುವುದಿಲ್ಲ. ಇಂದ್ರಿಯ ನಿಗ್ರಹವನ್ನು ಸಾಧಿಸಿದವನಿಗೆ ಮಾತ್ರ ಇವರ ಮಾರ್ಗ ಹಿಡಿಸುತ್ತದೆ.
ಪಾಶುಪಾತರು ಹಣೆಗೆ ಬಿಳಿಗೆರೆಯ ಭಸ್ಮವನ್ನು ಧರಿಸಿದರೆ, ಅದಕ್ಕೆ ವಿರುದ್ಧವಾಗಿ ಕಾಳಾಮುಖರು ಭೈರವನ ಸಂಕೇತವಾದ ಕಪ್ಪು ಗೆರೆಗಳನ್ನು
ಹಣೆಗೆ ಬಳಿದುಕೊಳ್ಳುತ್ತಿದ್ದರು.೩ ಶಾಸನಗಳು ಇವರನ್ನು ‘ತಪೋಧನ’ ಎಂದು ಕರೆದಿವೆ.
ಗದಗ ಜಿಲ್ಲೆಯ ಕಾಳಾಮುಖರ ಪ್ರಮುಖ ಸ್ಥಾನವಾಗಿದ್ದ ರೋಣ ತಾಲ್ಲೂಕಿನ ಪರ್ವತಾವಳಿಯಲ್ಲಿ
ಬರುವ ‘ಸೂಡಿ’ ಎಂಬ ಊರಿನ ಶಾಸನಗಳಲ್ಲಿ ಕಳಕೇಶ್ವರ ಯತಿಯ
ಹೆಸರು ಬರುತ್ತದೆ. ಕಳೇಶ್ವರದೇವ, ಕಳೇಶ್ವರ ಬೃತಿಪತಿ, ಕಳೇಶ್ವರ ಬೃತಿರಾಜ, ಕಳೇಶ್ವರ ಬೃತೀಂದ್ರ, ಕಳೇಶ್ವರರಾರ್ಯ್ಯ, ಕಳೇಶ್ವರಾಚಾರ‍್ಯ ಹಾಗೂ ಕಳೇಶ್ವರ ಸೈದ್ದಾಂತಿ,೪ ಎಂಬ ಹಲವಾರು ಹೆಸರುಗಳಿಂದ ಆ ಶಾಸನಗಳು ಇವರನ್ನು ಮನದುಂಬಿ ವರ್ಣಿಸುತ್ತವೆ.
೧೨ನೆಯ ಶತಮಾನ ಸಿಂದ ಅರಸರ ರಾಜಧಾನಿ ಯರಂಬರವಿಗೆ (ಯಲಬುರ್ಗಿ) ಮೂಲಸ್ಥಾನ
ಶಿಂಗೇಶ್ವರ, ರಾಜೇಶ್ವರ, ಚೌಡೇಶ್ವರ, ವಿಕ್ರಮೇಶ್ವರ ದೇಗುಲಗಳ ಮಠದ ಆಚಾರ‍್ಯತ್ವವನ್ನು ಈ ಯತಿಗಳು ಹೊಂದಿದ್ದರು. ಇವರು ಮಹಾಮಂಡಳೇಶ್ವರ
ಚಾವುಂಡರಾಯನಿಗೆ ರಾಜಗುರುಗಳಾಗಿದ್ದರು. ಸೂಂಡಿಯ ವ್ಯಾಪಾರಸ್ಥರ ದೈವವಾದ ನಗರೇಶ್ವರ ದೇವಾಲಯದ ಕಾಳಾಮುಖರಲ್ಲಿ ಆಚಾರ‍್ಯರಾಗಿ ಪ್ರಖ್ಯಾತರಾಗಿದ್ದರು.೫ ಸಿಂದಾನ್ವಯ ಕಾಳಾಮುಖರಲ್ಲಿನ ಸಿಂಹ ಪರಿಷೆಯ
ಕರ್ಣಾಟಕ ಶಾಖೆಯ ಶಾಸನಗಳು ಇವರ ಯತಿ ಪರಂಪರೆಯನ್ನು ಮಳಿಯಾಳಪಂಡಿತ> ಜ್ಞಾನೇಶ್ವರ>ಸೋಮೇಶ್ವರ>ಶಾಂತರಾಶಿ>ಕಳೇಶ್ವರ,೬ ಎಂದು ಹೇಳುತ್ತದೆ. ಸಿಂದ ಅರಸರ ಗುರುವಾದ ಇವರು ಶಾಂತಿಯನ್ನು ಹೊಂದಿ ಶೈವ
ಸಿದ್ದಾಂತವನ್ನು ಸ್ವೀಕರಿಸಿ, ಪಾಂಡಿತ್ಯ, ಸದ್ಗುಣಗಳಿಗೆ ಹೆಸರಾದ ಲೋಕಗುರುವಾಗಿದ್ದರು. ತಮ್ಮ ಪಾಂಡಿತ್ಯ ಹಿರಿಮೆಯಿಂದಾಗಿ ಇವರು ‘ಸಿದ್ದಾಂತಿ’ ಎಂದು ಕರೆಯಲ್ಪಡುತ್ತಿದ್ದರು.
