ಕೋಲಾರ
ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಕುರುಡುಮಲೆ ಶ್ರೀ ವಿನಾಯಕ ದೇವಾಲಯದ ಅಪ್ರಕಟಿತ ಶಾಸನ
ಕೆ.ಆರ್. ನರಸಿಂಹನ್
ಎ’ ಮೇನ್, ಮಾರುತಿನಗರ,
ಯಲಹಂಕ, ಬೆಂಗಳೂರು-೫೬೦೦೬೪.
ವಿಘ್ನಗಳ ಪರಿಹಾರಕನಾದ ಮಂಗಳಮೂರ್ತಿ
ವಿನಾಯಕನು ನೆಲೆಸಿರುವ ಗ್ರಾಮ ಕುರುಡುಮಲೆ. ಕೋಲಾರ ಜಿಲ್ಲೆಯ ಮುಳಬಾಗಿಲಿಗೆ ಸುಮಾರು ಹನ್ನೊಂದು
ಕಿ.ಮೀ. ದೂರದಲ್ಲಿರುವ ಈ ಗ್ರಾಮವು ಐತಿಹಾಸಿಕ ಸ್ಥಳವೂ ಆಗಿದೆ. ಪ್ರಕೃತಿದತ್ತವಾದ
ಬೆಟ್ಟಗುಡ್ಡಗಳಿಂದ ಕೂಡಿದ ಇಲ್ಲಿರುವ ಬೆಟ್ಟವನ್ನು ‘ಕೌಂಡಿಣ್ಯಗಿರಿ’ ಎಂದು ಸಂಬೋಧಿಸಲಾಗುತ್ತಿದೆ. ಇದೇ
ಹೆಸರಿನ ಹೊಳೆಯು ಇಲ್ಲಿನ ಬೆಟ್ಟದಲ್ಲಿ ಉಗಮವಾಗಿ ‘ನಂಗಲಿ ಹೊಳೆ’ ಎಂದು ಪ್ರಸಿದ್ಧವಾಗಿದ್ದು
ಮುಂದಕ್ಕೆ ಹರಿದು ಪಾಲಾರ್ ನದಿಯನ್ನು ಸೇರುತ್ತದೆ. ಕರ್ನಾಟಕದ ಕೆಲವೇ ಪ್ರಸಿದ್ಧವಾದ ವಿನಾಯಕ ದೇವಾಲಯಗಳಲ್ಲಿ
ಕುರುಡುಮಲೆಯಲ್ಲಿರುವ ಆಲಯವನ್ನು ವಿಶಿಷ್ಟವಾದದ್ದೆಂದು ಪರಿಗಣಿಸಲಾಗಿದ್ದು, ಗ್ರಾಮದಲ್ಲಿ ಇನ್ನೂ ಕೆಲವೊಂದು
ದೇವಾಲಯಗಳಿವೆ. ಇವುಗಳಲ್ಲಿ ಈಗಲೂ ಪೂಜೆಗೊಳ್ಳುತ್ತಿರುವ ಶಿವ-ಪಾರ್ವತಿಯರ ದೇವಾಲಯವಿರುತ್ತದೆ.
ಕುರುಡುಮಲೆಗೆ ಐತಿಹಾಸಿಕ ಪರಂಪರೆಯನ್ನು, ಜನಪ್ರಿಯತೆಯನ್ನು ತಂದುಕೊಟ್ಟಿರುವುದೇ ವಿನಾಯಕ ದೇವಾಲಯ.
ವಿನಾಯಕನ ವಿಶಾಲವಾದ ಪೂಜಾಮಂದಿರವನ್ನು ಎರಡು ಕಾಲಘಟ್ಟಗಳಲ್ಲಿ
ನಿರ್ಮಿಸಲಾಗಿದೆ. ಇಲ್ಲಿನ ಗರ್ಭಗೃಹ ಮತ್ತು ಶುಕನಾಸಿಗಳನ್ನು ಬಹುಶಃ ಹೊಯ್ಸಳ ಅರಸರ ಆಳ್ವಿಕೆಗೆ
ಸೇರಿಸಬಹುದಾದರೆ ಮುಂದಿನ ನವರಂಗವು ವಿಜಯನಗರದ ಅರಸರ ಕಾಲದ ಕೊಡುಗೆಯೆಂಬುದು ನಿರ್ವಿವಾದ. ಇಲ್ಲಿನ
ನವರಂಗದ ಕಂಬಗಳ ಮೇಲಿನ ಉಬ್ಬುಶಿಲ್ಪಗಳನ್ನು ಇತಿಹಾಸ ಬರಹಗಾರರು ತಮ್ಮ ಕೃತಿಗಳಲ್ಲಿ
ವಿವರಣಾತ್ಮಕವಾಗಿ ದಾಖಲಿಸಿರುವುದು ಈ ಆಲಯದ ಚಾರಿತ್ರಿಕ ಹಿರಿಮೆಗೆ ನಿದರ್ಶನವಾಗಿದೆ.
