ತುಮಕೂರು
ಜಿಲ್ಲೆ ತಿಪಟೂರು ತಾಲ್ಲೂಕಿನ ಹಾಲ್ಕುರಿಕೆ ಗ್ರಾಮದ ಸದಾಶಿವರಾಯನ ಅಪ್ರಕಟಿತ ಶಿಲಾಶಾಸನ
# ೬೫ [೧ ಮಹಡಿ], ೩ ನೆಯ ಅಡ್ಡರಸ್ತೆ,
ಶಿಕ್ಷಕರ ಬಡಾವಣೆ, ೧ ನೆಯ ಹಂತ, ಜೆ.ಪಿ.ನಗರ
ಅಂಚೆ,
ಬೆಂಗಳೂರು-೫೬೦೦೭೮
ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಹಾಲ್ಕುರಿಕೆ
ಗ್ರಾಮದ ವೀರೇಶ್ವರ ದೇವಾಲಯದ ಮುಂದೆ ಇದ್ದು ಪ್ರಕೃತ ಪ್ರಕಟವಾಗುತ್ತಿರುವ ಶಿಲಾಶಾಸನವು ನಾಲ್ಕು
ಅಡಿ ಉದ್ದ, ಮೂರು ಅಡಿ ಅಗಲದ ಪ್ರಮಾಣದ್ದಾಗಿದ್ದು ನಮ್ಮ ಗಮನಕ್ಕೆ ಬಂದಂತೆ ಇದುವರೆಗೂ ಪ್ರಕಟವಾಗಿಲ್ಲ. ಈಗ
ಪ್ರಕಟವಾಗುತ್ತಿರುವ ಶಾಸನಪಾಠವು ಶ್ರೀ ಯುತ ಎಂ. ಹನುಮಂತರಾಯರು ಸಿದ್ಧಪಡಿಸಿಟ್ಟುಕೊಂಡಿದ್ದ,
ಅವರದೇ ಸ್ವಹಸ್ತಾಕ್ಷರ ಪ್ರತಿಯನ್ನು ಅವಲಂಬಿಸಿದೆ. ಇದನ್ನು ಹನುಮಂತರಾಯರು
ಕ್ರಿ.ಶ. ೧೯೪೫ ರ ಸುಮಾರಿನಲ್ಲಿ ಸ್ವತಃ ಕ್ಷೇತ್ರಕಾರ‍್ಯಕ್ಕೆ ತೆರಳಿ ಸಿದ್ಧಪಡಿಸಿ ರುವುದಾಗಿ
ತಿಳಿದುಬರುತ್ತದೆ. ಇದರಲ್ಲಿ ಶಾಸನಪಾಠದ ರೋಮನ್ ಲಿಪ್ಯಂತರ ಮತ್ತು ಕಿರಿದಾದ ಅಸಮಗ್ರ ಆಂಗ್ಲ
ಅನುವಾದ ಹಾಗೂ ಅಸಮಗ್ರ ಕಿರು ವಿಶ್ಲೇಷಣೆಯೂ ಇದೆ. ಎಂ. ಹನುಮಂತರಾಯರು ಮೈಸೂರು ಪುರಾತತ್ತ್ವ
ಇಲಾಖೆಯಲ್ಲಿ ಶಾಸನ ತಜ್ಞರಾಗಿ ನಂತರ ಉಪ ನಿರ್ದೇಶಕರಾಗಿ ಕರ್ತವ್ಯ ನಿರ‍್ವಹಿಸಿ ನಿವೃತ್ತಿಯ ನಂತರ
ಮೈಸೂರು ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಯೋಜನೆಯಾದ ಎಪಿಗ್ರಾಫಿಂii ಕರ್ನಾಟಿಕ ಪರಿಷ್ಕೃತ ೧ ರಿಂದ ೮
ವರೆಗಿನ ಶಾಸನ ಸಂಪುಟಗಳ ಸಂಬಂಧದಲ್ಲಿ ಉಪಶಾಸನತಜ್ಞರಾಗಿ ಸೇವೆಸಲ್ಲಿಸಿದರು (೩೦-೧೧-೧೯೮೦ ರ ವರೆಗೆ). ಹನುಮಂತರಾಯರು ನಿಧನರಾಗುವ ಮೊದಲು
ತಮ್ಮಲ್ಲಿದ್ದ ಕೆಲವು ಶಾಸನಪಾಠಗಳನ್ನು ಎಪಿಗ್ರಾಫಿಂii ಕರ್ನಾಟಿಕ
ಪರಿಷ್ಕೃತ ಸಂಪುಟಗಳ ಯೋಜನೆಯಲ್ಲಿಯೇ ಶಾಸನ ತಜ್ಞರಾಗಿ ಕಾರ‍್ಯನಿರ‍್ವಹಿಸಿ ಈಗ ನಿವೃತ್ತರಾಗಿರುವ
ಎಚ್. ಎಂ. ನಾಗರಾಜರಾಯರಿಗೆ ಕೊಟ್ಟರು. ಈ ಸಂಗ್ರಹದಲ್ಲಿದ್ದ ಪ್ರಕೃತ ಶಾಸನ ಪಾಠವನ್ನೊಳಕೊಂಡ ಎಂ.