ಕುಕನೂರಿನ ಮಹಾಮಾಯೆ ದೇವಾಲಯದ ಶಾಸನದಲ್ಲಿ ‘ಶ್ರೀಮನ್ಮಹಾಮಂಡಳೇಶ್ವರ ಚಾವುಂಡ
ನಗರೇಶ್ವರರಿಗೆ ಗುರುಗಳು ವಿಖ್ಯಾತಿಯಂ ತಾಳಿದ್ದರ್ || ಸ್ಥಿರಮತಿ ಸೂಂಡಿಯ ನಗರೇಶ್ವರ ಕಾಳಾಮುಖನ್ವಯ
ಮಾನ್ಯಾವಳಿಯೊಳು ದೊರೆ ವೆತ್ತ ಮುನಿಶ್ವರರೊಳ್ದೆರೆವೆತ್ತಂ ಶ್ರೀಕಳೇಶ್ವರ ಬೃತಿರಾಜಂ ||’’೭ ಎಂದು ಹೊಗಳಲಾಗಿದೆ. ಇವರು ಅರಿಯದ ವಿದ್ಯೆಯೇ ಇರಲಿಲ್ಲ “ಅಜ್ಞಾಧರನೆನೆ ಧರೆ ಮಂತ್ರಜ್ಞಂ ತ್ರೈಕಾಲದರ್ಶಿಯೆನೆ
ಧಾರಣೆ ದೈವಜ್ಞಂ ಶೈವಾಗಮ ಸರ್ಬ್ಬಜ್ಞಂ ಶ್ರೀರಾಜ ಗುರು ಕಳೇಶ್ವರದೇವಂ || ತಜ್ಞರ್ಪ್ಪರೀಕ್ಷಿಸಲು ಶಬ್ದಜ್ಞಂ ಶಾಸ್ತ್ರಜ್ಞಂ
ನಖಿಳತರ್ಕಜ್ಞಂ ಕಾವ್ಯಜ್ಞಂ ದೈವಜ್ಞಂ ಸಬ್ಬಜ್ಞಂ ಶ್ರೀ ರಾಜಗುರು ಕಳೇಶ್ವರದೇವಂ’’೮ ಎಂದು ಹೊಗಳಲಾಗಿದೆ. ಇದರಲ್ಲಿ ಬಹಳಷ್ಟು
ಸಲ ಶೈವಾಗಮ ಸರ್ವಜ್ಞ ಶ್ರೀ ರಾಜಗುರು ಕಳೇಶ್ವರದೇವಂ, ಎಂದು ಬಣ್ಣಿಸಲಾಗಿದೆ.
ಕರ್ನಾಟಕ ತಾಂತ್ರಿಕ ಪಂಥದ ಶೋಧನೆಗೆ ಕುಕ್ಕನೂರು ಒಂದು ಕೇಂದ್ರಸ್ಥಾನ.
ಇಲ್ಲಿರುವ ಜೇಷ್ಠಾದೇವಿಗೆ ಅಗ್ರಹಾರದ ಬ್ರಾಹ್ಮಣರು ಭಯದಿಂದ ಗಡಗಡ ನಡುಗುತ್ತಿದ್ದರು. ಈಕೆ ಮಹಾ ಪ್ರಳಯಾಂಬೆ, “ಆಕೆಯ ಗಸಣೆಯೇ ಬೇಡವೆಂದು ದ್ವಿಜರು ಅಳ್ಕುತಿರ್ಪರು’’ ಎಂದು ಶಾಸನಗಳು ಹೇಳುತ್ತವೆ.