ವಿನಾಯಕ ದೇವಾಲಯವು ಪೂರ್ವಾಭಿಮುಖವಾಗಿದ್ದು ಮುಂಭಾಗದಲ್ಲಿ ವಿಶಾಲವಾದ
ಮಂಟಪವಿದೆ. ದಕ್ಷಿಣ ದಿಕ್ಕಿಗೆ ಮತ್ತೊಂದು ದ್ವಾರವನ್ನು ಆಲಯಕ್ಕೆ ಅಳವಡಿಸಲಾಗಿದೆ. ದಕ್ಷಿಣ
ದಿಕ್ಕಿನ ಬಾಗಿಲು ಸಹಾ ಪೂರ್ವದ ಬಾಗಿಲಿನಂತೆಯೇ ಕಲಾತ್ಮಕವಾದ ಬಾಗಿಲವಾಡವನ್ನು ಹೊಂದಿದೆ.
ಇಲ್ಲಿಂದ ಹೊರಗೆ ಹೋಗಲು ಪುಟ್ಟ ಮೆಟ್ಟಿಲುಗಳಿವೆ. ಈ ದಕ್ಷಿಣ ದಿಕ್ಕಿನ ದ್ವಾರದಲ್ಲಿರುವ
ಪ್ರಸ್ತುತ ಶಾಸನವು ಹಲವಾರು ಮಹತ್ವದ ಸಂಗತಿಗಳನ್ನು ತಿಳಿಸಿಕೊಡುತ್ತದೆ.
ಆಲಯದ ದಕ್ಷಿಣ ದಿಕ್ಕಿನ ದ್ವಾರದ ಹೊರಗಡೆ ಗೋಡೆಯ ಬಲಭಾಗದಲ್ಲಿರುವ
ಕನ್ನಡ ಶಾಸನವು ವಿಜಯನಗರದ ಅರಸರ ಕಾಲದ ಲಿಪಿ-ಬರಹಗಳಿಂದ ಕೂಡಿದೆ. ಅಧಿಷ್ಠಾನ ಹಾಗೂ ಭಿತ್ತಿಗಳ
ಮೂರು ದೀರ್ಘವಾದ ಶಿಲಾಪಟ್ಟಿಕೆಗಳನ್ನು ಆವರಿಸಿಕೊಂಡಿರುವ ಶಾಸನದಲ್ಲಿ ಹನ್ನೊಂದು ಸಾಲುಗಳಿವೆ.
ಪ್ರತಿ ಸಾಲಿನ ಕೊನೆಯಲ್ಲಿರುವ ಹಲವೊಂದು ಅಕ್ಷರಗಳನ್ನು ದುರಸ್ತಿಯ ಕಾರಣ ಕಟ್ಟಲಾಗಿರುವ, ಬೃಹತ್ ಗೋಡೆಯು ಮುಚ್ಚಿಕೊಂಡಿರುವ
ಕಾರಣದಿಂದ ದಾಖಲಿಸಲು ಸಾಧ್ಯವಾಗಿಲ್ಲ. ಆದರೆ ಇದರಿಂದ ಶಾಸನದ ಅರ್ಥಗ್ರಹಿಕೆಗೆ ತೊಂದರೆಯಾಗಿಲ್ಲ.
ವಿನಾಯಕ ದೇವಾಲಯದ ನವರಂಗದ ಅಧಿಷ್ಠಾನ ಮತ್ತು ಭಿತ್ತಿಗಳಲ್ಲಿ ಸ್ಪಷ್ಟವಾಗಿ ಪ್ರಕಟಗೊಂಡ ಕನ್ನಡ
ಶಾಸನವು ಕುರುಡುಮಲೆಯ ತಮಿಳು ಶಾಸನ ಸಮೂಹದಲ್ಲಿ ಸದ್ಯಕ್ಕೆ ಲಭ್ಯವಾಗಿರುವ ಏಕೈಕ ಕನ್ನಡ ಭಾಷಿಕ
ಶಿಲಾಶಾಸನವೆಂಬ ಕಾರಣದಿಂದ ಇದೀಗ ಮಹತ್ವದ್ದಾಗಿರುತ್ತದೆ.