ಹನುಮಂತರಾಯರ ಸ್ವಹಸ್ತಾಕ್ಷರ ಪ್ರತಿಯನ್ನು ಎಚ್. ಎಂ. ನಾಗರಾಜ ರಾಯರು ಪ್ರಕೃತ ಲೇಖಕನಿಗೆ
ಪ್ರಕಟನೆಗಾಗಿ ವಿಶ್ವಾಸದಿಂದ ಕೊಟ್ಟಿರುತ್ತಾರೆ. ಇದಕ್ಕಾಗಿ ನಾಗರಾಜರಾಯರಿಗೆ ನಮ್ಮ
ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಶಾಸನ ಪಾಠವನ್ನು ಹಸ್ತಪ್ರತಿಯಲ್ಲಿರುವಂತೆಯೇ
ದಾಖಲಿಸಲಾಗಿದ್ದು ಹನುಮಂತರಾಯರು ಬರೆದಿರುವ ವಿವರಣೆಗಳನ್ನು ಅಗತ್ಯವಿರುವೆಡೆ ಮಾತ್ರ ಯಥೋಚಿತವಾಗಿ
ಬಳಸಿಕೊಳ್ಳಲಾಗಿದೆ. ಶಾಸನಪಾಠದೊಳಗಿನ ಚಿಹ್ನೆಗಳು ಹಾಗೂ ಕೆಲವು ಅಪಲಿಖಿತ ಶಬ್ದಗಳ ಶುದ್ಧರೂಪಗಳನ್ನು
ಮತ್ತು ಕೆಲವು ಶಬ್ದಗಳ ಅರ್ಥಗಳನ್ನು, ವಿವರಣೆಯನ್ನು ಶಾಸನಪಾಠದ
ಕೊನೆಯಲ್ಲಿ ನೀಡಿರುತ್ತೇವೆ. ಈ ವಿವರಗಳು ಮಾತ್ರ ಪ್ರಕೃತ ಲೇಖಕನ ಸೇರ್ಪಡೆಯಾಗಿವೆ. ಪ್ರಕೃತ
ಶಾಸನೋಕ್ತ ವಿಷಯದ ಬಗೆಗೆ ಬೇರೆಡೆ ಮಾಹಿತಿ ದೊರೆಯುತ್ತಿರುವ ಕಾರಣ ಪ್ರಕೃತ ಲೇಖನದಲ್ಲಿ ಹೆಚ್ಚಿನ
ವಿಶ್ಲೇಷಣೆಗೆ ಕೈಹಾಕದೆ ಅಗತ್ಯವಿರುವ ವಿವರಗಳನ್ನು ಮಾತ್ರವೇ ನೀಡಲಾಗಿದೆ. ಶಾಸನಪಾಠದಲ್ಲಿ ಬಳಸಿರುವ ಚಿಹ್ನೆಗಳ ವಿವರ ಇಂತಿದೆ.