ಕ್ರಿ.ಶ.೧೫೬೧ರ ಶಾಸನವು ಜೇಷ್ಠಾದೇವಿಯ ಮಹಾಲಕ್ಷ್ಮಿಯಾಗಿ ನಂತರ ಮಹಾಮಾಯೆಯಾದಳೆಂದು ಹೇಳುತ್ತದೆ. ಇಂತಹ
ಉಗ್ರದೇವತೆಗೆ ಸೂಡಿಯ ಕಾಳಾಮುಖ ಕಳಕೇಶ್ವರ ಯತಿಗಳು ಉಪಾಸಕರಾಗಿದ್ದರು. ಕುಕನೂರಿನ ಶಾಸನವು ಮುಂದುವರೆದು
ಕಳಚೂರಿ ಅರಸ ಸಂಕಮದೇವನು ಮೊದೆಗನೂರು ನೆಲೆವೀಡಿನಲ್ಲಿದ್ದನು. ಆಗ ಇವನ ದಂಡನಾಯಕನಾದ ‘ದನ್ನುಗಿ’ ಕುಕನೂರ ಅಗ್ರಹಾರದ ದೊರೆ, ಈತನ ಸಂಕಲ್ಪದಂತೆ ಎಲ್ಲವೂ
ಈಡೇರಿದಾಗ ರಾಜಗುರು ಕಳಕೇಶ್ವರರ ಪಾದ ತೊಳೆದು ಈ ಜೇಷ್ಠಾದೇವಿಗೆ ದಾನ ಕೊಡುತ್ತಾನೆ. ಅಲ್ಲಿನ ತಪೋಧನರ
ಆಹಾರಕ್ಕೂ ಈ ದಾನ ಸಲ್ಲುತ್ತದೆ. ಹೀಗೆ ಅದ್ಭುತವಾದ ಮಾಹಿತಿಯನ್ನು ಒದಗಿಸುವ ತಾಂತ್ರಿಕ ಪಂಥದ ಜೊತೆಗೆ
ಕಾಳಾಮುಖಕ್ಕಿದ್ದ ಸಂಬಂಧವನ್ನು ತಿಳಿಸುವ ಈ ಕುಕನೂರ ಶಾಸನವು (ಕ್ರಿ.ಶ.೧೧೭೮)ವು ಅಧ್ಯಯನಕ್ಕೆ ಅಮೂಲ್ಯವಾದ
ಆಕರವಾಗಿದೆ.೯ ಕಳಕೇಶ್ವರ ಯತಿಗಳು ಈ ಭಾಗದಲ್ಲಿ ಸಂಚರಿಸಿರಬಹುದು. ಕಾಳಾಮುಖರ
ತಾಣವಾದ ಸೂಡಿ ಪಕ್ಕದಲ್ಲಿ ಈ ಪರಂಪರೆಯ ಒಂದು ಭಾಗವಾದ ಇಟ್ಟಗಿ ಸಂತತಿಯಿಂದಲೇ ‘ಇಟಗಿ’ ಎಂಬ ಊರಿನ ಹೆಸರು ಬಂದಿರಬಹುದಾಗಿದೆ.
ಈವರೆಗೆ ಸೂಡಿಯಲ್ಲಿ ದೊರೆತ ೯ ಶಾಸನಗಳಲ್ಲಿ ಕಳಕೇಶ್ವರ ಯತಿಗಳಂತೆ
ಸೋಮೇಶ್ವರ ಪಂಡಿತರು, ಕಲ್ಯಾಣಶಕ್ತಿ, ಶಿವಮೂರ್ತಿ ಶಿವಾಚಾರ‍್ಯರಂತಹ
ಪಂಡಿತರಿದ್ದರೆಂದು ಉಲ್ಲೇಖಿತರಾಗಿದ್ದಾರೆ. ಕಳಕೇಶ್ವರರಂತೆ ಸೂಡಿ ಸೋಮೇಶ್ವರರು ಕೂಡಾ ಸೂಡಿಯ ನಾಗೇಶ್ವರ, ಅಚಲೇಶ್ವರ, ಪಂಚಲಿಂಗೇಶ್ವರ ದೇವಸ್ಥಾನಗಳ
ಸ್ಥಾನಾಚಾರ‍್ಯರಾಗಿದ್ದರು. ಇವರು ಕಳಕೇಶ್ವರ ಪ್ರಕಾಂಡ ಪಂಡಿತರಾಗಿದ್ದರು. ಇವರು ಕಳಕೇಶ್ವರ ಯತಿಗಳಂತೆ
ಪ್ರಕಾಂಡ ಪಂಡಿತರಾಗಿದ್ದರು. ಇವರನ್ನು ಎರಡನೆ ಶಿವನೆಂದು ಶಾಸನಗಳಲ್ಲಿ ವರ್ಣಿಸಲಾಗಿದೆ. ಅದೇ ರೀತಿ
ಕಲ್ಯಾಣಶಕ್ತಿಯನ್ನು ಕೂಡಾ ಹೊಗಳಲಾಗಿದೆ. ಇದೆಲ್ಲವನ್ನು ಗಮನಿಸಿದಾಗ ಅಂದಿನ ಸೂಡಿ ಪಂಡಿತರ ವಾಸಸ್ಥಾನವಾಗಿತ್ತೆಂದು
ಇದರಿಂದ ಸ್ಪಷ್ಟವಾಗುತ್ತದೆ.