ಅಧಿಷ್ಠಾನ ಹಾಗೂ ಗೋಡೆಯ ಮೇಲೆ ಮೂರು ಶಿಲಾಪಟ್ಟಿಕೆಗಳ ಮೇಲೆ ಮೂರು
ಭಾಗದಲ್ಲಿ ಶಾಸನವನ್ನು ಹಾಕಲಾಗಿದೆ. ಮೊದಲನೇ ಮತ್ತು ಎರಡನೇ ಶಿಲಾಪಟ್ಟಿಕೆಗಳ ಮೇಲೆ ನಾಲ್ಕು
ಸಾಲುಗಳಿದ್ದರೆ ಮೂರನೆಯ ಪಟ್ಟಿಕೆಯು ಮೂರು ಸಾಲುಗಳನ್ನೊಳಗೊಂಡಿದೆ. ಕಡೆಯ ಮೂರು ಸಾಲುಗಳು ತಮಿಳು
ಗ್ರಂಥಲಿಪಿಯಲ್ಲಿರುವುದು ವಿಶೇಷ. ಕಡೆಯ ಸಾಲುಗಳು ಬಹುಪಾಲು ಶಿಲಾಬರಹವನ್ನು ಬರೆದವರ ಮತ್ತು
ಸಾಕ್ಷಿಯಾದವರ ಹೆಸರು ಇಲ್ಲವೇ ರುಜುವನ್ನು ತಿಳಿಸುವಂತಿದೆ. ಶಾಸನವನ್ನು ಹಾಕಿಸಿದ ಗಣ್ಯರು, ಸ್ಥಾನಿಕರು, ತಮಿಳು ಮೂಲದವರೇ ಆಗಿದ್ದರೆಂಬುದು
ಇದರಿಂದ ಹೊರಪಡುವಂತಿದೆ.
ಈಗಾಗಲೇ ಬಿ.ಎಲ್. ರೈಸ್‌ರವರು ದಾಖಲಿಸಿರುವ ‘ಎಪಿಗ್ರಾಫಿಯಾ ಕರ್ನಾಟಿಕ’ದ ಹತ್ತನೇ ಸಂಪುಟದಲ್ಲಿರುವ ಮುಳಬಾಗಿಲು ತಾಲೂಕಿನ ಸಿದ್ದಘಟ್ಟ ಗ್ರಾಮದ ೨೫೯ ಮತ್ತು ೨೬೦ನೇ
ಸಂಖ್ಯೆಯ ಎರಡು ಶಾಸನಗಳ ಹಿನ್ನೆಲೆಯಲ್ಲಿ ಪ್ರಸ್ತುತ ಕುರುಡುಮಲೆಯ ಹೊಸ ಶಾಸನವನ್ನು
ಪರಿಶೀಲಿಸಬಹುದಾಗಿದೆ. ಸಿದ್ದಘಟ್ಟ ಗ್ರಾಮವು ಕುರುಡುಮಲೆಯ ವಿಶಾಲವಾದ ಬೆಟ್ಟದ ಹಿಂಭಾಗದಲ್ಲಿರುವ
ಗ್ರಾಮವಾಗಿದೆ. ಕುರುಡಮಲೆಯನ್ನು ತಮಿಳು ಶಾಸನಗಳಲ್ಲಿ ‘ಕುಡುರಿಮಲೈ’ ಇಲ್ಲವೇ ‘ಕೂತ್ತಾಂಡದೇವನಲ್ಲೂರು’ ಎಂದು ಸಂಬೋಧಿಸಲಾಗಿದೆ. ಹೊಯ್ಸಳ ದೊರೆ ನರಸಿಂಹನ ಕಾಲದ ತಮಿಳು ಪ್ರದೇಶದ ಮುಖ್ಯ ಭಾಗವಾಗಿ
ಅಥವಾ ಸ್ಥಳೀಯ ರಾಜಧಾನಿಯಾಗಿ ಇದು ಪ್ರಸಿದ್ಧಿ ಪಡೆದಿತ್ತೆಂಬ ವಿಚಾರ ಇತಿಹಾಸದ ಪುಟಗಳಲ್ಲಿದೆ.