(
) ಅಧಿಕ ಪಾಠಕ್ಕೆ
ಬಳಸಲಾದ ಚಿಹ್ನೆ
{ } ಅನಗತ್ಯ
ಪಾಠಕ್ಕೆ ಬಳಸಲಾದ ಚಿಹ್ನೆ
[|] ವಾಕ್ಯ ಪೂರ್ಣವಾದ ನಂತರ ಬಳಸಿರುವ ಚಿಹ್ನೆ
ಶಾಸನದ
ಕಾಲ: ಈ ಶಾಸನದಲ್ಲಿ ಕಾಲವನ್ನು ಶಕ ೧೪೬೮ ವಿಶ್ವಾವಸು ಸಂವತ್ಸರ ಆಷಾಢ ಶುದ್ಧ
೧ ಎಂದು ಹೇಳಿದ್ದು ವಿಜಯನಗರ ಸಾಮ್ರಾಜ್ಯದ [=ಇದರ ಹೆಸರನ್ನು ಕರ್ಣಾಟಕ ಸಾಮ್ರಾಜ್ಯ ಎಂದು
ಬಳಸುವುದೇ ಸೂಕ್ತ] ದೊರೆ ಸದಾಶಿವರಾಯನ (ಕ್ರಿ.ಶ. ೧೫೪೨-೧೫೭೦) ಆಳ್ವಿಕೆಯ ಕಾಲಕ್ಕೆ
ಸೇರಿದ್ದಾಗಿದೆ. ಆದರೆ ಶಕ ೧೪೬೮ ರಲ್ಲಿ ವಿಶ್ವಾವಸು ಸಂವತ್ಸರ ಬರುವುದಿಲ್ಲ. ಶಕ ೧೪೬೭ ರಲ್ಲಿ
ವಿಶ್ವಾವಸು ಸಂವತ್ಸರ ವಿರುತ್ತದೆ. ಆದ ಕಾರಣ ಶಕವರ್ಷ ೧೪೬೮ ನ್ನು ವರ್ತಮಾನವರ್ಷವೆಂದು ತಿಳಿದರೆ
ಈ ಶಾಸನೋಕ್ತ ಕಾಲವು ಶಕ ೧೪೬೭ ವಿಶ್ವಾವಸು ಸಂವತ್ಸರ ಆಷಾಢ ಶುದ್ಧ ೧ ಆಗುತ್ತದೆ. ಇದು
ಗ್ರೆಗೋರಿಯನ್ ಕಾಲಮಾನದಂತೆ ಕ್ರಿ.ಶ. ೨೦-೬-೧೫೪೫ ಬುಧವಾರಕ್ಕೆ ಸರಿಹೊಂದು ತ್ತದೆ{ಜೂಲಿಯನ್ ಕಾಲಮಾನದಂತೆ ಕ್ರಿ.ಶ. ೧೦-೬-೧೫೪೫ ಬುಧವಾರಕ್ಕೆ ಸರಿಹೊಂದುತ್ತದೆ}. ಹನುಮಂತರಾಯರು ವಿಶ್ವಾವಸು ಸಂವತ್ಸರ ವನ್ನು ಗತವರ್ಷವೆಂದು
ಪರಿಗಣಿಸಿ ಶಾಸನದ ಕಾಲವನ್ನು ಶಕ ೧೪೬೮ ಪರಾಭವ ಸಂವತ್ಸರ, ಆಷಾಢ
ಶುದ್ಧ ಪಾಡ್ಯ ಎಂದು ಹೇಳಿರುತ್ತಾರೆ. ಇದು ಗ್ರೆಗೋರಿಯನ್ ಕಾಲಮಾನದಂತೆ ಕ್ರಿ.ಶ. ೯-೭-೧೫೪೬
ಮಂಗಳವಾರಕ್ಕೆ ಸರಿಹೊಂದುತ್ತದೆ {ಜೂಲಿಯನ್ ಕಾಲಮಾನದಂತೆ ಕ್ರಿ.ಶ.
೨೯-೬-೧೫೪೬ ಮಂಗಳವಾರಕ್ಕೆ ಸರಿಹೊಂದುತ್ತದೆ}.
ಈ
ಶಾಸನವು ವಿಜಯನಗರದ ದೊರೆ ಸದಾಶಿವರಾಯನ ಕಾರ‍್ಯಕ್ಕೆ ಕರ್ತನಾದ ರಾಮರಾಜ ಒಡೆಯನು [=ಅಳಿಯ ರಾಮರಾಯ]
ಸ್ವಾಮಿಯ ಕೆಲಸಿಯಾದ [=ಬಹುಶಃ ಸದಾಶಿವರಾಯನ ಕೆಲಸಿಯಾದ (?)]