ಆಧಾರಸೂಚಿ ಮತ್ತು ಟಿಪ್ಪಣಿಗಳು
೧. ಕಾಪಾಲಿಕರು
ಮತ್ತು ಕಾಳಾಮುಖರು - ಕಣ್ಮರೆಯಾದ ಎರಡು ಶೈವ ಸಂಪ್ರದಾಯಗಳು, ಮೂಲ: ಡಿ.ಎನ್. ಲಾರೆಂಜೆನ್, ಅನು: ವಿರೂಪಾಕ್ಷ ಕುಲಕರ್ಣಿ, ಕನ್ನಡ ಪುಸ್ತಕ ಪ್ರಾಧಿಕಾರ, ೨೦೦೫, ಪುಟ ೧೩೧.
೨. ಕರ್ನಾಟಕದಲ್ಲಿ
ಲಾಕುಳ ಶೈವ ಜಕ್ಕಣಾಚಾರ‍್ಯರು, ಡಾ. ವಸುಂಧರಾ ಫಿಲಿಯೋಜಾ, ಪುಟ ೧೭, ೧೯, ೨೩.
೩. ಕಾಳಾಮುಖ
ದರ್ಶನ, ಎಸ್.ಎಸ್. ಹಿರೇಮಠ, ಸಮತಾ ಪ್ರಕಾಶನ ಹರಪನಹಳ್ಳಿ, ೨೦೦೪, ಪುಟ ೩೩.
೪. ಕನ್ನಡ
ವಿಶ್ವವಿದ್ಯಾಲಯ ಶಾಸನ ಸಂಪುಟ ೨, ಕೊಪ್ಪಳ ಜಿಲ್ಲೆ, ೧೯೯೯, ಪುಟ ೪೦೫.
೫. ಕಾಳಾಮುಖ
ದರ್ಶನ, ಎಸ್.ಎಸ್. ಹಿರೇಮಠ, ಸಮತಾ ಪ್ರಕಾಶನ, ಹರಪನಹಳ್ಳಿ, ಪುಟ ೭೨.
೬. ಕಾಪಾಲಿಕರು
ಮತ್ತು ಕಾಳಾಮುಖರು, ಕಣ್ಮರೆಯಾದ ಎರಡು ಶೈವ ಸಂಪ್ರದಾಯಗಳು, ಮೂಲ: ಡಿ.ಎನ್. ಲಾರೆಂಜೆನ್, ಅನು: ವಿರೂಪಾಕ್ಷ ಕುಲಕರ್ಣಿ, ಕನ್ನಡ ಪುಸ್ತಕ ಪ್ರಾಧಿಕಾರ, ೨೦೦೫, ಪುಟ ೧೯೩.
೭. ಕನ್ನಡ
ವಿಶ್ವವಿದ್ಯಾಲಯ ಶಾಸನ ಸಂಪುಟ ೨, ಕೊಪ್ಪಳ ಜಿಲ್ಲೆ, ೧೯೯೯, ಯಲಬುರ್ಗಿ ತಾಲ್ಲೂಕು, ಕುಕನೂರು ಶಾಸನ, ೫೨.
೮. ಅದೇ
ಶಾಸನ.
೯. ಕಾಳಾಮುಖ
ದರ್ಶನ, ಎಸ್.ಎಸ್. ಹಿರೇಮಠ ಪುಟ ೭೨-೭೩.
‘
No comments:
Post a Comment