ಚೋಳ-ಹೊಯ್ಸಳ ಮನೆತನಗಳ ಸಂಬಂಧವನ್ನು ಉತ್ತಮಗೊಳಿಸಿ ಪ್ರಮುಖ ದೇವಾಲಯಗಳ ಸಂರಕ್ಷಣೆ ಮಾಡಿದ ಹಾಗೂ
ಕೆಲವು ಹೊಸ ದೇವಾಲಯಗಳನ್ನು ನಿರ್ಮಿಸಿದ ‘ಕೂತ್ತಾಡುನ್‌ದೇವ’ನ ದೇವಾಲಯ ಸಂಸ್ಕೃತಿಗೆ
ಕಿರೀಟವಿಟ್ಟಂತಿರುವ ಕುರುಡುಮಲೆಯ ವಿನಾಯಕ ದೇವಾಲಯದ ಕನ್ನಡ ಶಾಸನವನ್ನು ಇಲ್ಲಿ
ಪ್ರಸ್ತುತಪಡಿಸಲಾಗಿದೆ.
ಶಾಸನಪಾಠ
೧ ಶುಭಮಸ್ತು
ಸ್ವಸ್ತಿಶ್ರೀ ವಿಜಯಾಭ್ಯುದಯ ಶಕವರುಷ ೧೩೬೪ನೆಯ ದುಂಧುಭಿ ಸಂವತ್ಸರದ ಮಾರ್ಗಸಿರ ಸು೧೦ಲೂ
ಸಿದ್ದಪ್ಪಗಳ ಮಕ್ಕಳು ತಿಂಮಣಗಳಿಗೆ ಕುರುಡುಮಲೆಯ ಸ್ತಾನಿ.......
೨ ನಿಉ ವಿನಾಯಕ
ದೇವರ ಸಂನಿದಿಯಲಿ ಛತ್ರವನ್ನಿಕ್ಕಿ ಸೋದಕೆ ನಾಉ ಕ್ರಯವ ಕೋಟ ಸೀಮೆಗೆ ಸಿದ್ದಸಮುದ್ರದ ಒಳಗಣ
ಸಿಮೆ.....
೩ ಆ ಸಿಮೆಗೆ
ಕ್ರಯವಾಗಿ ೧೦ ಉಭಯಂ ನೆಲಕಂ ಸೆರಿಸಿಕೊಟ್ಟ ಸಿಮೆಯ ವಳೆಯ ಶಾಸನದ ವಿವರ ಮೇಳಾದೇವಿ ಹಳಿಯ ಸಿಮೆಗೆ
ಪಡುವಲು ಮುಳವಾಯಿ ನಾಚಿಯಾರಿಗೆ ಸ....
೪ ಕುಂಟೆಯ
ಕೆಳಗಣ ಗದೆಗೆ ಬಡಗಲು ತಾಳೆಕುಂಟೆ ಒಳಗೆ ಯ ವ(ಪ)ಡು ಬಲಕೆ ಮೂಡಲು ಆನೆಕುಂಟೆಯ ಕೆರೆಯ ಕೀಳೇರಿಯ
ವುಭಯಮಾಗೆ ದಾರಿಗೆ ಮೂಡಲ ಕುಂ
೫ ಟೆಗೆ ಬಡಗಲು
ಅಸಿದ ಬಂಕಣಿಕೆ ಕುಂಟೆ ಸಹ ತಾವರೆಕೆರೆಯ ಹುಣಿಸೆಯ ಕುಂಟೆಗೆ ತೆಂಕಲು ನಡುವೆ ಸಲುವ ಸಿಮೆಗೆ
ಬಡಗಲಾಗಿ ಚರುಸಿಮೆಯ ಒಳಗಣ ಕುಂಟೆ ಕೆರೆ ಹಳ್ಳ ಕೋ
೬ ಡಿ ಸಹವಾಗಿ
ಕ್ರಯವನೂ ಕೊಟ್ಟುಕಲ್ಲನಡೆಸಿ ಕೊಟೆವಾಗಿಯೀ ಕ್ರಯಶಾಸನವನೂ ಮಾಡಿಸಿ ಸಿಮೆಯನು ಅನುಭವಿಸುದುಯೆಂದು
ಪ್ರಾಮಾಣಿಸ ಲಾಗಿ ದಿನಂಪ್ರತಿ ದೇವರ ಸಂನಿದಿಯಲೂ ಆರು ಮಂದಿ ಬ್ರಾ....