ಕೊಂಡೋಜಿಯನ್ನು ಮೆಚ್ಚಿಕೊಂಡು ಮಾನ್ಯವನ್ನು ಕೊಟ್ಟಿರುವ ಸಂಗತಿಯನ್ನು ಹೇಳುತ್ತದೆ. ಸದಾಶಿವರಾಯನು
ಆಳುವ ರಾಜ್ಯದಲ್ಲಿ ನಾಯಿಂದರಿಗೆ ಕುಳದೆರೆ, ಮನೆದೆರಿಗೆ, ಸುಂಕ, ಸಾರಿಗೆಗಳನ್ನು ಸರ್ವಮಾನ್ಯವಾಗಿ ನೀಡಲಾಗಿದೆ {ಬಹುಶಃ ಈ ಎಲ್ಲಾ ತೆರಿಗೆಗಳಿಂದ ವಿನಾಯಿತಿ ನೀಡಲಾಗಿದೆ}.
ಇದನ್ನು ಹಾಳುಮಾಡಬಾರದೆಂಬ ಆಶಯದಿಂದ ಕೊನೆಯಲ್ಲಿ ಶಾಪಾಶಯಗಳನ್ನು ಹೇಳಲಾಗಿದೆ.
ಪ್ರಕೃತ
ಬರಹದಲ್ಲಿ ಶಾಸನಪಾಠ ಮತ್ತು ಕೆಲವು ವಿವರಗಳನ್ನು ಬಿಟ್ಟರೆ ಬೇರೇನೂ ಮಾಹಿತಿಯನ್ನು ನೀಡಲಾಗಿಲ್ಲ.
ಹಾಲ್ಕುರಿಕೆ ಗ್ರಾಮದ ವೀರೇಶ್ವರ ದೇವಾಲಯ, ಅಲ್ಲಿನ ಶಾಸನಗಳು
ಮುಂತಾದವುಗಳ ಬಗೆಗೆ ಹೆಚ್ಚಿನ ಅಧ್ಯಯನ ನಡೆಯಬೇಕಾದ ಅಗತ್ಯವಿದೆ.
ಸದಾಶಿವರಾಯನು
ನಾಯಿಂದ (ನಾವಿದ) ವರ್ಗದವರಿಗೆ ಹೇರಳವಾಗಿ ಮಾನ್ಯಗಳನ್ನು ನೀಡಿರುವ ಸಂಗತಿಯನ್ನು ದಾಖಲಿಸಿರುವ
ಶಾಸನಗಳು ಕನ್ನಡ, ತೆಲುಗು, ತಮಿಳು
ಭಾಷೆಗಳಲ್ಲಿ ಬಹಳವಾಗಿ ದೊರಕಿವೆ. ಈ ಶಾಸನಗಳು ಕರ್ನಾಟಕ, ತಮಿಳುನಾಡು,
ಆಂಧ್ರಪ್ರದೇಶ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಇದರಿಂದ ವಿಜಯನಗರ
ಸಾಮ್ರಾಜ್ಯದಲ್ಲಿ ನಾಯಿಂದರಿಗಿದ್ದ ಸ್ಥಾನಮಾನಗಳ ವಿವರ ತಿಳಿಯುತ್ತದೆ. ಇದು ಆ ಕಾಲದ ಸಾಮಾಜಿಕ
ಚಿತ್ರಣವನ್ನು ಅರಿಯಲು ಉತ್ತಮವಾದ ಆಕರಗಳಾಗಿವೆ. ಆದ ಕಾರಣದಿಂದ ಈ ವರ್ಗದ ಶಾಸನಗಳನ್ನೆಲ್ಲಾ ಒಂದು
ಸಂಪುಟವಾಗಿ ಸಂಕಲಿಸಿದರೆ ಹೆಚ್ಚಿನ ಅಧ್ಯಯನ ನಡೆಸಲು ಅನುಕೂಲವಾಗುತ್ತದೆ. ಇದು ಆದಷ್ಟು
ಜಾಗ್ರತೆಯಾಗಿ ಕೈಗೂಡಲೆಂದು ಹಾಗೂ ಹೆಚ್ಚಿನ ಕ್ಷೇತ್ರಕಾರ‍್ಯ ನಡೆದು ಅಪ್ರಕಟಿತ ಶಾಸನಗಳು
ಪ್ರಕಟವಾಗಲೆಂದು ಹಾರೈಸುತ್ತೇವೆ.