೭ ಯಿಕ್ಕಿಸಿ
ನಿಮ್ಮ ಪುತ್ರ ಪೌತ್ರ ಪರಂಪರೆ ಆಗಿ ಆಚಂದ್ರರ್ಕಸ್ತಾಯಿ ಆಗಿ ದಾನಾದಿ ಕ್ರಯಗಳಿಗೆ ಯೋಗ್ಯತಾದಿ
ಅನಭವಿಸುದುಯಂದು ಕೊಟ್ಟ ಶಾಸನ ಸ್ಥಾನ ಮಾಂನ್ಯ ಸೂತ್ರ....
೮ ರುತಪ್ಪಿದರು
ವಿನಾಯಕದೇವರ ಶ್ರೀಪಾದಕೆ ತಪ್ಪಿದವರು ವಾರಣಸಿಯಲಿ ತಂಮ ಮಾತಾ ಪಿತೃಗಳನೂ ವದಿಸಿದ ಪಾಪದಲಿ ಹೊ....
ಯೆಂಬುದಕೆ ಸ್ತಾನಿಕರವೊಪ್ಪ ವಿನಾಯಕ ದೇ
೯ ವರವೊಪ್ಪ
ನಾಯನಾರ ಮಕ್ಕಳು ಅಪ್ಪಣ್ಣ ನಾಯನಾರ ಬರಹ* ಅಳಗಿಯ ನಾಯನಾರ್ ರಕ್ಷೈ....
೧೦ ಉತ್ತಮ
ನಂಜೈನಾಯನಾರಳುತ್ತು ವಿನಾಯಕ ದೇವರ ಎಳುದು
[* ಇಲ್ಲಿಂದ ಮುಂದಿನ ಭಾಗ ಗ್ರಂಥ ತಮಿಳು ಲಿಪಿಯಲ್ಲಿದೆ]
ಕುರುಡುಮಲೆಯಲ್ಲಿ ಆರು ಬ್ರಾಹ್ಮಣರಿಗೆ ಅನ್ನಸತ್ರವನ್ನಿಕ್ಕಿಸುವ
ಕಾರ್ಯವು ಈ ಶಾಸನದ ಆಶಯವೆಂದು ಹೇಳಬೇಕು. ಸಿದ್ದಘಟ್ಟದಲ್ಲಿ ಕಟ್ಟಿದ ‘ಕನ್ನೆಕೆರೆ’ಯ ಕೀಳೇರಿಯಲ್ಲಿನ ಗದ್ದೆ ಹುಟ್ಟುವ ನೆಲವು ಮಾದಘಟ್ಟದ ಸೀಮೆಗೆ ಸೇರಿದ ಕಾರಣ ಕುರುಡುಮಲೆಯ
ಸೀಮೆಯ ಒಳಗೆ ಮಾದಘಟ್ಟದವರಿಗೆ ಕೆಲವು ಹೊಲ ಗದ್ದೆಗಳನ್ನು ಕೊಡುವ ಸಂಬಂಧದಲ್ಲಿ ಈ ಶಾಸನವನ್ನು
ಪ್ರಮುಖವೆಂಬುದಾಗಿ ತಿಳಿಯಬಹುದು. ಶಾಸನೋಕ್ತ ಕೆರೆ ಕುಂಟೆಗಳು ಕುರುಡು ಮಲೆಯ ಆಸುಪಾಸಿನಲ್ಲಿದ್ದು
ಬೇಸಾಯದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ಉದಾಹರಣೆಗೆ: ಆನೆಕುಂಟೆ, ತಾಳೆಕುಂಟೆ ಇತ್ಯಾದಿ. ದಾನ ನೀಡಿದ
ಇಲ್ಲವೇ ಪರ್ಯಾಯ ವಾಗಿ ಬಿಟ್ಟುಕೊಟ್ಟ ಜಮೀನಿನ ಎಲ್ಲೆಗಳನ್ನು ಇದರಲ್ಲಿ ಗುರುತಿಸಲಾಗಿದೆ.
ಮೇಳಾದೇವಿಹಳ್ಳಿಯ ಹೆಸರು ಶಾಸನೋಕ್ತವಾಗಿದೆ. ಮುಳಬಾಗಿಲಿನ ಪ್ರಸಿದ್ಧ
ಗ್ರಾಮದೇವತೆ ಮುಳುವಾಯ ನಾಚ್ಚಿಯಾರಳ ಉಲ್ಲೇಖವೂ ಇದರಲ್ಲಿದೆ.