ಶಾಸನಪಾಠ
೧
ಶುಭಮಸ್ತು
೨
ಸ್ವಸ್ತಿಶ್ರೀ ೧ವಿಜೆಯಾದ್ಯುದಯ೧ ಶಾಲಿವಾ
೩
ಹನ ಶಕವರುಷ ೧೪೬೮ ನೆಯ ವಿ
೪
ಶ್ವಾವಸು ಸಂವತ್ಸರದ ೨ಆಷಾಡ೨ ಶು ೧ ಲು
೫
ಶ್ರೀಮ{ಂ}ನ್ಮಹಾರಾಜಾಧಿರಾಜ ರಾಜ
(ರಾಜ) ಪರಮೇಶ್ವ
೬
ರ ಶ್ರೀ ವೀರಪ್ರತಾಪ ಶ್ರೀ ವೀರ ಸದಾಶಿವ ದೇವರಾಯ
೭ ೩ಮಹಾರಾಯರಿಗೆ೩
ಕಾರ್ಯ್ಯಕ್ಕೆ ಕರ್ತರಾದ ರಾಮರಾಜ
೮
ವೊಡೆಯರೂ ಸ್ವಾಮಿಯ ಕೆಲಸಿ ೪ಕೊಂದೋಜಿಗೆ೪ ೫ಮೆಚಿ
ಹರಿಸಿ
೯
ಬಿಟ೫ ಮಾ{ಂ}ನ್ಯ [|] ೬ತಾಉ೬ ಆಳುವ ರಾಜ್ಯ
ದೇಶದೊ
೧೦
ಳಗಣ ನಾಯಿಂದ ಕೆಲಸಿಗಳಿಗೆ ೭ಕುಳದೆ
೧೧
ರೆ೭ ೮ಮನೆದೆರಿಗೆ೮ ಸರ್ವಮಾ{ಂ}ನ್ಯ ಸುಂಕ ೯ಸಾಱಗೆ೯
ಸರ್ವ್ವ
೧೨
ಮಾ{ಂ}ನ್ಯ [|] ೧೦ಯಿದಕೆ೧೦ ೧೧ಆರೊಬ್ಬರ ಆಳುಪಿ
೧೩
ತಾರ೧೧ ೧೨ಹುರಿಸವ೧೨ ಕೊಂದವರು ೧೩ತಂಮ
೧೪
ತಂದ೧೩ ತಾಯ ವಾರಣಾಸಿಯಲಿ ಕೊಂ
೧೫
ದ ಪಾಪಕೆ ಹೋಹರು [|] ೧೪ಉಳಿಗಿತಿಯ೧೪
೧೬
೧೫ನರಕಪಾಲದಲಿ೧೫ ೧೬ಸುರೆಯನು೧೬ ಸೇsವಿಸುತ
೧೭
೧೭ತೆಂಕಮೊಖವಾಗಿ೧೭ ಹೋಹರು [|]
----------------------------------
೧
ವಿಜಯಾಭ್ಯುದಯ
೨
ಆಷಾಢ
೩
ಮಹಾರಾಯರ
೪
ಕೊಂಡೋಜಿಗೆ [ಇದು ಹನುಮಂತರಾಯರ ಹಸ್ತಪ್ರತಿಯಲ್ಲಿ ಕೊಂದೋಜಿಗೆ ಎಂದೇ ಇದ್ದರೂ ಕೊಂಡೋಜಿಗೆ
ಎಂದಿರಬೇಕೆಂದು
ಎಚ್.ಎಂ. ನಾಗರಾಜರಾಯರು ತಿದ್ದುಪಡಿ ಸೂಚಿಸಿದ್ದಾರೆ]
೫
ಮೆಚ್ಚಿ ಹರಸಿ ಬಿಟ್ಟ
೬
ತಾವು
೭
ಕುಳದೆರೆ = ಕುಲದ ವೃತ್ತಿಗೆ ಸಂಬಂಧಿಸಿದ ತೆರಿಗೆ [ಹನುಮಂತರಾಯರು ಅommuಟಿiಣಥಿ ಖಿಚಿx ಎಂದು ಹೇಳಿದ್ದಾರೆ.