ಈ ಶಾಸನದ ಅರ್ಥಸ್ಪಷ್ಟತೆಗೆ ಸಿದ್ದಘಟ್ಟದಲ್ಲಿ ಹಾಕಲಾಗಿರುವ ಎರಡು
ಶಾಸನಗಳ ನೆರವನ್ನು ಪಡೆಯಬಹುದು. ಸಿದ್ದಘಟ್ಟದ ಒಂದು ಶಾಸನವು (ಕ್ರಮಸಂಖ್ಯೆ ೨೫೦ ‘ಎಪಿಗ್ರಾಫಿಯಾ
ಕರ್ನಾಟಿಕ’ ಸಂಪುಟ: ಹತ್ತು. ಮುಳಬಾಗಿಲು ತಾಲೂಕು) ಕುರುಡುಮಲೆ ಹೊಸ ಶಾಸನದ
ದಿನಾಂಕಕ್ಕೆ (೧೪೪೨) ಸೇರುತ್ತದೆ. ಇದೊಂದು ಕ್ರಮಧರ್ಮ ಶಾಸನವಾಗಿರುತ್ತದೆ. ಕುರುಡಿಮಲೆಯ
ಸೀಮೆಯಲ್ಲಿ ಕಸುಗೋಡ ಬಡಗಣ ಹಳ್ಳವನ್ನು ಸಿದ್ದಸಮುದ್ರವೆಂಬ ಹೆಸರಿನ ‘ಕನ್ನೆಗೆರೆ’ ಕಟ್ಟುವ ವಿಚಾರವಾಗಿರುತ್ತದೆ. ಕೆರೆಯ ಕೀಳೇರಿಯಲ್ಲಿ ಗದ್ದೆ ಹುಟ್ಟುವ ನೆಲವು ಮಾದಘಟ್ಟದ
ಸೀಮೆಗೆ ಸೇರಿದ ಹಲವು ಗದ್ದೆ-ಹೊಲಗಳನ್ನು ಬಿಟ್ಟುಕೊಟ್ಟು ಈ ಸಂಬಂಧ ಸೀಮೆಯ ಕಲ್ಲನ್ನು
ನೆಡಲಾಗಿದೆ. ಈ ಗದ್ದೆ ಹೊಲಗಳಲ್ಲಿ ದಸವಂದದ ಗದ್ದೆಯನ್ನು ಕಳೆದು (ಉಳಿದ) ಮಿಕ್ಕ
ಗದ್ದೆಹೊಲಗಳನ್ನು ಕ್ರಯಕ್ಕೆ ಕೊಂಡುಕೊಳ್ಳಬೇಕೆಂದು (ಹೇಳಲಾಗಿ) ಇದರ ಧರ್ಮವಾಗಿ ವಿನಾಯಕ ದೇವರ
ಸನ್ನಿಧಿಯಲ್ಲಿ ಛತ್ರವನ್ನು ಇಕ್ಕಿಸಬೇಕೆಂದು ಹೇಳಿದ ಕಾರಣ ಅಯಿವತ್ತು ಹೊನ್ನಿಗೆ ಕ್ರಯವ ಕೊಂಡು
ಹೊನ್ನನ್ನು ಸಲ್ಲಿಸಿಕೊಳ್ಳಲಾಗಿದೆ. ವಳಯ ಶಾಸನವನ್ನು ಬರೆದು ಕೊಟ್ಟಿರುವುದನ್ನು ಈಗ ಲಭ್ಯವಿರುವ
ಕುರುಡುಮಲೆಯ ಹೊಸ ಶಾಸನ ಶೋಧದಿಂದ ಮನದಟ್ಟಾಗುತ್ತದೆ. ಅಷ್ಟಭೋಗ ತೇಜಸ್ವಾಮ್ಯವನ್ನು
ಅನುಭವಿಸಿಕೊಂಡು ವಿನಾಯಕ ದೇವರ ಸನ್ನಿಧಿಯಲ್ಲಿ ದಿನಂಪ್ರತಿ ಆರು ಮಂದಿ ಬ್ರಾಹ್ಮಣರಿಗೆ
ಛತ್ರವನ್ನು ಇಕ್ಕಿಸಿ ಹೋಗಬೇಕೆಂದು ಈ ಕ್ರಯ ಶಾಸನದಲ್ಲಿ ತಿಳಿಸಲಾಗಿದೆ.
‘ವಿನಾಯಕ ದೇವರ ಸಂನಿಧಿಯಲಿ ಆರು ಮಂದಿ ಬ್ರಾಹ್ಮರಿಗೆ
ಛತ್ರವನಿಕ್ಕಿಸೋದಕ್ಕೆ ತಿಮ್ಮಣ್ಣನಿಗೆ ಕುರುಡುಮಲೆಯ ಸ್ತಾನಿಕರು ಕ್ರಯವ ಕೊಟ್ಟ ಸೀಮೆಯ
ವಿವರಗಳನ್ನು’ ಒಳಗೊಂಡಿರುವುದೇ ಕುರುಡುಮಲೆಯ ಶಾಸನ. ವಳಯ ಶಾಸನದ ವಿವರವೆಂದು
ಹೇಳಿರುವುದು ಇಲ್ಲಿ ಗಮನಾರ್ಹ. ಈ ವಿವರಗಳು ಅಪೂರ್ಣವಾದ ಸಿದ್ದಘಟ್ಟದ ಮತ್ತೊಂದು ಶಾಸನದ
ವಿವರಗಳಿಗೆ ಸರಿಹೊಂದುತ್ತದೆ. (ಕ್ರಮ ಸಂಖ್ಯೆ ೨೬೦ ‘ಎಪಿಗ್ರಾಫಿಯಾ ಕರ್ನಾಟಿಕ’ ಸಂಪುಟ: ಹತ್ತು, ಮುಳಬಾಗಿಲು ತಾಲೂಕು)
ವಿನಾಯಕ ದೇವಾಲಯದ ಸ್ತಾನತ್ತಾರರ ವಿಷಯ ಕುರುಡುಮಲೆಯ ೧೯೧ನೇ
ಕ್ರಮಸಂಖ್ಯೆಯ ಶಾಸನದಿಂದ ತಿಳಿದುಬರುತ್ತದೆ. ‘ಕೋಯಿಲಿಲ್ ತಾನತ್ತಾರ್ ದಕ್ಷಿಣಾಮೂರ್ತಿ ವಿನಾಯಕರ್’ ಎಂದು ಉಲ್ಲೇಖವಿರುವ ಈ ತಮಿಳಿನ ಶಾಸನದ ಕಾಲವನ್ನು ಕ್ರಿ.ಶ.೧೩೭೩ ಎಂದು ಶಾಸನದಲ್ಲಿ
ಉಲ್ಲೇಖಿಸಿರುವುದನ್ನನುಸರಿಸಿ ಅಭಿಪ್ರಾಯಪಡಲಾಗಿದೆ. ದೇವಾಲಯದ ಅಭಿವೃದ್ಧಿಯಲ್ಲಿ ಇವರದ್ದು
ನಿರ್ಣಾಯಕ ಪಾತ್ರವಾಗಿದ್ದು ಹೊಸ ಶಾಸನದಲ್ಲಿ ಹೇಳಲಾಗಿರುವಂತೆ ಇಲ್ಲಿನ ಸ್ತಾನಿಕರು
ತಿಮ್ಮಣ್ಣನಿಗೆ ನೀಡಿದ ಕ್ರಯಧರ್ಮದ ವಿಚಾರವು ಗಮನಾರ್ಹವಾದದ್ದೆಂದು ಅಭಿಪ್ರಾಯಪಡಬಹುದು.
[ಈ ಶಾಸನದಲ್ಲಿ ಶಕವರ್ಷ ೧೩೬೪ ದುಂಧುಬಿ ಸಂವತ್ಸರ, ಮಾರ್ಗಶಿರ ಶುದ್ಧ ೧೦ ಎಂದು ಮಾತ್ರ ಕಾಲ ಸೂಚಿತವಾಗಿದೆ. ವಾರಸೂಚಿತವಾಗಿಲ್ಲ. ಇದು ಕ್ರಿ.ಶ.
೧೪೪೨ ನವೆಂಬರ್ ೨೨, ಸೋಮವಾರಕ್ಕೆ ಸರಿಹೊಂದುತ್ತದೆ. (ಸಂ)] ನಂ. ೨೦೩, ಸಿಂಚನ, ಮೊದಲನೇ ‘
No comments:
Post a Comment