ಈ
ಅರ್ಥವನ್ನು ಅಂಗೀಕರಿಸಿದರೆ ಈ ಶಬ್ದ ಕುಲದೆರೆ ಎಂದು
ಇರಬೇಕು]
೮
ಮನೆದೆರಿಗೆ= ಮನೆಯ ಮೇಲೆ ಹಾಕುವ ತೆರಿಗೆ [ಹನುಮಂತರಾಯರು ಊouse ಖಿಚಿx
ಎಂದು ಹೇಳಿದ್ದಾರೆ]
೯
ಸಾರಿಗೆ [ಶಾಸನದಲ್ಲಿನ ಸಾಱಗೆ ಎಂಬ ಶಬ್ದರೂಪ ವಿಚಾರಾರ್ಹ. ಹನುಮಂತರಾಯರು ಸಾರಿಗೆ = ಐಚಿಟಿಜ
ಖಿಚಿx ಎಂದು ಹೇಳಿದ್ದಾರೆ]
೧೦
ಇದಕೆ [=ಇದನ್ನು (?)]
೧೧
ಯಾರೊಬ್ಬರು ಅಳಿಸಿದರೂ : ಯಾರೊಬ್ಬರು ಅಳಿಪಿದರು [=ಯಾರೊಬ್ಬರು ನಾಶಮಾಡಿದರೂ]
೧೨
ಪುರೀಷ (ಸಂ) > ಪುರಿಸ > ಹುರಿಸ (ತದ್ಭವ) = ಅಮೇಧ್ಯ,
ಮಲ [ಇಲ್ಲಿ ಶಾಸನಪಾಠ ಹುರಿಸವ ಕೊಂದವರು ಎಂದಿದೆ. ಇದಕ್ಕೆ
ಸ್ಪಷ್ಟವಾಗಿ ಅರ್ಥವನ್ನು ಹೇಳಲು ಸಾಧ್ಯವಿಲ್ಲ.
ಇಲ್ಲಿನ ಪಾಠ ಬಹುಶಃ ಹುರಿಸವ ತಿಂದವರು ಎಂದಿರಬಹುದೇ ವಿಚಾರಾರ್ಹ]
೧೩
ತಮ್ಮ ತಂದೆ
೧೪
ಉಳಿಗಿತಿ=ಚಾಂಡಾಲಿ (?) [ಈ ಶಬ್ದರೂಪ ವಿಚಾರಾರ್ಹ. ಹನುಮಂತರಾಯರು ಒಚಿiಜ Seಡಿveಟಿಣ ಎಂದು ಬರೆದಿದ್ದಾರೆ.
ಆದರೆ
ಸಂದರ್ಭದ ಬಲದಿಂದ ಚಾಂಡಾಲಿ ಎಂಬ ಅರ್ಥವೇ
ಸಮರ್ಥನೀಯ. ಇದಕ್ಕೆ ಪೋಷಕವಾಗಿ ಕಥೆಯೊಂದಿದೆ. ಇದರ ಬಗೆಗೆ
ನೋಡಿ : ಶಾಸನ ಸಾಹಿತ್ಯ ಸಂಚಯ-(ಸಂ) ಎ. ಎಂ.
ಅಣ್ಣೀಗೇರಿ, ಮೇವುಂಡಿ ಮಲ್ಲಾರಿ, ಕನ್ನಡ
ಸಂಶೋಧನ ಸಂಸ್ಥೆ,
ಧಾರವಾಡ-೧೯೬೧, ಪುಟ ೨೩]
೧೫
ನರಕಪಾಲ = ಮನುಷ್ಯನ ತಲೆಬುರುಡೆ
೧೬
ಸುರೆ= ಮದ್ಯ
೧೭
ತೆಂಕಮೊಖವಾಗಿ = ದಕ್ಷಿಣ ದಿಕ್ಕಿಗೆ ಮುಖಮಾಡಿಕೊಂಡು
*
* *
No comments:
Post a Comment